ದಿನದ ಸುದ್ದಿ
ಬಡ್ತಿ ಮೀಸಲು : ‘ಸುಪ್ರೀಂ ’ ತೀರ್ಪು ಇಡೀ ದೇಶಕ್ಕೆ ಮಾದರಿ

“ಬಿ.ಕೆ.ಪವಿತ್ರ ಮತ್ತು ಇತರರು v/s ಭಾರತ ಸರ್ಕಾರ” ಪ್ರಕರಣಕ್ಕೆ ಸಂಬಂಧಿಸಿದಂತೆ 9-2-17ರಂದು ಸುಪ್ರೀಂ ಕೋರ್ಟ್ ನ ಪೀಠವೊಂದು ರಾಜ್ಯ ಸರ್ಕಾರದ ‘ಎಸ್ಸಿ/ಎಸ್ಟಿಗಳ ನೌಕರಿ ಬಡ್ತಿ ಮೀಸಲಾತಿ ಕಾಯಿದೆ-2002’ ಅನ್ನು ರದ್ದುಗೊಳಿಸಿ ತೀರ್ಪು ನೀಡಿದ್ದು ಎಲ್ಲರಿಗೂ ತಿಳಿದಿದೆ. ಈ ತೀರ್ಪಿನ ಸಂದರ್ಭದಲ್ಲಿ ಇದನ್ನು ರದ್ದುಗೊಳಿಸಲಿಕ್ಕೆ ನ್ಯಾಯಾಲಯ ನೀಡಿದ್ದ ಕಾರಣ ”ಸದರಿ ವರ್ಗಗಳ(ಎಸ್ಸಿ/ಎಸ್ಟಿ) ಹಿಂದುಳಿದಿರುವಿಕೆ, ಸೇವಾದಕ್ಷತೆ ಮತ್ತು ಸಮರ್ಪಕ ಪ್ರಾತಿನಿಧ್ಯದ ಕೊರತೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಸೂಕ್ತ ದಾಖಲೆಗಳನ್ನು ಸಂಗ್ರಹಿಸಿಲ್ಲ” ಎಂಬುದಾಗಿತ್ತು. ಈ ನಿಟ್ಟಿನಲ್ಲಿ ಈ ಸಂಬಂಧ ಸಾಕಷ್ಟು ಹೋರಾಟಗಳು ದಲಿತ ನೌಕರರು ಮತ್ತು ಇತರ ಸಂಘಗಳಿಂದ ನಡೆದು ಸರ್ಕಾರ ಕಡೆಗೆ ಅಂದಿನ ಅಪರ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭಾರವರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿ ಅವರು ನೀಡಿದ ವರದಿ ಆಧಾರದ ಮೇಲೆ ಮಸೂದೆಯೊಂದನ್ನು ಸಿದ್ಧಪಡಿಸಿ, ರಾಜ್ಯಪಾಲರಿಂದ ಅದು ತಿರಸ್ಕರಿಸಲ್ಪಟ್ಟು, ರಾಷ್ಟ್ರಪತಿಗಳ ಅಂಗಳಕ್ಕೆ ಅದು ತಲುಪಿ, ಅಲ್ಲಿಂದ ಅದು ಅಂಗೀಕಾರಗೊಂಡು ಕಾನೂನಾಗಿ ಜಾರಿಯಾಯಿತು.
ದುರಂತವೆಂದರೆ ಈ ನೂತನ ಕಾಯಿದೆಯ ಸಿಂಧುತ್ವ ಪ್ರಶ್ನಿಸಿ ಎಸ್ಸಿ/ಎಸ್ಟಿಗಳ ಬಡ್ತಿ ಮೀಸಲಾತಿ ವಿರೋಧಿಸುವ ‘ಅಹಿಂಸಾ’ ಸಂಘಟನೆ ಮತ್ತೆ ಸುಪ್ರೀಂ ಕೋರ್ಟಿನ ಮೊರೆ ಹೋಗಿ, ಈ ಸಂಬಂಧ ಅವರು ಸಲ್ಲಿಸಿದ ಅರ್ಜಿ ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್ ಮತ್ತು ಯು.ಯು.ಲಲಿತ್ರವರ ನೇತೃತ್ವದ ಪೀಠದಲ್ಲಿ ವಿಚಾರಣೆಗೊಂಡು ಈಗ ತೀರ್ಪನ್ನು ಕಂಡಿದೆ. ಸಂತಸದ ವಿಚಾರವೆಂದರೆ ನ್ಯಾಯಪೀಠ ಎಸ್ಸಿ/ಎಸ್ಟಿ ನೌಕರರ ಬಡ್ತಿ ಮೀಸಲಾತಿಗೆ ಒಪ್ಪಿಗೆಯ ಮುದ್ರೆಯೊತ್ತಿದೆ, ಅದಕ್ಕೊಂದು ನೈತಿಕ ಅರ್ಥವನ್ನು ನೀಡಿದೆ. ಈ ನಿಟ್ಟಿನಲ್ಲಿ ಹೇಳುವುದಾದರೆ ಬಡ್ತಿ ಮೀಸಲಾತಿ ಕುರಿತ ಸುಪ್ರೀಂ ಕೋರ್ಟ್ ಈ ತೀರ್ಪು ಅಕ್ಷರಶಃ ಸ್ವಾಗತಾರ್ಹ ಮತ್ತು ನ್ಯಾಯಾಂಗದ ವಿಶ್ವಾಸಾರ್ಹತೆಯನ್ನು ಈ ತೀರ್ಪು ಮತ್ತೊಮ್ಮೆ ಎತ್ತಿಹಿಡಿದಿದೆ. ಅಲ್ಲದೆ ಬಿಕ್ಕಟ್ಟಿನ ಸಂದರ್ಭಗಳಲ್ಲಿ ಭಾರತದ ಸಂವಿಧಾನವನ್ನು, ಅದರ ಮೂಲ ಅಂಶಗಳನ್ನು ನ್ಯಾಯಾಂಗ ರಕ್ಷಿಸುತ್ತದೆ ಎಂಬುದಕ್ಕೆ ಈ ತೀರ್ಪು ಮತ್ತೊಂದು ದಾಖಲೆಯಾಗಿ ಹೊರಬಂದಿದೆ.
ಯಾಕೆಂದರೆ ಎಸ್ಸಿ/ಎಸ್ಟಿ ನೌಕರರಿಗೆ ಬಡ್ತಿಯಲ್ಲೂ ಮೀಸಲಾತಿ, ಅದನ್ನು ಭಾರತದ ಸಂವಿಧಾನ ಅನುಚ್ಛೇದ 16(4)(ಎ) ಬಹಳ ಸ್ಪಷ್ಟವಾಗಿ ದಾಖಲಿಸುತ್ತದೆ. ಆ ಭಾಗವನ್ನು ಇಲ್ಲಿ ಯಥಾವತ್ ಉಲ್ಲೇಖಿಸುವುದಾದರೆ “ಅನುಚ್ಛೇದ 16(4)(ಎ): ಈ ಅನುಚ್ಛೇದದಲ್ಲಿರುವುದು ಯಾವುದೂ ರಾಜ್ಯದ ಅಧೀನದಲ್ಲಿರುವ ಸೇವೆಗಳಲ್ಲಿ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳವರು ಸಾಕಷ್ಟು ಪ್ರಾತಿನಿಧ್ಯವನ್ನು ಹೊಂದಿಲ್ಲವೆಂದು ರಾಜ್ಯವು ಅಭಿಪ್ರಾಯಪಟ್ಟಲ್ಲಿ, ರಾಜ್ಯದ ಅಧೀನದ ಸೇವೆಗಳಲ್ಲಿನ (ಯಾವುದೇ ವರ್ಗದ ಅಥವಾ ವರ್ಗಗಳ ಹುದ್ದೆಗಳಿಗೆ, ತತ್ಪರಿಣಾಮದ ಜ್ಯೇಷ್ಠತೆಯೊಂದಿಗೆ ಬಡ್ತಿ ವಿಷಯದಲ್ಲಿ) ಅಂಥವರಿಗಾಗಿ ಮೀಸಲಾತಿಯ ಯಾವುದೇ ಉಪಬಂಧವನ್ನು ಮಾಡಲು ರಾಜ್ಯಕ್ಕಿರುವ ಅಧಿಕಾರವನ್ನು ಪ್ರತಿಬಂಧಿಸತಕ್ಕದಲ್ಲ”. ಇದರ ಪ್ರಕಾರ ರಾಜ್ಯ ಸರ್ಕಾರ ರೂಪಿಸಿ ರಾಷ್ಟ್ರಪತಿಗಳಿಂದ ಅನುಮೋದನೆ ಪಡೆದ ಸದ್ಯ ಸುಪ್ರೀಂ ಅಸ್ತು ಎಂದಿರುವ ರಾಜ್ಯ ಸರ್ಕಾರದ ‘ಎಸ್ಸಿ/ಎಸ್ಟಿ ಬಡ್ತಿ ಮೀಸಲಾತಿ ಕಾಯಿದೆ-2018’ ಅನ್ನು ಯಾರೂ ಕೂಡ ಪ್ರತಿಬಂಧಿಸಲು ಸಾಧ್ಯವಿಲ್ಲ.
ಹಾಗೆಯೇ ಅನುಚ್ಛೇದ 16ಕ್ಕೆ 2002ರಲ್ಲಿ ಮಾಡಲಾದ 85ನೇ ತಿದ್ದುಪಡಿ ಕೂಡ “ಸದರಿ ನೌಕರ(ಎಸ್ಸಿ/ಎಸ್ಟಿ) ಬಡ್ತಿಗೊಂಡ ನಂತರವೂ ಬಡ್ತಿಗೊಂಡ ತನ್ನ ಸ್ಥಾನದಲ್ಲಿ ತತ್ಪರಿಣಾಮ ಉಂಟಾಗಬಹುದಾದ ಜ್ಯೇಷ್ಠತೆಗೆ ಅರ್ಹನಾಗುತ್ತಾನೆ” ಎಂದು ಸ್ಪಷ್ಟವಾಗಿ ಹೇಳುತ್ತದೆ. ಒಟ್ಟಾರೆ ಸಂವಿಧಾನದ ನಿಲುವುಗಳು ಇಷ್ಟೊಂದು ಸ್ಪಷ್ಟವಾಗಿರುವಾಗ ಮತ್ತು ಸಂಸತ್ತಿನ ತದನಂತರದ ಯಾವುದೇ ತಿದ್ದುಪಡಿಗಳ ಮೂಲಕವೂ ಅದು ರದ್ದುಗೊಂಡಿಲ್ಲದಿರುವಾಗ ಎಸ್ಸಿ/ಎಸ್ಟಿ ನೌಕರರಿಗೆ ಬಡ್ತಿಯಲ್ಲಿ ಮೀಸಲಾತಿ ನಿರಾಕರಿಸುವುದು ಯಾರಿಗಾದರೂ ಹೇಗೆ ತಾನೆ ಸಾಧ್ಯ?
ಈ ಸಂದರ್ಭದಲ್ಲಿ ತನ್ನ ಈ ತೀರ್ಪಿನಲ್ಲಿ ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್ ಮತ್ತು ಯು.ಯುಲಲಿತ್ರವರುಗಳ ನೇತೃತ್ವದ ಪೀಠ ಮೀಸಲಾತಿಗೊಂದು ಅಪರೂಪದ ವ್ಯಾಖ್ಯಾನ ನೀಡುತ್ತಾ “ಜನತೆಯು ಯಾವ(ಸಾಮಾಜಿಕ) ಮಟ್ಟದಲ್ಲಿ ಜನಿಸಿದ್ದಾರೆ ಎಂಬುದನ್ನು ಲೆಕ್ಕಕ್ಕೆ ತೆಗೆದುಕೊಂಡು ಪರಿಣಾಮಕಾರಿ ಮತ್ತು ನೈಜಸಮಾನತೆಯ ಆಶಯವನ್ನು ಪ್ರಾಮಾಣಿಕವಾಗಿ ಈಡೇರಿಸುವುದೇ ಎಸ್ಸಿ/ಎಸ್ಟಿಗಳ ಮೀಸಲಾತಿ” ಎಂದಿದೆ. ಹಾಗೆಯೇ ಅರ್ಜಿದಾರರು ಪ್ರಸ್ತಾಪಿಸಿದ್ದ ನೌಕರರ ದಕ್ಷತೆಗೆ ಸಂಬಂಧಿಸಿದಂತೆ ಹೇಳಿರುವ ನ್ಯಾಯಪೀಠ ಈ ಸಂಬಂಧದ ಸಂವಿಧಾನ ಅನುಚ್ಛೇದ 335ನ್ನು ಪ್ರಸ್ತಾಪಿಸುತ್ತಾ ದಕ್ಷತೆ ಅಳೆಯುವ ಒಂದೇ ಮಾನದಂಡ ಇತರರಂತೆ ಎಸ್ಸಿ/ಎಸ್ಟಿಗಳು ಕೂಡ ಆ ಹುದ್ದೆಯ ಸಂಬಂಧಿತ ಪದವಿ ಮತ್ತು ಪರೀಕ್ಷೆಗಳನ್ನು ಪಾಸುಮಾಡಿರುವುದಾಗಿರುತ್ತದೆ. ಆದ್ದರಿಂದ ಅದನ್ನು(ದಕ್ಷತೆ) ಎಲ್ಲರಿಗೂ ಅನ್ವಯಿಸುವಂತಹ ಒಂದು ತಟಸ್ಥ ಮಾನದಂಡ ಎಂದು ತೆಗೆದುಕೊಳ್ಳಬೇಕೆ ಹೊರತು ಎಸ್ಸಿ/ಎಸ್ಟಿಗಳಿಗೆ ವಿಶೇಷವಾಗಿ ಅಲ್ಲ ಎಂದಿದೆ. ಹಾಗೆಯೇ ಆಡಳಿತದಲ್ಲಿ ‘ದಕ್ಷತೆ’ ಎಂಬ ಪದವನ್ನು ಪ್ರಸ್ತಾಪಿಸುವ ಸಂವಿಧಾನದ ಅದೇ ಅನುಚ್ಛೇದ 335ರ ಮುಂದಿನ ಭಾಗಗಳನ್ನು ಪ್ರಸ್ತಾಪಿಸಿ ನ್ಯಾಯಪೀಠ, ಆ ಮುಂದಿನ ಅಂಶಗಳಾದ “1.ಎಸ್ಸಿ/ಎಸ್ಟಿಗಳಿಗೆ ಅರ್ಹತಾ ಪರೀಕ್ಷೆಗಳಲ್ಲಿ ಅಂಕದಲ್ಲಿ ರಿಯಾಯಿತಿ ನೀಡಬೇಕು. 2.ಮೌಲ್ಯಮಾಪನ ಮಟ್ಟದಲ್ಲೂ ರೀಯಾಯಿತಿ ನೀಡಬೇಕು 3.ಬಡ್ತಿಯಲ್ಲೂ ಮೀಸಲಾತಿ ನೀಡಬೇಕು” ಎಂದಿರುವುದನ್ನು ಒತ್ತಿ ಹೇಳುತ್ತಾ, ಜೊತೆಗೆ ಯಾವುದೇ ಕಾರಣಕ್ಕೂ ಅನುಚ್ಛೇದ 335ರಲ್ಲಿ ಪ್ರಸ್ತಾಪಿಸಿರುವ ‘ದಕ್ಷತೆ’ಯ ಆ ಅಂಶ ಎಸ್ಸಿ/ಎಸ್ಟಿಗಳ ಸದರಿ ರಿಯಾಯಿತಿಗಳಿಗೆ ಸಂಬಂಧಿಸಿದಂತೆ ಯಾವುದೇ ರೀತಿಯಲ್ಲೂ ತೊಂದರೆ ನೀಡತಕ್ಕದಲ್ಲ ಎಂದು ಸ್ಪಷ್ಟವಾಗಿ ತನ್ನ ಅಭಿಪ್ರಾಯ ದಾಖಲಿಸಿದೆ. ಆ ಮೂಲಕ ಬಡ್ತಿ ಮೀಸಲಿಗೆ ಸಹಜವಾಗಿ ಅಸ್ತು ಎಂದಿದೆ.
ಈ ಸಂದರ್ಭದಲ್ಲಿ ಸಂವಿಧಾನ ರಚನೆಯ ಸಮಯದಲ್ಲಿ ಅಂದರೆ 1948 ನವೆಂಬರ್ 30ರಂದು ಸಂವಿಧಾನ ಸಭೆಯೊಳಗೆ ಚರ್ಚೆಯಲ್ಲಿ ಪಾಲ್ಗೊಂಡು ಬಾಬಾಸಾಹೇಬ್ ಅಂಬೇಡ್ಕರರು ಹೇಳುವ ಮಾತೊಂದನ್ನು ಇಲ್ಲಿ ಉಲ್ಲೇಖಿಸಬೇಕಾಗುತ್ತದೆ. ಅದೆಂದರೆ “ಆಡಳಿತದಲ್ಲಿ ಸಮಾನತೆ ಇರಬೇಕು. ಅದೇ ಸಮಯದಲ್ಲಿ ಆಡಳಿತದಲ್ಲಿ ಇದುವರೆವಿಗೂ ಸೂಕ್ತ ಅವಕಾಶವನ್ನು ಪಡೆಯದ ಕೆಲವು ವರ್ಗಗಳಿಗೆ ಮೀಸಲಾತಿಯೂ ಇರಬೇಕು”(ಅಂಬೇಡ್ಕರ್ ಬರಹಗಳು, ಇಂಗ್ಲಿಷ್ ಸಂ.13, ಪು.392). ಅಂದಹಾಗೆ ಅಂಬೇಡ್ಕರ್ರವರು ಇಲ್ಲಿ ಹೇಳಿರುವಂತೆ ಉದಾಹರಣೆಗೆ ಎಸ್ಸಿ/ಎಸ್ಟಿಗಳಿಗೆ ಬಡ್ತಿಯಲ್ಲಿ ಮೀಸಲಾತಿಯೇ ಇದ್ದಿರಲಿಲ್ಲ ಎಂದುಕೊಳ್ಳುವುದಾದರೆ ಅಂತಹ ಸಮಯದಲ್ಲಿ ಗ್ರೂಪ್ ಎ ಮತ್ತು ಗ್ರೂಪ್ ಬಿ ನೌಕರಿಗಳೊಳಗೆ ಎಸ್ಸಿ/ಎಸ್ಟಿಗಳು ಬರುವುದು ಸಾಧ್ಯವಿತ್ತೇ? ಎಂದು ಕೇಳಬೇಕಾಗುತ್ತದೆ. ಯಾಕೆಂದರೆ ಸರ್ಕಾರಿ ನೌಕರಿ ಹೊರತುಪಡಿಸಿ ಮೀಸಲಾತಿ ಇಲ್ಲದ ಇತರೆ ಕ್ಷೇ ತ್ರಗಳಲ್ಲಿ ಅಂದರೆ ವ್ಯಾಪಾರ- ವ್ಯವಹಾರ, ಕೈಗಾರಿಕೆ, ಕೃಷಿ… ಇಲ್ಲೆಲ್ಲ ಎಸ್ಸಿ/ಎಸ್ಟಿಗಳ ಪಾಲು ಎಷ್ಟಿದೆ ಎಂದು ಯಾರಾದರೂ ಗಮನಿಸಿದರೆ ಖಂಡಿತ ಎಸ್ಸಿ/ಎಸ್ಟಿ ಬಡ್ತಿ ಮೀಸಲಾತಿಯ ಪ್ರಾಮುಖ್ಯತೆ ಏನು ಎಂದು ಅಂತಹವರಿಗೆ ಅರ್ಥ ಆಗಿಯೇ ಆಗುತ್ತದೆ.
ಹ್ಞಾಂ, ಈ ಸಂದರ್ಭದಲ್ಲಿ ಎಸ್ಸಿ/ಎಸ್ಟಿಗಳ ಬಡ್ತಿ ಮೀಸಲು ವಿರೋಧಿಸಿ ಸುಪ್ರಿಂ ಮೆಟ್ಟಿಲೇರಿರುವವರೂ ಗಮನಿಸಬೇಕಾದ ಒಂದು ವಿಷಯವೆಂದರೆ ಅಂಥಹವರು ‘ಇನ್ನೊಬ್ಬರಿಗೇಕೆ ಕೊಟ್ಟಿದ್ದೀರಿ ಎನ್ನುವ ಬದಲು ನಮಗೆ ಏಕೆ ಕೊಟ್ಟಿಲ್ಲ ಎಂದು ಕೇಳುವುದು ಸೂಕ್ತವಾಗುತ್ತದೆ” ಎಂಬುದು. ಏಕೆಂದರೆ ಎಸ್ಸಿ/ಎಸ್ಟಿಗಳಂತೆ ಹಿಂದುಳಿದ ವರ್ಗಗಳಿಗೂ(ಓಬಿಸಿಗಳು) ಮಂಡಲ್ ವರದಿ ಶೇ.27ರಷ್ಟು ಉದ್ಯೋಗ ನೇಮಕಾತಿಯಲ್ಲಿ ಮೀಸಲು ನೀಡುತ್ತದೆ. ಅಂದಹಾಗೆ ಸದರಿ ವರ್ಗಗಳವರು “ನಮಗೆ ನೇಮಕದಲ್ಲಿ ಮೀಸಲು ನೀಡಿರುವಂತೆ ಬಡ್ತಿಯಲ್ಲೂ ನೀಡಿ” ಎಂದು ಸರ್ಕಾರವನ್ನು ಒತ್ತಾಯಿಸಿದರೆ ಸಮಸ್ಯೆಯೇ ಇರುವುದಿಲ್ಲ! ಆದ್ದರಿಂದ ರಾಜ್ಯ ಸರ್ಕಾರದ ಎಸ್ಸಿ/ಎಸ್ಟಿ ನೌಕರರ ಬಡ್ತಿ ಮೀಸಲಾತಿಯ ನೂತನ ಕಾಯಿದೆಯ ಈ ನಿಟ್ಟಿನಲ್ಲಿ ಸುಪ್ರಿಂ ಕೋರ್ಟ್ ನೀಡಿರುವ ಈ ತೀರ್ಪು ಅಕ್ಷರಶಃ ಮಾದರಿಯಾದುದು. ಇಡೀ ದೇಶವೇ ಇದನ್ನು ಅನುಕರಿಸುವಂತಹದ್ದು ಎಂದು ನಿಸ್ಸಂಶಯವಾಗಿ ಹೇಳಬಹುದು.
–ರಘೋತ್ತಮ ಹೊ.ಬ
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ನಟ ಮನದೀಪ್ ರಾಯ್ ನಿಧನ

ಸುದ್ದಿದಿನ ಡೆಸ್ಕ್ : ಹಿರಿಯ ಚಿತ್ರನಟ ಮನದೀಪ್ ರಾಯ್ (74 ವರ್ಷ) ಇಂದು ಬೆಳಗಿನ ಜಾವ ಅಗಲಿದ್ದಾರೆ.
ಕೆಲ ದಿನಗಳ ಹಿಂದೆ ಹೃದಯಾಘಾತಕ್ಕೀಡಾಗಿದ್ದ ಅವರು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಮನದೀಪ್ ರಾಯ್ ಹವ್ಯಾಸಿ ರಂಗಭೂಮಿ ಹಿನ್ನೆಲೆಯ ಕಲಾವಿದ. ನಟ – ನಿರ್ದೇಶಕ ಶಂಕರನಾಗ್ ಅವರ ಆತ್ಮೀಯ ಒಡನಾಡಿ. ಪೋಷಕ ಪಾತ್ರ, ಹಾಸ್ಯ ನಟರಾಗಿ 500ಕ್ಕೂ ಹೆಚ್ಚು ಸಿನಿಮಾಗಳು ಹಾಗೂ ಕಿರುತೆರೆ ಸರಣಿಗಳಲ್ಲಿ ಅಭಿನಯಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕರ್ನಾಟಕದಲ್ಲಿ ಈ ವರ್ಷ ಜನಪರ ರಾಜ್ಯ ಬಜೆಟ್ ಮಂಡನೆ ; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಸುದ್ದಿದಿನ, ಹಾವೇರಿ : ಕರ್ನಾಟಕದಲ್ಲಿ ಮುಂದಿನ ತಿಂಗಳು ಮಂಡಿಸಲಾಗುತ್ತಿರುವ ಈ ವರ್ಷದ ರಾಜ್ಯ ಬಜೆಟ್ ರೈತರು, ದೀನ ದಲಿತರು, ಯುವಕರು, ಮಹಿಳೆಯರು, ದುಡಿಯುವ ವರ್ಗ ಮತ್ತು ಜನಪರವಾಗಿರುತ್ತದೆ ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹಾವೇರಿ ಜಿಲ್ಲೆ ಶಿಗ್ಗಾಂವ್ನಲ್ಲಿ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ದುಡಿಮೆಗೆ ಯೋಗ್ಯ ಬೆಲೆ ಸಿಗುವ ರೀತಿಯಲ್ಲಿ ನಮ್ಮ ಕಾರ್ಯಕ್ರಮಗಳು ಇರುತ್ತವೆ ಎಂದರು.
ಕರ್ನಾಟಕ ರಾಜ್ಯದ ಆರ್ಥಿಕ ಅಭಿವೃದ್ಧಿಯಲ್ಲಿ ನಾವು ವೇಗವನ್ನು ಕಂಡಿದ್ದೇವೆ. ಕಳೆದ ವರ್ಷ ನಾನು ಅಧಿಕಾರ ವಹಿಸಿಕೊಂಡಾಗ 5 ಸಾವಿರ ಕೋಟಿ ರೂಪಾಯಿ ರಾಜ್ಯದ ಬೊಕ್ಕಸಕ್ಕೆ ನಮ್ಮ ನಿರ್ಧಿಷ್ಟ ಗುರಿಗೆ ಕೊರತೆಯಿತ್ತು. ಅದನ್ನು ನಾವು 5 ಸಾವಿರ ಕೋಟಿ ತುಂಬುವುದಲ್ಲದೇ, 13 ಸಾವಿರ ಕೋಟಿ ಅಧಿಕವಾಗಿ ಸಂಗ್ರಹ ಮಾಡಿದ್ದೇವೆ. ಈ ವರ್ಷವೂ ಕೂಡ ನಮ್ಮ ಹಣಕಾಸಿನ ಸಂಗ್ರಹ ಉತ್ತಮವಾಗಿದೆ ಎಂದು ಕರ್ನಾಟಕದ ಮುಖ್ಯಮಂತ್ರಿ ಹೇಳಿದರು.
ಕೋವಿಡ್ ನಂತರದಲ್ಲಿ ಆರ್ಥಿಕ ಸುಧಾರಣೆ ಆಗುತ್ತಿರುವ ಸಂದರ್ಭದಲ್ಲಿ ಕೆಳಹಂತದ ಜನಸಮುದಾಯಕ್ಕೆ ಇನ್ನಷ್ಟು ಸಹಾಯ ಮಾಡಿ, ಅವರನ್ನು ಕೂಡ ಮುಖ್ಯ ವಾಹಿನಿಗೆ ಬರಬೇಕು ಎನ್ನುವ ನಿಟ್ಟಿನಲ್ಲಿ ನಾವು ಕಾರ್ಯಕ್ರಮ ರೂಪಿಸುತ್ತಿದ್ದೇವೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಸಂಸತ್ತಿನ ಬಜೆಟ್ ಅಧಿವೇಶನದ ಹಿನ್ನೆಲೆ ; ಇದೇ 30ರಂದು ಸರ್ವಪಕ್ಷಗಳ ಸಭೆ

ಸುದ್ದಿದಿನ ಡೆಸ್ಕ್ : ಸಂಸತ್ತಿನ ಮುಂಬರುವ ಬಜೆಟ್ ಅಧಿವೇಶನದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇದೇ 30ರಂದು ಸರ್ವಪಕ್ಷಗಳ ಸಭೆಯನ್ನು ಕರೆದಿದೆ. ಸಂಸತ್ ಭವನದ ಸಂಕೀರ್ಣದಲ್ಲಿ ಸೋಮವಾರ ಮಧ್ಯಾಹ್ನ 12 ಗಂಟೆಗೆ ಸಭೆ ನಡೆಯಲಿದೆ.
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ, ಕೇಂದ್ರ ಸಚಿವರು ಮತ್ತು ಸಂಸತ್ತಿನ ಎರಡೂ ಸದನಗಳನ್ನು ಪ್ರತಿನಿಧಿಸುವ ಸದನ ನಾಯಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಸಭೆಯಲ್ಲಿ ಸರ್ಕಾರ ಸಂಸತ್ತಿನ ಉಭಯ ಸದನಗಳ ಸುಗಮ ಕಲಾಪಕ್ಕೆ ಎಲ್ಲ ರಾಜಕೀಯ ಪಕ್ಷಗಳ ಸಹಕಾರವನ್ನು ಕೋರಲಿದೆ. ಸಂಸತ್ತಿನ ಬಜೆಟ್ ಅಧಿವೇಶನ ಇದೇ 31ರಿಂದ ಆರಂಭವಾಗಲಿದೆ. ಮೊದಲ ದಿನ ಬೆಳಿಗ್ಗೆ 11 ಗಂಟೆಗೆ ಸೆಂಟ್ರಲ್ ಹಾಲ್ ನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡುವರು.
ಅದೇ ದಿನವೇ ಆರ್ಥಿಕ ಸಮೀಕ್ಷೆಯನ್ನೂ ಸಹ ಮಂಡಿಸಲಾಗುವುದು. ಫೆಬ್ರವರಿ 1ರಂದು 2023-24ನೇ ಸಾಲಿನ ಕೇಂದ್ರ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆ ಮಾಡಲಿದ್ದಾರೆ.
ಬಜೆಟ್ ಅಧಿವೇಶನ ಏಪ್ರಿಲ್ 6ವರೆಗೆ ನಡೆಯಲಿದ್ದು, ಸುಮಾರು 66 ದಿನಗಳಲ್ಲಿ 27 ಕಲಾಪಗಳು ನಡೆಯಲಿದೆ. ಮೊದಲ ಅವಧಿಯಲ್ಲಿ ಅಧಿವೇಶನ ಫೆಬ್ರವರಿ 13ರವರೆಗೆ ನಡೆಯಲಿದೆ. ಫೆಬ್ರವರಿ 14ರಿಂದ ಮಾರ್ಚ್ 12ರವರೆಗೆ ಅಧಿವೇಶನಕ್ಕೆ ಬಿಡುವು ಇರಲಿದೆ ಆನಂತರ ಮಾರ್ಚ್ 13ರಿಂದ ಆರಂಭವಾಗುವ ಅಧಿವೇಶನ ಏಪ್ರಿಲ್ 6ಕ್ಕೆ ಕೊನೆಗೊಳ್ಳಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980336243
