ದಿನದ ಸುದ್ದಿ
ಸರ್ಕಾರ ವಿತರಿಸುತ್ತಿರುವ ಧಾನ್ಯದ ಕಿಟ್ಗಳು ಎಲ್ಲರನ್ನೂ ತಲುಪುತ್ತಿಲ್ಲ ; ಕೂಡಲೇ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿ : ಸಿದ್ದರಾಮಯ್ಯ ಒತ್ತಾಯ

ಸುದ್ದಿದಿನ, ಬೆಂಗಳೂರು : ಲಾಕ್ಡೌನ್ ಜಾರಿಯಾಗಿ ತಿಂಗಳು ಕಳೆದಿದೆ.ಜೀವನೋಪಾಯಕ್ಕೆ ಸಾಂಪ್ರದಾಯಿಕ ವೃತ್ತಿಯನ್ನೇ ಅವಲಂಭಿಸಿರುವ ಸಮುದಾಯಗಳ ಬದುಕು ಚಿಂತಾಜಕನ ಸ್ಥಿತಿಗೆ ತಲುಪಿದೆ. ಆರ್ಥಿಕವಾಗಿ ನೆಲಕಚ್ಚಿರುವ ಶ್ರಮಿಕ ವರ್ಗದವರಿಗಾಗಿ ಸರ್ಕಾರ ವಿಶೇಷ ಯೋಜನೆ ರೂಪಿಸದೇ ಇದ್ದರೆ ಲಾಕ್ಡೌನ್ ಮುಗಿದ ಕೂಡಲೇ ಬೀದಿಗಿಳಿದು ಹೋರಾಟ ಮಾಡುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಒತ್ತಾಯಿಸಿದರು.
ಮಂಗಳವಾರ ಬೆಂಗಳೂರಿನಲ್ಲಿ ವಿವಿಧ ಸಮುದಾಯದ ಸಂಘಟನೆಗಳ ಮುಖಂಡರ ಸಭೆ ನಡೆಸಿ, ಲಾಕ್ಡೌನ್ ಹಿನ್ನೆಲೆಯಲ್ಲಿ ಉಂಟಾಗಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಿದರು.
ಗ್ರಾಮೀಣ ಪ್ರದೇಶದಲ್ಲಿರುವ ಸಾಂಪ್ರದಾಯಿಕ ವೃತ್ತಿಯನ್ನು ಅವಲಂಭಿಸಿದ ಕುಟುಂಬಗಳು ಒಂದು ಹೊತ್ತಿನ ಊಟಕ್ಕೂ ಪರದಾಡುವಂತಾಗಿದೆ. ಅವರಿಗೆ ಉಚಿತವಾಗಿ ಊಟ, ತಿಂಡಿ ಕೊಡಿ ಎಂದು ಮುಖ್ಯಮಂತ್ರಿಗಳನ್ನು ಹಲವು ಬಾರಿ ಒತ್ತಾಯ ಮಾಡಿದ್ದೇನೆ. ಇದಕ್ಕಾಗಿ ರೂ.18 ರಿಂದ 20 ಕೋಟಿ ವೆಚ್ಚವಾಗಬಹುದು. ಅದಕ್ಕೂ ಮೀನಮೇಷ ಎಣಿಸುವುದು ಸರಿಯಲ್ಲ.
ಸರ್ಕಾರ ಈಗ ವಿತರಣೆ ಮಾಡುತ್ತಿರುವ ದವಸ ಧಾನ್ಯದ ಕಿಟ್ಗಳು ಎಲ್ಲರನ್ನೂ ತಲುಪುತ್ತಿಲ್ಲ. ಅದಕ್ಕಾಗಿಯೇ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕೆಂದು ನಾವು ಒತ್ತಾಯಿಸುತ್ತಿರುವುದು. ಲಾಕ್ಡೌನ್ ಅವಧಿಯಲ್ಲಿ ನಾವು ವಿನಾಕಾರಣ ರಾಜಕೀಯ ಮಾಡುವುದಿಲ್ಲ. ಹೀಗಾಗಿ ಲಾಕ್ಡೌನ್ ಮುಗಿದ ಕೂಡಲೇ ಹೋರಾಟಕ್ಕಿಳಿಯುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಸರ್ಕಾರದಿಂದ ನಮಗೆ ಯಾವುದೇ ರೀತಿಯ ಸಹಾಯ ಸಿಕ್ಕಿಲ್ಲ ಎಂದು ವಿವಿಧ ಸಮುದಾಯಗಳ ಸಂಘಟನೆಯ ಮುಖಂಡರು ಹೇಳಿದ್ದಾರೆ. ಲಾಕ್ಡೌನ್ ಮುಗಿದ ಬಳಿಕ ಎದುರಾಗಬಹುದಾದ ಸನ್ನಿವೇಶ ಕುರಿತು ಎಲ್ಲರೂ ಆತಂಕ ವ್ಯಕ್ತಪಡಿಸಿದ್ದಾರೆ ಹಾಗೂ ಎಲ್ಲರೂ ಲಿಖಿತ ರೂಪದಲ್ಲಿ ಸಮಸ್ಯೆಗಳನ್ನು ವಿವರಿಸಿದ್ದಾರೆ. ಸಲೂನ್ಗಳು ರಾಜ್ಯಾದ್ಯಂತ ಬಂದ್ ಆಗಿವೆ. ಸವಿತಾ ಸಮಾಜದವರು ಇದರಿಂದ ತೀವ್ರ ನಷ್ಟಕ್ಕೆ ಒಳಗಾಗಿ ಬೀದಿಪಾಲಾಗುವ ಹಂತ ತಲುಪಿದ್ದಾರೆ. ಮಡಿವಾಳರು, ಕುಂಬಾರರು, ಅಕ್ಕಸಾಲಿಗರು, ಗಾಣಿಗರ ಪರಿಸ್ಥಿತಿಯೂ ಇದೇ ರೀತಿ ಆಗಿದೆ. ಇವರೆಲ್ಲರು ನಿತ್ಯದ ದುಡಿಮೆಯಿಂದ ಬಂದ ಆದಾಯದಲ್ಲಿ ಜೀವನ ನಡೆಸುತ್ತಿದ್ದರು ಎಂದರು.
ಅಸಂಘಟಿತ ಕಾರ್ಮಿಕರು 20 ಲಕ್ಷದಷ್ಟಿದ್ದಾರೆ. ಈ ಪೈಕಿ 12 ಲಕ್ಷ ಮಂದಿಗೆ ಮಾತ್ರ ಸರ್ಕಾರ ಕಾರ್ಮಿಕ ಕಲ್ಯಾಣ ನಿಧಿಯಿಂದ ರೂ.2000 ಸಹಾಯಧನ ನೀಡಿದೆ. ಉಳಿದವರಿಗೆ ಲೈಸೆನ್ಸ್ ನವೀಕರಣವಾಗಿಲ್ಲ ಎಂಬ ನೆಪ ಹೇಳಿ ಸಹಾಯಧನ ನೀಡುತ್ತಿಲ್ಲ. ಇದು ಎಷ್ಟು ಸರಿ? ಅಸಂಘಟಿತ ವಲಯದ ಬಹುತೇಕ ಕಾರ್ಮಿಕರಿಗೆ ಅಗತ್ಯ ನೆರವು ಸಿಕ್ಕಿಲ್ಲ. ಬಿಜೆಪಿ ಶಾಸಕರ ಕ್ಷೇತ್ರಗಳಲ್ಲಿ ಕೆಲವು ಕಾರ್ಮಿಕರಿಗೆ ಮಾತ್ರ ಆಹಾರದ ಪ್ಯಾಕೇಟ್ಗಳನ್ನು ನೀಡಲಾಗುತ್ತಿದೆ. ಬೆಂಗಳೂರಿನ ವಿಚಾರದಲ್ಲಿ ಬಿಜೆಪಿ ರಾಜಕಾರಣ ಮಾಡುತ್ತಿದೆ. ಪಾಲಿಕೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಈ ರೀತಿಯ ವರ್ತನೆ ತೋರುವುದು ಸರಿಯಲ್ಲ ಎಂದು ಬೇಸರ ವ್ಯಕ್ತ ಪಡಿಸಿದರು.
ರಸ್ತೆ ತೆರಿಗೆ, ಮಾಸಿಕ ಕಂತು, ವಿಮೆ ಕಂತು, ವಿಮಾಣ ನಿಲ್ದಾಣದಲ್ಲಿ ಪಾರ್ಕಿಂಗ್ ಶುಲ್ಕ ಕಟ್ಟಲು ಆಗುತ್ತಿಲ್ಲ, ಅದನ್ನು ಮನ್ನಾ ಮಾಡಬೇಕು ಎಂದು ಟ್ಯಾಕ್ಸಿ ಚಾಲಕರು, ಮಾಲೀಕರು ಇಂದಿನ ಸಭೆಯಲ್ಲಿ ಹೇಳಿದ್ದಾರೆ. ಸಭೆಯಲ್ಲಿ ವ್ಯಕ್ತವಾದ ಒಟ್ಟು ಅಭಿಪ್ರಾಯಗಳನ್ನು ಕ್ರೋಢೀಕರಿಸಿ ಮುಖ್ಯಮಂತ್ರಿಗಳಿಗೆ ಪತ್ರ ಬರೆಯುತ್ತೇನೆ ಎಂದು ಹೇಳಿದರು.
ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್, ವಿಧಾನ ಪರಿಷತ್ ಸದಸ್ಯರಾದ ಎಚ್.ಎಂ ರೇವಣ್ಣ, ಎಂ.ಸಿ. ವೇಣುಗೋಪಾಲ್ ಹಾಗೂ ಎಂ.ಡಿ. ಲಕ್ಷ್ಮಿನಾರಾಯಣ ಸೇರಿದಂತೆ ಹಲವರು ಭಾಗವಹಿಸಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ನಟ ಮನದೀಪ್ ರಾಯ್ ನಿಧನ

ಸುದ್ದಿದಿನ ಡೆಸ್ಕ್ : ಹಿರಿಯ ಚಿತ್ರನಟ ಮನದೀಪ್ ರಾಯ್ (74 ವರ್ಷ) ಇಂದು ಬೆಳಗಿನ ಜಾವ ಅಗಲಿದ್ದಾರೆ.
ಕೆಲ ದಿನಗಳ ಹಿಂದೆ ಹೃದಯಾಘಾತಕ್ಕೀಡಾಗಿದ್ದ ಅವರು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಮನದೀಪ್ ರಾಯ್ ಹವ್ಯಾಸಿ ರಂಗಭೂಮಿ ಹಿನ್ನೆಲೆಯ ಕಲಾವಿದ. ನಟ – ನಿರ್ದೇಶಕ ಶಂಕರನಾಗ್ ಅವರ ಆತ್ಮೀಯ ಒಡನಾಡಿ. ಪೋಷಕ ಪಾತ್ರ, ಹಾಸ್ಯ ನಟರಾಗಿ 500ಕ್ಕೂ ಹೆಚ್ಚು ಸಿನಿಮಾಗಳು ಹಾಗೂ ಕಿರುತೆರೆ ಸರಣಿಗಳಲ್ಲಿ ಅಭಿನಯಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕರ್ನಾಟಕದಲ್ಲಿ ಈ ವರ್ಷ ಜನಪರ ರಾಜ್ಯ ಬಜೆಟ್ ಮಂಡನೆ ; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಸುದ್ದಿದಿನ, ಹಾವೇರಿ : ಕರ್ನಾಟಕದಲ್ಲಿ ಮುಂದಿನ ತಿಂಗಳು ಮಂಡಿಸಲಾಗುತ್ತಿರುವ ಈ ವರ್ಷದ ರಾಜ್ಯ ಬಜೆಟ್ ರೈತರು, ದೀನ ದಲಿತರು, ಯುವಕರು, ಮಹಿಳೆಯರು, ದುಡಿಯುವ ವರ್ಗ ಮತ್ತು ಜನಪರವಾಗಿರುತ್ತದೆ ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹಾವೇರಿ ಜಿಲ್ಲೆ ಶಿಗ್ಗಾಂವ್ನಲ್ಲಿ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ದುಡಿಮೆಗೆ ಯೋಗ್ಯ ಬೆಲೆ ಸಿಗುವ ರೀತಿಯಲ್ಲಿ ನಮ್ಮ ಕಾರ್ಯಕ್ರಮಗಳು ಇರುತ್ತವೆ ಎಂದರು.
ಕರ್ನಾಟಕ ರಾಜ್ಯದ ಆರ್ಥಿಕ ಅಭಿವೃದ್ಧಿಯಲ್ಲಿ ನಾವು ವೇಗವನ್ನು ಕಂಡಿದ್ದೇವೆ. ಕಳೆದ ವರ್ಷ ನಾನು ಅಧಿಕಾರ ವಹಿಸಿಕೊಂಡಾಗ 5 ಸಾವಿರ ಕೋಟಿ ರೂಪಾಯಿ ರಾಜ್ಯದ ಬೊಕ್ಕಸಕ್ಕೆ ನಮ್ಮ ನಿರ್ಧಿಷ್ಟ ಗುರಿಗೆ ಕೊರತೆಯಿತ್ತು. ಅದನ್ನು ನಾವು 5 ಸಾವಿರ ಕೋಟಿ ತುಂಬುವುದಲ್ಲದೇ, 13 ಸಾವಿರ ಕೋಟಿ ಅಧಿಕವಾಗಿ ಸಂಗ್ರಹ ಮಾಡಿದ್ದೇವೆ. ಈ ವರ್ಷವೂ ಕೂಡ ನಮ್ಮ ಹಣಕಾಸಿನ ಸಂಗ್ರಹ ಉತ್ತಮವಾಗಿದೆ ಎಂದು ಕರ್ನಾಟಕದ ಮುಖ್ಯಮಂತ್ರಿ ಹೇಳಿದರು.
ಕೋವಿಡ್ ನಂತರದಲ್ಲಿ ಆರ್ಥಿಕ ಸುಧಾರಣೆ ಆಗುತ್ತಿರುವ ಸಂದರ್ಭದಲ್ಲಿ ಕೆಳಹಂತದ ಜನಸಮುದಾಯಕ್ಕೆ ಇನ್ನಷ್ಟು ಸಹಾಯ ಮಾಡಿ, ಅವರನ್ನು ಕೂಡ ಮುಖ್ಯ ವಾಹಿನಿಗೆ ಬರಬೇಕು ಎನ್ನುವ ನಿಟ್ಟಿನಲ್ಲಿ ನಾವು ಕಾರ್ಯಕ್ರಮ ರೂಪಿಸುತ್ತಿದ್ದೇವೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಸಂಸತ್ತಿನ ಬಜೆಟ್ ಅಧಿವೇಶನದ ಹಿನ್ನೆಲೆ ; ಇದೇ 30ರಂದು ಸರ್ವಪಕ್ಷಗಳ ಸಭೆ

ಸುದ್ದಿದಿನ ಡೆಸ್ಕ್ : ಸಂಸತ್ತಿನ ಮುಂಬರುವ ಬಜೆಟ್ ಅಧಿವೇಶನದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇದೇ 30ರಂದು ಸರ್ವಪಕ್ಷಗಳ ಸಭೆಯನ್ನು ಕರೆದಿದೆ. ಸಂಸತ್ ಭವನದ ಸಂಕೀರ್ಣದಲ್ಲಿ ಸೋಮವಾರ ಮಧ್ಯಾಹ್ನ 12 ಗಂಟೆಗೆ ಸಭೆ ನಡೆಯಲಿದೆ.
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ, ಕೇಂದ್ರ ಸಚಿವರು ಮತ್ತು ಸಂಸತ್ತಿನ ಎರಡೂ ಸದನಗಳನ್ನು ಪ್ರತಿನಿಧಿಸುವ ಸದನ ನಾಯಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಸಭೆಯಲ್ಲಿ ಸರ್ಕಾರ ಸಂಸತ್ತಿನ ಉಭಯ ಸದನಗಳ ಸುಗಮ ಕಲಾಪಕ್ಕೆ ಎಲ್ಲ ರಾಜಕೀಯ ಪಕ್ಷಗಳ ಸಹಕಾರವನ್ನು ಕೋರಲಿದೆ. ಸಂಸತ್ತಿನ ಬಜೆಟ್ ಅಧಿವೇಶನ ಇದೇ 31ರಿಂದ ಆರಂಭವಾಗಲಿದೆ. ಮೊದಲ ದಿನ ಬೆಳಿಗ್ಗೆ 11 ಗಂಟೆಗೆ ಸೆಂಟ್ರಲ್ ಹಾಲ್ ನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡುವರು.
ಅದೇ ದಿನವೇ ಆರ್ಥಿಕ ಸಮೀಕ್ಷೆಯನ್ನೂ ಸಹ ಮಂಡಿಸಲಾಗುವುದು. ಫೆಬ್ರವರಿ 1ರಂದು 2023-24ನೇ ಸಾಲಿನ ಕೇಂದ್ರ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆ ಮಾಡಲಿದ್ದಾರೆ.
ಬಜೆಟ್ ಅಧಿವೇಶನ ಏಪ್ರಿಲ್ 6ವರೆಗೆ ನಡೆಯಲಿದ್ದು, ಸುಮಾರು 66 ದಿನಗಳಲ್ಲಿ 27 ಕಲಾಪಗಳು ನಡೆಯಲಿದೆ. ಮೊದಲ ಅವಧಿಯಲ್ಲಿ ಅಧಿವೇಶನ ಫೆಬ್ರವರಿ 13ರವರೆಗೆ ನಡೆಯಲಿದೆ. ಫೆಬ್ರವರಿ 14ರಿಂದ ಮಾರ್ಚ್ 12ರವರೆಗೆ ಅಧಿವೇಶನಕ್ಕೆ ಬಿಡುವು ಇರಲಿದೆ ಆನಂತರ ಮಾರ್ಚ್ 13ರಿಂದ ಆರಂಭವಾಗುವ ಅಧಿವೇಶನ ಏಪ್ರಿಲ್ 6ಕ್ಕೆ ಕೊನೆಗೊಳ್ಳಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980336243
