ದಿನದ ಸುದ್ದಿ
ದಾವಣಗೆರೆ | ಐದು ಅಡಿಗಿಂತ ಎತ್ತರದ ಗಣಪತಿ ಮೂರ್ತಿ ಕೂರಿಸಲು ಅನುಮತಿ ಇಲ್ಲ : ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ

ಸುದ್ದಿದಿನ,ದಾವಣಗೆರೆ : ಸರ್ಕಾರದ ಆದೇಶದಂತೆ ಗರಿಷ್ಠ ಐದು ಅಡಿಗಳಿಗಿಂತ ಎತ್ತರದ ಗಣಪತಿ ಮೂರ್ತಿಗಳನ್ನು ಕೂರಿಸುವಂತಿಲ್ಲ. ಅದರಂತೆ ನಗರದಲ್ಲಿಯೂ ಸಹ ಐದು ಅಡಿಗಿಂತ ಎತ್ತರದ ಗಣಪತಿ ಮೂರ್ತಿಗಳನ್ನು ಕೂರಿಸಲು ಯಾವುದೇ ಅನುಮತಿ ನೀಡಲಾಗುವುದಿಲ್ಲ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಜಿ. ಬೀಳಗಿ ತಿಳಿಸಿದರು.
ಮಂಗಳವಾರ ಜಿಲ್ಲಾಡಳಿತ ಭವನದಲ್ಲಿ ಏರ್ಪಸಿದ್ದ ಪರಿಸರ ಸ್ನೇಹಿ ಗೌರಿ ಗಣೇಶ ಹಬ್ಬ ಆಚರಣೆ ಪೂರ್ವಭಾವಿ ಸಭೆಯ ಅಧ್ಯಕ್ಷತೆಯಲ್ಲಿ ವಹಿಸಿ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ಪಿಓಪಿ ಗಣಪತಿ ಅಥವಾ ಪ್ಲಾಸ್ಟಿಕ್ ಗಣೇಶ ಮೂರ್ತಿಗಳನ್ನು ಹಬ್ಬಗಳಲ್ಲಿ ಬಳಸುವಂತಿಲ್ಲ. ಪರಿಸರಕ್ಕೆ ಹಾನಿಯಾಗದಂತೆ ಪರಿಸರ ಸ್ನೇಹಿಯಾಗಿ ಹಬ್ಬ ಆಚರಿಸಬೇಕು ಎಂದರು.
ಜಿಲ್ಲೆಯಲ್ಲಿ ಹಾಗೂ ಇತರೆ ಜಿಲ್ಲೆ, ರಾಜ್ಯಗಳಿಂದ ತಯಾರಾಗಿ ಬರುವ ಪಿಓಪಿ ಗಣಪತಿ ಮೂರ್ತಿಗಳನ್ನು ಮಾರಾಟ ಮಾಡುವಂತಿಲ್ಲ. ಹಾಗೇನಾದರೂ ಕಂಡುಬಂದಲ್ಲಿ ಸೂಕ್ತ ಕ್ರಮಕೈಗೊಳ್ಳುವಂತೆ ಪಾಲಿಕೆ ಅಧಿಕಾರಿಗಳಿಗೆ ತಿಳಿಸಿದರು. ಸಾರ್ವಜನಿಕರಿಗೆ ಪಿಓಪಿ ಗಣಪಗಳ ತಯಾರಿ ಮತ್ತು ಮಾರಾಟ ಕಂಡುಬಂದಲ್ಲಿ ಪಾಲಿಕೆಗೆ ಮಾಹಿತಿ ನೀಡುವಂತೆ ತಿಳಿಸಿದರು.
ರಾಜ್ಯದಲ್ಲಿ ಜಲಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಪಿಓಪಿ ಯಿಂದ ತಯಾರಾದ ಗಣಪತಿಗಳನ್ನು ಬಳಸುವಂತಿಲ್ಲ. ಹಾಗೆ ತಯಾರಾದ ಗಣಪಗಳನ್ನು ವಶಪಡಿಸಿಕೊಂಡು ಧಾರ್ಮಿಕ ವಿಧಿ ವಿಧಾನಗಳಿಗೆ ಭಂಗವಾಗದಂತೆ ವಿಲೇವಾರಿ ಮಾಡಲಾಗುವುದು. ಪಿಓಪಿ ವಿಗ್ರಹಗಳನ್ನು ತಯಾರಿಸುವ ಮತ್ತು ಮಾರಾಟ ಮಾಡುವ ವ್ಯಕ್ತಿ ಹಾಗೂ ಸಂಸ್ಥೆಗಳ ಪರವಾನಿಗೆ ರದ್ದು ಮಾಡಲಾಗುವುದು. ಪರವಾನಿಗೆ ಇಲ್ಲದ ತಯಾರಕ ಮತ್ತು ಮಾರಾಟಗಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.
ಹಬ್ಬದ ಸಂದರ್ಭದಲ್ಲಿ ಗಣೇಶ ಮೂರ್ತಿಗಳನ್ನು ಸಾರ್ವಜನಿಕರು ಸ್ಥಳೀಯ ಸಂಸ್ಥೆಗಳು ನಿಗದಿಪಡಿಸಿದ ಸ್ಥಳಗಳಲ್ಲಿಯೇ ವಿಸರ್ಜಿಸಬೇಕು. ಹಾಗೂ ವಿಸರ್ಜನೆ ಸಂದರ್ಭದಲ್ಲಿ ಹಸಿಕಸ (ಹೂ-ಹಣ್ಣು, ಬಾಳೆಕಂಬ, ಮಾವಿನ ತೋರಣ ಇತ್ಯಾದಿ) ಸಮೇತ ಮೂರ್ತಿಗಳನ್ನು ವಿಸರ್ಜನೆ ಮಾಡದೇ ಪ್ರತ್ಯೇಕವಾಗಿ ವಿಲೇವಾರಿ ಮಾಡಬೇಕು. ಪ್ಲಾಸ್ಟರ್ ಆಫ್ ಪ್ಯಾರಿಸ್ ನಿಂದ ತಯಾರಿಸಿದ ಮೂರ್ತಿಗಳು, ಬಣ್ಣ ಲೇಪಿತ ವಿಗ್ರಹಗಳು ಪರಿಸರ ಹಾಗೂ ಜಲ ಮೂಲಗಳಿಗೆ ಹಾನಿಕಾರಕವಾಗಿದ್ದು, ಇದನ್ನು ತಡೆಗಟ್ಟಲು ಸೂಕ್ತ ಕ್ರಮ ವಹಿಸಿಬೇಕು. ವಾರ್ಡ್ ಮಟ್ಟದಲ್ಲಿ ಪೊಲೀಸರ ಸಹಯೋಗದೊಂದಿಗೆ ಸಮಿತಿಗಳನ್ನು ರಚಿಸಿಕೊಂಡು ಗಣೇಶ ಮೂರ್ತಿಗಳನ್ನು ಸೂಕ್ತ ವಿಲೇವಾರಿಗೆ ಕ್ರಮ ವಹಿಸಬೇಕು. ಸಾರ್ವಜನಿಕ ಗಣಪತಿಗಳನ್ನು ವಿಲೇವಾರಿ ಮಾಡಲು ನಿರ್ದಿಷ್ಟ ಜಲ ಮೂಲಗಳನ್ನು ನಿಗದಿಪಡಿಸಿ ಈ ಬಗ್ಗೆ ಸೂಕ್ತ ಪ್ರಕಟಣೆ ಹೊರಡಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಹಬ್ಬದ ಮುಂಚಿತವಾಗಿ ಶಾಲಾ-ಕಾಲೇಜ್ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಈ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅರಿವು ಮೂಡಿಸಬೇಕು ಎಂದು ತಿಳಿಸಿದರು.
“ಸಾರ್ವಜನಿಕ ಶಾಂತಿ ಮತ್ತು ನೆಮ್ಮದಿ, ಆರೋಗ್ಯ ಹಾಗೂ ಪರಿಸರ ಮಾಲಿನ್ಯವನ್ನು ತಡೆಯುವ ದೃಷ್ಟಿಯಿಂದ ಜಿಲ್ಲಾದ್ಯಂತ ಹೆಚ್ಚಿನ ಶಬ್ದ ಹೊರಸೂಸುವ ಎಲ್ಲಾ ಧ್ವನಿವರ್ಧಕ ಸಾಧನಗಳ ಬಳಕೆಯನ್ನು ಕರ್ನಾಟಕ ಪೊಲೀಸ್ ಅಧಿನಿಯಮ ಕಲಂ 36, ಶಬ್ದ ಮಾಲಿನ್ಯ ನಿಯಮ 2000 & ಪರಿಸರ (ರಕ್ಷಣೆ)ಕಾಯ್ದೆ 1986 ರನ್ವಯ ನಿಷೇಧಿಸಲಾಗಿದೆ. ನಿಯಮ ಉಲ್ಲಂಘಿಸಿದಲ್ಲಿ ಡಿಜೆ ಗಳನ್ನು ಜಪ್ತಿ ಮಾಡಿ ಮಾಲೀಕರು ಹಾಗೂ ಸಂಘ ಸಂಸ್ಥೆಗಳ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳಲಾಗುವುದು.” ಎಂದು
ಜಿಲ್ಲಾಧಿಕಾರಿ ಮಹಾಂತೇಶ್ ಜಿ ಬೀಳಗಿ ಎಚ್ಚರಿಕೆ ನೀಡಿದರು.
ಮಹಾನಗರಪಾಲಿಕೆ ಆಯುಕ್ತ ಮಂಜುನಾಥ್ ಬಳ್ಳಾರಿ ಮಾತನಾಡಿ, ಈಗಾಗಲೇ ಪರಿಸರ ಮಾಲಿನ್ಯ ನಿಯಂತ್ರಣ ಇಲಾಖೆ ಮತ್ತು ಪಾಲಿಕೆಯಿಂದ ಬೇರೆ ಬೇರೆ ತಂಡಗಳನ್ನು ರಚಿಸಿ ಪಿಓಪಿ ವಿಗ್ರಹಗಳ ತಯಾರಿಕೆ ಮತ್ತು ಮಾರಾಟವಾಗದಂತೆ ಕ್ರಮವಹಿಸಲಾಗಿದೆ. ಮೂರ್ತಿಗಳ ವಿಸರ್ಜನೆ ವೇಳೆ ಹಸಿಕಸವನ್ನು ಹಾಕಲು ಪ್ರತ್ಯೇಕ ಟ್ರಾಕ್ಟರ್ಗಳ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದರು.
ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ನಜ್ಮಾ ಮಾತನಾಡಿ, ಜಿಲ್ಲೆ ಹಾಗೂ ತಾಲೂಕು ಮಟ್ಟಗಳಲ್ಲಿ ಪರಿಸರ ಸ್ನೇಹಿ ಹಬ್ಬ ಆಚರಣೆಗೆ ಈಗಾಗಲೇ ಸಮಿತಿಗಳನ್ನು ರಚಿಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ನಗರದಲ್ಲಿ ಬಾತಿ ಹಾಗೂ ಶಿರಮಗೊಂಡನಹಳ್ಳಿ ಹತ್ತಿರ ಮೂರ್ತಿಗಳ ವಿಸರ್ಜನೆಗೆ ಸ್ಥಳಗಳನ್ನು ನಿಗದಿಮಾಡಲಾಗಿದೆ. ಹಾಗೂ 30 ಮೊಬೈಲ್ ಟ್ಯಾಂಕರ್ಗಳ ವ್ಯವಸ್ಥೆ ಮಾಡಲಾಗಿದೆ. ಜಗಳೂರು, ಮಲೆಬೇನ್ನೂರು, ಚನ್ನಗಿರಿ, ಹರಿಹರ ಹಾಗೂ ಹೊನ್ನಾಳಿಯಲ್ಲಿ ಮೂರ್ತಿಗಳ ವಿಸರ್ಜನೆಗೆ ಸ್ಥಳ ನಿಗದಿಪಡಿಸಲಾಗಿದೆ. ಹಬ್ಬದ ಮುಂಜಾಗ್ರತ ಕ್ರಮಗಳಾಗಿ ಮಣ್ಣಿನ ಗಣೇಶ ಮೂರ್ತಿ ಪೂಜಿಸಲು, ವಿಷಕಾರಿ ರಾಸಾಯನಿಕ, ಲೋಹ, ಪ್ಲಾಸ್ಟಿಕ್ ಲೇಪಿತ ಗಣೇಶ ಮೂರ್ತಿಗಳನ್ನು ಬಳಸದಂತೆ ಸೂಚಿಸಲಾಗಿದೆ.
ಸಾರ್ವಜನಿಕರ ಬಾವಿ, ಕೆರೆ, ಹೊಳೆ ಜಲಮೂಲಗಳಲ್ಲಿ ಮೂರ್ತಿಗಳನ್ನು ವಿಸರ್ಜಿಸದೇ ಬಕೆಟ್, ಸಂಚಾರಿ ವಿಸರ್ಜನಾ ವಾಹನ ಅಥವಾ ಸೂಚಿತ ನೀರಿನ ಕಟ್ಟೆಗಳಲ್ಲಿ ಮಾತ್ರ ವಿಸರ್ಜಿಸಬೇಕು. ಹಾಗೂ ಧ್ವನಿವರ್ಧಕಗಳನ್ನು ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆಯ ವರೆಗೆ ಮಾತ್ರ ಬಳಸುವಂತೆ ಕ್ರಮಗಳನ್ನು ವಹಿಸಲಾಗಿದೆ ಎಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪದ್ಮ ಬಸವಂತಪ್ಪ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೀವ್, ಪರಿಸರ ಮಾಲಿನ್ಯ ನಿಯಂತ್ರಣಾಧಿಕಾರಿ ಕೋಟ್ರೆಶ್, ತಹಶೀಲ್ದಾರ್ ಸಂತೋಷ್ಕುಮಾರ್ ಸೇರಿದಂತೆ ಇತರೆ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ನಟ ಮನದೀಪ್ ರಾಯ್ ನಿಧನ

ಸುದ್ದಿದಿನ ಡೆಸ್ಕ್ : ಹಿರಿಯ ಚಿತ್ರನಟ ಮನದೀಪ್ ರಾಯ್ (74 ವರ್ಷ) ಇಂದು ಬೆಳಗಿನ ಜಾವ ಅಗಲಿದ್ದಾರೆ.
ಕೆಲ ದಿನಗಳ ಹಿಂದೆ ಹೃದಯಾಘಾತಕ್ಕೀಡಾಗಿದ್ದ ಅವರು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಮನದೀಪ್ ರಾಯ್ ಹವ್ಯಾಸಿ ರಂಗಭೂಮಿ ಹಿನ್ನೆಲೆಯ ಕಲಾವಿದ. ನಟ – ನಿರ್ದೇಶಕ ಶಂಕರನಾಗ್ ಅವರ ಆತ್ಮೀಯ ಒಡನಾಡಿ. ಪೋಷಕ ಪಾತ್ರ, ಹಾಸ್ಯ ನಟರಾಗಿ 500ಕ್ಕೂ ಹೆಚ್ಚು ಸಿನಿಮಾಗಳು ಹಾಗೂ ಕಿರುತೆರೆ ಸರಣಿಗಳಲ್ಲಿ ಅಭಿನಯಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕರ್ನಾಟಕದಲ್ಲಿ ಈ ವರ್ಷ ಜನಪರ ರಾಜ್ಯ ಬಜೆಟ್ ಮಂಡನೆ ; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಸುದ್ದಿದಿನ, ಹಾವೇರಿ : ಕರ್ನಾಟಕದಲ್ಲಿ ಮುಂದಿನ ತಿಂಗಳು ಮಂಡಿಸಲಾಗುತ್ತಿರುವ ಈ ವರ್ಷದ ರಾಜ್ಯ ಬಜೆಟ್ ರೈತರು, ದೀನ ದಲಿತರು, ಯುವಕರು, ಮಹಿಳೆಯರು, ದುಡಿಯುವ ವರ್ಗ ಮತ್ತು ಜನಪರವಾಗಿರುತ್ತದೆ ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹಾವೇರಿ ಜಿಲ್ಲೆ ಶಿಗ್ಗಾಂವ್ನಲ್ಲಿ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ದುಡಿಮೆಗೆ ಯೋಗ್ಯ ಬೆಲೆ ಸಿಗುವ ರೀತಿಯಲ್ಲಿ ನಮ್ಮ ಕಾರ್ಯಕ್ರಮಗಳು ಇರುತ್ತವೆ ಎಂದರು.
ಕರ್ನಾಟಕ ರಾಜ್ಯದ ಆರ್ಥಿಕ ಅಭಿವೃದ್ಧಿಯಲ್ಲಿ ನಾವು ವೇಗವನ್ನು ಕಂಡಿದ್ದೇವೆ. ಕಳೆದ ವರ್ಷ ನಾನು ಅಧಿಕಾರ ವಹಿಸಿಕೊಂಡಾಗ 5 ಸಾವಿರ ಕೋಟಿ ರೂಪಾಯಿ ರಾಜ್ಯದ ಬೊಕ್ಕಸಕ್ಕೆ ನಮ್ಮ ನಿರ್ಧಿಷ್ಟ ಗುರಿಗೆ ಕೊರತೆಯಿತ್ತು. ಅದನ್ನು ನಾವು 5 ಸಾವಿರ ಕೋಟಿ ತುಂಬುವುದಲ್ಲದೇ, 13 ಸಾವಿರ ಕೋಟಿ ಅಧಿಕವಾಗಿ ಸಂಗ್ರಹ ಮಾಡಿದ್ದೇವೆ. ಈ ವರ್ಷವೂ ಕೂಡ ನಮ್ಮ ಹಣಕಾಸಿನ ಸಂಗ್ರಹ ಉತ್ತಮವಾಗಿದೆ ಎಂದು ಕರ್ನಾಟಕದ ಮುಖ್ಯಮಂತ್ರಿ ಹೇಳಿದರು.
ಕೋವಿಡ್ ನಂತರದಲ್ಲಿ ಆರ್ಥಿಕ ಸುಧಾರಣೆ ಆಗುತ್ತಿರುವ ಸಂದರ್ಭದಲ್ಲಿ ಕೆಳಹಂತದ ಜನಸಮುದಾಯಕ್ಕೆ ಇನ್ನಷ್ಟು ಸಹಾಯ ಮಾಡಿ, ಅವರನ್ನು ಕೂಡ ಮುಖ್ಯ ವಾಹಿನಿಗೆ ಬರಬೇಕು ಎನ್ನುವ ನಿಟ್ಟಿನಲ್ಲಿ ನಾವು ಕಾರ್ಯಕ್ರಮ ರೂಪಿಸುತ್ತಿದ್ದೇವೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಸಂಸತ್ತಿನ ಬಜೆಟ್ ಅಧಿವೇಶನದ ಹಿನ್ನೆಲೆ ; ಇದೇ 30ರಂದು ಸರ್ವಪಕ್ಷಗಳ ಸಭೆ

ಸುದ್ದಿದಿನ ಡೆಸ್ಕ್ : ಸಂಸತ್ತಿನ ಮುಂಬರುವ ಬಜೆಟ್ ಅಧಿವೇಶನದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇದೇ 30ರಂದು ಸರ್ವಪಕ್ಷಗಳ ಸಭೆಯನ್ನು ಕರೆದಿದೆ. ಸಂಸತ್ ಭವನದ ಸಂಕೀರ್ಣದಲ್ಲಿ ಸೋಮವಾರ ಮಧ್ಯಾಹ್ನ 12 ಗಂಟೆಗೆ ಸಭೆ ನಡೆಯಲಿದೆ.
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ, ಕೇಂದ್ರ ಸಚಿವರು ಮತ್ತು ಸಂಸತ್ತಿನ ಎರಡೂ ಸದನಗಳನ್ನು ಪ್ರತಿನಿಧಿಸುವ ಸದನ ನಾಯಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಸಭೆಯಲ್ಲಿ ಸರ್ಕಾರ ಸಂಸತ್ತಿನ ಉಭಯ ಸದನಗಳ ಸುಗಮ ಕಲಾಪಕ್ಕೆ ಎಲ್ಲ ರಾಜಕೀಯ ಪಕ್ಷಗಳ ಸಹಕಾರವನ್ನು ಕೋರಲಿದೆ. ಸಂಸತ್ತಿನ ಬಜೆಟ್ ಅಧಿವೇಶನ ಇದೇ 31ರಿಂದ ಆರಂಭವಾಗಲಿದೆ. ಮೊದಲ ದಿನ ಬೆಳಿಗ್ಗೆ 11 ಗಂಟೆಗೆ ಸೆಂಟ್ರಲ್ ಹಾಲ್ ನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡುವರು.
ಅದೇ ದಿನವೇ ಆರ್ಥಿಕ ಸಮೀಕ್ಷೆಯನ್ನೂ ಸಹ ಮಂಡಿಸಲಾಗುವುದು. ಫೆಬ್ರವರಿ 1ರಂದು 2023-24ನೇ ಸಾಲಿನ ಕೇಂದ್ರ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆ ಮಾಡಲಿದ್ದಾರೆ.
ಬಜೆಟ್ ಅಧಿವೇಶನ ಏಪ್ರಿಲ್ 6ವರೆಗೆ ನಡೆಯಲಿದ್ದು, ಸುಮಾರು 66 ದಿನಗಳಲ್ಲಿ 27 ಕಲಾಪಗಳು ನಡೆಯಲಿದೆ. ಮೊದಲ ಅವಧಿಯಲ್ಲಿ ಅಧಿವೇಶನ ಫೆಬ್ರವರಿ 13ರವರೆಗೆ ನಡೆಯಲಿದೆ. ಫೆಬ್ರವರಿ 14ರಿಂದ ಮಾರ್ಚ್ 12ರವರೆಗೆ ಅಧಿವೇಶನಕ್ಕೆ ಬಿಡುವು ಇರಲಿದೆ ಆನಂತರ ಮಾರ್ಚ್ 13ರಿಂದ ಆರಂಭವಾಗುವ ಅಧಿವೇಶನ ಏಪ್ರಿಲ್ 6ಕ್ಕೆ ಕೊನೆಗೊಳ್ಳಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980336243
