ದಿನದ ಸುದ್ದಿ
ಬಿ.ಆರ್. ಜೋಯಪ್ಪ ಅವರ ‘ಕಾಟಿಬೆಟ್ಟದ ಕಥೆಗಳು’ ಪುಸ್ತಕ ಲೋಕಾರ್ಪಣೆ

ಸುದ್ದಿದಿನ, ಮಡಿಕೇರಿ : ಕೊಡಗು ಲೇಖಕ ಮತ್ತು ಕಲಾವಿದರ ಬಳಗ ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜು ಇವರ ಸಂಯುಕ್ತ ಆಶ್ರಯದಲ್ಲಿ ಸಾಹಿತಿ ಬಿ.ಆರ್.ಜೋಯಪ್ಪ ಅವರು ಬರೆದ ‘ಕಾಟಿಬೆಟ್ಟದ ಕಥೆಗಳು’ ಪುಸ್ತಕ ಲೋಕಾರ್ಪಣೆ ಸಮಾರಂಭವು ಶನಿವಾರ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಸಭಾಂಗಣದಲ್ಲಿ ನಡೆಯಿತು.
ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ರಂಗಕರ್ಮಿ ಶಿವಮೊಗ್ಗದ ಕವಿ ಕಾವ್ಯ ಟ್ರಸ್ಟ್ನ ಪ್ರಸನ್ನ ಅವರು ಸಣ್ಣ ಊರಿನಲ್ಲಿದ್ದು, ಸಣ್ಣ ಸಣ್ಣ ವಿಚಾರಗಳನ್ನು ಅದ್ಭುತ ಸಾಹಿತ್ಯ ರೂಪದಲ್ಲಿ ಪುಸ್ತಕದಲ್ಲಿ ಅನಾವರಣ ಮಾಡಿದ್ದಾರೆ ಎಂದರು. ಬಿ.ಆರ್.ಜೋಯಪ್ಪ ಅವರ ಬಾಲ್ಯದಲ್ಲಿ ಕಂಡಂತಹ ಅನುಭವವು ಕಥೆ ರೂಪದಲ್ಲಿ ಮೂಡಿ ಬಂದಿರುವುದು ಸಂತಸದ ವಿಷಯವಾಗಿದೆ ಎಂದರು.
ಮನುಷ್ಯನ ಜೀವನದಲ್ಲಿ ಪ್ರಕೃತಿ ಮತ್ತು ಪುರುಷ ಸಂಬಂಧದ ಬಾಂಧವ್ಯವನ್ನು ಈ ಪುಸ್ತಕವು ತೋರಿಸಿಕೊಡುತ್ತದೆ. ಸಭ್ಯತೆಯ ಬಾಲ್ಯ ಕಾಲದಲ್ಲಿ ಪ್ರಕೃತಿ ಮತ್ತು ಮನುಷ್ಯನ ಒಡನಾಟ ಮತ್ತು ಮನುಷ್ಯ ಬೆಳೆದಂತೆ ಪ್ರಕೃತಿಯ ಮೇಲೆ ಅತಿಕ್ರಮಣವಾಗುತ್ತ ಪ್ರಕೃತಿಯನ್ನು ವಿಕಾರಗೊಳಿಸುವ ಘಟನೆಗಳು ಈ ಪುಸ್ತಕದಲ್ಲಿ ಮೂಡಿಬಂದಿದೆ ಎಂದು ಅವರು ನುಡಿದರು.
ಶಿಕ್ಷಣ ಬೌದ್ಧಿಕ ಜ್ಞಾನವೂ ಹೌದು ಹಾಗೂ ಹೃದಯದ ಅನುಭವವು ಹೌದು. ಇಂದಿನ ವಿದ್ಯಾರ್ಥಿಗಳು ಅವಸರದ ಬದುಕಿನಿಂದ ಹೊರಬಂದು ತಮ್ಮ ಪರಿಸರವನ್ನು ಗಮನಿಸಿ ನೆರೆ ಹೊರೆಯವರೊಂದಿಗೆ ಉತ್ತಮ ಬಾಂಧವ್ಯ ಹೊಂದಿ ನಮ್ಮ ಭಾಷೆ, ನಮ್ಮ ಪರಿಸರದ ಬಗ್ಗೆ ಕೆಲಸ ಮಾಡಬೇಕು. ಬೇಕಾದದ್ದನ್ನು ಇಟ್ಟುಕೊಂಡು ಬೇಡವಾದದನ್ನು ಬಿಟ್ಟು ಸಮೃದ್ಧ ನಾಡನ್ನು ಕಟ್ಟುವಂತಹ ಕೆಲಸಗಳು ಮುಂದುವರೆಯಬೇಕು ಎಂದು ತಮ್ಮ ಅನುಭವವನ್ನು ಹಂಚಿಕೊಂಡರು.
ಹೆಸರಾಂತ ಕಥೆಗಾರರು ಹಾಗೂ ಮೈಸೂರು ಆಕಾಶವಾಣಿ ಕಾರ್ಯಕ್ರಮ ನಿರ್ವಾಹಕರಾದ ಅಬ್ದುಲ್ ರಶೀದ್ ಅವರು ಮಾತನಾಡಿ ಕಾಟಿಬೆಟ್ಟದ ಕಥೆಗಳು ಪುಸ್ತಕದಲ್ಲಿ ಬಿ.ಆರ್.ಜೋಯಪ್ಪ ಅವರು ತಮ್ಮ ಬಾಲ್ಯದ ತಮ್ಮ ಮನೆಯ ಪರಿಸರದ ಸುತ್ತಮುತ್ತಲಿನ ಆಗು ಹೋಗುಗಳು ಕಥೆಯ ರೂಪದಲ್ಲಿ ಅನಾವರಣಗೊಳಿಸಿದ್ದಾರೆ. ಕೊಡಗಿನ ಜೀವನ ಶೈಲಿ, ತಮ್ಮ ಸುತ್ತಮುತ್ತಲಿನ ಅನುಭವ, ಜೀವನ ಶಿಕ್ಷಣವನ್ನು ಕೃತಿಯಲ್ಲಿ ತೋರಿಸಿಕೊಟ್ಟಿದ್ದಾರೆ.
ವಿದ್ಯಾರ್ಥಿ ದಿನದಲ್ಲಿ ಸಾಹಿತ್ಯದ ಪ್ರಭಾವದಿಂದ ತಮಗಾದ ಅನುಭವವನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಳ್ಳುತ್ತ ಪ್ರಸ್ತುತ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳು ತಮ್ಮಲ್ಲಿ ಇರುವ ಸಾಹಿತ್ಯದ ಅಭಿರುಚಿಯನ್ನು ವೃದ್ಧಿಪಡಿಸಿಕೊಂಡು ತಂತ್ರಜ್ಞಾನವನ್ನು ತಮ್ಮ ಬೆಳವಣಿಗೆಗೆ ಉಪಯುಕ್ತ ರೀತಿಯಲ್ಲಿ ಬಳಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷರಾದ ಟಿ.ಪಿ.ರಮೇಶ್ ಅವರು ಪ್ರಯತ್ನಶೀಲ ಬದುಕಿನಲ್ಲಿ ಯಶಸ್ಸಿನ ಗುಟ್ಟು ಅಡಗಿದೆ ಎಂಬುದನ್ನು ಕಾಟಿಬೆಟ್ಟದ ಕಥೆಗಳು ಪುಸ್ತಕದಲ್ಲಿ ಅಡಕವಾಗಿದೆ. ಬಿ.ಆರ್.ಜೋಯಪ್ಪ ಅವರು ಶಿಕ್ಷಕರಾಗಿ, ಲೇಖಕರಾಗಿ, ಅವರ ಪರಿಶ್ರಮದ ಅನಾವರಣ, ಗ್ರಾಮೀಣ ಪರಿಸರ, ಬಡತನದ ಅನಾವರಣ, ನಾಟಿ ಔಷಧಿಯ ಮಹತ್ವ, ಅವರ ಕಾಲಘಟ್ಟದ ಬದುಕಿನ ಚಿತ್ರಣವನ್ನು ಸೊಗಸಾಗಿ ಈ ಪುಸ್ತಕದಲ್ಲಿ ಅನಾವರಣಗೊಳಿಸಿದ್ದಾರೆ ಎಂದು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು.
ಕಥೆಗಳ ಲೇಖಕರಾದ ಬಿ.ಆರ್.ಜೋಯಪ್ಪ ಅವರುಕಾಟಿಬೆಟ್ಟದ ಈ ಪುಸ್ತಕ ರಚಿಸಲು ತಮಗೆ ಪ್ರೇರಣೆ ನೀಡಿದ ಮಹನೀಯರಿಗೆ ಕೃತಜ್ಞತೆ ಸಲ್ಲಿಸುತ್ತಾ ಕಥೆ ಬರೆಯುವ ಸಂದರ್ಭವನ್ನು ಹಂಚಿಕೊಳ್ಳುತ್ತಾ ತಮ್ಮ ಕುಟುಂಬ ಸದಸ್ಯರ ಸಹಕಾರ ಈ ಮುಂಚೆ ತಾವು ಬರೆದ ಪುಸ್ತಕಗಳ ಮಾಹಿತಿಗಳನ್ನು ನೀಡಿ ಪುಸ್ತಕವು ಉತ್ತಮ ರೀತಿಯಲ್ಲಿ ಮೂಡಿಬರಲು ಸಹಕಾರ ನೀಡಿದ ಎಲ್ಲಾ ಮಾರ್ಗದರ್ಶಕರಿಗೆ ವಿಮರ್ಶಕರಿಗೆ ಧನ್ಯವಾದ ತಿಳಿಸಿದರು.
ಕೊಡಗು ಲೇಖಕ ಮತ್ತು ಕಲಾವಿದರ ಬಳಗದ ಅಧ್ಯಕ್ಷರಾದ ಎಂ.ಪಿ.ಕೇಶವ ಕಾಮತ್ ಅವರು ಮಾತನಾಡಿ ಶಾಲಾ ಕಾಲೇಜುಗಳಲ್ಲಿ ಸಾಹಿತ್ಯದ ಬೆಳವಣಿಗೆ ಆಗಬೇಕೆಂಬ ಉದ್ದೇಶದಿಂದ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪಿ.ಆರ್.ವಿಜಯ, ಚಿಂತನ-ಚಿತ್ತಾರ ಪ್ರಕಾಶನದ ಡಿ.ನಿಂಗರಾಜು ಚಿತ್ತಣ್ಣನವರ್, ಲೇಖಕರ ಕುಟುಂಬಸ್ಥರು ಇತರರು ಇದ್ದರು. ಕೊಡಗು ಲೇಖಕ ಮತ್ತು ಕಲಾವಿದರ ಬಳಗದ ಪ್ರಧಾನ ಕಾರ್ಯದರ್ಶಿ ವಿಲ್ಪರ್ಡ್ ಕ್ರಾಸ್ತಾ ನಿರೂಪಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ನಟ ಮನದೀಪ್ ರಾಯ್ ನಿಧನ

ಸುದ್ದಿದಿನ ಡೆಸ್ಕ್ : ಹಿರಿಯ ಚಿತ್ರನಟ ಮನದೀಪ್ ರಾಯ್ (74 ವರ್ಷ) ಇಂದು ಬೆಳಗಿನ ಜಾವ ಅಗಲಿದ್ದಾರೆ.
ಕೆಲ ದಿನಗಳ ಹಿಂದೆ ಹೃದಯಾಘಾತಕ್ಕೀಡಾಗಿದ್ದ ಅವರು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಮನದೀಪ್ ರಾಯ್ ಹವ್ಯಾಸಿ ರಂಗಭೂಮಿ ಹಿನ್ನೆಲೆಯ ಕಲಾವಿದ. ನಟ – ನಿರ್ದೇಶಕ ಶಂಕರನಾಗ್ ಅವರ ಆತ್ಮೀಯ ಒಡನಾಡಿ. ಪೋಷಕ ಪಾತ್ರ, ಹಾಸ್ಯ ನಟರಾಗಿ 500ಕ್ಕೂ ಹೆಚ್ಚು ಸಿನಿಮಾಗಳು ಹಾಗೂ ಕಿರುತೆರೆ ಸರಣಿಗಳಲ್ಲಿ ಅಭಿನಯಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕರ್ನಾಟಕದಲ್ಲಿ ಈ ವರ್ಷ ಜನಪರ ರಾಜ್ಯ ಬಜೆಟ್ ಮಂಡನೆ ; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಸುದ್ದಿದಿನ, ಹಾವೇರಿ : ಕರ್ನಾಟಕದಲ್ಲಿ ಮುಂದಿನ ತಿಂಗಳು ಮಂಡಿಸಲಾಗುತ್ತಿರುವ ಈ ವರ್ಷದ ರಾಜ್ಯ ಬಜೆಟ್ ರೈತರು, ದೀನ ದಲಿತರು, ಯುವಕರು, ಮಹಿಳೆಯರು, ದುಡಿಯುವ ವರ್ಗ ಮತ್ತು ಜನಪರವಾಗಿರುತ್ತದೆ ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹಾವೇರಿ ಜಿಲ್ಲೆ ಶಿಗ್ಗಾಂವ್ನಲ್ಲಿ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ದುಡಿಮೆಗೆ ಯೋಗ್ಯ ಬೆಲೆ ಸಿಗುವ ರೀತಿಯಲ್ಲಿ ನಮ್ಮ ಕಾರ್ಯಕ್ರಮಗಳು ಇರುತ್ತವೆ ಎಂದರು.
ಕರ್ನಾಟಕ ರಾಜ್ಯದ ಆರ್ಥಿಕ ಅಭಿವೃದ್ಧಿಯಲ್ಲಿ ನಾವು ವೇಗವನ್ನು ಕಂಡಿದ್ದೇವೆ. ಕಳೆದ ವರ್ಷ ನಾನು ಅಧಿಕಾರ ವಹಿಸಿಕೊಂಡಾಗ 5 ಸಾವಿರ ಕೋಟಿ ರೂಪಾಯಿ ರಾಜ್ಯದ ಬೊಕ್ಕಸಕ್ಕೆ ನಮ್ಮ ನಿರ್ಧಿಷ್ಟ ಗುರಿಗೆ ಕೊರತೆಯಿತ್ತು. ಅದನ್ನು ನಾವು 5 ಸಾವಿರ ಕೋಟಿ ತುಂಬುವುದಲ್ಲದೇ, 13 ಸಾವಿರ ಕೋಟಿ ಅಧಿಕವಾಗಿ ಸಂಗ್ರಹ ಮಾಡಿದ್ದೇವೆ. ಈ ವರ್ಷವೂ ಕೂಡ ನಮ್ಮ ಹಣಕಾಸಿನ ಸಂಗ್ರಹ ಉತ್ತಮವಾಗಿದೆ ಎಂದು ಕರ್ನಾಟಕದ ಮುಖ್ಯಮಂತ್ರಿ ಹೇಳಿದರು.
ಕೋವಿಡ್ ನಂತರದಲ್ಲಿ ಆರ್ಥಿಕ ಸುಧಾರಣೆ ಆಗುತ್ತಿರುವ ಸಂದರ್ಭದಲ್ಲಿ ಕೆಳಹಂತದ ಜನಸಮುದಾಯಕ್ಕೆ ಇನ್ನಷ್ಟು ಸಹಾಯ ಮಾಡಿ, ಅವರನ್ನು ಕೂಡ ಮುಖ್ಯ ವಾಹಿನಿಗೆ ಬರಬೇಕು ಎನ್ನುವ ನಿಟ್ಟಿನಲ್ಲಿ ನಾವು ಕಾರ್ಯಕ್ರಮ ರೂಪಿಸುತ್ತಿದ್ದೇವೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಸಂಸತ್ತಿನ ಬಜೆಟ್ ಅಧಿವೇಶನದ ಹಿನ್ನೆಲೆ ; ಇದೇ 30ರಂದು ಸರ್ವಪಕ್ಷಗಳ ಸಭೆ

ಸುದ್ದಿದಿನ ಡೆಸ್ಕ್ : ಸಂಸತ್ತಿನ ಮುಂಬರುವ ಬಜೆಟ್ ಅಧಿವೇಶನದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇದೇ 30ರಂದು ಸರ್ವಪಕ್ಷಗಳ ಸಭೆಯನ್ನು ಕರೆದಿದೆ. ಸಂಸತ್ ಭವನದ ಸಂಕೀರ್ಣದಲ್ಲಿ ಸೋಮವಾರ ಮಧ್ಯಾಹ್ನ 12 ಗಂಟೆಗೆ ಸಭೆ ನಡೆಯಲಿದೆ.
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ, ಕೇಂದ್ರ ಸಚಿವರು ಮತ್ತು ಸಂಸತ್ತಿನ ಎರಡೂ ಸದನಗಳನ್ನು ಪ್ರತಿನಿಧಿಸುವ ಸದನ ನಾಯಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಸಭೆಯಲ್ಲಿ ಸರ್ಕಾರ ಸಂಸತ್ತಿನ ಉಭಯ ಸದನಗಳ ಸುಗಮ ಕಲಾಪಕ್ಕೆ ಎಲ್ಲ ರಾಜಕೀಯ ಪಕ್ಷಗಳ ಸಹಕಾರವನ್ನು ಕೋರಲಿದೆ. ಸಂಸತ್ತಿನ ಬಜೆಟ್ ಅಧಿವೇಶನ ಇದೇ 31ರಿಂದ ಆರಂಭವಾಗಲಿದೆ. ಮೊದಲ ದಿನ ಬೆಳಿಗ್ಗೆ 11 ಗಂಟೆಗೆ ಸೆಂಟ್ರಲ್ ಹಾಲ್ ನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡುವರು.
ಅದೇ ದಿನವೇ ಆರ್ಥಿಕ ಸಮೀಕ್ಷೆಯನ್ನೂ ಸಹ ಮಂಡಿಸಲಾಗುವುದು. ಫೆಬ್ರವರಿ 1ರಂದು 2023-24ನೇ ಸಾಲಿನ ಕೇಂದ್ರ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆ ಮಾಡಲಿದ್ದಾರೆ.
ಬಜೆಟ್ ಅಧಿವೇಶನ ಏಪ್ರಿಲ್ 6ವರೆಗೆ ನಡೆಯಲಿದ್ದು, ಸುಮಾರು 66 ದಿನಗಳಲ್ಲಿ 27 ಕಲಾಪಗಳು ನಡೆಯಲಿದೆ. ಮೊದಲ ಅವಧಿಯಲ್ಲಿ ಅಧಿವೇಶನ ಫೆಬ್ರವರಿ 13ರವರೆಗೆ ನಡೆಯಲಿದೆ. ಫೆಬ್ರವರಿ 14ರಿಂದ ಮಾರ್ಚ್ 12ರವರೆಗೆ ಅಧಿವೇಶನಕ್ಕೆ ಬಿಡುವು ಇರಲಿದೆ ಆನಂತರ ಮಾರ್ಚ್ 13ರಿಂದ ಆರಂಭವಾಗುವ ಅಧಿವೇಶನ ಏಪ್ರಿಲ್ 6ಕ್ಕೆ ಕೊನೆಗೊಳ್ಳಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980336243
