ದಿನದ ಸುದ್ದಿ
ಪಾತಾಳ ಮುಟ್ಟಿರುವ ಆರ್ಥಿಕ ಸ್ಥಿತಿ ಮೇಲೆತ್ತುವ ಇಚ್ಛಾಶಕ್ತಿ ಕೇಂದ್ರ ವಿತ್ತ ಸಚಿವರಿಗಿಲ್ಲ : ಸಿದ್ದರಾಮಯ್ಯ

ಸುದ್ದಿದಿನ,ಬೆಂಗಳೂರು : ಕಳೆದ ಬಾರಿಯ ಕೇಂದ್ರದ ಬಜೆಟ್ ಗಾತ್ರ ರೂ.27 ಲಕ್ಷ ಕೋಟಿಗಳಿತ್ತು, ಈ ಬಾರಿ ರೂ.30 ಲಕ್ಷದ 42 ಸಾವಿರ ಕೋಟಿಗೆ ಏರಿಕೆ ಕಂಡಿದೆ. ನೇರ ತೆರಿಗೆ ಸಂಗ್ರಹ ಕಡಿಮೆಯಾದ ಕಾರಣ ಕಳೆದ ಬಾರಿ ಸುಮಾರು ಎರಡು ಲಕ್ಷ ಕೋಟಿ ಹಣ ಕೊರತೆಯಾಗಿತ್ತು. ಕೇಲವ ರೂ.25 ಲಕ್ಷ ಕೋಟಿಗಳಷ್ಟು ಮಾತ್ರ ಖರ್ಚು ಮಾಡಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರುು.
ಶನಿವಾರ ವಿತ್ತ ಸಚಿವೆ ನಿರ್ಮಲಾ ಸೀತಾರಾಮ್ ಮಂಡಿಸಿದ ಬಜೆಟ್ ಉದ್ದೇಶಿಸಿ ಮಾತನಾಡಿದ ಅವರು, ಎರಡನೇ ಬಾರಿ ನರೇಂದ್ರ ಮೋದಿಯವರ ಸರ್ಕಾರ ಅಧಿಕಾರಕ್ಕೆ ಬಂದಾಗ ದೇಶದ ಆದಾಯವನ್ನು 5 ಟ್ರಿಲಿಯನ್ ಡಾಲರ್ಗೆ ಏರಿಸುವುದಾಗಿ ಭರವಸೆ ನೀಡಿದ್ದರು. ಇಂದು ದೇಶದ ಜಿಡಿಪಿ 2.5 ರಷ್ಟಿದೆ, ಈ ಪರಿಸ್ಥಿತಿಯಲ್ಲಿ ಮೋದಿಯವರ ಭರವಸೆ ಈಡೇರುವುದು ಕನಸಿನ ಮಾತು.
ಪ್ರಸಕ್ತ ಬಜೆಟ್ನಲ್ಲಿ ದೇಶದ ಜಿಡಿಪಿಯನ್ನು 6% ಗೆ ಏರಿಸುವ ಕುರಿತು ವ್ಯಾಖ್ಯಾನಿಸಲಾಗಿದ್ದರೂ, ಅದರ ಈಡೇರಿಕೆಗೆ ಬೇಕಾದಂತಹ ಪರಿಣಾಮಕಾರಿ ಕಾರ್ಯಸೂಚಿಗಳೇನು ಕಂಡುಬರುತ್ತಿಲ್ಲ. ಹಾಗಾಗಿ ಇದೂ ಕೂಡ ಭರವಸೆಯಾಗಿಯೇ ಉಳಿಯಲಿದೆ. ಪಾತಾಳ ಮುಟ್ಟಿರುವ ಆರ್ಥಿಕ ಸ್ಥಿತಿಯನ್ನು ಮೇಲೆತ್ತಲು ಬೇಕಾದ ಇಚ್ಛಾಶಕ್ತಿ ಕೇಂದ್ರ ವಿತ್ತ ಸಚಿವರಲ್ಲಿ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹಣಕಾಸು ಸಚಿವರು ಕೃಷಿ ಕ್ಷೇತ್ರದ ಅಭಿವೃದ್ದಿಗೆ 16 ಅಂಶಗಳ ಕಾರ್ಯಕ್ರಮವನ್ನು ಘೋಷಿಸಿದ್ದಾರೆ. ಇದರಲ್ಲಿ 9 ಅಂಶಗಳು ರೈತರ ಜಮೀನನ್ನು ಖಾಸಗಿ ಕಂಪೆನಿಗಳ ಸುಪರ್ದಿಗೆ ಒಳಪಡಿಸುವಂತಿವೆ. ಉದಾಹರಣೆಗೆ ‘ಕೃಷಿ ಉಡಾನ್’ ಯೋಜನೆ ಸಣ್ಣಪುಟ್ಟ ರೈತರಿಗಿಂತ ಕಾರ್ಪೊರೇಟ್ ಕಂಪೆನಿಗಳಿಗೆ ಹೆಚ್ಚು ಲಾಭದಾಯಕವಾಗುವಂತಿದೆ. 16 ಅಂಶಗಳ ಕಾರ್ಯಕ್ರಮಗಳಲ್ಲಿ 9 ಅಂಶಗಳು ‘ಕಾರ್ಪೊರೇಟ್ ಫಾರ್ಮಿಂಗ್’ ಕಡೆಗೆ ಒತ್ತು ನೀಡುತ್ತಿವೆ. ಒಟ್ಟಾರೆ ಕೃಷಿಯನ್ನು ಖಾಸಗೀಕರಣಗೊಳಿಸುವ ಸರ್ಕಾರದ ಉದ್ದೇಶ ಇದರಿಂದ ಸ್ಪಷ್ಟವಾಗುತ್ತಿದೆ ಎಂದು ಕಿಡಿಕಾರಿದರು.
16 ಅಂಶಗಳ ಬಹುತೇಕ ಕಾರ್ಯಕ್ರಮಗಳು ಸಾಮಾನ್ಯ ರೈತರಿಗೆ ಸಂಬಂಧಿಸಿದ್ದಲ್ಲ. 162 MT ಸಾಮರ್ಥ್ಯದ ಕೋಲ್ಡ್ ಸ್ಟೋರೇಜ್ಗಳ ಮ್ಯಾಪಿಂಗ್ ಮತ್ತು ಜಿಯೊಟ್ಯಾಗಿಂಗ್ ಇದರಿಂದ ಬಡರೈತನಿಗೆ ಏನು ಲಾಭ? ರೆಫ್ರಿಜರೇಟೇಡ್ ರೈಲುಗಳು, ಕೃಷಿ ಉಡಾನ್ ವಿಮಾನಗಳು ಯಾವ ರೈತರ ಅನುಕೂಲಕ್ಕಾಗಿ ತಿಳಿಯುತ್ತಿಲ್ಲ. 2022ರ ವೇಳೆಗೆ ದೇಶದ ರೈತರ ಆದಾಯವನ್ನು ದುಪ್ಪಟ್ಟು ಮಾಡುವುದಾಗಿ ಪ್ರಧಾನಿ ಹೇಳಿದ್ದರು. ಕಳೆದ ಹಣಕಾಸು ವರ್ಷದಲ್ಲಿ ಕೃಷಿ ಕ್ಷೇತ್ರ ಶೇಕಡಾ 2.5ರಷ್ಟು ಬೆಳವಣಿಗೆ ಕಂಡಿದೆ. ರೈತರ ಆದಾಯ ದುಪ್ಪಟ್ಟು ಆಗಬೇಕಾದರೆ ಕೃಷಿ ಕ್ಷೇತ್ರ ಕನಿಷ್ಠ 10ರಿಂದ 15% ದರದಲ್ಲಿ ಬೆಳವಣಿಗೆ ಆಗಬೇಕು. ಸದ್ಯಕ್ಕೆ ಇದೂ ಕೂಡ ಅಸಾಧ್ಯದ ಮಾತು ಎಂದು ನುಡಿದರು.
ಕೇಂದ್ರ ಪ್ರಸ್ತಾಪಿಸಿರುವ 3 ಮಾದರಿ ಕಾಯ್ದೆಗಳಾದ ಭೂಮಿ ಗುತ್ತಿಗೆ ಕಾಯ್ದೆ, ಎಪಿಎಂಸಿ ಕಾಯ್ದೆಯಲ್ಲಿ ಅಮೂಲಾಗ್ರ ಬದಲಾವಣೆ ಮಾಡುವ ಹೊಸ ಮಾರ್ಕೆಟಿಂಗ್ ಕಾಯ್ದೆ ಮತ್ತು ಕಾಂಟ್ರಾಕ್ಟ್ ಫಾರ್ಮಿಂಗ್ (ಕಾರ್ಪೋರೇಟ್ ಫಾರ್ಮಿಂಗ್) ಕಾಯ್ದೆಗಳನ್ನು ರಾಜ್ಯ ಸರ್ಕಾರಗಳು ಒಪ್ಪಿಕೊಳ್ಳಲೇಬೇಕು ಎಂದು ಕೇಂದ್ರ ಹೇಳುತ್ತಿದೆ.
