Connect with us

ಬಹಿರಂಗ

ಬಾಲಕ ಅಂಬೇಡ್ಕರರ ಭವಿಷ್ಯ ಬದಲಿಸಿದ ಆ ಒಂದು ಬೆಳವಣಿಗೆ

Published

on

  • ರಘೋತ್ತಮ ಹೊ.ಬ

ಕೆಲವೊಮ್ಮೆ ನಮ್ಮ ಜೀವನಗಳಲ್ಲಿ ನಮಗರಿವಿಲ್ಲದಂತೆ ಕೆಲವು ಬೆಳವಣಿಗೆಗಳು ನಡೆದು ಬಿಡುತ್ತವೆ. ಆ ಕ್ಷಣಗಳಲ್ಲಿ ಅಂತಹ ಬೆಳವಣಿಗೆಗಳು ನಮಗೆ ತೀವ್ರ ನಷ್ಟ ಮತ್ತು ನೋವನ್ನು ಕೂಡ ಉಂಟುಮಾಡಬಹುದು. ಆದರೆ… ಮತ್ತೊಂದು ರೀತಿಯಲ್ಲಿ ನಮಗೆ ಅವು ಭಾರೀ ಅನುಕೂಲ ಅಥವಾ ಒಳ್ಳೆಯ ಬೆಳವಣಿಗೆಗೂ ಕಾರಣವಾಗಿಬಿಡಬಹುದು!

ಹೌದು, ಬಾಬಾಸಾಹೇಬ್ ಅಂಬೇಡ್ಕರರ ಬದುಕಿನಲ್ಲೂ ಅಂತಹದ್ದೆ ಒಂದು ಬೆಳವಣಿಗೆ ನಡೆದಿದೆ. ಅದು ಅವರು ಜನಿಸಿದ ಸಂದರ್ಭದಲ್ಲಿ. ಅಂದರೆ 1892ರಲ್ಲಿ ಬ್ರಿಟಿಷರು ಅದುವರೆಗೆ ತಮ್ಮ ಮಿಲಿಟರಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ಮಹಾರ್ ಸಮುದಾಯವನ್ನು ಇದ್ದಕ್ಕಿದ್ದ ಹಾಗೆ ಸೇನೆಗೆ ಸೇರಿಸಿಕೊಳ್ಳುವುದನ್ನು ನಿಲ್ಲಿಸಿತು.

ಸ್ವತಃ ಬಾಲಕ ಅಂಬೇಡ್ಕರರ ತಂದೆ ರಾಮ್ ಜಿ ಸಕ್ಪಾಲ್ ರು ಕೂಡ ಸೇನೆಯಲ್ಲಿ ಸುಬೇದಾರ್ ಆಗಿ ನಿವೃತ್ತರಾಗಿದ್ದರು. ಸೇನಾ ಶಾಲೆಯಲ್ಲಿ ರಾಮ್ ಜಿ ಸಕ್ಪಾಲ್ ರು ಶಿಕ್ಷಕರಾಗಿಯೂ ಕಾರ್ಯನಿರ್ವಹಿಸಿದ್ದರು. ಆದರೆ ಹೀಗೆ ಇದ್ದಕ್ಕಿದ್ದ ಹಾಗೆ ಬ್ರಿಟಿಷರು ಮಹಾರ್ ಸಮುದಾಯದವರನ್ನು ಸೇನೆಗೆ ಸೇರಿಸಿಕೊಳ್ಳುವುದನ್ನು ನಿಲ್ಲಿಸಿದ್ದರಿಂದ ಸಮುದಾಯ ಭಾರಿ ತೊಂದರೆಗೆ ಸಿಲುಕಿತು. ಉದ್ಯೋಗಕ್ಕಾಗಿ ಮಹಾರ್ ಸಮುದಾಯ ಪರದಾಡುವಂತಾಯಿತು.

ಆದರೆ ಅವರಿಗೆ ಆ ಕ್ಷಣಕ್ಕೆ ಆದ ನಷ್ಟ ಇಡೀ ಜಗತ್ತಿಗೆ ಒಂದು ದೊಡ್ಡ ಲಾಭ ತಂದುಕೊಟ್ಟಿತ್ತು! ಅದೇನೆಂದರೆ ಮಹಾರ್ ಸಮುದಾಯ ಹೀಗೆ ಮಿಲಿಟರಿ ಸೇವೆಯಲ್ಲೇ ಮುಂದುವರಿದಿದ್ದರೆ ಸುಬೇದಾರ್ ರಾಮ್ ಜಿ ಸಕ್ಪಾಲರು ತಮ್ಮ ಪುತ್ರರನ್ನು ಕೂಡ ಬ್ರಿಟಿಷ್ ಸೇನೆಗೆ ಸೇರಿಸುವ ಸಾಧ್ಯತೆ ಇರುತ್ತಿತ್ತು.

ಇದನ್ನು ಉಲ್ಲೇಖಿಸುತ್ತಾ ಬಾಬಾಸಾಹೇಬ್ ಅಂಬೇಡ್ಕರರ ಜೀವನ ಚರಿತ್ರಕಾರರು 1892 ರಲ್ಲಿ ಬ್ರಿಟಿಷರು ಮಹಾರರನ್ನು ಸೇನೆಗೆ ಸೇರಿಸಿಕೊಳ್ಳುವುದನ್ನು ನಿಲ್ಲಿಸಿದ್ದರಿಂದ ಪರಿಸ್ಥಿತಿ ಬದಲಾಗಿ ಮಹೌ (MHOW-Military Head Quarters Of War) ಅನ್ನು ತೊರೆದ ರಾಮ್ ಜಿ ಸಕ್ಪಾಲರ ಕುಟುಂಬ ಸ್ವಂತ ಜಿಲ್ಲೆ ರತ್ನಗಿರಿ, ನಂತರ ಸತಾರ, ತದನಂತರ ಮುಂಬಯಿ ಹೀಗೆ ತೆರಳುವಂತಾಯಿತು. ಆ ಮೂಲಕ ಬಾಬಾಸಾಹೇಬ್ ಅಂಬೇಡ್ಕರರು ಶಿಕ್ಷಣದ ಮೇರುಶಿಖರವೇರುಂತಾಯಿತು ಎನ್ನುತ್ತಾರೆ. (Vol.10, Pp.4).

ಅಂದಹಾಗೆ ಮುಂದೊಂದು ದಿನ ಬಾಬಾಸಾಹೇಬ್ ಅಂಬೇಡ್ಕರರು ಬ್ರಿಟಿಷರಿಗೆ “ಬ್ರಿಟಿಷರು ತನ್ನ ಜನರಿಗೆ ಮಿಲಿಟರಿ ಪ್ರವೇಶ ನಿರಾಕರಿಸಿದ್ದರ ಬಗ್ಗೆ” ಖಾರವಾಗಿ ಪತ್ರ ಬರೆಯುತ್ತಾರೆ. ಆದರೆ ಕಾಕತಾಳೀಯವೆಂದರೆ ಆ ಸಂದರ್ಭದಲ್ಲಿ ಮಹಾರ್ ಸಮುದಾಯಕ್ಕೆ ಆದ ನಷ್ಟ ಇಡೀ ಜಗತ್ತಿಗೆ ಅಂಬೇಡ್ಕರರ ರೂಪದಲ್ಲಿ ಶಿಕ್ಷಣದ ಜ್ಞಾನದ ಒಂದು ಬೃಹತ್ ಲಾಭ ತಂದುಕೊಟ್ಟಿತು ಎಂಬುದು ಖಂಡಿತ ಸುಳ್ಳಲ್ಲ!

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ

ಯಜ್ಞದ ಬಗ್ಗೆ ಡಾ.ಬಿ.ಆರ್.ಅಂಬೇಡ್ಕರ್ ಹೇಳಿದ್ದು..!

Published

on

  • ಡಾ.ಬಿ.ಆರ್.ಅಂಬೇಡ್ಕರ್

ರ್ಯಧರ್ಮವು ಯಜದಿಂದ ಕೂಡಿದ ಧರ್ಮವಾಗಿತ್ತು, ಯಜ್ಞವು ದೇವತ್ವವನ್ನು ಹೊಂದುವ ಅಂದರೆ ದೇವಗಣದಲ್ಲಿ ಪ್ರವೇಶ ಪಡೆಯುವ ಒಂದು ಸಾಧನವಾಗಿತ್ತು.

ಅಷ್ಟೇ ಅಲ್ಲ, ಅದು ದೇವತೆಗಳನ್ನು ನಿಯಂತ್ರಿಸುವ ಸಾಧನವೂ ಆಗಿತ್ತು. ಸಂಪ್ರದಾಯದಂತೆ ಯಜ್ಞಗಳ ಸಂಖ್ಯೆ ಇಪ್ಪತ್ತೊಂದು, ಅವುಗಳನ್ನು ಏಳರ ಮೂರು ಗುಂಪುಗಳನ್ನಾಗಿ ವಿಭಾಗಿಸಲಾಗಿತ್ತು. ಮೊದಲನೆಯ ಗುಂಪಿನಲ್ಲಿ ಬೆಣ್ಣೆ, ಹಾಲು, ಧಾನ್ಯ ಮೊದಲಾದವುಗಳ ಯಜ್ಞಗಳು ಸೇರಿದ್ದವು. ಎರಡನೆಯ ಗುಂಪಿನಲ್ಲಿ ಸೋಮ ಯಾಗಗಳು ಸೇರಿದ್ದವು.

ಮತ್ತು ಪಶು ಯಾಗಗಳು ಮೂರನೆಯ ಗುಂಪಿಗೆ ಸೇರಿದ್ದವು. ಯಜ್ಞಗಳು ಅಲ್ಪಕಾಲವಿರಬಹುದು ಅಥವಾ ಒಂದು ವರ್ಷ ಅಥವಾ ಅದಕ್ಕೂ ಹೆಚ್ಚು ದೀರ್ಘ ಅವಧಿಯ ಯಜ್ಞವಾಗಬಹುದು. ಈ ಎರಡನೆ ಜಾತಿಯ ಯಜ್ಞವನ್ನು ‘ಸತ್ರ’ವೆಂದು ಕರೆಯುತ್ತಿದ್ದರು. ಯಜ್ಞದ ಪರವಾಗಿ ಹೀಗೆ ವಾದಮಾಡಲಾಗುತ್ತದೆ: ಯಜ್ಞ ಮಾಡುವವನು ಶಾಶ್ವತ ಪುಣ್ಯವನ್ನು ಪಡೆಯುತ್ತಾನೆ.

ಕೇವಲ ಯಜ್ಞ ಮಾಡುವ ಯಜಮಾನನ ಆತ್ಮವೊಂದೇ ಅಲ್ಲ, ಅವನ ಪಿತೃಗಳೂ ಸಹ ಯಜ್ಞದಿಂದ ಲಾಭ ಪಡೆಯುತ್ತಾರೆ. ಅವನು ತಾನು ಅರ್ಪಿಸುವ ಆಹುತಿಗಳಿಂದ ಪಿತೃಗಳಿಗೆ ಸಂತೋಷವನ್ನು ಕೊಡುತ್ತಾನೆ. ಅಷ್ಟೇ ಅಲ್ಲ, ಅವರ ಸ್ಥಾನವನ್ನು ಹೆಚ್ಚಿಸುತ್ತಾನೆ ಮತ್ತು ಉನ್ನತ ಲೋಕದ ವಾಸಿಯಾಗಲು (ಅವರನ್ನು) ಮೇಲೆ ಕಳುಹಿಸುತ್ತಾನೆ.

ಯಜ್ಜವು ಕೇವಲ: ಪಾರಲೌಕಿಕ ಸುಖವನ್ನು ಸಂಪಾದಿಸುವ ಸಾಧನವೊಂದೇ ಆಗಿರಲಿಲ್ಲ. ಮಹಾಯಜ್ಞಗಳಲ್ಲಿ ಹಲವು ಈ ಜಗತ್ತಿನ ಒಳ್ಳೆಯ ವಸ್ತುಗಳನ್ನು ಸಂಪಾದಿಸುವುದಕ್ಕೆಂದೇ ಇದ್ದುವು. ಲಾಭಾಕಾಂಕ್ಷೆಯಿಲ್ಲದೇ ನಿರುದ್ದಿಶ್ಯವಾಗಿ ಯಜ್ಞ ಮಾಡುವುದು ಆರ್ಯರಿಗೇ ಅರಿಯದ ವಿಷಯವಾಗಿತ್ತು. ವೈದಿಕ ಕಾಲದ ಭಾರತದಲ್ಲಿ ಕೃತಜ್ಞತಾರ್ಪಣೆಯೂ ಇರಲಿಲ್ಲ.

ಸಾಮಾನ್ಯವಾಗಿ ಯಾವ ದೇವತೆಯನ್ನು ಕುರಿತು ಯಜ್ಞ ಮಾಡಲಾಗುತ್ತಿತ್ತೋ, ಆ ದೇವತೆಯು (ತನಗೆ ಅರ್ಪಿಸಿದ ಆಹುತಿಗಳಿಗೆ ಪ್ರತಿಯಾಗಿ ಕೊಡುವ ಉಡುಗೊರೆಯೇ ಯಜ್ಞದಿಂದಾಗುವ ಲಾಭ, ಯಜ್ಞವು ಈ ಮಾತುಗಳಿಂದ ಪ್ರಾರಂಭವಾಗುತ್ತಿತ್ತು. ಅವನು ದೇವನಿಗೆ ಈ ಮಾತುಗಳಿಂದ ಯಜ್ಞವನ್ನು ಅರ್ಪಿಸುತ್ತಾನೆ. “ನೀನು ನನಗೆ ಕೊಡು, ನಾನು ನಿನಗೆ ಕೊಡುವೆನು, ನೀನು ನನಗೆ ಅನುಗ್ರಹಿಸು, ನಾನು ನಿನಗೆ ಅರ್ಪಿಸುವನು.”

ಯಜ್ಞ ಸಮಾರಂಭವು ಭಯಭಕ್ತಿಯನ್ನು ಹುಟ್ಟಿಸುವಂತೆ ಇರುತ್ತಿತ್ತು, ಆಡುವ ಪ್ರತಿಯೊಂದು ಶಬ್ದವೂ ಪರಿಣಾಮಕಾರಿಯಾಗಿರುತ್ತಿತ್ತು ಮತ್ತು ಶಬ್ದ ಉಚ್ಚಾರ ಅಥವಾ ಸ್ವರವೂ ಸಹ ಮಹತ್ವಪೂರ್ಣವಾಗಿರುತ್ತಿತ್ತು. ಅಲ್ಲದೆ ಸಮಾರಂಭದ ಬಹುಭಾಗ ಕೈಚಳಕದಿಂದ ಕೂಡಿದ್ದಿತು ಮತ್ತು ತೋರುವಷ್ಟು ಮಹತ್ವವುಳ್ಳದ್ದಾಗಿಲ್ಲವೆಂದು ಪುರೋಹಿತರೆಲ್ಲರೂ ತಿಳಿದಿದ್ದರು ಎಂಬ ಸೂಚನೆಗಳು (ಅಲ್ಲಲ್ಲಿ) ಕಂಡುಬರುತ್ತವೆ.

ಯಜ್ಞವೆಂದರೆ ಪುರೋಹಿತರಿಗೆ ದಕ್ಷಿಣೆಯೆಂದರ್ಥ, ದಕ್ಷಿಣೆಯ ಬಗೆಗೆ ನಿಯಮಗಳು ಸ್ಪಷ್ಟವಾಗಿದ್ದವು. ಮತ್ತು ಅವುಗಳನ್ನು ಪ್ರತಿಪಾದಿಸುವವರಿಗೆ ಯಾವುದೇ ಸಂಕೋಚವಿರಲಿಲ್ಲ, ಪುರೋಹಿತರು ದಕ್ಷಿಣೆಗಾಗಿಯೇ ಯಜ್ಞವನ್ನು ಮಾಡುತ್ತಿದ್ದರು. ಅಲ್ಲಿ ಬೆಲೆಯುಳ್ಳ ಬಟ್ಟೆಗಳು, ಗೋವುಗಳು, ಕುದುರೆ ಅಥವಾ ಬಂಗಾರ ಹೀಗೆ ಯಾವುದನ್ನು ಯಾವಾಗ ಕೊಡಬೇಕೆಂಬುದನ್ನೂ ಲಕ್ಷಪೂರ್ವಕವಾಗಿ ಹೇಳಿದ್ದಾರೆ.

ಪುರೋಹಿತರು ಬಹುಸಂಕೀರ್ಣವಾದ ವಿಧಾನಗಳನ್ನು ಏರ್ಪಾಡು ಮಾಡಿಕೊಂಡಿದ್ದರು ಮತ್ತು ಪ್ರತಿಯೊಂದು ಸಂದರ್ಭದಲ್ಲಿಯೂ ದಕ್ಷಿಣೆಯನ್ನು ಕೇಳುತ್ತಿದ್ದರು. ಯಾವನ ಲಾಭಕ್ಕಾಗಿ ಯಜ್ಞವನ್ನು ಮಾಡುತ್ತಾನೋ ಅವನೊಬ್ಬನೇ ಯಜ್ಞದ ಎಲ್ಲ ಖರ್ಚನ್ನೂ ವಹಿಸಬೇಕೆಂದ ಮೇಲೆ ಖರ್ಚು ಅತಿಯಾಗುವುದು ಸಹಜ. ಒಂದು ಕಡೆ, ಯಜ್ಞದ ದಕ್ಷಿಣೆಯು ಒಂದು ಸಾವಿರ ಆಕಳುಗಳಷ್ಟು ಎಂದು ಹೇಳಿದೆ.

ಅಂದಮೇಲೆ ಯಜ್ಞ ಎಷ್ಟು ದುಬಾರಿಯಾಗಿತ್ತೆಂಬುದನ್ನು ತಿಳಿಯಬಹುದು. ಈ ಲೋಭಕ್ಕಾಗಿ ಸಾವಿರ ಆಕಳುಗಳನ್ನು ಕೊಟ್ಟವನು ಸರ್ಗದಲ್ಲಿ ಎಲ್ಲವನ್ನು ಪಡೆಯುತ್ತಾನೆಂದು ಪುರೋಹಿತನು ಘೋಷಿಸುವಂತೆ ಆಯಿತು. ಈ ವಿಷಯದಲ್ಲಿ ಪುರೋಹಿತನು ಒಳ್ಳೆಯ ದೃಷ್ಟಾಂತಗಳನ್ನು ಕೊಡಬಹುದಿತ್ತು. ಸ್ವರ್ಗದಲ್ಲಿಯ ದೇವತೆಗಳು ತಮ್ಮ ಜೊತೆಯ ದೇವತೆಗಳಿಗೆ ಸಹಾಯ ಮಾಡಿದಾಗ ಪ್ರತಿಫಲವನ್ನು ಕೇಳುವ ಹಕ್ಕು ಇದ್ದೇ ಇರುತ್ತದೆ.

ಪಶು ಯಜ್ಞವು ಮುಖ್ಯ ಯಜ್ಞವಾಗಿತ್ತು. ಅದು ಬಹಳ ವೆಚ್ಚ ಮತ್ತು ಅನಾಗರಿಕವೂ ಆಗಿತ್ತು. ಆರ್ಯರ ಧರ್ಮದಲ್ಲಿ ಐದು ತೆರನಾದ ಪಶುಗಳನ್ನು ಯಜ್ಞಕ್ಕೆ ಯೋಗ್ಯವೆಂದು ಹೇಳಲಾಗಿದೆ. ಯಜ್ಞಕ್ಕೆ ಯೋಗ್ಯವಾದ ಪಶುಗಳ ಪಟ್ಟಿಯಲ್ಲಿ ಮನುಷ್ಯನು ಮೊದಲಿಗನು, ಮನುಷ್ಯ ಯಜ್ಞವು ಅತ್ಯಂತ ದುಬಾರಿಯಾಗಿತ್ತು. ಮನುಷ್ಯ ಯಜ್ಞದ ನಿಯಮಗಳ ಪ್ರಕಾರ ಕೊಲ್ಲಲ್ಪಡುವ ವ್ಯಕ್ತಿಯು ಮರೋಹಿತ (ವರ್ಗದವ)ನೂ ಆಗಿರಬಾರದು, ದಾಸನೂ ಆಗಿರಬಾರದು.

ಅವನು ಕ್ಷತ್ರಿಯ ಅಥವಾ ವೈಶ್ಯನಿರಬೇಕು. ಆ ಕಾಲದ ಸಾಮಾನ್ಯ ಮೌಲ್ಯದ ಪ್ರಕಾರ ಯಜ್ಞ ಪಶುವಾದ ಮನುಷ್ಯನನ್ನು ಕೊಳ್ಳಬೇಕಾದರೆ ಅವನ ಬೆಲೆ ಒಂದು ಸಾವಿರ ಆಕಳು, ಮನುಷ್ಯ ಯಜ್ಞವು ಬಹುವೆಚ್ಚದ್ದೂ ಮತ್ತು ಅನಾಗರಿಕವೂ ಆಗಿತ್ತಲ್ಲದೆ ಅದು ಓಕರಿಕ ಬರುವಂತಹದೂ ಆಗಿದ್ದಿರಬೇಕು. ಏಕೆಂದರೆ ಯಜ್ಞ ಮಾಡುವವರು ಯಜ್ಞ ಪಶುವಾದ ಮನುಷ್ಯನನ್ನು ಕೊಲ್ಲುವುದಷ್ಟೇ ಅಲ್ಲ, ಅವನನ್ನು ತಿನ್ನಬೇಕಾಗಿತ್ತು. ಮನುಷ್ಯನ ಅನಂತರದ ಸ್ಥಾನ ಕುದುರೆಯದು.

ಅದೂ ಸಹ ಬಹಳ ವೆಚ್ಚದ ಯಜ್ಞವಾಗಿತ್ತು. ಏಕೆಂದರೆ ಕುದುರೆಯು ಆರ್ಯರಿಗೆ ಭಾರತವನ್ನು ಜಯಿಸುವಲ್ಲಿ ಅಪರೂಪದ ಹಾಗೂ ಅವಶ್ಯಕವಾದ ಪಾಣಿಯಾಗಿತ್ತು. ಇಂತಹ ಸೈನಿಕ ಮಹತ್ವದ ಮತ್ತು ಸಮರ್ಥವಾದ ಪ್ರಾಣಿಯನ್ನು ಯಜ್ಞ ಪಶುವನ್ನಾಗಿ ಸಂಹರಿಸಿ ಆಹುತಿಗಳನ್ನು ಅರ್ಪಿಸುವುದು ಆರ್ಯರಿಗೆ ಸುಲಭವಾಗಿರಲಿಲ್ಲ. ಅಶ್ವಮೇಧ (ಕುದುರೆಯ ಯಜ್ಜುವು ಓಕರಿಕೆ ಬರುವಂತಹುದೂ ಆಗಿರಬೇಕು, ಏಕೆಂದರೆ ಅದರ ವಿಧಿಗಳಲ್ಲಿ ಒಂದರ ಪ್ರಕಾರ ಕುದುರೆಯನ್ನು ಕೊಲ್ಲುವುದಕ್ಕಿಂತ ಮೊದಲು ಯಜ್ಞಮಾಡುವವನ ಹೆಂಡತಿಯ ಜೊತೆ ಕುದುರೆಯು ಸಂಭೋಗ ಮಾಡಬೇಕಾಗಿತ್ತು.

ಜನರು ಕೃಷಿಯ ಉದ್ದೇಶಗಳಿಗಾಗಿ ಉಪಯೋಗಿಸುತ್ತಿದ್ದ ದನಗಳನ್ನೇ ಹೆಚ್ಚಾಗಿ ಯಜ್ಞಗಳಲ್ಲಿ ಬಲಿಕೊಡುತ್ತಿದ್ದರು. ಸಾಮಾನ್ಯವಾಗಿ ಅವು ಆಕಳುಗಳು ಮತ್ತು ಎತ್ತುಗಳಾಗಿದ್ದವು. ಯಜ್ಞಗಳ ವೆಚ್ಚ ಅತಿಯಾಗಿತ್ತು. ಆದುದರಿಂದ ಅವುಗಳಿಗೆ ಬೇಕಾದ ದುಬಾರಿ ಖರ್ಚಿನ ವಿಚಾರ

ಮಾಡಿದರೆ ಅವು ಕಣ್ಮರೆಯಾಗಬೇಕಾಗಿತ್ತು. ಆದರೆ ಅವು ಹಾಗೆ ಕಣ್ಮರೆಯಾಗಲಿಲ್ಲ. ಕಾರಣವಿಷ್ಟೇ, ಯಜ್ಞ ನಿಂತುಹೋದರೆ ಮರೋಹಿತರ ದಕ್ಷಿಣೆಯೂ ಇಲ್ಲದಂತೆ ಆಗುತ್ತಿತ್ತು. ಯಜ್ಜಗಳನ್ನು ಮಾಡದಿದ್ದರೆ ದಕ್ಷಿಣೆಯಿಲ್ಲ. (ದಕ್ಷಿಣೆಯಿಲ್ಲದಿದ್ದರೆ) ಬ್ರಾಹ್ಮಣರು ಉಪವಾಸ ಸಾಯಬೇಕಾಗುತ್ತಿತ್ತು. ಆದ್ದರಿಂದ ಬ್ರಾಹ್ಮಣರು ಅತಿವೆಚ್ಚದ ಯಜ್ಞ ಪಶುಗಳಿಗೆ ಬದಲಿ ವಸ್ತುಗಳನ್ನು ಕಂಡುಹಿಡಿದರು.

ಮನುಷ್ಯ ಯಜ್ಞದಲ್ಲಿ ಬ್ರಾಹ್ಮಣರು ಜೀವಂತ ಮನುಷ್ಯನಿಗೆ ಬದಲಾಗಿ ಹುಲ್ಲಿನ, ಲೋಹದ ಅಥವಾ ಮಣ್ಣಿನ ಮನುಷ್ಯನನ್ನು ಅರ್ಪಿಸಲು ಅನುಮತಿ ನೀಡಿದರು. ಆದರೆ ಅವರು ನರ ಯಜ್ಞವನ್ನು ಸಂಪೂರ್ಣವಾಗಿ ತ್ಯಜಿಸಲಿಲ್ಲ. ಹಾಗೆ ಮಾಡಿದರೆ ಆ ಯಜ್ಞವೇ ನಿಂತು ಹೋಗಬಹುದು ಮತ್ತು ತಮಗೆ ದಕ್ಷಿಣೆ ಸಿಗುವುದಿಲ್ಲವೆಂಬ ಹೆದರಿಕೆ ಅವರಿಗೆ ಇರಬೇಕು. ಮನುಷ್ಯ ಯಜ್ಞವು ಅಪರೂಪವಾಗುತ್ತ ಬಂದಂತೆ, ಅದಕ್ಕೆ ಬದಲಾಗಿ ಪಶು ಯಜ್ಞವು ಹೆಚ್ಚಾಗಿ ರೂಢಿಯಲ್ಲಿ ಬಂದಿತು, ಪಶು ಯಜ್ಞವು ಸಹ ಲೌಕಿಕರಿಗೆ ಖರ್ಚಿನ ಸಮಸ್ಯೆಯಾಗಿತ್ತು.

ಇಲ್ಲಿಯೂ ಯಜ್ಞವು ಸಂಪೂರ್ಣ ಕಣ್ಮರೆಯಾಗಬಾರದೆಂದು, ಮನುಷ್ಯ ಮತ್ತು ಕುದುರೆಗಳ ಬದಲಿಗೆ ದನಗಳನ್ನು ಅನುಮತಿಸಿದಂತೆ, ದನಗಳ ಬದಲಿಗೆ ಇನ್ನೂ ಚಿಕ್ಕ ಪ್ರಾಣಿಗಳನ್ನು ಬಲಿಕೊಡಲು ಬ್ರಾಹ್ಮಣರು ಅನುಮತಿಸಿದರು. ಇವೆಲ್ಲವೂ ಯಜ್ಞದ ಆಚರಣೆಯನ್ನು ಉಳಿಸಿಕೊಳ್ಳುವುದಕ್ಕಾಗಿತ್ತು. ಹೀಗೆ ಮಾಡುವುದರಿಂದ ಬ್ರಾಹ್ಮಣರ ಉಪಜೀವನಕ್ಕೆ ಬೇಕಾದ ದಕ್ಷಿಣೆಗೆ ಸಂಚಕಾರ ಬರಲಿಲ್ಲ. ಯಜ್ಞಗಳನ್ನು ಮುಂದುವರಿಸಿಕೊಂಡು ಹೋಗಬೇಕೆಂಬ ಬ್ರಾಹ್ಮಣರ ಹಟ ಎಷ್ಟಿತ್ತೆಂದರೆ ಕೇವಲ ಅನ್ನವನ್ನು ಬಲಿಯಾಗಿ ಅರ್ಪಿಸುವುದರಿಂದಲೂ ಅವರು ತೃಪ್ತರಾದರು.

ಆದರೆ, ಆರ್ಯರ ಯಜಗಳ ಬದಲಿ ವ್ಯವಸ್ಥೆಯಿಂದ ಅದರ ಭೀಕರತೆ ಕಡಿಮೆಯಾಯಿತೆಂದು ಭಾವಿಸಬಾರದು. ಬದಲಿ ವ್ಯವಸ್ಥೆಯೆಂದರೆ, ಅತಿ ಖರ್ಚಿನ ಮತ್ತು ಬಹಳ ಭೀಕರವಾದ ಯಜ್ಞಗಳನ್ನು ಪೂರ್ಣವಾಗಿ ತ್ಯಜಿಸಿ ಕಡಿಮೆ ಖರ್ಚಿನ ಹಾಗೂ ಸೌಮ್ಯವಾದ ಯಜ್ಞಗಳನ್ನು ಮಾಡುವುದಾಗಿರಲಿಲ್ಲ. ಯಜ್ಞಮಾಡುವವನು ತನ್ನ ಸಾಮರ್ಥ್ಯಕ್ಕೆ ಅನುಗುಣವಾಗಿ ಆಹುತಿಗಳನ್ನು ಅರ್ಪಿಸಬೇಕೆನ್ನುವುದೇ ಆದರ ಅರ್ಥ, ಅವನು ಬಡವನಾಗಿದ್ದರೆ ಅನ್ನವನ್ನು ಆಹುತಿಯಾಗಿ ಅರ್ಪಿಸಬಹುದು. ಸುಸ್ಥಿತಿಯಲ್ಲಿದ್ದರೆ ಒಂದು ಆಡನ್ನು ಬಲಿ ಕೊಡಬಹುದು.

ಅವನು ಶ್ರೀಮಂತನಿದ್ದರೆ ಮನುಷ್ಯ ಅಥವಾ ಕುದುರೆ ಅಥವಾ ಆಕಳು ಅಥವಾ ಎತ್ತು ಬಲಿ ಪಶು ಆಗಬಹುದು. ಬದಲಿ ವ್ಯವಸ್ಥೆಯ ಪರಿಣಾಮವೆಂದರೆ, ಯಜ್ಞವನ್ನು ಎಲ್ಲರ ಸಾಮರ್ಥ್ಯಕ್ಕೆ ಒಳಪಡಿಸಿದಂತಾಯ್ತು ಮತ್ತು ಒಟ್ಟಿನಲ್ಲಿ ಬ್ರಾಹ್ಮಣರು ಹೆಚ್ಚು ಲಾಭ ಪಡೆಯುವಂತಾಯಿತು. ಆದರಿಂದ ಪಶುಯಜ್ಞವನ್ನು ನಿಲ್ಲಿಸಲಾಗಿಲ್ಲ. ಬದಲಾಗಿ ಸಾವಿರಾರು ಪಶುಗಳನ್ನು ಬಲಿಕೊಡುವುದು ನಡೆದೇ ಇತ್ತು.

ಯಜ್ಞಗಳಲ್ಲಿ ಆಗಾಗ್ಗೆ ದನಗಳ ಕಗ್ಗೋಲೆ ನಡೆಯುತ್ತಿತ್ತು. ಅಲ್ಲಿ ಬ್ರಾಹ್ಮಣರು ಕಟುಕರಾಗಿದ್ದರು. ಬೌದ್ಧ ಸಾಹಿತ್ಯದಲ್ಲಿ ಬರುವ ಯಜ್ಞದ ಉಲ್ಲೇಖಗಳನ್ನು ನೋಡಿದಾಗ ಈ ಮುಗ್ಧಪಶುಗಳ ಕಗ್ಗೋಲೆಯ ವ್ಯಾಪಕತೆಯ ಕಲ್ಪನೆ ಬರುತ್ತದೆ. ‘ಸುತ್ತನಿಪಾತ’ದಲ್ಲಿ ಕೋಸಲದ ರಾಜ, ಪಸನದಿ ಮಾಡಬೇಕಾದ ಯಜ್ಞದ ವರ್ಣನೆಯಿದೆ. ಅಲ್ಲಿ ಹೀಗೆ ಹೇಳಿದೆ: ಯಜ್ಞದಲ್ಲಿ ಕೊಲ್ಲುವುದಕ್ಕಾಗಿ ಐದು ನೂರು ಎತ್ತುಗಳು, ಐದು ನೂರು ಕುರಿಗಳನ್ನು ಕಂಬಗಳಿಗೆ ಕಟ್ಟಿದ್ದರು ಮತ್ತು ಪುರೋಹಿತರು ಹೇಳಿದ ಕೆಲಸಗಳನ್ನು ಮಾಡುವುದಕ್ಕಾಗಿ ನಿಯಮಿಸಲ್ಪಟ್ಟಿದ್ದ ರಾಜನ ಸೇವಕರು ಅಶ್ರುಪೂರ್ಣ ಕಣ್ಣುಳ್ಳವರಾಗಿ ತಮ್ಮ ತಮ್ಮ ಕೆಲಸಗಳನ್ನು ಮಾಡುತ್ತಿದ್ದರು.

ಯಜ್ಞವು ಕಗ್ಗೋಲೆಯನ್ನು ಒಳಗೊಂಡಿತ್ತಷ್ಟೇ ಅಲ್ಲ. ಅದೊಂದು ಸ್ವಚ್ಛಾ ವಿಹಾರೋತ್ಸವವಾಗಿತ್ತು. ಸುಟ್ಟ ಮಾಂಸವಲ್ಲದೆ ಮದ್ಯವೂ ಅಲ್ಲಿರುತ್ತಿತ್ತು. ಬ್ರಾಹ್ಮಣರು ಸೋಮ ಮತ್ತು ಸುರಾಪಾನ ಮಾಡುತ್ತಿದ್ದರು. ಪ್ರತಿಯೊಂದು ಯಜ್ಞ ಮುಗಿದ ನಂತರ ಜೂಜಾಟವಾಡುತ್ತಿದ್ದರು ಮತ್ತು ಇನ್ನೂ ಅಸಾಧಾರಣವಾದ ಒಂದು ಮಾತೆಂದರೆ ಅದರ ಜೊತೆಯಲ್ಲಿಯೇ ಬಯಲಿನಲ್ಲಿ ಮೈಥುನ ನಡೆಯುತ್ತಿತ್ತು. ಯಜ್ಞವೆಂದರೆ ವ್ಯಭಿಚಾರವಾಗಿತ್ತು ಮತ್ತು ಅದರಲ್ಲಿ ಧರ್ಮವೆಂಬುದೇನೂ ಉಳಿದಿರಲಿಲ್ಲ. ಆರ್ಯರ ಧರ್ಮವು ಕೇವಲ ಆಚರಣೆಗಳ ಸರಮಾಲೆಯಾಗಿತ್ತು. ಈ ಆಚರಣೆಗಳ ಹಿಂದೆ

ಒಳ್ಳೆಯ ಮತ್ತು ನೈತಿಕ ಜೀವನಕ್ಕಾಗಿ ಹಂಬಲವಿರಲಿಲ್ಲ. ಸಚ್ಚಾರಿತ್ರಕ್ಕಾಗಿ ಪಿಪಾಸೆಯಿರಲಿಲ್ಲ. ಅವರ ಧರ್ಮದಲ್ಲಿ ಅಧ್ಯಾತ್ಮದ ಯಾವ ತಳಹದಿಯೂ ಇರಲಿಲ್ಲವೆಂಬ ಬಗ್ಗೆ ‘ಋಗೈದ’ದ ಸೂಕ್ತಗಳು ಒಳ್ಳೆಯ ಸಾಕ್ಷ್ಯವನ್ನೊದಗಿಸುತ್ತವೆ. ಸೂಕ್ತಗಳೆಂದರೆ ಆರ್ಯರು ತಮ್ಮ ದೇವತೆಗಳನ್ನು ಉದ್ದೇಶಿಸಿ ಮಾಡಿದ ಪ್ರಾರ್ಥನೆಗಳು. ಈ ಪ್ರಾರ್ಥನೆಗಳಲ್ಲಿ ಅವರು ಏನನ್ನು ಬೇಡುತ್ತಾರೆ? ಆಮಿಷಗಳಿಂದ ತಮ್ಮನ್ನು ದೂರ ಇಡಬೇಕೆಂದು ಬೇಡುತ್ತಾರೆಯೆ? ಬಹಳ ಸೂಕ್ತಗಳು ಇಂದ್ರನ ಸ್ತುತಿ ಪರವಾಗಿದೆ.

ಆರ್ಯರ ಶತ್ರುಗಳನ್ನು ನಾಶ ಮಾಡಿದ್ದಕ್ಕಾಗಿ ಅವನನ್ನು ಅವು ಸ್ತುತಿಸುತ್ತವೆ. ಕೃಷ್ಣನೆಂಬ ಅಸುರನ ಗರ್ಭಿಣಿಯರಾದ ಎಲ್ಲ ಹೆಂಡಂದಿರನ್ನು ಕೊಂದದ್ದಕ್ಕಾಗಿ ಅವನನ್ನು ಸ್ತುತಿಸುತ್ತವೆ. ಲಕ್ಷಗಟ್ಟಲೆ ಅಸುರರನ್ನು ಸಂಹಾರ ಮಾಡಿದ್ದಕ್ಕಾಗಿ ಅವನನ್ನು ಸುತ್ತಿಸುತ್ತವೆ. ಅನಾರ್ಯರ ಆಹಾರ ಧಾನ್ಯಗಳೆಲ್ಲ ತಮಗೆ ದೊರೆಯಬೇಕು ಮತ್ತು ಅನಾರ್ಯರ ಧನ ಸಂಪತ್ತೆಲ್ಲ ತಮಗೇ ಸಿಗಬೇಕು ಎಂಬ ಆಸೆಯಿಂದ ಅನಾರ್ಯರನ್ನು ಇನ್ನೂ ಹೆಚ್ಚಾಗಿ ನಾಶಪಡಿಸು ಎಂದು ಆರ್ಯರು ಇಂದ್ರನನ್ನು ಪ್ರಾರ್ಥಿಸುತ್ತಾರೆ. ಆಧ್ಯಾತ್ಮಿಕವಾಗಿರುವುದನ್ನು ಮತ್ತು ಉದಾತ್ತವಾಗಿರುವುದನ್ನು ಬಿಟ್ಟು ‘ಋಗ್ವದ’ದ ಸೂತ್ರಗಳು ಕೆಟ್ಟ ವಿಚಾರಗಳು ಮತ್ತು ಕೆಟ್ಟ ಉದ್ದೇಶಗಳಿಂದ ತುಂಬಿವೆ. ನೈತಿಕ ಜೀವನವೆಂದು ಯಾವುದನ್ನು ಕರೆಯಬಹುದೋ ಅದರ ಬಗೆಗೆ ಆರ್ಯರ ಧರ್ಮವು ಯಾವ ಕಾಲಕ್ಕೂ ಕಾಳಜಿ ಹೊಂದಿರಲಿಲ್ಲ.

-ಮಾಹಿತಿ ಮೂಲ: ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಸುಪ್ರಸಿದ್ಧ ಗ್ರಂಥ “ಪ್ರಾಚೀನ ಭಾರತದಲ್ಲಿ‌ ಕ್ರಾಂತಿ ಮತ್ತು ಪ್ರತಿಕ್ರಾಂತಿ”.
ಸಂಪುಟ-3. ಪುಟ ಸಂಖ್ಯೆ- 190,191,192,193.

(ಪೋಸ್ಟ್ ಸೆಲೆ: Vikas R Mourya ಫೇಸ್‌ಬುಕ್‌ ನಿಂದ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಬಹಿರಂಗ

ಸಾಂತ್ವನದ ನೆಲೆಗಳ ಸಾಂಸ್ಥೀಕರಣವೂ ಸೌಹಾರ್ದತೆಯ ಹಂಬಲವೂ

Published

on


  • ಸಾಮಾಜಿಕ ಸ್ವಾಸ್ಥ್ಯ ಮತ್ತು ಸಾಂಸ್ಕೃತಿಕ ಸೌಂದರ್ಯದ ಸಾಧನಗಳು ರಾಗದ್ವೇಷಗಳ ನೆಲೆಯಾಗಬಾರದು.

  • ನಾ ದಿವಾಕರ

ಯಾವುದೇ ರೀತಿಯ ಸಮಾಜದಲ್ಲಿ ಸಾಮಾನ್ಯ ಜನರಿಗೆ ತಮ್ಮ ನಿತ್ಯ ಬದುಕಿನ ಬವಣೆಯಿಂದ ಹೊರಬರಲು ಕೆಲವು ಮಾರ್ಗಗಳು, ಸಾಧನಗಳು, ವಾಹಿನಿಗಳು ಅತ್ಯವಶ್ಯವಾಗಿರುತ್ತವೆ.

ವಿಶೇಷವಾಗಿ ಮನೆಯಿಂದ ಹೊರಹೋಗಿ ದುಡಿಯುವವರಿಗೆ ಮತ್ತು ದಿನವಿಡೀ ಮನೆಯಲ್ಲೇ ದುಡಿದು ಹೈರಾಣಾಗುವ ಮಹಿಳೆಯರಿಗೆ ನೆಮ್ಮದಿಯ ಕ್ಷಣಗಳು ಲಭ್ಯವಾಗುವುದು ಮುಸ್ಸಂಜೆಯ ನಂತರ ಮತ್ತು ಮುಂಜಾವಿನ ಮುನ್ನ.

ಕಳೆದ ಐದು ದಶಕಗಳಿಂದಲೂ ಬ್ರಾಹ್ಮೀ ಮುಹೂರ್ತ ಎನ್ನಲಾಗುವ ಬೆಳ್ಳಂಬೆಳಗಿನ ಜಾವದಲ್ಲಿ ಎದ್ದು ನಿತ್ಯ ಜೀವನದ ಚಕ್ರ ಉರುಳಿಸುವ ಅಭ್ಯಾಸವಿರುವ ನನಗೆ ಮತ್ತು ನನ್ನಂತಹ ಲಕ್ಷಾಂತರ ಜನಕ್ಕೆ ಮುಂಜಾವಿನ ಮುನ್ನ ಇರುವಂತಹ ಶಾಂತತೆ, ನಿರ್ಲಿಪ್ತ ವಾತಾವರಣ, ಶಬ್ದರಹಿತ ಪರಿಸರ, ಸೂರ್ಯೋದಯದ ವೇಳೆ ಕೇಳಿಬರುವ ಹಕ್ಕಿಗಳ ಚಿಲಿಪಿಲಿ ಮತ್ತು ನಿರ್ಜನ ರಸ್ತೆಗಳು ಎಂತಹ ಮಹದಾನಂದ ಉಂಟುಮಾಡುತ್ತದೆ ಎಂದು ಹೇಳಬೇಕಿಲ್ಲ. ರಸ್ತೆಯಲ್ಲಿ ನಡೆದುಹೋಗುವಾಗಲೂ ಧ್ಯಾನಸ್ಥ ಮನಸ್ಥಿತಿಯನ್ನು ಹೊಂದಬಹುದಾದಂತಹ ವಾತಾವರಣ ಅಲ್ಲಿರುತ್ತದೆ. ಬಹುಶಃ ಬೆಂಗಳೂರಿನಂತಹ ಕಾಂಕ್ರೀಟ್‌ ಕಾಡುಗಳ ದಟ್ಟಣೆಯಲ್ಲಿ ಇವೆಲ್ಲವೂ ಮಾಯವಾಗಿರುತ್ತದೆ.

ಶಾಲೆ, ಕಾಲೇಜು, ಕಾರ್ಖಾನೆ, ಕಚೇರಿ ಮತ್ತು ಸ್ವಂತ ಉದ್ದಿಮೆಗಳಿಗಾಗಿ ಮುಂಜಾನೆದ್ದು ಹೊರಡುವವರಿಗೆ ಈ ಸುಂದರ ಗಳಿಗೆಗಳೇ ದಿನವಿಡೀ ದುಡಿಮೆ ಮಾಡುವ ಶಕ್ತಿಯನ್ನು ಸದ್ದಿಲ್ಲದೆ ತುಂಬಿರುತ್ತವೆ. ಹೊರಗಣ ದುಡಿಯುವವರಿಗಿಂತಲೂ ಹೆಚ್ಚಿನ ದುಡಿಮೆಯನ್ನು ಮನೆಯೊಳಗಿದ್ದೇ ಮಾಡುವ ಹೆಣ್ಣುಮಕ್ಕಳ ವೇತನರಹಿತ ಶ್ರಮಕ್ಕೆ ಈ ಪ್ರಶಾಂತ ಗಳಿಗೆಗಳೇ ನಿತ್ಯ ಮುಂಗಡ ಕೂಲಿಯಂತೆ.

ಈ ಸಂದರ್ಭದಲ್ಲಿ ನಿತ್ಯ ಕಾರ್ಖಾನೆಗೆ ಹೋಗುವ ಕಾರ್ಮಿಕರ ಬವಣೆಯನ್ನೂ ಸಹ ಗಮನಿಸಬೇಕಾದ್ದೇ. ದಿನಕ್ಕೆ ಮೂರು ಪಾಳಿಗಳಿರುವ ಬಹುತೇಕ ಕಾರ್ಖಾನೆಗಳಲ್ಲಿ ಕಾರ್ಮಿಕರು ಕೆಲವು ದಿನ ನಸುಕಿನಲ್ಲೇ ಹೊರಡಬೇಕಾಗುತ್ತದೆ. ಇನ್ನು ಕೆಲವು ದಿನ ರಾತ್ರಿ ಮನೆಯಿಂದ ತೆರಳಿ ಬೆಳ್ಳಂಬೆಳಗ್ಗೆ ಮನೆಗೆ ಹಿಂದಿರುಗುವುದು ಸಾಮಾನ್ಯ ದೃಶ್ಯ. ಸಾರ್ವಜನಿಕ ಉದ್ದಿಮೆಗಳ ತವರು ಎನ್ನಬಹುದಾದ ಬೆಂಗಳೂರಿನ ಹಿಂದಿನ ಎರಡು ಪೀಳಿಗೆಯವರಿಗೆ ಇದರ ಪರಿಚಯ ಇದ್ದೇ ಇರುತ್ತದೆ.

ಅರ್ದಂಬರ್ಧ ನಿದ್ದೆಯಲ್ಲೇ ತಿಂಗಳಾರ್ಧವನ್ನು ಕಳೆಯುವ ಈ ಕಾರ್ಮಿಕರು , ಯಾವುದೇ ಕೆಲಸ ಮಾಡಿದರೂ, ತಮ್ಮ ದುಡಿಮೆಯ ಮೂಲಕವೇ ಭಾರತದ ಅರ್ಥ ವ್ಯವಸ್ಥೆಯನ್ನು ಒಂದು ಭದ್ರಕೋಟೆಯನ್ನಾಗಿ ಮಾಡಿರುವುದು ಈ ಸಂದರ್ಭದಲ್ಲಿ ಸ್ಮರಿಸಲೇಬೇಕಾದ ಅಂಶ. ಇದರ ಶ್ರೇಯ ಮನೆಯಲ್ಲಿ ಇವರ ಊಟ, ತಿಂಡಿ, ವಿಶ್ರಾಂತಿ ಮತ್ತು ಅಬ್ಬರ ಎಲ್ಲವನ್ನೂ ಸಹಿಸಿಕೊಂಡು ತಾಳ್ಮೆಯಿಂದ ನಡೆಸಿಕೊಂಡು ಹೋಗುವ ಹೆಣ್ಣುಮಕ್ಕಳಿಗೂ ಸಮಭಾಗದಲ್ಲಿ ಸಲ್ಲಬೇಕಲ್ಲವೇ ?

ರಸ್ತೆಗಳಲ್ಲಿ ವಾಹನದಟ್ಟಣೆಯೇ ಇಲ್ಲದ ಕಾಲವನ್ನೂ ಮೀರಿ ನಾವು ಬಂದಿದ್ದೇವೆ. ಇಂದಿನ ಯುವ ಪೀಳಿಗೆಗೆ ಖಾಲಿ ರಸ್ತೆ ನೋಡುವುದೇ ಒಂದು ಸುಂದರ ಅನುಭವದಂತೆ ಕಾಣಬಹುದು. ಆದರೆ ಕೇವಲ ನಾಲ್ಕೈದು ದಶಕಗಳ ಹಿಂದೆ ರಸ್ತೆಯಲ್ಲಿ ಡುರ್‌ರ್‌ರ್‌ರ್‌,,,, ಪೀಪೀಪೀ,,,,, ಎಂದು ಸದ್ದುಮಾಡುತ್ತಾ, ಅತ್ತಿಂದಿತ್ತ ಓಲಾಡುತ್ತಾ ಓಡುತ್ತಿದ್ದ ಹುಡುಗರು ಮುಖ್ಯ ರಸ್ತೆಗಳಲ್ಲೂ ಕಾಣುತ್ತಿದ್ದರು. ಆದರೂ ಅಮ್ಮಂದಿರು ಹುಷಾರಾಗಿ ಹೋಗು ಎಂದು ಹೇಳುವುದನ್ನು ತಪ್ಪಿಸುತ್ತಿರಲಿಲ್ಲ.

ಇಂದು ರಸ್ತೆಯಲ್ಲಿ ನಡೆದು ಹೋಗುವುದೇ ದುಸ್ತರವಾದ ಸನ್ನಿವೇಶ ಎದುರಾಗಿದೆ. ಅನೇಕ ನಗರಗಳ ಮುಖ್ಯರಸ್ತೆಗಳಲ್ಲಿ ಪಾದಚಾರಿಗಳಿಗೆ ಜಾಗವೇ ಇರುವುದಿಲ್ಲ. ಆಧುನಿಕ ಯುವ ಪೀಳಿಗೆಗೆ ಇದರ ಪರಿವೆಯೂ ಇರುವುದಿಲ್ಲ, ಏಕೆಂದರೆ ಮಧ್ಯಮ ವರ್ಗಗಳಲ್ಲಿ ನಡೆದಾಡುವವರ ಸಂಖ್ಯೆಯೇ ಕಡಿಮೆಯಾಗುತ್ತಿದೆ. ವಾಹನದಟ್ಟಣೆಯ ಸದ್ದೂ ಕೇಳಿಸದಂತೆ ದಿನವಿಡೀ ಇಯರ್‌ ಫೋನ್‌ ಸಿಕ್ಕಿಸಿಕೊಂಡು ಓಡಾಡುವ ಒಂದು ಪೀಳಿಗೆಗೆ ಶಬ್ದಮಾಲಿನ್ಯದ ಪರಿಜ್ಞಾನವೇ ಇರಲಿಕ್ಕಿಲ್ಲ. ಏಕೆಂದರೆ ಅವರ ಮಿದುಳಿನ ಮೇಲೆ ಉಂಟಾಗಬಹುದಾದ ಶಬ್ದತರಂಗಗಳ ಅಡ್ಡಪರಿಣಾಮಗಳ ಪರಿವೆ ಅವರಿಗೆ ಇರಲಿಕ್ಕಿಲ್ಲ. ರಸ್ತೆಗಳಲ್ಲಿ ವಾಹನಗಳ ಹಾರ್ನ್‌, ಅತಿ ಹೆಚ್ಚು ಸದ್ದುಮಾಡುವ ಸೈಲೆನ್ಸರ್‌ಗಳು(!) ಮತ್ತು ಹೆಚ್ಚಿನ ಜನದಟ್ಟಣೆ ಜನಸಾಮಾನ್ಯರಲ್ಲಿ ಶಬ್ದಮಾಲಿನ್ಯದ ಬಗ್ಗೆ ಹೆಚ್ಚು ಜಾಗೃತಿ ವಹಿಸುವಂತೆ ಮಾಡಿವೆ.

ಐವತ್ತು ವರ್ಷಗಳಷ್ಟು ಹಿಂದಕ್ಕೆ ಚಲಿಸಿದರೆ ನಮಗೆ ಗೋಚರಿಸಬಹುದಾದ ಸಾಂತ್ವನದ ನೆಲೆಗಳು ಇಂದು ಮರೆಯಾದಂತೆ ಕಾಣುತ್ತವೆ. ಇತ್ತೀಚೆಗೆ ವಿವಾದ ಸೃಷ್ಟಿಸಿರುವ ಅಜಾನ್-ಸುಪ್ರಭಾತ-ಭಜನೆಯ ಜಿದ್ದಾಜಿದ್ದಿಯ ಹಿನ್ನೆಲೆಯಲ್ಲಿ ಇದನ್ನು ಪರಾಮರ್ಶಿಸಬಹುದು. ದೇವಸ್ಥಾನ, ಮಸೀದಿ ಮತ್ತು ಚರ್ಚುಗಳು ಆಧುನಿಕತೆಗೊಳಗಾದಷ್ಟೇ ವಾಣಿಜ್ಯೀಕರಣಕ್ಕೊಳಗಾಗಿರುವುದನ್ನೂ ಅಲ್ಲಗಳೆಯದೆ ಈ ಪೂಜಾ ಸ್ಥಳಗಳ ಸುತ್ತ ಹಬ್ಬಿರುವ ವಿವಾದದ ಸಿಕ್ಕುಗಳನ್ನು ಅರ್ಥಮಾಡಿಕೊಳ್ಳಬಹುದು.

ಕೇವಲ ನಾಲ್ಕು ದಶಕಗಳ ಹಿಂದೆ ದೇವಸ್ಥಾನಗಳೆಂದರೆ ಶ್ರದ್ಧಾ ಭಕ್ತಿಯ ಕೇಂದ್ರಗಳಾಗಿದ್ದವು, ನಿತ್ಯ ಕಾಯಕಗಳಿಂದ ದಣಿದ ಮನಸುಗಳಿಗೆ ಸಾಂತ್ವನದ ನೆಲೆಗಳಾಗಿದ್ದವು. ಅಲ್ಲಿ ನಡೆಯುತ್ತಿದ್ದ ಪೂಜಾ ಕೈಂಕರ್ಯಗಳಿಗೆ ಮಾರುಕಟ್ಟೆ ಸ್ಪರ್ಶ ಇರಲಿಲ್ಲ. ಶ್ರದ್ಧೆ ಮತ್ತು ನಂಬಿಕೆಯ ಸ್ಪರ್ಶ ಹೆಚ್ಚಾಗಿತ್ತು. ಗಂಟೆಯ ಸದ್ದು ಪಕ್ಕದ ಮನೆಗೂ ಕೇಳುತ್ತಿರಲಿಲ್ಲ. ನಗಾರಿಯ ಬಳಕೆ ಬಹುಪಾಲು ಇರಲಿಲ್ಲ.

ಆಸ್ತಿಕರು ತಮ್ಮ ಆತಂಕಗಳನ್ನು ದೂರ ಮಾಡಿಕೊಳ್ಳಲು, ಮನಸಿನ ದುಗುಡಗಳನ್ನು ನೀಗಿಸಿಕೊಳ್ಳಲು, ಚಿಂತೆಗಳನ್ನು ನಿವಾರಿಸಿಕೊಳ್ಳಲು ದೇವಸ್ಥಾನಗಳನ್ನು ಒಂದು ಸಾಂತ್ವನದ ನೆಲೆಯಂತೆ ಭಾವಿಸುತ್ತಿದ್ದರು. ಸಂಕಷ್ಟಿ, ಪ್ರದೋಷ, ನಾಗದೋಷ, ಶನೀಕಾಟ ಮುಂತಾದ ನಂಬಿಕೆಗಳು ವ್ಯಕ್ತಿಗತ ನೆಲೆಯಲ್ಲಿದ್ದವೇ ಹೊರತು, ಸಾರ್ವಜನಿಕವಾಗಿ ಪರಿಹರಿಸಬಹುದಾದ ವಿಧಾನಗಳಾಗಿರಲಿಲ್ಲ.

ಅಂದಿನ ದೇವಾಲಯದ ಪ್ರಾಂಗಣಗಳಲ್ಲಿ ಹಾಡುಗಾರಿಕೆ, ಸಂಗೀತ, ಭಜನೆ ನೆರೆದ ಭಕ್ತರಿಂದಲೇ ನಡೆಯುತ್ತಿದ್ದುದೂ ಒಂದು ವಿಶೇಷ. ಆಸ್ತಿಕರಿಗೆ ಮತ್ತು ಕೆಲವೊಮ್ಮೆ ಆಸ್ತಿಕರಲ್ಲದವರಿಗೂ ಭಜನೆ ಕೆಲವೊಮ್ಮೆ ಮಾನಸಿಕವಾಗಿ ನೆಮ್ಮದಿ ತರುವ ಒಂದು ಕ್ರಿಯೆಯಾಗಿ ಪರಿಣಮಿಸುತ್ತದೆ. ಸಂಜೆ ತಮ್ಮ ನಿತ್ಯ ದುಡಿಮೆಯ ದಣಿವಾರಿಸಿಕೊಳ್ಳಲು ಭಜನಾ ಮಂದಿರಗಳಲ್ಲಿ ಕುಳಿತು ಮನಶ್ಶಾಂತಿ ಕಂಡುಕೊಳ್ಳುವುದು ಸಾಮಾನ್ಯವಾಗಿತ್ತು.

ಗೃಹಿಣಿಯರಿಗೂ ಈ ಭಜನೆ ಎನ್ನುವುದು ನೆಮ್ಮದಿ ಮೂಡಿಸುವಂತಹ ಸಾಂತ್ವನದ ನೆಲೆಯಾಗಿತ್ತು. ಬೆಳಗಿನ ಸುಪ್ರಭಾತ ನಿದ್ರಾತೀತ ದೇವರನ್ನು ಎಬ್ಬಿಸುವುದಕ್ಕಿಂತಲೂ ಸುತ್ತಲಿನ ಜನರನ್ನು ನಿದ್ರೆಯಿಂದ ಎಚ್ಚರಿಸುವ ಒಂದು ನಾದಮಯ ವಾಹಿನಿಯಂತೆ ಅಲ್ಲಲ್ಲಿ ಮೊಳಗುತ್ತಿದ್ದುದು ಸಾಮಾನ್ಯ ಸಂಗತಿ. ಹಾಗೆಯೇ ಚರ್ಚುಗಳಲ್ಲಿನ ಗಂಟೆಯ ಸದ್ದು, ಮಸೀದಿಯ ಅಜಾನ್‌ ಸಹ ಜನರಿಗೆ ವೇಳೆಯನ್ನು ಸೂಚಿಸುವ ಮಟ್ಟಿಗೆ ಕರಾರುವಾಕ್ಕಾಗಿ ಸಮಯಸೂಚಕವಾಗಿದ್ದವು.

ರಂಜಾನ್‌ ವೇಳೆಯಲ್ಲಿ ಬ್ರಾಹ್ಮೀ ಮುಹೂರ್ತದಲ್ಲಿ ಮುಸಲ್ಮಾನರನ್ನು ಎಬ್ಬಿಸಲು ರಸ್ತೆಯಲ್ಲಿ ಜೋಳಿಗೆ ಹೊತ್ತ ಫಕೀರರು ಹಾಡು ಹೇಳಿಕೊಂಡು ಬರುತ್ತಿದ್ದರು. ಶಿವರಾತ್ರಿಯ ದಿನ ನಡುರಾತ್ರಿಯಲ್ಲಿ ಭಕ್ತಿಪರವಶ ಗೀತೆಗಳನ್ನು ಹಾಡುವ ಒಂದು ಸಮುದಾಯವೂ ನಮ್ಮ ನಡುವೆ ಇತ್ತು. ಇದಾವುದೂ ನಮಗೆ ಶಬ್ದ ಮಾಲಿನ್ಯ ಎನಿಸಿರಲಿಲ್ಲ. ಜಾತಿ ಭೇದ, ಅಸ್ಪೃಶ್ಯತೆ, ಸಾಮಾಜಿಕ ತಾರತಮ್ಯಗಳ ನಡುವೆಯೇ ಸಮಾಜದಲ್ಲಿ ದಣಿದ ಜೀವಗಳಿಗೆ ಸಾಂತ್ವನ ನೀಡುವ ತಾಣಗಳಂತೆ ಈ ಭಕ್ತಿ ಕೇಂದ್ರಗಳು ಕಾಣುತ್ತಿದ್ದವು.

ಆದರೆ ಆಧುನಿಕ ಸಮಾಜ ಮಾರುಕಟ್ಟೆ ವ್ಯವಸ್ಥೆಗೆ ತೆರೆದುಕೊಳ್ಳುತ್ತಿರುವಂತೆಲ್ಲಾ ಮತಧಾರ್ಮಿಕ ನೆಲೆಗಳು ತಮ್ಮ ಬಾಹುಗಳನ್ನು ವಿಸ್ತರಿಸಿಕೊಳ್ಳತೊಡಗಿದವು. ನಗರೀಕರಣ ಪ್ರಕ್ರಿಯೆ ಚುರುಕಾದಂತೆ ಸಣ್ಣ ಪುಟ್ಟ ಪಟ್ಟಣಗಳಲ್ಲೂ ಬಡಾವಣೆಗಳು ಹುಟ್ಟಿಕೊಂಡವು. ಊರಿನ ಕೇಂದ್ರ ಬಿಂದು ಆಗಿರುತ್ತಿದ್ದ ದೇವಸ್ಥಾನಗಳೊಂದಿಗೇ ರಸ್ತೆಗೊಂದು ದೇವಸ್ಥಾನ ನಿರ್ಮಾಣ ಮಾಡುವುದು, ರಾಜಗೋಪುರಗಳನ್ನು ಕಟ್ಟುವುದು ಮತ್ತು ಎಲ್ಲ ದೇವಲಗಳನ್ನೂ ಸರ್ವದೈವ ಪೂಜಾ ಕೇಂದ್ರದಂತೆ ಮಾರ್ಪಡಿಸುವುದರ ಮೂಲಕ ಪೂಜಾಸ್ಥಳಗಳ ವಾಣಿಜ್ಯೀಕರಣಕ್ಕೆ ಹೆಚ್ಚು ಒತ್ತು ನೀಡಲಾಯಿತು.

ನಾಗರಿಕರ ನಡುವಿನ ಸಾಂಸ್ಕೃತಿಕ ಮತ್ತು ಧಾರ್ಮಿಕ ಸಂಘಟನೆಗಳಿಗೆ, ಕ್ರಮೇಣ ರಾಜಕೀಯ ಸಂಘಟನೆಗಳಿಗೂ ಸಹ, ದೇವಾಲಯಗಳೇ ಕೇಂದ್ರ ಸ್ಥಾನಗಳಾಗಿ ಪರಿಣಮಿಸಿದವು. ಆಗಮ ಶಾಸ್ತ್ರಗಳಿಂದ, ವೈದಿಕ ಪೂಜಾ ವಿಧಿವಿಧಾನಗಳನ್ನು ಹೆಕ್ಕಿ ತೆಗೆಯುವ ಮೂಲಕ ಸಾಂತ್ವನಕ್ಕಾಗಿ ಅಲೆಯುವ ದಣಿದ ಮನಸುಗಳಿಗೆ ಹೊಸ ಅಚರಣೆಗಳನ್ನು ಪರಿಚಯಿಸಲು ದೇವಸ್ಥಾನಗಳು ತಮ್ಮದೇ ಆದ ದರಪಟ್ಟಿಗಳನ್ನು ಪೈಪೋಟಿಯ ಮೇಲೆ ಪ್ರಕಟಿಸಿ ಶುಲ್ಕ ವಿಧಿಸುವ ಒಂದು ಪದ್ಧತಿಗೆ ಮುಂದಾದವು.

ಈ ವಾಣಿಜ್ಯೀಕರಣ ಪ್ರಕ್ರಿಯೆಯಲ್ಲಿ ಕಳೆದುಹೋಗಿರುವುದು ಶ್ರದ್ಧಾಭಕ್ತಿಯ ಸ್ಪರ್ಶ ಮತ್ತು ಮುನ್ನೆಲೆಗೆ ಬಂದಿರುವುದು ಮಾರುಕಟ್ಟೆ ಮನೋಭಾವ. ಈ ಪ್ರಕ್ರಿಯೆಯಲ್ಲೇ ಸುಪ್ರಭಾತ, ಭಜನೆ ಮತ್ತು ಪೂಜಾ ವಿಧಿವಿಧಾನಗಳ ಆಚರಣೆಗಳು ದೇವಸ್ಥಾನಗಳ ಸ್ಥಾನಮಾನ, ಪ್ರತಿಷ್ಠೆ ಮತ್ತು ಶ್ರೀಮಂತಿಕೆಯ ದ್ಯೋತಕಗಳಾಗಿ ಪರಿಣಮಿಸಿದ್ದವು. ಮೈಕಾಸುರನ ಹಾವಳಿ ಆರಂಭವಾಗಿದ್ದು ಈ ಹಂತದಲ್ಲೇ.

ಈ ನಗರೀಕರಣ ಮತ್ತು ಆಧುನಿಕೀಕರಣ ಪ್ರಕ್ರಿಯೆಯಲ್ಲೇ ಮಸೀದಿಗಳೂ ಹೆಚ್ಚಾಗಿರುವುದನ್ನು ಗಮನಿಸಬೇಕು. ಮಸೀದಿಗಳ ನಿರ್ಮಾಣವೂ ಆಧುನಿಕತೆ ಮತ್ತು ಮಾರುಕಟ್ಟೆ ಸ್ಪರ್ಶದೊಂದಿಗೆ ಭವ್ಯತೆ ಮತ್ತು ಶೀಮಂತಿಕೆಯನ್ನು ಪ್ರದರ್ಶಿಸುವ ತಾಣಗಳಾಗಿದ್ದು ವಾಸ್ತವ. ಹಲವು ಪಂಗಡಗಳನ್ನು ಹೊಂದಿರುವ ಇಸ್ಲಾಂ ಅನುಯಾಯಿಗಳಿಗೆ ತಮ್ಮದೇ ಆದ ಮಸೀದಿಗಳನ್ನು ಹೊಂದುವ ಹಂಬಲವೂ ಹೆಚ್ಚಾಗತೊಡಗಿತ್ತು. ಹಾಗಾಗಿಯೇ ದೇವಸ್ಥಾನಗಳು ಹೆಚ್ಚಾದಂತೆಯೇ ಮಸೀದಿಗಳೂ ಹೆಚ್ಚಾದವು.

ಮಿನಾರುಗಳ ಎತ್ತರ ಮತ್ತು ಕಟ್ಟಡದ ವಿನ್ಯಾಸ, ಅಲಂಕಾರಿಕವಾದ ಶೈಲಿ ಮತ್ತು ಅತ್ಯಾಧುನಿಕತೆಯನ್ನು ಬಿಂಬಿಸುವಂತಹ ಸೌಲಭ್ಯಗಳೊಂದಿಗೆ ಮಸೀದಿಗಳು ಸಾಮಾನ್ಯ ಜನತೆಯ ದೃಷ್ಟಿಯಲ್ಲಿ ಸಾಮುದಾಯಿಕ ಉನ್ನತಿಯ ಪ್ರತೀಕಗಳಾದವು. ಹಾಗೆಯೇ ಅಜಾನ್‌ ಕೂಗಲು ಬಳಸುವ ಮೈಕಾಸುರರೂ ಶ್ರೇಣೀಕರಣಕ್ಕೊಳಗಾದರು. ಹೆಚ್ಚು ಜನರನ್ನು ತಲುಪಲು ಮೈಕಾಸುರನಿಗೆ ಏರಿದ ಧ್ವನಿ ಅಗತ್ಯವಾಗುತ್ತದೆ.

ಮಿನಾರುಗಳ ಸುತ್ತ ಕಟ್ಟಿರುವ ಲೌಡ್‌ ಸ್ಪೀಕರುಗಳ ಸಂಖ್ಯೆ ಹೆಚ್ಚಾದಂತೆಲ್ಲಾ ದಶದಿಕ್ಕುಗಳಿಗೂ ಅಜಾನ್‌ ಕೇಳಿಸುತ್ತದೆ. ಈ ಪರಿಕಲ್ಪನೆಯಲ್ಲೇ ಮಸೀದಿಗಳ ಅಜಾನ್‌ ಒಂದು ಹಂತದಲ್ಲಿ ಸಾರ್ವಜನಿಕ ಪರಿಸರಲ್ಲಿ ಶಬ್ದ ಮಾಲಿನ್ಯ ಉಂಟುಮಾಡುವ ಮಟ್ಟಕ್ಕೆ ಬೆಳೆದಿತ್ತು. ದೇವಸ್ಥಾನಗಳು ಭಕ್ತಾದಿಗಳನ್ನು ಆಕರ್ಷಿಸಲು ಮೈಕಾಸುರನ ಮೊರೆ ಹೋದಂತೆಯೇ ಮಸೀದಿಗಳು ಪ್ರಾರ್ಥನೆಗೆ ಆಹ್ವಾನಿಸಲು ಮೊರೆ ಹೋದವು.

ಈ ಎರಡೂ ಪ್ರಕ್ರಿಯೆಗಳು ಹಿಂದೆಯೂ ಇದ್ದವು. ಇಂದಿಗೂ ಇದೆ. ವ್ಯತ್ಯಾಸವೆಂದರೆ ವಾಣಿಜ್ಯೀಕರಣಗೊಂಡ ಸನ್ನಿವೇಶದಲ್ಲಿ ಸ್ಪರ್ಧಾತ್ಮಕತೆಯೂ ಹೆಚ್ಚಾಗಿದೆ. ಇಂದು ಮಾರುಕಟ್ಟೆಗೂ ಪೂಜಾಸ್ಥಳಗಳಿಗೂ ನೇರವಾದ ಸಂಬಂಧವಿದೆ. ಮಸೀದಿ, ದೇವಾಲಯ ಮತ್ತು ಚರ್ಚುಗಳ ಮುಂದೆ ಇರುವ ವ್ಯಾಪಾರ ಮಳಿಗೆಗಳು, ತಿಂಡಿ ತಿನಿಸುಗಳ ಅಂಗಡಿಗಳು ಈ ಮಾರುಕಟ್ಟೆಯನ್ನು ಬೆಳೆಸುವ ಕೇಂದ್ರಗಳಾಗಿರುತ್ತವೆ. ಭಕ್ತಾದಿಗಳು ಮುಖ್ಯ ಗ್ರಾಹಕರಾಗಿರುತ್ತಾರೆ. ಹಾಗಾಗಿಯೇ ಇಂದು ಯಾವುದೇ ಪೂಜಾ ಸ್ಥಳಗಳಲ್ಲೂ ಪ್ರಶಾಂತ ವಾತಾವರಣ ಇರುವುದಿಲ್ಲ. ಧಾರ್ಮಿಕ ಕೇಂದ್ರಗಳು ಅತಿ ಹೆಚ್ಚು ಜನಸಾಂದ್ರತೆ ಇರುವ ಪ್ರದೇಶಗಳಾಗಿ ಪರಿವರ್ತನೆಯಾಗುವುದನ್ನು ಬಂಡವಾಳಶಾಹಿ ಮಾರುಕಟ್ಟೆ ವ್ಯವಸ್ಥೆ ಅಪೇಕ್ಷಿಸುತ್ತದೆ.

ರಂಜಾನ್‌ ಸಂದರ್ಭದಲ್ಲಿ ಸಂಜೆಯ ಪ್ರಾರ್ಥನೆಯ ನಂತರ ಮನೆಗೆ ಹೋಗಿ ಆಹಾರ ಸೇವಿಸುತ್ತಿದ್ದ ಕಾಲ ಎಂದೋ ಸಂದುಹೋಗಿದೆ. ಇಂದು ಮಸೀದಿಗಳ ಸುತ್ತ ತಿಂಡಿ ತಿನಿಸುಗಳ ನೂರಾರು ಅಂಗಡಿಗಳು ತೆರೆದಿರುತ್ತವೆ. ಮಾರುಕಟ್ಟೆ ಮತ್ತು ಧಾರ್ಮಿಕ ಆಚರಣೆಗಳ ಈ ಸಂಬಂಧವೇ ಮಸೀದಿ, ದೇವಾಲಯಗಳನ್ನು ಪೋಷಿಸುವ ಮೂಲ ಶಕ್ತಿಯೂ ಆಗಿರುತ್ತದೆ. ಹಿಂದೂ ದೇವಾಲಯಗಳಲ್ಲಿ ಪೂಜಾ ವಿಧಾನಗಳು ಹೆಚ್ಚಾದಂತೆಲ್ಲಾ ಪೂಜಾ ಸಾಮಗ್ರಿಗಳ ಮಾರುಕಟ್ಟೆಯೂ ವಿಸ್ತರಿಸುತ್ತದೆ. ಮಾರುಕಟ್ಟೆ ತನ್ನ ವಿಸ್ತರಣೆಗಾಗಿ ಸಮಾಜದ ಎಲ್ಲ ವಲಯಗಳನ್ನೂ ಸಮರ್ಪಕವಾಗಿ ಬಳಸಿಕೊಳ್ಳುತ್ತದೆ. ಇದಕ್ಕೆ ದೈವ ಸನ್ನಿಧಿಗಳೂ ಅಪವಾದವೇನಲ್ಲ.

ಮತಾಚರಣೆ ಮತ್ತು ಧಾರ್ಮಿಕ ಆಚರಣೆಗಳು ವಾಣಿಜ್ಯೀಕರಣಕ್ಕೊಳಗಾಗಿರುವ ಈ ಸಂದರ್ಭದಲ್ಲೇ ಅಜಾನ್‌ ಎನ್ನುವ ಒಂದು ಸರಳ ಆಚರಣೆಯೂ ವಿವಾದಕ್ಕೊಳಗಾಗಿದೆ. ಅಜಾನ್‌ ವೇಳೆ ಮೈಕಾಸುರನ ದನಿ ತಗ್ಗಿಸಿ ಶಬ್ದ ಸ್ವಾಸ್ಥ್ಯವನ್ನು ಕಾಪಾಡಲು ಸುಪ್ರೀಂಕೋರ್ಟ್‌ ಮಧ್ಯಪ್ರವೇಶಿಸಬೇಕಿರಲಿಲ್ಲ. ಸಮುದಾಯದ ನೇತಾರರು, ಧಾರ್ಮಿಕ ನಾಯಕರೇ ಈ ನಿಟ್ಟಿನಲ್ಲಿ ಯೋಚಿಸಬಹುದಿತ್ತು. ಅಜಾನ್‌ನಿಂದ ಶಬ್ದಮಾಲಿನ್ಯ ಉಂಟಾಗುತ್ತದೆ ಎನ್ನುವುದಕ್ಕಿಂತಲೂ ಈ ಶಬ್ದವನ್ನು ಸಹಿಸಿಕೊಳ್ಳುವ ವ್ಯವಧಾನ ನಮ್ಮಲ್ಲಿ ಕಡಿಮೆಯಾಗಿದೆ ಎನ್ನುವುದು ಹೆಚ್ಚು ಸೂಕ್ತ.

