Connect with us

ದಿನದ ಸುದ್ದಿ

ಬೆಂಬಲ ಬೆಲೆಯಲ್ಲಿ ಭತ್ತ, ರಾಗಿ ಮತ್ತು ಬಿಳಿಜೋಳ ಖರೀದಿ :‌ಡಿ 26 ರಿಂದ ಖರೀದಿ ಕೇಂದ್ರ ಆರಂಭ

Published

on

ಸುದ್ದಿದಿನ,ದಾವಣಗೆರೆ : ಕೇಂದ್ರ ಸರ್ಕಾರ ನಿಗದಿಪಡಿಸಿರುವ ಬೆಂಬಲ ಬೆಲೆ ಯೋಜನೆಯಡಿ ಜಿಲ್ಲೆಯ ರೈತರುಗಳಿಂದ ರಾಗಿ ಮತ್ತು ಭತ್ತವನ್ನು ಖರೀದಿಸಲು ಖರೀದಿ ಕೇಂದ್ರಗಳನ್ನು ಆರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು.

ಜಿಲ್ಲಾಡಳಿತ ಭವನದಲ್ಲಿ ಡಿ.20 ರಂದು ನಡೆದ ಟಾಸ್ಕ್‍ಪೋರ್ಸ್ ಸಮಿತಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರವು ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ ಸಾಮಾನ್ಯ ಭತ್ತ ರೂ.1815, ಎ ಗ್ರೇಡ್ ಭತ್ತ ರೂ.1835 ಹಾಗೂ ರಾಗಿ ರೂ.3150 ನಿಗದಿಪಡಿಸಿದ್ದು ಒಬ್ಬ ರೈತ 40 ಕ್ವಿಂಟಾಲ್‍ವರೆಗೆ ಭತ್ತವನ್ನು ಹಾಗೂ 75 ಕ್ವಿಂಟಾಲ್‍ವರೆಗೆ ರಾಗಿಯನ್ನು ಖರೀದಿ ಕೇಂದ್ರಕ್ಕೆ ತರಬಹುದು. ಇಲಾಖೆಯ ಅಧಿಕಾರಿಗಳು ಈ ಕೃಷಿ ಉತ್ಪನ್ನಗಳ ಗುಣಮಟ್ಟವನ್ನು ಪರೀಕ್ಷಿಸುವರು.ಕೃಷಿ ಉತ್ಪನ್ನಗಳನ್ನೂ ಖರೀದಿ ಕೇಂದ್ರಕ್ಕೆ ನೀಡಿದ 3 ದಿನಗಳ ಒಳಗೆ ರೈತರ ಖಾತೆಗೆ ನೇರವಾಗಿ ಹಣ ಪಾವತಿಸಲಾಗುವುದು.

ರೈತರು ಪಹಣಿಯೊಂದಿಗೆ ಖರೀದಿ ಕೇಂದ್ರಗಳಲ್ಲಿ ತಮ್ಮ ಹೆಸರನ್ನು ಡಿ.26 ರಿಂದ 2020 ರ ಜನವರಿ 10 ರೊಳಗೆ ನೋಂದಾಯಿಸಿ ಕೊಳ್ಳಬಹುದಾಗಿದ್ದು, ರೈತರ ಬಯೋಮಿಟ್ರಿಕ್ ತೆಗೆದುಕೊಳ್ಳಲಾಗುವುದು. ಭತ್ತ ಖರೀದಿಗೆ ಸಂಬಂಧಿಸಿದಂತೆ ಜಿಲ್ಲೆಯ ಹೊನ್ನಾಳಿ, ಹರಿಹರ ಹಾಗೂ ದಾವಣಗೆರೆ ತಾಲ್ಲೂಕುಗಳಲ್ಲಿ ಭತ್ತ ಖರೀದಿ ಕೇಂದ್ರಗಳನ್ನು ಆರಂಭಿಸುತ್ತಿದ್ದು, ರೈತರು ಮಾದರಿ(ಸ್ಯಾಂಪಲ್)ಗಳನ್ನು ಮಾತ್ರ ಈ ಕೇಂದ್ರಗಳಲ್ಲಿ ನೀಡಬೇಕು.

ಇಲಾಖೆಯಲ್ಲಿ ನೋಂದಾಯಿಸಿಕೊಂಡಿರುವ ಹಲ್ಲಿಂಗ್ ವ್ಯವಸ್ಥೆ ಇರುವ ಅಕ್ಕಿ ಗಿರಣಿ ಮಾಲೀಕರು ನೇರವಾಗಿ ರೈತರ ಮನೆಗಳಿಗೆ ಹೋಗಿ ಭತ್ತ ಖರೀದಿಸುತ್ತಾರೆ ಎಂದ ಅವರು ಅಕ್ಕಿ ಗಿರಣಿ ಮಾಲೀಕರು ಡಿ.30 ರೊಳಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕೆಂದರು.

ರಾಗಿ ಖರೀದಿ ಕೇಂದ್ರಗಳನ್ನು ಜಗಳೂರು, ಹೊನ್ನಾಳಿ, ಹರಿಹರ ಮತ್ತು ದಾವಣಗೆರೆ ತಾಲ್ಲೂಕುಗಳ ಎಪಿಎಂಸಿ ಆವರಣದಲ್ಲಿ ಆರಂಭಿಸಲಾಗುವುದು. ಈ ಬಾರಿ 13925 ಟನ್ ಸಂಗ್ರಹ ನಿರೀಕ್ಷೆ ಇದ್ದು, ಕಳೆದ ಬಾರಿ 14060 ಟನ್ ಖರೀದಿ ಮಾಡಲಾಗಿತ್ತು. ಇಲ್ಲಿ ಖರೀದಿಸುವ ರಾಗಿಯನ್ನು ಪಡಿತರ ವ್ಯವಸ್ಥೆ ಮೂಲಕ ವಿತರಣೆ ಮಾಡಲಾಗುವುದು. ಹಾಗೂ ಖರೀದಿಸಿ ರಾಗಿ ಜಿಲ್ಲೆಯಲ್ಲಿರುವ ವಿವಿಧ ಉಗ್ರಾಣಗಳಲ್ಲಿ ಸಂಗ್ರಹಿಸಿ ಇಡಲಾಗುವುದು.

ಖರೀದಿ ಕೇಂದ್ರಗಳಲ್ಲಿ ತೂಕ, ಗುಣಮಟ್ಟದಲ್ಲಿ ರೈತರಿಗೆ ಯಾವುದೇ ಮೋಸವಾಗಬಾರದು. ಹಾಗೂ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡಬೇಕು. ಸಿಬ್ಬಂದಿಗಳ ಅವಶ್ಯಕತೆ ಇದ್ದಲ್ಲಿ ರೇಷ್ಮೆ ಇಲಾಖೆಯ ಸಿಬ್ಬಂದಿಗಳನ್ನು ಬಳಸಿಕೊಳ್ಳಬಹುದು ಎಂದರು.

ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕ ಮಂಟೇಸ್ವಾಮಿ ಮಾತನಾಡಿ, ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ರೈತರು ಉತ್ತಮ ಗುಣಮಟ್ಟದ ಭತ್ತ ಮತ್ತು ರಾಗಿಯನ್ನು ಜಿಲ್ಲೆಯ ಯಾವುದೇ ಖರೀದಿ ಕೇಂದ್ರಗಳಿಗೆ ನೀಡಬಹುದಾಗಿದೆ. ರಾಗಿಯನ್ನು ರಾಜ್ಯ ಉಗ್ರಾಣ ನಿಗಮದವರು ಸಂಗ್ರಹಿಸಿ ಇಡಲಿದ್ದಾರೆ. ಸುಮಾರು 31000 ಟನ್‍ಗಳಷ್ಟ ಧಾನ್ಯ ಸಂಗ್ರಹಿಸುವ ಉಗ್ರಾಣಗಳು ಜಿಲ್ಲೆಯಲ್ಲಿ ಇವೆ ಎಂದು ಮಾಹಿತಿ ನೀಡಿದರು.

ಅರ್ಹ ರೈತರಿಗೆ ಇದರಿಂದ ಪ್ರಯೋಜನವಾಗಬೇಕು. ದಲ್ಲಾಳಿ ಹಾಗೂ ಮಧ್ಯವರ್ತಿಗಳಿಂದ ರೈತರಿಗೆ ಯಾವುದೇ ಅನ್ಯಾಯವಾಗದಂತೆ ಅಧಿಕಾರಿಗಳು ಕ್ರಮ ವಹಿಸಬೇಕು. ಒಂದು ವೇಳೆ ಅಂತಹ ಘಟನೆಗಳು ಕಂಡು ಬಂದಲ್ಲಿ ಸಹಿಸುವುದಿಲ್ಲ. ನಾನೇ ಮಾರುವೇಷದಲ್ಲಿ ಬಂದು ಖರೀದಿ ಕೇಂದ್ರಗಳ ಭೇಟಿ ನೀಡಿ ಪರಿಶೀಸುತ್ತೇನೆ ಹಾಗೂ ಖರೀದಿ ಕೇಂದ್ರದ ಪ್ರಕ್ರಿಯೆ ಪರೀಕ್ಷಿಸಲು ನನ್ನ ವತಿಯಿಂದಲೇ ಮಾರುವೇಷದಲ್ಲಿ ವ್ಯಕ್ತಿಗಳನ್ನು ಕಳುಹಿಸುತ್ತೇನೆ. ಹಾಗಾಗಿ ಎಚ್ಚರಿಕೆಯಿಂದ ಇರಬೇಕು ಎಂದರು.

ಸರ್ಕಾರದ ಬೊಕ್ಕಸಕ್ಕೆ ಒಂದು ರೂಪಾಯಿ ಕೂಡ ನಷ್ಟವಾಗದಂತೆ ಕಾರ್ಯ ನಿರ್ವಹಿಸಬೇಕು. ಖರೀದಿ ಕೇಂದ್ರದ ಉಸ್ತುವಾರಿ ನೋಡಿಕೊಳ್ಳಲು ಉಪವಿಭಾಗಾಧಿಕಾರಿಗಳನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಲಾಗುವುದು. ಇವರು ಪ್ರತಿ ಎರಡು ದಿನಗಳಿಗೆ ಒಮ್ಮೆ ಈ ಕೇಂದ್ರಗಳಿಗೆ ಭೇಟಿ ನೀಡಿ ಅಲ್ಲಿಯ ವ್ಯವಸ್ಥೆ ಬಗ್ಗೆ ಪರಿಶೀಲಿಸಬೇಕು ಎಂದು ಹೇಳಿದೆರು.

ಸಭೆಯಲ್ಲಿ ಎಪಿಎಂಸಿ ಕಾರ್ಯದರ್ಶಿ ಪ್ರಭು, ಕೆಎಫ್‍ಸಿಎಸ್‍ಸಿ ರಾಜ್ಯ ವ್ಯವಸ್ಥಾಪಕ ಜವಳಿ, ಕೆಎಫ್‍ಸಿಎಸ್‍ಸಿ ಜಿಲ್ಲಾ ವ್ಯವಸ್ಥಾಪಕ ಮುನೀರ್ ಬಾಷಾ, ಎಪಿಎಂಸಿ ಸಹಾಯಕ ನಿರ್ದೇಶಕರ ಸೋಮಶೇಖರ್, ಕೃಷಿ ಅಧಿಕಾರಿಗಳು, ಎಲ್ಲ ತಾಲ್ಲೂಕುಗಳ ಎಪಿಎಂಸಿ ಕಾರ್ಯದರ್ಶಿಗಳು, ಇತರೆ ಅಧಿಕಾರಿಗಳು ಹಾಜರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ನಟ ಮನದೀಪ್‌ ರಾಯ್‌ ನಿಧನ

Published

on

ಸುದ್ದಿದಿನ ಡೆಸ್ಕ್ : ಹಿರಿಯ ಚಿತ್ರನಟ ಮನದೀಪ್‌ ರಾಯ್‌ (74 ವರ್ಷ) ಇಂದು ಬೆಳಗಿನ ಜಾವ ಅಗಲಿದ್ದಾರೆ.

ಕೆಲ ದಿನಗಳ ಹಿಂದೆ ಹೃದಯಾಘಾತಕ್ಕೀಡಾಗಿದ್ದ ಅವರು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಮನದೀಪ್‌ ರಾಯ್‌ ಹವ್ಯಾಸಿ ರಂಗಭೂಮಿ ಹಿನ್ನೆಲೆಯ ಕಲಾವಿದ. ನಟ – ನಿರ್ದೇಶಕ ಶಂಕರನಾಗ್‌ ಅವರ ಆತ್ಮೀಯ ಒಡನಾಡಿ. ಪೋಷಕ ಪಾತ್ರ, ಹಾಸ್ಯ ನಟರಾಗಿ 500ಕ್ಕೂ ಹೆಚ್ಚು ಸಿನಿಮಾಗಳು ಹಾಗೂ ಕಿರುತೆರೆ ಸರಣಿಗಳಲ್ಲಿ ಅಭಿನಯಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಕರ್ನಾಟಕದಲ್ಲಿ ಈ ವರ್ಷ ಜನಪರ ರಾಜ್ಯ ಬಜೆಟ್ ಮಂಡನೆ ; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

Published

on

ಸುದ್ದಿದಿನ, ಹಾವೇರಿ : ಕರ್ನಾಟಕದಲ್ಲಿ ಮುಂದಿನ ತಿಂಗಳು ಮಂಡಿಸಲಾಗುತ್ತಿರುವ ಈ ವರ್ಷದ ರಾಜ್ಯ ಬಜೆಟ್ ರೈತರು, ದೀನ ದಲಿತರು, ಯುವಕರು, ಮಹಿಳೆಯರು, ದುಡಿಯುವ ವರ್ಗ ಮತ್ತು ಜನಪರವಾಗಿರುತ್ತದೆ ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಹಾವೇರಿ ಜಿಲ್ಲೆ ಶಿಗ್ಗಾಂವ್‌ನಲ್ಲಿ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ದುಡಿಮೆಗೆ ಯೋಗ್ಯ ಬೆಲೆ ಸಿಗುವ ರೀತಿಯಲ್ಲಿ ನಮ್ಮ ಕಾರ್ಯಕ್ರಮಗಳು ಇರುತ್ತವೆ ಎಂದರು.

ಕರ್ನಾಟಕ ರಾಜ್ಯದ ಆರ್ಥಿಕ ಅಭಿವೃದ್ಧಿಯಲ್ಲಿ ನಾವು ವೇಗವನ್ನು ಕಂಡಿದ್ದೇವೆ. ಕಳೆದ ವರ್ಷ ನಾನು ಅಧಿಕಾರ ವಹಿಸಿಕೊಂಡಾಗ 5 ಸಾವಿರ ಕೋಟಿ ರೂಪಾಯಿ ರಾಜ್ಯದ ಬೊಕ್ಕಸಕ್ಕೆ ನಮ್ಮ ನಿರ್ಧಿಷ್ಟ ಗುರಿಗೆ ಕೊರತೆಯಿತ್ತು. ಅದನ್ನು ನಾವು 5 ಸಾವಿರ ಕೋಟಿ ತುಂಬುವುದಲ್ಲದೇ, 13 ಸಾವಿರ ಕೋಟಿ ಅಧಿಕವಾಗಿ ಸಂಗ್ರಹ ಮಾಡಿದ್ದೇವೆ. ಈ ವರ್ಷವೂ ಕೂಡ ನಮ್ಮ ಹಣಕಾಸಿನ ಸಂಗ್ರಹ ಉತ್ತಮವಾಗಿದೆ ಎಂದು ಕರ್ನಾಟಕದ ಮುಖ್ಯಮಂತ್ರಿ ಹೇಳಿದರು.

ಕೋವಿಡ್ ನಂತರದಲ್ಲಿ ಆರ್ಥಿಕ ಸುಧಾರಣೆ ಆಗುತ್ತಿರುವ ಸಂದರ್ಭದಲ್ಲಿ ಕೆಳಹಂತದ ಜನಸಮುದಾಯಕ್ಕೆ ಇನ್ನಷ್ಟು ಸಹಾಯ ಮಾಡಿ, ಅವರನ್ನು ಕೂಡ ಮುಖ್ಯ ವಾಹಿನಿಗೆ ಬರಬೇಕು ಎನ್ನುವ ನಿಟ್ಟಿನಲ್ಲಿ ನಾವು ಕಾರ್ಯಕ್ರಮ ರೂಪಿಸುತ್ತಿದ್ದೇವೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಸಂಸತ್ತಿನ ಬಜೆಟ್ ಅಧಿವೇಶನದ ಹಿನ್ನೆಲೆ ; ಇದೇ 30ರಂದು ಸರ್ವಪಕ್ಷಗಳ ಸಭೆ

Published

on

ಸುದ್ದಿದಿನ ಡೆಸ್ಕ್ : ಸಂಸತ್ತಿನ ಮುಂಬರುವ ಬಜೆಟ್ ಅಧಿವೇಶನದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇದೇ 30ರಂದು ಸರ್ವಪಕ್ಷಗಳ ಸಭೆಯನ್ನು ಕರೆದಿದೆ. ಸಂಸತ್ ಭವನದ ಸಂಕೀರ್ಣದಲ್ಲಿ ಸೋಮವಾರ ಮಧ್ಯಾಹ್ನ 12 ಗಂಟೆಗೆ ಸಭೆ ನಡೆಯಲಿದೆ.

ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ, ಕೇಂದ್ರ ಸಚಿವರು ಮತ್ತು ಸಂಸತ್ತಿನ ಎರಡೂ ಸದನಗಳನ್ನು ಪ್ರತಿನಿಧಿಸುವ ಸದನ ನಾಯಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಸಭೆಯಲ್ಲಿ ಸರ್ಕಾರ ಸಂಸತ್ತಿನ ಉಭಯ ಸದನಗಳ ಸುಗಮ ಕಲಾಪಕ್ಕೆ ಎಲ್ಲ ರಾಜಕೀಯ ಪಕ್ಷಗಳ ಸಹಕಾರವನ್ನು ಕೋರಲಿದೆ. ಸಂಸತ್ತಿನ ಬಜೆಟ್ ಅಧಿವೇಶನ ಇದೇ 31ರಿಂದ ಆರಂಭವಾಗಲಿದೆ. ಮೊದಲ ದಿನ ಬೆಳಿಗ್ಗೆ 11 ಗಂಟೆಗೆ ಸೆಂಟ್ರಲ್ ಹಾಲ್ ನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡುವರು.

ಅದೇ ದಿನವೇ ಆರ್ಥಿಕ ಸಮೀಕ್ಷೆಯನ್ನೂ ಸಹ ಮಂಡಿಸಲಾಗುವುದು. ಫೆಬ್ರವರಿ 1ರಂದು 2023-24ನೇ ಸಾಲಿನ ಕೇಂದ್ರ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆ ಮಾಡಲಿದ್ದಾರೆ.

ಬಜೆಟ್ ಅಧಿವೇಶನ ಏಪ್ರಿಲ್ 6ವರೆಗೆ ನಡೆಯಲಿದ್ದು, ಸುಮಾರು 66 ದಿನಗಳಲ್ಲಿ 27 ಕಲಾಪಗಳು ನಡೆಯಲಿದೆ. ಮೊದಲ ಅವಧಿಯಲ್ಲಿ ಅಧಿವೇಶನ ಫೆಬ್ರವರಿ 13ರವರೆಗೆ ನಡೆಯಲಿದೆ. ಫೆಬ್ರವರಿ 14ರಿಂದ ಮಾರ್ಚ್ 12ರವರೆಗೆ ಅಧಿವೇಶನಕ್ಕೆ ಬಿಡುವು ಇರಲಿದೆ ಆನಂತರ ಮಾರ್ಚ್ 13ರಿಂದ ಆರಂಭವಾಗುವ ಅಧಿವೇಶನ ಏಪ್ರಿಲ್ 6ಕ್ಕೆ ಕೊನೆಗೊಳ್ಳಲಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980336243

Continue Reading

Trending