ಭಾವ ಭೈರಾಗಿ
ಹುಲಿಯ ಆತ್ಮಕಥೆ..!

- ಮಜ್ ಖುಷ್ವಂತ್ ಕೋಳಿಬೈಲು
ನಮ್ಗೆ ಮನುಷ್ಯರ ರೀತಿ ಭಾಷಣ ಮಾಡೋಕೆ ಬರಲ್ಲ , ಸಾಹಿತ್ಯ ಬರಿಯೋಕು ಬರಲ್ಲ.. ಅದ್ರೆ ನೀವುಗಳು ದಿನ ನಿತ್ಯ ನಮ್ಮ ಬಗ್ಗೆ ಚರ್ಚೆ ಮಾಡ್ತಾ ಇದ್ದಾಗ ನಾವು ತೆಪ್ಪಗಿದ್ರೆ ತಪ್ಪಾಗುತ್ತೆ. ಪ್ರತಿ ಘಟನೆಗೂ ಅನೇಕ ಆಯಾಮಗಳಿರುತ್ತೆ ಸ್ವಾಮೀ .. ಎಲ್ಲಾ ಕೋನಗಳಿಂದ ನೋಡೋದು ಬೇಡ್ವೇ??
ಹುಲಿಗಳ ಬಗ್ಗೆ ಇಷ್ಟೊಂದು ಚರ್ಚೆ – ಹೋರಾಟಗಳು ನಡೀತ್ತಿದ್ದಾಗ ಹುಲಿ ಸಮಾಜದವ್ರು ಬಾಯಲ್ಲಿ ಏನಿಟ್ಕೊಂಡು ಕೂತಿದ್ರು ಅಂತ ನಾಳೆ ನಮ್ಮನ್ನ ಯಾರೂ ಪ್ರಶ್ನೆ ಮಾಡಬಾರದು ನೋಡಿ..
ನಮ್ಮ ಸಮಾಜದವರು ಮತ್ತೆ ನಿಮ್ಮ ಮನುಷ್ಯ ಸಮಾಜದವರು ಇದೇ ಭೂಮಿ ಮೇಲೆ ಲಕ್ಷಾಂತರ ವರ್ಷಗಳಿಂದ ಇದ್ದೀವಿ. ಅದೂ ಒಂದು ಕಾಲ ಇತ್ತು.. ಸುಮಾರು ನಾಲ್ಕು ಲಕ್ಷ ವರ್ಷಗಳ ಹಿಂದೆ, ಭೂಮಿ ಮೇಲೆಲ್ಲ ನಮ್ದೇ ಹವಾ ಇತ್ತು . ಅಹಾರ ಸರಪಳಿಯ ತುತ್ತ ತುದಿಯಲ್ಲಿ ನಾವುಗಳಿದ್ರೆ ನೀವುಗಳು ನಡುವಿನಲ್ಲಿ ಬರ್ತಾ ಇದ್ರಿ. ಈವಾಗ ನೀವು ಎಲ್ಲೋ ತಲುಪಿದ್ದೀರಾ ಆದರೆ ಆ ದಿನಗಳಲ್ಲಿ ನೀವು ಕೂಡ ನಮ್ಮ ತರಹ ಕಾಡು ಮೇಡು ಅಲೀತಾ ಆಹಾರ ಸಂಗ್ರಹ ಮಾಡ್ತಿದ್ರಿ.
ನಮ್ಮ ಸುಳಿವು ಸಿಕ್ರೆ ಓಡೋಗಿ ಮರ ಹತ್ತೋದಾ ಅಥವಾ ಗುಹೆ ಸೇರ್ಕೋತಿದ್ರಿ. ಯಾವಾಗ ಮೂರು ಲಕ್ಷ ವರ್ಷಗಳ ಹಿಂದೆ ಬೆಂಕಿನ ಬಳಸೋದನ್ನು ಕಂಡುಕೊಂಡ್ರಿ ಅಮೇಲೆ ನಿಮ್ಮನ್ನ ಹಿಡಿಯೋರೆ ಇಲ್ಲ. ಆಹಾರ ಸರಪಳಿಯಲ್ಲಿ ಮೇಲಕ್ಕೆ ಹೊರಟೋದ್ರಿ.
ನಿಮ್ಮ ಸಮಾಜದವರ ಸಂಖ್ಯೆ ಬೆಳೀತಾನೇ ಹೋಯ್ತ ಮತ್ತೆ ಅನೇಕ ಪ್ರಾಣಿಗಳ ಸಂತತಿನೇ ಖಾಲಿಯಾಯ್ತು. ಕಾಡು ಮೇಡು ಅಲೆಯೋದು ಬಿಟ್ಟು ಹತ್ತಿಪತ್ತು ಸಾವಿರ ವರ್ಷಗಳ ಹಿಂದೆ ಒಂದು ಕಡೆ ನೆಲೆ ನಿಂತು ವ್ಯವಸಾಯ ಬೇರೆ ಕಲ್ತು , ಪ್ರಾಣಿಗಳನ್ನ ಪಳಗಿಸಿದ್ರಿ. ನಮ್ಮ ಸಮಾಜದವರನ್ನೂ ನಿಮ್ಮ ಸರ್ಕಸ್ಗಳಲ್ಲಿ ನೀವುಗಳು ಕುಣಿಸೋದಿಲ್ವಾ??
ನಿಜ ಹೇಳ್ಬೇಕು ಅಂದ್ರೆ ನಿಮ್ಮನ್ನು ಕಂಡ್ರೆ ನಮಗೆ ಬಹಳ ಭಯ ಸ್ವಾಮಿ. ಟಾರ್ಚ್ ಬೆಳಕು ಕಣ್ಣಿಗೆ ಬಿದ್ರೆ ತಲೆ ತಿರ್ಗುತ್ತೆ. ವಾಹನಗಳ ಶಬ್ದದಿಂದ ತಲೆ ನೋವು ಬರೋ ನಮ್ಮವರು ಪಟಾಕಿ ಶಬ್ದ ಕೇಳ್ದಾಗ ನಿಜಕ್ಕೂ ಬೆಚ್ಚಿ ಬೀಳ್ತೀವಿ. ನೀವು ನಿಮ್ಮ ಸಮಾಜದ ಮುಖಂಡರನ್ನ ಹುಲಿ, ರಾಜಾಹುಲಿ ಎಂದೆಲ್ಲ ಕರೆದಾಗ ನಮ್ಗೆ ನಗು ಬರುತ್ತೆ. ನೋಡಕ್ಕೆ ನಾವುಗಳು ಭೀಕರವಾಗಿ ಕಂಡ್ರೂ ಮನುಷ್ಯರ ಕಂಡ ತಕ್ಷಣ ನಮ್ಮ ಸಮಾಜದವರ ಮೀಟರ್ ಆಫ್ ಆಗೋಗುತ್ತೆ ಸ್ವಾಮಿ.
ನಮ್ಮವರು ಗಟ್ಟಿ ಮುಟ್ಟಾಗಿದ್ದಾರೆ ಮತ್ತು ನಮ್ಮ ಘರ್ಜನೆಗೆ ಕಾಡು ನಡುಗುತ್ತೆ. ನಮ್ಮವರು ಪಂಜಲ್ಲಿ ಎತ್ತಿ ಒಂದು ಬಿಟ್ರೆ ನಾನೂರು ಕೆಜಿ ತೂಗುವ ಕಾಡೆಮ್ಮೆಗಳೇ ನೆಗ್ದು ಬೀಳುತ್ತೆ.ಆದ್ರೆ ತಾಯಾಣೆಗೂ ಹೇಳ್ತೀನಿ , ಮನುಷ್ಯ ಸಮಾಜದವರನ್ನ ನಾವು ತಿನ್ನಕ್ಕೆ ಇಷ್ಟಪಡಲ್ಲ. ನಿಮ್ಮಿಂದ ದೂರ ಇರಕ್ಕೆ ಇಷ್ಟ ಪಡ್ತೀವಿ. ಅಪ್ಪಿ ತಪ್ಪಿ ಕಾಡಲ್ಲಿ ನೀವು ಕಣ್ಣಿಗೆ ಬಿದ್ರೆ ಬಾಲ ಮುದುರಿಕೊಂಡು ನಾವು ಓಡೋಗ್ತೀವಿ.
ಇದನ್ನೂ ಓದಿ |ಹೆಣ್ಣು ಮಕ್ಕಳಿಗೆ ಕಿರುಕುಳ ಕೊಡುವವರ ವಿರುದ್ಧ ದೂರು ನೀಡಲು ಈ ನಂಬರ್ ಗೆ ಕಾಲ್ ಮಾಡಿ..!
ಈ ದಿನ ನಿಮ್ಮ ಸಮಾಜ ಎಷ್ಟು ದೊಡ್ಡದಾಗಿ ಬೆಳೆದಿದೆ ನೋಡಿ. ಭಾರತದಲ್ಲೆ ನೀವು ನೂರಾಮೋವತ್ತು ಕೋಟಿ ಮೇಲಿದ್ದೀರಿ. ನೀವು ಬೆಳೀತಾ ಬೆಳೀತಾ ಭೂಮಿ ಮೇಲಿದ್ದ ಅನೇಕ ಪ್ರಾಣಿಗಳನ್ನ ಹೆಂಗೆ ತುಳಿದ್ರಿ ಅಂದ್ರೆ ಕೆಲವು ಪ್ರಾಣಿಗಳ ಸಮಾಜದಲ್ಲಿ ಅವರ ಹೆಸ್ರು ಹೇಳಕ್ಕೂ ನೀವು ಯಾರನ್ನೂ ಉಳ್ಸಿಲ್ಲ. 2006ರಲ್ಲಿ ನಮ್ಮ ಜೀವನೂ ಬಾಯಿಗೆ ಬಂದಿತ್ತು. ನಮ್ಮವರು ಕೇವಲ 1411 ಹುಲಿಗಳು ಉಳ್ಕೊಂಡಿದ್ರು.
ಚನ್ನಾಗಿ ಪೋಟೋ , ವಿಡಿಯೋ ಮಾಡ್ಕೊಂಡು ಇಟ್ಕೊಳಿ.. ಮುಂದಿನ ದಿನ ಇವುಗಳ ಸಮಾಜದವರು ಇದ್ರು ಅಂತ ಸಾಕ್ಷಿ ಇರುತ್ತೆ ಅಂತ ನಿಮ್ಮವರು ಮಾತಾಡ್ಕೊಂಡಿದ್ದನ್ನ ಹಸು ಹಿಡಿಯಕ್ಕೆ ಊರು ಕಡೆ ಬಂದಿದ್ದ ನಮ್ಮವರ ಕಿವಿಗೂ ಬಿತ್ತು. ನಮ್ಮ ಸಂಖೆ ಕಮ್ಮಿಯಾಗ್ತಿರೋ ವಿಷ್ಯ ನಮ್ಮ ಸಮಾಜದ ಮೀಟಿಂಗುಗಳಲ್ಲಿ ಚರ್ಚೆಗೆ ಬರೋದು.
ನಮ್ಮ ಉಗರು , ಹಲ್ಲು ಮತ್ತು ಚರ್ಮಕ್ಕಾಗಿ ಈ ಪಾಟಿ ಹಿಡೀತಾ ಇದ್ರೆ ನಾವು ಉಳಿತೀವಾ ಇಲ್ವಾ ಎಂದು ನಮ್ಗೆ ಅನುಮಾನ ಇತ್ತು.ನಮ್ಮ ಮಾಂಸ ತಿಂದ್ರೆ ನಿಮ್ಮಗಳ ಲೈಂಗಿಕ ಶಕ್ತಿ ಹೆಚ್ಚಾಗಿ ರೊಚ್ಚಿಗೇಳ್ತೀರಿ ಅಂತಾನು ಗುಸು ಗುಸು ಮಾತುಗಳಿದ್ವು. ಅಲ್ಲ ಸ್ವಾಮಿ ಈವಾಗ ಇರೊ ನಿಮ್ಮಗಳ ಜನಸಂಖ್ಯೆ ಸಾಲ್ದೇ..??
ಪ್ರಪಂಚದಲ್ಲಿರೂ ಹುಲಿಗಳಲ್ಲಿ 80% ಭಾರತದಲ್ಲೆ ಇರೋದು.ನಾವು ಇಲ್ಲಿ ರಾಷ್ಟ್ರೀಯ ಪ್ರಾಣಿ ಬೇರೆ. ಹಾಗಾಗಿ ನಿಮ್ಮಲ್ಲಿ ಸ್ವಲ್ಪ ಜನ ದೊಡ್ಡ ಮನಸ್ಸು ಮಾಡಿ ಹುಲಿ ಸಮಾಜದವರೂ ಉಳಿಬೇಕು ಅಂತ ಯೋಜನೆಗಳನ್ನು ಮಾಡಿದ್ರು. 2018ರಲ್ಲಿ ನಮ್ಮ ಜನಸಂಖ್ಯೆ ಜಾಸ್ತಿಯಾಗಿ ಈಗ ನಮ್ಮ ಸಮಾಜದಲ್ಲಿ 2967 ಸದಸ್ಯರಿದ್ದಾರೆ. ಧನ್ಯವಾದಗಳನ್ನ ಹೇಳೋಣ ಅಂದ್ರೂ ಎನೂಂತ ಹೇಳ್ಲಿ.. ಚಿವುಟೋರು ನೀವೇ.. ತೊಟ್ಟಿಲು ತೂಗೋರು ನೀವೆ.
ಇಂದು ಭಾರತದ ಐವತ್ತು ಕಡೆಗಳಲ್ಲಿ ನಮ್ಮ ಸಮಾಜದವರು ಚನ್ನಾಗಿ ಬಾಳಿ ಬದುಕ್ಲಿ ಅಂತ project Tiger ಹೆಸರಲ್ಲಿ ವ್ಯವಸ್ಥೆಗಳು ಆಗಿವೆ. ಜಿಮ್ ಕಾರ್ಬೆಟ್ ಪಾರ್ಕ್ ಬಿಟ್ರೆ ಹುಲಿಗಳು ಹೆಚ್ಚಾಗಿರೋದು ನಮ್ಮ ನಾಗರಹೊಳೆ ಏರಿಯಾದಲ್ಲೆ. ನಾವು ಕಳೆದ ಹದಿನೈದು ವರ್ಷಗಳಲ್ಲಿ ಚನ್ನಾಗಿ ಮಕ್ಳು ಮರಿ ಮಾಡ್ಕೊಂಡು ಸಂಖ್ಯೆ ಜಾಸ್ತಿಮಾಡ್ಕೊಂಡ್ವಿ. ನಾಗರಹೊಳೆ ಸುಮಾರು 650 sqkm ಪ್ರದೇಶದಲ್ಲಿ ಮೊದಲೆಲ್ಲ ಬಹಳ ಚನ್ನಾಗೇ ಇತ್ತು. ನಮ್ಗೆ ಚನ್ನಾಗಿ ಬದುಕಕ್ಕೆ , ಬೇಟೆಯಾಡಕ್ಕೆ ಎಲ್ಲಾ ಅನುಕೂಲಗಳೂ ಇತ್ತು..
ನೋಡಿ ಸ್ವಾಮಿ, ನಮ್ಮ ಸಮಾಜದವರಿಗೆ ನಿಮ್ಮ ತರಹ ಮೋವತ್ತು – ನಲವತ್ತು ಸೈಟಲ್ಲಿ ಮನೆ ಕಟ್ಟಿ , ಬಡಾವಣೆಗಳಲ್ಲಿ ಸಂಸಾರ ಮಾಡಕ್ಕೆ ಬರ್ತಿದ್ರೆ ನಾವ್ಯಾಕೆ ಹಿಂಗೆ ಇರ್ತಾಇದ್ವಿ. ನಮ್ಗೆ ವಿಶಾಲವಾದ ಕಾಡು ಬೇಕು ಸ್ವಾಮಿ. ಒಂದೊಂದು ಹುಲಿಗೆ ಓಡಾಡಕ್ಕೆ , ಬೇಟೆಯಾಡಕ್ಕೆ ಹತ್ತಿಪ್ಪತ್ತು sqkm ಕಾಡು ಬೇಕು.ನಮ್ಮ ಏರಿಯಾದೊಳಗೆ ನಮ್ಮ ಅಣ್ಣತಮ್ಮಂದಿರನ್ನು ಬಿಟ್ಕೊಳ್ಳಲ್ಲ.
ಒಮ್ಮೆ ಉಚ್ಚೆ ಹೊಯ್ದು ನಮ್ಮ ಇಲಾಖೆಗಳ ಗಡಿ ನಿರ್ಧಾರ ಮಾಡ್ಕೊಂಡ್ವಿ ಅಂದ್ರೆ ಅದೇ ನಮ್ಮ ಸರ್ವಸ್ವ, ಅದರೊಳಗೆ ಯಾರು ಬಂದ್ರೂ ನಾವು ಗುರ್ ಅನ್ನದೇ ಇರಲ್ಲ. ಆದರೆ ನಮ್ಗೆ ನಿಮ್ಮ ಸಮಾಜದವರ ತರಹ ದುರಾಸೆ ಇಲ್ಲ. ಇರೋ – ಬರೋ ಊರಲ್ಲಿ , ದೇಶದಲ್ಲೆಲ್ಲ ಬೇನಾಮಿ ಹೆಸರಲ್ಲೆಲ್ಲ ಆಸ್ತಿ ಮಾಡಲ್ಲ.
ಕಳೆದ ಕೆಲವು ವರ್ಷಗಳಲ್ಲಿ ನಾಗರಹೊಳೆ ಪ್ರದೇಶದಲ್ಲಿ ನಮ್ಮ ಸಮಾಜದವರ ಸಂಖ್ಯೆ ಜಾಸ್ತಿಯಾಗ್ತಾ ಹೋಗಿ ಒಂದೊಂದು ಹುಲಿಗೂ ಓಡಾಡಕ್ಕೆ ಇರೋ ಜಾಗ ಕಮ್ಮಿಯಾಗ್ತಾ ಹೋಯ್ತು. ಕೆಲವು ಹುಲಿಗಳಂತೂ ಮೂರು ನಾಲ್ಕು sqkm ಏರಿಯಾ ಇರೋ ಪುಟ್ಟ ಪ್ರದೇಶಕ್ಕೆ ಹೊಂದಿಕೊಳ್ಳಬೇಕಾದ ಅನಿವಾರ್ಯತೆ ಬಂತು. ಥೂ..ಥೂ.. ನಮ್ಮ ಕಾಲದಲ್ಲೆಲ್ಲ ಹಿಂಗಿರ್ಲಿಲ್ಲಪ್ಪ!!
ಅಷ್ಟು ಚಿಕ್ಕ ಜಾಗದಲ್ಲಿ ಬೇಟೆನೂ ಆಗಲ್ಲ, ನೆಮ್ಮದಿಯಾಗಿ ಬದುಕಕ್ಕೂ ಆಗಲ್ಲ.
ಪಕ್ಕದ ಏರಿಯಕ್ಕೆ ನೀರು ಕುಡಿಯಕ್ಕೆ ಹೋದ್ರೂ ಅಲ್ಲಿ ನಮ್ಮ ಸಮಾಜದವರೇ ನಮ್ಗೆ ” ಗುರ್” ಅಂತಿದ್ರು. ಇನ್ನು ನಿಮ್ಮ ಸಮಾಜದವ್ರು ಕೂಡ ಕಾಡಲ್ಲಿ ಕಣ್ಣಿಗೆ ಬಿದ್ರೆ ಗುಂಡು ಹಾರ್ಸೋದು, ನಾವು ಅರ್ಧ ತಿಂದು ಬಿಟ್ಟಿದ್ದ ಊಟಕ್ಕೆ ವಿಷ ಹಾಕೋದು ಮಾಡ್ತಾ ಇದ್ರಿ. ನಮ್ಮ ಮೂಗು ನಮ್ಮ ಕಣ್ಣಷ್ಟು ಸೂಕ್ಷ್ಮ ಇಲ್ಲಾ ಸ್ವಾಮಿ. ನಮ್ಮ ಸಮಾಜದಲ್ಲಿ ಎಷ್ಟೊ ಜನ ನೀವು ಬೆರಸಿದ್ದ ಪಾಲಿಡಾಲ್ ಕುಡಿದು ವಿಲ ವಿಲ ಒದ್ದಾಡಿ ಪ್ರಾಣ ಬಿಟ್ರು.
ನಮ್ಮ ಸಮಾಜದ ವಯಸಾಗಿರೋರು , ಹಲ್ಲು ಬಿದ್ದೋಗಿರೋರು ಕಾಡಲ್ಲಿ ಬೇಟೆ ಮಾಡೋಕೆ ಆಗ್ದೆ ಊರು ಕಡೆ ಬಂದು ನಿಮ್ಮ ದನಗಳಿಗೆ ಬಾಯಿ ಹಾಕಿದ್ವು. ಹಸಿವು ಸ್ವಾಮಿ, ಹೊಟ್ಟೆಪಾಡು ಅದು ಬಿಟ್ರೆ ನಾವು ಸಾಯಿಸಿರೋ ದನಗಳ ಮೇಲೆ ನಮ್ಗೇನು ದ್ವೇಷವಿಲ್ಲ. ನಮ್ಮ ಸಮಾಜದವ್ರು ನೋಡಕ್ಕೆ ಕ್ರೂರಿಗಳ ತರಹ ಇರ್ಬೋದು ಆದ್ರೆ ನಾವು ಯಾವತ್ತೂ ದ್ವೇಷಕ್ಕೆ , ಮತ್ಸರಕ್ಕೆ ಮತ್ತು ಆಸ್ತಿಗಾಗಿ ಕೊಲೆಗಳನ್ನು ಮಾಡಿಲ್ಲ…
ನಿಮ್ಮ ಸಮಾಜದಲ್ಲಿ ಮಕ್ಕಳನ್ನು ಚನ್ನಾಗಿ ಸಾಕಿ ಮದ್ವೆ ಮಾಡೋ ತನಕ ಮನೇಲಿ ಇಟ್ಕೋತಿರಿ ಅದ್ರೆ ನಮ್ಮಲ್ಲಿ ಅಬ್ಬಬ್ಬಾ ಅಂದ್ರೆ ಎರಡು ವರ್ಷ ಅಷ್ಟೆ. ನಮ್ಮ ಹೆಣ್ಮಕ್ಕಳು ಮರಿಗಳನ್ನು ಅವರ ಸ್ವಂತ ಕಾಲ ಮೇಲೆ ನಿಲ್ಲಲಿ ಅಂತ ತಮ್ಮಿಂದ ದೂರ ಓಡಿಸ್ತಾರೆ.ಅವರಿನ್ನೂ ಬೇಟೆಲಿ ಪಳಗಿರಲ್ಲ ಜೊತೆಗೆ ದೊಡ್ಡ ಹುಲಿಗಳ ಜೊತೆ ಹೋರಾಡಿ ತಮ್ಮ ಇಲಾಖೆ ಭದ್ರಪಡಿಸಿಕೊಳ್ಳೊ ಶಕ್ತಿಯಿರಲ್ಲ.
ಹಾಗಾಗಿ ಅವುಗಳೂ ಊರ ಕಡೆ ಬಂದು ದನ ಗಿನ ಹಿಡಿದ್ರೂ ಹಿಡಿತವೆ. ಸ್ವಲ್ಪ ಗಟ್ಟಿಮುಟ್ಟಾದ ತಕ್ಷಣ ಕಾಡೊಳಗೆ ತಮ್ಮ ಜಾಗ ಮಾಡಿಕೊಳ್ತವೆ. ಸ್ವಾಮಿ ದನ ಹಿಡಿಯೋ ಎಲ್ಲಾ ಹುಲಿಗಳು ವಯಸ್ಸಾದವಲ್ಲ ಮತ್ತು ದನ ಹಿಡಿಯೋ ಹುಲಿಗಳೆಲ್ಲ ನರಭಕ್ಷಕರಲ್ಲ. ನಮ್ಮ ಸಮಾಜ ಯುವಮೋರ್ಚಾದವರೂ ಈ ಕೆಲಸ ಮಾಡ್ತಾರೆ. ಜೋಪಾನ ಸ್ವಾಮಿ ಅವರೇ ನಮ್ಮ ಸಮಾಜದ ಭವಿಷ್ಯ. ನಾವು ದನ ಹಿಡಿದ್ರೆ ನಿಮಗೆ ಸಿಕೋ ಪರಿಹಾರ ಬಹಳ ಕಮ್ಮಿ ಅಂತ ಗೊತ್ತಿದೆ ಸ್ವಾಮಿ ಆದ್ರೆ ನಮ್ಮ ಮಾತು ಯಾರು ಕೇಳ್ತಾರೆ.. ನಮ್ಮತ್ರ ಓಟೂ ಇಲ್ಲ ನೋಟೂ ಇಲ್ಲ.
ನಿಮ್ಮಷ್ಟು ಕಾನೂನಿನ ಜ್ಞಾನ ನಮಗಿಲ್ಲ ಅದರೆ ನಮ್ಮ ಹಿರಿಯರು ಹೇಳ್ತಾ ಇದ್ದ ಮಾತು ನಮಗಿನ್ನೂ ನೆನಪಿದೆ. ಯಾವುದೇ ಕಾರಣಕ್ಕೂ ಮನುಷ್ಯನ ಮುಟ್ಟಿದ್ರೆ ನಮ್ಮ ಅಂತ್ಯ ಖಚಿತ ಅಂತ ಯಾವತ್ತೂ ಹೇಳ್ತಿದ್ರೂ. ಮನುಷ್ಯ ಸಮಾಜದವರು ನರಹಂತಕರನ್ನ ಹುಡುಕಿಕೊಂಡು ಕಾಡೊಳಗೆ ಬರ್ತಾರೆ. ನರಹಂತಕರ ಜೊತೆ ನಮ್ಮ ಸಾಮಾಜದ ಬೇರೆಯವರಿಗೂ ತೊಂದರೆಯಾಗುತ್ತೆ ಅಂತ ಎಚ್ಚರಿಸ್ತಿದ್ರು. ನರಹಂತಕರೆಲ್ಲ ನರಭಕ್ಷಕರೂ ಅಗಿರಲ್ಲ.
ಒಮ್ಮೊಮ್ಮೆ ಕಾಡಲ್ಲಿ ನಿಮ್ಮ ಸಮಾಜದವರು ಗೊತ್ತಿಲ್ಲದೆ ನಮ್ಮ ತುಂಬಾ ಹತ್ರಕ್ಕೆ ಬಂದಾಗ ನಾವು ಭಯ ಮತ್ತು ಆತಂಕದಲ್ಲಿ ಪಂಜ ಬೀಸಿ ಬಿಡ್ತೀವಿ. ಆಕಸ್ಮಿಕವಾಗಿ ಆಗೋ ಈ ಘಟನೆಗಳಲ್ಲಿ ನಿಮ್ಮ ಸಮಾಜದವರನ್ನು ಕೊಲ್ಲಬೇಕು ಅಥವಾ ತಿನ್ನಬೇಕು ಎಂಬ ಅಲೋಚನಗಳೇ ಇರಲ್ಲ. ನಮಗೂ ಈ ಜಟಾಪಟಿಗಳು ಇಷ್ಟವಿಲ್ಲ ಯಾಕೆಂದರೆ ಮುಳ್ಳು ಸೀರೆ ಮೇಲೆ ಬಿದ್ದರೂ ಸೀರೆ ಮುಳ್ಳಿನ ಮೇಲೆ ಬಿದ್ದರೂ ಹರಿಯೋದು ಸೀರೇನೆ…
ನಾಗರಹೊಳೆ ಸುತ್ತಮುತ್ತ ಇರೋ ಹಳ್ಳಿಗಳಲ್ಲಿ ನಮ್ಮ ಒಡಾಟ ಮುಂದಿನ ದಿನಗಳಲ್ಲಿ ಕಮ್ಮಿಯಾಗಲ್ಲ ಸ್ವಾಮಿ , ನಮ್ಮ ಸಂಖ್ಯೆ ಈ ಪ್ರದೇಶದಲ್ಲಿ ಗಣನೀಯವಾಗಿ ಜಾಸ್ತಿಯಾಗಿದೆ. ಎರಡೂ ಸಮಾಜದವರು ಕೂತು ಮಾತಾಡ್ಕೊಂಡು ವಾಸ್ತವಾಂಶಗಳನ್ನು ಅರ್ಥಮಾಡಿಕೊಳ್ಳಬೇಕು.. ನೋಡಿ ಸ್ವಾಮಿ
1. ನಿಮ್ಮಸಮಾಜದವರು ಕಾಡೊಳಗೆ ಬಂದು ನಮ್ಮ ಅಹಾರವನ್ನು ಬೇಟೆಯಾಡೋದು ಬಿಟ್ಟುಬಿಡಿ. ನಾವಂತೂ ಅದನ್ನೆ ನಂಬ್ಕೊಂಡಿದ್ದೀವಿ. ಇನ್ನು ನಾಗರಹೊಳೆ ಪಕ್ಕ ಉಳಿದಿರೋ ಗೋಮಾಳ , ದೇವರಕಾಡುನ್ನು ಅದರ ಪಾಡಿಗೆ ಬಿಟ್ಟುಬಿಡಿ.
2. ನಮ್ಗೇನು ನಾಗರಹೊಳೆನೇ ಬೇಕಂತಿಲ್ಲ. ಭಾರತದಲ್ಲಿ ಐವತ್ತು ಹುಲಿ ಸಂರಕ್ಷಿತ ಅರಣ್ಯ ಪ್ರದೇಶಗಳಿವೆ. ಹಲವಾರು ಕಡೆ ನಮ್ಮಗಳಲ್ಕಿ ಸಮಾಜದವರ ಸಂಖ್ಯೆ ಕಡಿಮೆಯಿದೆ. ಅಂತ ಜಾಗದಲ್ಲಿ ನಮ್ಮನ್ನು ಕರ್ಕೊಂಡೋಗಿ ಬಿಟ್ರೆ ಎಲ್ಲರಿಗೂ ಒಳ್ಳೆದು. ಅಲ್ಲಿನೂ ನಮ್ಮ ಸಂತತಿ ಜಾಸ್ತಿ ಮಾಡ್ಕೊತೀವಿ.ಇಲ್ಲಿ ನಿಮ್ಮ ತೋಟದೊಳಗೆ ನಾವು ಓಡಾಡಿ ನಿಮಗೆ ತೊಂದರೆಯಾಗೋದೂ ತಪ್ಪುತ್ತೆ.
3. ನಮ್ಮ ಸಮಾಜದ ಇತಿಹಾಸದಲ್ಲಿ ನಮ್ಮ ಹಿರಿಯರು ವಯಸ್ಸಾದ ಕಾಲದಲ್ಲಿ , ಕಂಗಾಲಾದ ಕಾಲದಲ್ಲಿ ನರಭಕ್ಷಕರಾದ ಅನೇಕ ಉದಾಹರಣೆಗಳಿವೆ. ಆಂತವರೇನಾದ್ರು ನಿಮ್ಮ ತಂಟೆಗೆ ಬಂದ್ರೆ ನೀವು ಮಾಡೋದು ಮಾಡಿ. ಚನ್ನಾಗಿ ಬದುಕಿ ಬಾಳಿ ಮಕ್ಕಳು ಮರಿ ಮಾಡಿ ಈಗ ಮುದಿಯಾಗಿ ಜೀವನದ ಮುಸ್ಸಂಜೆಯಲ್ಲಿ ಹುಲಿಗಳವು. ಕಾಡು ಹೋಗು ಅನ್ನುವ ಮತ್ತು ಊರು ಬನ್ನಿ ಎನ್ನುವ ಕಾಲಘಟ್ಟದಲ್ಲಿರುವ ನರಭಕ್ಷಕ ಹುಲಿಗಳನ್ನು ಹಿಂದಿದಲೂ ಮನುಷ್ಯ ಮುಗಿಸುತ್ತಲೆ ಬಂದಿದ್ದಾನೆ. ಆದರೆ ನಮ್ಮ ಸಮಾಜದ ಹೆಚ್ಚಿನವರು ನಿಮ್ಮ ತಂಟೆ ತಕರಾರಿಗೆ ಬಂದೂ ಇಲ್ಲ ಬರುವುದೂ ಇಲ್ಲ…
ಮನುಷ್ಯ ಅಂದ್ರೆ ತಮಾಷೆನಾ!!
-ಇಂತಿ ನಿಮ್ಮ ಪ್ರೀತಿಯ
ಹುಲಿಯ
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಭಾವ ಭೈರಾಗಿ
ಕವಿತೆ | ಡಿವೈಡರುಗಳು

- ವಿಲ್ಸನ್ ಕಟೀಲ್
ಈಗೀಗ ರಸ್ತೆಗಳಿಗಿಂತ
ಡಿವೈಡರುಗಳೇ ಅತ್ಯಾಕರ್ಶಕ..!
ಮೆತ್ತನೆ ಹುಲ್ಲುಹಾಸು, ಚೆಂದದ ಹೂಗಿಡಗಳು..
ಸುಂದರ ಜಾಹೀರಾತುಗಳು…
ರಸ್ತೆಗಳ ಆರೋಗ್ಯಕ್ಕಿಂತ
ಡಿವೈಡರುಗಳ ಸೌಂದರ್ಯಕ್ಕೇ
ಸರಕಾರ ಹೆಚ್ಚು ಹಣ ಖರ್ಚು ಮಾಡುತ್ತದೆ.
ಕೆಲವು ಕಡೆ ಈ ಡಿವೈಡರುಗಳೇ
ರಸ್ತೆಯ ತಿರುವುಗಳನ್ನು,
ಮುಟ್ಟುವ ಗುರಿಯನ್ನು
ನಿಯಂತ್ರಿಸುತ್ತವೆ..!
ಡಿವೈಡರುಗಳಿಗೆ ರಸ್ತೆಗಳಂತೆ
ಮೈಮಾಂಸ ಕಿತ್ತುಬರುವ,
ಚರಂಡಿಗಳು ಉಕ್ಕಿ ಹರಿಯುವ,
ಮಳೆಗಾಲದಲ್ಲಿ ಮುಳುಗಿ ಉಸಿರುಗಟ್ಟುವ ಚಿಂತೆಯಿಲ್ಲ
ರಸ್ತೆಪಕ್ಕದ ಮನೆಗಳನ್ನೂ
ಸಲೀಸಾಗಿ ಕೆಡವುವ ಬುಲ್ಡೋಜರುಗಳು
ಡಿವೈಡರುಗಳಿಗೆ ಹಾನಿ ಮಾಡುವುದಿಲ್ಲ.
ಇತ್ತೀಚೆಗೆ ಹೆಚ್ಚಿನವರು
ರಸ್ತೆಗಳಲ್ಲಿ ಸಾಗುವುದಕ್ಕಿಂತ
ಡಿವೈಡರಿನಲ್ಲಿ ಅಡ್ಡಾಡುವುದನ್ನೇ ಇಷ್ಟಪಡುತ್ತಾರೆ.
ಡಿವೈಡರಿನಲ್ಲಿ ನಿಂತವರಿಗೆ
ಎರಡೂ ಬದಿಯವರಿಗೆ
ತಮಾಶೆ ಮಾಡಲು ತುಂಬಾ ಸಲೀಸು
ಹಾಗೆಂದು ಮೈಮರೆಯುವಂತಿಲ್ಲ
ಡಿವೈಡರಿನಲ್ಲಿದ್ದವರೂ ಎಚ್ಚರ ಇರಲೇಬೇಕು
ಮೊನ್ನೆ
ಬಲಗಡೆಯಿಂದ ಬಂದ
ನಿಯಂತ್ರಣ ತಪ್ಪಿದ ಮಂತ್ರಿಯ ಕಾರು
ಡಿವೈಡರಿಗೇ ನುಗ್ಗಿತ್ತು!
ಡಿವೈಡರಿನಲ್ಲಿದ್ದವರು
ಎಡಕ್ಕೆ ಹಾರಿ
ಜೀವ ಉಳಿಸಿಕೊಂಡರು..!
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಭಾವ ಭೈರಾಗಿ
ಕವಿತೆ | ಒಂದು ಕವಿತೆ ಬರೆದು ಕೊಡಿ

- ಮಾನಸ ಗಂಗೆ
ಹಸಿವನ್ನ ನೀಗಿಸುವ
ಒಂದು ಕವಿತೆ ಬರೆದು ಕೊಡಿ,
ಎರಡ್ಹೊತ್ತು ತಿಂದು
ನಾಳೆಗೊಂದಿಷ್ಟು ಉಳಿಸಿಕೊಳ್ಳುವೆ
ಸಸ್ಯದ್ದೊ ,ಮಾಂಸದ್ದೊ
ಬೆಂದದ್ದೊ ,ಹಸಿ ಹಸಿಯೋ
ಯಾವುದೋ ಒಂದು
ನಾಲ್ಕು ಸಾಲು ಗೀಚಿ ಬಿಡಿ
ನನಗೀಗ ತುಂಬಾ ಹಸಿವಿದೆ
ನೀವು ಬರೆದು ಕೊಟ್ಟ
ಕವಿತೆಗಳ ಕೊನೆಯಲ್ಲಿ
ನಿಮ್ಮ ಹೆಸರನ್ನು ದಯವಿಟ್ಟೂ
ಬರೆಯಬೇಡಿ,
ಹಸಿವಿಗೆ ಋಣಭಾರವನ್ನ
ಹೊರುವ ಶಕ್ತಿ ಇಲ್ಲ
ಇನ್ನೊಂದು ಮನವಿ
ಹಸಿವಿನ ಬಗ್ಗೆ
ಕವಿತೆ ಬರೆಯುವಾಗ
ನೀವು ಸ್ವಲ್ಪ ಹಸಿವನ್ನಿಟ್ಟುಕೊಳ್ಳಿ
ಹೊಟ್ಟೆ ತುಂಬಿದ ಪದಗಳಿಗೆ
ನಿದ್ದೆ ಜಾಸ್ತಿ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಭಾವ ಭೈರಾಗಿ
ಕವಿತೆ | ಹೆಣಗಳ ಹೂಳಲು ಒಂದಿಷ್ಟು ಭೂಮಿ ಕೊಡಿ

- ರುಜು, ಸಂಶೋಧನಾ ವಿದ್ಯಾರ್ಥಿ, ದಾವಣಗೆರೆ
ಅಂಗಲಾಚಿ ಬೇಡುವೆ…
ಒಂದಿಷ್ಟು ಭೂಮಿ ಕೊಡಿಸಿ
ಬದುಕು ಕಟ್ಟಿಕೊಳ್ಳಲು ಅಲ್ಲ
ಸತ್ತ ನನ್ನ ಹೆಣದ ಗೂಡು ಕಟ್ಟಲು
ಬೀಳುವ ನನ್ನ ಜನಗಳ
ಹೆಣಗಳ ಹೂಳಲು.
ಈ ಹಿಂದೆ ಸತ್ತ
ನನ್ನ ಜನಗಳ ಹೆಣಗಳು
ರಸ್ತೆ ಬದಿಯ ಮೋರಿಯಲ್ಲಿ ಮಣ್ಣಾಗಿವೆ,
ಮಳೆ ಹೊಯ್ದು, ಕಾಲುವೆಯು ಬಂದು
ಒಂದಿಷ್ಟು ಕುರುಹಿಲ್ಲದೆ ನೆಲಸಮವಾಗಿವೆ
ಹುಡುಕಿದರು ಸಿಗುತ್ತಿಲ್ಲ
ನನ್ನಪ್ಪನ ಹೆಣದ ದಿಬ್ಬ
ಪ್ರತಿ ವರ್ಷದ ಕ್ರಿಯಾ ಕರ್ಮವಿಲ್ಲದೆ
ಅನಾಥವಾಗಿದ್ದಾನೆ.
ಅದಕ್ಕಾಗಿ ಕೈ ಮುಗಿದು ಬೇಡುವೆ
ಮುಂದೆ ಬೀಳಲಿರುವ
ಹೆಣಗಳ ದಿಬ್ಬವನ್ನಾದರೂ ಕಾಣುತ್ತೇವೆ
ನಮಗೊಂದಿಷ್ಟು ಭೂಮಿ ಕೊಡಿ
ನಮ್ಮವರ ಹೆಣಗಳನ್ನು ಗುರುತಿಟ್ಟುಕೊಳ್ಳಲು.
ಕೋರ್ಟು ಕಚೇರಿ ತಿಳಿದವರಲ್ಲ ನನ್ನ ಜನ
ಪುಡಿ ಭೂಮಿಗಾಗಿ ಚಪ್ಪಲಿಗಳನ್ನ ಸವೆಸಿದ್ದಾರೆ
ಸಿಕ್ಕ ಸಿಕ್ಕವರಿಗೆ ಸಲಾಮು ಹೊಡೆದಿದ್ದಾರೆ
ರೊಕ್ಕ ಕೇಳಿದವರಿಗೆ ರೊಕ್ಕ
ಬಿರಿಯಾನಿ ಎಂದವರಿಗೆ ಬಿರಿಯಾನಿ
ಇಷ್ಟಾದರೂ ಒಂದಿಂಚು ಭೂಮಿ ಸಿಗಲಿಲ್ಲ
ಜೇಬು ಖಾಲಿ, ಮನಸು ಖಾಲಿ
ಪ್ರತಿರೋಧಿಸುತ್ತಿಲ್ಲ ಪರಿತಪಿಸುತ್ತಿದ್ದಾರೆ.
ಈ ಮುಗ್ದ ಮನಗಳ ತಣಿಯಲು
ಒಂದಿಷ್ಟು ಭೂಮಿ ಕೊಡಿ
ಸುಖ ಸುಪ್ಪತ್ತಿಗೆಯಿಂದ ಮೆರೆಯಲು ಅಲ್ಲ
ಸತ್ತಾಗಲಾದರೂ ನೆಮ್ಮದಿಯಿಂದ ಮಲಗಲು
ಊರೂರು ಅಲೆದು,
ಹತ್ತಿಯನು ಪಿಂಜಿ,
ಹಾಸಿಗೆಯನು ಹೊಲೆದು
ಇನ್ನೊಬ್ಬರ ಸುಖ ನಿದ್ರೆಗೆ ಕಾರಣರಾದ
ಪಿಂಜಾರರು ನಾವು,
ನಮ್ಮಗಳ ಚಿರ ನಿದ್ರೆಗೆ
ಗೂಡೊಂದು ಇಲ್ಲ,
ನಾವು ನಿದ್ರಿಸಬೇಕಿದೆ ಎಲ್ಲರಂತೆ ನೆಮ್ಮದಿಯಲಿ
ಹಾಸಿಗೆಯ ಮೇಲಲ್ಲ, ಘೋರಿಯ ಒಳಗಲ್ಲಿ,
ನಮ್ಮದಾದೊಂದು ಭೂಮಿಯಿಲ್ಲ
ನಮ್ಮವರ ಹೆಣಗಳ ಹೂಳಲು
ಜಾಣರಾದ ನೀವು ಜಾಗವೊಂದು ಕೊಡಿಸಿರಿ
ನಮ್ಮವರ ಹೆಣಗಳಿಗೆ ಮುಕ್ತಿಯನು ನೀಡಿರಿ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ರಾಜಕೀಯ4 days ago
ಮಹಾರಾಷ್ಟ್ರ ಸರ್ಕಾರ ಉರುಳಲು ಬಿಜೆಪಿ ಕುತಂತ್ರ ಕಾರಣ, ಇದು ದೇಶಕ್ಕೆ ಮಾರಕ : ಮಲ್ಲಿಕಾರ್ಜುನ ಖರ್ಗೆ
-
ನಿತ್ಯ ಭವಿಷ್ಯ6 days ago
ಗುರುವಾರ ರಾಶಿ ಭವಿಷ್ಯ-ಜೂನ್-30,2022 : ಈ ರಾಶಿಯವರು ನಿಮ್ಮ ಸಂಗಾತಿಗೆ ಹೃದಯದಲ್ಲಿ ಅಡಿಗಿರುವ ಸತ್ಯಾಂಶ ಬಹಿರಂಗಪಡಿಸುವ ದಿನ
-
ನಿತ್ಯ ಭವಿಷ್ಯ5 days ago
ಶುಕ್ರವಾರ- ರಾಶಿ ಭವಿಷ್ಯ ಜುಲೈ-1,2022 : ಈ ರಾಶಿಯವರಿಗೆ ಇಷ್ಟ ಇರದ ಮದುವೆ! ಆದರೆ ಈ ರಾಶಿಯವರಿಗೆ ಇಷ್ಟ ಇರದ ಉದ್ಯೋಗ!
-
ದಿನದ ಸುದ್ದಿ4 days ago
ಅಕ್ರಮ ಹಣ ವರ್ಗಾವಣೆ ಕೇಸ್ : ಡಿ.ಕೆ ಶಿವಕುಮಾರ್’ಗೆ ಜಾಮೀನು ಅರ್ಜಿ ವಿಚಾರಣೆ ಜುಲೈ 30 ಕ್ಕೆ ಮುಂದೂಡಿಕೆ
-
ದಿನದ ಸುದ್ದಿ4 days ago
ನೇರ ಪಾವತಿ ಪೌರಕಾರ್ಮಿಕರ ಸೇವೆ ಕಾಯಂಗೆ ಸರ್ಕಾರದ ಒಪ್ಪಿಗೆ : ಸಿಎಂ ಬಸವರಾಜ ಬೊಮ್ಮಾಯಿ
-
ದಿನದ ಸುದ್ದಿ4 days ago
ಶಿಕ್ಷಕನೋರ್ವ ಮಕ್ಕಳ ಬಿಸಿಯೂಟದ ತೊಗರಿ ಬೇಳೆ ಕದ್ದು ಮಾರುತ್ತಿರುವ ವಿಡಿಯೋ ವೈರಲ್.!
-
ದಿನದ ಸುದ್ದಿ7 days ago
ಉದಯಪುರ ಹತ್ಯೆ ಭಯೋತ್ಪಾದಕ ಕೃತ್ಯ ; ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಖಂಡನೆ
-
ದಿನದ ಸುದ್ದಿ4 days ago
ಬಿಜೆಪಿಯ ನೂಪುರ್ ಶರ್ಮಾ’ಗೆ ಸುಪ್ರೀಂಕೋರ್ಟ್ ತರಾಟೆ