ದಿನದ ಸುದ್ದಿ
ದೇವದಾಸಿಯರಿಂದಲೇ ದೇವದಾಸಿ ಪದ್ದತಿ ನಿರ್ಮೂಲನೆ ಸಾಧ್ಯ: ನ್ಯಾ. ಪ್ರಭು ಎನ್ ಬಡಿಗೇರ್

ಸುದ್ದಿದಿನ,ದಾವಣಗೆರೆ : ದೇವದಾಸಿ ಪದ್ದತಿಯನ್ನು ಈ ಸಮಾಜದಿಂದ ತೊಲಗಿಸಲು ಯಾವುದೇ ಅಧಿಕಾರಿಗಳಿಂದ ಸಾಧ್ಯವಿಲ್ಲ. ಬದಲಾಗಿ ದೇವದಾಸಿಯರೇ ಈ ಪದ್ದತಿಯ ಆಚರಣೆಯನ್ನು ನಿಲ್ಲಿಸಿದಾಗ ಮಾತ್ರ ಇದರ ನಿರ್ಮೂಲನೆ ಆಗುತ್ತದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಪ್ರಭು ಎನ್. ಬಡಿಗೇರ್ ಅಭಿಪ್ರಾಯಪಟ್ಟರು.
ಜು.24 ರಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಬೆಂಗಳೂರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ದೇವದಾಸಿ ಪುನರ್ವಸತಿ ಯೋಜನೆ, ಜಿಲ್ಲಾ ವಕೀಲರ ಸಂಘ ದಾವಣಗೆರೆ ಇವರುಗಳ ಸಂಯುಕ್ತಾಶ್ರಯದಲ್ಲಿ ರೋಟರಿ ಬಾಲ ಭವನದಲ್ಲಿ ಆಯೋಜಿಸಲಾಗಿದ್ದ ‘ದೇವದಾಸಿ ಮಹಿಳೆಯರಿಗೆ ಕಾನೂನು ಅರಿವು’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇವದಾಸಿ ಮಹಿಳೆಯರು ಯಾರಿಗೂ ದಾಸರಾಗದೇ ದೇವದಾಸಿ ಪದ್ದತಿಯಿಂದ ಹೊರ ಬಂದು ಸಮಾಜದಲ್ಲಿ ಎಲ್ಲರಂತೆ ಉತ್ತಮ ಜೀವನ ನಡೆಸುವಂತಾಗಬೇಕು ಎಂದರು.
ದೇವದಾಸಿ ಮಹಿಳೆಯರು ಇಂತಹ ಕಾರ್ಯಕ್ರಮದಲ್ಲಿ ಕಾನೂನಿನ ಬಗ್ಗೆ ಮಾಹಿತಿ ಪಡೆದು ಹೋದರೆ ಅದು ಪ್ರಯೋಜನವಾಗುವುದಿಲ್ಲ. ಬದಲಾಗಿ ನೀವು ನಿಮ್ಮ ಸಮಸ್ಯೆಗಳ ಕುರಿತು ಕಾನೂನಾತ್ಮಕವಾಗಿ ನಮ್ಮೊಂದಿಗೆ ಚರ್ಚಿಸಿ ಪರಿಹಾರಗಳನ್ನು ಕಂಡುಕೊಳ್ಳಬೇಕು ಎಂದ ಅವರು ಕಾನೂನು ಸೇವಾ ಪ್ರಾಧಿಕಾರದಿಂದ ಎಲ್ಲಾ ವರ್ಗದ ಮಹಿಳೆಯರಿಗೆ ಉಚಿತವಾಗಿ ಕಾನೂನು ಸೇವೆ ನೀಡಲಾಗುತ್ತಿದ್ದು ಇದರ ಸದುಪಯೋಗ ಪಡೆಯಬೇಕು ಎಂದು ತಿಳಿಸಿದರು.
ದೇವದಾಸಿ ಮಹಿಳೆಯರು ಸರ್ಕಾರದ ಯೋಜನೆಗಳ ಸೇವೆಯನ್ನು ಪಡೆಯಲು ಅರ್ಜಿ ಸಲ್ಲಿಸಿದಲ್ಲಿ ಸಮಸ್ಯೆಗಳಾದರೆ ನಾವು ಅಧಿಕಾರಿಗಳೊಂದಿಗೆ ಕಾನೂನಾತ್ಮಾಕವಾಗಿ ಚರ್ಚಿಸಿ ನ್ಯಾಯಾ ಒದಗಿಸಿಕೊಡುತ್ತೆವೆ. ನಿಮಗೆ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡುವ ಮೊದಲು ನಮ್ಮೊಂದಿಗೆ ಮುಕ್ತವಾಗಿ ನಿಮ್ಮ ವಿಚಾರಗಳನ್ನು ಹಂಚಿಕೊಂಡರೆ ಕಾನೂನು ಪ್ರಾಧಿಕಾರದಿಂದ ಅವುಗಳಿಗೆ ಸಲಹೆ ಸೂಚನೆಗಳನ್ನು ನೀಡುವುದಾಗಿ ಭರವಸೆ ನೀಡಿದರು.
ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯರಾದ ಎಲ್. ಹೆಚ್ ಅರುಣ್ಕುಮಾರ್ ಮಾತನಾಡಿ, ದೇವದಾಸಿ ಪದ್ದತಿಯು ಅತ್ಯಂತ ಹೀನ ಪದ್ದತಿಯಾಗಿದ್ದು, ಪುರುಷ ಪ್ರಧಾನ ಸಮಾಜದಿಂದ ಮಹಿಳೆಯರು ಇಂತಹ ಪದ್ದತಿಗಳನ್ನು ಆಚರಣೆ ಮಾಡುವಂತಹ ದುಸ್ಥಿತಿ ನಿರ್ಮಾಣವಾಗಿದೆ. ಪುರಾತನ ಕಾಲದಿಂದಲೂ ಮಹಿಳೆಯನ್ನು ಒಂದು ವಸ್ತುವಾಗಿ ಬಿಂಬಿಸಿಕೊಂಡು ಬರುತ್ತಿರುವುದು ವಿಷಾಧನೀಯ. ಸಮಾಜವನ್ನು ಕಟ್ಟುವಂತಹ ಕೆಲಸದಲ್ಲಿ ಅಂದಿನಿಂದಲೂ ಪುರುಷರಿಗಿಂತ ಮಹಿಳೆಯರ ಪಾತ್ರವೇ ಮುಖ್ಯವಾಗಿದೆ ಎಂದರು.
ಮಹಿಳೆಯರು ಇಂತಹ ಅನಿಷ್ಠ ಆಚರಣೆಗಳಿಗೆ ಅನಿವಾರ್ಯವಾಗಿ ಒಳಗಾಗುತ್ತಿದ್ದಾರೆಯೇ ಹೊರತು ಯಾರೂ ಸ್ವಯಂ ಪ್ರೇರಿತರಾಗಿ ಬಂದಿರುವುದಿಲ್ಲ. ಇಂತಹವರಿಗೆ ಸಮಾಜದಲ್ಲಿ ಸೂಕ್ತ ಸ್ಥಾನಮಾನ ದೊರೆತರೆ ಇವರೂ ಸಹ ಸ್ವಯಂ ಪ್ರೇರಿತರಾಗಿ ಈ ಆಚರಣೆಯನ್ನು ನಿಲ್ಲಿಸುತ್ತಾರೆ ಎಂದು ಆಶಯ ವ್ಯಕ್ತಪಡಿಸಿದರು.
ಇಂದು ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿ ಬೆಳವಣಿಗೆ ಸಾಧಿಸಿದ್ದರೂ ಸಹ ಬಾಲ್ಯ ವಿವಾಹ, ಬಾಲ ಕಾರ್ಮಿಕ ಪದ್ದತಿ, ದೇವದಾಸಿ ಪದ್ದತಿಗಳಂತಹ ಅನಿಷ್ಠ ಪದ್ದತಿಗಳು ಜೀವಂತವಾಗಿವೆ. ಇಂತಹ ಅನಿಷ್ಠ ಪದ್ದತಿಗಳಿಗೆ ತುತ್ತಾದವರಲ್ಲಿ ಬಡ ಮಹಿಳೆಯರೇ ಹೆಚ್ಚಾಗಿದ್ದಾರೆ. ಅಂಬೇಡ್ಕರ್ ಅವರು ಇಂತಹ ಪದ್ದತಿಗಳನ್ನು ತೊಡೆದು ಹಾಕಲು ಶಿಕ್ಷಣ ಅಗತ್ಯ ಎಂದಿದ್ದರು. ಈ ನಿಟ್ಟಿನಲ್ಲಿ ಕಾನೂನು ಅರಿವು ಕಾರ್ಯಕ್ರಮ ನಡೆಸಲಾಗುತ್ತಿದೆ. ಕಾನೂನಿನ ಅರಿವಿನ ಮೂಲಕ ದೇವದಾಸಿ ಪದ್ದತಿ ಸಮಮಾಜದಿಂದ ಸಂಪೂರ್ಣವಾಗಿ ನಿರ್ಮೂಲನೆಯಾಗಬೇಕು ಎಂದರು.
ಕರ್ನಾಟಕ ರಾಜ್ಯ ದೇವದಾಸಿ ಮಹಿಳಾ ವಿಮೋಚನಾ ಸಂಘದ ಗೌರವಾಧ್ಯಕ್ಷ ಕೆ. ಲಕ್ಷ್ಮಿನಾರಾಯಣಭಟ್ ಮಾತನಾಡಿ, ಜಿಲ್ಲೆಯ ದೇವದಾಸಿ ಮಹಿಳೆಯರಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ವೈಜ್ಞಾನಿಕ ಚಿಂತನೆಗಳಿಂದÀ ಇಂತಹ ಪದ್ದತಿಗಳನ್ನು ತೊಡೆದು ಹಾಕಲು ಸಾಧ್ಯವಾಗುತ್ತದೆ. ಆದ್ದರಿಂದ ಮಹಿಳೆಯರು ಇಂತಹ ವೈಜ್ಞಾನಿಕ ಚಿಂತನೆಯಿಂದ ಈ ಪೀಳಿಗೆಗೆ ದೇವದಾಸಿ ಪದ್ದತಿಯನ್ನು ಕೊನೆಗಾಣಿಸಬೇಕು. ದೇವದಾಸಿ ಮಹಿಳೆಯರಿಗೆ ರಾಜ್ಯ ಸರ್ಕಾರದಿಂದ ಕನಿಷ್ಠ ರೂ. 3000 ಗಳವರೆಗೆ ಮಾಸಾಶನವನ್ನು ಹೆಚ್ಚಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡಿದ್ದ ವಕೀಲ ದಯಾನಂದ ಮಾತನಾಡಿ, ಕ್ರಿ.ಪೂ 3ನೇ ಶತಮಾನದಿಂದಲೂ ನಮ್ಮ ಸಮಾಜದಲ್ಲಿ ಈ ಪದ್ದತಿ ಜೀವಂತವಾಗಿದ್ದು ಅಂದಿನಿಂದಲೂ ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಈ ಪದ್ದತಿಯು ಸಮಾಜದಲ್ಲಿ ಒಂದು ಕೆಟ್ಟ ಆಚರಣೆಯಾಗಿದೆ. ಅಭಿವೃದ್ಧಿ ಹೊಂದಿದ ಭಾರತದಲಿಯೂ ಈ ಪದ್ದತಿ ಜೀವಂತವಾಗಿರುವುದು ವಿಷಾಧನೀಂiÀi. ಸರ್ಕಾರ ಈ ಪದ್ದತಿಯನ್ನು ಹೋಗಲಾಡಿಸಲು ದೇವದಾಸಿಯರಿಗೂ ಸಹ ಸಮಾಜದಲ್ಲಿ ಉತ್ತಮ ಸ್ಥಾನಮಾನ ಕಲ್ಪಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ದೇವದಾಸಿ ಪದ್ದತಿ ನಿರ್ಮೂಲನೆ ಕುರಿತಾದ ಪೋಸ್ಟರ್ನ್ನು ವೇದಿಕೆ ಮೇಲಿನ ಗಣ್ಯರು ಬಿಡುಗಡೆಗೊಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎನ್.ಟಿ ಮಂಜುನಾಥ್, ದೇವದಾಸಿ ಪುನರ್ವಸತಿ ಯೋಜನೆಯ ಯೋಜನಾಧಿಕಾರಿಗಳಾದ ಜೆ. ಮೋಕ್ಷಪತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಂರಕ್ಷಣಾಧಿಕಾರಿ ಪೂರ್ಣಿಮಾ, ದೇವದಾಸಿ ಪುನರ್ವಸತಿ ಯೋಜನಾಧಿಕಾರಿ ಪ್ರಜ್ಞಾ ಜಯರಾಜ್ ಸೇರಿದಂತೆ ದೇವದಾಸಿ ಮಹಿಳೆಯರು ಪಾಲ್ಗೊಂಡಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ನಟ ಮನದೀಪ್ ರಾಯ್ ನಿಧನ

ಸುದ್ದಿದಿನ ಡೆಸ್ಕ್ : ಹಿರಿಯ ಚಿತ್ರನಟ ಮನದೀಪ್ ರಾಯ್ (74 ವರ್ಷ) ಇಂದು ಬೆಳಗಿನ ಜಾವ ಅಗಲಿದ್ದಾರೆ.
ಕೆಲ ದಿನಗಳ ಹಿಂದೆ ಹೃದಯಾಘಾತಕ್ಕೀಡಾಗಿದ್ದ ಅವರು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಮನದೀಪ್ ರಾಯ್ ಹವ್ಯಾಸಿ ರಂಗಭೂಮಿ ಹಿನ್ನೆಲೆಯ ಕಲಾವಿದ. ನಟ – ನಿರ್ದೇಶಕ ಶಂಕರನಾಗ್ ಅವರ ಆತ್ಮೀಯ ಒಡನಾಡಿ. ಪೋಷಕ ಪಾತ್ರ, ಹಾಸ್ಯ ನಟರಾಗಿ 500ಕ್ಕೂ ಹೆಚ್ಚು ಸಿನಿಮಾಗಳು ಹಾಗೂ ಕಿರುತೆರೆ ಸರಣಿಗಳಲ್ಲಿ ಅಭಿನಯಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕರ್ನಾಟಕದಲ್ಲಿ ಈ ವರ್ಷ ಜನಪರ ರಾಜ್ಯ ಬಜೆಟ್ ಮಂಡನೆ ; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಸುದ್ದಿದಿನ, ಹಾವೇರಿ : ಕರ್ನಾಟಕದಲ್ಲಿ ಮುಂದಿನ ತಿಂಗಳು ಮಂಡಿಸಲಾಗುತ್ತಿರುವ ಈ ವರ್ಷದ ರಾಜ್ಯ ಬಜೆಟ್ ರೈತರು, ದೀನ ದಲಿತರು, ಯುವಕರು, ಮಹಿಳೆಯರು, ದುಡಿಯುವ ವರ್ಗ ಮತ್ತು ಜನಪರವಾಗಿರುತ್ತದೆ ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹಾವೇರಿ ಜಿಲ್ಲೆ ಶಿಗ್ಗಾಂವ್ನಲ್ಲಿ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ದುಡಿಮೆಗೆ ಯೋಗ್ಯ ಬೆಲೆ ಸಿಗುವ ರೀತಿಯಲ್ಲಿ ನಮ್ಮ ಕಾರ್ಯಕ್ರಮಗಳು ಇರುತ್ತವೆ ಎಂದರು.
ಕರ್ನಾಟಕ ರಾಜ್ಯದ ಆರ್ಥಿಕ ಅಭಿವೃದ್ಧಿಯಲ್ಲಿ ನಾವು ವೇಗವನ್ನು ಕಂಡಿದ್ದೇವೆ. ಕಳೆದ ವರ್ಷ ನಾನು ಅಧಿಕಾರ ವಹಿಸಿಕೊಂಡಾಗ 5 ಸಾವಿರ ಕೋಟಿ ರೂಪಾಯಿ ರಾಜ್ಯದ ಬೊಕ್ಕಸಕ್ಕೆ ನಮ್ಮ ನಿರ್ಧಿಷ್ಟ ಗುರಿಗೆ ಕೊರತೆಯಿತ್ತು. ಅದನ್ನು ನಾವು 5 ಸಾವಿರ ಕೋಟಿ ತುಂಬುವುದಲ್ಲದೇ, 13 ಸಾವಿರ ಕೋಟಿ ಅಧಿಕವಾಗಿ ಸಂಗ್ರಹ ಮಾಡಿದ್ದೇವೆ. ಈ ವರ್ಷವೂ ಕೂಡ ನಮ್ಮ ಹಣಕಾಸಿನ ಸಂಗ್ರಹ ಉತ್ತಮವಾಗಿದೆ ಎಂದು ಕರ್ನಾಟಕದ ಮುಖ್ಯಮಂತ್ರಿ ಹೇಳಿದರು.
ಕೋವಿಡ್ ನಂತರದಲ್ಲಿ ಆರ್ಥಿಕ ಸುಧಾರಣೆ ಆಗುತ್ತಿರುವ ಸಂದರ್ಭದಲ್ಲಿ ಕೆಳಹಂತದ ಜನಸಮುದಾಯಕ್ಕೆ ಇನ್ನಷ್ಟು ಸಹಾಯ ಮಾಡಿ, ಅವರನ್ನು ಕೂಡ ಮುಖ್ಯ ವಾಹಿನಿಗೆ ಬರಬೇಕು ಎನ್ನುವ ನಿಟ್ಟಿನಲ್ಲಿ ನಾವು ಕಾರ್ಯಕ್ರಮ ರೂಪಿಸುತ್ತಿದ್ದೇವೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಸಂಸತ್ತಿನ ಬಜೆಟ್ ಅಧಿವೇಶನದ ಹಿನ್ನೆಲೆ ; ಇದೇ 30ರಂದು ಸರ್ವಪಕ್ಷಗಳ ಸಭೆ

ಸುದ್ದಿದಿನ ಡೆಸ್ಕ್ : ಸಂಸತ್ತಿನ ಮುಂಬರುವ ಬಜೆಟ್ ಅಧಿವೇಶನದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇದೇ 30ರಂದು ಸರ್ವಪಕ್ಷಗಳ ಸಭೆಯನ್ನು ಕರೆದಿದೆ. ಸಂಸತ್ ಭವನದ ಸಂಕೀರ್ಣದಲ್ಲಿ ಸೋಮವಾರ ಮಧ್ಯಾಹ್ನ 12 ಗಂಟೆಗೆ ಸಭೆ ನಡೆಯಲಿದೆ.
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ, ಕೇಂದ್ರ ಸಚಿವರು ಮತ್ತು ಸಂಸತ್ತಿನ ಎರಡೂ ಸದನಗಳನ್ನು ಪ್ರತಿನಿಧಿಸುವ ಸದನ ನಾಯಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಸಭೆಯಲ್ಲಿ ಸರ್ಕಾರ ಸಂಸತ್ತಿನ ಉಭಯ ಸದನಗಳ ಸುಗಮ ಕಲಾಪಕ್ಕೆ ಎಲ್ಲ ರಾಜಕೀಯ ಪಕ್ಷಗಳ ಸಹಕಾರವನ್ನು ಕೋರಲಿದೆ. ಸಂಸತ್ತಿನ ಬಜೆಟ್ ಅಧಿವೇಶನ ಇದೇ 31ರಿಂದ ಆರಂಭವಾಗಲಿದೆ. ಮೊದಲ ದಿನ ಬೆಳಿಗ್ಗೆ 11 ಗಂಟೆಗೆ ಸೆಂಟ್ರಲ್ ಹಾಲ್ ನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡುವರು.
ಅದೇ ದಿನವೇ ಆರ್ಥಿಕ ಸಮೀಕ್ಷೆಯನ್ನೂ ಸಹ ಮಂಡಿಸಲಾಗುವುದು. ಫೆಬ್ರವರಿ 1ರಂದು 2023-24ನೇ ಸಾಲಿನ ಕೇಂದ್ರ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆ ಮಾಡಲಿದ್ದಾರೆ.
ಬಜೆಟ್ ಅಧಿವೇಶನ ಏಪ್ರಿಲ್ 6ವರೆಗೆ ನಡೆಯಲಿದ್ದು, ಸುಮಾರು 66 ದಿನಗಳಲ್ಲಿ 27 ಕಲಾಪಗಳು ನಡೆಯಲಿದೆ. ಮೊದಲ ಅವಧಿಯಲ್ಲಿ ಅಧಿವೇಶನ ಫೆಬ್ರವರಿ 13ರವರೆಗೆ ನಡೆಯಲಿದೆ. ಫೆಬ್ರವರಿ 14ರಿಂದ ಮಾರ್ಚ್ 12ರವರೆಗೆ ಅಧಿವೇಶನಕ್ಕೆ ಬಿಡುವು ಇರಲಿದೆ ಆನಂತರ ಮಾರ್ಚ್ 13ರಿಂದ ಆರಂಭವಾಗುವ ಅಧಿವೇಶನ ಏಪ್ರಿಲ್ 6ಕ್ಕೆ ಕೊನೆಗೊಳ್ಳಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980336243
