Connect with us

ಅಂತರಂಗ

ಧರ್ಮ ಮರ್ಮ – 09 : ದೀನ್ ವಿಶ್ವಾಸಿ

Published

on

Art : Megan Duncanson
  • ಯೋಗೇಶ್ ಮಾಸ್ಟರ್

ರ್ಮ ಮತ್ತು ದೇವರಿಗೆ ಸಂಬಂಧ ಕಲ್ಪಿಸಿದವನು ವ್ಯಕ್ತಿ. ಯಾವ ದೇವರೂ ಧರ್ಮವನ್ನು ಸ್ಥಾಪಿಸಲಿಲ್ಲ. ದೇವರೆಂಬುವ ಪರಿಕಲ್ಪನೆ ನಮ್ಮ ಪೂರ್ವಿಕರಲ್ಲಿ ಯಾವುದ್ಯಾವುದೋ ಕಾರಣಗಳಿಂದ ಮೂಡಿತ್ತು ಮತ್ತು ಅದರ ಕೋಪಕ್ಕೆ ಗುರಿಯಾಗದಿರಲು ಮತ್ತು ಅದರ ಅನುಗ್ರಹಕ್ಕೆ ಪಾತ್ರವಾಗಲು ನಾನಾ ದಾರಿಗಳನ್ನು ಕಂಡುಕೊಳ್ಳುತ್ತಿದ್ದರು. ಪ್ರಕೃತಿಯಲ್ಲಿನ ಸೂರ್ಯನಂತೆ ಅಥವಾ ನೀರಿನಂತೆ ದೇವರ ಪರಿಕಲ್ಪನೆಯು ಅತ್ಯಂತ ಸಮೃದ್ಧವಾಗಿ ಮತ್ತು ಮುಕ್ತವಾಗಿ ಎಲ್ಲರಿಗೂ ದೊರಕಿತ್ತು.

ಬೈಬಲ್ಲಿನ ಆದಿಕಾಂಡದಲ್ಲಿ ತನ್ನ ದೇವರು ಸೃಷ್ಟಿಯ ಕೆಲಸವನ್ನು ಮುಗಿಸುತ್ತಾನೆ. ನಂತರ ‘ತನ್ನ ಸ್ವರೂಪದ ಪ್ರತಿರೂಪವಾಗಿ ಮನುಷ್ಯನನ್ನು ನಿರ್ಮಿಸುತ್ತಾನೆ’ ಎಂದಿದೆ. ಆದರೆ ವಿಷಯವೇನೆಂದರೆ ಮನುಷ್ಯ ತನ್ನ ಸ್ವರೂಪಕ್ಕೆ ಪ್ರತಿರೂಪವಾಗಿ ದೇವರನ್ನು ಸೃಷ್ಟಿಸಿಕೊಂಡ. ತಾನು ವಾಸಿಸುವ ಪ್ರಕೃತಿಯಲ್ಲಿ ಎಲ್ಲಾ ವಸ್ತುಗಳ, ಪ್ರಕೃತಿಯ ಇತರ ಎಲ್ಲಾ ಜೀವಿಗಳ ಮೇಲೆ ಅಧಿಪತ್ಯ ಸಾಧಿಸಲು ಆಶಿಸಿದ್ದ ಮತ್ತು ತನಗೆ ಆ ಸಾಮರ್ಥ್ಯ ಇದೆ ಎಂದೂ ಅವನಿಗೆ ಅನ್ನಿಸಿತ್ತು. ಅದಕ್ಕಾಗಿ ದೇವರ ಬಾಯಿಂದಲೇ ಅದನ್ನು ಹೊರಡಿಸಿದ.

ಸಮುದ್ರದಲ್ಲಿರುವ ಮೀನುಗಳ ಮೇಲೆ, ಆಕಾಶದಲ್ಲಿ ಹಾರಾಡುವ ಹಕ್ಕಿಗಳ ಮೇಲೆ, ನೆಲದ ಮೇಲೆ ಓಡಾಡುವ ಎಲ್ಲಾ ಪ್ರಾಣಿಗಳ ಮತ್ತು ಹರಿದಾಡುವ ಕೀಟಗಳ ಮೇಲೆ, ಎಲ್ಲಾ ಭೂಮಿಯ ಮೇಲೆ ತಾನು ಸೃಷ್ಟಿಸುವ ಈ ಮನುಷ್ಯನಿಗೆ ಒಡೆತನವಿರಲಿ. ಎಲ್ಲಾ ಜೀವಿಗಳ ಮೇಲೆ ದೊರೆತನ ಮಾಡಿರಿ’ ಎಂದು ತನ್ನ ಆಸೆಯನ್ನು ದೇವರ ಬಾಯಿಂದ ಹೇಳಿಸಿದ. ಅದೇನೇ ಇರಲಿ, ತನ್ನ ರೂಪದ ಪ್ರತಿರೂಪದಲ್ಲಿ ಮನುಷ್ಯನ ಸೃಷ್ಟಿ ಮಾಡಿದ ಚಿತ್ರವನ್ನು ತನ್ನ ಕುಂಚದಲ್ಲಿ ಸೆರೆ ಹಿಡಿದ ಮೈಕಲ್ಯಾಂಜಲೋ ಓರ್ವ ಅಪ್ರತಿಮ ಕಲೆಗಾರ.

ಆದಮನ ಸೃಷ್ಟಿ

ದೇವರನ್ನು ವಯಸ್ಸಾದ ಪ್ರಬುದ್ಧ ವೃದ್ಧನಂತೆ ಚಿತ್ರಿಸಿ, ಎಳೆಯ ಯುವಕನಂತೆ ಆದಮನನ್ನು ಚಿತ್ರಿಸಿರುವ ಮೈಕಲ್ಯಾಂಜಲೋ ಮನುಷ್ಯನಿಗೆ ದೇವರಿಂದ ಜೀವಪ್ರಧಾನವಾಗುತ್ತಿರುವಂತೆ ಚಿತ್ರಿಸಿದ್ದಾರೆ. ಚಿತ್ರಪಟದ ಬಲಭಾಗದಲ್ಲಿ ಹಾರಾಡುತ್ತಿರುವ ದೇವರು ತನ್ನ ಗಣಗಳೊಂದಿಗೆ ಬೆತ್ತಲೆಯಾಗಿ ಆರಾಮವಾಗಿ ಅರೆಶಯನದಲ್ಲಿರುವ ಯುವ ಆದಾಮನಿಗೆ ತನ್ನ ತೋರು ಬೆರಳಿಂದ ಚೈತನ್ಯವನ್ನು ನೀಡುತ್ತಿದ್ದಾನೆ.

ಅದು ಅವನನ್ನು ಮುಟ್ಟಿಸಿಲ್ಲ. ಆ ಚಿತ್ರರೂಪಕಕ್ಕೆ ಬೇಕಾದಷ್ಟು ವಿವರಣೆಗಳನ್ನು ಕೊಡುತ್ತಾರೆ. ಅದೊಂದು ಅದ್ಭುತವಾದಂತಹ ಕಲಾಕೃತಿ, ಸಂಶಯವಿಲ್ಲ. ಇದೇ ಬಗೆಯಲ್ಲಿ ಆದಿಕಾಂಡದ ಕತೆಯೂ ಒಂದು ಸಾಹಿತ್ಯ ರೂಪಕವೆಂದು ಸಾಲುಗಳ ನಡುವೆ ಓದಲು ನಮ್ಮಲ್ಲಿ ಸಂಯಮವಿಲ್ಲ.

ಸುಮ್ಮನೆ ತರ್ಕಕ್ಕೆ ಹೀಗೆ ವಿಚಾರ ಮಾಡೋಣ. ಮನುಷ್ಯನಿಗಿಂತ ಮುನ್ನ ತಾನು ಬಹು ಪ್ರೇಮದಿಂದ, ಆಸ್ತೆಯಿಂದ ಸೃಷ್ಟಿಸಿದ ಪ್ರಕೃತಿಗೆ ಗೊಂದಲದ, ವಿಧ್ವಂಸಕ, ಕಿಲಾಡಿತನದ ಬುದ್ಧಿ ಮತ್ತು ಮನಸ್ಸುಳ್ಳ ಮನುಷ್ಯನಿಗೆ ದೊರೆತನ ನೀಡುತ್ತಾನೆಯೇ? ತನ್ನ ಸುಂದರ ಸೃಷ್ಟಿಯನ್ನು ತಾನೇ ನಾಶ ಪಡಿಸಿಕೊಳ್ಳಲು ಅವನು ಬಯಸುತ್ತಾನೆಯೇ?

ಹೋಗಲಿ, ಮುಂದೊಂದು ದಿನ ಮನುಷ್ಯ ಅದೆಷ್ಟು ಕೆಟ್ಟು ಕೆರ ಹಿಡಿದು ನಿಸರ್ಗವನ್ನು ನಾಶ ಮಾಡುತ್ತಾ ಮತ್ತು ತನ್ನ ಮನುಷ್ಯ ಜನಾಂಗಗಳಲ್ಲೇ ಹೊಡೆದಾಡಿಕೊಂಡು ಕೊಲ್ಲುತ್ತಿರುತ್ತಾನೆ ಮತ್ತು ಕೊಲ್ಲಲ್ಪಡುತ್ತಿರುತ್ತಾನೆ ಎಂದು ಭವಿಷ್ಯ ತಿಳಿಯದೇ ಹೋದನೇ?

ಅದು ಹಾಗಲ್ಲ. “ಮಾನವ ಜನ್ಮ ದೊಡ್ಡದು, ಅದ ಹಾನಿ ಮಾಡಬೇಡಿ ಹುಚ್ಚಪ್ಪಗಳಿರಾ” ಎಂದು ಪುರಂದರ ದಾಸರು ಎಚ್ಚರಿಸುತ್ತಾರೆ. ತನಗೆ ಆಲೋಚನೆ, ಸಂಕಲ್ಪ, ವಿವೇಚನೆ ಮಾಡುವ ಕಾರಣದಿಂದ ತಾನು ಜಗತ್ತಿನ ಎಲ್ಲಾ ಜೀವಿಗಳಿಗಿಂತ ಶ್ರೇಷ್ಟ ಎಂಬ ಅಹಂಕಾರ ಹೊಂದಿ ವಿಧ್ವಂಸಕನಾಗಿರುವ ಪರಿಯನ್ನು ನೋಡಿಯೇ ಅಧ್ಯಾತ್ಮದಲ್ಲಿ ಈ ವಿಶ್ವದಲ್ಲಿ ನೀನು ಎಷ್ಟು ಸಣ್ಣವ. ಬಂದು ಹೋಗುವವನಷ್ಟೇ. ನಿನಗೆ ಸಾವಿದೆ.ನೀನು ಇಲ್ಲಿ ಶಾಶ್ವತವಾಗಿ ಇರುವುದಿಲ್ಲ ಎಂದು ಜಗತ್ತಿನ ಮೂಲೆ ಮೂಲೆಗಳಿಂದ ಮನುಷ್ಯನ ಮನಸ್ಸಿನ ವಿಕೃತಿಗಳನ್ನು, ಕ್ರೌರ್ಯಗಳನ್ನು ಮತ್ತು ಶೋಷಣೆಗಳನ್ನು ಕಂಡು ಹೆದರಿದ ಕಾಳಜಿ ಇದ್ದ ಕರುಣಾಳುಗಳೆಲ್ಲರೂ ದೇವರೆಂಬ ಬೃಹತ್ತಾದ ಪರಿಕಲ್ಪನೆಯನ್ನು ಮುಂದೆ ನಿಲ್ಲಿಸಿ ಎಚ್ಚರಿಸುತ್ತಿದ್ದರು.

ಕಾಲನ ದೂತರು ಕಾಲ್ಪಿಡಿದೆಳೆವಾಗ, ತಾಳು ತಾಳೆಂದರೆ ತಾಳುವರೆ. ಧಾಳಿ ಬಾರದ ಮುನ್ನ ಧರ್ಮವ ಗಳಿಸಿರೋ” ಎಂದು ಪುರಂದರ ದಾಸರು ಸುಕೃತಕ್ಕೆ ಬದಲಾಗಿ ಮನಸ್ಸನ್ನು ವಿಕೃತವಾಗಿಸಿಕೊಳ್ಳುವ ಹುಚ್ಚಪ್ಪಗಳಿಗೆ ಹೇಳುತ್ತಾರೆ. ಯಾವುದು ಅವರು ಹೇಳುವ ಧರ್ಮ? ಅದು ನಮ್ಮ ಮನಸ್ಸಿನ ಆಲೋಚನೆಗಳಿಗೆ ಮತ್ತು ಲೆಕ್ಕಾಚಾರಗಳಿಗೆ ಮೀರಿರುವ ಸತ್ಯವೂ ಹೌದು ಮತ್ತು ಅದರ ಪ್ರಕಾರ ನಡೆದುಕೊಳ್ಳುವುದರ ಕ್ರಮ ಅಥವಾ ಮಾರ್ಗವೂ ಹೌದು.

ಆ ಸತ್ಯವೇ, ಆ ಉತ್ಕೃಷ್ಟ ಸಾರವೇ ದೀನ್. ಅದಕ್ಕೆ ದಾರಿಯನ್ನು ತೋರಲೆಂದೇ ದೇವರೆಂಬ ಬೆಚ್ಚಪ್ಪನನ್ನು ಮುಂದಿರಿಸಿದ್ದು, ಕ್ರಮವನ್ನು ರೂಪಿಸಿದ್ದು ಮತ್ತು ಮಾರ್ಗವನ್ನು ತೋರಿದ್ದು. ಆ ಧರ್ಮವೇ, ಆ ಮಾರ್ಗವೇ, ವಿನಯದಿಂದ ಅನುಸರಿಸುವ ಕ್ರಮವೇ ದೀನ್. ಶರಣು ಎಂಬುದು ಧ್ವನಿಸುವಂತಹ ದೀನಭಾವದ ದನಿ ಈ ದೀನ್.

ಕಾಬಾ ಭವನದ ಮೇಲೆ ದಾಳಿ

ಪ್ರವಾದಿ ಮುಹಮ್ಮದರ ತಾತ ಅಬ್ದುಲ್ ಮುತ್ತಲಿಬ್. ಅವರು ಸರದಾರರಾಗಿದ್ದರು. ಮಕ್ಕಾದಲ್ಲಿ ಅವರ ವಾಸ.ಕಾಬಾದಲ್ಲಿರುವ ಅಲ್ಲಾಹನ ಭವನವನ್ನು ಕಂಡರೆ ಯಮನ್ ದೇಶದ ರಾಜನಾದ ಅಬ್ರಹನಿಗೆ ಅಸಹನೆ ಮತ್ತು ಅಸೂಯೆ. ಆತ ಕ್ರೈಸ್ತ ಮತ್ತು ಅರೇಬಿಯಾದಲ್ಲಿ ತನ್ನ ನಿರ್ಮಾಣದ ಕ್ರೈಸ್ತ ದೇಗುಲ ಕೇಂದ್ರಾಕರ್ಷಣೆಯಾಗಬೇಕೆಂದು ಅವನ ಬಯಕೆ. ಕಾಬಾದ ಭವನವನ್ನು ನಾಶ ಮಾಡಲು ಸೈನ್ಯದೊಂದಿಗೆ ಬಂದ. ಆದರೆ ಅವನಿಗೇನೂ ಸರದಾರರಾಗಿದ್ದ ಅಬ್ದುಲ್ ಮುತ್ತಲಿಬ್ ಅವರಲ್ಲಿ ದ್ವೇಶವೇನೂ ಇರಲಿಲ್ಲ.

ಕಾಬಾವನ್ನು ಕೆಡವುವ ಕೆಲಸಕ್ಕೆ ಅಡ್ಡಿ ಬಂದರೆ ತಾನು ಜನರ ಮೇಲೆ ಆಕ್ರಮಣ ಮಾಡುವುದಾಗಿ ದೊಡ್ಡ ಸೈನ್ಯವನ್ನು ಮುಂದಿಟ್ಟುಕೊಂಡಿರುವ ಅಬ್ರಹ ಸಂದೇಶ ಕಳುಹಿಸಿದ. ಆದರೆ ಅವನು ಮಕ್ಕಾಗೆ ಬರುವಾಗಲೇ ತನ್ನ ದೋಚುವ ಕೆಲಸಕ್ಕೆ ತೊಡಗಿದ್ದು ಅದರಲ್ಲಿ ಅಬ್ದುಲ್ ಮುತ್ತಲಿಬ್ಬರ 200 ಒಂಟೆಯನ್ನೂ ಸೆರೆ ಹಿಡಿದುಕೊಂಡಿದ್ದ.

ರಾಜನ ರಾಯಭಾರಿ ಅಬ್ದುಲ್ ಮುತ್ತಲಿಬ್ಬರ ಬಳಿಗೆ ಬಂದು ತನ್ನ ರಾಜನ ಉದ್ದೇಶ ತಿಳಿಸಿದಾಗ, ಅವರು ರಾಜನನ್ನು ಕಾಣಲು ಹೋದರು. ಸರದಾರರ ವರ್ಚಸ್ಸಿನಿಂದಾಗಿ ಅವರ ಮೇಲೆ ರಾಜನಿಗೆ ಬಹಳ ಗೌರವವೂ ಮೂಡಿತ್ತು. “ನಾವು ಬಂದಿರುವುದು ನಿಮಗೆ ಏಕೆಂದು ತಿಳಿದಿದೆ. ನೀವು ನಮಗೆ ಏನು ಹೇಳಬೇಕೆಂದಿರುವವರೋ ಅದನ್ನು ಹೇಳಿ” ಎಂದ ಅಬ್ರಹ.

ನೀವು ವಶಪಡಿಸಿಕೊಂಡಿರುವ ನಮ್ಮ ಒಂಟೆಗಳನ್ನು ಬಿಟ್ಟುಬಿಡಿ” ಎಂದು ಅಬ್ದುಲ್ ಮುತ್ತಲಿಬ್ಬರು ಹೇಳಿದರು. ಅಬ್ರಹನಿಗೆ ಆಶ್ಚರ್ಯವಾಯಿತು. ತಮ್ಮ ಪೂರ್ವಜರು ಆರಾಧಿಸಿಕೊಂಡು ಬಂದಿರುವ ಅಲ್ಲಾಹನ ಭವನವನ್ನು ಕೆಡವಲು ಬಂದಿದ್ದೇನೆ ಎಂದರೆ ಈ ವ್ಯಕ್ತಿ ಅದೆಷ್ಟು ಲೌಕಿಕವಾಗಿ ತಮ್ಮ ಒಂಟೆಗಳನ್ನು ಬಿಟ್ಟುಬಿಡಿ ಎನ್ನುತ್ತಾರಲ್ಲಾ! ಆ ಕಾಬಾದ ಮಂದಿರಕ್ಕಿಂತ ತನ್ನ ಒಂಟೆಗಳೇ ಮುಖ್ಯವೇ? ಧಾರ್ಮಿಕ ಶ್ರದ್ಧೆಗೆ ಆದ್ಯತೆ ಇಲ್ಲವೇ ಎಂದು ಅವನ ಪ್ರಶ್ನೆ. ಯಾಕೆ ಹೀಗೆ ಎಂದು ಅಬ್ರಹ ಕೇಳುವನು.

ನಾನು ಈ ಒಂಟೆಗಳ ಒಡೆಯ. ಅದಕ್ಕಾಗಿ ಅದರ ಬಗ್ಗೆ ನಾನು ಮಾತಾಡುತ್ತೇನೆ. ಕಾಬಾದ ಭವನದ ಒಡೆಯ ಅಲ್ಲಾಹ್. ಅದನ್ನು ಅವನು ರಕ್ಷಿಸಿಕೊಳ್ಳುವನು” ಎಂದು ತಮ್ಮ ನಿಜವಾದ ಹೊಣೆಗಾರಿಕೆಯ ಬಗ್ಗೆ ಬದ್ಧತೆ ಪ್ರದರ್ಶಿಸುವುದು ಒಂದಾದರೆ, ಅಲ್ಲಾಹನ ಮೇಲಿನ ವಿಶ್ವಾಸ ಇನ್ನೊಂದು ಬಗೆಯದು. ತಾನು ಒಬ್ಬ ಶ್ರದ್ಧಾವಂತನಾಗಿ ಅಲ್ಲಾಹನ ಭವನವನ್ನು ತಾನು ರಕ್ಷಿಸುವೆನೆಂಬ ಉದ್ಧಟನವನ್ನು ತೋರದಿರುವುದರಲ್ಲಿ ದೇವರ ಶಕ್ತಿಯ ಮೇಲಿನ ವಿಶ್ವಾಸವನ್ನು ಪ್ರಕಟಿಸುತ್ತದೆ.

ಅಲ್ಲಾಹ್ ಅದನ್ನು ನನ್ನಿಂದ ರಕ್ಷಿಸಿಕೊಳ್ಳಲಾಗುವುದಿಲ್ಲ” ಎಂದು ಯಮನ್ ದೊರೆ ಅಬ್ರಹನು ಅಬ್ದುಲ್ ಮುತ್ತಲಿಬ್ಬರನ್ನು ಕೆಣಕಿದರೂ ಅವರು ಪ್ರಚೋದನೆಗೆ ಒಳಗಾಗುವುದಿಲ್ಲ. ಅವರು ಹೇಳುವುದಿಷ್ಟು, “”ರುಗಿಸುತ್ತಾನೆ. ಮುಂದೆ ಕಾಬಾ ಮೇಲಿನ ದಾಳಿಯು ವಿಫಲವಾಗಿ ಅಬ್ರಹ ಸತ್ತು ಅವನ ಸೈನ್ಯ ಪಲಾಯನಗೊಳ್ಳುತ್ತದೆ. ಆನೆಗಳ ವರ್ಷ ಎಂದು ಕರೆಯುವ ಅದರ ವಿವರ ಸಧ್ಯಕ್ಕೆ ಇಲ್ಲಿ ಬೇಡ. ಅದರ ಬಗ್ಗೆ ಮುಂದೆ ಬರುತ್ತದೆ. ಆದರೆ ನಾನು ಪ್ರಸ್ತಾಪಿಸಲು ಇಷ್ಟಪಡುವ ವಿಷಯವೇನೆಂದರೆ ತಾವು ನಂಬಿರುವ ದೇವರ ಮೇಲಿನ ವಿಶ್ವಾಸದಲ್ಲಿ ತಮ್ಮ ವಿನಯತೆಯನ್ನು ಪ್ರದರ್ಶಿಸುವ ಅಬ್ದುಲ್ ಮುತ್ತಲಿಬ್ಬರ ಧೋರಣೆ. ಅಲ್ಲಿ ಅಹಂಕಾರದ ಆರ್ಭಟವಿಲ್ಲ.

ದೇವರ ಭವನವನ್ನು ತಾವು ರಕ್ಷಿಸುವೆವು ಎಂಬ ಉದ್ಧಟತನವಿಲ್ಲ. ತಮ್ಮ ಶ್ರದ್ಧೆಯ ಕೇಂದ್ರದ ಮೇಲೆ ದಾಳಿ ಮಾಡಲು ಬಂದವರೊಂದಿಗೆ ವಂದಿಸಿ ಕುಳಿತುಕೊಂಡು ಮಾತಾಡುವ ವಿನಯವಂತಿಕೆ ಇದೆ. ತಮಗೆ ಏನಾಗಬೇಕು ಎಂದು ಸರಳವಾಗಿ ಮತ್ತು ನೇರವಾಗಿ ಹೇಳುವಂತಹ ಸ್ಪಷ್ಟತೆ ಇದೆ. ಇದು ಅಬ್ದುಲ್ ಮುತ್ತಲಿಬ್ಬರ ಅಲ್ಲಾಹನ ಮೇಲಿನ ವಿಶ್ವಾಸ ಮತ್ತು ಆತ್ಮ ವಿಶ್ವಾಸ ಕೂಡ. ಇಂತಹ ಧೋರಣೆ ಮತ್ತು ವರ್ತನೆಗಳ ಪರಂಪರೆಯ ಮನೆಯ ಮಗು ಮುಹಮ್ಮದ್. ಸಹಜವಾಗಿ ಅವು ರೂಢಿಗೆ ಬರುತ್ತವೆ. ಅದು ವಿಸ್ತಾರವಾಗುವುದು ಅವರ ಜನಾನುರಾಗದಿಂದ.

ಜೊತೆಗೆ ತಾತ ಸರದಾರರಾಗಿದ್ದರೂ, ತಾತನ ಪ್ರೀತಿ ವಾತ್ಸಲ್ಯಗಳನ್ನು ಅದೆಷ್ಟೇ ಪಡೆದಿದ್ದರೂ ಬಾಲ್ಯದಲ್ಲಿಯೇ ತಂದೆ ತಾಯಿ ಇಬ್ಬರನ್ನೂ ಕಳೆದುಕೊಂಡ ಅನಾಥ ಪ್ರಜ್ಞೆ ಅವರ ಭಾವುಕ ಸಂಬಂಧಗಳನ್ನು ಮತ್ತಷ್ಟು ಸೂಕ್ಷ್ಮಗೊಳಿಸಿದ್ದಿತ್ತು. ಕುಟುಂಬದ ಸಂಬಧಗಳನ್ನು ಮೀರುವ ವಾತ್ಸಲ್ಯದ ನೈತಿಕತೆಯನ್ನು ತಾನು ವಾಸಿಸುತ್ತಿದ್ದ ಗೊಂದಲದ ಮತ್ತು ಕೆಡುಕಿನ ಸಮಾಜಕ್ಕೆ ಮುಹಮ್ಮದ್ ಬೋಧಿಸಬೇಕಿತ್ತು. ಅದಕ್ಕೆ ಕುರಾನ್ ಎಂಬ ಮಾರ್ಗಸೂಚಿ ಬೇಕಾಗಿತ್ತು.

ವಿಗ್ರಹಾರಾಧನೆ, ದಾಸ್ಯ, ಶೋಷಣೆ, ಕ್ರೌರ್ಯ, ಸಂಘರ್ಷ, ಹೆಣ್ಗೂಸುಗಳ ಹತ್ಯೆ; ಇಂತವೆಲ್ಲಾ ಪ್ರಚಲಿತದಲ್ಲಿದ್ದ ಸಮಾಜಕ್ಕೆ, ಆ ಕಾಲದ ಅಗತ್ಯಕ್ಕೆ, ನೈತಿಕ ಮಾರ್ಗಕ್ಕೆ ತಾವು ಮಾರ್ಗದರ್ಶಿಯಾಗಿ ನಿಲ್ಲಬೇಕಾದ ಅಗತ್ಯವನ್ನು ಅವರು ಮನಗಂಡರೆಂದು ಕಾಣುತ್ತದೆ. ಅದು ಅವರ ಸಮಾಜಮುಖಿ ಚಿಂತನೆ, ಜೀವಪರ ಕಾಳಜಿ.

ಹೇಗೆ ಯೇಸುವು ಅಂತಹುದ್ದೇ ಒಂದು ಕೆಟ್ಟುಕೊಳೆಯುತ್ತಿದ್ದ ಸಮಾಜಕ್ಕೆ ತಾನು ಬೆಳಕು, ಸತ್ಯ ಮತ್ತು ಮಾರ್ಗವಾಗಿ ಬರಬೇಕೆಂದು ನಿರ್ಧರಿಸಿಕೊಂಡಿದ್ದರೋ ಅದೇ ಬಗೆಯಲ್ಲಿ ಈಗ ಇಲ್ಲಿ ಮುಹಮ್ಮದ್ ಮುಂದಾದರು. ಕುರಾನಿನ ಮೊದಲ ಅಧ್ಯಾಯವು ಇಸ್ಲಾಮಿನ ಪ್ರವೇಶಿಕೆಯಾಗಿ ನನಗೆ ತೋರುತ್ತದೆ.

(ಮುಂದುವರಿಯುವುದು)

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ

ಭಾರತದ ಜಾತಿ ತಾರತಮ್ಯವನ್ನ ಪ್ರಶ್ನಿಸುತ್ತಿರುವ ಚಲನಚಿತ್ರ ನಿರ್ದೇಶಕ ಪಾ.ರಂಜಿತ್..!

Published

on

  • ಮೂಲ : ನಿಹಾ ಮಸಿಹ, ಅನುವಾದ : ಹರೀಶ್ ಗಂಗಾಧರ್

ರಂಜಿತ್ ಚಿತ್ರರಂಗಕ್ಕೆ ಕಾಲಿಟ್ಟು ಹತ್ತು ವರುಷಗಳು!

ಪಾ ರಂಜಿತ್ ನಿಗೆ ಅವನವ್ವ “ನಿನ್ ಜಾತಿ ಬಗ್ಗೆ ಎಲ್ಲು ಹೇಳಿಕೊಳ್ಬೇಡ” ಅಂತ ಆಗಾಗ ನೆನಪಿಸುತ್ತಿದ್ದರಂತೆ. ತಾಯಿಯ ಈ ಕಿವಿಮಾತುಗಳ ಹೊರತಾಗಿಯೂ ಇಲ್ಲಿಯವರೆಗೆ ಇಡಿಯ ಚಿತ್ರರಂಗದಲ್ಲಿ ತೀರಾ ವಿರಳವೆನ್ನಬಹುದಾದ ಧೈರ್ಯವನ್ನೇ ತೋರಿದ. ತನ್ನ ಅಸ್ಮಿತೆಯನ್ನೇ ತನ್ನ ಚಿತ್ರಗಳಲ್ಲಿ ಕೇಂದ್ರವಾಗಿಸಿಕೊಂಡು. ರಂಜಿತ್ ಭಾರತದ ಮೊದಲ ಕಮರ್ಶಿಯಲಿ ಯಶಸ್ವಿ ಚಿತ್ರ ನಿರ್ದೇಶಕ/ನಿರ್ಮಾಪಕ. ದಶಕಗಳ ಸಕಾರಾತ್ಮಕ ಕಾನೂನು ಕ್ರಮ ಹಾಗು ತಾರತಮ್ಯ ನಿಷೇಧ ಕಾಯ್ದೆಗಳಿದ್ದರು ದೇಶದಲ್ಲಿ ಆಳವಾಗಿ ಬೇರೂರಿರುವ ಜಾತಿ ಆಧಾರಿತ ದಬ್ಬಾಳಿಗೆ ಕನ್ನಡಿ ಹಿಡಿಯುವ ರಂಜಿತ್ ಚಿತ್ರಗಳಲ್ಲಿ ದಲಿತರೇ ಮುಖ್ಯ ಪಾತ್ರಧಾರಿಗಳು.

ಅಮೇರಿಕಾದ ನಾಗರೀಕ ಹಕ್ಕು ಚಳುವಳಿ ಕಾಲದ ಕಪ್ಪು ಕಲಾವಿದರಿಂದ ಪ್ರೇರಿತರಾದ ರಂಜಿತ್ ತಮಿಳುನಾಡಿನಲ್ಲಿ ಈ ಹಿಂದೆ “ಅಸ್ಪೃಶ್ಯರೆಂದು” ಕರೆಸಿಕೊಳ್ಳುತ್ತಿದ್ದ ದಲಿತ ಸಮುದಾಯದ ಸಬಲೀಕರಣಕ್ಕೆ ಪಣ ತೊಟ್ಟು ವೇಗವಾಗಿ ಜನಪ್ರಿಯವಾಗುತ್ತಿರುವ ಸಾಂಸ್ಕೃತಿಕ ಕೇಂದ್ರವೊಂದನ್ನು ಸೃಷ್ಟಿಸಿದ್ದಾರೆ. ಇಲ್ಲಿಯವರೆಗೆ ಕೆಳ ಜಾತಿಯವರನ್ನ ಕಡೆಗಣಿಸಿದ ಅಥವಾ ಟೈಪ್ ಕಾಸ್ಟ್ ಮಾಡಿದ ಜನಪ್ರಿಯ ಸಂಸ್ಕೃತಿಯನ್ನ ಸಂಪೂರ್ಣವಾಗಿ ಬದಲಾಯಿಸುವುದೇ ಇದರ ಗುರಿಯಾಗಿದೆ. ಈ ನಿಟ್ಟಿನಲ್ಲಿ ರಂಜಿತ್ ಹಲವು ದಿಟ್ಟ ಹೆಜ್ಜೆಗಳನಿಟ್ಟಿದ್ದಾರೆ- ದಲಿತ ಲೇಖಕ ಹಾಗು ಕವಿಗಳಿಗೆ ಮುದ್ರಣಾಲಯ, ಜಾತಿ ವಿರೋಧಿ ಮ್ಯೂಸಿಕ್ ಬ್ಯಾಂಡ್, ದಲಿತ ಬದುಕು ಹಾಗು ಆಹಾರವನ್ನ ತೋರಿಸುವ ಯುಟ್ಯೂಬ್ ಚಾನೆಲ್.

“ನನ್ನ ಆಹಾರಾಭ್ಯಾಸಗಳು, ಸಂಗೀತ, ಕಲೆಯೆಲ್ಲವೂ ಜನಪ್ರಿಯ ಸಂಸ್ಕೃತಿಯಲ್ಲಿ ಬಿಂಬಿತವಾಗುವುದಕ್ಕಿಂತ ವಿಭಿನ್ನವಾಗಿವೆ. ಇದು ಜಾತಿಯತೇ ಕುರಿತು ಮಾತನಾಡುವುದಲ್ಲ. ಇದು ನನ್ನ ಸಂಸ್ಕೃತಿಯ ಮೇಲೆ ಚೆಲ್ಲುವ ಬೆಳಕು” ಎಂದು ತಮ್ಮ ಚೆನ್ನೈ ಆಫೀಸ್ ನಲ್ಲಿ ಕುಳಿತು ಅಭಿಮಾನದ ಮಾತುಗಳನ್ನಾಡುತ್ತಾರೆ ರಂಜಿತ್

ದಲಿತರು ಹಿಂದೂ ಧರ್ಮದ ತಾರತಮ್ಯ ಶ್ರೇಣಿ ವ್ಯವಸ್ಥೆಯ ಕೆಳ ಮೆಟ್ಟಿಲುಗಳ ಮೇಲೆ ಜಾಗ ಪಡೆಯುತ್ತಾರೆ . ವ್ಯಕ್ತಿಯ ಸ್ಥಾನ ಮಾನಗಳು ಆತನ ಹುಟ್ಟಿನಿಂದ ನಿರ್ಧಾರಿತವಾಗುತ್ತವೆ. ಮೀಸೆ ಬೆಳಿಸಿಕೊಂಡ ಅಥವಾ ಮದುವೆಯಲ್ಲಿ ಕುದುರೆ ಏರಿದನೆಂಬ ತೀರಾ ಕ್ಷುಲ್ಲಕ ಎನ್ನಬಹುದಾದ ಕಾರಣಗಳಿಗಾಗಿ ಮೇಲ್ಜಾತಿಯಿಂದ ಕೊಲ್ಲಲ್ಪಟ್ಟಿದ್ದಾರೆ ಅಥವಾ ನಾನಾ ರೀತಿಯ ಹಿಂಸೆಗೆ ಒಳಗಾಗಿದ್ದಾರೆ. ಇರಲು ನೆಲೆ, ಮೂಲಭೂತ ಸೌಕರ್ಯ ಅಥವಾ ಅಂತರ ಜಾತಿ ವಿವಾಹಗಳಿಗಾಗಿ ದೊಡ್ಡ ಮಟ್ಟದ ಹೋರಾಟವನ್ನೇ ಮಾಡಬೇಕಾಗುತ್ತದೆ.

ಈ ದೇಶದಲ್ಲಿ ಜಲಗಾರರಾಗಿ, ಜಾಡಮಾಲಿಗಳಾಗಿ, ಹೊಲಸು ಗುಂಡಿಗಳನ್ನ ತನ್ನ ಕೈಗಳಿಂದ ತೊಳೆದು ಬದುಕಬೇಕಾದಂತಹ ಒತ್ತಡ ಸಮಾಜ ಅವರ ಮೇಲಿ ಹೇರಿದೆ. ಜಾತಿಪದ್ಧತಿ ಅನ್ನೋದು ಬರಿಯ ಭಾರತದಲ್ಲಿ ಮಾತ್ರ ಬಲಿಷ್ಠವಾಗಿರದೆ ಅಮೇರಿಕದಲ್ಲಿ ನೆಲೆಸಿರುವ ಭಾರತೀಯರಲ್ಲೂ ಆಳವಾಗಿ ಬೇರೂರಿದೆ. ಜಾತಿ ಎಂಬ ಪಿಡುಗನ್ನ ಪ್ರಪಂಚಾದ್ಯಂತ ನೆಲೆಸಿರುವ ಇಂಡಿಯನ್ ಡಯಾಸ್ಪೋರಗಳಲ್ಲಿ ಕಾಣಬಹುದು.

“ಹೋರಾಟವೆಂಬುದು ದಲಿತನ ಪ್ರತಿ ದಿನದ ಅನುಭವ. ಅದೇ ಅವನ ಬದುಕು. ನನ್ನ ಬದುಕು ಕೂಡ ಒಂದು ಪ್ರಬಲ ಪ್ರತಿರೋಧ. ನಾನಷ್ಟೇ ಅಲ್ಲ ನನ್ನವರೆಲ್ಲಾ ಶೋಷಣೆ, ದಬ್ಬಾಳಿಕೆ, ಹಾಗು ತಾರತಮ್ಯ ಕುರಿತಾದ ಕಥೆಗಳ ಉಗ್ರಾಣ ಎನ್ನುತ್ತಾರೆ” ಪಾ. ರಂಚಿತ್.

ಈ ವರ್ಷ ಚಿತ್ರೋದ್ಯಮಕ್ಕೆ ರಂಜಿತ್ ಕಾಲಿಟ್ಟು ದಶಕ ಕಳೆದಿವೆ. ಅಮೇರಿಕಾದ ಕಪ್ಪು ಇತಿಹಾಸ ಮಾಸದಿಂದ ಪ್ರೇರಿತರಾಗಿ ಏಪ್ರಿಲ್ ತಿಂಗಳಲ್ಲಿ ರಂಜಿತ್ ಆಯೋಜಿಸಿದ್ದ ದಲಿತ ಇತಿಹಾಸ ಮಾಸದಲ್ಲಿ ನೂರಾರು ಜನರು ಭಾಗವಹಿಸಿದ್ದರು. ಅದೊಂದು ಕಲಾ ಹಬ್ಬ, ಸಂಭ್ರಮ ಮತ್ತು ಅದ್ದೂರಿ ಉತ್ಸವ. ಕಳೆದ ತಿಂಗಳು ರಂಜಿತ್ ಕಾನ್ಸ್ ಸಿನಿ ಉತ್ಸವದಲ್ಲಿ ಮೊದಲ ಬಾರಿ ಕಾಣಿಸಿಕೊಂಡರು ಕೂಡ. ಮುಂಬರುವ ದಿನಗಳಲ್ಲಿ ಬುಡಕಟ್ಟು ಜನಾಂಗಕ್ಕೆ ಸೇರಿದ ನಾಯಕನ ಕತೆ ಆಧಾರಿತ ಚಿತ್ರದ ಮೂಲಕ ಬಾಲಿವುಡ್ಡಿಗೂ ಪಾದಾರ್ಪಣೆ ಮಾಡಲಿದ್ದಾರೆ.

ನಾನಾ ವೇದಿಕೆಗಳಲ್ಲಿ ತಮ್ಮ ಕತೆಗಳನ್ನ ಹಂಚಿಕೊಳ್ಳಲು ಹಲವರಿಗೆ ರಂಜಿತ್ ಉತ್ತೇಜಿಸಿ ಅವಕಾಶ ಕಲ್ಪಿಸಿಕೊಡುತ್ತಿದ್ದಾರೆ. ರಂಜಿತ್ ಸೃಷ್ಟಿಸಿದ ಅಧಿಕೃತ ಯೌಟ್ಯೂಬ್ ಚಾನೆಲ್- “ನೀಲಂ ಸೋಶಿಯಲ್” ಕಛೇರಿಯಲ್ಲಿ, ಇಪ್ಪತ್ತೊಂದು ವರ್ಷದ ಹುಡುಗಿ ಅಭೀಷ ತನ್ನ ಜನರ ಬಗ್ಗೆ Rap ಸಾಂಗ್ ಒಂದನ್ನು ಹಾಡುತ್ತಿದ್ದಾಳೆ

” ಅವರ ಕಣ್ನೋಟದಿಂದ ದೂರಾಗಿ
ನೆಲೆಸಿದವು ಊರ ಹೊರಗೆ ಯಾರಿಗೂ ಬೇಡವಾಗಿ
ನಮ್ಮ ನಾಡಿನಲ್ಲೇ ಬದುಕಿಬೇಕಾಯಿತು ನಿರಾಶ್ರಿತರಾಗಿ
ಹಕ್ಕುಗಳನ ಕಿತ್ತು ಕೊಂಡಿರಿ ಎಂದು ಬಾಳಲಿಲ್ಲ ನಾವು ನಿಮ್ಮಲ್ಲಿ ಒಂದಾಗಿ”

ದಲಿತರು ಪ್ರತಿಭಟನೆಗಳಲ್ಲಿ ಬಳಸುವ ವಾದ್ಯಗಳ ಕುರಿತು ಸಾಕ್ಸ್ಯಚಿತ್ರ ಮಾಡಿದ್ದಾಳೆ ಅಭೀಷ. ಚೆನ್ನೈ ನಗರದ ಸ್ಲಂವಾಸಿಗಳನ್ನ ಏಕಾಏಕಿ ಹೊರಹಾಕಿದರ ಬಗ್ಗೆ ಕತೆಗಳನ್ನ ಬರೆದಿದ್ದಾಳೆ. ಮೇಲಿನ Rap ಸಾಂಗಿಗೆ ಈ ಕತೆಗಳಿಗೆ ಸ್ಪೂರ್ತಿಯಾದವು.

“ನಾ ಹಾಡಿದ ಹಾಡು, ಬರೆದ ಕತೆಗಳು ಕೆಲ ಜನರಿಗಷ್ಟೇ ತಲಪಬಹುದು. ಸಣ್ಣ ಅಲೆಗಳನ್ನಾದರೂ ಸೃಷ್ಟಿಸಲು ನಾನು ಇವುಗಳನ್ನ ಮಾಡಲೆಬೇಕು… ನನ್ನ ದನಿ ಮುಖ್ಯ. ನನ್ನ ದನಿ ಮುಖ್ಯ. ನನ್ನ ಕೆಲಸ ಮುಖ್ಯ. ನಾನು ಈ ಕೆಲಸ ಮಾಡದಿದ್ದರೆ ಬೇರಾರು ಮಾಡರು.” ಎನ್ನುತ್ತಾಳೆ ಅಭೀಷ

ರಂಜಿತ್ ಆರಂಭಿಸಿದ ಚಾನೆಲ್ನಲ್ಲಿ ತುಂಬಾ ಜನಪ್ರಿಯವಾದ ಕಾರ್ಯಕ್ರಮ ದಲಿತರ ಆಹಾರದ್ದು. ಇತ್ತೀಚಿನ ಎಪಿಸೋಡ್ ದನದ ಮಾಂಸದಿಂದ ಮಾಡಿದ ಭಕ್ಷ್ಯದ ಬಗ್ಗೆ ಇತ್ತು. ಶತಶತಮಾನಗಳಿಂದ ಬೇರೆಲ್ಲರಿಂದ ಬೇರ್ಪಟ್ಟು ಬಾಳಿದ ದಲಿತ ಸಮುದಾಯಕ್ಕೆ ದನದ ಮಾಂಸ ಮಹತ್ವದ ಆಹಾರ. ದನದ ಮಾಂಸದ ಮೇಲೀಗ ನಿಷೇದ ಹೇರಲಾಗಿದೆ. ಗೋವು ಹಿಂದೂಗಳಿಗೆ ಪವಿತ್ರವಾದುದು. ಸಾಕಾಷ್ಟು ದಲಿತರು ಗೋವಿನ ಹೆಸರಲ್ಲಿ ಹಿಂಸೆ ಅನುಭವಿಸಿದ್ದಾರೆ. ಮತ್ತೊಂದೆಡೆ ದಲಿತರನ್ನ ಹೊರತುಪಡಿಸಿ ವರರು ಕುದುರೆ ಏರಿ ಮೆರವಣಿಗೆ ಹೋಗುವುದು ಭಾರತದಲ್ಲಿ ಸಂಪ್ರದಾಯ. ದಲಿತರು ಕುದುರೆ ಏರಿದಾಗ ಅಹಿತಕರ ಘಟನೆಗಳು ನೆಡೆದುಹೋಗಿದೆ.

ಹಲವಾರು ಸ್ಟುಡಿಯೋಗಳಿಗೆ ತವರಾಗಿರುವ ಚೆನ್ನೈನ ಮತ್ತೊಂದು ಮೂಲೆಯಲ್ಲಿ ರಂಜಿತ್ “ಕೂಗೈ” ಎಂಬ ಗ್ರಂಥಾಲಯ ಕಟ್ಟಿದ್ದಾರೆ. ಕೂಗೈ ಎಂದರೆ ತಮಿಳಿನಲ್ಲಿ ಗೂಬೆ ಎಂದರ್ಥವಾದರೂ ಜಾತಿ ದೌರ್ಜನ್ಯವನ್ನ ಉಗ್ರವಾಗಿ ವಿರೋಧಿಸಿದ ಜನಪ್ರಿಯ ತಮಿಳು ಕಾದಂಬರಿ “ಕೂಗೈ” ಶೀರ್ಷಿಕೆಯನ್ನೇ ಗ್ರಂಥಾಲಯಕ್ಕಿಡಲಾಗಿದೆ.

“ಸಣ್ಣ ಸಣ್ಣ ಪಟ್ಟಣ ಹಾಗು ಹಳ್ಳಿಗಳಿಂದ ಕನಸುಗಳನೊತ್ತು ತಮಿಳು ಚಿತ್ರೋದ್ಯಮದಲ್ಲಿ ಕೆಲಸ ಮಾಡಲು ಬಹಳ ಮಂದಿ ಬರುತ್ತಾರೆ. ಅವರು ಇಲ್ಲಿಗೆ ಬಂದ ಮೇಲೆ ದಾರಿ ಕಾಣದಾಗುತ್ತದೆ.” ಎನ್ನುತ್ತಾರೆ ಮೂವತ್ತು ಮೂರೂ ವಯಸ್ಸಿನ ಮೂರ್ತಿ. ಮೂರ್ತಿ ಗ್ರಂಥಾಲಯದ ಮೇಲ್ವಿಚಾರಕ. ಸಿನೆಮಾ ಸಂಬಂಧಿತ ನೂರಾರು ಪುಸ್ತಕಗಳಿವೆ ಕೂಗೈನಲ್ಲಿ. ಅಲ್ಲಿ ಕಾರ್ಯಾಗಾರ ನೆಡೆಯುತ್ತವೆ. ಉತ್ತಮ ಚಿತ್ರಗಳು ಪ್ರದರ್ಶನಗೊಳ್ಳುತ್ತವೆ.

ಹಳ್ಳಿಯಲ್ಲಿ ಬರಿಯ ತಾಯಿಯ ಆರೈಕೆಯಲ್ಲಿ ಬೆಳೆದಿದ್ದ ಮೂರ್ತಿ ಹಲವು ಕನಸುಗಳನ್ನ ಹೊತ್ತುಕೊಂಡು ಚಿತ್ರೋದ್ಯಮಕ್ಕೆ ಬಂದರು ಆದರೆ ಏನನ್ನೂ ಸಾಧಿಸಲಾಗದೆ ಹೀನಾಯವಾಗಿ ಸೋತರು. ವರುಷಗಳ ನಂತರ ಚೆನ್ನೈ ನಗರಕ್ಕೆ ಮರಳಿ ಬಂದಾಗ ಗ್ರಂಥಾಲಯ ನಿರ್ಮಾಣ ಹಂತದಲ್ಲಿತ್ತು. ಹೊಸದಾಗಿ ಕಲಿತು, ಬೆಳೆಯಲು ನೆಲೆಯೊಂದು ಸಿಕ್ಕಿತು. ಹೋದ ವರುಷ ಸಹಾಯಕ ನಿರ್ದೇಶಕನಾಗಿ ಚಿತ್ರವೊಂದಕ್ಕೆ ಕೆಲಸ ಮಾಡುವ ಅವಕಾಶ ಮೂರ್ತಿಗೆ ಸಿಕ್ಕಿದೆ. ” ರಂಜಿತ್ ನಮಗೆಲ್ಲ ದಾರಿ ತೋರಿ ಬೆಳೆಸಿದರು. ಮುಂದಿನ ದಶಕದಲ್ಲಿ ಚಿತ್ರೋದ್ಯಮದ ಶ್ರೇಷ್ಠ ನಿರ್ದೇಶಕರು ಕೂಗೈ ನಿಂದ ಬರಲಿದ್ದಾರೆ” ಎಂದು ವಿಶ್ವಾಸದಿಂದ ಹೇಳುತ್ತಾರೆ ಮೂರ್ತಿ.

ಇಷ್ಟೊಂದು ಮಹತ್ವಾಕಾಂಕ್ಷೆಯುಳ್ಳ ಮೂವತ್ತೊಬ್ಬತ್ತು ವರ್ಷದ ರಂಜಿತ್ ನಿರಂಹಕಾರಿ. ಬಿಳಿಯ ಕಾಟನ್ ಶರ್ಟ್ ಮತ್ತು ನೀಲಿ ಷರಾಯಿ ತೊಟ್ಟು ತನ್ನ ಸಾಧಾರಣವಾಗಿ ಸಜ್ಜುಗೊಳಿಸಿದ, ಚಲನಚಿತ್ರ ಸಂಬಂಧಿ ಯಾವುದೇ ಪರಿಕರ ಉಪಕರಣಗಳಿಲ್ಲದ ಆಫೀಸ್ಗೆ ಬರೋದು ಸಾಮಾನ್ಯ. ಆಫೀಸ್ನಲ್ಲೋ ಎಲ್ಲೆಲ್ಲೂ ಪುಸ್ತಕಗಳು! ಸಂವಿಧಾನ ಶಿಲ್ಪಿ, ದಲಿತರ ಮಹಾನಾಯಕ ಗೌರವಾನ್ವಿತ ಭೀಮ್ ರಾವ್ ಅಂಬೇಡ್ಕರವರ ಚಿತ್ರಗಳು, ಪ್ರತಿಮೆಗಳು.

ರಂಜಿತ್ ವೃತ್ತಿ ಜೀವನ ಆತನ ಮೊದಲೆರಡು ಚಿತ್ರಗಳ ಭಾರಿ ಯಶಸ್ಸಿನಿಂದ ಆರಂಭಗೊಂಡಿತು. ತಮಿಳು ಚಿತ್ರಗಳಲ್ಲಿ ಜಾತಿ ಪ್ರಾತಿನಿಧಿತ್ವದ ಬದಲಾಯಿಸಿದ ಶ್ರೇಯಸ್ಸು ರಂಜಿತ್ಗೆ ಸಲ್ಲಬೇಕು. “ಆತನೊಬ್ಬ ಅತ್ಯುತ್ತಮ ನಿರ್ದೇಶಕ. ಯಾವುದೇ ಅಳುಕಿಲ್ಲದೆ, ಭಯವಿಲ್ಲದೆ ತಮ್ಮ ಐಡೆಂಟಿಟಿಯ ಕುರಿತು ಮಾತನಾಡುವ ಧೈರ್ಯ ತುಂಬಿ ಹೊಸಬರಿಗೆ ಹೊಸ ಹಾದಿ ಸೃಷ್ಟಿಸಿದ್ದಾನೆ ರಂಜಿತ್” ಅನ್ನೋದು ಪ್ರಖ್ಯಾತ ಸಿನಿ ವಿಮರ್ಶಕ ಭಾರದ್ವಾಜ್ ರಂಗನ್ ರವರ ಅಭಿಪ್ರಾಯ.

ರಂಜಿತ್ ಅವರಿಗೆ ಬಹುದೊಡ್ಡ ಬ್ರೇಕ್ ಸಿಕ್ಕಿದ್ದು ಜಗತ್ತಿನಾದ್ಯಂತ ಕೋಟ್ಯಂತರ ಅಭಿಮಾನಿಗಳಿದ್ದ ರಜನಿಕಾಂತ್ ಅವರನ್ನ ಭೇಟಿಯಾದಾಗ. ಇವರಿಬ್ಬರ ಜೋಡಿ ಎರಡು ಮೆಗಾ ಹಿಟ್ಗಳನ್ನ ನೀಡಿತು. ಕಾಲ (ಕಪ್ಪು) ಚಿತ್ರದಲ್ಲಿ ರಜನಿಕಾಂತರದು ದಲಿತನ ಪಾತ್ರ. ಮುಂಬೈ ಸ್ಲಾಮ್ ಒಂದರಲ್ಲಿ ಬದುಕುವ ಈತ ಭ್ರಷ್ಟ ರಾಜಕಾರಣಿಯೊಬ್ಬನನ್ನ ಎದುರಿ ಹಾಕಿಕೊಳ್ಳುತ್ತಾನೆ. ಕಬಾಲಿ ಈ ಜೋಡಿಯ ಮತ್ತೊಂದು ಚಿತ್ರ. ಎರಡು ಚಿತ್ರಗಳು ಬಾಕ್ಸ್ ಆಫೀಸ್ ಗಳಿಕೆಯಲ್ಲೂ ಬಾರಿ ಸದ್ದುಮಾಡಿದವು.

“ಮೊದಲೆಲ್ಲಾ ನಿರ್ಮಾಪಕರು ಇಂತಹ ಚಿತ್ರದಲ್ಲಿ ಹೂಡಿಕೆ ಮಾಡಲು ಹಿಂಜರಿಯುತ್ತಿದ್ದರು. ಹೂಡಿದ ದುಡ್ಡು ವಾಪಸ್ ಬರಲ್ಲ ಅಂತ ಸಬೂಬು ಹೇಳುತ್ತಿದ್ದರು. ನನ್ ಐಡಿಯಾ ತುಂಬಾ ಸಿಂಪಲ್. ಮುಖ್ಯ ವಾಹಿನಿ ಚಲನ ಚಿತ್ರಗಳ ವೀಕ್ಷಕರು ಕೂಡ ನಮ್ಮ ಚಿತ್ರಗಳಲ್ಲಿ ತೊಡಗಿಸಿಕೊಳ್ಳುವಂತಹ ಎಂಟರ್ಟೈನಿಂಗ್ ಚಿತ್ರ ಮಾಡಬೇಕು” ಎನ್ನುತ್ತಾರೆ ರಂಜಿತ್.

ಜಾತಿ ದಬ್ಬಾಳಿಕೆ ಹಾಗು ತಾರತಮ್ಯ ಕುರಿತಾದ ತೀಕ್ಷ್ಣ ನಿಷ್ಪಕ್ಷಪಾತ ವಿಮರ್ಶೆಗಳನ್ನ ಹಿಂದೂ ಧರ್ಮದ ಟೀಕೆಯೆಂದೇ ಗ್ರಹಿಸುವ ಹಿಂದೂ ರಾಷ್ಟ್ರವಾದಿಗಳ ತೀವ್ರ ವಿರೋಧ ರಂಜಿತನನ್ನ ವಿಚಲಿತಗೊಳಿಸಿಲ್ಲ. ಹಿಂದೂ ಫೋಬಿಯ ಎಲ್ಲರ ಮನಸಲ್ಲಿ ಮೂಡಿಸಿದ ಆರೋಪವೂ ರಂಜಿತ್ ಮೇಲಿದೆ. ಪುರಾತನ ಹಿಂದೂ ರಾಜನ ಬಗ್ಗೆ ನೀಡಿದ ಹೇಳಿಕೆಯಿಂದ ರಂಜಿತ್ ವಿರುದ್ಧ ದೂರು ದಾಖಲಾಗಿದೆ. ಈ ದೂರುಗಳು, ನಿಂದನೆಗಳಾವುದರ ಬಗ್ಗೆಯು ರಂಜಿತ್ ತಲೆ ಕೆಡಿಸಿಕೊಂಡಿಲ್ಲ. “ಜನ ನನ್ನನ್ನ ಮುಂಗೋಪಿ ಅಂತ ಅಂದುಕೊಂಡಿದ್ದಾರೆ ಆದರೆ ನಾನು ಮುಂಗೋಪಿಯಲ್ಲ. ನನ್ನ ದೈವ ಅಂಬೇಡ್ಕರ್ ರಂತೆ ನಾನು ಕೂಡ ಹಠಮಾರಿ ಮತ್ತು ನನ್ನ ಗುರಿಗಳಿಗೆ ಸದಾ ಬದ್ಧನಷ್ಟೇ. ಸಮಾನತೆಯೊಂದೇ ನಾನು ಮುಂದಿನ ಪೀಳಿಗೆ ಬಿಟ್ಟು ಹೋಗ ಬಯಸುವ ಸ್ವತ್ತು.” ಎನ್ನುತ್ತಾರೆ ರಂಜಿತ್.

(ವಾಷಿಂಗ್ಟನ್ ಪೋಸ್ಟ್ ನಲ್ಲಿ ಪ್ರಕಟವಾದ ನಿಹಾ ಮಸಿಹ ಅವರ ಲೇಖನ) ಅನುವಾದ: ಹರೀಶ್ ಗಂಗಾಧರ್

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂತರಂಗ

ವರ್ಕ್ ಹಾರ್ಡ್ , ದೆನ್ ಯು ವಿಲ್ ಸಕ್ಸಸ್ ; ಯುಪಿಎಸ್ಸಿ ಪರೀಕ್ಷೆ ಬಗ್ಗೆ ದಾವಣಗೆರೆ ಎಸ್ಪಿ ರಿಷ್ಯಂತ್ ಮಾತು..!

Published

on


ಹಣ, ಪ್ರಭಾವವಿದ್ದರೆ ಸಿವಿಲ್ ಸರ್ವೀಸ್ ಪಾಸಾಗಲು‌ ಸಾಧ್ಯವಿಲ್ಲ.’ : ಎಸ್ಪಿ ಸಿ ಬಿ ರಿಷ್ಯಂತ್


ಸುದ್ದಿದಿನ,ದಾವಣಗೆರೆ : ನಾನು ಮೊದಲು ಹೇಳೋದಕ್ಕೆ ಇಷ್ಟ ಪಡೋದು ಏನೂ ಅಂದ್ರೆ, ಯುಪಿಎಸ್ಸಿ ಎಕ್ಸಾಂ ಅಂದ್ರೆ ಸಾಕು. ಏನೇನೋ ಊಹಾಪೋಹ ಇರುತ್ತೆ. ಅದನ್ನು ತೆಗೆದು ಹಾಕಬೇಕು. ‘ನೌವ್, ಐ ಎಮ್ ಟೆಲ್ ಎಬೌಟ್ ಯುಪಿಎಸ್ಸಿ ಎಕ್ಸಾಂ. ಯುಪಿಎಸ್ಸಿ ಎಕ್ಸಾಂ ಅಂದ್ರೆ ಅನೇಕರ ತಲೆಯಲ್ಲಿ ‘ಸರ್ಟನ್ ಥಿಂಗ್ಸ್ ಆರ್ ದೇರ್ ಎಂಬ ಕಲ್ಪನೆ ಇರುತ್ತದೆ. ‘ ಇದರಲ್ಲಿ ಏನೋ ನಡೆಯುತ್ತಂತೆ, ಅವರಿಗೆ ಬೇಕಾದವರನ್ನು ಆಯ್ಕೆ ಮಾಡುತ್ತಾರಂತೆ.

ಪ್ರಿಲಿಮ್ಸ್, ಮೇನ್ಸ್ ಕ್ಲಿಯರ್ ಮಾಡಿದ್ರೂ, ಸಂದರ್ಶನದಲ್ಲಿ ಏನೋ ಅಡ್ಜೆಸ್ಟೆಮೆಂಟ್ ಆಗುತ್ತೆ. ನಮ್ಮಂಥವರಿಗೆ ಸಿಗೋದಿಲ್ಲ. ರಾಜಕೀಯ ಪ್ರಭಾವ ಬೇಕು. ನಾನು ಐಪಿಎಸ್ ಆಫೀಸರ್ ಆಗೋಕೆ ಸಾಧ್ಯವಿಲ್ಲ. ಹಣ ಇದ್ದರೆ ಮಾತ್ರ ಯುಪಿಎಸ್ಸಿ. ನಂಥಿಂಗ್. ಡೋಂಟ್ ಬಾದರ್ ಆ್ಯಬೌಟೋ ಧಿಸ್ ಥಿಂಗ್
ಇಂತಹ ಊಹ ಪೋಹ ಬಿಟ್ಟುಬಿಡಿ. ಇವ್ಯಾವೂ ನಡೆಯಲ್ಲ. ಕಷ್ಟಪಟ್ಟು ಓದಬೇಕು. ಯುಪಿಎಸ್ಸಿ ಎಕ್ಸಾಂ ಪಾಸ್ ಆಗಬೇಕು..! ”

ಹೀಗಂಥ ಒಬ್ಬ ಸಾಮಾನ್ಯ ವ್ಯಕ್ತಿ ಹೇಳಿದ್ದರೇ ಯಾರೂ ತಲೆ ಕೆಡಿಸಿಕೊಳ್ಳುವ ಅವಶ್ಯಕತೆ ಇರಲಿಲ್ಲ. ಆದರೆ ಇದನ್ನು ಹೇಳಿದ್ದು 2013 ರ ಬ್ಯಾಚ್ ನ ಯುಪಿಎಸ್ಸಿ ಎಕ್ಸಾಂನಲ್ಲಿ ರಾಜ್ಯದ ಟಾಪರ್ ರಲ್ಲಿ ಒಬ್ಬರಾದ ಸಿ.ಬಿ.ರಿಷ್ಯಂತ್. ‘ಯುಪಿಎಸ್ಸಿ ಎಕ್ಸಾಂ ಅಂದ್ರೆ ಇದರಲ್ಲಿ ಏನೋ ನಡೆಯುತ್ತೆ. ನೆವರ್. ಇದನ್ನು ಶೇ.100 ರಷ್ಟು ತಲೆಯಿಂದ ತೆಗೆದುಬಿಡಿ. ಶ್ರದ್ದೆ, ಪರಿಶ್ರಮ ಇದ್ದರೆ ಸಾಕು’ ಎನ್ನುತ್ತಾರೆ ರಿಷ್ಯಂತ್.

ಯುಪಿಎಸ್ಸಿ ಎಕ್ಸಾಂ ಇಡೀ ದೇಶದಲ್ಲಿ ಉನ್ನತ ಪರೀಕ್ಷೆ. ಪಾರದರ್ಶಕವಾಗಿ ನಡೆಯುತ್ತದೆ. ಮೆರಿಟ್ ಬೇಸ್ ಮೇಲೆ ಎಕ್ಸಾಂ ನಡೆಯುತ್ತದೆ. ಪ್ರಿಮಿಲ್ಸ್ ಆಬ್ಜಿಕ್ಟೀವ್ ಮಾದರಿ ಆಗಿರುತ್ತದೆ. ಸುಮ್ಮನೆ ಮನಸ್ಸಿಗೆ ತೋಚಿದ್ದನ್ನ ರೌಂಡ್ ಮಾರ್ಕ್ ಹಾಕಿದರೆ ಸಾಕು. ಪಾಸ್ ಆಗಬಹುದು ಎಂಬ ಭ್ರಮೆ ಬಿಡಬೇಕು.

ಕೆಎಎಸ್, ಬ್ಯಾಂಕಿಂಗ್, ಕೆಪಿಎಸ್ಸಿಯ ಎಲ್ಲಾ ಎಕ್ಸಾಂ ಬರೆಯೋದು. ಯಾವುದಾದರೂ ಒಂದು ಸಿಗುತ್ತೆ ಎಂದು ಬರೆದರೆ ಅದು ಖಂಡಿತ ಆಗೋದಿಲ್ಲ. ” ಬೈ ಲಕ್ ” ಅನ್ನೊದನ್ನು ಬಿಡಬೇಕು. ಯುಪಿಎಸ್ಸಿಗೆ ಓದು ಒಂದೇ ದಾರಿ. ಹಾಗಂತ ಬುಕ್ ಹಿಡಿದು ಇಡೀ ದಿನ ಓದುವುದಲ್ಲ‌. ಬದಲಾಗಿ ವಾರದಲ್ಲಿ ಯಾವ ವಿಷಯ ಎಷ್ಟು ಓದಬೇಕು ಎಂಬುದನ್ನು ಡಿಸೈಡ್ ಮಾಡ್ಕೊಬೇಕು. ಆಗಾಗ ರೆಸ್ಟ್ ಕೊಡಬೇಕು. ನಾನು ಕೂಡ ಹಾಗೇ ಓದಿದ್ದು, ಸ್ವಲ್ಪ ಹೊತ್ತು ಓದು, ಸ್ವಲ್ಪ ಹೊತ್ತು ಫ್ರೆಂಡ್ಸ್‌ ಜೊತೆ ಹರಟೆ. ನಡು ನಡುವೆ ಸ್ನಾಕ್ಸ್ ತಿನ್ನುತ್ತಿದ್ದೆ. ಹೀಗಾದಾಗ ಮೈಂಡ್ ಫ್ರೀಯಾಗುತ್ತದೆ.

ಯುಪಿಎಸ್ಸಿ ಎಕ್ಸಾಂಗೆ ಸಿಲಿಬಿಸ್ ಇಡುತ್ತಾರೆ. ಪ್ರಿಲಿಮ್ಸ್, ಮೈನ್ಸ್ ಟಾಪಿಕ್ ಇದೆ, ಎಕ್ಸಾಂ ಇದೆ. ಆ ಸಿಲಿಬಸ್ ಪ್ರಕಾರ ಮೆಟಿರಿಯಲ್ ತಗೊಂಡು ಓದಬೇಕು. ಯುಪಿಎಸ್ಸಿ ಎಕ್ಸಾಂ ಪಾಸ್ ಆಗೋದಕ್ಕೆ ಶೇ.95 ರಷ್ಟು ಹಾರ್ಡ್ ವರ್ಕ್ ಮಾಡಬೇಕು.

ಯುಪಿಎಸ್ಸಿಯನ್ನು ಹೆಚ್ಚು ಬುದ್ದಿವಂತರೇ ಪಾಸ್ ಆಗುತ್ತಾರೆ ಎಂಬ ಮಾತು ಸುಳ್ಳು. ನಾನು ಕೂಡ ಆವರೇಜ್ ಅಂಕ ಗಳಿಸಿದವನು. ಮೂಲತಃ ವಾಣಿಜ್ಯ ಶಾಸ್ತ್ರದ ಬಿಕಾಂ ಓದಿ ಸಿಎ ಮಾಡಿದ್ದೇನೆ. ಓದಿದ್ದು ಬೆಂಗಳೂರಿನಲ್ಲಿ. ಪಿಯುಸಿ ಆದ ನಂತರ ಸಿಎ ಮಾಡುವಾಗ ದೆಹಲಿಯಲ್ಲಿ ಆಡಿಟ್ ಗೆ ಹೋಗಿದ್ದೆ. ಅಲ್ಲಿ ಯುಪಿಎಸ್ಸಿ ಬರೆಯಲು ನಿರ್ಧಾರ ಮಾಡಿದೆ. ಮೊದಲು ಪ್ರಿಲಿಮ್ಸ್ ಗೆ ‘ ಕಾಮರ್ಸ್ ಆ್ಯಂಡ್ ಅಕೌಂಟೆನ್ಸ್’ ಐಚ್ಚಿಕ ವಿಷಯ ತಗೊಂಡೆ. ಹೀಗೆ ವಾಣಿಜ್ಯ, ವಿಜ್ಞಾನ, ಕಲೆಯಲ್ಲಿ ಡಿಗ್ರಿ ಮಾಡಿದವರು ತಮ್ಮ ಇಚ್ಚಾನುಸಾರ ಐಚ್ಚಿಕ ವಿಷಯಗಳನ್ನು ಸೆಲೆಕ್ಟ್ ಮಾಡಿಕೊಳ್ಳುತ್ತಾರೆ.

ಪ್ರಿಲಿಮ್ಸ್ ನಲ್ಲಿ ಎರಡು ಪೇಪರ್ . ಒಂದು ಪೇಪರ್ ಗೆ ಎರಡು ಗಂಟೆ ಸಮಯವಕಾಶ. ನೆಗೆಟಿವ್ ಮಾರ್ಕ್ ಇರುತ್ತದೆ. 1:3 ನೆಗೆಟಿವ್ ಮಾರ್ಕ್ ಇರುತ್ತದೆ..ಅಂದರೆ ಮೂರು ತಪ್ಪು ಉತ್ತರ ಬರೆದರೆ, ಒಂದು ಸರಿ ಮಾರ್ಕ್ಸ್ ಹೋಗುತ್ತದೆ. ಪ್ರಿಲಿಮ್ಸ್ ನಲ್ಲಿ ಮೊದಲನೇ ಪೇಪರ್ ನೂರು ಅಂಕಗಳಿಗೆ ಬರೆಯಬೇಕು. ಜನರಲ್ ಸ್ಟೇಡಿಗೆ ಎಕ್ಸಾಂ ಬರೆಯಬೇಕು. ಎರಡನೇ ಪೇಪರ್ ಸಿ-ಸ್ಯಾಟ್ . 80 ಅಂಕಗಳಿಗೆ ಪರೀಕ್ಷೆ ಬರೆಯಬೇಕು. ಎರಡಕ್ಕೂ ಎರಡು ಗಂಟೆ ಸಮಯವಕಾಶವಿರುತ್ತದೆ.

ಜನರಲ್ ಸ್ಟಡಿ ಪೇಪರ್ ಗೋಸ್ಕರ ಸಾಮಾನ್ಯವಾಗಿ ಎಲ್ಲರೂ ತಮ್ಮ ವಿಷಯ ಅನುಸಾರ ಆ ಬಗ್ಗೆಯೇ ಜಾಸ್ತಿ ಓದುವುದು. ಅದರ ಬಗ್ಗೆಯೇ ಹೆಚ್ಚು ಆಸಕ್ತಿ ಕೊಟ್ಟು ಬೇರೆಯದನ್ನ ಓದೋದಿಲ್ಲ. ಆ ರೀತಿ ಮಾಡಬಾರದು. ನಿಮ್ಮ ಆಯ್ಕೆಯ ವಿಷಯದಲ್ಲಿ ಯಾವುದಕ್ಕೆ ಎಷ್ಟು ಅಂಕ ಬರುತ್ತೆ. 2020 ರ ಪ್ರಿಲಿಮ್ಸ್ ನಲ್ಲಿ ಜನರಲ್ ಪೇಪರ್ ಗೆ ಸೈನ್ಸ್ ನಿಂದ 5 ಪ್ರಶ್ನೆಗಳು, ಇತಿಹಾಸದಿಂದ 18 ಪ್ರಶ್ನೆಗಳು ಬಂದಿದ್ದವು‌.

ಇತಿಹಾಸದಲ್ಲಿ ಪುರಾತನ, ಮಧ್ಯಮ, ಪ್ರಸ್ತುತ ಮೂರು ಮಾಡಲ್ ಗಳಿದ್ದು18 ಅಂಕಗಳಿಗೆ ಉತ್ತರ ಬರೆಯಬೇಕು.ಜಿಯಾಗ್ರೋಫಿ 14 ಪ್ರಶ್ನೆಗಳಿಗೆ ಉತ್ತರ ಬರೆಯಬೇಕು. ಅರ್ಥಶಾಸ್ತ್ರ 10 ರಿಂದ 12 ಪ್ರಶ್ನೆಗಳು. ಪ್ರಸ್ತುತ ವಿದ್ಯಮಾನ ಪ್ರಮುಖವಾಗಿದ್ದು 25 ಅಂಕಗಳಿಗೆ ಉತ್ತರ ಬರೆಯಬೇಕು. ಪಾಲಿಟಿಕ್ಸ್ 12 ರಿಂದ 13 ಅಂಕ. ಪರಿಸರ 8 ಪ್ರಶ್ನೆ, ಮಿಸ್ಸೆಲೇನಿಯಸ್ 8 ಪ್ರಶ್ನೆಗಳು ಇರುತ್ತವೆ.

ಸಾಮಾನ್ಯವಾಗಿ ಎಲ್ಲರೂ ಹೆಚ್ಚಿನ ಅಂಕಗಳು ಇರುವ ಪ್ರಶ್ನೆಗಳಿಗೆ ಹೆಚ್ಚು ಗಮನಕೊಡುತ್ತಾರೆ. ಉಳಿದದ್ದ ನೆಗೆಲೇಟ್ ಮಾಡುತ್ತಾರೆ. ಅದು ಆಗಬಾರದು. ಯಾವುದಕ್ಕೆ ಎಷ್ಟು‌ ಸಮಯ ಕೊಡಬೇಕು, ಎಷ್ಟು ಮಾರ್ಕ್ಸ್ ಗೆ ಏನೇನು ಬರುತ್ತದೆ ಆ ಪ್ರಕಾರ ಸ್ಟೇಡಿ ಮಾಡಬೇಕು.ಪ್ರಿಲಿಮ್ಸ್ ಗೆ ದಿನಕ್ಕೆ 20 ಗಂಟೆ ಓದುತ್ತೇನೆ. ತಣ್ಣೀರು ಸ್ನಾನ ಮಾಡುತ್ತೇನೆ, ಮಧ್ಯರಾತ್ರಿ ಎದ್ದು ಓದುತ್ತೇನೆ ಎಂಬದು ಪದ್ದತಿ ಅಲ್ಲ. ಬದಲಾಗಿ ಸ್ಮಾರ್ಟ್ ಆಗಿ ಹಾರ್ಡ್ ವರ್ಕ್ ಮಾಡಬೇಕು.

ಯುಪಿಎಸ್ಸಿ ಪ್ರಿಲಿಮ್ಸ್ ಗೆ 10 ಲಕ್ಷ ಅಭ್ಯರ್ಥಿಗಳು ಅಪ್ಲಿಕೇಶನ್ ಹಾಕುತ್ತಾರೆ. ಇದರಲ್ಲಿ ಎಕ್ಸಾಂ ಬರೆಯೋರು ಐದರಿಂದ ಆರು ಲಕ್ಷ ಜನ ಮಾತ್ರ. ಇದರಲ್ಲಿ ಶೇ 80 ರಷ್ಟು ಜನ ಲಕ್ ನಂಬಿ ಬರೆಯುತ್ತಾರೆ..! ಚಾನ್ಸ್ ಇದ್ದರೆ ಮುಂದೆ ಹೋಗಬಹುದು ಎಂಬ ಭ್ರಮೆಯಲ್ಲಿರುತ್ತಾರೆ. ಐವತ್ತರಿಂದ ಆರವತ್ತು ಸಾವಿರ ಜನ ಮಾತ್ರ ಸೀರಿಯಸ್ ಆಗಿ ಯುಪಿಎಸ್ಸಿ ಎಕ್ಸಾಂ ಬರೆಯುತ್ತಾರೆ. ಇವರ ನಡುವೆ ಮಾತ್ರ ಕಾಂಪಿಟೇಶನ್ ನಡೆಯುತ್ತದೆ.

ಎರಡನೇ ಪೇಪರ್ ಸಿ ಸ್ಯಾಟ್. ಇದು ಕ್ವಾಲಿಫೈಯಿಂಗ್ ಪೇಪರ್ ಆಗಿದ್ದು, ಇದರಲ್ಲಿ ಗಣಿತಕ್ಕೆ ಸಂಬಂಧ ಪಟ್ಟ ಸಾಮಾನ್ಯ ಜ್ಞಾನ ಪ್ರಶ್ನೆ , ಬೇಸಿಕ್ ಇಂಗ್ಲೀಷ್ ಪ್ರಶ್ನೆ ಕೇಳಲಾಗುತ್ತದೆ. ಕನ್ನಡ ಮೀಡಿಯಂ ವಿದ್ಯಾರ್ಥಿಗಳು ಉತ್ತರ ಬರೀಬಹುದು. ಎಂಭತ್ತು ಪ್ರಶ್ನೆಗಳಿಗೆ ಉತ್ತರ ಬರೆಯಬೇಕು. ಇದರಲ್ಲಿ ಸಿಂಪಲ್ ಪ್ರಶ್ನೆಗಳಿರುತ್ತವೆ. ಆದ್ದರಿಂದ ಪ್ರಿಲಿಮ್ಸ್ ಪಾಸ್ ಆಗಬೇಕಾದರೆ ಎಲ್ಲ ವಿಷಯಗಳನ್ನ ಚೆನ್ನಾಗಿ ಓದಬೇಕು.

ಪ್ರಿಲಿಮ್ಸ್ ಪಾಸಾಗಲು ಮೆಟಿರಿಯಲ್ ಬಹಳ ಮುಖ್ಯ. ಎಲ್ಲವನ್ನೂ ಓದುವ ಅಗತ್ಯವಿಲ್ಲ. ನಿಮಗೆ ಅಗತ್ಯವಿರುವ ಮೆಟಿರಿಯಲ್ ಸೆಲೆಕ್ಟ್ ಮಾಡುವುದೂ ಮುಖ್ಯ. ರಿವೀಷನ್ ಇರಬೇಕು. ಆಗ ಮಾತ್ರ ಬಹು ಆಯ್ಕೆ ಪ್ರಶ್ನೆಗಳಿಗೆ ಉತ್ತರಿಸಬಹುದು. ಈ ಮೆಟಿರಿಯಲ್ ನ್ನು ಮಿನಿಮಮ್ ಎರಡು ಸಲ ಓದಬೇಕು. ಪ್ರಸ್ತುತ ವಿದ್ಯಮಾನಗಳ ಪ್ರಶ್ನೆಗೆ ಉತ್ತರಿಸಲು ಕಳೆದ ನಾಲ್ಕೈದು ವರ್ಷಗಳ ಹಿಂದಿನ ಪ್ರಶ್ನೆ ಪತ್ರಿಕೆ ನೋಡಿ, ಓದಬೇಕು.ಅಲ್ಲದೇ ಪರೀಕ್ಷೆ ಬರೆಯುವ ವರ್ಷದ ಪ್ರಸ್ತುತಗಳ ಬಗ್ಗೆ ಹೆಚ್ಚು ತಿಳಿದುಕೊಂಡಿರಬೇಕು.

ದಿನಪತ್ರಿಕೆಯಲ್ಲಿ ಬರುವ ಕ್ರೈಂ, ರಾಜಕೀಯ ಸುದ್ದಿಗಳೇ ಯುಪಿಎಸ್ಸಿಗೆ ಪ್ರಮುಖವಲ್ಲ. ಬಜೆಟ್, ಎಕಾನಿಮಿಕ್, ಸ್ಯಾಟಲೈಟ್, ವಿಜ್ಞಾನ, ಹಣಕಾಸು, ಮಾನ್ಸೂನ್, ಇತಿಹಾಸ, ಇವುಗಳ ಬಗ್ಗೆ ಓದಿ ನೋಟ್ ಮಾಡಿಕೊಳ್ಳಬೇಕು. ದಿನ ಪತ್ರಿಕೆಯ ಈ ಸುದ್ದಿ ಕಲೆಕ್ಟ್ ಮಾಡಿ ಇಟ್ಕೊಬೇಕು. ಕರೆಂಟ್ ಅಫೇರ್ಸ್ ಬುಕ್ ಬರುತ್ತದೆ. ದಿನಪತ್ರಿಕೆ ಯಾಕೆ ಓದಬೇಕು ಎಂದು ಅನೇಕರು ಕೇಳುತ್ತಾರೆ, ಆದರೆ ನಾವು ಸ್ವಂತ ಓದಿ ಪಾಯಿಂಟ್ಸ್ ಮಾಡುವುದಕ್ಕೂ, ಬುಕ್ ನ ಪಾಯಿಂಟ್ಸ್ ಓದುವುದಕ್ಕೂ ವ್ಯತ್ಯಾಸವಿದೆ.

ನಾವು ಸ್ವಂತ ಓದಿದರೆ ನಾಲ್ಕು ಪ್ಯಾರದಲ್ಲಿ ಎರಡು ಪಾಯಿಂಟ್ಸ್ ನೆನಪಿರುತ್ತದೆ. ಶೇ.80ರಷ್ಟು ದಿನಪತ್ರಿಕೆಯಲ್ಲಿನ ಪ್ರಸ್ತುತಗಳ ಸುದ್ದಿ ಬಗ್ಗೆ ಪ್ರಶ್ನೆ ಕೇಳಲಾಗುತ್ತದೆ .ಶೇ.20 ರಷ್ಟು ಮಾತ್ರ ಬುಕ್ ನಲ್ಲಿರುವ ಪ್ರಸ್ತುತಗಳ ಬಗ್ಗೆ ಪ್ರಶ್ನೆ ಕೇಳಲಾಗುತ್ತದೆ.

ಯುಪಿಎಸ್ಸಿಗೆ ಓದುವಾಗ ಏಳು ಗಂಟೆ ನಿದ್ದೆ ಮಾಡಬೇಕು. ಬೆಳಗಿನ ಜಾವ ಎದ್ದಾಗ ಮೈಂಡ್ ಫ್ರೀ ಇದ್ದು, ಆ ಟೈಮ್ ನಲ್ಲಿ ಓದಬೇಕು. ಸ್ವಲ್ಪ ಕಷ್ಟವಾದ ವಿಷಯ ಬೆಳಗ್ಗೆ ಓದಿದರೆ ಒಳ್ಳೆಯದು‌. ಅದಕ್ಕಾಗಿ ನಾನು ಸಂಜೆ ದಿನಪತ್ರಿಕೆಗಳನ್ನು ಓದುತ್ತಿದ್ದೆ. ಒಟ್ಟಾರೆ ವ್ಯವಸ್ಥಿತವಾಗಿ ಓದಬೇಕು. ಒಂದೇ ದಿನ ಎಲ್ಲವನ್ನೂ ಓದಿ ಐದು ದಿನ ಓದದೇ ಇರುವುದು ಸರಿಯಲ್ಲ. ರೆಗ್ಯೂಲರ್ ಆಗಿ‌ ಓದಬೇಕು. 365 ದಿನಗಳಲ್ಲಿ ಹೇಗೆ ಓದಬೇಕೆಂದು ಚಾರ್ಟ್ ಹಾಕಿಕೊಳ್ಳಬೇಕು. ಫ್ರೆಂಡ್ಸ್ ದೂರ ಇಡಬೇಕು. ಆಯಾ ದಿನ ಓದಿದ್ದನ್ನು ರಾತ್ರಿ ಮತ್ತೆ ರಿವಿಷನ್ ಮಾಡಬೇಕು ಆಗ ಮಾತ್ರ ಪ್ರಿಲಿಮ್ಸ್ ಪಾಸಾಗಬಹುದು.

ಮೇನ್ಸ್ ಎಕ್ಸಾಂ

ಪ್ರಿಲಿಮ್ಸ್ ಪಾಸಾದವರು ಮೇನ್ಸ್ ಎಕ್ಸಾಂ ಬರೆಯಬೇಕು. ಇಲ್ಲಿ ಯಾವುದೇ ಬಹು ಆಯ್ಕೆಯ ವಸ್ತುನಿಷ್ಠ ಪ್ರಶ್ನೆಗಳು ಇರೋದಿಲ್ಲ. ಇಲ್ಲಿ ಇಷ್ಟು ಅಂಕದ ಪ್ರಶ್ನೆಗಳಿಗೆ ಉತ್ತರಿಸಿ ಎಂದು ಕೇಳುತ್ತಾರೆ. ಆ ಅಂಕಗಳಿಗೆ ತಕ್ಕಂತೆ ಇಂತಿಷ್ಟು ಪದಗಳಲ್ಲಿ ಉತ್ತರಿಸಬೇಕು. ಇಲ್ಲಿ ಪಾಸಾದವರು ಮೌಖಿಕ ಸಂದರ್ಶನಕ್ಕೆ ಹೋಗಬೇಕು. ಸಂದರ್ಶನದಲ್ಲಿ ಹತ್ತು ಪ್ಯಾನಲ್ ಟೀಮ್ ಇರುತ್ತದೆ. ಒಂದು ಟೀಮ್ ನಲ್ಲಿ ಹತ್ತು ಜನ ಇರುತ್ತಾರೆ.

ಸಂದರ್ಶನಕ್ಕೆ ಹೋಗುವ ವೇಳೆ ಅಭ್ಯರ್ಥಿ ಯಾವ ಟೀಮ್ ಗೆ ಹೋಗಬೇಕೆಂದು ರ್ಯಾಂಡಮ್ ಮೂಲಕ ಆಯ್ಕೆ ಮಾಡಲಾಗುತ್ತದೆ. ಸಂದರ್ಶನದಲ್ಲಿ ಯುಪಿಎಸ್ಸಿ ಬೋರ್ಡ್ ಚೇರ್ಮನ್ ಇದ್ದು, ತಾಳ್ಮೆ, ಸಿಟ್ಟು, ವೈಯಕ್ತಿಕ, ಹಾಬೀಸ್, ಸೇರಿದಂತೆ ಯುಪಿಎಸ್ಸಿ ಫಾರಂ ತುಂಬುವ ವೇಳೆ ಭರ್ತಿ ಮಾಡಿದ ವಿಷಯಗಳ ಬಗ್ಗೆಯೂ ಸಂದರ್ಶನ ನಡೆಯುತ್ತದೆ..!

ಇದಾದ ಬಳಿಕ ಆಯ್ಕೆಯಾದವರಿಗೆ ದೆಹಲಿಯಲ್ಲಿ ಎರಡು ವರ್ಷ ತರಬೇತಿ ನಡೆಯುತ್ತದೆ..ಅಲ್ಲಿಂದ ಪೊಲೀಸ್, ಕಂದಾಯ, ಕೋರ್ಟ್ ಸೇರಿದಂತೆ ಎಲ್ಲ ವಿಭಾಗದಲ್ಲಿ ತರಬೇತಿ ನೀಡಲಾಗುತ್ತದೆ. ಅಂತಿಮವಾಗಿ ಪೊಲೀಸ್ ಠಾಣೆ ಜವಾಬ್ದಾರಿ ನಂತರ ಡಿಎಸ್ಪಿ, ಎಎಸ್ಪಿ, ಎಸ್ಪಿಯಾಗಿ ಸಂಪೂರ್ಣ ಅಧಿಕಾರ ನೀಡಲಾಗುತ್ತದೆ ಎನ್ನುತ್ತಾರೆ ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್.

ಎಷ್ಟು ಜನ ಬರೆಯುತ್ತಾರೆ ?

ಒಂದು ಸಲಕ್ಕೆ 10 ಲಕ್ಷ ಜನ ಎಕ್ಸಾಂ ಕಟ್ಟುತ್ತಾರೆ, 6 ಲಕ್ಷ ಜನ ಎಕ್ಸಾಂ ಬರೆಯುತ್ತಾರೆ. ಅದರಲ್ಲಿ 9 ಸಾವಿರ ಪ್ರಿಲಿಮ್ಸ್ ಪಾಸಾಗುತ್ತಾರೆ. ಇದರಲ್ಲಿ 3 ಸಾವಿರ ಮೇನ್ಸ್ ಪಾಸಾಗುತ್ತಾರೆ. ಆದರೆ ಸಂದರ್ಶನಕ್ಕೆ ಹೋಗೋರು ಮಾತ್ರ ನೂರು ಮಂದಿ ಮಾತ್ರ. ಇದರಲ್ಲಿ 1:3 ಆಧಾರದ ಮೇಲೆ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ.

ಹುದ್ದೆಗಳು

150- IFS
150- IAS
150- IPS ಹುದ್ದೆಗಳು ಇರುತ್ತವೆ.

ಅವಕಾಶ ಎಷ್ಟು..?

ಜನರಲ್ ಕೆಟಗರಿ ವಿದ್ಯಾರ್ಥಿಗಳಿಗೆ 32 ವರ್ಷ ವಯೋಮಿತಿ. ಈ ಅವಧಿಯಲ್ಲಿ ನಾಲ್ಕು ಅವಕಾಶ ಸಿಗಲಿವೆ. ಇನ್ನು ಎಸ್ಸಿ ಎಸ್ಟಿಗಳಿಗೆ 37 ವರ್ಷ. ಒಟ್ಟು ನಾಲ್ಕು ಅವಕಾಶಗಳಲ್ಲಿ ಯುಪಿಎಸ್ಸಿ ಪಾಸ್ ಮಾಡಬೇಕು.


  • ಸಿವಿಲ್ ಸರ್ವೀಸ್ ಸುಮ್ಮನೇ ಅಲ್ಲ. ಕಷ್ಟ ಪಡಬೇಕು.‌ ಸಂದರ್ಶನಕ್ಕೆ ಹೋಗುವಷ್ಟರಲ್ಲಿ ಸಾಕಷ್ಟು ಓದಿರಬೇಕು. ನನಗೆ ಚೆಸ್ ಆಟ ಇಷ್ಟವಿದ್ದ ಕಾರಣ ಫಾರಂನಲ್ಲಿ ನನಗೆ ಇಷ್ಟವಾದ ಕ್ರೀಡೆ ಎಂದಿದ್ದೆ. ಅದರ ಬಗ್ಗೆ ಪ್ರಶ್ನೆ ಕೇಳಿದ್ದರು. ನನ್ನ ಜತೆ ಏಳು ಜನ ಕರ್ನಾಟಕ ಕೇಡರ್ ಪಾಸಾದರು. ಹೆಚ್ಚು ಅಂಕಗಳು ಬಂದವರಿಗೆ ಹೋಮ್ ಟೌನ್ ನೀಡುತ್ತಾರೆ. ಹಾಗಾಗಿ ನನಗೆ ಹೋಮ್ ಟೌನ್ ಸಿಕ್ಕಿತ್ತು.

| ಸಿ.ಬಿ.ರಿಷ್ಯಂತ್, ದಾವಣಗೆರೆ ಎಸ್ಪಿ


ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂತರಂಗ

ಫೇಲ್ ಅಥವಾ ಜಸ್ಟ್ ಪಾಸು ಅವಮಾನವಲ್ಲ‌ ; ಪ್ರತಿಭೆಯ ಮಾನದಂಡವಲ್ಲ‌..!

Published

on

  • ಸುರೇಶ ಎನ್ ಶಿಕಾರಿಪುರ

ನಾ ಹೇಳ್ತೀ‌ನಿ, ಫೇಲಾಗಿರೊ ಮಕ್ಕಳು ಅಥವಾ ನಮ್ ಥರ ಜಸ್ಟ್ ಪಾಸಾಗಿರೊ ಮಕ್ಕಳೆ ಜೀವನ ಕಟ್ಕೊಳೋದು, ಜೀವನದ ಪರೀಕ್ಷೆಯಲ್ಲಿ ಸದಾ ಪಾಸಾಗೋದು ಅವರೇ. ಈಗಿರೋದು ಪ್ರತಿಭಾವಂತ ಮಕ್ಕಳ ಬೆರಳು ಕಿತ್ಕೊಳೊ ಶಿಕ್ಷಣ ವ್ಯವಸ್ಥೆ.

ಅಂಕ ಅಂಕ ಅಂಕ. ಅಂಕಕ್ಕಾಗಿ ಕೋಟಿ ಕೋಟಿ ಲೂಟಿ. ರ್ಯಾಂಕ್ ಪಟ್ಟಿ ಫೋಸ್ಟರ್ ಅಂಟಿಸಿ ವ್ಯಾಪಾರ ಮಾಡಲು ಸದಾ ಗಲ್ಲಾಪೆಟ್ಟಿಗೆ ತೆರೆದುಕೊಂಡು ಕುಂತಿರುವ ಖಾಸಗಿ ಶಿಕ್ಷಣ ವ್ಯಾಪಾರಿಗಳು. ಸಾಧನೆ ಅಂದರೆ ಅಂಕವಲ್ಲ‌. ಸಾಧನೆ ಎಂದರೆ ಯಶಸ್ವಿಯಾಗಿ ಬದುಕು ಕಟ್ಟಿಕೊಳ್ಳುವುದು. ಅದಕ್ಕೆ ಅಂಕದ ಅವಷ್ಯಕತೆ ಇಲ್ಲ. ಅದಕ್ಕೆ ಪ್ರತಿಭೆಯ ಅವಷ್ಯಕತೆ ಇದೆ. ಅಂಕ ಪ್ರತಿಭೆಯ ಮಾನದಂಡವಲ್ಲ. ಅದು ಶಿಕ್ಷಣ ವ್ಯಾಪಾರಿಗಳು ಹುಟ್ಟಿಸಿರುವ ಭ್ರಮೆ.

ನಮ್ಮ ಸಮಾಜದ ಬಹುಪಾಲು ಪೋಷಕರು ಹಗಲಿರುಳು ಬಿಡುವಿಲ್ಲದೆ ದುಡಿಯುವುದು ತಮ್ಮ ಮಕ್ಕಳ ಶಾಲೆಯ ಫೀಜು ತೆರಲು. ಮಕ್ಕಳು ಹುಟ್ಟುತ್ತಿದ್ದಂತೆ ಅವುಗಳನ್ನು ಯಾವ ಶಾಲೆಗೆ ಸೇರಿಸಬೇಕು? ಎಷ್ಟು ಫೀಸು ಕಟ್ಟಬೇಕು ಎಂಬ ಆತಂಕಿತ ಯೋಚನೆಯಲ್ಲೇ ಮಧ್ಯಮವರ್ಗದ ಪೋಷಕರು ದಿನ ಕಳೆಯುತ್ತಾರೆ. ಶ್ರೀಮಂತರಿಗೆ ಹಣದ ಚೆಲ್ಲುವ ಚಿಂತೆ ಭೀತಿಗಳೇ ಇರುವುದಿಲ್ಲ ಬಿಡಿ.

ಇದೆಲ್ಲ ಮಧ್ಯಮ ವರ್ಗದವರ ಪಾಡು. ಇದರ ಬದಲಿಗೆ ಸರ್ಕಾರಿ ಶಾಲೆಗೆ ಸೇರಿಸಿ, ಕಡಿಮೆ ಫೀಸು ಭರಿಸುವ ಯಾವುದಾದರೂ ಟ್ಯೂಷನ್ನಿಗೋ ಅಥವಾ ದಿನದ ಒಂದೆರೆಡು ಗಂಟೆ ಸ್ವತಃ ತಾವೇ ತಮ್ಮ ಮಕ್ಕಳ ಓದು ಬರೆಹದ ಕಡೆ ಗಮನ ಹರಿಸುವುದೋ ಮಾಡಿದರೆ ಖಂಡಿತಾ ಸಾಕು. ಬಹಳಷ್ಟು ಜನಕ್ಕೆ ಇದು ಆಗುವುದಿಲ್ಲ.

ಬಹಳ ಜನ ಮಧ್ಯಮ ವರ್ಗದ ಪೋಷಕರು ಒಂದು ದಿನವೂ ಸಂಜೆ ಐದು ಗಂಟೆಯಿಂದಲೇ ಒಂದಾದಮೇಲೆ ಒಂದರಂತೆ ಪ್ಲೇ ಆಗುವ ತಮ್ಮ ಮೆಚ್ಚಿನ ಸರಣಿ ಧಾರಾವಾಹಿಗಳನ್ನು ಯಾವ ಕಾರಣಕ್ಕು ತಪ್ಪಿಸಿಕೊಳ್ಳಲಾರರು. ಅನ್ನ ತರಕಾರಿ ಬೆಂದಾಗ ಕುಕ್ಕರ್ ಕೂಗಿ ಸಿಗ್ನಲ್ ಕೊಡುತ್ತದೆ. ಹತ್ತು ಹತ್ತುವರೆಯ ಕೊನೆಯ ಧಾರಾವಾಹಿ ನೋಡಿ ಪೂರೈಸಿದ ಬಳಿಕವೇ ಊಟ. ಬಹುಪಾಲು ಹೀಗೇ ಆಗುತ್ತಿದೆ.

ಮಕ್ಕಳ ಓದು ಬರೆಹದ ಕಡೆಗೆ ನಾವೆಷ್ಟು ಗಮನ ಹರಿಸುತ್ತಿದ್ದೇವೆ ಎಂದು ಪೋಷಕರೂ ಈ ನಿಟ್ಟಿನಲ್ಲಿ ಯೋಚಿಸಬೇಕಲ್ಲವೇ? ತಮ್ಮ ಬದುಕಿ‌ನ ಈ ಸೂಕ್ಷ್ಮವನ್ನು ಸ್ವಲ್ಪವೇ ಸ್ವಲ್ಪ ಅರ್ಥ ಮಾಡಿಕೊಂಡರೂ ಮಕ್ಕಳನ್ನು ಎಷ್ಟು ನಿರಾಯಾಸವಾಗಿ ಸರ್ಕಾರಿ ಶಾಲೆಯಲ್ಲೇ ಓದಿಸಬಹುದು. ಅವುಗಳನ್ನು ಬದುಕುವ ಮಕ್ಕಳನ್ನಾಗಿ ಪ್ರಕೃತಿಯ ಮಕ್ಕಳನ್ನಾಗಿ, ಸಧೃಡ ಮನಸ್ವಿಗಳನ್ನಾಗಿ, ಸಂಕೀರ್ಣ ವ್ಯಕ್ತಿತ್ವಗಳನ್ನಾಗಿ, ಅವರೆಲ್ಲ ನೈಸರ್ಗಿಕ ಅವಕಾಶ ಹಕ್ಕುಗಳಿಗೆ ವಂಚನೆಯಾಗದಂತೆ ಬೆಳೆಸಬಹುದಲ್ಲವೇ?

ಹೆಚ್ಚು ಅಂಕ ತೆಗೆದು ಸಂಭ್ರಮಿಸುತ್ತಿರುವ ಮಕ್ಕಳನ್ನು ಅವರ ಪೋಷಕರನ್ನು ಅಭಿನಂದಿಸೋಣ. ಆದರೆ ಹೆಚ್ಚು ಅಂಕ ತೆಗೆಯದ, ಜಸ್ಟ್ ಪಾಸಾದ, ಅಥವಾ ಫೇಲ್ಡ್ ಆದ ಮಕ್ಕಳ ಪರವಾಗಿಯೇ ನಿಲ್ಲೋಣ. ಎಸ್ ಎಸ್ ಎಲ್ ಸಿ, ಸೆಕೆಂಡ್ ಪಿಯುಸಿ ಪಾಸು ಫೇಲು ರ್ಯಾಂಕುಗಳೇ ನಮ್ಮ ಜೀವನದ ಎಲ್ಲವನ್ನೂ ನಿರ್ಧರಿಸಲಾರವು.

ಓದಿ ಉದ್ಯೋಗಕ್ಕಾಗಿ ಜಾತಕ ಪಕ್ಷಿಗಳಂತೆ ಕಾಯುವ ಯುವಕರಿಗೆ ಕೆಲಸ ಕೊಡಿಸುತ್ತೇನೆಂದು ನಂಬಿಸಿ ಕಡೆಗೆ ಪಕೋಡಾ ಮಾರಿ ಜೀವಿಸಲು ಅಧ್ಬುತ ಸಲಹೆ ನೀಡಿದ ನಾಯಕರುಗಳೂ ಇದ್ದಾರೆ ಎನ್ನುವುದು ಎಲ್ಲರ ಎಚ್ಚರದಲ್ಲಿರಬೇಕು. ಅಂಕ ಬೆನ್ನಟ್ಟಿ ಹೋದವರಿಗೆ ಜೀವನ ಮಾರ್ಗಗಳು ಅತ್ಯಂತ ಸೀಮಿತ. ಟಾರ್ಗೆಟ್ ಇಟ್ಟುಕೊಂಡೇ ಓದಿರುತ್ತಾರೆ ಅಥವಾ ಪೋಷಕರು ಓದಿಸಿರುತ್ತಾರೆ. ಅವರಿಗೆ ಟಾರ್ಗೆಟ್ ರೀಚಾಗದಿದ್ದಾಗ ಬೇರೆ ಮಾರ್ಗಗಳು ಅಪರಿಚಿತ, ಕಠಿಣ ಕವಲು ದಾರಿಗಳು. ನಮ್ಮ ಉಂಡಾಡಿ ಜಸ್ಟ್ ಪಾಸು ಫೇಲುಗಳಿಗೆ ದಾರಿ ನೂರಿವೆ ಬದುಕಿನರಮನೆಗೆ‌… ಅವು ಗಾಳಿಯಂತೆ ನೀರಿನಂತೆ ಎಲ್ಲಿ ಬೇಕಾದರೂ ನುಸುಳಿ ಬದುಕು ಜಯಿಸಬಲ್ಲವು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending