ದಿನದ ಸುದ್ದಿ
ಪೌರತ್ವ ತಿದ್ದುಪಡಿ ಮಸೂದೆ (CAB) 2019 ತಿರಸ್ಕರಿಸಲು ಎಸ್ಎಫ್ಐ-ಡಿವೈಎಫ್ಐ ಒತ್ತಾಯ

ಸುದ್ದಿದಿನ, ಸುರಪುರ್ : ಲೋಕಸಭೆ, ರಾಜ್ಯಸಭೆಗಳಲ್ಲಿ ಮಂಜೂರು ಮಾಡಿದ ಪೌರತ್ವ (ತಿದ್ದುಪಡಿ) ಮಸೂದೆ 2019 (Citizens (Amendment) Bill-2019 CAB) ನ್ನು ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್ಎಫ್ಐ) ಮತ್ತು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್ (ಡಿವೈಎಫ್ಐ) ಸಂಘಟನೆಗಳು ಬಲವಾಗಿ ವಿರೋಧಿಸಿವೆ.
ಈ ಮಸೂದೆ ದೇಶದ ಪೌರತ್ವ (ಅಥವಾ ನಾಗರಿಕತ್ವ) ವನ್ನು ಮತಧರ್ಮದ ಆಧಾರದ ಮೇಲೆ ನಿರ್ಧರಿಸುತ್ತಿರುವುದು ಖಂಡನೀಯ.
ಭಾರತ ಸಮಾನವಾಗಿ ಎಲ್ಲಾ ಮತಧರ್ಮಗಳ ಮತ್ತು ಎಲ್ಲಾ ಪ್ರದೇಶಗಳ ಜನರ ದೇಶ. ಆದ್ದರಿಂದ ಭಾರತ ಅವರೆಲ್ಲರನ್ನೂ ಸಮಾನವಾಗಿ ಕಾಣಬೇಕು.
ವಿಪರೀತ ತಾರತಮ್ಯ ತೋರುವ ಈ ಮಸೂದೆಯನ್ನು ಲೋಕಸಭೆ ಭಾರೀ ಬಹುಮತದಿಂದ ಹಾಗೂ ರಾಜ್ಯ ಸಭೆಯಲ್ಲಿಯೂ ಕೂಡ ಮಂಜೂರು ಮಾಡಿವೆ.
ಆದರೆ, ಇದರ ವಿರುದ್ಧ ತೀವ್ರ ಅತೃಪ್ತಿ ಹೊಗೆಯಾಡುತ್ತಿದೆ. ಈ ಮಸೂದೆಯನ್ನು ಲೋಕಸಭೆ, ರಾಜ್ಯ ಸಭೆಯಲ್ಲಿ ಮಂಜೂರು ಮಾಡುತ್ತಿರುವಾಗ, ಈಶಾನ್ಯ ಭಾರತದ ವಿದ್ಯಾರ್ಥಿಗಳು 11 ಗಂಟೆಗಳ ಬಂದ್ ಆಚರಿಸುತ್ತಿದ್ದರು. ದೇಶವ್ಯಾಪಿ ಪ್ರತಿಭಟನೆಗಳು ನಡೆಯುತ್ತಿವೆ. ಈ ಮಸೂದೆಯು ನೆರೆಯ ಮೂರು ದೇಶಗಳ ಮುಸ್ಲಿಮರನ್ನು ನಮ್ಮ ದೇಶದ ಪೌರತ್ವಕ್ಕೆ ಅರ್ಜಿ ಸಲ್ಲಿಸುವುದರಿಂದ ಹೊರಗಿಡುತ್ತದೆ ಮಾತ್ರವಲ್ಲ, ಪೌರತ್ವದ ದಾಖಲೆಗಳನ್ನು ಒದಗಿಸಲಾಗದ ಭಾರತೀಯ ಮುಸ್ಲಿಮರ ಪೌರತ್ವವನ್ನು ರದ್ದುಗೊಳಿಸಿ ಕ್ಯಾಂಪ್ ಗಳಿಗೆ ತಳ್ಳುತ್ತದೆ. ಭಾರತದ ಪೌರತ್ವಕ್ಕೆ ಮತಧರ್ಮದ ಪರೀಕ್ಷೆ ಒಡ್ಡಿರುವುದರಿಂದ ಈ ಮಸೂದೆ, ನಮ್ಮ ದೇಶದ ಸಂವಿಧಾನದಲ್ಲಿ ಪ್ರತಿಷ್ಟಾಪಿಸಲಾಗಿರುವ ಸಮಾನತೆ ಮತ್ತು ಸೆಕ್ಯುಲರಿಸಂ ಗಳ ನೀತಿಗಳನ್ನು ಉಲ್ಲಂಘಿಸುತ್ತದೆ.
ಪೌರತ್ವ ದಾಖಲಾತಿಯನ್ನು (NRC) ದೇಶದಾದ್ಯಂತ ನಡೆಸುವುದೆ ರಾಜಕೀಯ ದುರುದ್ದೇಶಕ್ಕಾಗಿ. ಈಗ ಅದಕ್ಕೆ ತಿದ್ದುಪಡಿ ಮಸೂದೆಯ ಮೂಲಕ ಮತ್ತಷ್ಟು ಕೋರೆ ಹಲ್ಲುಗಳನ್ನು ಒದಗಿಸಿದೆ. ಇದು ಮುಸಲ್ಮಾನರಲ್ಲಿ ದಾಖಲೆ ಒದಗಿಸಲಾಗದಿದ್ದರೆ ನಾಗರಿಕ ಹಕ್ಕುಗಳನ್ನು ಕಳೆದುಕೊಳ್ಳುವ ಭೀತಿಯನ್ನು ಸೃಷ್ಟಿಸಿದರೆ, ಕೇಂದ್ರ ಸರಕಾರ ಕೇಳುವ ದಾಖಲೆ ಒದಗಿಸಲು ನೂರ ಮೂವತ್ತು ಕೋಟಿ ನಾಗರಿಕರೂ ಧರ್ಮ ಭೇದವಿಲ್ಲದೆ ತೀವ್ರ ಸಂಕಷ್ಟಗಳಿಗೆ ಗುರಿಯಾಗ ಬೇಕಾಗುತ್ತದೆ. ದಾಖಲೆಗಳು ಹೊಂದಿಲ್ಲದ ಆದಿವಾಸಿಗಳು, ಅಲೆಮಾರಿಗಳು, ಬಡವರು ಪೌರತ್ವ ಪಡೆಯಲು ಅಪಾರ ವೇದನೆಗೆ ಗುರಿಯಾಗಬೇಕಾಗುತ್ತದೆ. ಒಟ್ಟಾರೆ ಬಿಜೆಪಿ ಸರ್ಕಾರ ತನ್ನ ಆಡಳಿತ ವೈಫಲ್ಯಗಳಿಂದ ಸೃಷ್ಟಿಯಾಗುತ್ತಿರುವ ಜನಾಕ್ರೋಶದ ದಿಕ್ಕನ್ನು ತಪ್ಪಿಸಲು ಈ ಕಾಯ್ದೆಯನ್ನು ಮುಂದಕ್ಕೆ ತಂದಿದೆ. ಇದು ಬಿಜೆಪಿಯ ಒಡೆದಾಳುವ ನೀತಿಯ ಮುಂದುವರಿದ ಭಾಗ.
ಭಾರತವು, ಮ್ಯಾನ್ಮಾರ್ ನಲ್ಲಿ ತೀವ್ರ ಕಿರುಕುಳ ಮತ್ತು ದಮನಕಾರಿ ಹಿಂಸೆಗಳನ್ನು ಎದುರಿಸುತ್ತಿರುವ ರೊಹಿಂಗ್ಯನ್ ಮುಸ್ಲಿಂ ನಿರಾಶ್ರಿತರ ಆಗಮನವನ್ನು ಎದುರಿಸುತ್ತಿದೆ. ಅವರ ಬಳಿ ವಿಶ್ವಸಂಸ್ಥೆಯ ಮಾನ್ಯತೆ ಪಡೆದ ನಿರಾಶ್ರಿತ ಕಾರ್ಡು ಇದ್ದರೂ ಭಾರತ ಸರಕಾರ ಅವರನ್ನು ದೇಶದಿಂದ ಹೊರದಬ್ಬಲು ಪ್ರಯತ್ನಿಸುತ್ತಿದೆ. ಈ ಕ್ರಮವನ್ನು ಈ ಮಸೂದೆ ಕಾನೂನುಬದ್ಧಗೊಳಿಸುತ್ತದೆ.
ಮತ, ಧರ್ಮದ ಮೇಲೆ ದೇಶವನ್ನು ವಿಭಜಿಸುವುದನ್ನು ಎಸ್ಎಫ್ಐ-ಡಿವೈಎಫ್ಐ ಸಂಘಟನೆಗಳು ಒಪ್ಪುವುದಿಲ್ಲ. ಅಲ್ಲದೇ ಪಾರ್ಲಿಮೆಂಟು ಮಂಜೂರು ಮಾಡಿದ ಈ ಭೀಕರ ಮಸೂದೆಯನ್ನು ತಿರಸ್ಕರಿಸಲು ಹಾಗೂ ಅದನ್ನು ವಾಪಸು ಪಡೆಯಬೇಕೆಂದು ಒತ್ತಾಯಿಸುತ್ತವೆ.
ಈ ಸಂದರ್ಭದಲ್ಲಿ SFI ಜಿಲ್ಲಾ ಕಾರ್ಯದರ್ಶಿ ರಮೇಶ್ ವೀರಾಪುರ್ ಮಾತನಾಡಿದರು.
ಪ್ರತಿಭಟನೆಯಲ್ಲಿ ಡಿವೈಎಫ್ಐ ರಾಜ್ಯ ಸಮಿತಿ ಸದಸ್ಯ ಶಿವಪ್ಪ ಬ್ಯಾಗವಾಟ್, ಎಸ್ಎಫ್ಐ ಜಿಲ್ಲಾ ಸಮಿತಿ ಸದಸ್ಯ ತಿಪ್ಪಣ್ಣ ನಿಲೋಗಲ್, ಬಸವಂತ ಹಿರೆ ಕಡಬೂರ್, ಎಸ್ಎಫ್ಐ ತಾಲೂಕ ಮುಖಂಡರಾದ ಅಮರೇಗೌಡ, ಬಸಲಿಂಗ, ಮುತ್ತುರಾಜ್, ನಾಗರಾಜ್, ವೆಂಕಟೇಶ್, ಯಮನೂರ್, ಅಮರೇಶ್ ನಾಯಕ್, ಮಲ್ಲಪ್ಪ, ಬಸವರಾಜ, ಅಮರಯ್ಯ, ಅವಿನಾಶ್, ನಾಗರಾಜ್ ಅಂಚಿನಾಳ್, ಡಿವೈಎಫ್ಐ ತಾಲೂಕ ಮುಖಂಡರಾದ ಬಸವರಾಜ ಸಿರೋಟಿ, ಕಂಟೆಪ್ಪ, ಕೆ ಪಿ ಆರ್ ಎಸ್ ಮುಖಂಡರಾದ ಸದ್ದಾಮ್ ಹುಸೇನ್, ಮಹಮ್ಮದ್ ಸಾಬ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980436243

ದಿನದ ಸುದ್ದಿ
ನಟ ಮನದೀಪ್ ರಾಯ್ ನಿಧನ

ಸುದ್ದಿದಿನ ಡೆಸ್ಕ್ : ಹಿರಿಯ ಚಿತ್ರನಟ ಮನದೀಪ್ ರಾಯ್ (74 ವರ್ಷ) ಇಂದು ಬೆಳಗಿನ ಜಾವ ಅಗಲಿದ್ದಾರೆ.
ಕೆಲ ದಿನಗಳ ಹಿಂದೆ ಹೃದಯಾಘಾತಕ್ಕೀಡಾಗಿದ್ದ ಅವರು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಮನದೀಪ್ ರಾಯ್ ಹವ್ಯಾಸಿ ರಂಗಭೂಮಿ ಹಿನ್ನೆಲೆಯ ಕಲಾವಿದ. ನಟ – ನಿರ್ದೇಶಕ ಶಂಕರನಾಗ್ ಅವರ ಆತ್ಮೀಯ ಒಡನಾಡಿ. ಪೋಷಕ ಪಾತ್ರ, ಹಾಸ್ಯ ನಟರಾಗಿ 500ಕ್ಕೂ ಹೆಚ್ಚು ಸಿನಿಮಾಗಳು ಹಾಗೂ ಕಿರುತೆರೆ ಸರಣಿಗಳಲ್ಲಿ ಅಭಿನಯಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕರ್ನಾಟಕದಲ್ಲಿ ಈ ವರ್ಷ ಜನಪರ ರಾಜ್ಯ ಬಜೆಟ್ ಮಂಡನೆ ; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಸುದ್ದಿದಿನ, ಹಾವೇರಿ : ಕರ್ನಾಟಕದಲ್ಲಿ ಮುಂದಿನ ತಿಂಗಳು ಮಂಡಿಸಲಾಗುತ್ತಿರುವ ಈ ವರ್ಷದ ರಾಜ್ಯ ಬಜೆಟ್ ರೈತರು, ದೀನ ದಲಿತರು, ಯುವಕರು, ಮಹಿಳೆಯರು, ದುಡಿಯುವ ವರ್ಗ ಮತ್ತು ಜನಪರವಾಗಿರುತ್ತದೆ ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹಾವೇರಿ ಜಿಲ್ಲೆ ಶಿಗ್ಗಾಂವ್ನಲ್ಲಿ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ದುಡಿಮೆಗೆ ಯೋಗ್ಯ ಬೆಲೆ ಸಿಗುವ ರೀತಿಯಲ್ಲಿ ನಮ್ಮ ಕಾರ್ಯಕ್ರಮಗಳು ಇರುತ್ತವೆ ಎಂದರು.
ಕರ್ನಾಟಕ ರಾಜ್ಯದ ಆರ್ಥಿಕ ಅಭಿವೃದ್ಧಿಯಲ್ಲಿ ನಾವು ವೇಗವನ್ನು ಕಂಡಿದ್ದೇವೆ. ಕಳೆದ ವರ್ಷ ನಾನು ಅಧಿಕಾರ ವಹಿಸಿಕೊಂಡಾಗ 5 ಸಾವಿರ ಕೋಟಿ ರೂಪಾಯಿ ರಾಜ್ಯದ ಬೊಕ್ಕಸಕ್ಕೆ ನಮ್ಮ ನಿರ್ಧಿಷ್ಟ ಗುರಿಗೆ ಕೊರತೆಯಿತ್ತು. ಅದನ್ನು ನಾವು 5 ಸಾವಿರ ಕೋಟಿ ತುಂಬುವುದಲ್ಲದೇ, 13 ಸಾವಿರ ಕೋಟಿ ಅಧಿಕವಾಗಿ ಸಂಗ್ರಹ ಮಾಡಿದ್ದೇವೆ. ಈ ವರ್ಷವೂ ಕೂಡ ನಮ್ಮ ಹಣಕಾಸಿನ ಸಂಗ್ರಹ ಉತ್ತಮವಾಗಿದೆ ಎಂದು ಕರ್ನಾಟಕದ ಮುಖ್ಯಮಂತ್ರಿ ಹೇಳಿದರು.
ಕೋವಿಡ್ ನಂತರದಲ್ಲಿ ಆರ್ಥಿಕ ಸುಧಾರಣೆ ಆಗುತ್ತಿರುವ ಸಂದರ್ಭದಲ್ಲಿ ಕೆಳಹಂತದ ಜನಸಮುದಾಯಕ್ಕೆ ಇನ್ನಷ್ಟು ಸಹಾಯ ಮಾಡಿ, ಅವರನ್ನು ಕೂಡ ಮುಖ್ಯ ವಾಹಿನಿಗೆ ಬರಬೇಕು ಎನ್ನುವ ನಿಟ್ಟಿನಲ್ಲಿ ನಾವು ಕಾರ್ಯಕ್ರಮ ರೂಪಿಸುತ್ತಿದ್ದೇವೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಸಂಸತ್ತಿನ ಬಜೆಟ್ ಅಧಿವೇಶನದ ಹಿನ್ನೆಲೆ ; ಇದೇ 30ರಂದು ಸರ್ವಪಕ್ಷಗಳ ಸಭೆ

ಸುದ್ದಿದಿನ ಡೆಸ್ಕ್ : ಸಂಸತ್ತಿನ ಮುಂಬರುವ ಬಜೆಟ್ ಅಧಿವೇಶನದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇದೇ 30ರಂದು ಸರ್ವಪಕ್ಷಗಳ ಸಭೆಯನ್ನು ಕರೆದಿದೆ. ಸಂಸತ್ ಭವನದ ಸಂಕೀರ್ಣದಲ್ಲಿ ಸೋಮವಾರ ಮಧ್ಯಾಹ್ನ 12 ಗಂಟೆಗೆ ಸಭೆ ನಡೆಯಲಿದೆ.
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ, ಕೇಂದ್ರ ಸಚಿವರು ಮತ್ತು ಸಂಸತ್ತಿನ ಎರಡೂ ಸದನಗಳನ್ನು ಪ್ರತಿನಿಧಿಸುವ ಸದನ ನಾಯಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಸಭೆಯಲ್ಲಿ ಸರ್ಕಾರ ಸಂಸತ್ತಿನ ಉಭಯ ಸದನಗಳ ಸುಗಮ ಕಲಾಪಕ್ಕೆ ಎಲ್ಲ ರಾಜಕೀಯ ಪಕ್ಷಗಳ ಸಹಕಾರವನ್ನು ಕೋರಲಿದೆ. ಸಂಸತ್ತಿನ ಬಜೆಟ್ ಅಧಿವೇಶನ ಇದೇ 31ರಿಂದ ಆರಂಭವಾಗಲಿದೆ. ಮೊದಲ ದಿನ ಬೆಳಿಗ್ಗೆ 11 ಗಂಟೆಗೆ ಸೆಂಟ್ರಲ್ ಹಾಲ್ ನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡುವರು.
ಅದೇ ದಿನವೇ ಆರ್ಥಿಕ ಸಮೀಕ್ಷೆಯನ್ನೂ ಸಹ ಮಂಡಿಸಲಾಗುವುದು. ಫೆಬ್ರವರಿ 1ರಂದು 2023-24ನೇ ಸಾಲಿನ ಕೇಂದ್ರ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆ ಮಾಡಲಿದ್ದಾರೆ.
ಬಜೆಟ್ ಅಧಿವೇಶನ ಏಪ್ರಿಲ್ 6ವರೆಗೆ ನಡೆಯಲಿದ್ದು, ಸುಮಾರು 66 ದಿನಗಳಲ್ಲಿ 27 ಕಲಾಪಗಳು ನಡೆಯಲಿದೆ. ಮೊದಲ ಅವಧಿಯಲ್ಲಿ ಅಧಿವೇಶನ ಫೆಬ್ರವರಿ 13ರವರೆಗೆ ನಡೆಯಲಿದೆ. ಫೆಬ್ರವರಿ 14ರಿಂದ ಮಾರ್ಚ್ 12ರವರೆಗೆ ಅಧಿವೇಶನಕ್ಕೆ ಬಿಡುವು ಇರಲಿದೆ ಆನಂತರ ಮಾರ್ಚ್ 13ರಿಂದ ಆರಂಭವಾಗುವ ಅಧಿವೇಶನ ಏಪ್ರಿಲ್ 6ಕ್ಕೆ ಕೊನೆಗೊಳ್ಳಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980336243
