ರಾಜಕೀಯ
ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಜಾಪ್ರಭುತ್ವ ಮತ್ತು ಒಕ್ಕೂಟ ತತ್ವದ ಕೊಲೆ

- “ಜಮ್ಮು ಮತ್ತು ಕಾಶ್ಮೀರ ರಾಜ್ಯದ ನಾಶವನ್ನು ನಿಲ್ಲಿಸಿ,ಸಂವಿಧಾನದ ಕಲಮು 370ನ್ನು ರಕ್ಷಿಸಿ” :ಸಿಪಿಐ(ಎಂ) ಪೊಲಿಟ್ ಬ್ಯುರೊ ಕರೆ
ಮೋದಿ ಸರಕಾರ ಸಂವಿಧಾನದ ಕಲಮು 370 ರ ವಜಾ ಹಾಗೂ ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಕಳಚಿ ಹಾಕುವ ಮೂಲಕ ಪ್ರಜಾಪ್ರಭುತ್ವ ಮತ್ತು ಸಂವಿಧಾನಕ್ಕೆ ಒಂದು ಆಘಾತವನ್ನು ಉಂಟುಮಾಡಿದೆ ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೊ ಖಂಡಿಸಿದೆ.
ಪಾಕಿಸ್ತಾನದಿಂದ ಅತಿಕ್ರಮಣಕೋರರು ಬರುತ್ತಿದ್ದಾಗ ಕಾಶ್ಮೀರದ ಜನತೆ ಅವರನ್ನು ಎದುರಿಸಿ ಭಾರತವನ್ನು ಸೇರಿಕೊಂಡರು. ಭಾರತದ ಪ್ರಭುತ್ವ ಅವರಿಗೆ ವಿಶೇಷ ಸ್ಥಾನಮಾನವನ್ನು ಮತ್ತು ಸ್ವಾಯತ್ತತೆಯನ್ನು ಕೊಡಮಾಡುವ ಒಂದು ಗಂಭೀರ ವಾಗ್ದಾನ ಮಾಡಿತು. ಇದು ಕಲಮು 370ರಲ್ಲಿ ಮೈದಾಳಿದೆ. ಈ ವಾಗ್ದಾನವನ್ನು ಮುರಿಯುವ ಮೂಲಕ ಮೋದಿ ಸರಕಾರ ಜಮ್ಮು ಮತ್ತು ಕಾಶ್ಮೀರದ ಜನತೆಗೆ ವಿಶ್ವಾಸಘಾತ ಮಾಡಿದೆ.
ಭಾರತದ ಐಕ್ಯತೆ ಅದರ ವೈವಿಧ್ಯತೆಯಲ್ಲಿ ಹುದುಗಿದೆ ಎಂಬುದು ಸಾರ್ವತ್ರಿಕವಾಗಿ ಒಪ್ಪುತ್ತಿರುವ ಸಂಗತಿ. ಬಿಜೆಪಿ-ಆರೆಸ್ಸೆಸ್ ಮುಖಂಡರು ಯಾವುದೇ ವೈವಿಧ್ಯತೆಯನ್ನು ಮತ್ತು ಒಕ್ಕೂಟ ತತ್ವವನ್ನು ಸಹಿಸುವುದಿಲ್ಲ. ಅವರು ಜಮ್ಮು ಮತ್ತು ಕಾಶ್ಮೀರ ವನ್ನು ಒಂದು ಆಕ್ರಮಿತ ಪ್ರದೇಶದಂತೆ ಕಾಣುತ್ತಿದ್ದಾರೆ. ಸಂವಿಧಾನವನ್ನು ತುಳಿದು ಅವರು ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ಪರಿವರ್ತಿಸಿದ್ದಾರೆ. ಇದು ರಾಷ್ಟ್ರೀಯ ಐಕ್ಯತೆಗೆ ಮತ್ತು ಭಾರತವು ರಾಜ್ಯಗಳ ಒಂದು ಒಕ್ಕೂಟ ಎಂಬ ಪರಿಕಲ್ಪನೆಯ ಮೇಲೆ ಒಂದು ಅತ್ಯಂತ ದೊಡ್ಡ ದಾಳಿ ಎಂದು ಸಿಪಿಐ(ಎಂ) ಪೊಲಿಟ್ಬ್ಯುರೊ ಖಂಡಿಸಿದೆ.
ಈ ಸರ್ವಾಧಿಕಾರಶಾಹಿ ಕ್ರಮಗಳಿಗೆ ಪೂರ್ವಭಾವಿಯಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ಸಾವಿರ-ಸಾವಿರ ಸಂಖ್ಯೆಯಲ್ಲಿ ಪಡೆಗಳನ್ನು ತಂದು ನಿಲ್ಲಿಸಲಾಗಿದೆ, ಪ್ರಮುಖ ರಾಜಕೀಯ ಪಕ್ಷಗಳ ಮುಖಂಡರನ್ನು ಸ್ಥಾನಬದ್ಧತೆಯಲ್ಲಿ ಇಡಲಾಗಿದೆ. ಮತ್ತು ಸಾರ್ವಜನಿಕ ಓಡಾಟವನ್ನು ನಿಷೇಧಿಸಲಾಗಿದೆ. ಮೋದಿ ಸರಕಾರ ಜನಗಳ ಒಪ್ಪಿಗೆಯಿಲ್ಲದೆ ತನ್ನು ಫರ್ಮಾನುಗಳನ್ನು ಹೇರುತ್ತಿದೆ ಎಂಬುದನ್ನು ಇದೇ ತೋರಿಸುತ್ತದೆ.
ಭಾರತದ ತರ ಜನಗಳೊಂದಿಗೆ ಜಮ್ಮು ಮತ್ತು ಕಾಶ್ಮೀರ ಜನತೆಯ ಬಂಧಗಳನ್ನು, ಮೂರು ವರ್ಷಗಳ ಹಿಂದೆ ಸರಕಾರ ಆಶ್ವಾಸನೆ ನೀಡಿದಂತೆ ರಾಜಕೀಯ ಸಂವಾದದ ಪ್ರಕ್ರಿಯೆಯ ಮೂಲಕ ಬಲಪಡಿಸಬೇಕಾಗಿತ್ತು. ಅದರ ಬದಲು, ಈಗ ಇಟ್ಟಿರುವ ಏಕಪಕ್ಷೀಯ ಹೆಜ್ಜೆ ಜನಗಳಲ್ಲಿನ ಪರಕೀಯ ಭಾವವನ್ನು ಇನ್ನಷ್ಟು ಆಳಗೊಳಿಸುತ್ತದೆ. ಇದು ಭಾರತದ ಸಮಗ್ರತೆಗೆ ಹಾನಿಕಾರಕ ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೊ ಮೋದಿ ಸರಕಾರದ ಈ ಕ್ರಮಗಳನ್ನು ಉಗ್ರವಾಗಿ ಟೀಕಿಸಿದೆ.
ಇವು ಕಾನೂನುಬಾಹಿರ ಮತ್ತು ಸಂವಿಧಾನಬಾಹಿರ ಕ್ರಮಗಳು. ಇವು ಕೇವಲ ಜಮ್ಮು ಮತ್ತು ಕಾಶ್ಮೀರಕ್ಕಷ್ಟೇ ಸೀಮಿತವಾದ ವಿಷಯವಲ್ಲ, ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಸಂವಿಧಾನದ ಮೇಲೆಯೇ ಮಾಡಿರುವ ಒಂದು ದಾಳಿಯಾಗಿದೆ. ಭಾರತದ ಜನರಿಗೆ, ಅವರ ಪ್ರಜಾಪ್ರಭುತ್ವ ಮತ್ತು ಸಂವಿಧಾನಿಕ ಹಕ್ಕುಗಳ ಮೇಲೆ ಇಂತಹ ಸರ್ವಾಧಿಕಾರಶಾಹಿ ದಾಳಿಗಳು ಬರಲಿವೆ ಎಂಬ ಮುನ್ನೆಚ್ಚರಿಕೆ ಬಂದಿದೆ. ಇದು ಜಮ್ಮು ಮತ್ತು ಕಾಶ್ಮೀರದ ಜನಗಳ ಬೆಂಬಲಕ್ಕೆ ನಿಲ್ಲಬೇಕಾದ ಮತ್ತು ಸಂವಿಧಾನ ಹಾಗೂ ಒಕ್ಕೂಟ ತತ್ವದ ಮೇಲಿನ ದಾಳಿಯನ್ನು ಪ್ರ ತಿರೋಧಿಸಲು ಜನಗಳನ್ನು ಅಣಿನೆರೆಸಬೇಕಾದ ಸಮಯ ಎಂದಿರುವ ಸಿಪಿಐ(ಎಂ) ಪೊಲಿಟ್ ಬ್ಯುರೊ ಆಗಸ್ಟ್ 7ರಂದು ಎಡಪಕ್ಷಗಳು ಕರೆ ನೀಡಿರುವ ಅಖಿಲ ಭಾರತ ಪ್ರತಿಭಟನೆಗಳಲ್ಲಿ ಸೇರಿಕೊಳ್ಳಬೇಕು, “ಜಮ್ಮು ಮತ್ತು ಕಾಶ್ಮೀರ ರಾಜ್ಯದ ನಾಶವನ್ನು ನಿಲ್ಲಿಸಿ, ಸಂವಿಧಾನದ ಕಲಮು 370ನ್ನು ರಕ್ಷಿಸಿ” ಎಂದು ಎಲ್ಲ ಪ್ರಜಾಪ್ರಭುತ್ವವಾದಿ ಮನೋಭಾವದ ಜನಗಳಿಗೆ ಕರೆ ನೀಡಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕರ್ನಾಟಕದಲ್ಲಿ ಈ ವರ್ಷ ಜನಪರ ರಾಜ್ಯ ಬಜೆಟ್ ಮಂಡನೆ ; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಸುದ್ದಿದಿನ, ಹಾವೇರಿ : ಕರ್ನಾಟಕದಲ್ಲಿ ಮುಂದಿನ ತಿಂಗಳು ಮಂಡಿಸಲಾಗುತ್ತಿರುವ ಈ ವರ್ಷದ ರಾಜ್ಯ ಬಜೆಟ್ ರೈತರು, ದೀನ ದಲಿತರು, ಯುವಕರು, ಮಹಿಳೆಯರು, ದುಡಿಯುವ ವರ್ಗ ಮತ್ತು ಜನಪರವಾಗಿರುತ್ತದೆ ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹಾವೇರಿ ಜಿಲ್ಲೆ ಶಿಗ್ಗಾಂವ್ನಲ್ಲಿ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ದುಡಿಮೆಗೆ ಯೋಗ್ಯ ಬೆಲೆ ಸಿಗುವ ರೀತಿಯಲ್ಲಿ ನಮ್ಮ ಕಾರ್ಯಕ್ರಮಗಳು ಇರುತ್ತವೆ ಎಂದರು.
ಕರ್ನಾಟಕ ರಾಜ್ಯದ ಆರ್ಥಿಕ ಅಭಿವೃದ್ಧಿಯಲ್ಲಿ ನಾವು ವೇಗವನ್ನು ಕಂಡಿದ್ದೇವೆ. ಕಳೆದ ವರ್ಷ ನಾನು ಅಧಿಕಾರ ವಹಿಸಿಕೊಂಡಾಗ 5 ಸಾವಿರ ಕೋಟಿ ರೂಪಾಯಿ ರಾಜ್ಯದ ಬೊಕ್ಕಸಕ್ಕೆ ನಮ್ಮ ನಿರ್ಧಿಷ್ಟ ಗುರಿಗೆ ಕೊರತೆಯಿತ್ತು. ಅದನ್ನು ನಾವು 5 ಸಾವಿರ ಕೋಟಿ ತುಂಬುವುದಲ್ಲದೇ, 13 ಸಾವಿರ ಕೋಟಿ ಅಧಿಕವಾಗಿ ಸಂಗ್ರಹ ಮಾಡಿದ್ದೇವೆ. ಈ ವರ್ಷವೂ ಕೂಡ ನಮ್ಮ ಹಣಕಾಸಿನ ಸಂಗ್ರಹ ಉತ್ತಮವಾಗಿದೆ ಎಂದು ಕರ್ನಾಟಕದ ಮುಖ್ಯಮಂತ್ರಿ ಹೇಳಿದರು.
ಕೋವಿಡ್ ನಂತರದಲ್ಲಿ ಆರ್ಥಿಕ ಸುಧಾರಣೆ ಆಗುತ್ತಿರುವ ಸಂದರ್ಭದಲ್ಲಿ ಕೆಳಹಂತದ ಜನಸಮುದಾಯಕ್ಕೆ ಇನ್ನಷ್ಟು ಸಹಾಯ ಮಾಡಿ, ಅವರನ್ನು ಕೂಡ ಮುಖ್ಯ ವಾಹಿನಿಗೆ ಬರಬೇಕು ಎನ್ನುವ ನಿಟ್ಟಿನಲ್ಲಿ ನಾವು ಕಾರ್ಯಕ್ರಮ ರೂಪಿಸುತ್ತಿದ್ದೇವೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಸಂಸತ್ತಿನ ಬಜೆಟ್ ಅಧಿವೇಶನದ ಹಿನ್ನೆಲೆ ; ಇದೇ 30ರಂದು ಸರ್ವಪಕ್ಷಗಳ ಸಭೆ

ಸುದ್ದಿದಿನ ಡೆಸ್ಕ್ : ಸಂಸತ್ತಿನ ಮುಂಬರುವ ಬಜೆಟ್ ಅಧಿವೇಶನದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇದೇ 30ರಂದು ಸರ್ವಪಕ್ಷಗಳ ಸಭೆಯನ್ನು ಕರೆದಿದೆ. ಸಂಸತ್ ಭವನದ ಸಂಕೀರ್ಣದಲ್ಲಿ ಸೋಮವಾರ ಮಧ್ಯಾಹ್ನ 12 ಗಂಟೆಗೆ ಸಭೆ ನಡೆಯಲಿದೆ.
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ, ಕೇಂದ್ರ ಸಚಿವರು ಮತ್ತು ಸಂಸತ್ತಿನ ಎರಡೂ ಸದನಗಳನ್ನು ಪ್ರತಿನಿಧಿಸುವ ಸದನ ನಾಯಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಸಭೆಯಲ್ಲಿ ಸರ್ಕಾರ ಸಂಸತ್ತಿನ ಉಭಯ ಸದನಗಳ ಸುಗಮ ಕಲಾಪಕ್ಕೆ ಎಲ್ಲ ರಾಜಕೀಯ ಪಕ್ಷಗಳ ಸಹಕಾರವನ್ನು ಕೋರಲಿದೆ. ಸಂಸತ್ತಿನ ಬಜೆಟ್ ಅಧಿವೇಶನ ಇದೇ 31ರಿಂದ ಆರಂಭವಾಗಲಿದೆ. ಮೊದಲ ದಿನ ಬೆಳಿಗ್ಗೆ 11 ಗಂಟೆಗೆ ಸೆಂಟ್ರಲ್ ಹಾಲ್ ನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡುವರು.
ಅದೇ ದಿನವೇ ಆರ್ಥಿಕ ಸಮೀಕ್ಷೆಯನ್ನೂ ಸಹ ಮಂಡಿಸಲಾಗುವುದು. ಫೆಬ್ರವರಿ 1ರಂದು 2023-24ನೇ ಸಾಲಿನ ಕೇಂದ್ರ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆ ಮಾಡಲಿದ್ದಾರೆ.
ಬಜೆಟ್ ಅಧಿವೇಶನ ಏಪ್ರಿಲ್ 6ವರೆಗೆ ನಡೆಯಲಿದ್ದು, ಸುಮಾರು 66 ದಿನಗಳಲ್ಲಿ 27 ಕಲಾಪಗಳು ನಡೆಯಲಿದೆ. ಮೊದಲ ಅವಧಿಯಲ್ಲಿ ಅಧಿವೇಶನ ಫೆಬ್ರವರಿ 13ರವರೆಗೆ ನಡೆಯಲಿದೆ. ಫೆಬ್ರವರಿ 14ರಿಂದ ಮಾರ್ಚ್ 12ರವರೆಗೆ ಅಧಿವೇಶನಕ್ಕೆ ಬಿಡುವು ಇರಲಿದೆ ಆನಂತರ ಮಾರ್ಚ್ 13ರಿಂದ ಆರಂಭವಾಗುವ ಅಧಿವೇಶನ ಏಪ್ರಿಲ್ 6ಕ್ಕೆ ಕೊನೆಗೊಳ್ಳಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980336243

ದಿನದ ಸುದ್ದಿ
ರಾಷ್ಟ್ರೀಯ ಯುವ ದಿನದ ಪ್ರಯುಕ್ತ ನಾಳೆ ರಾಜಾಜಿನಗರ ವಿಧಾನ ಸಭಾ ಕ್ಷೇತ್ರದಲ್ಲಿ ಬೈಕ್ ರ್ಯಾಲಿ : ಭವ್ಯ ನರಸಿಂಹಮೂರ್ತಿ

ಸುದ್ದಿದಿನ, ಬೆಂಗಳೂರು : ರಾಷ್ಟ್ರೀಯ ಯುವ ದಿನದ ಪ್ರಯುಕ್ತ ನಾಳೆ ರಾಜಾಜಿನಗರ ವಿಧಾನ ಸಭಾ ಕ್ಷೇತ್ರದಲ್ಲಿ ಬೈಕ್ ರ್ಯಾಲಿ ಹಮ್ಮಿಕೊಂಡಿದ್ದು ಸ್ವಾಮಿ ವಿವೇಕಾನಂದರ 160ನೇ ಜನ್ಮದಿನದ ಅಂಗವಾಗಿ ಅವರ ತತ್ವ ಆದರ್ಶಗಳು ಹಾಗೂ ಯುವ ಜನತೆಗೆ ನೀಡಿರುವ ಸಂದೇಶಗಳನ್ನು ರಾಜಾಜಿನಗರ ವಿಧಾನ ಸಭಾ ಕ್ಷೇತ್ರದ ಎಲ್ಲಾ ಜನತೆಗೆ ತಲುಪುವಂತೆ ಮಾಡುವುದು ಇದರ ಉದ್ದೇಶವಾಗಿದೆ ಎಂದು ರಾಜಾಜಿನಗರ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಆಕಾಂಕ್ಷಿ ಭವ್ಯ ನರಸಿಂಹಮೂರ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೈಕ್ ರ್ಯಾಲಿ ಬೆಳಿಗ್ಗೆ 09-00 ಕ್ಕೆ ರಾಜಾಜಿನಗರ Entrance Bridge ಇಂದ ಪ್ರಾರಂಭವಾಗಿ ನವರಂಗ ಚಿತ್ರಮಂದಿರ – ಶಂಕರ್ ಮಠ – ಹಾವನೂರ್ ಸರ್ಕಲ್ – ಹೌಸಿಂಗ್ ಬೋರ್ಡ್ – ಕಾಮಾಕ್ಷಿಪಾಳ್ಯ ಬಸ್ ಸ್ಟಾಂಡ್ – ಹಾವನೂರ್ – ಅಕ್ಷಯ ಉಪಹಾರ – ಮೋದಿ ಹಾಸ್ಪಿಟಲ್ – ನವರಂಗ ಬ್ರಿಡ್ಜ್ – ಗಿರಿಯಾಸ್ ಸಿಗ್ನಲ್ – 6th ಬ್ಲಾಕ್ – ಕೊನೆಯದಾಗಿ 12 ಗಂಟೆಗೆ ಭಾಷ್ಯಮ್ ಸರ್ಕಲ್ ನಲ್ಲಿ ಕೊನೆಗೊಳ್ಳುತ್ತದೆ.
ದಾರಿಯಲ್ಲಿ 4 ಕಡೆ ಸ್ವಾಮಿ ವಿವೇಕಾನಂದರಿಗೆ ಪೂಜೆ ಹಮ್ಮಿಕೊಳ್ಳಲಾಗಿದೆ. ಪೂಜೆಯ ನಂತರ ವಿವೇಕಾನಂದರ ತತ್ವ ಆದರ್ಶಗಳನ್ನೊಳಗೊಂಡ ಹತ್ತು ಸಾವಿರ ಪುಸ್ತಕಗಳನ್ನು ಕ್ಷೇತ್ರದಾದ್ಯಂತ ಉಚಿತವಾಗಿ ಹಂಚಲಾಗುವುದು ಹಾಗೂ ಅನ್ನ ಸಂತರ್ಪಣೆ ಏರ್ಪಡಿಸಲಾಗಿರುತ್ತದೆ ಎಂದಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
