ರಾಜಕೀಯ
ಬರಿದಾಗುತ್ತಿದೆ ಕರ್ನಾಟಕದ ಖಜಾನೆ
- ವಿವೇಕಾನಂದ ಹೆಚ್.ಕೆ
ಅಂದಿನ ಸಂಪಾದನೆ ಅಂದದಿಗೆ ಮಾತ್ರ ಎಂಬಂತಾಗಿದೆ. ಬಹುತೇಕ ಕೆಳ ಮಧ್ಯಮ ವರ್ಗದ ಅಥವಾ ಬಡವರ ಮನೆಯ ಸಂಸಾರದಂತಾಗಿದೆ. ಮೈನಸ್ ಬಜೆಟ್ ಆಗಿ ಮುಂದುವರಿಯುತ್ತಿದೆ. ಹೇಗೋ ಕಷ್ಟ ಪಟ್ಟು ತೂಗಿಸಿಕೊಂಡು ಹೋಗುವಂತಾಗಿದೆ.
ಕರ್ನಾಟಕ ಮೂಲದ ವಿಪ್ರೋ, ಇನ್ಫೋಸಿಸ್, ಬಯೋಕಾನ್ ಮುಂತಾದ ಖಾಸಗಿ ಸಂಸ್ಥೆಗಳು ಏರು ಮುಖದ ಪ್ರಗತಿ ದಾಖಲಿಸುತ್ತಿವೆ. ಸರ್ಕಾರದ ಲೆಕ್ಕವೂ ಏರು ಮುಖದಲ್ಲಿದೆ ಆದರೆ ಸಾಲ ಮತ್ತು ಬಡ್ಡಿಯ ಲೆಕ್ಕದಲ್ಲಿ. ಇದಕ್ಕೆ ಕೇವಲ ಒಂದು ಪಕ್ಷ, ಸರ್ಕಾರ ಅಥವಾ ವ್ಯಕ್ತಿ ಕಾರಣವಲ್ಲ. ಇಡೀ ಸರ್ಕಾರಿ ವ್ಯವಸ್ಥೆಯ ಇತಿಹಾಸ ಕಾರಣವಾಗಿದೆ. ಇದೇನು ಆಶ್ಚರ್ಯಪಡುವಂತಹ ವಿಷಯವಲ್ಲ. ಸರ್ಕಾರದ ಆದಾಯ ಖರ್ಚು ಲೆಕ್ಕಗಳನ್ನು ಸೂಕ್ಷ್ಮವಾಗಿ ಮತ್ತು ಕೂಲಂಕಷವಾಗಿ ಪರಿಶೀಲಿಸಿದರೆ ಎಲ್ಲರಿಗೂ ಅರ್ಥವಾಗುತ್ತದೆ.
ಸರ್ಕಾರವೆಂಬುದು ಆಳುವ ಪಕ್ಷಗಳಿಗೆ ಬಾಡಿಗೆ ಮನೆ ಇದ್ದಂತೆ. ಅದು ಯಾವತ್ತಿಗೂ ತಾತ್ಕಾಲಿಕ ಎಂಬ ಅರಿವು ಅಧಿಕಾರಸ್ಥರಿಗೆ ತಿಳಿದಿರುತ್ತದೆ. ಆದ್ದರಿಂದ ಅವರು ಎಷ್ಟು ಸಾಧ್ಯವೋ ಅಷ್ಟು ತಮ್ಮ ಹಿತಾಸಕ್ತಿಗೆ ಅನುಕೂಲಕರ ಕೆಲಸಗಳನ್ನು ಮಾಡಿ ತಕ್ಷಣದ ಲಾಭಗಳನ್ನು ಮಾಡಿಕೊಂಡು ದೀರ್ಘಕಾಲದಲ್ಲಿ ಅದರ ಪರಿಣಾಮಗಳನ್ನು ನಿರ್ಲಕ್ಷಿಸುತ್ತಾರೆ.
