ದಿನದ ಸುದ್ದಿ
ಕೇಂದ್ರ ಸರ್ಕಾರ ಕೂಡಲೇ 5 ಸಾವಿರ ಕೋಟಿ ನೆರವು ಘೋಷಿಸಬೇಕು : ಸಿದ್ದರಾಮಯ್ಯ

ಸುದ್ದಿದಿನ, ಬೆಂಗಳೂರು : ಅನ್ನಭಾಗ್ಯ ಯೋಜನೆಯ ಏಳು ಕೆ.ಜಿ. ಅಕ್ಕಿಯಲ್ಲಿ ಕಡಿತ ಮಾಡಿದರೆ ಸರ್ಕಾರ ಬಡವರ ಹೊಟ್ಟೆ ಮೇಲೆ ಹೊಡೆದಂತಾಗುತ್ತದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರ ಈ ಪ್ರಸ್ತಾವನೆಯನ್ನು ಕಾಂಗ್ರೆಸ್ ಪಕ್ಷ ತೀವ್ರವಾಗಿ ವಿರೋಧಿಸುತ್ತದೆ. ಇದರ ವಿರುದ್ಧ ನಾವು ಬೀದಿಗಿಳಿದು ಹೋರಾಟ ಮಾಡುತ್ತೇವೆ. ಅಷ್ಟೇ ಅಲ್ಲ, ಸದನದ ಒಳಗೂ ಪ್ರತಿಭಟನೆ ಮಾಡುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಪತ್ರಿಕಾಗೋಷ್ಠಿಯಲ್ಲಿ ಯಡಿಯೂರಪ್ಪ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನಮ್ಮ ಸರ್ಕಾರ ರಾಜ್ಯದಲ್ಲಿ ಬಿಪಿಎಲ್ ಕಾರ್ಡು ಹೊಂದಿರುವ ನಾಲ್ಕು ಕೋಟಿ ಜನರಿಗೆ 7 ಕೆಜಿ ಅಕ್ಕಿಯನ್ನ ಉಚಿತವಾಗಿ ನೀಡುತ್ತಿತ್ತು. ಬಿಜೆಪಿ ಸರ್ಕಾರ ರಚನೆ ಆದ ಮೇಲೆ ಅನ್ನಭಾಗ್ಯ ಅಕ್ಕಿ ಕಡಿಮೆ ಮಾಡಲು ಚರ್ಚೆ ನಡೆದಿದೆಎಂಬ ಮಾಹಿತಿ ಬಂದಿದೆ. ಕಡಿತ ಮಾಡಿದ ಅಕ್ಕಿ ಹಣವನ್ನ ಕಿಸಾನ್ ಸಮ್ಮಾನ್ ಯೋಜನೆಗೆ ಬಳಸಿಕೊಳ್ಳಲು ಚಿಂತನೆ ನಡೆಸಲಾಗಿದೆ. ಈ ಯೋಜನೆಯಲ್ಲಿ ರೈತರಿಗೆ 4 ಸಾವಿರ ಕೊಡಲು ನಮ್ಮದೇನು ಅಡ್ಡಿ ಇಲ್ಲ. ಆದರೆ, ಬಡವರ ಅಕ್ಕಿ ಕಡಿತ ಮಾಡಿ ಹಣ ನೀಡ್ತೇವೆ ಅನ್ನೊದು ಬಡವರ ವಿರೋಧಿ ಧೋರಣೆ ಎಂದರು.
ಅನ್ನಭಾಗ್ಯ ಅಕ್ಕಿ ಕಡಿತ ಮಾಡುವ ಯೋಚನೆ ಸರ್ಕಾರದ ಮುಂದೆ ಇದ್ದರೆ ಅದನ್ನ ಕೂಡಲೇ ಕೈ ಬಿಡಬೇಕು.ಅನ್ನಭಾಗ್ಯ ಯೋಜನೆ ಜಾರಿಗೆ ಬಂದ ಮೇಲೆ ಗುಳೆ ಪದ್ಧತಿ ಕಡಿಮೆ ಆಗಿದೆ. ಬಡವರು ಎರಡು ಹೊತ್ತು ಊಟ ಮಾಡುತ್ತಿದ್ದಾರೆ. ಇದು ಇಡೀ ದೇಶದಲ್ಲಿ ಮೆಚ್ಚುಗೆ ಪಡೆದಿರುವ ಕಾರ್ಯಕ್ರಮ.
ಇಂದಿರಾ ಕ್ಯಾಂಟೀನ್ ಗೆ ಸರ್ಕಾರ ಹಣ ನೀಡುತ್ತಿಲ್ಲ. ಬಿಬಿಎಂಪಿಯವರೇ ನಿರ್ವಹಿಸ ಬೇಕು ಎಂದು ಸರ್ಕಾರ ಹೇಳುತ್ತಿದೆ. ಕ್ಯಾಂಟೀನ್ ನಿರಂತರವಾಗಿ ನಡೆಯಬೇಕಾದರೆ
ಅಲ್ಲಿ ಗುಣಮಟ್ಟದ ಆಹಾರ ಸಿಗಬೇಕಾದರೆ ಇಂದಿರಾ ಕ್ಯಾಂಟೀನ್ ವೆಚ್ಚವನ್ನ ರಾಜ್ಯ ಸರ್ಕಾರ ಭರಿಸಬೇಕು. ಬಡವರಿಗೆ ಕಡಿಮೆ ದರದಲ್ಲಿ ಪೌಷ್ಟಿಕ ಆಹಾರ ಸಿಗಬೇಕು ಅಂತ ಈ ಯೋಜನೆ ಮಾಡಲಾಗಿದೆ. ಇದು ನಮ್ಮ ಸರ್ಕಾರದ ಆದ್ಯತೆಯ ಕಾರ್ಯಕ್ರಮ ಎಂದು ಹೇಳಿದರು.
ಸಿಎಂ ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸಿ 22 ದಿನ ಕಳೆದವು.ಆದರೆ, ಇನ್ನು ರಾಜ್ಯದಲ್ಲಿ ಸರ್ಕಾರ ಪೂರ್ಣ ಪ್ರಮಾಣದಲ್ಲಿ
ಇಲ್ಲ. ಒಂದೆಡೆ ಪ್ರವಾಹ, ಇನ್ನೊಂದೆಡೆ ಬರ ಎರಡೂ ಇದೆ. ಕೋಲಾರ, ಚಿಕ್ಕಬಳ್ಳಾಪುರ, ರಾಮ ನಗರ, ಬೆಂಗಳೂರು, ರಾಯಚೂರು, ಯಾದಗಿರಿ, ವಿಜಯಪುರ ಜಿಲ್ಲೆಗಳಲ್ಲಿ ಮಳೆ ಪ್ರಮಾಣ ವಾಡಿಕೆಗಿಂತ ಶೇ20 ಕಡಿಮೆ ಆಗಿದೆ.ಇವತ್ತಿನವರೆಗೆ ಬರ ಪೀಡಿತ ಪ್ರದೇಶಗಳ ಘೋಷಣೆ ಆಗಿಲ್ಲ. ಬರ ಪೀಡಿತ ಅಂತ ಘೋಷಣೆ ಮಾಡದೆ ಇದ್ದರೆ ಪರಿಹಾರ ಪಡೆಯಲು ಆಗಲ್ಲ ಎಂದು ಕಿಡಿಕಾರಿದರು.
ಮಳೆಯಾಗದೆ ಬಿತ್ತನೆ ಮಾಡಿರುವ ಬೆಳೆ ಹಾಳಾಗಿದೆ. ಕೆಲವೆಡೆ ಬಿತ್ತನೆ ಸಹ ಆಗ್ತಿಲ್ಲ. ಮಳೆ ಇಲ್ಲದೆ ಜಾನುವಾರುಗಳುಗೆ ಮೇವಿಲ್ಲದಂತಾಗಿದೆ.ಯಡಿಯೂರಪ್ಪ ಸಿಎಂ ಆಗಿ 22 ದಿನ ಆಯ್ತು. ದನಕರುಗಳಿಗೆ ಮೇವು ಕೊಡ್ತಿಲ್ಲ, ಯುವಕರಿಗೆ ಉದ್ಯೋಗ ಸಿಗ್ತಿಲ್ಲ. ಅವರು, ರೈತರಿಗೆ, ಬಡವರಿಗೆ ಸಹಾಯ ಮಾಡ್ತಿಲ್ಲ.ಹಾಗಿದ್ರೆ ಈ ಸರ್ಕಾರ ಯಾಕೆ ಇರಬೇಕು. ಸರ್ಕಾರ ಕೂಡಲೇ ಬರ ಪ್ರದೇಶಗಳನ್ನ ಘೋಷಿಸಬೇಕು ಎಂದರು.
ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ ಜಿಲ್ಲಾ ಮಂತ್ರಿಗಳಿಲ್ಲದೆ ಸ್ವಾತಂತ್ರ್ಯ ದಿನಾಚರಣೆ ಮಾಡಲಾಗಿದೆ. ಪ್ರಜಾಪ್ರಭುತ್ವ ಇದ್ಯಾ, ಇದನ್ನೆ ಪ್ರಜಾಪ್ರಭುತ್ವ ಅಂತ ಕರೆಯೋದಾ. ಅಧಿಕಾರಿಗಳು ಧ್ವಜಾರೋಹಣ ಮಾಡಿದ್ದಾರೆ.ಯಡಿಯೂರಪ್ಪ ಬಹಳ ಮಾತಾಡ್ತಾರೆ, ಅವರು ಕೇಂದ್ರದ ಮೇಲೆ ಏಕೆ ಒತ್ತಡ ಹೇರುವುದಿಲ್ಲ. ಪ್ರವಾಹ ಪೀಡಿತ ಪ್ರದೇಶಗಳಿಗೆ ಕೇಂದ್ರದಿಂದ ಇವತ್ತಿನವರೆಗೂ ಒಂದು ರೂಪಾಯಿ ನೀಡಿಲ್ಲ. ಪ್ರಧಾನಿಗಳೇ ಸ್ವತಃ ರಾಜ್ಯಕ್ಕೆ ಭೇಟಿ ನೀಡಬೇಕಿತ್ತು. ಇಬ್ಬರು ಸಚಿವರನ್ನ ಕಳುಹಿಸಿದ್ದೇವೆ ಅಂತಾರೆ. ಅವರೇನಾದ್ರೂ ಪರಿಹಾರ ಘೋಷಿಸಿದ್ದಾರಾ. ಈವರೆಗೆ ಎಷ್ಟು ನಷ್ಟ ಆಗಿದೆ ಎಂಬ ವರದಿಯನ್ನೇ ತಯಾರಿಸಿಲ್ಲ.ಪ್ರವಾಹ, ಬರಪೀಡಿತ ಪ್ರದೇಶಗಳಲ್ಲಿ ಸೋಮವಾರದಿಂದ ಪ್ರವಾಸ ಕೈಗೊಳ್ಳುತ್ತೇನೆ. ಕೂಡಲೇ ಕೇಂದ್ರ ಸರ್ಕಾರ 5 ಸಾವಿರ ಕೋಟಿ ಬಿಡುಗಡೆ ಮಾಡಬೇಕು ಎಂದು ಕೇದ್ರಸರ್ಕಾಕ್ಕೆ ಒತ್ತಾಯಿಸಿದರು.
ಯಡಿಯೂರಪ್ಪ, ಪ್ರಧಾನ ಮಂತ್ರಿಗಳಿಗೆ ಏನಾದ್ರೂ ಹೆದರುತ್ತಾರೋ ಹೇಗೆ ? ಸರ್ವ ಪಕ್ಷ ನಿಯೋಗವನ್ನಾದ್ರು ಕರೆದುಕೊಂಡು ಹೋಗಿ ನಾವೇ ಮಾತಾಡ್ತೇವೆ. ಇಷ್ಟು ನಿರ್ಲಜ್ಜವಾದ ಸರ್ಕಾರವನ್ನ ನಾನು ನೋಡಿರಲಿಲ್ಲ.
ಇಷ್ಟೇಲ್ಲಾ ಆಗಿದೆ ಇದರ ಬಗ್ಗೆ ಚರ್ಚೆಗೆ ವಿಧಾನ ಮಂಡಲ ಅಧಿವೇಶನ ಕರೆಯಿರಿ ಎಂದು ಒತ್ತಾಯಿಸುತ್ತೇನೆ. ಪ್ರಜಾಪ್ರಭುತ್ವ ವಿರೋಧಿಯಾಗಿ ಸರ್ಕಾರ ರಚನೆ ಆಗಿದೆ. ಸರ್ಕಾರಕ್ಕೆ ಯಾವುದೇ ತತ್ವ ಸಿದ್ಧಾಂತಗಳಿಲ್ಲ. ಕಣ್ಣು, ಕಿವಿ ಇಲ್ಲದ ಇಂತಹ ಸರ್ಕಾರವನ್ನ ನಾನು ಎಂದಿಗೂ ನೋಡಿಲ್ಲ. ಪ್ರಧಾನ ಮಂತ್ರಿಗಳು ರಾಜ್ಯದ ಪ್ರವಾಹದ ಬಗ್ಗೆ ಒಂದೇ ಒಂದು ಮಾತನಾಡಿಲ್ಲ. 6 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಾಶ ಆಗಿದೆ. ಒಟ್ಟಾರೆ 1ಲಕ್ಷ ಕೋಟಿ ನಷ್ಟ ಆಗಿದೆ. ಕೇಂದ್ರ ಸರ್ಕಾರ ಕೂಡಲೇ 5 ಸಾವಿರ ಕೋಟಿ ರೂ.ಗಳ ನೆರವು ಘೋಷಿಸಬೇಕು ಎಂದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ನಟ ಮನದೀಪ್ ರಾಯ್ ನಿಧನ

ಸುದ್ದಿದಿನ ಡೆಸ್ಕ್ : ಹಿರಿಯ ಚಿತ್ರನಟ ಮನದೀಪ್ ರಾಯ್ (74 ವರ್ಷ) ಇಂದು ಬೆಳಗಿನ ಜಾವ ಅಗಲಿದ್ದಾರೆ.
ಕೆಲ ದಿನಗಳ ಹಿಂದೆ ಹೃದಯಾಘಾತಕ್ಕೀಡಾಗಿದ್ದ ಅವರು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಮನದೀಪ್ ರಾಯ್ ಹವ್ಯಾಸಿ ರಂಗಭೂಮಿ ಹಿನ್ನೆಲೆಯ ಕಲಾವಿದ. ನಟ – ನಿರ್ದೇಶಕ ಶಂಕರನಾಗ್ ಅವರ ಆತ್ಮೀಯ ಒಡನಾಡಿ. ಪೋಷಕ ಪಾತ್ರ, ಹಾಸ್ಯ ನಟರಾಗಿ 500ಕ್ಕೂ ಹೆಚ್ಚು ಸಿನಿಮಾಗಳು ಹಾಗೂ ಕಿರುತೆರೆ ಸರಣಿಗಳಲ್ಲಿ ಅಭಿನಯಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕರ್ನಾಟಕದಲ್ಲಿ ಈ ವರ್ಷ ಜನಪರ ರಾಜ್ಯ ಬಜೆಟ್ ಮಂಡನೆ ; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಸುದ್ದಿದಿನ, ಹಾವೇರಿ : ಕರ್ನಾಟಕದಲ್ಲಿ ಮುಂದಿನ ತಿಂಗಳು ಮಂಡಿಸಲಾಗುತ್ತಿರುವ ಈ ವರ್ಷದ ರಾಜ್ಯ ಬಜೆಟ್ ರೈತರು, ದೀನ ದಲಿತರು, ಯುವಕರು, ಮಹಿಳೆಯರು, ದುಡಿಯುವ ವರ್ಗ ಮತ್ತು ಜನಪರವಾಗಿರುತ್ತದೆ ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹಾವೇರಿ ಜಿಲ್ಲೆ ಶಿಗ್ಗಾಂವ್ನಲ್ಲಿ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ದುಡಿಮೆಗೆ ಯೋಗ್ಯ ಬೆಲೆ ಸಿಗುವ ರೀತಿಯಲ್ಲಿ ನಮ್ಮ ಕಾರ್ಯಕ್ರಮಗಳು ಇರುತ್ತವೆ ಎಂದರು.
ಕರ್ನಾಟಕ ರಾಜ್ಯದ ಆರ್ಥಿಕ ಅಭಿವೃದ್ಧಿಯಲ್ಲಿ ನಾವು ವೇಗವನ್ನು ಕಂಡಿದ್ದೇವೆ. ಕಳೆದ ವರ್ಷ ನಾನು ಅಧಿಕಾರ ವಹಿಸಿಕೊಂಡಾಗ 5 ಸಾವಿರ ಕೋಟಿ ರೂಪಾಯಿ ರಾಜ್ಯದ ಬೊಕ್ಕಸಕ್ಕೆ ನಮ್ಮ ನಿರ್ಧಿಷ್ಟ ಗುರಿಗೆ ಕೊರತೆಯಿತ್ತು. ಅದನ್ನು ನಾವು 5 ಸಾವಿರ ಕೋಟಿ ತುಂಬುವುದಲ್ಲದೇ, 13 ಸಾವಿರ ಕೋಟಿ ಅಧಿಕವಾಗಿ ಸಂಗ್ರಹ ಮಾಡಿದ್ದೇವೆ. ಈ ವರ್ಷವೂ ಕೂಡ ನಮ್ಮ ಹಣಕಾಸಿನ ಸಂಗ್ರಹ ಉತ್ತಮವಾಗಿದೆ ಎಂದು ಕರ್ನಾಟಕದ ಮುಖ್ಯಮಂತ್ರಿ ಹೇಳಿದರು.
ಕೋವಿಡ್ ನಂತರದಲ್ಲಿ ಆರ್ಥಿಕ ಸುಧಾರಣೆ ಆಗುತ್ತಿರುವ ಸಂದರ್ಭದಲ್ಲಿ ಕೆಳಹಂತದ ಜನಸಮುದಾಯಕ್ಕೆ ಇನ್ನಷ್ಟು ಸಹಾಯ ಮಾಡಿ, ಅವರನ್ನು ಕೂಡ ಮುಖ್ಯ ವಾಹಿನಿಗೆ ಬರಬೇಕು ಎನ್ನುವ ನಿಟ್ಟಿನಲ್ಲಿ ನಾವು ಕಾರ್ಯಕ್ರಮ ರೂಪಿಸುತ್ತಿದ್ದೇವೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಸಂಸತ್ತಿನ ಬಜೆಟ್ ಅಧಿವೇಶನದ ಹಿನ್ನೆಲೆ ; ಇದೇ 30ರಂದು ಸರ್ವಪಕ್ಷಗಳ ಸಭೆ

ಸುದ್ದಿದಿನ ಡೆಸ್ಕ್ : ಸಂಸತ್ತಿನ ಮುಂಬರುವ ಬಜೆಟ್ ಅಧಿವೇಶನದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇದೇ 30ರಂದು ಸರ್ವಪಕ್ಷಗಳ ಸಭೆಯನ್ನು ಕರೆದಿದೆ. ಸಂಸತ್ ಭವನದ ಸಂಕೀರ್ಣದಲ್ಲಿ ಸೋಮವಾರ ಮಧ್ಯಾಹ್ನ 12 ಗಂಟೆಗೆ ಸಭೆ ನಡೆಯಲಿದೆ.
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ, ಕೇಂದ್ರ ಸಚಿವರು ಮತ್ತು ಸಂಸತ್ತಿನ ಎರಡೂ ಸದನಗಳನ್ನು ಪ್ರತಿನಿಧಿಸುವ ಸದನ ನಾಯಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಸಭೆಯಲ್ಲಿ ಸರ್ಕಾರ ಸಂಸತ್ತಿನ ಉಭಯ ಸದನಗಳ ಸುಗಮ ಕಲಾಪಕ್ಕೆ ಎಲ್ಲ ರಾಜಕೀಯ ಪಕ್ಷಗಳ ಸಹಕಾರವನ್ನು ಕೋರಲಿದೆ. ಸಂಸತ್ತಿನ ಬಜೆಟ್ ಅಧಿವೇಶನ ಇದೇ 31ರಿಂದ ಆರಂಭವಾಗಲಿದೆ. ಮೊದಲ ದಿನ ಬೆಳಿಗ್ಗೆ 11 ಗಂಟೆಗೆ ಸೆಂಟ್ರಲ್ ಹಾಲ್ ನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡುವರು.
ಅದೇ ದಿನವೇ ಆರ್ಥಿಕ ಸಮೀಕ್ಷೆಯನ್ನೂ ಸಹ ಮಂಡಿಸಲಾಗುವುದು. ಫೆಬ್ರವರಿ 1ರಂದು 2023-24ನೇ ಸಾಲಿನ ಕೇಂದ್ರ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆ ಮಾಡಲಿದ್ದಾರೆ.
ಬಜೆಟ್ ಅಧಿವೇಶನ ಏಪ್ರಿಲ್ 6ವರೆಗೆ ನಡೆಯಲಿದ್ದು, ಸುಮಾರು 66 ದಿನಗಳಲ್ಲಿ 27 ಕಲಾಪಗಳು ನಡೆಯಲಿದೆ. ಮೊದಲ ಅವಧಿಯಲ್ಲಿ ಅಧಿವೇಶನ ಫೆಬ್ರವರಿ 13ರವರೆಗೆ ನಡೆಯಲಿದೆ. ಫೆಬ್ರವರಿ 14ರಿಂದ ಮಾರ್ಚ್ 12ರವರೆಗೆ ಅಧಿವೇಶನಕ್ಕೆ ಬಿಡುವು ಇರಲಿದೆ ಆನಂತರ ಮಾರ್ಚ್ 13ರಿಂದ ಆರಂಭವಾಗುವ ಅಧಿವೇಶನ ಏಪ್ರಿಲ್ 6ಕ್ಕೆ ಕೊನೆಗೊಳ್ಳಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980336243
