ಭಾವ ಭೈರಾಗಿ
ಕವಿತೆ | ಬ್ರಾಹ್ಮನಾಯಿ-ಶೂದ್ರಕೋಳಿ

೧
ಶೂದ್ರ ಕೋಳಿ ಮೇಯುತ್ತಿತ್ತು
ಗಲ್ಲಿಯಲ್ಲಿ;
ಬ್ರಾಹ್ಮ ನಾಯಿ ಹೊಂಚುತಿತ್ತು
– ಅಲ್ಲಿ ಇಲ್ಲಿ,
ಶೂದ್ರಕೋಳಿಗೇನು ಗೊತ್ತು,
ಪಾಪ, ನಾಯಿ ಬ್ರಾಹ್ಮ ಎಂದು?
ತಮ್ಮ ಮನೆಯ ನಾಯಿಯಂತೆ
ಎಂದು ಸುಮ್ಮ ಮೇಯುತ್ತಿತ್ತು.
೨
ಬ್ರಾಹ್ಮನಾಯಿ ಅಪ್ಪಟ ಕಂತ್ರಿ.
ಆದರೇನು? ಕಪಟ ಕುತಂತ್ರಿ!
ಕೊರಳಿನಲ್ಲಿ ಜನ್ನ ಪಟ್ಟೆ;
ಒಡಲಲ್ಲಿ ಖಾಲಿ ಹೊಟ್ಟೆ!
ಮೆಲ್ಲ ಮೆಲ್ಲ ಸುಳಿದು ಸುತ್ತಿ
ಹತ್ತೆ ಬಂತು;
ಸಾಧು ಎಂದು ಶೂದ್ರ ಕೋಳಿ
ನೋಡು ನಿಂತು,
ಹಾರಿ ನೆಗೆದು ಹಿಡಿದುಕೊಂಡು
ಓಡಿ ಹೋಯ್ತು!
ಪಾಲ್ವಡಿನೊಂದ ಗೋಡೆ
ರಕ್ಷೆಯಾಯ್ತು:
ಪಾರ್ವನಾಯ್ದೆ ಶೂದ್ರ ಕೋಳಿ
ಭಕ್ಷ್ಯವಾಯ್ತು!
೩
ಮರಿಯತನದಿ ಮೊದಲುಗೊಂಡು
ಸಾಕಿ ಸಲಹು ಒಲಿದ ತನ್ನ
ಪುಟ್ಟ ಮುದ್ದು ಹುಂಜಗಾಗಿ,
ಕರುಣ ತುಂಬಿದೆದೆಯ ದೇವಿ,
ಗೋಳೋ ಎಂದು ಹುಡುಗಿಯೊಂದು
ಅಳುತಲಿತ್ತು.
‘ಶುದ್ಧ ಶೂದ್ರ ಹುಡುಗಿ’ ಎಂದು
ಹಾರನೊಡನೆ ಹಾರಿ ನಿಂದು,
ಕೇಲಿಗಾಗಿ ಗೇಲಿ ಮಾಡಿ
ಬೀದಿ ಬಾಗಿಲಲ್ಲಿ ಕೂಡಿ
ಬ್ರಾಹ್ಮವೃಂದ ಚಂದ ನೋಡಿ –
ನಗುತಲಿತ್ತು!

–ಕುವೆಂಪು
(‘ಕುವೆಂಪು ಕಾವ್ಯಯಾನ’ ಪುಸ್ತಕದಿಂದ ಈ ಕವಿತೆಯನ್ನು ಆಯ್ದುಕೊಳ್ಳಲಾಗಿದೆ.)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಭಾವ ಭೈರಾಗಿ
ಕವಿತೆ | ಡಿವೈಡರುಗಳು

- ವಿಲ್ಸನ್ ಕಟೀಲ್
ಈಗೀಗ ರಸ್ತೆಗಳಿಗಿಂತ
ಡಿವೈಡರುಗಳೇ ಅತ್ಯಾಕರ್ಶಕ..!
ಮೆತ್ತನೆ ಹುಲ್ಲುಹಾಸು, ಚೆಂದದ ಹೂಗಿಡಗಳು..
ಸುಂದರ ಜಾಹೀರಾತುಗಳು…
ರಸ್ತೆಗಳ ಆರೋಗ್ಯಕ್ಕಿಂತ
ಡಿವೈಡರುಗಳ ಸೌಂದರ್ಯಕ್ಕೇ
ಸರಕಾರ ಹೆಚ್ಚು ಹಣ ಖರ್ಚು ಮಾಡುತ್ತದೆ.
ಕೆಲವು ಕಡೆ ಈ ಡಿವೈಡರುಗಳೇ
ರಸ್ತೆಯ ತಿರುವುಗಳನ್ನು,
ಮುಟ್ಟುವ ಗುರಿಯನ್ನು
ನಿಯಂತ್ರಿಸುತ್ತವೆ..!
ಡಿವೈಡರುಗಳಿಗೆ ರಸ್ತೆಗಳಂತೆ
ಮೈಮಾಂಸ ಕಿತ್ತುಬರುವ,
ಚರಂಡಿಗಳು ಉಕ್ಕಿ ಹರಿಯುವ,
ಮಳೆಗಾಲದಲ್ಲಿ ಮುಳುಗಿ ಉಸಿರುಗಟ್ಟುವ ಚಿಂತೆಯಿಲ್ಲ
ರಸ್ತೆಪಕ್ಕದ ಮನೆಗಳನ್ನೂ
ಸಲೀಸಾಗಿ ಕೆಡವುವ ಬುಲ್ಡೋಜರುಗಳು
ಡಿವೈಡರುಗಳಿಗೆ ಹಾನಿ ಮಾಡುವುದಿಲ್ಲ.

ಇತ್ತೀಚೆಗೆ ಹೆಚ್ಚಿನವರು
ರಸ್ತೆಗಳಲ್ಲಿ ಸಾಗುವುದಕ್ಕಿಂತ
ಡಿವೈಡರಿನಲ್ಲಿ ಅಡ್ಡಾಡುವುದನ್ನೇ ಇಷ್ಟಪಡುತ್ತಾರೆ.
ಡಿವೈಡರಿನಲ್ಲಿ ನಿಂತವರಿಗೆ
ಎರಡೂ ಬದಿಯವರಿಗೆ
ತಮಾಶೆ ಮಾಡಲು ತುಂಬಾ ಸಲೀಸು
ಹಾಗೆಂದು ಮೈಮರೆಯುವಂತಿಲ್ಲ
ಡಿವೈಡರಿನಲ್ಲಿದ್ದವರೂ ಎಚ್ಚರ ಇರಲೇಬೇಕು
ಮೊನ್ನೆ
ಬಲಗಡೆಯಿಂದ ಬಂದ
ನಿಯಂತ್ರಣ ತಪ್ಪಿದ ಮಂತ್ರಿಯ ಕಾರು
ಡಿವೈಡರಿಗೇ ನುಗ್ಗಿತ್ತು!
ಡಿವೈಡರಿನಲ್ಲಿದ್ದವರು
ಎಡಕ್ಕೆ ಹಾರಿ
ಜೀವ ಉಳಿಸಿಕೊಂಡರು..!
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಭಾವ ಭೈರಾಗಿ
ಕವಿತೆ | ಒಂದು ಕವಿತೆ ಬರೆದು ಕೊಡಿ

- ಮಾನಸ ಗಂಗೆ
ಹಸಿವನ್ನ ನೀಗಿಸುವ
ಒಂದು ಕವಿತೆ ಬರೆದು ಕೊಡಿ,
ಎರಡ್ಹೊತ್ತು ತಿಂದು
ನಾಳೆಗೊಂದಿಷ್ಟು ಉಳಿಸಿಕೊಳ್ಳುವೆ
ಸಸ್ಯದ್ದೊ ,ಮಾಂಸದ್ದೊ
ಬೆಂದದ್ದೊ ,ಹಸಿ ಹಸಿಯೋ
ಯಾವುದೋ ಒಂದು
ನಾಲ್ಕು ಸಾಲು ಗೀಚಿ ಬಿಡಿ
ನನಗೀಗ ತುಂಬಾ ಹಸಿವಿದೆ
ನೀವು ಬರೆದು ಕೊಟ್ಟ
ಕವಿತೆಗಳ ಕೊನೆಯಲ್ಲಿ
ನಿಮ್ಮ ಹೆಸರನ್ನು ದಯವಿಟ್ಟೂ
ಬರೆಯಬೇಡಿ,
ಹಸಿವಿಗೆ ಋಣಭಾರವನ್ನ
ಹೊರುವ ಶಕ್ತಿ ಇಲ್ಲ

ಇನ್ನೊಂದು ಮನವಿ
ಹಸಿವಿನ ಬಗ್ಗೆ
ಕವಿತೆ ಬರೆಯುವಾಗ
ನೀವು ಸ್ವಲ್ಪ ಹಸಿವನ್ನಿಟ್ಟುಕೊಳ್ಳಿ
ಹೊಟ್ಟೆ ತುಂಬಿದ ಪದಗಳಿಗೆ
ನಿದ್ದೆ ಜಾಸ್ತಿ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಭಾವ ಭೈರಾಗಿ
ಕವಿತೆ | ಹೆಣಗಳ ಹೂಳಲು ಒಂದಿಷ್ಟು ಭೂಮಿ ಕೊಡಿ

- ರುಜು, ಸಂಶೋಧನಾ ವಿದ್ಯಾರ್ಥಿ, ದಾವಣಗೆರೆ
ಅಂಗಲಾಚಿ ಬೇಡುವೆ…
ಒಂದಿಷ್ಟು ಭೂಮಿ ಕೊಡಿಸಿ
ಬದುಕು ಕಟ್ಟಿಕೊಳ್ಳಲು ಅಲ್ಲ
ಸತ್ತ ನನ್ನ ಹೆಣದ ಗೂಡು ಕಟ್ಟಲು
ಬೀಳುವ ನನ್ನ ಜನಗಳ
ಹೆಣಗಳ ಹೂಳಲು.
ಈ ಹಿಂದೆ ಸತ್ತ
ನನ್ನ ಜನಗಳ ಹೆಣಗಳು
ರಸ್ತೆ ಬದಿಯ ಮೋರಿಯಲ್ಲಿ ಮಣ್ಣಾಗಿವೆ,
ಮಳೆ ಹೊಯ್ದು, ಕಾಲುವೆಯು ಬಂದು
ಒಂದಿಷ್ಟು ಕುರುಹಿಲ್ಲದೆ ನೆಲಸಮವಾಗಿವೆ
ಹುಡುಕಿದರು ಸಿಗುತ್ತಿಲ್ಲ
ನನ್ನಪ್ಪನ ಹೆಣದ ದಿಬ್ಬ
ಪ್ರತಿ ವರ್ಷದ ಕ್ರಿಯಾ ಕರ್ಮವಿಲ್ಲದೆ
ಅನಾಥವಾಗಿದ್ದಾನೆ.
ಅದಕ್ಕಾಗಿ ಕೈ ಮುಗಿದು ಬೇಡುವೆ
ಮುಂದೆ ಬೀಳಲಿರುವ
ಹೆಣಗಳ ದಿಬ್ಬವನ್ನಾದರೂ ಕಾಣುತ್ತೇವೆ
ನಮಗೊಂದಿಷ್ಟು ಭೂಮಿ ಕೊಡಿ
ನಮ್ಮವರ ಹೆಣಗಳನ್ನು ಗುರುತಿಟ್ಟುಕೊಳ್ಳಲು.

ಕೋರ್ಟು ಕಚೇರಿ ತಿಳಿದವರಲ್ಲ ನನ್ನ ಜನ
ಪುಡಿ ಭೂಮಿಗಾಗಿ ಚಪ್ಪಲಿಗಳನ್ನ ಸವೆಸಿದ್ದಾರೆ
ಸಿಕ್ಕ ಸಿಕ್ಕವರಿಗೆ ಸಲಾಮು ಹೊಡೆದಿದ್ದಾರೆ
ರೊಕ್ಕ ಕೇಳಿದವರಿಗೆ ರೊಕ್ಕ
ಬಿರಿಯಾನಿ ಎಂದವರಿಗೆ ಬಿರಿಯಾನಿ
ಇಷ್ಟಾದರೂ ಒಂದಿಂಚು ಭೂಮಿ ಸಿಗಲಿಲ್ಲ
ಜೇಬು ಖಾಲಿ, ಮನಸು ಖಾಲಿ
ಪ್ರತಿರೋಧಿಸುತ್ತಿಲ್ಲ ಪರಿತಪಿಸುತ್ತಿದ್ದಾರೆ.
ಈ ಮುಗ್ದ ಮನಗಳ ತಣಿಯಲು
ಒಂದಿಷ್ಟು ಭೂಮಿ ಕೊಡಿ
ಸುಖ ಸುಪ್ಪತ್ತಿಗೆಯಿಂದ ಮೆರೆಯಲು ಅಲ್ಲ
ಸತ್ತಾಗಲಾದರೂ ನೆಮ್ಮದಿಯಿಂದ ಮಲಗಲು
ಊರೂರು ಅಲೆದು,
ಹತ್ತಿಯನು ಪಿಂಜಿ,
ಹಾಸಿಗೆಯನು ಹೊಲೆದು
ಇನ್ನೊಬ್ಬರ ಸುಖ ನಿದ್ರೆಗೆ ಕಾರಣರಾದ
ಪಿಂಜಾರರು ನಾವು,
ನಮ್ಮಗಳ ಚಿರ ನಿದ್ರೆಗೆ
ಗೂಡೊಂದು ಇಲ್ಲ,
ನಾವು ನಿದ್ರಿಸಬೇಕಿದೆ ಎಲ್ಲರಂತೆ ನೆಮ್ಮದಿಯಲಿ
ಹಾಸಿಗೆಯ ಮೇಲಲ್ಲ, ಘೋರಿಯ ಒಳಗಲ್ಲಿ,
ನಮ್ಮದಾದೊಂದು ಭೂಮಿಯಿಲ್ಲ
ನಮ್ಮವರ ಹೆಣಗಳ ಹೂಳಲು
ಜಾಣರಾದ ನೀವು ಜಾಗವೊಂದು ಕೊಡಿಸಿರಿ
ನಮ್ಮವರ ಹೆಣಗಳಿಗೆ ಮುಕ್ತಿಯನು ನೀಡಿರಿ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ5 days ago
ಮಳೆ ಅವಾಂತರ | ನವಿಲೇಹಾಳಿನಲ್ಲಿ ನಾಲ್ಕು ಮನೆಗಳು ನೆಲಸಮ
-
ಬಹಿರಂಗ7 days ago
ಅಧಿಕಾರದ ಉನ್ನತ ಸ್ಥಾನದಲ್ಲಿರುವವರಿಂದ ಈ ತೆರನಾದ ಮತಧಾರ್ಮಿಕ ಪಕ್ಷಪಾತದ ನಡವಳಿಕೆ ಸರಿಯೇ..?
-
ದಿನದ ಸುದ್ದಿ7 days ago
ರಾಜ್ಯದಲ್ಲಿ ಮಂಕಿಪಾಕ್ಸ್ ಸೋಂಕು ದೃಢಪಟ್ಟಿಲ್ಲ : ಸಚಿವ ಡಾ. ಕೆ. ಸುಧಾಕರ್
-
ಕ್ರೀಡೆ6 days ago
ಕಾಮನ್ ವೆಲ್ತ್ ಕ್ರೀಡಾಕೂಟ ; ಪುರುಷರ 73 ಕೆ.ಜಿ ವೇಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಭಾರತದ ಅಚಿಂತಾ ಶೆಯಿಲಿಗೆ ಸ್ವರ್ಣ ಪದಕ
-
ದಿನದ ಸುದ್ದಿ7 days ago
‘ಕನ್ನಡ ಸಾಂಸ್ಕೃತಿಕ ಗತವೈಭವ’ದಿಂದ ವಾರ್ಷಿಕ ಸಾಧಕ ಪ್ರಶಸ್ತಿಗೆ ಕೃತಿಗಳ ಅಹ್ವಾನ
-
ನಿತ್ಯ ಭವಿಷ್ಯ6 days ago
ಸೋಮವಾರ ರಾಶಿ ಭವಿಷ್ಯ-ಆಗಸ್ಟ್-1,2022 : ಈ ರಾಶಿಯವರಿಗೆ ತುಂಬಾ ಇಷ್ಟಪಟ್ಟವರು ನಿಲುಕದ ನಕ್ಷತ್ರ!
-
ದಿನದ ಸುದ್ದಿ6 days ago
ಹರಿಯಾಣದ ಚಾಂಡಿಮಂದಿರದಲ್ಲಿ ಇಂದಿನಿಂದ ಇದೇ 20ರವರೆಗೆ ಭಾರತ – ವಿಯೆಟ್ನಾಂ ಸೇನಾ ಸಮರಾಭ್ಯಾಸ
-
ದಿನದ ಸುದ್ದಿ6 days ago
ಭಾರತದಲ್ಲಿ ಮಂಕಿಪಾಕ್ಸ್ ಪ್ರಕರಣಗಳ ಸಂಖ್ಯೆ ಹೆಚ್ಚಳ ಹಿನ್ನೆಲೆ; ಮೇಲ್ವಿಚಾರಣೆಗೆ ಕಾರ್ಯಪಡೆ ರಚನೆ