ದಿನದ ಸುದ್ದಿ
ಗೋಕಾಕ್ ಪಟ್ಟಣ ನೆರೆಯಿಂದ ಕಂಗೆಟ್ಟಾಗ, ರಮೇಶ್ ಜಾರಕಿಹೊಳಿ ಹೋಟೆಲ್ನ ಎಸಿ ರೂಮ್ನಲ್ಲಿ ಮಸ್ತಿ ಮಾಡ್ತಿದ್ರು : ಸಿದ್ದರಾಮಯ್ಯ ಕಿಡಿ

ಸುದ್ದಿದಿನ,ಡೆಸ್ಕ್ : ಗೋಕಾಕ್ನಲ್ಲಿ ಇಂದು ಆಯೋಜಿಸಿದ್ದ ಕಾಂಗ್ರೆಸ್ ಪಕ್ಷದ ಬೃಹತ್ ಪ್ರಚಾರ ಸಭೆಯಲ್ಲಿ ಭಾಗವಹಿಸಿ, ನಮ್ಮ ಪಕ್ಷದ ಅಭ್ಯರ್ಥಿ ಲಖನ್ ಜಾರಕಿಹೊಳಿ ಅವರ ಪರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ ಯಾಚಿಸಿದರು.
ಕಳೆದ ಚುನಾವಣೆಯಲ್ಲಿ ಕ್ಷೇತ್ರದ ಜನಾದೇಶ ಪಡೆದು ಗೆದ್ದಿದ್ದ ಶಾಸಕ ರಮೇಶ್ ಜಾರಕಿಹೊಳಿ ಬಿಜೆಪಿ ಪಕ್ಷಕ್ಕೆ ತನ್ನನ್ನು ತಾನು ಮಾರಿಕೊಂಡಿದ್ದರ ಫಲ ಇಂದು ಗೋಕಾಕ್ ಕ್ಷೇತ್ರ ಉಪಚುನಾವಣೆ ಎದುರಿಸುವಂತಾಗಿದೆ. ಪಕ್ಷಾಂತರ ಮಾಡಿದ ಶಾಸಕರೆಲ್ಲ ರಾಜಕೀಯದಲ್ಲಿರಲು ಅನರ್ಹರು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಮತ್ತೆ ಅಂಥವರಿಗೆ ಮತ ನೀಡುತ್ತೀರ? ಮಂತ್ರಿಯಾಗಿದ್ದ ಸತೀಶ್ ಜಾರಕಿಹೊಳಿ ಅವರನ್ನು ಸಂಪುಟದಿಂದ ಕೈಬಿಟ್ಟು, ರಮೇಶ್ ಜಾರಕಿಹೊಳಿ ಅವರಿಗೆ ಅವಕಾಶ ನೀಡಿದ್ದೆ. ಮಂತ್ರಿಯಾದವರು ಸಂಪುಟ ಸಭೆಗೆ ಹಾಜರಾಗಬೇಕಲ್ವೇ? ಆದರೆ ಈ ಆಸಾಮಿ ಹತ್ತು ಸಚಿವ ಸಂಪುಟ ಸಭೆಗಳಿಗೇ ಹೋಗಲಿಲ್ಲ. ಇಂಥವರು ಯಾವ ಪುರುಷಾರ್ಥಕ್ಕೆ ಮಂತ್ರಿಯಾಗಿರಬೇಕು? ಎಂದು ಕಿಡಿಕಾರಿದರು.
ಬಳ್ಳಾರಿ ರೀತಿಯಲ್ಲಿಯೇ ಗೋಕಾಕ್ ಅನ್ನು ಸಹ ‘ರಿಪಬ್ಲಿಕ್ ಆಫ್ ಗೋಕಾಕ್’ ಮಾಡಿದ್ದಾರೆ. ಇಲ್ಲಿ ರಮೇಶ್ ಜಾರಕಿಹೊಳಿಯದ್ದೇ ದರ್ಬಾರ್ ಆಗಿದೆ. ಕ್ಷೇತ್ರದ ಜನರಿಗೆ ಸ್ವಾತಂತ್ರ್ಯ ಬೇಕು, ಇಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಮರು ಸ್ಥಾಪನೆಯಾಗಬೇಕು ಎಂದಾದರೆ ನಮ್ಮ ಪಕ್ಷದ ಅಭ್ಯರ್ಥಿಗೆ ಮತ ನೀಡಿ ಗೆಲ್ಲಿಸಿಕೊಡಬೇಕು. ಪ್ರವಾಹ ಬಂದಾಗ ನಾನು ಗೋಕಾಕ್ಗೆ ಬಂದಿದ್ದೆ. ಹಳೆ ಗೋಕಾಕ್ ಪಟ್ಟಣ ಸಂಪೂರ್ಣ ಕೊಚ್ಚಿ ಹೋಗಿತ್ತು. ಜನ ಬೀದಿಗಳಲ್ಲಿ ವಾಸಿಸುತ್ತಿದ್ದರು. ಜನರ ಕಷ್ಟ ಕಾಲದಲ್ಲಿ ಜೊತೆಗೆ ನಿಂತು ಅವರಿಗೆ ಧೈರ್ಯ ತುಂಬಬೇಕಿದ್ದ ಶಾಸಕ ಮುಂಬೈ, ದೆಹಲಿ ಅಂತ ಊರೂರು ಅಲೆಯುತ್ತಿದ್ದರು. ಆಗ ಸತೀಶ್ ಜಾರಕಿಹೊಳಿ ಮತ್ತು ಲಖನ್ ಜಾರಕಿಹೊಳಿ ಜನರ ಜೊತೆ ಇದ್ದರು ಎಂದರು.
ಗೋಕಾಕ್ ಪಟ್ಟಣ ನೀರಿನಲ್ಲಿ ಮುಳುಗಿ ಹೋಗಿತ್ತು, ಜನ ಬದುಕಿಗಾಗಿ ನೆಲೆ ಹುಡುಕುತ್ತಿದ್ದರೆ ರಮೇಶ್ ಜಾರಕಿಹೊಳಿ ಮುಂಬೈನ ಪಂಚತಾರಾ ಹೋಟೆಲ್ನ ಎಸಿ ರೂಮ್ನಲ್ಲಿ ಮೋಜು ಮಸ್ತಿ ಮಾಡುತ್ತಾ ಕಾಲ ಕಳೆಯುತ್ತಿದ್ದರು. ಇಂಥ ಶಾಸಕ ಮತ್ತೆ ನಮಗೆ ಬೇಕಾ ಎಂದು ಜನತೆ ಯೋಚನೆ ಮಾಡಿ ಮತ ಚಲಾಯಿಸಬೇಕು. ಸತೀಶ್ ಜಾರಕಿಹೊಳಿ ನನ್ನ ಧೀರ್ಘ ಕಾಲದ ಗೆಳೆಯ, ನಿಷ್ಠಾವಂತ ನಾಯಕ ಕೂಡ. ಇನ್ನು ಲಖನ್ ಜಾರಕಿಹೊಳಿ ಯುವ ಉತ್ಸಾಹಿ ರಾಜಕಾರಣಿ. ಜನಸೇವೆ ಮಾಡುವ ಹಂಬಲ, ಕಾಳಜಿ ಅವರಲ್ಲಿದೆ. ಡಿಸೆಂಬರ್ 5ರಂದು ನಡೆಯುವ ಉಪಚುನಾವಣೆಯಲ್ಲಿ ಲಖನ್ಗೆ ಮತ ನೀಡಿ ಗೆಲ್ಲಿಸಿಕೊಡಿ, ಅವರೊಂದಿಗೆ ನಾವಿರುತ್ತೇವೆ, ಕ್ಷೇತ್ರದ ಅಭಿವೃದ್ಧಿಯನ್ನು ನಾವು ಬೆಂಬಲಿಸುತ್ತೇವೆ ಎಂದು ಮತದಾರರಲ್ಲಿ ಮನವಿಮಾಡಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ನಟ ಮನದೀಪ್ ರಾಯ್ ನಿಧನ

ಸುದ್ದಿದಿನ ಡೆಸ್ಕ್ : ಹಿರಿಯ ಚಿತ್ರನಟ ಮನದೀಪ್ ರಾಯ್ (74 ವರ್ಷ) ಇಂದು ಬೆಳಗಿನ ಜಾವ ಅಗಲಿದ್ದಾರೆ.
