Connect with us

ಬಹಿರಂಗ

ಕೋವಿದನ ನಡುವೆ – ಸುಳ್ಳು ಸುದ್ದಿಯ ವ್ಯಸನವೂ ಮಾಧ್ಯಮವೆಂಬೋ ವ್ಯಾಧಿಯೂ

Published

on

  • ನಾ ದಿವಾಕರ

ಸುದ್ದಿ ಎನ್ನುವುದೇ ಸತ್ಯ-ಮಿಥ್ಯೆಯ ಸಂಗಮ. ಏಕೆಂದರೆ ಅದು ಮನುಷ್ಯನನ್ನು ತಲುಪುವುದು ಬೇರೊಂದು ಮೂಲದಿಂದ. ಎಲ್ಲೋ ನಡೆದ ಒಂದು ವಿದ್ಯಮಾನ ಯಾವುದೋ ಒಂದು ಮೂಲದಿಂದ ನಮ್ಮ ಗಮನಕ್ಕೆ ಬಂದಾಗ ನಾವು ಅದನ್ನು ಸುದ್ದಿ, ವಾರ್ತೆ, ಸಮಾಚಾರ ಮುಂತಾದ ಹೆಸರುಗಳಿಂದ ಗುರುತಿಸುತ್ತೇವೆ. ಸುದ್ದಿಯ ಮೂಲ ಯಾವುದೆಂದು ತಿಳಿಯುವ ಗೋಜಿಗೆ ನಾವು ಹೋಗುವುದಿಲ್ಲ. ನಮಗೆ ತಲುಪಿದ ವಿಷಯ ಸತ್ಯವೋ ಮಿಥ್ಯೆಯೋ ಎಂದು ತಿಳಿಯಲೂ ಆಸಕ್ತಿ ತೋರುವುದಿಲ್ಲ. ನಮ್ಮ ಮನಸ್ಥಿತಿಗೆ ತಕ್ಕಂತೆ, ನಮ್ಮ ಆಲೋಚನೆಗೆ ಪೂರಕವಾಗಿ ನಮ್ಮ ಕಿವಿಗೆ ಬಿದ್ದ ಸಮಾಚಾರವನ್ನು ನಂಬುವುದು ಬಿಡುವುದು ಮಾಡುತ್ತೇವೆ.

ಸಂಪರ್ಕ ಮಾಧ್ಯಮಗಳೇ ಇಲ್ಲದ ಕಾಲದಲ್ಲಿ ಮಾನವ ಸಮಾಜ ಹೇಗೆ ನಿರ್ವಹಿಸಿರಬಹುದು ಎಂದು ಒಮ್ಮೆ ಯೋಚಿಸೋಣ. ಆಗ ಸುದ್ದಿ ಸಮಾಚಾರ ವಾರ್ತೆ ಇದಾವುದೂ ಇರಲಿಕ್ಕಿಲ್ಲ ಅಲ್ಲವೇ. ತಾವು ಕಣ್ಣಾರೆ ನೋಡಿದ್ದನ್ನು ಜನರು ತಮ್ಮನ್ನು ನೇರವಾಗಿ ಸಂಪರ್ಕಿಸುವವರೊಡನೆ ಹಂಚಿಕೊಳ್ಳುತ್ತಿದ್ದರು. ಅಲ್ಲಿ ವಿಷಯದ ವಿನಿಮಯ ಮಾತ್ರವೇ ಇತ್ತು, ವಿತರಣೆ, ಪ್ರಸರಣ ಇರುತ್ತಿರಲಿಲ್ಲ. ಮಾನವ ಸಮಾಜ ಹೆಚ್ಚು ವಿಸ್ತರಣೆಯಾಗದಿದ್ದ ಕಾಲದಲ್ಲಿ ಈ ವಿನಿಮಯವೂ ಸಹ ಸೀಮಿತ ಚೌಕಟ್ಟಿನಲ್ಲಿ ಮಾತ್ರವೇ ಇರುತ್ತಿತ್ತು. ಇದನ್ನು ಸಂದೇಶ ಎನ್ನಲಾಗುತ್ತಿತ್ತು ಸುದ್ದಿ ಎನ್ನುತ್ತಿರಲಿಲ್ಲ. ಏಕೆಂದರೆ ಇಲ್ಲಿ ಇಬ್ಬರು ವ್ಯಕ್ತಿಗಳ ನಡುವೆ ಮಾತ್ರವೇ ವಿಷಯ ಹರಿದಾಡುತ್ತಿತ್ತು. ಈ ಸಂದೇಶಕ್ಕೆ ಒಂದು ವ್ಯಾಪ್ತಿ ದೊರೆತಿದ್ದು ಅಕ್ಷರ ಮತ್ತು ಬರಹ ಒಂದಾದ ಸಂದರ್ಭದಲ್ಲಿ.

ಪಾರಿವಾಳಗಳ ಮೂಲಕ ತಮ್ಮ ಸಂದೇಶವನ್ನು ದೂರದಲ್ಲಿರುವ ತಮ್ಮ ನಿಕಟವರ್ತಿಗಳಿಗೆ ರವಾನಿಸುವ ಪರಂಪರೆಯ ಸಂದರ್ಭದಲ್ಲೂ ವಿನಿಮಯವಾಗುತ್ತಿದ್ದುದು ಪರಸ್ಪರ ಸಂಬಂಧಿತ ವಿಚಾರಗಳು ಮಾತ್ರ. ಇದನ್ನೂ ಸುದ್ದಿ ಎನ್ನಲಾಗುವುದಿಲ್ಲ. ಈ ಸುದ್ದಿ ಅಥವಾ ಸಮಾಚಾರ ಎಂಬ ವಿದ್ಯಮಾನಕ್ಕೆ ಪುಷ್ಟಿ ದೊರೆತದ್ದು ಬಹುಶಃ ರಾಜಪರಂಪರೆಯಲ್ಲಿ ಇದ್ದಿರಬಹುದು. ಅನ್ಯ ರಾಜ್ಯಗಳಲ್ಲಿ ಅಥವಾ ತಮ್ಮದೇ ರಾಜ್ಯದಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ತಿಳಿದುಕೊಳ್ಳಲು ಸಾಮ್ರಾಟರು ತಮ್ಮ ಬೇಹುಗಾರರನ್ನು ವಿವಿಧ ಪ್ರಾಂತ್ಯಗಳಿಗೆ ಕಳುಹಿಸುವ ಪರಂಪರೆ ಸುದ್ದಿ-ಸಮಾಚಾರದ ಉಗಮಕ್ಕೆ ಕಾರಣವಾಯಿತೇನೋ ! ಇಲ್ಲಿ ಸುದ್ದಿಯ ಸತ್ಯಾಸತ್ಯತೆಯ ನಿಷ್ಕರ್ಷೆಗೆ ಸುದ್ದಿ ತರುವ ಬೇಹುಗಾರನ ನಿಷ್ಠೆ ಮತ್ತು ಬದ್ಧತೆಯೇ ಮೂಲ. ಅವನ ಪ್ರಾಮಾಣಿಕತೆಯೇ ಆಧಾರ.

ತನ್ನ ದೊರೆಗೆ ನಿಷ್ಠಾವಂತನಾದ ಬೇಹುಗಾರರಲ್ಲಿ ಎರಡು ವಿಧ. ಮೊದಲನೆಯದು ತನ್ನ ರಾಜನಿಷ್ಠೆಯನ್ನು ಪ್ರದರ್ಶಿಸಲು, ರಾಜನಿಗೆ ಇಷ್ಟವಾಗುವಂತೆ ಸುದ್ದಿಯನ್ನು ಅರುಹುವುದು. ತನ್ನ ದೊರೆಗೆ ಇಷ್ಟವಾಗದ ವಿಚಾರಗಳನ್ನು ಮರೆಮಾಚುವುದು, ಪ್ರಿಯವಾದುದನ್ನು ರಂಜನೀಯವಾಗಿ ಅರುಹುವುದು, ದೊರೆಯ ಆಕ್ರೋಶಕ್ಕೆ ಕಾರಣವಾಗುವ ವಿಚಾರವನ್ನು ಜಾಣ್ಮೆಯಿಂದ ಹೇಳುವುದು, ಇಲ್ಲವೇ ಹೇಳದೆಯೇ ಇರುವುದು, ಹೀಗೆ. ಈ ರೀತಿಯ ಸುದ್ದಿ ತರುವವರು ಸಾಮಾನ್ಯವಾಗಿ ರಾಜನಿಗೆ ಶತ್ರುಗಳನ್ನು ಸೃಷ್ಟಿಸುತ್ತಿದ್ದುದೇ ಹೆಚ್ಚು. ವ್ಯಕ್ತಿಗತವಾಗಿ ತಮಗೆ ಇಷ್ಟವಾಗದವರ ವಿರುದ್ಧ ರಾಜನ ಬಳಿ ಇಲ್ಲದ ವಿಷಯಗಳನ್ನು ಹೇಳುವ ಮೂಲಕ ಆಗಾಗ್ಗೆ ಸಣ್ಣಪುಟ್ಟ ಶತ್ರುಪಾಳಯಗಳನ್ನು ಸೃಷ್ಟಿಸುವ ಪರಂಪರೆಗೆ ದೀರ್ಘ ಇತಿಹಾಸವೇ ಇದೆ ಅಲ್ಲವೇ ?
ಎರಡನೆಯ ವಿಧ ಎಂದರೆ ತಮ್ಮ ಅಸ್ತಿತ್ವ, ಸ್ಥಾನಮಾನ ಉಳಿಸಿಕೊಳ್ಳಲು, ತಮ್ಮ ಸ್ವಂತ ಹಿತಾಸಕ್ತಿಯನ್ನು ಕಾಪಾಡಿಕೊಳ್ಳಲು ಸುದ್ದಿಯನ್ನು ತಿರುಚಿ ಹೇಳುವುದು ಇಲ್ಲವೇ ಇಲ್ಲದ ಸುದ್ದಿಯನ್ನು ಸೃಷ್ಟಿಸಿ ಹೇಳುವುದು.

ಇಂಥವರಿಗೆ ರಾಜನಿಷ್ಠೆ ಇರುತ್ತಿತ್ತು ಆದರೆ ರಾಜನಿಗೆ ಇವರ ಮೇಲಿರುತ್ತಿದ್ದ ವಿಶ್ವಾಸವೇ ಇವರ ಬಂಡವಾಳವಾಗುತ್ತಿತ್ತು. ದೊರೆ ತಾನು ಹೇಳಿದ್ದನ್ನು ನಂಬುತ್ತಾನೆ ಎನ್ನುವ ವಿಶ್ವಾಸವೇ ಇವರ ಸುದ್ದಿಮನೆಯ ಕುಲುಮೆಗೆ ಶಾಖ ನೀಡುತ್ತಿತ್ತು. ಇವರ ಭಟ್ಟಂಗಿತನ, ವಂದಿಮಾಗಧ ನಡೆ ರಾಜನ ದೃಷ್ಟಿಯಲ್ಲಿ ಪ್ರಾಮಾಣಿಕತೆ ಎನಿಸಿದರೂ, ಅದು ಅಪಾಯಕಾರಿಯಾಗಿ ಪರಿಣಮಿಸುತ್ತಿತ್ತು. ಆದರೆ ಇವರು ಮುಟ್ಟಿಸುತ್ತಿದ್ದ ಸುದ್ದಿ ರಾಜನನ್ನೂ ಸಂಪ್ರೀತಗೊಳಿಸುತ್ತಿತ್ತು. ಹಾಗಾಗಿ ಇವರ ಅಸ್ತಿತ್ವಕ್ಕೆ ಧಕ್ಕೆ ಉಂಟಾಗುತ್ತಿರಲಿಲ್ಲ.
ದೊರೆಗೆ ಈ ಎರಡೂ ರೀತಿಯ ಸುದ್ದಿ ವಾಹಕರು ಪ್ರಿಯವಾಗಿಯೇ ಕಾಣುತ್ತಿದ್ದರು. ಏಕೆಂದರೆ ತನ್ನ ಸಾಮ್ರಾಜ್ಯದ ರಕ್ಷಣೆಗೆ ಇದು ಅತ್ಯವಶ್ಯವಾಗುತ್ತಿತ್ತು.

ರಾಜಪ್ರಭುತ್ವದ ಕಾಲದಲ್ಲೇ ಬಹುಶಃ ಸುಳ್ಳುಸುದ್ದಿಯ ವ್ಯಸನ ಉಗಮಿಸಿರಬೇಕು. ಹೊರ ರಾಜ್ಯದಿಂದ ಅಥವಾ ಶತ್ರು ಪಾಳಯದಿಂದ ಸತ್ಯವೋ ಸುಳ್ಳೋ ಯಾವುದೋ ಒಂದು ಸುದ್ದಿ ತರದಿದ್ದರೆ ಸುದ್ದಿವಾಹಕರು ದೊರೆಯ ಕೆಂಗಣ್ಣಿಗೆ ಗುರಿಯಾಗಬೇಕಿತ್ತು. ಬಹುಶಃ ಈ ಕಾಲಘಟ್ಟದಿಂದಲೇ ಸುದ್ದಿಮನೆಯ ಒಂದು ನಿರ್ದಿಷ್ಟ ಪರಿಕಲ್ಪನೆ ಮೂಡಿರಬೇಕು. ಈ ಪರಿಕಲ್ಪನೆಯ ಚೌಕಟ್ಟಿನಲ್ಲೇ ಸುಳ್ಳು ಸುದ್ದಿಯ ವ್ಯಸನವೂ ನೆಲೆ ಕಂಡಿರಬೇಕು.

ದೊರೆಗೆ ಏನಾದರೂ ಸುದ್ದಿ ಮುಟ್ಟಿಸಬೇಕು ಎನ್ನುವುದೇ ಸುದ್ದಿವಾಹಕರ ಆದ್ಯತೆಯಾಗಿರಲಿಕ್ಕೂ ಸಾಕು.
(ಇವಿಷ್ಟೂ ಇತಿಹಾಸದ ಆಕರಗಳನ್ನು ಆಧರಿಸಿ ಮಂಡಿಸಿದ ವಿಚಾರ ಅಲ್ಲ. ಹೀಗಿದ್ದಿರಬಹುದು ಎನ್ನುವ ಕಲ್ಪನೆ. ಇರಲೂಬಹುದಲ್ಲವೇ, ಇತಿಹಾಸದ ಅಧ್ಯಯನದಲ್ಲಿ ಗಮನಿಸಿರುವುದೇ ಆಗಿದೆ)
ಈಗ 21ನೆಯ ಶತಮಾನದ 3ನೆಯ ದಶಮಾನಕ್ಕೆ ಬರೋಣ. ಇಂದು ನಮಗೆ ಸುದ್ದಿ ಎನ್ನುವುದು ಮನೆಯ ಮಾತಿನಂತಾಗಿಬಿಟ್ಟಿದೆ. ಯಾವುದು ಸುದ್ದಿ, ಯಾವುದು ಸಂದೇಶ ಎಂಬ ವ್ಯತ್ಯಾಸವನ್ನೇ ಗ್ರಹಿಸಲಾರದಷ್ಟು ಮಟ್ಟಿಗೆ ಸಂಪರ್ಕ ಮತ್ತು ಸಂವಹನ ಮಾರ್ಗಗಳು ನಮ್ಮನ್ನು ಆವರಿಸಿಕೊಂಡುಬಿಟ್ಟಿವೆ. “ಆಕಾಶವಾಣಿ ವಾರ್ತೆಗಳು ಓದುತ್ತಿರುವವರು ಕೆ.ಎಸ್. ಪುರುಷೋತ್ತಮ್” ಅಥವಾ “ ಆಕಾಶವಾಣಿ ಪ್ರದೇಶ ಸಮಾಚಾರ ಓದುತ್ತಿರುವವರು ನಾಗಮಣಿ ಎಸ್ ರಾವ್ ” ಈ ದನಿಗಳನ್ನೊಮ್ಮೆ ನೆನಪಿಸಿಕೊಳ್ಳೋಣ. ಸುದ್ದಿ ಮತ್ತು ಸಂದೇಶದ ನಡುವಿನ ವ್ಯತ್ಯಾಸವನ್ನು ಅವರ ದನಿಗಳಲ್ಲಿ ಕಾಣಬಹುದಿತ್ತು. ಇಂದು ನಾವು ಆಕಾಶದಲ್ಲೇ ವಿಹರಿಸುತ್ತಿದ್ದೇವೆ ಆದರೆ ವಾಣಿ ಕಡಲ ಪಾಲಾಗಿದೆ.

ಹಾಗಾಗಿ ಸುದ್ದಿಮನೆಗಳೇ ಅನಿವಾರ್ಯ ಎನಿಸಿಬಿಟ್ಟಿದೆ. ಸುದ್ದಿಯ ವ್ಯಾಪ್ತಿ ಹೆಚ್ಚಾಗಿದೆ. ಆದರೆ ಮೂಲ ಸ್ವರೂಪ ಬದಲಾಗಿಲ್ಲ. ಆದರೆ ಸುದ್ದಿ ಮತ್ತು ಸಮಾಚಾರದ ಬಗ್ಗೆ ನಮ್ಮ ಗ್ರಹಿಕೆ ಕೊಂಚ ಬದಲಾದಂತಿದೆ. ನಾಲ್ಕೈದು ದಶಕಗಳ ಹಿಂದೆ ಪರಿಚಯಸ್ಥರು ಎದುರಾಗಿ ಏನ್ಸಮಾಚಾರ ಅಂದ್ರೆ ಏನಿಲ್ಲ ಎನ್ನುತ್ತಿದ್ದೆವು ಇಲ್ಲವಾದರೆ ನಮ್ಮನ್ನೇ ಕುರಿತು ಒಂದೆರಡು ಮಾತುಗಳನ್ನಾಡಿ ನಡೆಯುತ್ತಿದ್ದೆವು. ಈಗ ಏನ್ಸಮಾಚಾರ ಅಂದ್ರೆ ಸಾಕು ನೆಹರೂ ಅವರಿಂದ ಮೋದಿಯವರೆಗೆ, ಮೊಘಲರಿಂದ ಒಡೆಯರ್ ವರೆಗೆ ಮಾತಿನ ಲಹರಿ ಬೆಳೆಯುತ್ತದೆ. ಇತಿಹಾಸ, ವಿಜ್ಞಾನ, ಸುಜ್ಞಾನ, ಅಜ್ಞಾನ ಎಲ್ಲವನ್ನೂ ಮಾತನಾಡಿ ಕೊನೆಗೆ ಕೈ ಕುಲುಕಲೂ ಆಗದಷ್ಟು ಮನಸು ಭಾರ ಮಾಡಿಕೊಂಡು ಎರಡು ಧೃವಗಳತ್ತ ಮುಖ ಮಾಡಿ ಹೊರಟುಬಿಡುತ್ತೇವೆ. ಇದು ಸಾರ್ವತ್ರಿಕ ಸತ್ಯ ಅಲ್ಲ, ಆದರೆ ನಿರಾಕರಿಸುವ ವಿದ್ಯಮಾನವೂ ಅಲ್ಲ.

ಏಕೆ ಹೀಗೆ ? ಏಕೆಂದರೆ ಇಂದು ನಮಗೆ ಸುದ್ದಿ ಎಂದರೆ ನಮಗೆ ನೀಡಲಾಗುವ ಅಥವಾ ಒದಗಿಸಲಾಗುವ ಮಾಹಿತಿಯೇ ಹೊರತು, ನಾವು ಪ್ರತ್ಯಕ್ಷವಾಗಿ ನೋಡಿ ಪ್ರಮಾಣಿಸಿದ ಮಾಹಿತಿ ಅಲ್ಲ. ಹಾಗೊಮ್ಮೆ ನಾವು ನೋಡಿದ್ದುದೇ ಆದರೂ, ನಮ್ಮ ಕಣ್ಣೋಟವೇ ಸರಿಯಿಲ್ಲವೇನೋ ಎನ್ನುವ ಮಟ್ಟಿಗೆ ಸುದ್ದಿಮನೆಗಳು ಒಂದು ಘಟನೆಯನ್ನು ರುಬ್ಬಿ ರುಬ್ಬಿ ಚಟ್ನಿ ಮಸಾಲೆ ಮಾಡಿಬಿಟ್ಟಿರುತ್ತವೆ. ಸುದ್ದಿ ಮತ್ತು ಸಮಾಚಾರಗಳನ್ನು ಜನತೆಗೆ ತಲುಪಿಸುವ ಮುದ್ರಣ ಮಾಧ್ಯಮ ಯುಗದ ಕನಿಷ್ಟ ಪ್ರಜ್ಞಾವಂತಿಕೆಯನ್ನೂ ವಿದ್ಯುನ್ಮಾನ ಮಾಧ್ಯಮದ ಯುಗದಲ್ಲಿ ಕಾಣಲಾಗುತ್ತಿಲ್ಲ. ಏಕೆಂದರೆ ಬೆರಳ ತುದಿಯಲ್ಲಿ ಲಭಿಸುವ ಸುದ್ದಿಯನ್ನು ಕ್ಷಣಮಾತ್ರದಲ್ಲಿ ತಮ್ಮ ಪರದೆಯ ಮೇಲೆ ಬಿಂಬಿಸದೆ ಹೋದರೆ ಸುದ್ದಿಮನೆಯ ಅಸ್ತಿತ್ವಕ್ಕೆ ಕುಂದುಬರುತ್ತದೆ. ಮಾರುಕಟ್ಟೆಯಲ್ಲಿ ಮೌಲ್ಯ ಕುಸಿಯುತ್ತದೆ.

ಮತ್ತೊಮ್ಮೆ ಆಕಾಶವಾಣಿಯತ್ತ ನೋಡೋಣ. ಆಗಿನ ವಾರ್ತೆಗಳನ್ನು ಓದುತ್ತಿರುವವರ ಧ್ವನಿಯನ್ನು ಕೇಳಿಯೇ ದೇಶದಲ್ಲಿ ಏನೋ ಆಘಾತಕಾರಿ ಘಟನೆ ಸಂಭವಿಸಿದೆ, ಯಾರೋ ಮಹನೀಯರು ಮೃತಪಟ್ಟಿದ್ದಾರೆ ಎಂದು ಹೇಳಬಹುದಿತ್ತು. ಏಕೆಂದರೆ ಇಂತಹ ವಿಷಾದದ ಸುದ್ದಿಯನ್ನು ಓದುವಾಗ ಅವರ ಮೆಲುದನಿಯಲ್ಲಿ ವಿಷಾದದ ಎಳೆ ಕಂಡುಬರುತ್ತಿತ್ತು. ಇದನ್ನು ಈಗಿನ ಸುದ್ದಿಮನೆಗಳಲ್ಲಿ ಊಹಿಸಲು ಸಾಧ್ಯವೇ ? “ ಕೋರೋನಾದಿಂದ ಸತ್ತವರ ಸಂಖ್ಯೆ ಒಂದು ಲಕ್ಷ ದಾಟಿದೆ ” ಎಂದು ಏರುದನಿಯಲ್ಲಿ ಹೇಳುವ ನಿರೂಪಕಿಯ ಮುಖಭಾವವನ್ನು ನೋಡಿದರೆ, ಏನೋ ಸಂಭ್ರಮ ಮನೆಮಾಡಿದಂತೆ ಕಾಣುತ್ತದೆ.

ಇಲ್ಲಿ ಸಂಯಮ ಮತ್ತು ಸಂವೇದನೆಯ ಕೊರತೆ ಎದ್ದು ಕಾಣುತ್ತದೆ. ಇದರ ನೇರ ಪರಿಣಾಮವೇ ಈ ಸುದ್ದಿಮನೆಗಳನ್ನು ಆವರಿಸಿರುವ ಸುಳ್ಳು ಸುದ್ದಿಯ ವ್ಯಸನ. ಇಲ್ಲಿ ಪುನಃ ರಾಜಪ್ರಭುತ್ವಕ್ಕೆ ಮರಳೋಣ. ಇಂದಿನ ಪ್ರಜಾಸತ್ತಾತ್ಮಕ ಆಡಳಿತ ವ್ಯವಸ್ಥೆಗೂ, ಅಂದಿನ ರಾಜಪ್ರಭುತ್ವಕ್ಕೂ ವ್ಯತ್ಯಾಸವೇನಾದರೂ ಇದ್ದರೆ ಅದು ಆಯ್ಕೆ ಪ್ರಕ್ರಿಯೆಯಲ್ಲಿ ಮಾತ್ರ ಎನ್ನುವುದನ್ನು ತಾತ್ವಿಕವಾಗಿಯಾದರೂ ಒಪ್ಪಲೇಬೇಕು. ಏಕೆಂದರೆ ಎಷ್ಟೇ ಪ್ರಜಾಸತ್ತಾತ್ಮಕ ಧೋರಣೆಯನ್ನು ಅನುಸರಿಸಿದರೂ ಆಡಳಿತಾರೂಢ ಸರ್ಕಾರಗಳು ಗತಕಾಲದ ಸಾಮ್ರಾಟರನ್ನೇ ಹೋಲುವಂತೆ ವರ್ತಿಸುತ್ತಿರುವುದನ್ನು ಭಾರತದಲ್ಲಂತೂ ಕಾಣುತ್ತಲೇ ಬಂದಿದ್ದೇವೆ. ದೊರೆ ಬದಲಾಗುತ್ತಾನೆ, ರಾಜಗೃಹದ ಲಕ್ಷಣಗಳು ಬದಲಾಗುವುದಿಲ್ಲ. ಪ್ರಭುತ್ವದ ಲಕ್ಷಣಗಳೂ ಬದಲಾಗುವುದಿಲ್ಲ.

ಇಲ್ಲಿ ರಾಜಪ್ರಭುತ್ವ ಕಾಲದ ಸುದ್ದಿವಾಹಕರತ್ತ ನೋಡೋಣ. ಎರಡೂ ವಿಧದ ಸುದ್ದಿವಾಹಕರು ಇಂದಿಗೂ ಇದ್ದಾರೆ ಅಲ್ಲವೇ ? ಆಗ ದೊರೆಗೆ ಸುದ್ದಿ ತಲುಪಿಸುತ್ತಿದ್ದರು. ಈಗ ದೊರೆಗೆ ಬೇಕಾದಂತೆ ಜನತೆಗೆ ಸುದ್ದಿ ತಲುಪಿಸುತ್ತಾರೆ. ದೊರೆಯ ಸಂತೃಪ್ತಿಯೇ ತಮ್ಮ ಆತ್ಮತೃಪ್ತಿ ಎಂದು ಭಾವಿಸುವ ಒಂದು ಪಡೆ, ತಮ್ಮ ಅಸ್ತಿತ್ವ ರಕ್ಷಣೆಗಾಗಿ ದೊರೆಯನ್ನು ಹೇಗಾದರೂ ತೃಪ್ತಿಪಡಿಸುವ ಮತ್ತೊಂದು ಪಡೆ ಎರಡೂ ಆಯಾಮಗಳಲ್ಲಿ ನಾವಿಂದು ಅತ್ಯಾಧುನಿಕ ಸುದ್ದಿಮನೆಗಳನ್ನು ನೋಡುತ್ತಿದ್ದೇವೆ. ಇದರಿಂದ ಹೊರತಾದ ಮತ್ತೊಂದು ಆಯಾಮವೂ ಇದ್ದರೂ, ಅದು ಆಡಳಿತಾರೂಢ ಪಕ್ಷವನ್ನು ಅವಲಂಬಿಸುತ್ತದೆ. ಅಂದರೆ ವ್ಯವಸ್ಥೆಯ ವಿರುದ್ಧ, ಪ್ರಭುತ್ವದ ವಿರುದ್ಧ ಮಾತನಾಡುವ ಸುದ್ದಿಮನೆ ಇರುವುದು ಊಹಿಸಲಸಾಧ್ಯ .

ರಾಜಪ್ರಭುತ್ವದ ಲಕ್ಷಣಗಳನ್ನು ರಾಜಭವನಗಳಲ್ಲಿ ಕಾಣಲಾಗದಿದ್ದರೂ ಈ ಸುದ್ದಿಮನೆಗಳ ಮೂಲಕ ಕಾಣಬಹುದು.
ಇಂದಿನ ವಿದ್ಯುನ್ಮಾನ ಮಾಧ್ಯಮ ಮತ್ತು ಕೊಂಚಮಟ್ಟಿಗೆ ಮುದ್ರಣ ಮಾಧ್ಯಮಗಳ ಸುಳ್ಳುಸುದ್ದಿಯ ವ್ಯಸನಕ್ಕೆ ಇದೇ ಮೂಲ ಕಾರಣ. ಸುದ್ದಿಮನೆಗಳು ಸುದ್ದಿ ಸಮಾಚಾರವನ್ನು ಸತ್ಯಸಂಧರಂತೆ ಜನತೆಗೆ ಮುಟ್ಟಿಸಲು ಸ್ಥಾಪನೆಯಾಗುತ್ತಿಲ್ಲ. ಆಳುವ ವರ್ಗಗಳಿಗೆ ಅಥವಾ ಆಡಳಿತಾರೂಢ ಪಕ್ಷಗಳಿಗೆ ಅನುಕೂಲವಾಗುವಂತೆ ಸುದ್ದಿಯನ್ನು ಜನರ ಬಳಿ ಕೊಂಡೊಯ್ಯಲು ಸ್ಥಾಪನೆಯಾಗುತ್ತಿವೆ. ಹಾಗಾಗಿ ಜನರಿಗೆ ಏನು ಬೇಕು ಎನ್ನುವುದು ಇಲ್ಲಿ ಪ್ರಸ್ತುತ ಎನಿಸುವುದೇ ಇಲ್ಲ. ನಾವು ಕೊಟ್ಟಿದ್ದನ್ನು ಜನರು ಸ್ವೀಕರಿಸುತ್ತಾರೆ ಎನ್ನುವ ಊಳಿಗಮಾನ್ಯ ಧೋರಣೆಯೇ ಪ್ರಧಾನವಾಗುತ್ತದೆ. ಇದು ಸಮಾಚಾರಗಳಿಂದ ಧಾರಾವಾಹಿಯವರೆಗೂ ಸತ್ಯ. ನಿಮ್ಮ ಮೆಚ್ಚಿನ ಚಿತ್ರಗೀತೆ ಕಾರ್ಯಕ್ರಮವನ್ನು ಆಕಾಶವಾಣಿಯಲ್ಲಿ ಕೇಳುತ್ತಿದ್ದೆವು, ಇದು ಇಲ್ಲಿ ಸಾಧ್ಯವೇ ? ಇಲ್ಲ ಅಲ್ವಾ.

ರಾಜಪ್ರಭುತ್ವದ ಕಾಲದಲ್ಲಿ ಸುದ್ದಿವಾಹಕನ ಸುದ್ದಿ ಕೇಳಿ ರಾಜ ಸಂಪ್ರೀತನಾದರೆ ಮಡಿಲಿಗೆ ವರಹಗಳನ್ನು ಸುರಿಯತ್ತಿದ್ದ. ಈಗ ಜಾಹೀರಾತು ಅಥವಾ ಇನ್ನಿತರ ಮಾರುಕಟ್ಟೆ ರೂಪದ ವರಹಗಳನ್ನು ಸುರಿಯಲಾಗುತ್ತದೆ. ಈ ದಕ್ಷಿಣೆಗೆ ಪ್ರತಿಯಾಗಿ ಸುದ್ದಿಮನೆಗಳು ಏನು ಮಾಡಬೇಕು. ಸುಳ್ಳನ್ನೂ ಸತ್ಯ ಎಂದು ಜನರು ನಂಬುವ ಹಾಗೆ ಸುದ್ದಿಯನ್ನು ಸಿದ್ಧಪಡಿಸಬೇಕು. ಅದಕ್ಕಾಗಿಯೇ ಆ ಏರುದನಿಯ ನಿರೂಪಕರನ್ನೂ ತಯಾರಿಸಲಾಗುತ್ತದೆ. ಸತ್ಯವನ್ನು ಸುಳ್ಳು ಎಂದು ಬಿಂಬಿಸುವುದು, ಸುಳ್ಳನ್ನು ಸತ್ಯ ಎಂದು ಬಿಂಬಿಸುವುದು ಎರಡೂ ಪ್ರಕ್ರಿಯೆಗಳು ಒಟ್ಟೊಟ್ಟಿಗೇ ಸಾಗಲು ಆಧುನಿಕ ತಂತ್ರಜ್ಞಾನದ ಸಂವಹನ ಮಾಧ್ಯಮಗಳು ನೆರವಾಗುತ್ತವೆ. ಬೆರಳತುದಿಯಲ್ಲಿರುವ ಸುದ್ದಿಯನ್ನು ಕೂಡಲೇ ಬಿತ್ತರಿಸಿ, ನಾವೇ ಮೊದಲು ಎಂದು ಘೋಷಿಸಿದ ಕೂಡಲೇ ನೋಡುಗರಲ್ಲಿ ವಿಶ್ವಾಸ ಮೂಡುವುದು ಸಹಜ.

ಈ ಸುದ್ದಿಮನೆಗಳನ್ನು ನೋಡಿ ಸುದ್ದಿಯನ್ನು ನಂಬುವ ಜನರ ಮುಂದೆ ಬೇರೆ ಆಯ್ಕೆ ಇದೆಯೇ ? ಖಂಡಿತವಾಗಿಯೂ ಇದೆ. ಮುದ್ರಣ ಮಾಧ್ಯಮಗಳು ಸ್ವಲ್ಪಮಟ್ಟಿಗೆ ವಾಸಿ. ದೂರದರ್ಶನ ವಾರ್ತೆಗಳೂ ಇವೆ. ಆದರೆ ಆಧುನಿಕ ಸಮಾಜ, ವಿಶೇಷವಾಗಿ ಮಧ್ಯಮ ವರ್ಗಗಳು ಮತ್ತು ಶ್ರೀಮಂತ ವರ್ಗಗಳಿಗೆ ಭೋಗದ ವ್ಯಸನ ಹೆಚ್ಚಾಗಿದೆ. ಹಿಂಬದಿಯ ಪರದೆ, ಒಂದು ಮೇಜು, ತಾಲ್ಲೂಕು ಕಚೇರಿಯಲ್ಲಿರುವಂತಹ ವಾತಾವರಣದಲ್ಲಿ ಸುದ್ದಿವಾಹಕರು ಕುಳಿತು ಸುದ್ದಿ ಓದಿದರೆ ಈ ವರ್ಗಗಳಿಗೆ ರುಚಿಸುವುದಿಲ್ಲ. ರಂಜನೀಯವಾಗಿರಬೇಕು, ಪ್ರತಿ ವಾಕ್ಯದ ಹಿನ್ನೆಲೆಯಲ್ಲಿ ವಾದ್ಯಗಳ ಅಬ್ಬರ ಬೇಕು, ಗ್ರಾಫಿಕ್ಸ್ ಇರಬೇಕು, ಒಂದೇ ಪರದೆಯಲ್ಲಿ ಹತ್ತಾರು ಸುದ್ದಿಗಳು ಚಿಂದಿ ಚಿಂದಿಯಾಗಿ ಕಾಣಬೇಕು. ಹೀಗೆ ಸಮಾಜದ ಈ ಅವಲಕ್ಷಣಗಳಿಗೆ ಸುದ್ದಿಮನೆಗಳು ಸ್ಪಂದಿಸಲು ಸದಾ ಸಿದ್ಧವಾಗಿರುತ್ತವೆ.

ಈ ಬೌದ್ಧಿಕ ದಾರಿದ್ರ್ಯದ ನೆಲೆಯಲ್ಲೇ ಭಾರತದ ಸುದ್ದಿಮನೆಗಳನ್ನು ಸುಳ್ಳುಸುದ್ದಿಯ ವ್ಯಸನ ಕಾಡುತ್ತಿದೆ. ಸಮಾಜಮುಖಿ ಪ್ರಾಮಾಣಿಕ ವರದಿಗಾರರಿಗೆ ಜಾಗವೇ ಇಲ್ಲದಂತಹ ವಾತಾವರಣ ಮುದ್ರಣ ಮಾಧ್ಯಮಗಳಲ್ಲೂ ಸೃಷ್ಟಿಯಾಗುತ್ತಿದೆ. ಇಲ್ಲಿ ಪ್ರಗತಿಪರತೆ, ಪ್ರತಿಗಾಮಿತನ ಎನ್ನುವುದಕ್ಕಿಂತಲೂ ಮಾಧ್ಯಮಗಳ ಸಮಾಜೋ ರಾಜಕೀಯ ಹೊಣೆಗಾರಿಕೆ ಮುಖ್ಯವಾಗುತ್ತದೆ. ಪಕ್ಷ ರಾಜಕಾರಣವನ್ನು ಹೊರಗಿಟ್ಟು ನೋಡಿದಾಗ ಇದು ಅರ್ಥವಾಗುತ್ತದೆ. ಮಾಧ್ಯಮಗಳು ಯಾವುದೇ ರಾಜಕೀಯ ಸಿದ್ಧಾಂತ ಅಥವಾ ಮತಧಾರ್ಮಿಕ ತತ್ವಗಳಿಗೆ ಬದ್ಧವಾಗಿರಬೇಕಿಲ್ಲ. ಪ್ರಜಾತಂತ್ರ ವ್ಯವಸ್ಥೆಯ ನಾಲ್ಕನೆಯ ಸ್ತಂಭ ಎನಿಸಿಕೊಂಡಿರುವ ಈ ಕ್ಷೇತ್ರಕ್ಕೆ ತನ್ನದೇ ಆದ ಇತಿಹಾಸ ಇದೆ ಎನ್ನುವ ಸಾಮಾನ್ಯ ಪ್ರಜ್ಞೆ ಇದ್ದರೆ ಸಾಕು. ತುರ್ತುಪರಿಸ್ಥಿತಿಯ ಸಂದರ್ಭವನ್ನು ಒಮ್ಮೆ ತಿರುಗಿ ನೋಡಿದರೂ ಸಾಕು.

ಆದರೆ ಹಣಕಾಸು ಬಂಡವಾಳದ ಮಾರುಕಟ್ಟೆ ವ್ಯವಸ್ಥೆಯಲ್ಲಿ ಪ್ರಪಂಚದ ಯಾವುದೇ ವಿದ್ಯಮಾನವೂ ಈ ವ್ಯೂಹದಿಂದ ಹೊರಬರಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಮಾಧ್ಯಮ ಕ್ಷೇತ್ರವೇ ಮಾರುಕಟ್ಟೆಗೆ ಶರಣಾಗಿಬಿಟ್ಟಿದೆ. ಆಡಳಿತ ಯಂತ್ರವನ್ನು ನಿಯಂತ್ರಿಸುವ ಕಾರ್ಪೋರೇಟ್ ಕೈಗಳೇ ಮಾಧ್ಯಮಗಳನ್ನೂ ನಿಯಂತ್ರಿಸುತ್ತವೆ. ಒಂದು ಸುದ್ದಿ ಪತ್ರಿಕೆ ಇಂದು ಬದುಕುಳಿಯಬೇಕಾದರೆ, ಆಳುವ ವರ್ಗಗಳ ಕೃಪಾಕಟಾಕ್ಷಕ್ಕಾಗಿ ಕೈಚಾಚಬೇಕಾದ ಪರಿಸ್ಥಿತಿ ಎದುರಾಗಿದೆ. ಮಾಧ್ಯಮ ಲೋಕದ ಸ್ವಾಯತ್ತತೆ ಮತ್ತು ಸ್ವಂತಿಕೆಯ ಬಗ್ಗೆ ಚರ್ಚೆ ನಡೆಸುವ ಕಲ್ಪನೆ ಈಗಾಗಲೇ ಇತಿಹಾಸದ ಕಸದಬುಟ್ಟಿ ಸೇರಿದೆ. ದುರಂತ ಎಂದರೆ ಭಾರತದ ವಿದ್ಯುನ್ಮಾನ ಮಾಧ್ಯಮಗಳು ತಮ್ಮ ಮಾನ ಹರಾಜು ಹಾಕಿಕೊಳ್ಳಲು ಕೊರೋನಾ ಸಂದರ್ಭವನ್ನು ಬಳಸಿಕೊಂಡಿವೆ.

ಕೊರೋನಾ-ಕೋವಿದ್ 19 ಸುದ್ದಿಮನೆಗಳ ಜವಾಬ್ದಾರಿ ಮತ್ತು ಉತ್ತರದಾಯಿತ್ವವನ್ನು ಹೆಚ್ಚಿಸಬೇಕಿತ್ತು. ಇಡೀ ದೇಶವೇ ಆತಂಕಕ್ಕೊಳಗಾಗಿರುವ ಸಂದರ್ಭದಲ್ಲಿ ಸುದ್ದಿಮನೆಗಳಲ್ಲಿ ತಯಾರಾಗುವ ಪ್ರತಿಯೊಂದು ಸುದ್ದಿಯೂ ಜನಮಾನಸದಲ್ಲಿನ ಆತಂಕಗಳನ್ನು ದೂರ ಮಾಡಿ, ಸಮಾಜದಲ್ಲಿನ ಅಂತರಗಳನ್ನು ಕಡಿಮೆ ಮಾಡಿ, ಸಮಸ್ತ ಭಾರತೀಯ ಪ್ರಜೆಗಳ ಐಕಮತ್ಯ ಸಾಧಿಸುವಂತಿರಬೇಕಿತ್ತು. ಆದರೆ ಇದಕ್ಕೆ ತದ್ವಿರುದ್ಧವಾದುದನ್ನು ನಾವಿಂದು ಕಾಣುತ್ತಿದ್ದೇವೆ. ದೈಹಿಕ ಅಂತರ ಕಾಪಾಡಿಕೊಳ್ಳುತ್ತಿರುವ ಜನರ ನಡುವೆ ಸಾಮುದಾಯಿಕ ಅಂತರವನ್ನು ಹೆಚ್ಚಿಸಿರುವುದು ಮಾಧ್ಯಮಗಳ ಹೆಗ್ಗಳಿಕೆ.

ಈ ಕ್ಷಣದ ಮಾರುಕಟ್ಟೆ ಮೌಲ್ಯ ವೃದ್ಧಿಗೆ ಸುಳ್ಳು ಸುದ್ದಿಗಳು ನೆರವಾಗುತ್ತಿವೆ. ಇತ್ತ ದೊರೆಗಳೂ ಸಂಪ್ರೀತರಾಗುತ್ತಾರೆ. ಸೂಕ್ತ ದಕ್ಷಿಣೆಯೂ ದೊರೆಯುತ್ತದೆ. ನಾಳೆ ಕ್ಷಮೆ ಕೋರಿದರೂ, ಬಾಚಿಕೊಂಡ ಲಾಭ ಭಂಡಾರ ಸೇರಿರುತ್ತದೆ. ಅರ್ನಾಬ್ ಗೋಸ್ವಾಮಿ ಮತ್ತು ಇವರ ಶಿಷ್ಯ ವೃಂದಕ್ಕೆ ಈ ತಂತ್ರ ಚೆನ್ನಾಗಿಯೇ ತಿಳಿದಿದೆ.
ಕೋವಿದ್ 19 ಭಾರತವನ್ನು ಎಲ್ಲ ರೀತಿಯಲ್ಲೂ ಬೆತ್ತಲೆ ಮಾಡಿದೆ. ಮಾಧ್ಯಮ ಮತ್ತು ಸುದ್ದಿಮನೆಗಳು ಅಪವಾದವಾಗಬೇಕಿಲ್ಲ. ಸುದ್ದಿಮನೆಗಳ ಸುಳ್ಳು ಸುದ್ದಿಯ ವ್ಯಸನ ಸಮಾಜದಲ್ಲಿ ಸೃಷ್ಟಿಯಾಗಿದ್ದ, ಸೃಷ್ಟಿಯಾಗಬಹುದಿದ್ದ ಸೌಹಾರ್ದತೆಯನ್ನೂ ಹಾಳುಗೆಡಹಿವೆ. ಭೋ ಪರಾಕ್ ಹೇಳುವ ವಂದಿಮಾಗಧ ಸಂಸ್ಕøತಿಯಿಂದ ಭಾರತ ಬಹುದೂರ ಸಾಗಿ ಬಂದಿದೆ.

ಆದರೆ ಸುದ್ದಿಮನೆಗಳಲ್ಲಿ ಈ ಸಂಸ್ಕೃತಿ ನಿರಂತರವಾಗಿ ನಡೆದುಬಂದಿದೆ. ಏಕೆಂದರೆ ರಾಜಪ್ರಭುತ್ವದ ಪಳೆಯುಳಿಕೆಗಳನ್ನು ನಾಶಪಡಿಸಲು ನಮ್ಮಿಂದ ಸಾಧ್ಯವಾಗಿಲ್ಲ, ಸಾಧ್ಯವಾಗುತ್ತಿಲ್ಲ. ಆದರೆ ಸಾಧ್ಯವಿದೆ ಎನ್ನುವ ಭರವಸೆಯನ್ನು ಕೊರೋನಾ ಮೂಡಿಸಿದೆ.
ಪ್ರಭುತ್ವ ಮತ್ತು ಪ್ರಭುತ್ವವನ್ನು ಪೋಷಿಸುವ ಎಲ್ಲ ಸಾಂಸ್ಥಿಕ ನೆಲೆಗಳೂ ಬೆತ್ತಲಾಗುತ್ತಿರುವ ಈ ಸಂದರ್ಭದಲ್ಲಿ ಸುಳ್ಳುಸುದ್ದಿಯ ವ್ಯಸನಕ್ಕೆ ಒಳಗಾದ ಮಾಧ್ಯಮಗಳು ಸರ್ವವ್ಯಾಪಿ ಕೊರೋನಾಗಿಂತಲೂ ಭೀಕರ ವ್ಯಾಧಿಯಂತೆ ಕಂಡುಬಂದರೆ ಅಚ್ಚರಿಯೇನಿಲ್ಲ.

ಈ ವ್ಯಾಧಿಯನ್ನು ಹೋಗಲಾಡಿಸಲು ಬೇಕಿರುವುದು ಸಾಮಾಜಿಕ ಪ್ರಜ್ಞೆ ಮತ್ತು ನಾಗರಿಕ ಸಂವೇದನೆ. ನಮ್ಮ ಸಮಾಜದಲ್ಲಿ ಇದು ಇನ್ನೂ ಉಳಿದಿದೆ ಎನ್ನುವುದೊಂದೇ ಆಶಾದಾಯಕ ಸಂಗತಿ. ಈ ಸಂವೇದನೆಯ ಕೊಂಡಿಗಳನ್ನು ಬೆಸೆಯುವ ಮೂಲಕ ನಾವು ಮತ್ತೊಂದು ಹೊಸ ಲೋಕವನ್ನು ಸೃಷ್ಟಿಸಬಹುದಲ್ಲವೇ ? ಸುಳ್ಳು ಸುದ್ದಿಯ ವ್ಯಸನಕ್ಕೆ ಮದ್ದು ಇದೆಯೇ ? ಕೊರೋನಾ ನೆರವಾಗುವುದಿಲ್ಲ. ಕೊರೋನಾ ನಂತರದ ದಿನಗಳಲ್ಲಿ ಇದು ಸಾಧ್ಯ. ನಮ್ಮ ನಡುವಿನ ಮಾಧ್ಯಮ ಎನ್ನುವ ವ್ಯಾಧಿಯನ್ನು ಕೊನೆಗೊಳಿಸಲು ಕೊರೋನಾ ಇರಲಿ ಎಂದು ಬಯಸುವುದು ಬೇಡ. ಕೊರೋನಾ ಹೋಗಲಿ, ನಾವು ಇರುತ್ತೇವೆ ಅಲ್ಲವೇ ?

(ವಿಸೂ : ಇಲ್ಲಿ ಮಾಧ್ಯಮ ಎಂದರೆ ಮುಖ್ಯವಾಹಿನಿಯ ಮಾಧ್ಯಮಗಳು ಮಾತ್ರ.)

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಬಹಿರಂಗ

ರಷ್ಯಾದಲ್ಲಿ ಓಂ – ಭರತಾಸ್- ರಾಮ – ರಾವಣ ಲಂಕೇಶ – ಮಾರೀಚ – ಸೀತ ನದಿಗಳು..!

Published

on

  • ಲಕ್ಷ್ಮೀಪತಿ ಕೋಲಾರ, ಸಂಶೋಧಕರು, ಸಂಸ್ಕೃತಿ‌ ಚಿಂತಕರು, ಬೆಂಗಳೂರು

ಸ್ಲಾವ್ ಸಮುದಾಯದ ಲಿತುವೇನಿಯ, ಲಾತ್ವಿಯ, ಬೆಲಾರಸ್,ಉಕ್ರೇನ್ ಮತ್ತು ರಷಿಯಾದಂತಹ ದೇಶಗಳ ನದಿ,ನಗರಗಳು ಸಂಸ್ಕೃತ ಮೂಲದ ಹೆಸರುಗಳನ್ನೆ ಇಂದಿಗು ಉಳಿಸಿಕೊಂಡಿರುವುದು ಆ ಭಾಷೆ ಮತ್ತು ಸಂಬಂಧಿತ ಸಂಸ್ಕೃತಿಯೊಂದಿಗೆ ಅವು ಹಿಂದೊಮ್ಮೆ ಹೊಂದಿದ್ದ ಬಲವಾದ ನಂಟಿಗೆ ಸಾಕ್ಷಿಯಾಗಬಲ್ಲವು.

ಇದರೊಂದಿಗೆ ಉತ್ತರ ಭಾರತದ ಆರ್ಯ ವೈದಿಕರ ಭಾಷೆ ಸಂಸ್ಕೃತಿಯೊಂದಿಗೆ ಸ್ಲಾವ್ ಸಮುದಾಯಕ್ಕೆ ಎಷ್ಟು ನಿಕಟ ಸಂಬಂಧವಿತ್ತೆಂಬುದನ್ನು ಮತ್ತು ನಾಲ್ಕೈದು ಸಾವಿರ ವರ್ಷಗಳ ಹಿಂದೆ ಈ ಎಲ್ಲ ಆರ್ಯ ಸಮುದಾಯಗಳು ಒಟ್ಟಿಗೆ ಒಂದೆಡೆಯೇ ಕಳ್ಳುಬಳ್ಳಿಗಳಾಗಿ ಜೀವಿಸಿದ್ದರೆಂಬುದನ್ನ ಈ ಹಿನ್ನೆಲೆಯಲ್ಲಿ ನಾವು ಗ್ರಹಿಸಬಹುದಾಗಿದೆ.

ಅದರಲ್ಲು ವಿಶೇಷವಾಗಿ ಲಿತುವೇನಿಯ ಮತ್ತು ರಷಿಯಾದ ನದಿಗಳ ಹೆಸರುಗಳು ಎಷ್ಟು ಸಂಸ್ಕೃತಮಯವು (ಇಂಡೋ – ಯುರೋಪಿಯನ್ ಭಾಷಾಮೂಲದ) ಮತ್ತು ವೈದಿಕರ ಪುರಾಣ ಮೂಲದವು ಆಗಿವೆ ಎಂದರೆ, ನಂಬಲಿಕ್ಕು ಅಸಾಧ್ಯ ಎಂಬಂತಿವೆ. ಇದರರ್ಥ ಸ್ಲಾವ್ ಜನರು ವೈದಿಕರ ಪುರಾಣಗಳಿಂದ ಪ್ರೇರಿತಗೊಂಡಿದ್ದಾರೆ ಎಂಬುದಲ್ಲ.

ಬದಲಿಗೆ ವೈದಿಕರ ಇಂದಿನ ಪುರಾಣ – ಸಂಸ್ಕೃತಿ – ಭಾಷೆಗಳು ವೈದಿಕರಿಗೆ ಎಷ್ಟು ಸಂಬಂಧಿಸಿದ್ದೋ ಅದಕ್ಕು ಹೆಚ್ಚಿನದಾಗಿ ಸ್ಲಾವ್ ಸಮುದಾಯಕ್ಕೂ ಸಂಬಂಧಿಸಿದ್ದಾಗಿದ್ದವು. ಹಾಗೆ ನೋಡಿದರೆ ಬ್ರಹ್ಮ – ವೇದ ಮೂಲವು ಕೂಡ ಸ್ಲಾವ್ ಸಮುದಾಯದ ಉತ್ತರ ಧ್ರುವ ಪ್ರದೇಶಕ್ಕೆ ಹೋಗಿ ನಿಲ್ಲುತ್ತದೆ ಎಂಬುದು ಸೋಜಿಗವಾದರು ನಿರ್ವಿವಾದವಾಗಿ ಚಾರಿತ್ರಿಕ ಸತ್ಯವಾಗಿದೆ. 12 – 13 ನೇ ಶತಮಾನಗಳಲ್ಲಿ ಸ್ಲಾವ್ ಜನರು ಕ್ರೈಸ್ತರಾಗಿ ಪರಿವರ್ತಿತರಾಗುವವರೆಗು ಅವರು ಶತಾಂಶ ಮತ್ತು ಥೇಟ್ ಶ್ರೇಷ್ಟ ಆರ್ಯ ವೈದಿಕರೆ ಆಗಿದ್ದರು.

ರಷ್ಯ ಮತ್ತು ಲಿತುವೇನಿಯಾಗಳಲ್ಲಿ ಭರತಾಸ್, ಓಂ, ರಾಮ, ಸೀತ, ಲಂಕೇಶ, ರಾವಣ, ಮಾರೀಚ, ನೆಮುನ (ಯಮುನ), ಕಾಮ, ಯಂತ್ರ, ಶ್ವೇತೆ, ದ್ರವ, ಮೋಕ್ಷ, ಋಗ್ವೇದದ ದಾನವ ಮಾತೆ ದನು ನೆನಪಿನ ದನುಬೆ ಮುಂತಾದ ನದಿಗಳು ಮತ್ತು ನಾರದ (ಈಗ ನರೋದ್ನಯ ಎಂದಿದ್ದರು ಸ್ಥಳೀಯರು ನಾರದ ಬೆಟ್ಟ ಎಂದೇ ಕರೆಯುತ್ತಾರೆ) ಹೆಸರಿನ ಬೆಟ್ಟವು ಇವೆ ಎಂದರೆ ಯಾರೂ ಅಚ್ಚರಿಪಡುವಂತದ್ದೆ.

ಯಾರಿಗಾದರು ಈ ಸಂಗತಿಗಳಲ್ಲಿ ಅನುಮಾನ ಹುಟ್ಟುವುದು ಸಹಜವೆ. ಯಾಕೆಂದರೆ ಸ್ಲಾವ್ – ವೈದಿಕ ಆರ್ಯರ ಮೂಲ ಪ್ರದೇಶವೆ ಉತ್ತರ ದ್ರುವ ಪ್ರದೇಶವಾಗಿತ್ತು ಎಂಬ ಚರಿತ್ರೆಯನ್ನೇ ನಮ್ಮಿಂದ ಮರೆಮಾಚಲಾಗಿತ್ತು ಮತ್ತು ಅದು ಬಹುದೊಡ್ಡ ಸಾಂಸ್ಕೃತಿಕ ರಾಜಕಾರಣವೂ ಆಗಿತ್ತು. ಆದರೆ ತಿಲಕರು ತಮ್ಮ “Arctic Home In the Vedas” ಎಂಬ ಪುಸ್ತಕದಲ್ಲಿ ಉತ್ತರ ಭಾರತದ ವೈದಿಕ ಆರ್ಯರ ತವರು ನೆಲ ಉತ್ತರ ದ್ರುವ ಪ್ರದೇಶವೆ, ಅಂದರೆ ಇಂದಿನ ಲಿತುವೇನಿಯ, ಲಾತ್ವಿಯ, ಬೆಲಾರಸ್ ಪ್ರದೇಶಗಳೇ ಆಗಿದ್ದವು ಎಂದು ಸಮರ್ಥ ಸಾಕ್ಷಾಧಾರಗಳೊಂದಿಗೆ ನಿರೂಪಿಸಿದ್ದಾರೆ.

ರಷ್ಯಾದಲ್ಲಿ ಸಂಸ್ಕೃತ ಭಾಷಾಮೂಲದ ನೂರಾರು ನದಿಗಳಿವೆ. ಭಾರತದಲ್ಲಿ ಕೆಲವು ನದಿಗಳನ್ನ ಹೊರತುಪಡಿಸಿದರೆ ಆ ಪ್ರಮಾಣದ ವೈದಿಕ ಪುರಾಣ ಮೂಲದ ನದಿ ಹೆಸರುಗಳು ಈ ನೆಲದಲ್ಲಿ ಇಲ್ಲವೆಂಬುದು ಪ್ರಾಚೀನ ಕಾಲದಿಂದಲು ಆರ್ಯ ವೈದಿಕರು ಇಲ್ಲಿರಲಿಲ್ಲವೆಂಬುದನ್ನೇ ಸೂಚಿಸುತ್ತದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಲಿತ ರಾಜಕೀಯ – ದಲಿತ ಚಳವಳಿಯ ಚಿಲ್ಲರೆ ಅಂಗಡಿಗಳ ಜೋರು ವ್ಯಾಪಾರದ ಈ ಕಾಲದಲ್ಲಿ

Published

on

  • ಬಿ.ಎಲ್.ರಾಜು, ಪ್ರಾಧ್ಯಾಪಕರು, ಸಾಗರ

ನಾವು ನಮಗೆ ಕೇಳಿಕೊಳ್ಳಲೇಬೇಕಾದ ಕೆಲವು ಪ್ರಶ್ನೆಗಳು ನನ್ನನ್ನು ಕಾಡುತ್ತಿವೆ. ಭೂಮಿ, ಬಂಡವಾಳ ಮತ್ತು ರಾಜಕೀಯಾಧಿಕಾರಗಳನ್ನು ಮೇಲ್ಜಾತಿಗಳ ಶಾಶ್ವತ ಕಬ್ಜಾದಲ್ಲಿರಿಸಿ ಸೃಷ್ಟಿಸಲಾಗಿರುವಂತದ್ದು ಜಾತಿವ್ಯವಸ್ಥೆ. ಇದೊಂದು ಶುದ್ದ ರಾಜಕೀಯ- ಆರ್ಥಿಕ ಸಂಚು. ಆದರೆ ಅದು ಕಾರ್ಯಾಚರಣೆ ಮಾಡುವುದು ಸಮಾಜದಲ್ಲಿ. ಸಾಮಾಜಿಕ ಕ್ರಿಯೆಗಳ ಮೂಲಕ ಆ ರಾಜಕೀಯ ಆರ್ಥಿಕ ವ್ಯವಸ್ಥೆಗಳು ತಮ್ಮ ಶಕ್ತಿ- ಸಂಪನ್ಮೂಲಗಳನ್ನು ಕೆಳಜಾತಿಗಳಿಗೆ ನಿರಾಕರಿಸುತ್ತವೆ. ಅದರ ಭಾಗವಾಗಿ ಮಡಿ, ಮೈಲಿಗೆ, ಮೇಲು ಕೀಳು, ಶುದ್ಧ ಅಶುದ್ದ ಪರಿಕಲ್ಪನೆಗಳನ್ನು ಗ್ರಹಿಸಬೇಕು.

ಆ ರಾಜಕೀಯ ಆರ್ಥಿಕ ಶಕ್ತಿ ಸಂಪನ್ಮೂಲಗಳ ಮೇಲೆ ದಲಿತರು ಹಿಡಿತ ಸಾಧಿಸಲು ಎಲ್ಲಿಯವರೆಗೆ ಸಾಧ್ಯವಿಲ್ಲವೊ ಅಲ್ಲಿಯವರೆಗೆ ಜಾತಿ ತಾರತಮ್ಯಗಳು ಸಾಯುವುದಿಲ್ಲ. ಜಾತಿ ವ್ಯವಸ್ಥೆ ನಿರಂತರವಾಗಿ ಮುಂದುವರೆಯುತ್ತದೆ.

ಭೂಮಿ ಬಂಡವಾಳ ರಾಜಕೀಯಾಧಿಕಾರಗಳ ನಿರಂತರ ನಿರಾಕರಣೆಗೆ ಒಳಗಾದ ಈ ದೇಶದ ಸಾವಿರಾರು ತಬ್ಬಲಿ ಕೆಳಜಾತಿ ಸಮುದಾಯಗಳಿಗೆ ಬಿಡುಗಡೆಯ ದಾರಿಯನ್ನು ತೋರಿದ್ದು ಬಾಬಾಸಾಹೇಬರು. ಅವರು ತಮ್ಮ ಚಿಂತನೆ, ಕ್ರಿಯೆ ಮತ್ತು ಹೋರಾಟಗಳ ಮೂಲಕ ರೂಢಿಸಿಕೊಟ್ಟ ಜ್ಞಾನಮಾರ್ಗವೇ ದಲಿತರ ಬಿಡುಗಡೆಯ ದಾರಿ. ಇದೇ ದಾರಿಯಲ್ಲಿ ಹೋಗಿದ್ದರೆ ತಳಸಮುದಾಯಗಳು 21 ನೇ ಶತಮಾನದ ಸವಾಲುಗಳನ್ನೆದುರಿಸಲು ಸಜ್ಜಾದ ಜ್ಞಾನಸಮುದಾಯಗಳಾಗಿ ಮೇಲೇಳುವ ಎಲ್ಲಾ ಅವಕಾಶಗಳಿದ್ದವು.

ಆದರೆ ಜ್ಞಾನ ಮಾರ್ಗವನ್ನು ಬಲವಾಗಿ ಅಪ್ಪಿಕೊಂಡು ಮುನ್ನಡೆಯಬೇಕಿದ್ದ ದಲಿತ ಸಮುದಾಯಗಳು ಆತ್ಮವಂಚನೆಯ ವಿರಾಟ್ ಕಾಲಘಟ್ಟದಲ್ಲಿವೆ. ಸವಲತ್ತುಗಳನ್ನ ಪಡೆದುಕೊಂಡ ದಲಿತರಲ್ಲಿನ ಮಧ್ಯಮ ಮತ್ತು ಮೇಲ್ವರ್ಗಗಳು, ಜಾತಿವ್ಯವಸ್ಥೆಯಲ್ಲಿರುವ ಮೇಲ್ಜಾತಿಗಳ ಎಲ್ಲಾ ವ್ಯಸನಗಳನ್ನು ತಮ್ಮದನ್ನಾಗಿಸಿಕೊಂಡಿವೆ. ಆ ವ್ಯಸನಗಳನ್ನೇ ತಮ್ಮ ಶ್ರೇಷ್ಟತೆಯ ಗುರುತುಗಳನ್ನಾಗಿ ಮಾಡಿಕೊಂಡಿವೆ. ಈ ಎರಡೂ ವರ್ಗಗಳಿಗೆ ಬಾಬಾಸಾಹೇಬರು ಕಟ್ಟಿಕೊಟ್ಟ ಮೌಲ್ಯಗಳಾಗಲಿ, ತೋರಿದ ಜ್ಞಾನಮಾರ್ಗವಾಗಲಿ, ಆಧ್ಯಾತ್ಮದ ದಾರಿಯಾಗಲಿ ಬೇಕಿಲ್ಲದ ಸ್ಥಿತಿಗೆ ಬಂದು ನಿಂತಿವೆ. ತಮ್ಮ ಶೋಷಕ ವ್ಯವಸ್ಥೆಯು ಕಟ್ಟಿಕೊಟ್ಟ ಮನುಪ್ರಣೀತ ಆಚರಣೆ, ಸಂಪ್ರದಾಯಗಳಲ್ಲೆ ಸುಖಿಸುತ್ತಿವೆ. ಇದೊಂತರ ಸ್ಟಾಕ್ ಹೋಂ ಸಿಂಡ್ರೋಪಮ್. ಶೋಷಕನನ್ನೆ ಮೆಚ್ಚಿ ಅನುಕರಿಸುವುದು.

ಇದೇ ದಲಿತ ಮಧ್ಯಮ, ಮೇಲ್ವರ್ಗಗಳು ತಮ್ಮ ಅಹಮ್ಮಿಗೆ, ಅನುಕೂಲಕ್ಕೆ, ಸವಲತ್ತುಗಳಿಗೆ ಏಟುಬಿದ್ದಾಗ ಮಾತ್ರ ಅಂಬೇಡ್ಕರರ ಸಂವಿಧಾನದ ಆಸರೆ ಪಡೆಯುತ್ತವೆ.

ಸಂಖ್ಯೆಯಲ್ಲಿ ಬಹುಸಂಖ್ಯಾತರಾದ ದಲಿತರ ಕೆಳ/ಬಡವರ್ಗ ತನ್ನ ಅಸ್ಥಿತ್ವಕ್ಕಾಗಿ ಅನ್ನ, ಸೂರು, ಬಟ್ಟೆಗಳಂತ ಪ್ರಾಥಮಿಕ ಅವಶ್ಯಕತೆಗಳಿಗಾಗಿ ಸಂವಿಧಾನ ಜಾರಿಗೆ ಬಂದು 75 ವರ್ಷಗಳ ನಂತರವೂ ಹೆಣಗಾಡುತ್ತಲೇ ಇವೆ. ಈಗಲೂ ಅವು ಅತ್ಯಂತ ಹೀನಾಯ & ಅನಾಥ ಸ್ಥಿತಿಯಲ್ಲಿವೆ.

ಭಾರತದ ಮಟ್ಟಿಗೆ ತುಂಬಾ ಅತ್ಯಂತ ವೈಚಾರಿಕ ಮಾನವೀಯತೆಯ ನೆಲೆಗಟ್ಟನ್ನ ಪ್ರತಿಪಾದಿಸಿ, ಪ್ರಜಾಪ್ರಭುತ್ವದ ಆತ್ಯಂತಿಕ ಆದರ್ಶಗಳನ್ನು ಸಂವಿಧಾನಕ್ಕೆ ಅಳವಡಿಸಿದ ಬಾಬಾಸಾಹೇಬರ ಚಿಂತನಾಧಾರೆ ಭಾರತೀಯರಿಗೆ ಧಾರಾಳವಾಗಿ ಹರಿದುಬಂದದ್ದು ಅವರ ಮಹಾಪರಿನಿಬ್ಬಾಣದ ನಂತರವೆ.. ಅದರಲ್ಲೂ ಎಪ್ಪತ್ತರ ದಶಕದಲ್ಲಿ.
ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಪ್ರೊ. ಬಿ. ಕೃಷ್ಣಪ್ಪನವರು ದಲಿತ ಸಂಘರ್ಷ ಸಮಿತಿಯನ್ನು ಹುಟ್ಟುಹಾಕಿದ ನಂತರ.

ಪ್ರೊ. ಬಿ.ಕೆ.ಯವರು ಬಾಬಾಸಾಹೇಬರ ಚಿಂತನೆಯನ್ನು ತನ್ನ ಭಾಷಣ, ಹಾಡು, ಹೋರಾಟ, ಪ್ರತಿಭಟನೆಗಳ ಭಾಗವಾಗಿಸಿಕೊಂಡು ರಾಜ್ಯದ ಪ್ರತಿ ದಲಿತರ ಕೇರಿಗೆ ಕೊಂಡೊಯ್ದರು. ಸಾವಿರಾರು ವರ್ಷ ಅಸ್ಪೃಶ್ಯತೆಯ ಕಳಂಕ ಹೊತ್ತು ಗುಲಾಮಗಿರಿಯಲ್ಲೇ ಉಸಿರಾಡಿಕೊಂಡಿದ್ದ ಜನರ ನರನಾಡಿಗಳಿಗೆ ಬಾಬಾಸಾಹೇಬರ ಚಿಂತನೆಯನ್ನು ತುಂಬಿದರು, ಆ ಮೂಲಕ ರಾಜಕೀಯ ಪ್ರಜ್ಞೆ ಮತ್ತು ಪ್ರತಿಭಟನೆಯ ಕೆಚ್ಚನ್ನು ಜಾಗೃತಗೊಳಿಸಿದರು.

ದಲಿತರ ನೋವಿಗಷ್ಟೇ ಅಲ್ಲ, ಹಿಂದುಳಿದ ವರ್ಗಗಳ ಪಾಲಿಗೂ ಭರವಸೆ ತುಂಬಿದವರು ಪ್ರೊ. ಬಿ.ಕೆ.
ಆ ಹೊತ್ತಿಗೆ ಎಚ್ಚೆತ್ತ ದಲಿತ ಅಕ್ಷರಸ್ಥ ತಲೆಮಾರು ಪ್ರೊ. ಬಿ. ಕೃಷ್ಣಪ್ಪನವರ ಹೋರಾಟದ ಸಾಗರಕ್ಕೆ ಹರಿದು ಬಂತು. ಅವರ ಅದಮ್ಯ ಹೋರಾಟದ ಕುಲುಮೆಯಲ್ಲಿ ಕವಿಗಳಾಗಿ, ಹೋರಾಟಗಾರರಾಗಿ, ಸಾಹಿತಿಗಳಾಗಿ, ಯುವ ಮುಂದಾಳುಗಳಾಗಿ ಮೇಲೆದ್ದರು. ಅಷ್ಟರಮಟ್ಟಿಗೆ ಸ್ಥಗಿತಕೊಂಡಿದ್ದ ರಾಜ್ಯದ ರಾಜಕಾರಣವನ್ನು ಬೆಚ್ಚಿಬೀಳಿಸಿದ್ದು, ಫ್ಯೂಡಲ್ ಶಕ್ತಿಗಳನ್ನು ಬಗ್ಗಿಸಿದ್ದ ಪ್ರೊ. ಬಿ. ಕೃಷ್ಣಪ್ಪ ದಲಿತ ಚಳವಳಿ ಕರ್ನಾಟಕದ ಚೆರಿತ್ರೆಯನ್ನು ಇನ್ನೊಂದು ಮಗ್ಗುಲಿಗೆ ಹೊರಳಿಸಿದರು.

ಬಿ. ಕೆ. ಯವರ ನಂತರ ಬಂದ ದಲಿತ ರಾಜಕಾರಣಿಗಳು ಮತ್ತು ಹೋರಾಟದ ದಾರಿಗೆ ನುಸುಳಿದ ಅವಕಾಶವಾದಿಗಳಿಬ್ಬರೂ ಸೇರಿ ಪ್ರೊ. ಬಿ.ಕೆ.ಕಟ್ಟಿದ ದಲಿತ ಚಳವಳಿಯನ್ನು ಒಳಜಾತಿಗಳ ಆಧಾರದ ಮೇಲೆ ಹತ್ತಾರು ಬಣಗಳಾಗಿ ಒಡೆದರು. ಅವರ ವಯಕ್ತಿಕ ದರ್ದುಗಳ ನಿವಾರಣೆಗೆ ಚಳವಳಿಯನ್ನು ಬಲಿಕೊಟ್ಟರು. ದಲಿತರ ಮೇಲಿ ದೌರ್ಜನ್ಯಗಳು ಮಿತಿಮೀರಿದ ಹೊತ್ತಲ್ಲೆ ಈ ದಲಿತ ರಾಜಕಾರಣ-ಚಳವಳಿಯ (ನ)ಕಲಿಗಳು ತಮ್ಮ ಹೊಟ್ಟೆ ತುಂಬಿಸಿಕೊಂಡರು.

ಪ್ರೊ. ಬಿ. ಕೆ. ಯವರೇ ಕೊನೆ..
ಆನಂತರ ರಾಜ್ಯದ ಯಾವ ಮೂಲೆಯಿಂದಲಾದರೂ ಸರಿ, ಅಖಂಡ ದಲಿತ ಸಮುದಾಯದ ಏಳಿಗೆಗೆ ಬದ್ಧನಾದ ಒಬ್ಬನೇ ಒಬ್ಬ ರಾಜಕೀಯ ನಾಯಕನಾಗಲಿ, ಅಖಂಡ ದಲಿತ ಚಳವಳಿಗೆ ಕಟಿಬದ್ಧನಾದ ಒಬ್ಬ ಚಳವಳಿಗಾರನಾಗಲಿ ಈ ಹೊತ್ತಿಗೂ ಹುಟ್ಟಿಬರಲಿಲ್ಲ. ದಲಿತ ರಾಜಕಾರಣ ಮತ್ತು ದಲಿತ ಚಳವಳಿಗಳು ಈಗ ಕೇವಲ ಒಳಜಾತಿಗಳ ಮೇಲಾಟಗಳು ಮಾತ್ರ. ಅಂಬೇಡ್ಕರರು ಕೇವಲ ಒಂದು ಫೋಟೊ ಆಗುವುದು ಮತ್ತು ಬಿ.ಕೆ.ಯವರನ್ನು ಒಂದು ಹೆಸರನ್ನಾಗಿಸಿ ಮರೆವಿಗೆ ಸರಿಸುವುದು ಅವರ ಹಿಡನ್ ಅಜೆಂಡಾ.

ಇದನ್ನು ಸರಳವಾಗಿ ರೂಪಕಾತ್ಮಕವಾಗಿ ಹೇಳುವುದಾದರೆ ದಲಿತರ ಬೀದಿಗಳಲ್ಲಿ ರಾಜಕೀಯ ಮತ್ತು ಚಳವಳಿಗಳ ಚಿಲ್ಲರೆ ಅಂಗಡಿಗಳು ತಲೆ ಎತ್ತಿವೆ. ಒಂದೊಂದು ಅಂಗಡಿಯಲ್ಲಿ ಒಂದೊಂದು ವ್ಯಾಪಾರ. ಲಾಭವೇ ವ್ಯಾಪಾರದ ಅಂತಿಮ ಗುರಿ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಮಂಗಳೂರಿನ ಚರ್ಚ್ ಗಳನ್ನು ದ್ವಂಸ ಮಾಡಿದ್ದನೇ ಟಿಪ್ಪು? ಇತಿಹಾಸ ಏನು ಹೇಳುತ್ತೆ?

Published

on

  • ನವೀನ್ ಸೂರಿಂಜೆ

ಟಿಪ್ಪು ಕೊಡವರ ಹತ್ಯಾಕಾಂಡ ನಡೆಸಿರುವುದು ಸುಳ್ಳು ಎಂದು ಇತಿಹಾಸಕಾರರು ಹೇಳಿದ ನಂತರ ಇದೀಗ ಕರಾವಳಿ ಭಾಗದಲ್ಲಿ ಟಿಪ್ಪು ಕ್ರಿಶ್ಚಿಯನ್ನರ ಮರಣಹೋಮ ನಡೆಸಿದ್ದ ಎಂದು ಸುದ್ದಿ ಹರಿಬಿಡಲಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯೊಂದರಲ್ಲೇ 27 ಚರ್ಚುಗಳನ್ನು ಕೆಡವಿದ್ದ ಎಂದು ಸುದ್ದಿ ಹಬ್ಬಿಸಲಾಗ್ತಿದೆ. 1750 ರಲ್ಲಿ ಜನಿಸಿದ ಟಿಪ್ಪು ಸುಲ್ತಾನ್ ಕರಾವಳಿಯಲ್ಲಿ 1784 ರಿಂದ 1799 ರವರೆಗೆ ಅಧಿಪತ್ಯವನ್ನು ಸ್ಥಾಪಿಸಿದ್ದ.

ಈ ಸಂಧರ್ಭದಲ್ಲಿ ಕರಾವಳಿಯಲ್ಲಿ ಬ್ರಿಟೀಷರು ಹೆಚ್ಚು ಸಕ್ರೀಯಗೊಂಡಿದ್ದನ್ನು ಅರಿತಿದ್ದ. ಆ ಕಾರಣಕ್ಕಾಗಿ ಬ್ರಿಟೀಷರ ಪ್ರಾರ್ಥನಾ ಮಂದಿರಗಳ ಬಗ್ಗೆ ಒಂದು ರೀತಿಯ ಸಂಶಯದ ಗಮನವನ್ನು ಇಡುವುದು ಆಗಿನ ರಾಜನೀತಿಯಾಗಿತ್ತು. ಆದರೆ 27 ಚರ್ಚುಗಳನ್ನು ಕೆಡವಿದ್ದ ಎಂಬುದು ಸುಳ್ಳು ಇತಿಹಾಸ. ಅದಕ್ಕಾಗಿ 1784 ರಿಂದ ಟಿಪ್ಪು ಮರಣದವರೆಗೆ ಕರಾವಳಿಯಲ್ಲಿ ಇದ್ದ ಚರ್ಚುಗಳು ಯಾವುದು ಮತ್ತು ಅದರ ಇತಿಹಾಸ ಏನು ಹೇಳುತ್ತದೆ ಎಂಬುದನ್ನು ನೋಡಬೇಕು.

ಕರಾವಳಿಯ ಅತೀ ಪುರಾತನ ಚರ್ಚುಗಳಲ್ಲಿ ಮೊದಲನೆಯದಾಗಿ ಕಾಣುವುದು 1680 ರಲ್ಲಿ ಕಟ್ಟಲ್ಪಟ್ಟ ಹಂಪನಕಟ್ಟೆಯ ಮಿಲಾಗ್ರಿಸ್ ಚರ್ಚ್ ಮತ್ತು ಕಲ್ಯಾಣಪುರದ ಮಿಲಾಗ್ರಿಸ್ ಚರ್ಚ್. ಹಂಪನಕಟ್ಟೆಯ ಮಿಲಾಗ್ರಿಸ್ ಚರ್ಚನ್ನು ಟಿಪ್ಪು ಒಡೆದು ಹಾಕಿರೋ ಬಗ್ಗೆ ಎಲ್ಲೂ ಇತಿಹಾಸ ಹೇಳುವುದಿಲ್ಲ. ಟಿಪ್ಪು ಮರಣದ ನಂತರ ಬ್ರಿಟೀಷರು ಮಿಲಾಗ್ರಿಸ್ ಚರ್ಚನ್ನು ಹೆಚ್ಚು ದೊಡ್ಡದಾಗಿ ಕಟ್ಟಿದರು ಎಂದಷ್ಟೇ ಹೇಳುತ್ತದೆ.

ಅದಕ್ಕಿಂತಲೂ ಹೆಚ್ಚು ಕುತೂಹಲಕರವಾಗಿರೋದು ಮಿಲಾಗ್ರಿಸ್ ವ್ಯಾಪ್ತಿಯ ಸಾಲ್ವಡಾರ್ ಪಿಂಟೋ ಎಂಬ ಅಧಿಕಾರಿಯೇ ಟಿಪ್ಪುವಿನ ಕಾರ್ಯದರ್ಶಿ ಆಗಿದ್ದರು. ಟಿಪ್ಪು ಮರಣದ ನಂತರ ಫಾದರ್ ಮೆಂಡೇಝ್ ಮತ್ತು ಟಿಪ್ಪುವಿನ ಮಾಜಿ ಮುನ್ಶಿ(ಕಾರ್ಯದರ್ಶಿ) ಸಾಲ್ವಡಾರ್ ಪಿಂಟೋ ಜೊತೆ ಸೇರಿ 600 ರೂಪಾಯಿಗಳನ್ನು ಸಂಗ್ರಹಿಸಿ 1811 ರಲ್ಲಿ ವಿಶಾಲ ಮಿಲಾಗ್ರಿಸ್ ಚರ್ಚನ್ನು ಪುನರ್ ನಿರ್ಮಾಣ ಮಾಡಿದರು ಎಂದು ಇತಿಹಾಸ ಹೇಳುತ್ತದೆ. ಇಲ್ಲಿ ಮುಖ್ಯವಾದುದು ಟಿಪ್ಪುವಿನ ಕಾರ್ಯದರ್ಶಿ ಒಬ್ಬ ಕ್ರಿಶ್ಚಿಯನ್ ಆಗಿದ್ದರು ಮತ್ತು ಅವರು ಧರ್ಮಾಭಿಮಾನಿಯಾಗಿದ್ದರು ಎನ್ನುವುದು.

ಇನ್ನು ಉಡುಪಿಯ ಕಲ್ಯಾಣಪುರ ಚರ್ಚ್ ಕೂಡಾ 1680 ರಲ್ಲಿ ಪ್ರಾರಂಭವಾದರೂ ಟಿಪ್ಪುನಿಂದ ಕೆಡವಲ್ಪಟ್ಟಿಲ್ಲ. 1784 ರ ಅವಧಿಯಲ್ಲಿ ಟಿಪ್ಪು ಕರಾವಳಿಯ ಬ್ರಿಟೀಷರ ಆಶ್ರಯತಾಣವನ್ನು ಹುಡುಕಿಕೊಂಡು ಚರ್ಚುಗಳಿಗೆ ಬಂದಾಗ ಕಲ್ಯಾಣಪುರ ಚರ್ಚನ್ನು ಕೆಡವಿದ ಬಗ್ಗೆ ದಾಖಲೆಗಳು ಇಲ್ಲ.

ಇತಿಹಾಸ ಬದಿಗಿಟ್ಟು ಪವಾಡವನ್ನು ಗಮನಿಸಿದರೂ ಕಲ್ಯಾಣಪುರ ಮಿಲಾಗ್ರಿಸ್ ಚರ್ಚಿನ ಪವಾಡದ ಕತೆ ಹೀಗೆ ಹೇಳುತ್ತದೆ : ಟಿಪ್ಪು ಸುಲ್ತಾನ್ ಎಂಬ ರಾಜ ಬ್ರಿಟೀಷರನ್ನು ಹುಡುಕಿಕೊಂಡು ಕಲ್ಯಾಣಪುರ ಪವಾಡ ಮಾತೆಯ ಮಿಲಾಗ್ರಿಸ್ ಚರ್ಚಿಗೆ ದಾಳಿ ಮಾಡಲು ಬಂದ. ಆಗ ಎಲ್ಲೋ ಇದ್ದ ಜೇನು ನೊಣಗಳು ಟಿಪ್ಪುವಿನ ಸೈನ್ಯದ ಮೇಲೆ ಮುತ್ತಿಗೆ ಹಾಕಿದವು. ಸೈನಿಕರು ಓಡಿ ನದಿಯಲ್ಲಿ ಮುಳುಗಿದರೂ ಜೇನುನೊಣಗಳು ಬಿಡಲಿಲ್ಲ. ಕೊನೆಗೂ ಕಲ್ಯಾಣಪುರ ಪವಾಡ ಮಾತೆಯ ಚರ್ಚನ್ನು ಕೆಡವಲಾಗಲಿಲ್ಲ. ಇದು ಊರಿಡೀ ಪ್ರತೀತಿಯಾಗಿ ಹಿಂದೂಗಳು ಕೂಡಾ ಈ ಚರ್ಚನ್ನು ಮಿಲಾಗ್ರಿಯಮ್ಮನ ದೇವಸ್ಥಾನ ಎನ್ನಲಾರಂಬಿಸಿದ್ರು ಎಂಬುದು ಜನಪದೀಯ ಕತೆಯಾಗಿದೆ.

ಇದರ ಬಳಿಕ ಅತ್ಯಂತ ಪುರಾತನ ಚರ್ಚುಗಳ ಪೈಕಿ ನಮಗೆ ಕಾಣಸಿಗುವುದು ಮೂಡಬಿದ್ರೆಯ ಹೊಸಬೆಟ್ಟು ಚರ್ಚ್. 1761 ರಲ್ಲಿ ನಿರ್ಮಾಣಗೊಂಡ ಚರ್ಚಿನ ಇತಿಹಾಸವನ್ನು ಓದಿದಾಗ ಟಿಪ್ಪುವಿನ ಉಲ್ಲೇಖಗಳು ಬರುತ್ತದೆ. ಮೂಡಬಿದ್ರೆಯ ಜೈನ ಅರಸನ ವ್ಯಾಪ್ತಿಗೂ ಬರುತ್ತಿದ್ದ ಈ ಚರ್ಚು ಸ್ಥಳೀಯ ಅರಸನ ಕೆಂಗಣ್ಣಿಗೆ ಗುರಿಯಾಗಿತ್ತು. ಟಿಪ್ಪು ಹಲವು ಚರ್ಚುಗಳ ಬಗ್ಗೆ ಅಸಮಾದಾನ ಹೊಂದಿದ್ದರೂ ಈ ಚರ್ಚಿನ ಉಸಾಬರಿಗೆ ಬಂದಿಲ್ಲ ಎಂದು ಚರ್ಚ್ ಇತಿಹಾಸ ಸ್ಪಷ್ಟವಾಗಿ ಹೇಳುತ್ತದೆ.

1784 ಎಂಬುದು ಟಿಪ್ಪು ಇತಿಹಾಸದಲ್ಲಿ ಅತ್ಯಂತ ಪ್ರಮುಖ ಸಂಧರ್ಭ. ಇದೇ ಇಸವಿಯಲ್ಲಿ ಆತ ಬ್ರಿಟೀಷರನ್ನು ಹತ್ತಿಕ್ಕುವುದಕ್ಕಾಗಿ ಚರ್ಚ್ ಗಳನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವ ನಿರ್ಧಾರ ಮಾಡಿ ಕರಾವಳಿಯಾದ್ಯಂತ ಸೈನಿಕರ ಜೊತೆ ಪರ್ಯಟಣೆ ಮಾಡುತ್ತಾನೆ. ಇದೇ ಸಮಯದಲ್ಲಿ ಅಂದರೆ 1784 ರಲ್ಲಿಯೇ ಕಿನ್ನಿಗೋಳಿ ಸಮೀಪ ಐಕಳದಲ್ಲಿ ಕಿರೆಂ ಚರ್ಚ್ ಅನ್ನು ಕಟ್ಟಲಾಗುತ್ತದೆ. ಚರ್ಚ್ ಕಟ್ಟುತ್ತಿರೋ ಬಗ್ಗೆ ಟಿಪ್ಪು ಗಮನಕ್ಕೆ ಬಂದು ಚರ್ಚ್ ಸ್ಥಳಕ್ಕೆ ಟಿಪ್ಪು ಸೈನಿಕರ ಜೊತೆ ಬರುತ್ತಾನೆ.

ನೇರವಾಗಿ ಚರ್ಚಿಗೆ ದಾಳಿ ಮಾಡುವ ಎಲ್ಲಾ ಅವಕಾಶಗಳು ಟಿಪ್ಪುವಿನಂತಹ ರಾಜನಿದ್ದರೂ ಆತ ಅದನ್ನು ಮಾಡದೇ ಸ್ಥಳೀಯ ಆಡಳಿತವನ್ನು ನೋಡಿಕೊಳ್ಳುತ್ತಿದ್ದ ಐಕಳಬಾವ, ತಾಳಿಪಾಡಿ ಗುತ್ತು, ಏಳಿಂಜೆ ಗುತ್ತಿನ ಬಂಟ ಮನೆತನದವರನ್ನು ಕರೆಸಿ ಮಾತನಾಡುತ್ತಾನೆ. ಬಂಟ ಮನೆತನಗಳವರು ಚರ್ಚಿನ ಬಗ್ಗೆ ಉತ್ತಮ ಅಭಿಪ್ರಾಯವನ್ನು ವ್ಯಕ್ತಪಡಿಸುವುದಲ್ಲದೆ, ಈ ಚರ್ಚಿಗೆ ನಡೆದುಕೊಳ್ಳುವ ಕ್ರಿಶ್ಚಿಯನ್ನರು ಯಾರೂ ಕೂಡಾ ಬ್ರಿಟೀಷರ ಜೊತೆ ಕೈ ಜೋಡಿಸಿಲ್ಲ ಮತ್ತು ಇವರೂ ನಮ್ಮಂತೆ ಕೃಷಿಕರು ಎಂಬುದನ್ನು ಮನವರಿಕೆ ಮಾಡಿಕೊಡುತ್ತಾರೆ. ತನ್ನ ರಾಜ್ಯದ ಹಿತದೃಷ್ಟಿಯಿಂದ ತನಿಖೆ ನಡೆಸಿದ ಟಿಪ್ಪು, ಆ ಚರ್ಚಿಗೆ ಯಾವ ತೊಂದರೆಯನ್ನೂ ಮಾಡದೇ ಮರಳುತ್ತಾನೆ. ಅದರ ನೆನಪಿಗಾಗಿ ಈಗಲೂ ಪ್ರತೀ ವರ್ಷ ನವೆಂಬರ್ 25 ರಂದು ಈ ಗುತ್ತಿನ ಮನೆತನಗಳಿಗೆ ಬಾಳೆಗೊನೆಯನ್ನು ಇಲ್ಲಿನ ಧರ್ಮಗುರುಗಳು ನೀಡುತ್ತಾ ಬಂದಿದ್ದಾರೆ.

ಟಿಪ್ಪು ಕ್ರಿಶ್ಚಿಯನ್ ವಿರೋಧಿಯಾಗಿರಲಿಲ್ಲ ಎನ್ನುವುದಕ್ಕೆ ಮತ್ತೊಂದು ಉದಾಹರಣೆ ಜಮಲಾಬಾದ್ ಕೋಟೆ
ಮತ್ತು ಅದರ ಸನಿಹದಲ್ಲಿರುವ ಚರ್ಚ್. 1682 ರಲ್ಲಿ ಹಿಂದೂ ಮರಾಠ ರಾಜ ಸಾಂಭಾಜಿ ಗೋವಾವನ್ನು ಆಕ್ರಮಿಸಿದಾಗ ಕ್ರಿಶ್ಚಿಯನ್ನರು ನಿರಾಶ್ರಿತರಾಗಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಗಡಾಯ್ ಕಲ್ಲು ಎಂಬಲ್ಲಿ ಆಶ್ರಯ ಪಡೆಯುತ್ತಾರೆ. ಅದೇ ಗಡಾಯಿಕಲ್ ಪ್ರದೇಶದಲ್ಲಿ ಟಿಪ್ಪು ಜಮಲಾಬಾದ್ ಕೋಟೆಯನ್ನು ಕಟ್ಟುತ್ತಾನೆ. ಆ ಕೋಟೆಯ ಸುತ್ತಮುತ್ತ ಹಳ್ಳಿಗಳಲ್ಲಿ ಕ್ರಿಶ್ಚಿಯನ್ನು ಇರುತ್ತಾರೆ. ಟಿಪ್ಪು ಕ್ರಿಶ್ಚಿಯನ್ ವಿರೋಧಿ ಆಗಿದ್ದಿದ್ರೆ ಜಮಲಾಬಾದ್ ಕೋಟೆಯ ಸುತ್ತಾಮುತ್ತ ಕ್ರಿಶ್ಚಿಯನ್ನರು ಯಾಕೆ ವಾಸವಾಗ್ತಿದ್ರು ಎಂಬ ಪ್ರಶ್ನೆ ಬರುತ್ತದೆ.

ಅಲ್ಲೇ ಸಣ್ಣ ಗುಡಿಸಲು ರೀತಿಯಲ್ಲಿ ಚರ್ಚ್ ಕೂಡಾ ನಿರ್ಮಿಸಿ ಪ್ರಾರ್ಥನೆ ನಡೆಸುತ್ತಿರುತ್ತಾರೆ. ಯಾವ ಯುದ್ದವೂ ಕ್ರಿಶ್ಚಿಯನ್ನರ ಮೇಲಾಗಲೀ, ಗುಡಿಸಲಿನ ಚರ್ಚಿನ ಮೇಲಾಗಲೀ ಪರಿಣಾಮ ಬೀರದಂತೆ ಟಿಪ್ಪು ನೋಡಿಕೊಳ್ಳುತ್ತಾನೆ. ಟಿಪ್ಪು 1799 ರಲ್ಲಿ ಮರಣ ಹೊಂದಿದ ಬಳಿಕವೂ ಚರ್ಚ್ ಅಲ್ಲೇ ಇರುತ್ತದೆ. 1885 ರ ವೇಳೆಗೆ ಜಮಲಾಬಾದ್ ಕೋಟೆಯ ಸುತ್ತ ಇದ್ದ ಪ್ರದೇಶದಲ್ಲಿ ಕಾಯಿಲೆ ವ್ಯಾಪಿಸಿದ್ದರಿಂದ ಚರ್ಚ್ ಅನ್ನು ಸ್ವಲ್ಪ ದೂರಕ್ಕೆ ಸ್ಥಳಾಂತರಿಸಲಾಯ್ತು.

1784 ರಿಂದ 1799 ರವರೆಗೆ ಕರಾವಳಿಯಲ್ಲಿದ್ದ ಚರ್ಚ್ ಗಳು ಮೂರ್ನಾಲ್ಕು ಮಾತ್ರ. ಉಳಿದಂತೆ ಹಳ್ಳಿಗಳಲ್ಲಿ ಇದ್ದ ಕ್ರಿಶ್ಚಿಯನ್ನರು ದೊಡ್ಡ ಮನೆಯನ್ನು ಆಯ್ಕೆಮಾಡಿಕೊಂಡು ಸಾಮೂಹಿಕ ಪ್ರಾರ್ಥನೆಗೆ ಒಂದೆಡೆ ಸೇರುತ್ತಿದ್ದರು. ಉದಾಹರಣೆಗೆ ಎಸ್ ಇ ಝಡ್ ವಿರೋಧಿ ಹೋರಾಟಗಾರ ಕಳವಾರಿನ ಗ್ರೆಗೋರಿ ಪತ್ರಾವೋ ಮನೆ.

ನಂತರದ ಚರ್ಚುಗಳಿಗೂ ಟಿಪ್ಪುವಿಗೂ ಸಂಬಂಧವೇ ಇಲ್ಲ. ಕಿನ್ನಿಗೋಳಿ ಚರ್ಚ್ 1804 ರಲ್ಲೂ, ಕುಲಶೇಖರ ಕೋರ್ಡೆಲ್ ಚರ್ಚ್ ಮತ್ತು ಬೋಂದೆಲ್ ಚರ್ಚ್ 1873 ರಲ್ಲೂ, ಬೆಳ್ಮನ್ ಚರ್ಚ್ 1894, ಪಾಲಡ್ಕ ಚರ್ಚ್ 1913, ಬಳ್ಕುಂಜೆ ಚರ್ಚ್ 1915, ನಿಡ್ಡೋಡಿ ಚರ್ಚ್ 1937, ನೀರುಡೆ ಚರ್ಚ್ 1945, ಬೋಳ ಚರ್ಚ್ 1964, ಕಟೀಲು ಚರ್ಚ್ 1971, ಮುಂಡ್ಕೂರು ಚರ್ಚ್ 1998 ರಲ್ಲೂ ಪ್ರಾರಂಭವಾಯ್ತು.

ಇದ್ಯಾವುದೂ ಟಿಪ್ಪು ಕಾಲಮಾನದಲ್ಲಿ ಸ್ಥಾಪನೆಯಾದ ಚರ್ಚುಗಳು ಅಲ್ಲ. ಟಿಪ್ಪು ಕಾಲಮಾನದ ಯಾವ ಚರ್ಚಿನ ಇತಿಹಾಸವೂ ಚರ್ಚು ಕೆಡವಿದ ಕತೆಯನ್ನು ಹೇಳುವುದಿಲ್ಲ. ಬದಲಾಗಿ ಬ್ರಿಟೀಷರ ಕಾರಣಕ್ಕಾಗಿ ಚರ್ಚುಗಳ ಪರಿಶೀಲನೆ ನಡೆಸಿದ್ದ ಮತ್ತು ಮನವರಿಕೆಯಾದ ನಂತರ ರಕ್ಷಣೆ ಮಾಡಿದ್ದ ಎಂದಷ್ಟೇ ಇತಿಹಾಸ ಮತ್ತು ಕ್ರಿಶ್ಚಿಯನ್ ಪ್ರಚಲಿತ ಪವಾಡದ ಕತೆಗಳು ಹೇಳುತ್ತದೆ. ಟಿಪ್ಪು ಚರ್ಚ್ ಗಳನ್ನು ಕೆಡವಿದ್ದ ಎನ್ನುವುದು ಇತಿಹಾಸಕ್ಕೂ, ಚರ್ಚಿನ ಪವಾಡಕ್ಕೂ ಮಾಡುವ ಅಪಚಾರವಾಗುತ್ತದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending