ದಿನದ ಸುದ್ದಿ
‘ನ್ಯೂಸ್ನೇಶನ್’ ಸಂದರ್ಶನ : ‘ಅಚ್ಛೇ ದಿನ್’ ಗೆ ತಕ್ಕ ಸಮಾರೋಪ..!

ಮೇ 11 ರಂದು, ಈ ಬಾರಿಯ ಸಾರ್ವತ್ರಿಕ ಚುನಾವಣೆಗಳ 6ನೇ ಘಟ್ಟದಲ್ಲಿ ದೇಶದ ರಾಜಧಾನಿ ದಿಲ್ಲಿ ಮತ್ತು ಸುತ್ತಮುತ್ತಲಿನ ರಾಜ್ಯಗಳ ಮತದಾರರು ತಾವು ಮರುದಿನ ಯಾರಿಗೆ ಮತನೀಡಬೇಕು ಎಂದು ಯೋಚಿಸುತ್ತಿರುವ ಸಮಯದಲ್ಲಿ , ‘ನ್ಯೂಸ್ ನೇಶನ್’ ಎಂಬೊಂದು ಸುದ್ದಿ ವಾಹಿನಿ ಪ್ರಸಾರ ಮಾಡಿರುವ ಪ್ರಧಾನ ಮಂತ್ರಿಗಳ ಸಂದರ್ಶನ ಈಗ ಇಡೀ ದೇಶದ ಗಮನ ಸೆಳೆದಿದೆ-ಮುಖ್ಯವಾಗಿ ಬಾಲಾಕೋಟ್ ‘ವಾಯು ಪ್ರಹಾರ’ದ ಕೀರ್ತಿ ತನ್ನದಾಗಿಸಿಕೊಳ್ಳುವ ಭರದಲ್ಲಿ ಪ್ರಧಾನಿಗಳು ಪ್ರದರ್ಶಿಸಿದ ಮೋಡಗಳು ಮತ್ತು ರಾಡಾರ್ ಕುರಿತಂತೆ ‘ಪಂಡಿತರನ್ನು ಬೆರಗಾಗಿಸಿದ’ ತನ್ನ ‘ಕಚ್ಚಾ ಜಾಣ್ಮೆ’ಯಿಂದಾಗಿ.
ಆದರೆ ಈ ಸಂದರ್ಶನದ ಹೆಚ್ಚುಗಾರಿಕೆ ಅಷ್ಟೇ ಅಲ್ಲ, ಒಂದರ್ಥದಲ್ಲಿ, ಬಹಳ ಸಮಯದ ನಂತರ ಕೇಂದ್ರದಲ್ಲಿ, ಕೇವಲ 31% ಮತಗಳಿಂದಲೇ ಆದರೇನಂತೆ, ಸ್ಪಷ್ಟ ಬಹುಮತ ಪಡೆದ ಒಂದು ಪಕ್ಷದ ನೇತೃತ್ವದ ‘ಮಜಬೂತ್’ ಸರಕಾರದ ಐದು ವರ್ಷಗಳ ಆಳ್ವಿಕೆಯ ಒಂದು ಸಾರಾಂಶವನ್ನು ಈ ಸಂದರ್ಶನ ದೇಶದ ಮುಂದೆ ಇಟ್ಟಿದೆ ಎನ್ನಬಹುದು.
