Connect with us

ಭಾವ ಭೈರಾಗಿ

ಎಂದೂ ಮುಗಿಯದ ಪ್ರೀತಿಯ ಪಯಣ ಈ‌ ಗೆಳೆತನ..!

Published

on

ಕತ್ತಲೆಯಲ್ಲಿ ಕರಗುವ ಕನಸಿಗೆ ಬೆಳಕ ತರುವುದು ಗೆಳೆತನ. ನೋಯುವ ನೋವಿನ ಮನಸಿಗೆ ಒಲವ ತುಂಬುವುದು ಈ ಗೆಳೆತನ. ಬೆಂಕಿಯಂತೆ ಬೇಯುವ ಭಾವನೆಗೆ ಜೀವ ತುಂಬುವುದು ಗೆಳೆತನ. ಏಕಾಂತದಲ್ಲಿರುವ ಒಂಟಿತನಕ್ಕೆ ಹೊಸತನವೇ ಈ ಗೆಳೆತನ..!!

ಹೌದು..ನನ್ನ ಈ ಗೆಳೆತನ ಏಳು ನಿಮಿಷದಲ್ಲಿ ಏಳು ಹೆಜ್ಜೆಯನ್ನಿಟ್ಟು ಸಂಸಾರ ನಡೆಸಿದ ಹಾಗಲ್ಲ. ಪತಿ ಪತ್ನಿಯರಷ್ಟೇ ಅಲ್ಲ ಸಪ್ತಪದಿ ತುಳಿದು ಜೀವನಕ್ಕೆ ಕಾಲಿಡುವುದು. ನಮ್ಮ ಈ ಗೆಳೆತನದಲ್ಲು ಏಳು ವರ್ಷಗಳ ಕಾಲ ಏಳು ಹೆಜ್ಜೆಯನ್ನಿಟ್ಟು, ಪ್ರೀತಿ, ವಿಶ್ವಾಸ, ನೋವು, ಅಸುಹೆ ಹೀಗೆ ಎಲ್ಲದರ ನಡುವೆ ನಂಬಿಕೆಯೆಂಬ ಮೂರು ಗಂಟನ್ನು ಹಾಕಿಸಿಕೊಂಡು, ನಮ್ಮದು ಏಳೇಳು ಜನ್ಮಗಳ ಅನುಬಂಧವೆಂದು ಹಾಡಿ ನಲಿದವರು. ನಮ್ಮ ಭಾಂದವ್ಯ ನೋಡಿ ಕಾಲೇಜು ಅಧ್ಯಪಕರೆ ತ್ರಿಮೂರ್ತಿಗಳೆಂಬ ಪಟ್ಟವನ್ನು ಮುಡಿಸಿದ್ದಾರೆ. ಅನೇಕ ಸ್ನೇಹಿತರು ಮರುಗಿದವರಿದ್ದಾರೆ, ನಮ್ಮ ನಡುವೆ ಜಗಳ ತಂದಿಟ್ಟು ತಮಾಷೆ ನೋಡಿದವರು ಇದ್ದಾರೆ.. ಜಗಳವಾದಾಗ ವಿಚ್ಚೆದನ ಪತ್ರವನ್ನು ಬರೆದು ಮೂರು ತಿಂಗಳ ಕಾಲ ಮಾತಾಡೊದ್ದನ್ನ ನಿಲ್ಲಿಸಿದ್ದು ಉಂಟು.

ಪ್ರೇಮಿಗಳಲ್ಲಿ ಹೇಗೆ ನನ್ನವಳೆಂಬ ಸ್ವಾರ್ಥ ತುಳುಕಾಡುತ್ತೋ ಹಾಗೆ ನಮ್ಮಲ್ಲೂ ಸಹ. ನಮ್ಮನ್ನ ಬಿಟ್ಟು ಯಾರಾತ್ರನಾದ್ರು ಅತೀ ಹೆಚ್ಚು ಮಿಂಗಲ್ ಆದ್ವೋ ಮುಗಿತು ಆವತ್ತೆ ಪ್ರಾರಂಭವಾಯ್ತು ಅಂತ ಈ ಮುನಿಸು. ಅಬ್ಬಾ! ಈ ಮುನೇಶ್ವರ ಏನಾದ್ರು ಒಬ್ಬರಲ್ಲಿ ಮನೆ ಮಾಡಿದ್ನೋ ಆ ದಿನವೇ ಮೂಡ್ ಔಟ್ ಆಗಿಬಿಡ್ತಿತ್ತು. ಇವರ ಬಗ್ಗೆ ಹೇಳಬೇಕೆಂದರೆ, ಒಬ್ಬಳು ವಿಜಯಲಕ್ಷ್ಮಿ ತಾಯಿಯ ಹಾಗೆ ಪ್ರೀತಿಸಿ ಮುದ್ದಿಸುವವಳು, ಇನ್ನೊಬ್ಬಳು ಮಾಲತಿ ಸದಾ ನನ್ನಲ್ಲಿರುವ ತಪ್ಪುಗಳನ್ನು ತಿದ್ದಿ ಬುದ್ದಿ ಹೇಳುವವಳು.

ಕೊಟ್ಟು ಕೊಳ್ಳುವುದುಂಟು, ಹೇಳಿ ಕೇಳುವ ಗುಟ್ಟುಂಟು
ಜೊತೆಗೆ ತಿನ್ನುವ, ತಿನ್ನಿಸಿ ಮೆಲ್ಲುವ ತುಂಟಾಟವುಂಟು
ದೇಹವೆರಡರ ನಡುವೆ ಜೀವ ಒಂದಾಗಿರುವ ನಂಟು
ಪ್ರೀತಿ ಸ್ನೇಹದ ಬೆರಗಿನ ಅಂಟು, ನೂರೆಳೆಯ ಗಂಟು
ನಾ ತಪ್ಪು ಮಾಡಿದಾಗ ಇವರಿಬ್ಬರು ನಯವಾಗಿಯೋ ಮೆಲುಸಾಗಿಯೋ, ಬಿರುಸಾಗಿಯೋ ಗಡುಸಾಗಿಯೋ ಕಟುವಾಗಿಯೋ ಇದ್ದುದ್ದನ್ನು ಇದ್ದಂತೆ ಸಮಯೋಚಿತವಾಗಿ ತಿಳಿಹೇಳಿ, ತಪ್ಪು ದಾರಿ ಹಿಡಿಯದ ಹಾಗೆ ನೋಡಿಕೊಂಡವರು.

ಮಕ್ಕಳಿಗೆ ಅ,ಆ ಕಲಿಸಿದಂತೆ ನನ್ನ ಬರಹದಲ್ಲಿ ಆಗುತ್ತಿದ್ದ ತಪ್ಪುಗಳನ್ನು ಸಾಕಾಷ್ಟು ತಿದ್ದುಪಡಿಮಾಡಿದವರು. ನೊಂದಾಗ ತೊಡೆಯ ಮೇಲೆ ಮಲಗಿಸಿಕೊಂಡು ತಲೆಸವರಿ ಸಮಾಧಾನ ಮಾಡುವವರು. ಕೈತುತ್ತು ತಿನ್ನಿಸಿ ಅಮ್ಮನ ಪ್ರೀತಿಯನ್ನು ತೋರಿಸಿದವರು.

ಇಷ್ಟೆಲ್ಲಾ ಆದರೂ ಸಹ ಪರೀಕ್ಷೆ ಎಂದು ಬಂದರೆ ಪೈಪೋಟಿ ಬೀಳುತ್ತಿದದ್ದು ಅನ್ಯದವರೊಡನೆ ಅಲ್ಲಾ.. ಬದಲಾಗಿ ನಮ್ಮೂವರ ನಡುವೆಯೇ ಹೆಚ್ಚು. ಒಮ್ಮೆ ನನ್ನ ಗೆಳತಿ ವಿಜಯಲಕ್ಷ್ಮೀ ನನಗಿಂತ ಒಂದು ಮಾಕ್ರ್ಸ್ ಹೆಚ್ಚಿಗೆ ತೆಗೆದಿದ್ದಕ್ಕೆ ಸರ್‍ನೊಂದಿಗೆ ಬರೋಬರಿ ಮೂರು ತಾಸು ಜಗಳ ಮಾಡಿ ನಾಲ್ಕು ದಿನ ಮಾತು ಬಿಟ್ಟಿದನ್ನ ನೆನಪಿಸಿಕೊಂಡರೆ ಇವಾಗ್ಲು ನಗು ಬರುತ್ತದೆ. ಅದೇ ನಾವು ಒಮ್ಮೆ ಡಿಗ್ರಿ ಓದುವಾಗ ಏನು ಓದಿಲ್ಲವೆಂದು ಒಬ್ಬರಿಗೊಬ್ಬರು ಕಾಪಿ ಹೊಡೆದು ಸೇಮ್ ಮಾಕ್ರ್ಸ್ ಗಿಟ್ಟಿಸಿಕೊಂಡಿದ್ದು ಉಂಟು. ತರಗತಿಯಲ್ಲಿ ನಾವು ಮಾಡಿದ ತರಲೆಗಳು, ತುಂಟಾಟಗಳನ್ನ ಇವಾಗ್ಲು ನಮ್ಮ ಪ್ರಾಧ್ಯಾಪಕರು ನೆನಪಿಸುತ್ತಾರೆ.

ಹೀಗೆ ಹೇಳುತ್ತಾ ಹೋದರೆ ಈ ಲೇಖನಕ್ಕೆ ಅಂತಿಮವೆಂಬುದೆ ಇರುವುದಿಲ್ಲ. ಕೊನೆಯದಾಗಿ ಈ ನನ್ನ ಮುದ್ದು ಗೆಳತಿಯರ ಬಗ್ಗೆ ಹೇಳಬೇಕೆಂದರೆ, ನಮ್ಮ ಈ ಗೆಳೆತನ ದೇವರು ಬರೆದ ಸ್ನೇಹದ ದಾರ, ದಾರಕ್ಕೆ ಬೆಸೆದ ಭಾವನೆಗಳ ಹಾರ, ಭಾವನೆಗಳ ಜೊತೆಗೆ ಎಂದೆದೂ ಮುಗಿಯದ ಈ ಪ್ರೀತಿಯ ಪಯಣ.

ಪ್ರೀತಿ.ಟಿ.ಎಸ್
ಪತ್ರಿಕೋದ್ಯಮ ವಿದ್ಯಾರ್ಥಿನಿ
ದಾವಣಗೆರೆ ವಿಶ್ವವಿದ್ಯಾಲಯ

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಭಾವ ಭೈರಾಗಿ

ಕವಿತೆ | ಕಿಚನ್ ವಕ್ತ್

Published

on

ಕವಯಿತ್ರಿ : ಸಂಘಮಿತ್ರೆ ನಾಗರಘಟ್ಟ
  • ಸಂಘಮಿತ್ರೆ ನಾಗರಘಟ್ಟ

ಎದ್ದ ತಕ್ಷಣ
ಎದ್ದೋ ಬಿದ್ದೋ ಎಂದು
ಫ್ರೆಶ್ ಆಗಲು ಬಾತ್ ರೂಂ
ನತ್ತ ಹೋಗುವುದೇ ತಡ
ಅಲ್ಲಿನ‌ ಪುಟ್ಟ ಕನ್ನಡಿಯಲ್ಲಿ
ಹಿಡಿ ಮಾತ್ರದ ನನ್ನ ಮುಖ
ಥೇಟ್ ಆಟದ ರೋಬೋಟ್
ನಂತೆಯೇ ಕಾಣುತ್ತಿತ್ತು
ಒಳಗಿನಿಂದ‌ ಕದ ತೆಗೆದು
ಆಚೆ ಹೆಜ್ಜೆ‌‌ಯಿಡುವ ಹೊತ್ತಿಗಾಗಲೇ
ಕಿಚನ್ ನಲ್ಲಿ ಆರ್ಡರ್ ಸಿದ್ಧ
ಬಿಸಿ ನೀರು ಒಬ್ಬರಿಗಾದರೆ
ಸ್ಟ್ರಾಂಗ್ ಕಾಫಿ ಇನ್ನೊಬ್ಬರಿಗೆ
ಅದನ್ನು ಕೊಡುವ ಗ್ಲಾಸ್
ಗಾಜಿನದೋ ಸ್ಟೀಲ್ ನದೋ
ಎಂಬ ಗೊಂದಲದಲ್ಲೇ
ಸ್ಟವ್ ಮೇಲಿನ‌ ಹಾಲು
ಉಕ್ಕಿ ತನ್ನ‌ ಹಿತ ಶತ್ರು
ಗ್ಯಾಸ್ ಟ್ಯುಬ್ ನತ್ತ ಹರಿಯುತ್ತಿತ್ತು
ಅದನ್ನು ಉಜ್ಜಿ ಕ್ಲೀನ್ ಮಾಡಿ
ಸಿಂಕ್ ನತ್ತ ನೋಡುತ್ತಿದ್ದಂತೆ
ಎಲ್ಲಾ ಪಾತ್ರೆ ಸೌಟು ಬಾಣಲೆಯಲ್ಲಿ
ತೇಲುತ್ತಿದ್ದ ಅನ್ನದ ಅಗುಳು
ಇನ್ನು ಅರೆಬರೆ ಖಾಲಿ ಆಗಿದ್ದ
ಹೊಟ್ಟೆ ಒಳಗಿನ ಕಲ್ಮಶದಂತಿತ್ತು
ರಾತ್ರಿ ,ಹಗಲು ಮಾಡುವ
ತಿಂಡಿ -ಕೆಲಸಗಳ ಚಿಂತೆಯಲ್ಲೇ
ನಿದ್ದೆ ಹೀರಿಕೊಂಡು ಮುಖ
ಹುಳಿ ಹಿಂಡಿದಂತಾಗಿತ್ತು….
ಇನ್ನೇನು ಎಲ್ಲಾ ಕೆಲಸ ಮುಗಿಸಿ
ಸೋಫಾ ದಲ್ಲಿ ಕುಳಿತು
ಸುದ್ದಿ ಫೀಡ್ ನೋಡುತ್ತಿದ್ದೆ
ಅಕ್ಕಿ ರಾಗಿಯ ಬೆಲೆ ಪಟ್ಟಿ ಏರಿತ್ತು
ಯಾಕೋ ಈಗಲೂ ದಾಸರಿರಬೇಕಿತ್ತು
ಸಮ‌ ತೂಕ ಮಾಡಿ ಎರಡನ್ನೂ ಅಳೆದು
ನಮ್ಮವರ ಹೊಟ್ಟೆಯನ್ನೂ ತುಂಬಿಸಬೇಕೆನಿಸಿತು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಭಾವ ಭೈರಾಗಿ

