ದಿನದ ಸುದ್ದಿ
ಶರಾವತಿ ಉಳಿಸಿ | ಶರಾವತಿ ನದಿ ಎಂಬುದು ಮಲೆನಾಡಿನ ನಾಡಿ ಮಿಡಿತ

ಶರಾವತಿ ನದಿ ಉಳಿಸಿ ಹೋರಾಟ ಒಕ್ಕೂಟ
ಮಾನ್ಯರೇ ,
ಶರಾವತಿ ನದಿ ಎಂಬುದು ಮಲೆನಾಡಿನ ನಾಡಿ ಮಿಡಿತ. ಮಲೆನಾಡಿನ ಬದುಕಿನ ಜೊತೆ ಹಾಸುಹೊಕ್ಕಾಗಿರುವ ಮತ್ತು ಮಲೆನಾಡಿನ ಹೆಗ್ಗುರುತಾಗಿ ಬೆಳೆದುಬಂದಿರುವ ಜೀವನದಿ ಅದು. ಅದು ಸೃಷ್ಟಿಸುವ ಜೋಗ ಜಲಪಾತದ ಸೌಂದರ್ಯದಂತೆಯೇ ಅದರ ಹೆಸರೇ ನಮಗೆ ಒಂದು ಐಡೆಂಟಿಟಿಯನ್ನು ತಂದುಕೊಟ್ಟಿದೆ. ಸಾಲು ಸಾಲು ಜಲಾಶಯಗಳು ಮುಳುಗಿಸಿದ ಬದುಕಿನ ಹೊರತಾಗಿಯೂ ಅದರೊಂದಿಗೆ ಮಲೆನಾಡಿನ ಮಣ್ಣಿನಮಕ್ಕಳು ಹೊಂದಿರುವ ಕಳ್ಳುಬಳ್ಳಿಯ ಸಂಬಂಧ ಕಡಿದುಕೊಂಡಿಲ್ಲ. ಹಾಗಾಗಿ ಇದು ಅಮ್ಮ-ಮಕ್ಕಳ ಅನುಬಂಧ.
ಆದರೆ, ಇಂತಹ ನಮ್ಮೆಲ್ಲರ ಬದುಕಿನ ಭಾಗವಾಗಿರುವ ನದಿಗೆ ಈಗ ಅಪಾಯ ಬಂದೊದಗಿದೆ. ಆ ನದಿಯ ಲಿಂಗನಮಕ್ಕಿ ಅಣೆಕಟ್ಟೆಯಿಂದ ಸುಮಾರು 400 ಕಿ.ಮೀ ದೂರದ ಬೆಂಗಳೂರಿಗೆ ನೀರು ಒಯ್ಯುವ ಕುರಿತ ತ್ಯಾಗರಾಜ್ ಸಮಿತಿ ವರದಿಯ ಪ್ರಕಾರ, ಯೋಜನೆಯ ಡಿಪಿಆರ್(ವಿಸ್ತೃತ ಯೋಜನಾ ವರದಿ) ತಯಾರಿಸುವಂತೆ ರಾಜ್ಯ ಸರ್ಕಾರದ ಮಾನ್ಯ ಉಪ ಮುಖ್ಯಮಂತ್ರಿಗಳಾದ ಡಾ ಜಿ ಪರಮೇಶ್ವರ್ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಹಾಗೆ ನೋಡಿದರೆ, 2010ರಷ್ಟು ಹಿಂದೆಯೇ ಈ ಬಗ್ಗೆ ಯೋಚಿಸಿದ್ದ ಅಂದಿನ ರಾಜ್ಯ ಸರ್ಕಾರ, ತ್ಯಾಗರಾಜ್ ನೇತೃತ್ವದಲ್ಲಿ ಒಂಭತ್ತು ಮಂದಿ ತಜ್ಞರ ಸಮಿತಿ ರಚಿಸಿ, ಬೆಳೆಯುತ್ತಿರುವ ಬೆಂಗಳೂರಿಗೆ ಕುಡಿಯುವ ನೀರು ಒದಗಿಸುವ ಮೂಲಕಗಳ ಕುರಿತು ವರದಿ ನೀಡುವಂತೆ ಸೂಚಿಸಿತ್ತು. ಸಾಕಷ್ಟು ನೀರು ಲಭ್ಯವಿರುವ ಮತ್ತು ಅಂತಾರಾಜ್ಯ ವಿವಾದಗಳಿಲ್ಲದ ಲಿಂಗನಮಕ್ಕಿ ಜಲಾಶಯದಿಂದ ಶರಾವತಿ ನದಿ ನೀರನ್ನು ಒಯ್ಯುವುದು ಮತ್ತು ಹಂತಹಂತವಾಗಿ ಶರಾವತಿ ಕಣಿವೆಯ ವಿದ್ಯುತ್ ಉತ್ಪಾದನೆ ಸ್ಥಗಿತಗೊಳಿಸಿ ಸಂಪೂರ್ಣ ನೀರನ್ನು ಬೆಂಗಳೂರು ಮೈಸೂರು ಭಾಗದ ಹಲವು ನಗರಗಳಿಗೆ ಕುಡಿಯುವ ನೀರು ಸರಬರಾಜು ಮಾಡಬಹುದು ಎಂದು ಸಮಿತಿ 2013ರ ತನ್ನ ವರದಿಯಲ್ಲಿ ಹೇಳಿತ್ತು.
ಇದೀಗ ಮಾನ್ಯ ಉಪಮುಖ್ಯಮಂತ್ರಿಗಳ ಪ್ರಸ್ತಾಪದೊಂದಿಗೆ ಆ ವರದಿಯನ್ನೇ ಮುಂದಿಟ್ಟುಕೊಂಡು ಯೋಜನೆ ಅನುಷ್ಠಾನಕ್ಕೆ ಸರ್ಕಾರ ಮುಂದಾಗಿರುವುದು ಸ್ಪಷ್ಟ.
ಆದರೆ, ಮಲೆನಾಡಿಗರಾಗಿ, ಲಿಂಗನಮಕ್ಕಿಯೂ ಸೇರಿದಂತೆ ಶರಾವತಿ ಕಣಿವೆಯ ಸರಣಿ ಜಲಾಶಯಗಳಿಗಾಗಿ ನಮ್ಮ ಮನೆಮಠ, ಆಸ್ತಿಪಾಸ್ತಿ ಕಳೆದುಕೊಂಡು, ಬೀದಿಗೆ ಬಿದ್ದಿರುವ ಮುಳುಗಡೆ ಸಂತ್ರಸ್ತರಾಗಿ, ಮಲೆನಾಡು ವ್ಯಾಪ್ತಿಯಲ್ಲಿದ್ದೂ ತೀವ್ರ ಬರ ಮತ್ತು ಕುಡಿಯುವ ನೀರಿನ ಹಾಹಾಕಾರ ಎದುರಿಸುತ್ತಿರುವ ನದಿ ತಟದ ನತದೃಷ್ಟರಾಗಿ, ಈ ಯೋಜನೆಗೆ ನಮ್ಮ ಸಂಪೂರ್ಣ ವಿರೋಧ ಇದೆ.
12 ಸಾವಿರ ಕೋಟಿ ರೂಪಯಿ ಬೃಹತ್ ಮೊತ್ತದ ಯೋಜನೆಯ ಹಿಂದೆ ಯಾವುದೇ ವೈಜ್ಞಾನಿಕ, ಕಾರ್ಯಸಾಧುವಾದ ಯೋಚನೆ, ಚಿಂತನೆ ಇರದೆ, ಕೇವಲ ರಾಜಕೀಯ ಲಾಭ ಮತ್ತು ಸಾರ್ವಜನಿಕ ಹಣವನ್ನು ಲೂಟಿ ಹೊಡೆಯುವ ಲೆಕ್ಕಾಚಾರ ಇದರ ಹಿಂದಿದೆ ಮತ್ತು ಪರಿಸರ ಮತ್ತು ಮಲೆನಾಡಿನ ಜನಜೀವನದ ಮೇಲು ಉಂಟಾಗಬಹುದಾದ ಪರಿಣಾಮದ ಕಾರಣದಿಂದಾಗಿ ಇಂತಹ ಮೂರ್ಖತನದ ಪ್ರಸ್ತಾಪವನ್ನು ಕೂಡಲೇ ಕೈಬಿಡಬೇಕು ಮತ್ತು ಮೂಲಭೂತವಾಗಿ ವಿದ್ಯುತ್ ಉತ್ಪಾದನೆಯ ಉದ್ದೇಶಕ್ಕಾಗಿಯೇ ನಿರ್ಮಾಣವಾಗಿರುವ ಶರಾವತಿ ಕಣಿವೆಯ ಲಿಂಗನಮಕ್ಕಿ ಮತ್ತಿತರ ಜಲಾಶಯಗಳ ನೀರನ್ನು ಆ ಉದ್ದೇಶಕ್ಕಲ್ಲದೆ ಅನ್ಯ ಉದ್ದೇಶಕ್ಕೆ ಬಳಸುವುದೇ ಆದರೆ, ನದಿ ತಟದಲ್ಲೇ ಕುಡಿಯುವ ನೀರಿನ ತೀವ್ರ ಬಿಕ್ಕಟ್ಟು ಎದುರಿಸುತ್ತಿರುವ ಜನರಿಗೆ ಮತ್ತು ಕಣಿವೆಯ ಜಲವಿದ್ಯುತ್ ಯೋಜನೆಗಳಿಂದ ಸಂತ್ರಸ್ತರಾಗಿ ಸೂಕ್ತ ಪರಿಹಾರವೂ ಕಾಣದೆ, ಅಲ್ಲಲ್ಲಿ ಬರಪೀಡಿತ ಒಣಭೂಮಿ ಬೇಸಾಯ ಮಾಡಿಕೊಂಡಿರುವ ಸಂತ್ರಸ್ತರ ಜಮೀನುಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಬೇಕು ಎಂಬ ಬೇಡಿಕೆ ಮುಂದಿಟ್ಟುಕೊಂಡು ಈ ಶರಾವತಿ ನದಿ ಉಳಿಸಿ ಹೋರಾಟ ಒಕ್ಕೂಟ, ಮಲೆನಾಡಿನ ಸಾಕ್ಷಿಪ್ರಜ್ಞೆಯಂತಿರುವ ಹಿರಿಯ ಸಾಹಿತಿ ಮತ್ತು ಶರಾವತಿ ಕಣಿವೆಯ ಬದುಕನ್ನು ಕಂಡುಂಡ ಶ್ರೀಯುತ ನಾ. ಡಿಸೋಜ ಅವರ ನೇತೃತ್ವದಲ್ಲಿ ಅಸ್ತಿತ್ವಕ್ಕೆ ಬಂದಿದೆ.
ಮಾನ್ಯರ ನೇತೃತ್ವದಲ್ಲಿ ಸಾಗರದಲ್ಲಿ 22-06-19ರಂದು ನಡೆದ ಒಕ್ಕೂಟದ ಮೊದಲ ಸಮಾಲೋಚನಾ ಸಭೆಯಲ್ಲಿ ಉಪ ಮುಖ್ಯಮಂತ್ರಿಗಳ ಪ್ರಸ್ತಾಪವನ್ನು ವಿರೋಧಿಸಿ, ಮಲೆನಾಡಿನಾದ್ಯಂತ ದಿಟ್ಟ ಹೋರಾಟ ನಡೆಸುವ ಮತ್ತು ಸರ್ಕಾರಕ್ಕೆ ನಮ್ಮ ಆಕ್ರೋಶ ವ್ಯಕ್ತಪಡಿಸುವ ಮಾರ್ಗವಾಗಿ ಜುಲೈ 10ರಂದು ಸಂಪೂರ್ಣ ಶಿವಮೊಗ್ಗ ಜಿಲ್ಲಾ ಬಂದ್ ನಡೆಸುವ ಕುರಿತು ನಿರ್ಧರಿಸಲಾಯಿತು.
ಶರಾವತಿ ನದಿ ನೀರನ್ನು ಬೆಂಗಳೂರಿಗೆ ಕೊಂಡೊಯ್ಯುವ ಯೋಜನೆ ಕೇವಲ ಶರಾವತಿ ಕಣಿವೆಯ ಜನರ ಸಮಸ್ಯೆ ಅಲ್ಲ. ಇದು ಇಡೀ ಮಲೆನಾಡಿನ ಜೀವ ಪರಿಸರ ಮತ್ತು ಜನಜೀವನದ ಭವಿಷ್ಯದ ಪ್ರಶ್ನೆ. ಹಾಗಾಗಿ ಸರ್ಕಾರದ ವಿವೇಚನಾಹೀನ ಯೋಜನೆಯ ಭವಿಷ್ಯದ ಗಂಭೀರ ಪರಿಣಾಮಗಳನ್ನು ಅರಿತು ಇಡೀ ಮಲೆನಾಡಿನ ಜನ ಈ ಹೋರಾಟಕ್ಕೆ ದನಿಗೂಡಿಸಬೇಕಿದೆ.
ಶಿವಮೊಗ್ಗ ನಗರ ಮತ್ತು ಜಿಲ್ಲೆಯ ಸಮಸ್ತ ಜನತೆ ಈ ಹೋರಾಟಕ್ಕೆ ಬೆಂಬಲ ನೀಡಿ, ಜುಲೈ 10ರ ಬಂದ್ ಬೆಂಬಲಿಸಬೇಕಾಗಿ ಒಕ್ಕೂಟ ಮನವಿ ಮಾಡುತ್ತದೆ. ಜಿಲ್ಲೆಯ ಧಾರ್ಮಿಕ ಮಠ-ಮಾನ್ಯಗಳ ಮುಖಂಡರು ಮತ್ತು ಮಠಾಧೀಶರು, ಎಲ್ಲಾ ರಾಜಕೀಯ ಪಕ್ಷಗಳು ಮತ್ತು ಮುಖಂಡರು, ಶಾಲಾ-ಕಾಲೇಜುಗಳ ಆಡಳಿತ ಮಂಡಳಿಗಳು, ಆಟೋ ಚಾಲಕರ ಸಂಘ, ಬಸ್ ಮಾಲೀಕರ ಸಂಘ, ಸರಕು ಸಾಗಣೆ ವಾಹನ ಮಾಲೀಕರ ಸಂಘ, ಕನ್ನಡ ಸಾಹಿತ್ಯ ಪರಿಷತ್ ಸೇರಿದಂತೆ ವಿವಿಧ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘ- ಸಂಸ್ಥೆಗಳು, ಸರ್ಕಾರಿ ನೌಕರರ ಸಂಘ, ಅಡಿಕೆ ಮಂಡಿ ಮಾಲೀಕರ ಸಂಘ ಮತ್ತು ಅಡಿಕೆ ಬೆಳೆಗಾರರ ಸಂಘಟನೆಗಳು, ಅಂಗಡಿ ಮುಂಗಟ್ಟು ಮಾಲೀಕರು, ವ್ಯಾಪಾರಸ್ಥರು ಮತ್ತು ಹೋಟೆಲ್ ಉದ್ಯಮಿಗಳು, ವಿದ್ಯಾರ್ಥಿ ಸಂಘಟನೆಗಳು, ವಿವಿಧ ಜಾತಿ- ಜನಾಂಗ ಸಂಘಟನೆಗಳು, ಮುಖ್ಯವಾಗಿ ಜಿಲ್ಲೆಯ ಇಡೀ ಮಾಧ್ಯಮ ಸ್ನೇಹಿತರು ಸದುದ್ದೇಶದದ ಮತ್ತು ಪಕ್ಷಾತೀತವಾದ ಹೋರಾಟಕ್ಕೆ ಬೆಂಬಲವಾಗಿ ನಿಲ್ಲಬೇಕು ಎಂದು ಒಕ್ಕೂಟ ಕೋರುತ್ತದೆ.
ಸರ್ಕಾರ ಸಂಪೂರ್ಣ ತನ್ನ ಪ್ರಸ್ತಾವನೆಯಿಂದ ಹಿಂದೆ ಸರಿದು, ತ್ಯಾಗರಾಜ್ ಸಮಿತಿ ವರದಿಯನ್ನು ಅಧಿಕೃತವಾಗಿ ತಿರಸ್ಕರಿಸಬೇಕು ಮತ್ತು ಭವಿಷ್ಯದಲ್ಲಿ ಕೂಡ ಶರಾವತಿ ನದಿ ಕಣಿವೆಯ ನೀರನ್ನು ಕಣಿವೆ ವ್ಯಾಪ್ತಿ ಹೊರಗಿನ ಬಳಕೆಗೆ ಮುಂದಾಗುವುದಿಲ್ಲ ಎಂದು ಭರವಸೆ ನೀಡಬೇಕು ಎಂಬ ಹಕ್ಕೊತ್ತಾಯಕ್ಕೆ ದನಿಗೂಡಿಸಬೇಕು ಎಂದು ಮನವಿ ಮಾಡುತ್ತದೆ.
ಹಕ್ಕೊತ್ತಾಯಗಳು
- ಶರಾವತಿ ನೀರನ್ನು ಬೆಂಗಳೂರಿಗೆ ಒಯ್ಯುವ ಪ್ರಸ್ತಾಪವನ್ನು ಸಾರಾಸಗಟಾಗಿ ಕೈಬಿಡಬೇಕು ಮತ್ತು ತ್ಯಾಗರಾಜ್ ವರದಿಯನ್ನು ಅಧಿಕೃತವಾಗಿ ತಿರಸ್ಕರಿಸಬೇಕು.
- ಶರಾವತಿ ಕಣಿವೆಯ ಆಸುಪಾಸಿನ ವಿವಿಧ ಯೋಜನೆಗಳ ಸಂತ್ರಸ್ತರು ಸೇರಿದಂತೆ ಆ ಭಾಗದ ಕುಡಿಯುವ ನೀರು ಮತ್ತು ಒಣ ಭೂಮಿಗೆ ನೀರಾವರಿ ಒದಗಿಸಲು ಜಲಾಶಯದ ನೀರು ಬಳಕೆಗೆ ಆದ್ಯತೆ ನೀಡಬೇಕು. ಈ ಕುರಿತು ಸರ್ಕಾರ ಕೂಡಲೇ ಡಿಪಿಆರ್ ತಯಾರಿಸಲು ಆದೇಶ ನೀಡಬೇಕು.
ಸಹಿಗಳು:
ಡಾ. ನಾ ಡಿಸೋಜಾ, ಹಿರಿಯ ಸಾಹಿತಿಗಳು (ಗೌರವಾಧ್ಯಕ್ಷರು),ಪ್ರೊ. ಶ್ರೀಕಂಠ ಕೂಡಿಗೆ ಚಿಂತಕರು,ಶಂಕರ್ ಶರ್ಮಾ, ಇಂಧನ ತಜ್ಞರು,
ಹರ್ಷಕುಮಾರ್ ಕುಗ್ವೆ,ಶಶಿ ಸಂಪಳ್ಳಿ,ಎಚ್ ಬಿ ರಾಘವೇಂದ್ರ,ಜಿ ಟಿ ಸತ್ಯನಾರಾಯಣ ಕರೂರು,
ಅಜಯ್ ಶರ್ಮಾ,ವಿನ್ಸೆಂಟ್ ರೋಡ್ರಿಗಸ್,ಕನ್ನಪ್ಪ ಈಡಿಗ,ತಾರಾಮೂರ್ತಿ,
ಇತರರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ನಟ ಮನದೀಪ್ ರಾಯ್ ನಿಧನ

ಸುದ್ದಿದಿನ ಡೆಸ್ಕ್ : ಹಿರಿಯ ಚಿತ್ರನಟ ಮನದೀಪ್ ರಾಯ್ (74 ವರ್ಷ) ಇಂದು ಬೆಳಗಿನ ಜಾವ ಅಗಲಿದ್ದಾರೆ.
ಕೆಲ ದಿನಗಳ ಹಿಂದೆ ಹೃದಯಾಘಾತಕ್ಕೀಡಾಗಿದ್ದ ಅವರು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಮನದೀಪ್ ರಾಯ್ ಹವ್ಯಾಸಿ ರಂಗಭೂಮಿ ಹಿನ್ನೆಲೆಯ ಕಲಾವಿದ. ನಟ – ನಿರ್ದೇಶಕ ಶಂಕರನಾಗ್ ಅವರ ಆತ್ಮೀಯ ಒಡನಾಡಿ. ಪೋಷಕ ಪಾತ್ರ, ಹಾಸ್ಯ ನಟರಾಗಿ 500ಕ್ಕೂ ಹೆಚ್ಚು ಸಿನಿಮಾಗಳು ಹಾಗೂ ಕಿರುತೆರೆ ಸರಣಿಗಳಲ್ಲಿ ಅಭಿನಯಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕರ್ನಾಟಕದಲ್ಲಿ ಈ ವರ್ಷ ಜನಪರ ರಾಜ್ಯ ಬಜೆಟ್ ಮಂಡನೆ ; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಸುದ್ದಿದಿನ, ಹಾವೇರಿ : ಕರ್ನಾಟಕದಲ್ಲಿ ಮುಂದಿನ ತಿಂಗಳು ಮಂಡಿಸಲಾಗುತ್ತಿರುವ ಈ ವರ್ಷದ ರಾಜ್ಯ ಬಜೆಟ್ ರೈತರು, ದೀನ ದಲಿತರು, ಯುವಕರು, ಮಹಿಳೆಯರು, ದುಡಿಯುವ ವರ್ಗ ಮತ್ತು ಜನಪರವಾಗಿರುತ್ತದೆ ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹಾವೇರಿ ಜಿಲ್ಲೆ ಶಿಗ್ಗಾಂವ್ನಲ್ಲಿ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ದುಡಿಮೆಗೆ ಯೋಗ್ಯ ಬೆಲೆ ಸಿಗುವ ರೀತಿಯಲ್ಲಿ ನಮ್ಮ ಕಾರ್ಯಕ್ರಮಗಳು ಇರುತ್ತವೆ ಎಂದರು.
ಕರ್ನಾಟಕ ರಾಜ್ಯದ ಆರ್ಥಿಕ ಅಭಿವೃದ್ಧಿಯಲ್ಲಿ ನಾವು ವೇಗವನ್ನು ಕಂಡಿದ್ದೇವೆ. ಕಳೆದ ವರ್ಷ ನಾನು ಅಧಿಕಾರ ವಹಿಸಿಕೊಂಡಾಗ 5 ಸಾವಿರ ಕೋಟಿ ರೂಪಾಯಿ ರಾಜ್ಯದ ಬೊಕ್ಕಸಕ್ಕೆ ನಮ್ಮ ನಿರ್ಧಿಷ್ಟ ಗುರಿಗೆ ಕೊರತೆಯಿತ್ತು. ಅದನ್ನು ನಾವು 5 ಸಾವಿರ ಕೋಟಿ ತುಂಬುವುದಲ್ಲದೇ, 13 ಸಾವಿರ ಕೋಟಿ ಅಧಿಕವಾಗಿ ಸಂಗ್ರಹ ಮಾಡಿದ್ದೇವೆ. ಈ ವರ್ಷವೂ ಕೂಡ ನಮ್ಮ ಹಣಕಾಸಿನ ಸಂಗ್ರಹ ಉತ್ತಮವಾಗಿದೆ ಎಂದು ಕರ್ನಾಟಕದ ಮುಖ್ಯಮಂತ್ರಿ ಹೇಳಿದರು.
ಕೋವಿಡ್ ನಂತರದಲ್ಲಿ ಆರ್ಥಿಕ ಸುಧಾರಣೆ ಆಗುತ್ತಿರುವ ಸಂದರ್ಭದಲ್ಲಿ ಕೆಳಹಂತದ ಜನಸಮುದಾಯಕ್ಕೆ ಇನ್ನಷ್ಟು ಸಹಾಯ ಮಾಡಿ, ಅವರನ್ನು ಕೂಡ ಮುಖ್ಯ ವಾಹಿನಿಗೆ ಬರಬೇಕು ಎನ್ನುವ ನಿಟ್ಟಿನಲ್ಲಿ ನಾವು ಕಾರ್ಯಕ್ರಮ ರೂಪಿಸುತ್ತಿದ್ದೇವೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಸಂಸತ್ತಿನ ಬಜೆಟ್ ಅಧಿವೇಶನದ ಹಿನ್ನೆಲೆ ; ಇದೇ 30ರಂದು ಸರ್ವಪಕ್ಷಗಳ ಸಭೆ

ಸುದ್ದಿದಿನ ಡೆಸ್ಕ್ : ಸಂಸತ್ತಿನ ಮುಂಬರುವ ಬಜೆಟ್ ಅಧಿವೇಶನದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇದೇ 30ರಂದು ಸರ್ವಪಕ್ಷಗಳ ಸಭೆಯನ್ನು ಕರೆದಿದೆ. ಸಂಸತ್ ಭವನದ ಸಂಕೀರ್ಣದಲ್ಲಿ ಸೋಮವಾರ ಮಧ್ಯಾಹ್ನ 12 ಗಂಟೆಗೆ ಸಭೆ ನಡೆಯಲಿದೆ.
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ, ಕೇಂದ್ರ ಸಚಿವರು ಮತ್ತು ಸಂಸತ್ತಿನ ಎರಡೂ ಸದನಗಳನ್ನು ಪ್ರತಿನಿಧಿಸುವ ಸದನ ನಾಯಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಸಭೆಯಲ್ಲಿ ಸರ್ಕಾರ ಸಂಸತ್ತಿನ ಉಭಯ ಸದನಗಳ ಸುಗಮ ಕಲಾಪಕ್ಕೆ ಎಲ್ಲ ರಾಜಕೀಯ ಪಕ್ಷಗಳ ಸಹಕಾರವನ್ನು ಕೋರಲಿದೆ. ಸಂಸತ್ತಿನ ಬಜೆಟ್ ಅಧಿವೇಶನ ಇದೇ 31ರಿಂದ ಆರಂಭವಾಗಲಿದೆ. ಮೊದಲ ದಿನ ಬೆಳಿಗ್ಗೆ 11 ಗಂಟೆಗೆ ಸೆಂಟ್ರಲ್ ಹಾಲ್ ನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡುವರು.
ಅದೇ ದಿನವೇ ಆರ್ಥಿಕ ಸಮೀಕ್ಷೆಯನ್ನೂ ಸಹ ಮಂಡಿಸಲಾಗುವುದು. ಫೆಬ್ರವರಿ 1ರಂದು 2023-24ನೇ ಸಾಲಿನ ಕೇಂದ್ರ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆ ಮಾಡಲಿದ್ದಾರೆ.
ಬಜೆಟ್ ಅಧಿವೇಶನ ಏಪ್ರಿಲ್ 6ವರೆಗೆ ನಡೆಯಲಿದ್ದು, ಸುಮಾರು 66 ದಿನಗಳಲ್ಲಿ 27 ಕಲಾಪಗಳು ನಡೆಯಲಿದೆ. ಮೊದಲ ಅವಧಿಯಲ್ಲಿ ಅಧಿವೇಶನ ಫೆಬ್ರವರಿ 13ರವರೆಗೆ ನಡೆಯಲಿದೆ. ಫೆಬ್ರವರಿ 14ರಿಂದ ಮಾರ್ಚ್ 12ರವರೆಗೆ ಅಧಿವೇಶನಕ್ಕೆ ಬಿಡುವು ಇರಲಿದೆ ಆನಂತರ ಮಾರ್ಚ್ 13ರಿಂದ ಆರಂಭವಾಗುವ ಅಧಿವೇಶನ ಏಪ್ರಿಲ್ 6ಕ್ಕೆ ಕೊನೆಗೊಳ್ಳಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980336243
