ದಿನದ ಸುದ್ದಿ
ಸತ್ತವರಲ್ಲಿ ನಮ್ಮವರು ಯಾರು ?

“ಎಲ್ಲಿ ನೋಡಿದರಲ್ಲಿ ಚಿಂದಿಯಾದ ಶವಗಳು. ಕಾಲಿಟ್ಟಲೆಲ್ಲ ರಕ್ತವೋ ರಕ್ತ. ಲೆಕ್ಕವಿಲ್ಲದಷ್ಟು ಮೃತದೇಹಗಳ ಅವಶೇಷಗಳು. ಮುಂಡವಿಲ್ಲದ ರುಂಡಗಳು, ರುಂಡವಿಲ್ಲದ ಮುಂಡಗಳು. ಕೈ ಕಾಲುಗಳಿಲ್ಲದ ದೇಹಗಳು. ಗಾಯಗೊಂಡು ಒದ್ದಾಡುತ್ತಿದ್ದ ಹಲವರ ದೇಹಗಳಲ್ಲಿ ಚೂಪಾದ ಗಾಜಿನ ಚೂರುಗಳು ಹೊಕ್ಕಿದ್ದವು. ತಮ್ಮವರ ಪತ್ತೆಗಾಗಿ ಸಾವಿರಾರು ಮಂದಿ ಅಲ್ಲಿ ಸೇರಿದ್ದರು. ಶವಗಳನ್ನು ಗುರುತಿಸಲಾಗದೆ ಅವರು ರೋಧಿಸುತ್ತಿದ್ದರು. ಅವರ ಆಕ್ರಂದನ ಮುಗಿಲು ಮುಟ್ಟಿತ್ತು.” ಇದು ಈಸ್ಟರ್ ಭಾನುವಾರ ದ್ವೀಪರಾಷ್ಟ್ರ ಶ್ರೀಲಂಕಾದ ಕೊಲೊಂಬೋ ನಗರದಲ್ಲಿನ 3 ಚರ್ಚ್ಗಳಲ್ಲಿ ಮತ್ತು 3 ಪಂಚತಾರಾ ಹೊಟೇಲುಗಳಲ್ಲಿ ಸಂಭವಿಸಿದ ಭೀಕರ ಸರಣಿ ಬಾಂಬ್ ಸ್ಟೋಟದ ನಂತರ ಕಂಡುಬಂದ ಮನಕಲಕುವ ದೃಶ್ಯ.
ಚರ್ಚ್ಗಳಲ್ಲಿ ಪ್ರಾರ್ಥನೆಯಲ್ಲಿ ನಿರತರಾಗಿದ್ದವರ ಮೇಲೆ ಮತ್ತು ವಿಲಾಸಿ ಹೊಟೇಲುಗಳಲ್ಲಿ ತಂಗಿದ್ದ ವಿದೇಶಿ ಪ್ರವಾಶಿಗರನ್ನು ಗುರಿಯಾಗಿಸಿಕೊಂಡು ನಡೆದ ಎರಡು ಆತ್ಮಹತ್ಯಾ ದಾಳಿ ಮತ್ತು ಬಾಂಬ್ ಸ್ಪೋಟಗಳಿಂದಾಗಿ 300 ಕ್ಕೂ ಅಧಿಕ ಮಂದಿ ಅಮಾಯಕರು ಅಸುನೀಗಿ, 500 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಭಾರತ, ಪಾಕಿಸ್ತಾನ, ಅಮೇರಿಕ, ಡೆನ್ಮಾರ್ಕ್, ಬ್ರಿಟನ್, ಟರ್ಕಿ, ಪೋರ್ಚುಗಲ್, ಚೀನಾ ಮೊದಲಾದ ದೇಶಗಳ 35 ಪ್ರಜೆಗಳು ಮೃತಪಟ್ಟಿದ್ದಾರೆ. ಶ್ರೀಲಂಕಾದ ಇತಿಹಾಸದಲ್ಲೇ ಅತ್ಯಂತ ಬೀಭತ್ಸವಾದ ಈ ದಾಳಿಯನ್ನು ಭಾರತವೂ ಸೇರಿದಂತೆ ವಿಶ್ವದ ಅನೇಕ ದೇಶಗಳ ಗಣ್ಯರು ಬಲವಾಗಿ ಖಂಡಿಸಿದ್ದಾರೆ.
ಅಲ್ಲಿ ಮಕ್ಕಳನ್ನು ಕಳೆದುಕೊಂಡ ಹೆತ್ತವರು, ಅಪ್ಪ-ಅಮ್ಮನನ್ನು ಕಳೆದುಕೊಂಡ ಮಕ್ಕಳು, ಪತಿಯನ್ನು ಕಳೆದುಕೊಂಡ ಮಹಿಳೆಯರು, ಪತ್ನಿಯನ್ನು ಕಳೆದುಕೊಂಡ ಪುರುಷರು ತಮ್ಮವರನ್ನು ಹುಡುಕುತ್ತಿದ್ದರು. ಛಿಧ್ರ, ಛಿಧ್ರವಾದ ಮಾನವ ದೇಹದ ತುಂಡುಗಳಲ್ಲಿ ತಮ್ಮವರನ್ನು ಗುರುತಿಸುವುದು ಹೇಗೆ? ಸತ್ತವರಲ್ಲಿ ನಮ್ಮವರು ಯಾರು?
ಅದೇ ರಕ್ತ! ಅದೇ ಅಂಗಾಂಗಗಳು! ಇವರು ನಮ್ಮವರಾ? ಅವರು ನಮ್ಮವರಾ? ಒಂದರ ಮೇಲೊಂದು ಎಂಬಂತೆ ಬಿದ್ದಿರುವ ಮೃತದೇಹಗಳಲ್ಲಿ ನಮ್ಮವರು ಯಾರು ಎಂದು ಗುರುತಿಸುವುದು ಹೇಗೆ? ಇಂತಹ ಪ್ರಕರಣಗಳಲ್ಲಿ ಮೃತದೇಹಗಳನ್ನು ಗುರುತಿಸಲಾಗದೆ. ತಮಗೆ ಸಂಬಂಧವಿಲ್ಲದ ಮೃತ ದೇಹವನ್ನು ಹಸ್ತಾಂತರಿಸಿಕೊಂಡು ಅಂತ್ಯಸಂಸ್ಕಾರ ಮಾಡಿದ ಉದಾರಣೆಗಳಿವೆ. ಶ್ರೀಲಂಕಾ ಸ್ಪೋಟದಲ್ಲಿ ಮಡಿದ 7 ಜನ ಕನ್ನಡಿಗರು ಸೇರಿದಂತೆ 10 ಜನ ಭಾರತೀಯರು ನಮ್ಮವರೇ. ಮೃತಪಟ್ಟ ಇನ್ನುಳಿದವರೆಲ್ಲರೂ ನಮ್ಮವರೇ. “ಇವ ನಮ್ಮವ, ಇವ ನಮ್ಮವ” ಎನ್ನುವವನಿಗೆ ತಮ್ಮವರು ಸಿಗುತ್ತಾರೆ.ಆತನಿಗೆ ಎಲ್ಲರೂ ತನ್ನವರೇ ಆಗಿರುತ್ತಾರೆ. ಆತ ಮಾನವ ರಕ್ತದಲ್ಲಿ ಬೇಧ ಕಾಣುವುದಿಲ್ಲ.
ಹುಟ್ಟಿನಿಂದಲೇ ಕೆಲವರು ಕೀಳು ಜಾತಿಯವರಾಗಿರುತ್ತಾರೆ ಎಂಬುವುದನ್ನು ಆತ ಒಪ್ಪುವುದಿಲ್ಲ. ಮತ ಧರ್ಮಗಳ ಖಾಸಗಿ ನಂಬಿಕೆಗಳನ್ನು ಆತ ವಿವಾದಾಸ್ಪದಗೊಳಿಸುವುದಿಲ್ಲ. ಪುಲ್ವಾಮಾ ದಾಳಿಯಲ್ಲಿ ಸಾವನ್ನಪ್ಪಿದ ಯೋಧರನ್ನು ಆತ ‘ತನ್ನವರು’ ಎಂದು ದುಃಖಿಸುತ್ತಾನೆ. ಕಳೆದ ಮಾರ್ಚ್ 15 ರಂದು ನ್ಯೂಜಿಲ್ಯಾಂಡ್ನ ಮಸೀದಿಯಲ್ಲಿ ನಡೆದ ಶೂಟೌಟ್ಗೆ ಬಲಿಯಾದ 50 ಮಂದಿ ಪ್ರಾರ್ಥನಾ ನಿರತರನ್ನು ಆತ ‘ತನ್ನವರು’ ಎಂದು ಗುರುತಿಸುತ್ತಾನೆ. ಈಗ ಶ್ರೀಲಂಕಾದ ಚರ್ಚುಗಳಲ್ಲಿ ಬಾಂಬ್ ಸ್ಪೋಟಿಸಿ ಸಾಯಿಸಿದ ನೂರಾರು ಮಂದಿ ಭಕ್ತರನ್ನು ಆತ ‘ತನ್ನವರು’ ಎಂದು ಕಣ್ಣೀರು ಹಾಕುತ್ತಾನೆ. ಆತನಿಗೆ ‘ತನ್ನವರು’ ಸಿಕ್ಕೇ ಸಿಗುತ್ತಾರೆ.
‘ತನ್ನವರು’ ಚೆನ್ನಾಗಿರಬೇಕು. ತನ್ನವರು ನೆಮ್ಮದಿಯಿಂದ ಇರಬೇಕು. ಅವರಿಗೆ ಕಷ್ಟಗಳು ಬರಬಾರದು. ಹೀಗೆ ‘ಇವ ನಮ್ಮವ ಇವ ನಮ್ಮವ’ ಎನ್ನುವವನಿಗೆ ಎಲ್ಲರೂ ಚೆನ್ನಾಗಿರಬೇಕೆಂಬ ಮಹದಾಸೆ! ಆತನಿಗೆ ಯುದ್ಧ ಬೇಡ, ಶಾಂತಿ ಬೇಕು. ಆತನಿಗೆ ಪ್ರೀತಿ ಬೇಕು, ಹಿಂಸೆ ಬೇಡ, ಆತ ಹಂಚಿಕೊಂಡು ಬದುಕು ಬಯಸುತ್ತಾನೆ. ಎಲ್ಲರನ್ನೂ ಒಳಗೊಳ್ಳಲು ಶ್ರಮಿಸುತ್ತಾನೆ. ಆತ ವೈವಿಧ್ಯತೆಯಲ್ಲಿ ಏಕತೆ ಕಾಣುತ್ತಾನೆ. ಆತ ಗಡಿಗಳಿಲ್ಲದ, ಗಡಿ ಘರ್ಷಣೆಗಳಿಲ್ಲದ ವಿಶ್ವದ ಕನಸು ಕಾಣುತ್ತಾನೆ. ಆತ ವಿಶ್ವಮಾನವ. ಸರ್ವಜನಾಂಗ ಪ್ರೇಮಿ, ವಿಶ್ವದ ಕರಿಯರಲ್ಲಿ, ಬಿಳಿಯರಲ್ಲಿ ಆತ ಭೇಧ ಕಾಣುವುದಿಲ್ಲ. ಆಫ್ರಿಕಾದವರು, ಅಮೆರಿಕದವರು ಆತನಿಗೆ ಬೇರೆ ಬೇರೆ ಅಲ್ಲ. ಅವರ ಭಾಷೆ ಯಾವುದೇ ಇರಲಿ. ಅವರ ಆಹಾರ ವಿಹಾರ ಹೇಗೂ ಇರಲಿ, ಆತನಿಗೆ ಅವರೆಲ್ಲರೂ ‘ತನ್ನವರು’.
ಎಲ್ಲಾದರೂ ಸರಿಯೇ, ಭೂಕಂಪದಂತಹ, ಪ್ರವಾಹದಂತಹ, ಬರಗಾಲದಂತಹ ನೈಸರ್ಗಿಕ ವಿಕೋಪ ಸಂಭವಿಸಿ ಸಾವು ನೋವುಗಳಾದಾಗ ಆತ ಮರಗುತ್ತಾನೆ. ತನ್ನ ಕೈಲಾದಷ್ಟು ನೆರವು ನೀಡುತ್ತಾನೆ. ಆತನಿಗೆ ಪಾಕಿಸ್ತಾನ, ಹಿಂದುಸ್ಥಾನ ಎಂಬ ಭೇದವಿಲ್ಲ. ಹಿಂದು-ಮುಸ್ಲಿಂ ಎಂಬ ದ್ವೇಷವಿಲ್ಲ. ಅವನು ಚರ್ಚ್ಗಳನ್ನು ಧ್ವಂಸ ಮಾಡುವುದಿಲ್ಲ. ಮಸೀದಿಯನ್ನು ಕೆಡವಿ ಹೆಮ್ಮೆ ಪಟ್ಟುಕೊಳ್ಳುವುದಿಲ್ಲ. ಆತ ತನ್ನ ನಂಬಿಕೆಗಳನ್ನು ಇತರರ ಮೇಲೆ ಹೇರುವುದಿಲ್ಲ. ದಲಿತರನ್ನು ಆತ ನಿಂದಿಸುವುದಿಲ್ಲ.
ಮಹಿಳೆಯರ ದೇವಸ್ಥಾನ ಪ್ರವೇಶವನ್ನು ಆತ ವಿರೋಧಿಸುವುದಿಲ್ಲ. ಎಲ್ಲರ ಸ್ವಾತಂತ್ರ್ಯವನ್ನು ಆತ ಗೌರವಿಸುತ್ತಾನೆ. ಎಲ್ಲೆಲ್ಲ್ಲೂ ತನ್ನವರಿದ್ದಾರೆ. ಎಲ್ಲಾ ದೇಶಗಳಲ್ಲಿದ್ದಾರೆ. ಎಲ್ಲಾ ಭಾಷೆಗಳನ್ನಾಡುವವರಲ್ಲಿದ್ದಾರೆ. ಎಲ್ಲಾ ಮತಧರ್ಮಗಳ ಅನುಯಾಯಿಗಳಲ್ಲಿದ್ದಾರೆ. ಯಾವುದೇ ಮತವನ್ನು ಪ್ರತಿಪಾದಿಸದಿರುವವರ ನಡುವೆಯೂ ಇದ್ದಾರೆ. ಎಲ್ಲಾ ತರಹದ ಆಹಾರ ಸೇವಿಸುವವರ, ವಿಭಿನ್ನ ಉಡುಪುಗಳನ್ನು ತೊಡುವವರ, ಎಲ್ಲರ ನಡುವೆಯೂ ಆ ವಿಶ್ವ ಮಾನವನಿಗೆ ‘ತನ್ನವರು’ ಇದ್ದಾರೆ.
( ಜನಶಕ್ತಿ ವಾರಪತ್ರಿಕೆಯಲ್ಲಿ ಪ್ರಕಟವಾದ ಲೇಖನ)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ನಟ ಮನದೀಪ್ ರಾಯ್ ನಿಧನ

ಸುದ್ದಿದಿನ ಡೆಸ್ಕ್ : ಹಿರಿಯ ಚಿತ್ರನಟ ಮನದೀಪ್ ರಾಯ್ (74 ವರ್ಷ) ಇಂದು ಬೆಳಗಿನ ಜಾವ ಅಗಲಿದ್ದಾರೆ.
ಕೆಲ ದಿನಗಳ ಹಿಂದೆ ಹೃದಯಾಘಾತಕ್ಕೀಡಾಗಿದ್ದ ಅವರು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಮನದೀಪ್ ರಾಯ್ ಹವ್ಯಾಸಿ ರಂಗಭೂಮಿ ಹಿನ್ನೆಲೆಯ ಕಲಾವಿದ. ನಟ – ನಿರ್ದೇಶಕ ಶಂಕರನಾಗ್ ಅವರ ಆತ್ಮೀಯ ಒಡನಾಡಿ. ಪೋಷಕ ಪಾತ್ರ, ಹಾಸ್ಯ ನಟರಾಗಿ 500ಕ್ಕೂ ಹೆಚ್ಚು ಸಿನಿಮಾಗಳು ಹಾಗೂ ಕಿರುತೆರೆ ಸರಣಿಗಳಲ್ಲಿ ಅಭಿನಯಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕರ್ನಾಟಕದಲ್ಲಿ ಈ ವರ್ಷ ಜನಪರ ರಾಜ್ಯ ಬಜೆಟ್ ಮಂಡನೆ ; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಸುದ್ದಿದಿನ, ಹಾವೇರಿ : ಕರ್ನಾಟಕದಲ್ಲಿ ಮುಂದಿನ ತಿಂಗಳು ಮಂಡಿಸಲಾಗುತ್ತಿರುವ ಈ ವರ್ಷದ ರಾಜ್ಯ ಬಜೆಟ್ ರೈತರು, ದೀನ ದಲಿತರು, ಯುವಕರು, ಮಹಿಳೆಯರು, ದುಡಿಯುವ ವರ್ಗ ಮತ್ತು ಜನಪರವಾಗಿರುತ್ತದೆ ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹಾವೇರಿ ಜಿಲ್ಲೆ ಶಿಗ್ಗಾಂವ್ನಲ್ಲಿ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ದುಡಿಮೆಗೆ ಯೋಗ್ಯ ಬೆಲೆ ಸಿಗುವ ರೀತಿಯಲ್ಲಿ ನಮ್ಮ ಕಾರ್ಯಕ್ರಮಗಳು ಇರುತ್ತವೆ ಎಂದರು.
ಕರ್ನಾಟಕ ರಾಜ್ಯದ ಆರ್ಥಿಕ ಅಭಿವೃದ್ಧಿಯಲ್ಲಿ ನಾವು ವೇಗವನ್ನು ಕಂಡಿದ್ದೇವೆ. ಕಳೆದ ವರ್ಷ ನಾನು ಅಧಿಕಾರ ವಹಿಸಿಕೊಂಡಾಗ 5 ಸಾವಿರ ಕೋಟಿ ರೂಪಾಯಿ ರಾಜ್ಯದ ಬೊಕ್ಕಸಕ್ಕೆ ನಮ್ಮ ನಿರ್ಧಿಷ್ಟ ಗುರಿಗೆ ಕೊರತೆಯಿತ್ತು. ಅದನ್ನು ನಾವು 5 ಸಾವಿರ ಕೋಟಿ ತುಂಬುವುದಲ್ಲದೇ, 13 ಸಾವಿರ ಕೋಟಿ ಅಧಿಕವಾಗಿ ಸಂಗ್ರಹ ಮಾಡಿದ್ದೇವೆ. ಈ ವರ್ಷವೂ ಕೂಡ ನಮ್ಮ ಹಣಕಾಸಿನ ಸಂಗ್ರಹ ಉತ್ತಮವಾಗಿದೆ ಎಂದು ಕರ್ನಾಟಕದ ಮುಖ್ಯಮಂತ್ರಿ ಹೇಳಿದರು.
ಕೋವಿಡ್ ನಂತರದಲ್ಲಿ ಆರ್ಥಿಕ ಸುಧಾರಣೆ ಆಗುತ್ತಿರುವ ಸಂದರ್ಭದಲ್ಲಿ ಕೆಳಹಂತದ ಜನಸಮುದಾಯಕ್ಕೆ ಇನ್ನಷ್ಟು ಸಹಾಯ ಮಾಡಿ, ಅವರನ್ನು ಕೂಡ ಮುಖ್ಯ ವಾಹಿನಿಗೆ ಬರಬೇಕು ಎನ್ನುವ ನಿಟ್ಟಿನಲ್ಲಿ ನಾವು ಕಾರ್ಯಕ್ರಮ ರೂಪಿಸುತ್ತಿದ್ದೇವೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಸಂಸತ್ತಿನ ಬಜೆಟ್ ಅಧಿವೇಶನದ ಹಿನ್ನೆಲೆ ; ಇದೇ 30ರಂದು ಸರ್ವಪಕ್ಷಗಳ ಸಭೆ

ಸುದ್ದಿದಿನ ಡೆಸ್ಕ್ : ಸಂಸತ್ತಿನ ಮುಂಬರುವ ಬಜೆಟ್ ಅಧಿವೇಶನದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇದೇ 30ರಂದು ಸರ್ವಪಕ್ಷಗಳ ಸಭೆಯನ್ನು ಕರೆದಿದೆ. ಸಂಸತ್ ಭವನದ ಸಂಕೀರ್ಣದಲ್ಲಿ ಸೋಮವಾರ ಮಧ್ಯಾಹ್ನ 12 ಗಂಟೆಗೆ ಸಭೆ ನಡೆಯಲಿದೆ.
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ, ಕೇಂದ್ರ ಸಚಿವರು ಮತ್ತು ಸಂಸತ್ತಿನ ಎರಡೂ ಸದನಗಳನ್ನು ಪ್ರತಿನಿಧಿಸುವ ಸದನ ನಾಯಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಸಭೆಯಲ್ಲಿ ಸರ್ಕಾರ ಸಂಸತ್ತಿನ ಉಭಯ ಸದನಗಳ ಸುಗಮ ಕಲಾಪಕ್ಕೆ ಎಲ್ಲ ರಾಜಕೀಯ ಪಕ್ಷಗಳ ಸಹಕಾರವನ್ನು ಕೋರಲಿದೆ. ಸಂಸತ್ತಿನ ಬಜೆಟ್ ಅಧಿವೇಶನ ಇದೇ 31ರಿಂದ ಆರಂಭವಾಗಲಿದೆ. ಮೊದಲ ದಿನ ಬೆಳಿಗ್ಗೆ 11 ಗಂಟೆಗೆ ಸೆಂಟ್ರಲ್ ಹಾಲ್ ನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡುವರು.
ಅದೇ ದಿನವೇ ಆರ್ಥಿಕ ಸಮೀಕ್ಷೆಯನ್ನೂ ಸಹ ಮಂಡಿಸಲಾಗುವುದು. ಫೆಬ್ರವರಿ 1ರಂದು 2023-24ನೇ ಸಾಲಿನ ಕೇಂದ್ರ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆ ಮಾಡಲಿದ್ದಾರೆ.
ಬಜೆಟ್ ಅಧಿವೇಶನ ಏಪ್ರಿಲ್ 6ವರೆಗೆ ನಡೆಯಲಿದ್ದು, ಸುಮಾರು 66 ದಿನಗಳಲ್ಲಿ 27 ಕಲಾಪಗಳು ನಡೆಯಲಿದೆ. ಮೊದಲ ಅವಧಿಯಲ್ಲಿ ಅಧಿವೇಶನ ಫೆಬ್ರವರಿ 13ರವರೆಗೆ ನಡೆಯಲಿದೆ. ಫೆಬ್ರವರಿ 14ರಿಂದ ಮಾರ್ಚ್ 12ರವರೆಗೆ ಅಧಿವೇಶನಕ್ಕೆ ಬಿಡುವು ಇರಲಿದೆ ಆನಂತರ ಮಾರ್ಚ್ 13ರಿಂದ ಆರಂಭವಾಗುವ ಅಧಿವೇಶನ ಏಪ್ರಿಲ್ 6ಕ್ಕೆ ಕೊನೆಗೊಳ್ಳಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980336243
