ರಾಜಕೀಯ
ಕಾಂಗ್ರೇಸ್ ಮತ್ತು ಎಡರಂಗವೆಂಬ ಭಾರತದ ಆತ್ಮಾಹುತಿ ದಳದ ಪಕ್ಷಗಳು

- ಜಗದೀಶ್ ಕೊಪ್ಪ
ಇತ್ತೀಚೆಗಿನ ಎರಡು ರಾಜಕೀಯ ಬೆಳವಣಿಗೆಗಳು ಭಾರತದ ಪ್ರಜ್ಞಾವಂತ ನಾಗರೀಕರಲ್ಲಿ ಅಸಹ್ಯ ಮಾತ್ರವಲ್ಲ, ಜಿಗುಪ್ಸೆ ತರಿಸುವ ಸಂಗತಿಗಳಾಗಿ ಮಾರ್ಪಟ್ಟಿವೆ. ಇವುಗಳಲ್ಲಿ ಮೊದಲನೆಯದು,ಸೀತಾರಾಂ ಯಚೂರಿಗೆ ಸಿ.ಪಿ.ಐ ( ಎಂ) ಪಕ್ಷದಿಂದ ರಾಜಸಭೆಗೆ ಸೀಟು ನಿರಾಕರಿಸಿದ್ದು.
ಎರಡನೆಯದು, ಮಧ್ಯಪ್ರದೇಶದಲ್ಲಿ ಕಾಂಗ್ರೇಸ್ ಪಕ್ಷದ ಯುವ ನಾಯಕ ಜ್ಯೋತಿರಾಧ್ಯ ಸಿಂದ್ಯಾ ಕಾಂಗ್ರೇಸ್ ಪಕ್ಷವನ್ನು ತೊರೆದು ಬಿ.ಜೆ.ಪಿ. ಪಕ್ಷ ಸೇರಿದ ಘಟನೆ.
ಈ ಎರಡು ಘಟನೆಗಳನ್ನು ಸಿನಿಕತನದಿಂದ ನೋಡದೆ, ಈಗನ ವರ್ತಮಾನದ ಪರಿಸ್ಥಿತಿಗೆ ಹೋಲಿಸಿ ನೋಡಿದಾಗ, ದಶಕಗಳಷ್ಟೇ ಅಲ್ಲ, ಅರ್ಧ ಶತಮಾನದಿಂದ ತಮ್ಮ ರಾಜಕೀಯ ತಂತ್ರಗಾರಿಕೆಯಲ್ಲಿ ಯಾವುದೇ ಬದಲಾವಣೆ ಮಾಡದ ಅಥವಾ ಬಯಸದ ಕಾಂಗ್ರೇಸ್ ಮತ್ತು ಎಡರಂಗಗಳು ಅವನತಿಯ ಹಾದಿಯಲ್ಲಿ ಶರವೇಗದಲ್ಲಿ ಚಲಿಸುತ್ತಿವೆ ಎನ್ನ ಬಹುದು.
ಸಿ.ಪಿ.ಐ. ಪಾಲಿಟ್ ಬ್ಯೂರೊ ಎಂಬ ಅತ್ಯುನ್ನತ ಕಾರ್ಯಕಾರಿ ಸಮಿತಿ ಈ ಗಾಗಲೇ ಎರಡು ಬಾರಿ ರಾಜ್ಯ ಸಭೆಯ ಸದಸ್ಯರಾಗಿದ್ದ ಯಚೂರಿಯವರಿಗೆ ಟಿಕೇಟ್ ನಿರಾಕರಿಸಲು ನೀಡಿದ ಕಾರಣ ಪಕ್ಷದ ನಿಯಾಮಾವಳಿ ಪ್ರಕಾರ ಒಬ್ಬ ಸದಸ್ಯ ಎರಡು ಬಾರಿ ಮಾತ್ರ ಸದಸ್ಯನಾಗಬಹುದು ಎಂಬ ನಿಯಮ. ಈ ಬಾರಿ ಪಶ್ಚಿಮ ಬಂಗಾಳದಲ್ಲಿ ಎಡರಂಗಕ್ಕೆ ಸದಸ್ಯನನ್ನು ಆಯ್ಕೆ ಮಾಡಿ ಕಳಿಸುವಷ್ಟು ಸದಸ್ಯರ ಸಂಖ್ಯೆ ಇರಲಿಲ್ಲ.
ಕಾಂಗ್ರೇಸ್ ಪಕ್ಷ ಎಡ ರಂಗಕ್ಕೆ ಬೆಂಬಲ ನೀಡುವುದಾಗಿ ಘೋಷಿಸಿತ್ತು. ಅದನ್ನು ಕೂಡ ಪಕ್ಷ ನಿರಾಕರಿಸಿದೆ. ಈಗ ರಾಜ್ಯ ಸಭೆಯಲ್ಲಿ ಅಥವಾ ಲೋಕ ಸಭೆಯಲ್ಲಿ ಆಡಳಿತಾರೂಢ ಪಕ್ಷವಾದ ಬಿ.ಜೆ.ಪಿ. ಪಕ್ಷವನ್ನು ಎದುರಿಸಿ, ಮಾತನಾಡುವ ಓರ್ವ ಹಿರಿಯ ಸದಸ್ಯರಿಲ್ಲ. ಇಂತಹ ಸಂದರ್ಭದಲ್ಲಿ ತನ್ನ ನಿಯಾಮಾವಳಿಗಳಲ್ಲಿ ತಿದ್ದುಪಡಿ ಮಾಡಿ ಹಿರಿಯ ನಾಯಕರನ್ನು ಕಳಿಸಬಹುದಿತ್ತು. ಈ ಹಿಂದೆ 34 ವರ್ಷಗಳ ಕಾಲ ಪಶ್ಚಿಮ ಬಂಗಾಳವನ್ನು ಆಳಿದ ಜ್ಯೋತಿ ಬಸು ಎಂಬ ಸಜ್ಜನ ಹಿರಿಯ ರಾಜಕಾರಣಿಯನ್ನು ಭಾರತದ ಬಹುತೇಕ ರಾಜಕೀಯ ಪಕ್ಷಗಳು ಒಗ್ಗೂಡಿ, ಪ್ರಧಾನಿ ಹುದ್ದೆಗೆ ಆಯ್ಕೆ ಮಾಡಿದಾಗ, ಇದೇ ಪಾಲಿಟ್ ಬ್ಯೂರೊ ಎಂಬ ಎಡರಂಗದ ಗರ್ಭಗುಡಿ ಅವರಿಗೆ ಅವಕಾಶವನ್ನು ನಿರಾಕರಿಸಿತು.
ಲೋಕಸಭೆಯಲ್ಲಿ ಕೇವಲ ಎರಡು ಸದಸ್ಯರಿದ್ದ ನಮ್ಮ ದೇವೇಗೌಡರಿಗೆ ಅದೃಷ್ಟು ಕೂಡಿ ಬಂತು. ಕೊನೆಗೂ ಮಾಜಿ ಪ್ರದಾನಿ ಎನಿಸಿಕೊಂಡರು.
ದೇಶದ ಆಡಳಿತದ ಚುಕ್ಕಾಣಿ ಹಿಡಿದು ತಮ್ಮ ಪಕ್ಷದಲ್ಲಿ ವಂಶಾಡಳಿತ ರಾಜಕಾರಣವಿಲ್ಲ, ಭ್ರಷ್ಟಾರಗಳಿಲ್ಲ ಎಂದು ದೇಶಕ್ಕೆ ತೋರಿಸಿ, ಪಕ್ಷದ ಸಂಘಟನೆಯನ್ನು ದೇಶ ವ್ಯಾಪಿ ವಿಸ್ತರಿಸುವ ಅವಕಾಶವನ್ನು ಸಿ.ಪಿ.ಐ. (ಏಂ) ಕಳೆದು ಕೊಳ್ಳುವುದರ ಮೂಲಕ ಆತ್ಮಹತ್ಯೆಯ ಹಾದಿ ಹಿಡಿಯಿತು.
ಇನ್ನು, ಕಾಂಗ್ರೇಸ್ ನ ಹಾದಿ ಇದಕ್ಕಿಂತ ಭಿನ್ನವಾಗಿಲ್ಲ. ಎಪ್ಪತ್ತು ದಾಟಿದ ತಲೆ ಮಾಸಿದವರೇ ಪಕ್ಷದ ಆಸ್ತಿ ಎಂಬ ನಂಬಿಕೆ ಇನ್ನೂ ಪಕ್ಷದಿಂದ ಹೊರಹೋಗಿಲ್ಲ. ಕಳೆದ ವರ್ಷದ ಚುನಾವಣೆಯಲ್ಲಿ ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ಕಾಂಗ್ರೇಸ್ ಪಕ್ಷ ಅಧಿಕಾರಕ್ಕೆ ಬಂದಾಗ, ರಾಜಸ್ಥಾನದಲ್ಲಿ ಸಚಿನ್ ಪೈಲೆಟ್ ಎಂಬ ಯುವಕನ್ನು ಮುಖ್ಯ ಮಂತ್ರಿ ಮಾಡುವ ಬದಲು ಗೆಹ್ಲೋಟ್ ಎಂಬಾತನ್ನು ತಂದು ಕೂರಿಸಲಾಯಿತು. ಜೊತೆಗೆ ಸಚಿನ್ ಹೋರಾಟವನ್ನು ಕಡೆಗಣಿಸಲಾಯಿತು. ಮಧ್ಯ ಪ್ರದೇಶದಲ್ಲಿ ಜ್ಯೋತಿರಾದ್ಯ ಸಿಂದ್ಯಾ ಬದಲು ಕಮಲ್ ನಾಥ್ ರವರನ್ನು ಕೂರಿಸಿ ಭಿನ್ನಮತಕ್ಕೆ ದಾರಿ ಮಾಡಿಕೊಡಲಾಯಿತು.
ಸೋನಿಯಾ ಗಾಂಧಿ ಸುತ್ತ ಇರುವ ಅಷ್ಟ ದಿಕ್ಕುಗಳ ನಾಯಕರನ್ನು ಒಮ್ಮೆ ಗಮನಿಸಿ, ಆಸ್ಕರ್ ಫೆರ್ನಾಂಟಿಸ್, ಅಹಮದ್ ಪಟೇಲ್, ದಿಗ್ವಿಜಯ ಸಿಂಗ್, ಬಿ.ಕೆ. ಹರಿಪ್ರಸಾದ್ ಇವರೆಲ್ಲರೂ ತಮ್ಮ ತಮ್ಮ ರಾಜ್ಯಗಳ ನಗರಗಳಲ್ಲಿ ಒಂದು ನಗರದ ಕಾರ್ಪೋರೇಷನ್ ಸಿಟು ಗೆಲ್ಲಲಾರದ ಗಿರಾಕಿಗಳು. ಪಕ್ಷ ದೇಶ ವ್ಯಾಪಿ ತನ್ನ ಬೇರುಗಳನ್ನು ಕಳಚಿಕೊಂಡು ಒಣಗುತ್ತಿದ್ದರೂ ಸಹ ನೇರವಾಗಿ ಕಾರ್ಯಕರ್ತರ ಜೊತೆ ಕುಳಿತು ಸಂವಹನ ಮಾಡುವ ವ್ಯವಧಾನ ತಾಯಿ ಮತ್ತು ಮಗನಿಗೆ ಇಲ್ಲ. ಇವೊತ್ತಿಗೂ ಕಾಂಗೇಸ್ ಮುಖ್ಯಮಂತ್ರಿಯಾದವನು ಇವರನ್ನು ಭೇಟಿ ಮಾಡಲು ಮೂರು ದಿನ ದೆಹಲಿಯಲ್ಲಿ ಕಾಯಬೇಕು. ಇಂತಹ ಸ್ಥಿತಿಯಲ್ಲಿ ಕಾಂಗ್ರೇಸ್ ಪಕ್ಷಕ್ಕೆ ಭವಿಷ್ಯ ಇದೆ ಎಂದು ಹೇಳಲು ಸಾಧ್ಯವಿದೆಯಾ?
ನರೇಂದ್ರಮೋದಿ ಎರಡನೆಯ ಬಾರಿ ಪ್ರಧಾನಿಯಾದದ್ದು ತನ್ನ ಸಾಧನೆಗಳ ಮೂಲಕ ಅಲ್ಲ, ದೇಶದಲ್ಲಿ ಒಂದು ಪರ್ಯಾಯ ರಾಜಕೀಯ ವೇದಿಕೆಯನ್ನು ಹುಟ್ಟು ಹಾಕಲು ರಾಜಕೀಯ ಪಕ್ಷಗಳು ಸೋತಿದ್ದು ಮೂಲ ಕಾರಣವಾಗಿದೆ. ನಾವು ಈ ದಿನ ಮೋದಿ ಸರ್ಕಾರದ ತಪ್ಪುಗಳ ಬಗ್ಗೆ ಕೂಗುಮಾರಿಗಳಂತೆ ಆರ್ಭಟಿಸುತ್ತಿದ್ದೆವೆ ನಿಜ. ಒಬ್ಬ ಸಾಮಾನ್ಯ ಮತದಾರ ನನಗೆ ಪರ್ಯಾಯ ತೋರಿಸಿ ಎಂದಾಗ ನಮ್ಮಲ್ಲಿ ಈಗಲೂ ಉತ್ತರವಿಲ್ಲ.
ಎಲ್ಲವನ್ನೂ ಸಹಜ ಸಾವಿಗೆ ಬಿಟ್ಟು ಮೌನ ಸಾಕ್ಷಷಿಯಾಗಿ ಇರಬೇಕಾಗಿರುವುದು ಕಾಲದ ಅಗತ್ಯವೇನೋ ಎಂದು ಅನಿಸತೊಡಗಿದೆ.
(ಇದು ನನ್ನ ವೈಯಕ್ತಿಕ ಅನಿಸಿಕೆ ಮಾತ್ರ. ಯಾವುದೇ ಚರ್ಚೆಗೆ ಅಥವಾ ವಾದಕ್ಕೆ ನಾನು ಇಳಿಯಲಾರೆ ಕ್ಷಮಿಸಿ.)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕರ್ನಾಟಕದಲ್ಲಿ ಈ ವರ್ಷ ಜನಪರ ರಾಜ್ಯ ಬಜೆಟ್ ಮಂಡನೆ ; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಸುದ್ದಿದಿನ, ಹಾವೇರಿ : ಕರ್ನಾಟಕದಲ್ಲಿ ಮುಂದಿನ ತಿಂಗಳು ಮಂಡಿಸಲಾಗುತ್ತಿರುವ ಈ ವರ್ಷದ ರಾಜ್ಯ ಬಜೆಟ್ ರೈತರು, ದೀನ ದಲಿತರು, ಯುವಕರು, ಮಹಿಳೆಯರು, ದುಡಿಯುವ ವರ್ಗ ಮತ್ತು ಜನಪರವಾಗಿರುತ್ತದೆ ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹಾವೇರಿ ಜಿಲ್ಲೆ ಶಿಗ್ಗಾಂವ್ನಲ್ಲಿ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ದುಡಿಮೆಗೆ ಯೋಗ್ಯ ಬೆಲೆ ಸಿಗುವ ರೀತಿಯಲ್ಲಿ ನಮ್ಮ ಕಾರ್ಯಕ್ರಮಗಳು ಇರುತ್ತವೆ ಎಂದರು.
ಕರ್ನಾಟಕ ರಾಜ್ಯದ ಆರ್ಥಿಕ ಅಭಿವೃದ್ಧಿಯಲ್ಲಿ ನಾವು ವೇಗವನ್ನು ಕಂಡಿದ್ದೇವೆ. ಕಳೆದ ವರ್ಷ ನಾನು ಅಧಿಕಾರ ವಹಿಸಿಕೊಂಡಾಗ 5 ಸಾವಿರ ಕೋಟಿ ರೂಪಾಯಿ ರಾಜ್ಯದ ಬೊಕ್ಕಸಕ್ಕೆ ನಮ್ಮ ನಿರ್ಧಿಷ್ಟ ಗುರಿಗೆ ಕೊರತೆಯಿತ್ತು. ಅದನ್ನು ನಾವು 5 ಸಾವಿರ ಕೋಟಿ ತುಂಬುವುದಲ್ಲದೇ, 13 ಸಾವಿರ ಕೋಟಿ ಅಧಿಕವಾಗಿ ಸಂಗ್ರಹ ಮಾಡಿದ್ದೇವೆ. ಈ ವರ್ಷವೂ ಕೂಡ ನಮ್ಮ ಹಣಕಾಸಿನ ಸಂಗ್ರಹ ಉತ್ತಮವಾಗಿದೆ ಎಂದು ಕರ್ನಾಟಕದ ಮುಖ್ಯಮಂತ್ರಿ ಹೇಳಿದರು.
ಕೋವಿಡ್ ನಂತರದಲ್ಲಿ ಆರ್ಥಿಕ ಸುಧಾರಣೆ ಆಗುತ್ತಿರುವ ಸಂದರ್ಭದಲ್ಲಿ ಕೆಳಹಂತದ ಜನಸಮುದಾಯಕ್ಕೆ ಇನ್ನಷ್ಟು ಸಹಾಯ ಮಾಡಿ, ಅವರನ್ನು ಕೂಡ ಮುಖ್ಯ ವಾಹಿನಿಗೆ ಬರಬೇಕು ಎನ್ನುವ ನಿಟ್ಟಿನಲ್ಲಿ ನಾವು ಕಾರ್ಯಕ್ರಮ ರೂಪಿಸುತ್ತಿದ್ದೇವೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಸಂಸತ್ತಿನ ಬಜೆಟ್ ಅಧಿವೇಶನದ ಹಿನ್ನೆಲೆ ; ಇದೇ 30ರಂದು ಸರ್ವಪಕ್ಷಗಳ ಸಭೆ

ಸುದ್ದಿದಿನ ಡೆಸ್ಕ್ : ಸಂಸತ್ತಿನ ಮುಂಬರುವ ಬಜೆಟ್ ಅಧಿವೇಶನದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇದೇ 30ರಂದು ಸರ್ವಪಕ್ಷಗಳ ಸಭೆಯನ್ನು ಕರೆದಿದೆ. ಸಂಸತ್ ಭವನದ ಸಂಕೀರ್ಣದಲ್ಲಿ ಸೋಮವಾರ ಮಧ್ಯಾಹ್ನ 12 ಗಂಟೆಗೆ ಸಭೆ ನಡೆಯಲಿದೆ.
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ, ಕೇಂದ್ರ ಸಚಿವರು ಮತ್ತು ಸಂಸತ್ತಿನ ಎರಡೂ ಸದನಗಳನ್ನು ಪ್ರತಿನಿಧಿಸುವ ಸದನ ನಾಯಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಸಭೆಯಲ್ಲಿ ಸರ್ಕಾರ ಸಂಸತ್ತಿನ ಉಭಯ ಸದನಗಳ ಸುಗಮ ಕಲಾಪಕ್ಕೆ ಎಲ್ಲ ರಾಜಕೀಯ ಪಕ್ಷಗಳ ಸಹಕಾರವನ್ನು ಕೋರಲಿದೆ. ಸಂಸತ್ತಿನ ಬಜೆಟ್ ಅಧಿವೇಶನ ಇದೇ 31ರಿಂದ ಆರಂಭವಾಗಲಿದೆ. ಮೊದಲ ದಿನ ಬೆಳಿಗ್ಗೆ 11 ಗಂಟೆಗೆ ಸೆಂಟ್ರಲ್ ಹಾಲ್ ನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡುವರು.
ಅದೇ ದಿನವೇ ಆರ್ಥಿಕ ಸಮೀಕ್ಷೆಯನ್ನೂ ಸಹ ಮಂಡಿಸಲಾಗುವುದು. ಫೆಬ್ರವರಿ 1ರಂದು 2023-24ನೇ ಸಾಲಿನ ಕೇಂದ್ರ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆ ಮಾಡಲಿದ್ದಾರೆ.
ಬಜೆಟ್ ಅಧಿವೇಶನ ಏಪ್ರಿಲ್ 6ವರೆಗೆ ನಡೆಯಲಿದ್ದು, ಸುಮಾರು 66 ದಿನಗಳಲ್ಲಿ 27 ಕಲಾಪಗಳು ನಡೆಯಲಿದೆ. ಮೊದಲ ಅವಧಿಯಲ್ಲಿ ಅಧಿವೇಶನ ಫೆಬ್ರವರಿ 13ರವರೆಗೆ ನಡೆಯಲಿದೆ. ಫೆಬ್ರವರಿ 14ರಿಂದ ಮಾರ್ಚ್ 12ರವರೆಗೆ ಅಧಿವೇಶನಕ್ಕೆ ಬಿಡುವು ಇರಲಿದೆ ಆನಂತರ ಮಾರ್ಚ್ 13ರಿಂದ ಆರಂಭವಾಗುವ ಅಧಿವೇಶನ ಏಪ್ರಿಲ್ 6ಕ್ಕೆ ಕೊನೆಗೊಳ್ಳಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980336243

ದಿನದ ಸುದ್ದಿ
ರಾಷ್ಟ್ರೀಯ ಯುವ ದಿನದ ಪ್ರಯುಕ್ತ ನಾಳೆ ರಾಜಾಜಿನಗರ ವಿಧಾನ ಸಭಾ ಕ್ಷೇತ್ರದಲ್ಲಿ ಬೈಕ್ ರ್ಯಾಲಿ : ಭವ್ಯ ನರಸಿಂಹಮೂರ್ತಿ

ಸುದ್ದಿದಿನ, ಬೆಂಗಳೂರು : ರಾಷ್ಟ್ರೀಯ ಯುವ ದಿನದ ಪ್ರಯುಕ್ತ ನಾಳೆ ರಾಜಾಜಿನಗರ ವಿಧಾನ ಸಭಾ ಕ್ಷೇತ್ರದಲ್ಲಿ ಬೈಕ್ ರ್ಯಾಲಿ ಹಮ್ಮಿಕೊಂಡಿದ್ದು ಸ್ವಾಮಿ ವಿವೇಕಾನಂದರ 160ನೇ ಜನ್ಮದಿನದ ಅಂಗವಾಗಿ ಅವರ ತತ್ವ ಆದರ್ಶಗಳು ಹಾಗೂ ಯುವ ಜನತೆಗೆ ನೀಡಿರುವ ಸಂದೇಶಗಳನ್ನು ರಾಜಾಜಿನಗರ ವಿಧಾನ ಸಭಾ ಕ್ಷೇತ್ರದ ಎಲ್ಲಾ ಜನತೆಗೆ ತಲುಪುವಂತೆ ಮಾಡುವುದು ಇದರ ಉದ್ದೇಶವಾಗಿದೆ ಎಂದು ರಾಜಾಜಿನಗರ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಆಕಾಂಕ್ಷಿ ಭವ್ಯ ನರಸಿಂಹಮೂರ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೈಕ್ ರ್ಯಾಲಿ ಬೆಳಿಗ್ಗೆ 09-00 ಕ್ಕೆ ರಾಜಾಜಿನಗರ Entrance Bridge ಇಂದ ಪ್ರಾರಂಭವಾಗಿ ನವರಂಗ ಚಿತ್ರಮಂದಿರ – ಶಂಕರ್ ಮಠ – ಹಾವನೂರ್ ಸರ್ಕಲ್ – ಹೌಸಿಂಗ್ ಬೋರ್ಡ್ – ಕಾಮಾಕ್ಷಿಪಾಳ್ಯ ಬಸ್ ಸ್ಟಾಂಡ್ – ಹಾವನೂರ್ – ಅಕ್ಷಯ ಉಪಹಾರ – ಮೋದಿ ಹಾಸ್ಪಿಟಲ್ – ನವರಂಗ ಬ್ರಿಡ್ಜ್ – ಗಿರಿಯಾಸ್ ಸಿಗ್ನಲ್ – 6th ಬ್ಲಾಕ್ – ಕೊನೆಯದಾಗಿ 12 ಗಂಟೆಗೆ ಭಾಷ್ಯಮ್ ಸರ್ಕಲ್ ನಲ್ಲಿ ಕೊನೆಗೊಳ್ಳುತ್ತದೆ.
ದಾರಿಯಲ್ಲಿ 4 ಕಡೆ ಸ್ವಾಮಿ ವಿವೇಕಾನಂದರಿಗೆ ಪೂಜೆ ಹಮ್ಮಿಕೊಳ್ಳಲಾಗಿದೆ. ಪೂಜೆಯ ನಂತರ ವಿವೇಕಾನಂದರ ತತ್ವ ಆದರ್ಶಗಳನ್ನೊಳಗೊಂಡ ಹತ್ತು ಸಾವಿರ ಪುಸ್ತಕಗಳನ್ನು ಕ್ಷೇತ್ರದಾದ್ಯಂತ ಉಚಿತವಾಗಿ ಹಂಚಲಾಗುವುದು ಹಾಗೂ ಅನ್ನ ಸಂತರ್ಪಣೆ ಏರ್ಪಡಿಸಲಾಗಿರುತ್ತದೆ ಎಂದಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ನಿತ್ಯ ಭವಿಷ್ಯ6 days ago
ಸೋಮವಾರ- ರಾಶಿ ಭವಿಷ್ಯ ಜನವರಿ-23,2023 : ಈ ರಾಶಿಯವರಿಗೆ ಸಾಡೇ ಸಾತಿ ಶನಿಯಿಂದ ಮುಕ್ತಿ,ಎಲ್ಲಾ ನಿಮ್ಮ ಕೆಲಸಗಳು ನೆರವೇರಲಿ
-
ದಿನದ ಸುದ್ದಿ4 days ago
ಸಂಸತ್ತಿನ ಬಜೆಟ್ ಅಧಿವೇಶನದ ಹಿನ್ನೆಲೆ ; ಇದೇ 30ರಂದು ಸರ್ವಪಕ್ಷಗಳ ಸಭೆ
-
ದಿನದ ಸುದ್ದಿ3 hours ago
ಕರ್ನಾಟಕದಲ್ಲಿ ಈ ವರ್ಷ ಜನಪರ ರಾಜ್ಯ ಬಜೆಟ್ ಮಂಡನೆ ; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
-
ದಿನದ ಸುದ್ದಿ2 hours ago
ನಟ ಮನದೀಪ್ ರಾಯ್ ನಿಧನ