Connect with us

ದಿನದ ಸುದ್ದಿ

ಸ್ಪರ್ಧಾತ್ಮಕ ಪರೀಕ್ಷಾ ಓದುಗರ ತಲ್ಲಣಗಳು..!

Published

on

  • ಪರಶುರಾಮ್. ಎ

ದೇನೊ ಗೊತ್ತಿಲ್ಲ ಎಲ್ಲರೂ ಬಿಸಿಲು ಕುದುರೆ ಹಿಡಿಯೋ ರೀತಿ ನೋಡಿದ್ರೆ ನಂಗೆ ನಗು ಬರುತ್ತೆ.. ಅವರ ಪರಿಪಾಟಲು ಅವರ ಅವಸ್ಥೆ ಇದೆಲ್ಲಾ ನೆನೆಸಿಕೊಂಡರೆ ನನಗೆ ತಲೆ ಚಿಟ್ಟು ಹಿಡಿದು ರೇಜಿಗೆ ಹೋಗುತ್ತೆ. ಕೆಲವೊಮ್ಮೆ ನಾನೂ ಸಹ ಅದರ ಹಿಂದೆ ಓಡಿದ್ದೂ ಉಂಟು. ಈ ಕುದುರೆ ಸವಾರಿ ಎಲ್ಲರಿಗೂ ಸುಲಭದ ಮಾತು ಖಂಡಿತ ಅಲ್ಲವೇ ಅಲ್ಲ. ಎಲ್ಲೋ ಲಕ್ಷಕ್ಕೆ ನೂರು ಮಂದಿ ಎಂದರೂ ಹೆಚ್ಚು ಏನೂಂತ ಗೊತ್ತಾಗಿಲ್ಲ ಅನ್ಸುತ್ತೆ ನಿಮಗೆ?? ಅದೇ ರೀ ಸರ್ಕಾರಿ ಕೆಲಸ ಗಿಟ್ಟಿಸೊ ಪರೀಕ್ಷೆಗಳ ಓದು.!

ಒಮ್ಮೊಮ್ಮೆ ಸರ್ಕಾರಿ ಕೆಲಸ ಪಡೆಯಲು ಅಭ್ಯರ್ಥಿಗಳು ನಡೆಸುವ ಪೂರ್ವ ಸಿದ್ದತೆ ನೆನೆಸಿಕೊಂಡರೆ ಭಯ ಆಗುತ್ತೆ. ಬೇಕಾದರೆ ಯಾವುದಾದರೂ ನಿಮ್ಮ ಸ್ಥಳೀಯ ಗ್ರಾಮದ ಗ್ರಂಥಾಲಯಕ್ಕೆ ಭೇಟಿ ಕೊಡಿ ಅಲ್ಲಿನ ಪ್ರಶಾಂತ ವಾತವರಣ ಬಯಸಿ ವಿದ್ಯಾವಂತರು ಎಷ್ಟು ಇರುತ್ತಾರೆ. ಹಾಗೂ ಸಿದ್ದತೆಯಲ್ಲಿ ಹೇಗೆ ಮಗ್ನರಾಗಿರುತ್ತಾರೆ ಎಂಬುದು ಮನವರಿಕೆಯಾಗುತ್ತದೆ.

ಅವರ ಪ್ರಜ್ವಲಿಸುವ ಕಣ್ಣುಗಳಲ್ಲಿ ಅವರ ಭವಿಷ್ಯದ ಕನಸು ಅವರ ಕುಟುಂಬದ ಏಳ್ಗೆ ಹೊಳೆಯುತ್ತಿರುತ್ತದೆ. ಅವರ ಆರ್ಥಿಕ ಸಂಕಷ್ಟಕ್ಕೆ ವಿಮೋಚನೆ ಇದರಿಂದ ಸಿಗುತ್ತದೆ ಎಂಬ ಭರವಸೆಯನ್ನು ಮನಸಿನ ತೇರಿನಲ್ಲಿ ಹೊತ್ತು ಜ್ಞಾನದ ಕಳಸದೊಂದಿಗೆ ಸಾಕ್ಷಾತ್ಕರಿಸಿದ ಮೂರ್ತಿಗಳಾಗಿ ಹೋಗಿರುತ್ತಾರೆ.ಬೆಳಗ್ಗೆ ಬಿಟ್ಟು ಬಂದ ಮನೆ ಐದೊ ಆರೊ ಸ್ಪರ್ಧಾತ್ಮಕ ಪುಸ್ತಕಗಳು, ವಾಟರ್ ಕ್ಯಾನ್, ಮೊಬೈಲ್ ಈಯರ್ ಪೋನ್, ಹಳದಿ ಸ್ಕೆಚ್ ಪೆನ್, ಟಿಫನ್ ಬಾಕ್ಸ್, ಹಲವಾರು ಬಿಳಿ ಹಾಳೆ. ಒಂದು ಜಾಮಿಟ್ರಿ ಬಾಕ್ಸ್ ಅದರ ತುಂಬಾ ಭವಿಷ್ಯದ ಕನಸುಗಳು.

ಇನ್ನೂ ಇವರನ್ನು ಕೈ ಬಿಡದ ದೇವರ ಪೋಟೊಗಳು ಮತ್ತು ವಿಭೂತಿ ಪ್ರಸಾದಗಳು. ದೇವರನ್ನು ಹೇಗಾದರೂ ಒಲಿಸಿಕೊಂಡು ಈ ಕೆಲಸ ಗಿಟ್ಟಿಸಿಕೊಬೇಕು ಅನ್ನುವವರು ಬೆಳಿಗ್ಗೆ ಬೇಗ ಎದ್ದು ಕನಿಷ್ಟ ಮೂರು ಅಥವಾ ಹೆಚ್ಚು ದೇವಸ್ಥಾನ ಪ್ರದಕ್ಷಿಣೆ ಹಾಕಿ ಕುಂಕುಮ ನಾಮ ಬಳಿದುಕೊಂಡು ಬಂದಿರುತ್ತಾರೆ.ಗ್ರಂಥಾಲಯದಲ್ಲಿ ಕೆಲವೊಮ್ಮೆ ಫ್ಯಾನ್ ಹಾಕಿರುತ್ತಾರೆ ಒಮ್ಮೊಮ್ಮೆ ಹಾಕಿರುವುದಿಲ್ಲ.ಆಗ ಅಲ್ಲಿ ಕುಳಿತು ಅಭ್ಯಾಸ ಮಾಡುವ ಅಭ್ಯರ್ಥಿಗಳ ಹಣೆಯನ್ನು ನೋಡಿದ್ರೆ ಸೆಕೆಗೆ ಬೆವತು ಕುಂಕುಮ ರಕ್ತದ ರೂಪದಲ್ಲಿ ನೆತ್ತಿಯಿಂದ ಇಳಿದು ಹೋಗುವಾಗ ಇವರು ಯುದ್ದದಲ್ಲಿ ಹೋರಾಡಿ ಇದೀಗ ಮನೆಗೆ ಬಂದ ಗಾಯಾಳು ಸೈನಿಕರಂತೆ ಭಾಸವಾಗುತ್ತದೆ.

ಉಸ್ಸೆಂದು ನಿಟ್ಟುಸಿರು ಇವರಿಗೆ ಒಮ್ಮೊಮ್ಮೆ ಓದೇ ಬೇಡ ಅನ್ನಿಸಿ ಜಿಗುಪ್ಸೆ ತರಿಸುತ್ತದೆ.ಇವರಿಗೆ ಮರೆವು ದೊಡ್ಡ ಶಾಪವಾಗಿರುತ್ತದೆ. ಪರಶುರಾಮ ವಿದ್ಯಾರ್ಥಿಗಳಿಗೆ ನೇರವಾಗಿ ಶಾಪ ಕೊಟ್ಟನೇನೋ ಎಂಬಂತೆ?
ಸುಮ್ಮನೆ ಅವರ ಮಧ್ಯೆ ನೀವೂ ಕುಳಿತರೆ ನಿಮಗೂ ಟಿಪ್ಸ್ ಸಿಗೋದು ಖಂಡಿತ. ಅದಕ್ಕೆ ನಾವು ತ್ಯಾಗಗಳನ್ನು ಮಾಡಬೇಕಾಗುತ್ತದೆ. ಅದಷ್ಟು ಸುಲುಭದ ಮಾತಲ್ಲ.!! ಮನರಂಜನೆ, ಕ್ರೀಡೆ, ಸ್ನೇಹಿತರು, ಬಂಧುಗಳ ಕಾರ್ಯಕ್ರಮ,.ಮನುಷ್ಯನಿಗೆ ಮುಖ್ಯವಾಗಿ ಬೇಕಾದ ನಿದ್ದೆ ಹೀಗೆ ಮುಂದುವರೆಸಿದರೆ ಇದರ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.. ನಿಜವಾಗಿ ಹೇಳಬೇಕೆಂದರೆ ಇವರ ತ್ಯಾಗ ಅಪಾರ ಇದಕ್ಕಾಗಿಯಾದರೂ ಇವರನ್ನು ಪ್ರಶಂಸಿಸಲೇಬೇಕು. ಅವರಿಗೆ ಅವರ ಭವಿಷ್ಯದ ಕನಸಿನ ಮುಂದೆ ಇವೆಲ್ಲವೂ ತುಂಬಾ ಸಣ್ಣದಾಗಿ ಕಾಣುತ್ತವೆ.

ಇನ್ನೂ ಕೆಲವು ವಿದ್ಯಾರ್ಥಿಗಳು ಇರುತ್ತಾರೆ ಓದಲೆಂದು ಬಂದು ಕುಳಿತವರು ಅತ್ತಿತ್ತ ಕಣ್ಣು ಹಾಯಿಸಿ ಅಯ್ಯೊ ಇಷ್ಟೊತ್ತಿಗೆ ಎದುರಿನ ಕುರ್ಚಿಯಲ್ಲಿ ಕೂರಲು ಬರಬೇಕಿದ್ದ ಹುಡುಗಿ ಇನ್ನೂ ಬಂದೆ ಇಲ್ಲ ಎಂಬ ಚಡಪಡಿಕೆ. ಅದರಿಂದ ಓದಲು ಗಮನ ಇಲ್ಲದೆ ಯಾವ್ಯಾವುದೊ ಖಯಾಲಿ ಗೀಳುಗಳು ಅಲ್ಲಿ ಪ್ರದರ್ಶನವಾಗುತ್ತದೆ. ಇವನು ಕಾಯುತ್ತಿದ್ದ ಹುಡುಗಿ ಅಲ್ಲಿಗೆ ಬರುವವರೆಗೂ ಇನ್ನೊಬ್ಬಳ ಹುಡುಕಾಟ. ಅವಳೂ ಕಾಣಿಸಿಲ್ಲವೆಂದರೆ ಡಬಲ್ ಕಾತುರ ಹಾಗೂ ಮಂಗಾಟದ ಮನಸಿನಿಂದ ಓದಿಗೆ ತಿಲಾಂಜಲಿ.

ಎಷ್ಟೋ ಬಾರಿ ಪ್ರಯತ್ನಿಸಿ ಅನುತ್ತಿರ್ಣವಾದರೂ ಮರು ಪ್ರಯತ್ನಗಳು ನಿಲ್ಲದೆ ಸಾಗಿರುತ್ತವೆ.ಇನ್ನೂ ದೈಹಿಕ ಸಿದ್ದತಾ ಪರೀಕ್ಷೆಗಳ ಬಗ್ಗೆ ಹೇಳೋದೆ ಬೇಡ ಅದೊಂದು ವ್ರತವಿದ್ದಂತೆ ಅದನ್ನು ಸರಿಯಾಗಿ ಪಾಲಿಸಿದರೆ ಮಾತ್ರ ದೇವರು ಕರುಣಿಸಿ ವರ ಕೊಟ್ಟ ಹಾಗೆ ಯಶಸ್ಸು.ಇಲ್ಲವಾದರೆ ಒಂದೇ ಪ್ರಯತ್ನಕ್ಕೆ ಅವರು ತಿರಸ್ಕೃತರಾಗುವರು.ಅಷ್ಟೆ ಅಲ್ಲದೆ ಮೊಬೈಲ್ ವಿಚಾರಕ್ಕೆ ಬಂದರೆ ಒಂದೈದು ನಿಮಿಷ ವಾಟ್ಸಪ್ ಫೇಸ್ಬುಕ್ ನೋಡೋಣಾಂತ ಕೈಗೆತ್ತಿ ಕೊಂಡವನ ಕತೆ ಮುಗಿತು ಅದೆಷ್ಟೊ ಗಂಟೆಗಳ ಕಾಲ ಕೈಯಿಂದ ಬಿಡರು.

ಸ್ವಲ್ಪ ಸಮಯದ ನಂತರ ಅಯ್ಯೊ ಈಗ ತಾನೆ ಹಿಡಿದಿದ್ದು ಆಗಲೇ ಕೈಗೆ ಬಂದು ಮೂರು ಗಂಟೆಯಾಯ್ತು ಯಪ್ಪಾ ಈ ಮೊಬೈಲ್ ಸಹವಾಸವೇ ಬೇಡ ಎಂದವರು ಮತ್ತೆ ಅದಕ್ಕೆ ಅಂಟಿದವರು ಇದ್ದಾರೆ.!! ಮೊಬೈಲ್ ಕಂಡರೆ ಕೆಂಡವಾಗುವವರೂ ತೀರ ಕಡಿಮೆ ಎಂದೇ ಹೇಳಬಹುದು.ಮೊಬೈಲ್ ಒಂದು ಅಪ್ಸರೆ ಯಂತೆ ಧ್ಯಾನಸ್ಥ ವಿದ್ಯಾರ್ಥಿಯ ಶತೃ.ಕೆಲವರು ಕೆಲಸ ಪಡೆದ ನಂತರ ಮದುವೆ ಯೋಚನೆ ಮಾಡಿದರೆ.ಇನ್ನೂ ಕೆಲವರಂತು ಮದುವೆ ಆಗಿ ಮಕ್ಕಳಿದ್ದರೂ ಈ ಸಾಲಿನಲ್ಲಿ ಮೊದಲಿಗರಾಗಿರುತ್ತಾರೆ.

ವಯಸ್ಸು ಕಳೆದಷ್ಟೂ ಇವರಿಗೆ ಆತಂಕ ಹೆಚ್ಚು ಸರ್ಕಾರಿ ಕೆಲಸ ಸಿಗುತ್ತೋ ಇಲ್ಲವೋ ನಮ್ಮ ಹಣೆಬರಹದಲ್ಲಿ ಇದಿಯೋ ಇಲ್ಲವೋ ಈ ಜನ್ಮದಲ್ಲಿ ಸರ್ಕಾರದ ಅನ್ನ ತಿಂತಿವೊ ಇಲ್ಲವೋ ಎಂಬ ಒಂದು ರೀತಿಯ ವೈರಾಗ್ಯ ಅವರಲ್ಲಿ ಅನುರಣಿಸಿರುತ್ತದೆ. ಇನ್ನೂ ಹೆಚ್ಚು ಹೇಳಬೇಕೆಂದರೆ ಈ ಹುಡುಗರು ಚಿತ್ರದಲ್ಲಿ ಪುನೀತ್ ರಾಜಕುಮಾರ್ರಿಗೆ ಅವರ ಮಾವ ಬಲಗೈಯಲ್ಲಿ ಸರ್ಕಾರಿ ಕೆಲಸದ ಆರ್ಡರ್ ಕಾಫಿ ಮತ್ತು ಎಡಗೈಲ್ಲಿ ನಮ್ಮ ಮಗಳ ಕಿರುಬೆರಳು ಹಿಡಿದು ಎಲ್ಲಿಗಾದರೂ ಕರೆದುಕೊಂಡು ಹೋಗು ಎನ್ನುವ ರೀತಿಯ ಮಾವಂದಿರು ನೈಜ ಜೀವನಗಳಲ್ಲಿ ಇದ್ದಾರೆ ಎಂದರೆ ಊಹಿಸಿ ಸರ್ಕಾರಿ ಕೆಲಸ ದ ಅವಶ್ಯಕತೆ ಎಷ್ಟಿದೆ ಅಂತಾ!ಇಂತ ಕಾಂಪಿಟೇಷನ್ ನಡುವೆ ಎಳಸುಗಳೆಲ್ಲಾ ಇರುತ್ತಾರೆ.

ಎಂಥವರೆಂದರೆ ತನ್ನ ಹೆಸರನ್ನು ಅಥವಾ ತನ್ನ ತಂದೆ ತಾಯಿಯ ಹೆಸರನ್ನು ಇಂಗ್ಲಿಷ್ ನಲ್ಲಿ ಬರೆಯಲು ಬಾರದ ದಡ್ಡರೂ ಸರ್ಕಾರಿ ಕೆಲಸದ ಆಕಾಂಕ್ಷಿಗಳು. ಅಪ್ಲಿಕೇಷನ್ ಭರ್ತಿ ಮಾಡಲು ಬಾರದಂತವರೂ ಇದ್ದಾರೆ.ಅವನ ಅಪ್ಲಿಕೇಷನ್ ಇನ್ಯಾರೋ ಭರ್ತಿ ಮಾಡಿರುತ್ತಾರೆ ಎಂಬುದನ್ನು ನೀವು ನಂಬಲೇಬೇಕು.ಕೆಲವೊಮ್ಮೆ ಡಿಗ್ರಿ ಸರ್ಟಿಫೀಕೇಟ್ ಇರುತ್ತೆ. ಆದರೆ ಡಿಗ್ರಿಗೆ ತಕ್ಕನಾದ ಜ್ಞಾನದ ಕೊರತೆ ಇರುತ್ತದೆ.ಅಂಥವರೇ ಸರ್ಕಾರಿ ಕೆಲಸ ಮಾಹಿತಿ ಪ್ರಕಟವಾದ ಮಾಹಿತಿ ನೋಡಿ ಅರ್ಜಿ ಸಲ್ಲಿಸುವುದು. ಆದರೆ ಪರೀಕ್ಷೆ ಯ ನಂತರ ಅವರ ಮುಖ ನೋಡಬೇಕು ನಮಗೆ ಈ ಜನ್ಮದಲ್ಲಿ ಸರ್ಕಾರಿ ಕೆಲಸ ಸಿಗಲ್ಲ ಬಿಡ್ರೋ ಅಧಿಕಾರಿಗಳು ಮೊದಲೇ ಫಿಕ್ಸಿಂಗ್ ಮಾಡ್ಕೊಂಡು ಸುಮ್ಮನೆ ಜನರ ಕಣ್ಣೊರೆಸಲು ಈ ಪರೀಕ್ಷೆ ನಡೆಸೋದು ತಗಿರಲೇ.

ಇದ್ಯಾವುದು ಸರಿ ಇಲ್ಲ. ವ್ಯವಸ್ಥೆ ಚೇಂಜ್ ಆಗಬೇಕಲೇ ಎಂಬ ಬೊಂಬಡ ಕೇಳಬೇಕು.ಒಳ್ಳೆ ಆಧ್ಯಾತ್ಮಿಕ ಚಿಂತನೆಯ ಮಟ್ಟಕ್ಕೆ ಇಳಿದಿರುತ್ತದೆ ಅವರ ಮಾತುಗಳು. ಅಂತವರ ಮುಂದೆ ಸರ್ಕಾರಿ ಕೆಲಸ ಗಿಟ್ಟಿಸಿಕೊಳ್ಳುವವರು ಒಂದು ರೀತಿ ಮಂತ್ರೋಪದೇಶಕರಾಗಿರುತ್ತಾರೆ. ಇಂತಿರುವ ಸಮಾಜದಲ್ಲಿ ಒಂದು ಸರ್ಕಾರಿ ಕೆಲಸ ಗಿಟ್ಟಿಸಿಕೊಂಡವರು ಮದುವೆ ಸಮಯದಲ್ಲಿ ವರದಕ್ಷಿಣೆ ಸಹ ಹೆಚ್ಚು ದೋಚುವವರಿದ್ದಾರೆ. ಐ ಎ ಎಸ್ ಅಧಿಕಾರಿಯಾದವರೂ ಸಹ ಇದರಿಂದ ಹೊರತಾಗಿಲ್ಲ.

ಕಳೆದ ಡಿಸೆಂಬರ್ ಜನವರಿ ಯಲ್ಲಿ ಹತ್ತಕ್ಕಿಂತ ಹೆಚ್ಚು ಸರ್ಕಾರಿ ಕೆಲಸಗಳು ಪ್ರಕಟವಾಗಿವೆ.ಈ ಸಮಯದಲ್ಲಿ ಯಾವುದೇ ಸೈಬರ್ ಅಂಗಡಿ,ಜೆರಾಕ್ಸ್ ಅಂಗಡಿ ನೋಡಿದರೆ ಕೆಲಸಕ್ಕಾಗಿ ಕಾದಿರುವ ಕಾತುರರು ಎಷ್ಟು ಎಂಬುದು ಗೊತ್ತಾಗುತ್ತದೆ. ಒಂದು ಮಾಹಿತಿ ಪ್ರಕಾರ ಒಂದು ಸಾವಿರ ಹುದ್ದೆಯ ಕೆಲಸಗಳಿಗೆ ಹದಿನಾರು ಲಕ್ಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರಂತೆ.ಅದು ಎಸ್ಸೆಸ್ಸೆಲ್ಸಿ ಅರ್ಹತೆ ಅನುಸಾರವಾಗಿ ಆದರೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಲ್ಲಿ ಹೆಚ್ಚಿನದಾಗಿ ಮಾಸ್ಟರ್ ಡಿಗ್ರಿ ಹಾಗೂ ಪಿ ಎಚ್ಡಿ ಪಡೆದವರು ಇದ್ದರಂತೆ!!

ಭಾರತದಲ್ಲಿ ಸರ್ಕಾರಿ ಕೆಲಸದ ಅವಶ್ಯಕತೆ ಮತ್ತು ಸ್ಪರ್ಧೆ ಎಷ್ಟಿದೆ ಎಂಬುದು ಸಾಬೀತಾಗಿದೆ. ಇದಿಷ್ಟೆ ಅಲ್ಲದೆ ಸರ್ಕಾರ ಕಾಲ ಕಾಲಕ್ಕೆ ಸರ್ಯಾಗಿ ಇಲಾಖೆಯ ಹುದ್ದೆ ಭರ್ತಿ ಕಾರ್ಯ ಮಾಡದೆ ಇರುವುದು ಒಂದು ದೋಷವಾಗಿದೆ. ಎಂತಹ ಅತಂತ್ರತೆಯಲ್ಲಿ ಅಭ್ಯರ್ಥಿಗಳು ಇದ್ದಾರೆಂದರೆ ಊಹಿಸುವುದೂ ಕಷ್ಟ. ಇಷ್ಟೊಂದು ಕಷ್ಟಗಳ ನಡುವೆ ಸರ್ಕಾರಿ ಕೆಲಸ ಸಿಕ್ಕೆ ಬಿಡ್ತು ಎಂದರೆ ಅವನೇ ಅವತ್ತಿನಿಂದ ಕುಬೇರ.ಹೋಗ್ಲಿ ಬಿಡ್ರಿ ಈ ಅಂಕಣ ಓದುವಷ್ಟರಲ್ಲಿ ಬೇರೆ ಇನ್ಯಾವುದಾದರು ಸರ್ಕಾರಿ ಕೆಲಸದ ಪ್ರಕಟಣೆ ನಿಮ್ಮ ಕಿವಿಗೆ ಬೀಳಬಹುದು. ಅದಕ್ಕೂ ಒಂದು ಅರ್ಜಿ ಹಾಕಿಬಿಡಿ.

ಸರ್ಕಾರಿ ಕೆಲಸ ಬಯಸಿ ಸ್ಪರ್ಧಾತ್ಮಕ ಪರೀಕ್ಷೆಗೆ ರೆಡಿಯಾಗುತ್ತಿರುವ ಅಭ್ಯರ್ಥಿಗಳೆಲ್ಲರಿಗೆ ಅವರ ಕನಸು ನನಸಾಗಲೆಂದು ಹರಸುತ್ತಾ. ನಿಮ್ಮ ಸ್ನೇಹಿತರು ಯಾರಾದರೂ ಈ ಸರ್ಕಾರಿ ಕೆಲಸದ ಪ್ರಯತ್ನದಲ್ಲಿದ್ದರೆ ಅವರಿಗೂ ಈ ಹರಕೆ ಮುಟ್ಟಲಿ ಅವರಿಗೂ ಒಮ್ಮೆ ನೀವು ಶುಭ ಕೋರಿಬಿಡಿ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ನಟ ಮನದೀಪ್‌ ರಾಯ್‌ ನಿಧನ

Published

on

ಸುದ್ದಿದಿನ ಡೆಸ್ಕ್ : ಹಿರಿಯ ಚಿತ್ರನಟ ಮನದೀಪ್‌ ರಾಯ್‌ (74 ವರ್ಷ) ಇಂದು ಬೆಳಗಿನ ಜಾವ ಅಗಲಿದ್ದಾರೆ.

ಕೆಲ ದಿನಗಳ ಹಿಂದೆ ಹೃದಯಾಘಾತಕ್ಕೀಡಾಗಿದ್ದ ಅವರು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಮನದೀಪ್‌ ರಾಯ್‌ ಹವ್ಯಾಸಿ ರಂಗಭೂಮಿ ಹಿನ್ನೆಲೆಯ ಕಲಾವಿದ. ನಟ – ನಿರ್ದೇಶಕ ಶಂಕರನಾಗ್‌ ಅವರ ಆತ್ಮೀಯ ಒಡನಾಡಿ. ಪೋಷಕ ಪಾತ್ರ, ಹಾಸ್ಯ ನಟರಾಗಿ 500ಕ್ಕೂ ಹೆಚ್ಚು ಸಿನಿಮಾಗಳು ಹಾಗೂ ಕಿರುತೆರೆ ಸರಣಿಗಳಲ್ಲಿ ಅಭಿನಯಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಕರ್ನಾಟಕದಲ್ಲಿ ಈ ವರ್ಷ ಜನಪರ ರಾಜ್ಯ ಬಜೆಟ್ ಮಂಡನೆ ; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

Published

on

ಸುದ್ದಿದಿನ, ಹಾವೇರಿ : ಕರ್ನಾಟಕದಲ್ಲಿ ಮುಂದಿನ ತಿಂಗಳು ಮಂಡಿಸಲಾಗುತ್ತಿರುವ ಈ ವರ್ಷದ ರಾಜ್ಯ ಬಜೆಟ್ ರೈತರು, ದೀನ ದಲಿತರು, ಯುವಕರು, ಮಹಿಳೆಯರು, ದುಡಿಯುವ ವರ್ಗ ಮತ್ತು ಜನಪರವಾಗಿರುತ್ತದೆ ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಹಾವೇರಿ ಜಿಲ್ಲೆ ಶಿಗ್ಗಾಂವ್‌ನಲ್ಲಿ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ದುಡಿಮೆಗೆ ಯೋಗ್ಯ ಬೆಲೆ ಸಿಗುವ ರೀತಿಯಲ್ಲಿ ನಮ್ಮ ಕಾರ್ಯಕ್ರಮಗಳು ಇರುತ್ತವೆ ಎಂದರು.

ಕರ್ನಾಟಕ ರಾಜ್ಯದ ಆರ್ಥಿಕ ಅಭಿವೃದ್ಧಿಯಲ್ಲಿ ನಾವು ವೇಗವನ್ನು ಕಂಡಿದ್ದೇವೆ. ಕಳೆದ ವರ್ಷ ನಾನು ಅಧಿಕಾರ ವಹಿಸಿಕೊಂಡಾಗ 5 ಸಾವಿರ ಕೋಟಿ ರೂಪಾಯಿ ರಾಜ್ಯದ ಬೊಕ್ಕಸಕ್ಕೆ ನಮ್ಮ ನಿರ್ಧಿಷ್ಟ ಗುರಿಗೆ ಕೊರತೆಯಿತ್ತು. ಅದನ್ನು ನಾವು 5 ಸಾವಿರ ಕೋಟಿ ತುಂಬುವುದಲ್ಲದೇ, 13 ಸಾವಿರ ಕೋಟಿ ಅಧಿಕವಾಗಿ ಸಂಗ್ರಹ ಮಾಡಿದ್ದೇವೆ. ಈ ವರ್ಷವೂ ಕೂಡ ನಮ್ಮ ಹಣಕಾಸಿನ ಸಂಗ್ರಹ ಉತ್ತಮವಾಗಿದೆ ಎಂದು ಕರ್ನಾಟಕದ ಮುಖ್ಯಮಂತ್ರಿ ಹೇಳಿದರು.

ಕೋವಿಡ್ ನಂತರದಲ್ಲಿ ಆರ್ಥಿಕ ಸುಧಾರಣೆ ಆಗುತ್ತಿರುವ ಸಂದರ್ಭದಲ್ಲಿ ಕೆಳಹಂತದ ಜನಸಮುದಾಯಕ್ಕೆ ಇನ್ನಷ್ಟು ಸಹಾಯ ಮಾಡಿ, ಅವರನ್ನು ಕೂಡ ಮುಖ್ಯ ವಾಹಿನಿಗೆ ಬರಬೇಕು ಎನ್ನುವ ನಿಟ್ಟಿನಲ್ಲಿ ನಾವು ಕಾರ್ಯಕ್ರಮ ರೂಪಿಸುತ್ತಿದ್ದೇವೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಸಂಸತ್ತಿನ ಬಜೆಟ್ ಅಧಿವೇಶನದ ಹಿನ್ನೆಲೆ ; ಇದೇ 30ರಂದು ಸರ್ವಪಕ್ಷಗಳ ಸಭೆ

Published

on

ಸುದ್ದಿದಿನ ಡೆಸ್ಕ್ : ಸಂಸತ್ತಿನ ಮುಂಬರುವ ಬಜೆಟ್ ಅಧಿವೇಶನದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇದೇ 30ರಂದು ಸರ್ವಪಕ್ಷಗಳ ಸಭೆಯನ್ನು ಕರೆದಿದೆ. ಸಂಸತ್ ಭವನದ ಸಂಕೀರ್ಣದಲ್ಲಿ ಸೋಮವಾರ ಮಧ್ಯಾಹ್ನ 12 ಗಂಟೆಗೆ ಸಭೆ ನಡೆಯಲಿದೆ.

ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ, ಕೇಂದ್ರ ಸಚಿವರು ಮತ್ತು ಸಂಸತ್ತಿನ ಎರಡೂ ಸದನಗಳನ್ನು ಪ್ರತಿನಿಧಿಸುವ ಸದನ ನಾಯಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಸಭೆಯಲ್ಲಿ ಸರ್ಕಾರ ಸಂಸತ್ತಿನ ಉಭಯ ಸದನಗಳ ಸುಗಮ ಕಲಾಪಕ್ಕೆ ಎಲ್ಲ ರಾಜಕೀಯ ಪಕ್ಷಗಳ ಸಹಕಾರವನ್ನು ಕೋರಲಿದೆ. ಸಂಸತ್ತಿನ ಬಜೆಟ್ ಅಧಿವೇಶನ ಇದೇ 31ರಿಂದ ಆರಂಭವಾಗಲಿದೆ. ಮೊದಲ ದಿನ ಬೆಳಿಗ್ಗೆ 11 ಗಂಟೆಗೆ ಸೆಂಟ್ರಲ್ ಹಾಲ್ ನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡುವರು.

ಅದೇ ದಿನವೇ ಆರ್ಥಿಕ ಸಮೀಕ್ಷೆಯನ್ನೂ ಸಹ ಮಂಡಿಸಲಾಗುವುದು. ಫೆಬ್ರವರಿ 1ರಂದು 2023-24ನೇ ಸಾಲಿನ ಕೇಂದ್ರ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆ ಮಾಡಲಿದ್ದಾರೆ.

ಬಜೆಟ್ ಅಧಿವೇಶನ ಏಪ್ರಿಲ್ 6ವರೆಗೆ ನಡೆಯಲಿದ್ದು, ಸುಮಾರು 66 ದಿನಗಳಲ್ಲಿ 27 ಕಲಾಪಗಳು ನಡೆಯಲಿದೆ. ಮೊದಲ ಅವಧಿಯಲ್ಲಿ ಅಧಿವೇಶನ ಫೆಬ್ರವರಿ 13ರವರೆಗೆ ನಡೆಯಲಿದೆ. ಫೆಬ್ರವರಿ 14ರಿಂದ ಮಾರ್ಚ್ 12ರವರೆಗೆ ಅಧಿವೇಶನಕ್ಕೆ ಬಿಡುವು ಇರಲಿದೆ ಆನಂತರ ಮಾರ್ಚ್ 13ರಿಂದ ಆರಂಭವಾಗುವ ಅಧಿವೇಶನ ಏಪ್ರಿಲ್ 6ಕ್ಕೆ ಕೊನೆಗೊಳ್ಳಲಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980336243

Continue Reading

Trending