ಕವಿತೆ | ರೇಖೆಗಳು

Published

on

ಕವಯಿತ್ರಿ : ಡಾ.ಸಿ. ಪುಷ್ಪಲತ ಭದ್ರಾವತಿ
  • ಡಾ.ಪುಷ್ಪಲತ ಸಿ ಭದ್ರಾವತಿ

ಗಡಿ ದೇಶಗಳೇನೊ ಹಂಚಿಕೊಂಡಿರಿ
ಆದರೆ,
ಸೂರ್ಯ ಚಂದ್ರರ ಗತಿಯೇನು
ಉಸಿರಾಡುವ ಗಾಳಿಯು ಒಂದಿರುವಾಗ
ಪ್ರಾಣವಾಯುವಿಗೆ ಬಂಧನದಲ್ಲಿರಿಸಲಾದಿತೆ

ಹರಿಯುವ ನದಿಗಳಿಗೆ ನಾಮಕರಣವೇನೋ ಮಾಡಿದಿರಿ
ಆದರೆ,
ಜರಿಗಳು, ಹಳ್ಳಕೊಳ್ಳಗಳು ಮಾಡಿದಾದರೂ ಏನು
ಪೂಜಾರಿ ಕೊಟ್ಟಿದ್ದು ತೀರ್ಥವೆ
ಆಬೆಜಂಜಂ, ಹಾಲಿ ವಾಟರ್ ಎಲ್ಲವೂ ಜಲ
ಫಾದರ್,ಪೂಜಾರಿ,ಮೌಲ್ವಿ
ಎಲ್ಲರೂ ಕುಡಿದದ್ದು ನೀರು
ಕೊನೆಗೂ ಅದರ ಮೂಲರೂಪ ಬದಲಾಗಲಿಲ್ಲ

ಮನುಷ್ಯ ,ಪ್ರಾಣಿ,ಮರಗಿಡಗಳ
ತಳಿಗಳನ್ನು ಬೇರ್ಪಡಿಸುವವನು ಮೂರ್ಖನೇ ಇರಬೇಕು .
ದೇಹದಲ್ಲಿರುವ ನರಮಂಡಲವನೊಮ್ಮೆ ಬೇರ್ಪಡಿಸಿ
ಬದುಕಲಾದಿತೆ
ಏನು?
ಕ್ರಿಸ್ತನೇನಾದರು ಬಂದು ಮತಾಂತರ ಮಾಡಿದನೇ
ಅಲ್ಲಾನೇನಾದರು ಬಂದು ರಾಮಮಂದಿರ ಕೆಡವಿದನೇ
ಶಿವನೇನಾದರು ಬಂದು ಮಸೀದಿಯನ್ನು ಹೊಡೆದುರುಳಿಸಿದನೇ..!?

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಇರುಳ ತಾರೆಗಳಂತೆ ಬೆಳಕೊಂದು ಮಿನುಗುವುದು..!

Published

on

  • ಪ್ರೀತಿ.ಟಿ.ಎಸ್, ದಾವಣಗೆರೆ

ಬೇಂದ್ರೆಯವರು “ಇರುಳ ತಾರೆಗಳಂತೆ ಬೆಳಕೊಂದು ಮಿನುಗುವುದು, ಕಳೆದ ದುಃಖಗಳಲ್ಲಿ ನೆನೆದಂತೆಯೆ” ಎಂದು ತಮ್ಮ ಸಖೀ ಗೀತದಲ್ಲಿ ಹಾಡುತ್ತಾರೆ. ಆದರೆ ಈ ಹೊಸ ವರ್ಷದಲ್ಲಿ ಕಹಿದಿನಗಳ ನೆನಪೇ ಬೇಡ, ಸಿಹಿ ಕಹಿ ಕನಸುಗಳನ್ನು ಕಂಡಂತಹ ಎಳೆತನದ, ಕೆಳೆತನದ ದಿನಗಳ ನೆನಪೇ ಸ್ಥಿರವಾಗಿರಲಿ; ಕಾಲನ ಹೊಡೆತಕ್ಕೆ ಆ ಕನಸುಗಳ ನೆನಪು ಮರೆಯಾಗದಿರಲಿ.

ಹೊಸ ವರ್ಷದಲ್ಲಿ ಇದೆಂತ ಬರಿತ್ತಿದ್ದಾರೆ ಅಂತೀರ! ನಿಮಗಿಂದು ಬರೀ ಹೊಸ ವರುಷ. ಆದರೆ ನನಗೋ ನನ್ನ ಜೀವನ ಪಾವನವಾಗಿಸುವ ದಿನ. ಯಾಕೇ ಗೊತ್ತಾ? ನನ್ನ ಸಾಹಿತ್ಯ ಕ್ಷೇತ್ರಕ್ಕೆ ಅನುಕರಿಣಿಸಿ, ಸಮಾಜ ಕ್ಷೇತ್ರದಲ್ಲಿ ನನ್ನನ್ನ ತೊಡಗುವಂತೆ ಮಾಡಿ, ಕಿಂಚಿತಾದರೂ ನನ್ನಲ್ಲಿ ದಯೆ, ಕರುಣೆ, ವಿಶ್ವಾಸ, ಪ್ರೀತಿ ಹೀಗೆ ಅನೇಕ ಭಾವಗಳನ್ನ ಚಿಕ್ಕಂದಿನಿಂದ ತಿದ್ದಿ ತೀಡಿದ ನನ್ನ ತಂದೆ ತಾಯಿಯ ಜನುಮ ದಿನ.

ಹೊಸ ವರುಷಕ್ಕಿಂತ ಇವರೀರ್ವರ ಜನುಮವೇ ಅದೇನೋ ಸಂಭ್ರಮ. ಅದೇನೋ ಸಡಗರ. ಹಳೆಯ ನೆನಪಿನ ಬುತ್ತಿಯನ್ನು ಮುಚ್ಚಿಟ್ಟು ಹೊಸ ಜೀವನದ ಪಯಣಕ್ಕೆ ಅದೇನೋ ಕಾತುರದಿಂದ ಗಡಿಬಿಡಿಯಾಗುವಾಗ ಅಪ್ಪಾಜಿ ಬಂದು ಹಾದಿಯಲ್ಲಿ ಕಲ್ಲು- ಮುಳ್ಳುಗಳಿರಬಹುದು ಎಚ್ಚರ! ಆದರೆ ಅದನ್ನು ಎದುರಿಸಿ ಮುನ್ನಡೆದಾಗಲೇ ಸುಖ ಸಾಗರ ಎಂಬ ಅವರ ಆಶಯದ ನುಡಿ ಮಾತುಗಳು ಬಹುಶಃ ಇಂದು ನನ್ನನ್ನು ಇಲ್ಲಿಯವರೆಗೂ ತಂದು ನಿಲ್ಲಿಸಿದೆ.

ಮಾಮೂಲೀ ವಾಟ್ಸ್ಆ್ಯಪ್, ಫೇಸ್ಬುಕ್, ಇನ್ಸ್ಟಾಗ್ರಾಮ್ ನಲ್ಲಿ ತಂದೆ-ತಾಯಿಯ ಪೋಸ್ಟ್ ಹಾಕಿ ವಿಶ್ ಮಾಡಿದ್ರೆ ಮುಗಿತಿತ್ತು. ಆದರೆ ಈ ಭಾರಿ, ನನಗಾಗುತ್ತಿರುವುದು ವಿಚಿತ್ರ ಅನುಭವ. ಸಾವಿರ ನೋವು, ದುಃಖ-ದುಮ್ಮಾನಗಳು ಎದೆಯಲ್ಲಿದ್ರು ನಮ್ಮ ಮುಂದೆ ತೋರಿಸದೆ ಮನಸ್ಸಲ್ಲೇ ಇಟ್ಟು ಕೊರಗುತ್ತ ಒಳ್ಳೆಯ ವಿದ್ಯಾಭ್ಯಾಸ ನೀಡಿ, ಸಂಸ್ಕೃತಿ, ನಾಡು-ನುಡಿ, ಸಂಸ್ಕಾರವನ್ನು ಭಿತ್ತುತ್ತ ಬಂದಿದ್ದಾರೆ. ಸುಖದಲ್ಲೆ ಬೆಳೆದ ನಮಗೆ ಕಹಿ ಜೀವನದ ಅನುಭವ ಕಡಿಮೆಯೇ!

ಅಪ್ಪಜಿ-ಅಮ್ಮನ ಆಸೆಯಂತೆ ಮಾಸ್ಟರ್ ಆಫ್ ಜರ್ನಲಿಸಂ ಅಲ್ಲಿ ಎರಡು ಬಂಗಾರದ ಪದಕ ಗೆದ್ದು ಅವರಿಗೆ ನೀಡಿ ಆಸೆ ತೀರಿಸಿದ ನಂತರವಷ್ಟೇ ತಿಳಿದ್ದದ್ದು. ಜೀವನದ ಆಳವೆಷ್ಟು ಎಂದು? ಅಪ್ಪಾಜಿ ಅಮ್ಮನನ್ನು ಬಿಟ್ಟು ಕೆಲಸ ಹುಡುಕುತ್ತ ಬೆಂಗಳೂರಿಗೆ ಬಂದಾಗ ನಿಜವಾದ ರೋಧನೆ, ನೋವು, ಒಂಟಿತನ, ಕಷ್ಟ, ಉಪವಾಸ, ಅನ್ನದ ಬೆಲೆ ಹೀಗೆ ಬದುಕಿನ ಅಷ್ಟು ಪಾಠಗಳು ತಿಳಿಯುತ್ತ ಹೋದದ್ದು. ಎಂತಹ ಒದ್ದಾಟದಲ್ಲೂ ನನ್ನ ತಂದೆ-ತಾಯಿಗೆ ತಿಳಿಸದೆ ನಗ್ತ ನಗ್ತ ಮಾತಾಡಿದ್ರು ಕ್ಷಣಮಾತ್ರದಲ್ಲಿ ಅಪ್ಪಜಿ ಮಾತ್ರ ನನ್ನ ನಗುವಿನ ಹಿಂದಿನ ದುಃಖನ ಗುರುತಿಸಿ, ಮತ್ತಷ್ಟು ಬಲ ತುಂಬುತ್ತ ಬಂದವರು.

ಜನವರಿ 1 ಬಂತೆಂದರೆ ಅಪ್ಪಾಜಿ ಅಮ್ಮನ ಹುಟ್ಟು ಹಬ್ಬ. ಈ ಭಾರಿ ನಾನು ನಿಮಗೆನೂ ಮಾಡಿದೇನು? ಕಡೆಪಕ್ಷ ಅವರ ಮುಂದೆ ಹೋಗಿ ನಿಂತು ಶುಭಾಶಯ ತಿಳಿಸಿ ಬಂದು ಬಿಡಲೇ ಎಂದರೆ ಕೈಯಲ್ಲಿ ಕಾಸಿಲ್ಲ. ಇಲ್ಲಿಂದಲೇ ಶುಭಾಶಯ ತಿಳಿಸಿ ಸುಮ್ಮನಾಗಿ ಬಿಡಲೇ ಎಂದರೆ ಮನಸ್ಸು ಒಪ್ಪುತ್ತಿಲ್ಲ. ಇದೀಗ ದುಡಿತ್ತಿದ್ದಿನಾದರು ಕಣ್ಣ ಮುಂದಿರುವ ಅಷ್ಟು ಹೊಣೆಗಾರಿಕೆಗಳು ನನ್ನನ್ನ ಕಟ್ಟಿಹಾಕ್ತಿದೆ. ಈ ಗೊಂದಲದ ನಡುವೇ ಈ ಲೇಖನ ನಿಮಗಾಗಿ.

ಅಪ್ಪಜಿ-ಅಮ್ಮ ಈ ಭಾರಿ ಹೊಸ ವರುಷದ ಹೊಸ ಆಚರಣೆ ಸಾಧ್ಯವಾಗದಿದ್ದರು ಬೇಸರಿಸದಿರಿ. ಯಾಕೆಂದರೆ ನಿಮಗಾಗಿ ನೀವು ಕಂಡ ಹೊಸ ಕನಸಿನ ಗೂಡೊಂದನ್ನ ಹೊತ್ತು ತರುತ್ತಿದ್ದೇನೆ. ತಂದ ದಿನವೇ ನಿಮ್ಮ ಈ ಜನುಮೋತ್ಸವವನ್ನು ಆಚರಿಸ್ತೇನೆ. ಇದನ್ನ ನಿಮ್ಮೊಡನೇ ಹೇಳಬಹುದಿತ್ತಾದರು, ನನ್ನ ಸಹಪಯಣಿಗರೊಡನೆ ಹಂಚಿಕೊಂಡ ಈ ಕನಸುಗಳು ನಮ್ಮ ಬಾಳಿನ ಮುಂದಿನ ಪಯಣದ ಬುತ್ತಿಯಾಗುತ್ತದೆ ಎಂಬುದು ನನ್ನ ಭಾವನೆ.

ಇಂತಹ ಅದೆಷ್ಟೋ ಅನುಭವಗಳು ಮನೆ ಬಿಟ್ಟು, ತಂದೆ ತಾಯಿಯ ಆಶಯವನ್ನು ನೆನಸಾಗಿಸೋ ಸಾವಿರ ಕನಸುಗಳನ್ನು ಹೊತ್ತು ಬಂದ ಅದೆಷ್ಟೋ ಮನಸ್ಸುಗಳಿಗೆ ಆಗಿರುತ್ತೆ. ಇನ್ನು ಕೆಲವರಿಗೆ ಇಡೀ ವರ್ಷದ ಶ್ರಮದಾಯಕ ದುಡಿಮೆ ಬಳಿಕ ಮನಸ್ಸು ಸ್ವಲ್ಪ ವಿಶ್ರಾಂತಿಯನ್ನು, ಮನೋರಂಜನೆಯನ್ನು ಬಯಸುತ್ತದೆ. ಕುಟುಂಬದ ಬಂಧವನ್ನು ಗಟ್ಟಿಗೊಳಿಸಲು ಮತ್ತು ಪ್ರೀತಿ, ಅನುಬಂಧವನ್ನು ಬಿತ್ತಲು ಹೊಸವರ್ಷವೊಂದು ಸುವರ್ಣಾವಕಾಶ. ನಮ್ಮ ಎಲ್ಲ ಕೆಲಸಕ್ಕೆ ಸ್ವಲ್ಪ ಸಮಯ ವಿಶ್ರಾಂತಿ ಕೊಟ್ಟು ರಿಲ್ಯಾಕ್ಸ್ ಮಾಡುವ ಮೂಲಕ ಸಂಭ್ರಮ, ಸಡಗರಕ್ಕೆ ಅಣಿಯಾಗೋಣ. ನಿಮ್ಮೆಲ್ಲರ ಆಸೆ, ನಿರೀಕ್ಷೆಗಳು ನೆರವೇರಲಿ ಎಂದು ಮನಸ್ಸಲ್ಲೆ ಪ್ರಾರ್ಥಿಸುತ್ತಾ, ಮುಸ್ಸಂಜೆ ಕವಿಯುತ್ತಿರುವಾಗಲೂ ಮರುದಿನದ ಬೆಳಗು ಆಶಾಕಿರಣವನ್ನು ಹೊತ್ತು ತರಲಿ ಎಂದು ಹಾರೈಸುತ್ತೇನೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending