ದಿನದ ಸುದ್ದಿ
ಅಸ್ಸಾಮ್ನಲ್ಲಿ ಎನ್ಆರ್ಸಿ ಪ್ರಕ್ರಿಯೆ ಎತ್ತ ಸಾಗಿದೆ..? ಪೌರತ್ವ ನಿರ್ಧಾರದಲ್ಲಿ ಕೋಮುವಾದಿ ಹುನ್ನಾರ..!

- ಸವಿದೇಶಿಯರನ್ನು ಹೊರತುಪಡಿಸಿ ಎಲ್ಲಾ ಭಾರತೀಯರನ್ನು ಸೇರಿಸಿಕೊಳ್ಳುವ ಉದ್ದೇಶ ಹೊಂದಿದ್ದ ಅಸ್ಸಾಮ್ನ ಎನ್ಆರ್ಸಿ ಪ್ರಕ್ರಿಯೆಯನ್ನು ಈಗ ಬಿಜೆಪಿಯ ಕೋಮುವಾದಿ ಹಾಗೂ ಸಂಕುಚಿತ ಉದ್ದೇಶಕ್ಕೆ ಅಪಹರಿಸುವ ಅಪಾಯವಿದೆ. ಕೋಮುವಾದದ ಆಧಾರದಲ್ಲಿ ಪೌರತ್ವವನ್ನು ನಿರ್ಧರಿಸುವ ಕ್ರಮ ಅಸಂವಿಧಾನಿಕವಾದುದು ಹಾಗೂ ವಿಭಜನಕಾರಿಯಾದುದು. ಅಲ್ಲದೆ ಎನ್ಆರ್ಸಿಯ ದೋಷಪೂರಿತ ಅನುಷ್ಠಾನದಿಂದ ಉದ್ಭವಿಸುವ ಅವಾಂತರಗಳನ್ನು ಪರಿಹರಿಸಲು ವಿಫಲವಾದರೆ ಅದು ಪೌರರ ಹಕ್ಕುಗಳು ಮತ್ತು ಮಾನವ ಹಕ್ಕುಗಳ ಉಲ್ಲಂಘನೆಗೆ ಸಮನಾಗುತ್ತದೆ. ಇದರಿಂದ ಭಾರತ ಒಂದು ಪ್ರಜಾಪ್ರಭುತ್ವ ಮತ್ತು ಕಾನೂನು ಪಾಲಿಸುವ ಸಮಾಜ ಎಂಬ ಘನತೆಗೆ ಅಂತಾರ್ರಾಷ್ಟ್ರೀಯ ಮಟ್ಟದಲ್ಲಿ ಗಂಭೀರ ಕಳಂಕ ಬರುತ್ತದೆ.
ಅಸ್ಸಾಮ್ನಲ್ಲಿ ನಾಗರಿಕ ಗಣತಿ ನಡೆಸುವ ರಾಷ್ಟ್ರೀಯ ಪೌರತ್ವ ದಾಖಲೆ (ಎನ್ಆರ್ಸಿ)ಯ ಪ್ರಕ್ರಿಯೆ ಸುಪ್ರೀಂ ಕೋರ್ಟ್ನ ಆದೇಶದ ಅನ್ವಯ ಜುಲೈ 31ರಂದು ಅಂತಿಮ ಪಟ್ಟಿಯ ಪ್ರಕಟಣೆಯೊಂದಿಗೆ ಪೂರ್ಣಗೊಳ್ಳುವ ಹಂತ ತಲುಪಬೇಕಾಗಿದೆ. ಈ ಪ್ರಕ್ರಿಯೆಯನ್ನು ನಡೆಸಿದ ರೀತಿ ಅನೇಕ ಅನುಮಾನಗಳಿಗೆ ಎಡೆಮಾಡಿದೆ; ದಾಖಲೆಯಲ್ಲಿ ನೈಜ ಭಾರತೀಯ ನಾಗರಿಕರನ್ನು ಸೇರಿಸುವ ವಿಚಾರದಲ್ಲಿ ಭಾರೀ ಪ್ರಮಾಣದ ಲೋಪದೊಷಗಳು ಕಂಡುಬಂದಿವೆ.
2018ರ ಜುಲೈ 30ರಂದು ಪ್ರಕಟವಾದ ಎನ್ಆರ್ಸಿ ಕರಡು ಪಟ್ಟಿಯಲ್ಲಿ 3.29 ಕೋಟಿ ಅರ್ಜಿದಾರರ ಪೈಕಿ 40.7 ಲಕ್ಷ ಜನರನ್ನು ಕೈಬಿಡಲಾಗಿತ್ತು. ನಿಯಮದ ಪ್ರಕಾರ, ಪಟ್ಟಿಯಿಂದ ಬಿಡಲಾದವರು ತಮ್ಮ ಸೇರ್ಪಡೆಗಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಅದೇ ರೀತಿ ಸೇರ್ಪಡೆಯಾಗಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಲೂ ಅವಕಾಶವಿದೆ.
ಈ ಪ್ರಕ್ರಿಯೆಯ ನಂತರ, ಪಟ್ಟಿಯನ್ನು ಅಂತಿಮಗೊಳಿಸಿ 2019ರ ಜುಲೈ 31ರಂದು ಪ್ರಕಟಿಸಲು ಕ್ರಮಕೈಗೊಳ್ಳಲಾಗಿತ್ತು. ಆದರೆ, ಈ ವರ್ಷ ಜೂನ್ ೨೬ರಂದು ಅನರ್ಹರು ಎಂದು ಹೇಳಿ ಅಧಿಕಾರಿಗಳು ಮತ್ತೆ 1,02,462 ಹೆಸರುಗಳನ್ನು ಕರಡು ಎನ್ಆರ್ಸಿ ಪಟ್ಟಿಯಿಂದ ಕೈಬಿಟ್ಟಿದ್ದರು. ಪ್ರಸ್ತುತ ಹೊರತುಪಡಿಸುವಿಕೆಯು ಡಿ, ಅಂದರೆ ಮತದಾರರ ಪಟ್ಟಿಯ ಅನುಮಾನಾಸ್ಪದ (ಡೌಟ್ಫುಲ್) ವಿಭಾಗದಲ್ಲಿ ಸೇರಿದವರನ್ನೂ ಒಳಗೊಂಡಿದೆ ಅಥವಾ ವಿದೇಶಿಯರೆಂದು ಅನುಮಾನಕ್ಕೊಳಗಾಗಿದ್ದು ವಿದೇಶಿಯರ ನ್ಯಾಯಮಂಡಳಿಯ ಮುಂದೆ ವಿಚಾರಣೆ ಎದುರಿಸುತ್ತಿರುವವರನ್ನೂ ಒಳಗೊಂಡಿದೆ ಎಂದು ತಿಳಿಸಲಾಗಿದೆ. ಈ ಹೆಚ್ಚುವರಿ ಹೊರತುಪಡಿಸುವಿಕೆಯೇ ಇನ್ನಷ್ಟು ಪ್ರಶ್ನೆಗಳಿಗೆ ಕಾರಣವಾಗಿದೆ. ಯಾಕೆಂದರೆ ಡಿ ವಿಭಾಗದಲ್ಲಿರುವ ಎಲ್ಲ ವ್ಯಕ್ತಿಗಳನ್ನು ಹೊರತು ಪಡಿಸಲಾಗಿದೆ ಎಂದು ಕರಡು ಎನ್ಆರ್ಸಿ ವೇಳೆಯೇ ಘೋಷಿಸಲಾಗಿತ್ತು.
ಪ್ರಕ್ರಿಯೆಯು ದೋಷಪೂರಿತವಾಗಿದೆ ಹಾಗೂ ಅನೇಕ ತಪ್ಪುಗಳೂ ನಡೆದಿವೆ ಎಂಬುದನ್ನು ಮಾಧ್ಯಮಗಳಲ್ಲಿ ಪ್ರಕಟವಾದ ಅನೇಕ ವರದಿಗಳು ಎತ್ತಿತೋರಿಸಿವೆ. ಸೇನೆಯಲ್ಲಿ 30 ವರ್ಷ ಸೇವೆ ಸಲ್ಲಿಸಿ ಆನಂತರ ಗಡಿ ಪೊಲೀಸ್ ಪಡೆಯನ್ನು ಸಹಾಯಕ ಸಬ್ ಇನ್ಸ್ಪೆಕ್ಟರ್ ಆಗಿ ಸೇರಿದ ನಾನ್-ಕಮಿಷನ್ಡ್ ಆಫೀಸರ್ ಮಹಮದ್ ಸನಾವುಲ್ಲಾ ಪ್ರಕರಣ ಒಂದು ಉದಾಹರಣೆಯಾಗಿದೆ. ಅವರ ಹೆಸರು ಡಿ ಪಟ್ಟಿಯಲ್ಲಿತ್ತು ಹಾಗೂ ಅವರನ್ನು ವಿದೇಶೀಯ ಎಂದು ವಿದೇಶಿಗರ ನ್ಯಾಯಮಂಡಳಿ (ಫಾರಿನರ್ಸ್ ಟ್ರಿಬ್ಯುನಲ್) ಘೋಷಿಸಿತು. ಸನಾವುಲ್ಲಾ ಅಸ್ಸಾಮ್ನಲ್ಲಿ ಹುಟ್ಟಿದವರಾದರೂ ಮತ್ತು ಹುಟ್ಟಿದ ಊರಿನಲ್ಲಿ ಕುಟುಂಬದ ಬೇರುಗಳು ಆಳವಾಗಿದ್ದರೂ ಈ ರೀತಿ ಮಾಡಲಾಯಿತು. ಅವರನ್ನು ಪ್ರತಿಬಂಧನ ಶಿಬಿರಕ್ಕೆ ಕಳಿಸಲಾಯಿತು. ಹೈಕೋರ್ಟ್ ಅವರಿಗೆ ಜಾಮೀನು ಮಂಜೂರು ಮಾಡಿದ ನಂತರವಷ್ಟೇ ಹತ್ತು ದಿನಗಳ ನಂತರ ಅವರು ಹೊರಬರುವುದು ಸಾಧ್ಯವಾಯಿತು.
ಸುನಿರ್ಮಲ್ ಬಾಗ್ಚಿ ಅವರದ್ದು ಇನ್ನೊಂದು ಪ್ರಕರಣ. 2018ರ ಜುಲೈನಲ್ಲಿ ಪ್ರಕಟಿಸಲಾದ ಕರಡು ಪಟ್ಟಿಯಲ್ಲಿ ಅವರ ಹೆಸರಿತ್ತು. ಆದರೆ ಈ ವರ್ಷ ಜೂನ್ನಲ್ಲಿ ಪ್ರಕಟಿಸಲಾದ ಹೆಚ್ಚುವರಿ ಹೊರತುಪಡಿಸುವಿಕೆ ಪಟ್ಟಿಯಲ್ಲಿ ಅವರ ಹೆಸರನ್ನು ಕರಡು ಪಟ್ಟಿಯಿಂದ ಹೊಡೆದುಹಾಕಲಾಗಿದೆ. ಆತ ಒಬ್ಬ ವಿದೇಶಿ ಎಂದು ಘೋಷಿಸಲಾಗಿದೆ ಎನ್ನುವುದು ಇದಕ್ಕೆ ನೀಡಲಾದ ಕಾರಣವಾಗಿದೆ. ಬಾಗ್ಚಿ ಅವರು ಸಿಲ್ಚಾರ್ ಪಟ್ಟಣದಲ್ಲಿ 1943 ಸೆಪ್ಟೆಂಬರ್ 23ರಂದು ಜನಿಸಿದವರು. ಹಾಗಿರುವಾಗ ಅವರು ಒಬ್ಬ ವಿದೇಶೀಯ ಆಗಲು ಹೇಗೆ ಸಾಧ್ಯ ಎನ್ನುವುದಕ್ಕೆ ಅಧಿಕಾರಿಗಳಲ್ಲಿ ಉತ್ತರವಿಲ್ಲ. ಆದರೆ ಇದೊಂದು ಕ್ಲರಿಕಲ್ ದೋಷದ ಪರಿಣಾಮ ಎಂದು ಎನ್ಆರ್ಸಿ ಅಧಿಕಾರಿಗಳು ಈಗ ಹೇಳುತ್ತಿದ್ದಾರೆ.
ಚಿರಾಂಗ್ ಜಿಲ್ಲೆಯ ಒಬ್ಬ ಬಡ ವಿಧವೆ ಮಧುಬಾಲಾ ಅವರನ್ನು ಬಂಧಿಸಿರುವುದು ಒಂದು ಕಳವಳಕಾರಿ ಸಂಗತಿಯಾಗಿದೆ. ಫಾರಿನರ್ಸ್ ಟ್ರಿಬ್ಯುನಲ್ ಅವರನ್ನು ವಿದೇಶಿ ಎಂದು ಘೋಷಿಸಿದ ಹಿನ್ನೆಲೆಯಲ್ಲಿ ಮಧುಬಾಲಾರನ್ನು ಮೂರು ವರ್ಷಗಳಿಂದ ಪ್ರತಿಬಂಧನದಲ್ಲಿಡಲಾಗಿತ್ತು. ಮಧುಬಾಲಾ ಎಂಬ ಹೆಸರಿನ ಮತ್ತೊಬ್ಬ ಮಹಿಳೆಯ ವಿಚಾರದಲ್ಲಿ ತಪ್ಪಾಗಿ ತಿಳಿದು ಈ ಮಧುಬಾಲಾರನ್ನು ಹಿಡಿದಿಡಲಾಗಿತ್ತು ಎನ್ನುವುದು ಇತ್ತೀಚೆಗೆ ತಿಳಿದು ಅವರ್ನು ಬಿಡುಗಡೆ ಮಾಡಲಾಯಿತು. ಆದರೆ, ಅಕ್ರಮವಾಗಿ ಅವರನ್ನು ಬಂಧಿಸಿಟ್ಟಿದ್ದಕ್ಕೆ ಪರಿಹಾರ ನೀಡಲಾಗುವುದೇ ಎಂಬ ಬಗ್ಗೆ ಎಂದು ಚಕಾರವನ್ನೇ ಎತ್ತಿಲ್ಲ.
