Connect with us

ಸಿನಿ ಸುದ್ದಿ

ಭೀಮ ಪರಂಬರೈ ಹಾಗೂ ಕಬಿಲನ್ ರಂಜಿತ್..!

Published

on

  • ಬಸವರಾಜು ಕಹಳೆ

Float like a butterfly, sting like a bee”
Muhammad Ali

ಗಾಯಗೊಂಡಿದ್ದು ನಿನ್ನ ಮೈಯಷ್ಟೇ, ನಿನ್ನ ಮನಸ್ಸಲ್ಲ.”

ಇಲ್ಲಿ ನಮ್ಮಂಥವರಿಗೆ ಅವಕಾಶ ಸುಲಭವಾಗಿ ಬರುವುದಿಲ್ಲ. ಈ ಆಟ ನಮ್ಮದು. ಎದುರು ಬರುವವನ ಚಡ್ಡಿ ಒದ್ದೆಯಾಗಬೇಕು. ಮುನ್ನುಗು ಕಬಿಲನ್ ಈ ಕಾಲ ನಮ್ಮದು”
ಇಂಥದ್ದೊಂದು ಡೈಲಾಗ್ ಕಿವಿಗೆ ಬೀಳುತ್ತಿರುವಾಗಲೇ ಸೀನ್ ಮಧ್ಯೆ ಬಾಬಾ ಸಾಹೇಬರ ಭಾವಚಿತ್ರ ಎದ್ದು ಕಾಣುತ್ತದೆ. ಹೀಗೆ ಸಿನಿಮಾದ ಉದ್ಧಕ್ಕೂ ಆಗೊಮ್ಮೆ ಈಗೊಮ್ಮೆ ಬುದ್ಧ, ಭೀಮರು ಎದ್ದು ಕಾಣುತ್ತಾರೆ.

ಕೊಳಗೇರಿಯ ಗುಡಿಸಲುಗಳ ಮಧ್ಯೆ ಬುದ್ಧನ ವಿಗ್ರಹದ ಪಕ್ಕದಲ್ಲೇ ಬಾಕ್ಸಿಂಗ್ ಪ್ರಾಕ್ಟೀಸ್ ಮಾಡುವ ಸನ್ನಿವೇಶ ವಿಶಿಷ್ಟ ಪ್ರತಿಮೆಯಂತೆ ಕಾಣುತ್ತದೆ. ನವ ವಧು ವರರ ಕೈಗೆ ಉಡುಗೊರೆಯಾಗಿ ಬುದ್ಧ, ಭೀಮರ ಫೋಟೋ ಕೊಡುವ ದೃಶ್ಯ ಎದೆಗೂಡಲ್ಲಿ ಸರಪಟಾಕಿ ಹಚ್ಚುತ್ತದೆ. ದ್ರಾವಿಡ ಸ್ವಾಭಿಮಾನದ ಕಪ್ಪು ಪತಾಕೆಯನ್ನು ಬಿಳಿ ಮುಗಿಲಿನಲ್ಲಿ ಹಾರಿಸಿದ ಪೆರಿಯಾರ್ ಕಂಡಾಗಲೂ ಹುಚ್ಚೆದ್ದು ಕುಣಿಯುವ ಉತ್ಸಾಹ ಮೂಡುತ್ತದೆ

ಅಣ್ಣ ಪಾ.ರಂಜಿತ್ ಸಿನಿಮಾ ಅನ್ನೋ ಬಾಕ್ಸಿಂಗ್ ರಿಂಗ್​ನಲ್ಲಿ ಎದುರಾಳಿಗೆ ತಿಕ ಮಕ ನೋಡದೇ ಯಕ್ಕಾಮಕ್ಕಾ ಗುದ್ದಿ ಕೆಡವಿ ಭೀಮ ಪರಂಪರೆಯ ತಾಕತ್ತು ಎಂಥದ್ದು ಅನ್ನೋದನ್ನ ತೋರಿಸಿದ್ದಾರೆ. ಸರ್ಪಟ್ಟ ಪರಂಬರೈ ಸಿನಿಮಾ ನನ್ನ ಕಣ್ಣಿಗೆ ಒಂದೇ ಗುಕ್ಕಿನಲ್ಲಿ ಕಾಣಿಸಿದ್ದು ಹೀಗೆ. ಇಲ್ಲಿ ನನಗೆ ಕಂಡಿದ್ದು ಸರ್ಪಟ್ಟ ಅನ್ನೋ ನಾಲ್ಕು ಪಟ್ಟದ ಕತ್ತಿಗಳ ಕಥೆಯಲ್ಲ. ವರ್ಣಾಶ್ರಮದ ನಾಲ್ಕು ವರ್ಗಗಳ ಪೈಕಿ ಕೊನೆಯ ಶೂದ್ರ ಪರಂಪರೆ ಗೆದ್ದ, ಗೆಲ್ಲುತ್ತಿರುವ, ಗೆಲ್ಲಬೇಕಿರುವ ಕಥೆಯಂತೆ ಕಾಣುತ್ತದೆ.