ಇದನ್ನು ವಿರೋಧಿಸಲು ಕೆಲವು ಹಿಂದೂ ಪರ ಸಂಘಟನೆಗಳು ಆಯ್ದುಕೊಂಡ ಮಾರ್ಗ ಮುಂಜಾವಿನ ವೇಳೆ ಅಬ್ಬರದ ಭಜನೆ, ಸುಪ್ರಭಾತ ಹಾಡುವುದು. ಭಜನೆ ಮತ್ತು ಸುಪ್ರಭಾತ ಈ ಎರಡೂ ಪ್ರಕಾರಗಳು ಆಸ್ತಿಕರಿಗೆ ಸಮಾಧಾನ ತರುವ ಪ್ರಕಾರಗಳಾದರೆ, ದಣಿದ ಮನಸುಗಳಿಗೆ ಸಾಂತ್ವನ ತರುವ ಸಾಧನಗಳು. ಈ ಸಾಂತ್ವನದ ಸಾಧನಗಳನ್ನು, ನೆಲೆಗಳನ್ನು ಪ್ರತಿರೋಧದ ನೆಲೆಗಳನ್ನಾಗಿ ಬಳಸಿ, ದ್ವೇಷಾಸೂಯೆಯ ಅಸ್ತ್ರಗಳನ್ನಾಗಿ ಬಳಸುವ ಅವಶ್ಯಕತೆ ಇಲ್ಲ.

ತಮ್ಮ ಬದುಕು ಕಟ್ಟಿಕೊಳ್ಳುವ ಹಾದಿಯಲ್ಲಿ ಜನರು ಅನ್ಯರ ಗೊಡವೆಗೆ ಹೋಗದೆ, ತಮ್ಮದೇ ಆದ ಸಾಂತ್ವನದ ಮಾರ್ಗಗಳನ್ನು ಕಂಡುಕೊಳ್ಳಲು ಭಜನೆ, ಪ್ರಾರ್ಥನೆ, ಸುಪ್ರಭಾತ, ಪೂಜೆ ಮತ್ತು ದೇವಸ್ಥಾನಗಳು ನೆರವಾಗುತ್ತವೆ. ದುಡಿಮೆಯ ಜೀವಗಳಿಗೆ, ದಣಿದ ಜೀವಗಳಿಗೆ ಮತ್ತು ಜೀವನದ ಜಂಜಾಟದಿಂದ ನೊಂದವರಿಗೆ ಇಂದಿಗೂ ಈ ಸಾಂತ್ವನದ ನೆಲೆಗಳು ಅತ್ಯಗತ್ಯವಾಗಿದೆ. ವೈಚಾರಿಕ ನೆಲೆಯಲ್ಲಿ, ವೈಜ್ಞಾನಿಕ ಮನೋಭಾವದೊಂದಿಗೆ ಇದನ್ನು ವಿಮರ್ಶಾತ್ಮಕವಾಗಿ ನೋಡಿದರೂ, ವರ್ತಮಾನದ ನಿತ್ಯ ಬದುಕಿನಲ್ಲಿ ಈ ನೆಲೆಗಳು ಸಾಮಾನ್ಯ ಜನತೆಯ ಬದುಕಿನ ಒಂದು ಭಾಗವಾಗಿಯೇ ಕಾಣುತ್ತವೆ.

ಮುಸ್ಲಿಮರ ನಮಾಜು, ಕ್ರೈಸ್ತರ ಪ್ರಾರ್ಥನೆ ಮತ್ತು ಹಿಂದೂಗಳ ಭಜನೆ-ಪ್ರಾರ್ಥನೆ-ಪೂಜೆ ಇತ್ಯಾದಿಗಳು ವೈಚಾರಿಕತೆ ಮತ್ತು ವೈಜ್ಞಾನಿಕ ಮನೋಭಾವದ ಸಮಾಜ ನಿರ್ಮಾಣಕ್ಕೆ ಅಡ್ಡಿಯಾಗಬಹುದಾದರೂ, ಎಂದಿಗೂ ಸಮಾಜ ಕಂಟಕವಾಗುವುದಿಲ್ಲ. ವ್ಯಕ್ತಿಗತ ನೆಲೆಯಲ್ಲಿ, ಕೌಟುಂಬಿಕ ಚೌಕಟ್ಟುಗಳಲ್ಲಿ ಈ ಆಚರಣೆಗಳು ನಿರುಪದ್ರವಿಯಾಗಿ, ಸಾಮಾನ್ಯ ಜನರ ಆತಂಕ, ದುಗುಡ, ತುಮುಲ ಮತ್ತು ಬೇಗುದಿಗಳಿಗೆ ಯಾವುದೋ ಒಂದು ರೀತಿಯಲ್ಲಿ ಸಾಂತ್ವನ ಒದಗಿಸುತ್ತವೆ.

ಬಡತನ, ಹಸಿವು, ಸಾಮಾಜಿಕ ಅನ್ಯಾಯ ಮತ್ತು ತಾರತಮ್ಯಗಳಿಂದ ಹೊರತಾದ ಸಮಾಜಗಳು ಮಾತ್ರವೇ ಇದರಿಂದಾಚೆಗೆ, ವೈಚಾರಿಕ ನೆಲೆಯಲ್ಲಿ ಯೋಚಿಸಲು ಸಾಧ್ಯ. ಆದರೆ ಈ ಆಚರಣೆಗಳನ್ನು, ಕೈಂಕರ್ಯಗಳನ್ನು ಸಾಂಸ್ಥೀಕರಿಸಿದಾಗ, ಮತಾಚರಣೆಯ ಕಟ್ಟುಪಾಡುಗಳಲ್ಲಿ ಬಂಧಿಸಿದಾಗ, ಸಾಂಸ್ಥೀಕರಣಗೊಂಡ ಮತೀಯ ನೆಲೆಗಳನ್ನು ಸಾಮುದಾಯಿಕ ಆಧಿಪತ್ಯದ ನೆಲೆಗಳಂತೆ ಬಳಸಲಾರಂಭಿಸಿದಾಗ, ಇವೆಲ್ಲವೂ ಸಹ ಸಾಂಘಿಕ ಸ್ವರೂಪ ಪಡೆದು ಸಾಮುದಾಯಿಕ ಅಸ್ಮಿತೆಗಳ ರಕ್ಷಣಾ ಕವಚಗಳಾಗಿಬಿಡುತ್ತವೆ.

ಇಸ್ಲಾಂ ಹಾಗೂ ಕ್ರೈಸ್ತ ಮತಗಳು ಈಗಾಗಲೇ ಇಂತಹ ಸಾಂಸ್ಥೀಕರಣ ಪ್ರಕ್ರಿಯೆಗೊಳಗಾಗಿ ಅನೇಕ ದೇಶಗಳಲ್ಲಿ ಆಧಿಪತ್ಯ ರಾಜಕಾರಣದ ಕೈಬಂಧಿಯಾಗಿವೆ. ಹಿಂದುತ್ವ ರಾಜಕಾರಣ ಹಿಂದೂ ಮತವನ್ನು ಸಾಂಸ್ಥೀಕರಿಸಲು ಯತ್ನಿಸುತ್ತಿದೆ. ಈ ಪ್ರಯತ್ನದ ನಡುವೆಯೇ ಸಾಮಾನ್ಯ ಜನತೆಯ ಧಾರ್ಮಿಕ ಬದುಕಿನ ಕೆಲವು ಸಾಂತ್ವನದ ನೆಲೆಗಳನ್ನೂ ಸಹ ಸಾಂಸ್ಥೀಕರಿಸಲು ಪ್ರಯತ್ನಿಸಲಾಗುತ್ತಿದೆ. ಹಿಂದೂ ಸಮಾಜದ ಆಸ್ತಿಕರು ಯೋಚಿಸಬೇಕಾದ ವಿಚಾರ ಇದು.

ಶಬ್ದ ಮಾಲಿನ್ಯಕ್ಕಿಂತಲೂ ನಮ್ಮನ್ನು ಕಾಡಬೇಕಿರುವುದು ನಮ್ಮೊಳಗಿನ ಬೌದ್ಧಿಕ ಮಾಲಿನ್ಯ, ಇದನ್ನು ಸ್ವಚ್ಚಗೊಳಿಸಿದರೆ, ಸ್ವಚ್ಚ ಭಾರತ ಅಭಿಯಾನಕ್ಕೆ ಬೌದ್ಧಿಕ ಸ್ಪರ್ಶವೂ ದೊರೆತೀತು. ಎಲ್ಲ ಜಾತಿ-ಮತ-ಧರ್ಮದ ವಾರಸುದಾರರು ಈ ನಿಟ್ಟಿನಲ್ಲಿ ಯೋಚಿಸುವಂತಾದರೆ ?

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಬಹಿರಂಗ

ಡಾಕಿನಿ ಎಂದರೆ ಬೌದ್ಧ ಭಿಕ್ಕುಣಿ / ಬೌದ್ಧ ಯೋಗಿಣಿ

Published

on

  • ಪರಶುರಾಮ್. ಎ

ಭಾರತದ ಬಹುಭಾಗ ಇತಿಹಾಸ, ಇತಿಹಾಸವೇ ಅಲ್ಲ. ಹಾಗೆಂದರೆ ಭಾರತಕ್ಕೆ ಇತಿಹಾಸವಿಲ್ಲ ಎಂದಲ್ಲ. ಭಾರತದ ಪ್ರಾಚೀನ ಇತಿಹಾಸವನ್ನು ಬೇಕೆಂದೆ ಮನುವಾದಿಗಳು ತಿರುಚಿದ್ದಾರೆ. ಬುದ್ಧ ಮತ್ತು ಆರ್ಯರ ನಡುವೆ ನಡೆದ ಈ ಇತಿಹಾಸವನ್ನು ಬೇಕೆಂದೆ ಮರೆಮಾಚಿದ್ದಾರೆ. ಹಾಗೂ ಮಕ್ಕಳಿಗೆ ಮಹಿಳೆಯರಿಗೆ ಮನೋರಂಜನಾ ಕಥೆಗಳನ್ನಾಗಿ ಮಾಡಿದ್ದಾರೆ ಎಂದು ಡಾ.ಬಿ.ಆರ್ ಅಂಬೇಡ್ಕರರು ಹೇಳಿರುವುದು ಎಷ್ಟು ಸತ್ಯವೆಂಬುದನ್ನು ನಾವು ಈಗ ಗಮನಿಸೋಣ.

ಈ ಮಾತಿನಿಂದ ನಮಗೆ ತಿಳಿಯುವುದೇನೆಂದರೆ ಒಂದು ಕಾಲದಲ್ಲಿ ಪ್ರಚಲಿತವಿದ್ದ ಬುದ್ಧ ಧರ್ಮವನ್ನು ಇತಿಹಾಸಕಾರರು ಬೇಕೆಂದೆ ನಿರ್ಲಕ್ಷಿಸಿದ್ದಾರೆ. ಮತ್ತು ತಿರಸ್ಕರಿಸಿದ್ದಾರೆ. ಇಂತಹ ಅದೆಷ್ಟೋ ನಿರ್ಲಕ್ಷಿತಗೊಂಡ ಬೌದ್ಧ ಇತಿಹಾಸವನ್ನು ಡಾ.ಬಿ.ಅಂಬೇಡ್ಕರರು ತಮ್ಮ ಅಪೂರ್ವ ಜ್ಞಾನ ಸಂಪತ್ತಿನಿಂದಾಗಿ ಬಯಲಿಗೆ ಎಳೆದಿದ್ದಾರೆ. ಅವರ ಪುಸ್ತಕ ಓದಿನ ದಾಹ ಇಂತಹ ಅಪೂರ್ವ ಇತಿಹಾಸದ ಮೇಲೆ ಬೆಳಕು ಚೆಲ್ಲಿದೆ. ಹಾಗೂ ಇತ್ತೀಚಿನ ಕೆಲವು ಸಂಶೋಧಕರು ಕೂಡಾ ಬೌದ್ಧ ಧರ್ಮಾವಲಂಬಿಗಳ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಸಿ ಬೆಳಕು ಚೆಲ್ಲಿದ್ದಾರೆ.

ಭಾರತದಲ್ಲಿ ಹುಟ್ಟಿದ ಬುದ್ಧ ಧರ್ಮವನ್ನು ಮತ್ತು ಅದರ ಅನುಯಾಯಿಗಳನ್ನು ವಿದೇಶಿ ಬ್ರಾಹ್ಮಣ ಆರ್ಯರು ಬೇಕುಂತಲೇ ತುಚ್ಛೀಕರಿಸಿ, ದುಷ್ಟೀಕರಿಸಿ, ಭಯ ಮತ್ತು ಕ್ಷುದ್ರರೆಂಬಂತೆ ಬಿಂಬಿಸಿದ್ದಾರೆ. “ಭಾರತದ ದಾರ್ಶನಿಕ ಚರ್ಚೆಗಳಲ್ಲಿ ದರ್ಶನವು ಇನ್ನೊಂದರ ಬಗ್ಗೆ ತಾತ್ವಿಕ ಭಿನ್ನಮತಗಳು ಸೂಚಿಸುವುದು ಸಾಮಾನ್ಯ. ಈ ಭಿನ್ನಮತಗಳು ಕೆಲವೊಮ್ಮೆ ಯುದ್ಧರೂಪಿಯಾಗಿ ಇರುತ್ತವೆ. ತಾತ್ವಿಕ ಭಿನ್ನಮತವು ತಾನಾಗಿಯೇ 1 ದೊಡ್ಡ ಸಮಸ್ಯೆಯಲ್ಲ. ಆದರೆ ತಾನು ಒಪ್ಪದ ವಿಚಾರಧಾರೆಯಯೂ ಇರಬಾರದು ಎಂಬ ಹಗೆತನದಲ್ಲಿ ಮತ್ತೊಂದನ್ನು ದುಷ್ಟೀಕರಿಸುವುದು ಸಮಸ್ಯೆ.

ಆಧುನಿಕ ರಾಜಕಾರಣದಲ್ಲಿ ಸೈದ್ಧಾಂತಿಕ ಗುಂಪುಗಳು ಹಗೆಗಳಾಗಿ ಕಾದಾಟ ಮಾಡುವಂತೆ ಚರಿತ್ರೆಯಲ್ಲಿ ಪಂಥಗಳು ಪರಸ್ಪರ ಸಂಘರ್ಷ ಮಾಡಿಸಿ ಭಾರತದ “ಅವೈದಿಕ” ಎನ್ನಲಾಗುವ ದಾರ್ಶನಿಕ ಧಾರೆ ಹಾಗೂ ಪಂಥಗಳನ್ನು ಏಕಕಾಲಕ್ಕೆ ವಿಶಾಲ ಸಮುದಾಯಗಳಿಂದ ಸ್ವೀಕಾರವನ್ನು ಸ್ಥಾಪಿತ ವರ್ಗದಿಂದ ವಿರೋಧವನ್ನು ಪಡೆದಿದ್ದವು. ವೈದಿಕ ಪುರಾಣಗಳು ತಮ್ಮ ವಿರೋಧಿಗಳನ್ನು ರಾಕ್ಷಸರನ್ನಾಗಿ ಚಿತ್ರಿಸುವಂತೆ ವೈದಿಕರು ದಾರ್ಶನಿಕರು ಕೂಡಾ “ಅವೈದಿಕ” ಭೌತವಾದಿ ದರ್ಶನ ಹಾಗೂ ಪಂಥಗಳನ್ನು ವಿಕೃತವಾಗಿ ಚಿತ್ರಿಸಲು ಇದನ್ನು ದಾರ್ಶನಿಕ ಅಮಾನುಷೀಕರಣ ಅಥವಾ ದುಷ್ಟೀಕರಣ ಎನ್ನಬಹುದು”. (ಕರ್ನಾಟಕ ನಾಥಪಂಥ- ರಹಮತ್ ತರೀಕೆರೆ. ಪುಟ 7).

ಹೀಗೇ ವಿರೋಧಿಗಳನ್ನು ವಿರೋಧಿಸುವ ಭರದಲ್ಲಿ ಉಪದ್ರವಿಗಳು, ರಾಕ್ಷಸರೆಂಬಂತೆ ಬಿಂಬಿತರಾದವರ ಸಾಲಿನಲ್ಲಿ ಬಹುತೇಕ ಬೌದ್ಧ ಅರಸರು, ಭಿಕ್ಕುಗಳು, ಭಿಕ್ಕುಣಿಗಳನ್ನು ಕಾಣಬಹುದು. ಈ ವೈದಿಕ ಧರ್ಮ ಕೇವಲ ದುಷ್ಟೀಕರಣವನ್ನು ಮಾತ್ರ ಮಾಡಿಲ್ಲ. ತಮ್ಮ ನಿಲುವುಗಳಿಗೆ ಹಿತಾಸಕ್ತಿ ಸ್ಥಾಪನೆಗೆ ಸಹಕರಿಸಿದ ವ್ಯಕ್ತಿಗಳು, ರಾಜರು, ಇತರರನ್ನು ದೈವತ್ವ ಮಟ್ಟಕ್ಕೆ ಸಹ ಏರಿಸಿದೆ. ಅದಕ್ಕೊಂದು ಉದಾಹರಣೆ “ಮಹಿಷಾಸುರ” ಒಂದು ಕಾಲದಲ್ಲಿ ಮಹಿಷನೂರು ಈಗ ಮೈಸೂರು ಆಗಿದೆ. ರಾಜನಾಗಿ ಆಳ್ವಿಕೆ ಮಾಡುತ್ತಿದ್ದ ಮಹಿಷಾಸುರನನ್ನು ವೈದಿಕರು ಉಪದೃವಿ ಕೇಡುಂಟು ಮಾಡುವ ರಾಕ್ಷಸನಂತೆ ಚಿತ್ರಿಸಿದ್ದಾರೆ.

ಮಹಿಷಾಸುರ ರಾಕ್ಷಸನಲ್ಲ ಈ ಭಾಗದ ಜನಪ್ರಿಯ ಜನಾನುರಾಗಿ ರಾಜ ಆತನೊಬ್ಬ ಬೌದ್ಧ ಧರ್ಮ ಪ್ರಚಾರಕನೂ ಕೂಡಾ ಹೌದು. ಮೈಸೂರಿನ ಚಾಮುಂಡಿ ಬೆಟ್ಟದ ಮೇಲೆ ಅತ್ಯಂತ ವಿಶಾಲವಾಗಿ ನಿರ್ಮಿಸಿ ನಿಲ್ಲಿಸಿರುವ ಮಹಿಷಾಸುರನ ಪ್ರತಿಮೆ ಈತನದ್ದೇ ಆಗಿದೆ. ಅವನು ನಿಜವಾಗಿ ದುಷ್ಟನಾಗಿದ್ದರೆ, ಮೈಸೂರಿನಂಥ ಸುಂದರ ನಗರಕ್ಕೆ ಅವನ ಹೆಸರು ಇಡಲು ಸಾಧ್ಯವಾಗುತ್ತಿತ್ತೆ? ಅತ್ಯಂತ ಕ್ರೂರಿಯಾದ ವ್ಯಕ್ತಿಯ ಹೆಸರನ್ನು ನರನಿಗಾಗಲಿ ಸ್ಥಳಕ್ಕಾಗಲಿ ಇಟ್ಟಿರುವ ನಿದರ್ಶನ ಎಲ್ಲಿಯಾದರೂ ಉಂಟೆ? ಬದಲಿಗೆ ಮಹಿಷ ಜನಾನುರಾಗಿ ಆದ್ದರಿಂದ, ಜನೋದ್ದಾರಕ ಕೆಲಸ ಮಾಡಿದ್ದರಿಂದ ಅವನ ಹೆಸರನ್ನು ಮೈಸೂರಿಗೆ ಕೃತಜ್ಞಾಪೂರ್ವಕವಾಗಿ ಇಡಲಾಗಿದೆ.

ಇದು ಎಂಥವರಿಗಾದರೂ ಹೊಳೆಯುವ ಸಾಮಾನ್ಯ ವಿಷಯ.
ಮಹಿಷಾಸುರ ರಾಕ್ಷಸನಲ್ಲ, ಅವನು ಬೌದ್ಧ ಭಿಕ್ಕು. ಅವನ ನಿಜವಾದ ಹೆಸರು ಮಹಾದೇವ. ಸಾಮ್ರಾಟ್ ಅಶೋಕನ ಕಾಲದಲ್ಲಿ, ಬೌದ್ಧ ಗುರು ಮೊಗ್ಗಲಿತಿಸ್ಸನ ಬುದ್ಧಧಮ್ಮ ಪ್ರಚಾರಕ್ಕಾಗಿ ತೇರಾ ಮಹಾದೇವನನ್ನು ಮಹಿಷಮಂಡಲಕ್ಕೂ, ತೇರಾ ರಕ್ಕಿತ ಎಂಬುವವನನ್ನು ಬನವಾಸಿಗೂ ಕಳುಹಿಸಿದ. (ನೋಡಿ; ಸಿದ್ಧಸ್ವಾಮಿಯವರ ಅಪರೂಪ ಮಾಹಿತಿಯುಳ್ಳ ಸಂಶೋಧನಾ ಕೃತಿ – ಪ್ರಾಚೀನ ಅಸುರ ರಾಷ್ಟ್ರ 2016. ಪುಟ. 27ಮತ್ತು 81-116)
ಮಹಿಷನಿಗೆ ಅಸುರ ಎಂಬ ಹೆಸರನ್ನು ಕಿತ್ತುಹಾಕಿ ಮಹಿಷ ಬೌದ್ಧ. ಮಹಿಷ ಗೌತಮ ಅಥವಾ ಭಿಕ್ಕು ಮಹಾದೇವ ಎಂಬ ಹೆಸರನ್ನು ಇಡಬೇಕು. ಅಸುರ ಎಂಬುದು ಆರೋಪಿತ ಹೆಸರು. ಬೈಗುಳ ಅದು – ಹೆಂಡ ಕುಡುಕ ಎಂದು! ಅಸುರ ಎಂದರೆ ಸುರೆಯನ್ನು ಕುಡಿಯದವನು ಎಂದು ಅರ್ಥ.

ಇಲ್ಲಿ ಕುಡಿಯುವವರಿಗೇ ಗೌರವ! ಕುಡಿಯದವರಿಗೆ ಅವಮಾನ! ಎಂಥ ಅದ್ಭುತ ವ್ಯವಸ್ಥೆ ಬ್ರಾಹ್ಮಣ ಧರ್ಮದ್ದು ಭಲೇ! ಜನರ ಏಳಿಗೆಗೆ ಹೋರಾಡಿ ಚಾತುರ್ವರ್ಣ ವ್ಯವಸ್ಥೆಯನ್ನು ಧಿಕ್ಕರಿಸಿದ ಪ್ರಜಾಪ್ರೇಮಿಗಳನ್ನು ರಾಕ್ಷಸರೆಂದು ತೀರಾ ಕ್ರೂರಿಗಳನ್ನಾಗಿ ಪುರಾಣಗಳಲ್ಲಿ ಹಾರುವರು ಚಿತ್ರಿಸಿರುವುದು ಹಾರುವರೆಷ್ಟು ಮಹಾರಕ್ಕಸರೆಂದು ನಿಜಕ್ಕೂ ತಿಳಿಯುತ್ತದೆ.(ಹೆಚ್ಚಿನ ಓದಿಗಾಗಿ ಸಿದ್ಧಸ್ವಾಮಿಯವರ ಬೌದ್ಧ ರಾಜ ಮಹಿಷಾಸುರ ಪುಸ್ತಕ ಓದಿ). ಎಂದು ಕೆ.ಎಸ್ ಭಗವಾನ್‌ರವರು ರಾಮಮಂದಿರ ಏಕೆಬೇಡ? ಎಂಬ ತಮ್ಮ ಪುಸ್ತಕದಲ್ಲಿ ಪ್ರಶ್ನಿಸಿದ್ದಾರೆ. ಅಲ್ಲದೆ ಜಮ್ನಾದಾಸ್ ಎಂಬುವವರು ತಿರುಪತಿಯ ವೆಂಕಟೇಶ್ವರ ಒಂದು ಬೌದ್ಧ ದೇವಾಲಯವೆಂದು ಸಂಶೋಧನಾ ಪುಸ್ತಕವನ್ನೇ ರಚಿಸಿದ್ದಾರೆ. ಇದು ಕನ್ನಡಕ್ಕೇ ಸಹ ಅನುವಾದಗೊಂಡಿದೆ.

ಇದೇ ರೀತಿಯಲ್ಲಿ ಇಲ್ಲಿನ ಸ್ಥಳೀಯ ದೇವತೆಗಳ ಹೆಸರುಗಳನ್ನು ಸಹ ಒಂದು ಕಾಲದಲ್ಲಿ ತಮ್ಮ ಮಕ್ಕಳಿಗೆ ಇಡುವ ಪದ್ಧತಿಯಿತ್ತು. ಆದರೆ ಅವುಗಳನ್ನು ಮನುಸ್ಮೃತಿಯಲ್ಲಿ ಭೀಕರ ಅಪಾಯವುಂಟುಮಾಡುವ ಕೆಡುಕನ್ನು ತರುವ ಹೆಸರುಗಳೆಂದು ಪಟ್ಟಿ ಮಾಡಿ ಅಂತಹ ಹೆಸರುಗಳನ್ನು ದುಷ್ಟರು ಎಂಬಂತೆ ಬಿಂಬಿಸ ತೊಡಗಿದರು. ಅಲ್ಲದೇ ಭೀಷಣವಾದ ಹೆಸರುಳ್ಳ ಹೆಣ್ಣುಗಳನ್ನು ಮದುವೆಯಾಗಬಾರದು ಎಂದಿದೆ ಮನುಸ್ಮೃತಿ.

ಮನುಸ್ಮೃತಿಯ 3ನೇ ಅಧ್ಯಾಯದ 9ನೇ ಸೂತ್ರವು ‘ನಕ್ಷತ್ರಗಳ, ವೃಕ್ಷಗಳ, ನದಿಗಳ, ಕಿರಾತ ಜಾತಿಗಳು ವಾಸಿಸುವ ಬೆಟ್ಟಗಳ, ಪಕ್ಷಿಗಳ, ಹಾವುಗಳ, ದಸ್ಯುಗಳ ಹೆಸರುಗಳನ್ನು ಹೊಂದಿದ ಹಾಗೂ ಕ್ರೂರವಾದ ಭೀಷಣ ಹೆಸರುಗಳುಳ್ಳ ಹೆಣ್ಣನ್ನು ಮದುವೆಯಾಗಬಾರದು’ ಎಂದಿದೆ. ಅಂದರೆ ಮನುಸ್ಮೃತಿಯ ಕಾಲದಲ್ಲಿ ಹಾಗೂ ಅದಕ್ಕೂ ಮೊದಲು ವಿವಿಧ ಬೌದ್ಧ ಭಿಕ್ಕುಗಳ-ಭಿಕ್ಕುಣಿಯರ, ನದಿ, ಪರ್ವತ, ಪಕ್ಷಿಗಳ ದೇವತೆಗಳ ಅಥವಾ ಕ್ಷುದ್ರ ರೆಂದು ವೈದಿಕರು ಬಗೆದ ವ್ಯಕ್ತಿಗಳ ಹೆಸರನ್ನು ಇಡುವ ಸಂಪ್ರದಾಯವೊಂದಿತ್ತು ಎಂಬುದು ಗಮನಿಸಬೇಕಾದ ವಿಚಾರವಾಗಿದೆ.

ಬುದ್ಧನ ಕಾಲದಲ್ಲಿ ಬೌದ್ಧ ಸಂನ್ಯಾಸಿ, ಭಿಕ್ಕು -ಭಿಕ್ಕುಣಿಯಾಗಿದ್ದವರನ್ನು ಮುಂದೆ ಅವರನ್ನು ರಾಕ್ಷಸ- ರಾಕ್ಷಸಿ ಉಪದ್ರವಿಗಳೆಂಬಂತೆ ಬಿಂಬಿತರಾದವರಲ್ಲಿ ‘ಡಾಕಿನಿ’ ಎಂಬ ಬೌದ್ಧ ಭಿಕ್ಕುಣಿಯು ಸಹ ಒಬ್ಬಳು. 2020ರ ಅಕ್ಟೋಬರ್ ಸಂವಾದ ಮಾಸಪತ್ರಿಕೆಯಲ್ಲಿ ಪ್ರೊ. ಶಿವಗಂಗಾ ರುಮ್ಮಾ ಎಂಬುವವರು “ಡಾಕಿಣಿ ಬೌದ್ಧ ಯೋಗಿಣಿ” ಎಂಬ ಸಂಶೋಧನಾ ಪ್ರಬಂಧ ಮಂಡಿಸಿದ್ದಾರೆ. ಈ ಪ್ರಬಂಧದ ಉದ್ದಕ್ಕೂ ‘ಡಾಕಿನಿ’ ಎಂಬ ಬೌದ್ಧ ಬಿಕ್ಕುಣಿ ಹೇಗೆ ಪಿಶಾಚಿ, ರಾಕ್ಷಸಿ ರೂಪ ಪಡೆದು ನಂತರದ ಕಾಲದಲ್ಲಿ ಉಪದ್ರವಿ ಎಂಬಂತೆ ಚಿತ್ರಿತವಾದಳು ಎಂದು ನಿರೂಪಿಸಲಾಗಿದೆ.

ಕನ್ನಡ ಸಾಹಿತ್ಯ ಪರಿಷತ್ ನಿಘಂಟು ಡಾಕಿನಿಯು ಹೆಣ್ಣು ದೆವ್ವಗಳಲ್ಲಿ ಒಂದು ಬಗೆಯ ಹೆಣ್ಣು ಪಿಶಾಚಿ ಎಂದು ಹೇಳುತ್ತದೆ. ಡಾಕಿನಿ ಎಂದರೆ ರಕ್ಕಸಿಯ ಖಡ್ಗ ಕಾಳಿ ದೇವಿಯ ಪರಿಚಾರಿಕೆಯರ ಒಂದು ವರ್ಗಕ್ಕೆ ಸೇರಿದವಳೆಂದೆ ಹೇಳುತ್ತದೆ. ಸುರಂಗ ಕವಿಯ ವೀರಭದ್ರ ಲೀಲಾರತ್ನ ಕೃತಿಯಲ್ಲಿ ಡಾಕಿನಿಯ ಉಲ್ಲೇಖ ಹೀಗೆ ಇದೆ;
ಅಗ್ಗದ ಯೋಗಿಣಿ ಚಂಡಿ ಭೈರವಿ
ಕಾಳಿ ದುರ್ಗಿ ಡಾಕಿನಿ ಪ್ರೇತಶ್ವಿನಿಯು
ಉಗ್ರದ ಹ್ರೂಂಕಾರಿ ಮಹಾಭೂತವೇತಾಳರೊಗ್ಗಿದಲುಋಬಿ ಕಾಳಗಕೆ” ಸುಮಾರು 16ನೇಯ ಶತಮಾನಕ್ಕಾಗಲೇ ಈ ಎಲ್ಲಾ ಹೆಣ್ಣು ದೈವಗಳು ಕೀಳು ದೈವಗಳಾಗಿ ಪರಿವರ್ತಿತವಾದವು.

ಡಾಕಿನಿ ಕೂಡಾ ಇಲ್ಲಿ ಅಗ್ಗದ ಮತ್ತು ಉಗ್ರ ಕೀಳು ದೈವಗಳಾಗಿದ್ದಾಳೆ. ಲಕ್ಷ್ಮೀಶನ ಜೈಮಿನಿ ಭಾರತದಲ್ಲಿ ಕೂಡಾ ಸುಧನ್ವ ಹಾಗೂ ಅರ್ಜುನನ ನಡುವೆ ನಡೆದ ಕಾಳಗದಲ್ಲಿ ರಣರಂಗದಲ್ಲಿ ಭೀಕರ ದೃಶ್ಯವನ್ನು ಲಕ್ಷ್ಮೀಶನಹೀಗೆ ಚಿತ್ರಿಸುತ್ತಾನೆ.
ಕಾಕ ಬಕ ಗೋಮಯ ಸಂತತಿಗಳಿಂ
ಡಾಕಿನಿ ಪಿಶಾಚಿ ವೇತಾಳ ಭೂತಂಗಳಿಂ ಭೀಕರದೊಳಂ ಜನಿಸಿದುವಾರ್ದು ರಿಂಗಣಗುಣಿವ ಕಲಿಗಳ ಕಪಾಲಂಗಳು” ಹೀಗೆ ಡಾಕಿನಿಯು ಇಲ್ಲಿಯೂ ಕೂಡಾ ಕ್ಷುದ್ರ ದೇವತೆಯಾಗಿ ಭೀಭತ್ಸ ರೂಪದಲ್ಲಿ ಚಿತ್ರಿತಗೊಂಡಿದ್ದಾಳೆ.

ಮರಾಠಿಯಲ್ಲಿ ಡಾಕಿನಿಗೆ ಡಂಕಿಣಿ ಎನ್ನುತ್ತಾರೆ. ಡಾಳಕಿ ಎಂಬ ಇನ್ನೊಂದು ಪದವು ಕೂಡಾ ಡಾಕಿನಿಯಿಂದಲೇ ಬಂದಿದೆ. ಡಾಳಕಿ ಎಂದರೆ ಗಯ್ಯಾಳಿ, ಮೋಸಗಾತಿ, ಎಂಬ ಅರ್ಥಗಳಿವೆ. ‘ಸಗ್ಗಂಬಡೆದು ಬಂದ ಪ್ರತ್ಯಕ್ಷಮಿಲ್ಲೆನಬಹುದು ಈ ಡಾಳಕಿ’. ಇಲ್ಲಿ ಮೋಸಗಾತಿ ಎಂಬ ಅರ್ಥವೇ ಇದೆ. ಹೀಗೆ ಡಾಕಿನಿ ಪದವು ಕೀಳು, ಕ್ಷುದ್ರ, ಉಗ್ರ, ರುದ್ರ, ಋಣಾತ್ಮಕ ವ್ಯಕ್ತಿತ್ವವಾಗಿಯೇ ಕನ್ನಡ ಸಾಹಿತ್ಯದಲ್ಲಿ ಚಿತ್ರಿತಗೊಂಡಿದೆ.

ಇನ್ನೂ ವಿಚಿತ್ರವೆಂದರೆ ಗ್ರಾಮದೇವತೆಯ ಮೇಲೆ ವಿಶೇಷ ಅಧ್ಯಯನವನ್ನು ನಡೆಸಿದ ಸಿದ್ಧಲಿಂಗಯ್ಯನವರ “ಗ್ರಾಮದೇವತೆಗಳು” ಪುಸ್ತಕವು ಈ ನೆಲದ ಎಲ್ಲಾ ತಳಸಮುದಾಯದ ದೇವತೆಗಳನ್ನು ಕುರಿತು ಹೇಳುತ್ತವೆಯಾದರೂ ಅಲ್ಲೆಲ್ಲಿಯೂ ಈ ಡಾಕಿನಿಯೆಂಬ ದೇವತೆಯ ಅಸ್ತಿತ್ವವಿಲ್ಲವೆಂದೇ ಹೇಳಬೇಕಾಗುತ್ತದೆ. ಅಷ್ಟೇ ಅಲ್ಲ ಕರ್ನಾಟಕ ಜನಪದ ಸ್ತ್ರೀ ದೈವಗಳೂ ಸಾಂಸ್ಕೃತಿಕ ಪದಕೋಶದಲ್ಲಿಯೂ ಈ ಡಾಕಿನಿಯ ಪ್ರಸ್ತಾಪವಿಲ್ಲ.

ಇಷ್ಟೆಲ್ಲಾ ಹೇಳುವ ಕಾರಣವೇನೆಂದರೆ ಒಂದು ಕಾಲದಲ್ಲಿ ಬೌದ್ಧ ಯೋಗಿನಿಯಾಗಿ ಪೂಜೆಗೊಂಡ ಡಾಕಿನಿಯು ನಂತರದ ಕಾಲಘಟ್ಟದಲ್ಲಿ ಇಂತಹ ಕ್ಷುದ್ರ ದೇವತೆಯಾಗಿ ಅವಗಣನೆಗೆ ಅಪಹಾಸ್ಯಕ್ಕೆ ಒಳಗಾದಳು. ಎಂಬುದು ತುಂಬಾ ಕುತೂಹಲಕರವಾದ ಸಂಗತಿಯಾಗಿದೆ. ವೈದಿಕರು ಬೌದ್ಧ ವ್ಯಕ್ತಿಗಳನ್ನು ಇತಿಹಾಸದಲ್ಲಿ ಚಿತ್ರಿಸುವಾಗ ಚಾರಿತ್ರಿಕ ಹಂತಗಳಲ್ಲಿ ತಮ್ಮ ಕೈಚಳಕ ತೋರಿಸಿದ್ದಾರೆ ಎನ್ನಲು ಇದಕ್ಕಿಂತ ಸಾಕ್ಷಿ ಬೇಕೆ?!

ಈ ಮೇಲಿನದು ಒಂದು ಸಾಕ್ಷಿಯಾದರೆ25 ನೇ ಡಿಸೆಂಬರ್ 1954ರಲ್ಲಿ ಪೂನಾದ ಹತ್ತಿರ ದೇಹು ರಸ್ತೆಯಲ್ಲಿ ಹೊಸದಾಗಿ ನಿರ್ಮಿಸಿದ ಬುದ್ಧ ವಿಹಾರದಲ್ಲಿ ಸ್ಥಾಪಿಸಿರುವ ಒಂದು ಬುದ್ಧ ಪ್ರತಿಮೆಯನ್ನು ಅನಾವರಣಗೊಳಿಸುತ್ತಾ ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರರು ಅಲ್ಲಿದ್ದ ಸಭಿಕರಿಗೆ, “ಪಂಡರಾಪುರದಲ್ಲಿರುವ ವಿಠೋಬಾ ನಿಜಕ್ಕೂ ಬುದ್ಧನ ವಿಗ್ರಹವೇ ಆಗಿದೆ. ಪಾಂಡುರಂಗ ಎಂಬ ಹೆಸರು ಪುಂಡಲೀಕ ಶಬ್ದದ ನಿಷ್ಪತ್ತಿಯಾಗಿದೆ ಎನ್ನುತ್ತಾ.

ಪುಂಡಲೀಕ ಅಂದರೆ ಕಮಲ ಮತ್ತು ಪಾಳಿ ಭಾಷೆಯಲ್ಲಿ ಕಮಲವನ್ನು ಪಾಂಡುರಂಗ ಎನ್ನುತ್ತಾರೆ ಆದ್ದರಿಂದ ಪಾಂಡುರಂಗ ಎಂದರೆ ಬುದ್ಧನಲ್ಲದೇ ಬೇರೆ ಯಾರೂ ಅಲ್ಲ. ಬುದ್ಧನೇ ಆಗಿದ್ದಾನೆ. ಪಂಡರಾಪುರದ ಪಂಢರಿನಾಥನ ಬಗ್ಗೆ ಸಂಶೋಧನೆ ನಡೆದಿದೆ. ಪಂಡರಿನಾಥ ದೇವಾಲಯ ಬುದ್ಧನ ದೇವಾಲಯವೆಂದು ನಾನು ಸಿದ್ಧ ಮಾಡಿಕೊಡುವೆ ಎಂದರು.

ಪುಂಡಲೀಕ ಶಬ್ದವೇ ಪಾಂಡುರಂಗವೆಂದು ಪರಿವರ್ತಿತ ಹೊಂದಿದೆ. ಪುಂಡಲೀಕ ಎಂದರೆ ಕಮಲ. ಬುದ್ಧರಲ್ಲಿ ಮೂರ್ತಿ ಪೂಜೆ ಇಲ್ಲ. ಪಾಲಿ ಭಾಷೆಯಲ್ಲಿ ಕಮಲಕ್ಕೆ ಪಾಂಡುರಂಗವೆಂದು ಹೇಳುತ್ತಾರೆ. ಜನರಿಗೆ ಮೋಸ ಮಾಡಲು ಬುದ್ಧನ ಹೆಸರು ತಪ್ಪಿಸಲಾಯಿತು”. ಎಂದು ತಮ್ಮ ಭಾಷಣದಲ್ಲಿ ತಿಳಿಸಿದ್ದಾರೆ.

ಬಹುಶಃ ಡಾ.ಅಂಬೇಡ್ಕರರು ಆರೋಗ್ಯ ಸರಿಯಿದ್ದು ಇನ್ನಷ್ಟು ವರ್ಷಗಳು ಕಾಲ ಜೀವಿಸಿದ್ದರೆ ಈ ದೇಶದಲ್ಲಿನ ದೇವಾಲಯದಲ್ಲಿರುವ ಬೌದ್ಧ ಇತಿಹಾಸವನ್ನು ಹಾಗೂ ದೇವರೆಂದು, ರಾಕ್ಷಸರೆಂದು ಪರಿಗಣಿಸಲ್ಪಟ್ಟ ಬೌದ್ಧ ಭಿಕ್ಕು, ಭಿಕ್ಕುಣಿಯರ ಹೆಸರುಗಳನ್ನು ಬಯಲಿಗೆ ಎಳೆಯುತ್ತಿದ್ದರು. ಈ ಕಾರ್ಯ ಮಾಡುವ ಮೊದಲೇ ಅವರು ಅಸ್ತಂತಗರಾದರು.

ಒಟ್ಟಾರೆ ಭಾರತದಲ್ಲಿ ದೇವರೆಂದು ಪೂಜಿಸಲ್ಪಟ್ಟಿದ್ದ ಕೆಲವು ದೆವ್ವ, ಪಿಶಾಚಿ, ರಾಕ್ಷಸರೆಂಬಂತೆ ದುಷ್ಟೀಕರಿಸಲ್ಪಟ್ಟವರು ಬೌದ್ಧ ಭಿಕ್ಕುಗಳು- ಭಿಕ್ಕುಣಿಯರು ಆಗಿದ್ದರೆಂಬುದನ್ನು ಅರಿಯಬಹುದು. ಹಾಗೂ ವೈದಿಕರು ಬೇಕೆಂದೆ ಇವರುಗಳನ್ನು ದುಷ್ಟೀಕರಿಸಿ, ರೌದ್ರಾವತಾರಿಗಳನ್ನಾಗಿ ಮಾಡಿರುವುದು ಸಾಬೀತಾಗುತ್ತದೆ.

ಒಂದು ಕಾಲದಲ್ಲಿ ರಾಜರು ಬೌದ್ಧ ಭಿಕ್ಕು ಭಿಕ್ಕುಣಿಯರಾಗಿದ್ದ ಅದೆಷ್ಟೊ ವ್ಯಕ್ತಿಗಳು ನಮ್ಮ ಕಣ್ಣ ಮುಂದೆಯೇ ದೈಹಿಕವಾಗಿ ವಿರೂಪಗೊಳಿಸಿ, ಚಾರಿತ್ರಿಕವಾಗಿ ಖಳರನ್ನಾಗಿಸಿ, ಕ್ರೂರ, ಕೇಡುಂಟು ಮಾಡುವ ವಿಕೃತರನ್ನಾಗಿಸಿ ದೆವ್ವ ಪಿಶಾಚಿಗಳೆಂಬಂತೆ ಬಿಂಬಿಸಲಾಗಿರುವುದನ್ನು ಇತಿಹಾಸದಲ್ಲಿ ಕಾಣಬಹುದು. ಇಂತಹ ವ್ಯಕ್ತಿಗಳ ಬಗ್ಗೆ ಇನ್ನಷ್ಟು ಸಂಶೋಧನೆಗಳು ನಡೆಸುವುದು ಅವಶ್ಯಕವಿದೆ. ಇನ್ನಾದರೂ ಎಚ್ಚೆತ್ತುಕೊಂಡು ಬಹುಜನರು ಜಾಗೃತರಾಗಲಿ. ವೈದಿಕರ ಕಟ್ಟುಕತೆಗಳನ್ನು ನಂಬದೇ ಸಂಶೋಧಾನಾತ್ಮಕ ದೃಷ್ಟಿಯಿಂದ ಮುಂದುವರೆಯಲಿ ಎಂದು ಆಶೀಸುತ್ತೇನೆ.

ಆಕರ ಗ್ರಂಥಗಳು

  1. ಸಂವಾದ. ಮಾಸ ಪತ್ರಿಕೆ. ಅಕ್ಟೋಬರ್. 2020.
  2. ರಾಮಂದಿರ ಏಕೆ ಬೇಡ?. ಲೇಖಕರು; ಕೆ.ಎಸ್.ಭಗವಾನ್. ಪುಟ 18-19.
  3. ಕರ್ನಾಟಕ ನಾಥ ಪಂಥ. ಲೇಖಕರು; ರಹಮತ್ ತರೀಕೆರೆ. ಪುಟ-7.
  4. ಡಾ.ಬಿ.ಆರ್ ಅಂಬೇಡ್ಕರ್ ಭಾಷಣ ಬರಹ. ಸಂಪುಟ–7. ಪುಟ 18.
  5. ವಿಜಯಕ್ಕನ ವಿಚಾರ ಲಹರಿ. ಲೇಖಕಿ; ಶ್ರೀಮತಿ,ವಿಜಯಾ ಮಹೇಶ್. ಪ್ರಬುದ್ದ ಪ್ರಕಾಶನ 2017.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending