ದಿನದ ಸುದ್ದಿ
ಶ್ರೀಲಂಕಾ, ನೇಪಾಳ, ಮ್ಯಾನ್ಮಾರ್, ಭೂತಾನ್ ನಿಂದ ವಲಸೆ ಬಂದವರನ್ನು ಸಿ ಎ ಎ ಯಿಂದ ಹೊರಗಿಡಲು ಕಾರಣವೇನು? : ಸಿದ್ದರಾಮಯ್ಯ ಪ್ರಶ್ನೆ

ಸುದ್ದಿದಿನ, ಬೆಂಗಳೂರು : ಸಿಎಎ ಇಂದ ದೇಶದ ಯಾವೊಬ್ಬ ಪ್ರಜೆಗೂ ತೊಂದರೆ ಇಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಸುಳ್ಳು ಹೇಳಿ ಜನರ ದಾರಿ ತಪ್ಪಿಸುತ್ತಿದ್ದಾರೆ. ಸಿಎಎ, ಎನ್ಆರ್ಸಿ ಹಾಗೂ ಎನ್ಪಿಆರ್ ಇವು ಒಂದಕ್ಕೊಂದು ಸಂಬಂಧ ಹೊಂದಿವೆ. ಇವು ಒಂದು ಸಮುದಾಯದ ಜನರನ್ನು ಮಾತ್ರ ಗುರಿಯಾಗಿರಿಸಿಕೊಂಡು ಜಾರಿಗೆ ತರಲಾಗುತ್ತಿದೆ ಎಂದು ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಕೆಂಡಾಮಂಡಲವಾದರು.
ಗುರುವಾರ ಕೆಪಿಸಿಸಿ ಕಛೇರಿಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊರದೇಶಗಳಲ್ಲಿ ದೌರ್ಜನ್ಯಕ್ಕೊಳಗಾದ ಜನರಿಗೆ ಭಾರತದ ಪೌರತ್ವ ಕೊಡುವುದಕ್ಕಾಗಲೀ, ಇಲ್ಲಿನ ಅಕ್ರಮ ವಲಸಿಗರಿಗೆ ಪೌರತ್ವ ನೀಡಿ ಅವರನ್ನು ಈ ದೇಶದ ಪ್ರಜೆಗಳಾಗಿಸುವುದಕ್ಕಾಗಲೀ ನಮ್ಮ ವಿರೋಧವಿಲ್ಲ.
ಹೀಗೆ ಪೌರತ್ವ ನೀಡುವುದರಲ್ಲಿ ಮುಸ್ಲಿಂ ಸಮುದಾಯವನ್ನು ಹೊರಗಿಟ್ಟು ನಿಯಮ ಜಾರಿಗೊಳಿಸಲು ಹೊರಟಿರುವುದಕ್ಕಷ್ಟೇ ನಮ್ಮ ವಿರೋಧ. 2014 ಡಿಸೆಂಬರ್ 31ರ ಮುಂಚೆ ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಆಫ್ಘಾನಿಸ್ತಾನದಿಂದ ಬಂದ ಮುಸ್ಲಿಂ ಹೊರತಾದ ಧರ್ಮಗಳ ಜನರಿಗೆ ಪೌರತ್ವ ನೀಡುವುದೇನೋ ಸರಿ, ಆದರೆ ಶ್ರೀಲಂಕಾ, ನೇಪಾಳ, ಮ್ಯಾನ್ಮಾರ್, ಭೂತಾನ್ ಈ ದೇಶಗಳಿಂದ ಭಾರತಕ್ಕೆ ವಲಸೆ ಬಂದವರನ್ನು ಈ ಕಾಯ್ದೆಯಿಂದ ಹೊರಗಿಡಲು ಕಾರಣವೇನು? ಎಂದು ಪ್ರಶ್ನಿಸಿದರು.
ಸಂವಿಧಾನ ರಚನಾ ಸಮಿತಿಯ 289 ಜನ ಸದಸ್ಯರಲ್ಲಿ ಆರ್ಎಸ್ಎಸ್ ಸಂಘಪರಿವಾರದವರು ಇದ್ದರು. ಮನುಸ್ಮೃತಿ ಆಧಾರದ ಮೇಲೆ ಸಂವಿಧಾನ ರಚನೆಯಾಗಬೇಕೆಂಬುದು ಅವರ ಆಲೋಚನೆಯಾಗಿತ್ತು, ಅಂದು ಈ ಆಲೋಚನೆಗೆ ಅವಕಾಶ ಸಿಗಲಿಲ್ಲ ಹಾಗಾಗಿ ಇಂದು ಅದನ್ನು ಕಾಯ್ದೆ ರೂಪದಲ್ಲಿ ಜಾರಿಮಾಡಲು ಹೊರಟಿದ್ದಾರೆ.
ಒಂದು ಕಾಯ್ದೆ ಸಂಸತ್ತಿನ ಬಹುಮತ ಗಳಿಸಿ ಕಾನೂನಾಗಿ ಜಾರಿಗೆ ಬರಲು ಸಿದ್ಧವಾದರೂ, ಆ ಕಾನೂನು ನ್ಯಾಯಸಮ್ಮತವಲ್ಲ ಎಂದೆನಿದರೆ ಜೈಲಿಗೆ ಹೋದರೂ ಪರವಾಗಿಲ್ಲ ಅದಕ್ಕೆ ಅಸಹಕಾರ ತೋರಿ ಎಂದು ಮಹಾತ್ಮ ಗಾಂಧಿಯವರೇ ಹೇಳಿದ್ದರು.
ರವೀಂದ್ರನಾಥ್ ಠಾಗೋರ್ ಅವರು ಭಾರತ ಸರ್ವಧರ್ಮ ಸಹಿಷ್ಣು ದೇಶವಾಗಬೇಕು, ಮುಕ್ತವಾದ ಶಿಕ್ಷಣ ಮತ್ತು ಅಭಿವ್ಯಕ್ತಿಗೆ ಅವಕಾಶಗಳಿರಬೇಕು, ಇಲ್ಲಿನ ಪ್ರತಿ ಪ್ರಜೆ ಧೈರ್ಯದಿಂದ, ಸ್ವಾಭಿಮಾನದ ಬದುಕು ಬಾಳಬೇಕು ಎಂದು ಹೇಳಿದ್ದರು, ಆದರೆ ಬಿಜೆಪಿ ಹಿಂದೂ ರಾಷ್ಟ್ರ ನಿರ್ಮಾಣದ ಹುನ್ನಾರದೊಂದಿಗೆ ಕಾಯ್ದೆ ಜಾರಿಗೆ ಮುಂದಾಗಿದೆ ಎಂದು ಕಿಡಿಕಾರಿದರು.
ಕಾಯ್ದೆಯ ವಿರುದ್ಧ ದೇಶವ್ಯಾಪಿ ಜನರು ಬೀದಿಗಿಳಿದು ಪ್ರತಿಭಟಿಸುತ್ತಿದ್ದಾರೆ. ಅವರಲ್ಲಿ ಬರೀ ಮುಸ್ಲಿಂರಷ್ಟೇ ಅಲ್ಲ, ವಿದ್ಯಾರ್ಥಿಗಳು, ಕಾರ್ಮಿಕರು, ಪ್ರಗತಿಪರರು, ಮಹಿಳೆಯರು ಹೀಗೆ ಎಲ್ಲ ವರ್ಗದ ಜನರು ಇದ್ದಾರೆ. ಕಾಯ್ದೆ ಜಾರಿಯಿಂದ ಮುಸ್ಲಿಂಮರಿಗೆ ಮಾತ್ರವಲ್ಲ, ಆದಿವಾಸಿಗಳು, ಬುಡಕಟ್ಟು ಜನಾಂಗದವರಿಗೂ ತೊಂದರೆ ತಪ್ಪಿದ್ದಲ್ಲ ಎಂದು ಎಚ್ಚರಿಕೆ ನೀಡಿದರು.
ಮನುಸ್ಮೃತಿಯನ್ನು ಬೆಂಬಲಿಸುತ್ತಾ,ದಲಿತರು, ಹಿಂದುಳಿದವರನ್ನು ಅಸ್ಪೃಶ್ಯರನ್ನಾಗಿ ಮಾಡಿ, ಸಮಾಜದಿಂದ ದೂರ ಇಟ್ಟು, ನಮ್ಮದು ಅಖಂಡ ಹಿಂದುತ್ವ, ‘ಸರ್ವೇ ಜನಾಃ ಸುಖಿನೋ ಭವಂತು’ ಅಂದುಬಿಟ್ರೆ ಅದನ್ನು ನಂಬುವಷ್ಟು ಜನ ಮೂರ್ಖರಲ್ಲ. ಸರ್ಕಾರ ಮೊದಲು ಈಗಿರುವ ಸಾಮಾಜಿಕ, ಆರ್ಥಿಕ ಸಮಸ್ಯೆಗಳನ್ನು ಬಗೆಹರಿಸಲಿ, ಮತ್ತೆ ಉಳಿದದ್ದು ನೋಡೋಣ ಎಂದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ನಟ ಮನದೀಪ್ ರಾಯ್ ನಿಧನ

ಸುದ್ದಿದಿನ ಡೆಸ್ಕ್ : ಹಿರಿಯ ಚಿತ್ರನಟ ಮನದೀಪ್ ರಾಯ್ (74 ವರ್ಷ) ಇಂದು ಬೆಳಗಿನ ಜಾವ ಅಗಲಿದ್ದಾರೆ.
ಕೆಲ ದಿನಗಳ ಹಿಂದೆ ಹೃದಯಾಘಾತಕ್ಕೀಡಾಗಿದ್ದ ಅವರು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಮನದೀಪ್ ರಾಯ್ ಹವ್ಯಾಸಿ ರಂಗಭೂಮಿ ಹಿನ್ನೆಲೆಯ ಕಲಾವಿದ. ನಟ – ನಿರ್ದೇಶಕ ಶಂಕರನಾಗ್ ಅವರ ಆತ್ಮೀಯ ಒಡನಾಡಿ. ಪೋಷಕ ಪಾತ್ರ, ಹಾಸ್ಯ ನಟರಾಗಿ 500ಕ್ಕೂ ಹೆಚ್ಚು ಸಿನಿಮಾಗಳು ಹಾಗೂ ಕಿರುತೆರೆ ಸರಣಿಗಳಲ್ಲಿ ಅಭಿನಯಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕರ್ನಾಟಕದಲ್ಲಿ ಈ ವರ್ಷ ಜನಪರ ರಾಜ್ಯ ಬಜೆಟ್ ಮಂಡನೆ ; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಸುದ್ದಿದಿನ, ಹಾವೇರಿ : ಕರ್ನಾಟಕದಲ್ಲಿ ಮುಂದಿನ ತಿಂಗಳು ಮಂಡಿಸಲಾಗುತ್ತಿರುವ ಈ ವರ್ಷದ ರಾಜ್ಯ ಬಜೆಟ್ ರೈತರು, ದೀನ ದಲಿತರು, ಯುವಕರು, ಮಹಿಳೆಯರು, ದುಡಿಯುವ ವರ್ಗ ಮತ್ತು ಜನಪರವಾಗಿರುತ್ತದೆ ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹಾವೇರಿ ಜಿಲ್ಲೆ ಶಿಗ್ಗಾಂವ್ನಲ್ಲಿ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ದುಡಿಮೆಗೆ ಯೋಗ್ಯ ಬೆಲೆ ಸಿಗುವ ರೀತಿಯಲ್ಲಿ ನಮ್ಮ ಕಾರ್ಯಕ್ರಮಗಳು ಇರುತ್ತವೆ ಎಂದರು.
ಕರ್ನಾಟಕ ರಾಜ್ಯದ ಆರ್ಥಿಕ ಅಭಿವೃದ್ಧಿಯಲ್ಲಿ ನಾವು ವೇಗವನ್ನು ಕಂಡಿದ್ದೇವೆ. ಕಳೆದ ವರ್ಷ ನಾನು ಅಧಿಕಾರ ವಹಿಸಿಕೊಂಡಾಗ 5 ಸಾವಿರ ಕೋಟಿ ರೂಪಾಯಿ ರಾಜ್ಯದ ಬೊಕ್ಕಸಕ್ಕೆ ನಮ್ಮ ನಿರ್ಧಿಷ್ಟ ಗುರಿಗೆ ಕೊರತೆಯಿತ್ತು. ಅದನ್ನು ನಾವು 5 ಸಾವಿರ ಕೋಟಿ ತುಂಬುವುದಲ್ಲದೇ, 13 ಸಾವಿರ ಕೋಟಿ ಅಧಿಕವಾಗಿ ಸಂಗ್ರಹ ಮಾಡಿದ್ದೇವೆ. ಈ ವರ್ಷವೂ ಕೂಡ ನಮ್ಮ ಹಣಕಾಸಿನ ಸಂಗ್ರಹ ಉತ್ತಮವಾಗಿದೆ ಎಂದು ಕರ್ನಾಟಕದ ಮುಖ್ಯಮಂತ್ರಿ ಹೇಳಿದರು.
ಕೋವಿಡ್ ನಂತರದಲ್ಲಿ ಆರ್ಥಿಕ ಸುಧಾರಣೆ ಆಗುತ್ತಿರುವ ಸಂದರ್ಭದಲ್ಲಿ ಕೆಳಹಂತದ ಜನಸಮುದಾಯಕ್ಕೆ ಇನ್ನಷ್ಟು ಸಹಾಯ ಮಾಡಿ, ಅವರನ್ನು ಕೂಡ ಮುಖ್ಯ ವಾಹಿನಿಗೆ ಬರಬೇಕು ಎನ್ನುವ ನಿಟ್ಟಿನಲ್ಲಿ ನಾವು ಕಾರ್ಯಕ್ರಮ ರೂಪಿಸುತ್ತಿದ್ದೇವೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಸಂಸತ್ತಿನ ಬಜೆಟ್ ಅಧಿವೇಶನದ ಹಿನ್ನೆಲೆ ; ಇದೇ 30ರಂದು ಸರ್ವಪಕ್ಷಗಳ ಸಭೆ

ಸುದ್ದಿದಿನ ಡೆಸ್ಕ್ : ಸಂಸತ್ತಿನ ಮುಂಬರುವ ಬಜೆಟ್ ಅಧಿವೇಶನದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇದೇ 30ರಂದು ಸರ್ವಪಕ್ಷಗಳ ಸಭೆಯನ್ನು ಕರೆದಿದೆ. ಸಂಸತ್ ಭವನದ ಸಂಕೀರ್ಣದಲ್ಲಿ ಸೋಮವಾರ ಮಧ್ಯಾಹ್ನ 12 ಗಂಟೆಗೆ ಸಭೆ ನಡೆಯಲಿದೆ.
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ, ಕೇಂದ್ರ ಸಚಿವರು ಮತ್ತು ಸಂಸತ್ತಿನ ಎರಡೂ ಸದನಗಳನ್ನು ಪ್ರತಿನಿಧಿಸುವ ಸದನ ನಾಯಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಸಭೆಯಲ್ಲಿ ಸರ್ಕಾರ ಸಂಸತ್ತಿನ ಉಭಯ ಸದನಗಳ ಸುಗಮ ಕಲಾಪಕ್ಕೆ ಎಲ್ಲ ರಾಜಕೀಯ ಪಕ್ಷಗಳ ಸಹಕಾರವನ್ನು ಕೋರಲಿದೆ. ಸಂಸತ್ತಿನ ಬಜೆಟ್ ಅಧಿವೇಶನ ಇದೇ 31ರಿಂದ ಆರಂಭವಾಗಲಿದೆ. ಮೊದಲ ದಿನ ಬೆಳಿಗ್ಗೆ 11 ಗಂಟೆಗೆ ಸೆಂಟ್ರಲ್ ಹಾಲ್ ನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡುವರು.
ಅದೇ ದಿನವೇ ಆರ್ಥಿಕ ಸಮೀಕ್ಷೆಯನ್ನೂ ಸಹ ಮಂಡಿಸಲಾಗುವುದು. ಫೆಬ್ರವರಿ 1ರಂದು 2023-24ನೇ ಸಾಲಿನ ಕೇಂದ್ರ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆ ಮಾಡಲಿದ್ದಾರೆ.
ಬಜೆಟ್ ಅಧಿವೇಶನ ಏಪ್ರಿಲ್ 6ವರೆಗೆ ನಡೆಯಲಿದ್ದು, ಸುಮಾರು 66 ದಿನಗಳಲ್ಲಿ 27 ಕಲಾಪಗಳು ನಡೆಯಲಿದೆ. ಮೊದಲ ಅವಧಿಯಲ್ಲಿ ಅಧಿವೇಶನ ಫೆಬ್ರವರಿ 13ರವರೆಗೆ ನಡೆಯಲಿದೆ. ಫೆಬ್ರವರಿ 14ರಿಂದ ಮಾರ್ಚ್ 12ರವರೆಗೆ ಅಧಿವೇಶನಕ್ಕೆ ಬಿಡುವು ಇರಲಿದೆ ಆನಂತರ ಮಾರ್ಚ್ 13ರಿಂದ ಆರಂಭವಾಗುವ ಅಧಿವೇಶನ ಏಪ್ರಿಲ್ 6ಕ್ಕೆ ಕೊನೆಗೊಳ್ಳಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980336243
