ಭಾವ ಭೈರಾಗಿ
ನನ್ನವ್ವ ನೆನಪಾಗುತ್ತಾಳೆ..!

ಮೊನ್ನೆ ಮೊನ್ನೆ ತಾನೆ ಇಂಗ್ಲೀಷಿನ ಮದರ್ಸ್ ಡೇ ಎಂಬ ತೋರಿಕೆಯ ಹಬ್ಬವನ್ನು ಜಗತ್ತಿನ ತುಂಬಾ ಆಚರಿಸಲಾಯಿತು. ಈ ಹಬ್ಬ ಬಂದಾಗಲೆಲ್ಲಾ ಪ್ರತಿಯೊಬ್ಬರೂ ತಮ್ಮ ತಮ್ಮ ತಾಯಂದಿರನ್ನು ಬಹಳ ಗೌರವಯುತವಾಗಿ ವರ್ಣಿಸಿ ಫೇಸ್ ಬುಕ್ ಮತ್ತು ವಾಟ್ಸ್ ಆಪ್ ಗಳಲ್ಲಿ ಅವರ ಫೋಟೋಗಳನ್ನ ಹಾಕಿಕೊಂಡು ಅವರ ಪ್ರೀತಿಯನ್ನು ಮೆರೆದರು. ನಿಜ ಅಮ್ಮ ಎಂದರೆ ಈ ಜಗತ್ತು. ಸಾರಿ…ನಾನು ಒಬ್ಬ ಹಳ್ಳಿಯನಾದ್ದರಿಂದ ಈ ಅಮ್ಮಾ ಎಂಬ ಪದವು ನನಗೆ ನಗರಗಳ ಅಜ್ಜಿಯನ್ನು ನೆನಪಿಸುತ್ತದೆ. ಅಚ್ಚ ಕನ್ನಡದಲ್ಲಿ ಅವ್ವ ಎಂದು ಕರೆದರೆ ನನಗೆ ಮೃಷ್ಠಾನ್ನ ಸವಿದಂತಾಗುತ್ತದೆ.
ಈ ಮದರ್ಸ್ ಡೇ ಯ ಬಗ್ಗೆ ನನಗೆ ಎಳ್ಳಷ್ಟೂ ಆಸಕ್ತಿ ಇಲ್ಲ. ಏಕೆಂದರೆ ನಾವು ಚಿಕ್ಕಂದಿನಿಂದಲೂ ಹಳ್ಳಿಯಲ್ಲೇ ಬೆಳೆದುದ್ದರಿಂದ ಅದರ ಗಾಳಿ ಗಂಧವೂ ನಮಗೆ ಸೋಕಿರಲಿಲ್ಲ. ಇತ್ತೀಚಿಗೆ ನಗರಕ್ಕೆ ಬಂದ ಮೇಲೆ ಅದರ ಹೆಸರನ್ನು ಕೇಳಿದ್ದು. ಹಾಗೆ ಕೇಳಿದಾಗಲೆಲ್ಲಾ ನನಗೆ ಮುಜುಗರವಾಗುತ್ತದೆ. ತಾಯಂದಿರ ದಿನ ಅಂತ ಏತಕ್ಕಾಗಿ ಮಾಡಬೇಕು..? ಎನಿಸುತ್ತದೆ. ಏಕೆಂದರೆ ಯಾರದೋ ಜಯಂತಿಯನ್ನು ಆಚರಿಸುವ ರೀತಿಯಲ್ಲಿ ಸಂಭ್ರಮಿಸುತ್ತಾರೆ.ಅದು ತಪ್ಪು, ಅವ್ವನನ್ನು ಪ್ರತಿ ದಿನವೂ ಪೂಜಿಸಬೇಕು , ಪ್ರತಿ ಕ್ಷಣವೂ ಪ್ರೀತಿಸಬೇಕು ಹಾಗಾದಾಗ ಮಾತ್ರ ನಾವು ನಮ್ಮವ್ವನಿಗೆ ಗೌರವಕೊಟ್ಟಂತಾಗುತ್ತದೆ. ಅವಳ ತ್ಯಾಗ ಅನನ್ಯ. ಮಕ್ಕಳ ಮತ್ತು ಗಂಡನ ಒಳಿತಿಗಾಗಿ ತನ್ನ ಸರ್ವಸ್ವವನ್ನೇ ಧಾರೆ ಎರೆದ ಮಹಾಮಾಯಿ.ಅಂತಹವಳನ್ನು ವರ್ಷಕ್ಕೆ ಒಮ್ಮೆ ನೆನಪಿಸಿಕೊಂಡರೆ ಅವಳಿಗೆ ಬೆಲೆ ಕಡಿಮೆಯಾದಂತಾಗುತ್ತದೆ. ಅವ್ವ ಅಥವಾ ಹೆಣ್ಣು ದೇವರ ಸೃಷ್ಟಿಯಲ್ಲಿ ಎಷ್ಟು ಸಹನಾಮೂರ್ತಿ ಎಂಬುದಕ್ಕೆ ಒಂದು ಕಿರು ಕಥೆಯನ್ನು ಹೇಳಲು ಬಯಸುತ್ತೇನೆ.
ಒಮ್ಮೆ ತನ್ನ ತಾಯಿ ಅಳುತ್ತಿದ್ದನ್ನ ನೋಡಿದ ಒಬ್ಬ ಪುಟ್ಟ ಹುಡುಗ ” ಅಮ್ಮ ಯಾಕಮ್ಮ ಅಳುತ್ತಿದ್ದೀಯ” ಎಂದು ಕೇಳಿದಾಗ ತಾಯಿಯು “ನಾನು ಹೆಣ್ಣಾಗಿ ಹುಟ್ಟಿದ ತಪ್ಪಿಗೆ ಎಂದು ಹೇಳುತ್ತಾಳೆ. ಆ ಮಗುವಿಗೆ ಸರಿಯಾದ ಉತ್ತರ ಸಿಗದೆ ಅಲ್ಲೇ ಕುಳಿತಿದ್ದ ತನ್ನ ತಂದೆಯನ್ನು “ಅಪ್ಪಾ ಅಮ್ಮ ಏಕೆ ಅಳುತ್ತಿದ್ದಾಳೆ ” ತಂದೆಯೂ ಕೂಡ ” ಅವಳು ಹೆಣ್ಣಾಗಿ ಹುಟ್ಟಿರುವುದರಿಂದ “. ಆ ಹುಡುಗನಿಗೆ ಅಪ್ಪನಿಂದಲೂ ಸರಿಯಾದ ಉತ್ತರ ಸಿಗದ ಕಾರಣ ದೇವರನ್ನೇ ಕೇಳೋಣವೆಂದು ದೇವರಿಗೆ ಕರೆ ಮಾಡುತ್ತಾನೆ. ಕರೆಯನ್ನು ಸ್ವೀಕರಿಸಿದ ದೇವರು ” ಮಗು ಏನು ನಿನ್ನ ಪ್ರಶ್ನೆ ನನಗೆ ಕರೆ ಮಾಡಿದ ಉದ್ದೇಶವೇನು” ಎಂಬ ಪ್ರೀತಿಯ ಮಾತಿಗೆ ಆ ಹುಡುಗನು ” ದೇವರೇ ನನ್ನ ಅಮ್ಮ ಅಳುತ್ತಿದ್ದಳು ಏಕೆ ಎಂದು ಕೇಳಿದರೆ ಹೆಣ್ಣಾಗಿ ಹುಟ್ಟಿದ ತಪ್ಪಿಗೆ ಎಂಬ ಉತ್ತರ ನನಗೆ ಸಮಾಧಾನ ತರದ ನಿಮಿತ್ತ ನಿನ್ನಿಂದ ಆ ಉತ್ತರವನ್ನು ನಿರೀಕ್ಷಿಸುವೆ” ಹುಡುಗನ ಆ ಮುಗ್ಧ ಮಾತಿಗೆ ದೇವರು ನಗುತ್ತ ” ನೋಡು ಮಗು ನಾನು ಹೆಣ್ಣನ್ನು ವಿಶಿಷ್ಟವಾಗಿ ಸೃಷ್ಟಿಸಿದೆ.
ಲೋಕದ ಭಾರವನ್ನು ಹೊರಲು ಆಕೆಯ ಭುಜಗಳನ್ನು ಬಲಗೊಳಿಸಿದೆ. ಅಂತೆಯೇ ಸಮಾಧಾನವನ್ನು ಕೊಡಲು ಸೌಮ್ಯತೆಯನ್ನು ಕೊಟ್ಟೆ. ಮಗುವಿನ ಜನನದ ನೋವನ್ನು ತಾಳಲು ಅದರಂತೆ, ಮಕ್ಕಳಿಂದ ಹಲವಾರು ಬಾರಿ ಬಾರಿ ತಿರಸ್ಕಾರಗಳನ್ನು ಸಹಿಸಿಕೊಳ್ಳಲು ಆಂತರಿಕ ಶಕ್ತಿಯನ್ನು ತುಂಬಿದೆ. ಕುಟುಂಬದಲ್ಲಿ ಎಂತಹ ನೋವು ದುಃಖಗಳಿದ್ದರೂ ಎಲ್ಲವನ್ನೂ ತಾಳಿಕೊಂಡು ಮುನ್ನಡೆಯಲು ಸ್ಥಿರಮನಸ್ಸನ್ನು ಕೊಟ್ಟೆನು. ಯಾವುದೇ ಪರಿಸ್ಥಿತಿಯಲ್ಲಾದರೂ ಸ್ವಂತ ಮಕ್ಕಳು ಕಷ್ಟವನ್ನು ಕೊಟ್ಟರೂ, ಯಾವುದನ್ನು ಯೋಚಿಸದೆ ಅವರನ್ನು ಇನ್ನೂ ಹೆಚ್ಚಾಗಿ ಪ್ರೀತಿಸಲು ಸೂಕ್ಷ್ಮತೆಯನ್ನು ಕೊಟ್ಟೆನು. ಅಷ್ಟೇ ಅಲ್ಲದೆ ತನ್ನ ಗಂಡನಿಗೆ ಸಹಕಾರಿಯಾಗಿ ಅದರಂತೆ ಅವನ ತಪ್ಪುಗಳನ್ನು ಕ್ಷಮಿಸಿ, ಅವನ ಹೃದಯವನ್ನು ಕಾಪಾಡಲು ಫಲವನ್ನು ಕೊಟ್ಟೆನು. ಕೊನೆಯದಾಗಿ ಕಣ್ಣೀರನ್ನು ಅಳಲು ಕೊಟ್ಟೆನು ” ಈ ವಿಸ್ತಾರವಾದ ನುಡಿಗಳನ್ನು ಅಸಲಿಸಿದ ಹುಡುಗ ಧನ್ಯನೆಂಬಂತೆ ಪ್ರಣಾಮಗಳನ್ನು ಮಾಡಿದನು.
ಈ ಕಥೆಯಲ್ಲಿ ದೇವರು ಹೇಳಿದ ಮಾತುಗಳು ಎಷ್ಟು ಸತ್ಯವಲ್ಲವೇ..?. ಗಂಡಿಗಿಂತ ಹೆಚ್ಚು ಬಲಶಾಲಿ ಹೆಣ್ಣೇ ಅಲ್ಲವೇ..?. ಅವಳ ಅಃತಕರಣ, ಕರುಣೆಗೆ ಬೆಲೆ ಇರುವುದೇ. ಪ್ರಪಂಚದ ಯಾವುದೇ ದೇಶದಲ್ಲಿ ಸಿಗದ ಅತ್ಯುನ್ನತ ಸ್ಥಾನ ನಮ್ಮ ಭಾರತ ದೇಶದ ನಾರಿಯರಿಗೆ ಸಿಕ್ಕಿದೆ. ಇಲ್ಲಿ ಅವರನ್ನು ವಿಶೇಷ ಗೌರವದಿಂದ ಕಾಣುತ್ತಾರೆ. ತಾಯಿಯನ್ನು ನಾವು ದೇವರೆಂದು ಪೂಜಿಸುತ್ತೇವೆ. ದೊಡ್ಡವರು ಹೇಳುವಂತೆ ” ದೇವರು ಎಲ್ಲ ಕಡೆ ಇರಲಾಗುವುದಿಲ್ಲವೆಂದು ತಾಯಿಯನ್ನು ಸೃಷ್ಠಿ ಮಾಡಿದನಂತೆ “. ಹೌದು ನಮಗೆ ಬೇಕು ಬೇಡಗಳನ್ನು ಅರ್ಥಮಾಡಿಕೊಂಡು ನಾವು ಬೇಕು ಎನ್ನುವ ಮೊದಲೇ ನೀಡಿರುತ್ತಾಳೆ. ಮಕ್ಕಳಿಗಾಗಿ ತನ್ನ ಆಸೆಗಳನ್ನೆಲ್ಲಾ ತ್ಯಾಗಮಾಡಿ, ತನ್ನ ಸ್ವಾರ್ಥಗಳನ್ನ ಅಡಗಿಸಿಕೊಂಡು ಜೀವನವನ್ನು ಮೀಸಲಿಡುತ್ತಾಳೆ. ಮನೆಯೇ ಮೊದಲ ಪಾಠಶಾಲೆ ಅಮ್ಮನೇ ಮೊದಲ ಗುರು ಎಂಬ ಮಾತನ್ನು ನಾವು ಕೇಳುತ್ತಲೇ ಬೆಳೆದಿದ್ದೇವೆ. ಸಾವಿರ ಗುರುಗಳಿಗೆ ಒಬ್ಬ ತಾಯಿ ಸಮಾನಳು. ತಿಳಿದವರು ಹೇಳುತ್ತಾರೆ ನೂಲಿನಂತೆ ಸೀರೆ ತಾಯಿಯಂತೆ ಮಗಳು. ಈ ಗಾದೆ ಎಷ್ಟು ಸಮಂಜಸವಾಗಿದೆಯಲ್ಲವೇ.
ಮನೆಯಲ್ಲಿ ಕಲಿತ ವಿನಯ ವಿದ್ಯೆ ಯಾವ ವಿಶ್ವವಿದ್ಯಾನಿಲಯದಿಂದಲೂ ಕಲಿಯಲು ಸಾಧ್ಯವಿಲ್ಲ. ಅಮ್ಮ ಎನ್ನುವವಳು ಕೂಲಿ ಇಲ್ಲದ ಕೆಲಸದಂತವಳಾಗಿದ್ದಾಳೆ. ಬೆಳಿಗ್ಗೆಯಿಂದ ಸಂಜೆವರೆಗೆ ಮನೆಗಾಗಿ, ಮಕ್ಕಳಿಗಾಗಿ, ಗಂಡನಿಗಾಗಿ ದುಡಿದು ದಣಿವಾಗಿದ್ದರೂ, ಶಾಲೆಯಿಂದ ಬಂದ ಮಕ್ಕಳನ್ನ ಮತ್ತು ಕೆಲಸದಿಂದ ಬಂದ ಗಂಡನ ಮುಖವನ್ನು ನೋಡಿದ ಕೂಡಲೇ ತನ್ನ ಆಯಾಸವನ್ನೆಲ್ಲಾ ಮರೆತು ಬಿಡುತ್ತಾಳೆ. ಮಗಳು ಎದೆಯತ್ತರಕ್ಕೆ ಬೆಳೆದು ಜಡೆಯನ್ನು ಕಟ್ಟಿಕೊಳ್ಳಲು ಪ್ರಾರಂಭಿಸಿದ ದಿನದಿಂದ ಅವಳು ತನ್ನ ಆಸೆ ಆಕಾಂಕ್ಷೆಗಳನ್ನು ಬದಿಗಿರಿಸಿ ಮಗಳ ಬೆಳವಣಿಗೆಯ ಬಗ್ಗೆ ಅವಳ ಇಷ್ಟಕಷ್ಟದ ಬಗ್ಗೆ ಗಮನ ಹರಿಸುತ್ತಾಳೆ. ಅವಳ ಅಲಂಕಾರದ ಬಗ್ಗೆ ಚಿಂತಿಸುತ್ತಾಳೆ. ತಾನು ಹೂವನ್ನು ಮುಡಿಯುತ್ತಿದ್ದನ್ನು ನಿಲ್ಲಿಸಿ ಮಗಳಿಗೇ ಮುಡಿಸಿ ಸಂತಸ ಪಡುತ್ತಾಳೆ. ಕೂಲಿ ನಾಲಿಗೆ ಹೋದಾಗ ಒಡತಿಯರು ತಿಂಡಿ, ಊಟ, ಹಣ್ಣುಹಂಪಲು ಕೊಟ್ಟರೆ ತಾನು ತಿನ್ನದೆ ಸೆರಗಲ್ಲಿ ಬಚ್ಚಿಟ್ಟು ತಂದು ಮಕ್ಕಳಿಗೆ ತಿನಿಸುತ್ತಾಳೆ. ಇದೇ ಕಾರಣಕ್ಕೆ ನನ್ನವ್ವ ನನಗೆ ನೆನಪಾಗುತ್ತಾಳೆ.
ಇದೇ ಜೂನ್ 3 ನೇ ತಾರೀಖಿಗೆ ನನ್ನವ್ವನ ಪರಿನಿರ್ವಾಣವಾಗಿ ಸಪ್ತ ಸಂವತ್ಸರಗಳು ಕಳೆಯುತ್ತದೆ. ಹೀಗ್ಗೆ ಹತ್ತು ವರ್ಷಗಳ ಹಿಂದೆ ನನ್ನ ಮದುವೆ ವಿಚಾರವಾಗಿ ನನಗೂ ನನ್ನವ್ವನಿಗೂ ಒಂದು ಸಣ್ಣ ಜಗಳ ಆಗುತ್ತದೆ. ಆಗ ನನಗೆ ಇಪ್ಪತ್ತೆಂಟರ ಹರೆಯ. ಮದುವೆ ಆಗುವ ವಯಸ್ಸು. ಮನೆಯಲ್ಲಿ ನಾನು ನನ್ಮವ್ವ ಇಬ್ಬರೇ ಇದ್ದದ್ದು. ನಾನು ಕೆಲಸ ಅರಸಿ ಬೆಂಗಳೂರಿಗೆ ಬಂದಿದ್ದೆ. ಊರಲ್ಲಿ ಒಬ್ಬಳೇ ಇದ್ದ ಕಾರಣ ಮದುವೆ ಮಾಡಿಕೋ ಎಂದು ಒತ್ತಾಯ ಮಾಡುತ್ತಿದ್ದಳು. ಏಕೆಂದರೆ ನನ್ನಣ್ಣಂದಿರಿಬ್ಬರಿಗೆ ಇಪ್ಪತ್ತೈನೆಯ ವಯಸ್ಸಿಗೆ ಮದುವೆ ಮಾಡಿ ಮುಗಿಸಿದ್ದಳು. ಒಂಟಿ ಹೆಂಗಸು ಗಂಡನ ಕಳೆದುಕೊಂಡು ಕೂಲಿ ನಾಲಿ ಮಾಡಿ ಸಮಾಜದಲ್ಲಿ ಎಲ್ಲರಂತೆ ಬದುಕಬೇಕು ಎಂದು ಸ್ವಾಭಿಮಾನದಿಂದ ಜೀವಿಸುತ್ತಿದ್ದಳು. ನನ್ನ ಅಪ್ಪ ನಾನು ಒಂದು ವರ್ಷದ ಮಗುವಾಗಿದ್ದಾಗ ತೀರಿಕೊಂಡರಂತೆ.
ಅವರ ಮುಖದ ಛಾಯೆಯನ್ನೇ ನಾನು ಗಮನಿಸಿರಲಿಲ್ಲ. ನನ್ನವ್ವನೇ ಗಂಡಸಿನಂತೆ ನಿಂತು ಎಲ್ಲವನ್ನೂ ನಿಭಾಯಿಸುತ್ತಿದ್ದಳು. ಆಗಲೇ ವಯಸ್ಸು ಅರವತ್ತರ ಆಸುಪಾಸಿನಲ್ಲಿತ್ತು. ಅದೇ ಕಾರಣಕ್ಕೆ ನಾನಿರುವಾಗಲೇ ನಿನಗೂ ಮದುವೆ ಮಾಡಿ ಕಣ್ತುಂಬಿಕೊಳ್ಳುವೆ ಎಂದು ಒತ್ತಾಯಿಸತೊಡಗಿದಳು. ನಾನೋ ನನ್ನವ್ವನಿಗೆ ” ಅವ್ವ ನನಗೆ ಇನ್ನೂ ಸ್ವಲ್ಪ ದಿವಸಗಳ ಕಾಲ ಮದುವೆ ಬೇಡ ಚನ್ನಾಗಿರುವ ಹುಡುಗಿ ಸಿಕ್ಕ ಮೇಲೆ ಆಗುತ್ತೇನೆ ” ಎನ್ನುತ್ತಿದ್ದಾಗ ” ಅಲ್ಲಕಡ ಕೂಸೆ ಅಂದ ಚಂದ ಕಟ್ಕಂಡು ಯಾನ್ ಮಾಡಿಯಾ ಕೊಳ್ಬ ಊದಕ್ಕ ಎರಡು ತುಟಿ ಇದ್ರ ಸಾಕಾಲ್ವ ಅವ್ಳೇನ ಕುಂಡುಸ್ಕಂಡು ನೆಕ್ಕಿಯಾ. ಇಲ್ಲಾ ನಾ ಸತ್ತ ಮೇಲ ಯಾನಾದರೂ ಮದುವೆ ಆದಯಾ “. ಈ ಮಾತು ಆ ದಿವಸಗಳಲ್ಲಿ ನನಗೆ ತಮಾಷೆ ಎನಿಸಿದ್ದರೂ ಪ್ರತಿವರ್ಷದ ಅವಳ ಪರಿನಿರ್ವಾಣದ ದಿನದಂದು ದುಃಖ ಉಕ್ಕುಕ್ಕಿ ಬರುತ್ತದೆ. ಯಾಕೆಂದರೆ ಅದಾವ ಘಳಿಗೆಯಲ್ಲಿ ಹೇಳಿದಳೋ ನಾ ಸತ್ತ ಮೇಲೆ ಮದುವೆ ಆಗುತ್ತೀಯ ಎಂದು ಹಾಗೇ ಆಗಿಹೋಯಿತು. ನನ್ನ ಮದುವೆಗೆ ಇನ್ನೂ ಹದಿನೈದು ದಿನಗಳು ಬಾಕಿ ಇರುವಾಗಲೇ ನನ್ನವ್ವ ನನ್ನನ್ನು ಬಿಟ್ಟು ಇಹಲೋಹ ತ್ಯಜಿಸಿದಳು.
ಕಿರಿ ಮಗನ ಕಂಡರೆ ಬಲು ಪ್ರೀತಿ ಎಂದು ಎಲ್ಲರೂ ಹೇಳುತ್ತಿದ್ದರು. ಅದರಂತೆಯೇ ನನ್ನವ್ವ ನನ್ನ ಇಷ್ಟಕಷ್ಟವನ್ನೆಲ್ಲಾ ತಿಳಿದುಕೊಂಡು ನಾನೇನು ಯೋಚಿಸುತ್ತೇನೆ ಎಂಬುದನ್ನು ಆಲೋಚಿಸಿಬಿಡುತ್ತಿದ್ದಳು. ನನ್ನ ಮದುವೆಗೆ ಹುಡುಗಿ ನೋಡಿ ಬಂದು ನನಗೆ ಒಪ್ಪಿಗೆ ಎಂದು ಹೇಳಿದಾಗ ಬಹಳ ಹರ್ಷ ವ್ಯಕ್ತಪಡಿಸಿದಳು. ಹೂ ಮುಡಿಸುವ ಶಾಸ್ತ್ರದ ದಿನ ಮೆಚ್ಚಿ ಭಾವಿ ಸೊಸೆಗೆ ಅವಳ ಕೈಯಿಂದ ಇನ್ನೂರು ರೂಪಾಯಿಗಳನ್ನು ಪ್ರೀತಿಯಿಂದ ನೀಡಿದಳು. ಅದನ್ನು ಈಗಲೂ ನನ್ನ ಮಡದಿ ಅತ್ತೆಯ ನೆನಪಿಗೆ ಜೋಪಾನವಾಗಿ ಇಟ್ಟುಕೊಂಡಿದ್ದಾಳೆ. ನಾನು ನಾಲ್ಕು ವರ್ಷದವನಿದ್ದಾಗ ತುಂಬಾ ತುಂಟ ಮತ್ತು ಹಠಮಾರಿಯಂತೆ. ಆದರೆ ಊಟದ ವಿಷಯದಲ್ಲಿ ಏನೋ ಕೊಟ್ಟರೂ ಬೇಡ ಎನ್ನುತ್ತಿರಲಿಲ್ಲ ಎಂದು ಆಗಾಗ ನನ್ನವ್ವ ಹೇಳುತ್ತಿದ್ದಳು. ಬಹುಶಃ ಈಗಲೂ ಹಾಗೆಯೇ ಊಟದ ವಿಷಯದಲ್ಲಿ ಯಾವುದೇ ಭೇದಬಾವಲಿಲ್ಲ.
ಆದರೆ ಹಠಮಾರಿತನ ಮತ್ತು ತುಂಟುತನ ಮಾತ್ರ ಇಲ್ಲ. ನಮ್ಮ ಸಂಬಂಧಿಕರ ಮಕ್ಕಳು ತಿಂಡಿಯನ್ನು ತಿನ್ನುತ್ತಿದ್ದರೆ ನನಗೂ ಬೇಕು ಎಂದು ನನ್ನವ್ವನಿಗೆ ದಂಬಾಲು ಬೀಳುತ್ತಿದ್ದೆ. ಪಾಪ ಅವಳೋ ಬಡವಿ ಬಡತನದಲ್ಲಿ ಬೇಯತ್ತಿದ್ದಳು. ಎಲ್ಲಿಂದ ತಿಂಡಿಗಳನ್ನು ನನಗೆ ಕೊಡಿಸಲು ಸಾಧ್ಯ. ಅಡುಗೆ ಮಾಡುವಾಗ ಅವಳ ಕೊರಳುಗಳನ್ನು ಬಳಸಿ ಅಳುತ್ತಿದ್ದ ನೋಡಿ ರಾಗಿ ಮುದ್ದೆಯನ್ನು ಒಂದಿಸುವಾಗ ಬಿಸಿ ಬಿಸಿಯಾಗಿ ತೆಗೆದು ಚಿಕ್ಕ ಗೊಂಬೆಯಂತೆ ಮಾಡಿ ಅದಕ್ಕೆ ಹರಳು ಉಪ್ಪನ್ನು ಬೆರೆಸಿ ಮಿದ್ದಿಸಿ ಕೊಟ್ಟು ಬಿಡುತ್ತಿದ್ದಳು. ಅದೇ ನನಗೆ ತಿಂಡಿ ತೀರ್ಥ, ಹಣ್ಣು ಹಂಪಲುಗಳು. ಆ ಚಿಕ್ಕಗೊಂಬೆಯಂಥ ರಾಗಿ ಮುದ್ದೆಯನ್ನು ಕಡಿಯುತ್ತ ಸಂತೋಷಪಡುತ್ತಿದ್ದೆ. ಅದೇ ತಾಯಿಯ ಪ್ರೀತಿ, ಮಮತೆ. ಮಕ್ಕಳನ್ನು ಹೇಗೆ ನಿಭಾಯಿಸಬೇಕು ಎಂದು ಅವಳಿಗೆ ತಿಳಿದಿರುತ್ತದೆ.
ನನಗೆ ಹತ್ತು ವರ್ಷಗಳು ಇರಬಹುದು ಒಮ್ಮೆ ನನ್ನವ್ವ ನಮ್ಮ ಊರಿಂದ ಸ್ವಲ್ಪ ದೂರದಲ್ಲೇ ಇದ್ದ ನಮ್ಮ ಗದ್ದೆಗೆ ನೀರು ಬಿಡಲೆಂದು ರಾತ್ರಿಯ ವೇಳೆ ನನ್ನನ್ನು ಕರೆದುಕೊಂಡು ಹೋದಳು. ನೀರು ಕಡಲಿನ ತುಂಬ ಹರಿಯುತ್ತ ಗದ್ದೆಗೆ ನುಗ್ಗುತ್ತಿತ್ತು.ರಾತ್ರಿ ಸುಮಾರು ಹನ್ನೊಂದು ಗಂಟೆಯ ಸಮಯ. ನನಗೆ ನಿದ್ರೆಯ ಮಂಪರು ತೂಕಡಿಕೆ ಬರುತ್ತಿತ್ತು. ನೀರು ಬಿಡುವ ಆತುರದಲ್ಲಿದ್ದ ನನ್ನವ್ವ ನನ್ನ ಕಷ್ಟವನ್ನು ನೋಡಿ ಅಲ್ಲೇ ಸ್ವಲ್ಪ ಅಗಲವಾದ ಕಟ್ಟೆಯ ಮೇಲೆ ಮಲಗಿಸಿದಳು. ನಿದಿರೆಯಲ್ಲಿ ನೀರಿನ ಚಿಕ್ಕ ಕಾಲುವೆಯೊಳಗೆ ಉರುಳಿಬಿಟ್ಟಿದ್ದೆ.ಮೈತುಂಬಾ ಕಂಬಳಿ ಹೊದಿಸಿದ್ದರಿಂದ ನನಗೆ ನೀರಿಗೆ ಉರುಳಿದ್ದು ಗೊತ್ತಾಗಿರಲಿಲ್ಲ. ನನ್ನ ಅದೃಷ್ಟ ಅಷ್ಟರೊಳಗೆ ನನ್ನವ್ವ ಅದೇ ಸಮಯಕ್ಕೆ ಬಂದು ನೋಡಿದ್ದಾಳೆ ನಾನು ಕಾಣದ ಭಯದಲ್ಲಿ ಕಡಲನ್ನು ನೋಡಿದ್ದಾಳೆ ಏನೋ ತೇಲುತ್ತಿದೆ ಎಂದು ಮುಂದೆ ಬಂದು ನೋಡಿ ಗಾಬರಿಯಿಂದ ಎತ್ತಿಕೊಂಡು ಗೊಳೋ ಅಂತ ಅಳುತ್ತಿದ್ದಳು.
ಅದೇ ಕೊನೆ ಇನ್ನೆಂದೂ ನನ್ನನ್ನು ಕರೆದುಕೊಂಡು ಹೋಗಲಿಲ್ಲ. ಇಲ್ಲಿ ನನ್ನವ್ವನ ಎದೆಗಾರಿಕೆ ಮತ್ತು ಧೈರ್ಯವನ್ನು ಅನಾವರಣಗೊಳಿಸಲು ಹೇಳಿದಂತದ್ದು. ಹೆಣ್ಣಾಗಿದ್ದರೂ ಗಂಡಸಿನಂತೆ ಹಗಲು ರಾತ್ರಿಗಳೆನ್ನದೆ ದುಡಿದು ನಮ್ಮನ್ನು ಈ ಸ್ಥಾನಕ್ಕೆ ತಂದಿದ್ದಾಳೆ. ಆದರೆ ಈ ಸಮಯದಲ್ಲಿ ನಮ್ಮ ಜೊತೆ ಇದ್ದು ಸಂತೋಷ ಪಡಲು ಅವಳಿಲ್ಲ ಅವಳು ಈಗ ಬರೀ ನೆನಪು ಮಾತ್ರ. ಈಗ ನನ್ನ ಮಡದಿ ತುಂಬು ಗರ್ಭಿಣಿ ಅವಳ ಹಾರೈಕೆಗೆ ಯಾರ ಒತ್ತಾಸೆಯೂ ನಮಗೆ ಸರಿಯಾಗಿ ಸಿಗುತ್ತಿಲ್ಲ. ಅದೇ ನನ್ನವ್ವ ಇದ್ದರೆ ಎಷ್ಟು ಪ್ರೀತಿಯಿಂದ ಸೊಸೆ ಮತ್ತು ಮೊಮ್ಮಗುವನ್ನು ಹಾರೈಕೆ ಮಾಡುತ್ತಿದ್ದಳೋ…? ನಮಗೆ ಆ ಅದೃಷ್ಟವಿಲ್ಲ. ಅಮ್ಮ ಇರುವಾಗ ಅವಳ ಬೆಲೆ ತಿಳಿಯುವುದಿಲ್ಲ. ಇಲ್ಲದಾಗ ಬಹಳ ಕಾಡುತ್ತಾಳೆ.
–ಮಹದೇವ್ ಬಿಳುಗಲಿ
9611339024
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಭಾವ ಭೈರಾಗಿ
ಕವಿತೆ | ಕಿಚನ್ ವಕ್ತ್

- ಸಂಘಮಿತ್ರೆ ನಾಗರಘಟ್ಟ
ಎದ್ದ ತಕ್ಷಣ
ಎದ್ದೋ ಬಿದ್ದೋ ಎಂದು
ಫ್ರೆಶ್ ಆಗಲು ಬಾತ್ ರೂಂ
ನತ್ತ ಹೋಗುವುದೇ ತಡ
ಅಲ್ಲಿನ ಪುಟ್ಟ ಕನ್ನಡಿಯಲ್ಲಿ
ಹಿಡಿ ಮಾತ್ರದ ನನ್ನ ಮುಖ
ಥೇಟ್ ಆಟದ ರೋಬೋಟ್
ನಂತೆಯೇ ಕಾಣುತ್ತಿತ್ತು
ಒಳಗಿನಿಂದ ಕದ ತೆಗೆದು
ಆಚೆ ಹೆಜ್ಜೆಯಿಡುವ ಹೊತ್ತಿಗಾಗಲೇ
ಕಿಚನ್ ನಲ್ಲಿ ಆರ್ಡರ್ ಸಿದ್ಧ
ಬಿಸಿ ನೀರು ಒಬ್ಬರಿಗಾದರೆ
ಸ್ಟ್ರಾಂಗ್ ಕಾಫಿ ಇನ್ನೊಬ್ಬರಿಗೆ
ಅದನ್ನು ಕೊಡುವ ಗ್ಲಾಸ್
ಗಾಜಿನದೋ ಸ್ಟೀಲ್ ನದೋ
ಎಂಬ ಗೊಂದಲದಲ್ಲೇ
ಸ್ಟವ್ ಮೇಲಿನ ಹಾಲು
ಉಕ್ಕಿ ತನ್ನ ಹಿತ ಶತ್ರು
ಗ್ಯಾಸ್ ಟ್ಯುಬ್ ನತ್ತ ಹರಿಯುತ್ತಿತ್ತು
ಅದನ್ನು ಉಜ್ಜಿ ಕ್ಲೀನ್ ಮಾಡಿ
ಸಿಂಕ್ ನತ್ತ ನೋಡುತ್ತಿದ್ದಂತೆ
ಎಲ್ಲಾ ಪಾತ್ರೆ ಸೌಟು ಬಾಣಲೆಯಲ್ಲಿ
ತೇಲುತ್ತಿದ್ದ ಅನ್ನದ ಅಗುಳು
ಇನ್ನು ಅರೆಬರೆ ಖಾಲಿ ಆಗಿದ್ದ
ಹೊಟ್ಟೆ ಒಳಗಿನ ಕಲ್ಮಶದಂತಿತ್ತು
ರಾತ್ರಿ ,ಹಗಲು ಮಾಡುವ
ತಿಂಡಿ -ಕೆಲಸಗಳ ಚಿಂತೆಯಲ್ಲೇ
ನಿದ್ದೆ ಹೀರಿಕೊಂಡು ಮುಖ
ಹುಳಿ ಹಿಂಡಿದಂತಾಗಿತ್ತು….
ಇನ್ನೇನು ಎಲ್ಲಾ ಕೆಲಸ ಮುಗಿಸಿ
ಸೋಫಾ ದಲ್ಲಿ ಕುಳಿತು
ಸುದ್ದಿ ಫೀಡ್ ನೋಡುತ್ತಿದ್ದೆ
ಅಕ್ಕಿ ರಾಗಿಯ ಬೆಲೆ ಪಟ್ಟಿ ಏರಿತ್ತು
ಯಾಕೋ ಈಗಲೂ ದಾಸರಿರಬೇಕಿತ್ತು
ಸಮ ತೂಕ ಮಾಡಿ ಎರಡನ್ನೂ ಅಳೆದು
ನಮ್ಮವರ ಹೊಟ್ಟೆಯನ್ನೂ ತುಂಬಿಸಬೇಕೆನಿಸಿತು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಭಾವ ಭೈರಾಗಿ
ಕವಿತೆ | ರೇಖೆಗಳು

- ಡಾ.ಪುಷ್ಪಲತ ಸಿ ಭದ್ರಾವತಿ
ಗಡಿ ದೇಶಗಳೇನೊ ಹಂಚಿಕೊಂಡಿರಿ
ಆದರೆ,
ಸೂರ್ಯ ಚಂದ್ರರ ಗತಿಯೇನು
ಉಸಿರಾಡುವ ಗಾಳಿಯು ಒಂದಿರುವಾಗ
ಪ್ರಾಣವಾಯುವಿಗೆ ಬಂಧನದಲ್ಲಿರಿಸಲಾದಿತೆ
ಹರಿಯುವ ನದಿಗಳಿಗೆ ನಾಮಕರಣವೇನೋ ಮಾಡಿದಿರಿ
ಆದರೆ,
ಜರಿಗಳು, ಹಳ್ಳಕೊಳ್ಳಗಳು ಮಾಡಿದಾದರೂ ಏನು
ಪೂಜಾರಿ ಕೊಟ್ಟಿದ್ದು ತೀರ್ಥವೆ
ಆಬೆಜಂಜಂ, ಹಾಲಿ ವಾಟರ್ ಎಲ್ಲವೂ ಜಲ
ಫಾದರ್,ಪೂಜಾರಿ,ಮೌಲ್ವಿ
ಎಲ್ಲರೂ ಕುಡಿದದ್ದು ನೀರು
ಕೊನೆಗೂ ಅದರ ಮೂಲರೂಪ ಬದಲಾಗಲಿಲ್ಲ
ಮನುಷ್ಯ ,ಪ್ರಾಣಿ,ಮರಗಿಡಗಳ
ತಳಿಗಳನ್ನು ಬೇರ್ಪಡಿಸುವವನು ಮೂರ್ಖನೇ ಇರಬೇಕು .
ದೇಹದಲ್ಲಿರುವ ನರಮಂಡಲವನೊಮ್ಮೆ ಬೇರ್ಪಡಿಸಿ
ಬದುಕಲಾದಿತೆ
ಏನು?
ಕ್ರಿಸ್ತನೇನಾದರು ಬಂದು ಮತಾಂತರ ಮಾಡಿದನೇ
ಅಲ್ಲಾನೇನಾದರು ಬಂದು ರಾಮಮಂದಿರ ಕೆಡವಿದನೇ
ಶಿವನೇನಾದರು ಬಂದು ಮಸೀದಿಯನ್ನು ಹೊಡೆದುರುಳಿಸಿದನೇ..!?
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಇರುಳ ತಾರೆಗಳಂತೆ ಬೆಳಕೊಂದು ಮಿನುಗುವುದು..!

- ಪ್ರೀತಿ.ಟಿ.ಎಸ್, ದಾವಣಗೆರೆ
ಬೇಂದ್ರೆಯವರು “ಇರುಳ ತಾರೆಗಳಂತೆ ಬೆಳಕೊಂದು ಮಿನುಗುವುದು, ಕಳೆದ ದುಃಖಗಳಲ್ಲಿ ನೆನೆದಂತೆಯೆ” ಎಂದು ತಮ್ಮ ಸಖೀ ಗೀತದಲ್ಲಿ ಹಾಡುತ್ತಾರೆ. ಆದರೆ ಈ ಹೊಸ ವರ್ಷದಲ್ಲಿ ಕಹಿದಿನಗಳ ನೆನಪೇ ಬೇಡ, ಸಿಹಿ ಕಹಿ ಕನಸುಗಳನ್ನು ಕಂಡಂತಹ ಎಳೆತನದ, ಕೆಳೆತನದ ದಿನಗಳ ನೆನಪೇ ಸ್ಥಿರವಾಗಿರಲಿ; ಕಾಲನ ಹೊಡೆತಕ್ಕೆ ಆ ಕನಸುಗಳ ನೆನಪು ಮರೆಯಾಗದಿರಲಿ.
ಹೊಸ ವರ್ಷದಲ್ಲಿ ಇದೆಂತ ಬರಿತ್ತಿದ್ದಾರೆ ಅಂತೀರ! ನಿಮಗಿಂದು ಬರೀ ಹೊಸ ವರುಷ. ಆದರೆ ನನಗೋ ನನ್ನ ಜೀವನ ಪಾವನವಾಗಿಸುವ ದಿನ. ಯಾಕೇ ಗೊತ್ತಾ? ನನ್ನ ಸಾಹಿತ್ಯ ಕ್ಷೇತ್ರಕ್ಕೆ ಅನುಕರಿಣಿಸಿ, ಸಮಾಜ ಕ್ಷೇತ್ರದಲ್ಲಿ ನನ್ನನ್ನ ತೊಡಗುವಂತೆ ಮಾಡಿ, ಕಿಂಚಿತಾದರೂ ನನ್ನಲ್ಲಿ ದಯೆ, ಕರುಣೆ, ವಿಶ್ವಾಸ, ಪ್ರೀತಿ ಹೀಗೆ ಅನೇಕ ಭಾವಗಳನ್ನ ಚಿಕ್ಕಂದಿನಿಂದ ತಿದ್ದಿ ತೀಡಿದ ನನ್ನ ತಂದೆ ತಾಯಿಯ ಜನುಮ ದಿನ.
ಹೊಸ ವರುಷಕ್ಕಿಂತ ಇವರೀರ್ವರ ಜನುಮವೇ ಅದೇನೋ ಸಂಭ್ರಮ. ಅದೇನೋ ಸಡಗರ. ಹಳೆಯ ನೆನಪಿನ ಬುತ್ತಿಯನ್ನು ಮುಚ್ಚಿಟ್ಟು ಹೊಸ ಜೀವನದ ಪಯಣಕ್ಕೆ ಅದೇನೋ ಕಾತುರದಿಂದ ಗಡಿಬಿಡಿಯಾಗುವಾಗ ಅಪ್ಪಾಜಿ ಬಂದು ಹಾದಿಯಲ್ಲಿ ಕಲ್ಲು- ಮುಳ್ಳುಗಳಿರಬಹುದು ಎಚ್ಚರ! ಆದರೆ ಅದನ್ನು ಎದುರಿಸಿ ಮುನ್ನಡೆದಾಗಲೇ ಸುಖ ಸಾಗರ ಎಂಬ ಅವರ ಆಶಯದ ನುಡಿ ಮಾತುಗಳು ಬಹುಶಃ ಇಂದು ನನ್ನನ್ನು ಇಲ್ಲಿಯವರೆಗೂ ತಂದು ನಿಲ್ಲಿಸಿದೆ.
ಮಾಮೂಲೀ ವಾಟ್ಸ್ಆ್ಯಪ್, ಫೇಸ್ಬುಕ್, ಇನ್ಸ್ಟಾಗ್ರಾಮ್ ನಲ್ಲಿ ತಂದೆ-ತಾಯಿಯ ಪೋಸ್ಟ್ ಹಾಕಿ ವಿಶ್ ಮಾಡಿದ್ರೆ ಮುಗಿತಿತ್ತು. ಆದರೆ ಈ ಭಾರಿ, ನನಗಾಗುತ್ತಿರುವುದು ವಿಚಿತ್ರ ಅನುಭವ. ಸಾವಿರ ನೋವು, ದುಃಖ-ದುಮ್ಮಾನಗಳು ಎದೆಯಲ್ಲಿದ್ರು ನಮ್ಮ ಮುಂದೆ ತೋರಿಸದೆ ಮನಸ್ಸಲ್ಲೇ ಇಟ್ಟು ಕೊರಗುತ್ತ ಒಳ್ಳೆಯ ವಿದ್ಯಾಭ್ಯಾಸ ನೀಡಿ, ಸಂಸ್ಕೃತಿ, ನಾಡು-ನುಡಿ, ಸಂಸ್ಕಾರವನ್ನು ಭಿತ್ತುತ್ತ ಬಂದಿದ್ದಾರೆ. ಸುಖದಲ್ಲೆ ಬೆಳೆದ ನಮಗೆ ಕಹಿ ಜೀವನದ ಅನುಭವ ಕಡಿಮೆಯೇ!
ಅಪ್ಪಜಿ-ಅಮ್ಮನ ಆಸೆಯಂತೆ ಮಾಸ್ಟರ್ ಆಫ್ ಜರ್ನಲಿಸಂ ಅಲ್ಲಿ ಎರಡು ಬಂಗಾರದ ಪದಕ ಗೆದ್ದು ಅವರಿಗೆ ನೀಡಿ ಆಸೆ ತೀರಿಸಿದ ನಂತರವಷ್ಟೇ ತಿಳಿದ್ದದ್ದು. ಜೀವನದ ಆಳವೆಷ್ಟು ಎಂದು? ಅಪ್ಪಾಜಿ ಅಮ್ಮನನ್ನು ಬಿಟ್ಟು ಕೆಲಸ ಹುಡುಕುತ್ತ ಬೆಂಗಳೂರಿಗೆ ಬಂದಾಗ ನಿಜವಾದ ರೋಧನೆ, ನೋವು, ಒಂಟಿತನ, ಕಷ್ಟ, ಉಪವಾಸ, ಅನ್ನದ ಬೆಲೆ ಹೀಗೆ ಬದುಕಿನ ಅಷ್ಟು ಪಾಠಗಳು ತಿಳಿಯುತ್ತ ಹೋದದ್ದು. ಎಂತಹ ಒದ್ದಾಟದಲ್ಲೂ ನನ್ನ ತಂದೆ-ತಾಯಿಗೆ ತಿಳಿಸದೆ ನಗ್ತ ನಗ್ತ ಮಾತಾಡಿದ್ರು ಕ್ಷಣಮಾತ್ರದಲ್ಲಿ ಅಪ್ಪಜಿ ಮಾತ್ರ ನನ್ನ ನಗುವಿನ ಹಿಂದಿನ ದುಃಖನ ಗುರುತಿಸಿ, ಮತ್ತಷ್ಟು ಬಲ ತುಂಬುತ್ತ ಬಂದವರು.
ಜನವರಿ 1 ಬಂತೆಂದರೆ ಅಪ್ಪಾಜಿ ಅಮ್ಮನ ಹುಟ್ಟು ಹಬ್ಬ. ಈ ಭಾರಿ ನಾನು ನಿಮಗೆನೂ ಮಾಡಿದೇನು? ಕಡೆಪಕ್ಷ ಅವರ ಮುಂದೆ ಹೋಗಿ ನಿಂತು ಶುಭಾಶಯ ತಿಳಿಸಿ ಬಂದು ಬಿಡಲೇ ಎಂದರೆ ಕೈಯಲ್ಲಿ ಕಾಸಿಲ್ಲ. ಇಲ್ಲಿಂದಲೇ ಶುಭಾಶಯ ತಿಳಿಸಿ ಸುಮ್ಮನಾಗಿ ಬಿಡಲೇ ಎಂದರೆ ಮನಸ್ಸು ಒಪ್ಪುತ್ತಿಲ್ಲ. ಇದೀಗ ದುಡಿತ್ತಿದ್ದಿನಾದರು ಕಣ್ಣ ಮುಂದಿರುವ ಅಷ್ಟು ಹೊಣೆಗಾರಿಕೆಗಳು ನನ್ನನ್ನ ಕಟ್ಟಿಹಾಕ್ತಿದೆ. ಈ ಗೊಂದಲದ ನಡುವೇ ಈ ಲೇಖನ ನಿಮಗಾಗಿ.
ಅಪ್ಪಜಿ-ಅಮ್ಮ ಈ ಭಾರಿ ಹೊಸ ವರುಷದ ಹೊಸ ಆಚರಣೆ ಸಾಧ್ಯವಾಗದಿದ್ದರು ಬೇಸರಿಸದಿರಿ. ಯಾಕೆಂದರೆ ನಿಮಗಾಗಿ ನೀವು ಕಂಡ ಹೊಸ ಕನಸಿನ ಗೂಡೊಂದನ್ನ ಹೊತ್ತು ತರುತ್ತಿದ್ದೇನೆ. ತಂದ ದಿನವೇ ನಿಮ್ಮ ಈ ಜನುಮೋತ್ಸವವನ್ನು ಆಚರಿಸ್ತೇನೆ. ಇದನ್ನ ನಿಮ್ಮೊಡನೇ ಹೇಳಬಹುದಿತ್ತಾದರು, ನನ್ನ ಸಹಪಯಣಿಗರೊಡನೆ ಹಂಚಿಕೊಂಡ ಈ ಕನಸುಗಳು ನಮ್ಮ ಬಾಳಿನ ಮುಂದಿನ ಪಯಣದ ಬುತ್ತಿಯಾಗುತ್ತದೆ ಎಂಬುದು ನನ್ನ ಭಾವನೆ.
ಇಂತಹ ಅದೆಷ್ಟೋ ಅನುಭವಗಳು ಮನೆ ಬಿಟ್ಟು, ತಂದೆ ತಾಯಿಯ ಆಶಯವನ್ನು ನೆನಸಾಗಿಸೋ ಸಾವಿರ ಕನಸುಗಳನ್ನು ಹೊತ್ತು ಬಂದ ಅದೆಷ್ಟೋ ಮನಸ್ಸುಗಳಿಗೆ ಆಗಿರುತ್ತೆ. ಇನ್ನು ಕೆಲವರಿಗೆ ಇಡೀ ವರ್ಷದ ಶ್ರಮದಾಯಕ ದುಡಿಮೆ ಬಳಿಕ ಮನಸ್ಸು ಸ್ವಲ್ಪ ವಿಶ್ರಾಂತಿಯನ್ನು, ಮನೋರಂಜನೆಯನ್ನು ಬಯಸುತ್ತದೆ. ಕುಟುಂಬದ ಬಂಧವನ್ನು ಗಟ್ಟಿಗೊಳಿಸಲು ಮತ್ತು ಪ್ರೀತಿ, ಅನುಬಂಧವನ್ನು ಬಿತ್ತಲು ಹೊಸವರ್ಷವೊಂದು ಸುವರ್ಣಾವಕಾಶ. ನಮ್ಮ ಎಲ್ಲ ಕೆಲಸಕ್ಕೆ ಸ್ವಲ್ಪ ಸಮಯ ವಿಶ್ರಾಂತಿ ಕೊಟ್ಟು ರಿಲ್ಯಾಕ್ಸ್ ಮಾಡುವ ಮೂಲಕ ಸಂಭ್ರಮ, ಸಡಗರಕ್ಕೆ ಅಣಿಯಾಗೋಣ. ನಿಮ್ಮೆಲ್ಲರ ಆಸೆ, ನಿರೀಕ್ಷೆಗಳು ನೆರವೇರಲಿ ಎಂದು ಮನಸ್ಸಲ್ಲೆ ಪ್ರಾರ್ಥಿಸುತ್ತಾ, ಮುಸ್ಸಂಜೆ ಕವಿಯುತ್ತಿರುವಾಗಲೂ ಮರುದಿನದ ಬೆಳಗು ಆಶಾಕಿರಣವನ್ನು ಹೊತ್ತು ತರಲಿ ಎಂದು ಹಾರೈಸುತ್ತೇನೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
