ದಿನದ ಸುದ್ದಿ
ದಾವಣಗೆರೆ | ಪ್ರತಿ ತಾಲೂಕಿನಲ್ಲಿ ಗೋಶಾಲೆ ತೆರೆಯಿರಿ : ಎಸ್.ಆರ್. ಉಮಾಶಂಕರ್

ಸುದ್ದಿದಿನ,ದಾವಣಗೆರೆ : ಬರಪೀಡಿತ ತಾಲೂಕುಗಳೆಂದು ಗುರುತಿಸಿರುವ ಎಲ್ಲಾ ತಾಲೂಕುಗಳಲ್ಲಿ ಗೋಶಾಲೆ ತೆರೆಯಲು ಹೈಕೋರ್ಟ್ ಆದೇಶಿಸಿದ್ದು, ಅದರಂತೆ ಜಿಲ್ಲೆಯ ಜಗಳೂರು ತಾಲೂಕು ಹೊರತುಪಡಿಸಿ ಉಳಿದ ಎಲ್ಲಾ ತಾಲೂಕುಗಳಲ್ಲಿ ಸೂಕ್ತ ಸ್ಥಳಗಳನ್ನು ಗುರುತಿಸಿ ಒಂದೊಂದು ಗೋಶಾಲೆ ತೆರೆಯುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಸ್.ಆರ್ ಉಮಾಶಂಕರ್ ಅಧಿಕಾರಿಗಳಿಗೆ ಸೂಚಿಸಿದರು.
ಸೋಮವಾರ ಜಿಲ್ಲಾಡಳಿತ ಕಚೇರಿಯಲ್ಲಿ ಆಯೋಜಿಸಿಲಾಗಿದ್ದ ಬರ ನಿರ್ವಹಣೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಗಳೂರು ತಾಲ್ಲೂಕಿನಲ್ಲಿ ಈಗಾಗಲೇ ಗೋಶಾಲೆ ತೆರೆಯಲಾಗಿದೆ. ಜಿಲ್ಲೆಯಲ್ಲಿ ವಾಡಿಕೆಯಷ್ಟು ಮಳೆಯಾಗದೆ, ಇತರೆ ತಾಲೂಕಗಳಲ್ಲಿ ಮೇವಿನ ಕೊರತೆಯಾಗಿರಬಹುದು. ಅಧಿಕಾರಿಗಳು ನೇರವಾಗಿ ಗ್ರಾಮಗಳಿಗೆ ಭೇಟಿ ನೀಡಿ ರೈತರೊಂದಿಗೆ ಚರ್ಚಿಸಿ ಮೇವಿನ ಕೊರೆತಯ ಬಗ್ಗೆ ಮಾಹಿತಿ ಪಡೆದು ಮೇವು ಒದಗಿಸುವ ಕಾರ್ಯ ಮಾಡಬೇಕು ಎಂದರು.
ಹೈಕೋರ್ಟ್ ಆದೇಶದಂತೆ ಜಿಲ್ಲೆಯ ಉಳಿದ ಎಲ್ಲಾ ತಾಲೂಕುಗಳಲ್ಲಿ ಗೋಶಾಲೆಗಳನ್ನು ತೆರೆದು, ಎರಡು ಲೋಡ್ಗಳಷ್ಟು ಮೇವು ಸ್ಟಾಕ್ ಮಾಡಬೇಕು. ಎರಡು ವಾರಗಳ ಕಾಲ ಕಾಯಿರಿ. ರೈತರು ಗೋಶಾಲೆಗೆ ಬಂದು ಮೇವು ತೆಗೆದುಕೊಂಡು ಹೋದರೆ ಸರಿ ಇಲ್ಲವಾದಲ್ಲಿ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿ. ಗೋಶಾಲೆ ಅವಶ್ಯಕತೆ ಇಲ್ಲದಿದ್ದಲ್ಲಿ ಮುಚ್ಚುವ ಕೆಲಸ ಮಾಡಬೇಕು ಎಂದರು.
ಜಗಳೂರು ತಾಲೂಕಿನ ತಹಶೀಲ್ದಾರ್ ತಿಮ್ಮಣ್ಣ ಮಾತನಾಡಿ, ತಾಲೂಕಿನಲ್ಲಿ ಮೇವಿನ ಕೊರತೆ ಹೆಚ್ಚಿರುವ ಮೂರು ಪ್ರದೇಶಗಳಲ್ಲಿ ಗೋಶಾಲೆ ತೆರೆಯಲಾಗಿದೆ. ಇನ್ನುಳಿದ ಎರಡು ಕಡೆಗಳಲ್ಲಿ ಮೇವಿನಬ್ಯಾಂಕ್ ತೆರೆದು ಮೇವಿನ ಕೊರತೆಯನ್ನು ನೀಗಿಸಲಾಗುತ್ತಿದೆ. ಬಳ್ಳಾರಿ, ಕೊಪ್ಪಳ, ರಾಯದುರ್ಗ ಪ್ರದೇಶಗಳಿಂದ ಸಜ್ಜೆ, ಮೆಕ್ಕೆಜೋಳ ಸಪ್ಪೆಯ ಹಸಿ ಮೇವನ್ನು ಪೂರೈಸಲಾಗುತ್ತಿದೆ. ತಾಲೂಕಿನಲ್ಲಿ ಮುಂದಿನ 08 ವಾರಗಳಿಗೆ ಆಗುವಷ್ಟು ಮೇವಿದ್ದು, ಮಳೆ ಬಂದು ಅಲ್ಲಲ್ಲಿ ಮೇವು ಚಿಗುರುತ್ತಿರುವ ಪರಿಣಾಮ ಮುಂದಿನ ದಿನಗಳಲ್ಲಿ ಮೇವಿನ ಕೊರತೆ ಆಗುವ ಸಂಭವವಿಲ್ಲ ಎಂದರು.
ಅಗತ್ಯವಿದ್ದರೆ ಜಗಳೂರು ತಾಲೂಕಿನಲ್ಲಿ ಇನ್ನೊಂದು ಮೇವಿನ ಬ್ಯಾಂಕ್ ತೆರೆದು ರೈತರಿಗೆ ಮೇವು ನೀಡಿ. ಅನುದಾನಕ್ಕಂತೂ ಕೊರತೆಯಿಲ್ಲ. ಎಲ್ಲಾ ತಾಲೂಕುಗಳಲ್ಲಿ ಗೋಶಾಲೆ ತೆರಯಲು ಕೂಡಲೇ ಅನುದಾನ ಬಿಡುಗಡೆ ಮಾಡಲಾಗುವುದು. ಮುಂಜಾಗ್ರತ ಕ್ರಮವಾಗಿ ಒಂದು ಅಥವಾ ಎರಡು ಟನ್ಗಳಷ್ಟು ಮೇವು ಸಂಗ್ರಹಿಸಿ ಎರಡು ಸಿಬ್ಬಂದಿಗಳನ್ನು ನಿಯೋಜಿಸಿ ರೈತರು ಬಂದರೆ ಮೇವು ನೀಡಿ. ರೈತರು ಬಾರದಿದ್ದಲ್ಲಿ ಜಿಲ್ಲಾಡಳಿತ ಮುಂದಿನ ಕ್ರಮ ಕೈಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ಜಿ.ಎನ್.ಶಿವಮೂರ್ತಿ ತಿಳಿಸಿದರು.
ಪ್ರತಿ ತಾಲೂಕಿನ ಇಓ ಮತ್ತು ತಹಶೀಲ್ದಾರ್ಗಳು ಪ್ರತಿ ಗ್ರಾಮಗಳಿಗೆ ಭೇಟಿ ನೀಡಿ ಮೇವಿನ ಕೊರೆತೆ-ಲಭ್ಯತೆ ಕುರಿತು ಪರಿಶೀಲಿಸಿ. ಮೇವು ಬೇಕು ಎನ್ನುವ ರೈತರ ಹೆಸರು ನೊಂದಾಯಿಸಿಕೊಂಡು ಮೊಬೈಲ್ಬ್ಯಾಂಕ್ ಮೂಲಕ ಮೇವು ಒದಗಿಸಿ. ಅಲ್ಲದೇ ಅಲ್ಲಿಯ ರೈತರೊಂದಿಗೆ ಮಿನಿಕಿಟ್ನ ಮಾಹಿತಿ ನೀಡಿ, ಮಿನಿಕಿಟ್ಗಳನ್ನು ವಿತರಿಸಿ. ಮುಂದಿನ ದಿನಗಳಲ್ಲಿ ಅಲ್ಲಿನ ರೈತರಿಂದಲೇ ಮೇವು ಖರೀದಿಸುವ ವ್ಯವಸ್ಥೆ ಮಾಡಿಕೊಳ್ಳಿ. ಇದರಿಂದ ಹಣವು ಉಳಿತಾಯವಾಗಲಿದೆ ಎಂದು ಉಮಾಶಂಕರ್ ಸಲಹೆ ನೀಡಿದರು.
ಜಿಲ್ಲಾ ಕೃಷಿ ಜಂಟಿ ನಿರ್ದೇಶಕ ಶರಣಪ್ಪ ಬಿ ಮುದುಗಲ್ ಮಾತನಾಡಿ, ಜಿಲ್ಲೆಯಲ್ಲಿ ಈ ಬಾರಿ ವಾಡಿಕೆಯ ಮಳೆಗಿಂತ ಶೇ.34 ರಷ್ಟು ಮಳೆ ಕಡಿಮೆಯಾಗಿದೆ. ಜಿಲ್ಲೆಯಾದ್ಯಂತ ನೀರಾವರಿ ಪ್ರದೇಶದಲ್ಲಿ ಶೇ.5 ಹಾಗೂ ಬೆದ್ದಲು ಪ್ರದೇಶದಲ್ಲಿ ಶೇ.86 ರಷ್ಟು ಬಿತ್ತನೆಯಾಗಿದೆ. ಕಳೆದ ಬಾರಿಗಿಂತ ಈ ಬಾರಿಯು ಮುಸುಕಿನ ಜೋಳ ಹೆಚ್ಚಿನ ಪ್ರದೇಶದಲ್ಲಿ ಬಿತ್ತನೆಯಾಗಿದೆ ನಂತರ ಭತ್ತ, ತೋಟಗಾರಿಕೆಯಲ್ಲಿ ತೆಂಗು ಮತ್ತು ಅಡಿಕೆ ಹೆಚ್ಚಿನ ಬಿತ್ತನೆಯಾಗಿದೆ. ಎಂದು ಸಭೆಯಲ್ಲಿ ಮಾಹಿತಿ ನೀಡಿದರು.
ಬೆಳೆವಿಮೆ ಯೋಜನೆಯಡಿ ಈ ಬಾರಿ ಜಿಲ್ಲೆಯಲ್ಲಿ 28 ಸಾವಿರ ರೈತರು ನೊಂದಾಯಿಸಿದ್ದಾರೆ. ಹಿಂದಿನ ವರ್ಷಗಳ ಬೆಳೆವಿಮೆಯ ಮಾಹಿತಿ ಹಾಗೂ ಬಾಕಿ ಹಣದ ಮಾಹಿತಿ ಮತ್ತು ಕಿಸಾನ್ ಸಮ್ಮಾನ್ ಯೋಜನೆ ಕುರಿತು ಮಾಹಿತಿಯನ್ನು ಸಭೆಯಲ್ಲಿ ತಿಳಿಸಿದರು.
ನಗರ ಪ್ರದೇಶಗಳ ಕುಡಿಯುವ ನೀರು ಸರಬರಾಜು ಕುರಿತು ಮಾಹಿತಿ ನೀಡಿದ ಡಿ.ಯು.ಡಿ.ಸಿಯ ಯೋಜನಾ ನಿರ್ದೇಶಕಿ ನಜ್ಮಾ, ನಗರ ಪ್ರದೇಶಗಳಲ್ಲಿ ಎಲ್ಲಿಯೂ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿಲ್ಲ. ಸದ್ಯಕ್ಕೆ ದಾವಣಗೆರೆ ನಗರದಲ್ಲಿ 41 ವಾರ್ಡ್ಗಳಿಗೆ ವಾರಕೊಮ್ಮೆ ನೀರು ಸರಬರಾಜು ಮಾಡಲಾಗುತ್ತಿದೆ. ಇನ್ನುಳಿದ ಪ್ರದೇಶಗಳಲ್ಲಿ 5 ದಿನಗಳಿಗೊಮ್ಮೆ ನೀರು ಪೂರೈಸಲಾಗುತ್ತಿದೆ. ನಗರ ಪ್ರದೇಶಗಳಲ್ಲಿ ನೀರಿನ ಹಾಹಾಕಾರವಂತೂ ಇಲ್ಲ ಎಂದರು.
ಜಗಳೂರು ತಾಲೂಕಿನಲ್ಲಿ ಇಂದಿಗೂ 77 ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕವೇ ನೀರು ಸರಬರಾಜು ಮಾಡಲಾಗುತ್ತಿದೆ. ದಾವಣಗೆರೆ ಗ್ರಾಮಾಂತರ ಪ್ರದೇಶಗಳಲ್ಲಿ ಚಾನೆಲ್ಗಳಿಗೆ ಭದ್ರಾ ಜಲಾಶಯದ ನೀರು ಬಿಡದ ಪರಿಣಾಮ 27 ಪ್ರದೇಶಗಳಲ್ಲಿ (ಅಣಜಿ, ಆನಗೋಡು, ಮಾಯಕೊಂಡ ಇತರೆ ಪ್ರದೇಶಗಳಲ್ಲಿ) ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತಿತ್ತು. ಕೆಲವು ಪ್ರದೇಶಗಳಲ್ಲಿ ಬೋರ್ವೆಲ್ ಕೊರಸಲಾಗಿದ್ದು, ನೀರು ಸಿಕ್ಕಿದ ತಕ್ಷಣ ಪೈಪ್ಲೈನ್ ಮೂಲಕ ಸರಬರಾಜು ಮಾಡುವ ವ್ಯವಸ್ಥೆ ಮಾಡಲಾಗುವುದು ಎಂದರು.
ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಿದ ಬಿಲ್ ಪಾವತಿಯಾಗಿದೆ. ಕೆಲವು ಜಿ.ಪಿ.ಎಸ್ ಸರಿಯಾಗಿ ಇಲ್ಲದಿರುವ ಕಡೆ ಹಣ ಮಂಜೂರು ಮಾಡಿಲ್ಲ. ಈಗಾಗಲೇ ಜಿಲ್ಲಾಡಳಿತ ತಂಡದಿಂದ ಪರಿಶೀಲನೆ ನಡೆಸಿದ್ದು ಮತ್ತೋಮ್ಮೆ ಪುನಃ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಹಶೀಲ್ದಾರ್ ತಿಮ್ಮಣ್ಣ ತಿಳಿಸಿದರು.
ಸಾಮಾಜಿಕ ಭದ್ರತಾ ಯೋಜನೆಗಳ ಕುರಿತು ಮಾಹಿತಿ ಕೇಳಿದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಿಗೆ ಮಾಹಿತಿ ನೀಡಿದ ಅಧಿಕಾರಿಗಳು, ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪಿಂಚಣಿ ಅದಾಲತ್ ನಡೆಸಿ ಸರ್ಕಾರಿ ಯೋಜನೆಗಳ ಮಾಹಿತಿ ಮತ್ತು ಸೌಲಭ್ಯವನ್ನು ಒದಗಿಸುವ ಕಾರ್ಯ ಮಾಡಲಾಗುತ್ತಿದೆ ಎಂದರು.
ಜಗಳೂರು ತಾಲೂಕಿನಲ್ಲಿ ಗ್ರಾಮಭೇಟಿ ಕಾರ್ಯಕ್ರಮದ ಮೂಲಕ ಅಧಿಕಾರಿಗಳ ನಡೆ ಹಳ್ಳಿಯ ಕಡೆ ಎನ್ನುವ ಮೂಲಕ ಪ್ರತಿ ಗ್ರಾಮಗಳಿಗೆ ಭೇಟಿ ನೀಡಿ ಅವಹಾಲು ಸ್ವೀಕರಿಸಿ ಅವುಗಳಿಗೆ ಪರಿಹಾರವನ್ನು ವಾರದಲ್ಲಿಯೇ ಒದಗಿಸುವ ಪ್ರಯತ್ನ ಮಾಡಲಾಗಿತ್ತು. ಅಂದಿನ ದಿನಕ್ಕೆ ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಹಾಗೂ ಉದ್ಯೋಗಕ್ಕೆ ಹೆಚ್ಚಿನ ಬೇಡಿಕೆ ಇರುವುದರಿಂದ ಹೆಚ್ಚಿನ ಗಮನಹರಿಸಿ ಸಮಸ್ಯೆಯನ್ನು ಬಗೆಹರಿಸಲಾಯಿತು. ಮುಂದಿನ ದಿನಗಳಲ್ಲಿ ಇನ್ನುಳಿದ ತಾಲೂಕುಗಳಿಗೂ ಭೇಟಿ ನೀಡಿ ಸಮಸ್ಯೆಗಳನ್ನು ಆಲಿಸುವ ಚಿಂತನೆ ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಜಿಲ್ಲೆಯಲ್ಲಿ ಜಲಶಕ್ತಿ ಮತ್ತು ಜಲಾಮೃತ ಕಾರ್ಯಕ್ರಮಗಳಡಿಯಲ್ಲಿ ಶಾಲೆ, ಹಾಸ್ಟೆಲ್ ಹಾಗೂ ಸಾರ್ವಜನಿಕರಿಗೆ ಹೆಚ್ಚು ಅರಿವು ಮೂಡಿಸಿ ಜಿಲ್ಲೆಯ ಹಸಿರೀಕರಣಕ್ಕೆ ಒತ್ತು ನೀಡಿ. ಜಲಾಮೃತ ಕಾರ್ಯಕ್ರಮದಡಿಯಲ್ಲಿ ಮುಂದಿನ ದಿನಗಳಲ್ಲಿ ಪ್ರತಿ ಶಾಲೆಗೆ 5000 ಅನುದಾನ ನೀಡಲಿದ್ದು, ಈ ಅನುದಾನದಲ್ಲಿ ಕಿಚನ್ಗಾರ್ಡ್ನ್ನು ನಿರ್ಮಿಸಿ ಅಲ್ಲಿನ ಮಕ್ಕಳಿಗೆ ಅನುಕೂಲವಾಗುವಂತೆ ಪಪ್ಪಾಯ, ನುಗ್ಗೆಕಾಯಿ, ಸಫೋಟ, ಮಾವು, ಹುಣಸೆ, ನೇರಳೆ ಮರಗಳನ್ನು ಬೆಳೆಯಬೇಕು. ಈ ಕುರಿತು ಕೃಷಿ ಹಾಗೂ ತೋಟಗಾರಿಕೆ ಇಲಾಖೆಯ ಸಹಕಾರದೊಂದಿಗೆ ಕ್ರಿಯಾಯೋಜನೆ ರೂಪಿಸಿಕೊಳ್ಳಬೇಕು ಎಂದು ಡಿ.ಡಿ.ಪಿ.ಐ ಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸಲಹೆ ನೀಡಿದರು.
ಜಿಲ್ಲೆಯಲ್ಲಿ ಹಿಂದಿನ ದಿನಗಳಲ್ಲಿ ಬರ ನಿರ್ವಹಣೆಯನ್ನು ನಿರ್ವಹಿಸಿದ ರೀತಿಯಲ್ಲೇ ಮುಂದಿನ ದಿನಗಳಲ್ಲಿ ಇನ್ನು ಉತ್ತಮವಾಗಿ ಮತ್ತು ಸಮರ್ಪಕವಾಗಿ ಕಾರ್ಯನಿರ್ವಹಿಸುವಂತೆ ಸಭೆಯಲಿದ್ದ ಅಧಿಕಾರಿಗಳಿಗೆ ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪದ್ಮ ಬಸವಂತಪ್ಪ, ಜಿಲ್ಲಾ ಸ್ಮಾರ್ಟ್ಸಿಟಿ ಲಿಮಿಟೆಡ್ನ ವ್ಯವಸ್ಥಾಪಕ ಷರೀಫ್, ಡಿಡಿಪಿಐ ಸಿ.ಆರ್. ಪರಮೇಶ್ವರಪ್ಪ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕ ಮಂಟೇಸ್ವಾಮಿ, ಜಿಲ್ಲಾ ಸಂಖ್ಯಾಧಿಕಾರಿ ರಾಜೇಶ್ವರಿ ಸೇರಿದಂತೆ ವಿವಿಧ ತಾಲೂಕಿನ ತಹಶೀಲ್ದಾರ್ಗಳು ಇತರೆ ಅಧಿಕಾರಿಗಳು ಹಾಜರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ನಟ ಮನದೀಪ್ ರಾಯ್ ನಿಧನ

ಸುದ್ದಿದಿನ ಡೆಸ್ಕ್ : ಹಿರಿಯ ಚಿತ್ರನಟ ಮನದೀಪ್ ರಾಯ್ (74 ವರ್ಷ) ಇಂದು ಬೆಳಗಿನ ಜಾವ ಅಗಲಿದ್ದಾರೆ.
ಕೆಲ ದಿನಗಳ ಹಿಂದೆ ಹೃದಯಾಘಾತಕ್ಕೀಡಾಗಿದ್ದ ಅವರು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಮನದೀಪ್ ರಾಯ್ ಹವ್ಯಾಸಿ ರಂಗಭೂಮಿ ಹಿನ್ನೆಲೆಯ ಕಲಾವಿದ. ನಟ – ನಿರ್ದೇಶಕ ಶಂಕರನಾಗ್ ಅವರ ಆತ್ಮೀಯ ಒಡನಾಡಿ. ಪೋಷಕ ಪಾತ್ರ, ಹಾಸ್ಯ ನಟರಾಗಿ 500ಕ್ಕೂ ಹೆಚ್ಚು ಸಿನಿಮಾಗಳು ಹಾಗೂ ಕಿರುತೆರೆ ಸರಣಿಗಳಲ್ಲಿ ಅಭಿನಯಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕರ್ನಾಟಕದಲ್ಲಿ ಈ ವರ್ಷ ಜನಪರ ರಾಜ್ಯ ಬಜೆಟ್ ಮಂಡನೆ ; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಸುದ್ದಿದಿನ, ಹಾವೇರಿ : ಕರ್ನಾಟಕದಲ್ಲಿ ಮುಂದಿನ ತಿಂಗಳು ಮಂಡಿಸಲಾಗುತ್ತಿರುವ ಈ ವರ್ಷದ ರಾಜ್ಯ ಬಜೆಟ್ ರೈತರು, ದೀನ ದಲಿತರು, ಯುವಕರು, ಮಹಿಳೆಯರು, ದುಡಿಯುವ ವರ್ಗ ಮತ್ತು ಜನಪರವಾಗಿರುತ್ತದೆ ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹಾವೇರಿ ಜಿಲ್ಲೆ ಶಿಗ್ಗಾಂವ್ನಲ್ಲಿ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ದುಡಿಮೆಗೆ ಯೋಗ್ಯ ಬೆಲೆ ಸಿಗುವ ರೀತಿಯಲ್ಲಿ ನಮ್ಮ ಕಾರ್ಯಕ್ರಮಗಳು ಇರುತ್ತವೆ ಎಂದರು.
ಕರ್ನಾಟಕ ರಾಜ್ಯದ ಆರ್ಥಿಕ ಅಭಿವೃದ್ಧಿಯಲ್ಲಿ ನಾವು ವೇಗವನ್ನು ಕಂಡಿದ್ದೇವೆ. ಕಳೆದ ವರ್ಷ ನಾನು ಅಧಿಕಾರ ವಹಿಸಿಕೊಂಡಾಗ 5 ಸಾವಿರ ಕೋಟಿ ರೂಪಾಯಿ ರಾಜ್ಯದ ಬೊಕ್ಕಸಕ್ಕೆ ನಮ್ಮ ನಿರ್ಧಿಷ್ಟ ಗುರಿಗೆ ಕೊರತೆಯಿತ್ತು. ಅದನ್ನು ನಾವು 5 ಸಾವಿರ ಕೋಟಿ ತುಂಬುವುದಲ್ಲದೇ, 13 ಸಾವಿರ ಕೋಟಿ ಅಧಿಕವಾಗಿ ಸಂಗ್ರಹ ಮಾಡಿದ್ದೇವೆ. ಈ ವರ್ಷವೂ ಕೂಡ ನಮ್ಮ ಹಣಕಾಸಿನ ಸಂಗ್ರಹ ಉತ್ತಮವಾಗಿದೆ ಎಂದು ಕರ್ನಾಟಕದ ಮುಖ್ಯಮಂತ್ರಿ ಹೇಳಿದರು.
ಕೋವಿಡ್ ನಂತರದಲ್ಲಿ ಆರ್ಥಿಕ ಸುಧಾರಣೆ ಆಗುತ್ತಿರುವ ಸಂದರ್ಭದಲ್ಲಿ ಕೆಳಹಂತದ ಜನಸಮುದಾಯಕ್ಕೆ ಇನ್ನಷ್ಟು ಸಹಾಯ ಮಾಡಿ, ಅವರನ್ನು ಕೂಡ ಮುಖ್ಯ ವಾಹಿನಿಗೆ ಬರಬೇಕು ಎನ್ನುವ ನಿಟ್ಟಿನಲ್ಲಿ ನಾವು ಕಾರ್ಯಕ್ರಮ ರೂಪಿಸುತ್ತಿದ್ದೇವೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಸಂಸತ್ತಿನ ಬಜೆಟ್ ಅಧಿವೇಶನದ ಹಿನ್ನೆಲೆ ; ಇದೇ 30ರಂದು ಸರ್ವಪಕ್ಷಗಳ ಸಭೆ

ಸುದ್ದಿದಿನ ಡೆಸ್ಕ್ : ಸಂಸತ್ತಿನ ಮುಂಬರುವ ಬಜೆಟ್ ಅಧಿವೇಶನದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇದೇ 30ರಂದು ಸರ್ವಪಕ್ಷಗಳ ಸಭೆಯನ್ನು ಕರೆದಿದೆ. ಸಂಸತ್ ಭವನದ ಸಂಕೀರ್ಣದಲ್ಲಿ ಸೋಮವಾರ ಮಧ್ಯಾಹ್ನ 12 ಗಂಟೆಗೆ ಸಭೆ ನಡೆಯಲಿದೆ.
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ, ಕೇಂದ್ರ ಸಚಿವರು ಮತ್ತು ಸಂಸತ್ತಿನ ಎರಡೂ ಸದನಗಳನ್ನು ಪ್ರತಿನಿಧಿಸುವ ಸದನ ನಾಯಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಸಭೆಯಲ್ಲಿ ಸರ್ಕಾರ ಸಂಸತ್ತಿನ ಉಭಯ ಸದನಗಳ ಸುಗಮ ಕಲಾಪಕ್ಕೆ ಎಲ್ಲ ರಾಜಕೀಯ ಪಕ್ಷಗಳ ಸಹಕಾರವನ್ನು ಕೋರಲಿದೆ. ಸಂಸತ್ತಿನ ಬಜೆಟ್ ಅಧಿವೇಶನ ಇದೇ 31ರಿಂದ ಆರಂಭವಾಗಲಿದೆ. ಮೊದಲ ದಿನ ಬೆಳಿಗ್ಗೆ 11 ಗಂಟೆಗೆ ಸೆಂಟ್ರಲ್ ಹಾಲ್ ನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡುವರು.
ಅದೇ ದಿನವೇ ಆರ್ಥಿಕ ಸಮೀಕ್ಷೆಯನ್ನೂ ಸಹ ಮಂಡಿಸಲಾಗುವುದು. ಫೆಬ್ರವರಿ 1ರಂದು 2023-24ನೇ ಸಾಲಿನ ಕೇಂದ್ರ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆ ಮಾಡಲಿದ್ದಾರೆ.
ಬಜೆಟ್ ಅಧಿವೇಶನ ಏಪ್ರಿಲ್ 6ವರೆಗೆ ನಡೆಯಲಿದ್ದು, ಸುಮಾರು 66 ದಿನಗಳಲ್ಲಿ 27 ಕಲಾಪಗಳು ನಡೆಯಲಿದೆ. ಮೊದಲ ಅವಧಿಯಲ್ಲಿ ಅಧಿವೇಶನ ಫೆಬ್ರವರಿ 13ರವರೆಗೆ ನಡೆಯಲಿದೆ. ಫೆಬ್ರವರಿ 14ರಿಂದ ಮಾರ್ಚ್ 12ರವರೆಗೆ ಅಧಿವೇಶನಕ್ಕೆ ಬಿಡುವು ಇರಲಿದೆ ಆನಂತರ ಮಾರ್ಚ್ 13ರಿಂದ ಆರಂಭವಾಗುವ ಅಧಿವೇಶನ ಏಪ್ರಿಲ್ 6ಕ್ಕೆ ಕೊನೆಗೊಳ್ಳಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980336243

-
ನಿತ್ಯ ಭವಿಷ್ಯ6 days ago
ಸೋಮವಾರ- ರಾಶಿ ಭವಿಷ್ಯ ಜನವರಿ-23,2023 : ಈ ರಾಶಿಯವರಿಗೆ ಸಾಡೇ ಸಾತಿ ಶನಿಯಿಂದ ಮುಕ್ತಿ,ಎಲ್ಲಾ ನಿಮ್ಮ ಕೆಲಸಗಳು ನೆರವೇರಲಿ
-
ದಿನದ ಸುದ್ದಿ4 days ago
ಸಂಸತ್ತಿನ ಬಜೆಟ್ ಅಧಿವೇಶನದ ಹಿನ್ನೆಲೆ ; ಇದೇ 30ರಂದು ಸರ್ವಪಕ್ಷಗಳ ಸಭೆ
-
ದಿನದ ಸುದ್ದಿ10 hours ago
ಕರ್ನಾಟಕದಲ್ಲಿ ಈ ವರ್ಷ ಜನಪರ ರಾಜ್ಯ ಬಜೆಟ್ ಮಂಡನೆ ; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
-
ದಿನದ ಸುದ್ದಿ9 hours ago
ನಟ ಮನದೀಪ್ ರಾಯ್ ನಿಧನ