ದಿನದ ಸುದ್ದಿ
ಜನಸಾಮಾನ್ಯರ ಗಟ್ಟಿದನಿಯಾಗಿದ್ದ ದೊರೆಸ್ವಾಮಿ

- ಮ ಶ್ರೀ ಮುರಳಿ ಕೃಷ್ಣ, ಬೆಂಗಳೂರು
ಶ್ರೀಯುತ ಹೆಚ್ ಎಸ್ ದೊರೆಸ್ವಾಮಿಯವರು ವಸಾಹತುಶಾಹಿ ಬ್ರಿಟೀಶರ ವಿರುದ್ಧ ಹೋರಾಟ ಮಾಡಿ, ‘ ಭಾರತ ಬಿಟ್ಟು ತೊಲಗಿ’ ಚಳವಳಿಯ ಸಂದರ್ಭದಲ್ಲಿ ಅಂಚೆ ಪೆಟ್ಟಿಗೆಗಳು ಮತ್ತು ರೆಕಾರ್ಡ್ ರೂಂಗಳಲ್ಲಿ ಸಣ್ಣ ಟೈಂಬಾಂಬುಗಳನ್ನು ಇರಿಸಿದ್ದಕ್ಕೆ ಜೈಲುವಾಸವನ್ನು ಅನುಭವಿಸಿದರು. ಆ ಕಾಲದಲ್ಲೇ ಸಮಾಜದ ಅಂಚಿನಲ್ಲಿರುವವರ ಬವಣೆಗಳನ್ನು ಕಂಡು, ಅವರ ಹಿತದಲ್ಲೂ ಕ್ರಿಯಾಶೀಲರಾದರು.
ಕಾರ್ಮಿಕರ ಹೋರಾಟಗಳಲ್ಲೂ ಭಾಗವಹಿಸಿದರು. ತಮ್ಮ ಬೇಡಿಕೆಗಳ ಜೊತೆಗೆ ಕಾರ್ಮಿಕರು ಸ್ವಾತಂತ್ರ್ಯ ಸಂಗ್ರಾಮದಲ್ಲೂ ಪಾಲ್ಗೊಳ್ಳುತ್ತಿದ್ದರು. 1940ರ ದಶಕದಲ್ಲಿ ಕಮ್ಯುನಿಸ್ಟ್ ನಾಯಕರು ಮತ್ತು ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಎನ್ ಡಿ ಶಂಕರ್ ಜೊತೆ ಸೇರಿ ಬೆಂಗಳೂರಿನ ರಾಜಾ, ಮಿನರ್ವ ಮತ್ತು ಬಿನ್ನಿ ಮಿಲ್ ಗಳಲ್ಲಿ 14 ದಿನಗಳ ಮುಷ್ಕರವನ್ನು ಹೂಡುವುದರಲ್ಲಿ ಅವರ ಪಾತ್ರವಿತ್ತು.
ನಂತರ ಬೆಂಗಳೂರಿನಲ್ಲಿ ಒಂದು ಪ್ರಕಾಶನ ಸಂಸ್ಥೆ ಮತ್ತು ‘ಸಾಹಿತ್ಯ ಮಂದಿರ’ ಎಂಬ ಪುಸ್ತಕ ಅಂಗಡಿಯನ್ನು ಪ್ರಾರಂಭಿಸಿದರು. ಕೆಲ ಸಮಯದ ನಂತರ ಮೈಸೂರಿನಿಂದ ಪ್ರಕಟವಾಗುತ್ತಿದ್ದ ‘ಪೌರವಾಣಿ’ ಪತ್ರಿಕೆಯ ಸಂಪಾದಕರಾದರು. ಸ್ವಾತಂತ್ರ್ಯ ಗಳಿಸಿದ ಸಮಯದಲ್ಲಿ ಮೈಸೂರು ಸಂಸ್ಥಾನ ಭಾರತದ ಜೊತೆ ವಿಲೀನವಾಗಲು ಹಿಂದೇಟು ಹಾಕುತ್ತಿದ್ದಾಗ ದೊರೆಸ್ವಾಮಿಯವರು ತಮ್ಮ ಪತ್ರಿಕೆಯಲ್ಲಿ ಅಂದಿನ ಮಹಾರಾಜರ ನಡೆಯನ್ನು ಖಂಡಿಸಿದರು.ಇದಕ್ಕಾಗಿ ಅವರು ಕಿರುಕಳವನ್ನು ಅನುಭವಿಸಬೇಕಾಯಿತು.