ಮಗನನ್ನು ಪಟ್ಟಿಯಲ್ಲಿ ಸೇರಿಸಿ ತಂದೆಯನ್ನು ಕೈಬಿಟ್ಟ ಅಥವಾ ಒಡಹುಟ್ಟಿದವರಲ್ಲಿ ಒಬ್ಬರನ್ನು ಸೇರಿಸಿ ಇನ್ನೊಬ್ಬರನ್ನು ಬಿಟ್ಟ ಈ ರೀತಿಯ ಅನೇಕಾನೇಕ ಪ್ರಕರಣಗಳು ಇಲ್ಲಿವೆ.
ಬಾಂಗ್ಲಾದೇಶದಿಂದ ಬಂದ ಅಕ್ರಮ ವಲಸಿಗರಿಂದ ಮುಕ್ತಿ ಪಡೆಯಬೇಕು ಎಂದು ಕೇಂದ್ರದ ಬಿಜೆಪಿ ಸರಕಾರ ಸದಾ ಜಪಿಸುತ್ತಲೇ ಇದೆ. ಈಗ ಕೇಂದ್ರ ಗೃಹ ಸಚಿವರಾಗಿರುವ ಅಮಿತ್ ಷಾ ಚುನಾವಣೆ ಪ್ರಚಾರದ ವೇಳೆ ಇವರನ್ನು ಗೆದ್ದಲು ಎಂದು ಕರೆದಿದ್ದರು. ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾದೇಶದ ಗಡಿಗೆ ಹೊಂದಿರುವ ರಾಜ್ಯಗಳಿಗೆ ಎನ್ಆರ್ಸಿ ವಿಸ್ತರಿಸಲು ಮೋದಿ ಸರಕಾರ ಕಟಿಬದ್ಧವಾಗಿದೆ. ಮುಸ್ಲಿಂ ಮೂಲದ ನಾಗರಿಕರನ್ನು ಗುರಿಯಾಗಿಸಲಾಗುವುದು ಎಂಬ ಭೀತಿ ಕಾಡತೊಡಗಿದೆ.
ಇದೇ ಹೊತ್ತಿಗೆ ಬಾಂಗ್ಲಾದೇಶದಿಂದ ಬಂದ ಹಿಂದೂ ವಲಸಿಗರಿಗೆ ಪೌರತ್ವ ಕಾನೂನನ್ನು ತಿದ್ದುಪಡಿ ಮಾಡುವ ಮೂಲಕ ಪೌರತ್ವ ನೀಡಲಾಗುವುದು ಎಂದು ಬಿಜೆಪಿ ಆಶ್ವಾಸನೆ ನೀಡುತ್ತಿದೆ. ಎನ್ಆರ್ಸಿಯಿಂದ ಕೈಬಿಟ್ಟ ಹಿಂದೂ ನಿರಾಶ್ರಿತರಿಗೆ ಪೌರತ್ವ ನೀಡಲಿಕ್ಕಾಗಿ ಸರಕಾರ ಒಂದು ಮಸೂದೆ ತರಲಿದೆ ಎಂದು ಗೃಹ ಸಚಿವ ಅಮಿತ್ ಷಾ ಜುಲೈ ಒಂದರಂದು ರಾಜ್ಯಸಭೆಯಲ್ಲಿ ಹೇಳಿದ್ದಾರೆ.
ವಿದೇಶಿಯರನ್ನು ಹೊರತು ಪಡಿಸಿ ಎಲ್ಲಾ ಭಾರತೀಯರನ್ನು ಸೇರಿಸಿ ಕೊಳ್ಳುವ ಉದ್ದೇಶ ಹೊಂದಿದ್ದ ಎನ್ಆರ್ಸಿ ಪ್ರಕ್ರಿಯೆಯನ್ನು ಈಗ ಬಿಜೆಪಿಯ ಕೋಮುವಾದಿ ಹಾಗೂ ಸಂಕುಚಿತ ಉದ್ದೇಶಕ್ಕೆ ಅಪಹರಿಸುವ ಅಪಾಯವಿದೆ.
ಅಸ್ಸಾಮ್ನಲ್ಲಿ ಎನ್ಆರ್ಸಿ ಪ್ರಕ್ರಿಯೆ ಅನೇಕ ಪ್ರಶ್ನೆಗಳನ್ನು ಎತ್ತಿದ್ದು ಅವುಗಳಿಗೆ ಪರಿಹಾರ ಸಿಗಬೇಕಾಗಿದೆ. ಎನ್ಆರ್ಸಿಯ ಅಂತಿಮ ಪಟ್ಟಿಯ ಪ್ರಕಟಣೆಯ ನಂತರ, ಅನ್ಯಾಯವಾಗಿ ಅಥವಾ ತಪ್ಪಾಗಿ ಕೈಬಿಡಲಾದವರಿಗೆ-ಅದು ಅಧಿಕಾರಿಗಳ ತಪ್ಪಿನಿಂದಲೇ ಆಗಿರಲಿ, ಕೋಮುವಾದಿ ಪಕ್ಷಪಾತದಿಂದಲೇ ಆಗಿರಲಿ- ನ್ಯಾಯ ಒದಗಿಸಲು ಒಂದು ಶೀಘ್ರ ಕಾನೂನು ಪ್ರಕ್ರಿಯೆ ಆರಂಭವಾಗಬೇಕು. ಪೌರತ್ವ ದಾಖಲೆಯಿಂದ ಕೈಬಿಡಲಾದ ಮಿಲಿಯಗಟ್ಟಲೆ ಜನರಿಗೆ ಏನು ಆಗಬಹುದು?. ಪೌರರಲ್ಲದ ಅವರ ಸ್ಥಾನಮಾನ ಹಾಗೂ ಹಕ್ಕುಗಳು ಏನು?. ವಿದೇಶಿಗರ ನ್ಯಾಯಮಂಡಳಿಯಿಂದ ವಿದೇಶಿಯರು ಎಂದು ಘೋಷಿತರಾದವರನ್ನು ಬಾಂಗ್ಲಾದೇಶಕ್ಕೆ ಕಳಿಸಲು ಸಾಧ್ಯವಿಲ್ಲ ಎನ್ನುವುದು ಆಗಲೇ ಸ್ಪಷ್ಟವಾಗಿರುವಾಗ- ಅವರನ್ನು ಸ್ವೀಕರಿಸಲು ಬಾಂಗ್ಲಾದೇಶ ನಿರಾಕರಿಸಿದೆ- ಅವರನ್ನು ಬಂಧನ ಕೇಂದ್ರಗಳಲ್ಲಿ ಅನಿರ್ದಿಷ್ಟ ಕಾಲ ಕೊಳೆ ಹಾಕಲಾಗುವುದೇ?.
ಎನ್ಆರ್ಸಿ ಪ್ರಕ್ರಿಯೆಯನ್ನು ಆರಂಭಿಸಿ ಅದರ ಮೇಲುಸ್ತುವಾರಿ ನೋಡಿಕೊಂಡ ಸುಪ್ರೀಂ ಕೋರ್ಟ್ ಈ ವಿಷಯಗಳಿಗೆ ಪ್ರತಿಕ್ರಿಯಿಸದೆ ನುಣುಚಿಕೊಳ್ಳಲಾಗದು. ಭಾರತೀಯ ನಾಗರಿಕತ್ವ ಮತ್ತು ನಾಗರಿಕರ ಹಕ್ಕುಗಳ ಮೂಲಭೂತ ವಿಚಾರಗಳು ಇಲ್ಲಿ ಅಡಕವಾಗಿವೆ. ಎನ್ಆರ್ಸಿಯ ದೋಷಪೂರಿತ ಅನುಷ್ಠಾನದಿಂದ ಉದ್ಭವಿಸುವ ಅವಾಂತರಗಳನ್ನು ಪರಿಹರಿಸಲು ವಿಫಲವಾದರೆ ಅದು ಪೌರರ ಹಕ್ಕುಗಳು ಮತ್ತು ಮಾನವ ಹಕ್ಕುಗಳ ಉಲ್ಲಂಘನೆಗೆ ಸಮನಾಗುತ್ತದೆ. ಇದರಿಂದ ಭಾರತ ಒಂದು ಪ್ರಜಾಪ್ರಭುತ್ವ ಮತ್ತು ಕಾನೂನು ಪಾಲಿಸುವ ಸಮಾಜ ಎಂಬ ಘನತೆಗೆ ಅಂತಾರ್ರಾಷ್ಟ್ರೀಯ ಮಟ್ಟದಲ್ಲಿ ಗಂಭೀರ ಕಳಂಕ ಬರುತ್ತದೆ.
ಅಂತಿಮ ಪಟ್ಟಿ ಪ್ರಕಟಣೆಯ ಜುಲೈ 31ರ ಗಡುವು ಸಮೀಪಿಸುತ್ತಿರುವಾಗ ಇಂಥ ಸನ್ನಿವೇಶ ಇರುವ ಹೊತ್ತಿನಲ್ಲೇ ಕೇಂದ್ರ ಸರಕಾರ ಮತ್ತು ಅಸ್ಸಾಂ ರಾಜ್ಯ ಸರಕಾರ ಹಠಾತ್ತನೆ ಒಂದು ಹೊಸ ಬೇಡಿಕೆಯೊಂದಿಗೆ ಸುಪ್ರೀಂ ಕೋರ್ಟ್ನ ಮೊರೆ ಹೋಗಿದೆ. ಅಂತಿಮ ಪಟ್ಟಿ ಪ್ರಕಟಣೆಯ ಗಡುವನ್ನು ಜುಲೈ 31ರಿಂದ ಬೇರೊಂದು ದಿನಾಂಕ್ಕೆ ಮುಂದೂಡಬೇಕೆನ್ನುವುದೇ ಆ ಬೇಡಿಕೆಯಾಗಿದೆ. ಈ ನಡುವೆ, 2018ರ ಜುಲೈ 30ರಂದು ಪ್ರಕಟಿಸಲಾದ ಎನ್ಆರ್ಸಿ ಕರಡಿನಲ್ಲಿರುವ ಹೆಸರುಗಳ ಸ್ಯಾಂಪಲ್ ಪುನರ್-ದೃಢೀಕರಣ ಆಗಬೇಕೆಂಬುದು ಅವುಗಳ ಬೇಡಿಕೆ. ಬಾಂಗ್ಲಾದೇಶದ ಗಡಿಗೆ ಹೊಂದಿರುವ ಜಿಲ್ಲೆಗಳ ಶೇಕಡಾ ೨೦ರಷ್ಟು ಹಸರುಗಳ ಮರು-ದೃಢೀಕರಣ ಮತ್ತು ರಾಜ್ಯದ ಉಳಿದ ಭಾಗಗಳಲ್ಲಿ ಶೇಕಡಾ ೧೦ ಮರು-ದೃಢೀಕರಣ ಆಗಬೇಕು ಎಂದು ಅವು ಹೇಳಿವೆ.
ದುರುದ್ದೇಶಪೂರಿತವಾದ ಈ ಮನವಿಯು ಈಗಾಗಲೇ ಪದೇ ಪದೇ ವಿಚಾರಣೆಗಳು ಮತ್ತು ದಾಖಲೆಪತ್ರಗಳ ಸಲ್ಲಿಕೆಗಳಿಂದ ಹೈರಾಣವಾಗಿರುವ ಲಕ್ಷಾಂತರ ನಾಗರಿಕರಿಗೆ ಮತ್ತಷ್ಟು ಕಿರುಕುಳ ಮುಂದುವರಿಸಲು ಕಾರಣವಾಗುತ್ತದೆ.
ಈ ಕ್ರಮವನ್ನು ದೃಢವಾಗಿ ವಿರೋಧಿಸಬೇಕು. ಪೌರತ್ವ ಕಾನೂನಿಗೆ ತಿದ್ದುಪಡಿ ತರು ವರೆಗೆ ಅಥವಾ ಬಾಂಗ್ಲಾದೇಶದ ಹಿಂದೂ ವಲಸಿಗರಿಗೆ ನಾಗರಿಕತ್ವ ನೀಡುವವರೆಗೆ ಎನ್ಆರ್ಸಿಯನ್ನು ಅಂತಿಮಗೊಳಿಸುವುದನ್ನು ವಿಳಂಬ ಮಾಡುವುದು ಮೋದಿ ಸರಕಾರ ಉದ್ದೇಶ ಎಂದು ನಂಬಲು ಬೇಕಷ್ಟು ಕಾರಣಗಳಿವೆ. ಕೋಮುವಾದದ ಆಧಾರದಲ್ಲಿ ಪೌರತ್ವವನ್ನು ನಿರ್ಧರಿಸುವ ಕ್ರಮ ಅಸಂವಿಧಾನಿಕವಾದುದು ಹಾಗೂ ವಿಭಜನಕಾರಿ ಯಾದುದು.
–ಪ್ರಕಾಶ್ ಕಾರಟ್
ಅನು: ವಿಶ್ವ
(ಈ ವಾರದ ಜನಶಕ್ತಿ ವಾರಪತ್ರಿಕೆಯಲ್ಲಿ ಪ್ರಕಟವಾದ ಲೇಖನ)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ನಟ ಮನದೀಪ್ ರಾಯ್ ನಿಧನ

ಸುದ್ದಿದಿನ ಡೆಸ್ಕ್ : ಹಿರಿಯ ಚಿತ್ರನಟ ಮನದೀಪ್ ರಾಯ್ (74 ವರ್ಷ) ಇಂದು ಬೆಳಗಿನ ಜಾವ ಅಗಲಿದ್ದಾರೆ.
ಕೆಲ ದಿನಗಳ ಹಿಂದೆ ಹೃದಯಾಘಾತಕ್ಕೀಡಾಗಿದ್ದ ಅವರು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಮನದೀಪ್ ರಾಯ್ ಹವ್ಯಾಸಿ ರಂಗಭೂಮಿ ಹಿನ್ನೆಲೆಯ ಕಲಾವಿದ. ನಟ – ನಿರ್ದೇಶಕ ಶಂಕರನಾಗ್ ಅವರ ಆತ್ಮೀಯ ಒಡನಾಡಿ. ಪೋಷಕ ಪಾತ್ರ, ಹಾಸ್ಯ ನಟರಾಗಿ 500ಕ್ಕೂ ಹೆಚ್ಚು ಸಿನಿಮಾಗಳು ಹಾಗೂ ಕಿರುತೆರೆ ಸರಣಿಗಳಲ್ಲಿ ಅಭಿನಯಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕರ್ನಾಟಕದಲ್ಲಿ ಈ ವರ್ಷ ಜನಪರ ರಾಜ್ಯ ಬಜೆಟ್ ಮಂಡನೆ ; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಸುದ್ದಿದಿನ, ಹಾವೇರಿ : ಕರ್ನಾಟಕದಲ್ಲಿ ಮುಂದಿನ ತಿಂಗಳು ಮಂಡಿಸಲಾಗುತ್ತಿರುವ ಈ ವರ್ಷದ ರಾಜ್ಯ ಬಜೆಟ್ ರೈತರು, ದೀನ ದಲಿತರು, ಯುವಕರು, ಮಹಿಳೆಯರು, ದುಡಿಯುವ ವರ್ಗ ಮತ್ತು ಜನಪರವಾಗಿರುತ್ತದೆ ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹಾವೇರಿ ಜಿಲ್ಲೆ ಶಿಗ್ಗಾಂವ್ನಲ್ಲಿ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ದುಡಿಮೆಗೆ ಯೋಗ್ಯ ಬೆಲೆ ಸಿಗುವ ರೀತಿಯಲ್ಲಿ ನಮ್ಮ ಕಾರ್ಯಕ್ರಮಗಳು ಇರುತ್ತವೆ ಎಂದರು.
ಕರ್ನಾಟಕ ರಾಜ್ಯದ ಆರ್ಥಿಕ ಅಭಿವೃದ್ಧಿಯಲ್ಲಿ ನಾವು ವೇಗವನ್ನು ಕಂಡಿದ್ದೇವೆ. ಕಳೆದ ವರ್ಷ ನಾನು ಅಧಿಕಾರ ವಹಿಸಿಕೊಂಡಾಗ 5 ಸಾವಿರ ಕೋಟಿ ರೂಪಾಯಿ ರಾಜ್ಯದ ಬೊಕ್ಕಸಕ್ಕೆ ನಮ್ಮ ನಿರ್ಧಿಷ್ಟ ಗುರಿಗೆ ಕೊರತೆಯಿತ್ತು. ಅದನ್ನು ನಾವು 5 ಸಾವಿರ ಕೋಟಿ ತುಂಬುವುದಲ್ಲದೇ, 13 ಸಾವಿರ ಕೋಟಿ ಅಧಿಕವಾಗಿ ಸಂಗ್ರಹ ಮಾಡಿದ್ದೇವೆ. ಈ ವರ್ಷವೂ ಕೂಡ ನಮ್ಮ ಹಣಕಾಸಿನ ಸಂಗ್ರಹ ಉತ್ತಮವಾಗಿದೆ ಎಂದು ಕರ್ನಾಟಕದ ಮುಖ್ಯಮಂತ್ರಿ ಹೇಳಿದರು.
ಕೋವಿಡ್ ನಂತರದಲ್ಲಿ ಆರ್ಥಿಕ ಸುಧಾರಣೆ ಆಗುತ್ತಿರುವ ಸಂದರ್ಭದಲ್ಲಿ ಕೆಳಹಂತದ ಜನಸಮುದಾಯಕ್ಕೆ ಇನ್ನಷ್ಟು ಸಹಾಯ ಮಾಡಿ, ಅವರನ್ನು ಕೂಡ ಮುಖ್ಯ ವಾಹಿನಿಗೆ ಬರಬೇಕು ಎನ್ನುವ ನಿಟ್ಟಿನಲ್ಲಿ ನಾವು ಕಾರ್ಯಕ್ರಮ ರೂಪಿಸುತ್ತಿದ್ದೇವೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಸಂಸತ್ತಿನ ಬಜೆಟ್ ಅಧಿವೇಶನದ ಹಿನ್ನೆಲೆ ; ಇದೇ 30ರಂದು ಸರ್ವಪಕ್ಷಗಳ ಸಭೆ

ಸುದ್ದಿದಿನ ಡೆಸ್ಕ್ : ಸಂಸತ್ತಿನ ಮುಂಬರುವ ಬಜೆಟ್ ಅಧಿವೇಶನದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇದೇ 30ರಂದು ಸರ್ವಪಕ್ಷಗಳ ಸಭೆಯನ್ನು ಕರೆದಿದೆ. ಸಂಸತ್ ಭವನದ ಸಂಕೀರ್ಣದಲ್ಲಿ ಸೋಮವಾರ ಮಧ್ಯಾಹ್ನ 12 ಗಂಟೆಗೆ ಸಭೆ ನಡೆಯಲಿದೆ.
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ, ಕೇಂದ್ರ ಸಚಿವರು ಮತ್ತು ಸಂಸತ್ತಿನ ಎರಡೂ ಸದನಗಳನ್ನು ಪ್ರತಿನಿಧಿಸುವ ಸದನ ನಾಯಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಸಭೆಯಲ್ಲಿ ಸರ್ಕಾರ ಸಂಸತ್ತಿನ ಉಭಯ ಸದನಗಳ ಸುಗಮ ಕಲಾಪಕ್ಕೆ ಎಲ್ಲ ರಾಜಕೀಯ ಪಕ್ಷಗಳ ಸಹಕಾರವನ್ನು ಕೋರಲಿದೆ. ಸಂಸತ್ತಿನ ಬಜೆಟ್ ಅಧಿವೇಶನ ಇದೇ 31ರಿಂದ ಆರಂಭವಾಗಲಿದೆ. ಮೊದಲ ದಿನ ಬೆಳಿಗ್ಗೆ 11 ಗಂಟೆಗೆ ಸೆಂಟ್ರಲ್ ಹಾಲ್ ನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡುವರು.
ಅದೇ ದಿನವೇ ಆರ್ಥಿಕ ಸಮೀಕ್ಷೆಯನ್ನೂ ಸಹ ಮಂಡಿಸಲಾಗುವುದು. ಫೆಬ್ರವರಿ 1ರಂದು 2023-24ನೇ ಸಾಲಿನ ಕೇಂದ್ರ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆ ಮಾಡಲಿದ್ದಾರೆ.
ಬಜೆಟ್ ಅಧಿವೇಶನ ಏಪ್ರಿಲ್ 6ವರೆಗೆ ನಡೆಯಲಿದ್ದು, ಸುಮಾರು 66 ದಿನಗಳಲ್ಲಿ 27 ಕಲಾಪಗಳು ನಡೆಯಲಿದೆ. ಮೊದಲ ಅವಧಿಯಲ್ಲಿ ಅಧಿವೇಶನ ಫೆಬ್ರವರಿ 13ರವರೆಗೆ ನಡೆಯಲಿದೆ. ಫೆಬ್ರವರಿ 14ರಿಂದ ಮಾರ್ಚ್ 12ರವರೆಗೆ ಅಧಿವೇಶನಕ್ಕೆ ಬಿಡುವು ಇರಲಿದೆ ಆನಂತರ ಮಾರ್ಚ್ 13ರಿಂದ ಆರಂಭವಾಗುವ ಅಧಿವೇಶನ ಏಪ್ರಿಲ್ 6ಕ್ಕೆ ಕೊನೆಗೊಳ್ಳಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980336243
