ದಿನದ ಸುದ್ದಿ
ದಾವಣಗೆರೆ | ಹೆಣ್ಣುಮಗು ಮಾರಾಟ ಪ್ರಕರಣ ಪತ್ತೆ, ಮಗು ರಕ್ಷಣೆ : ಎಸ್ಪಿ ಹನುಮಂತರಾಯ

ಸುದ್ದಿದಿನ,ದಾವಣಗೆರೆ : ನಗರದಲ್ಲಿ ಹೆಣ್ಣುಮಗುವೊಂದನ್ನು ಮಾರಾಟ ಮಾಡಿದ ಪ್ರಕರಣವನ್ನು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳ ಮಾರ್ಗದರ್ಶನದಲ್ಲಿ ಮಹಿಳಾ ಪೊಲೀಸ್ ಠಾಣೆ ಅಧಿಕಾರಿ ಮತ್ತು ಸಿಬ್ಬಂದಿಗಳು ಪತ್ತೆ ಹಚ್ಚಿ ಮಗುವನ್ನು ರಕ್ಷಿಸಿದ್ದಾರೆಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹನುಮಂತರಾಯ ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳ ಕಚೇರಿಯಲ್ಲಿ ಹೆಣ್ಣು ಮಗು ಮಾರಾಟ ಮತ್ತು ಖರೀದಿಗೆ ಸಂಬಂಧಿಸಿದ ಪ್ರಕರಣದ ಕುರಿತು ಮಾಹಿತಿ ನೀಡಲು ಕರೆಯಲಾಗಿದ್ದ ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಅವರು ಮಾತನಾಡಿ, ಮಹಿಳಾ ರಕ್ಷಣಾ ಘಟಕದ ಅಧಿಕಾರಿ/ಸಿಬ್ಬಂದಿಗಳು ನೀಡಿದ ದೂರು ಮತ್ತು ಮಾಹಿತಿ ಮೇರೆಗೆ ಹೆಣ್ಣುಮಗುವಿನ ಮಾರಾಟ ಪ್ರಕರಣ ಪತ್ತೆ ಹಚ್ಚಿದ್ದು, ಮಧ್ಯವರ್ತಿಗಳಾಗಿ ಆಸ್ಪತ್ರೆಯೊಂದರ ಆಯಾ ಒಬ್ಬರು ಪಾಲ್ಗೊಂಡಿದ್ದು, ಮಕ್ಕಳ ಮಾರಾಟ ಪ್ರಕರಣದಲ್ಲಿ ವ್ಯವಸ್ಥಿತ ಜಾಲವೇನಾದರು ಕೆಲಸ ಮಾಡುತ್ತಿದೆಯೇ ಎಂಬ ತನಿಖೆ ನಡೆಸಲಾಗುವುದು ಹಾಗೂ ಈ ಪ್ರಕರಣ ಕುರಿತು ಸಮಗ್ರ ತನಿಖೆಗೆ ಈಗಾಗಲೇ ಆದೇಶಿಸಲಾಗಿದೆ ಎಂದರು.
ಜ.17 ರ ಸಂಜೆ ದಾವಣಗೆರೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ಕಚೇರಿಯ ಅಧಿಕಾರಿ ಕೆ.ಸಿ.ಬಸವರಾಜಯ್ಯನವರು ಮಹಿಳಾ ಠಾಣೆಗೆ ಹಾಜರಾಗಿ, 2019 ರ ಡಿ.26 ರಂದು ಡಾನ್ಬಾಸ್ಕೋ ಬಾಲಕಾರ್ಮಿಕ ಮಿಷನ್ ಸಹಾಯವಾಣಿ ಮೂಲಕ ಅನಾಮಧೇಯ ಕರೆ ಮಾಡಿ ಅಂಬೇಡ್ಕರ್ ನಗರ ನಿವಾಸಿ ಕವಿತಾ ಕೋಂ ಮಂಜುನಾಥ ಎಂಬವವರು ತಮ್ಮ ನಾಲ್ಕನೇ ಹೆಣ್ಣು ಮಗುವಾದ ಒಂದು ವರ್ಷ ಒಂದು ತಿಂಗಳಿನ ಸಾನ್ವಿ ಎಂಬ ಹೆಣ್ಣು ಮಗುವನ್ನು ಮಾರಾಟ ಮಾಡಿರುವುದಾಗಿ ಕರೆ ಮಾಡಿ ಮಾಹಿತಿ ನೀಡಿರುತ್ತಾರೆ.
ಈ ಕರೆಯನ್ನು ಆಧರಿಸಿ ಸಹಾಯವಾಣಿ ಸಿಬ್ಬಂದಿಗಳು ಸ್ಥಳ ಪರಿಶೀಲನೆ ನಡೆಸಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಿಗೆ ಜ.8 ರಂದು ಪತ್ರ ಸಲ್ಲಿಸುತ್ತಾರೆ. ಇದಕ್ಕೆ ಸಂಬಂಧಿಸಿದಂತೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿಗಳಾದ ಚಂದ್ರಶೇಖರ್.ಎನ್.ಕೆ ಮತ್ತು ಕಿರಣ್ಕುಮಾರ್ ಎಂಬುವವರು ಆರೋಪಿಯ ಮನೆಯ ಕುರಿತಾಗಿ ಅಂಗನವಾಡಿ ಕಾರ್ಯಕರ್ತೆಯಿಂದ ಸಂಪೂರ್ಣ ಮಾಹಿತಿ ಪಡೆದುಕೊಂಡು ಜ.9 ರಂದು ಮನೆಗೆ ಭೇಟಿ ನೀಡಿದಾಗ ಮಗುವಿನ ತಂದೆ ಮಂಜುನಾಥ್ ಸಿಕ್ಕಿದ್ದು, ವಿಚಾರಣೆ ನಡೆಸಿದಾಗ ಈಗಾಗಲೇ ತಮಗೆ 3 ಹೆಣ್ಣು ಮಕ್ಕಳಿದ್ದು, 4ನೇ ಮಗವೂ ಹೆಣ್ಣು ಮಗುವಾಗಿರುವ ಕಾರಣ ಹಾಗೂ ಮನೆಯಲ್ಲಿ ಕಷ್ಟವಿದ್ದ ಕಾರಣ ತಮ್ಮ ಮಗು ಸಾನ್ವಿಯನ್ನು ರಾಣೇಬೆನ್ನೂರಿನ ದ್ರಾಕ್ಷಾಯಿಣಿ ಕೋಂ ಸಿದ್ದು ಎಂಬುವವರಿಗೆ ರೂ.25 ಸಾವಿರಕ್ಕೆ ಮಾರಾಟ ಮಾಡಿರುವುದಾಗಿ ಒಪ್ಪಿಕೊಂಡಿರುತ್ತಾರೆ.
ಮಗು ಮಾರಾಟ ಮಾಡಿದ ತಂದೆ ಮಂಜುನಾಥ, ತಾಯಿ ಕವಿತಾ ಮತ್ತು ಮಗುವನ್ನು ಖರೀದಿಸಿದ ದ್ರಾಕ್ಷಾಯಿಣಿ ಮತ್ತು ಆಕೆಯ ಗಂಡ ಸಿದ್ದು ಹಾಗೂ ಮಗು ಮಾರಾಟಕ್ಕೆ ಸಹಕಾರ ನೀಡಿದ ರವಿ, ಕರಿಬಸಪ್ಪ, ಚಿತ್ರಮ್ಮ ಮತ್ತು ಕಮಲಮ್ಮರವರ ಮೇಲೆ ದೂರು ದಾಖಲಿಸಿ ದಸ್ತಗಿರಿ ಮಾಡಲಾಗಿದೆ. ಮಗುವನ್ನು ರಕ್ಷಿಸಿ ನಿಯಮಾನುಸಾರ ವೈದ್ಯಕೀಯ ತಪಾಸಣೆಗೆ ಒಳಪಡಿಸಿದ್ದು, ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸಿ ನಂತರ ಕಾನೂನಿನ ಮಾರ್ಗದರ್ಶನದಲ್ಲಿ ಮಗುವಿನ ಪಾಲನೆ-ಪೋಷಣೆ ಮಾಡಲಾಗುವುದು ಎಂದರು.
ಜಿಲ್ಲಾಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರನ್ನೊಳಗೊಂಡು ಜಿಲ್ಲೆಯ ಎಲ್ಲ ಹೆರಿಗೆ ಆಸ್ಪತ್ರೆಗಳು, ಮಿಡ್ವೈಫರಿ, ಶುಶ್ರೂಷಕರ ಸಭೆ ನಡೆಸಿ ಹೆಣ್ಣು ಮಕ್ಕಳ ಸಂರಕ್ಷಣೆ ಮತ್ತು ದತ್ತು ನಿಯಮಗಳ ಕುರಿತು ಸೂಕ್ತ ಕಾನೂನಿನ ಅರಿವು ಮೂಡಿಸಲಾಗುವುದು ಎಂದ ಅವರು ಮಗು ಮಾರಾಟ ಪ್ರಕರಣ ಬೇಧಿಸುವಲ್ಲಿ ಸಹಕರಿಸಿದ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ, ಸಿಬ್ಬಂದಿ ಹಾಗೂ ಮಹಿಳಾ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಅಭಿನಂದಿಸಿದರು.
ಈ ಪ್ರಕರಣದಲ್ಲಿ ಆರೋಪಿಗಳ ಪತ್ತೆಗಾಗಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹನುಮಂತರಾಯ, ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ಹನುಮಂತರಾಯ, ಎಎಸ್ಪಿ ರಾಜೀವ್.ಎಂ, ನಗರ ಉಪವಿಭಾಗದ ಡಿವೈಎಸ್ಪಿ ಯು.ನಾಗೇಶ್ ಐತಾಳ್ ಇವರ ಸೂಕ್ತ ಮಾರ್ಗದರ್ಶನದಲ್ಲಿ ಮಹಿಳಾ ಠಾಣೆಯ ಪೊಲೀಸ್ ನಿರೀಕ್ಷಕಿ ನಾಗಮ್ಮ, ಸಿಬ್ಬಂದಿಗಳಾದ ಪಿಎಸ್ಐ ಮಾಳವ್ವ, ಪರಶುರಾಮ, ಪ್ರಸನ್ನ ಕುಮಾರ್, ರೇಣುಕಮ್ಮ, ಜಂಷಿದಾ ಖಾನಂ, ಕವಿತಾ, ಶಿವಲಿಂಗಮ್ಮ ಬಾಗೇವಾಡಿ, ಛಾಯಾ, ಕವಿತಾ.ಟಿ.ಎಸ್ ರವರ ತಂಡ ಪಾಲ್ಗೊಂಡಿತ್ತು ಎಂದು ಮಾಹಿತಿ ನೀಡಿದರು.
ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಅರಿವು
ರಸ್ತೆ ಸುರಕ್ಷತೆ ಕುರಿತು ಈ ವಾರ ಅನೇಕ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜಾಗೃತಿ ಮೂಡಿಸಲಾಗುತ್ತಿದೆ. ನಗರದಲ್ಲಿ ಒಟ್ಟು 10 ಹೈವೇ ಪೆಟ್ರೋಲಿಂಗ್ ವಾಹನ ವ್ಯವಸ್ಥೆ, 02 ಇಂಟರ್ಸೆಪ್ಟರ್ ಹಾಗೂ ಪ್ರತಿ ಠಾಣೆಗೆ ಒಂದರಂತೆ 13 ಪಿಸಿಆರ್ ವಾಹನಗಳು ಗಸ್ತು ವ್ಯವಸ್ಥೆಯಲ್ಲಿ ಪಾಲ್ಗೊಳ್ಳುತ್ತಿವೆ.
ಲೇನ್ ಡಿಸಿಪ್ಲೀನ್
ಮುಖ್ಯವಾಗಿ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಲೇನ್ ಡಿಸಿಪ್ಲೀನ್ ಇಲ್ಲದೇ ಅನೇಕ ಸಾವು ನೋವು ಸಂಭವಿಸುತ್ತಿದ್ದು, ಇದನ್ನು ತಡೆಗಟ್ಟಲು ಲೇನ್ ಡಿಸಿಪ್ಲೀನ್ನನ್ನು ಕಟ್ಟುನಿಟ್ಟಾಗಿ ಪಾಲಿಸಲು ಕ್ರಮ ವಹಿಸಲು ಸರ್ವೋಚ್ಚ ನ್ಯಾಯಾಲಯ ಸೂಚಿಸಿದ್ದು ಇದರಂತೆ ಕ್ರಮ ವಹಿಸಲಾಗುವುದು.
ಸರಗಳ್ಳತನ ಜಾಲ ಪತ್ತೆಗೆ ಕ್ರಮ
ಜಿಲ್ಲೆಯಲ್ಲಿ ಸರಗಳ್ಳರ ಹಾವಳಿ ಹೆಚ್ಚಿದ್ದು ಇತ್ತೀಚೆಗೆ ನಡೆದ ಸರಣಿ ಸರಗಳ್ಳತನದಲ್ಲಿ ಪುಣೆಯ ಇರಾನಿ ತಂಡದ ಕೈವಾಡವಿದೆ ಎಂದು ತಿಳಿದುಬಂದಿದ್ದು ಈ ಕುರಿತು ಸಮಗ್ರ ತನಿಖೆ ಜೊತೆಗೆ ಸರಗಳ್ಳರನ್ನು ನಿಗ್ರಹಿಸಲು ಕ್ರಮ ವಹಿಸಲಾಗಿದೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಎಎಸ್ಪಿ ರಾಜೀವ್, ಮಹಿಳಾ ಪೊಲೀಸ್ ಠಾಣೆಯ ನಿರೀಕ್ಷಕಿ ನಾಗಮ್ಮ ಇದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ನಟ ಮನದೀಪ್ ರಾಯ್ ನಿಧನ

ಸುದ್ದಿದಿನ ಡೆಸ್ಕ್ : ಹಿರಿಯ ಚಿತ್ರನಟ ಮನದೀಪ್ ರಾಯ್ (74 ವರ್ಷ) ಇಂದು ಬೆಳಗಿನ ಜಾವ ಅಗಲಿದ್ದಾರೆ.
ಕೆಲ ದಿನಗಳ ಹಿಂದೆ ಹೃದಯಾಘಾತಕ್ಕೀಡಾಗಿದ್ದ ಅವರು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಮನದೀಪ್ ರಾಯ್ ಹವ್ಯಾಸಿ ರಂಗಭೂಮಿ ಹಿನ್ನೆಲೆಯ ಕಲಾವಿದ. ನಟ – ನಿರ್ದೇಶಕ ಶಂಕರನಾಗ್ ಅವರ ಆತ್ಮೀಯ ಒಡನಾಡಿ. ಪೋಷಕ ಪಾತ್ರ, ಹಾಸ್ಯ ನಟರಾಗಿ 500ಕ್ಕೂ ಹೆಚ್ಚು ಸಿನಿಮಾಗಳು ಹಾಗೂ ಕಿರುತೆರೆ ಸರಣಿಗಳಲ್ಲಿ ಅಭಿನಯಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕರ್ನಾಟಕದಲ್ಲಿ ಈ ವರ್ಷ ಜನಪರ ರಾಜ್ಯ ಬಜೆಟ್ ಮಂಡನೆ ; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಸುದ್ದಿದಿನ, ಹಾವೇರಿ : ಕರ್ನಾಟಕದಲ್ಲಿ ಮುಂದಿನ ತಿಂಗಳು ಮಂಡಿಸಲಾಗುತ್ತಿರುವ ಈ ವರ್ಷದ ರಾಜ್ಯ ಬಜೆಟ್ ರೈತರು, ದೀನ ದಲಿತರು, ಯುವಕರು, ಮಹಿಳೆಯರು, ದುಡಿಯುವ ವರ್ಗ ಮತ್ತು ಜನಪರವಾಗಿರುತ್ತದೆ ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹಾವೇರಿ ಜಿಲ್ಲೆ ಶಿಗ್ಗಾಂವ್ನಲ್ಲಿ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ದುಡಿಮೆಗೆ ಯೋಗ್ಯ ಬೆಲೆ ಸಿಗುವ ರೀತಿಯಲ್ಲಿ ನಮ್ಮ ಕಾರ್ಯಕ್ರಮಗಳು ಇರುತ್ತವೆ ಎಂದರು.
ಕರ್ನಾಟಕ ರಾಜ್ಯದ ಆರ್ಥಿಕ ಅಭಿವೃದ್ಧಿಯಲ್ಲಿ ನಾವು ವೇಗವನ್ನು ಕಂಡಿದ್ದೇವೆ. ಕಳೆದ ವರ್ಷ ನಾನು ಅಧಿಕಾರ ವಹಿಸಿಕೊಂಡಾಗ 5 ಸಾವಿರ ಕೋಟಿ ರೂಪಾಯಿ ರಾಜ್ಯದ ಬೊಕ್ಕಸಕ್ಕೆ ನಮ್ಮ ನಿರ್ಧಿಷ್ಟ ಗುರಿಗೆ ಕೊರತೆಯಿತ್ತು. ಅದನ್ನು ನಾವು 5 ಸಾವಿರ ಕೋಟಿ ತುಂಬುವುದಲ್ಲದೇ, 13 ಸಾವಿರ ಕೋಟಿ ಅಧಿಕವಾಗಿ ಸಂಗ್ರಹ ಮಾಡಿದ್ದೇವೆ. ಈ ವರ್ಷವೂ ಕೂಡ ನಮ್ಮ ಹಣಕಾಸಿನ ಸಂಗ್ರಹ ಉತ್ತಮವಾಗಿದೆ ಎಂದು ಕರ್ನಾಟಕದ ಮುಖ್ಯಮಂತ್ರಿ ಹೇಳಿದರು.
ಕೋವಿಡ್ ನಂತರದಲ್ಲಿ ಆರ್ಥಿಕ ಸುಧಾರಣೆ ಆಗುತ್ತಿರುವ ಸಂದರ್ಭದಲ್ಲಿ ಕೆಳಹಂತದ ಜನಸಮುದಾಯಕ್ಕೆ ಇನ್ನಷ್ಟು ಸಹಾಯ ಮಾಡಿ, ಅವರನ್ನು ಕೂಡ ಮುಖ್ಯ ವಾಹಿನಿಗೆ ಬರಬೇಕು ಎನ್ನುವ ನಿಟ್ಟಿನಲ್ಲಿ ನಾವು ಕಾರ್ಯಕ್ರಮ ರೂಪಿಸುತ್ತಿದ್ದೇವೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಸಂಸತ್ತಿನ ಬಜೆಟ್ ಅಧಿವೇಶನದ ಹಿನ್ನೆಲೆ ; ಇದೇ 30ರಂದು ಸರ್ವಪಕ್ಷಗಳ ಸಭೆ

ಸುದ್ದಿದಿನ ಡೆಸ್ಕ್ : ಸಂಸತ್ತಿನ ಮುಂಬರುವ ಬಜೆಟ್ ಅಧಿವೇಶನದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇದೇ 30ರಂದು ಸರ್ವಪಕ್ಷಗಳ ಸಭೆಯನ್ನು ಕರೆದಿದೆ. ಸಂಸತ್ ಭವನದ ಸಂಕೀರ್ಣದಲ್ಲಿ ಸೋಮವಾರ ಮಧ್ಯಾಹ್ನ 12 ಗಂಟೆಗೆ ಸಭೆ ನಡೆಯಲಿದೆ.
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ, ಕೇಂದ್ರ ಸಚಿವರು ಮತ್ತು ಸಂಸತ್ತಿನ ಎರಡೂ ಸದನಗಳನ್ನು ಪ್ರತಿನಿಧಿಸುವ ಸದನ ನಾಯಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಸಭೆಯಲ್ಲಿ ಸರ್ಕಾರ ಸಂಸತ್ತಿನ ಉಭಯ ಸದನಗಳ ಸುಗಮ ಕಲಾಪಕ್ಕೆ ಎಲ್ಲ ರಾಜಕೀಯ ಪಕ್ಷಗಳ ಸಹಕಾರವನ್ನು ಕೋರಲಿದೆ. ಸಂಸತ್ತಿನ ಬಜೆಟ್ ಅಧಿವೇಶನ ಇದೇ 31ರಿಂದ ಆರಂಭವಾಗಲಿದೆ. ಮೊದಲ ದಿನ ಬೆಳಿಗ್ಗೆ 11 ಗಂಟೆಗೆ ಸೆಂಟ್ರಲ್ ಹಾಲ್ ನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡುವರು.
ಅದೇ ದಿನವೇ ಆರ್ಥಿಕ ಸಮೀಕ್ಷೆಯನ್ನೂ ಸಹ ಮಂಡಿಸಲಾಗುವುದು. ಫೆಬ್ರವರಿ 1ರಂದು 2023-24ನೇ ಸಾಲಿನ ಕೇಂದ್ರ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆ ಮಾಡಲಿದ್ದಾರೆ.
ಬಜೆಟ್ ಅಧಿವೇಶನ ಏಪ್ರಿಲ್ 6ವರೆಗೆ ನಡೆಯಲಿದ್ದು, ಸುಮಾರು 66 ದಿನಗಳಲ್ಲಿ 27 ಕಲಾಪಗಳು ನಡೆಯಲಿದೆ. ಮೊದಲ ಅವಧಿಯಲ್ಲಿ ಅಧಿವೇಶನ ಫೆಬ್ರವರಿ 13ರವರೆಗೆ ನಡೆಯಲಿದೆ. ಫೆಬ್ರವರಿ 14ರಿಂದ ಮಾರ್ಚ್ 12ರವರೆಗೆ ಅಧಿವೇಶನಕ್ಕೆ ಬಿಡುವು ಇರಲಿದೆ ಆನಂತರ ಮಾರ್ಚ್ 13ರಿಂದ ಆರಂಭವಾಗುವ ಅಧಿವೇಶನ ಏಪ್ರಿಲ್ 6ಕ್ಕೆ ಕೊನೆಗೊಳ್ಳಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980336243
