Connect with us

ದಿನದ ಸುದ್ದಿ

ನನಸಾಗುವುದೇ ಬಾಪೂಜಿ ಕಂಡ ಗ್ರಾಮೀಣಾಭಿವೃದ್ಧಿಯ ಕನಸು..?

Published

on

  • ಕುಮಾರಸ್ವಾಮಿ.ವಿ.ಕೆ

ಭಾರತ ಹಳ್ಳಿಗಳಿಂದ ಕೂಡಿದ ದೇಶ. ಹಳ್ಳಿಗಳು ನಮ್ಮ ದೇಶದ ಹೃದಯವಿದ್ದಂತೆ. ದೇಶದ ಒಟ್ಟಾರೆ ಜನಸಂಖ್ಯೆಯಲ್ಲಿ ಸುಮಾರು 70% ಮಂದಿ ಇಂದು ಗ್ರಾಮೀಣ ಭಾಗಗಳಲ್ಲಿ ತಮ್ಮ ಬದುಕು ಕಟ್ಟಿಕೊಂಡಿದ್ದಾರೆ. ಹಳ್ಳಿ ಮಂದಿಯ ಸಂಸ್ಕøತಿ, ಆಚಾರ – ವಿಚಾರಗಳು ವಿಶಿಷ್ಟ, ಆಹಾರ, ವಿಹಾರ, ಉಡುಗೆ-ತಿಡುಗೆ ಹೀಗೆ ಎಲ್ಲವೂ ವಿಭಿನ್ನ. ಪ್ರಸ್ತುತ ಜಗತ್ತನ್ನ ಮೊದಲುಗೊಂಡು ನಮ್ಮ ಹಿಂದೂಸ್ಥಾನವನ್ನೂ ಕಿತ್ತು ತಿನ್ನುತ್ತಿರುವ ವಿಷಕ್ರಿಮಿ ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಇಂದು ನಿಜಕ್ಕೂ ಹಳ್ಳಿಗರ ಸಂಘಟನಾತ್ಮಕ ವರ್ತನೆ ಶ್ಲಾಘನೀಯ.

ಕೊರೋನಾ ವಿರುದ್ಧದ ಹೋರಾಟದಲ್ಲಿ ಇಂದು ಅತೀ ಹೆಚ್ಚು ಇಕ್ಕಟ್ಟಿಗೆ ಸಿಲುಕುತ್ತಿರುವುದು ನಗರ ವಾಸಿಗಳೇ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಈ ಸಂಬಂಧವಾಗಿ ನಗರ ವಾಸಿಗಳಲ್ಲಿಲ್ಲದ ಬುದ್ಧಿಮತ್ತೆ, ಪ್ರಜ್ಞೆ, ಕಾಲಕ್ಕೆ ತಕ್ಕಂತ ಜ್ಞಾನ ನಮ್ಮ ಹಳ್ಳಿಗರಲ್ಲಿದ್ದು, ಇದು ನಿಜಕ್ಕೂ ಮೆಚ್ಚುವಂತದ್ದು. ಒಂದೆಡೆ ಕೊರೋನಾಕ್ಕಿಂತ ಕೆಲವು ವಿದ್ಯಾವಂತ ಮೂರ್ಖರೇ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದ್ದರೆ, ಮತ್ತೊಂದೆಡೆ ನಮ್ಮ ಹಳ್ಳಿಗರು ನಿರುಮ್ಮಳವಾಗಿ ಮತ್ತು ಯಶಸ್ವಿಯಾಗಿ ಜೀವನದ ರಥ ಎಳೆಯುತ್ತಿದ್ದಾರೆ.

ಜೊತೆ ಜೊತೆಗೇ ಇಡೀ ದೇಶವನ್ನೇ ಪೋಷಿಸಲು ಸಜ್ಜಾಗುತ್ತಿದ್ದಾರೆ. ಇಂದು ಇತರ ಅಗತ್ಯಗಳಿಗಿಂತ ಹೆಚ್ಚಾಗಿ ಜೀವ ಉಳಿಸಿಕೊಳ್ಳಲು ಅಗತ್ಯವಾದ ಮೂರು ಹೊತ್ತಿನ ಊಟ ನಮ್ಮೆಲ್ಲರಿಗೂ ಸಮರ್ಪಕವಾಗಿ ಸಿಗುತ್ತಿದೆಯೆಂದರೆ ಅದಕ್ಕೆ ಕಾರಣಕರ್ತರಾದ ನಮ್ಮೆಲ್ಲರ ಅನ್ನದಾತನನ್ನು ಮರೆಯುವಂತಿಲ್ಲ.

ಹೆಚ್ಚುತ್ತಿದೆ ಗ್ರಾಮೀಣ ವಲಸೆ

ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಸಾಗುತ್ತಿದ್ದ ಬಹುತೇಕ ನಗರ ವಾಸಿಗಳ ಇಂದಿನ ಆದ್ಯತೆ ಪ್ರಾಣ ಭಿಕ್ಷೆಯಷ್ಟೇ ಆಗಿದೆ. ಲೋಕದ ಅರಿವೇ ಇಲ್ಲದಂತೆ ಸ್ವಾರ್ಥಕ್ಕಾಗಿಯೇ ಬದುಕುತ್ತಿದ್ದ ಗರಿಷ್ಠ ಮಂದಿ ಇಂದು ಕಂಗಾಲಾಗಿ ಹೋಗಿ, ಪ್ರಾಣ ಉಳಿಸಿಕೊಳ್ಳಲು ಹಳ್ಳಿಗಳತ್ತ ಮುಖ ಮಾಡಿದ್ದಾರೆ.

ಸಾಫ್ಟ್‍ವೇರ್, ಹಾರ್ಡ್‍ವೇರ್‍ಗಳ ಜಂಜಾಟಗಳ ನಡುವೆ ಬೀಗುತ್ತಿದ್ದ ಮಂದಿ ಇಂದು ರೂರಲ್ ವೇರ್ ಆಗಿ ಬದಲಾಗುತ್ತಿದ್ದಾರೆ. ಕಂಪ್ಯೂಟರ್, ಲ್ಯಾಪ್‍ಟಾಪ್, ಟ್ಯಾಬ್‍ಗಳ ಮೇಲೆ ಬೆರಳಾಡಿಸುತ್ತಿದ್ದವರೆಲ್ಲಾ ಈಗ ಗುದ್ದಲಿ, ಹಾರೆ, ಬಾಂಡಲಿಗಳನ್ನು ಹಿಡಯುವ ಕಾಲ ಬಂದಿದೆ.

ನಾವೆಷ್ಟೇ ಮುಂದುವರಿದರೂ ಅನ್ನವನ್ನು ಕಂಪ್ಯೂಟರ್‍ನಲ್ಲಿ ಡೌನ್‍ಲೋಡ್ ಮಾಡಿಕೊಂಡು ತಿನ್ನಲು ಸಾಧ್ಯವಿಲ್ಲವೆಂಬ ಕಟುಸತ್ಯದ ಅರಿವಿನ ದರ್ಶನ ಇಂದು ಆಗುತ್ತಿದೆ. ಆದರೆ ಇವರಲ್ಲಿನ ಸಕಾರಾತ್ಮಕ ಬದಲಾವಣೆ ಹೀಗೆಯೇ ಇದ್ದರೆ ಒಳಿತು, ಇಲ್ಲದಿದ್ದರೆ ಹಳ್ಳಿ-ದಿಲ್ಲಿಯ ವ್ಯತ್ಯಾಸವಿಲ್ಲದೆ ಎಲ್ಲವನ್ನೂ ಅತಂತ್ರ ಮಾಡಿಯಾರು ಎಂಬ ಅನುಮಾನ ನಮ್ಮನ್ನು ಕಾಡಲು ಶುರುವಿಟ್ಟಿಕೊಳ್ಳುತ್ತದೆ.

ಕ್ಷೀಣಿಸುತ್ತಿದೆ ತಾತ್ಸಾರ ಮನೋಭಾವ

ಒಂದೆಡೆ ಬೆಳ್ಳಂಬೆಳಗ್ಗೆಯೇ ಎಲ್ಲೆಂದರಲ್ಲಿ ಗೋಬಿ ಮಂಚೂರಿ, ಪಾನಿಪೂರಿ ತಿನ್ನುವ ಮಂದಿ, ಮಾಲ್, ಪಬ್, ಸಿನಿಮಾ ಮಂದಿರಗಳು, ಬಾರ್‍ಗಳ ಮುಂದೆ ಕ್ಯೂ ನಿಲ್ಲುತ್ತಿದ್ದವರ ಗುಂಪು, ಎದುರಿಗೆ ಬಂದವರನ್ನೂ ನೋಡದೆ ಗುದ್ದುಕೊಂಡೇ ಕರ್ತವ್ಯಕ್ಕೆ ಹೊರಟ ಜನರ ಹಿಂಡು, ಎಲ್ಲಕ್ಕೂ ತಾ ಮುಂದು, ನಾ ಮುಂದು ಎಂದು ದುಂಬಾಲು ಬೀಳುತ್ತಿದ್ದ ಸಮುದಾಯ ಇವುಗಳಷ್ಟೇ ನಗರ ವಾಸಿಗಳ ಪ್ರತಿನಿತ್ಯ ಜೀವನದ ಕಥೆಯಾಗಿತ್ತು.

ಇನ್ನೊಂದೆಡೆ ಮನೆಯ ಮುಂದೆ ಸಗಣಿ ನೀರಿನಿಂದ ಸಾರಿಸಿ, ರಂಗವಲ್ಲಿ ಹಾಕಿ, ರೊಟ್ಟಿ, ಮುದ್ದೆ ಹೀಗೆ ಗಟ್ಟಿ ಆಹಾರ ಸೇವಿಸಿ, ನೆರೆ ಮನೆಯವರ ಉಭಯಕುಶಲೋಪರಿಯನ್ನು ವಿಚಾರಿಸಿ, ತಂತಮ್ಮ ಕೆಲಸಗಳಲ್ಲಿ ತೊಡಗುತ್ತಿದ್ದವರು ನಮ್ಮ ಹಳ್ಳಿ ಮಂದಿ. ಈ ಮೊದಲು ಸಿಟಿ ವಾಸಿಗಳಿಗೆ ಹಳ್ಳಿಗಳೆಂದರೆ, ಹಳ್ಳಿಗರ ಜೀವನ ಶೈಲಿ ಎಂದರೆ ಅದೇನೋ ಅಹಂಕಾರ ಮತ್ತು ತಾತ್ಸಾರ ಮನೋಭಾವವೇ ಹೆಚ್ಚು.

ಆದರೀಗ ಬದಲಾದ ಜಾಯಮಾನದಲ್ಲಿ ಎಲ್ಲವೂ ವೈಪರಿತ್ಯವಾಗಿದೆ. ತಮ್ಮ ಮಕ್ಕಳನ್ನು ರಜಾ ದಿನಗಳಲ್ಲಿ ಅಜ್ಜ-ಅಜ್ಜಿಯಂದಿರ ಮನೆಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದ ಕೆಲವು ಮಂದಿ ಇಂದು ಊರು ಬಿಟ್ಟು ಹೋಗಿ ಎಂದು ಹೇಳುವ ಪರಿಸ್ಥಿತಿ ನಿರ್ಮಿಸಿಕೊಂಡಿದ್ದಾರೆ. ಆದರೆ ನಮ್ಮ ಉದಾರಿ ರೈತ ಬಾಂಧವರು ಯಾವುದೇ ಫಲಾಪೇಕ್ಷೆ ಇಲ್ಲದೆ ಎಲ್ಲರನ್ನೂ ಸಂಭಾಳಿಸುತ್ತದ್ದಾರೆ. ಇದಕ್ಕೇ ಹೇಳುವುದು ‘ಕಾಲಾಯ ತಸ್ಮೈ ನಮಃ’ ಎಂದು.

ಬಲಿಷ್ಠವಾಗಬೇಕಿದೆ ಹಳ್ಳಿಗಳು

ಸ್ವಾತಂತ್ರ್ಯ ನಂತರದ ದಶಕಗಳಲ್ಲೂ ಹಳ್ಳಿಗಳಲ್ಲಿ ಕಾಡುತ್ತಿರುವ ಅತೀ ದೊಡ್ಡ ಸಮಸ್ಯೆ ಎಂದರೆ ಮೂಲಭೂತ ಸೌಕರ್ಯಗಳ ಕೊರತೆ. ನಾವೆಲ್ಲಾ ಚಂದ್ರಯಾನದಂತಹ ಹೆಮ್ಮೆಯ ಗಗನಯಾನವನ್ನು ಕೈಗೊಳ್ಳುವಷ್ಟು ಸಮರ್ಥರಿದ್ದರೂ ಇಂತಹ ಚಿಕ್ಕ ಚಿಕ್ಕ ಸಮಸ್ಯೆಗಳನ್ನು ಬದಿಗಿಡುತ್ತಲೇ ಸಾಗುತ್ತಿರುವುದು ನೋವಿನ ಸಂಗತಿ. ಆದರೆ ಅದೇ ಹಳ್ಳಿಗಳು ಮುಂದೊಂದು ದಿನ ಸಕಲ ಸೌಕರ್ಯಗಳುಳ್ಳ ಸ್ಥಳಗಳಾಗಿ ಮಾರ್ಪಡುವ ಕಾಲ ಸನ್ನಿಹಿತವಾಗುತ್ತಿದೆ.

ಆದರೆ ಇದಕ್ಕೆ ಕೇವಲ ಸರ್ಕಾರದ ಸವಲತ್ತುಗಳನ್ನೇ ಕಾಯದೇ ಅಬೇಧವಾಗಿ ಎಲ್ಲರೂ ಕೈ ಜೋಡಿಸಬೇಕಿದೆ. ಒಂದರ್ಥದಲ್ಲಿ ಇಷ್ಟು ವರ್ಷಗಳ ಕಾಲ ನಮಗೆ ಅನ್ನ ಹಾಕಿ ಶುಶ್ರೂಷೆ ಮಾಡುತ್ತಿದ್ದ ಹಳ್ಳಿಗರಿಗಿಂದು ನಗರ ವಾಸಿಗಳು ಹೊರೆಯಾಗುತ್ತಿದ್ದಾರೆ. ಆದರೆ ಹಳ್ಳಿಗರ ಔದಾರ್ಯದ ಮುಂದೆ ಇದೆಲ್ಲಾ ಮಂಕಾಗುತ್ತಿದೆ.

ಪ್ರಾಯಶಃ ಇಂದು ‘ಜೈ ಕಿಸಾನ್’ ಎಂಬ ಘೋಷವಾಕ್ಯ ಪ್ರತಿಧ್ವನಿಸುತ್ತಿದೆ. ಅದೇನೆ ಇದ್ದರೂ ಹಳ್ಳಿಗಳಿಂದು ಎಲ್ಲ ಕೊರತೆಗಳಿಂದ ಮುಕ್ತವಾಗಬೇಕಿದೆ. ಆರೋಗ್ಯ, ತಂತ್ರಜ್ಞಾನ, ಜಲ ಸಂರಕ್ಷಣೆ, ಶಿಕ್ಷಣ, ರಸ್ತೆಗಳ ನಿರ್ಮಾಣ, ಹೀಗೆ ಹತ್ತು ಹಲವು ಯೋಜನೆಗಳು ಇಂದು ಜಾರಿಯಲ್ಲಿದ್ದರೂ ಯಾವುಗಳು ಪೂರ್ಣ ಪ್ರಮಾಣದಲ್ಲಿ ಫಲಕಾರಿಯಾಗಿಲ್ಲ ಎಂಬುದನ್ನು ಈಗಲಾದರೂ ಮನಗಾಣಬೇಕಿದೆ.

ಬದಲಾದೀತೇ ಕ್ರೂರ ಮನಸ್ಥಿತಿ?

ನಗರಗಳೆಂದರೆ ಹಾಗೆ, ಪ್ರತಿ ಕ್ಷಣವೂ ಟೆನ್ಷನ್, ಭಯ ನಿರ್ಮಿತ ವಾತಾವರಣ, ಕೊಲೆ, ಸುಲಿಗೆ, ದರೋಡೆ, ಸಣ್ಣ ಸಣ್ಣ ವಿಚಾರಗಳಿಗೆಲ್ಲಾ ಗಲಭೆ, ಗಲಾಟೆ, ಮಾಲಿನ್ಯ, ಅನಾರೋಗ್ಯ. ಒಂದರ್ಥದಲ್ಲಿ ‘ಎಲ್ಲ ಇದ್ದು ಏನೂ ಇರದ ಹಾಗೆ’ ಬದುಕು ಸಾಗಿಸುವ ಅನಿವಾರ್ಯತೆ ಅಲ್ಲಿತ್ತು. ಆದರೆ ನಮ್ಮ ಹಳ್ಳಿಗರ ಪರಿಸ್ಥಿತಿ ಹೇಗಿತ್ತೆಂದರೆ ‘ಏನೂ ಇರದಿದ್ದರೂ ಎಲ್ಲ ಇದೆ’ ಎಂದು ಬದುಕುವ ರೀತಿಯಲ್ಲಿತ್ತು.

ಹೀಗೆ ಸದಾ ಆತಂಕದಲ್ಲೇ ಕಾಲ ಕಳೆಯುತ್ತಿದ್ದ ಜನ ಇಂದು ಹಳ್ಳಿಗಳನ್ನು ಸೇರಿ ಒಂದಷ್ಟು ಸಮಾಧಾನಿಸುತ್ತಿದ್ದಾರೆ. ಇದು ಅವರ ಮೂಲಭೂತ ವರ್ತನೆಯಲ್ಲಿ ಬಹುತೇಕ ಬದಲಾವಣೆ ತರುವ ಕಾಲವೂ ಆಗಿದೆ. ಶಾಂತಪ್ರಿಯ ಭಾರತದಲ್ಲಿ ಇವೆಲ್ಲವೂ ಸದ್ದಿಲ್ಲದೆ ನಡೆಯುತ್ತಿತ್ತು ಎಂಬುದನ್ನು ನಾವು ನಂಬಲೇಬೇಕಿದೆ. ಆದರೆ ಈಗ ಸರಳ ಜೀವನದ ಪಾಠ ಕಲಿಸುತ್ತಿರುವ ನಿರಕ್ಷಕರಕುಕ್ಷಿಗಳಿಗೆ ನಾವೊಂದು ಸಲಾಮ್ ಸಲ್ಲಿಸೋಣ.

ಹೆಚ್ಚಳವಾಗಲಿದೆ ನಿರೀಕ್ಷಿತ ಜೀವಿತಾವಧಿ

ನಗರವಾಸಿಗಳಲ್ಲಿ ಸದಾಕಾಲ ಅತೀವ ಅನಾರೋಗ್ಯ ಪೀಡಿತರ ಸಂಖ್ಯೆಯೇ ಹೆಚ್ಚು. ಅಲ್ಲಿನ ಮಾಲಿನ್ಯ, ಜನಜಂಗುಳಿ, ಕ್ರೌರ್ಯ, ಅವರ ಆಹಾರ ಪದ್ಧತಿಗಳು ವಿಚಿತ್ರ ಹಾಗೂ ಅನಾರೋಗ್ಯಕರವಾಗಿವೆ. ಹೀಗಾಗಿ ಬಹುತೇಕ ನಗರ ವಾಸಿಗಳ ನಿರೀಕ್ಷಿತ ಜೀವಿತಾವಧಿ (ಆಯಸ್ಸು) ಕಡಿಮೆಯೇ ಇತ್ತೆಂಬುದು ಆಶ್ಚರ್ಯವೇನಲ್ಲ.

ಬದಲಾದ ಇಂದಿನ ಸನ್ನಿವೇಶದಲ್ಲಿ ನಮ್ಮ ದೇಶವಾಸಿಗಳ ಆಯಸ್ಸು ಹೆಚ್ಚಾಗುವ ನಿರೀಕ್ಷೆಯಿದೆ. ಇದಕ್ಕೆಲ್ಲಾ ಕಾರಣಕರ್ತರಾಗುತ್ತಿರುವ ನಮ್ಮ ಹಳ್ಳಿಗರನ್ನ ನಾವು ಮತ್ತೊಮ್ಮೆ ಗೌರವಿಸದೆ ಇರಬಾರದು. ಜೀವನವನ್ನಷ್ಟೇ ಅಲ್ಲ ಜೀವವನ್ನೂ ವೃದ್ಧಿಸುತ್ತಿರುವುದು ಇಂದು ನಮ್ಮ ಹಳ್ಳಿಗರೆ. ಆದರೆ ಇದಕ್ಕೆ ಪೂರಕವಾದ ಸನ್ನಿವೇಶಗಳು ಗ್ರಾಮೀಣ ಭಾಗದಲ್ಲಿ ಮತ್ತಷ್ಟು ದೊರಕುವ ಅನಿವಾರ್ಯತೆ ಮತ್ತು ಅಗತ್ಯತೆ ಇಂದಿದೆ.

ಕೃಷಿಗೆ ದೊರಬೇಕಿದೆ ಮತ್ತಷ್ಟು ಆದ್ಯತೆ

ಪ್ರಾಥಮಿಕ, ದ್ವಿತೀಯ ಹಾಗೂ ತೃತೀಯ ವಲಯಗಳ ಪೈಕಿ ಈ ಮೊದಲು ನಮ್ಮ ರಾಷ್ಟ್ರೀಯ ಆದಾಯದ ಸಿಂಹಪಾಲು ಕೃಷಿಯದ್ದೇ ಆಗಿತ್ತು. ಆದರೆ ಜಾಗತೀಕರಣ, ಖಾಸಗೀಕರಣ ಮತ್ತು ಉದಾರಿಕರಣಗಳ ಫಲವಾಗಿ ಇತ್ತೀಚೆಗೆ ಕೃಷಿ ವಲಯ ನಿರ್ಲಕ್ಷಕ್ಕೆ ಒಳಪಟ್ಟಿರುವುದು ಬೇಸರ ಹಾಗೂ ಆತಂಕಕಾರಿ ಸಂಗತಿಯಾಗಿದೆ.

ಇಂದಿನ ಪರಿಸ್ಥಿತಿಯಲ್ಲಿ ಅನ್ನ ತಿಂದು ಜೀವ ಉಳಿಸಿಕೊಳ್ಳಲು ಸಾಧ್ಯವೇ ಹೊರತು, ಬೇರೇನೂ ಅಲ್ಲ ಎಂಬಂತಾಗಿದೆ. ಮತ್ತೊಮ್ಮೆ ನಮ್ಮ ಅನ್ನದಾತನಿಗೆ ಬೆಲೆ ಬರುತ್ತಿದೆ. ಆದರೆ ಅನ್ನದಾತನತ್ತ ನಮ್ಮ ಸರ್ಕಾರಳ ಚಿತ್ತ ಬೀಳಬೇಕಿದೆ. ಇತರ ವಲಯಗಳಂತೆಯೇ ಕೃಷಿಯನ್ನೂ ಅಭಿವೃದ್ಧಿಪಡಿಸಬೇಕಿದೆ. ಇಲ್ಲವಾದಲ್ಲಿ ಕೊರೋನಾ ವಿಷ ಕ್ರಿಮಿಯ ಲಗ್ಗೆ ಹೀಗೆಯೇ ಹೆಚ್ಚಾಗುತ್ತಿದ್ದರೆ, ಮುಂದೊಂದು ದಿನ ತಿನ್ನಲು ಅನ್ನವೂ ಇಲ್ಲದಂತಾಗಿ, ಗೆಡ್ಡೆ, ಗೆಣಸುಗಳನ್ನು ತಿಂದು ಆದಿ ಮಾನವರಂತೆ ಬದುಕುವ ಕಾಲ ಬಂದರೂ ಆಶ್ಚರ್ಯವೇನಿಲ್ಲ!

ನನಸಾಗುವುದೇ ಬಾಪೂಜಿ ಕನಸು?

“ಹಳ್ಳಿಗಳ ಉದ್ದಾರದಿಂದಲೇ ದೇಶದ ಉದ್ದಾರ” ಎಂಬ ಮಾತನ್ನು ನಮ್ಮ ರಾಷ್ಟ್ರಪಿತ ಗಾಂಧೀಜಿಯವರು ಸುಮಾರು ವರ್ಷಗಳ ಹಿಂದೆಯೇ ನುಡಿದಿದ್ದಾರೆ. ಮದ್ಯಪಾನಮುಕ್ತ ಗ್ರಾಮಗಳು, ಗುಡಿ ಕೈಗಾರಿಕೆಗಳಿಗೆ ಆದ್ಯತೆ, ಆಹಾರ ಧಾನ್ಯಗಳ ಉತ್ಪಾದನೆಯಲ್ಲಿ ಸ್ವಾವಲಂಬನೆ, ಸ್ವದೇಶಿ ವಸ್ತುಗಳ ಬಳಕೆ, ಅಧಿಕಾರ ವಿಕೇಂದ್ರಿಕರಣದ ಮೂಲಸ್ಥಾನ ಹೀಗೆ ಗ್ರಾಮೀಣಾಭಿವೃದ್ಧಿಯ ಬಗ್ಗೆ ಬಾಪೂಜಿ ಅಂದೇ ದೊಡ್ಡ ದೊಡ್ಡ ಕನಸುಗಳನ್ನು ಕಂಡಿದ್ದರು.

ಇಂದಿನ ಪರಿಸ್ಥಿತಿ ನೋಡಿದರೆ ಆ ಕಾಲ ಬಹುಬೇಗ ಬರುವುದೇ? ಎಂದು ಕಾದು ನೋಡಬೇಕಿದೆ. ಹಾಗೆ ನೋಡಿದರೆ ಇಂದು ನಿಜಕ್ಕೂ ನಗರಳಲ್ಲಿನ ದ್ವಿತೀಯ ಹಾಗೂ ತೃತೀಯ ವಲಯಗಳ ಬಹುತೇಕ ಚಟುವಟಕೆಗಳಲ್ಲಿ ಕೃಷಿಯ ಸಹಕಾರವೇ ಹೆಚ್ಚು. ಈ ಹಿನ್ನೆಲೆಯಲ್ಲಿ ನಮ್ಮ ಗ್ರಾಮೀಣ ಭಾಗಗಳನ್ನು ಮುನ್ನೆಲೆಗೆ ತರುವಂತಹ ಕ್ರಮಗಳು ಇಂದು ಅಪೇಕ್ಷಣಿಯ.

ಕೈಗಾರಿಕೆಗಳ ಮೂಲ ನೆಲೆಯಾದೀತೇ?

ದುಡಿಯುವ ಕೈಗಳಿಗೆ ಉದ್ಯೋಗ ಒದಗಿಸುವಲ್ಲಿ ಕೃಷಿ ಕ್ಷೇತ್ರದ ಸಾಮಥ್ರ್ಯ ಹೆಚ್ಚಿದ್ದರೂ, ವರ್ಷವಿಡೀ ಕೃಷಿಯಲ್ಲಿ ಉದ್ಯೋಗ ಲಭ್ಯತೆ ಇರುವುದಿಲ್ಲ. ಇಂತಹ ಸಂದರ್ಭಗಳಲ್ಲಿ ನಿರುದ್ಯೋಗಿಗಳಾಗುತ್ತಿದ್ದ ನಮ್ಮ ಗ್ರಾಮೀಣ ಭಾಗದ ಜನರು ನಗರಗಳತ್ತ ವಲಸೆ ಹೋಗುತ್ತಿದ್ದರು. ಆದರೆ ಇಂದು ಅದೇ ವಲಸೆ ಪುನರಾವರ್ತಿತವಾಗುತ್ತಿದೆ.

ಇಂತಹ ಕೃಷಿ ಕಾರ್ಮಿಕತನ್ನು ಒಂದೆಡೆ ಸಂಘಟಿಸಿ ಇಂದು ಅವರಿಗೆ ಸರಿ ಹೊಂದುವ ಉದ್ಯೋಗ ಸೃಷ್ಟಿಗೆ ಸರ್ಕಾರಗಳು ಮುಂದಾಗಬೇಕಿದೆ. ತಾವಿರುವ ಸ್ಥಳಗಳಲ್ಲಿಯೇ ಸಾಧ್ಯವಿರುವ ಕೈಗಾರಿಕೆಗಳನ್ನು ಅಭಿವೃದ್ಧಿಪಡಿಸಿದರೆ ನಿರುದ್ಯೋಗ ಸಮಸ್ಯೆಯ ನಿವಾರಣೆ ಜೊತೆಗೆ ದೇಶದ ಆರ್ಥಿಕತೆಯೂ ಸಹ ಬಲಿಷ್ಠವಾಗಲಿದೆ. ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ಕೃಷಿ ಪದ್ಧತಿಗೆ ಮತ್ತೊಮ್ಮೆ ಜೀವ ತುಂಬಲು ಸಾಧ್ಯವಿದೆ.

(ಕುಮಾರಸ್ವಾಮಿ.ವಿ.ಕೆ
(ಕುಮಾರ್ ಭಾರದ್ವಾಜ್)
ಹವ್ಯಾಸಿ ಬರಹಗಾರರು, ವಿರುಪಾಪುರ,
ಸುಗ್ಗನಹಳ್ಳಿ ಅಂಚೆ, ತಿಪ್ಪಸಂದ್ರ ಹೋಬಳಿ,
ಮಾಗಡಿ ತಾಲ್ಲೂಕು, ರಾಮನಗರ ಜಿಲ್ಲೆ.
ಮೊಬೈಲ್ : 9113906120, 9740840678)

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಕರ್ನಾಟಕದಲ್ಲಿ ವ್ಯಾಪಕ ಮಳೆ; ತುರ್ತು ಪರಿಹಾರಕ್ಕೆ 200 ಕೋಟಿ ರೂಪಾಯಿ ಬಿಡುಗಡೆ

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ ಡೆಸ್ಕ್ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ( Chief Minister Basavaraja Bommai) ಶನಿವಾರ ರಾಜ್ಯದ ( Karnataka ) ವಿವಿಧ ಜಿಲ್ಲೆಗಳಲ್ಲಿನ ಮಳೆ ಪರಿಸ್ಥಿತಿ ಕುರಿತು ( Havy Rain ) ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ ( Vedio Conferences ) ನಡೆಸಿದರು.

ಮಳೆ ಪರಿಸ್ಥಿತಿ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದ ಮುಖ್ಯಮಂತ್ರಿ ಪ್ರವಾಹ ಪರಿಹಾರ ಕಾರ್ಯಗಳಿಗಾಗಿ ರಾಜ್ಯ ವಿಪತ್ತು ಪರಿಹಾರ ನಿಧಿಯಡಿ 21 ಜಿಲ್ಲೆಗಳಿಗೆ 200 ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದಾರೆ.

ಬಳ್ಳಾರಿ, ಧಾರವಾಡ, ಚಿತ್ರದುರ್ಗ, ಗದಗ, ಚಾಮರಾಜನಗರ, ಕೋಲಾರ, ಹಾವೇರಿ, ವಿಜಯನಗರ ಹಾಗೂ ಕೋಲಾರ ಜಿಲ್ಲೆಗಳಿಗೆ ತಲಾ 5 ಕೋಟಿ ರೂಪಾಯಿ, ಚಿಕ್ಕಮಗಳೂರು, ಕೊಪ್ಪಳ, ಚಿಕ್ಕಬಳ್ಳಾಪುರ, ಮಂಡ್ಯ, ರಾಯಚೂರು, ಶಿವಮೊಗ್ಗ, ತುಮಕೂರು, ಉತ್ತರ ಕನ್ನಡ ಜಿಲ್ಲೆಗಳಿಗೆ ತಲಾ 10 ಕೋಟಿ ರೂಪಾಯಿ ಹಾಗೂ ದಾವಣಗೆರೆ, ಹಾಸನ, ಉಡುಪಿ, ಮೈಸೂರು ಜಿಲ್ಲೆಗಳಿಗೆ ತಲಾ 15 ಕೋಟಿ ರೂಪಾಯಿ, ದಕ್ಷಿಣ ಕನ್ನಡ ಜಿಲ್ಲೆಗೆ 20 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ.

ಹಣ ಬಳಕೆಯಲ್ಲಿ ಯಾವುದೇ ಲೋಪವಾದಲ್ಲಿ ಆಯಾ ಜಿಲ್ಲಾಧಿಕಾರಿಯನ್ನು ನೇರವಾಗಿ ಜವಾಬ್ದಾರರನ್ನಾಗಿ ಮಾಡಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಕೇರಳದ ವೈನಾಡು ಸೇರಿದಂತೆ ಕಬಿನಿ ನದಿ ಪಾತ್ರದಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಕಪಿಲಾ ನದಿ ತುಂಬಿ ಹರಿಯುತ್ತಿದೆ ಮಳೆಯಿಂದಾಗಿ ಕಬಿನಿ ಜಲಾಶಯ ಭರ್ತಿಯಾದ ಹಿನ್ನೆಲೆಯಲ್ಲಿ ಸುಮಾರು 30 ರಿಂದ 35 ಸಾವಿರ ಕ್ಯೂಸೆಕ್ಸ್ ನೀರನ್ನು ನದಿಗೆ ಬಿಡಲಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಹಣದುಬ್ಬರ, ಕೋವಿಡ್ ನಿಭಾಯಿಸುವ ಭಾರತೀಯ ಮಾದರಿಗೆ ವಿಶ್ವದ ಆರ್ಥಿಕ ತಜ್ಞರ ಪ್ರಶಂಸೆ: ಗೃಹ ಸಚಿವ ಅಮಿತ್ ಶಾ

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ ಡೆಸ್ಕ್ : ಆರ್ಥಿಕ ಪುನಶ್ಚೇತನಕ್ಕೆ ಪ್ರಧಾನಿ ನರೇಂದ್ರ ಮೋದಿ ( Narendra Modi ) ನೇತೃತ್ವದ ಕೇಂದ್ರ ಸರ್ಕಾರ ಹೆಚ್ಚಿನ ಆದ್ಯತೆ ನೀಡಿದ್ದು, ಪರಿಣಾಮಕಾರಿ ಕ್ರಮಗಳಿಂದಾಗಿ ಆರ್ಥಿಕ ಅಭಿವೃದ್ಧಿ ದರದಲ್ಲಿ ( GDP) ಭಾರತ ಜಾಗತಿಕವಾಗಿ ಮುಂಚೂಣಿಯಲ್ಲಿದೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ( Amit Shah) ಹೇಳಿದ್ದಾರೆ.

ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ( Banglore) ನಿನ್ನೆ ನಡೆದ ’ಸಂಕಲ್ಪದಿಂದ ಸಿದ್ಧಿ’ ( Sankalp Se Siddhi )
ಕಾರ್ಯಕ್ರಮದಲ್ಲಿ ಭಾಷಣ ಮಾಡಿದ ಅವರು, ಪ್ರಸ್ತುತ ಭಾರತದ ಅಭಿವೃದ್ಧಿ ದರ ಶೇಕಡ 7.4ರಷ್ಟಿದ್ದು, ಚೀನಾ ಶೇಕಡ 3.3ಮತ್ತು ಬ್ರೆಜಿಲ್ ಶೇಕಡ 1.7ರಷ್ಟು ಅಭಿವೃದ್ಧಿ ದರ ಹೊಂದಿವೆ ಎಂದು ತಿಳಿಸಿದರು.

ಕಳೆದ ಎಂಟು ವರ್ಷಗಳಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಾನವೀಯ ಮುಖವಿರುವ ಆರ್ಥಿಕತೆಯನ್ನು ಪರಿಚಯಿಸಿದ್ದು, ಸಮಾಜದ ಕಟ್ಟಕಡೆಯ ಜನರ ಏಳಿಗೆಗೆ ಹಲವಾರು ಕಲ್ಯಾಣ ಕ್ರಮಗಳನ್ನು ಕೈಗೊಂಡಿದ್ದಾರೆ. ಕೇಂದ್ರ ಸರ್ಕಾರದಿಂದ ಬಡವರಿಗೆ ಮನೆ, ಶೌಚಾಲಯ, ವಿದ್ಯುತ್, ಆರೋಗ್ಯ ವಿಮೆ, ನೀರಿನ ಸಂಪರ್ಕ ಮತ್ತು ಉಚಿತ ಪಡಿತರವನ್ನು ಒದಗಿಸುವ ಪ್ರಯತ್ನಗಳು ಮುಂದುವರೆದಿವೆ ಎಂದು ಅಮಿತ್ ಶಾ ತಿಳಿಸಿದರು.

ಕೋವಿಡ್ ಮತ್ತು ಹಣದುಬ್ಬರವನ್ನು ನಿಭಾಯಿಸುವ ಭಾರತೀಯ ಮಾದರಿಯನ್ನು ವಿಶ್ವದಾದ್ಯಂತ ಅರ್ಥಶಾಸ್ತ್ರಜ್ಞರು ಪ್ರಶಂಸೆ ಮಾಡಿದ್ದಾರೆ ಎಂದು ಗೃಹ ಸಚಿವರು ತಿಳಿಸಿದರು.

ಇದನ್ನೂ ಓದಿ | ಆಕಾಶವಾಣಿ, ಎಫ್‌ಎಂ, ದೂರದರ್ಶನ ಚಾನಲ್‌ಗಳಿಗೆ ಅತಿ ಹೆಚ್ಚು ಜನ ಮನ್ನಣೆ: ಕೇಂದ್ರ ವಾರ್ತಾ ಸಚಿವ ಅನುರಾಗ್ ಸಿಂಗ್ ಠಾಕೂರ್

ಇತರ ದೇಶಗಳು ಉದ್ಯಮಗಳಿಗೆ ಬೇಡಿಕೆಯನ್ನು ಹೆಚ್ಚಿಸುವ ಮತ್ತು ಪ್ಯಾಕೇಜ್‌ಗಳನ್ನು ಘೋಷಿಸುವತ್ತ ಗಮನಹರಿಸಿದಾಗ, ಪ್ರಧಾನಮಂತ್ರಿಗಳು ಪರಿಹಾರವನ್ನು ಹುಡುಕುವತ್ತ ಗಮನಹರಿಸಿದರು ಮತ್ತು ಲಸಿಕೆಯನ್ನು ಕಂಡುಹಿಡಿಯಲು ವಿಜ್ಞಾನಿಗಳನ್ನು ಪ್ರೋತ್ಸಾಹಿಸಿದರು ಎಂದು ಸಚಿವ ಅಮಿತ್ ಶಾ ತಿಳಿಸಿದರು.

ದೇಶದಲ್ಲಿ ವಿಶ್ವದ ಅತಿದೊಡ್ಡ ಲಸಿಕೆ ಕಾರ್ಯಕ್ರಮವನ್ನು ಜಾರಿಗೊಳಿಸಲಾಗಿದ್ದು, ಮೇಕ್ ಇನ್ ಇಂಡಿಯಾ, ಆತ್ಮ ನಿರ್ಭರ್ ಭಾರತ್ ಅಭಿಯಾನಗಳ ಮೂಲಕ ಸ್ವದೇಶಿ ಸ್ವಾವಲಂಬನೆಗೆ ಒತ್ತು ನೀಡಲಾಗಿದೆ ಎಂದು ಅಮಿತ್ ಶಾ ತಿಳಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಆಕಾಶವಾಣಿ, ಎಫ್‌ಎಂ, ದೂರದರ್ಶನ ಚಾನಲ್‌ಗಳಿಗೆ ಅತಿ ಹೆಚ್ಚು ಜನ ಮನ್ನಣೆ: ಕೇಂದ್ರ ವಾರ್ತಾ ಸಚಿವ ಅನುರಾಗ್ ಸಿಂಗ್ ಠಾಕೂರ್

Published

on

ಸುದ್ದಿದಿನ ಡೆಸ್ಕ್ : ಆಕಾಶವಾಣಿ (AIR) ಮತ್ತು ಆಕಾಶವಾಣಿಯ ಎಫ್‌ಎಂ ಚಾನಲ್‌ಗಳನ್ನು ( FM Channel) ಅತಿ ಹೆಚ್ಚು ಶ್ರೋತೃಗಳು ಆಲಿಸುತ್ತಿದ್ದಾರೆ.

ಖಾಸಗಿ ಎಫ್‌ಎಂ ಚಾನಲ್‌ಗಳಿಗೆ ಹೋಲಿಸಿದರೆ ಆಕಾಶವಾಣಿಯ ಎಫ್‌ಎಂ ಚಾನಲ್ ಅತಿ ಹೆಚ್ಚು ಜನಪ್ರಿಯವಾಗಿದೆ ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಸಿಂಗ್ ಠಾಕೂರ್ ( Anurag Singh thakur ) ತಿಳಿಸಿದ್ದಾರೆ.

ರಾಜ್ಯಸಭೆಗೆ ಲಿಖಿತ ಉತ್ತರ ಮೂಲಕ ಮಾಹಿತಿ ನೀಡಿದ ಸಚಿವರು, ಭಾಷೆ, ಸಂಸ್ಕೃತಿ, ಪ್ರಾದೇಶಿಕತೆ, ಸ್ಥಳೀಯ ಮಾಹಿತಿ, ಸಂಪ್ರದಾಯಗಳಿಗೆ ಒತ್ತು ನೀಡುವ ಮೂಲಕ ಆಕಾಶವಾಣಿ ಜನರ ಮನದಲ್ಲಿ ಸ್ಥಾನ ಪಡೆದಿದೆ. ನಿರಂತರವಾಗಿ ಉತ್ತರ ಮಾಹಿತಿಯನ್ನು ನೀಡುವ ಮೂಲಕ ಶ್ರೋತೃಗಳಿಗೆ ಹತ್ತಿರವಾಗಿದೆ ಎಂದು ತಿಳಿಸಿದರು.

ಇದಲ್ಲದೇ ದೂರದರ್ಶನದ ಚಾನಲ್‌ಗಳು ಕೂಡ ಕಳೆದ ಕೆಲವು ವರ್ಷಗಳಿಂದ ಬಾರ್ಕ್ ರೇಟಿಂಗ್ ಪಟ್ಟಿಯಲ್ಲಿ ಮುಂಚೂಣಿ ಸ್ಥಾನ ಪಡೆದುಕೊಂಡಿದೆ. ದೂರದರ್ಶನ ಎಂದಿಗೂ ಗುಣಮಟ್ಟದ ಹಾಗೂ ಖಚಿತ ಮಾಹಿತಿ ನೀಡುವ ಮೂಲಕ ತನ್ನ ಸ್ಥಾನವನ್ನು ಉಳಿಸಿಕೊಂಡಿದೆ. ಇದರ ಜಾಲ ಕೂಡ ಇಡೀ ದೇಶಾದ್ಯಂತ ಹರಡಿದೆ. ಅತ್ಯಾಧುನಿಕ ಗುಣಮಟ್ಟ ನೀಡಲು ಎಲ್ಲ ರೀತಿಯ ಪ್ರಯತ್ನ ನಡೆಯುತ್ತಿವೆ ಎಂದು ಸಚಿವ ಅನುರಾಗ್ ಸಿಂಗ್ ಠಾಕೂರ್ ತಿಳಿಸಿದ್ದಾರೆ.

ಆನ್‌ಲೈನ್ ಬೆಟ್ಟಿಂಗ್‌ಗಳ ಕುರಿತ ಜಾಹಿರಾತುಗಳನ್ನು ಪ್ರಸಾರ ಮಾಡಬಾರದೆಂದು ಮುದ್ರಣ, ವಿದ್ಯುನ್ಮಾನ ಮತ್ತು ಡಿಜಿಟಲ್ ಮಾಧ್ಯಮಗಳಿಗೆ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಸಲಹೆ ನೀಡಿದೆ.

2019ರ ಗ್ರಾಹಕ ಸುರಕ್ಷಾ ಕಾಯ್ದೆ, 1995ರ ಕೇಬಲ್ ಮತ್ತು ಟೆಲಿವಿಷನ್ ಜಾಲ ನಿಯಂತ್ರಣ ಕಾಯ್ದೆ ಮತ್ತು ಭಾರತೀಯ ಪತ್ರಿಕಾ ಮಂಡಳಿ ಹೊರಡಿಸಿರುವ ಮಾರ್ಗಸೂಚಿಗಳ ಅನ್ವಯ ಆನ್‌ಲೈನ್ ಬೆಟ್ಟಿಂಗ್ ಪ್ಲಾಟ್‌ಫಾರಂ ಕುರಿತ ಜಾಹಿರಾತುಗಳನ್ನು ಪ್ರಕಟಿಸಬಾರದು ಎಂದು ಮಾಧ್ಯಮಗಳಿಗೆ ಸೂಚನೆ ನೀಡಿರುವುದಾಗಿ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಅನುರಾಗ್ ಸಿಂಗ್ ಠಾಕೂರ್ ರಾಜ್ಯಸಭೆಗೆ ತಿಳಿಸಿದ್ದಾರೆ.

ಜನರಿಗೆ ತಪ್ಪು ಮಾಹಿತಿ ನೀಡುವ ಅಥವಾ ದಿಕ್ಕು ತಪ್ಪಿಸುವ ಆನ್‌ಲೈನ್ ಬೆಟ್ಟಿಂಗ್ ಜಾಹಿರಾತುಗಳನ್ನು ಪ್ರಕಟಿಸುವಂತಿಲ್ಲ ಎಂದು ಅವರು ಮೇಲ್ಮನೆಗೆ ನೀಡಿರುವ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending