ದಿನದ ಸುದ್ದಿ
ಪ್ರಸಕ್ತ ಸಂದರ್ಭದಲ್ಲಿ ಬಡವಿಭಾಗಗಳಿಗೆ ಹಣ ವರ್ಗಾವಣೆ ಯೋಜನೆಗಳು

ಈಗ ಪ್ರಸ್ತಾಪಿಸಲಾಗುತ್ತಿರುವ ನಗದು ವರ್ಗಾವಣೆಯು, ಮೋದಿ ಸರಕಾರದ ಪಿಎಂ-ಕಿಸಾನ್ ಆಗಲಿ,ಅಥವ ಕಾಂಗ್ರೆಸಿನ “ನ್ಯಾಯ್” ಅಗಲಿ, ನವ ಉದಾರ ಬಂಡವಾಳಶಾಹಿಯು ಬಿಕ್ಕಟ್ಟಿಗೆ ಒಳಗಾಗಿರುವ ಅಂಶವನ್ನು ಸೂಚಿಸುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ನವ-ಉದಾರವಾದಿಬಂಡವಾಳಶಾಹಿಯ ಆಚೆಗೆ ನೋಡಲಾರದ ರಾಜಕೀಯ ಪಡೆಗಳಲ್ಲಿ ಒಂದು ಸನ್ನಿಗೆ ಒಳಗಾದ ರೀತಿಯಲ್ಲಿ ಕೋಮು ಭಾವನೆಗಳನ್ನು ಕೆಣಕಿ ವೋಟು ಬಾಚಿಕೊಳ್ಳುವ ಸನ್ನಾಹದಲ್ಲಿ ತೊಡಗಿದ್ದರೆ, ಇನ್ನೊಂದು, ಜಾತ್ಯಾತೀತ ಮನೋಭಾವ ಹೊಂದಿರುವ ರಾಜಕೀಯ ಪಡೆಯು ನವ ಉದಾರ ಬಂಡವಾಳಶಾಹಿಗೆ ಒಂದು “ಮಾನವೀಯ ಮುಖ” ತೊಡಿಸುವ ಆಶ್ವಾಸನೆ ಕೊಡುತ್ತಿದೆ.
ಇಂತಹನೆರವೇರಲಾರದಆಶ್ವಾಸನೆಗಳನ್ನುಎಡಪಂಥಿಯರುಬೆಂಬಲಿಸಬೇಕೇ? ಬಡವರಿಗೆ ಪರಿಹಾರ ದೊರಕಿಸುವ ಆಶ್ವಾಸನೆಯಿಂದ ಕೂಡಿದ ಕ್ರಮಗಳಿಗೆ ಈ ರಾಜಕೀಯ ಪಡೆಗಳು ಮುಂದಾದಾಗ ಎಡ ಪಂಥೀಯರು ಅದನ್ನು ಸ್ವಾಗತಿಸಬೇಕುಎನ್ನುತ್ತಾರೆಪ್ರೊ. ಪ್ರಭಾತ್ಪಟ್ನಾಯಕ್. . ಏಕೆಂದರೆ, ನವ ಉದಾರವಾದದ ತರ್ಕ ಮತ್ತು ಚಾಳಿಯಿಂದಾಗಿ ಒಂದೋ ಈ ಆಶ್ವಾಸನೆ ಕೊಟ್ಟವರು ಅದನ್ನು ಮುರಿಯುತ್ತಾರೆ, ಆಗ ಎಡ ಶಕ್ತಿಗಳು ಅದನ್ನು ಎತ್ತಿ ತೋರಿಸಿ ಅದರ ವಿರುದ್ಧ ಹೋರಾಡಬೇಕಾಗುತ್ತದೆ, ಇಲ್ಲವೇ ನವ ಉದಾರ ವ್ಯವಸ್ಥೆಯನ್ನೇ ಮೀರಲು ಆರಂಭಗೊಳ್ಳುವ ಒಂದು ಗತಿತಾರ್ಕಿಕ ಪ್ರಕ್ರಿಯೆಯನ್ನು ಎಡ ಶಕ್ತಿಗಳು ಉದ್ದೀಪಿಸಬಹುದು.
ಮೊದಲು ಮೋದಿ ಸರ್ಕಾರವು ತನ್ನ ಕೊನೆಯ ಬಜೆಟ್ನಲ್ಲಿ ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಹಣ ವರ್ಗಾಯಿಸುವ ಒಂದು ಯೋಜನೆಯ ಘೋಷಣೆ ಮಾಡಿತು. ಈ ಯೋಜನೆಯ ಪ್ರಕಾರ, ಅತಿ ಸಣ್ಣ ರೈತ ಕುಟುಂಬವೊಂದಕ್ಕೆ ವಾರ್ಷಿಕ 12,000 ರೂಗಳನ್ನು ಅವರ ಬ್ಯಾಂಕ್ ಖಾತೆಗೆ ಸರ್ಕಾರವೇ ನೇರವಾಗಿ ವರ್ಗಾಯಿಸುತ್ತದೆ. ಈ ಯೋಜನೆಯು ಸುಮಾರು 12 ಕೋಟಿ ಮಂದಿಗೆ ಅನುಕೂಲ ಕಲ್ಪಿಸುತ್ತದೆ ಎಂದು ಅವರು ಹೇಳುವಾಗ ಚುನಾವಣೆಗಳಲ್ಲಿ ವೋಟು ಬಾಚಿಕೊಳ್ಳುವುದಷ್ಟೇ ಅವರ ಉದ್ದೇಶ. ಆದರೆ, ಅವರು ಘೋಷಣೆ ಮಾಡಿರುವ ಹಣದ ಮೊತ್ತವು ಅದೆಷ್ಟು ಜುಜುಬಿ ಎಂದರೆ, ಅದರ ಬಗ್ಗೆ ಮೋದಿ ಕೂಡ ತಮ್ಮ ಚುನಾವಣಾ ಭಾಷಣಗಳಲ್ಲಿ ತುತ್ತೂರಿ ಊದುವುದನ್ನೇ ನಿಲ್ಲಿಸಿದ್ದಾರೆ. ಬದಲಿಗೆ, ಬಿಜೆಪಿಯು ಪ್ರಜ್ಞಾ ಠಾಕುರ್ ಅಂತಹ ಭಯೋತ್ಪಾದನೆ ಆರೋಪಿಯನ್ನು ಕಣಕ್ಕಿಳಿಸಿ ಕೋಮು ಭಾವನೆಗಳನ್ನು ಕೆಣಕಿ ವೋಟು ಬಾಚಿಕೊಳ್ಳುವ ತನ್ನ ಹಳೆಯ ಚಾಳಿಗೆ ಮರಳಿದೆ.
ಈಗ ಕಾಂಗ್ರೆಸ್ನ ಸರದಿ. ಅದು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ “ನ್ಯಾಯ್” ಎಂಬ ಹೆಸರಿನ ಒಂದು ಹೆಚ್ಚು ಮಹತ್ವಾಕಾಂಕ್ಷೆಯ ಯೋಜನೆಯನ್ನು ಘೋಷಿಸಿದೆ. ಅದರ ಪ್ರಕಾರ, ಸುಮಾರು ಐದು ಕೋಟಿ ಅತ್ಯಂತ ಬಡ ಕುಟುಂಬಗಳಿಗೆ ತಿಂಗಳಿಗೆ 6000 ರೂಗಳನ್ನು ಅವರ ಖಾತೆಗೆ ವರ್ಗಾಯಿಸಲಾಗುವುದು.
ಈ ಯೋಜನೆಗೆ ವಾರ್ಷಿಕ 3.6 ಲಕ್ಷ ಕೋಟಿ ರೂ ವೆಚ್ಚ ತಗಲುತ್ತದೆ. (ಮೋದಿ ಸರ್ಕಾರದ ಯೋಜನೆಗೆ ತಗಲುವ ವೆಚ್ಚ ವಾರ್ಷಿಕ 72,000 ಕೋಟಿ ರೂಗಳು). ಕಾಂಗ್ರೆಸ್ನ ಈ ಯೋಜನೆಗೆ ಹಣ ಒದಗಿಸಿಕೊಳ್ಳುವ ಬಗ್ಗೆ ವಿವರಗಳು ಇನ್ನೂ ಲಭ್ಯವಿಲ್ಲವಾದರೂ ಈ ಯೋಜನೆ ಗಂಭೀರತೆಯಿಂದ ಕೂಡಿದೆ ಎಂಬ ಭಾವನೆ ಇದೆ.
ಬಡವರಿಗೆನೆರವಿನ “ಔದಾರ್ಯ”
ಬಡವರಿಗೆ ಈ ದೇಶದಲ್ಲಿ ದೊರೆಯುವ ಯಾವುದೇ ರೀತಿಯ ನೆರವು ಸ್ವಾಗತಾರ್ಹವೇ. “ನ್ಯಾಯ್”ಯೋಜನೆಯಲ್ಲಿ ಎರಡು ಸಮಸ್ಯೆಗಳು ಎದ್ದು ಕಾಣುತ್ತವೆ. ಮೊದಲನೆಯ ಸಮಸ್ಯೆ ಎಂದರೆ, ಇದೊಂದು ನಗದು ಹಣ ವರ್ಗಾವಣೆಯ ಯೋಜನೆ. ಹಾಲಿ ಇರುವ ಕಲ್ಯಾಣ ಕಾರ್ಯಕ್ರಮಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಮತ್ತು ಅಧಿಕವಾಗಿ ಈ ಯೋಜನೆ ಸೇರಿಕೊಳ್ಳುತ್ತದೆ ಎಂದು ಭಾವಿಸಿಕೊಂಡರೂ ಸಹ, ಬಡವರಿಗೆ ಒಂದಿಷ್ಟು ಹಣ ಕೊಟ್ಟು ಸರ್ಕಾರ ಕೈ ತೊಳೆದುಕೊಳ್ಳುತ್ತದೆ, ಅಷ್ಟೆ. ಶಿಕ್ಷಣ ಮತ್ತು ಆರೋಗ್ಯ ಇಂತಹ ಸಾರ್ವತ್ರಿಕ ಅಗತ್ಯ ಸೇವೆಗಳನ್ನು ಒದಗಿಸುವ ತನ್ನ ಜವಾಬ್ದಾರಿಯಿಂದ ಸರ್ಕಾರ ನುಣುಚಿಕೊಳ್ಳುತ್ತದೆ. ಹಾಗಾಗಿ, ಇಂತಹ ಅಗತ್ಯ ಸೇವೆಗಳನ್ನು ಖಾಸಗಿಯಾಗಿ ಒದಗಿಸುವವರು ತಮ್ಮ ಸೇವೆಗಳ ಬೆಲೆ ಏರಿಸಿ ಬಡವರಿಗೆ ವರ್ಗಾವಣೆಯಾದ ಈ ಹಣವನ್ನು ತಮ್ಮ ಜೇಬಿಗೆ ಇಳಿಸಿಕೊಳ್ಳುತ್ತಾರೆ.
ಎರಡನೆಯ ಸಮಸ್ಯೆ ಎಂದರೆ, ಈ ಯೋಜನೆಯು ಕೆಲವೇ ಮಂದಿಗೆ ಮಾತ್ರ ಫಲ ದೊರಕಿಸುವ ಗುರಿ ಹೊಂದಿದೆ. ಹಾಗಾಗಿ, ಅನೇಕ ಮಂದಿ ಈ ಯೋಜನೆಯಿಂದ ಹೊರಗುಳಿಯುತ್ತಾರೆ. ಮೇಲಾಗಿ, ಫಲಾನುಭವಿಗಳ ಆಯ್ಕೆ ಮನಸೋ ಇಚ್ಛೆಯಾಗಿರುತ್ತದೆ. ಉದಾಹರಣೆಗೆ, ಒಂದು ನಿಗದಿಪಡಿಸಿದ ವರಮಾನ ಮಿತಿಯೊಳಗಿರುವ ಒಂದು ಕುಟುಂಬಕ್ಕೆ ತಿಂಗಳಿಗೆ 6000 ರೂ ದೊರೆಯುವಾಗ, ಆ ಮಿತಿಗಿಂತ ಒಂದು ರೂ ಹೆಚ್ಚಿನ ವರಮಾನವಿರುವ ಕುಟುಂಬಕ್ಕೆ ಏನೂ ಸಿಗುವುದಿಲ್ಲ. ಇದು ಬಡ ಜನತೆಯ ನಡುವೆ ವಿರಸ ಸೃಷ್ಠಿಸುತ್ತದೆ.
ಯಾವುದೇ ಸೀಮಿತ ಫಲಾನುಭವಿ ಯೋಜನೆಯು ಸರ್ಕಾರದ ಔದಾರ್ಯಪೂರ್ಣ ಬಕ್ಷೀಸು ಎನಿಸುತ್ತದೆ. ಇದನ್ನು ಪಡೆಯಲು ಒಬ್ಬ ವ್ಯಕ್ತಿಯು ದೈನ್ಯತೆಯಿಂದ ಕೋರಿಕೆ ಸಲ್ಲಿಸಬೇಕಾಗುತ್ತದೆ. ಇದು, ಮೂಲಭೂತವಾಗಿ ಪ್ರಜಾಪ್ರಭುತ್ವ-ವಿರೋಧಿ ನಡೆಯಾಗುತ್ತದೆ.ಕೆಲವು ವಸ್ತುಗಳು ಮತ್ತು ಸೇವೆಗಳನ್ನುಒಂದು ಸಾರ್ವತ್ರಿಕವಾಗಿ ಹಕ್ಕು ಆಗಿ ಪ್ರತಿ ಪ್ರಜೆಗೂ ಒದಗಿಸಬೇಕಾದ ಸರ್ಕಾರವು, ಅದರ ಬದಲಿಗೆ ಅವನ್ನು ದಾನವೋ ಭಿಕ್ಷೆಯೋ ಎಂಬಂತೆ ಕೊಡುವಂತಾಗುತ್ತದೆ. ಆದ್ದರಿಂದ, ಕೆಲವು ಆರ್ಥಿಕ ಹಕ್ಕುಗಳು ಸಾರ್ವತ್ರಿಕವಾಗಿ ಜಾರಿಯಾದಾಗ ಮಾತ್ರ ಇಂತಹ ಸೀಮಿತ ಫಲಾನುಭವಿ ಯೋಜನೆಗಳು ಬಡ ಜನತೆಯ ನಡುವೆ ಸೃಷ್ಠಿಸುವ ವಿರಸ ನಿವಾರಣೆಯಾಗುತ್ತದೆ.
ವರ್ಗಾವಣೆಯ ವಿಷಯವನ್ನು ಈಗಏಕೆ ಎತ್ತಲಾಗಿದೆ?
ಇಂತಹ ಯೋಜನೆಗಳ ಬಗ್ಗೆ ಅನಿಸಿಕೆಗಳನ್ನು ಬದಿಗೆ ಸರಿಸಿ, ಒಂದು ಪ್ರಶ್ನೆ ಕೇಳಬೇಕಿದೆ: ಇದ್ದಕ್ಕಿದ್ದಂತೆಯೇ ಇಂತಹ ವರ್ಗಾವಣೆಯ ವಿಷಯವನ್ನು ಏಕೆ ಎತ್ತಲಾಗಿದೆ? ಅಭಿವೃದ್ಧಿಯ ಬಗ್ಗೆ ಮಾತನಾಡಿಯೇ ಮೋದಿ 2014ರ ಚುನಾವಣೆ ಗೆದ್ದರು. ಅದಕ್ಕೂ ಹಿಂದೆ, ಜಿಡಿಪಿಯ ಬೆಳವಣಿಗೆ ದರ, ಭಾರತ ಒಂದು ಬಲಿಷ್ಠ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುವ ಬಗ್ಗೆ, ಪ್ರಕಾಶಮಾನ ಭಾರತ ಮುಂತಾದ ವಿಷಯಗಳ ಬಗ್ಗೆ ಚರ್ಚೆಯಾಗುತ್ತಿತ್ತೇ ವಿನಃ, ಯಾವತ್ತೂ ಬಡವರಿಗೆ ಹಣ ವರ್ಗಾಯಿಸುವ ಚರ್ಚೆ ಇರಲೇ ಇಲ್ಲ. ಯುಪಿಎ-1 ಸರ್ಕಾರ ಜಾರಿಗೆ ತಂದ ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಬಗ್ಗೆ 2014 ರ ಚುನಾವಣೆಯ ಸಂದರ್ಭದಲ್ಲಿಯೂ ಸಹ ಚರ್ಚೆಯಾಗಲಿಲ್ಲ. ಈ ಎಲ್ಲ ಅಂಶಗಳನ್ನು ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಜಿಡಿಪಿ ಉನ್ನತವಾಗಿ ಬೆಳೆಯುತ್ತದೆ ಮತ್ತು ಅದರಿಂದಾಗಿಯೇ ಎಲ್ಲರ ಏಳಿಗೆಯಾಗುತ್ತದೆ ಎಂಬುದಾಗಿ ಎಲ್ಲರೂ ನಂಬಿದ್ದರು. ಆದರೆ, ಈಗ ಇಂತಹ ಬೊಗಳೆಯ ಮಾತುಗಳಿಗೆ ಮತದಾರರು ಮರುಳಾಗುತ್ತಿಲ್ಲ.
ಈಗ ಪ್ರಸ್ತಾಪಿಸಲಾಗುತ್ತಿರುವ ನೇರ ವರ್ಗಾವಣೆಯು, ಸಂಕ್ಷಿಪ್ತವಾಗಿ ಹೇಳುವುದಾದರೆ, ನವ ಉದಾರ ಬಂಡವಾಳಶಾಹಿಯು ಬಿಕ್ಕಟ್ಟಿಗೆ ಒಳಗಾಗಿರುವ ಅಂಶವನ್ನು ಸೂಚಿಸುತ್ತದೆ. ನವ ಉದಾರ ಬಂಡವಾಳಶಾಹಿಯು ಉತ್ಪಾದಕ ಶಕ್ತಿಗಳನ್ನು ವೇಗವಾಗಿ ಬೆಳೆಸುವುದರಿಂದ ಜಿಡಿಪಿ ಉನ್ನತವಾಗಿ ಬೆಳೆಯುತ್ತದೆ. ಅದರಿಂದ ಎಲ್ಲರೂ ಪ್ರಯೋಜನ ಪಡೆಯುತ್ತಾರೆ ಎಂದು ಪ್ರಚುರಪಡಿಸುತ್ತಿದ್ದ ಅದರ ಸಿದ್ದಾಂತವು ಈಗ ವಿಶ್ವಾಸಾರ್ಹತೆ ಕಳೆದುಕೊಂಡಿದೆ.
ಈ ಸಂಗತಿ ಬಿಜೆಪಿಯು ಹುಚ್ಚು ಹಿಡಿದ ರೀತಿಯಲ್ಲಿ ಪ್ರಚೋದನಾಕಾರಿ ಕೋಮು ಪ್ರಚಾರಕ್ಕೆ ಮರಳಿರುವ ಅಂಶದಲ್ಲಿಯೂ ಕಾಣ ಬರುತ್ತದೆ. ಹಿಂದೆ ಅಭಿವೃದ್ಧಿಯ ಬಗ್ಗೆ ಅವರು ಕೊಟ್ಟ ಭರವಸೆಗಳು ಈಗ ಟೊಳ್ಳು ಶಬ್ದಗಳಾಗಿ ಕೇಳಿಸುತ್ತಿವೆ, ಅವುಗಳನ್ನು ಈಗ ಪುನರಾವರ್ತಿಸುವಂತಿಲ್ಲ. ಸಧ್ಯದ ಪರಿಸ್ಥಿತಿಯಲ್ಲಿ, ಅಂದರೆ, ಬಂಡವಾಳಶಾಹಿಯ ಬಿಕ್ಕಟ್ಟಿನ ಸಂರ್ಭದಲ್ಲಿ, “ಅಭಿವೃದ್ಧಿ” ಘೋಷಣೆಯ ಮೂಲಕ ಎಳ್ಳಷ್ಟೂ ಪರಿಹಾರ ಸಿಗುವುದಿಲ್ಲ ಎಂಬುದು ಜನತೆಗೆ ಅನುಭವದ ಮೂಲಕವೇ ತಿಳಿದಿದೆ.
ಈ ವಿದ್ಯಮಾನಗಳನ್ನು ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ನವ ಉದಾರ ಬಂಡವಾಳಶಾಹಿಯು ಇಂದು ಬಿಕ್ಕಟ್ಟಿಗೆ ಒಳಗಾಗಿರುವ ಪರಿಸ್ಥಿತಿಯಲ್ಲಿ ಅದಕ್ಕೆ ಬದ್ಧವಾಗಿರುವ ಒಂದು ರಾಜಕೀಯ ಪಡೆ ಸನ್ನಿಗೆ ಒಳಗಾದ ರೀತಿಯಲ್ಲಿ ಕೋಮು ಭಾವನೆಗಳನ್ನು ಕೆಣಕಿ ವೋಟು ಬಾಚಿಕೊಳ್ಳುವ ಸನ್ನಾಹದಲ್ಲಿ ತೊಡಗಿದೆ. ಅದೇ ಸಮಯದಲ್ಲಿ, ಇನ್ನೊಂದು ರಾಜಕೀಯ ಪಡೆ ಇನ್ನೊಂದು ರೀತಿಯಲ್ಲಿ ಕಾರ್ಯಮಗ್ನವಾಗಿದೆ. ವಿಶಾಲ ಜಾತ್ಯಾತೀತ ಮನೋಭಾವ ಹೊಂದಿರುವ ಈ ಪಡೆಯು ನವ ಉದಾರ ಬಂಡವಾಳಶಾಹಿಗೆ ಒಂದು ಮಾನವೀಯ ಮುಖ ತೊಡಿಸಿ, ಸಮಾಜದ ತಳಸ್ತರದದಲ್ಲಿವ ಒಟ್ಟು ಜನಸಂಖ್ಯೆಯ ಐದನೇ ಒಂದು ಭಾಗದಷ್ಟು ಮಂದಿಗೆ ನೇರ ಹಣ ವರ್ಗಾವಣೆಯ ಮೂಲಕ ನವ ಉದಾರ ಬಂಡವಾಳಶಾಹಿಯ ದಿಕ್ಪಥವನ್ನು ಪರಿಷ್ಕರಿಸುವ ಆಶ್ವಾಸನೆ ಕೊಡುತ್ತಿದೆ.
ನಿಜ, ಇಂತಹ ನೇರ ಹಣ ವರ್ಗಾವಣೆ ಯೋಜನೆ ಕಾರ್ಯಸಾಧ್ಯ, ಅವಕ್ಕೆ ಹಣ ಹೊಂದಿಸಿಕೊಳ್ಳುವುದು ಸಾಧ್ಯವಿದೆ. ಅದಕ್ಕೆ ತಗಲುವ ವೆಚ್ಚವು ಜಿಡಿಪಿಯ ಸುಮಾರು ಶೇ.2 ರಷ್ಟಾಗುತ್ತದೆ. ಆದರೆ, ನವ ಉದಾರ ಬಂಡವಾಳಶಾಹಿಯ ಅಂತರ್ಗತ ತರ್ಕವೇ ಇಂತಹ ವರ್ಗಾವಣೆಗೆ ಅಡ್ಡಿಯಾಗುತ್ತದೆ. ಜಿಡಿಪಿಯ ಸುಮಾರು ಶೇ.2 ರಷ್ಟಾಗುವ ಈ ಮೊತ್ತವನ್ನು ಬಂಡವಾಳದಾರರ ಮೇಲೆ ತೆರಿಗೆ ಹಾಕಿಯೋ ಅಥವಾ ಸಮಾಜದ ಶ್ರೀಮಂತ ವಿಭಾಗಗಳ ಮೇಲೆ ತೆರಿಗೆ ಹಾಕುವ ಮೂಲಕವೋ ಹೊಂದಿಸಿಕೊಳ್ಳಬಹುದು. ಅಥವಾ, ವಿತ್ತೀಯ ಕೊರತೆಯ ಗಾತ್ರವನ್ನು ಹೆಚ್ಚಿಸಿಕೊಳ್ಳುವ ಮೂಲಕ, ಅಥವಾ ಈ ಎರಡೂ ವಿಧಾನಗಳ ಸಂಯೋಜನೆಯ ಮೂಲಕವೂ ಹೊಂದಿಸಿಕೊಳ್ಳಬಹುದು.
ಆದರೆ ಸಂಪನ್ಮೂಲಗಳನ್ನು ಹೊಂದಿಸಿಕೊಳ್ಳುವ ಈ ಎರಡೂ ವಿಧಾನಗಳನ್ನು ಜಾಗತೀಕರಣಗೊಂಡ ಹಣಕಾಸು ಬಂಡವಾಳವು ಅನಿಷ್ಟವೆಂದೇ ಬಗೆಯುತ್ತದೆ. ಈ ಕಾರಣದಿಂದಾಗಿ, ನೇರ ಹಣ ವರ್ಗಾವಣೆಯ ಯೋಜನೆಯನ್ನು ಜಾರಿಗೊಳಿಸ ಬಯಸುವ ಯಾವುದೇ ಸರ್ಕಾರವು ನವ ಉದಾರವಾದದ ಏರ್ಪಾಡಿನಲ್ಲಿ ಕೆಲವು ಬದಲಾವಣೆ ಮಾಡಬೇಕಾಗುತ್ತದೆ (ಆಗ, ಈ ಬದಲಾವಣೆಯ ಕ್ರಿಯೆಯು ತನ್ನದೇ ಒಂದು ಗತಿ ತಾರ್ಕಿಕ ಚಲನೆಯನ್ನು ಹೊಮ್ಮಿಸುತ್ತದೆ). ಇದು ಸಾಧ್ಯವಾಗದಿದ್ದಲ್ಲಿ, ಹಾಲಿ ಕಲ್ಯಾಣ ಕಾರ್ಯಕ್ರಮಗಳನ್ನು ನಿಲ್ಲಿಸುವ ಮೂಲಕ ವರ್ಗಾವಣೆ ಯೋಜನೆಗೆ ಹಣ ಹೊಂದಿಸಿಕೊಳ್ಳಬೇಕಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ವರ್ಗಾವಣೆಯ ಉದ್ದೇಶವೇ ವಿಫಲವಾಗುತ್ತದೆ.
ಕಲ್ಯಾಣವೆಚ್ಚಗಳನ್ನುಸ್ವಾಗತಿಸುವುದುಪರಿಷ್ಕರಣವಾದವೇ?
ಬಂಡವಾಳಶಾಹಿ ವ್ಯವಸ್ಥೆಯು ತನ್ನನ್ನು ತಾನು ಸಮರ್ಥಿಸಿಕೊಳ್ಳುವ ಸಲುವಾಗಿಯೇ ಸ್ವಲ್ಪ ಮಟ್ಟಿನ ನೆರವನ್ನು ಬಡವರಿಗೆ ಒದಗಿಸಬಲ್ಲದು, ಮತ್ತು ಒದಗಿಸುತ್ತದೆ, ಇಂತಹ ವರ್ಗಾವಣೆ ಯೋಜನೆಗಳನ್ನು, ಅಥವ ಒಟ್ಟಾರೆಯಾಗಿ ಕಲ್ಯಾಣ ವೆಚ್ಚಗಳನ್ನು ಸ್ವಾಗತಿಸುವುದು ಪರಿಷ್ಕರಣವಾದ ಆಗುತ್ತದಷ್ಟೇ ಎಂಬುದಾಗಿ ವಾದಿಸುವ ಪ್ರವೃತ್ತಿ ಕೆಲವು ಎಡ ಪಂಥೀಯ ವಲಯಗಳಲ್ಲಿದೆ. ನೇರ ಹಣ ವರ್ಗಾವಣೆ ಅಥವಾ ಕಲ್ಯಾಣ ಕಾರ್ಯಕ್ರಮಗಳು ವ್ಯವಸ್ಥೆಯಲ್ಲಿ ಕಾರ್ಯಸಾಧ್ಯವಾದ ಕೇವಲ ಸುಧಾರಣಾ ಕ್ರಮಗಳು. ಅದಕ್ಕೆ ಪ್ರಶಂಸೆಯ ಅಗತ್ಯವಿಲ್ಲ ಎನ್ನುತ್ತಾರೆ ಅವರು.
ವ್ಯಂಗ್ಯದ ಸಂಗತಿಯೆಂದರೆ ಬಡವರಿಗೆ ನೆರವು ಒದಗಿಸುವ ಬಗ್ಗೆ ನವ ಉದಾರ ಬಂಡವಾಳಶಾಹಿಯ ಸಮರ್ಥಕರು ಹೊಂದಿರುವ ಅಭಿಪ್ರಾಯವೂ ಇದೇ ರೀತಿಯಲ್ಲಿದೆ. ಬಡವರಿಗೆ ನೆರವು ಒದಗಿಸಬಹುದಾದಷ್ಟು ಹೊಂದಿಕೆಯನ್ನು ಅದು ಮಾಡಿಕೊಳ್ಳಬಲ್ಲದು, ಅದರ ಅಂತರ್ಗತ ತರ್ಕವು ಇಂತಹ ನೆರವಿಗೆ ಅಡ್ಡಿಯಾಗುವುದಿಲ್ಲ ಎಂದು ಅವರು ವಾದಿಸುತ್ತಾರೆ.
ಶ್ರೀಮಂತರಿಗೆ ಮತ್ತು ಕಾರ್ಪೊರೇಟ್ಗಳಿಗೆ ತೆರಿಗೆ ಕಡಿತ ಮಾಡಿದರೆ ಅದರ ಫಲವು ಕೆಳಕ್ಕೆ ಜಿನುಗಿ ತಳಸ್ತರಗಳಿಗೂ ಪ್ರಯೋಜನ ಸಿಗುತ್ತದೆ ಎಂಬ ಜಿನುಗು ಸಿದ್ಧಾಂತವು ಅಪಹಾಸ್ಯಗೊಳಗಾಗಿದ್ದ ಸಂದರ್ಭದಲ್ಲಿ ನವ ಉದಾರ ಬಂಡವಾಳಶಾಹಿಯ ಹೊಸ ಸಮರ್ಥನೆಯಾಗಿ, ಹನ್ನೊಂದನೇ ಪಂಚವಾರ್ಷಿಕ ಯೋಜನೆಯ ದಸ್ತಾವೇಜಿನಲ್ಲಿ, ಜಿಡಿಪಿ ಉನ್ನತವಾಗಿ ಬೆಳೆದಾಗ ಮಾತ್ರ ಸರ್ಕಾರದ ಆದಾಯವೂ ವೇಗವಾಗಿ ಬೆಳೆದು ಬಡತನ ತೊಡೆದು ಹಾಕುವ ಕಲ್ಯಾಣ ಕಾರ್ಯಕ್ರಮಗಳಿಗೆ ಹೆಚ್ಚು ಹಣ ದೊರೆಯುತ್ತದೆ ಎಂಬುದಾಗಿ ಹೇಳಲಾಗಿತ್ತು. ಇದೊಂದು ಸೋಗು. ಬಡತನ ನಿವಾರಿಸುವ ಸಲುವಾಗಿ ಅಗತ್ಯ ಸಂಪನ್ಮೂಲಗಳ ಕ್ರೋಢೀಕರಣಕ್ಕೆ ನವ ಉದಾರ ಆಳ್ವಿಕೆಯು ಅಡ್ಡಿಪಡಿಸುವುದಿಲ್ಲ ಎಂದು ತೋರಿಸಲು ಈ ರೀತಿಯ ಸೋಗು ಹಾಕಲಾಗಿತ್ತು.
ಸರ್ಕಾರದ ಈ ಅಭಿಪ್ರಾಯ ಸರಿಯೇ ಇದ್ದರೆ, ನವ ಉದಾರ ಆಳ್ವಿಕೆಯಲ್ಲಿ ಉನ್ನತವಾಗಿ ಜಿಡಿಪಿ ಬೆಳೆದದ್ದರ ಜೊತೆಯಲ್ಲೇ ಬಡತನವೂ ಅಗಾಧವಾಗಿ ಬೆಳೆಯುತ್ತಿರಲಿಲ್ಲ. ಹಸಿವೆಯ ಹಾಹಾಕಾರ ತೀವ್ರಗೊಳ್ಳುತ್ತಿರಲಿಲ್ಲ. ನಿರುದ್ಯೋಗ ಬೃಹದಾಕಾರವಾಗಿ ಬೆಳೆಯುತ್ತಿರಲಿಲ್ಲ. ದುಡಿಯುವ ಜನತೆಯ ತಲಾ ವರಮಾನವು ಉದಾರೀಕರಣ ಪೂರ್ವದಲ್ಲಿ ಇದ್ದುದಕ್ಕಿಂತಲೂ ಕೆಳಗೆ ಇಳಿಯುವ ಮಟ್ಟಿಗೆ ಅವರನ್ನು ಹಿಂಡುತ್ತಿರಲಿಲ್ಲ. ಇವೆಲ್ಲವೂ ಅಲ್ಲಗಳೆಯಲಾಗದ ವಾಸ್ತವ ಸಂಗತಿಗಳು.
ಸ್ವಲ್ಪವೂ ಜಗ್ಗದ ನವ ಉದಾರ ಬಂಡವಾಳಶಾಹಿಯ ವರ್ತನೆಯಿಂದಾಗಿಯೇ ಇವೆಲ್ಲವೂ ಘಟಿಸಿವೆ. ಜೊತೆಯಲ್ಲಿ, ಅದರ ಅಂತರ್ಗತ ತರ್ಕದ ಅಗತ್ಯವಾಗಿ ಒಂದು ಧೃವದಲ್ಲಿ ಬೆಳೆಯುತ್ತಲೇ ಹೋಗುವ ಐಶ್ವರ್ಯವನ್ನೂ, ಇನ್ನೊಂದು ಧೃವದಲ್ಲಿ ಹೆಚ್ಚುತ್ತಲೇ ಹೋಗುವ ಬಡತನವನ್ನೂ ಹುಟ್ಟಿಸಿದೆ. ಇಂತಹ ಒಂದು ವ್ಯವಸ್ಥೆಯೊಳಗೆ ಬಡತನ ನಿವಾರಣೆ ಸಾಧ್ಯವೇ ಇಲ್ಲ. ಬಡತನ ನಿವಾರಣೆ ಸಾಧ್ಯವಾಗಬೇಕು ಎಂದಾದರೆ ನವ ಉದಾರ ಆಳ್ವಿಕೆಯ ಏರ್ಪಾಡನ್ನು ಮೀರಲೇಬೇಕಾಗುತ್ತದೆ.
ಕರಾರುವಾಕ್ಕಾಗಿ ಇದೇ ಕಾರಣದಿಂದಾಗಿ, ಬಡವರಿಗೆ ಪರಿಹಾರ ದೊರಕಿಸುವ ಆಶ್ವಾಸನೆಯಿಂದ ಕೂಡಿದ ಕ್ರಮಗಳನ್ನು ಕೈಗೊಳ್ಳಲು ನವ ಉದಾರವಾದದಿಂದ ಆಚೆ ನೋಡಲಾಗದ ರಾಜಕೀಯ ಪಡೆಗಳು ಮುಂದಾದಾಗ ಎಡ ಪಂಥೀಯರು ಅದನ್ನು ಸ್ವಾಗತಿಸಬೇಕು. ಏಕೆಂದರೆ, ನವ ಉದಾರವಾದದ ತರ್ಕ ಮತ್ತು ಚಾಳಿಯಿಂದಾಗಿ ಒಂದೋ ಈ ಆಶ್ವಾಸನೆ ಕೊಟ್ಟವರು ಅದನ್ನು ಮುರಿಯುತ್ತಾರೆ, ಆಗ ಎಡ ಶಕ್ತಿಗಳು ಅದನ್ನು ಎತ್ತಿ ತೋರಿಸಿ ಅದರ ವಿರುದ್ಧ ಹೋರಾಡಬೇಕಾಗುತ್ತದೆ, ಇಲ್ಲವೇ ನವ ಉದಾರ ವ್ಯವಸ್ಥೆಯನ್ನು ಮೀರಲು ಆರಂಭಗೊಳ್ಳುವ ಒಂದು ಗತಿತಾರ್ಕಿಕ ಪ್ರಕ್ರಿಯೆಯನ್ನು ಎಡ ಶಕ್ತಿಗಳು ಉದ್ದೀಪಿಸಬಹುದು.
ನವ ಉದಾರವಾದಿ ಬಂಡವಾಳಶಾಹಿಯ ಬಿಕ್ಕಟ್ಟಿನ ಸಮಯದಲ್ಲಿ ಮತ್ತು ಅದರ ಪರಿಣಾಮವಾಗಿ ಜನತೆ ಜರ್ಜರಿತರಾಗಿದ್ದಾರೆ. ಅವರ ಆಕ್ರೋಶವನ್ನು ಬೇರೆಡೆಗೆ ತಿರುಗಿಸುವ ಉದ್ದೇಶದಿಂದ ಕಾರ್ಪೊರೇಟ್-ಹಣಕಾಸು ಕುಳಗಳು ಕೋಮುವಾದಿ ಮತ್ತು ಛಿದ್ರಕಾರಿ ಅಜೆಂಡಾ ಹೊಂದಿರುವ ಶಕ್ತಿಗಳನ್ನು ಪ್ರೋತ್ಸಾಹಿಸುವ ಪ್ರವೃತ್ತಿ ಬೆಳೆಸಿಕೊಂಡಿರುವ ಸನ್ನಿವೇಶದಲ್ಲಿ, ಜನ ಜೀವನದ ದೈಹಿಕ ಸ್ಥಿತಿ-ಗತಿಗಳ ಬಗ್ಗೆ ಗಮನವನ್ನು ಕೇಂದ್ರೀಕರಿಸಿ ಅವರ ಸ್ಥಿತಿ-ಗತಿಗಳನ್ನು ಸುಧಾರಿಸುವ ಯಾವುದೇ ಕಾರ್ಯಕ್ರಮವು ಆ ಕಾರಣದಿಂದಾಗಿಯೇ ಕಾರ್ಪೊರೇಟ್-ಕೋಮುವಾದಿ ಮೈತ್ರಿಗೆ ಎದುರಾಗುವ ಒಂದು ಪ್ರಗತಿಪರ ಪ್ರತಿ-ಶಕ್ತಿಯಾಗುತ್ತದೆ. ಜನರ ಜೀವನ, ಅವರ ಸ್ಥಿತಿ-ಗತಿಗಳನ್ನು ಸುಧಾರಿಸುವ ಕಾರ್ಯಕ್ರಮ ಮತ್ತು ನವ ಉದಾರವಾದಿ ಬಂಡವಾಳಶಾಹಿಯ ತರ್ಕ ಇವುಗಳ ನಡುವೆ ಇರುವ ವೈರುಧ್ಯದ ಅರಿವಿಲ್ಲದ ಬೂರ್ಜ್ವಾ ರಾಜಕೀಯ ಪಡೆಗಳು ಜನರ ಸ್ಥಿತಿ-ಗತಿಗಳು ಸುಧಾರಿಸಬೇಕೆಂದು ಸಮರ್ಥಿಸುವುದು ಅಷ್ಟರಮಟ್ಟಿಗೆ ಒಳ್ಳೆಯದೇ.
-ಪ್ರೊ. ಪ್ರಭಾತ್ಪಟ್ನಾಯಕ್
ಅನು: ಕೆ.ಎಂ.ನಾಗರಾಜ್
( ಈ ವಾರದ ಜನಶಕ್ತಿ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ನಟ ಮನದೀಪ್ ರಾಯ್ ನಿಧನ

ಸುದ್ದಿದಿನ ಡೆಸ್ಕ್ : ಹಿರಿಯ ಚಿತ್ರನಟ ಮನದೀಪ್ ರಾಯ್ (74 ವರ್ಷ) ಇಂದು ಬೆಳಗಿನ ಜಾವ ಅಗಲಿದ್ದಾರೆ.
ಕೆಲ ದಿನಗಳ ಹಿಂದೆ ಹೃದಯಾಘಾತಕ್ಕೀಡಾಗಿದ್ದ ಅವರು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಮನದೀಪ್ ರಾಯ್ ಹವ್ಯಾಸಿ ರಂಗಭೂಮಿ ಹಿನ್ನೆಲೆಯ ಕಲಾವಿದ. ನಟ – ನಿರ್ದೇಶಕ ಶಂಕರನಾಗ್ ಅವರ ಆತ್ಮೀಯ ಒಡನಾಡಿ. ಪೋಷಕ ಪಾತ್ರ, ಹಾಸ್ಯ ನಟರಾಗಿ 500ಕ್ಕೂ ಹೆಚ್ಚು ಸಿನಿಮಾಗಳು ಹಾಗೂ ಕಿರುತೆರೆ ಸರಣಿಗಳಲ್ಲಿ ಅಭಿನಯಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕರ್ನಾಟಕದಲ್ಲಿ ಈ ವರ್ಷ ಜನಪರ ರಾಜ್ಯ ಬಜೆಟ್ ಮಂಡನೆ ; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಸುದ್ದಿದಿನ, ಹಾವೇರಿ : ಕರ್ನಾಟಕದಲ್ಲಿ ಮುಂದಿನ ತಿಂಗಳು ಮಂಡಿಸಲಾಗುತ್ತಿರುವ ಈ ವರ್ಷದ ರಾಜ್ಯ ಬಜೆಟ್ ರೈತರು, ದೀನ ದಲಿತರು, ಯುವಕರು, ಮಹಿಳೆಯರು, ದುಡಿಯುವ ವರ್ಗ ಮತ್ತು ಜನಪರವಾಗಿರುತ್ತದೆ ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹಾವೇರಿ ಜಿಲ್ಲೆ ಶಿಗ್ಗಾಂವ್ನಲ್ಲಿ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ದುಡಿಮೆಗೆ ಯೋಗ್ಯ ಬೆಲೆ ಸಿಗುವ ರೀತಿಯಲ್ಲಿ ನಮ್ಮ ಕಾರ್ಯಕ್ರಮಗಳು ಇರುತ್ತವೆ ಎಂದರು.
ಕರ್ನಾಟಕ ರಾಜ್ಯದ ಆರ್ಥಿಕ ಅಭಿವೃದ್ಧಿಯಲ್ಲಿ ನಾವು ವೇಗವನ್ನು ಕಂಡಿದ್ದೇವೆ. ಕಳೆದ ವರ್ಷ ನಾನು ಅಧಿಕಾರ ವಹಿಸಿಕೊಂಡಾಗ 5 ಸಾವಿರ ಕೋಟಿ ರೂಪಾಯಿ ರಾಜ್ಯದ ಬೊಕ್ಕಸಕ್ಕೆ ನಮ್ಮ ನಿರ್ಧಿಷ್ಟ ಗುರಿಗೆ ಕೊರತೆಯಿತ್ತು. ಅದನ್ನು ನಾವು 5 ಸಾವಿರ ಕೋಟಿ ತುಂಬುವುದಲ್ಲದೇ, 13 ಸಾವಿರ ಕೋಟಿ ಅಧಿಕವಾಗಿ ಸಂಗ್ರಹ ಮಾಡಿದ್ದೇವೆ. ಈ ವರ್ಷವೂ ಕೂಡ ನಮ್ಮ ಹಣಕಾಸಿನ ಸಂಗ್ರಹ ಉತ್ತಮವಾಗಿದೆ ಎಂದು ಕರ್ನಾಟಕದ ಮುಖ್ಯಮಂತ್ರಿ ಹೇಳಿದರು.
ಕೋವಿಡ್ ನಂತರದಲ್ಲಿ ಆರ್ಥಿಕ ಸುಧಾರಣೆ ಆಗುತ್ತಿರುವ ಸಂದರ್ಭದಲ್ಲಿ ಕೆಳಹಂತದ ಜನಸಮುದಾಯಕ್ಕೆ ಇನ್ನಷ್ಟು ಸಹಾಯ ಮಾಡಿ, ಅವರನ್ನು ಕೂಡ ಮುಖ್ಯ ವಾಹಿನಿಗೆ ಬರಬೇಕು ಎನ್ನುವ ನಿಟ್ಟಿನಲ್ಲಿ ನಾವು ಕಾರ್ಯಕ್ರಮ ರೂಪಿಸುತ್ತಿದ್ದೇವೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಸಂಸತ್ತಿನ ಬಜೆಟ್ ಅಧಿವೇಶನದ ಹಿನ್ನೆಲೆ ; ಇದೇ 30ರಂದು ಸರ್ವಪಕ್ಷಗಳ ಸಭೆ

ಸುದ್ದಿದಿನ ಡೆಸ್ಕ್ : ಸಂಸತ್ತಿನ ಮುಂಬರುವ ಬಜೆಟ್ ಅಧಿವೇಶನದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇದೇ 30ರಂದು ಸರ್ವಪಕ್ಷಗಳ ಸಭೆಯನ್ನು ಕರೆದಿದೆ. ಸಂಸತ್ ಭವನದ ಸಂಕೀರ್ಣದಲ್ಲಿ ಸೋಮವಾರ ಮಧ್ಯಾಹ್ನ 12 ಗಂಟೆಗೆ ಸಭೆ ನಡೆಯಲಿದೆ.
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ, ಕೇಂದ್ರ ಸಚಿವರು ಮತ್ತು ಸಂಸತ್ತಿನ ಎರಡೂ ಸದನಗಳನ್ನು ಪ್ರತಿನಿಧಿಸುವ ಸದನ ನಾಯಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಸಭೆಯಲ್ಲಿ ಸರ್ಕಾರ ಸಂಸತ್ತಿನ ಉಭಯ ಸದನಗಳ ಸುಗಮ ಕಲಾಪಕ್ಕೆ ಎಲ್ಲ ರಾಜಕೀಯ ಪಕ್ಷಗಳ ಸಹಕಾರವನ್ನು ಕೋರಲಿದೆ. ಸಂಸತ್ತಿನ ಬಜೆಟ್ ಅಧಿವೇಶನ ಇದೇ 31ರಿಂದ ಆರಂಭವಾಗಲಿದೆ. ಮೊದಲ ದಿನ ಬೆಳಿಗ್ಗೆ 11 ಗಂಟೆಗೆ ಸೆಂಟ್ರಲ್ ಹಾಲ್ ನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡುವರು.
ಅದೇ ದಿನವೇ ಆರ್ಥಿಕ ಸಮೀಕ್ಷೆಯನ್ನೂ ಸಹ ಮಂಡಿಸಲಾಗುವುದು. ಫೆಬ್ರವರಿ 1ರಂದು 2023-24ನೇ ಸಾಲಿನ ಕೇಂದ್ರ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆ ಮಾಡಲಿದ್ದಾರೆ.
ಬಜೆಟ್ ಅಧಿವೇಶನ ಏಪ್ರಿಲ್ 6ವರೆಗೆ ನಡೆಯಲಿದ್ದು, ಸುಮಾರು 66 ದಿನಗಳಲ್ಲಿ 27 ಕಲಾಪಗಳು ನಡೆಯಲಿದೆ. ಮೊದಲ ಅವಧಿಯಲ್ಲಿ ಅಧಿವೇಶನ ಫೆಬ್ರವರಿ 13ರವರೆಗೆ ನಡೆಯಲಿದೆ. ಫೆಬ್ರವರಿ 14ರಿಂದ ಮಾರ್ಚ್ 12ರವರೆಗೆ ಅಧಿವೇಶನಕ್ಕೆ ಬಿಡುವು ಇರಲಿದೆ ಆನಂತರ ಮಾರ್ಚ್ 13ರಿಂದ ಆರಂಭವಾಗುವ ಅಧಿವೇಶನ ಏಪ್ರಿಲ್ 6ಕ್ಕೆ ಕೊನೆಗೊಳ್ಳಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980336243
