ದಿನದ ಸುದ್ದಿ
ದಾವಣಗೆರೆ | ಸಂವಿಧಾನವನ್ನು ಅರ್ಥೈಸಿಕೊಳ್ಳುವುದು ಕಥೆ ಕಾದಂಬರಿ ಓದಿದಂತಲ್ಲ : ನ್ಯಾ.ನಾಗಮೋಹನ ದಾಸ್

ಸುದ್ದಿದಿನ,ದಾವಣಗೆರೆ : ದೇಶದ ಬಹುತ್ವವನ್ನು ರಕ್ಷಿಸಿಕೊಂಡು ಬರುತ್ತಿರುವ ನಮ್ಮ ಸಂವಿಧಾನವನ್ನು ಪ್ರತಿಯೊಬ್ಬರೂ ಓದಿ, ಅರ್ಥೈಸಿಕೊಂಡು ಅದರಂತೆ ನಡೆಯಬೇಕೆಂದು ಕರ್ನಾಟಕ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನ ದಾಸ್ ಕರೆ ನೀಡಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾಡಳಿತ ಜಿಲ್ಲಾ ಪಂಚಾಯತ್, ಜಿಲ್ಲಾ ವಕೀಲರ ಸಂಘ, ಜಿಲ್ಲಾ ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ದಾವಣಗೆರೆ, ಸಹಯಾನ ಮತ್ತು ಸಮುದಾಯ ಕರ್ನಾಟಕ ಇವರುಗಳ ಸಂಯುಕ್ತಾಶ್ರಯದಲ್ಲಿ ಜು. 19 ರ ರಂದು ನಗರದ ಜಿಲ್ಲಾಡಳಿತ ಭವನದ ತುಂಗಭದ್ರ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ‘ಸಂವಿಧಾನ ಓದು ಕಾರ್ಯಗಾರ’ ಉದ್ಘಾಟಿಸಿ ಮಾತನಾಡಿ, ಪಿಪಿಟಿ ಪ್ರದರ್ಶನದ ಮೂಲಕ ಭಾರತ ಸಂವಿಧಾನ ರಚನೆ, ಮೂಲತತ್ವಗಳು-ಸವಾಲುಗಳು ಕುರಿತು ವಿವರಣೆ ನೀಡಿದರು.
ರಾಜಕೀಯ ಅಧಿಕಾರ ಎಂದರೇನು ಎಂಬುದನ್ನು ತಿಳಿಯಬೇಕು. ಕಾನೂನು ಮಾಡುವುದು ಶಾಸಕಾಂಗ, ಇದನ್ನು ಜಾರಿಗೆ ತರುವುದು ಕಾರ್ಯಾಂಗ ಮತ್ತು ಈ ಕಾನೂನುಗಳನ್ನು ಉಲ್ಲಂಘನೆ ಮಾಡಿದರೆ ಶಿಕ್ಷಿಸುವುದು ನ್ಯಾಯಾಂಗ. ಈ ಅಂಗಗಳ ಕಾರ್ಯವೈಖರಿ ನಿಯಂತ್ರಿಸುವುದು ಸಂವಿಧಾನ. ಹಿಂದೆ ರಾಜರುಗಳ ಕೈಯಲ್ಲಿ ಈ ಎಲ್ಲ ಅಧಿಕಾರಿಗಳಿದ್ದವು. ಕ್ರಮೇಣ ಪ್ರಜಾಪ್ರಭುತ್ವ ವ್ಯವಸ್ಥೆ ಬಂತು. ಇಂದು 199 ರಾಷ್ಟ್ರಗಳ ಪೈಕಿ 190 ರಾಷ್ಟ್ರಗಳು ತಮ್ಮದೇ ಆದ ಸಂವಿಧಾನವನ್ನು ಹೊಂದಿವೆ.
ನಾವು ನಮ್ಮ ಸಂವಿಧಾನವನ್ನು ಓದಿ ಅರ್ಥೈಸಿಕೊಂಡು ಅದರಂತೆ ನಡೆಯಬೇಕು. ಈ ನಿಟ್ಟಿನಲ್ಲಿ ಕಳೆದ 10 ವರ್ಷಗಳಲ್ಲಿ ಪಠ್ಯದಲ್ಲಿ ಅಳವಡಿಸಿರುವ ಸಂವಿಧಾನವನ್ನು ವಿದ್ಯಾರ್ಥಿಗಳು ಕೇವಲ 35 ಅಂಕ ಪಡೆಯುವ ಉದ್ದೇಶದಿಂದ ಓದುತ್ತಿದ್ದಾರೆ. ಹೀಗಾದರೆ ಇದನ್ನು ಅರ್ಥೈಸಿಕೊಂಡು ಇದರ ಆಶಯಗಳನ್ನು ಮೈಗೂಡಿಸಿಕೊಳ್ಳಲು ಹೇಗೆ ಸಾಧ್ಯ. ಸಂವಿಧಾನವನ್ನು ಎಲ್ಲರೂ ತಿಳಿಯಬೇಕೆಂಬ ನಿಟ್ಟಿನಲ್ಲಿ ರಾಜ್ಯಾದ್ಯಂತ ಸಂವಿಧಾನ ಓದು ಅಭಿಯಾನವನ್ನು ಕೈಗೊಳ್ಳಲಾಗಿದೆ ಎಂದರು.
ಭಾರತ 1947 ರಲ್ಲಿ ಸ್ವಾತಂತ್ರ್ಯ ಪಡೆದ ದೇಶ. 1950 ರಲ್ಲಿ ವಿಶ್ವದಲ್ಲೇ ಅತಿದೊಡ್ಡ ಮತ್ತು ಮಹತ್ತರವಾದ ಸಂವಿಧಾನವನ್ನು ರಚಿಸಿತು. ಸಂವಿಧಾನ ಜಾರಿಯಾದ ಈ 70 ವರ್ಷಗಳಲ್ಲಿ ನಾವು ಸಾಧಿಸಿದ್ದೇನು ಎಂಬ ಪ್ರಶ್ನೆಗೆ ಉತ್ತರ ಹಿಂದೆ ಸುಮಾರು 600 ರಾಜರು ನಮ್ಮನ್ನು ಆಳುತ್ತಿದ್ದರು. ಅದು ಬದಲಾಗಿ ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಗೆ ಬಂದು, ದೇಶಕ್ಕೆ ಗಡಿ ನಿಗದಿಯಾಗಿ, ಸಂವಿಧಾನ ಬಂದ ನಂತರ ಪ್ರಜಾಪ್ರಭುತ್ವ ಸಂಸ್ಥೆಗಳನ್ನು ಕಟ್ಟಲಾಯಿತು. ರಾಜಕೀಯ, ಸಾಮಾಜಿಕ, ಆರ್ಥಿಕ, ಸಾಂಸ್ಕøತಿಕ, ಶೈಕ್ಷಣಿಕ ಹೀಗೆ ಅನೇಕ ವಲಯಗಳಲ್ಲಿ ಉತ್ತಮ ಬದಲಾವಣೆಗಳನ್ನು ಕಂಡಿದ್ದೇವೆ. ಬಡತನ ಕಡಿಮೆಯಾಗಿದೆ, ಶಿಕ್ಷಣ ಮಟ್ಟ ಹೆಚ್ಚಿದೆ, ಮಹಿಳೆ, ದಲಿತರು, ಬುಡಕಟ್ಟು ಜನಾಂಗ, ಅಲ್ಪಸಂಖ್ಯಾತರು ಅಭಿವೃದ್ದಿ ಹೊಂದುತ್ತಿದ್ದಾರೆ. ಇಂದು ಎಲ್ಲ ಕ್ಷೇತ್ರದಲ್ಲಿ ಮಹಿಳೆ ಇದ್ದಾಳೆ. ಹಿಂದುಳಿದ, ಕೆಳಜಾತಿಯವರು ಉನ್ನತ ಸ್ಥಾನಲ್ಲಿದ್ದಾರೆ ಎಂದರೆ ಇದಕ್ಕೆ ಸಂವಿಧಾನ ಕೊಟ್ಟ ಅವಕಾಶಗಳೇ ಕಾರಣ. ಆದರೆ ಇಂತಹ ಸಂವಿಧಾನದ ಮಹತ್ವ ಅರಿಯಬೇಕಿದೆ. ಇದನ್ನು ಓದಿ ಅದರಂತೆ ನಡೆಯುವ ತುರ್ತು ಇದೆ.
ಸಂವಿಧಾನವನ್ನು ಅರ್ಥೈಸಿಕೊಳ್ಳುವುದು ಕಥೆ ಕಾದಂಬರಿ ಓದಿದಂತಲ್ಲ. ಭಾರತ ದೇಶವನ್ನು ತಿಳಿಯದೇ ಭಾರತದ ಸಂವಿಧಾನವನ್ನು ತಿಳಿಯಲು ಸಾಧ್ಯವಿಲ್ಲ. ದೇಶದ ಜನರು ಇಲ್ಲಿಯ ಇತಿಹಾಸ, ಧರ್ಮ, ಜಾತಿ, ಸಾಮಾಜಿಕ ಸಂಬಂಧಗಳು, ಆರ್ಥಿಕ ಸಂಬಂಧಗಳು, ಮೌಲ್ಯ, ಸಂಸ್ಕøತಿ ತಿಳಿಯದೇ ಸಂವಿಧಾನ ತಿಳಿಯಲು ಸಾಧ್ಯವಿಲ್ಲ. ಆದ್ದರಿಂದ ನಮ್ಮ ದೇಶವನ್ನು ತಿಳಿಯಬೇಕೆಂದರು.
ದೇಶದ ಬಹುತ್ವವನ್ನು ರಕ್ಷಿಸುತ್ತಿರುವ ನಮ್ಮ ಸಂವಿಧಾನವನ್ನು ತಿಳಿಯಬೇಕಾದರೆ ಮೊದಲು ನಮ್ಮ ದೇಶವನ್ನು ತಿಳಿಯಬೇಕು. ಸುಮಾರು 4635 ಜನಾಂಗಗಳು, 325 ಭಾಷೆಗಳು, 25 ಲಿಪಿಗಳೊಂದಿಗೆ ಸಹಜೀವನ ನಡೆಸುತ್ತಿರುವ ಬಹುತ್ವದ ದೇಶ ನಮ್ಮದು. ಈ ಬಹುತ್ವ ಅರ್ಥವಾಗಬೇಕಾದರೆ ನಮ್ಮ ಮೂಲ ನಮಗೆ ತಿಳಿಯಬೇಕು. ನಮ್ಮ ಸಾಮಾಜಿಕ, ಆರ್ಥಿಕ ಸಂಬಂಧಗಳು ಅರ್ಥವಾಗದೇ ಹೋದರೆ ಕಲ್ಯಾಣ ರಾಜ್ಯದ ಅರ್ಥ ಆಗುವುದಿಲ್ಲ. ನಮ್ಮದು ಹಳ್ಳಿಗಳ ದೇಶ. ಸುಮಾರು 6.50 ಲಕ್ಷ ಹಳ್ಳಿಗಳಿವೆ. ದೇಶದಲ್ಲಿ ಮಿಶ್ರ ಆರ್ಥಿಕತೆ ಇದೆ. ಇಂತಹ ಪರಿಸ್ಥಿತಿಯಲ್ಲಿ ಮಲ್ಟಿ ನ್ಯಾಷನಲ್, ಟ್ರಾನ್ಸ್ನ್ಯಾಷನಲ್ ಕಂಪೆನಿಗಳು ಕೇವಲ ಮಾರುಕಟ್ಟೆಯನ್ನಲ್ಲ ಬದಲಾಗಿ ಮನಸ್ಸುಗಳನ್ನು ನಿಯಂತ್ರಿಸುತ್ತಿರುವುದನ್ನು ಅರ್ಥ ಮಾಡಿಕೊಳ್ಳಬೇಕಿದೆ.
ಸಮಾನತೆ, ಧರ್ಮ, ಅಹಿಂಸೆ, ಸಾಮಾಜಿಕ ನ್ಯಾಯ ನಮ್ಮ ಸಂವಿಧಾನದ ಆಧಾರವಾಗಿದ್ದು, ಸಂವಿಧಾನ ಬಂದ ನಂತರ ಅನೇಕ ಉತ್ತಮ ಬದಲಾವಣೆಗಳು ಆಗಿವೆ. ಆದರೂ ನಮ್ಮ ಮುಂದೆ ಇಂದಿಗೂ ಅನೇಕ ಸವಾಲುಗಳು ಮತ್ತು ಸಮಸ್ಯೆಗಳಿವೆ. ಅನೇಕರು ಸಂವಿಧಾನವನ್ನೇ ದೂಷಿಸುತ್ತಿದ್ದಾರೆ. ದೋಷ ಇರುವುದು ಸಂವಿಧಾನದಲ್ಲಲ್ಲ. ಬದಲಾಗಿ ಇದನ್ನು ಅನುಷ್ಟಾನಗೊಳಿಸುವವರಲ್ಲಿದೆ.
ಎಲ್ಲರೂ ಸಂವಿಧಾನ ಅರ್ಥೈಸಿಕೊಂಡು ಅದರಂತೆ ನಡೆಯುವಲ್ಲಿ ಹೆಜ್ಜೆ ಇಡಬೇಕಿದೆ. ಈ ಸಂವಿಧಾನವನ್ನು ಉಳಿಸಿಕೊಂಡರೆ ಮಾತ್ರ ಸವಾಲು ಮತ್ತು ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳಬಹುದೆಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ಕುಲಕರ್ಣಿ ಅಂಬಾದಾಸ್ ಜಿ, ದೇಶದಲ್ಲಿ ಪ್ರತಿ ಧರ್ಮಗಳಿಗೆ ಇರುವ ಒಂದೊಂದು ಪವಿತ್ರ ಗ್ರಂಥಗಳಂತೆ ಇಡೀ ಭಾರತ ದೇಶಕ್ಕೆ ಸಂವಿಧಾನ ಒಂದು ಪವಿತ್ರ ಗ್ರಂಥವಾಗಿದೆ. ಸಂವಿಧಾನವನ್ನು ಪ್ರತಿಯೊಬ್ಬರು ಓದಿ, ಅರ್ಥೈಸಿಕೊಂಡು ಮತ್ತೊಬ್ಬರಿಗೆ ಓದುವ ಹಾಗೆ ಉತ್ತೇಜಿಸಬೇಕು. ಸಂವಿಧಾನವನ್ನು ಓದಿ ತಿಳಿದುಕೊಂಡಲ್ಲಿ ಅಪರಾಧಗಳು ನಡೆಯುವುದು ಕಡಿಮೆಯಾಗುತ್ತವೆ ಎಂದರು.
ಸಂವಿಧಾನ ಮೂಲಭೂತ ಹಕ್ಕುಗಳೊಂದಿಗೆ ಮೂಲಭೂತ ಕರ್ತವ್ಯಗಳನ್ನು ನೀಡಿದ್ದು, ಅವುಗಳನ್ನು ನಿರ್ವಹಿಸಬೇಕಾಗಿರುವುದು ಪ್ರತಿಯೊಬ್ಬ ಭಾರತೀಯನ ಪ್ರಮುಖ ಜವಾಬ್ದಾರಿಯಾಗಿದೆ. ಕಾರ್ಯಾಗಾರದಲ್ಲಿ ಭಾಗವಹಿಸಿರುವ ಶಿಕ್ಷಕರು ಸಂವಿಧಾನವನ್ನು ಓದಿಕೊಂಡು ವಿದ್ಯಾರ್ಥಿಗಳು ಸಂವಿಧಾನ ಓದಿ ತಿಳಿಯುವಂತೆ ಪ್ರೇರೇಪಿಸಬೇಕು. ಆಗ ಈ ಕಾರ್ಯಕ್ರಮ ಆಯೋಜಿಸಿದಕ್ಕೂ ಸಾರ್ಥಕವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಜಿಲ್ಲಾಧಿಕಾರಿ ಜಿ.ಎನ್. ಶಿವಮೂರ್ತಿ ಮಾತನಾಡಿ, ಇಂದು ಸಂವಿಧಾನ ಓದು ಅಭಿಯಾನ ಕೈಗೊಳ್ಳುವ ಮೂಲಕ ಸಾಮಾನ್ಯರ ಕೈಗೆ ಸಂವಿಧಾನ ಓದು ಪುಸ್ತಕ ದೊರಕುವಂತೆ ಮಾಡಿರುವ ನ್ಯಾಯಾಮೂರ್ತಿ ನಾಗಮೋಹನ್ ದಾಸ್ರವರ ಕಾರ್ಯ ಶ್ಲಾಘನೀಯ. ಇವರು ನಮ್ಮ ಸಂವಿಧಾನದ ಕುರಿತು ಅತ್ಯಂತ ಸರಳವಾಗಿ ಬರೆದು ಎಲ್ಲರಿಗೂ ದೊರಕುವಂತೆ ಮಾಡಿದ್ದಾರೆ. ಈ ಪುಸ್ತಕ ಭಾರತದ ಇತಿಹಾಸದೊಂದಿಗೆ ತುಲನಾತ್ಮಕವಾಗಿ ರಚಿತವಾಗಿದ್ದು ಕಥಾ ಪುಸ್ತಕದಂತೆ ಓದಿಸಿಕೊಂಡು ಹೋಗುತ್ತದೆ. ಇಂತಹ ಪುಸ್ತಕಗಳು ಎಲ್ಲಾ ಶಾಲಾ ಮಕ್ಕಳ ಕೈಯಲ್ಲಿದ್ದರೆ ಮಕ್ಕಳಿಗೆ ಪ್ರಾರಂಭದಿಂದಲೇ ಸಂವಿಧಾನದ ಕುರಿತು ಪ್ರಜ್ಞೆ ಬೆಳೆಯುತ್ತದೆ. ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಒಬ್ಬರು ಇಂದು ಸಾಮಾನ್ಯರ ನಡುವೆ ಬಂದು ಸಂವಿಧಾನ ಓದು ಎನ್ನುವ ಅಭಿಯಾನಕ್ಕೆ ಕೈಜೋಡಿಸುತ್ತಿರುವುದಕ್ಕೆ ಅಭಿನಂದನೀಯವಾಗಿದ್ದು ಅವರ ಈ ಸಾಮಾಜಿಕ ಕಾಳಜಿಗೆ ಯಶಸ್ಸು ಸಿಗಲೆಂದು ಆಶಿಸಿದರು.
ಕಾರ್ಯಾಗಾರದಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಎಲ್.ಹೆಚ್.ಅರುಣಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಎಲ್ಲ ಕಾನೂನುಗಳ ತಾಯಿಯಾಗಿರುವ ನಮ್ಮ ಸಂವಿಧಾನವನ್ನು ಅತ್ಯಂತ ಸರಳವಾಗಿ, ಅರ್ಥವಾಗುವ ರೀತಿಯಲ್ಲಿ ಪುಸ್ತಕ ಬರೆದು, ಅದರ ಕುರಿತು ರಾಜ್ಯಾದ್ಯಂತ ಅಭಿಯಾನದ ಮೂಲಕ ತಿಳಿಸುತ್ತಿರುವ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾ.ಹೆಚ್.ಎನ್.ನಾಗಮೋಹನ ದಾಸ್ರವರು ಉತ್ತಮ ವಾಗ್ಮಿ ಮತ್ತು ಸಾಹಿತಿ ಆಗಿದ್ದು, ನ್ಯಾಯಾಮೂರ್ತಿ ನಾಗಮೋಹನ್ದಾಸ್ ಇವರು ಹುಟ್ಟಿದ್ದು ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಹೆಬ್ಬಣ್ಣಿ ಗ್ರಾಮದಲ್ಲಿ 1952 ಫೆ. 12 ರಂದು. ತಂದೆ ಸ್ವಾತಂತ್ರ್ಯ ಹೋರಾಟಗಾರ ಎಚ್.ಎನ್.ನಾಗಪ್ಪ, ತಾಯಿ ಪಾರ್ವತಮ್ಮ. ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಕಾನೂನು ಪದವಿ, ಅಖಿಲ ಭಾರತ ವಕೀಲರ ಸಂಘಟನೆ, ಯಂಗ್ ಅಡ್ವೊಕೇಟ್ಸ್ ಫೋರಂ ಮತ್ತು ರಾಷ್ಟ್ರೀಯ ನ್ಯಾಯಾಂಗ ಅಕಾಡೆಮಿಯಲ್ಲಿ ಸದಸ್ಯರಾಗಿ, ಕಾರ್ಯದರ್ಶಿಯವಾಗಿ ಸಕ್ರಿಯ ಪಾತ್ರವಹಿಸಿದ್ದಾರೆ ಎಂದರು.
ಜಿ.ಪಂನ ಸಿಇಓ ಹೆಚ್.ಬಸವರಾಜೇಂದ್ರ, ಅಪರ ಜಿಲ್ಲಾಧಿಕಾರಿ ಪದ್ಮ ಬಸವಂತಪ್ಪ, ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರಭು.ಎನ್.ಬಡೀಗೇರ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎನ್.ಟಿ. ಮಂಜುನಾಥ್, ಹಿರಿಯ ಸಿವಿಲ್ ನ್ಯಾಯಾಧೀಶ ಕೆಂಗಬಾಲಯ್ಯ, ಸರ್ಕಾರಿ ಅಭಿಯೋಜಕ ವಿ.ಎಸ್.ಪಾಟೀಲ್, ಡಿಡಿಪಿಐ ಸಿ.ಆರ್.ಪರಮೇಶ್ವರಪ್ಪ, ಡಿಎಚ್ಓ ಡಾ.ರಾಘವೇಂದ್ರಸ್ವಾಮಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವಿಜಯ್ಕುಮಾರ್ ಸೇರಿದಂತೆ ಜಿಲ್ಲೆಯ ವಿವಿಧ ಶಾಲೆಗಳ ಶಿಕ್ಷಕರು, ಆಶಾಕಾರ್ಯಕರ್ತೆರು, ವಕೀಲರು ಸೇರಿದಂತೆ ಇತರರು ಭಾಗವಹಿಸಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ನಟ ಮನದೀಪ್ ರಾಯ್ ನಿಧನ

ಸುದ್ದಿದಿನ ಡೆಸ್ಕ್ : ಹಿರಿಯ ಚಿತ್ರನಟ ಮನದೀಪ್ ರಾಯ್ (74 ವರ್ಷ) ಇಂದು ಬೆಳಗಿನ ಜಾವ ಅಗಲಿದ್ದಾರೆ.
ಕೆಲ ದಿನಗಳ ಹಿಂದೆ ಹೃದಯಾಘಾತಕ್ಕೀಡಾಗಿದ್ದ ಅವರು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಮನದೀಪ್ ರಾಯ್ ಹವ್ಯಾಸಿ ರಂಗಭೂಮಿ ಹಿನ್ನೆಲೆಯ ಕಲಾವಿದ. ನಟ – ನಿರ್ದೇಶಕ ಶಂಕರನಾಗ್ ಅವರ ಆತ್ಮೀಯ ಒಡನಾಡಿ. ಪೋಷಕ ಪಾತ್ರ, ಹಾಸ್ಯ ನಟರಾಗಿ 500ಕ್ಕೂ ಹೆಚ್ಚು ಸಿನಿಮಾಗಳು ಹಾಗೂ ಕಿರುತೆರೆ ಸರಣಿಗಳಲ್ಲಿ ಅಭಿನಯಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕರ್ನಾಟಕದಲ್ಲಿ ಈ ವರ್ಷ ಜನಪರ ರಾಜ್ಯ ಬಜೆಟ್ ಮಂಡನೆ ; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಸುದ್ದಿದಿನ, ಹಾವೇರಿ : ಕರ್ನಾಟಕದಲ್ಲಿ ಮುಂದಿನ ತಿಂಗಳು ಮಂಡಿಸಲಾಗುತ್ತಿರುವ ಈ ವರ್ಷದ ರಾಜ್ಯ ಬಜೆಟ್ ರೈತರು, ದೀನ ದಲಿತರು, ಯುವಕರು, ಮಹಿಳೆಯರು, ದುಡಿಯುವ ವರ್ಗ ಮತ್ತು ಜನಪರವಾಗಿರುತ್ತದೆ ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹಾವೇರಿ ಜಿಲ್ಲೆ ಶಿಗ್ಗಾಂವ್ನಲ್ಲಿ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ದುಡಿಮೆಗೆ ಯೋಗ್ಯ ಬೆಲೆ ಸಿಗುವ ರೀತಿಯಲ್ಲಿ ನಮ್ಮ ಕಾರ್ಯಕ್ರಮಗಳು ಇರುತ್ತವೆ ಎಂದರು.
ಕರ್ನಾಟಕ ರಾಜ್ಯದ ಆರ್ಥಿಕ ಅಭಿವೃದ್ಧಿಯಲ್ಲಿ ನಾವು ವೇಗವನ್ನು ಕಂಡಿದ್ದೇವೆ. ಕಳೆದ ವರ್ಷ ನಾನು ಅಧಿಕಾರ ವಹಿಸಿಕೊಂಡಾಗ 5 ಸಾವಿರ ಕೋಟಿ ರೂಪಾಯಿ ರಾಜ್ಯದ ಬೊಕ್ಕಸಕ್ಕೆ ನಮ್ಮ ನಿರ್ಧಿಷ್ಟ ಗುರಿಗೆ ಕೊರತೆಯಿತ್ತು. ಅದನ್ನು ನಾವು 5 ಸಾವಿರ ಕೋಟಿ ತುಂಬುವುದಲ್ಲದೇ, 13 ಸಾವಿರ ಕೋಟಿ ಅಧಿಕವಾಗಿ ಸಂಗ್ರಹ ಮಾಡಿದ್ದೇವೆ. ಈ ವರ್ಷವೂ ಕೂಡ ನಮ್ಮ ಹಣಕಾಸಿನ ಸಂಗ್ರಹ ಉತ್ತಮವಾಗಿದೆ ಎಂದು ಕರ್ನಾಟಕದ ಮುಖ್ಯಮಂತ್ರಿ ಹೇಳಿದರು.
ಕೋವಿಡ್ ನಂತರದಲ್ಲಿ ಆರ್ಥಿಕ ಸುಧಾರಣೆ ಆಗುತ್ತಿರುವ ಸಂದರ್ಭದಲ್ಲಿ ಕೆಳಹಂತದ ಜನಸಮುದಾಯಕ್ಕೆ ಇನ್ನಷ್ಟು ಸಹಾಯ ಮಾಡಿ, ಅವರನ್ನು ಕೂಡ ಮುಖ್ಯ ವಾಹಿನಿಗೆ ಬರಬೇಕು ಎನ್ನುವ ನಿಟ್ಟಿನಲ್ಲಿ ನಾವು ಕಾರ್ಯಕ್ರಮ ರೂಪಿಸುತ್ತಿದ್ದೇವೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಸಂಸತ್ತಿನ ಬಜೆಟ್ ಅಧಿವೇಶನದ ಹಿನ್ನೆಲೆ ; ಇದೇ 30ರಂದು ಸರ್ವಪಕ್ಷಗಳ ಸಭೆ

ಸುದ್ದಿದಿನ ಡೆಸ್ಕ್ : ಸಂಸತ್ತಿನ ಮುಂಬರುವ ಬಜೆಟ್ ಅಧಿವೇಶನದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇದೇ 30ರಂದು ಸರ್ವಪಕ್ಷಗಳ ಸಭೆಯನ್ನು ಕರೆದಿದೆ. ಸಂಸತ್ ಭವನದ ಸಂಕೀರ್ಣದಲ್ಲಿ ಸೋಮವಾರ ಮಧ್ಯಾಹ್ನ 12 ಗಂಟೆಗೆ ಸಭೆ ನಡೆಯಲಿದೆ.
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ, ಕೇಂದ್ರ ಸಚಿವರು ಮತ್ತು ಸಂಸತ್ತಿನ ಎರಡೂ ಸದನಗಳನ್ನು ಪ್ರತಿನಿಧಿಸುವ ಸದನ ನಾಯಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಸಭೆಯಲ್ಲಿ ಸರ್ಕಾರ ಸಂಸತ್ತಿನ ಉಭಯ ಸದನಗಳ ಸುಗಮ ಕಲಾಪಕ್ಕೆ ಎಲ್ಲ ರಾಜಕೀಯ ಪಕ್ಷಗಳ ಸಹಕಾರವನ್ನು ಕೋರಲಿದೆ. ಸಂಸತ್ತಿನ ಬಜೆಟ್ ಅಧಿವೇಶನ ಇದೇ 31ರಿಂದ ಆರಂಭವಾಗಲಿದೆ. ಮೊದಲ ದಿನ ಬೆಳಿಗ್ಗೆ 11 ಗಂಟೆಗೆ ಸೆಂಟ್ರಲ್ ಹಾಲ್ ನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡುವರು.
ಅದೇ ದಿನವೇ ಆರ್ಥಿಕ ಸಮೀಕ್ಷೆಯನ್ನೂ ಸಹ ಮಂಡಿಸಲಾಗುವುದು. ಫೆಬ್ರವರಿ 1ರಂದು 2023-24ನೇ ಸಾಲಿನ ಕೇಂದ್ರ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆ ಮಾಡಲಿದ್ದಾರೆ.
ಬಜೆಟ್ ಅಧಿವೇಶನ ಏಪ್ರಿಲ್ 6ವರೆಗೆ ನಡೆಯಲಿದ್ದು, ಸುಮಾರು 66 ದಿನಗಳಲ್ಲಿ 27 ಕಲಾಪಗಳು ನಡೆಯಲಿದೆ. ಮೊದಲ ಅವಧಿಯಲ್ಲಿ ಅಧಿವೇಶನ ಫೆಬ್ರವರಿ 13ರವರೆಗೆ ನಡೆಯಲಿದೆ. ಫೆಬ್ರವರಿ 14ರಿಂದ ಮಾರ್ಚ್ 12ರವರೆಗೆ ಅಧಿವೇಶನಕ್ಕೆ ಬಿಡುವು ಇರಲಿದೆ ಆನಂತರ ಮಾರ್ಚ್ 13ರಿಂದ ಆರಂಭವಾಗುವ ಅಧಿವೇಶನ ಏಪ್ರಿಲ್ 6ಕ್ಕೆ ಕೊನೆಗೊಳ್ಳಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980336243

-
ನಿತ್ಯ ಭವಿಷ್ಯ6 days ago
ಸೋಮವಾರ- ರಾಶಿ ಭವಿಷ್ಯ ಜನವರಿ-23,2023 : ಈ ರಾಶಿಯವರಿಗೆ ಸಾಡೇ ಸಾತಿ ಶನಿಯಿಂದ ಮುಕ್ತಿ,ಎಲ್ಲಾ ನಿಮ್ಮ ಕೆಲಸಗಳು ನೆರವೇರಲಿ
-
ದಿನದ ಸುದ್ದಿ4 days ago
ಸಂಸತ್ತಿನ ಬಜೆಟ್ ಅಧಿವೇಶನದ ಹಿನ್ನೆಲೆ ; ಇದೇ 30ರಂದು ಸರ್ವಪಕ್ಷಗಳ ಸಭೆ
-
ದಿನದ ಸುದ್ದಿ7 hours ago
ಕರ್ನಾಟಕದಲ್ಲಿ ಈ ವರ್ಷ ಜನಪರ ರಾಜ್ಯ ಬಜೆಟ್ ಮಂಡನೆ ; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
-
ದಿನದ ಸುದ್ದಿ6 hours ago
ನಟ ಮನದೀಪ್ ರಾಯ್ ನಿಧನ