ಕೆಲ ದಿನಗಳ ಹಿಂದೆ ಹೃದಯಾಘಾತಕ್ಕೀಡಾಗಿದ್ದ ಅವರು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಮನದೀಪ್ ರಾಯ್ ಹವ್ಯಾಸಿ ರಂಗಭೂಮಿ ಹಿನ್ನೆಲೆಯ ಕಲಾವಿದ. ನಟ – ನಿರ್ದೇಶಕ ಶಂಕರನಾಗ್ ಅವರ ಆತ್ಮೀಯ ಒಡನಾಡಿ. ಪೋಷಕ ಪಾತ್ರ, ಹಾಸ್ಯ ನಟರಾಗಿ 500ಕ್ಕೂ ಹೆಚ್ಚು ಸಿನಿಮಾಗಳು ಹಾಗೂ ಕಿರುತೆರೆ ಸರಣಿಗಳಲ್ಲಿ ಅಭಿನಯಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕರ್ನಾಟಕದಲ್ಲಿ ಈ ವರ್ಷ ಜನಪರ ರಾಜ್ಯ ಬಜೆಟ್ ಮಂಡನೆ ; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಸುದ್ದಿದಿನ, ಹಾವೇರಿ : ಕರ್ನಾಟಕದಲ್ಲಿ ಮುಂದಿನ ತಿಂಗಳು ಮಂಡಿಸಲಾಗುತ್ತಿರುವ ಈ ವರ್ಷದ ರಾಜ್ಯ ಬಜೆಟ್ ರೈತರು, ದೀನ ದಲಿತರು, ಯುವಕರು, ಮಹಿಳೆಯರು, ದುಡಿಯುವ ವರ್ಗ ಮತ್ತು ಜನಪರವಾಗಿರುತ್ತದೆ ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹಾವೇರಿ ಜಿಲ್ಲೆ ಶಿಗ್ಗಾಂವ್ನಲ್ಲಿ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ದುಡಿಮೆಗೆ ಯೋಗ್ಯ ಬೆಲೆ ಸಿಗುವ ರೀತಿಯಲ್ಲಿ ನಮ್ಮ ಕಾರ್ಯಕ್ರಮಗಳು ಇರುತ್ತವೆ ಎಂದರು.
ಕರ್ನಾಟಕ ರಾಜ್ಯದ ಆರ್ಥಿಕ ಅಭಿವೃದ್ಧಿಯಲ್ಲಿ ನಾವು ವೇಗವನ್ನು ಕಂಡಿದ್ದೇವೆ. ಕಳೆದ ವರ್ಷ ನಾನು ಅಧಿಕಾರ ವಹಿಸಿಕೊಂಡಾಗ 5 ಸಾವಿರ ಕೋಟಿ ರೂಪಾಯಿ ರಾಜ್ಯದ ಬೊಕ್ಕಸಕ್ಕೆ ನಮ್ಮ ನಿರ್ಧಿಷ್ಟ ಗುರಿಗೆ ಕೊರತೆಯಿತ್ತು. ಅದನ್ನು ನಾವು 5 ಸಾವಿರ ಕೋಟಿ ತುಂಬುವುದಲ್ಲದೇ, 13 ಸಾವಿರ ಕೋಟಿ ಅಧಿಕವಾಗಿ ಸಂಗ್ರಹ ಮಾಡಿದ್ದೇವೆ. ಈ ವರ್ಷವೂ ಕೂಡ ನಮ್ಮ ಹಣಕಾಸಿನ ಸಂಗ್ರಹ ಉತ್ತಮವಾಗಿದೆ ಎಂದು ಕರ್ನಾಟಕದ ಮುಖ್ಯಮಂತ್ರಿ ಹೇಳಿದರು.
ಕೋವಿಡ್ ನಂತರದಲ್ಲಿ ಆರ್ಥಿಕ ಸುಧಾರಣೆ ಆಗುತ್ತಿರುವ ಸಂದರ್ಭದಲ್ಲಿ ಕೆಳಹಂತದ ಜನಸಮುದಾಯಕ್ಕೆ ಇನ್ನಷ್ಟು ಸಹಾಯ ಮಾಡಿ, ಅವರನ್ನು ಕೂಡ ಮುಖ್ಯ ವಾಹಿನಿಗೆ ಬರಬೇಕು ಎನ್ನುವ ನಿಟ್ಟಿನಲ್ಲಿ ನಾವು ಕಾರ್ಯಕ್ರಮ ರೂಪಿಸುತ್ತಿದ್ದೇವೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಸಂಸತ್ತಿನ ಬಜೆಟ್ ಅಧಿವೇಶನದ ಹಿನ್ನೆಲೆ ; ಇದೇ 30ರಂದು ಸರ್ವಪಕ್ಷಗಳ ಸಭೆ

ಸುದ್ದಿದಿನ ಡೆಸ್ಕ್ : ಸಂಸತ್ತಿನ ಮುಂಬರುವ ಬಜೆಟ್ ಅಧಿವೇಶನದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇದೇ 30ರಂದು ಸರ್ವಪಕ್ಷಗಳ ಸಭೆಯನ್ನು ಕರೆದಿದೆ. ಸಂಸತ್ ಭವನದ ಸಂಕೀರ್ಣದಲ್ಲಿ ಸೋಮವಾರ ಮಧ್ಯಾಹ್ನ 12 ಗಂಟೆಗೆ ಸಭೆ ನಡೆಯಲಿದೆ.
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ, ಕೇಂದ್ರ ಸಚಿವರು ಮತ್ತು ಸಂಸತ್ತಿನ ಎರಡೂ ಸದನಗಳನ್ನು ಪ್ರತಿನಿಧಿಸುವ ಸದನ ನಾಯಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಸಭೆಯಲ್ಲಿ ಸರ್ಕಾರ ಸಂಸತ್ತಿನ ಉಭಯ ಸದನಗಳ ಸುಗಮ ಕಲಾಪಕ್ಕೆ ಎಲ್ಲ ರಾಜಕೀಯ ಪಕ್ಷಗಳ ಸಹಕಾರವನ್ನು ಕೋರಲಿದೆ. ಸಂಸತ್ತಿನ ಬಜೆಟ್ ಅಧಿವೇಶನ ಇದೇ 31ರಿಂದ ಆರಂಭವಾಗಲಿದೆ. ಮೊದಲ ದಿನ ಬೆಳಿಗ್ಗೆ 11 ಗಂಟೆಗೆ ಸೆಂಟ್ರಲ್ ಹಾಲ್ ನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡುವರು.
ಅದೇ ದಿನವೇ ಆರ್ಥಿಕ ಸಮೀಕ್ಷೆಯನ್ನೂ ಸಹ ಮಂಡಿಸಲಾಗುವುದು. ಫೆಬ್ರವರಿ 1ರಂದು 2023-24ನೇ ಸಾಲಿನ ಕೇಂದ್ರ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆ ಮಾಡಲಿದ್ದಾರೆ.
ಬಜೆಟ್ ಅಧಿವೇಶನ ಏಪ್ರಿಲ್ 6ವರೆಗೆ ನಡೆಯಲಿದ್ದು, ಸುಮಾರು 66 ದಿನಗಳಲ್ಲಿ 27 ಕಲಾಪಗಳು ನಡೆಯಲಿದೆ. ಮೊದಲ ಅವಧಿಯಲ್ಲಿ ಅಧಿವೇಶನ ಫೆಬ್ರವರಿ 13ರವರೆಗೆ ನಡೆಯಲಿದೆ. ಫೆಬ್ರವರಿ 14ರಿಂದ ಮಾರ್ಚ್ 12ರವರೆಗೆ ಅಧಿವೇಶನಕ್ಕೆ ಬಿಡುವು ಇರಲಿದೆ ಆನಂತರ ಮಾರ್ಚ್ 13ರಿಂದ ಆರಂಭವಾಗುವ ಅಧಿವೇಶನ ಏಪ್ರಿಲ್ 6ಕ್ಕೆ ಕೊನೆಗೊಳ್ಳಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980336243
