ದಿನದ ಸುದ್ದಿ
ಕಲ್ಕಿ ಭಗವಾನ್ ಮತ್ತು ದೇವ ಮಾನವರು..!
ವಿವೇಕಾನಂದ. ಹೆಚ್.ಕೆ
ಸುಮಾರು 12 ವರ್ಷಗಳ ಹಿಂದೆ ವಿಜಯಕುಮಾರ್ ಎಂಬ ಕಲ್ಕಿ ಭಗವಾನ್ ಅವರನ್ನು ಐದಾರು ಬಾರಿ ಭೇಟಿಯಾಗುವ ಅವಕಾಶ ದೊರೆತಿತ್ತು. ಒಬ್ಬ ಭಕ್ತನಾಗಿಯಲ್ಲ. ಆಗ ನನ್ನ ವೃತ್ತಿಯಾಗಿದ್ದ ಸಾಕ್ಷ್ಯಚಿತ್ರದ ರಚನೆ ನಿರ್ಮಾಣ ನಿರ್ದೇಶನದ ಭಾಗವಾಗಿ ತಿರುಪತಿ ಬಳಿಯ ಬಂಗಾರು ಪಾಳ್ಯಂ ಆಶ್ರಮದಲ್ಲಿ ಸುಮಾರು 3 ದಿನಗಳ ಕಾಲ ಮತ್ತು ಚರ್ಚೆಯ ಭಾಗವಾಗಿ ಇನ್ನೂ ಕೆಲವು ದಿನ ಅವರ ಬಳಿ ಮಾತನಾಡುತ್ತಿದ್ದೆ.
ಇದೀಗ ಆತನ ಮೇಲೆ ತೆರಿಗೆ ದಾಳಿಯಾಗಿ ಅಪಾರ ಪ್ರಮಾಣದ ಹಣ ಆಸ್ತಿ ವಶಪಡಿಸಿಕೊಂಡರುವ ಸಂದರ್ಭದಲ್ಲಿ ಒಂದಷ್ಟು ನೆನಪುಗಳು.
ಆಶ್ರಮದ ಸಿಬ್ಬಂದಿ ಮತ್ತು ಭಕ್ತರು ಆತ ಮತ್ತು ಆತನ ಪತ್ನಿಯನ್ನು ಸಾಕ್ಷಾತ್ ದೇವರೆಂದೇ ಪರಿಗಣಿಸಿದ್ದರು. ಸದಾ ಹೊಳೆಯುವ ರೇಷ್ಮೆಯ ವಸ್ತ್ರವನ್ನು ಧರಿಸಿಕೊಂಡಿರುತ್ತಿದ್ದರು. ಉತ್ತಮ ಮೇಕಪ್ ಕಾರಣದಿಂದ ಮುಖ ಒಂದಷ್ಟು ಕಾಂತಿಯುತವಾಗಿ ಹೊಳೆಯುತ್ತಿತ್ತು. ಇದು ಮುಗ್ದ ಜನರಿಗೆ ಅವರ ಮೇಲೆ ಮತ್ತಷ್ಟು ನಂಬಿಕೆ ಹೆಚ್ಚಾಗಲು ಕಾರಣವಾಗಿತ್ತು.
ಎಂದಿನಂತೆ ಭಾಷೆ ಧ್ವನಿ ಆಕರ್ಷಕವಾಗಿತ್ತು.
ಆಗಾಗ ಹುಣ್ಣಿಮೆಯ ಸಮಯದಲ್ಲಿ ಸಂಜೆ ಕಾರ್ಯಕ್ರಮ ಏರ್ಪಡಿಸಿ ಜನರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದರು. ಕಾಡಿನ ವಾತಾವರಣದ ವಿಶಾಲ ಜಾಗದಲ್ಲಿ ಹೂವು ಹಣ್ಣಿನ ಗಿಡಗಳು ಯಥೇಚ್ಛವಾಗಿ ಇದ್ದವು. ಭಕ್ತ ಭಕ್ತೆಯರ ದಂಡು ಸದಾ ಚಟುವಟಿಕೆಯಿಂದ ಓಡಾಡುತ್ತಾ ಅಲ್ಲಿಯೇ ವಾಸವಾಗಿದ್ದರು.
ಎಲ್ಲಾ ದೇವ ಮಾನವರಂತೆ ಆತ ಒಂದು ವಿಚಾರಧಾರೆಯ ಮೇಲೆ ತನ್ನ ಹಿಂಬಾಲಕರನ್ನು ಮೆಚ್ಚಿಸಲು – ಸೆಳೆಯಲು ಪ್ರಯತ್ನಿಸುತ್ತಿದ್ದ. ಅದೇನೆಂದರೆ,
ನೀವು ನಿಮಗಿರುವ ಕಷ್ಟಗಳಿಂದ ದೂರ ಹೋಗಲು ಪ್ರಯತ್ನಿಸಬೇಡಿ. ಉದ್ದೇಶಪೂರ್ವಕವಾಗಿ ಆ ಸಮಸ್ಯೆಯನ್ನೇ ಕುರಿತು ಯೋಚಿಸಿ. ಆ ಸಮಸ್ಯೆ ಒಳಗೆ ಹೋಗಿ. ಅದು ಆಳಕ್ಕೆ ಹೋದಂತೆ ಅದೇ ಸಮಸ್ಯೆ ಸಹಜವಾಗಿ ರೂಪಾಂತರ ಹೊಂದಿ ನೋವೇ ನಲಿವಾಗಿ ಬದಲಾಗುತ್ತದೆ. ನಂತರ ಅದು ಒಳ್ಳೆಯ ಪರಿಣಾಮ ಬೀರಿ ಸಂತಸವಾಗಿ ಮಾರ್ಪಡುತ್ತದೆ. ಆಗ ನಿಮ್ಮ ಸಮಸ್ಯೆ ತನ್ನಿಂದ ತಾನೇ ಪರಿಹಾರವಾಗುತ್ತದೆ.
ಆತನ ನಿಜವಾದ ಒಳನೋಟ ಏನಿತ್ತೋ ಗೊತ್ತಿಲ್ಲ. ಆದರೆ ಆ ವಿಚಾರಧಾರೆಯ ಸಾರಾಂಶವನ್ನು ನಾನು ಗ್ರಹಿಸಿದ್ದು ಹೀಗೆ.ಒಮ್ಮೆ ಆತನೊಂದಿಗೆ ಖಾಸಗಿ ಮಾತುಕತೆಯ ಸಮಯದಲ್ಲಿ ಆತನ ಪವಾಡದ ಬಗ್ಗೆ ಪ್ರಶ್ನಿಸಿದೆ.
ಆತನ ಅಂಗೈಯಲ್ಲಿ ಜೇನುತುಪ್ಪ ಮತ್ತು ವಿಭೂತಿ ಬರುತ್ತದೆ ಎಂಬ ನಂಬಿಕೆ ಆತನ ಭಕ್ತರಲ್ಲಿ ಇತ್ತು ಮತ್ತು ಅದು ಬರುತ್ತಲೂ ಇತ್ತು.
ಆದರೆ ನನಗೆ ಆಗಲೂ ಆ ರೀತಿಯ ಕ್ರಿಯೆ ನಡೆಯಲು ಸಾಧ್ಯವಿಲ್ಲ. ಅದು ಜಾದು ಅಥವಾ ಕಣ್ಕಟ್ಟು ಆಗಿರಬೇಕೆ ಹೊರತು ನಿಜವಲ್ಲ. ಅದು ಇಡೀ ಸೃಷ್ಟಿಗೇ ವಿರೋಧ ಮತ್ತು ಹಾಗಾಗಿದ್ದೇ ಆದಲ್ಲಿ ಸೃಷ್ಟಿಯ ಒಟ್ಟು ವಿಶ್ವಾಸವೇ ಕಳಚಿ ಬೀಳುತ್ತದೆ ಎಂಬ ಅರಿವಿತ್ರು. ಅದನ್ನು ಆತನ ಬಳಿ ಕೇಳಿದೆ.
ನಿಮಗೆ ಆಶ್ಚರ್ಯವಾಗಬಹುದು. ಆತ ಅದನ್ನು ಒಪ್ಪಿಕೊಂಡ. ಹೌದು ಹಾಗೆ ನಡೆಯಲು ಸಾಧ್ಯವಿಲ್ಲ. ಆದರೆ ನಾನು ನನ್ನ ವಿಚಾರಗಳನ್ನು ಜನರಿಗೆ ತಲುಪಿಸಿ ಈ ಸಮಾಜವನ್ನು ಒಳ್ಳೆಯ ರೀತಿಯಲ್ಲಿ ಮುನ್ನಡೆಸಬೇಕಾದರೆ ಈ ಸಾಮಾನ್ಯ ಜನರಿಗೆ ಅಸಾಮಾನ್ಯವಾದದ್ದನ್ನು ಮಾಡಿ ತೋರಿಸಲೇ ಬೇಕಿದೆ. ನನ್ನೊಳಗೆ ಒಂದು ದೈವತ್ವದ ಅಗಾಧ ಶಕ್ತಿ ಇದೆ ಎಂದು ಜನರಿಗೆ ಮನವರಿಕೆ ಮಾಡಿದರೆ ಮಾತ್ರ ಜನ ನನ್ನನ್ನು ನಂಬುತ್ತಾರೆ, ಗೌರವಿಸುತ್ತಾರೆ, ಆರಾಧಿಸುತ್ತಾರೆ. ಕೇವಲ ಒಳ್ಳೆಯ ವಿಚಾರಗಳು ಜನರನ್ನು ಆಕರ್ಷಿಸುವುದಿಲ್ಲ. ಪವಾಡಗಳು ಮಾತ್ರ ದೇವ ಮಾನವ ಎಂದು ಕರೆಯಲ್ಪಡುವ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ. ಆದ್ದರಿಂದ ನಾನು ಜೇನು ತುಪ್ಪದ ಪವಾಡ ಮಾಡುತ್ತೇನೆ. ಇದೊಂದು ವಿಶೇಷ ಶಕ್ತಿ ಎಂದು ಜನ ನಂಬುತ್ತಾರೆ. ಇಲ್ಲಿ ನಾನು ಯಾವುದೇ ಮೋಸ ಮಾಡುತ್ತಿಲ್ಲ. ಈ ಸಮಾಜದ ಸೇವೆಗಾಗಿ ನಾನು ಕಲ್ಕಿ ಅವತಾರ ತಾಳಿದ್ದೇನೆ. ಇಲ್ಲಿನ ಮೋಸ ವಂಚನೆ ಅನ್ಯಾಯಗಳನ್ನು ಸರಿ ಮಾಡಿ ಶಾಂತಿ ಸಹಕಾರದ ನೆಮ್ಮದಿಯ ಬದುಕನ್ನು ರೂಪಿಸುವ ಗುರಿ ಹೊಂದಿದ್ದೇನೆ. ಕೆಲವೇ ವರ್ಷಗಳಲ್ಲಿ ಇದು ಸಾಧ್ಯವಾಗುತ್ತದೆ ಎಂದು ಆತ ಭರವಸೆಯಿಂದ ಹೇಳಿದ.
ಇದು ಖಾಸಗಿ ಮಾತುಕತೆ. ಅಲ್ಲಿಂದ ನಾನು ಆತನನ್ನು ಮತ್ತೆಂದೂ ಭೇಟಿಯಾಗಲಿಲ್ಲ. ಬಹುಶಃ ಆತನಿಗೆ ಈಗ ನನ್ನ ಗುರುತು ಸಿಗದಿರಬಹುದು.ಈ ಕಳೆದ ವರ್ಷಗಳಲ್ಲಿ ನನ್ನ ಅನುಭವದಿಂದ ನನ್ನೊಳಗೆ ಬಹಳಷ್ಟು ವಿಚಾರಗಳು ಅಭಿಪ್ರಾಯಗಳು ಬದಲಾಗಿವೆ. ಆದರೆ ಈ ನೆನಪುಗಳನ್ನು ಅಂದಿನ ನನ್ನ ಮನೋಭಾವಕ್ಕೆ ತಕ್ಕಂತೆ ನಿರೂಪಿಸಿದ್ದೇನೆ.
ಯಾವುದೇ ಧರ್ಮದ ಯಾವುದೇ ದೇವಮಾನವರನ್ನು ಕಳ್ಳರು ಸುಳ್ಳರು ವಂಚಕರು ಕ್ರಿಮಿನಲ್ ಗಳು ಎಂದು ಒಂದು ವಾಕ್ಯದಲ್ಲಿ ವಿವರಿಸಬಾರದು ಅಥವಾ ನಿಜವಾಗಲೂ ಪವಾಡ ಪುರುಷರೆಂದು ಕುರುಡಾಗಿ ನಂಬಬಾರದು. ಹೇಗೆ ರಾಜಕಾರಣಿಗಳು, ನಟರು, ಧರ್ಮಾಧಿಕಾರಿಗಳು, ವ್ಯಾಪಾರಿಗಳು ಭವಿಷ್ಯಕಾರರು ಮುಂತಾದವರು ಈ ಸಮಾಜದ ಭಾಗವಾಗಿ ನಮ್ಮೊಳಗೇ ಇದ್ದು ನಮ್ಮನ್ನು ಭ್ರಮಾಲೋಕಕ್ಕೆ ಸೆಳೆದು ಅವರು ಪ್ರಖ್ಯಾತರು, ಕುಖ್ಯಾತರು, ಹಣವಂತರು, ಜನಪ್ರಿಯರು, ಅಧಿಕಾರಸ್ತರು ಆಗುತ್ತಾರೋ ಅದೇ ಪರೋಕ್ಷ ವಿಧಾನದಲ್ಲಿ ಈ ದೇವ ಮಾನವರು ಸಹ ನಮ್ಮ ಅಜ್ಞಾನದಿಂದ ಸೃಷ್ಠಿಯಾಗುತ್ತಾರೆ.
ಇವರನ್ನು ನೇರವಾಗಿ ಕಳ್ಳರು ಎನ್ನಲಾಗದು. ಒಂದೋ ತಮ್ಮೊಳಗಿರುವ ಯಾವುದೋ ಸಾಮರ್ಥ್ಯವನ್ನು ಸದುಪಯೋಗ ಪಡಿಸಿಕೊಳ್ಳುತ್ತಾರೆ ಅಥವಾ ಜನರ ಭಾವನೆ ನಂಬಿಕೆಗಳನ್ನು ಗುರುತಿಸಿ ಅದನ್ನು ಅವರಿಗೆ ತಕ್ಕಂತೆ ದುರುಪಯೋಗ ಪಡಿಸಿಕೊಳ್ಳುತ್ತಾರೆ.ಅದರಲ್ಲಿ ಕೆಲವರು ಅತಿ ಬುದ್ಧಿವಂತಿಕೆಯಿಂದ ದೇಶ ವಿದೇಶಗಳಲ್ಲಿ ತಮ್ಮ ಆಶ್ರಮವನ್ನು ಸ್ಥಾಪಿಸಿ ಹಣದ – ಭಕ್ತರ ಸಾಮ್ರಾಜ್ಯವನ್ನೇ ಕಟ್ಟುತ್ತಾರೆ. ಆ ಮುಖಾಂತರ ಮತ್ತಷ್ಟು ಬೆಳೆಯುತ್ತಾ ಹೋಗುತ್ತಾರೆ.
ಇಲ್ಲಿ ಯೋಚಿಸಬೇಕಾದ ಜವಾಬ್ದಾರಿ ನಮ್ಮದು. ಒಂದು ನಾಗರಿಕ ಸಮಾಜ ವೈಚಾರಿಕ ಚಿಂತನಾ ವಿಧಾನದ ಮೂಲಕ ನಿರ್ಮಾಣವಾದರೆ ಅದರ ಜ್ಞಾನ ಅಭಿವೃದ್ಧಿ ಕಡೆಗಿರುತ್ತದೆ ಮತ್ತು ಶಾಶ್ವತವಾಗಿರುತ್ತದೆ.
ಅದೇ ಸಮಾಜ ಭ್ರಮೆಗಳ ಭಯ ಭಕ್ತಿಯ ಮುಖಾಂತರ ರೂಪಗೊಂಡರೆ ಅದು ತಾತ್ಕಾಲಿಕ. ಯಾವುದೇ ಕ್ಷಣದಲ್ಲಿ ಕುಸಿಯಬಹುದು. ದೇವ ಮಾನವ ಕಲ್ಪನೆ ಒಂದು ಭ್ರಮೆ. ನಾವೆಲ್ಲರೂ ಕೇವಲ ಸಹಜ ಮಾನವರು ಮಾತ್ರ.
ಸುದ್ದಿದಿನ.ಕಾಂ|ವಾಟ್ಸಪ್|9980346243

ದಿನದ ಸುದ್ದಿ
ನಟ ಮನದೀಪ್ ರಾಯ್ ನಿಧನ

ಸುದ್ದಿದಿನ ಡೆಸ್ಕ್ : ಹಿರಿಯ ಚಿತ್ರನಟ ಮನದೀಪ್ ರಾಯ್ (74 ವರ್ಷ) ಇಂದು ಬೆಳಗಿನ ಜಾವ ಅಗಲಿದ್ದಾರೆ.
ಕೆಲ ದಿನಗಳ ಹಿಂದೆ ಹೃದಯಾಘಾತಕ್ಕೀಡಾಗಿದ್ದ ಅವರು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಮನದೀಪ್ ರಾಯ್ ಹವ್ಯಾಸಿ ರಂಗಭೂಮಿ ಹಿನ್ನೆಲೆಯ ಕಲಾವಿದ. ನಟ – ನಿರ್ದೇಶಕ ಶಂಕರನಾಗ್ ಅವರ ಆತ್ಮೀಯ ಒಡನಾಡಿ. ಪೋಷಕ ಪಾತ್ರ, ಹಾಸ್ಯ ನಟರಾಗಿ 500ಕ್ಕೂ ಹೆಚ್ಚು ಸಿನಿಮಾಗಳು ಹಾಗೂ ಕಿರುತೆರೆ ಸರಣಿಗಳಲ್ಲಿ ಅಭಿನಯಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕರ್ನಾಟಕದಲ್ಲಿ ಈ ವರ್ಷ ಜನಪರ ರಾಜ್ಯ ಬಜೆಟ್ ಮಂಡನೆ ; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಸುದ್ದಿದಿನ, ಹಾವೇರಿ : ಕರ್ನಾಟಕದಲ್ಲಿ ಮುಂದಿನ ತಿಂಗಳು ಮಂಡಿಸಲಾಗುತ್ತಿರುವ ಈ ವರ್ಷದ ರಾಜ್ಯ ಬಜೆಟ್ ರೈತರು, ದೀನ ದಲಿತರು, ಯುವಕರು, ಮಹಿಳೆಯರು, ದುಡಿಯುವ ವರ್ಗ ಮತ್ತು ಜನಪರವಾಗಿರುತ್ತದೆ ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹಾವೇರಿ ಜಿಲ್ಲೆ ಶಿಗ್ಗಾಂವ್ನಲ್ಲಿ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ದುಡಿಮೆಗೆ ಯೋಗ್ಯ ಬೆಲೆ ಸಿಗುವ ರೀತಿಯಲ್ಲಿ ನಮ್ಮ ಕಾರ್ಯಕ್ರಮಗಳು ಇರುತ್ತವೆ ಎಂದರು.
ಕರ್ನಾಟಕ ರಾಜ್ಯದ ಆರ್ಥಿಕ ಅಭಿವೃದ್ಧಿಯಲ್ಲಿ ನಾವು ವೇಗವನ್ನು ಕಂಡಿದ್ದೇವೆ. ಕಳೆದ ವರ್ಷ ನಾನು ಅಧಿಕಾರ ವಹಿಸಿಕೊಂಡಾಗ 5 ಸಾವಿರ ಕೋಟಿ ರೂಪಾಯಿ ರಾಜ್ಯದ ಬೊಕ್ಕಸಕ್ಕೆ ನಮ್ಮ ನಿರ್ಧಿಷ್ಟ ಗುರಿಗೆ ಕೊರತೆಯಿತ್ತು. ಅದನ್ನು ನಾವು 5 ಸಾವಿರ ಕೋಟಿ ತುಂಬುವುದಲ್ಲದೇ, 13 ಸಾವಿರ ಕೋಟಿ ಅಧಿಕವಾಗಿ ಸಂಗ್ರಹ ಮಾಡಿದ್ದೇವೆ. ಈ ವರ್ಷವೂ ಕೂಡ ನಮ್ಮ ಹಣಕಾಸಿನ ಸಂಗ್ರಹ ಉತ್ತಮವಾಗಿದೆ ಎಂದು ಕರ್ನಾಟಕದ ಮುಖ್ಯಮಂತ್ರಿ ಹೇಳಿದರು.
ಕೋವಿಡ್ ನಂತರದಲ್ಲಿ ಆರ್ಥಿಕ ಸುಧಾರಣೆ ಆಗುತ್ತಿರುವ ಸಂದರ್ಭದಲ್ಲಿ ಕೆಳಹಂತದ ಜನಸಮುದಾಯಕ್ಕೆ ಇನ್ನಷ್ಟು ಸಹಾಯ ಮಾಡಿ, ಅವರನ್ನು ಕೂಡ ಮುಖ್ಯ ವಾಹಿನಿಗೆ ಬರಬೇಕು ಎನ್ನುವ ನಿಟ್ಟಿನಲ್ಲಿ ನಾವು ಕಾರ್ಯಕ್ರಮ ರೂಪಿಸುತ್ತಿದ್ದೇವೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಸಂಸತ್ತಿನ ಬಜೆಟ್ ಅಧಿವೇಶನದ ಹಿನ್ನೆಲೆ ; ಇದೇ 30ರಂದು ಸರ್ವಪಕ್ಷಗಳ ಸಭೆ

ಸುದ್ದಿದಿನ ಡೆಸ್ಕ್ : ಸಂಸತ್ತಿನ ಮುಂಬರುವ ಬಜೆಟ್ ಅಧಿವೇಶನದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇದೇ 30ರಂದು ಸರ್ವಪಕ್ಷಗಳ ಸಭೆಯನ್ನು ಕರೆದಿದೆ. ಸಂಸತ್ ಭವನದ ಸಂಕೀರ್ಣದಲ್ಲಿ ಸೋಮವಾರ ಮಧ್ಯಾಹ್ನ 12 ಗಂಟೆಗೆ ಸಭೆ ನಡೆಯಲಿದೆ.
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ, ಕೇಂದ್ರ ಸಚಿವರು ಮತ್ತು ಸಂಸತ್ತಿನ ಎರಡೂ ಸದನಗಳನ್ನು ಪ್ರತಿನಿಧಿಸುವ ಸದನ ನಾಯಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಸಭೆಯಲ್ಲಿ ಸರ್ಕಾರ ಸಂಸತ್ತಿನ ಉಭಯ ಸದನಗಳ ಸುಗಮ ಕಲಾಪಕ್ಕೆ ಎಲ್ಲ ರಾಜಕೀಯ ಪಕ್ಷಗಳ ಸಹಕಾರವನ್ನು ಕೋರಲಿದೆ. ಸಂಸತ್ತಿನ ಬಜೆಟ್ ಅಧಿವೇಶನ ಇದೇ 31ರಿಂದ ಆರಂಭವಾಗಲಿದೆ. ಮೊದಲ ದಿನ ಬೆಳಿಗ್ಗೆ 11 ಗಂಟೆಗೆ ಸೆಂಟ್ರಲ್ ಹಾಲ್ ನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡುವರು.
ಅದೇ ದಿನವೇ ಆರ್ಥಿಕ ಸಮೀಕ್ಷೆಯನ್ನೂ ಸಹ ಮಂಡಿಸಲಾಗುವುದು. ಫೆಬ್ರವರಿ 1ರಂದು 2023-24ನೇ ಸಾಲಿನ ಕೇಂದ್ರ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆ ಮಾಡಲಿದ್ದಾರೆ.
ಬಜೆಟ್ ಅಧಿವೇಶನ ಏಪ್ರಿಲ್ 6ವರೆಗೆ ನಡೆಯಲಿದ್ದು, ಸುಮಾರು 66 ದಿನಗಳಲ್ಲಿ 27 ಕಲಾಪಗಳು ನಡೆಯಲಿದೆ. ಮೊದಲ ಅವಧಿಯಲ್ಲಿ ಅಧಿವೇಶನ ಫೆಬ್ರವರಿ 13ರವರೆಗೆ ನಡೆಯಲಿದೆ. ಫೆಬ್ರವರಿ 14ರಿಂದ ಮಾರ್ಚ್ 12ರವರೆಗೆ ಅಧಿವೇಶನಕ್ಕೆ ಬಿಡುವು ಇರಲಿದೆ ಆನಂತರ ಮಾರ್ಚ್ 13ರಿಂದ ಆರಂಭವಾಗುವ ಅಧಿವೇಶನ ಏಪ್ರಿಲ್ 6ಕ್ಕೆ ಕೊನೆಗೊಳ್ಳಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980336243
