ದಿನದ ಸುದ್ದಿ
ಬುದ್ಧರ ಬೋಧನೆಯ ಮಧ್ಯಮ ಮಾರ್ಗ

- ರಘೋತ್ತಮ ಹೊ.ಬ
ಭಗವಾನ್ ಬುದ್ಧನ ಬೋಧನೆಯ ಪ್ರಮುಖ ಅಂಶವೇನು? ಹೀಗೊಂದು ಪ್ರಶ್ನೆ ಇಟ್ಟರೆ ಎಲ್ಲರೂ ಕಣ್ಣುಮುಚ್ಚಿಕೊಂಡು ಹೇಳುವ ಉತ್ತರ ‘ಆಸೆಯೇ ದುಃಖಕ್ಕೆ ಮೂಲ’ ಎಂದು. ಇದು ಎಷ್ಟು ಸರಿ? ಬುದ್ಧನ ಬೋಧನೆ ಇಷ್ಟೊಂದು ಸರಳವೇ ಅಥವ ಆಸೆಯೇ ಬೇಡವೆನ್ನುವಷ್ಟು ಅತಿಯದ್ದೆ? ಖಂಡಿತ, ಇದೊಂದು ಬುದ್ಧನ ಬೋಧನೆಗೆ ಎಸಗುತ್ತಿರುವ ಅಪಪ್ರಚಾರ. ಹಾಗಿದ್ದರೆ ವಾಸ್ತವ? ಬುದ್ಧ ಹೇಳಿದ್ದು “ಆಸೆಯೇ ಬೇಡ ಎನ್ನುವ ಅತಿಯೂ ಅಲ್ಲದ, ಆಸೆಯೇ ತುಂಬಿರಬೇಕು ಎಂಬ ಆ ಅತಿಯೂ ಅಲ್ಲದ ಎರಡರ ನಡುವಿನ ಮಧ್ಯಮ ರೀತಿ”ಯದ್ದು. ಅದೇ ಮಧ್ಯಮ ಮಾರ್ಗ. ಪಾಳಿ ಬಾಷೆಯಲ್ಲಿ ಹೇಳುವುದಾದರೆ ‘ಮಜ್ಜಿಮ ಪತಿಪಾದ’.
ಮಧ್ಯಮ ಮಾರ್ಗ, ಹಾಗಿದ್ದರೆ ಇದು ಏನು? ಇದಕ್ಕೆ ಬುದ್ಧ ಕೊಡುವ ಉದಾಹರಣೆ “ಕೆಲವರು ಹೇಳುತ್ತಾರೆ ನಾಳೆಯೇ ನಾವು ಸಾಯುವುದರಿಂದ ಇಂದೇ ಕುಡಿದು ತಿಂದು ಮಜಾ ಮಾಡಿಬಿಡೋಣ. ಮತ್ತೂ ಕೆಲವರು ಹೇಳುತ್ತಾರೆ ಎಲ್ಲ ಆಸೆಗಳನ್ನು ಬಲಿಕೊಡೋಣ. ಯಾಕೆಂದರೆ ಅವು ಮರುಜನ್ಮ ತರುತ್ತವೆ”. ಬುದ್ಧ ಇವೆರಡನ್ನು ತಿರಸ್ಕರಿಸಿದ.
ಇದಕ್ಕೆ ಆತ ನೀಡಿದ ಕಾರಣ ಇವೆರಡೂ ಮಾನವ ಪರಿಪೂರ್ಣತೆ ಪಡೆಯುವುದಕ್ಕೆ ತೊಡಕಾಗುತ್ತವೆ ಎಂದು. ಅಂದರೆ “ಕುಡಿದು ತಿಂದು ಸಾಯುವ ಅತಿಯೂ ತಪ್ಪು, ಹಾಗೆಯೇ ಎಲ್ಲವನ್ನು ತ್ಯಜಿಸುವ ಆ ಅತಿಯೂ ತಪ್ಪು”. ಹಾಗಿದ್ದರೆ ಇವೆರಡರ ನಡುವಿನ ಮಧ್ಯಮದ್ದು ಎಂದರೆ? ಬುದ್ಧ ಹೇಳಿದ್ದು “ನಿನ್ನ ದೇಹದ ಅಗತ್ಯಕ್ಕೆ ತಕ್ಕಂತೆ ಕುಡಿ, ತಿನ್ನು. ಹಾಗೆಯೇ ಆಸೆಯನ್ನು ತ್ಯಜಿಸಬೇಡ. ಬದಲಿಗೆ ನಿನ್ನನ್ನು ನೀನು ನಿಯಂತ್ರಣದಲ್ಲಿಟ್ಟುಕೋ”.
ಅಂದಹಾಗೆ ಬುದ್ಧನ ಈ ಮಧ್ಯಮ ಮಾರ್ಗ ಇಷ್ಟೊಂದು ಸರಳವೇ? ಅಥವಾ ಅದರಲ್ಲಿ ಬೇರೇನು ಇಲ್ಲವೆ? ನಿಜ ಹೇಳಬೇಕೆಂದರೆ ಮಧ್ಯಮ ಮಾರ್ಗ ಎನ್ನುತ್ತಲೇ ಬುದ್ಧ ಮಾನವ ಪರಿಪೂರ್ಣತೆಯ ಮಾರ್ಗವನ್ನು ಪರಿಚಯಿಸುತ್ತಾ ಹೋಗುತ್ತಾನೆ. ಈ ಹಿನ್ನೆಲೆಯಲ್ಲಿ ಆತ “ತನ್ನ ಧರ್ಮದ ಕೇಂದ್ರ ಬಿಂದು ಮನುಷ್ಯ ಮತ್ತು ಪ್ರಾಪಂಚಿಕ ಜೀವನದಲ್ಲಿ ಮನುಷ್ಯ-ಮನುಷ್ಯರ ನಡುವಿನ ಸಂಬಂಧ” ಎಂದು ಸ್ಪಷ್ಟಪಡಿಸುತ್ತಾನೆ. ಹಾಗೆ ಹೇಳುವಾಗ ಬುದ್ಧ ಇದರ ನಡುವೆ ದೇವರುದಿಂಡಿರನ್ನು ತರುವುದಿಲ್ಲ ಎಂಬುದಿಲ್ಲಿ ಗಮನಾರ್ಹ.
ಧಮ್ಮದ ಕೇಂದ್ರ ಮನುಷ್ಯ ಯಾಕೆ? ಬುದ್ಧ ಹೇಳುವುದು “ಮನುಷ್ಯರು ದುಃಖ, ನೋವು ಮತ್ತು ಬಡತನದಲ್ಲಿ ಬದುಕುತ್ತಿದ್ದಾರೆ. ಈ ಪ್ರಪಂಚವು ನೋವಿನ ಸಾಗರದಲ್ಲಿ ಮುಳುಗಿದೆ ಮತ್ತು ಇಂತಹ ನೋವಿನಿಂದ ಪ್ರಪಂಚವನ್ನು ಹೇಗೆ ಮುಕ್ತಗೊಳಿಸಬೇಕು ಎಂಬುದೇ ನನ್ನ ಧಮ್ಮದ ಉದ್ದೇಶ. ಇದನ್ನು ಬಿಟ್ಟು ಬೇರೆ ಏನೂ ಇಲ್ಲ”. ದುಃಖ, ನೋವು, ಬಡತನದಿಂದ ಮನುಷ್ಯ ಮುಕ್ತಿ ಹೊಂದಿದಾಗ ಅಲ್ಲಿ ನೆಲೆಗೊಳ್ಳುವುದು ಸಂತಸ, ಸಂಭ್ರಮ, ಶ್ರೀಮಂತಿಕೆ ಎಂಬುದು ಕೂಡ ಇಲ್ಲಿ ಗಮನಿಸಬೇಕಾದ ಅಂಶ. ಅಂದರೆ ಮಾನವನ ನೆಮ್ಮದಿಯೇ ಬುದ್ಧನ ಧ್ಯೇಯ ಎಂಬುದು ಸ್ಪಷ್ಟ.
ಹಾಗಿದ್ದರೆ ಆ ನೆಮ್ಮದಿಯನ್ನು ಪಡೆಯಲು ಕೆಲವನ್ನಾದರೂ ತತ್ವಗಳನ್ನು ಮನುಷ್ಯರು ಆಚರಿಸಲೇಬೇಕಾಗುತ್ತದಲ್ಲವೆ? ಬುದ್ಧ ಹೇಳಿದ್ದು ಅದನ್ನೆ. ಪಂಚಶೀಲ ಎಂಬ ಆ ತತ್ವವನ್ನು. ಅದರಲ್ಲಿ ಮೊದಲನೆ ತತ್ವ ಹೇಳುವುದು “ಕೊಲೆ ಮಾಡಬೇಡ, ಯಾರನ್ನೂ ಗಾಯಗೊಳಿಸಬೇಡ”, ಎರಡನೆಯದು “ಬೇರೆಯವರಿಗೆ ಸೇರಿದ್ದನ್ನು ವಶಪಡಿಸಿಕೊಳ್ಳಬೇಡ ಅಥವಾ ಕಳ್ಳತನ ಮಾಡಬೇಡ’, ಮೂರನೆಯದು ‘ಅಸತ್ಯವನ್ನು ನುಡಿಯಬೇಡ’, ನಾಲ್ಕನೆಯದು ‘ಅತಿಯಾಸೆ ಅಥವಾ ಕಾಮಾತುರತೆಗೆ ಒಳಗಾಗಬೇಡ’ ಮತ್ತು ಐದನೆಯದು ‘ಮದ್ಯಪಾನಗಳಿಗೆ ದಾಸನಾಗಬೇಡ’.
ಬುದ್ಧರು ಈ ಐದು ತತ್ವಗಳನ್ನು ಮನುಷ್ಯನೊಬ್ಬ ತಾನು ಏನು ಮಾಡುತ್ತಿರುವೆನು ಎಂಬುದನ್ನು ನಿರ್ಧರಿಸಿಕೊಳ್ಳಲು ನಿರ್ದಿಷ್ಟ ಮಾದರಿಯಾಗಿ ಬಳಸಬೇಕು ಎಂದು ಸಲಹೆ ನೀಡುತ್ತಾರೆ. ಈ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ಎಲ್ಲವನ್ನು ಕಳೆದುಕೊಂಡಿದ್ದರೆ ಆಗ ಆತ ಮೇಲಿನ ಐದು ಶೀಲಗಳನ್ನು ಮಾದರಿಯಾಗಿಟ್ಟುಕೊಂಡು ತನ್ನನ್ನು ತಾನು ಗಮನಿಸಕೊಳ್ಳಬೇಕಾಗುತ್ತದೆ. ಈ ಐದು ಶೀಲಗಳನ್ನು ಅಥವ ತತ್ವಗಳನ್ನು ಆತ ಪಾಲಿಸುತ್ತಿಲ್ಲವೆಂದರೆ ಆಗ ಆತ ತನನ್ನು ತಾನು ಕಳೆದುಕೊಳ್ಳುತ್ತಿದ್ದಾನೆ ಎಂದೂ… ಇದನ್ನು ಗಮನಿಸಿ ಆತ ಪಾಲಿಸಲು ಪ್ರಾರಂಭಿಸಿದರೆ ಆಗ ಆತ ತನ್ನನ್ನು ತಾನು ನಿಯಂತ್ರಣದಲ್ಲಿಟ್ಟುಕೊಳ್ಳುತ್ತಿದ್ದಾನೆ ಎಂದರ್ಥ. ಅಂದಹಾಗೆ ಆತ ಹೀಗೆ ತನ್ನನ್ನು ತಾನು ನಿಯಂತ್ರಣದಲ್ಲಿಟ್ಟುಕೊಂಡರೆ ಆಗ ಆತ ಬುದ್ಧನ ಮಧ್ಯಮಾರ್ಗದಲ್ಲಿದ್ದಾನೆ ಅಥವ ಬುದ್ಧನನ್ನು ಅನುಸರಿಸುತ್ತಿದ್ದಾನೆ ಎಂದೇ ಅರ್ಥ.
ಮುಂದುವರಿದು ತನ್ನ ಈ ಮಧ್ಯಮಮಾರ್ಗಕ್ಕೆ ಪೂರಕವಾಗಿ ಬುದ್ಧ ಮತ್ತೊಂದು ಮಾರ್ಗವನ್ನು ಬೋಧಿಸುತ್ತಾರೆ. ಅದೇ ಅಷ್ಠಾಂಗ ಮಾರ್ಗ ಅಥವ ಎಂಟು ಶೇಷ್ಠ ಗುಣಗಳ ಮಾರ್ಗ. ಅವುಗಳೆಂದರೆ,
- ಸರಿಯಾದ ದೃಷ್ಟಿ: ಅಂದರೆ ಅಜ್ಞಾನದ ನಾಶವೇ ಸರಿಯಾದ ದೃಷ್ಟಿ. ಇದಕ್ಕೆ ವಿರುದ್ಧವಾದದ್ದು ಮಿಥ್ಯಾ ದೃಷ್ಟಿ.
- ಸರಿಯಾದ ಸಂಕಲ್ಪ: ಅಂದರೆ ಆಸೆ ಆಕಾಂಕ್ಷೆಗಳು ಶ್ರೇಷ್ಠ ಮಟ್ಟದ್ದಾಗಿರಬೇಕು, ಕೀಳು ದರ್ಜೆಯದ್ದಾಗಿರಬಾರದು.
- ಸರಿಯಾದ ಮಾತು: ಅಂದರೆ ನಾವಾಡುವ ಮಾತು ಬೇರೆಯವರ ಮನಸ್ಸನ್ನು ನೋಯಿಸದಂತಿರಬಾರದು.
- ಸರಿಯಾದ ವರ್ತನೆ: ನಮ್ಮ ವರ್ತನೆ ಬೇರೆಯವರ ಭಾವನೆಗಳನ್ನು ಗೌರವಿಸುವಂತಿರಬೇಕು
- ಸರಿಯಾದ ಸಂಪಾದನೆಯ ಮಾರ್ಗ: ವ್ಯಕ್ತಿಯೊಬ್ಬ ಅನ್ಯಾಯದ, ಬೇರೆಯವರಿಗೆ ನೋವು ತರುವ ಸಂಪಾದನೆಯ ಮಾರ್ಗವನ್ನು ಅನುಸರಿಸಬಾರದು.
- ಸರಿಯಾದ ಪ್ರಯತ್ನ: ಮನಸ್ಸಿನ ಅಜ್ಞಾನವನ್ನು ನಿರ್ಮೂಲನೆಗೊಳಿಸಿಕೊಳ್ಳುವ ಪ್ರಯತ್ನ.
- ಸರಿಯಾದ ಜಾಗ್ರತೆ: ಕೆಡುಕಿನ ವಿರುದ್ಧ ಮನಸ್ಸು ಸದಾ ಎಚ್ಚರದಿಂದಿರುವುದು.
- ಸರಿಯಾದ ಏಕಾಗ್ರತೆ: ಧನಾತ್ಮಕ ಧ್ಯಾನಸ್ಥ ಮನಸ್ಥಿತಿ
ಈ ಹಿನ್ನೆಲೆಯಲ್ಲಿ ಮನುಷ್ಯನ ಶ್ರೇಯಸ್ಸೇ, ಆತ ಉತ್ತಮ ಬದುಕನ್ನು ಹೊಂದುವಂತಾಗುವುದೇ ಬುದ್ಧನ ಬೋಧನೆಯ ಈ ಅಷ್ಟಾಂಗ ಮಾರ್ಗಗಳ, ಪಂಚಶೀಲಗಳ, ಒಟ್ಟಾರೆ ಮಧ್ಯಮ ಮಾರ್ಗದ ತಿರುಳು. ಈ ತಿರುಳನ್ನು ಅರ್ಥಮಾಡಿಕೊಂಡರೆ ಬುದ್ಧ ಅರ್ಥವಾಗುತ್ತಾನೆ. ಹಾಗೆಯೇ ಜಗತ್ತು ಕೂಡ ಅರ್ಥವಾಗುತ್ತದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ನಟ ಮನದೀಪ್ ರಾಯ್ ನಿಧನ

ಸುದ್ದಿದಿನ ಡೆಸ್ಕ್ : ಹಿರಿಯ ಚಿತ್ರನಟ ಮನದೀಪ್ ರಾಯ್ (74 ವರ್ಷ) ಇಂದು ಬೆಳಗಿನ ಜಾವ ಅಗಲಿದ್ದಾರೆ.
ಕೆಲ ದಿನಗಳ ಹಿಂದೆ ಹೃದಯಾಘಾತಕ್ಕೀಡಾಗಿದ್ದ ಅವರು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಮನದೀಪ್ ರಾಯ್ ಹವ್ಯಾಸಿ ರಂಗಭೂಮಿ ಹಿನ್ನೆಲೆಯ ಕಲಾವಿದ. ನಟ – ನಿರ್ದೇಶಕ ಶಂಕರನಾಗ್ ಅವರ ಆತ್ಮೀಯ ಒಡನಾಡಿ. ಪೋಷಕ ಪಾತ್ರ, ಹಾಸ್ಯ ನಟರಾಗಿ 500ಕ್ಕೂ ಹೆಚ್ಚು ಸಿನಿಮಾಗಳು ಹಾಗೂ ಕಿರುತೆರೆ ಸರಣಿಗಳಲ್ಲಿ ಅಭಿನಯಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕರ್ನಾಟಕದಲ್ಲಿ ಈ ವರ್ಷ ಜನಪರ ರಾಜ್ಯ ಬಜೆಟ್ ಮಂಡನೆ ; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಸುದ್ದಿದಿನ, ಹಾವೇರಿ : ಕರ್ನಾಟಕದಲ್ಲಿ ಮುಂದಿನ ತಿಂಗಳು ಮಂಡಿಸಲಾಗುತ್ತಿರುವ ಈ ವರ್ಷದ ರಾಜ್ಯ ಬಜೆಟ್ ರೈತರು, ದೀನ ದಲಿತರು, ಯುವಕರು, ಮಹಿಳೆಯರು, ದುಡಿಯುವ ವರ್ಗ ಮತ್ತು ಜನಪರವಾಗಿರುತ್ತದೆ ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹಾವೇರಿ ಜಿಲ್ಲೆ ಶಿಗ್ಗಾಂವ್ನಲ್ಲಿ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ದುಡಿಮೆಗೆ ಯೋಗ್ಯ ಬೆಲೆ ಸಿಗುವ ರೀತಿಯಲ್ಲಿ ನಮ್ಮ ಕಾರ್ಯಕ್ರಮಗಳು ಇರುತ್ತವೆ ಎಂದರು.
ಕರ್ನಾಟಕ ರಾಜ್ಯದ ಆರ್ಥಿಕ ಅಭಿವೃದ್ಧಿಯಲ್ಲಿ ನಾವು ವೇಗವನ್ನು ಕಂಡಿದ್ದೇವೆ. ಕಳೆದ ವರ್ಷ ನಾನು ಅಧಿಕಾರ ವಹಿಸಿಕೊಂಡಾಗ 5 ಸಾವಿರ ಕೋಟಿ ರೂಪಾಯಿ ರಾಜ್ಯದ ಬೊಕ್ಕಸಕ್ಕೆ ನಮ್ಮ ನಿರ್ಧಿಷ್ಟ ಗುರಿಗೆ ಕೊರತೆಯಿತ್ತು. ಅದನ್ನು ನಾವು 5 ಸಾವಿರ ಕೋಟಿ ತುಂಬುವುದಲ್ಲದೇ, 13 ಸಾವಿರ ಕೋಟಿ ಅಧಿಕವಾಗಿ ಸಂಗ್ರಹ ಮಾಡಿದ್ದೇವೆ. ಈ ವರ್ಷವೂ ಕೂಡ ನಮ್ಮ ಹಣಕಾಸಿನ ಸಂಗ್ರಹ ಉತ್ತಮವಾಗಿದೆ ಎಂದು ಕರ್ನಾಟಕದ ಮುಖ್ಯಮಂತ್ರಿ ಹೇಳಿದರು.
ಕೋವಿಡ್ ನಂತರದಲ್ಲಿ ಆರ್ಥಿಕ ಸುಧಾರಣೆ ಆಗುತ್ತಿರುವ ಸಂದರ್ಭದಲ್ಲಿ ಕೆಳಹಂತದ ಜನಸಮುದಾಯಕ್ಕೆ ಇನ್ನಷ್ಟು ಸಹಾಯ ಮಾಡಿ, ಅವರನ್ನು ಕೂಡ ಮುಖ್ಯ ವಾಹಿನಿಗೆ ಬರಬೇಕು ಎನ್ನುವ ನಿಟ್ಟಿನಲ್ಲಿ ನಾವು ಕಾರ್ಯಕ್ರಮ ರೂಪಿಸುತ್ತಿದ್ದೇವೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಸಂಸತ್ತಿನ ಬಜೆಟ್ ಅಧಿವೇಶನದ ಹಿನ್ನೆಲೆ ; ಇದೇ 30ರಂದು ಸರ್ವಪಕ್ಷಗಳ ಸಭೆ

ಸುದ್ದಿದಿನ ಡೆಸ್ಕ್ : ಸಂಸತ್ತಿನ ಮುಂಬರುವ ಬಜೆಟ್ ಅಧಿವೇಶನದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇದೇ 30ರಂದು ಸರ್ವಪಕ್ಷಗಳ ಸಭೆಯನ್ನು ಕರೆದಿದೆ. ಸಂಸತ್ ಭವನದ ಸಂಕೀರ್ಣದಲ್ಲಿ ಸೋಮವಾರ ಮಧ್ಯಾಹ್ನ 12 ಗಂಟೆಗೆ ಸಭೆ ನಡೆಯಲಿದೆ.
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ, ಕೇಂದ್ರ ಸಚಿವರು ಮತ್ತು ಸಂಸತ್ತಿನ ಎರಡೂ ಸದನಗಳನ್ನು ಪ್ರತಿನಿಧಿಸುವ ಸದನ ನಾಯಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಸಭೆಯಲ್ಲಿ ಸರ್ಕಾರ ಸಂಸತ್ತಿನ ಉಭಯ ಸದನಗಳ ಸುಗಮ ಕಲಾಪಕ್ಕೆ ಎಲ್ಲ ರಾಜಕೀಯ ಪಕ್ಷಗಳ ಸಹಕಾರವನ್ನು ಕೋರಲಿದೆ. ಸಂಸತ್ತಿನ ಬಜೆಟ್ ಅಧಿವೇಶನ ಇದೇ 31ರಿಂದ ಆರಂಭವಾಗಲಿದೆ. ಮೊದಲ ದಿನ ಬೆಳಿಗ್ಗೆ 11 ಗಂಟೆಗೆ ಸೆಂಟ್ರಲ್ ಹಾಲ್ ನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡುವರು.
ಅದೇ ದಿನವೇ ಆರ್ಥಿಕ ಸಮೀಕ್ಷೆಯನ್ನೂ ಸಹ ಮಂಡಿಸಲಾಗುವುದು. ಫೆಬ್ರವರಿ 1ರಂದು 2023-24ನೇ ಸಾಲಿನ ಕೇಂದ್ರ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆ ಮಾಡಲಿದ್ದಾರೆ.
ಬಜೆಟ್ ಅಧಿವೇಶನ ಏಪ್ರಿಲ್ 6ವರೆಗೆ ನಡೆಯಲಿದ್ದು, ಸುಮಾರು 66 ದಿನಗಳಲ್ಲಿ 27 ಕಲಾಪಗಳು ನಡೆಯಲಿದೆ. ಮೊದಲ ಅವಧಿಯಲ್ಲಿ ಅಧಿವೇಶನ ಫೆಬ್ರವರಿ 13ರವರೆಗೆ ನಡೆಯಲಿದೆ. ಫೆಬ್ರವರಿ 14ರಿಂದ ಮಾರ್ಚ್ 12ರವರೆಗೆ ಅಧಿವೇಶನಕ್ಕೆ ಬಿಡುವು ಇರಲಿದೆ ಆನಂತರ ಮಾರ್ಚ್ 13ರಿಂದ ಆರಂಭವಾಗುವ ಅಧಿವೇಶನ ಏಪ್ರಿಲ್ 6ಕ್ಕೆ ಕೊನೆಗೊಳ್ಳಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980336243
