ದಿನದ ಸುದ್ದಿ
“ಕರ್ನಾಟಕದ ಉದ್ಯೋಗಗಳು ಕನ್ನಡಿಗರಿಗೇ ಸಿಗಲಿ” : ಬೆಂಗಳೂರಲ್ಲಿ ಆಗಸ್ಟ್ 14-15 ರಂದು ಧರಣಿ

“ಕರ್ನಾಟಕದ ಉದ್ಯೋಗಗಳು ಕನ್ನಡಿಗರಿಗೇ ಸಿಗಲಿ” ಎಂದು ಒತ್ತಾಯಿಸಿ ಅಗಸ್ಟ್ 14 ಮತ್ತು 15 ರಂದು ಬೆಂಗಳೂರಿನ ಆನಂದರಾವ್ ವೃತ್ತದ ಬಳಿಯಿರುವ ಗಾಂಧಿ ಪ್ರತಿಮೆ ಬಳಿ ಉಪವಾಸ ಸತ್ಯಾಗ್ರಹ ಮತ್ತು ಅಹೋರಾತ್ರಿ ಧರಣಿಯ ಬಗ್ಗೆ ನಡೆಯಲಿದೆ.
ಕರ್ನಾಟಕದ ಯುವಜನತೆ ಎದುರಿಸುತ್ತಿರುವ ಸಮಸ್ಯೆಗಳಲ್ಲಿ ನಿರುದ್ಯೋಗ ಸಮಸ್ಯೆ ಪ್ರಮುಖವಾದುದು. ಸಾಕಷ್ಟು ಉದ್ಯೋಗ ಸೃಷ್ಟಿಯಾಗದೇ ಇರುವುದು ಒಂದೆಡೆಯಾದರೆ ಇನ್ನೊಂದೆಡೆ ಇಲ್ಲಿ ಸೃಷ್ಟಿಯಾದ ಉದ್ಯೋಗಗಳನ್ನು ಪರಭಾಷಿಕರು ಬಂದು ಕಬಳಿಸಿಕೊಳ್ಳುತ್ತಿದ್ದಾರೆ. ಹಾಗಾಗಿ ನಮ್ಮ ನೆಲದಲ್ಲಿನ ಉದ್ಯೋಗ ನಮ್ಮವರಿಗೆ ಸಿಗದಂತಾಗಿದೆ.
ರಾಜ್ಯದ ಸಂಪನ್ಮೂಲಗಳನ್ನು ಬಳಸಿಕೊಂಡು ಇಲ್ಲಿಯೇ ಬೀಡುಬಿಟ್ಟಿದ್ದರೂ ಇಲ್ಲಿನ ಬಹುರಾಷ್ತ್ರೀಯ ಕಂಪನಿಗಳು, ಬ್ಯಾಂಕುಗಳು ಮತ್ತು ಇತರ ಉದ್ಯಮಗಳು ಕನ್ನಡಿಗರಿಗೆ ಕೆಲಸ ಕೊಡಲು ಮೀನಮೇಷ ಎಣಿಸುತ್ತಿವೆ. ಹಾಗಾಗಿ ನಮ್ಮ ಕನ್ನಡಿಗರ ಅನ್ನಕ್ಕೆ ಇನ್ನಷ್ಟು ಕುತ್ತು ಬರುವುದನ್ನು ಹೇಗಾದರೂ ಮಾಡಿ ತಡೆಯಲೇಬೇಕೆಂದು ನಿರ್ಧರಿಸಿ ಈ ಹೋರಾಟ ಹಮ್ಮಿಕೊಂಡಿದ್ದೇವೆ ಎನ್ನುತ್ತಾರೆ ಕರ್ನಾಟಕ ರಣಧೀರ ಪಡೆಯ ರಾಜ್ಯಾಧ್ಯಕ್ಷರಾದ ಬಿ.ಹರೀಶ್ ಕುಮಾರ್.
ಈ ಹೋರಾಟದ ಮತ್ತೊಬ್ಬ ಪ್ರಮುಖರಾದ ರಮಾನಂದ ಅಂಕೋಲಾರವರು ಮಾತನಾಡಿ, ರಾಜ್ಯದಲ್ಲಿ ಜನಜಾಗೃತಿ ಮೂಡಿಸುವ ಜೊತೆಗೆ ನಮ್ಮನ್ನಾಳುವ ಸರ್ಕಾರಗಳ ಗಮನ ಸೆಳೆಯಲು ಮೇ ತಿಂಗಳ ೩ನೇ ತಾರೀಖಿನಂದು ನಾವು #KarnatakaJobsForKannadigas ಎಂಬ ಅಡಿಬರಹದ ಟ್ವಿಟರ್ ಅಭಿಯಾನವನ್ನು ಹಮ್ಮಿಕೊಂಡಿದ್ದೆವು. ಇಡಿ ದೇಶವೇ ನಮ್ಮತ್ತ ತಿರುಗಿ ನೋಡುವಂತೆ ನಾಡಾಭಿಮಾನಿಗಳ ಸಹಕಾರದಿಂದ ನಡೆದ ಈ ಅಭಿಯಾನಕ್ಕೆ ಬೆಂಬಲಸೂಚಿಸುತ್ತಾ ಆಗಿನ ಮುಖ್ಯಮಂತ್ರಿಗಳಾದ ಶ್ರೀಯುತ ಕುಮಾರ ಸ್ವಾಮಿಯವರು “ಕನ್ನಡಿಗರ ಹಕ್ಕೊತ್ತಾಯ ಪರಿಗಣಿಸಿ ಕಾನೂನಿನ ಚೌಕಟ್ಟಿನಲ್ಲಿ ಹೇಗೆ ಕಾರ್ಯರೂಪಕ್ಕೆ ತರಬಹುದು ಎಂದು ಸಲಹೆ ಪಡೆಯಲಾಗುವುದು” ಎಂದು ಹೇಳಿದ್ದರು. ನಂತರ ಮೇ 18ರಂದು ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಬೃಹತ್ ಮಾನವ ಸರಪಳಿ ರಚಿಸಿ ಮತ್ತೊಮ್ಮೆ ನಮ್ಮ ಹಕ್ಕೊತ್ತಾಯವನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದೇವೆ. ನಂತರ ಕರ್ನಾಟಕದ ೧೫ಕ್ಕೂ ಹೆಚ್ಚು ಜಿಲ್ಲೆಗಳ ೫೦೦ಕ್ಕೂ ಹೆಚ್ಚು ಬ್ಯಾಂಕ್ ಶಾಖೆಗಳಿಗೆ ನಮ್ಮ ಕಾರ್ಯಕರ್ತರು ಖುದ್ದಾಗಿ ತೆರಳಿ ಕನ್ನಡಿಗರಿಗೇ ಉದ್ಯೋಗ ಕೊಡುವಂತೆ ಮನವಿ ಮಾಡಿದ್ದೇವೆ ಎನ್ನುತ್ತಾರೆ.
ಅಭಿಯಾನದ ಯಶಸ್ಸು ಎನ್ನುವಂತೆ ಈ ಅಭಿಯಾನ ಶುರುವಾದ ಮೇಲೆಯೇ ಕರ್ನಾಟಕದ ಕೆಲವು ಲೋಕಸಭಾ ಸದಸ್ಯರು ನಮ್ಮ ಬೇಡಿಕೆಗಳಲ್ಲೊಂದಾಗಿದ್ದ ಐಬಿಪಿಎಸ್ ಪರೀಕ್ಷೆಯನ್ನು ಕನ್ನಡದಲ್ಲಿ ಬರೆಯಲು ಅವಕಾಶಕೊಡುವ ಕುರಿತು ಸಂಸತ್ತಿನಲ್ಲಿ ಧ್ವನಿ ಎತ್ತಿದ್ದರಿಂದ ನಮ್ಮ ತಾಯ್ನೆಲದ ಭಾಷೆಯಾದ ಕನ್ನಡದಲ್ಲೇ ಪರೀಕ್ಷೆ ಬರೆಯಲು ಅವಕಾಶ ಸಿಕ್ಕಿದೆ. ಕಳೆದ ವಾರವಷ್ಟೇ ಕರ್ನಾಟಕದ ಉದ್ಯೋಗಗಳು ಕನ್ನಡಿಗರಿಗೇ ಮೀಸಲಾಗಬೇಕು ಎಂದು ಒತ್ತಾಯಿಸಿ ರಾಜ್ಯದ ನಾಲ್ಕು ಸಂಸದರು ರಾಜ್ಯಸಭೆಯಲ್ಲಿ ಧ್ವನಿ ಎತ್ತಿದ್ದಾರೆ. ನಂತರ ಮೊನ್ನೆ ಅಂದರೆ ಅಗಸ್ಟ್ 10 ರಂದು ಮತ್ತೊಮ್ಮೆ ಟ್ವಿಟರ್ ಅಭಿಯಾನ ನಡೆಸಿ ನಮ್ಮ ಹಕ್ಕೊತ್ತಾಯವನ್ನು ಮಂಡಿಸಿದಾಗ ಬೇಡಿಕೆಯನ್ನು ಈಡೇರಿಸುವ ಭರವಸೆಯನ್ನು ಈಗಿನ ಮುಖ್ಯಮಂತ್ರಿಗಳಾದ ಶ್ರೀಯುತ ಯಡಿಯೂರಪ್ಪನವರು ನೀಡಿದ್ದಾರೆ.
ಹಿಂದಿನ ಮುಖ್ಯಮಂತ್ರಿಗಳು ನೀಡಿದ ಭರವಸೆಯಂತೆ ಇದೂ ಸಹ ಕೇವಲ ಟ್ವಿಟರಿನಲ್ಲಿ ನೀಡಿದ ಭರವಸೆಯಾಗಿ ಉಳಿದುಕೊಳ್ಳುವ ಸಾಧ್ಯತೆ ಇದೆ. ಕಳೆದ ತಿಂಗಳಷ್ಟೇ ನಮ್ಮ ಪಕ್ಕದ ರಾಜ್ಯವಾದ ಆಂಧ್ರಪ್ರದೇಶ ಸರ್ಕಾರ ಸ್ಥಳಿಯರಿಗೆ ತನ್ನ ಉದ್ಯೋಗದಲ್ಲಿ ಶೇಕಡ 75 ಮೀಸಲಾತಿ ನೀಡಲು ಶಾಸನ ಜಾರಿ ಮಾಡುವತ್ತ ಹೆಜ್ಜೆ ಇಟ್ಟಿದೆ.ನಮ್ಮ ರಾಜ್ಯದಲ್ಲೂ ಸಹ ಇಂತಹ ಒಂದು ಕಾಯ್ದೆಯನ್ನು ಮಾಡಿ ಎಂದು ನಾವು ನಮ್ಮ ಮುಖ್ಯಮಂತ್ರಿಯನ್ನು ಈ ಸಂದರ್ಭದಲ್ಲಿ ಬಲವಾಗಿ ಒತ್ತಾಯಿಸುತ್ತೇವೆ ಎಂದಿದ್ದಾರೆ.
ಅಗಸ್ಟ್ 14 ಮತ್ತು 15 ರಂದು ನಡೆಯುವ ಉಪವಾಸ ಸತ್ಯಾಗ್ರಹ ಮತ್ತು ಅಹೋರಾತ್ರಿ ಧರಣಿಯಲ್ಲಿ ಹೋರಾಟಗಾರರಾದ ವಾಟಾಳ್ ನಾಗರಾಜ್, ಕರವೇ ನಾರಾಯಣ ಗೌಡ, ಕರವೇ ಪ್ರವೀಣ್ ಕುಮಾರ್ ಶೆಟ್ಟಿ, ಚಿತ್ರನಟ ಉಪೇಂದ್ರ, ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, ಕನ್ನಡ ಅಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಎಸ್ ಜಿ ಸಿದ್ದರಾಮಯ್ಯ ಸೇರಿದಂತೆ ನಾಡಿನ ಹಿರಿಯ ಸಾಹಿತಿಗಳು, ಬರಹಗಾರರು, ಖ್ಯಾತ ಚಿತ್ರನಟರು, ಹೋರಾಟಗಾರರು, ರಾಜಕಾರಣಿಗಳು ಮತ್ತು ದೊಡ್ಡ ಪ್ರಮಾಣದ ಯುವಜನತೆ ಭಾಗವಹಿಸಲಿದ್ದಾರೆ. ಈ ಧರಣಿ ಅಗಸ್ಟ್ 14 ರಂದು ಬೆಳಿಗ್ಗೆ 10 ಗಂಟೆಗೆ ಶುರುವಾಗಿ ಅಗಸ್ಟ್ 15 ರ ಬೆಳಿಗ್ಗೆ 10 ಗಂಟೆಗೆ ಮುಕ್ತಾಯವಾಗಲಿದೆ ಎಂದು ಫೇಸ್ ಬುಕ್ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.
ಹಕ್ಕೊತ್ತಾಯಗಳು
- ಎಲ್ಲಾ ಖಾಸಗಿ ವಲಯದ ಉದ್ಯಮಗಳಿಗೆ ರಾಜ್ಯ ಸರ್ಕಾರ ಹಲವು ಮೂಲಭೂತ(ನೆಲ,ಜಲ,ವಿದ್ಯುತ್, ರಸ್ತೆ ಮುಂತಾದ) ಸವಲತ್ತುಗಳನ್ನು ನೀಡುತ್ತಿರುವುದರಿಂದ ಕಟ್ಟುನಿಟ್ಟಾಗಿ ಉದ್ಯೋಗಗಳು ಸ್ಥಳಿಯರಿಗೆ(ಕನ್ನಡಿಗರಿಗೆ) ಮೀಸಲಿಡಲು ಕರಾರು ಪತ್ರದಲ್ಲೇ ಪೂರ್ವಷರತ್ತು ಹಾಕಬೇಕು. ರಾಜ್ಯದ ಸರ್ಕಾರಿ ವಲಯದ ಉದ್ಯಮಗಳಲ್ಲಿ ಎಲ್ಲ ಹುದ್ದೆಗಳಿಗೂ ಕನ್ನಡಿಗರನ್ನೇ ಆಯ್ಕೆ ಮಾಡಬೇಕು. ಅನಿವಾರ್ಯ ಸಂದರ್ಭದಲ್ಲಿ ಹೊರ ರಾಜ್ಯದವರನ್ನು ಆಯ್ಕೆ ಮಾಡಿಕೊಳ್ಳಬೇಕಾದರೆ ರಾಜ್ಯ ಸರ್ಕಾರದ ಪೂರ್ವಾನುಮತಿ ಪಡೆದು ನೇಮಕ ಮಾಡಿಕೊಳ್ಳಬೇಕು. ಇಲ್ಲಿನ ಐಟಿ ಉದ್ಯಮಗಳಿಗೆ ರಾಜ್ಯದ ಇಂಜಿನಿಯರಿಂಗ್/ಮ್ಯಾನೇಜ್ಮೆಂಟ್ ಕಾಲೇಜುಗಳಿಂದಲೇ ಕ್ಯಾಂಪಸ್ ನೇಮಕಾತಿ ಮಾಡಿಕೊಳ್ಳಲು ಸೂಚಿಸಬೇಕು.
- ಮಹಾರಾಷ್ಟ್ರದಲ್ಲಿ ಇರುವಂತೆ ರಾಜ್ಯ ಸರ್ಕಾರ ಸ್ಥಳೀಯರಿಗೆ ನಿಗದಿಪಡಿಸಿದ ಪ್ರಮಾಣದಲ್ಲಿ ಉದ್ಯೋಗಾವಕಾಶಗಳನ್ನು ಒದಗಿಸುವ ಬಗ್ಗೆ ರಾಜ್ಯದ ಖಾಸಗಿ ಉದ್ದಿಮೆಗಳಿಂದ ಪ್ರತಿವರ್ಷ ಘೋಷಣೆ ಪತ್ರ ಪಡೆಯಬೇಕು. ಅಭ್ಯರ್ಥಿಗಳನ್ನು ಸ್ಥಳೀಯರು ಎಂದು ಪರಿಗಣಿಸಲು 15 ವರ್ಷಗಳ ಕಾಲ ಅವರು ರಾಜ್ಯದಲ್ಲಿ ವಾಸವಾಗಿದ್ದಲ್ಲದೇ ರಾಜ್ಯಭಾಷೆಯಾದ ಕನ್ನಡದಲ್ಲಿ ಮಾತನಾಡಲು,ಓದಲು ಮತ್ತು ಬರೆಯಲು ಬರಬೇಕು.
- ರಾಜ್ಯದಲ್ಲಿ ವ್ಯವಹರಿಸುವ ಎಲ್ಲಾ ಬ್ಯಾಂಕುಗಳು ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುವಾಗ ರಾಜ್ಯದ ಅಧಿಕೃತ ಭಾಷೆಯಾದ ಕನ್ನಡ ಭಾಷಾಜ್ಞಾನವನ್ನು ಕಡ್ಡಾಯಗೊಳಿಸಬೇಕು.ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (IBPS) ಸಂಸ್ಥೆಯು ಬ್ಯಾಂಕಿಂಗ್ ನೇಮಕಾತಿಗೆ ನಡೆಸುವ ಪೂರ್ವಭಾವಿ ಮತ್ತು ಮುಖ್ಯಪರೀಕ್ಷೆಯನ್ನು ಕನ್ನಡದಲ್ಲೂ ಬರೆಯುವ ಅವಕಾಶವಿರಬೇಕು.
- ರಾಜ್ಯ/ಕೇಂದ್ರ ಸರ್ಕಾರಿ ಉದ್ಯಮಗಳು ಹಾಗೂ ಇಲಾಖೆಗಳಲ್ಲಿ ದಿನಗೂಲಿ ಕೆಲಸಗಳಿಗೆ ಕಾರ್ಮಿಕರನ್ನು/ನೌಕರರನ್ನು ಗುತ್ತಿಗೆ ಆಧಾರದ ಮೇಲೆ ತೆಗೆದುಕೊಳ್ಳುವ ಸಂದರ್ಭದಲ್ಲಿ ಕನ್ನಡಿಗರನ್ನೇ ನೇಮಿಸಿಕೊಳ್ಳಬೇಕು. ಹೊರಗುತ್ತಿಗೆ ಸಂಸ್ಥೆಗಳಿಗೂ ಈ ಷರತ್ತು ವಿಧಿಸಬೇಕು.
- ಕೇಂದ್ರ/ರಾಜ್ಯ ಸರ್ಕಾರದ ಹುದ್ದೆಗಳ ನೇಮಕಾತಿಗಾಗಿ ನಡೆಯುವ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳು ಕಡ್ಡಾಯವಾಗಿ ಕನ್ನಡದಲ್ಲಿಯೂ ಇರಬೇಕು.
ಈ ಹೋರಾಟವು ಯಾವುದೇ ಬ್ಯಾನರಿನಡಿಯಲ್ಲಿ ನಡೆಯುತ್ತಿಲ್ಲ. ಹೋರಾಟದ ನೇತೃತ್ವವನ್ನು ಯಾವುದೇ ಸಂಘಟನೆ ಅಥವಾ ವ್ಯಕ್ತಿ ವಹಿಸಿಲ್ಲ. ಇದು ಸಮಗ್ರ ಕನ್ನಡಿಗರೆಲ್ಲಾರ ಹೋರಾಟ. ಎಲ್ಲರ ಭಾಗವಹಿಸುವಿಕೆ ಇರಲಿ ಎಂದು ಕರ್ನಾಟಕ ರಣಧೀರ ಪಡೆಯ ಪ್ರಮುಖರಾದ ದಾವಣಗೆರೆಯ ರಾಘು ದೊಡ್ಡಮನಿ, ಯವರು ಕೋರಿದ್ದಾರೆ.
ಸಂಪರ್ಕಕ್ಕಾಗಿ: 9844363474

ದಿನದ ಸುದ್ದಿ
ನಟ ಮನದೀಪ್ ರಾಯ್ ನಿಧನ

ಸುದ್ದಿದಿನ ಡೆಸ್ಕ್ : ಹಿರಿಯ ಚಿತ್ರನಟ ಮನದೀಪ್ ರಾಯ್ (74 ವರ್ಷ) ಇಂದು ಬೆಳಗಿನ ಜಾವ ಅಗಲಿದ್ದಾರೆ.
ಕೆಲ ದಿನಗಳ ಹಿಂದೆ ಹೃದಯಾಘಾತಕ್ಕೀಡಾಗಿದ್ದ ಅವರು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಮನದೀಪ್ ರಾಯ್ ಹವ್ಯಾಸಿ ರಂಗಭೂಮಿ ಹಿನ್ನೆಲೆಯ ಕಲಾವಿದ. ನಟ – ನಿರ್ದೇಶಕ ಶಂಕರನಾಗ್ ಅವರ ಆತ್ಮೀಯ ಒಡನಾಡಿ. ಪೋಷಕ ಪಾತ್ರ, ಹಾಸ್ಯ ನಟರಾಗಿ 500ಕ್ಕೂ ಹೆಚ್ಚು ಸಿನಿಮಾಗಳು ಹಾಗೂ ಕಿರುತೆರೆ ಸರಣಿಗಳಲ್ಲಿ ಅಭಿನಯಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕರ್ನಾಟಕದಲ್ಲಿ ಈ ವರ್ಷ ಜನಪರ ರಾಜ್ಯ ಬಜೆಟ್ ಮಂಡನೆ ; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಸುದ್ದಿದಿನ, ಹಾವೇರಿ : ಕರ್ನಾಟಕದಲ್ಲಿ ಮುಂದಿನ ತಿಂಗಳು ಮಂಡಿಸಲಾಗುತ್ತಿರುವ ಈ ವರ್ಷದ ರಾಜ್ಯ ಬಜೆಟ್ ರೈತರು, ದೀನ ದಲಿತರು, ಯುವಕರು, ಮಹಿಳೆಯರು, ದುಡಿಯುವ ವರ್ಗ ಮತ್ತು ಜನಪರವಾಗಿರುತ್ತದೆ ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹಾವೇರಿ ಜಿಲ್ಲೆ ಶಿಗ್ಗಾಂವ್ನಲ್ಲಿ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ದುಡಿಮೆಗೆ ಯೋಗ್ಯ ಬೆಲೆ ಸಿಗುವ ರೀತಿಯಲ್ಲಿ ನಮ್ಮ ಕಾರ್ಯಕ್ರಮಗಳು ಇರುತ್ತವೆ ಎಂದರು.
ಕರ್ನಾಟಕ ರಾಜ್ಯದ ಆರ್ಥಿಕ ಅಭಿವೃದ್ಧಿಯಲ್ಲಿ ನಾವು ವೇಗವನ್ನು ಕಂಡಿದ್ದೇವೆ. ಕಳೆದ ವರ್ಷ ನಾನು ಅಧಿಕಾರ ವಹಿಸಿಕೊಂಡಾಗ 5 ಸಾವಿರ ಕೋಟಿ ರೂಪಾಯಿ ರಾಜ್ಯದ ಬೊಕ್ಕಸಕ್ಕೆ ನಮ್ಮ ನಿರ್ಧಿಷ್ಟ ಗುರಿಗೆ ಕೊರತೆಯಿತ್ತು. ಅದನ್ನು ನಾವು 5 ಸಾವಿರ ಕೋಟಿ ತುಂಬುವುದಲ್ಲದೇ, 13 ಸಾವಿರ ಕೋಟಿ ಅಧಿಕವಾಗಿ ಸಂಗ್ರಹ ಮಾಡಿದ್ದೇವೆ. ಈ ವರ್ಷವೂ ಕೂಡ ನಮ್ಮ ಹಣಕಾಸಿನ ಸಂಗ್ರಹ ಉತ್ತಮವಾಗಿದೆ ಎಂದು ಕರ್ನಾಟಕದ ಮುಖ್ಯಮಂತ್ರಿ ಹೇಳಿದರು.
ಕೋವಿಡ್ ನಂತರದಲ್ಲಿ ಆರ್ಥಿಕ ಸುಧಾರಣೆ ಆಗುತ್ತಿರುವ ಸಂದರ್ಭದಲ್ಲಿ ಕೆಳಹಂತದ ಜನಸಮುದಾಯಕ್ಕೆ ಇನ್ನಷ್ಟು ಸಹಾಯ ಮಾಡಿ, ಅವರನ್ನು ಕೂಡ ಮುಖ್ಯ ವಾಹಿನಿಗೆ ಬರಬೇಕು ಎನ್ನುವ ನಿಟ್ಟಿನಲ್ಲಿ ನಾವು ಕಾರ್ಯಕ್ರಮ ರೂಪಿಸುತ್ತಿದ್ದೇವೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಸಂಸತ್ತಿನ ಬಜೆಟ್ ಅಧಿವೇಶನದ ಹಿನ್ನೆಲೆ ; ಇದೇ 30ರಂದು ಸರ್ವಪಕ್ಷಗಳ ಸಭೆ

ಸುದ್ದಿದಿನ ಡೆಸ್ಕ್ : ಸಂಸತ್ತಿನ ಮುಂಬರುವ ಬಜೆಟ್ ಅಧಿವೇಶನದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇದೇ 30ರಂದು ಸರ್ವಪಕ್ಷಗಳ ಸಭೆಯನ್ನು ಕರೆದಿದೆ. ಸಂಸತ್ ಭವನದ ಸಂಕೀರ್ಣದಲ್ಲಿ ಸೋಮವಾರ ಮಧ್ಯಾಹ್ನ 12 ಗಂಟೆಗೆ ಸಭೆ ನಡೆಯಲಿದೆ.
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ, ಕೇಂದ್ರ ಸಚಿವರು ಮತ್ತು ಸಂಸತ್ತಿನ ಎರಡೂ ಸದನಗಳನ್ನು ಪ್ರತಿನಿಧಿಸುವ ಸದನ ನಾಯಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಸಭೆಯಲ್ಲಿ ಸರ್ಕಾರ ಸಂಸತ್ತಿನ ಉಭಯ ಸದನಗಳ ಸುಗಮ ಕಲಾಪಕ್ಕೆ ಎಲ್ಲ ರಾಜಕೀಯ ಪಕ್ಷಗಳ ಸಹಕಾರವನ್ನು ಕೋರಲಿದೆ. ಸಂಸತ್ತಿನ ಬಜೆಟ್ ಅಧಿವೇಶನ ಇದೇ 31ರಿಂದ ಆರಂಭವಾಗಲಿದೆ. ಮೊದಲ ದಿನ ಬೆಳಿಗ್ಗೆ 11 ಗಂಟೆಗೆ ಸೆಂಟ್ರಲ್ ಹಾಲ್ ನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡುವರು.
ಅದೇ ದಿನವೇ ಆರ್ಥಿಕ ಸಮೀಕ್ಷೆಯನ್ನೂ ಸಹ ಮಂಡಿಸಲಾಗುವುದು. ಫೆಬ್ರವರಿ 1ರಂದು 2023-24ನೇ ಸಾಲಿನ ಕೇಂದ್ರ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆ ಮಾಡಲಿದ್ದಾರೆ.
ಬಜೆಟ್ ಅಧಿವೇಶನ ಏಪ್ರಿಲ್ 6ವರೆಗೆ ನಡೆಯಲಿದ್ದು, ಸುಮಾರು 66 ದಿನಗಳಲ್ಲಿ 27 ಕಲಾಪಗಳು ನಡೆಯಲಿದೆ. ಮೊದಲ ಅವಧಿಯಲ್ಲಿ ಅಧಿವೇಶನ ಫೆಬ್ರವರಿ 13ರವರೆಗೆ ನಡೆಯಲಿದೆ. ಫೆಬ್ರವರಿ 14ರಿಂದ ಮಾರ್ಚ್ 12ರವರೆಗೆ ಅಧಿವೇಶನಕ್ಕೆ ಬಿಡುವು ಇರಲಿದೆ ಆನಂತರ ಮಾರ್ಚ್ 13ರಿಂದ ಆರಂಭವಾಗುವ ಅಧಿವೇಶನ ಏಪ್ರಿಲ್ 6ಕ್ಕೆ ಕೊನೆಗೊಳ್ಳಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980336243
