ದಿನದ ಸುದ್ದಿ
ಡಾ. ಚಿದಾನಂದ ಮೂರ್ತಿ ಅವರಿಗೆ ಅಂತಿಮ ನಮನಗಳು

- ಡಾ. ಪುರುಷೋತ್ತಮ ಬಿಳಿಮಲೆ
ಸ್ವಾತಂತ್ರ್ಯೋತ್ತರ ಕಾಲದ ಕನ್ನಡ ಸಂಶೋಧನೆಗೆ ಭದ್ರವಾದ ತಳಹದಿ ಹಾಕಿಕೊಟ್ಟವರಲ್ಲಿ ಡಾ. ಚಿದಾನಂದ ಮೂರ್ತಿಯವರು (1931 – 2020) ಕೂಡಾ ಒಬ್ಬರು. ಪಾಶ್ಚಾತ್ಯ ವಿದ್ವಾಂಸರು ಮಾಡಿದ ಕೆಲಸಗಳು ಸಂಶೋಧನೆಯ ಮೂಲ ಆಕರಗಳಾಗಿ ಸಹಕರಿಸುತ್ತಲಿರುವ ಸಂದರ್ಭದಲ್ಲಿ ಅವರು ನಿಘಂಟು ಶಾಸ್ತ್ರ, ಶಾಸನ ಶಾಸ್ತ್ರ, ಹಸ್ತ ಪ್ರತಿ ಸಂಪಾದನೆ, ಗ್ರಂಥ ಸಂಪಾದನೆ, ಸಂಸ್ಕೃತಿ ಸಂಶೋಧನೆ ಮತ್ತು ಜಾನಪದ ಕೆಲಸಗಳ ಮೂಲಕ ಕನ್ನಡ ಸಂಶೋಧನೆಯ ವಸ್ತು ಮತ್ತು ವಿಧಾನಗಳನ್ನು ಪುನಾರೂಪಿಸಿದರು.
ತೀ. ನಂ. ಶೀಕಂಠಯ್ಯನವರ ಮಾರ್ಗದರ್ಶನದಲ್ಲಿ1964 ರಲ್ಲಿ ಅವರು ಪಿಎಚ್.ಡಿ ಪದವಿಗಾಗಿ ಸಿದ್ಧ ಪಡಿಸಿದ್ದ ‘ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ’ ಕೃತಿಯು ನಮಗೆಲ್ಲಾ ಪ್ರೇರಣೆ ನೀಡಿದ ಅತ್ಯುತ್ತಮ ಸಂಶೋಧನಾ ಗ್ರಂಥ. ಉಳಿದಂತೆ, ಅವರು ಬರೆದ ಭಾಷಾ ವಿಜ್ಞಾನದ ಮೂಲತತ್ವಗಳು, ವಾಗಾರ್ಥ, ಸಂಶೋಧನ ತರಂಗ ಒಂದು ಮತ್ತು ಎರಡು, ಮಧ್ಯಕಾಲೀನ ಕನ್ನಡ ಸಾಹಿತ್ಯ ಮತ್ತು ಅಸ್ಪ್ರಶ್ಯತೆ, ಹೊಸತು ಹೊಸತು, ಶೂನ್ಯ ಸಂಪಾದನೆಯನ್ನು ಕುರಿತು, ವಚನ ಸಾಹಿತ್ಯ, ಗ್ರಾಮೀಣ, ಪಗರಣ ಮತ್ತು ಇತರ ಸಂಪ್ರಯದಾಯಗಳು ಕೃತಿಗಳನ್ನು ನಾನು ಇವತ್ತಿಗೂ ಆಗಾಗ ಪರಿಶೀಲಿಸುತ್ತಿರುತ್ತೇನೆ.
1988ರಲ್ಲಿ ಅವರು ‘ಕನ್ನಡ ಶಕ್ತಿಕೇಂದ್ರವನ್ನು’ ಸ್ಥಾಪಿಸಿದ ಮೇಲೆ ಅವರ ಸಂಶೋಧನೆಯ ಪ್ರಖರತೆ ಕಳೆಗುಂದಿತು. ಆದರೆ ಕಾಲ್ನಡಿಗೆಯ ಮೂಲಕ ಬೆಂಗಳೂರಿನಿಂದ ಹಂಪಿಗೆ ಪ್ರಯಾಣ ಮಾಡಿ, ಕನ್ನಡ ವಿಶ್ವವಿದ್ಯಾಲಯದ ಸ್ಥಾಪನೆಗೆ ಕಾರಣರಾದರು. ಟಿಪ್ಪುವಿನ ವಿಷಯದಲ್ಲಂತೂ ಪೂರ್ಣ ಕೋಮುವಾದಿಯಾದರು. ನಾವೆಲ್ಲ ಚಿದಾನಂದಮುರ್ತೀ ಅವರ ಪುಸ್ತಕಗಳನ್ನು ಕೈಯಲ್ಲಿ ಹಿಡಿದುಕೊಂಡೇ ಕಲಬುರ್ಗಿ ಅವರ ಕಡೆಗೆ ವಾಲಿಕೊಂಡೆವು.
ನಾನು ಕನ್ನಡ ವಿವಿಯಲ್ಲಿದ್ದಾಗ ಅವರೊಮ್ಮೆ ಕನ್ನಡದ ಉಳಿವಿಗಾಗಿ ತುಂಗಾಭದ್ರ ನದಿಗೆ ಹಾರಿದ್ದರು. ನದಿಯಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ ಅವರನ್ನು ಯಾರೋ ಮೇಲೆತ್ತಿ ಹಾಕಿದರು. ನಡು ರಾತ್ರಿ ನಾನು ಮತ್ತು ಕೆ ವಿ ನಾರಾಯಣ ಅವರನ್ನು ಹೊಸಪೇಟೆಗೆ ತಂದು ಆರೈಕೆ ಮಾಡಿದೆವು.
ಈಚಿಗೆ ಅವರಿಗೆ ರಾಷ್ಟ್ರಪತಿಗಳ ಪ್ರಶಸ್ತಿ ಬಂದಿತ್ತು. ‘ ಬಿಳಿಮಲೆ, ನೀವು ಅಲ್ಲಿದ್ದೀರಲ್ವಾ? ಬರ್ತೇನೆ’ ಎಂದಿದ್ದರು. ಎರಡು ದಿನ ಅವರ ಜೊತೆ ಇದ್ದೆ. ಅದಕ್ಕೂ ಹಿಂದೆ ಒಮ್ಮೆ ಬಂದಿದ್ದಾಗ, ಕೆಳದಿ ನೃಪ ವಿಜಯದಲ್ಲಿ ಉಲ್ಲೇಖಿತವಾಗಿದ್ದ ಚಾವಲ್ ಮಂಡಿಯನ್ನು ಅವರು ದೆಹಲಿಯ ಕೆಂಪು ಕೋಟೆಯ ಬಳಿ ಪತ್ತೆ ಹಚ್ಚಿದ್ದರು. ನಾನು ಸಿದ್ಧವೇಶದ ಬಗ್ಗೆ ಮತ್ತು ಕುಮಾರರಾಮನ ಬಗ್ಗೆ ಬರೆದ ಲೇಖನಗಳನ್ನು ಅವರು ಬಹಳ ಮೆಚ್ಚಿಕೊಂಡಿದ್ದರು.
ಡಿ ಎಲ್ ನರಸಿಂಹಾಚಾರ್, ಆರ್ ನರಸಿಂಹಾಚಾರ್, ಕೆ ಬಿ ಪಾಠಕ್, ಪಿ ಬಿ ದೇಸಾಯಿ, ಕೆ ಜಿ ಕುಂದಣಗಾರ, ಟಿ ಎಸ್ ವೆಂಕಣಯ್ಯ, ಮಂಜೇಶ್ವರ ಗೋವಿಂದ ಪೈ, ಮುಳಿಯ ತಿಮ್ಮಪ್ಪಯ್ಯ, ಸೇಡಿಯಾಪು ಕೃಷ್ಣ ಭಟ್, ಎಲ್ ಬಸವರಾಜು, ಶಂಭಾ ಜೋಷಿ, ಫ ಗು ಹಳಕಟ್ಟಿ, ಚನ್ನಪ್ಪ ಉತ್ತಂಗಿ ಮೊದಲಾದವರಿಂದ ಪ್ರೇರಣೆ ಪಡೆದು, ಕನ್ನಡಕ್ಕೆ ಮಹತ್ವದ ಕೊಡುಗೆ ನೀಡಿದ ಚಿದಾನಂದ ಮೂರ್ತಿ ಅವರು ನನ್ನ ಕಾಲದ ಅತ್ಯುತ್ತಮ ಸಂಶೋಧಕರಲ್ಲಿ ಒಬ್ಬರು. ಅವರಿಗೆ ನಮನಗಳು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ನಟ ಮನದೀಪ್ ರಾಯ್ ನಿಧನ

ಸುದ್ದಿದಿನ ಡೆಸ್ಕ್ : ಹಿರಿಯ ಚಿತ್ರನಟ ಮನದೀಪ್ ರಾಯ್ (74 ವರ್ಷ) ಇಂದು ಬೆಳಗಿನ ಜಾವ ಅಗಲಿದ್ದಾರೆ.
ಕೆಲ ದಿನಗಳ ಹಿಂದೆ ಹೃದಯಾಘಾತಕ್ಕೀಡಾಗಿದ್ದ ಅವರು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಮನದೀಪ್ ರಾಯ್ ಹವ್ಯಾಸಿ ರಂಗಭೂಮಿ ಹಿನ್ನೆಲೆಯ ಕಲಾವಿದ. ನಟ – ನಿರ್ದೇಶಕ ಶಂಕರನಾಗ್ ಅವರ ಆತ್ಮೀಯ ಒಡನಾಡಿ. ಪೋಷಕ ಪಾತ್ರ, ಹಾಸ್ಯ ನಟರಾಗಿ 500ಕ್ಕೂ ಹೆಚ್ಚು ಸಿನಿಮಾಗಳು ಹಾಗೂ ಕಿರುತೆರೆ ಸರಣಿಗಳಲ್ಲಿ ಅಭಿನಯಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕರ್ನಾಟಕದಲ್ಲಿ ಈ ವರ್ಷ ಜನಪರ ರಾಜ್ಯ ಬಜೆಟ್ ಮಂಡನೆ ; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಸುದ್ದಿದಿನ, ಹಾವೇರಿ : ಕರ್ನಾಟಕದಲ್ಲಿ ಮುಂದಿನ ತಿಂಗಳು ಮಂಡಿಸಲಾಗುತ್ತಿರುವ ಈ ವರ್ಷದ ರಾಜ್ಯ ಬಜೆಟ್ ರೈತರು, ದೀನ ದಲಿತರು, ಯುವಕರು, ಮಹಿಳೆಯರು, ದುಡಿಯುವ ವರ್ಗ ಮತ್ತು ಜನಪರವಾಗಿರುತ್ತದೆ ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹಾವೇರಿ ಜಿಲ್ಲೆ ಶಿಗ್ಗಾಂವ್ನಲ್ಲಿ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ದುಡಿಮೆಗೆ ಯೋಗ್ಯ ಬೆಲೆ ಸಿಗುವ ರೀತಿಯಲ್ಲಿ ನಮ್ಮ ಕಾರ್ಯಕ್ರಮಗಳು ಇರುತ್ತವೆ ಎಂದರು.
ಕರ್ನಾಟಕ ರಾಜ್ಯದ ಆರ್ಥಿಕ ಅಭಿವೃದ್ಧಿಯಲ್ಲಿ ನಾವು ವೇಗವನ್ನು ಕಂಡಿದ್ದೇವೆ. ಕಳೆದ ವರ್ಷ ನಾನು ಅಧಿಕಾರ ವಹಿಸಿಕೊಂಡಾಗ 5 ಸಾವಿರ ಕೋಟಿ ರೂಪಾಯಿ ರಾಜ್ಯದ ಬೊಕ್ಕಸಕ್ಕೆ ನಮ್ಮ ನಿರ್ಧಿಷ್ಟ ಗುರಿಗೆ ಕೊರತೆಯಿತ್ತು. ಅದನ್ನು ನಾವು 5 ಸಾವಿರ ಕೋಟಿ ತುಂಬುವುದಲ್ಲದೇ, 13 ಸಾವಿರ ಕೋಟಿ ಅಧಿಕವಾಗಿ ಸಂಗ್ರಹ ಮಾಡಿದ್ದೇವೆ. ಈ ವರ್ಷವೂ ಕೂಡ ನಮ್ಮ ಹಣಕಾಸಿನ ಸಂಗ್ರಹ ಉತ್ತಮವಾಗಿದೆ ಎಂದು ಕರ್ನಾಟಕದ ಮುಖ್ಯಮಂತ್ರಿ ಹೇಳಿದರು.
ಕೋವಿಡ್ ನಂತರದಲ್ಲಿ ಆರ್ಥಿಕ ಸುಧಾರಣೆ ಆಗುತ್ತಿರುವ ಸಂದರ್ಭದಲ್ಲಿ ಕೆಳಹಂತದ ಜನಸಮುದಾಯಕ್ಕೆ ಇನ್ನಷ್ಟು ಸಹಾಯ ಮಾಡಿ, ಅವರನ್ನು ಕೂಡ ಮುಖ್ಯ ವಾಹಿನಿಗೆ ಬರಬೇಕು ಎನ್ನುವ ನಿಟ್ಟಿನಲ್ಲಿ ನಾವು ಕಾರ್ಯಕ್ರಮ ರೂಪಿಸುತ್ತಿದ್ದೇವೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಸಂಸತ್ತಿನ ಬಜೆಟ್ ಅಧಿವೇಶನದ ಹಿನ್ನೆಲೆ ; ಇದೇ 30ರಂದು ಸರ್ವಪಕ್ಷಗಳ ಸಭೆ

ಸುದ್ದಿದಿನ ಡೆಸ್ಕ್ : ಸಂಸತ್ತಿನ ಮುಂಬರುವ ಬಜೆಟ್ ಅಧಿವೇಶನದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇದೇ 30ರಂದು ಸರ್ವಪಕ್ಷಗಳ ಸಭೆಯನ್ನು ಕರೆದಿದೆ. ಸಂಸತ್ ಭವನದ ಸಂಕೀರ್ಣದಲ್ಲಿ ಸೋಮವಾರ ಮಧ್ಯಾಹ್ನ 12 ಗಂಟೆಗೆ ಸಭೆ ನಡೆಯಲಿದೆ.
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ, ಕೇಂದ್ರ ಸಚಿವರು ಮತ್ತು ಸಂಸತ್ತಿನ ಎರಡೂ ಸದನಗಳನ್ನು ಪ್ರತಿನಿಧಿಸುವ ಸದನ ನಾಯಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಸಭೆಯಲ್ಲಿ ಸರ್ಕಾರ ಸಂಸತ್ತಿನ ಉಭಯ ಸದನಗಳ ಸುಗಮ ಕಲಾಪಕ್ಕೆ ಎಲ್ಲ ರಾಜಕೀಯ ಪಕ್ಷಗಳ ಸಹಕಾರವನ್ನು ಕೋರಲಿದೆ. ಸಂಸತ್ತಿನ ಬಜೆಟ್ ಅಧಿವೇಶನ ಇದೇ 31ರಿಂದ ಆರಂಭವಾಗಲಿದೆ. ಮೊದಲ ದಿನ ಬೆಳಿಗ್ಗೆ 11 ಗಂಟೆಗೆ ಸೆಂಟ್ರಲ್ ಹಾಲ್ ನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡುವರು.
ಅದೇ ದಿನವೇ ಆರ್ಥಿಕ ಸಮೀಕ್ಷೆಯನ್ನೂ ಸಹ ಮಂಡಿಸಲಾಗುವುದು. ಫೆಬ್ರವರಿ 1ರಂದು 2023-24ನೇ ಸಾಲಿನ ಕೇಂದ್ರ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆ ಮಾಡಲಿದ್ದಾರೆ.
ಬಜೆಟ್ ಅಧಿವೇಶನ ಏಪ್ರಿಲ್ 6ವರೆಗೆ ನಡೆಯಲಿದ್ದು, ಸುಮಾರು 66 ದಿನಗಳಲ್ಲಿ 27 ಕಲಾಪಗಳು ನಡೆಯಲಿದೆ. ಮೊದಲ ಅವಧಿಯಲ್ಲಿ ಅಧಿವೇಶನ ಫೆಬ್ರವರಿ 13ರವರೆಗೆ ನಡೆಯಲಿದೆ. ಫೆಬ್ರವರಿ 14ರಿಂದ ಮಾರ್ಚ್ 12ರವರೆಗೆ ಅಧಿವೇಶನಕ್ಕೆ ಬಿಡುವು ಇರಲಿದೆ ಆನಂತರ ಮಾರ್ಚ್ 13ರಿಂದ ಆರಂಭವಾಗುವ ಅಧಿವೇಶನ ಏಪ್ರಿಲ್ 6ಕ್ಕೆ ಕೊನೆಗೊಳ್ಳಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980336243
