Connect with us

ದಿನದ ಸುದ್ದಿ

‘ಸರಕಾರ’ ಬಡವನ ಬುತ್ತಿಯಿಂದ ರೊಟ್ಟಿಕಸಿಯುವ ನಾಯಿಯಾಗಬಾರದು

Published

on

  • ಬಿ.ಪೀರ್ ಬಾಷ

ಮುಖ್ಯಮಂತ್ರಿ, ಸಾರಿಗೆ ಮಂತ್ರಿಗಳೇ;
ಹಣಗಳಿಸಲು ಸರಕಾರದಿಂದ ಬೇರೆ ವ್ಯಾಪಾರ ನಡೆಸಿ, ಬಡವರ ಒಡಲಿಗೆ ಬೆಂಕಿ ಇಡಬೇಡಿ.

ಕರೊನಾ ಎಂಬ ಸಿರಿವಂತರು ಹುಟ್ಡಿಸಿದ ಮಾರಿಬೇನೆಗೆ ಬಡವರು ಒಡಲು ಬೆಂದು ಹೋಗುತ್ತಿದೆ. ಹಾಗೆ ದುಡುತ್ತಿರುವ ಒಡಲಿಗೆ ಕೊಳ್ಳಿ ತಿವಿಯುವ ಕೆಲಸ ಬಹುಶಃ ಕಳ್ಳನೂ, ಕಟುಕನೂ, ಕಡುಪಾಪಿಯೂ ಮಾಡಲಾರ. ಆದರೆ ನಮ್ಮ ಸರಕಾರ ಏನು ಮಾಡುತ್ತಿದೆ?

ಎರಡು ಹೊತ್ತಿನ ತುತ್ತನ್ನು ಗಳಿಸಿಕೊಳ್ಳಲು ಬೆಂಗಳೂರಿಗೆ ಬಂದು, ಕಂಡಲ್ಲಿ ಜೋಪಡಿ ಕಟ್ಟಿಕೊಂಡು, ಕಲ್ಲು ಹೂಡಿ ಒಲೆಮಾಡಿ ಅನ್ನದಕಾಳು ಕುಚ್ಚಿಕೊಂಡು ಉಂಡು ಮಲಗುತ್ತಿದ್ದ ಕೂಲಿ ಸಾವಿರಾರು ಕಾರ್ಮಿಕರು ಲಾಕ್‌ಡೌನ್ ಆದ ಕ್ಷಣದಿಂದ ತತ್ತರಿಸಿಹೋಗಿದ್ದಾರೆ. ಅವರವರ ಹಳ್ಳಿಗಳಲ್ಲಿದ್ದಿದ್ದರೆ ಗಂಜಿ ಕುಡಿದು ಅಂಗಳದಲ್ಲಾದರೂ ಮಲಗುವ ಸಮಾಧಾನವಾದರೂ ಇರುತ್ತಿತ್ತು. ಇಲ್ಲಿ ಈ ಶಹರದಲ್ಲಿ, ಹಗಲು ಕೂಲಿಯಿಲ್ಲವೆಂದರೆ ರಾತ್ರಿ ಊಟವಿಲ್ಲ, ಇಂತಹ ಸ್ಥಿತಿಯಿರುವಾಗ ಕಳೆದ ಸು. ಒಂದೂವರೆ ತಿಂಗಳಿನಿಂದ ಅದು ಹೇಗೆ ಬದುಕಿರಬಹುದು? ಅವರ ಕಣ್ಣುಗಳಿಂದ ಅದೆಷ್ಟು ನೀರು ಹರಿದಿರಬಹುದು? ಹಸಿದು ಅಳುವ ಮಕ್ಕಳನ್ನು ಹೇಗೆ ಸುಮ್ಮನಿರಿಸಿರಬಹುದು?

ಹೇಗಾದರೂ ಮಾಡಿ ಊರು ಮುಟ್ಟಿದರೆ ಸಾಕೆಂದು, ಲೆಕ್ಕಹಾಕಿ ಸರಿಯಾಗಿ ಬಸ್ ಚಾರ್ಜ್ ಗೆ ಆಗುವಷ್ಟು ಹಣವನ್ನು ಸೀರೆ ಸೆರಗಿನಲ್ಲಿ, ಸೊಂಟದ ಮಡಿಕೆಯಲ್ಲಿ ಗಂಟು ಗಂಟಿಕೊಂಡು ಊರಿಗೆ ಹೋಗಬಹುದು ಎಂಬ ಸುದ್ದಿ ಕೇಳುತ್ತಲೇ ಬಸ್ಟ್ಯಾಂಡಿಗೆ ಬಂದರೆ ಇಲ್ಲಿ ದುಪ್ಪಟ್ಟು, ಮೂರುಪಟ್ಟು ಬಸ್ ಚಾರ್ಜ್ ಎಂದು ಹೇಳಿದರೆ ಅವರಿಗೆ ಎಷ್ಟು ಸಂಕಟವಾಗಿರಲಿಕ್ಕಿಲ್ಲ. ಬೆಳಗಾವಿಗೆ 800ಬಾಗಲಕೋಟೆಗೆ 700 ರೂ ಇದ್ದ ಬಸ್ ಚಾರ್ಜು, ಏಕಾಏಕಿ ಬೆಳಗಾವಿಗೆ1478 ಬಾಗಲಕೋಟೆಗೆ 1311ಎಂದರೆ ಇದು, ಹಸಿದ ಬಡವನ ಬುತ್ತಿಯಿಂದ ರೊಟ್ಟಿಕಸಿಯುವ ನಾಯಿಗಿಂತಲೂ ಕೀಳಾದ ಕೆಲಸವಲ್ಲವೇ?

ಆನಂದ್ ಸಿಂಗ್ ರಂತಹ ಧಣಿಗಳು ವಿಮಾನವನ್ನೇ ಬಾಡಿಗೆಗೆ ಪಡೆದು ವಿದೇಶದಲ್ಲಿದ್ದ ಮಕ್ಕಳನ್ನು ಕರೆದುಕೊಂಡು ಬಂದರು. ದೇಶದ ಸರಕಾರವೂ ಲಕ್ಷಾಂತರ ಸಂಬಳ ಪಡೆಯುವವರನ್ನು, ಕೋಟ್ಯಾಂತರ ತೆರಿಗೆ ಕಟ್ಟುವವರನ್ನು ವಿಶೇಷ ವಿಮಾನಗಳಿಂದ ಕರೆತರುವ ಪ್ರಯತ್ನವನ್ನೂ ಮಾಡೀತು? ಆದರೆ ಈ ಬಡಜೀವಿಗಳ ಇವರಿಗ್ಯಾವ ಲೆಕ್ಕ? ಸತ್ತರೆ ಮರ್ಯಾದೆ ಹೋದೀತೆಂಬ ಕಾರಣಕ್ಕೆ ಅಗ್ಗದ ರೇಷನನ್ನು ಕೊಡುವಂತೆ ಮಾಡಿ ಫೋಟೋ ತೆಗೆದಿಕೊಂಡರೆ ಸಾಕು ಜನೋಪಕಾರಿಯೆಂದು ಹೇಳಿಕೊಳ್ಳಲು. ಇನ್ನು ಬೆಂಗಳೂರೆಂಬ ಮಾಯಾನಗರದಲ್ಲಿ ಬದುಕೆಂಬ ಬದುಕೇ ಮೂರಾಬಟ್ಟೆಯಾಗಿ ಬಿಸಿಲಲ್ಲಿ ಬಾಡಿ ಗಾಳಿಪಾಲಾಗಿ ಕಸದಗುಂಟ ಹರಿದು ಹಂಚಿಹೋಗಿರುವ ಹೊತ್ತು ಮುಖ್ಯಮಂತ್ರಿ, ಪ್ರಧಾನ ಮಂತ್ರಿಗಳಿಗೆ ಇಂಥವರ ಬಗ್ಗೆ ಖಬರು ಇಲ್ಲವೆಂದರೆ ಏನು ಮಾಡಬೇಕು?

ಇಂಥ ಕೂಲಿ ಕಾರ್ಮಿಕರ ಸಂಖ್ಯೆ ಈಗ ದೇಶದಲ್ಲಿ ಹದಿನೈದಿಪ್ಪತ್ತು ಕೋಟಿಗೂ ಹೆಚ್ಚು. ಇವರು ಈಗ ಟಿ.ವಿ.ಚಾನೆಲುಗಳಿಗೆ ಸುದ್ದಿಯ ವಸ್ತುವಲ್ಲ. ಅವರಿಗಿರುವ ಉಮೇದಿಯೇ ಬೇರೆ. ಇನ್ನು ಸರಕಾರಗಳಿಗೆ ಕಾಪಾಡಬೇಕಿರುವುದು ಯಾರ ಹಿತಾಸಕ್ತಿಯನ್ನು? ಅದೂ ಆಗಿಯೇ ಹೋಯಿತು! ಸಾವಿರಾರು ಕೋಟಿ ಲೂಟಿಯೂ ಮಾಫ್ ಆಯಿತು!!

ಆದರೆ ಇಂಥ ವಿಶ್ವಜಗದ್ಗುರು ಮಹಾನುಭಾವರು ಅವರ ಪಟಾಲಂಗಳ ಸರಕಾರಗಳಿಗೆ ಕೂಲಿಕಾರ್ಮಿಕರನ್ನು ಉಚಿತವಾಗಿ ಅವರವರ ಮನೆಗಳಿಗೆ ಸರಕಾರಿ ಬಸ್ಸಿನಲ್ಲಿ ಮನೆ ಸೇರಿಸುವ ಯೋಗ್ಯತೆಯೂ ಇಲ್ಲದಾಯಿತೇ? ನಾಚಿಕೆಗೇಡು! ಅದು ಹೋಗಲಿ, ಇಂತಹ ಹೊತ್ತಿನಲ್ಲಿ ಬಸ್ ಚಾರ್ಜ್ ಪಡೆದು ಬಸ್ ಹತ್ತಿಸಿಕೊಂಡರೂ ನಾಚಿಕೆಗೇಡೇ ಆದರೂ ಇನ್ನು ಡಬಲ್ ತ್ರಿಪಲ್ ಚಾರ್ಜು ಪೀಕುತ್ತಾರೆ ಎಂದರೆ ಇದೊಂದು ಸರಕಾರವಾ ಅಥವಾ ? ಮನುಷ್ಯತ್ವ ಇರುವ ಯಾರಿಗಾದರೂ ಸಿಟ್ಟು ಬರದೇ ಇದ್ದೀತೇ?

ಹಸಿದು ಅಳುವ ಕೂಸಿಗೆ ನಾಲ್ಕು ರೂಪಾಯಿಯ ಬಿಸ್ಕೀಟು ಕೊಡಿಸಲು ಕಣ್ಣೀರು ತಂದುಕೊಳ್ಳುತ್ತಿರುವ ತಂದೆತಾಯಿಗಳು ಅಂತಹ ಆರೇಳು ವರ್ಷದ ಮಕ್ಕಳಿಗೂ ಸಾವಿರಾರು ರೂಪಾಯಿ ಬಸ್ ಚಾರ್ಜು ಕೊಡಬೇಕು ಎಂದರೆ…ಎದೆಯೊಡೆಯದಿದ್ದೀತೇ? ಹಣವೇ ಇಲ್ಲದವರು ಏನು ಮಾಡಬೇಕು? ಅವರವರ ಊರ ಮುಖ ನೋಡದೇ ಬೀದಿ ಹೆಣವಾಗಬೇಕೇ? ಏನಾಗಿದೆ ಈ ಸರ್ಕಾರಕ್ಕೆ? ಏನು ತುಂಬಿದೆ ಈ ಅಧಿಕಾರಿಗಳ ತಲೆಯಲ್ಲಿ? ಸಾವಿರಾರು ಕೋಟಿ ಆಗಬೇಕಾದಲ್ಲಿ ಆಗಿದೆ. ಆದರೆ ಈ ನಷ್ಟವನ್ನು ಬಡವರ ಬುತ್ತಿಗಂಟು ಕಸಿದು ಭರ್ತಿ ಮಾಡಿಕೊಳ್ಳಬೇಕೇ?

ಕೊಲ್ಲುವುದಷ್ಟೇ ಅಲ್ಲ, ಸಾವೇ ಸುಖ ಎಂಬಷ್ಟು ಕಷ್ಟ ಕೊಡುವುದು ಕೊಲೆಗಿಂತಲೂ ಕ್ರೂರ ನಡವಳಿಕೆ. ಇಂತಹ ಸ್ಥಾನದಲ್ಲಿ ಈಗ ಸರಕಾರಗಳೇ ಇವೆ ಎಂಬುದು ನಿಜಕ್ಕೂ ಮಾರಿಬೇನೆಗಿಂತಲೂ ಭೀಕರ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ದಾವಣಗೆರೆ | ತುಕ್ಕು ಹಿಡಿಯುತ್ತಿವೆ ವಾಹನಗಳು, ಪರಿಕರಗಳು : ಮಹಾನಗರ ಪಾಲಿಕೆ ವಿರುದ್ಧ ಎಸ್. ಮಂಜುನಾಥ್ ಗಡಿಗುಡಾಳ್ ಆಕ್ರೋಶ

Published

on

ಸುದ್ದಿದಿನ,ದಾವಣಗೆರೆ: ಸರ್ಕಾರದ ಅನುದಾನದಿಂದ ಬಂದಿರುವ ಕೋಟ್ಯಂತರ ರೂಪಾಯಿ ವೆಚ್ಚದ ವಾಹನಗಳು ಹಾಗೂ ಪರಿಕರಗಳು ತುಕ್ಕು ಹಿಡಿಯುತ್ತಿದ್ದು, ಮಹಾನಗರ ಪಾಲಿಕೆ ಆಡಳಿತ ವರ್ಗದ ನಿರ್ಲಕ್ಷ್ಯಕ್ಕೆ ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕ ಹಾಗೂ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎಲೆಕ್ಟ್ರಿಕಲ್ ಆಟೋಗಳು, ಮುಕ್ತಿವಾಹಿನಿ, ಮಿನಿ ಹಿಟಾಚಿ ಕೊಂಡೊಯ್ಯುವ ಲಾರಿ, ಜಟ್ಟಿಂಗ್ ಸ್ಪ್ರೇ, ಕಸ ತುಂಬುವ ಕಾಂಪ್ಯಾಕ್ಟರ್, ತಳ್ಳು ಗಾಡಿಗಳು, ಕಾರ್ಡನ್ ಡಸ್ಟ್ ಸೇರಿದಂತೆ ಪರಿಕರಗಳು ಮಹಾನಗರ ಪಾಲಿಕೆಗೆ ಬಂದಿವೆ. ಆದರೆ ಬಳಕೆ‌ ಮಾಡುವುದನ್ನು ಬಿಟ್ಟು ಪಾಲಿಕೆಯಲ್ಲಿ ಇಟ್ಟಿರುವುದು ಆಡಳಿತ ನಡೆಸುತ್ತಿರುವ ಬಿಜೆಪಿ ಬೇಜಾವಾಬ್ದಾರಿತನಕ್ಕೆ ಸಾಕ್ಷಿ ಎಂದು ಆರೋಪಿಸಿದ್ದಾರೆ.

ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕ ಜಿ. ಎಸ್.‌ ಗಡಿಗುಡಾಳ್ ಮಂಜುನಾಥ್, ಪಾಲಿಕೆ ಸದಸ್ಯ ಎ. ನಾಗರಾಜ್, ಸ್ಥಾಯಿ ಸಮಿತಿ ಅಧ್ಯಕ್ಷ ಉದಯಕುಮಾರ್, ಕಾಂಗ್ರೆಸ್ ಮುಖಂಡರಾದ ಜಗದೀಶ್, ಕೊಟ್ರಯ್ಯ, ಇಟುಗುಡಿ ಮಂಜುನಾಥ್, ಜಾಕಿರ್ ಆಲಿ, ಪಂಡಿತ್ ನೇತೃತ್ವದ ತಂಡ ಈ ಬಗ್ಗೆ ಪರಿಶೀಲಿಸಿದಾಗ ಬೆಳಕಿಗೆ ಬಂದಿದೆ.

ಮುಕ್ತಿ ವಾಹಿನಿ ಬಂದು ಆರು ತಿಂಗಳಾಗಿದೆ. ಒಂದು ವಾಹನ ಒಳಗಡೆ ನಿಲ್ಲಿಸಿದ್ದು ಧೂಳು ಹಿಡಿದು ತುಕ್ಕು ಹಿಡಿಯುವ ಪರಿಸ್ಥಿತಿ ಬಂದಿದೆ. ಮಿನಿ ಹಿಟಾಚಿ ತೆಗೆದುಕೊಂಡು ಹೋಗುವ ಲಾರಿ ಹಾಳಾಗಿದೆ. ಇದನ್ನು ಸರಿಪಡಿಸಲು ಆಗುತ್ತಿಲ್ಲ. ಕೇವಲ ಎರಡು ಸಾವಿರ ರೂಪಾಯಿ ಖರ್ಚು ಮಾಡಿ ದುರಸ್ತಿ ಮಾಡಿಸಲು ಆಗಿಲ್ಲ.

ಈ ಹಿನ್ನೆಲೆಯಲ್ಲಿ ಎರಡು ಹಿಟಾಚಿಗಳು ಸಮರ್ಪಕವಾಗಿ ಬಳಕೆ ಆಗುತ್ತಿಲ್ಲ. ಇವು ಹಾಳಾಗುವ ಹಂತ ತಲುಪಿವೆ. ಇನ್ನು ನಾಲ್ಕು ಜಟ್ಟಿಂಗ್ ಸ್ಪ್ರೇ ಇದ್ದು, ಕೊರೊನಾ ಬಂದಾಗ ಸ್ಪ್ರೇ ಮಾಡಿಸಿದ್ದು ಬಿಟ್ಟರೆ ಈಗ ಬಳಸುತ್ತಿಲ್ಲ. ಸ್ಲಂ ಪ್ರದೇಶಗಳು ಹಾಗೂ ಚರಂಡಿಗಳಲ್ಲಿ ಸೊಳ್ಳೆ ನಿಯಂತ್ರಣ ಮಾಡುವ ಇವುಗಳನ್ನು ಹಾಗೆಯೇ ಇಡಲಾಗಿದೆ. ಕೇಳಿದರೆ ಕೆಮಿಕಲ್ ಇಲ್ಲ ಎಂಬ ಉಡಾಫೆ ಉತ್ತರ ಸಿಗುತ್ತಿದೆ. ಟೆಂಡರ್ ಆಗಿಲ್ಲ, ಎರಡು ಮಾತ್ರ ಬಳಕೆ ಮಾಡಲಾಗುತ್ತಿದೆ, ಇನ್ನೆರಡನ್ನು ಉಪಯೋಗಿಸುತ್ತಿಲ್ಲ ಎಂದು ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕ ಜಿ. ಎಸ್. ಮಂಜುನಾಥ್ ಗಡಿಗುಡಾಳ್ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಾವಣಗೆರೆ | ಕರ್ನಾಟಕದ ಪಪಥಮ ರೋಲ್‌ಬಾಲ್ ಆಟದ ತರಬೇತುದಾರರಾಗಿ ಪೃಥ್ವಿಕಾಂತ್‌ ಎಸ್. ಕೊಟಗಿ ಆಯ್ಕೆ

Published

on

ಸುದ್ದಿದಿನ,ದಾವಣಗೆರೆ : ರೋಲ‌ರ್ ಸ್ಟೇಟಿಂಗ್ ಸೆಂಟರ್ ತರಬೇತುದಾರರಾದ ಪೃಥ್ವಿಕಾಂತ್’ ಎನ್.ಕೆ. ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ರೋಲ್ ಬಾಲ್ ಆಟದ ಕರ್ನಾಟಕದಿಂದ ಪ್ರಪ್ರಥಮವಾಗಿ ವೈಸ್ ಕ್ಯಾಪ್ಟನ್ ಆಗಿ ಆಯ್ಕೆಗೊಂಡಿರುತ್ತಾರೆ.

2005ರಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ ರೋಲ್‌ಬಾಲ್ ಆಟದ ಕೋಚ್ ಆಗಿದ್ದರು. 2022ರ ಮೇ ಮತ್ತು ಜೂನ್ ತಿಂಗಳಿನಲ್ಲಿ 6 ವಾರಗಳ ಕಾಲ ನಡೆದ ರೋಲ್ ಬಾಲ್ ಆಟದ ತರಬೇತಿಯಲ್ಲಿ ಸ್ಪರ್ಧಿಸಿದ್ದು, ಇವರು ಎನ್‌ಐಎಸ್‌ ಎಸ್‌ಐ (NIS, SAI) ಪಟಿಯಾಲ ಈ (ಪಂಜಾಬ್)ದಿಂದ ಅಧಿಕೃತವಾಗಿ ಪ್ರಪ್ರಥಮ ಕೋಚ್‌ ಆಗಿ ನೇಮಕಗೊಂಡಿರುತ್ತಾರೆ. ಇವರ ಅತೀ ದೊಡ್ಡ ಸಾಧನೆಯಾಗಿದ್ದು ದಾವಣಗೆರೆ ನಗರಕ್ಕೆ ಕೀರ್ತಿತಂದಿದ್ದಾರೆ.

ಇವರು ಎನ್‌ ಐಐಟಿಯ ಸಾಘವೇರ್ ತರಬೇತುದಾರರೂ ಕೂಡ = ಆಗಿರುತ್ತಾರೆ. ಇವರಿಗೆ ತಂದೆ ನೀಲಕಾಂತ್, ತಾಯಿ ಶೈಲ ನೀಲಕಾಂತ್ ಸೇರಿದಂತೆ ಸ್ನೇಹಿತರು, ನಗರದ ಹಿರಿಯರು ಅಭಿನಂದಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಪಂ.ಪುಟ್ಟರಾಜ ಸಾಹಿತ್ಯ ಪುರಸ್ಕಾರಕ್ಕೆ ಪುಸ್ತಕ ಆಹ್ವಾನ

Published

on

ಸುದ್ದಿದಿನ ಡೆಸ್ಕ್ : ಡಾ. ಪಂ. ಪುಟ್ಟರಾಜ ಸೇವಾ ಸಮಿತಿಯು ಪುಸ್ತಕ ಪ್ರಶಸ್ತಿಗಾಗಿ 2021-22 ಸಾಲಿನಲ್ಲಿ ಪ್ರಕಟವಾದ, ಕನ್ನಡ, ಹಿಂದಿ ಮತ್ತು ಸಂಸ್ಕೃತ ಭಾಷೆಯ ಸಾಹಿತ್ಯದ ಎಲ್ಲಾ ಪ್ರಕಾರಗಳ ಕೃತಿಗಳನ್ನು ಆಹ್ವಾನಿಸಲಾಗಿದೆ.

ಡಾ. ಪಂ. ಪುಟ್ಟರಾಜ ಸೇವಾ ಸಮಿತಿಯು, ‘ತ್ರಿಭಾಷಾ ಕವಿ’ ಗುರು ಪುಟ್ಟರಾಜರ ಸಾಹಿತ್ಯ ಸೇವೆಯನ್ನು ಸ್ಮರಿಸಿಕೊಳ್ಳುವ ಘನ ಉದ್ದೇಶದಿಂದ, ಕಳೆದ 22 ವರ್ಷಗಳಿಂದಲೂ ‘ಪಂ. ಪುಟ್ಟರಾಜ ಸಾಹಿತ್ಯ ಪುರಸ್ಕಾರ ರಾಜ್ಯ ಪ್ರಶಸ್ತಿ’ ನೀಡುತ್ತಾ ಬಂದಿದೆ. ಅದರಂತೆ ಈ ವರ್ಷವೂ ಕೂಡಾ ಈ ಆದರೇ, ಈ ಪ್ರಶಸ್ತಿಗೆ ಕನ್ನಡದ ಕೃತಿಗಳನ್ನು ಮಾತ್ರ ಆಯ್ಕೆ ಮಾಡಲಾಗುವುದು ಹಿಂದಿ ಮತ್ತು ಸಂಸ್ಕೃತ ಕೃತಿಗಳಲ್ಲಿ ಉತ್ತಮ ಕೃತಿ ಆಯ್ಕೆಮಾಡಿ ಉತ್ತಮ ಕೃತಿ ಕರ್ತರಿಗೆ ಪುಟ್ಟರಾಜ ಸಾಹಿತ್ಯ ಸಮ್ಮಾನ ನೀಡಲಾಗುವದು.

ಪಂ. ಪುಟ್ಟರಾಜ ಸಾಹಿತ್ಯ ಪುರಸ್ಕಾರ ‘ರಾಜ್ಯ ಪ್ರಶಸ್ತಿಯು 5 ಸಾವಿರ ರೂ ನಗದು, ಸ್ಮರಣಿಕೆ ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ. ಪ್ರಶಸ್ತಿಗೆ ಆಯ್ಕೆಯಾದ ಕೃತಿ ಕರ್ತರಿಗೆ ಡಾ. ಪಂ. ಪುಟ್ಟರಾಜ ಸಾಹಿತ್ಯೋತ್ಸವದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸೇವಾ ಸಮಿತಿಯ ರಾಜ್ಯ ಸಂಚಾಲಕಿ ಎಂ.ಜಿ.ಶಶಿಕಲಾ ಮೂರ್ತಿ ನಲ್ಕುದುರೆ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಪ್ರಶಸ್ತಿಗೆ ಸಮೀಪದ ಪ್ರತಿಸ್ಪರ್ಧಿಯಾದ ವಿವಿದ ಪ್ರಕಾರದ 10 ಕೃತಿಗಳನ್ನು ಗುರುತಿಸಿ ವರ್ಷದ ಶ್ರೇಷ್ಠ ಕೃತಿ ಸಮ್ಮಾನ ನೀಡಿ ಗೌರವಿಸಲಾಗುವುದು. ಆಸಕ್ತ ಲೇಖಕರು ತಮ್ಮ 3 ಕೃತಿಗಳೊಂದಿಗೆ 27 ಜುಲೈ 2022 ರ ಒಳಗಾಗಿ ತಲುಪುವಂತೆ ಕಳಿಸಿಕೊಡಲು ಕೋರಲಾಗಿದೆ.

ಪುಸ್ತಕಗಳನ್ನು ಕಳಿಸಿಕೊಡುವ ವಿಳಾಸ

ಸಿ. ಕೆ. ಹಿರೇಮಠ ಪಂ. ಪುಟ್ಟರಾಜ ಸಾಹಿತ್ಯ ಪುರಸ್ಕಾರ ಪ್ರಶಸ್ತಿ ಆಯ್ಕೆ ಸಮಿತಿ ‘ಶ್ರೀಗಿರಿ ಬಿಲ್ಡಿಂಗ’ ಪಂಚಾಕ್ಷರಿ ನಗರ ೪ ನೆಯ ಅಡ್ಡರಸ್ತೆ ಗದಗ-582101

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending