ದಿನದ ಸುದ್ದಿ
ಆತ್ಮೀಯ ಮುಸ್ಲಿಂ ಗೆಳೆಯರಿಗಾಗಿ, ಗೌರವಪೂರ್ವಕವಾಗಿ..!

- ವಿವೇಕಾನಂದ. ಹೆಚ್.ಕೆ.
ಹೌದು, ನಿಮಗೆ ತ್ರಿವಳಿ ತಲ್ಲಾಖ್ ವಿಷಯದಲ್ಲಿ, ಬಾಬರಿ ಮಸೀದಿ ವಿವಾದದ ತೀರ್ಪಿನ ವಿಷಯದಲ್ಲಿ, ಗೋ ಮಾಂಸ ನಿಷೇಧದ ವಿಚಾರದಲ್ಲಿ, ಸಿಎಎ – ಎನ್ ಆರ್ ಸಿ ತಿದ್ದುಪಡಿಯಲ್ಲಿ ಒಟ್ಟಾರೆಯಾಗಿ ಭಾರತದ ಈಗಿನ ಸರ್ಕಾರದ ಧೋರಣೆಯ ಬಗ್ಗೆ ಅಸಮಾಧಾನ ಇರಬಹುದು ಅಥವಾ ಇದೆ ಎಂದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ಅದರ ಬಗ್ಗೆ ದೇಶಾದ್ಯಂತ ಪ್ರತಿಭಟನೆಗಳು ಸಹ ಇತ್ತೀಚಿನ ವರೆಗೂ ನಡೆಯುತ್ತಿತ್ತು. ಅದು ನಿಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಸಂವಿಧಾನಾತ್ಮಕ ಹಕ್ಕು.
ಆದರೆ ಈ ನಡುವೆ ಅನಿರೀಕ್ಷಿತವಾಗಿ ಕೊರೋನಾ ವೈರಸ್ ಇಡೀ ದೇಶವನ್ನು ಆಕ್ರಮಿಸಿ ಜೀವ ಉಳಿಸಿಕೊಳ್ಳುವುದೇ ಒಂದು ದೊಡ್ಡ ಸಾಹಸವಾಗಿದೆ. ಜಾತಿ ಧರ್ಮ ಭಾಷೆ ಪಕ್ಷ ಪಂಥ ದೇವರು ಎಲ್ಲವೂ ಹಿನ್ನೆಲೆಗೆ ಸರಿದಿದೆ ಮತ್ತು ಸರಿಯಲೇಬೇಕು.
ಮಾಧ್ಯಮಗಳಲ್ಲಿ ಸ್ವಲ್ಪ ಪಕ್ಷಪಾತ, ದುಡುಕುತನ, ಅತಿರಂಜಿತ ವರದಿಗಳು ಇದೆ ಎಂದೇ ಭಾವಿಸಿದರೂ,ಇತರೆ ಧರ್ಮದ ಕೆಲವು ಕಾರ್ಯಕ್ರಮಗಳು ಸಹ ನಡೆದವು ಎಂಬುದು ನಿಜವಾದರೂ ಇಲ್ಲಿ ಯಾವುದೇ ನೆಪ ಹೇಳದೆ, ಯಾವುದೇ ಕಾರಣ ನೀಡದೆ ವೈದ್ಯಕೀಯ ಕ್ಷೇತ್ರದ ಸಲಹೆಯಂತೆ ಸರ್ಕಾರಗಳು ತೆಗೆದುಕೊಳ್ಳುವ ತೀರ್ಮಾನಗಳನ್ನು ಸಂಪೂರ್ಣ ಬೆಂಬಲಿಸುವ ಕರ್ತವ್ಯ ಮತ್ತು ಜವಾಬ್ದಾರಿ ಎಲ್ಲರಿಗೂ ಇದೆ.
ವಿರೋಧಿ ಗುಂಪಿನವರು ಒಂದಷ್ಟು ರಾಜಕೀಯ ಗೊಳಿಸುವುದು, ಪ್ರಚೋದಿಸುವುದು ಇದ್ದರೂ ಅದಕ್ಕೆ ಈಗ ಹೆಚ್ಚಿನ ಮಹತ್ವ ಕೊಡಬಾರದು. ಈ ದೇಶದ ಹಕ್ಕು ಮತ್ತು ಕರ್ತವ್ಯಗಳು ನಿಮಗೂ ಸಹ ಸಮ ಪ್ರಮಾಣದಲ್ಲಿ ಇದೆ. ಇದನ್ನು ಈಗ ಏಕೆ ಹೇಳಬೇಕಾಯಿತೆಂದರೆ ಮಸೀದಿಗಳಲ್ಲಿ ಈಗಲೂ ಸಾಮೂಹಿಕ ಪ್ರಾರ್ಥನೆಯ ವರದಿಗಳು ಅಲ್ಲಲ್ಲಿ ಕೇಳಿ ಬರುತ್ತಿರುವುದರಿಂದ.
ಇದು ಸಾವು ಬದುಕಿನ ಮತ್ತು ಹಸಿವು ಅಸ್ತಿತ್ವದ ಪ್ರಶ್ನೆ. ಇಡೀ ಭಾರತೀಯ ಜನ ಸಮುದಾಯ ಆತಂಕದಿಂದ ಇದ್ದು ಪ್ರತಿ ಕ್ಷಣವನ್ನೂ ತುಂಬಾ ಎಚ್ಚರಿಕೆಯಿಂದ ಗಮನಿಸುತ್ತಿದೆ. ಈಗ ಇಡುವ ಪ್ರತಿ ಹೆಜ್ಜೆಯೂ ಬಹಳಷ್ಟು ಚರ್ಚೆಗೆ ಗ್ರಾಸವಾಗುತ್ತದೆ ಮತ್ತು ಜನರ ಮನಸ್ಸಿನಲ್ಲಿ ಉಳಿಯುತ್ತದೆ.
ಈಗಾಗಲೇ ಮನಸ್ಸುಗಳು ಒಡೆದಿವೆ. ಎರಡೂ ಕಡೆ ಪ್ರಚೋದನಾತ್ಮಕ ಮಾತುಗಳು ಪರಿಸ್ಥಿತಿ ಕೈ ಮೀರುವಂತೆ ಮಾಡಿದೆ. ಧರ್ಮ, ರಾಜಕೀಯ ಮನೆಯೊಳಗೆ ಮನಸ್ಸುಗಳೊಳಗೆ ಬಂದಾಗಿದೆ. ಧರ್ಮಾಂಧತೆ ದೇಶವನ್ನು ಆಕ್ರಮಿಸಿಕೊಂಡಿದೆ. ಮೊದಲಿನಿಂದಲೂ ಇದ್ದ ಹಿಂದೂ ಮುಸ್ಲಿಂ ವೈಮನಸ್ಯ ಈಗ ಇನ್ನೂ ದೊಡ್ಡದಾಗಿದೆ.
ಮುಸ್ಲಿಂ ಭಾಂಧವರೆ ನಿಮ್ಮ ಆತ್ಮಾವಲೋಕನಕ್ಕಾಗಿ ಇತ್ತೀಚಿನ ಒಂದು ವರದಿ
38.40 ಲಕ್ಷ ಜನರ ಸಾವು. ಕೇವಲ 9 ವರ್ಷಗಳಲ್ಲಿ.2011 ರಿಂದ ಇಲ್ಲಿಯವರೆಗೆ.ಸಿರಿಯಾ ದೇಶದ ಆಂತರಿಕ ಯುದ್ಧದಿಂದಾಗಿ.ಗಂಡಸರೆಷ್ಟೋ, ಹೆಂಗಸರೆಷ್ಟೋ, ಮಕ್ಕಳೆಷ್ಟೋ,.ಯಾವ ಯಾವ ಭೀಕರ ರೀತಿಯಲ್ಲಿ ಯಾತನೆ ಅನುಭವಿಸಿ ಸತ್ತರೋ. ಬಹುತೇಕ ತಮ್ಮ ಅರ್ಧ ಆಯಸ್ಸನ್ನೂ ಮುಗಿಸದೇ ತೀರಿ ಹೋದರು.ಅವರನ್ನು ಅಲ್ಲಾ ಎಂಬ ದೇವರು ಸೃಷ್ಟಿಸಿದ್ದರು, ಇಸ್ಲಾಂ ಎಂಬ ಧರ್ಮ ಬೆಳೆಸಿತ್ತು, ಷಿಯಾ ಸುನ್ನಿ ಖುರ್ದ್ ಎಂಬ ಹೆಸರುಗಳು ವಿಭಜಿಸಿದ್ದವು ಎಂದು ನಂಬಲಾಗುತ್ತದೆ. ಆದರೆ ಯಾವುದೂ ಅವರ ರಕ್ಷಣೆಗೆ ಬರಲಿಲ್ಲ, ಕೇವಲ ಸುಮಾರು 1.80 ಕೋಟಿ ಜನಸಂಖ್ಯೆಯ ದೇಶದಲ್ಲಿ ಘರ್ಷಣೆಗೆ ಸತ್ತವರು 38.40 ಲಕ್ಷ ಜನರು.
ನನಗವರು ಮನುಷ್ಯರು ಮಾತ್ರ
ಸೃಷ್ಟಿಯಲ್ಲಿ ಗಂಡು ಹೆಣ್ಣಿನ ಮಿಲನದಿಂದ ಮತ್ತೊಂದು ಜೀವ ಜನ್ಮ ತಾಳುತ್ತದೆ.ಸಿರಿಯಾದಲ್ಲಿ ಮಗು ಜನಸಿದರೆ ಮುಸ್ಲಿಂ ಎನ್ನುತ್ತಾರೆ. ಇಂಗ್ಲೆಂಡ್ ನಲ್ಲಿ ಜನಸಿದರೆ ಕ್ರಿಶ್ಚಿಯನ್, ಇಸ್ರೇಲ್ ನಲ್ಲಿ ಯಹೂದಿ, ಜಪಾನ್ ನಲ್ಲಿ ಬೌದ್ದ, ಭಾರತದಲ್ಲಿ ಹಿಂದೂ ಎಂದು ಸಾಮಾನ್ಯವಾಗಿ ಕರೆಯಲಾಗುತ್ತದೆ .ಈ ವ್ಯತ್ಯಾಸಗಳೇ ಮಾನವ ಕುಲಕ್ಕೆ ಶಾಪವಾಗಿ ಪರಿಣಮಿಸಿದೆ.
ಹಿಂದೆ ಕ್ರಿಶ್ಚಿಯನ್ ಧರ್ಮದ ಯೂರೋಪಿಯನ್ ದೇಶಗಳಲ್ಲೂ ಇದಕ್ಕಿಂತ ಭಯಂಕರ ಮಾನವ ಹತ್ಯಾಕಾಂಡಗಳು ನಡೆದಿವೆ.ಫ್ರೆಂಚ್ ಕ್ರಾಂತಿಯ ರಕ್ತಪಾತ, ಎರಡು ಮಹಾಯುದ್ಧಗಳು, ಇಟಲಿ ದಂಗೆ, ಹಿಟ್ಲರನ ಸಾವಿನ ಶಿಬಿರಗಳು, ರಷ್ಯಾ ದೌರ್ಜನ್ಯ ಎಲ್ಲವೂ ಇತಿಹಾಸದಲ್ಲಿ ದಾಖಲಾಗಿದೆ.
ಹಾಗೆಯೇ ಹಿಂದೂ ಜೀವನಶೈಲಿಯ ಭಾರತದಲ್ಲೂ ಹಿಂಸೆಯ ಪ್ರಮಾಣ ಕಡಿಮೆ ಏನಿಲ್ಲ. ಕ್ರಿಸ್ತ ಪೂರ್ವದಲ್ಲೇ ಬುದ್ದ ಮಹಾವೀರರು ಅಹಿಂಸೆಯ ಬಗ್ಗೆ ಗಂಭೀರವಾಗಿ ಮಾತನಾಡಿದ್ದಾರೆ ಎಂದರೆ ಆಗಲೇ ಹಿಂಸೆಯ ಪ್ರಮಾಣ ಎಷ್ಟಿತ್ತು ಎಂದು ಊಹಿಸಬಹುದು.
ಕಾರಣಗಳು ಏನೇ ಇರಲಿ
ಈ ಕ್ಷಣದಲ್ಲಿ ಪಾಕಿಸ್ತಾನ, ಇರಾನ್, ಇರಾಕ್, ಸಿರಿಯಾ, ಆಪ್ಘನಿಸ್ತಾನ, ಯೆಮೆನ್, ಟರ್ಕಿ ಮುಂತಾದ ಇಸ್ಲಾಮಿಕ್ ದೇಶಗಳೇ ಹೆಚ್ಚು ಸಾವು ನೋವಿಗೆ, ಆಂತರಿಕ ಕಲಹಗಳಿಗೆ ತುತ್ತಾಗುತ್ತಿವೆ.
ಈಗ ಗಂಭೀರವಾಗಿ ಯೋಚಿಸುವ ಸಮಯ ಬಂದಿದೆ. ಎಲ್ಲಾ ಧರ್ಮಗಳ ಮೂಲ ಆಶಯ ಮೂಲೆಗುಂಪಾಗಿ ಕೇವಲ ಆಚರಣೆಗಳು ಮಾತ್ರ ಜಾರಿಯಲ್ಲಿವೆ. ಇದಕ್ಕೆ ಇಸ್ಲಾಂ ಸಹ ಹೊರತಲ್ಲ.
ಹೌದು, ಭಾರತೀಯ ಮುಸ್ಲಿಮರಲ್ಲಿ ಬಡತನ ಅಜ್ಞಾನ ಗಾಢ ಧಾರ್ಮಿಕ ನಂಬಿಕೆಗಳು ಮನೆ ಮಾಡಿವೆ. ಧರ್ಮ ಗುರುಗಳ ಮಾತಿಗೆ ಅತಿ ಹೆಚ್ಚಿನ ಮಹತ್ವ ನೀಡುತ್ತಾರೆ. ಪ್ರಚೋದನಕಾರಿಯಾಗಿ ಮಾತನಾಡುವ ಹಿಂದೂಗಳು ಸಹ ಇದನ್ನು ಗಮನಿಸಬೇಕು. ಆತಂಕದಿಂದ ಎಲ್ಲಾ ತಪ್ಪುಗಳನ್ನು ಒಂದು ಸಮುದಾಯದ ತಲೆಗೆ ಕಟ್ಟಬಾರದು. ಸಂಯಮ ಅಗತ್ಯ.
ವಿವೇಚನೆ ಅಗತ್ಯ. ಕರೋನ ಬಂದಿದೆ ಎಂಬ ಒಂದೇ ಕಾರಣದಿಂದ ದಿನ ಬೆಳಗಾಗುವುದರಲ್ಲಿ ಎಲ್ಲರಲ್ಲೂ ದಿಡೀರನೇ ಪ್ರಬುದ್ದತೆ ನಿರೀಕ್ಷಿಸಲಾಗುವುದಿಲ್ಲ. ಸಬ್ ಕಾ ಸಾಥ್ ಸಬ್ ವಿಕಾಸ್ ಕೇವಲ ಘೋಷಣೆಯಾಗಬಾರದು. ಅದು ನಡವಳಿಕೆಯಾಗಬೇಕು. ಮಾಧ್ಯಮಗಳಂತೆ ವಿವೇಚನಾರಹಿತವಾಗಿ ಕೂಗಾಡಬಾರದು. ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳುಗಳನ್ನು ಹರಡಬಾರದು. ಅದರಿಂದ ದೇಶಕ್ಕೆ ಅಪಾಯವೇ ಹೆಚ್ಚು.
ಎಲ್ಲಾ ಅಲ್ಪಸಂಖ್ಯಾತರಿಗೆ ಇರುವ ಅಭದ್ರತೆಯ ನಡುವೆಯೂ, ಮುಸ್ಲಿಂ ಸಮುದಾಯದಲ್ಲಿ ಪ್ರಗತಿಪರ ಚಿಂತನೆಗಳು ಸಮೂಹ ಪ್ರಜ್ಞೆಯಾಗಿ ಜಾಗೃತವಾಗಬೇಕು. ಧರ್ಮದ ಮೇಲಿನ ಅವಲಂಬಿನೆ ಕಡಿಮೆಯಾಗಬೇಕಿದೆ. ಅದಕ್ಕೆ ಹಿಂದೂಗಳು ಸಹ ಪ್ರೇರಣೆಯಾಗಬೇಕೆ ಹೊರತು ಪ್ರಚೋದಕರಾಗಬಾರದು. ಸುಮಾರು 18 ಕೋಟಿ ಜನಸಂಖ್ಯೆಯ ಒಂದು ಸಮುದಾಯವನ್ನು ಅಭದ್ರತೆಗೆ ತಳ್ಳಿ ದೇಶದ ಅಭಿವೃದ್ಧಿ ಶಾಂತಿ ಸಾಧ್ಯವೇ ಇಲ್ಲ.
ಎರಡೂ ಧರ್ಮಗಳಲ್ಲಿ ಕ್ರಿಯೆ ಪ್ರತಿಕ್ರಿಯೆಗಳು ಪ್ರಚೋದನಾತ್ಮಕವಾಗಿದ್ದು ಇದೇ ಕಾರಣದಿಂದ ಧೈರ್ಯವಾಗಿ ಮಾತನಾಡುವ ಖಂಡಿಸುವ ಸತ್ಯವನ್ನು ಬಯಲಿಗೆ ಎಳೆಯುವ ಜನರು ಕಡಿಮೆಯಾಗಿದ್ದಾರೆ. ಧರ್ಮ ಒಂದು ಸೂಕ್ಷ್ಮ ವಿಷಯ ಎಂಬ ನೆಪದಿಂದ ಮಾತನಾಡಲು ಹೆದರುತ್ತಾರೆ. ತಮ್ಮ ತಮ್ಮ ಧರ್ಮ ದೇವರು ಗ್ರಂಥಗಳಲ್ಲಿ ಅಡಗಿರುವವರನ್ನು ನಾಗರಿಕ ಪ್ರಜ್ಞೆಗೆ ಎಳೆದು ತರಬೇಕಿದೆ. ಇದು ತುಂಬಾ ಕಷ್ಟ. ಆದರೂ ಮನುಷ್ಯನ ಉಳಿವಿಗಾಗಿ ನಿಂತ ನೀರಾಗಿ ಕೊಳೆತು ನಾರುತ್ತಿರುವ ಧಾರ್ಮಿಕತೆಯನ್ನು ಬಯಲಿಗೆ ಎಳೆಯಬೇಕಿದೆ. ಇಲ್ಲದಿದ್ದರೆ ಮುಂದಿನ ದಿನಗಳು ಇನ್ನಷ್ಟು ಭಯಂಕರ ಸ್ಥಿತಿ ತಲುಪುತ್ತದೆ. ಬಲವೇ ನ್ಯಾಯ ಎಂಬ ಪರಿಸ್ಥಿತಿ ನಿರ್ಮಾಣವಾಗುತ್ತದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ನಟ ಮನದೀಪ್ ರಾಯ್ ನಿಧನ

ಸುದ್ದಿದಿನ ಡೆಸ್ಕ್ : ಹಿರಿಯ ಚಿತ್ರನಟ ಮನದೀಪ್ ರಾಯ್ (74 ವರ್ಷ) ಇಂದು ಬೆಳಗಿನ ಜಾವ ಅಗಲಿದ್ದಾರೆ.
ಕೆಲ ದಿನಗಳ ಹಿಂದೆ ಹೃದಯಾಘಾತಕ್ಕೀಡಾಗಿದ್ದ ಅವರು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಮನದೀಪ್ ರಾಯ್ ಹವ್ಯಾಸಿ ರಂಗಭೂಮಿ ಹಿನ್ನೆಲೆಯ ಕಲಾವಿದ. ನಟ – ನಿರ್ದೇಶಕ ಶಂಕರನಾಗ್ ಅವರ ಆತ್ಮೀಯ ಒಡನಾಡಿ. ಪೋಷಕ ಪಾತ್ರ, ಹಾಸ್ಯ ನಟರಾಗಿ 500ಕ್ಕೂ ಹೆಚ್ಚು ಸಿನಿಮಾಗಳು ಹಾಗೂ ಕಿರುತೆರೆ ಸರಣಿಗಳಲ್ಲಿ ಅಭಿನಯಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕರ್ನಾಟಕದಲ್ಲಿ ಈ ವರ್ಷ ಜನಪರ ರಾಜ್ಯ ಬಜೆಟ್ ಮಂಡನೆ ; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಸುದ್ದಿದಿನ, ಹಾವೇರಿ : ಕರ್ನಾಟಕದಲ್ಲಿ ಮುಂದಿನ ತಿಂಗಳು ಮಂಡಿಸಲಾಗುತ್ತಿರುವ ಈ ವರ್ಷದ ರಾಜ್ಯ ಬಜೆಟ್ ರೈತರು, ದೀನ ದಲಿತರು, ಯುವಕರು, ಮಹಿಳೆಯರು, ದುಡಿಯುವ ವರ್ಗ ಮತ್ತು ಜನಪರವಾಗಿರುತ್ತದೆ ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹಾವೇರಿ ಜಿಲ್ಲೆ ಶಿಗ್ಗಾಂವ್ನಲ್ಲಿ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ದುಡಿಮೆಗೆ ಯೋಗ್ಯ ಬೆಲೆ ಸಿಗುವ ರೀತಿಯಲ್ಲಿ ನಮ್ಮ ಕಾರ್ಯಕ್ರಮಗಳು ಇರುತ್ತವೆ ಎಂದರು.
ಕರ್ನಾಟಕ ರಾಜ್ಯದ ಆರ್ಥಿಕ ಅಭಿವೃದ್ಧಿಯಲ್ಲಿ ನಾವು ವೇಗವನ್ನು ಕಂಡಿದ್ದೇವೆ. ಕಳೆದ ವರ್ಷ ನಾನು ಅಧಿಕಾರ ವಹಿಸಿಕೊಂಡಾಗ 5 ಸಾವಿರ ಕೋಟಿ ರೂಪಾಯಿ ರಾಜ್ಯದ ಬೊಕ್ಕಸಕ್ಕೆ ನಮ್ಮ ನಿರ್ಧಿಷ್ಟ ಗುರಿಗೆ ಕೊರತೆಯಿತ್ತು. ಅದನ್ನು ನಾವು 5 ಸಾವಿರ ಕೋಟಿ ತುಂಬುವುದಲ್ಲದೇ, 13 ಸಾವಿರ ಕೋಟಿ ಅಧಿಕವಾಗಿ ಸಂಗ್ರಹ ಮಾಡಿದ್ದೇವೆ. ಈ ವರ್ಷವೂ ಕೂಡ ನಮ್ಮ ಹಣಕಾಸಿನ ಸಂಗ್ರಹ ಉತ್ತಮವಾಗಿದೆ ಎಂದು ಕರ್ನಾಟಕದ ಮುಖ್ಯಮಂತ್ರಿ ಹೇಳಿದರು.
ಕೋವಿಡ್ ನಂತರದಲ್ಲಿ ಆರ್ಥಿಕ ಸುಧಾರಣೆ ಆಗುತ್ತಿರುವ ಸಂದರ್ಭದಲ್ಲಿ ಕೆಳಹಂತದ ಜನಸಮುದಾಯಕ್ಕೆ ಇನ್ನಷ್ಟು ಸಹಾಯ ಮಾಡಿ, ಅವರನ್ನು ಕೂಡ ಮುಖ್ಯ ವಾಹಿನಿಗೆ ಬರಬೇಕು ಎನ್ನುವ ನಿಟ್ಟಿನಲ್ಲಿ ನಾವು ಕಾರ್ಯಕ್ರಮ ರೂಪಿಸುತ್ತಿದ್ದೇವೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಸಂಸತ್ತಿನ ಬಜೆಟ್ ಅಧಿವೇಶನದ ಹಿನ್ನೆಲೆ ; ಇದೇ 30ರಂದು ಸರ್ವಪಕ್ಷಗಳ ಸಭೆ

ಸುದ್ದಿದಿನ ಡೆಸ್ಕ್ : ಸಂಸತ್ತಿನ ಮುಂಬರುವ ಬಜೆಟ್ ಅಧಿವೇಶನದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇದೇ 30ರಂದು ಸರ್ವಪಕ್ಷಗಳ ಸಭೆಯನ್ನು ಕರೆದಿದೆ. ಸಂಸತ್ ಭವನದ ಸಂಕೀರ್ಣದಲ್ಲಿ ಸೋಮವಾರ ಮಧ್ಯಾಹ್ನ 12 ಗಂಟೆಗೆ ಸಭೆ ನಡೆಯಲಿದೆ.
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ, ಕೇಂದ್ರ ಸಚಿವರು ಮತ್ತು ಸಂಸತ್ತಿನ ಎರಡೂ ಸದನಗಳನ್ನು ಪ್ರತಿನಿಧಿಸುವ ಸದನ ನಾಯಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಸಭೆಯಲ್ಲಿ ಸರ್ಕಾರ ಸಂಸತ್ತಿನ ಉಭಯ ಸದನಗಳ ಸುಗಮ ಕಲಾಪಕ್ಕೆ ಎಲ್ಲ ರಾಜಕೀಯ ಪಕ್ಷಗಳ ಸಹಕಾರವನ್ನು ಕೋರಲಿದೆ. ಸಂಸತ್ತಿನ ಬಜೆಟ್ ಅಧಿವೇಶನ ಇದೇ 31ರಿಂದ ಆರಂಭವಾಗಲಿದೆ. ಮೊದಲ ದಿನ ಬೆಳಿಗ್ಗೆ 11 ಗಂಟೆಗೆ ಸೆಂಟ್ರಲ್ ಹಾಲ್ ನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡುವರು.
ಅದೇ ದಿನವೇ ಆರ್ಥಿಕ ಸಮೀಕ್ಷೆಯನ್ನೂ ಸಹ ಮಂಡಿಸಲಾಗುವುದು. ಫೆಬ್ರವರಿ 1ರಂದು 2023-24ನೇ ಸಾಲಿನ ಕೇಂದ್ರ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆ ಮಾಡಲಿದ್ದಾರೆ.
ಬಜೆಟ್ ಅಧಿವೇಶನ ಏಪ್ರಿಲ್ 6ವರೆಗೆ ನಡೆಯಲಿದ್ದು, ಸುಮಾರು 66 ದಿನಗಳಲ್ಲಿ 27 ಕಲಾಪಗಳು ನಡೆಯಲಿದೆ. ಮೊದಲ ಅವಧಿಯಲ್ಲಿ ಅಧಿವೇಶನ ಫೆಬ್ರವರಿ 13ರವರೆಗೆ ನಡೆಯಲಿದೆ. ಫೆಬ್ರವರಿ 14ರಿಂದ ಮಾರ್ಚ್ 12ರವರೆಗೆ ಅಧಿವೇಶನಕ್ಕೆ ಬಿಡುವು ಇರಲಿದೆ ಆನಂತರ ಮಾರ್ಚ್ 13ರಿಂದ ಆರಂಭವಾಗುವ ಅಧಿವೇಶನ ಏಪ್ರಿಲ್ 6ಕ್ಕೆ ಕೊನೆಗೊಳ್ಳಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980336243
