ದಿನದ ಸುದ್ದಿ
ಲೈಸೆನ್ಸ್ ಶುಲ್ಕ ಬಾಕಿ: ಖಾಸಗಿ ಟೆಲಿಕಾಂ ಕಂಪನಿಗಳ ದಕ್ಷತೆ ಮತ್ತು ಸರಕಾರಕ್ಕೆ ನ್ಯಾಯಾಲಯದ ತರಾಟೆ

- “ಸಂಚಾರ್ ಭವನ”ದಲ್ಲಿರುವ ಕೆಲವು ಕಿರಿಯ ಅಧಿಕಾರಿಗಳು ಸುಪ್ರಿಂ ಕೋರ್ಟ್ ಆದೇಶವನ್ನು ಉಲ್ಲಂಘಿಸುವ ನಿರ್ದೇಶನವನ್ನು ಕೊಟ್ಟಿದ್ದಾರೆ ಎಂದರೆ ನಂಬಬಹುದೇ?. ಇಲ್ಲಿ ನ್ಯಾಯಮೂರ್ತಿ ಅರುಣ್ ಮಿಶ್ರ ಹೇಳಿದ ವಿಪುಲ ಹಣಬಲದ ಟಿಪ್ಪಣಿಯನ್ನು ನೆನಪಿಸಿಕೊಳ್ಳದಿರಲು ಸಾಧ್ಯವಿಲ್ಲ. ಇದಲ್ಲದೆ, ಗಂಭೀರ ಹಣಕಾಸು ಕೊರತೆಯನ್ನು ಎದುರಿಸುತ್ತಿರುವ ಸರಕಾರ 1.47 ಲಕ್ಷ ಕೋಟಿ ರೂ.ಗಳ ಒಂದು ಭಾರೀ ಮೊತ್ತವನ್ನು ಪಡೆಯಲು ಅನುವು ಮಾಡಿಕೊಟ್ಟ ಸುಪ್ರಿಂ ಕೋರ್ಟ್ ತೀರ್ಪನ್ನು ಜಾರಿಗೊಳಿಸಲು ಉತ್ಸುಕವಾಗಿಲ್ಲ ಏಕೆ ಎಂಬ ಪ್ರಶ್ನೆಯೂ ಏಳುತ್ತದೆ. 2007ರಿಂದ 2012 ರ ನಡುವೆ ತನ್ನ ಒಡೆತನದ ಬಿಎಸ್ಎನ್ಎಲ್ನ್ನು ದುರ್ಬಲಗೊಳಿಸಿ, ಈ ಖಾಸಗಿ ಕಂಪನಿಗಳು ಅಪಾರ ಲಾಭಗಳನ್ನು ಪೇರಿಸಲು ಅವಕಾಶ ಕಲ್ಪಿಸಿದ ಸರಕಾರ ಮಾತ್ರವೇ ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡಬೇಕು.
ಪಿ. ಅಭಿಮನ್ಯು
ಫೆಬ್ರುವರಿ 14, 2020 ರಂದು ಸುಪ್ರಿಂ ಕೋರ್ಟ್, ಲೈಸೆನ್ಸ್ ಶುಲ್ಕ ಬಾಕಿಯನ್ನು ತೆರದೆ ತಪ್ಪಿಸಿಕೊಳ್ಳುತ್ತಿರುವ ಖಾಸಗಿ ಟೆಲಿಕಾಂ ಕಂಪನಿಗಳನ್ನು ಕಾಪಾಡುವ ಪ್ರಯತ್ನ ನಡೆಸುತ್ತಿದೆ ಎಂದು ಸರಕಾರವನ್ನು ತರಾಟೆಗೆ ತಗೊಂಡಿತು. ವೊಡಾಫೋನ್ ಇಂಡಿಯ, ಏರ್ಟೆಲ್ ಮತ್ತು ಟಾಟಾ ಟೆಲಿಸರ್ವಿಸಸ್ ಇವು ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಪಾಲಿಸದೇ ಇರುವುದಕ್ಕೆ ತೀವ್ರ ಟೀಕೆಗೆ ಒಳಗಾಗಿರುವ ಖಾಸಗಿ ಟೆಲಿಕಾಂ ಕಂಪನಿಗಳು.
ಅಕ್ಟೋಬರ್ 24, 2019ರಂದು ನ್ಯಾಯ ಮೂರ್ತಿಗಳಾದ ಅರುಣ್ ಮಿಶ್ರ, ಎಸ್.ಅಬ್ದುಲ್ ನಝೀರ್ ಮತ್ತು ಎಂ.ಆರ್.ಷಾ ಇದ್ದ ಸುಪ್ರಿಂ ಕೋರ್ಟ್ ಪೀಠ ಈ ಮೂರು ಕಂಪನಿಗಳು ಲೈಸೆನ್ಸ್ ಶುಲ್ಕ ಬಾಕಿ ರೂ.1.47 ಲಕ್ಷ ಕೋಟಿ ರೂ.ಗಳನ್ನು ಮೂರು ವಾರದೊಳಗೆ ಪಾವತಿ ಮಾಡಬೇಕು ಎಂದು ಆದೇಶಿಸಿತು. ಈ ಆದೇಶದ ಪ್ರಕಾರ ವೊಡಾಫೋನ್ 53,038 ಕೋಟಿ ರೂ., ಏರ್ಟೆಲ್ 35,586 ಕೊಟಿ ರೂ. ಮತ್ತು ಟಾಟಾ ಟೆಲಿಸರ್ವಿಸಸ್ 13,823 ಕೋಟಿ ರೂ.ಗಳನ್ನು ಪಾವತಿ ಮಾಡಬೇಕಾಗಿದೆ. ಆದರೆ ಈ ಆದೇಶದ ನಂತರ ನಾಲ್ಕು ತಿಂಗಳು ಕಳೆದರೂ ಈ ಖಾಸಗಿ ಕಂಪನಿಗಳು ಒಂದು ರೂಪಾಯಿಯನ್ನೂ ತೆರಲಿಲ್ಲ.
ಸುಪ್ರಿಂ ಕೋರ್ಟ್ ಅತ್ಯಂತ ಕೋಪೋದ್ರಿಕ್ರ ಗೊಂಡದ್ದು, ಇದಕ್ಕಿಂತ ಹೆಚ್ಚಾಗಿ, ಈ ಖಾಸಗಿ ಕಂಪನಿಗಳಿಂದ ಈ ಬಾಕಿಗಳನ್ನು ವಸೂಲಿ ಮಾಡಲು ಕಟ್ಟುನಿಟ್ಟಾದ ಕ್ರಮಗಳನ್ನು ಕೈಗೊಳ್ಳಬೇಕಾಗಿದ್ದ ದೂರಸಂಪರ್ಕ ಇಲಾಖೆ ತನ್ನ ಕರ್ತವ್ಯ ನಿರ್ವಹಿಸುವ ಬದಲಿಗೆ, ಈ ಪಾವತಿಯನ್ನು ತಪ್ಪಿಸಿಕೊಳ್ಳಲು ಅದೇ ಅನುಕೂಲ ಕಲ್ಪಿಸಿಕೊಟ್ಟದ್ದು. ಜನವರಿ 23, 2020ರಂದು ಇಲಾಖೆ, ಸುಪ್ರಿಂ ಕೋರ್ಟ್ ಆದೇಶದಂತೆ ಈ ಟೆಲಿಕಾಂ ಕಂಪನಿಗಳಿಂದ ಯಾವುದೇ ಬಾಕಿ ಪಾವತಿಗೆ ಒತ್ತಾಯ ಹಾಕಬಾರದು ಎಂದು ಅಕೌಂಟೆಂಟ್ ಜನರಲ್ಗೆ ನಿರ್ದೇಶನ ನೀಡಿತು, ಮತ್ತು ಮುಂದಿನ ಆದೇಶದ ವರೆಗೆ, ಯಾವುದೇ ಕಠಿಣ ಕ್ರಮಗಳನ್ನು ಕೈಗೊಳ್ಳಬಾರದು ಎಂದೂ ಹೇಳಿತು.
ಈ ನಿರ್ದೇಶನವನ್ನು ಪ್ರಸ್ತಾಪಿಸುತ್ತ ನ್ಯಾಯಮೂರ್ತಿ ಅರುಣ್ ಮಿಶ್ರ ಇಲ್ಲಿ ಎಷ್ಟೊಂದು ಹಣಬಲ ಇದೆ, ನನಗೆ ಬಹಳ ಯಾತನೆಯಾಗುತ್ತಿದೆ, ಈ ವ್ಯವಸ್ಥೆಯಲ್ಲಿ ಈ ನ್ಯಾಯಾಲಯದಲ್ಲಿ ಕೆಲಸ ಮಾಡಬಾರದು ಎಂದು ನನಗನಿಸುತ್ತಿದೆ ಎಂದು ಟಿಪ್ಪಣಿ ಮಾಡಿದರು.
ಈ ಮೊಕದ್ದಮೇ ಆರಂಭವಾದದ್ದು, 1999ರಲ್ಲಿ. 1995ರಲ್ಲಿ ಖಾಸಗಿ ಕಂಪನಿಗಳಿಗೆ ಟೆಲಿಕಾಂ ಸೇವೆಗಳನ್ನು ಒದಗಿಸಲು ಲೈಸೆನ್ಸ್ಗಳನ್ನು ಕೊಡಲಾಯಿತು. ಲೈಸೆನ್ಸ್ ಶರತ್ತುಗಳ ಪ್ರಕಾರ ಈ ಕಂಪನಿಗಳು ಒಂದು ನಿಗದಿತ ಲೈಸೆನ್ಸ್ ಶುಲ್ಕವನ್ನು ತೆರಬೇಕಾಗಿತ್ತು. ಆದರೆ 1995ರಿಂದ 1999ರ ವರೆಗೂ ಈ ಕಂಪನಿಗಳು ಯಾವುದೇ ಲೈಸೆನ್ಸ್ ಶುಲ್ಕವನ್ನು ತೆರಲಿಲ್ಲ. ಹೀಗೆ ಬಾಕಿಯಾದ ಶುಲ್ಕಗಳ ಮೊತ್ತ ಹಲವು ಸಾವಿರ ಕೋಟಿ ರೂ.ಗಳಿಗೇರಿತು. 1999ರಲ್ಲಿ ಆಗಿನ ಪ್ರಧಾನ ಮಂತ್ರಿ ವಾಜಪೇಯಿರುವರು ಉದಾರ ಮನಸ್ಸಿನಿಂದ ಸಂಪೂರ್ಣ ಲೈಸೆನ್ಸ್ ಶುಲ್ಕಗಳಿಗೆ ವಿನಾಯ್ತಿ ನೀಡಿದರು. ಅಲ್ಲದೆ, ನಿಗದಿತ ಲೈಸೆನ್ಸ್ ಶುಲ್ಕದ ಮಾದರಿಯ ಬದಲಿಗೆ, ರೆವಿನ್ಯೂ ಪಾಲುದಾರಿಕೆಯ ಮಾದರಿಯನ್ನು ತಂದರು.
ಇದರ ಪ್ರಕಾರ ಖಾಸಗಿ ಟೆಲಿಕಾಂ ಕಂಪನಿಗಳು, ತಮ್ಮ ರೆವಿನ್ಯೂ ಗಳಿಕೆಯ ಒಂದು ಭಾಗವನ್ನು ಲೈಸೆನ್ಸ್ ಶುಲ್ಕವಾಗಿ ತೆರಬೇಕು. ಆರಂಭದಲ್ಲಿ ಇದನ್ನು 15ಶೇ. ಎಂದು ನಿಗದಿ ಮಾಡಲಾಯಿತು, ನಂತರ ಇದನ್ನು 13ಶೇ.ಕ್ಕೆ ಇಳಿಸಲಾಯಿತು, ಅಂತಿಮವಾಗಿ 8ಶೇ. ಎಂದು ನಿಗದಿ ಮಾಡಲಾಯಿತು.
ಈ ರೆವಿನ್ನೂ ಪಾಲುದಾರಿಕೆ ಮಾದರಿಯನ್ನು ಬಳಸಿಕೊಂಡು ಈ ಟೆಲಿಕಾಂ ಕಂಪನಿಗಳು ತಮ್ಮ ರೆವಿನ್ಯೂ ಸಂಗ್ರಹವನ್ನು ಸತತವಾಗಿ ಕಡಿಮೆಗೊಳಿಸಿ ತೋರಿಸಲಾರಂಭಿಸಿ, ಸರಕಾರಕ್ಕೆ ಲೈಸೆನ್ಸ್ ಶುಲ್ಕವನ್ನು ವಂಚಿಸಿದರು. ದೂರಸಂಪರ್ಕ ಇಲಾಖೆ ಹೊರಗಣ ಆಡಿಟರ್ಗಳಿಂದ ನಡೆಸಿದ ತಪಾಸಣೆಗಳು ಈ ವಂಚನೆಯನ್ನು ತೋರಿಸಿಕೊಟ್ಟವು. ಇದರಿಂದಾಗಿ, ಅವು ಲೈಸೆನ್ಸ್ ಶುಲ್ಕ ತೆರುವಂತೆ ಮಾಡಲಾಯಿತು.
ಇದಲ್ಲದೆ, ಆರಂಭದಿಂದಲೇ, ಈ ಖಾಸಗಿ ಕಂಪನಿಗಳು ಎಜಿಆರ್(ಸರಿಹೊಂದಿಸಿದ ಒಟ್ಟು ರೆವಿನೂ ಆದಾಯ)ದ ಲೆಕ್ಕಾಚಾರದಲ್ಲಿ ಕೈಚಳಕ ನಡೆಸಿಕೊಂಡು ಬಂದವು. ಈ ಎಜಿಆರ್ನಲ್ಲಿ ಟೆಲಿಕಾಂ ಸೇವೆಯಿಂದ ಬರುವ ಆದಾಯವನ್ನು ಮಾತ್ರ ತೆಗೆದುಕೊಳ್ಳಬೇಕು, ಹ್ಯಾಂಡ್ಸೆಟ್ಗಳ ಮಾರಾಟ, ರದ್ದಿಗಳು ಇತ್ಯಾದಿಗಳಿಂದ ಬರುವ ಆದಾಯಗಳು ಇದರ ವ್ಯಾಪ್ತಿಗೆ ಬರುವುದಿಲ್ಲ ಎಂಬ ನಿಲುವು ತಳೆದವು. ಆದರೆ ಸರಕಾರ ಎಜಿಆರ್ನಲ್ಲಿ ಇವೆಲ್ಲ ಆದಾಯಗಳೂ ಸೇರುತ್ತವೆ ಎಂಬ ನಿಲುವು ತಳೆಯಿತು (ಆದರೆ ಈಗಿನ ಸರಕಾರ ಅಂತಹ ನಿಲುವು ತಳೆಯಬಾರದಿತ್ತು ಎಂದು ಖೇದಗೊಳ್ಳುತ್ತಿರಬಹುದು). ಈ ವಿವಾದ ಬಹಳ ವರ್ಷಗಳ ಕಾಲ ನೆನೆಗುದಿಗೆ ಬಿದ್ದಿತ್ತು. ಕಳೆದ ಅಕ್ಟೋಬರ್ ೨೪ರಂದು ಸುಪ್ರಿಂ ಕೋರ್ಟ್ ಆದೇಶದೊಂದಿಗೆ ಅದು ಇತ್ಯರ್ಥಗೊಂಡಿತು.
ನ್ಯಾಯಮೂರ್ತಿ ಅರುಣ್ ಮಿಶ್ರರವರ ಫೆಬ್ರುವರಿ 14, 2020ರ ಟಿಪ್ಪಣಿಯಿಂದ ಖಂಡಿತವಾಗಿಯೂ ಎರಡು ಪ್ರಶ್ನೆಗಳು ಏಳುತ್ತವೆ. ಮೊದಲನೆಯದ್ದು, ಜನವರಿ 23ರಂದು ದೂರಸಂಪರ್ಕ ಇಲಾಖೆ ಅಕೌಂಟೆಂಟ್ ಜನರಲ್ರಿಗೆ ಕೊಟ್ಟ ನಿರ್ದೇಶನಕ್ಕೆ ಸಂಬಂಧಪಟ್ಟಿದೆ. ದೂರಸಂಪರ್ಕ ಇಲಾಖೆಯ ಇಬ್ಬರು ಡೆಸ್ಕ್ ಅಧಿಕಾರಿಗಳು ಇಂತಹ ನಿರ್ದೇಶನಕ್ಕೆ ಹೊಣೆಗಾರರು ಎಂದು ಅಕೌಂಟೆಂಟ್ ಜನರಲ್ ತುಷಾರ್ ಮೆಹ್ತ ನ್ಯಾಯಾಲಯಕ್ಕೆ ತಿಳಿಸಿದರು. ಈ ಬಗ್ಗೆ ದೂರಸಂಪರ್ಕ ಮಂತ್ರಿಗಳಿಗಾಲೀ, ಇಲಾಖೆಯ ಕಾರ್ಯದರ್ಶಿಗಳಿಗಾಗಲಿ ತಿಳಿದೇ ಇರಲಿಲ್ಲ ಎಂದು ಹೇಳಲಾಗಿದೆ. ಆದರೆ ಸಂಚಾರ್ ಭವನದಲ್ಲಿರುವ ಕೆಲವು ಡೆಸ್ಕ್ ಅಧಿಕಾರಿಗಳು ಸುಪ್ರಿಂ ಕೋರ್ಟ್ ಆದೇಶವನ್ನು ಉಲ್ಲಂಘಿಸುವ ಇಂತಹ ನಿರ್ದೇಶನವನ್ನು ಕೊಟ್ಟಿದ್ದಾರೆ ಎಂದರೆ ನಂಬುವುದು ಕಷ್ಟವೇ. ಇಲ್ಲಿ ನ್ಯಾಯಮೂರ್ತಿ ಅರುಣ್ ಮಿಶ್ರ ಹೇಳಿದ ವಿಪುಲ ಹಣಬಲದ ಟಿಪ್ಪಣಿಯನ್ನು ನೆನಪಿಸಿಕೊಳ್ಳದಿರಲು ಸಾಧ್ಯವಿಲ್ಲ.
ಎರಡನೆಯ ಪ್ರಶ್ನೆಯೆಂದರೆ, ಗಂಭೀರ ಹಣಕಾಸು ಕೊರತೆಯನ್ನು ಎದುರಿಸುತ್ತಿರುವ ಸರಕಾರ 1.47 ಲಕ್ಷ ಕೋಟಿ ರೂ.ಗಳ ಒಂದು ಭಾರೀ ಮೊತ್ತವನ್ನು ಪಡೆಯಲು ಅನುವು ಮಾಡಿಕೊಟ್ಟ ಸುಪ್ರಿಂ ಕೋರ್ಟ್ ತೀರ್ಪನ್ನು ಜಾರಿಗೊಳಿಸಲು ಉತ್ಸುಕವಾಗಿಲ್ಲ ಏಕೆ ಎಂಬುದು.
ಈ ಖಾಸಗಿ ಟೆಲಿಕಾಂ ಕಂಪನಿಗಳ, ಅದರಲ್ಲೂ ವೊಡಾಫೋನ್ನ ಆರ್ಥಿಕ ಪರಿಸ್ಥಿತಿ ಎಷ್ಟು ನಾಜೂಕಾಗಿದೆಯೆಂದರೆ, ಇಷ್ಟೊಂದು ದೊಡ್ಡ ಮೊತ್ತವನ್ನು ಅವು ಎಲ್ಲಿಂದ ತಾನೇ ಹೊಂದಿಸ ಬಲ್ಲವು ಎಂದು ಮಾಧ್ಯಮಗಳು ಕಣ್ಣೀರು ಹಾಕುತ್ತಿವೆ. ಆದರೆ ಈ ಕಂಪನಿಗಳು ಭಾರತೀಯ ಟೆಲಿಕಾಂ ಉದ್ಯಮದಲ್ಲಿ ಗಳಿಸಿದ ಅಪಾರ ಸಂಪತ್ತು, ಅದರಲ್ಲೂ, 2007ರಿಂದ 2012 ರ ನಡುವೆ ಸರಕಾರವೇ ತನ್ನ ಒಡೆತನದ ಬಿಎಸ್ಎನ್ಎಲ್ನ್ನು ದುರ್ಬಲಗೊಳಿಸುತ್ತಿದ್ದ ಅವಧಿಯಲ್ಲಿ ಪೇರಿಸಿಟ್ಟ ದೈತ್ಯಪ್ರಮಾಣದ ಲಾಭಗಳು ಎಲ್ಲ ಎಲ್ಲಿಗೆ ಹೋದವು? ಸರಕಾರ ಮಾತ್ರವೇ ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡಬೇಕು.
(ಈ ವಾರದ ಜನಶಕ್ತಿ ವಾರಪತ್ರಿಕೆಯಲ್ಲಿ ಪ್ರಕಟವಾದ ಲೇಖನ)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ನಟ ಮನದೀಪ್ ರಾಯ್ ನಿಧನ

ಸುದ್ದಿದಿನ ಡೆಸ್ಕ್ : ಹಿರಿಯ ಚಿತ್ರನಟ ಮನದೀಪ್ ರಾಯ್ (74 ವರ್ಷ) ಇಂದು ಬೆಳಗಿನ ಜಾವ ಅಗಲಿದ್ದಾರೆ.
ಕೆಲ ದಿನಗಳ ಹಿಂದೆ ಹೃದಯಾಘಾತಕ್ಕೀಡಾಗಿದ್ದ ಅವರು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಮನದೀಪ್ ರಾಯ್ ಹವ್ಯಾಸಿ ರಂಗಭೂಮಿ ಹಿನ್ನೆಲೆಯ ಕಲಾವಿದ. ನಟ – ನಿರ್ದೇಶಕ ಶಂಕರನಾಗ್ ಅವರ ಆತ್ಮೀಯ ಒಡನಾಡಿ. ಪೋಷಕ ಪಾತ್ರ, ಹಾಸ್ಯ ನಟರಾಗಿ 500ಕ್ಕೂ ಹೆಚ್ಚು ಸಿನಿಮಾಗಳು ಹಾಗೂ ಕಿರುತೆರೆ ಸರಣಿಗಳಲ್ಲಿ ಅಭಿನಯಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕರ್ನಾಟಕದಲ್ಲಿ ಈ ವರ್ಷ ಜನಪರ ರಾಜ್ಯ ಬಜೆಟ್ ಮಂಡನೆ ; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಸುದ್ದಿದಿನ, ಹಾವೇರಿ : ಕರ್ನಾಟಕದಲ್ಲಿ ಮುಂದಿನ ತಿಂಗಳು ಮಂಡಿಸಲಾಗುತ್ತಿರುವ ಈ ವರ್ಷದ ರಾಜ್ಯ ಬಜೆಟ್ ರೈತರು, ದೀನ ದಲಿತರು, ಯುವಕರು, ಮಹಿಳೆಯರು, ದುಡಿಯುವ ವರ್ಗ ಮತ್ತು ಜನಪರವಾಗಿರುತ್ತದೆ ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹಾವೇರಿ ಜಿಲ್ಲೆ ಶಿಗ್ಗಾಂವ್ನಲ್ಲಿ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ದುಡಿಮೆಗೆ ಯೋಗ್ಯ ಬೆಲೆ ಸಿಗುವ ರೀತಿಯಲ್ಲಿ ನಮ್ಮ ಕಾರ್ಯಕ್ರಮಗಳು ಇರುತ್ತವೆ ಎಂದರು.
ಕರ್ನಾಟಕ ರಾಜ್ಯದ ಆರ್ಥಿಕ ಅಭಿವೃದ್ಧಿಯಲ್ಲಿ ನಾವು ವೇಗವನ್ನು ಕಂಡಿದ್ದೇವೆ. ಕಳೆದ ವರ್ಷ ನಾನು ಅಧಿಕಾರ ವಹಿಸಿಕೊಂಡಾಗ 5 ಸಾವಿರ ಕೋಟಿ ರೂಪಾಯಿ ರಾಜ್ಯದ ಬೊಕ್ಕಸಕ್ಕೆ ನಮ್ಮ ನಿರ್ಧಿಷ್ಟ ಗುರಿಗೆ ಕೊರತೆಯಿತ್ತು. ಅದನ್ನು ನಾವು 5 ಸಾವಿರ ಕೋಟಿ ತುಂಬುವುದಲ್ಲದೇ, 13 ಸಾವಿರ ಕೋಟಿ ಅಧಿಕವಾಗಿ ಸಂಗ್ರಹ ಮಾಡಿದ್ದೇವೆ. ಈ ವರ್ಷವೂ ಕೂಡ ನಮ್ಮ ಹಣಕಾಸಿನ ಸಂಗ್ರಹ ಉತ್ತಮವಾಗಿದೆ ಎಂದು ಕರ್ನಾಟಕದ ಮುಖ್ಯಮಂತ್ರಿ ಹೇಳಿದರು.
ಕೋವಿಡ್ ನಂತರದಲ್ಲಿ ಆರ್ಥಿಕ ಸುಧಾರಣೆ ಆಗುತ್ತಿರುವ ಸಂದರ್ಭದಲ್ಲಿ ಕೆಳಹಂತದ ಜನಸಮುದಾಯಕ್ಕೆ ಇನ್ನಷ್ಟು ಸಹಾಯ ಮಾಡಿ, ಅವರನ್ನು ಕೂಡ ಮುಖ್ಯ ವಾಹಿನಿಗೆ ಬರಬೇಕು ಎನ್ನುವ ನಿಟ್ಟಿನಲ್ಲಿ ನಾವು ಕಾರ್ಯಕ್ರಮ ರೂಪಿಸುತ್ತಿದ್ದೇವೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಸಂಸತ್ತಿನ ಬಜೆಟ್ ಅಧಿವೇಶನದ ಹಿನ್ನೆಲೆ ; ಇದೇ 30ರಂದು ಸರ್ವಪಕ್ಷಗಳ ಸಭೆ

ಸುದ್ದಿದಿನ ಡೆಸ್ಕ್ : ಸಂಸತ್ತಿನ ಮುಂಬರುವ ಬಜೆಟ್ ಅಧಿವೇಶನದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇದೇ 30ರಂದು ಸರ್ವಪಕ್ಷಗಳ ಸಭೆಯನ್ನು ಕರೆದಿದೆ. ಸಂಸತ್ ಭವನದ ಸಂಕೀರ್ಣದಲ್ಲಿ ಸೋಮವಾರ ಮಧ್ಯಾಹ್ನ 12 ಗಂಟೆಗೆ ಸಭೆ ನಡೆಯಲಿದೆ.
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ, ಕೇಂದ್ರ ಸಚಿವರು ಮತ್ತು ಸಂಸತ್ತಿನ ಎರಡೂ ಸದನಗಳನ್ನು ಪ್ರತಿನಿಧಿಸುವ ಸದನ ನಾಯಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಸಭೆಯಲ್ಲಿ ಸರ್ಕಾರ ಸಂಸತ್ತಿನ ಉಭಯ ಸದನಗಳ ಸುಗಮ ಕಲಾಪಕ್ಕೆ ಎಲ್ಲ ರಾಜಕೀಯ ಪಕ್ಷಗಳ ಸಹಕಾರವನ್ನು ಕೋರಲಿದೆ. ಸಂಸತ್ತಿನ ಬಜೆಟ್ ಅಧಿವೇಶನ ಇದೇ 31ರಿಂದ ಆರಂಭವಾಗಲಿದೆ. ಮೊದಲ ದಿನ ಬೆಳಿಗ್ಗೆ 11 ಗಂಟೆಗೆ ಸೆಂಟ್ರಲ್ ಹಾಲ್ ನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡುವರು.
ಅದೇ ದಿನವೇ ಆರ್ಥಿಕ ಸಮೀಕ್ಷೆಯನ್ನೂ ಸಹ ಮಂಡಿಸಲಾಗುವುದು. ಫೆಬ್ರವರಿ 1ರಂದು 2023-24ನೇ ಸಾಲಿನ ಕೇಂದ್ರ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆ ಮಾಡಲಿದ್ದಾರೆ.
ಬಜೆಟ್ ಅಧಿವೇಶನ ಏಪ್ರಿಲ್ 6ವರೆಗೆ ನಡೆಯಲಿದ್ದು, ಸುಮಾರು 66 ದಿನಗಳಲ್ಲಿ 27 ಕಲಾಪಗಳು ನಡೆಯಲಿದೆ. ಮೊದಲ ಅವಧಿಯಲ್ಲಿ ಅಧಿವೇಶನ ಫೆಬ್ರವರಿ 13ರವರೆಗೆ ನಡೆಯಲಿದೆ. ಫೆಬ್ರವರಿ 14ರಿಂದ ಮಾರ್ಚ್ 12ರವರೆಗೆ ಅಧಿವೇಶನಕ್ಕೆ ಬಿಡುವು ಇರಲಿದೆ ಆನಂತರ ಮಾರ್ಚ್ 13ರಿಂದ ಆರಂಭವಾಗುವ ಅಧಿವೇಶನ ಏಪ್ರಿಲ್ 6ಕ್ಕೆ ಕೊನೆಗೊಳ್ಳಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980336243
