ರಾಜಕೀಯ
ದಾವಣಗೆರೆ ಲೋಕಸಭಾ ಬಿಜೆಪಿ ಅಭ್ಯರ್ಥಿ ‘ಜಿ.ಎಂ. ಸಿದ್ದೇಶ್ವರ್’ ಸಂದರ್ಶನ : ಮಿಸ್ ಮಾಡ್ದೆ ಓದಿ..!

- ಸಂದರ್ಶನ: ಗಣೇಶ್ ಕಮ್ಲಾಪುರ
ಅಲೆ, ಅನುಕಂಪ, ಆಶೀರ್ವಾದದಿಂದ ಗೆದ್ದಿಲ್ಲ, ಅಭಿವೃದ್ಧಿಯಿಂದ ಗೆದ್ದಿದ್ದೇನೆ
ಅಭಿವೃದ್ಧಿ ಕಾರ್ಯಗಳೇ ನನ್ನ ಗೆಲವಿಗೆ ಶ್ರೀರಕ್ಷೆ
ಮೈತ್ರಿಪಕ್ಷಕ್ಕೆ ಚೌಕಿದಾರ್ ಮಣಿಯಲ್ಲ
ಮೂರು ಬಾರಿ ಸಂಸದನಾಗಿ ಕಳೆದ 15 ವರ್ಷಗಳಿಂದ ಕ್ಷೇತ್ರವನ್ನು ಸಮರ್ಥವಾಗಿ ಪ್ರತಿನಿಧಿಸುತ್ತಿದ್ದು, ನನ್ನ ಅಭಿವೃದ್ಧಿ ಕಾರ್ಯಗಳು ಗೆಲವಿಗೆ ಕಾರಣವಾಗಿವೆಯೇ ಹೊರತು ನನ್ನ ರಾಜಕೀಯ ವಿರೋಧಿಗಳು ಹೇಳುವಂತೆ ಯಾವುದೇ ಅಲೆ, ಅನುಕಂಪ, ಆಶೀರ್ವಾದದಿಂದ ನಾನು ಗೆದ್ದಿಲ್ಲ. ಸಂಸತ್ತಿನ ಒಳ, ಹೊರಗೆ ಜನರ ಸಮಸ್ಯೆ, ಸಂಕಷ್ಟದ ಕುರಿತು ದನಿ ಎತ್ತುವ ಮೂಲಕ ಕಳೆದ 5 ವರ್ಷದಲ್ಲಿ ಸುಮಾರು 10 ಸಾವಿರ ಕೋಟಿ ಅನುದಾನ ತಂದು ಜಿಲ್ಲೆಯನ್ನು ಅಭಿವೃದ್ಧಿಪಡಿಸಿ ಜನದನಿಯಾಗಿದ್ದೇನೆ. ಈ ಬಾರಿಯೂ ನಾನು ಮಾಡಿದ ಅಭಿವೃದ್ಧಿ, ಜನಪರ ಕಾರ್ಯಗಳೇ ಗೆಲವಿಗೆ ಕಾರಣವಾಗಲಿವೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸುತ್ತಾರೆ ಮೂರು ಬಾರಿ ಸಂಸದರಾಗಿ ನಾಲ್ಕನೇ ಬಾರಿ ಬಿಜೆಪಿ ದಾವಣಗೆರೆ ಲೋಕಸಭಾ ಅಭ್ಯರ್ಥಿಯಾಗಿ ಅಖಾಡಕ್ಕಿಳಿದಿರುವ ಜಿ.ಎಂ. ಸಿದ್ದೇಶ್ವರ್. ಈ ಕುರಿತು ಅವರು “ಸುದ್ದಿದಿನ”ಕ್ಕೆ ನೀಡಿದ ಸಂದರ್ಶನ ಪೂರ್ಣಪಾಠ ಇಲ್ಲಿದೆ.
ಚುನಾವಣಾ ಪ್ರಚಾರದ ಭರಾಟೆ ಹೇಗಿದೆ?
ಚುನಾವಣಾ ಘೋಷಣೆಗೂ ಮುನ್ನವೇ ಶೇ. 60ರಷ್ಟು ಭಾಗ ಜಿಲ್ಲೆಯ ತಾಲೂಕು, ಗ್ರಾಮಗಳನ್ನು ಸುತ್ತಿದ್ದೇನೆ. ಈಗಾಗಲೇ ಹೊನ್ನಾಳಿ ತಾಲೂಕಿನ 80 ಹಳ್ಳಿಗಳು, ಮಾಯಕೊಂಡ ಕ್ಷೇತ್ರದ 60 ಹಳ್ಳಿಗಳು, ಹರಪನಹಳ್ಳಿ ಕ್ಷೇತ್ರದಲ್ಲಿ ಶೇ. 75ರಷ್ಟು ಭಾಗ ಹಾಗೂ ಹರಿಹರ, ಜಗಳೂರಿನ ನೂರಾರು ಹಳ್ಳಿಗಳಿಗೆ ತಲುಪಿದ್ದೇನೆ. ಇನ್ನೊಮ್ಮೆ ಎಲ್ಲಾ ತಾಲೂಕು, ಗ್ರಾಮಕ್ಕೆ ತೆರಳಲಿದ್ದೇನೆ. ಎಲ್ಲೆಡೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಸುಭದ್ರ ಆಡಳಿತ, ದಿಟ್ಟ ನಿರ್ಧಾರ ಕೈಗೊಳ್ಳುವಂತಹ ನಾಯಕತ್ವವನ್ನು ಜನರು ಪ್ರಧಾನಿ ಮೋದಿ ಅವರಲ್ಲಿ ಕಂಡಿದ್ದು, ಈ ಬಾರಿಯೂ ಕಮಲದ ಕೈಹಿಡಿಯಲು ಜನತೆ ನಿರ್ಧರಿಸಿಯಾಗಿದೆ.
3 ಬಾರಿ ಸಂಸದರಾಗಿ ಜಿಲ್ಲೆಗೆ ನಿಮ್ಮ ಕೊಡುಗೆ ಏನು?
ಕಳೆದ 5 ವರ್ಷದ ಅವಧಿಯಲ್ಲಿಯೇ ಕೇಂದ್ರದಿಂದ ಜಿಲ್ಲೆಗೆ ನಾನು ತಂದಿರುವ ಅನುದಾನ ಬರೋಬ್ಬರಿ 10 ಸಾವಿರ ಕೋಟಿ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣ, ರೇಲ್ವೆ ಅಭಿವೃದ್ಧಿ, ಸ್ಮಾರ್ಟ್ಸಿಟಿ, ತುಂಗಾನಾಲಾ ಆಧುನೀಕರಣ, ಅಮೃತ್ ಯೋಜನೆ, ಸಂಸದರ ಸ್ಥಳೀಯಾಭಿವೃದ್ಧಿ, ಇಎಸ್ಐ ಆಸ್ಪತ್ರೆ ಮೇಲ್ದರ್ಜೆಗೆ ಯೋಜನೆ ಸೇರಿದಂತೆ ನೂರಾರು ಯೋಜನೆ ಜಿಲ್ಲೆಗೆ ಒತ್ತುತಂದಿದ್ದೇನೆ. ಇದರಲ್ಲಿ ಕೆಲ ಯೋಜನೆಗಳು ಪೂರ್ಣಗೊಂಡಿದ್ದು, ಮತ್ತೊಂದಿಷ್ಟು ಪ್ರಗತಿಯಲ್ಲಿವೆ. ಅಲ್ಲದೆ, ಜಿಲ್ಲೆಯ ಕಟ್ಟಕಡೆ ಗ್ರಾಮ ತಲುಪಿ, ಅಲ್ಲಿನ ಕಷ್ಟಕಾರ್ಪಣ್ಯ ಅರಿತಿದ್ದೇನೆ. ತಪ್ಪದೇ ನನ್ನ ಕಚೇರಿಯಲ್ಲಿ ಜನಸಂಪರ್ಕ ಸಭೆ ಆಯೋಜಿಸಿ ಸಾರ್ವಜನಿಕರಿಂದ ಆಹವಾಲು ಸ್ವೀಕಾರ, ಸಮಸ್ಯೆ ಶೀಘ್ರ ಪರಿಹಾರ ಕಾರ್ಯ ನಡೆಸುತ್ತಾ ಬಂದಿದ್ದೇನೆ.
ಜೆಡಿಎಸ್, ಕಾಂಗ್ರೆಸ್ ಮೈತ್ರಿಯಿಂದ ನಿಮಗೆ ಗೆಲವು ಕಷ್ಟ ಸಾಧ್ಯವೇ?
ಯಾವ ಮಹಾಘಟಬಂದನ್ ಏರ್ಪಟ್ಟರೂ, ಎಷ್ಟೇ ಎದುರಾಳಿಗಳು ಹುಟ್ಟಿಕೊಂಡರೂ ದೇಶದಲ್ಲಿ ಬಿಜೆಪಿ ಈ ಬಾರಿ 300ಕ್ಕೂ ಅಧಿಕ, ರಾಜ್ಯದಲ್ಲಿ 22ಕ್ಕೂ ಅಧಿಕ ಸ್ಥಾನಗಳನ್ನು ಗೆಲ್ಲಲಿದೆ. ಮೋದಿ ಅಲೆ ಸುನಾಮಿಯಂತಿದೆ. ನಮ್ಮ ಜಿಲ್ಲೆಯಲ್ಲಿ ಈ ಬಾರಿ 1.20 ಲಕ್ಷ ನೂತನ ಮತದಾರರಲ್ಲಿ ಶೇ. 80ರಷ್ಟು ಯುವಮತದಾರರು ಮೋದಿ ಸುಭದ್ರ ಆಡಳಿತ, ದೇಶದ ಭದ್ರತೆ ವಿಷಯದಲ್ಲಿ ಅವರು ತೆಗೆದುಕೊಂಡ ದಿಟ್ಟ ನಿರ್ಧಾರ ಬೆಂಬಲಿಸಿದ್ದಾರೆ. ಆದ್ದರಿಂದ ಯಾರು ಎಷ್ಟೇ ಒಗ್ಗಟ್ಟಾದರೂ ಬಿಜೆಪಿ ಚೌಕಿದಾರ್ರನ್ನು ಮಣಿಸಲು ಸಾಧ್ಯವೇ ಇಲ್ಲ. ಇನ್ನು, ಜಿಲ್ಲೆಯಲ್ಲಿ ಜೆಡಿಎಸ್, ಕಾಂಗ್ರೆಸ್ ಮೈತ್ರಿಯಿಂದ ಬಿಜೆಪಿಗೆ ಗೆಲವಿಗೆ ಯಾವುದೇ ತೊಂದರೆ ಇಲ್ಲ. ಮೂರು ಬಾರಿ ಸಂಸದನಾಗಿ ಮಾಡಿರುವ ಅಭಿವೃದ್ಧಿ ಕಾರ್ಯ ನನ್ನ ಗೆಲವಿನ ಅಂತರವನ್ನು ಈ ಬಾರಿ ಮತ್ತಷ್ಟು ಹೆಚ್ಚಿಸಲಿವೆ.
ನಿಮ್ಮ ಎದುರಾಳಿಯ ನಕಾರಾತ್ಮಕ ಅಂಶಗಳು ಗೆಲವಿಗೆ ಸಹಾಯಕವೇ?
ಖಂಡಿತಾ ಇಲ್ಲ. ಎದುರಾಳಿ ಎಷ್ಟೇ ಪ್ರಭಲ ಅಥವಾ ದುರ್ಬಲನಾಗಿದ್ದರೂ ಅದು ನನಗೆ ಲೆಕ್ಕಕ್ಕಿಲ್ಲ. ನಾನು ಯಾವುದೇ ಯಾರದ್ದೋ ಅಲೆ, ಮತ್ಯಾರದ್ದೋ ಅನುಕಂಪ, ಇನ್ಯಾರದ್ದೋ ಆಶೀರ್ವಾದದಿಂದಲೇ ಗೆದ್ದುಬಂದಿಲ್ಲ. ನಾನು ಜನತೆಯ ಆಶೀರ್ವಾದಿಂದ ಗೆದ್ದಿದ್ದೇನೆ. ನಾನು ಮತ್ತು ನಮ್ಮ ಬಿಜೆಪಿ ಪಕ್ಷ ಮಾಡಿದ ಅಭಿವೃದ್ಧಿ ಕಾರ್ಯಗಳು, ಜನಸಾಮಾನ್ಯರಿಗೆ ತಕ್ಷಣಕ್ಕೆ ಸ್ಪಂದಿಸುವ, ಅವರ ಸಮಸ್ಯೆಗೆ ಮುಕ್ತಿ ಕಾಣಿಸುವಂತ ಜನಪರ ಖಾಳಜಿ, ನಿಲುವುಗಳು, ದಿಟ್ಟ ನಿರ್ಧಾರ ಗೆಲವಿಗೆ ಸಹಾಯಕವಾಗಿವೆಯೇ ವಿನಾ ಎದುರಾಳಿ ಸ್ಪರ್ಧಿಗಳ ನಕಾರಾತ್ಮಕ ಅಂಶ, ವೈಫಲ್ಯ ಕಾರಣವಲ್ಲ. ಈ ಬಾರಿಯು ಜಿಲ್ಲೆಯಲ್ಲಿ ಮೈತ್ರಿ ಪಕ್ಷಗಳು ನಮ್ಮೊಂದಿಗೆ ಪೈಪೋಟಿ ನಡೆಸಲು ಸಜ್ಜಾಗಿವೆ. ಆದರೆ, ನಾನು ಮಾಡಿದ ಅಭಿವೃದ್ಧಿ ಕಾರ್ಯ ನನ್ನ ಕೈ ಹಿಡಿಯಲಿದ್ದು, ಗೆಲವು ನಿಶ್ಚಿತ.
ಗೆದ್ದರೆ, ಮುಂದಿನ ನಿಮ್ಮ ಯೋಜನೆಗಳೇನು?
ಗೆದ್ದರೇ. ಎಂಬುದು ಬೇಡ, ಗೆದ್ದೆ ಗೆಲ್ಲುವೆ. ಮುಖ್ಯವಾಗಿ, 3 ದಶಕಗಳ ಬೇಡಿಕೆಯಾದ ದಾವಣಗೆರೆಯ ಅಶೋಕ ಥೇಟರ್ ಮೇಲ್ಸೆತುವೆ ನಿರ್ಮಾಣಕ್ಕೆ ಮುಂದಾಗುವೆ. 2014ರಲ್ಲೇ ಬಜೆಟ್ನಲ್ಲಿ 35 ಕೋಟಿ ಮೇಲ್ಸೇತುವೆ ನಿರ್ಮಾಣಕ್ಕೆ ಮೀಸಲಿಡಲಾಗಿದೆ. ಆದರೆ, ರಾಜ್ಯ ಸರ್ಕಾರ, ಜಿಲ್ಲಾಡಳಿತದ ನಿರ್ಲಕ್ಷ್ಯ, ಅಸಹಕಾರದಿಂದ ನೆನೆಗುದಿಗೆ ಬಿದ್ದಿದೆ. ಲೋಕಾ ಚುನಾವಣೆ ನಂತರ ಮೈತ್ರಿ ಸರ್ಕಾರ ಪತನಗೊಂಡು ಬಿಜೆಪಿ ಮತ್ತೆ ಅಧಿಕಾರಕ್ಕೇರಿ, ಕೇಂದ್ರ, ರಾಜ್ಯಗಳೆರೆಡು ಬಿಜೆಪಿ ಅಧಿಕಾರದಲ್ಲಿರುವುದರಿಂದ ಮೇಲ್ಸೆತುವ ಖಂಡಿತಾ ಪೂರ್ಣಗೊಳ್ಳುತ್ತದೆ. ಅಲ್ಲದೆ, ಜಿಲ್ಲೆಯಲ್ಲಿ ಕಾರ್ಖಾನೆಗಳ ಸಂಖ್ಯೆ ಕಡಿಮೆ ಇದೆ ಎಂಬ ಕೊರಗು ಹೋಗಲಾಡಿಸುವ ನಿಟ್ಟಿನಲ್ಲಿ ರಾಸಾಯನಿಕ ಕಾರ್ಖಾನೆಗಳ ಘಟಕಗಳ ಅಭಿವೃದ್ಧಿ, ದೇಶದಲ್ಲಿಯೇ ಅತಿದೊಡ್ಡದಾದ 2ಜಿ ಎಥೆನಾಲ್ ಘಟಕ 2 ಲಕ್ಷ ಮಿಲಿಯನ್ ಟನ್ ಸಾಮಾಥ್ರ್ಯವಿದ್ದು, ಇದರಿಂದ ಪ್ರತ್ಯಕ್ಷ, ಪರೋಕ್ಷವಾಗಿ ಸಾವಿರಾರು ಜನರಿಗೆ ಉದ್ಯೋಗವಕಾಶ ಸಿಗಲಿದೆ. ಅಲ್ಲದೆ, ಶೀಘ್ರವೇ ರಾಷ್ಟ್ರೀಯ ಹೆದ್ದಾರಿ ಮುಂದಿನ ವರ್ಷದೊಳಗೆ ಪೂರ್ಣಗೊಳಿಸುವುದು ಸೇರಿದಂತೆ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಯತ್ನಿಸುವೆ.

ದಿನದ ಸುದ್ದಿ
ಕರ್ನಾಟಕದಲ್ಲಿ ಈ ವರ್ಷ ಜನಪರ ರಾಜ್ಯ ಬಜೆಟ್ ಮಂಡನೆ ; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಸುದ್ದಿದಿನ, ಹಾವೇರಿ : ಕರ್ನಾಟಕದಲ್ಲಿ ಮುಂದಿನ ತಿಂಗಳು ಮಂಡಿಸಲಾಗುತ್ತಿರುವ ಈ ವರ್ಷದ ರಾಜ್ಯ ಬಜೆಟ್ ರೈತರು, ದೀನ ದಲಿತರು, ಯುವಕರು, ಮಹಿಳೆಯರು, ದುಡಿಯುವ ವರ್ಗ ಮತ್ತು ಜನಪರವಾಗಿರುತ್ತದೆ ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹಾವೇರಿ ಜಿಲ್ಲೆ ಶಿಗ್ಗಾಂವ್ನಲ್ಲಿ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ದುಡಿಮೆಗೆ ಯೋಗ್ಯ ಬೆಲೆ ಸಿಗುವ ರೀತಿಯಲ್ಲಿ ನಮ್ಮ ಕಾರ್ಯಕ್ರಮಗಳು ಇರುತ್ತವೆ ಎಂದರು.
ಕರ್ನಾಟಕ ರಾಜ್ಯದ ಆರ್ಥಿಕ ಅಭಿವೃದ್ಧಿಯಲ್ಲಿ ನಾವು ವೇಗವನ್ನು ಕಂಡಿದ್ದೇವೆ. ಕಳೆದ ವರ್ಷ ನಾನು ಅಧಿಕಾರ ವಹಿಸಿಕೊಂಡಾಗ 5 ಸಾವಿರ ಕೋಟಿ ರೂಪಾಯಿ ರಾಜ್ಯದ ಬೊಕ್ಕಸಕ್ಕೆ ನಮ್ಮ ನಿರ್ಧಿಷ್ಟ ಗುರಿಗೆ ಕೊರತೆಯಿತ್ತು. ಅದನ್ನು ನಾವು 5 ಸಾವಿರ ಕೋಟಿ ತುಂಬುವುದಲ್ಲದೇ, 13 ಸಾವಿರ ಕೋಟಿ ಅಧಿಕವಾಗಿ ಸಂಗ್ರಹ ಮಾಡಿದ್ದೇವೆ. ಈ ವರ್ಷವೂ ಕೂಡ ನಮ್ಮ ಹಣಕಾಸಿನ ಸಂಗ್ರಹ ಉತ್ತಮವಾಗಿದೆ ಎಂದು ಕರ್ನಾಟಕದ ಮುಖ್ಯಮಂತ್ರಿ ಹೇಳಿದರು.
ಕೋವಿಡ್ ನಂತರದಲ್ಲಿ ಆರ್ಥಿಕ ಸುಧಾರಣೆ ಆಗುತ್ತಿರುವ ಸಂದರ್ಭದಲ್ಲಿ ಕೆಳಹಂತದ ಜನಸಮುದಾಯಕ್ಕೆ ಇನ್ನಷ್ಟು ಸಹಾಯ ಮಾಡಿ, ಅವರನ್ನು ಕೂಡ ಮುಖ್ಯ ವಾಹಿನಿಗೆ ಬರಬೇಕು ಎನ್ನುವ ನಿಟ್ಟಿನಲ್ಲಿ ನಾವು ಕಾರ್ಯಕ್ರಮ ರೂಪಿಸುತ್ತಿದ್ದೇವೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಸಂಸತ್ತಿನ ಬಜೆಟ್ ಅಧಿವೇಶನದ ಹಿನ್ನೆಲೆ ; ಇದೇ 30ರಂದು ಸರ್ವಪಕ್ಷಗಳ ಸಭೆ

ಸುದ್ದಿದಿನ ಡೆಸ್ಕ್ : ಸಂಸತ್ತಿನ ಮುಂಬರುವ ಬಜೆಟ್ ಅಧಿವೇಶನದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇದೇ 30ರಂದು ಸರ್ವಪಕ್ಷಗಳ ಸಭೆಯನ್ನು ಕರೆದಿದೆ. ಸಂಸತ್ ಭವನದ ಸಂಕೀರ್ಣದಲ್ಲಿ ಸೋಮವಾರ ಮಧ್ಯಾಹ್ನ 12 ಗಂಟೆಗೆ ಸಭೆ ನಡೆಯಲಿದೆ.
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ, ಕೇಂದ್ರ ಸಚಿವರು ಮತ್ತು ಸಂಸತ್ತಿನ ಎರಡೂ ಸದನಗಳನ್ನು ಪ್ರತಿನಿಧಿಸುವ ಸದನ ನಾಯಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಸಭೆಯಲ್ಲಿ ಸರ್ಕಾರ ಸಂಸತ್ತಿನ ಉಭಯ ಸದನಗಳ ಸುಗಮ ಕಲಾಪಕ್ಕೆ ಎಲ್ಲ ರಾಜಕೀಯ ಪಕ್ಷಗಳ ಸಹಕಾರವನ್ನು ಕೋರಲಿದೆ. ಸಂಸತ್ತಿನ ಬಜೆಟ್ ಅಧಿವೇಶನ ಇದೇ 31ರಿಂದ ಆರಂಭವಾಗಲಿದೆ. ಮೊದಲ ದಿನ ಬೆಳಿಗ್ಗೆ 11 ಗಂಟೆಗೆ ಸೆಂಟ್ರಲ್ ಹಾಲ್ ನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡುವರು.
ಅದೇ ದಿನವೇ ಆರ್ಥಿಕ ಸಮೀಕ್ಷೆಯನ್ನೂ ಸಹ ಮಂಡಿಸಲಾಗುವುದು. ಫೆಬ್ರವರಿ 1ರಂದು 2023-24ನೇ ಸಾಲಿನ ಕೇಂದ್ರ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆ ಮಾಡಲಿದ್ದಾರೆ.
ಬಜೆಟ್ ಅಧಿವೇಶನ ಏಪ್ರಿಲ್ 6ವರೆಗೆ ನಡೆಯಲಿದ್ದು, ಸುಮಾರು 66 ದಿನಗಳಲ್ಲಿ 27 ಕಲಾಪಗಳು ನಡೆಯಲಿದೆ. ಮೊದಲ ಅವಧಿಯಲ್ಲಿ ಅಧಿವೇಶನ ಫೆಬ್ರವರಿ 13ರವರೆಗೆ ನಡೆಯಲಿದೆ. ಫೆಬ್ರವರಿ 14ರಿಂದ ಮಾರ್ಚ್ 12ರವರೆಗೆ ಅಧಿವೇಶನಕ್ಕೆ ಬಿಡುವು ಇರಲಿದೆ ಆನಂತರ ಮಾರ್ಚ್ 13ರಿಂದ ಆರಂಭವಾಗುವ ಅಧಿವೇಶನ ಏಪ್ರಿಲ್ 6ಕ್ಕೆ ಕೊನೆಗೊಳ್ಳಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980336243

ದಿನದ ಸುದ್ದಿ
ರಾಷ್ಟ್ರೀಯ ಯುವ ದಿನದ ಪ್ರಯುಕ್ತ ನಾಳೆ ರಾಜಾಜಿನಗರ ವಿಧಾನ ಸಭಾ ಕ್ಷೇತ್ರದಲ್ಲಿ ಬೈಕ್ ರ್ಯಾಲಿ : ಭವ್ಯ ನರಸಿಂಹಮೂರ್ತಿ

ಸುದ್ದಿದಿನ, ಬೆಂಗಳೂರು : ರಾಷ್ಟ್ರೀಯ ಯುವ ದಿನದ ಪ್ರಯುಕ್ತ ನಾಳೆ ರಾಜಾಜಿನಗರ ವಿಧಾನ ಸಭಾ ಕ್ಷೇತ್ರದಲ್ಲಿ ಬೈಕ್ ರ್ಯಾಲಿ ಹಮ್ಮಿಕೊಂಡಿದ್ದು ಸ್ವಾಮಿ ವಿವೇಕಾನಂದರ 160ನೇ ಜನ್ಮದಿನದ ಅಂಗವಾಗಿ ಅವರ ತತ್ವ ಆದರ್ಶಗಳು ಹಾಗೂ ಯುವ ಜನತೆಗೆ ನೀಡಿರುವ ಸಂದೇಶಗಳನ್ನು ರಾಜಾಜಿನಗರ ವಿಧಾನ ಸಭಾ ಕ್ಷೇತ್ರದ ಎಲ್ಲಾ ಜನತೆಗೆ ತಲುಪುವಂತೆ ಮಾಡುವುದು ಇದರ ಉದ್ದೇಶವಾಗಿದೆ ಎಂದು ರಾಜಾಜಿನಗರ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಆಕಾಂಕ್ಷಿ ಭವ್ಯ ನರಸಿಂಹಮೂರ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೈಕ್ ರ್ಯಾಲಿ ಬೆಳಿಗ್ಗೆ 09-00 ಕ್ಕೆ ರಾಜಾಜಿನಗರ Entrance Bridge ಇಂದ ಪ್ರಾರಂಭವಾಗಿ ನವರಂಗ ಚಿತ್ರಮಂದಿರ – ಶಂಕರ್ ಮಠ – ಹಾವನೂರ್ ಸರ್ಕಲ್ – ಹೌಸಿಂಗ್ ಬೋರ್ಡ್ – ಕಾಮಾಕ್ಷಿಪಾಳ್ಯ ಬಸ್ ಸ್ಟಾಂಡ್ – ಹಾವನೂರ್ – ಅಕ್ಷಯ ಉಪಹಾರ – ಮೋದಿ ಹಾಸ್ಪಿಟಲ್ – ನವರಂಗ ಬ್ರಿಡ್ಜ್ – ಗಿರಿಯಾಸ್ ಸಿಗ್ನಲ್ – 6th ಬ್ಲಾಕ್ – ಕೊನೆಯದಾಗಿ 12 ಗಂಟೆಗೆ ಭಾಷ್ಯಮ್ ಸರ್ಕಲ್ ನಲ್ಲಿ ಕೊನೆಗೊಳ್ಳುತ್ತದೆ.
ದಾರಿಯಲ್ಲಿ 4 ಕಡೆ ಸ್ವಾಮಿ ವಿವೇಕಾನಂದರಿಗೆ ಪೂಜೆ ಹಮ್ಮಿಕೊಳ್ಳಲಾಗಿದೆ. ಪೂಜೆಯ ನಂತರ ವಿವೇಕಾನಂದರ ತತ್ವ ಆದರ್ಶಗಳನ್ನೊಳಗೊಂಡ ಹತ್ತು ಸಾವಿರ ಪುಸ್ತಕಗಳನ್ನು ಕ್ಷೇತ್ರದಾದ್ಯಂತ ಉಚಿತವಾಗಿ ಹಂಚಲಾಗುವುದು ಹಾಗೂ ಅನ್ನ ಸಂತರ್ಪಣೆ ಏರ್ಪಡಿಸಲಾಗಿರುತ್ತದೆ ಎಂದಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