ಅದರಿಂದಾಗಿಯೇ ಇವತ್ತಿನ ಖಜಾನೆಯ ಪರಿಸ್ಥಿತಿ. ಇದು ತಾತ್ಕಾಲಿಕವೇ ಇರಬಹುದು. ಮುಂದೆ ಸರಿ ಹೋಗಬಹುದು. ಆದರೆ ಸರ್ಕಾರದ ಮಟ್ಟದಲ್ಲಿ ಈ ಸ್ಥಿತಿ ಒಳ್ಳೆಯದಲ್ಲ. ಒಬ್ಬ ವ್ಯಕ್ತಿ ಅಥವಾ ಒಂದು ಖಾಸಗಿ ಸಂಸ್ಥೆಯ ಏರಿಳಿತಗಳು ಸಹಜ ಮತ್ತು ಅದರ ಪರಿಣಾಮ ಕಡಿಮೆ ಪ್ರಮಾಣದಲ್ಲಿ ಇರುತ್ತದೆ. ಆದರೆ ಶಾಸಕಾಂಗ ಕಾರ್ಯಾಂಗ ನ್ಯಾಯಾಂಗಗಳ ಹದ್ದಿನ ಕಣ್ಣಿನಲ್ಲಿ, ಅಂಕಗಳ ದೃಷ್ಟಿಯಿಂದ ಅತಿ ಬುದ್ದಿವಂತರಾದವರು ಇದನ್ನು ನಿರ್ವಹಿಸುತ್ತಿರುತ್ತಾರೆ. ರಾಜ್ಯದ ಎಲ್ಲಾ ಅಧಿಕಾರ ಮತ್ತು ಸಂಪನ್ಮೂಲಗಳು ಅವರ ನಿಯಂತ್ರಣದಲ್ಲಿಯೇ ಇರುತ್ತವೆ. ಅಲ್ಲದೆ ಇಡೀ ರಾಜ್ಯದ ಜನರ ಬದುಕಿನ ಪ್ರಶ್ನೆ ಅಡಗಿರುತ್ತದೆ. ಆದ್ದರಿಂದ ತುಂಬಾ ತುಂಬಾ ಜವಾಬ್ದಾರಿಯುತವಾಗಿ ಆರ್ಥಿಕ ಪರಿಸ್ಥಿತಿ ನಿಭಾಯಿಸಬೇಕಾಗುತ್ತದೆ.
ಕೇವಲ ಇಷ್ಟೇ ಅಲ್ಲ. ಈ ಸರ್ಕಾರ ನಡೆಸಲು ರಾಜ್ಯ ಆದಾಯದ ಅತಿದೊಡ್ಡ ಭಾಗ ಅದರ ನಿರ್ವಹಣೆಗೇ ಹೋಗುತ್ತದೆ. ಹೀಗಿದ್ದರೂ ಅವ್ಯವಸ್ಥೆ ಇದೆ ಎಂದರೆ ಸರ್ಕಾರದ ಅದಕ್ಷತೆಗೆ ಇದಕ್ಕಿಂತ ಉದಾಹರಣೆ ಬೇಕಿಲ್ಲ.
ಹಾಗಾದರೆ, ಕರ್ನಾಟಕ ಭಾರತದಲ್ಲಿ ಬಡ ರಾಜ್ಯವೇ ? ಇಲ್ಲಿನ ಆದಾಯ ಕಡಿಮೆಯಾಗುತ್ತಿದೆಯೇ ? ಸಂಪನ್ಮೂಲಗಳು ಬರಿದಾಗಿವೆಯೇ ?ಖಂಡಿತ ಇಲ್ಲ. ಹಣವೇ ಅಭಿವೃದ್ಧಿ ಎಂದು ಭಾವಿಸಿರುವ ಈ ಆಧುನಿಕ ಕಾಲದಲ್ಲಿ, ಮಾಹಿತಿ ತಂತ್ರಜ್ಞಾನದ ಸೇವೆಯಲ್ಲಿ ಬೆಂಗಳೂರು ವಿಶ್ವದ ಒಂದೋ ಎರಡನೆಯದೋ ಅತಿ ಹೆಚ್ಚು ಹಣ ಸಂಪಾದನೆಯ ನಗರವಾಗಿದೆ. ಶಿಕ್ಷಣ, ಆರೋಗ್ಯ ವಿಷಯದಲ್ಲೂ ಮುಂಚೂಣಿಯಲ್ಲಿದೆ. ಪ್ರವಾಸೋದ್ಯಮದಲ್ಲಿ ಮೈಸೂರು, ರೇಷ್ಮೆ ಬೆಳೆಯಲ್ಲಿ ರಾಮನಗರ, ಮತ್ಸೋದ್ಯಮದಲ್ಲಿ ಕರಾವಳಿ ಕರ್ನಾಟಕ, ಅಡಿಕೆ ಕಾಫಿ ಉತ್ಪಾದನೆಯಲ್ಲಿ ಮಲೆನಾಡು, ವಾಣಿಜ್ಯ ನಗರಗಳಾಗಿ ಹುಬ್ಬಳ್ಳಿ ಬೆಳಗಾವಿ, ದ್ರಾಕ್ಷಿ ದಾಳಿಂಬೆ ತರಕಾರಿ ಕೃಷಿಯಲ್ಲಿ ಬಿಜಾಪುರ ಯಾದಗಿರಿ, ಸಿದ್ದ ಉಡುಪು ಕ್ಷೇತ್ರದಲ್ಲಿ ದಾವಣಗೆರೆ ಮುಂತಾದ ಲಾಭದಾಯಕ ಪ್ರದೇಶಗಳನ್ನು ಕರ್ನಾಟಕ ಒಳಗೊಂಡಿದೆ. ಆದರೂ ಈ ಪರಿಸ್ಥಿತಿ ಏಕೆ ?
ವಾಸ್ತವದಲ್ಲಿ ಸರ್ಕಾರದ ಆದಾಯ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇದೆ. ಆದರೆ ಅದನ್ನು ಖರ್ಚು ಮಾಡುವ ರೀತಿ ಅಸಮರ್ಪಕವಾಗಿದೆ. ಮುಖ್ಯವಾಗಿ ಭ್ರಷ್ಟಾಚಾರ ಮತ್ತು ದುಂದು ವೆಚ್ಚ ಇದಕ್ಕೆ ಅತಿಮುಖ್ಯ ಕಾರಣವಾಗಿದೆ. ಉದಾಹರಣೆಗೆ 100 ರೂಪಾಯಿ ಖರ್ಚು ಮಾಡುವ ಅವಶ್ಯಕತೆ ಇರುವಲ್ಲಿ ಸುಮಾರು 500 ರಷ್ಟು ರೂಪಾಯಿ ಅಧಿಕೃತವಾಗಿಯೇ ಖರ್ಚಾಗುತ್ತದೆ. ಪಾರದರ್ಶಕ ಕಾನೂನು, ಟೆಂಡರ್ ಪ್ರಕ್ರಿಯೆ ಎಲ್ಲಾ ಇದ್ದರೂ ಆ ನಿಯಮಗಳನ್ನು ಸಹ ವಂಚಿಸಲಾಗುತ್ತದೆ.
ಈ ಅವ್ಯವಸ್ಥೆ ತಡೆಯಲು ನಮ್ಮಲ್ಲಿ ಕಂಟ್ರೋಲರ್ ಅಂಡ್ ಆಡಿಟರ್ ಜನರಲ್ ಎಂಬ ಲೆಕ್ಕ ಪತ್ರ ಇಲಾಖೆಯಿದೆ. ರಿಸರ್ವ್ ಬ್ಯಾಂಕ್, ಚುನಾವಣಾ ಆಯೋಗ, ತೆರಿಗೆ ಇಲಾಖೆಯ ರೀತಿ ಇದೂ ಸಹ ಸರ್ಕಾರದ ನಿಯಂತ್ರಣದಲ್ಲಿ ಇಲ್ಲದ ಸ್ವಾಯುತ್ತ ಸಂಸ್ಥೆ. ಸರ್ಕಾರದ ಪ್ರತಿ 1 ರೂಪಾಯಿ ಖರ್ಚು ವೆಚ್ಚ ಮತ್ತು ಅದರ ಸದುಪಯೋಗದ ಮೇಲೆ ನಿಗಾ ಇಡುವ ಸಂಸ್ಥೆ ಇದು. ಆದರೂ ವ್ಯವಸ್ಥೆಯ ಮೇಲೆ ನಿಯಂತ್ರಣ ಸಾಧ್ಯವಾಗುತ್ತಿಲ್ಲ.
ಸಾಮಾನ್ಯ ಪರಿಸ್ಥಿತಿಯಲ್ಲಿಯೇ ಹಣದ ಕೊರತೆಯ ವಿಷಯದಲ್ಲಿ ಎದುಸಿರು ಬಿಡುತ್ತಿರುವಾಗ ಇನ್ನು ಪ್ರಾಕೃತಿಕ ವಿಕೋಪದ ಸಂದರ್ಭದಲ್ಲಿ ಭೀಕರತೆ ಎದುರಾಗದೆ ಇರುತ್ತದೆಯೇ ? ಸರ್ಕಾರಗಳು ಓಟಿನ ರಾಜಕೀಯದಲ್ಲಿ ತಮಗೆ ಇಷ್ಟ ಬಂದಂತೆ ಯೋಜನೆಗಳನ್ನು ಘೋಷಿಸುತ್ತಾರೆ. ಯಾವುದೇ ಪೂರ್ವ ತಯಾರಿ, ಹಣಕಾಸಿನ ನಿರ್ಧಿಷ್ಟ ಮಾನದಂಡ ಇರುವುದಿಲ್ಲ. ಹೇಗೋ ಮುಂದೆ ನೋಡೋಣ. ಈಗ ಜನ ಮೆಚ್ಚಿದರೆ ಸಾಕು ಎಂದು ಧೋರಣೆ ಇವರದು. ಜನರೂ ಸಹ ತಾತ್ಕಾಲಿಕ ಲಾಭಕ್ಕೆ ಹೆಚ್ಚು ಕಾತುರರಾಗಿರುತ್ತಾರೆ. ಆ ಎಲ್ಲದರ ಪರಿಣಾಮ ಸದ್ಯಕ್ಕೆ ದಿವಾಳಿಯತ್ತ ಕರ್ನಾಟಕ ಸರ್ಕಾರದ ಆರ್ಥಿಕ ಪರಿಸ್ಥಿತಿ.
ಭಯ ಪಡುವ ಅವಶ್ಯಕತೆ ಇಲ್ಲ. ಕರ್ನಾಟಕ ನಿಜಕ್ಕೂ ಸಂಪದ್ಭರಿತ ರಾಜ್ಯ. ಆದರೆ ಇತ್ತೀಚಿನ ಸಮ್ಮಿಶ್ರ ಸರ್ಕಾರಗಳ ಬ್ಲ್ಯಾಕ್ ಮೇಲ್ ರಾಜಕೀಯದಲ್ಲಿ, ಜಾತಿ ಅಭಿಮಾನದಲ್ಲಿ, ಮತ್ತು ಒಟ್ಟು ವ್ಯವಸ್ಥೆಯ ಭ್ರಷ್ಟಾಚಾರದಲ್ಲಿ ನಲುಗುತ್ತಿದೆ. ಜನರು ಚುನಾವಣಾ ವ್ಯವಸ್ಥೆಯಲ್ಲಿ ಜಾಗೃತರಾದರೆ ಇದಕ್ಕೆ ಪರಿಹಾರ ಖಂಡಿತ ಸಿಗುತ್ತದೆ. ಅಲ್ಲಿಯವರೆಗೂ ಜನರನ್ನು ಪ್ರಬುದ್ದರಾಗಿಸುವ ಕೆಲಸ ನಾವು ಮಾಡೋಣ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕರ್ನಾಟಕದಲ್ಲಿ ಈ ವರ್ಷ ಜನಪರ ರಾಜ್ಯ ಬಜೆಟ್ ಮಂಡನೆ ; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಸುದ್ದಿದಿನ, ಹಾವೇರಿ : ಕರ್ನಾಟಕದಲ್ಲಿ ಮುಂದಿನ ತಿಂಗಳು ಮಂಡಿಸಲಾಗುತ್ತಿರುವ ಈ ವರ್ಷದ ರಾಜ್ಯ ಬಜೆಟ್ ರೈತರು, ದೀನ ದಲಿತರು, ಯುವಕರು, ಮಹಿಳೆಯರು, ದುಡಿಯುವ ವರ್ಗ ಮತ್ತು ಜನಪರವಾಗಿರುತ್ತದೆ ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹಾವೇರಿ ಜಿಲ್ಲೆ ಶಿಗ್ಗಾಂವ್ನಲ್ಲಿ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ದುಡಿಮೆಗೆ ಯೋಗ್ಯ ಬೆಲೆ ಸಿಗುವ ರೀತಿಯಲ್ಲಿ ನಮ್ಮ ಕಾರ್ಯಕ್ರಮಗಳು ಇರುತ್ತವೆ ಎಂದರು.
ಕರ್ನಾಟಕ ರಾಜ್ಯದ ಆರ್ಥಿಕ ಅಭಿವೃದ್ಧಿಯಲ್ಲಿ ನಾವು ವೇಗವನ್ನು ಕಂಡಿದ್ದೇವೆ. ಕಳೆದ ವರ್ಷ ನಾನು ಅಧಿಕಾರ ವಹಿಸಿಕೊಂಡಾಗ 5 ಸಾವಿರ ಕೋಟಿ ರೂಪಾಯಿ ರಾಜ್ಯದ ಬೊಕ್ಕಸಕ್ಕೆ ನಮ್ಮ ನಿರ್ಧಿಷ್ಟ ಗುರಿಗೆ ಕೊರತೆಯಿತ್ತು. ಅದನ್ನು ನಾವು 5 ಸಾವಿರ ಕೋಟಿ ತುಂಬುವುದಲ್ಲದೇ, 13 ಸಾವಿರ ಕೋಟಿ ಅಧಿಕವಾಗಿ ಸಂಗ್ರಹ ಮಾಡಿದ್ದೇವೆ. ಈ ವರ್ಷವೂ ಕೂಡ ನಮ್ಮ ಹಣಕಾಸಿನ ಸಂಗ್ರಹ ಉತ್ತಮವಾಗಿದೆ ಎಂದು ಕರ್ನಾಟಕದ ಮುಖ್ಯಮಂತ್ರಿ ಹೇಳಿದರು.
ಕೋವಿಡ್ ನಂತರದಲ್ಲಿ ಆರ್ಥಿಕ ಸುಧಾರಣೆ ಆಗುತ್ತಿರುವ ಸಂದರ್ಭದಲ್ಲಿ ಕೆಳಹಂತದ ಜನಸಮುದಾಯಕ್ಕೆ ಇನ್ನಷ್ಟು ಸಹಾಯ ಮಾಡಿ, ಅವರನ್ನು ಕೂಡ ಮುಖ್ಯ ವಾಹಿನಿಗೆ ಬರಬೇಕು ಎನ್ನುವ ನಿಟ್ಟಿನಲ್ಲಿ ನಾವು ಕಾರ್ಯಕ್ರಮ ರೂಪಿಸುತ್ತಿದ್ದೇವೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಸಂಸತ್ತಿನ ಬಜೆಟ್ ಅಧಿವೇಶನದ ಹಿನ್ನೆಲೆ ; ಇದೇ 30ರಂದು ಸರ್ವಪಕ್ಷಗಳ ಸಭೆ

ಸುದ್ದಿದಿನ ಡೆಸ್ಕ್ : ಸಂಸತ್ತಿನ ಮುಂಬರುವ ಬಜೆಟ್ ಅಧಿವೇಶನದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇದೇ 30ರಂದು ಸರ್ವಪಕ್ಷಗಳ ಸಭೆಯನ್ನು ಕರೆದಿದೆ. ಸಂಸತ್ ಭವನದ ಸಂಕೀರ್ಣದಲ್ಲಿ ಸೋಮವಾರ ಮಧ್ಯಾಹ್ನ 12 ಗಂಟೆಗೆ ಸಭೆ ನಡೆಯಲಿದೆ.
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ, ಕೇಂದ್ರ ಸಚಿವರು ಮತ್ತು ಸಂಸತ್ತಿನ ಎರಡೂ ಸದನಗಳನ್ನು ಪ್ರತಿನಿಧಿಸುವ ಸದನ ನಾಯಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಸಭೆಯಲ್ಲಿ ಸರ್ಕಾರ ಸಂಸತ್ತಿನ ಉಭಯ ಸದನಗಳ ಸುಗಮ ಕಲಾಪಕ್ಕೆ ಎಲ್ಲ ರಾಜಕೀಯ ಪಕ್ಷಗಳ ಸಹಕಾರವನ್ನು ಕೋರಲಿದೆ. ಸಂಸತ್ತಿನ ಬಜೆಟ್ ಅಧಿವೇಶನ ಇದೇ 31ರಿಂದ ಆರಂಭವಾಗಲಿದೆ. ಮೊದಲ ದಿನ ಬೆಳಿಗ್ಗೆ 11 ಗಂಟೆಗೆ ಸೆಂಟ್ರಲ್ ಹಾಲ್ ನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡುವರು.
ಅದೇ ದಿನವೇ ಆರ್ಥಿಕ ಸಮೀಕ್ಷೆಯನ್ನೂ ಸಹ ಮಂಡಿಸಲಾಗುವುದು. ಫೆಬ್ರವರಿ 1ರಂದು 2023-24ನೇ ಸಾಲಿನ ಕೇಂದ್ರ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆ ಮಾಡಲಿದ್ದಾರೆ.
ಬಜೆಟ್ ಅಧಿವೇಶನ ಏಪ್ರಿಲ್ 6ವರೆಗೆ ನಡೆಯಲಿದ್ದು, ಸುಮಾರು 66 ದಿನಗಳಲ್ಲಿ 27 ಕಲಾಪಗಳು ನಡೆಯಲಿದೆ. ಮೊದಲ ಅವಧಿಯಲ್ಲಿ ಅಧಿವೇಶನ ಫೆಬ್ರವರಿ 13ರವರೆಗೆ ನಡೆಯಲಿದೆ. ಫೆಬ್ರವರಿ 14ರಿಂದ ಮಾರ್ಚ್ 12ರವರೆಗೆ ಅಧಿವೇಶನಕ್ಕೆ ಬಿಡುವು ಇರಲಿದೆ ಆನಂತರ ಮಾರ್ಚ್ 13ರಿಂದ ಆರಂಭವಾಗುವ ಅಧಿವೇಶನ ಏಪ್ರಿಲ್ 6ಕ್ಕೆ ಕೊನೆಗೊಳ್ಳಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980336243

ದಿನದ ಸುದ್ದಿ
ರಾಷ್ಟ್ರೀಯ ಯುವ ದಿನದ ಪ್ರಯುಕ್ತ ನಾಳೆ ರಾಜಾಜಿನಗರ ವಿಧಾನ ಸಭಾ ಕ್ಷೇತ್ರದಲ್ಲಿ ಬೈಕ್ ರ್ಯಾಲಿ : ಭವ್ಯ ನರಸಿಂಹಮೂರ್ತಿ

ಸುದ್ದಿದಿನ, ಬೆಂಗಳೂರು : ರಾಷ್ಟ್ರೀಯ ಯುವ ದಿನದ ಪ್ರಯುಕ್ತ ನಾಳೆ ರಾಜಾಜಿನಗರ ವಿಧಾನ ಸಭಾ ಕ್ಷೇತ್ರದಲ್ಲಿ ಬೈಕ್ ರ್ಯಾಲಿ ಹಮ್ಮಿಕೊಂಡಿದ್ದು ಸ್ವಾಮಿ ವಿವೇಕಾನಂದರ 160ನೇ ಜನ್ಮದಿನದ ಅಂಗವಾಗಿ ಅವರ ತತ್ವ ಆದರ್ಶಗಳು ಹಾಗೂ ಯುವ ಜನತೆಗೆ ನೀಡಿರುವ ಸಂದೇಶಗಳನ್ನು ರಾಜಾಜಿನಗರ ವಿಧಾನ ಸಭಾ ಕ್ಷೇತ್ರದ ಎಲ್ಲಾ ಜನತೆಗೆ ತಲುಪುವಂತೆ ಮಾಡುವುದು ಇದರ ಉದ್ದೇಶವಾಗಿದೆ ಎಂದು ರಾಜಾಜಿನಗರ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಆಕಾಂಕ್ಷಿ ಭವ್ಯ ನರಸಿಂಹಮೂರ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೈಕ್ ರ್ಯಾಲಿ ಬೆಳಿಗ್ಗೆ 09-00 ಕ್ಕೆ ರಾಜಾಜಿನಗರ Entrance Bridge ಇಂದ ಪ್ರಾರಂಭವಾಗಿ ನವರಂಗ ಚಿತ್ರಮಂದಿರ – ಶಂಕರ್ ಮಠ – ಹಾವನೂರ್ ಸರ್ಕಲ್ – ಹೌಸಿಂಗ್ ಬೋರ್ಡ್ – ಕಾಮಾಕ್ಷಿಪಾಳ್ಯ ಬಸ್ ಸ್ಟಾಂಡ್ – ಹಾವನೂರ್ – ಅಕ್ಷಯ ಉಪಹಾರ – ಮೋದಿ ಹಾಸ್ಪಿಟಲ್ – ನವರಂಗ ಬ್ರಿಡ್ಜ್ – ಗಿರಿಯಾಸ್ ಸಿಗ್ನಲ್ – 6th ಬ್ಲಾಕ್ – ಕೊನೆಯದಾಗಿ 12 ಗಂಟೆಗೆ ಭಾಷ್ಯಮ್ ಸರ್ಕಲ್ ನಲ್ಲಿ ಕೊನೆಗೊಳ್ಳುತ್ತದೆ.
ದಾರಿಯಲ್ಲಿ 4 ಕಡೆ ಸ್ವಾಮಿ ವಿವೇಕಾನಂದರಿಗೆ ಪೂಜೆ ಹಮ್ಮಿಕೊಳ್ಳಲಾಗಿದೆ. ಪೂಜೆಯ ನಂತರ ವಿವೇಕಾನಂದರ ತತ್ವ ಆದರ್ಶಗಳನ್ನೊಳಗೊಂಡ ಹತ್ತು ಸಾವಿರ ಪುಸ್ತಕಗಳನ್ನು ಕ್ಷೇತ್ರದಾದ್ಯಂತ ಉಚಿತವಾಗಿ ಹಂಚಲಾಗುವುದು ಹಾಗೂ ಅನ್ನ ಸಂತರ್ಪಣೆ ಏರ್ಪಡಿಸಲಾಗಿರುತ್ತದೆ ಎಂದಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ನಿತ್ಯ ಭವಿಷ್ಯ6 days ago
ಸೋಮವಾರ- ರಾಶಿ ಭವಿಷ್ಯ ಜನವರಿ-23,2023 : ಈ ರಾಶಿಯವರಿಗೆ ಸಾಡೇ ಸಾತಿ ಶನಿಯಿಂದ ಮುಕ್ತಿ,ಎಲ್ಲಾ ನಿಮ್ಮ ಕೆಲಸಗಳು ನೆರವೇರಲಿ
-
ದಿನದ ಸುದ್ದಿ4 days ago
ಸಂಸತ್ತಿನ ಬಜೆಟ್ ಅಧಿವೇಶನದ ಹಿನ್ನೆಲೆ ; ಇದೇ 30ರಂದು ಸರ್ವಪಕ್ಷಗಳ ಸಭೆ
-
ದಿನದ ಸುದ್ದಿ10 hours ago
ಕರ್ನಾಟಕದಲ್ಲಿ ಈ ವರ್ಷ ಜನಪರ ರಾಜ್ಯ ಬಜೆಟ್ ಮಂಡನೆ ; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
-
ದಿನದ ಸುದ್ದಿ9 hours ago
ನಟ ಮನದೀಪ್ ರಾಯ್ ನಿಧನ