Connect with us

ದಿನದ ಸುದ್ದಿ

ಕೇಂದ್ರ ಬಜೆಟ್ | ಕೆಲವು ಕುತೂಹಲಕರ ಅಂಕಿಅಂಶಗಳು ಮತ್ತು ನಮ್ಮ ದೇಶದ ರಿಪೋರ್ಟ್ ಕಾರ್ಡ್..!

Published

on

  • ವಿವೇಕಾನಂದ. ಹೆಚ್. ಕೆ

ಇದು ಪಕ್ಷಾತೀವಾಗಿ ದೇಶದ ವಾಸ್ತವ ಪರಿಸ್ಥಿತಿ.
ಭಾರತ ಸರ್ಕಾರದ ಬಳಿ ಇರುವ ಚಿನ್ನದ ಸಂಗ್ರಹ ಸುಮಾರು 600 ಟನ್.ಅಮೆರಿಕ ಸರ್ಕಾರದ ಬಳಿ ಇರುವ ಚಿನ್ನದ ಸಂಗ್ರಹ ಸುಮಾರು 6000 ಟನ್.
ಭಾರತ ಇಲ್ಲಿಯವರೆಗೆ ಒಲಿಂಪಿಕ್ಸ್ ಕ್ರೀಡೆಗಳಲ್ಲಿ ಗೆದ್ದ ಒಟ್ಟು ಪದಕಗಳು ಸುಮಾರು 28.ಅಮೆರಿಕ ಗೆದ್ದ ಒಟ್ಟು ಪದಕಗಳು ಸುಮಾರು 2250.

ಭಾರತದ ಒಟ್ಟು ಬಜೆಟ್ ಗಾತ್ರ ಸುಮಾರು 30 ಲಕ್ಷ ಕೋಟಿ.ಅಮೆರಿಕದ ಬಜೆಟ್ ಗಾತ್ರ ಸುಮಾರು 375 ಲಕ್ಷ ಕೋಟಿ.ವಿಶ್ವದ ಎರಡನೇ ಅತಿದೊಡ್ಡ ಆರ್ಥಿಕತೆ ಚೀನಾದ ಬಜೆಟ್ ಸುಮಾರು 100 ಲಕ್ಷ ಕೋಟಿ.ಅಮೆರಿಕದ ರಕ್ಷಣಾ ಬಜೆಟ್ ಸುಮಾರು 150 ಲಕ್ಷ ಕೋಟಿ.ಭಾರತದ ರಕ್ಷಣಾ ಬಜೆಟ್ ಸುಮಾರು ‌6/8 ಲಕ್ಷ ಕೋಟಿ.

ಭಾರತದ ಜನಸಂಖ್ಯೆ ಸುಮಾರು 128 ಕೋಟಿ.
ಅಮೆರಿಕದ ಜನಸಂಖ್ಯೆ ಸುಮಾರು 32 ಕೋಟಿ.
ವಿಸ್ತೀರ್ಣದಲ್ಲಿಯೂ ಅಮೆರಿಕ ಭಾರತಕ್ಕಿಂತ ಬಹಳ ದೊಡ್ಡದಾಗಿದೆ.ತಲಾ ಆದಾಯದ ವ್ಯತ್ಯಾಸವಂತೂ ಅಜಗಜಾಂತರವಿದೆ.ಭಾರತದ ನಿಜವಾದ ಆದಾಯ 22 ಲಕ್ಷ ಕೋಟಿಗಳು ಮಾತ್ರ. ಉಳಿದ ‌8 ಲಕ್ಷ ಸಾಲ ಮತ್ತು ಇತರ ಮೂಲಗಳು.ಅಂದರೆ ನಮ್ಮ ಈಗಿನ ಸ್ಥಿತಿ ಮತ್ತು ಸಾಗಬೇಕಾದ ಹಾದಿಯ ಒಂದು ಕಲ್ಪನೆ ಮಾಡಿಕೊಳ್ಳಿ.

ಇಲ್ಲಿ ಇನ್ನೂ ಒಂದು ಮುಖ್ಯ ವಿಷಯವಿದೆ. ಅಮೆರಿಕ ಬಜೆಟ್ ನ ಬಹುಪಾಲು ಸದುಪಯೋಗವಾಗುತ್ತದೆ. ಆದರೆ ನಮ್ಮ ದೇಶದಲ್ಲಿ ಭ್ರಷ್ಟಾಚಾರ ತುಂಬಾ ಇರುವುದರಿಂದ ಇರುವ ಹಣದ ಬಹುಪಾಲು ದುರುಪಯೋಗವಾಗುತ್ತದೆ ಅಥವಾ ವ್ಯರ್ಥವಾಗುತ್ತದೆ. ಇದು ಮತ್ತೊಂದು ಹೊಡೆತ.

ಬಜೆಟ್ ಗಳು ಮತ್ತು ನಮ್ಮ ದೇಶದ ಅಭಿವೃದ್ಧಿ

ಭಾರತದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರ ಸರ್ಕಾರಗಳು ಸ್ವಾತಂತ್ರ್ಯ ನಂತರ ಇಲ್ಲಿಯವರೆಗೂ ಸುಮಾರು 70 ಕ್ಕಿಂತ ಹೆಚ್ಚು ವಾರ್ಷಿಕ ಬಜೆಟ್ ಗಳನ್ನು ಮಂಡಿಸಿವೆ. ಪಂಚವಾರ್ಷಿಕ ಯೋಜನೆಗಳು ಮತ್ತು ಅದನ್ನು ಮೇಲ್ವಿಚಾರಣೆ ಮಾಡುವ ನೀತಿ ಆಯೋಗ ಸಹ ಇದೆ. ಅಪಾರ ಪ್ರಮಾಣದ ಎಲ್ಲಾ ದರ್ಜೆಯ ಆಡಳಿತ ಯಂತ್ರ ಸಹ ಕೆಲಸ ಮಾಡುತ್ತಲೇ ಇದೆ.

ಯಾವ ಸರ್ಕಾರಗಳು ಸಹ ಸಾಮಾನ್ಯವಾಗಿ ಜನರಿಗೆ ತೊಂದರೆ ಕೊಡುವ ಅಥವಾ ಜನರನ್ನು ನಾಶ ಮಾಡುವ ಯೋಜನೆಗಳನ್ನು ರೂಪಿಸುವುದಿಲ್ಲ. ಬಹಳ ಜನರಿಗೆ ಒಳ್ಳೆಯದಾಗಲಿ ಎಂಬ ಆಶಯವನ್ನೇ ಹೊಂದಿರುತ್ತವೆ.

1950 ಮತ್ತು 2020 ರ ನಡುವೆ ಭಾರತದ ಅಭಿವೃದ್ಧಿ ಸುಮಾರಾಗಿ ಆಗಿದೆ. ವಿಶ್ವ ಸಮುದಾಯ ಕೂಡಾ ತಂತ್ರಜ್ಞಾನದ ಸಹಾಯದಿಂದ ಪ್ರಗತಿಯ ಪಥದಲ್ಲಿದೆ.

ಭಾರತದ ಮಟ್ಟಿಗೆ‌ ಅಭಿವೃದ್ಧಿ ಸಮಾನಾಂತರವಾಗಿಲ್ಲ ಮತ್ತು ಸಮಾಧಾನಕರವಾಗಿಲ್ಲ. ದೇಶದ ಶೇಕಡಾ 50% ಗೂ ಹೆಚ್ಚು ಜನ ತಾವು ಇಷ್ಟಪಟ್ಟ ದೈನಂದಿನ ಊಟ ಬಟ್ಟೆ ವಾಸ ಮಕ್ಕಳ ಯೋಗಕ್ಷೇಮ ಮತ್ತು ಸಾಧಾರಣ ಆರೋಗ್ಯ ವ್ಯವಸ್ಥೆ ಮಾಡಿಕೊಳ್ಳಲು ಇನ್ನೂ ಸಾಧ್ಯವಾಗಿಲ್ಲ.

ಇದನ್ನು ನಾವು ಪಕ್ಷಾತೀತವಾಗಿ ಮತ್ತು ನಿಷ್ಪಕ್ಷಪಾತವಾಗಿ ಭಾರತದ ನಿಜವಾದ ಹಿತಾಸಕ್ತಿಯಿಂದ ನೋಡಬೇಕು. ಯಾವುದೋ ಪಕ್ಷದ ವಕ್ತಾರರಂತೆ ಒಬ್ಬರಿಗೊಬ್ಬರು ಆಪಾದನೆ ಮಾಡುತ್ತಾ ಕೆಸರೆರಚಾಟ ಮಾಡಿದರೆ ಸತ್ಯ ಮತ್ತು ವಾಸ್ತವ ಮರೆಯಾಗಿ ಕೇವಲ ಒಣ ಚರ್ಚೆ ಮತ್ತು ಅಂಕಿಅಂಶಗಳು ಮಹತ್ವ ಪಡೆಯುತ್ತವೆ.

ಸರ್ಕಾರ ಘೋಷಿಸುವ ಯಾವುದೇ ಯೋಜನೆಗಳು ಜಾರಿಯಾಗುವುದು ನಮ್ಮ ಸರ್ಕಾರಿ ಆಡಳಿತ ಯಂತ್ರದ ಮುಖಾಂತರ. ಅದು ಈಗಾಗಲೇ ಕಿಲುಬು ಹಿಡಿದಿದೆ. ಅದನ್ನು ಸರಿ ಮಾಡದೆ ಯಾವ ಯೋಜನೆ ಘೋಷಿಸಿದರು ಸಂಪೂರ್ಣ ಉಪಯೋಗ ಆಗುವುದಿಲ್ಲ. ಅದನ್ನು ಸರಿ ದಾರಿಗೆ ತರಲು ರಾಜಕಾರಣಿಗಳು ಹೆಚ್ಚಿನ ಮಹತ್ವ ನೀಡುತ್ತಿಲ್ಲ.

ಇಲ್ಲಿ ಇನ್ನೊಂದು ಆಶ್ಚರ್ಯಕರ ವಿಷಯವಿದೆ. ಆದಾಯ ತೆರಿಗೆ ವಿನಾಯಿತಿ, ವಸ್ತು ಮತ್ತು ಸೇವೆಗಳ ತೆರಿಗೆ ಹೆಚ್ಚಳ, ಸರ್ಕಾರಿ ನೌಕರರ ಸಂಬಳ ಹೆಚ್ಚಳ ಇನ್ನೂ ಮುಂತಾದ ಯೋಜನೆಗಳು ಚಾಚೂ ತಪ್ಪದೆ ಅಥವಾ ಅದಕ್ಕಿಂತ ಹೆಚ್ಚಾಗಿಯೇ ಸಂಪೂರ್ಣ ಜಾರಿಯಾಗುತ್ತದೆ. ಕಾರಣ ಈ ಯೋಜನೆಗಳು ಈಗಾಗಲೇ ವಿದ್ಯಾವಂತರಾಗಿರುವ ಮತ್ತು ವ್ಯವಸ್ಥೆಯ ಮೇಲೆ ನಿಯಂತ್ರಣ ಹೊಂದಿರುವ ಜನಗಳು ಇವುಗಳನ್ನು ಸ್ವತಃ ಅಥವಾ ಮಧ್ಯವರ್ತಿಗಳ ಮುಖಾಂತರ ಜಾರಿಯಾದ ಮಧ್ಯರಾತ್ರಿಯಿಂದಲೇ ಲಾಭ ಪಡೆದುಕೊಳ್ಳುತ್ತಾರೆ.

ಆದರೆ, ಇನ್ನೂ ಕೆಲವು ‌ಯೋಜನೆಗಳು ಇವೆ‌. ಉದಾಹರಣೆಗೆ ಗರೀಬೀ ಹಠವೋ, ನರೇಗಾ, ಆಹಾರ ಭದ್ರತೆ, ಬೇಟಿ ಬಚಾವೋ ಬೇಟಿ ಪಡಾವೋ , ಸ್ವಚ್ಛ ಭಾರತ್, ಆಯುಷ್ಮಾನ್ ಮುಂತಾದ ಯೋಜನೆಗಳು ಅದರ ನಿಜ ರೂಪದಲ್ಲಿ ಜನರಿಗೆ ತಲುಪುವುದು ತುಂಬಾ ಕಷ್ಟವಿದೆ.

ಜನರಲ್ಲಿ ಇರುವ ಅಜ್ಞಾನ ಬಡತನ ದಾಖಲೆ ಮತ್ತು ಮಾಹಿತಿಯ ಕೊರತೆ, ಭ್ರಷ್ಟಾಚಾರ ಮತ್ತು ಸ್ವಜನ ಪಕ್ಷಪಾತ, ರಾಜಕಾರಣಿಗಳು ಮತ್ತು ಅಧಿಕಾರಿಗಳ ನಿರ್ಲಕ್ಷತನ ಮತ್ತು ಸೋಮಾರಿತನ, ಅಸೂಯೆ ಮುಂತಾದ ಕಾರಣಗಳು ಇವುಗಳನ್ನು ಜಾರಿಯಾಗಲು ಬಿಡುವುದಿಲ್ಲ.

ಪಾರ್ಲಿಮೆಂಟ್ ಅಥವಾ ವಿಧಾನಸೌದದಲ್ಲಿ ಅಂಕಿಅಂಶಗಳ ಸರ್ಕಸ್ ಮಾಡುತ್ತಾ ಬಜೆಟ್ ಮಂಡಿಸುವುದು ಮತ್ತು ಅದರ ಪರ ವಿರೋಧದ ಚರ್ಚೆಗಳಿಗಿಂತ,ಅದರ ಅನುಷ್ಠಾನ ಮತ್ತು ವಾಸ್ತವ ಫಲಿತಾಂಶಗಳ ಬಗ್ಗೆ ಹೆಚ್ಚಿನ ಗಮನ ಹರಿಸಿದರೆ ನಿಜವಾದ ಮತ್ತು ಸಮಾನವಾದ ಅಭಿವೃದ್ಧಿ ಸಾಧ್ಯ. ಇಲ್ಲದಿದ್ದರೆ ಪ್ರತಿ ಸರ್ಕಾರಗಳ ಪ್ರತಿ ಬಜೆಟ್ ಕೇವಲ ಸಾಂಕೇತಿಕ ಶಾಸ್ತ್ರವಾಗುತ್ತದೆ. ಚುನಾವಣಾ ರಾಜಕೀಯದ ನಾಟಕಗಳಾಗುತ್ತವೆ. ಇದು ಎಲ್ಲಾ ಪಕ್ಷಗಳ ಎಲ್ಲಾ ಸರ್ಕಾರಗಳಿಗೂ ಸಮನಾಗಿ ಅನ್ವಯ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಓಬವ್ವ ಆತ್ಮ ರಕ್ಷಣಾ ಕಲೆ ಕರಾಟೆ ಯೋಜನೆಗೆ 18 ಕೋಟಿ ರೂಪಾಯಿ ಮೀಸಲು

Published

on

ಸುದ್ದಿದಿನ,ಯಾದಗಿರಿ : ರಾಜ್ಯ ವಸತಿ ಶಾಲೆಗಳ ಹೆಣ್ಣು ಮಕ್ಕಳ ಆತ್ಮರಕ್ಷಣೆಗಾಗಿ ರೂಪಿಸಿರುವ ಓಬವ್ವ ಆತ್ಮರಕ್ಷಣಾ ಕಲೆ ಕರಾಟೆ ಯೋಜನೆಯ ಅನುಷ್ಠಾನಕ್ಕಾಗಿ 18 ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತಿದೆ ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ತಿಳಿಸಿದರು.

ಯಾದಗಿರಿ ಜಿಲ್ಲೆಯ ವಡಗೇರಾ ತಾಲ್ಲೂಕಿನ ಬೆಂಡೆಬೆಂಬಳಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲಾ ವಿದ್ಯಾರ್ಥಿಗಳು ನಡೆಸಿಕೊಟ್ಟ ಕರಾಟೆ ಪ್ರದರ್ಶನ ವೀಕ್ಷಿಸಿ ಮಾತನಾಡಿದ ಅವರು, ಹೆಣ್ಣು ಮಕ್ಕಳಿಗೆ ಆತ್ಮರಕ್ಷಣೆ ಕಲೆ ಅಗತ್ಯವಾಗಿದ್ದು, ಈ ಹಿನ್ನೆಲೆಯಲ್ಲಿ ಸರ್ಕಾರ ಓಬವ್ವ ಆತ್ಮರಕ್ಷಣಾ ಕಲೆ ಕರಾಟೆ ಯೋಜನೆಯನ್ನು ರಾಜ್ಯದ ಎಲ್ಲ ವಸತಿ ಶಾಲೆಗಳಲ್ಲಿ ಆರಂಭಿಸಿದೆ. ಈಗಾಗಲೇ ಒಂದು ಸಾವಿರ ಕರಾಟೆ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಮಕ್ಕಳ ಕರಾಟೆ ಕಲೆ ಹಾಗೂ ಸಮವಸ್ತ್ರಕ್ಕಾಗಿ 18 ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಬಡವರು, ಆರ್ಥಿಕವಾಗಿ ಹಿಂದುಳಿದವರು, ಅಲೆಮಾರಿಗಳ ಮಕ್ಕಳೇ ವಿಶೇಷವಾಗಿ ಈ ವಸತಿ ಶಾಲೆಗಳಿಗೆ ದಾಖಲಾಗುತ್ತಿದ್ದು, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಸರ್ಕಾರ ಬದ್ಧವಾಗಿದೆ. ಈ ಹಿನ್ನೆಲೆಯಲ್ಲಿ ವಸತಿ ಶಾಲೆಗಳನ್ನು ಮತ್ತುಷ್ಟು ಬಲಪಡಿಸಲು ಕ್ರಮ ವಹಿಸಲಾಗುವುದು ಎಂದು ಸಚಿವರು ತಿಳಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ನಟ ಮನದೀಪ್‌ ರಾಯ್‌ ನಿಧನ

Published

on

ಸುದ್ದಿದಿನ ಡೆಸ್ಕ್ : ಹಿರಿಯ ಚಿತ್ರನಟ ಮನದೀಪ್‌ ರಾಯ್‌ (74 ವರ್ಷ) ಇಂದು ಬೆಳಗಿನ ಜಾವ ಅಗಲಿದ್ದಾರೆ.

ಕೆಲ ದಿನಗಳ ಹಿಂದೆ ಹೃದಯಾಘಾತಕ್ಕೀಡಾಗಿದ್ದ ಅವರು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಮನದೀಪ್‌ ರಾಯ್‌ ಹವ್ಯಾಸಿ ರಂಗಭೂಮಿ ಹಿನ್ನೆಲೆಯ ಕಲಾವಿದ. ನಟ – ನಿರ್ದೇಶಕ ಶಂಕರನಾಗ್‌ ಅವರ ಆತ್ಮೀಯ ಒಡನಾಡಿ. ಪೋಷಕ ಪಾತ್ರ, ಹಾಸ್ಯ ನಟರಾಗಿ 500ಕ್ಕೂ ಹೆಚ್ಚು ಸಿನಿಮಾಗಳು ಹಾಗೂ ಕಿರುತೆರೆ ಸರಣಿಗಳಲ್ಲಿ ಅಭಿನಯಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಕರ್ನಾಟಕದಲ್ಲಿ ಈ ವರ್ಷ ಜನಪರ ರಾಜ್ಯ ಬಜೆಟ್ ಮಂಡನೆ ; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

Published

on

ಸುದ್ದಿದಿನ, ಹಾವೇರಿ : ಕರ್ನಾಟಕದಲ್ಲಿ ಮುಂದಿನ ತಿಂಗಳು ಮಂಡಿಸಲಾಗುತ್ತಿರುವ ಈ ವರ್ಷದ ರಾಜ್ಯ ಬಜೆಟ್ ರೈತರು, ದೀನ ದಲಿತರು, ಯುವಕರು, ಮಹಿಳೆಯರು, ದುಡಿಯುವ ವರ್ಗ ಮತ್ತು ಜನಪರವಾಗಿರುತ್ತದೆ ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಹಾವೇರಿ ಜಿಲ್ಲೆ ಶಿಗ್ಗಾಂವ್‌ನಲ್ಲಿ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ದುಡಿಮೆಗೆ ಯೋಗ್ಯ ಬೆಲೆ ಸಿಗುವ ರೀತಿಯಲ್ಲಿ ನಮ್ಮ ಕಾರ್ಯಕ್ರಮಗಳು ಇರುತ್ತವೆ ಎಂದರು.

ಕರ್ನಾಟಕ ರಾಜ್ಯದ ಆರ್ಥಿಕ ಅಭಿವೃದ್ಧಿಯಲ್ಲಿ ನಾವು ವೇಗವನ್ನು ಕಂಡಿದ್ದೇವೆ. ಕಳೆದ ವರ್ಷ ನಾನು ಅಧಿಕಾರ ವಹಿಸಿಕೊಂಡಾಗ 5 ಸಾವಿರ ಕೋಟಿ ರೂಪಾಯಿ ರಾಜ್ಯದ ಬೊಕ್ಕಸಕ್ಕೆ ನಮ್ಮ ನಿರ್ಧಿಷ್ಟ ಗುರಿಗೆ ಕೊರತೆಯಿತ್ತು. ಅದನ್ನು ನಾವು 5 ಸಾವಿರ ಕೋಟಿ ತುಂಬುವುದಲ್ಲದೇ, 13 ಸಾವಿರ ಕೋಟಿ ಅಧಿಕವಾಗಿ ಸಂಗ್ರಹ ಮಾಡಿದ್ದೇವೆ. ಈ ವರ್ಷವೂ ಕೂಡ ನಮ್ಮ ಹಣಕಾಸಿನ ಸಂಗ್ರಹ ಉತ್ತಮವಾಗಿದೆ ಎಂದು ಕರ್ನಾಟಕದ ಮುಖ್ಯಮಂತ್ರಿ ಹೇಳಿದರು.

ಕೋವಿಡ್ ನಂತರದಲ್ಲಿ ಆರ್ಥಿಕ ಸುಧಾರಣೆ ಆಗುತ್ತಿರುವ ಸಂದರ್ಭದಲ್ಲಿ ಕೆಳಹಂತದ ಜನಸಮುದಾಯಕ್ಕೆ ಇನ್ನಷ್ಟು ಸಹಾಯ ಮಾಡಿ, ಅವರನ್ನು ಕೂಡ ಮುಖ್ಯ ವಾಹಿನಿಗೆ ಬರಬೇಕು ಎನ್ನುವ ನಿಟ್ಟಿನಲ್ಲಿ ನಾವು ಕಾರ್ಯಕ್ರಮ ರೂಪಿಸುತ್ತಿದ್ದೇವೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending