ದಿನದ ಸುದ್ದಿ
ಕೋವಿಡ್ ಪರಿಣಾಮಕಾರಿ ನಿರ್ವಹಣೆಗೆ ಸೂಕ್ತ ಕ್ರಮಗಳು ಅಧಿಕಾರಿಗಳ ತಂಡ ಸಕ್ರಿಯವಾಗಿ ಕಾರ್ಯನಿರ್ವಹಿಸಿ ಉತ್ತಮ ಫಲಿತಾಂಶ ನೀಡಬೇಕು : ಡಿಸಿ ಮಹಾಂತೇಶ ಬೀಳಗಿ

ಸುದ್ದಿದಿನ,ದಾವಣಗೆರೆ: ಕೋವಿಡ್ಗೆ ಸಕಾಲದಲ್ಲಿ ಚಿಕಿತ್ಸೆ ಮತ್ತು ನಿಯಂತ್ರಣಕ್ಕಾಗಿ ತಜ್ಞರ ಸಮಿತಿಯಿಂದ ನಿಯಮಿತ ಸಭೆ, ಡೆತ್ ಆಡಿಟ್ ಸಮಿತಿ ಪುನಾರಚನೆ, ಔಷಧಗಳ ಉಸ್ತುವಾರಿಗಾಗಿ ಫ್ಲೈಯಿಂಗ್ ಸ್ಕ್ವಾಡ್ ರಚನೆ ಹಾಗೂ ವಿವಿಧ ವ್ಯವಸ್ಥೆಗಳನ್ನು ನಿರ್ವಹಿಸಲು ನೋಡಲ್ ಅಧಿಕಾರಿಗಳ ನೇಮಕ ಸೇರಿದಂತೆ ಎಲ್ಲ ರೀತಿಯ ಸಿದ್ದತೆ ಮಾಡಿಕೊಳ್ಳಲು ಇಂದು ತುರ್ತು ಸಭೆ ಕರೆಯಲಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು.
ಜಿಲ್ಲಾಡಳಿತ ಕಚೇರಿಯಲ್ಲಿ ಶನಿವಾರ ಡಿಹೆಚ್ಓ, ಡಿಎಸ್, ಡಿಎಸ್ಓ ಮತ್ತು ಎರಡು ಮೆಡಿಕಲ್ ಕಾಲೇಜುಗಳ ಮುಖ್ಯಸ್ಥರು ಸೇರಿದಂತೆ ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿಗಳು ತುರ್ತು ಸಭೆ ನಡೆಸಿ ಕೋವಿಡ್ ಪರಿಣಾಮಕಾರಿ ಚಿಕಿತ್ಸೆ ಮತ್ತು ನಿಯಂತ್ರಣಕ್ಕೆ ಅಗತ್ಯವಾದ ನಿರ್ಧಾರಗಳನ್ನು ಕೈಗೊಂಡು, ವಿವಿಧ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಿದರು.
ಕೋವಿಡ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಡಿಸಿ ಆದಿಯಾಗಿ ಎಲ್ಲರೂ ಒಂದು ತಂಡದಲ್ಲಿ ಶ್ರದ್ದೆಯಿಂದ ಕಾರ್ಯ ನಿರ್ವಹಿಸಬೇಕು. ಮೊದಲನೆಯದಾಗಿ ಜಿಲ್ಲೆಯಲ್ಲಿ ಸಂಭವಿಸುವ ಕೋವಿಡ್ ಅಥವಾ ನಾನ್ ಕೋವಿಡ್ ಸಾವು ಕುರಿತು ವಿಶ್ಲೇಷಣೆ ನಡೆಸಲು ಈ ಹಿಂದೆ ರಚಿಸಲಾಗಿದ್ದ ಡೆತ್ ಆಡಿಟ್ ಸಮಿತಿಯನ್ನು ತಕ್ಷಣವೇ ಮರು ರಚಿಸಿ, ಇಂದಿನಿಂದಲೇ ಸಂಭವಿಸುವ ಯಾವುದೇ ಸಾವಿನ ವರದಿಯನ್ನು ನೀಡಬೇಕೆಂದು ಡಿಹೆಚ್ಓ ಮತ್ತು ಜಿಲ್ಲಾ ಶಸ್ತ್ರಚಿಕಿತ್ಸಕರಿಗೆ ಸೂಚಿಸಿದರು.
ಇದನ್ನೂ ಓದಿ | ರಾಜ್ಯದಲ್ಲಿಂದು 29,438 ಕೊರೋನಾ ಪ್ರಕರಣ ಪತ್ತೆ ; 208 ಮಂದಿ ಸಾವು
ತಜ್ಞರ ಸಮಿತಿ ಸಭೆ
ವೈದ್ಯಕೀಯ ತಜ್ಞರ ಸಮಿತಿಯ ಸದಸ್ಯರು ಪ್ರತಿ ಎರಡು ದಿನಗಳಿಗೆ ಒಮ್ಮೆ ಸಭೆಯನ್ನು ನಡೆಸಿ, ಆಸ್ಪತ್ರೆಯ ಸಕ್ರಿಯ ಪ್ರಕರಣಗಳು, ಆಕ್ಸಿಜನ್ ಬೆಡ್ಗಳಲ್ಲಿ ಎಷ್ಟು ಜನ ರೋಗಿಗಳು ಯಾವ ಸ್ಥಿತಿಯಲ್ಲಿದ್ದಾರೆ, ಯಾರಿಗೆ ಏನು ಅವಶ್ಯಕತೆ ಇದೆ ಹಾಗೂ ಮುಂದಿನ ಹತ್ತು ದಿನಗಳ ಪರಿಸ್ಥಿತಿ ಬಗ್ಗೆ ಪರಿಶೀಲನೆ ನಡೆಸಿ ವರದಿ ಸಿದ್ದಪಡಿಸಿ ಕ್ರಮ ವಹಿಸಬೇಕೆಂದು ಸೂಚನೆ ನೀಡಿದರು.
ಫ್ಲೈಯಿಂಗ್ ಸ್ಕ್ವಾಡ್ ರಚನೆ
ಜಿಲ್ಲಾಸ್ಪತ್ರೆ ಉಗ್ರಾಣ ಹಾಗೂ ಇತರೆ ಕೋವಿಡ್ ನಿರ್ವಹಿಸುತ್ತಿರುವ ಆಸ್ಪತ್ರೆಗಳ ಫಾರ್ಮಸಿಗಳಲ್ಲಿ ಔಷಧಗಳ ಲಭ್ಯತೆ ಹಾಗೂ ಔಷಧಗಳ ಬಳಕೆ, ಹೆಚ್ಚಿನ ಬಳಕೆ ಮತ್ತು ದುರ್ಬಳಕೆ ಕುರಿತು ಉಸ್ತುವಾರಿ ನೋಡಿಕೊಳ್ಳಲು ಫ್ಲೈಯಿಂಗ್ ಸ್ಕ್ವಾಡ್ ರಚಿಸಲಾಗುವುದು. ಈ ಫ್ಲೈಯಿಂಗ್ ಸ್ಕ್ವಾಡ್ ಪೊಲೀಸರ ಸಹಾಯ ಪಡೆದುಕೊಂಡು ಉಗ್ರಾಣ, ಫಾರ್ಮಸಿಗಳಿಗೆ ಭೇಟಿ ನೀಡಿ ಕೋವಿಡ್ಗೆ ಸಂಬಂಧಿಸಿದ ಯಾವುದೇ ಔಷಧಿ, ಲಸಿಕೆ ಕುರಿತು ಪರಿಶೀಲಿಸಿ ಔಷಧ ಲಭ್ಯತೆ ಮತ್ತು ಬಳಕೆ ಬಗ್ಗೆ ವಿವರವಾದ ವರದಿ ನೀಡಬೇಕೆಂದರು.
ಹಾಗೂ ಕೆಪಿಎಂಇ ಅಡಿಯಲ್ಲಿ ಕಳೆದ ಬಾರಿ ರಚಿಸಲಾಗಿದ್ದ ತಂಡಗಳನ್ನು ಪುನಾರಚಿಸಲಾಗುವುದು. ಈ ತಂಡಗಳು ಮೆಡಿಕಲ್ ಶಾಪ್ಗಳ ವರದಿ ಮತ್ತು ವಿವಿಧ ಆಸ್ಪತ್ರೆಗಳಿಗೆ ಭೇಟಿ ನೀಡಿ ಅನಧಿಕೃತವಾಗಿ ರೆಮಿಡಿಸಿವಿರ್ ಸೇರಿದಂತೆ ಇತರೆ ಲಸಿಕೆ ಮಾರಾಟ ಮಾಡುತ್ತಿದ್ದರೆ ಅಂತಹ ಆಸ್ಪತ್ರೆಗಳನ್ನು ಮುಚ್ಚಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
- ಕೋವಿಡ್ ನಿರ್ವಹಣೆಯಲ್ಲಿ ಜಿಲ್ಲಾ ಸಿಜಿ ಆಸ್ಪತ್ರೆ ದಾವಣಗೆರೆಯ ಕನ್ನಡಿ ಇದ್ದಂತೆ.. ರೋಗಿಗಳು, ಬೆಡ್ಗಳು, ಆಕ್ಸಿಜನ್, ಪರೀಕ್ಷೆಗಳು, ಬಿಡುಗಡೆ ಕುರಿತಾಗಿ ವ್ಯವಸ್ಥಿತವಾಗಿ ನಿರ್ವಹಣೆ ಮಾಡಲು ಪ್ರತಿಯೊಂದು ವಿಭಾಗಕ್ಕೂ ಒಬ್ಬೊಬ್ಬ ನುರಿತ ಅಧಿಕಾರಿಯನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಲಾಗುತ್ತಿದೆ. ಹಾಗೂ ಡೆತ್ ಆಡಿಟ್ ಸಮಿತಿ ಪುನಾರಚನೆ, ತಜ್ಞರ ಸಭೆ, ಸಿಸಿಸಿ ಸ್ಥಾಪನೆ, ಅಗತ್ಯ ಸಿಬ್ಬಂದಿ ನೇಮಕ, ಆಂಬುಲೆನ್ಸ್ ಖರೀದಿ ಹಾಗೂ ಅಗತ್ಯ ಔಷಧ ಮತ್ತು ಇತರೆ ಸುರಕ್ಷತಾ ಪರಿಕರಗಳು ಸೇರಿದಂತೆ ಕೋವಿಡ್ನ್ನು ಅತ್ಯಂತ ಪರಿಣಾಮಕಾರಿಯಾಗಿ ಎದುರಿಸಲು ಎಲ್ಲ ರೀತಿಯ ಸಿದ್ದತೆಯನ್ನು ವ್ಯವಸ್ಥಿತವಾಗಿ ಮಾಡಲು ಈ ತುರ್ತು ಸಭೆಯಲ್ಲಿ ನಿರ್ಧರಿಸಿ ಕ್ರಮ ಕೈಗೊಳ್ಳಲಾಗುತ್ತಿದೆ.
| ಮಹಾಂತೇಶ ಬೀಳಗಿ, ಜಿಲ್ಲಾಧಿಕಾರಿ
ಆಕ್ಸಿಜನ್ ನಿರ್ವಹಣೆಗೆ ಪ್ರತ್ಯೇಕ ನೋಡಲ್ ಅಧಿಕಾರಿ : ಕೋವಿಡ್ ರೋಗಿಗಳಿಗೆ ಅಗತ್ಯವಿರುವ ಆಕ್ಸಿಜನ್ ಸರಬರಾಜು ಮಾಡಲು ಪ್ರತಿ ವಾರ್ಡುಗಳಿಗೆ ತೆರಳಿ ಯಾರಿಗೆ ಯಾವ ರೀತಿಯ ಆಕ್ಸಿಜನ್ ಅಗತ್ಯವಿದೆ ಎಂದು ವಿಶ್ಲೇಷಿಸಿ ನಿರ್ಧರಿಸಿ ಕ್ರಮ ಕೈಗೊಳ್ಳಲು ಪ್ರತ್ಯೇಕವಾಗಿ ಒಬ್ಬ ತಜ್ಞರನ್ನು ಆಕ್ಸಿಜನ್ ನಿರ್ವಹಣಾ ನೋಡಲ್ ಅಧಿಕಾರಿಯನ್ನಾಗಿ ನೇಮಿಸಲು ನಿರ್ಧರಿಸಲಾಗಿದೆ ಎಂದರು.
ಆರ್ಟಿಪಿಸಿಆರ್ ಲ್ಯಾಬ್ ನಿರ್ವಹಣೆಗೆ ನೋಡಲ್ ಅಧಿಕಾರಿ : ಪ್ರತಿ ದಿನ ಎಷ್ಟು ಪರೀಕ್ಷೆಗಳು ನಡೆಯುತ್ತಿವೆ. ಹಾಗೂ ಸಂಪೂರ್ಣ ಲ್ಯಾಬ್ನ ಕಾರ್ಯವೈಖರಿಯನ್ನು ವಿಶ್ಲೇಷಿಸಿ ಕ್ರಮ ವಹಿಸಲು ಡಾ.ಗಂಗಾಧರ್ ಇವರನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಲಾಗುವುದು ಎಂದರು.
ಪ್ರಸ್ತುತ ಪ್ರೈಮರಿ ಮತ್ತು ಸೆಕೆಂಡರಿ ಸಂಪರ್ಕದ ಪರೀಕ್ಷೆಗಳು ಸಾಕಷ್ಟು ಆಗುತ್ತಿದ್ದರೂ ಡಾಟಾ ಎಂಟ್ರಿಯಲ್ಲಿ ಅದು ಸರಿಯಾಗಿ ಅಪ್ಡೇಟ್ ಮಾಡದೇ ಇರುವ ಕಾರಣ ರಾಜ್ಯ ವರದಿಯಲ್ಲಿ ಕಡಿಮೆ ತೋರಿಸುತ್ತಿದೆ. ಆದ ಕಾರಣ ಟಿಹೆಚ್ಓ ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳು ಡಾಟಾ ಎಂಟ್ರಿ ಸಮರ್ಪಕವಾಗಿ ಮಾಡಿಸಲು ಕ್ರಮ ಕೈಗೊಳ್ಳಬೇಕು.
ಸಿಜಿ ಆಸ್ಪತ್ರೆಯಲ್ಲಿ ಪ್ರಸ್ತುತ 2000 ಪೂಲಿಂಗ್ ಪರೀಕ್ಷೆ ಮಾಡಿಸುವ ಸಾಮಥ್ರ್ಯ ಇದೆ. ಸಕ್ರಿಯ ಪ್ರಕರಣದ 10 ಪಟ್ಟು ಟೆಸ್ಟ್ ಆಗಬೇಕಿದ್ದು, ಈ ಬಗ್ಗೆ ಕ್ರಮ ವಹಿಸಲಾಗುತ್ತಿದೆ. ಹಾಗೂ ಆಸ್ಪತ್ರೆಗೆ ಅಗತ್ಯವಿರುವ ಎಲ್ಲ ಅಗತ್ಯ ಔಷಧಿಗಳು ಮತ್ತು ಸುರಕ್ಷತಾ ಪರಿಕರ ಖರೀದಿಗೆ ಕ್ರಮ ವಹಿಸಲಾಗಿದೆ ಎಂದರು.
ಇಂದು ಕೋವಿಡ್ ಲಸಿಕೆಯ ಗುರಿ 13000 ಸಾವಿರ ಇದ್ದು 7000 ಲಸಿಕೆ ಸರಬರಾಜಾಗಿದ್ದು ಲಸಿಕೆ ನೀಡಲು ಕ್ರಮ ಕೈಗೊಳ್ಳಲಾಗಿದೆ. ನಗರ ಹಾಗೂ ಎಲ್ಲ ತಾಲ್ಲೂಕುಗಳಲ್ಲಿ ಕೋವಿಡ್ ಕೇರ್ ಸೆಂಟರ್ ತೆರೆಯಲು ವ್ಯವಸ್ಥೆ ಮಾಡಲಾಗಿದೆ. ಜೊತೆಗೆ 03 ಆಂಬುಲೆನ್ಸ್ ಖರೀದಿ ಹಾಗೂ ಶವ ವಾಹನ ಸಿದ್ದಪಡಿಸಿಕೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮೋತಿವೀರಪ್ಪ ಕಾಲೇಜಿನಲ್ಲಿ ಲಸಿಕೆ
ಪ್ರಸ್ತುತ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಲಸಿಕೆಯನ್ನು ಸಿಜಿ ಆಸ್ಪತ್ರೆ ಬದಲಾಗಿ ನಗರದ ಮೋತಿ ವೀರಪ್ಪ ಕಾಲೇಜಿನಲ್ಲಿ ನೀಡಲು ಕ್ರಮ ಕೈಗೊಳ್ಳಲಾಗುವುದು.
ಮೇ 1 ರ ನಂತರ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲು ಇನ್ನೂ ಮಾರ್ಗಸೂಚಿಗಳು ಬಂದಿಲ್ಲ. ಆದರೂ ಈ ಲಸಿಕೆ ನೀಡಲು ಯುದ್ದದ ರೀತಿಯಲ್ಲಿ ಸನ್ನದ್ದರಾಗಬೇಕಿದ್ದು, ಮೈಕ್ರೋ ಪ್ಲಾನ್ ಸಿದ್ದಪಡಿಸಲಾಗುವುದು ಎಂದರು.
ಬೆಂಗಳೂರಿನ ರೋಗಿಗಳ ದಾಖಲು
ಬೆಂಗಳೂರಿನಲ್ಲಿ ಪ್ರಕರಣಗಳು ಹೆಚ್ಚಾಗಿ ಬೆಡ್ ಸಿಗದೇ ಇರುವ ಕಾರಣಕ್ಕೆ ದಾವಣಗೆರೆಗೆ ಕೆಲವರು ಬಂದು ಖಾಸಗಿ ಮತ್ತು ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿರುವ ವಿಷಯ ಗಮನಕ್ಕೆ ಬಂದಿದ್ದು, ಇನ್ನು ಮುಂದೆ ವೈದ್ಯಾಧಿಕಾರಿಗಳು ನನ್ನ ಗಮನಕ್ಕೆ ತಂದು ದಾಖಲು ಮಾಡಿಕೊಳ್ಳಬೇಕು. ಮೊದಲು ಜಿಲ್ಲೆಯ ಅವಶ್ಯಕತೆಗಳನ್ನು ಪರಿಗಣಿಸಿ ನಂತರ ದಾಖಲಾತಿ ಮಾಡಲು ಕ್ರಮ ವಹಿಸಲಾಗುವುದು ಎಂದರು.
ಒಟ್ಟಾರೆ ಜಿಲ್ಲೆಯಲ್ಲಿ ಕೋವಿಡ್ಗೆ ಉತ್ತಮ ಚಿಕಿತ್ಸೆ ನೀಡಲು ಮತ್ತು ಪರಿಣಾಮಕಾರಿಯಾಗಿ ಎದುರಿಸಲು ಅಧಿಕಾರಿಗಳ ತಂಡಕ್ಕೆ ಎಲ್ಲ ರೀತಿಯ ವ್ಯವಸ್ಥೆ ಮಾಡಿಕೊಡಲಾಗುತ್ತಿದ್ದು ಉತ್ತಮ ಫಲಿತಾಂಶ ಬರುವಂತೆ ಎಲ್ಲರೂ ಕೆಲಸ ಮಾಡಬೇಕು. ತಾಲ್ಲೂಕು ನೋಡಲ್ ಅಧಿಕಾರಿಗಳು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಬೇಕು ಎಂದ ಅವರು ಸಾರ್ವಜನಿಕರೂ ಕೋವಿಡ್ ನಿಯಮಗಳನ್ನು ಪಾಲಿಸಬೇಕು ಎಂದರು.
ಸ್ವಯಂಪ್ರೇರಿತ ವೈದ್ಯರಿಗೆ ಸ್ವಾಗತ
ಕೋವಿಡ್ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಕೋವಿಡ್ಗೆ ಸ್ವಯಂಪ್ರೇರಿತವಾಗಿ ಸೇವೆ ಸಲ್ಲಿಸಲು ಇಚ್ಚಿಸುವ ವೈದ್ಯರನ್ನು ಜಿಲ್ಲಾಡಳಿತ ಸ್ವಾಗತಿಸುತ್ತದೆ ಎಂದು ತಿಳಿಸಿದರು.
ಸಿಜಿ ಆಸ್ಪತ್ರೆಯಲ್ಲಿ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲು ಎಂಐಸಿಯು ನ್ನು ಸ್ಥಾಪಿಸಿ ಕಾರ್ಯ ನಿರ್ವಹಿಸುತ್ತಿದ್ದು, ರೂಂ ನಂ.65 ಮತ್ತು 66 ರಲ್ಲಿ ಸ್ಟೆಪ್ ಡೌನ್ ಎಂಐಸಿಯು ಸ್ಥಾಪಿಸಲು ಎಲ್ಲ ರೀತಿಯ ಕ್ರಮ ವಹಿಸಲಾಗುತ್ತಿದೆ. ಅಗತ್ಯ ಸಿಬ್ಬಂದಿ ನೇಮಕ ಅಥವಾ ನಿಯೋಜನೆಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಬಾಪೂಜಿ ಮತ್ತು ಎಸ್ಎಸ್ ಮೆಡಿಕಲ್ ಕಾಲೇಜುಗಳಿಂದ ತಲಾ ಒಬ್ಬರು ಮೈಕ್ರೋಬಯಾಲಜಿಸ್ಟ್ಗಳನ್ನು ತಾತ್ಕಾಲಿಕವಾಗಿ 2 ಅಥವಾ 3 ತಿಂಗಳ ಕಾಲ ಸಿಜಿ ಆಸ್ಪತ್ರೆಗೆ ನಿಯೋಜಿಸುವಂತೆ ಕಾಲೇಜುಗಳ ಮುಖ್ಯಸ್ಥರುಗಳಿಗೆ ಡಿಸಿ ಮನವಿ ಮಾಡಿದರು.
ಸಭೆಯಲ್ಲಿ ಎಸ್ಎಸ್ ಆಸ್ಪತ್ರೆಯ ಡಾ.ಕಾಳಪ್ಪನವರ್ ಮಾತನಾಡಿ, ರೋಗಿಗಳಿಗೆ ಲಿಕ್ವಿಡ್ ಆಕ್ಸಿಜನ್ ಉತ್ತಮವಾಗಿದ್ದು, ಇದರ ಲಭ್ಯತೆ ಹೆಚ್ಚಿಸಬೇಕೆಂದರು. ಬಾಪೂಜಿ ಆಸ್ಪತ್ರೆಯ ಡಾ.ರವಿ ಮಾತನಾಡಿ, ಲಿಕ್ವಿಡ್ ಆಕ್ಸಿಜನ್ ಸರಬರಾಜಿನಲ್ಲಿ ಯಾವುದೇ ವ್ಯತ್ಯಯವಾಗದಂತೆ ಮುಂಜಾಗ್ರತಾ ಕ್ರಮ ವಹಿಸುವುದು ಸೂಕ್ತ ಎಂದರು.
ಸಭೆಯಲ್ಲಿ ಎಡಿಸಿ ಪೂಜಾರ ವೀರಮಲ್ಲಪ್ಪ, ಎಸಿ ಮಮತಾ ಹೊಸಗೌಡರ್ ಪಾಲಿಕೆ ಆಯುಕ್ತ ಸ್ಮಾರ್ಟ್ ಸಿಟಿ ಎಂಡಿ ರವೀಂದ್ರ ಮಲ್ಲಾಪುರ, ವಿಶ್ವನಾಥ ಮುದಜ್ಜಿ, ಜಿ.ಪಂ ಉಪ ಕಾರ್ಯದರ್ಶಿ ಆನಂದ್, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕಿ ನಜ್ಮಾ, ಎಸ್ಎಲ್ಓ ರೇಷ್ಮಾ ಹಾನಗಲ್, ಡಿಹೆಚ್ಓ ಡಾ.ನಾಗರಾಜ್, ಡಿಎಸ್ಓ ಡಾ.ರಾಘವನ್, ಡಿಎಸ್ ಡಾ.ಜಯಪ್ರಕಾಶ್, ಆರ್ಸಿಹೆಚ್ಓ ಡಾ.ಮೀನಾಕ್ಷಿ, ಜಿಲ್ಲಾ ಮಲೇರಿಯಾಧಿಕಾರಿ ಡಾ.ನಟರಾಜ್, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಗಂಗಾಧರ್, ಡಾ.ರೇಣುಕಾರಾಧ್ಯ, ಡಾ.ಮುರಳೀಧರ ಸೇರಿದಂತೆ ತಾಲ್ಲೂಕು ವೈದ್ಯಾಧಿಕಾರಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದೂಡಾ ನಿರ್ಲಕ್ಷ್ಯ ಧೋರಣೆ ; ಅಡ ಕತ್ತರಿಯಲ್ಲಿ ಸಿಲುಕಿದ ಅನ್ನದಾತ : ದೂಡಾಗೆ ಮೇ31ರವರೆಗೆ ಡೆಡ್ ಲೈನ್ ನೀಡಿದ ಹಳೇ ಕುಂದುವಾಡ ರೈತರು

ಸುದ್ದಿದಿನ,ದಾವಣಗೆರೆ : ನಗರದ ಹಳೇ ಕುಂದುವಾಡದಲ್ಲಿ ದೂಡಾ ಇಲಾಖೆ ಹೊಸ ಬಡಾವಣೆ ನಿರ್ಮಾಣ ಮಾಡುವ ಉದ್ದೇಶ ಹೊಂದಿದ್ದು, ಆದರೆ ಎರಡುವರೆ ವರ್ಷಗಳಿಂದ ರೈತರನ್ನು ಅಲೆದಾಡಿಸುತ್ತಾ ಜಮೀನು ಖರೀದಿ ಪ್ರಕ್ರಿಯೆಯನ್ನೆ ಶುರು ಮಾಡದೇ ರೈತರನ್ನ ಅಡಕತ್ತರಿಯಲ್ಲಿ ಸಿಲುಕಿಸಿದೆ, ಮೇ 31ರೊಳಗೆ ಖರೀದಿ ಪ್ರಕ್ರಿಯೆ ಶುರು ಮಾಡಬೇಕು, ಇಲ್ಲದಿದ್ದಲ್ಲಿ ರೈತರು ಜಮೀನು ಮಾರಾಟ ಮಾಡುವುದಿಲ್ಲ ಎಂದು ದೂಡಾ ಇಲಾಖೆಗೆ ರೈತರು ಅಂತಿಮ ಗಡುವು ನೀಡಿದ್ದಾರೆ.
ನಗರದ ದೂಡಾ ಕಚೇರಿಗೆ ಆಗಮಿಸಿದ ಹಳೇ ಕುಂದುವಾಡ
ರೈತರು, ದೂಡಾ ಆಯುಕ್ತ ಕುಮಾರಸ್ಚಾಮಿ ಅವರಿಗೆ ಮನವಿ ಸಲ್ಲಿಸಿದರು.. ಈ ಸಂದರ್ಭದಲ್ಲಿ ಮಾತನಾಡಿದ ರೈತರು, ಹಳೇ ಕುಂದುವಾಡದಲ್ಲಿ ದೂಡಾ ಇಲಾಖೆ ಸುಮಾರು 53.19 ಎಕರೆ ಪ್ರದೇಶದಲ್ಲಿ ಬಡಾವಣೆ ನಿರ್ಮಿಸಲು ತಯಾರಿ ನಡೆಸಿದೆ. ಈ ಪ್ರಕ್ರಿಯೆ ಸುಮಾರು ಎರಡುವರೆ ವರ್ಷದಿಂದ ನಡೆಯುತ್ತಲೇ ಇದೆ.ಮೊದಲು ರೈತರನ್ನು ಆಹ್ವಾನಿಸದೇ ದರ ನಿಗದಿ ಮಾಡಿ ವಿವಾದ ಸೃಷ್ಟಿಸಿತ್ತು.
53 ಎಕರೆ ಜಮೀನನ್ನೆ ಖರೀದಿ ಮಾಡಲು ಆಗುತ್ತಿಲ್ಲ, 53 ಎಕರೆ ಪ್ರದೇಶದ ಸುತ್ತಾಮುತ್ತಾ ಇರುವ 150 ಎಕರೆಯನ್ನ ಸ್ವಾಧೀನ ಮಾಡಿಕೊಳ್ಳುತ್ತೇವೆ ಎಂದು ಪ್ರಕಟಣೆ ಹೊರಡಿಸುವ ಮೂಲಕ ರೈತರ ಕೆಂಗಣ್ಣಿಗೆ ಗುರಿಯಾಗಿತ್ತು.. ಅದಾದ ಬಳಿಕ ರೈತರನ್ನು ಮನವರಿಕೆ ಮಾಡಿ ಬಳಿಕ ನಾಲ್ಕು ತಿಂಗಳ ಹಿಂದೆ ಡಿಸಿ ಮಹಾಂತೇಶ್ ಬೀಳಗಿಯವರ ಅಧ್ಯಕ್ಷತೆಯಲ್ಲಿ ಮರು ಸಭೆ ಕರೆದು ಒಂದು ಎಕರೆಗೆ 1.28 ಕೋಟಿ ರೂ. ಹಾಗೂ ಸರ್ಕಾರಿ ದರದಲ್ಲಿ ಒಂದು ನಿವೇಶನ ನೀಡಲು ರೈತರು ಹಾಗೂ ದೂಡಾ ಇಲಾಖೆ ನಡೆಯುವ ಅಂತಿಮ ಒಪ್ಪಂದ ನಡೆದಿತ್ತು.
ಈ ವೇಳೆ ಎರಡೇ ತಿಂಗಳಲ್ಲಿ ಜಮೀನು ಖರೀದಿ ಮಾಡುತ್ತೇವೆ ಎಂದು ದೂಡಾ ಸಮಯ ಕೇಳಿತ್ತು.. ಆದರೆ ನಾಲ್ಕು ತಿಂಗಳು ಕಳೆದರು ಖರೀದಿ ಪ್ರಕ್ರಿಯನ್ನೆ ಶುರು ಮಾಡಿಲ್ಲ, ಇತ್ತ ನಮ್ಮ ಜಮೀನು ನಮಗೆ ಬಿಟ್ಟುಕೊಡಿ ಎಂದರು ಬಿಡುತ್ತಿಲ್ಲ, ಎರಡುವರೆ ವರ್ಷದಿಂದ ರೈತರನ್ನು ಅಲೆದಾಡಿಸುತ್ತಾ ಮೂಗಿಗೆ ತುಪ್ಪ ಸವರುವ ಕೆಲಸವನ್ನು ದೂಡಾ ಇಲಾಖೆ ಮಾಡಿತ್ತಿದೆ ಎಂದು ರೈತರು ದೂರಿದರು.
ಕೆಲವು ರೈತರು ಸಾಲಸೋಲು ಮಾಡಿ ಸಂಕಷ್ಟದಲ್ಲಿದ್ದಾರೆ.. ಇನ್ನೂ ಕೆಲವರು ಜಮೀನು ಬೇರೆಯವರಿಗೆ ಮಾರಾಟ ಮಾಡಲಾಗದ ಸ್ಥಿತಿಯಲ್ಲಿದ್ದಾರೆ, ಇಲ್ಲಿ ಜಮೀನು ಮಾರಾಟ ಮಾಡಿ ಬೇರೆಡೆ ಜಮೀನು ಖರೀದಿಸಲು ಮುಂದಾದರೆ ಈಗಾಗಲೇ ಬೇರೆಡೆ ಜಮೀನು ದರ ಗಗನಕ್ಕೆ ಏರಿದೆ, ಇಲ್ಲಿ ಮಾರಾಟ ಮಾಡಿ ದುಬಾರಿ ಬೆಲೆಗೆ ಬೇರೆಡೆಗೆ ಜಮೀನು ಕೊಳ್ಳುವ ಅವಶ್ಯಕತೆ ಇಲ್ಲ ಎಂದು ಕೆಲವು ರೈತರು ಗೊಂದಲಕ್ಕೆ ಹೀಡಾಗಿದ್ದಾರೆ, ಕೆಲವರು ಜಮೀನು ಕೊಡಲ್ಲ ಎಂದರು ಸಹ ಈಗಾಗಲೇ ಬಡಾವಣೆ ನಿರ್ಮಾಣಕ್ಕೆ ಸೇರ್ಪಡೆ ಮಾಡಿ ರೈತರಿಗೆ ದೂಡಾ ತೊಂದರೆ ನೀಡುತ್ತಿದೆ.
ಈ ಹಿನ್ನಲೆ ಇದೇ ಮೇ31 ರೊಳಗೆ ಜಮೀನು ಖರೀದಿ ಪ್ರಕ್ರಿಯೆ ಶುರು ಮಾಡಬೇಕು, ದಿನಾಂಕ ಮೀರಿದರೆ ಯಾವುದು ಕಾರಣಕ್ಕೂ ನಾವು ನಿಮಗೆ ಜಮೀನು ಮಾರಾಟ ಮಾಡುವುದಿಲ್ಲ, ದೂಡಾ ಎಲ್ಲಾ ಜಮೀನುಗಳಿಗೆ ನಿರಪೇಕ್ಷಣ ಪತ್ರ(ಎನ್ ಒಸಿ) ನೀಡಿ ನಮ್ಮ ಜಮೀನುಗಳಿಗೆ ಮುಕ್ತಿ ನೀಡಿ ಎಂದು ರೈತರು ಅಂತಿಮ ಗಡುವು ನೀಡಿದ್ದಾರೆ.
ಇನ್ನೂ ಸಂದರ್ಭದಲ್ಲಿ ಹರಿಹರ ಶಾಸಕ ಎಸ್ ರಾಮಪ್ಪ ಮಾತನಾಡಿ, ಜಮೀನು ಖರೀದಿ ಮಾಡಲು ನಿಮಗೆ ಆಗದಿದ್ದರೆ ರೈತರಿಗೆ ಅಲೆದಾಡಿಸಿ ಯಾಕೆ ತೊಂದರೆ ನೀಡುತ್ತೀರಿ, ಅವರ ಪಾಡಿಗೆ ಅವರನ್ನು ಬಿಟ್ಟುಬಿಡಿ ಎಂದು ಆಯುಕ್ತರಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ಮಿಟ್ಲಕಟ್ಟೆ ಚಂದ್ರಪ್ಪ, ನರಸಪ್ಪರ ಶಿವಪ್ಪ, ಹನುಮಂತಪ್ಪ, ಜಯ್ಯಪ್ಪ, ದೇವರಾಜ್, ರೇವಣಪ್ಪ, ಮಧುನಾಗರಾಜ್, ಆನಂದಪ್ಪ ಸೇರಿದಂತೆ ರೈತರು ಇದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ | ಮಾಜಿ ಸಚಿವ ಎಚ್ ಎಂ ರೇವಣ್ಣ ನೇತೃತ್ವದಲ್ಲಿ ಕುರುಬ ಸಮಾಜದ ಪೂರ್ವಭಾವಿ ಸಭೆ

ಸುದ್ದಿದಿನ,ದಾವಣಗೆರೆ : ಕುರುಬ ಸಮಾಜದ ಇತಿಹಾಸ ಕುರಿತು ಒಂದು ದಿನದ ಚಿಂತನ ಮಂಥನ ಕಾರ್ಯಾಗಾರವನ್ನು ಹಮ್ಮಿಕೊಳ್ಳಲು ಪೂರ್ವಭಾವಿ ಸಭೆಯನ್ನು ಮಾಜಿ ಸಚಿವ ಎಚ್ ಎಂ ರೇವಣ್ಣ ನೇತೃತ್ವದಲ್ಲಿ ನಡೆಯಿತು.
ದಾವಣಗೆರೆ ನಗರದ ಸರ್ಕ್ಯೂಟ್ ಹೌಸ್ ನಲ್ಲಿ ಇಂದು ನಡೆದ ಕುರುಬ ಸಮುದಾಯದ ಮುಖಂಡರ ಸಭೆ ನಡೆಸಿ ಮಾತನಾಡಿದ ಮಾಜಿ ಸಚಿವ ಹೆಚ್ ಎಂ ರೇವಣ್ಣ, ಕುರುಬ ಸಮಾಜದ ಇತಿಹಾಸ, ಸಂಪ್ರದಾಯ, ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ಸಮಾಜದವರು ನಡೆದುಕೊಂಡು ಬಂದ ದಾರಿ ಕುರಿತ ಕುರುಬರ ಸಾಂಸ್ಕೃತಿಕ ಗ್ರಂಥಗಳನ್ನು ಕುರುಬರ ಸಾಂಸ್ಕೃತಿಕ ಪರಿಷತ್ ಬೆಂಗಳೂರು ಮತ್ತು ದಾವಣಗೆರೆ ಕುರುಬ ಸಮಾಜದ ಎಲ್ಲಾ ಸಂಘಟನೆಗಳು ಸಂಯುಕ್ತಾಶ್ರಯದಲ್ಲಿ ದಾವಣಗೆರೆ ನಗರದಲ್ಲಿ ಬಿಡುಗಡೆ ಕಾರ್ಯಕ್ರಮವನ್ನು ಜೂನ್ 10 ಮತ್ತು 11 ರಂದು ಅಥವಾ 24 ಅಥವಾ 25 ರಂದು ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಈ ಪುಸ್ತಕ ಪ್ರತಿಯೊಬ್ಬ ಕುರುಬ ಸಮಾಜದವರಿಗೆ ತಲುಪುವ ಅವಶ್ಯಕತೆ ಇದೆ. ಈ ಪುಸ್ತಕ ಹಲವು ಸಂಶೋಧಕರ ಶ್ರಮದಿಂದ ಹೊರ ಬಂದಿದೆ. ಇದರಲ್ಲಿ ಸಮಾಜದ ಇತಿಹಾಸ ಪುರುಷರ ಹಾಗೂ ಸಮಾಜದ ಮುಖಂಡರು ಕುರಿತು ಕೂಡ ಮಾಹಿತಿ ಇದೆ. ದಾವಣಗೆರೆ ಜಿಲ್ಲೆಯಲ್ಲಿ ನಡೆದ ಕುರುಬ ಸಮಾಜದ ಐತಿಹಾಸಿಕ ಸಭೆಗಳಿಂದ ರಾಜ್ಯ ಮಟ್ಟದಲ್ಲಿ ಸಮಾಜದ ಮಠ ಆಗಿದೆ, ಸಮಾಜದ ಮುಖಂಡರಾದ ಸಿದ್ದರಾಮಯ್ಯ ಮುಖ್ಯಮಂತ್ರಿ ಆದರೂ ಹೀಗೆ ದಾವಣಗೆರೆಯಲ್ಲಿ ನಡೆದ ಹಲವು ಕಾರ್ಯಕ್ರಮಗಳು ರಾಜ್ಯದ ಇತಿಹಾಸ ಪುಟ ಸೇರಿವೆ ಎಂದು ನೆನಪಿಸಿದ ಮಾಜಿ ಸಚಿವ ರೇವಣ್ಣ ಈ ಕಾರ್ಯಕ್ರಮದ ಜೊತೆ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡಬಾರದು ಎಂಬ ಸುಪ್ರೀಂ ಕೋರ್ಟ್ ಆದೇಶ ಕಳವಳಕಾರಿಯಾಗಿದೆ.
ಈ ಮೀಸಲಾತಿ ಕುರಿತು ಅಂದು ಮಧ್ಯಾಹ್ನ 2 ಗಂಟೆಯಿಂದ ವಿಚಾರ ಸಂಕೀರ್ಣ ಏರ್ಪಡಿಸಲಾಗುವುದು ಈ ಕಾರ್ಯಾಗಾರದಲ್ಲಿ ನಾಡಿನ ವಿಚಾರವಾದಿಗಳು ಭಾಗವಹಿಸುವರು ಈ ಕಾರ್ಯಕ್ರಮದಲ್ಲಿ ವಿದ್ಯಾವಂತರು ವಿಚಾರವಂತವರು ಭಾಗವಹಿಸ ಬೇಕೆಂದರು. ಇದೇ ಸಂಧರ್ಭದಲ್ಲಿ ಮಾತನಾಡಿದ ಹರಿಹರ ಶಾಸಕ ಎಸ್ ರಾಮಪ್ಪ ಕಾರ್ಯಕ್ರಮದಲ್ಲಿ ಜಿಲ್ಲೆಯ ಸಮಾಜದ ಯುವಕರು ಮತ್ತು ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಮತ್ತು ಕಾರ್ಯಕ್ರಮದ ಯಶಸ್ವಿಗೆ ಪ್ರತಿಯೊಬ್ಬರು ಸಹಕರಿಸಬೇಕು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಮಾಜದ ಹಿರಿಯ ಮುಖಂಡ ಬಿ ಎಂ ಸತೀಶ್, ಸಮಾಜದಲ್ಲಿ ಯಾವುದೇ ಶುಭ ಕಾರ್ಯವಾದರೆ ಕುರುಬರಿಂದ ಉದ್ಘಾಟನೆ ಮಾಡಿಸುತ್ತಾರೆ, ಕಾರಣ ಸಮಾಜ ನಡೆದುಕೊಂಡು ಬಂದ ದಾರಿ ಇಂತಹ ವಿಷಯಗಳ ಕುರಿತು ತಿಳಿದುಕೊಳ್ಳುವ ಅವಶ್ಯಕತೆ ಇವತ್ತಿನ ಯುವಕರಿಗೆ ಇದೆ ಎಂದ ಅವರು, ಸ್ಥಳೀಯ ಸಾಹಿತಿಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಬೇಕು ಮತ್ತು ಪ್ರಸ್ತುತ ಎದುರಾಗಿರುವ ಮೀಸಲಾತಿ ಸಮಸ್ಯೆ ಕುರಿತು ಚರ್ಚೆ ಮಾಡುವ ಅವಶ್ಯಕತೆ ಇದೆ ಎಂದ ಅವರು ಸಮಾಜದ ಏಳಿಗೆಗೆ ದಾವಣಗೆರೆಯಲ್ಲಿ ನಡೆದ ಕಾರ್ಯಕ್ರಮಗಳನ್ನು ವಿವರಿಸಿದರು.
ಇದೆ ವೇಳೆ ಸಭೆಯಲ್ಲಿ ನಡೆಯಲಿರುವ ವಿಚಾರ ಸಂಕೀರ್ಣ ಕಾರ್ಯಕ್ರಮಕ್ಕೆ ಸಮಿತಿ ರಚನೆ ಮಾಡಲಾಯಿತು. ಸಮಿತಿಯ ಗೌರವಧ್ಯಕ್ಷರಾಗಿ ಶಾಸಕ ಎಸ್ ರಾಮಪ್ಪ ಅವರನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಸಮಾಜದ ಹಿರಿಯ ಮುಖಂಡ ಬಿ ಎಂ ಸತೀಶ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಎಸ್ ಎಸ್ ಗಿರೀಶ್. ಕಾರ್ಯಾಧ್ಯಕ್ಷರಾಗಿ ಪ್ರೊ. ಯಲ್ಲಪ್ಪ. ಹದಡಿ ಜೆ ಸಿ ನಿಂಗಪ್ಪ. ಉಪಾಧ್ಯಕ್ಷರಾಗಿ ದೇವೇಂದ್ರಪ್ಪ ಕುಣೆಬೆಳಕೆರೆ, ನಂದಿಗಾವಿ ಶ್ರೀನಿವಾಸ್ , ಬಳ್ಳಾರಿ ಷಣ್ಮುಖಪ್ಪ. ಮಾಜಿ ಮೆಯರ್ ಗೋಣೆಪ್ಪ, ರಾಜನಹಳ್ಳಿ ಶಿವಕುಮಾರ್. ಹಾಲೇಕಲ್ ಅರವಿಂದ, ಇಟ್ಟಿಗುಡಿ ಮಂಜುನಾಥ್, ಲಿಂಗರಾಜ್.
ಖಜಾಂಚಿಯಾಗಿ ಡಿ ಡಿ ಹಾಲೇಶಪ್ಪ, ಸಂಘಟನಾ ಕಾರ್ಯದರ್ಶಿಯಾಗಿ ಬಿ ಬಿ ಮಲ್ಲೇಶಪ್ಪ. ಪ್ರಚಾರ ಸಮಿತಿ ಅಧ್ಯಕ್ಷರಾಗಿ ಪ್ರಸನ್ನ ಬೆಳೆಕೆರೆ. ವಿನಯ್ ಜೋಗಪ್ಪನವರ್ ಆಯ್ಕೆಯಾಗಿದ್ದು ಇನ್ನೂ ಉಳಿದ ಪದಾಧಿಕಾರಿಗಳನ್ನು ಮುಂದಿನ ಸಭೆಯಲ್ಲಿ ಸಮಾಜದ ಎಲ್ಲಾ ಸಂಘಟನೆಗಳಿಂದ ಆಯ್ಕೆ ಮಾಡಿಕೊಳ್ಳಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಪ್ರದೇಶ ಕುರುಬ ಸಂಘದ ನಿರ್ದೇಶಕರಾದ ಪಿ ರಾಜಕುಮಾರ್, ರೇವಣ್ಣ.
ಜಿಲ್ಲಾ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಕುಂಬಳೂರು ವಿರೂಪಾಕ್ಷಪ್ಪ, ಅಡಾಣಿ ಸಿದ್ದಪ್ಪ, ಪಿ ಗಂಗಾಧರ್. ವಕೀಲರಾದ ವಸಂತಕುಮಾರ್, ಹದಡಿ ಮಾಹಾಂತೇಶ್, ಹಾಗೂ ಕನಕ ನೌಕರರ ಸಂಘದ ಪದಾಧಿಕಾರಿಗಳಾದ ಗಣೇಶ್ ದಳವಾಯಿ, ಎಸ್ ಎಚ್ ಗುರುಮೂರ್ತಿ. ರಂಗನಾಥ್, ಬೀರೇಂದ್ರ. ಕುಬೇಂದ್ರ. ಸೇರಿದಂತೆ ಸಮಾಜದ ಇತರೆ ಮುಖಂಡರು ಭಾಗವಹಿಸಿದ್ದರು. ಸಭೆ ಆರಂಭದಲ್ಲಿ ಇತ್ತೀಚಿಗೆ ನಿಧನ ಹೊಂದಿದ ದಿವಂಗತ ಚನ್ನಯ್ಯ ಒಡೆಯರ್ ಪತ್ನಿ ಹಾಲಮ್ಮನವರಿಗೆ ಒಂದು ನಿಮಿಷ ಮೌನಾಚರಣೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಇ.ಎನ್ಟಿಸಿ, ಇ.ನ್ಯಾಕ್ ಪ್ರಸ್ತಾವನೆ ಸಲ್ಲಿಸಲು ಅವಧಿ ವಿಸ್ತರಣೆ

ಸುದ್ದಿದಿನ,ದಾವಣಗೆರೆ : ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ವತಿಯಿಂದ ಜಿಲ್ಲೆಯ ಎಲ್ಲಾ ಸರ್ಕಾರಿ/ಅನುದಾನಿತ/ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಗಳಿಂದ 2013-14 ಮತ್ತು 2014-15ನೇ ಸಾಲಿನ ಹಾಗೂ ಹಿಂದಿನ ಸಾಲಿನಲ್ಲಿ ಪ್ರವೇಶ ಪಡೆದು ತರಬೇತಿ ಪಡೆದು ಉತ್ತೀರ್ಣರಾದ e-NTC ಹಾಗೂ ಮೇ.2018ರ ಪರೀಕ್ಷೆಯ ವರೆಗಿನ e-NAC ಗಳನ್ನು ಪಡೆದಿಲ್ಲದಿರುವ ತರಬೇತಿದಾರರ ಪ್ರಸ್ತಾವನೆಯನ್ನು ಸಲ್ಲಿಸಲು ಇದೇ ಮೇ 30 ರವರೆಗೆ ಅವಧಿ ವಿಸ್ತರಿಸಲಾಗಿದೆ ಎಂದು ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ನೋಡಲ್ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ಕ್ರೀಡೆ6 days ago
ಮಧ್ಯಾಹ್ನದ ಪ್ರಮುಖ ಸುದ್ದಿಗಳು
-
ಕ್ರೀಡೆ6 days ago
ಬೆಳಗಿನ ಪ್ರಮುಖ ಸುದ್ದಿಗಳು
-
ದಿನದ ಸುದ್ದಿ6 days ago
ವಿಧಾನ ಪರಿಷತ್ತಿನ 7 ಸ್ಥಾನಗಳಿಗೆ ಜೂನ್ 3ರಂದು ಚುನಾವಣೆ : ಆಯೋಗದಿಂದ ವೇಳಾಪಟ್ಟಿ ಪ್ರಕಟ
-
ಸಿನಿ ಸುದ್ದಿ6 days ago
ವಿದ್ಯುತ್ ಶಾಕ್ ನಿಂದ ಜೂ.ರವಿಚಂದ್ರನ್ ಖ್ಯಾತಿಯ ಲಕ್ಷ್ಮಿನಾರಾಯಣ್ ಸಾವು
-
ನಿತ್ಯ ಭವಿಷ್ಯ7 days ago
ಈ ರಾಶಿಯವರ ನಿಂತಿದ್ದ ಮದುವೆ ವಿಜೃಂಭಣೆಯಿಂದ ಚಾಲನೆ! ಈ ರಾಶಿವರ ಪ್ರೇಮ ವಿಚಾರದಲ್ಲಿ ಏರುಪೇರು ಸಂಭವ! ಮಂಗಳವಾರ ರಾಶಿ ಭವಿಷ್ಯ-ಮೇ-10,2022
-
ದಿನದ ಸುದ್ದಿ7 days ago
ದಕ್ಷತೆ, ಸಮಯ ಬದ್ಧತೆಯಿಂದ ಕಾರ್ಯನಿರ್ವಹಿಸಲು ಜಿಲ್ಲಾ ಪಂಚಾಯತ್ ಸಿಇಒಗಳಿಗೆ ಮುಖ್ಯಮಂತ್ರಿ ಸೂಚನೆ
-
ನಿತ್ಯ ಭವಿಷ್ಯ6 days ago
ಈ ರಾಶಿಯ ನವದಂಪತಿಗಳಿಗೆ ಘರ್ಷಣೆ ಸಾಧ್ಯತೆ! ಈ ರಾಶಿಯ ಉದ್ಯೋಗಿಗಳು ಎದುರಾಳಿಯ ಪಿತೂರಿಗಳು ಎದುರಿಸಬೇಕಾಗುವುದು! ಬುಧವಾರ ರಾಶಿ ಭವಿಷ್ಯ-ಮೇ-11,2022
-
ದಿನದ ಸುದ್ದಿ5 days ago
ಸಮೀಕ್ಷೆ ಆಧಾರದಲ್ಲಿ ಹಿಂದುಳಿದ ವರ್ಗಗಳಿಗೆ ರಾಜಕೀಯ ಮೀಸಲಾತಿ ರೂಪಿಸಿ ; ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಲು ಅವಕಾಶ ಕೊಡಿ : ಸಿಎಂ ಬೊಮ್ಮಾಯಿ ಗೆ ಸಿದ್ದರಾಮಯ್ಯ ಆಗ್ರಹ