ದಿನದ ಸುದ್ದಿ
ಭಾರತ- ಅಮೆರಿಕ ವ್ಯಾಪಾರ ಸಂಬಂಧಗಳು : ಅವರ ಸ್ವರಕ್ಷಣಾತ್ಮಕ ನೀತಿಗಳಿಗೆ ನಮ್ಮ ಸಂತೋಷದ ಸ್ವೀಕೃತಿ?

- ಅಮೇರಿಕಾ ತನ್ನ ಸ್ವರಕ್ಷಣಾತ್ಮಕ ನೀತಿಯನ್ನು ಈಗ ಆರ್ಥಿಕವಾಗಿ ಬಲಗೊಳ್ಳುತ್ತಿರುವ ದೇಶಗಳು ತಾವೇ ಸಂತೋಷದಿಂದ ಒಪ್ಪುವಂತೆ ಅವರ ಮನವೊಲಿಸುವ ಹೊಸದೊಂದು ಕಾರ್ಯತಂತ್ರಕ್ಕಿಳಿದಿದೆ. ಈ ನಿಟ್ಟಿನಲ್ಲಿ ಚೀನಾದೊಂದಿಗೆ ಅದರ ಆಟ ನಡೆಯಲಿಲ್ಲ. ಅದು ಬಗ್ಗಲಿಲ್ಲ ಮಾತ್ರವಲ್ಲ ಅದು ಅಮೇರಿಕಾದ ಸಾಲು ಸಾಲು ರಫ್ತುಗಳ ಮೇಲೆ ಹೆಚ್ಚಿನ ಆಮದು ಸುಂಕ ವಿಧಿಸಿದೆ. ಆದರೆ ಯಾವ ಪ್ರತೀಕಾರಾತ್ಮಕ ಕ್ರಮಗಳನ್ನೂ ಕೈಗೊಳ್ಳದೆ ಒಪ್ಪಿಕೊಳ್ಳುವಂತೆ ಮತ್ತು ಅದರ ಜೊತೆಯಲ್ಲಿ, ಸಾಧ್ಯವಾದರೆ, ಆಮದು ಸುಂಕವನ್ನು ತಗ್ಗಿಸುವಂತೆ ಭಾರತದ ಮನವೊಲಿಸುವ ಪ್ರಯತ್ನದಲ್ಲಿ ಯಶಸ್ವಿಯಾಗುತ್ತಿರುವಂತೆ ಕಾಣುತ್ತದೆ. ಇರಾನಿನಿಂದ ತೈಲ ಕೊಳ್ಳಕೂಡದು, ತನ್ನ ತುಟ್ಟಿಯಾದ ತೈಲವನ್ನು ಕೊಳ್ಳಬೇಕು ಎಂಬ ಅಮೇರಿಕದ ತಗಾದೆಗೆ ಮೋದಿ ಸರ್ಕಾರವು, ಚೀನಾದಂತಲ್ಲದೆ, ಸಂಪೂರ್ಣವಾಗಿ ತಲೆಬಾಗಿದೆ.
ಹತ್ತೊಂಭತ್ತನೇ ಶತಮಾನದ ಕೊನೆಯ ಮತ್ತು ಇಪ್ಪತ್ತನೇ ಶತಮಾನದ ಆದಿ ಭಾಗದ ಅವಧಿಯಲ್ಲಿ, ಆಗ ಬಲ ಹೊಂದುತ್ತಿದ್ದ ಯೂರೋಪಿನ ದೇಶಗಳಿಗೆ ಮತ್ತು ಅಮೇರಿಕಾಗೆ ಹೋಲಿಸಿದರೆ, ಬಂಡವಾಳಶಾಹಿ ಜಗತ್ತಿನ ಅಂದಿನ ದಿಗ್ಗಜ ಎನಿಸಿದ್ದ ಬ್ರಿಟನ್ನಿನ ಚಾಲ್ತಿ ಖಾತೆಯು ಕೊರತೆಯಲ್ಲಿತ್ತು. ನಿಜ ಸಂಗತಿಯೆಂದರೆ, ಇಂತಹ ಕೊರತೆ ಮುಂಚೂಣಿ ದೇಶದ ಸ್ವಭಾವವೇ ಆಗಿದೆ. ಏಕೆಂದರೆ, ಅಂತಾರಾಷ್ಟ್ರೀಯ ಕರೆನ್ಸಿ ವಿನಿಮಯ ಸಂಬಂಧಿತವಾಗಿ ಆ ಮುಂಚೂಣಿ ದೇಶವು ವ್ಯಾವಹಾರಿಕ ದೃಷ್ಟಿಯಿಂದ ಇತರೆ ದೇಶಗಳ ಬೆಳವಣಿಗೆಗೆ ಅವಕಾಶ ಕಲ್ಪಿಸುವ ಅವಶ್ಯಕತೆಯಿಂದಾಗಿ, ಆ ದೇಶದ ಚಾಲ್ತಿ ಖಾತೆಯಲ್ಲಿ ಕೊರತೆ ಉಂಟಾಗುತ್ತಿತ್ತು.
ಅದೇ ರೀತಿಯಲ್ಲಿ, ಈಗ ಬಲಗೊಳ್ಳುತ್ತಿರುವ ದೇಶಗಳಿಗೆ ಹೋಲಿಸಿದರೆ, ಇಂದಿನ ಬಲಾಢ್ಯ ಅರ್ಥವ್ಯವಸ್ಥೆ ಎನಿಸಿರುವ ಅಮೇರಿಕಾದ ಚಾಲ್ತಿ ಖಾತೆಯು ಕೊರತೆಯಲ್ಲಿದೆ. ಅದು ಸ್ವಾಭಾವಿಕವೇ. ಆದರೆ, ಅಂದಿನ ಬ್ರಿಟನ್ ಮತ್ತು ಇಂದಿನ ಬಲಾಢ್ಯ ಅಮೇರಿಕಾ ದೇಶಗಳ ಚಾಲ್ತಿ ಖಾತೆಯ ಕೊರತೆಗಳಲ್ಲಿ ಒಂದು ವ್ಯತ್ಯಾಸವಿದೆ. ಯಾವ ದೇಶಗಳೊಂದಿಗೆ ಬ್ರಿಟನ್ನಿನ ಚಾಲ್ತಿ ಖಾತೆ ಕೊರತೆಯಲ್ಲಿತ್ತೊ ಆ ದೇಶಗಳಿಗೇ ಬ್ರಿಟನ್ ಬಂಡವಾಳವನ್ನು ಒದಗಿಸಿಯೂ ತನ್ನ ಚಾಲ್ತಿ ಖಾತೆಯ ಕೊರತೆಯನ್ನು ನಿಭಾಯಿಸಿಕೊಳ್ಳುತ್ತಿತ್ತು.
ಹೇಗೆಂದರೆ, ಬ್ರಿಟನ್ ತನ್ನ ಅಧೀನದಲ್ಲಿದ್ದ ವಸಾಹತು ದೇಶಗಳಿಗೆ ಅಲ್ಲಿನ ಉದ್ದಿಮೆಗಳು ನಾಶಗೊಳ್ಳುವಂತಹ ರಫ್ತುಗಳ ಮೂಲಕ ತನ್ನ ಚಾಲ್ತಿ ಖಾತೆಯಲ್ಲಿ ಹೆಚ್ಚುವರಿ ಉಳಿಯುವಂತೆ ನೋಡಿಕೊಳ್ಳುತ್ತಿತ್ತು ಮತ್ತು ಆ ವಸಾಹತು ದೇಶಗಳ ಬರುವ ರಫ್ತು ಹೆಚ್ಚುವರಿಯನ್ನು ಬಿಟ್ಟಿಯಾಗಿ ಲಪಟಾಯಿಸಿಕೊಂಡು ತಾನು ಮಾಡಬೇಕಾದ ಪಾವತಿಗಳನ್ನು ಇತ್ಯರ್ಥಮಾಡಿಕೊಳ್ಳುತ್ತಿತ್ತು. ಈ ರೀತಿಯಲ್ಲಿ, ಬ್ರಿಟನ್ ಆಗ ಬಲಗೊಳ್ಳುತ್ತಿದ್ದ ದೇಶಗಳೊಂದಿಗಿನ ತನ್ನ ಬಂಡವಾಳ ಖಾತೆ ಮತ್ತು ಚಾಲ್ತಿ ಖಾತೆಯ ಕೊರತೆಗಳನ್ನು ಸರಿದೂಗಿಸಿಕೊಂಡು ತನಗೆ ವ್ಯಾಪಾರದ ಶಿಲ್ಕು ಸಮಸ್ಯೆ ಉಂಟಾಗದಂತೆ ನೋಡಿಕೊಂಡಿತು.
ಅಂತಹ ಸಾಧ್ಯತೆಗಳು ಅಮೇರಿಕದ ಪಾಲಿಗೆ ಲಭ್ಯವಿಲ್ಲ. ಹಿಂದೆ ವಸಾಹತುಗಳಾಗಿದ್ದ ದೇಶಗಳಿಂದ, ಬೌದ್ಧಿಕ ಆಸ್ತಿ ಹಕ್ಕು ಮತ್ತು ಅಂತಹ ಹಕ್ಕುಸ್ವಾಮ್ಯಗಳ ಮೂಲಕ ಅಮೇರಿಕಾ ಈಗ ತನ್ನ ಚಾಲ್ತಿ ಖಾತೆಯಲ್ಲಿ ಹೆಚ್ಚುವರಿ ಉಳಿಯುವಂತೆ ನೋಡಿಕೊಳ್ಳುತ್ತಿದೆ. ಆದರೂ, ಅದರ ವ್ಯಾಪಾರ ಶಿಲ್ಕು ಚುಕ್ತಾ ಮಾಡಿಕೊಳ್ಳಲು ಇದಿಷ್ಟೇ ಗಳಿಕೆ ಎಟುಕುವುದಿಲ್ಲ. ವಸಾಹತೀಕರಣವು ರಾಜಕೀಯವಾಗಿ ಕೊನೆಗೊಂಡಿದ್ದರಿಂದಾಗಿ, ಹಿಂದೆ ವಸಾಹತುಗಳಾಗಿದ್ದ ದೇಶಗಳಿಂದ ಬಿಟ್ಟಿಯಾಗಿ ಹಣ ಮಾಡಿಕೊಳ್ಳುತ್ತಿದ್ದ ರೀತಿಯಲ್ಲಿ ಬಲಿಷ್ಟ ಬಂಡವಾಳಶಾಹಿ ದೇಶಗಳಿಗೆ ಬಿಟ್ಟಿ ಹಣ ಗಳಿಸುವುದು ಈಗ ಅಸಾಧ್ಯವಾಗಿದೆ.
ಹಾಗಾಗಿ, ತನ್ನ ವ್ಯಾಪಾರ ಶಿಲ್ಕು ಬಗೆಹರಿಸಿಕೊಳ್ಳುವ ಸಲುವಾಗಿ ಗತ್ಯಂತರವಿಲ್ಲದೆ ಬಹಳ ವರ್ಷಗಳಿಂದ ಅಮೇರಿಕಾ ಹೊರ ದೇಶಗಳಿಂದ ಸಾಲ ಪಡೆಯುತ್ತಿದೆ. ವಿಶ್ವದ ಅತ್ಯಂತ ಬಲಶಾಲಿ ಬಂಡವಾಳಶಾಹಿ ದೇಶ ಎನಿಸಿರುವ ಅಮೇರಿಕಾ ಈಗ ಅತಿ ದೊಡ್ಡ ಸಾಲಗಾರನೂ ಆಗಿದೆ. ಇಂತಹ ಒಂದು ಪರಿಸ್ಥಿತಿ ಬಂಡವಾಳಶಾಹಿ ಇತಿಹಾಸದಲ್ಲಿ ಸೃಷ್ಠಿಯಾಗಿರುವುದು ಇದೇ ಮೊದಲು. ಹಾಗಾಗಿ, ಹೊರ ದೇಶಗಳಿಂದ ಮಿತಿ ಇಲ್ಲದೇ ಪಡೆಯುತ್ತಿದ್ದ ಸಾಲಗಳ ಮೇಲೆ ಅಮೇರಿಕಾ ಈಗ ಕಡಿವಾಣ ಹಾಕಬಯಸಿದೆ.
ಜೊತೆಗೆ, ಬೇರೆ ದೇಶಗಳಲ್ಲಿ ಉದ್ದಿಮೆಗಳನ್ನು ನಾಶಗೊಳ್ಳುವಂತಹ ರಫ್ತುಗಳ ಮೂಲಕ ತನ್ನ ಆಂತರಿಕ ಆರ್ಥಿಕ ಚಟುವಟಿಕೆಗಳನ್ನು ಪೋಷಿಸಿಕೊಳ್ಳುವುದೂ ಅಮೇರಿಕಕ್ಕೆ ಸಾಧ್ಯವಿಲ್ಲವಾಗಿದೆ. ಹಿಂದೊಮ್ಮೆ ಅತ್ಯಂತ ಬಲಶಾಲಿ ವಸಾಹತುಶಾಹಿ ಶಕ್ತಿ ಎನಿಸಿದ್ದ ಬ್ರಿಟನ್ ಅಂತಹ ಉದ್ದಿಮೆಗಳ ನಾಶದ ರಫ್ತುಗಳನ್ನು ಬೇಕಾದಷ್ಟು ಮಾಡಬಹುದಿತ್ತು ಏಕೆಂದರೆ, ಅದರ ವಸಾಹತು ಮಾರುಕಟ್ಟೆಗಳು ಅದರ ಹತೋಟಿಯಲ್ಲಿದ್ದು ಅದಕ್ಕೆ ಸುಲಭವಾಗಿ ಒದಗುತ್ತಿದ್ದವು. ಆದರೆ, ಅಮೇರಿಕಾಗೆ ಸುಲಭವಾಗಿ ಒದಗುವ ಅಂತಹ ವಸಾಹತು ಮಾರುಕಟ್ಟೆಗಳು ಇಲ್ಲ.
ತನ್ನ ಆಂತರಿಕ ಆರ್ಥಿಕ ಚಟುವಟಿಕೆಗಳ ಮಂದ ಗತಿ ಮತ್ತು ಏರುತ್ತಿರುವ ಹೊರಗಿನ ಸಾಲದ ಹೊರೆಯ ಸನ್ನಿವೇಶದಲ್ಲಿ ಅಮೇರಿಕಾ ಸ್ವರಕ್ಷಣಾತ್ಮಕ ವ್ಯಾಪಾರ ನೀತಿಗಳನ್ನು ಅಳವಡಿಸಿಕೊಳ್ಳುವ ಹೊಸದೊಂದು ಸಾಹಸದಲ್ಲಿ ತೊಡಗಿದೆ. ತನ್ನ ಈ ಸ್ವರಕ್ಷಣಾತ್ಮಕ ನೀತಿಯನ್ನು ಈಗ ಬಲಗೊಳ್ಳುತ್ತಿರುವ ದೇಶಗಳು ತಾವೇ ಸಂತೋಷದಿಂದ ಒಪ್ಪುವಂತೆ ಅವರ ಮನವೊಲಿಸುವ ಕಾರ್ಯತಂತ್ರವದು.
ಅಮೇರಿಕಾ ಈ ನಿಟ್ಟಿನಲ್ಲಿ ಚೀನಾದ ಮನವೊಲಿಸಲು ಪ್ರಯತ್ನಿಸಿತು. ಇಂತಹ ಪ್ರಯತ್ನಗಳ ಮೂಲಕ ಮಂದ ಗತಿಯಲ್ಲಿರುವ ತನ್ನ ಆರ್ಥಿಕ ಚಟುವಟಿಕೆಗಳನ್ನು ಚುರುಕುಗೊಳಿಸುವ ಮತ್ತು ತನ್ನ ವ್ಯಾಪಾರ ಶಿಲ್ಕು ಸಮಸ್ಯೆಯನ್ನು ಪರಿಹರಿಸಿಕೊಳ್ಳುವ ಭಾರದ ಹೊರೆಯನ್ನು ಇತರ ದೇಶಗಳು ಹೊರುವಂತೆ ಮಾಡಬಹುದು ಎಂದು ಅಮೇರಿಕಾ ಆಶಿಸಿದೆ. ಆದರೆ, ಚೀನಾದೊಂದಿಗೆ ಅದರ ಆಟ ನಡೆಯಲಿಲ್ಲ. ಚೀನಾ ಬಗ್ಗಲಿಲ್ಲ ಮಾತ್ರವಲ್ಲ ಅದು ಅಮೇರಿಕಾದ ಸಾಲು ಸಾಲು ರಫ್ತುಗಳ ಮೇಲೆ ಹೆಚ್ಚಿನ ಆಮದು ಸುಂಕ ವಿಧಿಸಿದೆ.
ತನ್ನ ಈ ಸ್ವರಕ್ಷಣಾತ್ಮಕ ನೀತಿಯನ್ನು ಯಾವ ಪ್ರತೀಕಾರಾತ್ಮಕ ಕ್ರಮಗಳನ್ನೂ ಕೈಗೊಳ್ಳದೆ ಒಪ್ಪಿಕೊಳ್ಳುವಂತೆ ಮತ್ತು ಅದರ ಜೊತೆಯಲ್ಲಿ, ಸಾಧ್ಯವಾದರೆ, ಆಮದು ಸುಂಕವನ್ನು ತಗ್ಗಿಸುವಂತೆ ಭಾರತದ ಮನವೊಲಿಸಲು ಅಮೇರಿಕಾ ಪ್ರಯತ್ನಿಸುತ್ತಿದೆ. ಜೊತೆಗೆ, ಏಷ್ಯಾದ ದೇಶಗಳಿಂದ ಕಳೆದ ಹತ್ತು ಹದಿನೈದು ವರ್ಷಗಳಿಂದ ಭಾರತವು ಹೆಚ್ಚು ಹೆಚ್ಚಾಗಿ ತರಿಸಿಕೊಳ್ಳುತ್ತಿರುವ ಆಮದು ವಸ್ತುಗಳನ್ನು ತನ್ನಿಂದಲೇ ಆಮದು ಮಾಡಿಕೊಳ್ಳುವಂತೆಯೂ ಭಾರತದ ಮನವೊಲಿಸುತ್ತಿದೆ. ಅಮೇರಿಕವು ಏಷ್ಯಾದ ದೇಶಗಳ ರಫ್ತುಗಳನ್ನು ಪಲ್ಲಟಗೊಳಿಸಿ ತನ್ನ ಉತ್ಪನ್ನಗಳಿಗೆ ಭಾರತದ ಮಾರುಕಟ್ಟೆಗೆ ಸುಲಭ ಪ್ರವೇಶ ದೊರಕಿಸಿಕೊಳ್ಳುವ ಮೂಲಕ ಭಾರತದೊಂದಿಗಿನ ವ್ಯಾಪಾರದ ಶಿಲ್ಕು ಗಾತ್ರವನ್ನು ತಗ್ಗಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಈ ಉದ್ದೇಶಕ್ಕಾಗಿ, ಅಮೇರಿಕಾದ ಒಂದು ತಂಡವು ಶೀಘ್ರದಲ್ಲೇ ಭಾರತಕ್ಕೆ ಬರಲಿದೆ.
ಈ ಸಂಬಂಧವಾಗಿ, ಭಾರತದೊಂದಿಗೆ ಅಮೇರಿಕಾಗೆ ಎರಡು ಸಮಸ್ಯೆಗಳಿವೆ. ಮೊದಲನೆಯದು, ಮಾರಾಟದ ಸರಕುಗಳ ಶಿಲ್ಕು ಭಾರತಕ್ಕೆ ಅನುಕೂಲಕರವಾಗಿವೆ. ಎರಡನೆಯದು, ಬೌದ್ಧಿಕ ಆಸ್ತಿ ಹಕ್ಕುಸ್ವಾಮ್ಯದ ಭಾರತದ ವ್ಯವಸ್ಥೆ ಅಮೇರಿಕಕ್ಕೆ ಅನುಕೂಲಕರವಾಗಿಲ್ಲ.
ಭಾರತವು ಅಮೇರಿಕಾಗೆ ಮಾರಿದ ಸರಕು ಸಾಮಗ್ರಿಗಳಿಂದಾಗಿ 2017ರಲ್ಲಿ ವ್ಯಾಪಾರದ ಶಿಲ್ಕು 27.3 ಬಿಲಿಯನ್ ಡಾಲರ್ನಷ್ಟು ಮೊತ್ತವು ಭಾರತದ ಪರವಾಗಿತ್ತು. 2018ರಲ್ಲಿ ಅದು ಸುಮಾರು ನಾಲ್ಕು ಬಿಲಿಯನ್ ಡಾಲರ್ನಷ್ಟು ಇಳಿದಿದೆ. ಕಾರಣ, ಮೆರಿಕಾದ ಸರಕುಗಳಿಗೆ ಭಾರತವು ಬೇಡಿಕೆಯ ಹೆಚ್ಚಳವಾಗಿದೆ, ಮುಖ್ಯವಾಗಿ, ಇಂಧನ ಮತ್ತು ನಾಗರಿಕ ವಿಮಾನಗಳನ್ನು ಅಮೇರಿಕಾದಿಂದ ಆಮದು ಮಾಡಿಕೊಂಡಿದೆ. ಆದಾಗ್ಯೂ, ಭಾರತದ ವ್ಯಾಪಾರದ ಶಿಲ್ಕು ಮೊತ್ತವು ಗಣನೀಯವೇ. ಈ ಅಂತರವನ್ನು ಅಮೇರಿಕಾ ತಗ್ಗಿಸಿಕೊಳ್ಳಲು ಪ್ರಯತ್ನಿಸುತ್ತಿದೆ.
ಒಂದು ದಶಕದ ಹಿಂದೆ ಭಾರತದ ಆಮದುಗಳ ಪಾಲಿನಲ್ಲಿ ಅಮೇರಿಕಾದ ಭಾಗ 8.5% ಇತ್ತು. ಈಗ ಅದು 5.7%ಗೆ ಇಳಿದಿದೆ. ಇದೇ ಅವಧಿಯಲ್ಲಿ, ಭಾರತದ ಆಮದುಗಳ ಪಾಲಿನಲ್ಲಿ ಚೀನಾದ ಭಾಗ 11% ಗಿಂತಲೂ ಕಡಿಮೆ ಇದ್ದದ್ದು ಈಗ 16%ಗೆ ಏರಿದೆ. ಅಂದರೆ, ಭಾರತದ ಆಮದುಗಳು ಏಷ್ಯನ್ ಮೂಲಗಳತ್ತ ಹೊರಳಿವೆ. ಅದನ್ನು ಬದಲಿಸಲು ಅಮೇರಿಕಾ ಪ್ರಯತ್ನಿಸುತ್ತಿದೆ.
ಭಾರತವು ಆಮದು ಮಾಡಿಕೊಳ್ಳುತ್ತಿರುವ ಸೇಬು, ಬಾದಾಮಿ ಮುಂತಾದ ಪದಾರ್ಥಗಳ ಬಗ್ಗೆ ತನ್ನ ಮನೋಭಾವವನ್ನು ಬದಲಿಸಿಕೊಳ್ಳಬೇಕೆಂದು ಕಳೆದ ದಶಕದುದ್ದಕ್ಕೂ ಅಮೇರಿಕಾ ಒತ್ತಾಯಿಸಿದೆ. ಅದೇ ರೀತಿಯಲ್ಲಿ, ಭಾರತವು ವ್ಯಾಪಾರದ ಜಿಎಸ್ಪಿ ಕಾರ್ಯಕ್ರಮದ(ಆದ್ಯತೆಗಳ ಸಾಮಾನ್ಯಗೊಳಿಸಿದ ವ್ಯವಸ್ಥೆ-ಅಮೆರಿಕಾದ ಆಮದು ಸುಂಕಗಳಲ್ಲಿ ರಿಯಾಯ್ತಿ ಪಡೆವ ವ್ಯವಸ್ಥೆ) ಅಡಿಯಲ್ಲಿ ಮಾಡುತ್ತಿರುವ ರಫ್ತಿನ ಪಟ್ಟಿಯಿಂದ ಅನೇಕ ಐಟಂಗಳನ್ನು ತೆಗೆದು ಹಾಕಲಾಗಿದೆ. ಜೊತೆಯಲ್ಲಿ, ಇರಾನಿನಿಂದ ತೈಲ ಕೊಳ್ಳಕೂಡದು ಎಂದು ಅಮೇರಿಕ ಹೇರಿದ ಒತ್ತಡದಿಂದಾಗಿ, ಇರಾನಿನಿಂದ ಆಮದಾಗುತ್ತಿದ್ದ ತೈಲದ ಒಂದು ಭಾಗವು ಅಮೇರಿಕಾದ ಪಾಲಾಗಲಿದೆ.
ಇರಾನಿನಿಂದ ತೈಲ ಕೊಳ್ಳಕೂಡದು ಎಂಬ ಅಮೇರಿಕದ ತಗಾದೆಗೆ ಮೋದಿ ಸರ್ಕಾರವು, ಚೀನಾದಂತಲ್ಲದೆ, ಸಂಪೂರ್ಣವಾಗಿ ತಲೆಬಾಗಿದೆ. ಇರಾನಿನ ತೈಲದ ಬೆಲೆ ಅಗ್ಗವಾಗಿದೆ. ಅಮೇರಿಕದ ತೈಲದ ಬೆಲೆ ತುಟ್ಟಿಯಾಗಿದೆ. ಭಾರತಕ್ಕೆ ಮಾರುವ ತೈಲದ ಬೆಲೆ ಅಗ್ಗವಾಗಿರುವುದಿಲ್ಲ ಎಂಬುದನ್ನು ಅಮೇರಿಕಾ ಸ್ಪಷ್ಟಪಡಿಸಿದೆ. ಆದರೂ ಅಮೇರಿಕಾದ ಒತ್ತಡಕ್ಕೆ ಮೋದಿ ಸರ್ಕಾರ ತಲೆಬಾಗಿದೆ. ಹಾಗಾಗಿ, ಮೋದಿ ಸರ್ಕಾರವು, ತುಟ್ಟಿ ಬೆಲೆಯಲ್ಲಿ ತೈಲ ಕೊಳ್ಳುವಂತೆ ಯಾರೂ ನಮ್ಮ ಕೈ ತಿರುಚಲಾಗದು ಎಂಬ ಭಾರತದ ಹೆಮ್ಮೆಯ ನಿಲುವನ್ನು ಸ್ವಲ್ಪವೂ ಸಂಕೋಚವಿಲ್ಲದೆ ಮಣ್ಣು ಪಾಲು ಮಾಡಿದೆ. ಭಾರತದ ಹಿತದೃಷ್ಟಿಯಿಂದ ನೋಡಿದಾಗ ಇವೆಲ್ಲವುಗಳಿಗೂ ಪ್ರಾಮುಖ್ಯತೆ ಇದೆಯಾದರೂ, ಅಮೇರಿಕಾದ ಹಿತದೃಷ್ಟಿಯಿಂದ ನೋಡಿದಾಗ ಅವು ನಗಣ್ಯ ಎನಿಸುತ್ತವೆ.
ಭಾರತದ ಮೇಲೆ ಅಮೇರಿಕಾ ಒತ್ತಡ ಹೇರುತ್ತಿರುವ ಇನ್ನೊಂದು ವಿಷಯವೆಂದರೆ ಕೃಷಿ ವಲಯ. ಅಕ್ಕಿ, ಗೋಧಿ ಮುಂತಾದ ಧಾನ್ಯಗಳಿಗೆ ಭಾರತವು ವಿಶ್ವ ವ್ಯಾಪಾರ ಸಂಸ್ಥೆಯ ಅನುಮತಿಗಿಂತಲೂ ಹೆಚ್ಚಿನ ಸಬ್ಸಿಡಿ ಕೊಡುತ್ತಿದೆ ಎಂಬುದು ಅಮೇರಿಕಾದ ಬಹಳ ವರ್ಷಗಳ ಆಕ್ಷೇಪಣೆ. ವಿಶ್ವ ವ್ಯಾಪಾರ ಸಂಸ್ಥೆಯು 1995ರಲ್ಲಿ ಆರಂಭವಾದ ಸಮಯದಲ್ಲಿ ಅಮೇರಿಕಾ ಕೃಷಿಗೆ ಕೊಟ್ಟದ್ದ 61 ಬಿಲಿಯನ್ ಡಾಲರ್ ಸಬ್ಸಿಡಿ ಮೊತ್ತವು 2016ರಲ್ಲಿ 135 ಬಿಲಿಯನ್ ಡಾಲರ್ಗೆ ಏರಿದೆ.
ಅಮೇರಿಕಾದ ಈ ನಿಲುವು ಸ್ವೀಕಾರಾರ್ಹ, ಆದರೆ, ಬಹು ದೊಡ್ಡ ಸಂಖ್ಯೆಯ ಬಡ ಮತ್ತು ನಿರ್ಗತಿಕ ರೈತರಿಗೆ ಭಾರತ ಕೊಡುವ ಸಣ್ಣ ಮೊತ್ತದ ಸಬ್ಸಿಡಿ ಸ್ವೀಕಾರಾರ್ಹವಲ್ಲ. ಏಕೆಂದರೆ ಅದು ಬೆಲೆಗಳ ವಿರೂಪಕ್ಕೆ ಕಾರಣವಾಗುತ್ತದೆಯಂತೆ. ಅಮೇರಿಕಾದಲ್ಲಿ ರೈತರ ಸಂಖ್ಯೆ ಬಹಳ ಕಡಿಮೆ ಇರುವುದರಿಂದ ಅವರಿಗೇ ನೇರವಾಗಿ ಸಬ್ಸಿಡಿ ಕೊಡುವುದರಿಂದ ಬೆಲೆಗಳ ವಿರೂಪ ಇರುವುದಿಲ್ಲ ಎಂಬ ವಾದ ಮಂಡಿಸಲಾಗಿದೆ. ವಾಸ್ತವವಾಗಿ, ಅಮೇರಿಕಾದ ಈ ಬೃಹತ್ ಗಾತ್ರದ ಸಬ್ಸಿಡಿಯು ಜಾಗತಿಕ ಮಾರುಕಟ್ಟೆಯನ್ನು ವಶಪಡಿಸಿಕೊಳ್ಳಲು ಬಳಕೆಯಾಗುತ್ತಿದೆ. ಆದರೆ, ಭಾರತದ ಲಕ್ಷ ಲಕ್ಷ ಮಂದಿ ಬಡ ರೈತರಿಗೆ ಸಬ್ಸಿಡಿಯನ್ನು ವರಮಾನ ಬೆಂಬಲವಾಗಿ ಕೊಡಲಾಗದು; ಅವರಿಗೆ ಬೆಲೆ ಬೆಂಬಲ ರೂಪದಲ್ಲಿ ಸಬ್ಸಿಡಿ ಕೊಡಬೇಕಾಗುತ್ತದೆ. ಅಮೇರಿಕಾ ಕರಾರುವಾಕ್ಕಾಗಿ ಆಕ್ಷೇಪಿಸುತ್ತಿರುವುದು ಇದನ್ನೇ.
ಭಾರತದಲ್ಲಿ ಬೌದ್ಧಿಕ ಆಸ್ತಿಯ ಹಕ್ಕುಗಳಿಗನುಗುಣವಾಗಿ ರೂಪುಗೊಳಿಸಿ ಜಾರಿಗೆ ತಂದಿರುವ ಪೇಟೆಂಟ್ ಕಾಯ್ದೆಯು ಜಿನೆರಿಕ್ ಔಷದಿ ವಲಯಕ್ಕೆ ಒಂದು ಹೊಡೆತವಾಗಿ ಪರಿಣಮಿಸಿದೆ. ಈ ಪೇಟೆಂಟ್ ಕಾಯ್ದೆಯು ಜಾರಿಗೆ ಬರುವ ಮುನ್ನ ಅಸ್ತಿತ್ವದಲ್ಲಿದ್ದ ಭಾರತೀಯ ಪೇಟೆಂಟ್ ಕಾಯ್ದೆಯು ಒಂದು ಮಾದರಿ ಶಾಸನವಾಗಿತ್ತು. ಅದು, ತಂತ್ರಜ್ಞಾನದ ಮೇಲೆ ಮುಂದುವರೆದ ದೇಶಗಳು ಹೊಂದಿದ್ದ ಏಕಸ್ವಾಮ್ಯವನ್ನು ತಕ್ಕಮಟ್ಟಿಗೆ ಮುರಿದಿತ್ತು.
ಆದರೆ, ಈ ಕಾಯ್ದೆಯನ್ನು ಟ್ರಿಪ್ಸ್(ಬೌದ್ಧಿಕ ಆಸ್ತಿ ಹಕ್ಕುಗಳಿಗೆ ಸಂಬಂಧಪಟ್ಟ ಒಪ್ಪಂದ)ಗೆ ಹೊಂದಿಸುವ ಸಲುವಾಗಿ, ಅಂದರೆ, ಒಂದು ಔಷಧಿಯ ಉತ್ಪಾದನಾ ಪ್ರಕ್ರಿಯೆಗೆ ಬದಲಾಗಿ ಆ ಔಷಧಿಗೇ ಪೇಟೆಂಟ್ ಕೊಡುವ ಸಲುವಾಗಿ ಹಿಂದಿನ ಕಾಯ್ದೆಯನ್ನು ಕೈ ಬಿಡಲಾಗಿತ್ತು. ಈ ಬದಲಾವಣೆಯಿಂದಲೂ ತೃಪ್ತಿಯಾಗದ ಅಮೇರಿಕವು ಆಗಿನಿಂದಲೂ ಜಿನೆರಿಕ್ ಔಷದಿ ತಯಾರಿಕೆಯನ್ನು ಕೈಬಿಡುವಂತೆ ಭಾರತದ ಮೇಲೆ ವ್ಯವಸ್ಥಿತವಾಗಿ ಒತ್ತಡ ಹೇರುತ್ತಲೇ ಇದೆ. ಭಾರತಕ್ಕೆ ಭೇಟಿ ಕೊಡಲಿರುವ ಅಮೇರಿಕಾದ ವ್ಯಾಪಾರ ನಿಯೋಗವು ಈ ಒತ್ತಡವನ್ನು ಮುಂದುವರೆಸಲಿದೆ.
ಅಮೇರಿಕಾದ ಇಂತಹ ನಿಲುವುಗಳು, ಮುಕ್ತ ವ್ಯಾಪಾರ ಕುರಿತ ತರ್ಕ ನಿಂತಿರುವುದೇ ವಸಾಹತುವಾದದ ಅಸ್ತಿತ್ವದ ಮೇಲೆ ಎಂಬುದನ್ನು ಪ್ರದರ್ಶಿಸುತ್ತಿವೆ. ವಸಾಹತುವಾದವು ಉತ್ತುಂಗದಲ್ಲಿದ್ದಾಗ ಮುಕ್ತ ವ್ಯಾಪಾರದ ಬಗ್ಗೆ ಢಾಂಬಿಕವಾಗಿದ್ದರೂ ನಡೆಯುತ್ತಿತ್ತು, ಏಕೆಂದರೆ, ಮಾರಾಟವಾಗದೇ ಉಳಿದ ಸರಕುಗಳನ್ನು ವಸಾಹತುಗಳಲ್ಲಿ ಹೇಗಾದರೂ ಮಾರಬಹುದಿತ್ತು. ಮುಕ್ತ ವ್ಯಾಪಾರವು ಒಳ್ಳೆಯದಾಗಿಯೇ ಕಂಡಿತ್ತು ಏಕೆಂದರೆ, ಅದರಿಂದ ಮುಂದುವರೆದ ಯಾವುದೇ ದೇಶವು ಹಾನಿಗೊಳಗಾಗಲಿಲ್ಲ.
ಮುಕ್ತ ವ್ಯಾಪಾರವು ಎಂದೂ ಸಂಪೂರ್ಣವಾಗಿ ಮುಕ್ತವಾಗಿ ಇರಲೇ ಇಲ್ಲ. ಆದರೆ, ಮುಂಚೂಣಿಯ ದೇಶವು ತನಗೆ ಅನಾನುಕೂಲವಾಗದ ರೀತಿಯಲ್ಲಿ ಮುಕ್ತ ವ್ಯಾಪಾರ ಪದ್ಧತಿಯನ್ನು ಜಾರಿಯಲ್ಲಿಟ್ಟಿತ್ತು. ಅದು ಉತ್ಪಾದಿಸಿದ ಹೆಚ್ಚುವರಿ ಸರಕುಗಳು ರಫ್ತಾಗುತ್ತಿದ್ದ ವಸಾಹತುಗಳು ಲೆಕ್ಕಕ್ಕೇ ಇರಲಿಲ್ಲ. ಆದರೆ, ವಸಾಹತುವಾದವು ಇಲ್ಲದಿರುವಾಗ ಈ ವಾದವೂ ಕುಸಿದು ಬೀಳುತ್ತದೆ. ಕಳೆದ ಹಲವಾರು ವರ್ಷಗಳಿಂದ ವಿಶ್ವವು ಏಗುತ್ತಿರುವುದು ಈ ಪರಿಸ್ಥಿತಿಯೊಂದಿಗೇ.
ಅಮೇರಿಕಾದ ಸ್ವರಕ್ಷಣಾತ್ಮಕ ವ್ಯಾಪಾರ ನೀತಿಗಳನ್ನು ಚೀನಾ ಮತ್ತು ಭಾರತದಂತಹ ದೇಶಗಳು ತಾವೇ ಸಂತೋಷದಿಂದ ಒಪ್ಪಿಕೊಂಡರೆ ಅದು ಜಾಗತಿಕ ಅರ್ಥವ್ಯವಸ್ಥೆಯಲ್ಲಿ ಒಟ್ಟಾರೆ ಬೇಡಿಕೆಯನ್ನು ಹೆಚ್ಚಿಸುವ ಭಾರವನ್ನು ತಾವೇ ಹೊರುವುದು ಎಂದಾಗುತ್ತದೆ. ಆದರೆ ಒಟ್ಟಾರೆ ಬೇಡಿಕೆಯನ್ನು ಹೆಚ್ಚಿಸುವ ಉದ್ದೇಶಕ್ಕಾಗಿ ಈ ದೇಶಗಳು ತಮ್ಮ ತಮ್ಮ ಪ್ರಭುತ್ವದ ಶಕ್ತಿಯನ್ನೂ ಬಳಸಿಕೊಳ್ಳಲಾರವು. ಏಕೆಂದರೆ, ಅವು ವಿತ್ತೀಯ ಕೊರತೆಯ ಗಡಿಯನ್ನು ಒಂದು ಮಿತಿಯಿಂದ ಆಚೆ ದಾಟಲಾರವು.
ಈ ಉದ್ದೇಶಕ್ಕಾಗಿ ಅವು ತಮ್ಮ ಹಣಕಾಸು ನೀತಿಯನ್ನಷ್ಟೇ ಬಳಸಿಕೊಳ್ಳಬಲ್ಲವು. ಆದರೆ, ಬೇಡಿಕೆಯ ಕೊರತೆ ಇರುವ ಸನ್ನಿವೇಶದಲ್ಲಿ, ಒಟ್ಟಾರೆ ಬೇಡಿಕೆಯನ್ನು ಹೆಚ್ಚಿಸುವ ಗುರಿ ಸಾಧಿಸಲು ಹಣಕಾಸು ನೀತಿಯಷ್ಟೇ ಸಾಲುವುದಿಲ್ಲ. ಪರಿಣಾಮವಾಗಿ, ಒಟ್ಟು ಬೇಡಿಕೆಯ ಕೊರತೆಯ ಪರಿಸ್ಥಿತಿ ಮುಂದುವರೆಯುತ್ತದೆ. ಬೇಡಿಕೆಗೆ ಕೊರತೆ ಇರುವ ಪರಿಸ್ಥಿತಿಯಲ್ಲಿ, ಎಷ್ಟು ಸಾಧ್ಯವೊ ಅಷ್ಟು ದೊಡ್ಡ ಮಾರುಕಟ್ಟೆಗಳುನ್ನು ಹಿಡಿಯಲು ಕಿತ್ತಾಟ ನಡೆಯುತ್ತದೆ. ತನ್ನ ಸ್ವರಕ್ಷಣಾತ್ಮಕ ವ್ಯಾಪಾರ ನೀತಿಯನ್ನು ಬೇರೆಯವರು ಸ್ವೀಕರಿಸುವಂತೆ ಮಾಡುವ ಅಮೇರಿಕಾದ ಪ್ರಯತ್ನ ಸಫಲವಾಗುವುದು ಸಾಧ್ಯವೇ ಇಲ್ಲ.
(ಈ ವಾರದ ಜನಶಕ್ತಿ ವಾರಪತ್ರಿಕೆಯಲ್ಲಿ ಪ್ರಕಟವಾದ ಲೇಖನ)
-ಪ್ರೊ.ಪ್ರಭಾತ್ ಪಟ್ನಾಯಕ್
ಅನು: ಕೆ.ಎಂ.ನಾಗರಾಜ್
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಓಬವ್ವ ಆತ್ಮ ರಕ್ಷಣಾ ಕಲೆ ಕರಾಟೆ ಯೋಜನೆಗೆ 18 ಕೋಟಿ ರೂಪಾಯಿ ಮೀಸಲು

ಸುದ್ದಿದಿನ,ಯಾದಗಿರಿ : ರಾಜ್ಯ ವಸತಿ ಶಾಲೆಗಳ ಹೆಣ್ಣು ಮಕ್ಕಳ ಆತ್ಮರಕ್ಷಣೆಗಾಗಿ ರೂಪಿಸಿರುವ ಓಬವ್ವ ಆತ್ಮರಕ್ಷಣಾ ಕಲೆ ಕರಾಟೆ ಯೋಜನೆಯ ಅನುಷ್ಠಾನಕ್ಕಾಗಿ 18 ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತಿದೆ ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ತಿಳಿಸಿದರು.
ಯಾದಗಿರಿ ಜಿಲ್ಲೆಯ ವಡಗೇರಾ ತಾಲ್ಲೂಕಿನ ಬೆಂಡೆಬೆಂಬಳಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲಾ ವಿದ್ಯಾರ್ಥಿಗಳು ನಡೆಸಿಕೊಟ್ಟ ಕರಾಟೆ ಪ್ರದರ್ಶನ ವೀಕ್ಷಿಸಿ ಮಾತನಾಡಿದ ಅವರು, ಹೆಣ್ಣು ಮಕ್ಕಳಿಗೆ ಆತ್ಮರಕ್ಷಣೆ ಕಲೆ ಅಗತ್ಯವಾಗಿದ್ದು, ಈ ಹಿನ್ನೆಲೆಯಲ್ಲಿ ಸರ್ಕಾರ ಓಬವ್ವ ಆತ್ಮರಕ್ಷಣಾ ಕಲೆ ಕರಾಟೆ ಯೋಜನೆಯನ್ನು ರಾಜ್ಯದ ಎಲ್ಲ ವಸತಿ ಶಾಲೆಗಳಲ್ಲಿ ಆರಂಭಿಸಿದೆ. ಈಗಾಗಲೇ ಒಂದು ಸಾವಿರ ಕರಾಟೆ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಮಕ್ಕಳ ಕರಾಟೆ ಕಲೆ ಹಾಗೂ ಸಮವಸ್ತ್ರಕ್ಕಾಗಿ 18 ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಬಡವರು, ಆರ್ಥಿಕವಾಗಿ ಹಿಂದುಳಿದವರು, ಅಲೆಮಾರಿಗಳ ಮಕ್ಕಳೇ ವಿಶೇಷವಾಗಿ ಈ ವಸತಿ ಶಾಲೆಗಳಿಗೆ ದಾಖಲಾಗುತ್ತಿದ್ದು, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಸರ್ಕಾರ ಬದ್ಧವಾಗಿದೆ. ಈ ಹಿನ್ನೆಲೆಯಲ್ಲಿ ವಸತಿ ಶಾಲೆಗಳನ್ನು ಮತ್ತುಷ್ಟು ಬಲಪಡಿಸಲು ಕ್ರಮ ವಹಿಸಲಾಗುವುದು ಎಂದು ಸಚಿವರು ತಿಳಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ನಟ ಮನದೀಪ್ ರಾಯ್ ನಿಧನ

ಸುದ್ದಿದಿನ ಡೆಸ್ಕ್ : ಹಿರಿಯ ಚಿತ್ರನಟ ಮನದೀಪ್ ರಾಯ್ (74 ವರ್ಷ) ಇಂದು ಬೆಳಗಿನ ಜಾವ ಅಗಲಿದ್ದಾರೆ.
ಕೆಲ ದಿನಗಳ ಹಿಂದೆ ಹೃದಯಾಘಾತಕ್ಕೀಡಾಗಿದ್ದ ಅವರು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಮನದೀಪ್ ರಾಯ್ ಹವ್ಯಾಸಿ ರಂಗಭೂಮಿ ಹಿನ್ನೆಲೆಯ ಕಲಾವಿದ. ನಟ – ನಿರ್ದೇಶಕ ಶಂಕರನಾಗ್ ಅವರ ಆತ್ಮೀಯ ಒಡನಾಡಿ. ಪೋಷಕ ಪಾತ್ರ, ಹಾಸ್ಯ ನಟರಾಗಿ 500ಕ್ಕೂ ಹೆಚ್ಚು ಸಿನಿಮಾಗಳು ಹಾಗೂ ಕಿರುತೆರೆ ಸರಣಿಗಳಲ್ಲಿ ಅಭಿನಯಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕರ್ನಾಟಕದಲ್ಲಿ ಈ ವರ್ಷ ಜನಪರ ರಾಜ್ಯ ಬಜೆಟ್ ಮಂಡನೆ ; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಸುದ್ದಿದಿನ, ಹಾವೇರಿ : ಕರ್ನಾಟಕದಲ್ಲಿ ಮುಂದಿನ ತಿಂಗಳು ಮಂಡಿಸಲಾಗುತ್ತಿರುವ ಈ ವರ್ಷದ ರಾಜ್ಯ ಬಜೆಟ್ ರೈತರು, ದೀನ ದಲಿತರು, ಯುವಕರು, ಮಹಿಳೆಯರು, ದುಡಿಯುವ ವರ್ಗ ಮತ್ತು ಜನಪರವಾಗಿರುತ್ತದೆ ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹಾವೇರಿ ಜಿಲ್ಲೆ ಶಿಗ್ಗಾಂವ್ನಲ್ಲಿ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ದುಡಿಮೆಗೆ ಯೋಗ್ಯ ಬೆಲೆ ಸಿಗುವ ರೀತಿಯಲ್ಲಿ ನಮ್ಮ ಕಾರ್ಯಕ್ರಮಗಳು ಇರುತ್ತವೆ ಎಂದರು.
ಕರ್ನಾಟಕ ರಾಜ್ಯದ ಆರ್ಥಿಕ ಅಭಿವೃದ್ಧಿಯಲ್ಲಿ ನಾವು ವೇಗವನ್ನು ಕಂಡಿದ್ದೇವೆ. ಕಳೆದ ವರ್ಷ ನಾನು ಅಧಿಕಾರ ವಹಿಸಿಕೊಂಡಾಗ 5 ಸಾವಿರ ಕೋಟಿ ರೂಪಾಯಿ ರಾಜ್ಯದ ಬೊಕ್ಕಸಕ್ಕೆ ನಮ್ಮ ನಿರ್ಧಿಷ್ಟ ಗುರಿಗೆ ಕೊರತೆಯಿತ್ತು. ಅದನ್ನು ನಾವು 5 ಸಾವಿರ ಕೋಟಿ ತುಂಬುವುದಲ್ಲದೇ, 13 ಸಾವಿರ ಕೋಟಿ ಅಧಿಕವಾಗಿ ಸಂಗ್ರಹ ಮಾಡಿದ್ದೇವೆ. ಈ ವರ್ಷವೂ ಕೂಡ ನಮ್ಮ ಹಣಕಾಸಿನ ಸಂಗ್ರಹ ಉತ್ತಮವಾಗಿದೆ ಎಂದು ಕರ್ನಾಟಕದ ಮುಖ್ಯಮಂತ್ರಿ ಹೇಳಿದರು.
ಕೋವಿಡ್ ನಂತರದಲ್ಲಿ ಆರ್ಥಿಕ ಸುಧಾರಣೆ ಆಗುತ್ತಿರುವ ಸಂದರ್ಭದಲ್ಲಿ ಕೆಳಹಂತದ ಜನಸಮುದಾಯಕ್ಕೆ ಇನ್ನಷ್ಟು ಸಹಾಯ ಮಾಡಿ, ಅವರನ್ನು ಕೂಡ ಮುಖ್ಯ ವಾಹಿನಿಗೆ ಬರಬೇಕು ಎನ್ನುವ ನಿಟ್ಟಿನಲ್ಲಿ ನಾವು ಕಾರ್ಯಕ್ರಮ ರೂಪಿಸುತ್ತಿದ್ದೇವೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
