ದಿನದ ಸುದ್ದಿ
ಕೋವಿಡ್ ನಂತರದ ಭಾರತ

- ಕೇಸರಿ ಹರವೂ
‘ಕೋರೋನಾದೊಂದಿಗೆ ಬದುಕುವುದನ್ನು ಕಲಿಯಿರಿ’ ಎನ್ನುವ ಸಂದೇಶ ನಮ್ಮ ಪ್ರಭುತ್ವದಿಂದ ರವಾನೆಯಾಗಿದೆ. ಇದರರ್ಥ ಕೋರೋನಾ ನಮ್ಮಲ್ಲಿ ಇನ್ನೂ ಒಂದಷ್ಟು ಕಾಲ ಕಾಡುತ್ತಲೇ ಇರುತ್ತದೆ ಎಂದು. ಇದು ಜಾಗತಿಕವಾಗಿಯೂ ನಿಜ. ಹಾಗಾಗಿ ನಮ್ಮಲ್ಲೂ ನಿಜ. ಆದರೆ ಅನೇಕ ರಾಷ್ಟ್ರಗಳು, ವಿಜ್ಞಾನಿಗಳು ಇದನ್ನು ಹೇಳಿ ಹಲವು ವಾರಗಳೇ ಆದವು. ನಮ್ಮ ದೇಶ ಈಗ ಹೇಳುವುದಕ್ಕೆ ಕೆಲವು ಕಾರಣಗಳಿವೆ.
ಈ ಸಂದೇಶ ನಾವು ಕೋರೋನಾವನ್ನು ಪೂರ್ತಿಯಾಗಿ ಹಿಮ್ಮೆಟ್ಟಿಸುವಲ್ಲಿ, ಸೋಂಕು ತಡೆಯುವಲ್ಲಿ ವಿಫಲರಾಗಿದ್ದೇವೆ ಎಂದೂ ಹೇಳುತ್ತದೆ. ನಮ್ಮಲ್ಲಿ ಸೋಂಕು ತೀರಾ ಕಡಿಮೆ ಪ್ರಮಾಣದಲ್ಲಿ ಇದ್ದಾಗಲೇ ಎಂಟು ವಾರಗಳ ಕಾಲ ಲಾಕ್ಡೌನ್ ಹೇರಿ ಕಾಲಹರಣ ಮಾಡಲಾಯಿತು. ಈಗ ಸೋಂಕು exponential ಆಗಿ ಹರಡುವುದಕ್ಕೆ ಆರಂಭವಾಗಿದೆ.
ನಿಜಕ್ಕೂ ಲಾಕ್ಡೌನ್ ಅವಶ್ಯ ಎಂದು ವೈಜ್ಞಾನಿಕವಾಗಿ ಎನಿಸಿದ್ದರೆ ಅದನ್ನು ಈಗ ಜಾರಿಗೊಳಿಸಬೇಕಿತ್ತು. ಈಗಲೂ ಅದು ದೇಶದಾದ್ಯಂತ ಬೇಕಿಲ್ಲ ಎಂದೇ ಹಲವು ತಜ್ಞರು ಹೇಳುತ್ತಾರೆ. ಆದರೆ ನಾವು ಇನ್ನಷ್ಟು ದಿನ ಆರ್ಥಿಕ ಚಟುವಟಿಕೆಗಳನ್ನು ಸ್ಥಗಿತಗೊಳಿಸುವುದು ಸಾಧ್ಯವೇ ಇಲ್ಲದಂತಾ ಪರಿಸ್ಥಿತಿಯಲ್ಲಿ ಸಮುದಾಯ ಹರಡುವಿಕೆಗೆ ತಯಾರಾಗಿ ಲಾಕ್ಡೌನ್ ಅನ್ನು ಕ್ರಮೇಣ ಸಡಿಲಿಸಲು ಆರಂಭಿಸಿದ್ದೇವೆ.
ಪ್ರಭುತ್ವ ಈಗ ಹೇಳಿರುವ ಈ ಹೇಳಿಕೆ ನಮ್ಮನ್ನು ಈ ಎಂಟು ವಾರಗಳ ಲಾಕ್ಡೌನಿನಲ್ಲಿ ದೇಶದಲ್ಲಿ ನಡೆದ ವಿದ್ಯಮಾನಗಳನ್ನು ಮತ್ತೊಮ್ಮೆ ನೋಡಲು ತೊಡಗಿಸುತ್ತದೆ. ಈ ನೋಟ ನಮ್ಮ ದೇಶ ಇನ್ನುಮುಂದೆ ಹೇಗೆ ಸಾಗುತ್ತದೆ ಎನ್ನುವುದಕ್ಕೆ ಕೆಲವು ಸುಳಿವುಗಳನ್ನೂ ಕೊಡುತ್ತದೆ.
ಲಾಕ್ಡೌನಿನ ಮೂಲ ಉದ್ದೇಶವನ್ನು ಸಾಕಷ್ಟು ವಿಫಲಗೊಳಿಸಿದ್ದರೂ, ಪ್ರಭುತ್ವ ತನ್ನ ಕೆಲವು ಉದ್ದೇಶಗಳನ್ನು ಈಡೇರಿಸಿಕೊಂಡಿದೆ.
ಪೌರತ್ವ ತಿದ್ದುಪಡಿ ಕಾಯ್ದೆಯ ವಿರೋಧೀ ಹೋರಾಟದ ಕಾವನ್ನು ಬಹುತೇಕ ತಣ್ಣಗಾಗಿಸುವಲ್ಲಿ ಅದು ಸಫಲವಾಗಿದೆ. ಹೋರಾಟ ತನ್ನ ಉಚ್ಛ್ರಾಯ ಸ್ಥಿತಿಯಲ್ಲಿದ್ದು, ಜಗತ್ತಿನಾದ್ಯಂತ ಪೌರತ್ವ ತಿದ್ದುಪಡಿಯ ವಿರುದ್ಧ ದನಿಯೆದ್ದಿದ್ದಾಗ, ಆ ಮುಜುಗರದಿಂದ ತಪ್ಪಿಸಿಕೊಳ್ಳಲು ಹೆಣಗುತ್ತಿದ್ದ ಪ್ರಭುತ್ವ ಪ್ರತಿಯೊಬ್ಬರಲ್ಲೂ ಮಹಾಮಾರಿಯ ಸಾಂಕ್ರಾಮಿಕದ ಆತಂಕದ ವಾತಾವರಣವನ್ನು ಹುಟ್ಟಿಹಾಕಿತು. ಲಾಕ್ಡೌನ್ ಒಂದೇ ಪರಿಹಾರ ಎಂದು ಅದನ್ನು ಹೇರಿ, ಪರ ಮತ್ತು ವಿರೋಧಿಗಳೆಲ್ಲರೂ ಸಹಕರಿಸುವಂತೆ ಮಾಡುವಲ್ಲಿ ಅದು ಯಶಸ್ವಿಯಾಯಿತು. ಮತ್ತೊಮ್ಮೆ ದೇಶದಲ್ಲಿ ಆ ಮಟ್ಟಕ್ಕೆ ಕಾವು ಏರಲು ದೊಡ್ಡ ಸಂಕಲ್ಪ ಮತ್ತು ಸಮಯ ಎರಡೂ ಬೇಕು.
ಸೋಂಕು ಹರಡುವಿಕೆಗೆ ಮುಸ್ಲಿಮರೇ ಮುಖ್ಯ ಕಾರಣ ಎಂದು ಜನರ ಮನಸ್ಸಿನಲ್ಲಿ ಯಶಸ್ವಿಯಾಗಿ ಬಿತ್ತಿ ತನ್ನ ಮುಸ್ಲಿಂ ವಿರೋಧೀ ನೀತಿಯನ್ನು ಅದು ಸಮರ್ಥಿಸಿಕೊಂಡಿದೆ. ಇದು ತನ್ನ ದೀರ್ಘಕಾಲದ ನೀತಿಗಳಲ್ಲಿ ಒಂದು. ಕೊರೋನಾ ಇದನ್ನು ಸುಲಭದಲ್ಲಿ ಸಾಧ್ಯವಾಗಿಸಿದ್ದು ಆ ನೀತಿಗೆ ಒದಗಿಬಂದ ದೊಡ್ಡ ಲಾಭ. ಇಂದು ಮಾವಿನ ಫಸಲು ಕೊಳ್ಳುವ ವರ್ತಕರಿಂದ ಹಿಡಿದು, ಬೇರೆಬೇರೇ ಕಸುಬುಗಳಿಗೆ ಹಳ್ಳಿಗಳಿಗೆ ಬರುತ್ತಿದ್ದ ಮುಸ್ಲಿಮರನ್ನು ಜನ ಕಾಣುತ್ತಿರುವ ರೀತಿಯೇ ಬೇರೆಯಾಗಿದೆ. ಸಾಮಾಜಿಕ ಅಂತರದ ಪರಾಕಾಷ್ಟೆ ಇದು.
ಪರಿಷ್ಕೃತ ಕರಡು ಕಾರ್ಮಿಕ ನೀತಿ ಲೋಕಸಭೆಯಲ್ಲಿ ಮಂಡನೆಯಾಗಿತ್ತು. ಬಲಪಂಥೀಯ ಬಿಎಮ್ಮೆಸ್’ನಿಂದ ಹಿಡಿದು ಎಲ್ಲ ಕಾರ್ಮಿಕ ಸಂಘಟನೆಗಳಿಂದ ಈ ನೀತಿಗೆ ದೊಡ್ಡ ವಿರೋಧವಿದ್ದು, ಅದು ಪಾಸ್ ಆಗುವುದು ಅತ್ಯಂತ ಕಠಿಣವಾಗಿತ್ತು. ಲಾಕ್ಡನ್ ಸಡಿಲಗೊಳಿಸುತ್ತಿರುವ ಈ ಸಂದರ್ಭದಲ್ಲಿ ಕಾರ್ಮಿಕರನ್ನು ಹೇಗೆ ನಡೆಸಿಕೊಳ್ಳುತ್ತಿವೆ ದೇಶದ ಮತ್ತು ರಾಜ್ಯಗಳ ಪ್ರಭುತ್ವಗಳು ಎನ್ನುವುದು ನಮ್ಮ ಕಣ್ಣಮುಂದೆಯೇ ಇದೆ.
ಇನ್ನೂ ಮೇಲಾಗಿ, ಆರು ರಾಜ್ಯಗಳು ಕಾರ್ಮಿಕ ಹಕ್ಕುಗಳನ್ನು ಮೂರು ವರ್ಷಗಳ ಕಾಲ ಅಮಾನತಿನಲ್ಲಿಟ್ಟಿವೆ. ಕಾರ್ಮಿಕರ ಎಲ್ಲ ಹಕ್ಕುಗಳನ್ನೂ, ಇದ್ದ ಅಲ್ಪ ಭದ್ರತೆಯನ್ನೂ ಒಂದೇ ಏಟಲ್ಲಿ ತೊಡೆದುಹಾಕುವಂತೆ ಮಾಡಿತು ಈ ಕೊರೋನಾ. ಆರ್ಥಿಕತೆಯ ಚೇತರಿಕೆಗಾಗಿ ಈ ಕ್ರಮ ಅತ್ಯಗತ್ಯ ಎಂದು ಬಿಂಬಿಸುವ ಪ್ರಯತ್ನ ನೇರವಾಗಿ ಕಾಣುತ್ತದೆ.
ಇದು ನಮ್ಮ ಕಾರ್ಪೊರೇಟ್ ಧಣಿಗಳಿಗೆ ಬಹುದೊಡ್ಡ ಕೊಡುಗೆಯಾಗಿ ಬರಲಿದೆ. ಬಹಳ ಹಿಂದಿನಿಂದಲೇ ಕೆಲವು ಅನುಕೂಲಕರ ವಾತಾರಣಗಳನ್ನು ಬಯಸಿದ್ದ ಕಾರ್ಪೋರೇಟುಗಳಿಗೆ ಈಗ ಲೀಲಾಜಾಲವಾಗಿ ತಮ್ಮ ಕಾರ್ಮಿಕ ನೀತಿಗಳನ್ನು ಬದಲಿಸಿಕೊಂಡು ಲಾಭ ಬಡಿಯುವ ಅವಕಾಶ ಒದಗಿ ಬಂದಿದೆ. ಈ ಲಾಭ ನಮ್ಮ ಪರಿಸರ, ಭೂಬಳಕೆ, ಕಾರ್ಮಿಕ ನೀತಿ, ಮಾನವ ಸಂಬಂಧಗಳ ಮೇಲೆ ದೊಡ್ಡ ವ್ಯತಿರಿಕ್ತ ಪರಿಣಾಮ ಬೀರಲಿದೆ. ಜನರ ಅನುಭವದಲ್ಲಿದ್ದ ಅಲ್ಪಸ್ವಲ್ಪ ಸಂಪನ್ಮೂಲಗಳೂ ಕಾರ್ಪೊರೇಟ್ಗಳ ಪಾಲಾಗಲಿದ್ದು, ನಾವು ಕಾರ್ಪೊರೇಟ್ಗಳ ಮುಂದೆ ಇನ್ನಷ್ಟು ಕೈಚಾಚಿ ಬದುಕುವ ಅನಿವಾರ್ಯತೆಯನ್ನು ಸೃಷ್ಟಿಸುತ್ತದೆ.
‘ಕೋರೋನಾ ನಮಗೆ ಪಾಠ ಕಲಿಸಿದೆ. ಜಾಗತೀಕರಣ, ಬಂಡವಾಳಶಾಹೀ ಅರ್ಥವ್ಯವಸ್ಥೆ ಎಲ್ಲಕ್ಕೂ ಉತ್ತರವಲ್ಲ ಎನ್ನುವುದನ್ನು ಜಗತ್ತು ಕಲಿತಿದೆ. ನಮ್ಮ ಜಗತ್ತು ಸಮಾಜಸ್ನೇಹಿಯಾಗಿ, ಪರಿಸರ ಸ್ನೇಹಿಯಾಗಿ ಬದಲಾಗಲಿದೆ’ ಎನ್ನುವ ಆಶಾವಾದ ಕೆಲವರದು. ಆದರೆ, ಕಾರ್ಮಿಕರ ಹಕ್ಕುಗಳನ್ನು ಅಮಾನತಿನಲ್ಲಿಟ್ಟಿರುವ ಕ್ರಮವೊಂದೇ ಸಾಕು ಕೋವಿಡ್ ನಂತರದ ಆರ್ಥಿಕತೆ ಅದಕ್ಕೆ ತದ್ವಿರುದ್ಧವಾಗಿ ತಯಾರಾಗುವುದಕ್ಕೆ. ಕೊರೋನಾದಂಥಾ ಸಾಂಕ್ರಾಮಿಕವನ್ನು ಸಮರ್ಥವಾಗಿ ನಿಭಾಯಿಸಲು ಸರ್ಕಾರಗಳಿಗೆ ಶಕ್ತಿ ಸಾಲುವುದಿಲ್ಲ, ಖಾಸಗೀ ವ್ಯವಸ್ಥೆಯೂ ದೊಡ್ಡದಾಗಿ ಸಜ್ಜುಗೊಳ್ಳಬೇಕು ಎನ್ನುವ ಹೊಸ ವಾದ ಹುಟ್ಟಲಿದೆ.
ಆ ವಾದವನ್ನು ನಮ್ಮ ಪ್ರಭುತ್ವಗಳೂ ಒಪ್ಪಿಕೊಳ್ಳುತ್ತವೆ. ಅದೇ ಕಾರಣಕ್ಕಾಗಿ ಅಲ್ಲದಿದ್ದರೂ ತಮ್ಮ ಅನುಕೂಲಕ್ಕಾಗಿ ಶಕ್ತಿಕೇಂದ್ರಗಳು ಒಪ್ಪುತ್ತವೆ. ಅಲ್ಲಿಂದ ಮುಂದೆ ಖಾಸಗೀ ಶಿಕ್ಷಣ, ಆರೋಗ್ಯ ಸೇವೆ, ಸಂಪರ್ಕ, ಸಾಗಣೆ, ಆಹಾರ ಸರಬರಾಜು ಎಲ್ಲ ಕ್ಷೇತ್ರಗಳಿಗೂ ಇದು ವಿಸ್ತರಿಸುತ್ತದೆ. ಇವೆಲ್ಲವೂ ಇನ್ನಷ್ಟು ವಿಸ್ತರಣೆಯಾಗಲಿವೆ ಮತ್ತು ದುಬಾರಿಯಾಗಲಿವೆ. ಸಾವಿರ ಕಿಮೀ ಗಟ್ಟಲೆ ನಡೆಯುವವರು, ರೈಲಿನ ಕೆಳಗೆ ಸಾಯುವ ಗುಂಪುಗಳು ಸಾಮಾನ್ಯವಾಗಲಿವೆ.
ಇವೆಲ್ಲವನ್ನೂ ಪ್ರಭುತ್ವ ಜನತೆಗೆ ಒಪ್ಪಿಸಿ ಮುನ್ನಡೆಯುತ್ತಿರಬೇಕಾಗುತ್ತದೆ. ಹಾಗಾದರೆ ಏನು ಮಾಡಬೇಕು? ಸರ್ಜಿಕಲ್ ಸ್ಟ್ರೈಕ್, ಪುಲ್ವಾಮಾ, ಮುಂತಾದವು ಈಗ ಸಾಲುವುದಿಲ್ಲ. ದೇಶದ ಗಡಿಗಳನ್ನು ರಕ್ಷಿಸುವ ಜೊತೆಗೆ ಕಳಕೊಂಡ ಆಕ್ರಮಿತ ಪ್ರದೇಶಗಳನ್ನು ಮತ್ತೆ ವಶಮಾಡಿಕೊಳ್ಳಬೇಕು. ದೇಶಭಕ್ತರು ಯಾರೂ ಇದನ್ನು ಬೇಡ ಎನ್ನಲಾರರು. ಬದಲಿಗೆ ಒಕ್ಕೊರಳಿನಿಂದ ಜೈ ಎಂದೇ ಅಂದಾರು.
ಈಗಾಗಲೇ ಗೂಗಲ್ ತನ್ನ ಮ್ಯಾಪಿನಲ್ಲಿ LOC ಅಳಿಸಿಹಾಕಿದೆ. ಅದರ ಹಿಂದಿನ ಒತ್ತಡ ಏನಿರಬಹುದು ಲೆಕ್ಕ ಹಾಕಿ. ಭಾರತೀಯರಾದ ನಮಗೆ ಇದು ಅತ್ಯಂತ ಸ್ವಾಗತಾರ್ಹ ವಿಚಾರ. ನಮ್ಮ ಹವಾಮಾನ ಇಲಾಖೆ POKಯ ಪೂರ್ಣ ಹವಾಮಾನ ವರದಿಯನ್ನು ಕೊಡಲು ಶುರು ಮಾಡಿದೆ. ಯುದ್ಧ ಸಾಮಗ್ರಿಗಳ ಹೊಸ ಒಪ್ಪಂದಗಳು ನಮ್ಮಲ್ಲಿ ಆಗ್ತಿವೆ. ಯುದ್ಧೋನ್ಮಾದವನ್ನು ಉಣಬಡಿಸಲು ಪ್ರಯತ್ನ ನಡೆಯುತ್ತಿದೆಯೇ? ಅಥವಾ ಯುದ್ಧಕ್ಕೇ ತಯಾರಿ ನಡೆಯುತ್ತಿದೆಯೇ? ಯೋಚಿಸಿ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ನಟ ಮನದೀಪ್ ರಾಯ್ ನಿಧನ

ಸುದ್ದಿದಿನ ಡೆಸ್ಕ್ : ಹಿರಿಯ ಚಿತ್ರನಟ ಮನದೀಪ್ ರಾಯ್ (74 ವರ್ಷ) ಇಂದು ಬೆಳಗಿನ ಜಾವ ಅಗಲಿದ್ದಾರೆ.
ಕೆಲ ದಿನಗಳ ಹಿಂದೆ ಹೃದಯಾಘಾತಕ್ಕೀಡಾಗಿದ್ದ ಅವರು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಮನದೀಪ್ ರಾಯ್ ಹವ್ಯಾಸಿ ರಂಗಭೂಮಿ ಹಿನ್ನೆಲೆಯ ಕಲಾವಿದ. ನಟ – ನಿರ್ದೇಶಕ ಶಂಕರನಾಗ್ ಅವರ ಆತ್ಮೀಯ ಒಡನಾಡಿ. ಪೋಷಕ ಪಾತ್ರ, ಹಾಸ್ಯ ನಟರಾಗಿ 500ಕ್ಕೂ ಹೆಚ್ಚು ಸಿನಿಮಾಗಳು ಹಾಗೂ ಕಿರುತೆರೆ ಸರಣಿಗಳಲ್ಲಿ ಅಭಿನಯಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕರ್ನಾಟಕದಲ್ಲಿ ಈ ವರ್ಷ ಜನಪರ ರಾಜ್ಯ ಬಜೆಟ್ ಮಂಡನೆ ; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಸುದ್ದಿದಿನ, ಹಾವೇರಿ : ಕರ್ನಾಟಕದಲ್ಲಿ ಮುಂದಿನ ತಿಂಗಳು ಮಂಡಿಸಲಾಗುತ್ತಿರುವ ಈ ವರ್ಷದ ರಾಜ್ಯ ಬಜೆಟ್ ರೈತರು, ದೀನ ದಲಿತರು, ಯುವಕರು, ಮಹಿಳೆಯರು, ದುಡಿಯುವ ವರ್ಗ ಮತ್ತು ಜನಪರವಾಗಿರುತ್ತದೆ ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹಾವೇರಿ ಜಿಲ್ಲೆ ಶಿಗ್ಗಾಂವ್ನಲ್ಲಿ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ದುಡಿಮೆಗೆ ಯೋಗ್ಯ ಬೆಲೆ ಸಿಗುವ ರೀತಿಯಲ್ಲಿ ನಮ್ಮ ಕಾರ್ಯಕ್ರಮಗಳು ಇರುತ್ತವೆ ಎಂದರು.
ಕರ್ನಾಟಕ ರಾಜ್ಯದ ಆರ್ಥಿಕ ಅಭಿವೃದ್ಧಿಯಲ್ಲಿ ನಾವು ವೇಗವನ್ನು ಕಂಡಿದ್ದೇವೆ. ಕಳೆದ ವರ್ಷ ನಾನು ಅಧಿಕಾರ ವಹಿಸಿಕೊಂಡಾಗ 5 ಸಾವಿರ ಕೋಟಿ ರೂಪಾಯಿ ರಾಜ್ಯದ ಬೊಕ್ಕಸಕ್ಕೆ ನಮ್ಮ ನಿರ್ಧಿಷ್ಟ ಗುರಿಗೆ ಕೊರತೆಯಿತ್ತು. ಅದನ್ನು ನಾವು 5 ಸಾವಿರ ಕೋಟಿ ತುಂಬುವುದಲ್ಲದೇ, 13 ಸಾವಿರ ಕೋಟಿ ಅಧಿಕವಾಗಿ ಸಂಗ್ರಹ ಮಾಡಿದ್ದೇವೆ. ಈ ವರ್ಷವೂ ಕೂಡ ನಮ್ಮ ಹಣಕಾಸಿನ ಸಂಗ್ರಹ ಉತ್ತಮವಾಗಿದೆ ಎಂದು ಕರ್ನಾಟಕದ ಮುಖ್ಯಮಂತ್ರಿ ಹೇಳಿದರು.
ಕೋವಿಡ್ ನಂತರದಲ್ಲಿ ಆರ್ಥಿಕ ಸುಧಾರಣೆ ಆಗುತ್ತಿರುವ ಸಂದರ್ಭದಲ್ಲಿ ಕೆಳಹಂತದ ಜನಸಮುದಾಯಕ್ಕೆ ಇನ್ನಷ್ಟು ಸಹಾಯ ಮಾಡಿ, ಅವರನ್ನು ಕೂಡ ಮುಖ್ಯ ವಾಹಿನಿಗೆ ಬರಬೇಕು ಎನ್ನುವ ನಿಟ್ಟಿನಲ್ಲಿ ನಾವು ಕಾರ್ಯಕ್ರಮ ರೂಪಿಸುತ್ತಿದ್ದೇವೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಸಂಸತ್ತಿನ ಬಜೆಟ್ ಅಧಿವೇಶನದ ಹಿನ್ನೆಲೆ ; ಇದೇ 30ರಂದು ಸರ್ವಪಕ್ಷಗಳ ಸಭೆ

ಸುದ್ದಿದಿನ ಡೆಸ್ಕ್ : ಸಂಸತ್ತಿನ ಮುಂಬರುವ ಬಜೆಟ್ ಅಧಿವೇಶನದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇದೇ 30ರಂದು ಸರ್ವಪಕ್ಷಗಳ ಸಭೆಯನ್ನು ಕರೆದಿದೆ. ಸಂಸತ್ ಭವನದ ಸಂಕೀರ್ಣದಲ್ಲಿ ಸೋಮವಾರ ಮಧ್ಯಾಹ್ನ 12 ಗಂಟೆಗೆ ಸಭೆ ನಡೆಯಲಿದೆ.
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ, ಕೇಂದ್ರ ಸಚಿವರು ಮತ್ತು ಸಂಸತ್ತಿನ ಎರಡೂ ಸದನಗಳನ್ನು ಪ್ರತಿನಿಧಿಸುವ ಸದನ ನಾಯಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಸಭೆಯಲ್ಲಿ ಸರ್ಕಾರ ಸಂಸತ್ತಿನ ಉಭಯ ಸದನಗಳ ಸುಗಮ ಕಲಾಪಕ್ಕೆ ಎಲ್ಲ ರಾಜಕೀಯ ಪಕ್ಷಗಳ ಸಹಕಾರವನ್ನು ಕೋರಲಿದೆ. ಸಂಸತ್ತಿನ ಬಜೆಟ್ ಅಧಿವೇಶನ ಇದೇ 31ರಿಂದ ಆರಂಭವಾಗಲಿದೆ. ಮೊದಲ ದಿನ ಬೆಳಿಗ್ಗೆ 11 ಗಂಟೆಗೆ ಸೆಂಟ್ರಲ್ ಹಾಲ್ ನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡುವರು.
ಅದೇ ದಿನವೇ ಆರ್ಥಿಕ ಸಮೀಕ್ಷೆಯನ್ನೂ ಸಹ ಮಂಡಿಸಲಾಗುವುದು. ಫೆಬ್ರವರಿ 1ರಂದು 2023-24ನೇ ಸಾಲಿನ ಕೇಂದ್ರ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆ ಮಾಡಲಿದ್ದಾರೆ.
ಬಜೆಟ್ ಅಧಿವೇಶನ ಏಪ್ರಿಲ್ 6ವರೆಗೆ ನಡೆಯಲಿದ್ದು, ಸುಮಾರು 66 ದಿನಗಳಲ್ಲಿ 27 ಕಲಾಪಗಳು ನಡೆಯಲಿದೆ. ಮೊದಲ ಅವಧಿಯಲ್ಲಿ ಅಧಿವೇಶನ ಫೆಬ್ರವರಿ 13ರವರೆಗೆ ನಡೆಯಲಿದೆ. ಫೆಬ್ರವರಿ 14ರಿಂದ ಮಾರ್ಚ್ 12ರವರೆಗೆ ಅಧಿವೇಶನಕ್ಕೆ ಬಿಡುವು ಇರಲಿದೆ ಆನಂತರ ಮಾರ್ಚ್ 13ರಿಂದ ಆರಂಭವಾಗುವ ಅಧಿವೇಶನ ಏಪ್ರಿಲ್ 6ಕ್ಕೆ ಕೊನೆಗೊಳ್ಳಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980336243