ವಿನೋಬ ಭಾವೆಯವರ ಭೂದಾನ ಮತ್ತು ಕರ್ನಾಟಕ ಏಕೀಕರಣ ಚಳವಳಿಗಳಲ್ಲಿ ಸಕ್ರಿಯವಾಗಿ ಭಾಗಬಹಿಸಿರು. ತುರ್ತುಪರಿಸ್ಥಿಯ ಕಾಲದಲ್ಲಿ ಇಂದಿರಾ ಗಾಂಧಿಯವರ ಸರ್ವಾಧಿಕಾರಿ ಧೋರಣೆಯ ವಿರುದ್ಧ ಆಕೆಗೆ ನೇರವಾಗಿ ಪತ್ರವನ್ನು ಬರೆದರು. ಆ ಸಮಯದಲ್ಲಿ ನಾಲ್ಕು ತಿಂಗಳ ಕಾಲ ಬಂದೀಖಾನೆಯ ವಾಸಿಯಾದರು.
ಕಳೆದ ಮೂರು ದಶಕಗಳಲ್ಲಿ ಅವರು ಭಾಗವಹಿಸದೇ ಇರದ ಚಳುವಳಿಗಳು ಇರಲೇ ಇಲ್ಲ ಎಂದರೆ ಅತಿಶಯೋಕ್ತಿಯಾಗುವುದಿಲ್ಲ. ಕನ್ನಡ ಭಾಷೆಯ ಉಳಿವು ಮತ್ತು ಬೆಳವಣಿಗೆ, ಕಸ ವಿಲೇವಾರಿ, ವಸತಿಹೀನರಿಗೆ ಸೂರು, ಭೂಕಬಳಿಕೆ, ಕೊಡಗು ಜಿಲ್ಲೆಯ ಬುಡಕಟ್ಟು ಪ್ರದೇಶಗಳಿಂದ ಆದೀವಾಸಿಗಳ ಸ್ಥಳಾಂತರ, ಸಿಎಎ ಕಾನೂನು, ನೂತನ ಕೃಷಿ ಕಾಯಿದೆಗಳು ಇತ್ಯಾದಿ ಹತ್ತು ಹಲವು ಗಹನ ಹಾಗೂ ಜ್ವಲಂತ ವಿಷಯಗಳ ಬಗೆಗೆ ಮಧ್ಯಪ್ರವೇಶವನ್ನು ಮಾಡಿ , ಅನೇಕ ಸಮಾಜಮುಖಿ ಹೋರಾಟಗಳಲ್ಲಿ ಸಕ್ರಿಯ ಪಾತ್ರವನ್ನು ವಹಿಸಿದರು.
ಬ್ರಿಟೀಶ್ ಸರ್ಕಾರದ ದಮನಕಾರಿ ರೀತಿನೀತಿಗಳ ವಿರುದ್ಧ ಹೋರಾಡಿದಂತೆ ಅವರು ಸ್ವಾತಂತ್ರ್ಯದ ತರುವಾಯ ನಮ್ಮನ್ನು ಆಳಿದ ವಿವಿಧ ಸರ್ಕಾರಗಳ ಜನವಿರೋಧಿ ಕ್ರಮಗಳ ವಿರುದ್ಧ ತಮ್ಮ ದನಿಯನ್ನು ಎತ್ತಿದರು. ನುಡಿದಂತೆ ನಡೆದರು; ಸಾರ್ಥಕ, ಸತ್ವಪೂರ್ಣ ಜೀವನವನ್ನು ನಡೆಸಿದರು. ಅವರಿಗೆ ಗೌರವಪೂರ್ವಕ ನಮನಗಳು.
(ಬರೆದವರು : ಮ ಶ್ರೀ ಮುರಳಿ ಕೃಷ್ಣ
ವಿಳಾಸ : ನಂ 38, 3ನೇ ಕ್ರಾಸ್
ರಾಜಾ ಗಾರ್ಡನಿಯಾ ಲೇಔಟ್
ತುರಹಳ್ಳಿ, ಸುಬ್ರಹ್ಮಣ್ಯಪುರ ಅಂಚೆ
ಬೆಂಗಳೂರು – 560 061
ಜಂಗಮವಾಣಿ :
+919481200960
ಇಮೈಲ್ :
msmurali1961@gmail.com)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಗೆ ದ್ವಿತೀಯ ಸ್ಥಾನದ ಗರಿಮೆ : ಜಿಲ್ಲಾಧಿಕಾರಿ ಶ್ಲಾಘನೆ

ಸುದ್ದಿದಿನ,ಚಿಕ್ಕಬಳ್ಳಾಪುರ : 2021-22 ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.95.23 ರಷ್ಟು ಫಲಿತಾಂಶ ಪಡೆಯುವ ಮೂಲಕ ಚಿಕ್ಕಬಳ್ಳಾಪುರ ಜಿಲ್ಲೆಯು ಶೇಕಡವಾರು ಹೆಚ್ಚು ಫಲಿತಾಂಶ ಪಡೆದ ಜಿಲ್ಲೆಗಳ ಪಟ್ಟಿಯಲ್ಲಿ ರಾಜ್ಯದಲ್ಲಿಯೇ ಎರಡನೇ ಸ್ಥಾನ ಗಳಿಸಿದ ಗರಿಮೆಗೆ ಭಾಜನವಾಗಿದೆ ಎಂದು ಜಿಲ್ಲಾಧಿಕಾರಿ ಆರ್.ಲತಾ ಅವರು ತಿಳಿಸಿದ್ದಾರೆ.
ಜಿಲ್ಲೆಯ ಎಸ್ಸೆಸ್ಸೆಲ್ಸಿ ಉತ್ತಮ ಫಲಿತಾಂಶದ ಸಾಧನೆ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಅವರು. ಈ ಬಾರಿ ಜಿಲ್ಲೆಯಲ್ಲಿ 15,817 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಈ ಪೈಕಿ 15,063 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ರಾಜ್ಯ ಮಟ್ಟದಲ್ಲಿ “ಎ” ಗ್ರೇಡ್ ಪಡೆದಿದೆ. 5 ವಿದ್ಯಾರ್ಥಿಗಳು 625 ಅಂಕಗಳಿಗೆ 625 ಅಂಕಗಳನ್ನು ಪಡೆದಿದ್ದಾರೆ. ಉತ್ತೀರ್ಣರಾದ 15,063 ವಿದ್ಯಾರ್ಥಿಗಳ ಪೈಕಿ 7,572 ಬಾಲಕಿಯರು ಉತ್ತೀರ್ಣರಾಗುವ ಮೂಲಕ ಮೇಲುಗೈ ಸಾಧಿಸಿ, ಶೇ.96.48ರಷ್ಟು ಫಲಿತಾಂಶ ಗಳಿಸಿದ್ದಾರೆ. 7,491 ಬಾಲಕರು ಉತ್ತೀರ್ಣರಾಗಿದ್ದು, ಶೇ.94 ರಷ್ಟು ಫಲಿತಾಂಶ ಗಳಿಸಿದ್ದಾರೆ. ಸರ್ಕಾರಿ ಶಾಲೆಗಳು ಒಟ್ಟು ಶೇ.93.77, ಅನುದಾನಿತ ಶಾಲೆಗಳು ಶೇ.93.68 ಮತ್ತು ಅನುದಾನರಹಿತ ಶಾಲೆಗಳು ಶೇ.97.95ರಷ್ಟು ಫಲಿತಾಂಶವನ್ನು ಪಡೆದಿವೆ ಎಂದು ತಿಳಿಸಿದರು.
ಕೊಂಚ ಹಿನ್ನಡೆಯಿಂದ ಕೈ ತಪ್ಪಿದ 1ನೇ ಸ್ಥಾನ
2019-20ನೇ ಸಾಲಿನ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ಗಳಿಸಿ ಮೊಟ್ಟ ಮೊದಲ ಬಾರಿಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಮಟ್ಟಿಗೆ ಐತಿಹಾಸಿಕ ದಾಖಲೆಯಾಗಿತ್ತು. 2020-21ನೇ ಸಾಲಿನಲ್ಲಿ 625 ಅಂಕಗಳಿಗೆ 625 ಅಂಕಗಳನ್ನೂ ಪಡೆದ ರಾಜ್ಯದ 157 ವಿದ್ಯಾರ್ಥಿಗಳ ಪೈಕಿ ಜಿಲ್ಲೆಯ 30 ವಿದ್ಯಾರ್ಥಿಗಳು ಸ್ಥಾನ ಕಾಯ್ದುಕೊಂಡು ಇಡೀ ರಾಜ್ಯದಲ್ಲಿ ನೂರಕ್ಕೆ ನೂರು ಅಂಕಗಳನ್ನು ಪಡೆದ ಅತಿ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿರುವ ಜಿಲ್ಲೆಯಾಗಿ ಹೊರಹೊಮ್ಮಿತ್ತು.
ರಾಜ್ಯಮಟ್ಟದಲ್ಲಿ ಕಳೆದ ಎರಡು ಬಾರಿಯು ಅತ್ಯುತ್ತಮ ಸಾಧನೆ ಮಾಡಿ ಹೊಸ ದಾಖಲೆಯನ್ನು ಬರೆಯುವ ಮೂಲಕ ಜಿಲ್ಲೆಯ ಶೈಕ್ಷಣಿಕ ಪ್ರಗತಿಯ ಮುನ್ನೋಟಕ್ಕೆ ದಿಕ್ಸೂಚಿಯಾಗಿತ್ತು. ಈ ಬಾರಿಯೂ ಪ್ರಥಮ ಸ್ಥಾನವನ್ನು ಪಡೆಯುವಲ್ಲಿ ಕೊಂಚ ಪ್ರಮಾಣ (ಶೇ.0.37) ದಲ್ಲಿ ಹಿನ್ನಡೆಯಾಗಿ ಕೈತಪ್ಪಿದ್ದರೂ ಸಹ ದ್ವಿತೀಯ ಸ್ಥಾನಕ್ಕೆ ಪಾತ್ರವಾಗಿರುವುದು ಹರ್ಷ ಉಂಟು ಮಾಡಿದೆ ಎಂದರು.
ಶುಭ ಹಾರೈಕೆ
ಕಳೆದ ಮೂರು ವರ್ಷಗಳಿಂದ ಎಸ್.ಎಸ್.ಎಲ್.ಸಿ ಫಲಿತಾಂಶದಲ್ಲಿ ಮಹತ್ತರ ಬದಲಾವಣೆಯಾಗಿರುವುದಕ್ಕೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಹಕಾರ ನೀಡಿದ ಜಿಲ್ಲೆಯ ಸಮಸ್ತ ಜನತೆಗೆ, ಜನಪ್ರತಿನಿಧಿಗಳಿಗೆ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾಡಳಿತದ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಕೃತಜ್ಞತೆ ತಿಳಿಸಿದರು ಹಾಗೂ ಉತ್ತೀರ್ಣರಾಗಿರುವ ಎಲ್ಲಾ ವಿದ್ಯಾರ್ಥಿಗಳು ಉನ್ನತ ಶಿಕ್ಷಣವನ್ನು ಪಡೆಯುವತ್ತ ಗಮನ ಹರಿಸಿ ಉತ್ತಮ ಭವಿಷ್ಯವನ್ನು ಕಟ್ಟಿಕೊಳ್ಳಬೇಕು ಎಂದು ಸಾಧಕ ವಿದ್ಯಾರ್ಥಿಗಳಿಗೆ ಜಿಲ್ಲಾಧಿಕಾರಿಗಳು ಶುಭ ಹಾರೈಸಿದ್ದಾರೆ.
ತಾಲ್ಲೂಕುವಾರು ಫಲಿತಾಂಶ
ಗುಡಿಬಂಡೆ ತಾಲೂಕು ಶೇ.99.20 ಫಲಿತಾಂಶ ಗಳಿಸಿ ಪ್ರಥಮ ಸ್ಥಾನ ಪಡೆದುಕೊಂಡಿದ್ದು, ಶಿಡ್ಲಘಟ್ಟ ತಾಲೂಕು ಶೇ.97.06 ರಷ್ಟು ದ್ವಿತೀಯ ಸ್ಥಾನ ಪಡೆದುಕೊಂಡಿದೆ ನಂತರದ ಸ್ಥಾನಗಳನ್ನು ಚಿಕ್ಕಬಳ್ಳಾಪುರ, ಬಾಗೇಪಲ್ಲಿ, ಚಿಂತಾಮಣಿ ಮತ್ತು ಗೌರಿಬಿದನೂರು ತಾಲೂಕುಗಳು ಪಡೆದುಕೊಂಡಿವೆ.
ಜಿಲ್ಲಾಡಳಿತ ಹಲವು ರಚನಾತ್ಮಕ ಕ್ರಮಗಳನ್ನು ಕೈಗೊಳ್ಳುವ ಮೂಲಕ ಸಾರ್ವಜನಿಕ ಶಿಕ್ಷಣ ಇಲಾಖೆಗೆ ಕಾಲ ಕಾಲಕ್ಕೆ ಸೂಕ್ತ ಮಾರ್ಗದರ್ಶನ ಮತ್ತು ಸೂಚನೆಗಳನ್ನು ನೀಡಿತ್ತು. ಅಲ್ಲದೇ ಜಿಲ್ಲೆಯ ಎಲ್ಲಾ ಶಿಕ್ಷಕರಿಗೂ ವಿಶೇಷ ಕಾರ್ಯಾಗಾರಗಳನ್ನು ಹಮ್ಮಿಕೊಂಡಿತ್ತು. ವಿದ್ಯಾರ್ಥಿಗಳಿಗೆ ಗುಣಮಟ್ಟದ ಬೋಧನೆಯೊಂದಿಗೆ ಆತ್ಮಸ್ಥೈರ್ಯವನ್ನೂ ತುಂಬುವ ಕೆಲಸವನ್ನು ಆಗಾಗ್ಗೆ ಶಿಕ್ಷಕರು ಮತ್ತು ಅಧಿಕಾರಿಗಳ ಮುಖಾಂತರ ಮಾಡಲಾಗಿತ್ತು.
ಮಕ್ಕಳ ಜೊತೆಗೆ ನಿರಂತರ ಸಂಪರ್ಕವನ್ನು ಇಟ್ಟುಕೊಂಡು ಎಲ್ಲಿಯೂ ಕಲಿಕಾ ಪ್ರಕ್ರಿಯೆ ಮತ್ತು ಪರೀಕ್ಷಾ ಸಿದ್ದತೆಗಳು ಕಡಿತಗೊಳ್ಳದಂತೆ ನಿಗಾ ವಹಿಸಲಾಗಿತ್ತು. ಗುಣಾತ್ಮಕ ಬೋಧನೆ, ವಾರದ ಮತ್ತು ಮಾಸಿಕ ಪರೀಕ್ಷೆ, ಬಹು ಆಯ್ಕೆ ಪ್ರಶ್ನೆಗಳುಳ್ಳ ಮಾದರಿ ಪರೀಕ್ಷೆ ಆಯೋಜನೆ, ಪಠ್ಯಾಧಾರಿತ ರಸಪ್ರಶ್ನೆ ಸ್ಪರ್ಧೆಗಳು ಮತ್ತು ಪೂರ್ವ ಸಿದ್ದತಾ ಪರೀಕ್ಷೆಗಳು ಹಾಗೂ ವಿಶೇಷ ಆಸಕ್ತಿವಹಿಸಿ ಜಿಲ್ಲಾಡಳಿತವೇ ಸರಳೀಕರಿಸಿ ಸಿದ್ಧಪಡಿಸಿದ ಪ್ರಶ್ನೋತ್ತರ ಸಾಮಗ್ರಿ (ಸ್ಟಡಿ ಮೆಟೇರಿಯಲ್) ವಿತರಣೆ ಸೇರಿದಂತೆ ಈ ಎಲ್ಲಾ ಪೂರ್ವ ಸಿದ್ಧತಾ ಕ್ರಮಗಳು ಹಾಗೂ ವಿದ್ಯಾರ್ಥಿಗಳಿಗೆ ನೀಡಿದ ಪ್ರೋತ್ಸಾಹದ ಫಲವಾಗಿ ಈ ಬಾರಿ ರಾಜ್ಯಮಟ್ಟದಲ್ಲಿ ದ್ವಿತೀಯ ಸ್ಥಾನ ಫಲಿತಾಂಶ ಜಿಲ್ಲೆಗೆ ಬರಲು ಸಾಧ್ಯವಾಗಿರುವುದು ಹೆಮ್ಮೆಯ ವಿಚಾರ ಎಂದರು.
ಪರೀಕ್ಷೆ ಬರೆದ ಜಿಲ್ಲೆಯ ವಿದ್ಯಾರ್ಥಿಗಳ ಪೈಕಿ 3,506 ವಿದ್ಯಾರ್ಥಿಗಳು ಎ.ಪ್ಲಸ್ ಗ್ರೇಡ್, 4,638 ವಿದ್ಯಾರ್ಥಿಗಳು ‘ಎ’ಗ್ರೇಡ್, 3,589 ವಿದ್ಯಾರ್ಥಿಗಳು ‘ಬಿ’ ಪ್ಲಸ್ ಗ್ರೇಡ್, 2,223 ವಿದ್ಯಾರ್ಥಿಗಳು ‘ಬಿ’ ಗ್ರೇಡ್, 996 ವಿದ್ಯಾರ್ಥಿಗಳು ‘ಸಿ’ ಪ್ಲಸ್ ಗ್ರೇಡ್ ಹಾಗೂ 111 ವಿದ್ಯಾರ್ಥಿಗಳು ‘ಸಿ’ ಗ್ರೇಡ್ ಪಡೆದಿರುತ್ತಾರೆ. ಒಟ್ಟಾರೆಯಾಗಿ ಜಿಲ್ಲೆಗೆ ಶೇ.95.23 ರಷ್ಟು ಫಲಿತಾಂಶ ಬಂದಿದೆ ಎಂದು ಜಿಲ್ಲಾಧಿಕಾರಿ ಆರ್.ಲತಾ ಅವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
11 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನು : ಸಚಿವ ಬಿ.ಸಿ.ಪಾಟೀಲ್

ಸುದ್ದಿದಿನ, ದಾವಣಗೆರೆ : ದೇಶದ ರೈತರ ಅನುಕೂಲಕ್ಕಾಗಿ ಕೇಂದ್ರ, ರಸಗೊಬ್ಬರಗಳಿಗೆ 2ಲಕ್ಷದ 39 ಸಾವಿರ ಕೋಟಿ ರೂಪಾಯಿ ಸಹಾಯಧನ ನೀಡುತ್ತಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.
ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನಲ್ಲಿ ಹಾನಿಗೊಳಗಾದ ಜಮೀನುಗಳಿಗೆ ಭೇಟಿ ನೀಡಿ, ಬೆಳೆಗಳನ್ನು ವೀಕ್ಷಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಚೀಲ ಡಿಎಪಿ ಬೆಲೆ 3 ಸಾವಿರದ 851ರೂಪಾಯಿ ಇದ್ದು, ರೈತರಿಗೆ ಕೇವಲ 1 ಸಾವಿರದ 361 ರೂಪಾಯಿಗೆ ಮಾರಾಟ ಮಾಡುವ ಮೂಲಕ 2ಸಾವಿರದ 501ರೂಪಾಯಿ ಸಹಾಯಧನ ನೀಡುತ್ತಿದೆ ಎಂದರು.
ಚಿತ್ರದುರ್ಗದಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳ ಮತ್ತೊಂದು ಸಭೆಯಲ್ಲಿ ಮಾತನಾಡಿದ ಸಚಿವರು, ರಾಜ್ಯದಲ್ಲಿ 11 ಲಕ್ಷಕ್ಕೂ ಹೆಚ್ಚು ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನಿದೆ. ಮಳೆಯಿಂದ ಚಿತ್ರದುರ್ಗ ಜಿಲ್ಲೆಯಲ್ಲಿ 240ಹೆಕ್ಟೇರ್ ತೋಟಗಾರಿಕೆ ಬೆಳೆ 40 ಹೆಕ್ಟೇರ್ ಕೃಷಿಬೆಳೆಗೆ ಹಾನಿಯಾಗಿದೆ ಎಂದು ಸಚಿವ ಬಿ.ಸಿ. ಪಾಟೀಲ್ ಹೇಳಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ರಾಜ್ಯದಲ್ಲಿ ಮುಂದುವರಿದ ಮಳೆ : ಅಪಾರ ನಷ್ಟ

ಸುದ್ದಿದಿನ ಡೆಸ್ಕ್ : ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಇಂದೂ ಸಹ ಮಳೆ ಅಬ್ಬರ ಮುಂದುವರಿದಿದ್ದು, ಜನಜೀವನ ತತ್ತರಗೊಂಡಿದೆ. ಸಾವಿರಾರು ಎಕರೆ ಪ್ರದೇಶದಲ್ಲಿನ ವಿವಿಧ ಬೆಳೆಗಳಿಗೆ ಹಾನಿಯಾಗಿದೆ.
ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನಲ್ಲಿ ಮಳೆಯಿಂದ ಆದ ಹಾನಿ ಪ್ರದೇಶಗಳಿಗೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕುಂದೂರು ಜಿಲ್ಲಾ ಪಂಚಾಯತಿ ವ್ಯಾಪ್ತಿಯಲ್ಲಿ 2 ಸಾವಿರಕ್ಕೂ ಅಧಿಕ ಎಕರೆ ಪ್ರದೇಶದಲ್ಲಿ ಭತ್ತದ ಬೆಳೆ ಹಾನಿಯಾಗಿದೆ. ಈ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸುವುದಾಗಿ ತಿಳಿಸಿದರು.
ಬಾಗಲಕೋಟೆ ಜಿಲ್ಲೆಯಲ್ಲಿ ಇದೇ 17ರಿಂದ 19 ರವರೆಗೆ ಹೆಚ್ಚಿನ ಮಳೆಯಾಗಿದ್ದು, ಜಿಲ್ಲೆಯಲ್ಲಿ 114 ಮನೆಗಳು ಭಾಗಶಃ ಹಾನಿಗೆ ಒಳಗಾಗಿವೆ ಎಂದು ಜಿಲ್ಲಾಧಿಕಾರಿ ಟಿ.ಬೂಬಾಲನ್ ತಿಳಿಸಿದ್ದಾರೆ.
ಸಿಡಿಲು ಬಡಿದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಮಳೆಯಿಂದ ವ್ಯಾಪಕ ತೋಟಗಾರಿಕೆ ಬೆಳೆಗಳಿಗೆ ಹಾನಿಯಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಉತ್ತರಕನ್ನಡ ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಅಕಾಲಿಕ ಮಳೆಯಿಂದ ಸಾರ್ವಜನಿಕ ಆಸ್ತಿ-ಪಾಸ್ತಿಗೆ ವ್ಯಾಪಕ ಹಾನಿಯಾಗಿದೆ.
354 ವಿದ್ಯುತ್ ಕಂಬಗಳು,45ಟ್ರಾನ್ಸ್ ಫಾರ್ಮರ್ಗಳಿಗೆ ಹಾನಿಯಾಗಿದೆ. ಮುಂಡಗೋಡ, ಕುಮಟ, ಯಲ್ಲಾಪುರದಲ್ಲಿ ಹಲವಾರು ಮನೆಗಳು ಜಝಂಗೊಂಡಿವೆ. ಸಿಡಿಲಿನಿಂದ 6ಜಾನುವಾರುಗಳು ಮೃತಪಟ್ಟಿವೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ನಿತ್ಯ ಭವಿಷ್ಯ7 days ago
ಇಂದಿನಿಂದಲೇ ಈ ರಾಶಿಗಳಿಗೆ ಧನ ಲಾಭ, ಸುಖ ಸಂಪತ್ತು ಪ್ರಾಪ್ತಿ! ಶನಿವಾರ ರಾಶಿ ಭವಿಷ್ಯ-ಮೇ-14,2022
-
ಅಂತರಂಗ7 days ago
ರಾಜ್ಯದ ಗಡಿಯಿಂದ ದೇಶದ ಗಡಿಗೆ ಪ್ರವಾಸದ ಕ್ಷಣಗಳು..!
-
ಬಹಿರಂಗ4 days ago
ಡಾಕಿನಿ ಎಂದರೆ ಬೌದ್ಧ ಭಿಕ್ಕುಣಿ / ಬೌದ್ಧ ಯೋಗಿಣಿ
-
ನೆಲದನಿ5 days ago
ಕಾಯಕ ಜೀವಿಗಳ ಚಳುವಳಿಯಲ್ಲಿ ಬುದ್ಧಪ್ರಜ್ಞೆ
-
ಬಹಿರಂಗ5 days ago
ದಯೆಯಾಗಿ ಚಳುವಳಿ ಕೈಗೊಂಡ ಮಹಾ ಜ್ಞಾನಿ ಬುದ್ಧ
-
ನಿತ್ಯ ಭವಿಷ್ಯ5 days ago
ಸೋಮವಾರ- ರಾಶಿ ಭವಿಷ್ಯ ಮೇ-16,2022 : ಈ ಚಂದ್ರ ಗ್ರಹಣದಿಂದಾಗಿ ಈ ರಾಶಿಗಳಿಗೆ ಸಂತೋಷವೇ ಸಂತೋಷ!
-
ನಿತ್ಯ ಭವಿಷ್ಯ6 days ago
ಭಾನುವಾರ- ರಾಶಿ ಭವಿಷ್ಯ ಮೇ-15,2022
-
ದಿನದ ಸುದ್ದಿ4 days ago
ಪರಿಶಿಷ್ಟ ಜಾತಿ ಕಾನೂನು ಪದವೀಧರರಿಗೆ ಶಿಷ್ಯ ವೇತನಕ್ಕೆ ಅರ್ಜಿ ಆಹ್ವಾನ