ಇದು ತುಂಬಾ ಅಪಾಯಕಾರಿ. ಇಡೀ ದೇಶದ ರೈತರು ಸಾಲದ ಬಲೆಯಲ್ಲಿ ಸಿಕ್ಕಿಹಾಕಿಕೊಂಡು ನರಳಾಡುತ್ತಿದ್ದಾರೆ. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿರುವ ರೈತರ ಸಾಲವನ್ನು ಮನ್ನಾ ಮಾಡಬೇಕೆಂಬುದು ನಮ್ಮದು ಹಳೆಯ ಬೇಡಿಕೆ. ಕಳೆದ ಆರು ವರ್ಷಗಳಿಂದ ಇದನ್ನು ಕೇಳುತ್ತಾ ಬಂದಿದ್ದೇವೆ. ಈ ಬಜೆಟ್ ನಲ್ಲಿಯೂ ಆ ಬಗ್ಗೆ ಉತ್ತರ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ಬಾರಿಯ ಬಜೆಟ್ನಲ್ಲಿ ಸಾರ್ವಜನಿಕ ವಲಯಗಳಿಗೆ ಒಟ್ಟು ಬಜೆಟ್ ಗಾತ್ರದ 0.90% ರಷ್ಟು ಅನುದಾನ ವಿನಿಯೋಗಿಸಲಾಗಿತ್ತು, ಈ ಬಾರಿ ಅದು 0.96% ಗೆ ಏರಿಕೆ ಕಂಡಿದೆ. ಗ್ರಾಮೀಣಾಭಿವೃದ್ಧಿಗೆ ಕಳೆದ ಬಾರಿ 1.21% ಅನುದಾನ ಮೀಸಲಿತ್ತು, ಈ ಬಾರಿ 1.23% ಗೆ ಹೆಚ್ಚಿಸಲಾಗಿದೆ.
ಈ ಬಜೆಟ್ನಲ್ಲಿ ಕೃಷಿಗೆ ಅತ್ಯಧಿಕ ಮಹತ್ವ ನೀಡುತ್ತಿದ್ದೇವೆ ಎಂದು ಕೇಂದ್ರ ಸರ್ಕಾರ ಹೇಳಿದರೂ ಕೂಡ ಕೃಷಿಗೆ ಒಟ್ಟು ಬಜೆಟ್ ಅನುದಾನದಲ್ಲಿ ಮೀಸಲಾದ ಪಾಲು ಕೇವಲ 1.50% ಮಾತ್ರ. ಕಳೆದ ಬಾರಿ ಇದು 1.46% ಇತ್ತು. ಈ ಬಾರಿಯೂ ಕೃಷಿ ಕಡೆಗಣಿಸಲ್ಪಟ್ಟಿರುವುದು ದುರದೃಷ್ಟಕರ.
ಗ್ರಾಮೀಣ ಭಾಗದ ನಿರುದ್ಯೋಗ ನಿವಾರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ನರೇಗಾ ಯೋಜನೆಗೆ ರೂ.10 ಸಾವಿರ ಕೋಟಿ ಹಣ ಕಡಿತಗೊಳಿಸಲಾಗಿದೆ. ಕಳೆದ ವರ್ಷ ರೂ.71,000 ಕೋಟಿ ನೀಡಿದ್ದರೆ, ಈ ಬಾರಿ ರೂ.61,000 ಕೋಟಿ ನಿಗದಿಗೊಳಿಸಲಾಗಿದೆ. ಇದರಿಂದ ಗ್ರಾಮೀಣ ಭಾರತ ಇನ್ನಷ್ಟು ಸೊರಗಿಹೋಗಲಿದೆ ಎಂದು ಎಚ್ಚರಿಕೆ ನೀಡಿದರು.
ಬೆಂಗಳೂರು ನಗರದ ಉಪನಗರ ರೈಲು ಯೋಜನೆ ಬಗ್ಗೆ ಕಳೆದ ಬಜೆಟ್ನಲ್ಲಿಯೇ ಪ್ರಸ್ತಾಪವಿದ್ದರೂ ಈವರೆಗೂ ಒಂದು ಸ್ಟೇಷನ್ ಆಗಲಿ, ಹಳಿ ನಿರ್ಮಾಣ ಕಾರ್ಯವಾಗಲಿ ಆಗಿಲ್ಲ. ಮತ್ತೆ ಈ ಬಾರಿಯೂ ಅದೇ ರಾಗ, ಅದೇ ಹಾಡು. ಈ ಬಜೆಟ್ನಲ್ಲಿ ಕೂಡ ಅನುದಾನವನ್ನು ಮೀಸಲಿಟ್ಟಿಲ್ಲ ಜೊತೆಗೆ ಅನುದಾನದ ಬಗ್ಗೆ ಸ್ಪಷ್ಟತೆ ಕೂಡ ಇಲ್ಲ.
ದೇಶದ ಅಭಿವೃದ್ಧಿಯ ದರ 42 ವರ್ಷಗಳಷ್ಟು ಹಿಂದಕ್ಕೆ ಹೋಗಿದೆ. ತೆರಿಗೆ ಸಂಗ್ರಹ ಎರಡು ಲಕ್ಷ ಕೋಟಿ ರೂಪಾಯಿಯಷ್ಟು ಕಡಿಮೆಯಾಗಿದೆ. ಕಾರ್ಪೋರೇಟ್ ತೆರಿಗೆ ಶೇಕಡಾ 15ರಷ್ಟು ಕಡಿಮೆಯಾಗಿದೆ. ಸಂಪನ್ಮೂಲ ಸಂಗ್ರಹದ ಯಾವ ಹೊಸ ಮಾರ್ಗಗಳ ಬಗ್ಗೆಯೂ ಬಜೆಟ್ ನಲ್ಲಿಯೂ ಪ್ರಸ್ತಾಪ ಇಲ್ಲ ಎಂದರು.
ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಪ್ರಸಕ್ತ ಬಜೆಟ್ನಲ್ಲಿ ಎಲ್ಐಸಿ ಶೇರುಗಳನ್ನು ಸಹ ಮಾರಾಟ ಮಾಡಲು ನಿರ್ಧರಿಸಲಾಗಿದೆ. ಇದೊಂದು ರೀತಿ ಕುತ್ತಿಗೆಯಲ್ಲಿರುವ ತಾಳಿ ಮಾರಾಟಕ್ಕಿಟ್ಟ ಪರಿಸ್ಥಿತಿ. ದೇಶದ ಸದ್ಯದ ಆರ್ಥಿಕ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎಂಬುದುಕ್ಕೆ ಸರ್ಕಾರದ ಈ ನಿರ್ಧಾರ ಸಾಕ್ಷಿ.
ವಿತ್ತೀಯ ಶಿಸ್ತು ಕಳೆದ ಬಾರಿ ಬಜೆಟ್ನಲ್ಲಿ 3.3 ಎಂದು ನಿಗದಿಪಡಿಸಲಾಗಿತ್ತು. ವರ್ಷಾಂತ್ಯದ ವೇಳೆಗೆ ಇದು 3.6 ತಲುಪಿತ್ತು. ಬರುವ ವರ್ಷಕ್ಕೆ ಸರ್ಕಾರವೇ 3.5 ಎಂದು ಗುರಿ ಇಟ್ಟುಕೊಂಡಿದೆ. ಅಂದರೆ ಈಗಿರುವ ಸಾಲದ ಜೊತೆಗೆ ಇನ್ನಷ್ಟು ಸಾಲ ಮಾಡಿ ದೇಶವನ್ನು ದಿವಾಳಿ ಮಾಡಲು ಸರ್ಕಾರ ನಿರ್ಧರಿಸಿದಂತಿದೆ ಎಂದು ಕೆಂಡಾಮಂಡಲರಾದರು.
ಒಟ್ಟಿನಲ್ಲಿ ಇದು ದೇಶದ ಮುನ್ನಡೆಗೆ ಬೇಕಾದ ಯಾವ ಮುನ್ನೋಟವೂ ಇಲ್ಲದ, ಭವಿಷ್ಯದ ಮೇಲಿನ ಭರವಸೆಯನ್ನು ಕಳೆದುಕೊಂಡಿರುವ ಸಾಮಾನ್ಯ ಜನರು, ರೈತರು, ಯುವಜನರು, ಉದ್ಯಮಿಗಳು ಹೀಗೆ ಯಾವ ಜನ ಸಮುದಾಯದಲ್ಲಿಯೂ ವಿಶ್ವಾಸ-ಭರವಸೆಯನ್ನು ಹುಟ್ಟಿಸದ ನಿರಾಶದಾಯಕ ಬಜೆಟ್ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ನಟ ಮನದೀಪ್ ರಾಯ್ ನಿಧನ

ಸುದ್ದಿದಿನ ಡೆಸ್ಕ್ : ಹಿರಿಯ ಚಿತ್ರನಟ ಮನದೀಪ್ ರಾಯ್ (74 ವರ್ಷ) ಇಂದು ಬೆಳಗಿನ ಜಾವ ಅಗಲಿದ್ದಾರೆ.
ಕೆಲ ದಿನಗಳ ಹಿಂದೆ ಹೃದಯಾಘಾತಕ್ಕೀಡಾಗಿದ್ದ ಅವರು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಮನದೀಪ್ ರಾಯ್ ಹವ್ಯಾಸಿ ರಂಗಭೂಮಿ ಹಿನ್ನೆಲೆಯ ಕಲಾವಿದ. ನಟ – ನಿರ್ದೇಶಕ ಶಂಕರನಾಗ್ ಅವರ ಆತ್ಮೀಯ ಒಡನಾಡಿ. ಪೋಷಕ ಪಾತ್ರ, ಹಾಸ್ಯ ನಟರಾಗಿ 500ಕ್ಕೂ ಹೆಚ್ಚು ಸಿನಿಮಾಗಳು ಹಾಗೂ ಕಿರುತೆರೆ ಸರಣಿಗಳಲ್ಲಿ ಅಭಿನಯಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕರ್ನಾಟಕದಲ್ಲಿ ಈ ವರ್ಷ ಜನಪರ ರಾಜ್ಯ ಬಜೆಟ್ ಮಂಡನೆ ; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಸುದ್ದಿದಿನ, ಹಾವೇರಿ : ಕರ್ನಾಟಕದಲ್ಲಿ ಮುಂದಿನ ತಿಂಗಳು ಮಂಡಿಸಲಾಗುತ್ತಿರುವ ಈ ವರ್ಷದ ರಾಜ್ಯ ಬಜೆಟ್ ರೈತರು, ದೀನ ದಲಿತರು, ಯುವಕರು, ಮಹಿಳೆಯರು, ದುಡಿಯುವ ವರ್ಗ ಮತ್ತು ಜನಪರವಾಗಿರುತ್ತದೆ ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹಾವೇರಿ ಜಿಲ್ಲೆ ಶಿಗ್ಗಾಂವ್ನಲ್ಲಿ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ದುಡಿಮೆಗೆ ಯೋಗ್ಯ ಬೆಲೆ ಸಿಗುವ ರೀತಿಯಲ್ಲಿ ನಮ್ಮ ಕಾರ್ಯಕ್ರಮಗಳು ಇರುತ್ತವೆ ಎಂದರು.
ಕರ್ನಾಟಕ ರಾಜ್ಯದ ಆರ್ಥಿಕ ಅಭಿವೃದ್ಧಿಯಲ್ಲಿ ನಾವು ವೇಗವನ್ನು ಕಂಡಿದ್ದೇವೆ. ಕಳೆದ ವರ್ಷ ನಾನು ಅಧಿಕಾರ ವಹಿಸಿಕೊಂಡಾಗ 5 ಸಾವಿರ ಕೋಟಿ ರೂಪಾಯಿ ರಾಜ್ಯದ ಬೊಕ್ಕಸಕ್ಕೆ ನಮ್ಮ ನಿರ್ಧಿಷ್ಟ ಗುರಿಗೆ ಕೊರತೆಯಿತ್ತು. ಅದನ್ನು ನಾವು 5 ಸಾವಿರ ಕೋಟಿ ತುಂಬುವುದಲ್ಲದೇ, 13 ಸಾವಿರ ಕೋಟಿ ಅಧಿಕವಾಗಿ ಸಂಗ್ರಹ ಮಾಡಿದ್ದೇವೆ. ಈ ವರ್ಷವೂ ಕೂಡ ನಮ್ಮ ಹಣಕಾಸಿನ ಸಂಗ್ರಹ ಉತ್ತಮವಾಗಿದೆ ಎಂದು ಕರ್ನಾಟಕದ ಮುಖ್ಯಮಂತ್ರಿ ಹೇಳಿದರು.
ಕೋವಿಡ್ ನಂತರದಲ್ಲಿ ಆರ್ಥಿಕ ಸುಧಾರಣೆ ಆಗುತ್ತಿರುವ ಸಂದರ್ಭದಲ್ಲಿ ಕೆಳಹಂತದ ಜನಸಮುದಾಯಕ್ಕೆ ಇನ್ನಷ್ಟು ಸಹಾಯ ಮಾಡಿ, ಅವರನ್ನು ಕೂಡ ಮುಖ್ಯ ವಾಹಿನಿಗೆ ಬರಬೇಕು ಎನ್ನುವ ನಿಟ್ಟಿನಲ್ಲಿ ನಾವು ಕಾರ್ಯಕ್ರಮ ರೂಪಿಸುತ್ತಿದ್ದೇವೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಸಂಸತ್ತಿನ ಬಜೆಟ್ ಅಧಿವೇಶನದ ಹಿನ್ನೆಲೆ ; ಇದೇ 30ರಂದು ಸರ್ವಪಕ್ಷಗಳ ಸಭೆ

ಸುದ್ದಿದಿನ ಡೆಸ್ಕ್ : ಸಂಸತ್ತಿನ ಮುಂಬರುವ ಬಜೆಟ್ ಅಧಿವೇಶನದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇದೇ 30ರಂದು ಸರ್ವಪಕ್ಷಗಳ ಸಭೆಯನ್ನು ಕರೆದಿದೆ. ಸಂಸತ್ ಭವನದ ಸಂಕೀರ್ಣದಲ್ಲಿ ಸೋಮವಾರ ಮಧ್ಯಾಹ್ನ 12 ಗಂಟೆಗೆ ಸಭೆ ನಡೆಯಲಿದೆ.
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ, ಕೇಂದ್ರ ಸಚಿವರು ಮತ್ತು ಸಂಸತ್ತಿನ ಎರಡೂ ಸದನಗಳನ್ನು ಪ್ರತಿನಿಧಿಸುವ ಸದನ ನಾಯಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಸಭೆಯಲ್ಲಿ ಸರ್ಕಾರ ಸಂಸತ್ತಿನ ಉಭಯ ಸದನಗಳ ಸುಗಮ ಕಲಾಪಕ್ಕೆ ಎಲ್ಲ ರಾಜಕೀಯ ಪಕ್ಷಗಳ ಸಹಕಾರವನ್ನು ಕೋರಲಿದೆ. ಸಂಸತ್ತಿನ ಬಜೆಟ್ ಅಧಿವೇಶನ ಇದೇ 31ರಿಂದ ಆರಂಭವಾಗಲಿದೆ. ಮೊದಲ ದಿನ ಬೆಳಿಗ್ಗೆ 11 ಗಂಟೆಗೆ ಸೆಂಟ್ರಲ್ ಹಾಲ್ ನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡುವರು.
ಅದೇ ದಿನವೇ ಆರ್ಥಿಕ ಸಮೀಕ್ಷೆಯನ್ನೂ ಸಹ ಮಂಡಿಸಲಾಗುವುದು. ಫೆಬ್ರವರಿ 1ರಂದು 2023-24ನೇ ಸಾಲಿನ ಕೇಂದ್ರ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆ ಮಾಡಲಿದ್ದಾರೆ.
ಬಜೆಟ್ ಅಧಿವೇಶನ ಏಪ್ರಿಲ್ 6ವರೆಗೆ ನಡೆಯಲಿದ್ದು, ಸುಮಾರು 66 ದಿನಗಳಲ್ಲಿ 27 ಕಲಾಪಗಳು ನಡೆಯಲಿದೆ. ಮೊದಲ ಅವಧಿಯಲ್ಲಿ ಅಧಿವೇಶನ ಫೆಬ್ರವರಿ 13ರವರೆಗೆ ನಡೆಯಲಿದೆ. ಫೆಬ್ರವರಿ 14ರಿಂದ ಮಾರ್ಚ್ 12ರವರೆಗೆ ಅಧಿವೇಶನಕ್ಕೆ ಬಿಡುವು ಇರಲಿದೆ ಆನಂತರ ಮಾರ್ಚ್ 13ರಿಂದ ಆರಂಭವಾಗುವ ಅಧಿವೇಶನ ಏಪ್ರಿಲ್ 6ಕ್ಕೆ ಕೊನೆಗೊಳ್ಳಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980336243