ರಾಡಾರ್ಗಳು ಮತ್ತು ಮೋಡಗಳು ಮಾತ್ರವೇ ಈ ‘ಐತಿಹಾಸಿಕ’ ಎನ್ನಬಹುದಾದ ಸಂದರ್ಶನದ ‘ಹೈಲೈಟ್’ ಅಲ್ಲ ಎಂಬುದು ಈಗ ಜನಜನಿತವಾಗಿದೆ. “ತಾವು ಹಣದ ಪರ್ಸ್ ಇಟ್ಟುಕೊಳ್ಳುತ್ತೀರಾ?” ಎಂಬ ಸಂದರ್ಶಕರುಗಳ ಅಮೋಘ ಪ್ರಶ್ನೆಯನ್ನು ಉತ್ತರಿಸುತ್ತ ಜೇಬಲ್ಲಿ ಹಣವೇ ಇಲ್ಲದಿರುವಾಗ ಪರ್ಸ್ ಏಕೆ ಎಂದರು. 2001ರಲ್ಲಿ ಗುಜರಾತಿನ ಮುಖ್ಯಮಂತ್ರಿಯಾಗಿ ಸರಕಾರವನ್ನು ಸೇರುವ ವರೆಗೆ, ಅಂದರೆ ಸುಮಾರು 50ವರ್ಷ ವಯಸ್ಸಿನ ವರೆಗೆ ಅವರಿಗೆ ಏನೇನೂ ಆದಾಯವಿರಲಿಲ್ಲವಂತೆ, ಸರಕಾರಕ್ಕೆ ಬಂದಾಗಲೇ ಅಧಿಕಾರಿಗಳು ಅವರ ಹೆಸರಲ್ಲಿ ಬ್ಯಾಂಕ್ ಖಾತೆ ತೆರೆದರಂತೆ. ಹಾಗಿದ್ದರೆ ಅದುವರೆಗೆ ಆರೆಸ್ಸೆಸ್ನ ಸಂಘಟನಾ ಕೆಲಸ ಮಾಡುತ್ತಿದ್ದ ಅವರಿಗೆ ಸಂಘಟನೆ ಏನೂ ಕೊಡುತ್ತಿರಲಿಲ್ಲವೇ ಎಂದು ಹಲವರು ಮೂಗಿನ ಮೇಲೆ ಬೆರಳಿಟ್ಟುಕೊಂಡಿದ್ದಾರೆ.
1988ರಲ್ಲೇ ಅವರು ಡಿಜಿಟಲ್ ಕ್ಯಾಮರಾ ಬಳಸಿದ್ದರು, ಟಚ್ ಸ್ಕರೀನ್ ಟ್ಯಾಬ್ಲೆಟ್ ಬಳಿಸಿದ್ದರು, ಇ ಮೇಲ್ ಕೂಡ ಬಳಸುತ್ತಿದ್ದರು ಎಂಬ ಸಂಗತಿಗಳ ಮೇಲೆ ಸಂದರ್ಶನದ ವೇಳೆಯಲ್ಲಿ ಅವರು ಬೆಳಕು ಚೆಲ್ಲಿದರು. ಆ ವೇಳೆಗೆ ಇವೆಲ್ಲ ಭಾರತದಲ್ಲಿ ಬಳಕೆಗೇ ಬಂದಿರಲಿಲ್ಲ ಎಂದು ಕೆಲವು ಪರಿಣಿತರು ಹೇಳುತ್ತಿದ್ದಾರೆ. 1988ರಲ್ಲಿ ಡಿಜಿಟಲ್ ಕ್ಯಾಮರಾದ ತಂತ್ರಜ್ಞಾನ ರೂಪುಗೊಂಡಿತ್ತಷ್ಟೇ, ಅದ್ದರಿಂದ ಅಂತಹ ಕ್ಯಾಮರಾಗಳು ಎಲ್ಲೋ ಕೆಲವು ಇದ್ದು ದುಬಾರಿಯಾಗಿದ್ದವು.10-15 ಲಕ್ಷ ರೂ.ಗಳಷ್ಟು. ಇ ಮೇಲ್ ಬಳಕೆಗೆ ಬಂದದ್ದು 1990ರ ದಶಕದ ನಂತರವೇ. ಚಿಕ್ಕಾಸೂ ಜೇಬಿನಲ್ಲಿರದ ಇವರು ಅದನ್ನೆಲ್ಲ ಹೇಗೆ ಪಡೆದಿರಬಹುದು ಎಂದು ಇನ್ನು ಕೆಲವರು ಬೆರಗಾಗಿದ್ದಾರೆ.
ಬಹುಶಃ ಇವೆಲ್ಲದಕ್ಕೂ ಉತ್ತರದ ಹೊಳಹು ಸಿಕ್ಕಿದ್ದು ಸಂದರ್ಶಕರು ‘ತಾವು ಕಳೆದ ಐದು ವರ್ಷಗಳಲ್ಲಿ ಏನಾದರೂ ಬರೆದಿದ್ದೀರಾ’, ಅಂದರೆ ಕವನ ಬರೆದಿದ್ದೀರಾ ಎಂದು ಕೇಳಿದಾಗ. ಹೌದು, ಇವತ್ತಷ್ಟೇ ಒಂದು ಕವನವನ್ನು ಬರೆದಿದ್ದೇನೆ ಎಂದರು ಮಾನ್ಯ ಪ್ರಧಾನಿಗಳು. ಹಿಂದಿನ ಬಿಜೆಪಿ ಪ್ರಧಾನಿಗಳಂತೆ ಇವರೂ ಕವನ ಬರೆಯುತ್ತಾರೆ ಎಂಬುದು ಬಹಳಷ್ಟು ಮಂದಿಗೆ ಆಶ್ಚರ್ಯವಾದ್ದು ಆಗಲೇ. ಮತ್ತು ಈ ಸಂದರ್ಶನದ ನಿಜ ಚಿತ್ರದ ಆ ಹೊಳಹು ಸಿಕ್ಕಿದ್ದು ಕೂಡ ಆಗಲೇ.
ಕವನ ಓದಿ ಎಂದು ಸಂದರ್ಶಕರು ಹೇಳಿದಾಗ ಪ್ರಧಾನಿಗಳು ಅಲ್ಲಿದ್ದ ಸೇವಕರಿಂದ ತನ್ನ ಫೈಲ್ ಕೇಳಿ ಪಡೆಯುತ್ತಾರೆ, ಒಂದು ಕಾಗದವನ್ನು ಎತ್ತಿಕೊಳ್ಳುತ್ತಾರೆ, ಅದನ್ನು ತೋರಿಸಿ ಎನ್ನುತ್ತಾರೆ ಸಂದರ್ಶಕರು, ಇಲ್ಲ ಅದು ಕೈಬರಹದಲ್ಲಿದೆ, ತನ್ನ ಕೈಬರಹ ಸೊಟ್ಟ-ಸೊಟ್ಟಗಾಗಿದೆ ಎನ್ನುತ್ತಾರೆ. ಈ ವೇಳೆಗೆ ಅವರು ನೋಡುತ್ತಿದ್ದ ಕಾಗದದ ದೃಶ್ಯ ಸಂದರ್ಶನ ನೋಡುತ್ತಿರುವವರಿಗೂ ಕಾಣುತ್ತದೆ. ಆದರೆ ಅಲ್ಲಿ ಕಾಣಿಸುವುದು ಕೈಬರಹದ ಕವನವಲ್ಲ, ಮುದ್ರಿತ ಕವನ, ಅಲ್ಲದೆ ಸಂದರ್ಶಕರು ಕೇಳಿದ ಪ್ರಶ್ನೆಯೂ ಅಲ್ಲಿ ಕಾಣುತ್ತದೆ. ಅದರ ಮುಂದೆ 27 ಎಂದಿದೆ. ಅಂದರೆ 27ನೇ ಪ್ರಶ್ನೆ.
ಈ ಐದು ವರ್ಷಗಳಲ್ಲಿ ಎಂದೂ ಪತ್ರಿಕಾ ಸಮ್ಮೇಳನ ನಡೆಸಿಯೇ ಇರದ ದಾಖಲೆ ನಿರ್ಮಿಸಿರುವ ಈ ಪ್ರಧಾನಿಗಳ ಸಂದರ್ಶನಗಳು ಅಲ್ಲೋ-ಇಲ್ಲೋ ನಡೆದಿವೆ. ಚುನಾವಣೆಗಳು ಹತ್ತಿರ ಬಂದ ಮೇಲೆ ತುಸು ಹೆಚ್ಚಾಗಿವೆ. ಆದರೆ ಇವೆಲ್ಲವೂ ಸಹಾನುಭೂತಿಪರ ಸಂದರ್ಶಕರು ನಡೆಸಿದ್ದು, ಅಂದರೆ ಪ್ರಧಾನ ಮಂತ್ರಿಗಳಿಗೆ ಇಷ್ಟವಾಗುವ ಪ್ರಶ್ನೆಗಳನ್ನು ಮಾತ್ರ ಕೇಳುವ ‘ಸಹೃದಯ’ ಪತ್ರಕರ್ತರದ್ದು. ಅವೆಲ್ಲವೂ ‘ಸ್ಕ್ರಿಪ್ಟೆಡ್’ ಸಂದರ್ಶನಗಳು ಎನ್ನಲಾಗುತ್ತಿತ್ತು. ಅಂದರೆ ಅವರು ಮೊದಲೇ ಪ್ರಶ್ನೆಗಳನ್ನು ಕಳಿಸುತ್ತಾರೆ, ಪ್ರಧಾನಿಗಳ ಕಚೇರಿ ಅವುಗಳಲ್ಲಿ ಉತ್ತರಿಸುವ ಪ್ರಶ್ನೆಗಳನ್ನು ಆಯ್ದು ಕಳಿಸುತ್ತದೆ, ಪತ್ರಕರ್ತರು ಅವನ್ನೇ ಕೇಳುತ್ತಾರೆ. ಆದರೆ ಇದು ಕೇವಲ ಊಹೆಯಾಗಿರುತ್ತಿತ್ತು, ಪ್ರಧಾನಿಗಳ ಬಗ್ಗೆ ಅಸೂಯೆ ಇರುವವರ ಅಪಪ್ರಚಾರ ಇರಬಹುದು ಎಂದೂ ಭಾವಿಸಲಾಗಿತ್ತು.
ಆದರೆ ಈ ಸಂದರ್ಶನ ಅದನ್ನು ದೃಢಪಡಿಸಿದೆ ಎಂದು ಬಹಳಷ್ಟು ರಾಜಕೀಯ ವೀಕ್ಷಕರು ಹೇಳುತ್ತಿದ್ದಾರೆ. ಅದೇನೇ ಇರಲಿ, ಬಾಲಾಕೋಟ್ ವಿಮಾನ ದಾಳಿಯ ಬಗ್ಗೆ ಹೇಳಿದ್ದು ಚುನಾವಣೆಯ ಸಂದರ್ಭದಲ್ಲಿ ಅರ್ಥವಾಗುತ್ತದೆ, ಆದರೆ ಉಳಿದವುಗಳು- ಪರ್ಸ್ ಇಲ್ಲದಿರುವುದು, ಡಿಜಿಟಲ್ ಕ್ಯಾಮರಾ, ಇ-ಮೇಲ್, ಟ್ಯಾಬ್ಲೆಟ್ ಮತ್ತು ಈ ಮುದ್ರಿತ ಕವನ, ಈ ಮೇಲ್ನೋಟಕ್ಕೆ ಸುಳ್ಳಿರಬಹುದು ಎಂದೇ ಸಂದೇಹ ಮೂಡಿಸುವ ವಿಚಾರಗಳು ಯಾಕೆ ಬೇಕಿತ್ತು ಎಂಬ ಪ್ರಶ್ನೆ ಹಲವರಲ್ಲಿ ಎದ್ದಿದೆ.
ಆದರೆ ಕಳೆದ ಐದು ವರ್ಷಗಳಲ್ಲಿ ಒಂದೊಂದಾಗಿ ಆಶ್ವಾಸನೆಗಳು ಜುಮ್ಲಾಗಳಾಗಿ ಬಿಟ್ಟದ್ದು, ಮತ್ತು ನಡುನಡುವೆ ಸಮಾರಂಭಗಳಲ್ಲಿ, ಪ್ರತಿಪಕ್ಷಗಳನ್ನು ಟೀಕಿಸುವ ಸಂದರ್ಭಗಳಲ್ಲಿ, ವಿಶೇಷವಾಗಿ ಚುನಾವಣೆಗಳ ಸಂದರ್ಭದಲ್ಲಿ, ಹೊಮ್ಮಿ ಬಂದು ಆಮೇಲೆ ಶುದ್ಧ ಸುಳ್ಳುಗಳು ಒಂದು ದೃಢಪಟ್ಟಿದ್ದು(ಉದಾ: ಯಾವ ಕಾಂಗ್ರೆಸ್ ಮುಖಂಡರೂ ಭಗತ್ ಸಿಂಗ್ರನ್ನು ಜೈಲಿನಲ್ಲಿ ಭೇಟಿಯಾಗಿರಲಿಲ್ಲ!) ನೆನಪಿರುವವರಿಗೆ ಇದರಿಂದ ಆಶ್ಚರ್ಯವಾಗಲಿಕ್ಕಿಲ್ಲ.
ಆದರೂ, ಬಾಲಾಕೋಟ್ ವಾಯುದಾಳಿಗೆ ಆದೇಶ ನೀಡಿದ ಪರಿಯ ಬಗ್ಗೆ ಅವರು ಹೇಳಿರುವುದು ನಿಜವೇನು, ನಿಜವಾಗಿದ್ದರೆ ಪರಿಣಿತರಾರೂ ಅದು ತಪ್ಪು ಎಂದು ಹೇಳುವ ಧೈರ್ಯ ತೋರಲಿಲ್ಲವೇ, ದೇಶದ ಭದ್ರತೆಯಂತಹ ಗಹನವಾದ ಪ್ರಶ್ನೆಗಳಲ್ಲಿ ಇಂತಹ ‘ಕಚ್ಚಾ ಜಾಣ್ಮೆ’ ಮತ್ತು ಪರಿಣಿತರ ಮೌನ ಅಪಾಯಕಾರಿಯಲ್ಲವೇ ಎಂದು ಹಲವರಿಗೆ ಆತಂಕ ಉಂಟಾಗಿದೆ. ನೋಟುರದ್ಧತಿಯ ಅನುಭವ ನಮ್ಮ ಮುಂದಿದೆ ಎನ್ನುತ್ತಾರೆ ಅವರು. ಈ ಬಾಲಾಕೋಟ್ ವಾಯುದಾಳಿಯನ್ನು ಮಳೆ ಸುರಿಯುತ್ತಿದ್ದಾಗ ಮಾಡಿದ್ದರಿಂದಲೇ ನಮ್ಮ ಯುದ್ಧವಿಮಾನಗಳು ಹೊತ್ತಿದ್ದ ಒಂದು ಕ್ಷಿಪಣಿ ಕೆಲಸ ಮಾಡದೆ ಈ ದಾಳಿಯ ನಿಜವಾದ ಫಲಿತಾಂಶ ನಮಗೆ ತಿಳಿಯದಂತೆ ಆಗಿರಬಹುದೇ ಎಂದೂ ಕೆಲವು ರಕ್ಷಣಾ ಪರಿಣಿತರು ಊಹಿಸುತ್ತಿದ್ದಾರೆ ಎಂಬುದನ್ನು ಇಲ್ಲಿ ಗಮನಿಸಬಹುದು.
( ಈ ವಾರದ ಜನಶಕ್ತಿ ವಾರ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ನಟ ಮನದೀಪ್ ರಾಯ್ ನಿಧನ

ಸುದ್ದಿದಿನ ಡೆಸ್ಕ್ : ಹಿರಿಯ ಚಿತ್ರನಟ ಮನದೀಪ್ ರಾಯ್ (74 ವರ್ಷ) ಇಂದು ಬೆಳಗಿನ ಜಾವ ಅಗಲಿದ್ದಾರೆ.
ಕೆಲ ದಿನಗಳ ಹಿಂದೆ ಹೃದಯಾಘಾತಕ್ಕೀಡಾಗಿದ್ದ ಅವರು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಮನದೀಪ್ ರಾಯ್ ಹವ್ಯಾಸಿ ರಂಗಭೂಮಿ ಹಿನ್ನೆಲೆಯ ಕಲಾವಿದ. ನಟ – ನಿರ್ದೇಶಕ ಶಂಕರನಾಗ್ ಅವರ ಆತ್ಮೀಯ ಒಡನಾಡಿ. ಪೋಷಕ ಪಾತ್ರ, ಹಾಸ್ಯ ನಟರಾಗಿ 500ಕ್ಕೂ ಹೆಚ್ಚು ಸಿನಿಮಾಗಳು ಹಾಗೂ ಕಿರುತೆರೆ ಸರಣಿಗಳಲ್ಲಿ ಅಭಿನಯಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕರ್ನಾಟಕದಲ್ಲಿ ಈ ವರ್ಷ ಜನಪರ ರಾಜ್ಯ ಬಜೆಟ್ ಮಂಡನೆ ; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಸುದ್ದಿದಿನ, ಹಾವೇರಿ : ಕರ್ನಾಟಕದಲ್ಲಿ ಮುಂದಿನ ತಿಂಗಳು ಮಂಡಿಸಲಾಗುತ್ತಿರುವ ಈ ವರ್ಷದ ರಾಜ್ಯ ಬಜೆಟ್ ರೈತರು, ದೀನ ದಲಿತರು, ಯುವಕರು, ಮಹಿಳೆಯರು, ದುಡಿಯುವ ವರ್ಗ ಮತ್ತು ಜನಪರವಾಗಿರುತ್ತದೆ ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹಾವೇರಿ ಜಿಲ್ಲೆ ಶಿಗ್ಗಾಂವ್ನಲ್ಲಿ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ದುಡಿಮೆಗೆ ಯೋಗ್ಯ ಬೆಲೆ ಸಿಗುವ ರೀತಿಯಲ್ಲಿ ನಮ್ಮ ಕಾರ್ಯಕ್ರಮಗಳು ಇರುತ್ತವೆ ಎಂದರು.
ಕರ್ನಾಟಕ ರಾಜ್ಯದ ಆರ್ಥಿಕ ಅಭಿವೃದ್ಧಿಯಲ್ಲಿ ನಾವು ವೇಗವನ್ನು ಕಂಡಿದ್ದೇವೆ. ಕಳೆದ ವರ್ಷ ನಾನು ಅಧಿಕಾರ ವಹಿಸಿಕೊಂಡಾಗ 5 ಸಾವಿರ ಕೋಟಿ ರೂಪಾಯಿ ರಾಜ್ಯದ ಬೊಕ್ಕಸಕ್ಕೆ ನಮ್ಮ ನಿರ್ಧಿಷ್ಟ ಗುರಿಗೆ ಕೊರತೆಯಿತ್ತು. ಅದನ್ನು ನಾವು 5 ಸಾವಿರ ಕೋಟಿ ತುಂಬುವುದಲ್ಲದೇ, 13 ಸಾವಿರ ಕೋಟಿ ಅಧಿಕವಾಗಿ ಸಂಗ್ರಹ ಮಾಡಿದ್ದೇವೆ. ಈ ವರ್ಷವೂ ಕೂಡ ನಮ್ಮ ಹಣಕಾಸಿನ ಸಂಗ್ರಹ ಉತ್ತಮವಾಗಿದೆ ಎಂದು ಕರ್ನಾಟಕದ ಮುಖ್ಯಮಂತ್ರಿ ಹೇಳಿದರು.
ಕೋವಿಡ್ ನಂತರದಲ್ಲಿ ಆರ್ಥಿಕ ಸುಧಾರಣೆ ಆಗುತ್ತಿರುವ ಸಂದರ್ಭದಲ್ಲಿ ಕೆಳಹಂತದ ಜನಸಮುದಾಯಕ್ಕೆ ಇನ್ನಷ್ಟು ಸಹಾಯ ಮಾಡಿ, ಅವರನ್ನು ಕೂಡ ಮುಖ್ಯ ವಾಹಿನಿಗೆ ಬರಬೇಕು ಎನ್ನುವ ನಿಟ್ಟಿನಲ್ಲಿ ನಾವು ಕಾರ್ಯಕ್ರಮ ರೂಪಿಸುತ್ತಿದ್ದೇವೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಸಂಸತ್ತಿನ ಬಜೆಟ್ ಅಧಿವೇಶನದ ಹಿನ್ನೆಲೆ ; ಇದೇ 30ರಂದು ಸರ್ವಪಕ್ಷಗಳ ಸಭೆ

ಸುದ್ದಿದಿನ ಡೆಸ್ಕ್ : ಸಂಸತ್ತಿನ ಮುಂಬರುವ ಬಜೆಟ್ ಅಧಿವೇಶನದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇದೇ 30ರಂದು ಸರ್ವಪಕ್ಷಗಳ ಸಭೆಯನ್ನು ಕರೆದಿದೆ. ಸಂಸತ್ ಭವನದ ಸಂಕೀರ್ಣದಲ್ಲಿ ಸೋಮವಾರ ಮಧ್ಯಾಹ್ನ 12 ಗಂಟೆಗೆ ಸಭೆ ನಡೆಯಲಿದೆ.
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ, ಕೇಂದ್ರ ಸಚಿವರು ಮತ್ತು ಸಂಸತ್ತಿನ ಎರಡೂ ಸದನಗಳನ್ನು ಪ್ರತಿನಿಧಿಸುವ ಸದನ ನಾಯಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಸಭೆಯಲ್ಲಿ ಸರ್ಕಾರ ಸಂಸತ್ತಿನ ಉಭಯ ಸದನಗಳ ಸುಗಮ ಕಲಾಪಕ್ಕೆ ಎಲ್ಲ ರಾಜಕೀಯ ಪಕ್ಷಗಳ ಸಹಕಾರವನ್ನು ಕೋರಲಿದೆ. ಸಂಸತ್ತಿನ ಬಜೆಟ್ ಅಧಿವೇಶನ ಇದೇ 31ರಿಂದ ಆರಂಭವಾಗಲಿದೆ. ಮೊದಲ ದಿನ ಬೆಳಿಗ್ಗೆ 11 ಗಂಟೆಗೆ ಸೆಂಟ್ರಲ್ ಹಾಲ್ ನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡುವರು.
ಅದೇ ದಿನವೇ ಆರ್ಥಿಕ ಸಮೀಕ್ಷೆಯನ್ನೂ ಸಹ ಮಂಡಿಸಲಾಗುವುದು. ಫೆಬ್ರವರಿ 1ರಂದು 2023-24ನೇ ಸಾಲಿನ ಕೇಂದ್ರ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆ ಮಾಡಲಿದ್ದಾರೆ.
ಬಜೆಟ್ ಅಧಿವೇಶನ ಏಪ್ರಿಲ್ 6ವರೆಗೆ ನಡೆಯಲಿದ್ದು, ಸುಮಾರು 66 ದಿನಗಳಲ್ಲಿ 27 ಕಲಾಪಗಳು ನಡೆಯಲಿದೆ. ಮೊದಲ ಅವಧಿಯಲ್ಲಿ ಅಧಿವೇಶನ ಫೆಬ್ರವರಿ 13ರವರೆಗೆ ನಡೆಯಲಿದೆ. ಫೆಬ್ರವರಿ 14ರಿಂದ ಮಾರ್ಚ್ 12ರವರೆಗೆ ಅಧಿವೇಶನಕ್ಕೆ ಬಿಡುವು ಇರಲಿದೆ ಆನಂತರ ಮಾರ್ಚ್ 13ರಿಂದ ಆರಂಭವಾಗುವ ಅಧಿವೇಶನ ಏಪ್ರಿಲ್ 6ಕ್ಕೆ ಕೊನೆಗೊಳ್ಳಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980336243