ಕಬಿಲನ್ (ಆರ್ಯ) ನನಗೆ ಬರೀ ಪಾತ್ರದಂತೆ ಕಾಣುವುದಿಲ್ಲ. ಜಾತಕ ಕಥೆಗಳು ಹೇಳುವಂತೆ ಬುದ್ಧನ ಮತ್ತೊಂದು ಅವತಾರವೇ ಆದ ಕಪಿಲನೇ ಕಬಿಲನ್ ಅನಿಸುತ್ತದೆ. ಇಬ್ಬರೂ ನಿರೀಶ್ವರವಾದವನ್ನೇ ಸಾರಿದ್ದವರು. ಸಿನಿಮಾದಲ್ಲಿ ಕಬಿಲನ್ ಸಿದ್ಧಾರ್ಥನಂತೆಯೂ ಕಾಣುತ್ತಾನೆ. ಅಣ್ಣ ಪಾ.ರಂಜಿತ್ ಎಲ್ಲಾ ಸಿನಿಮಾಗೂ ಹಾಡುಗಳನ್ನು ಬರೆದುಕೊಟ್ಟ ಕವಿ ಕಬಿಲನ್ ಪ್ರೇರಣೆಯಿಂದ ಹುಟ್ಟಿದ ವ್ಯಕ್ತಿತ್ವದಂತೆ ಕಾಣುತ್ತದೆ. ಆರ್ಯನನ್ನು ಮೊದಲು ನೋಡಿದ್ದು ಆ್ಯಟ್ಲಿಯ ರಾಜರಾಣಿಯಲ್ಲೇ. ಆ ಬಳಿಕ ಮದರಾಸಿಪಟ್ಟಿನಂ ನೋಡಿದ್ದೇವೆ. ಈ ಎರಡೂ ಸಿನಿಮಾಗಳಿಗಿಂತಲೂ ಕಬಿಲನ್ ಆಗಿ ಜೀವ ತುಂಬುವ ಕೆಲಸ ಮಾಡಿದ್ದಾನೆ ಆರ್ಯ.

ಪಶುಪತಿ ರಂಗನ್ ವಾತಿಯರ್, ಬೀಡಿ ತಾತ, ವೆಂಬುಲಿ, ಡ್ಯಾಡಿ, ಡ್ಯಾನ್ಸಿಂಗ್ ರೋಸಿ ಈ ಎಲ್ಲಾ ಪಾತ್ರಗಳಿಗಿಂತಲೂ ಹೆಚ್ಚು ನನ್ನನ್ನು ಆಕರ್ಷಿಸಿದ್ದು ಎರಡೇ ಎರಡು ಪಾತ್ರ. ಆ ಪಾತ್ರಗಳೇ ಮರಿಯಮ್ಮ ಹಾಗೂ ಬಾಕ್ಯಮ್ಮ. ವಿಶೇಷ ಅಂದ್ರೆ 60 ಸೆಕೆಂಡ್ ಕಾಲ ಬಂದು ಹೋಗುವ ನಮ್ಮ ಕನ್ನಡಿಗ ಕಿಶೋರ್​ಗಿಂತಲೂ ಮರಿಯಮ್ಮ ಹಾಗೂ ಭಾಕ್ಯಮ್ಮ ಪಾತ್ರಗಳು ಈ ಸರ್ಪಟ್ಟ ಪರಂಪರೆಯನ್ನು ಎಳೆದೊಯ್ದ ಸ್ವಾಭಿಮಾನದ ಸೀರೆಯುಟ್ಟ ಕುಸ್ತಿ ಪಟು​ಗಳಂತೆ ಕಾಣುತ್ತಾರೆ.

ಒಬ್ಬಳು ಪುಟ್ಟ ಮಗನೊಂದಿಗೆ ಗಂಡನನ್ನು ಉಳಿಸಿಕೊಳ್ಳೋದಕ್ಕೆ ಸಾಹಸಪಡುವ ಹೆಣ್ಣು ಹುಲಿಯಂತೆ ಕಾಣುತ್ತಾಳೆ. ಮತ್ತೊಬ್ಬಳು ಕುಡಿದು ಮಲಗಿದ ಗಂಡನನ್ನು ಕಾಪಾಡೋದಕ್ಕೆ ಹಸುಗೂಸಿನೊಂದಿಗೆ ಬಗೆದು ಹಾಕುವ ಬಾಣಂತಿ ಹುಲಿಯಂತೆ ಗೆಬರುತ್ತಾಳೆ, ಅಬ್ಬರಿಸುತ್ತಾಳೆ. ರಂಜಿತ್ ಅಣ್ಣನ ಸಿನಿಮಾಗಳಲ್ಲಿ ಇಂಥಾ ಪವರ್​​ಫುಲ್ ಪಾತ್ರಗಳು ಪ್ರತೀ ಸಿನಿಮಾದಲ್ಲೂ ನೋಡಬಹುದು. ಕಬಾಲಿಯ ಕುಮುದವಲ್ಲಿ, ಕಾಲಾನ ಸೆಲ್ವಿ, ಜರೀನಾರಿಗಿಂತಲೂ ಪವರ್​ಫುಲ್ ಪಾತ್ರಗಳು ಮರಿಯಮ್ಮ ಹಾಗೂ ಬಾಕ್ಯಮ್ಮ. ಕಮ್ಮನೆಯ ಕಪ್ಪು ಸಂಸ್ಕೃತಿಯ ಸಣ್ಣ ತುಣುಕಿನಂತೆ ದುಷಾರ ವಿಜಯನ್ ಮರಿಯಮ್ಮನಾಗಿ ಕಾಣುತ್ತಾಳೆ.

“ಅವಕಾಶ ನಮಗಾಗಿ ಬರೋದಿಲ್ಲ. ಅವಕಾಶವನ್ನು ನಾವೇ ಹುಡುಕುತ್ತಾ ಹೋಗಬೇಕು. ಅದನ್ನು ಮನಸ್ಸಿನಲ್ಲಿ ಇಟ್ಟುಕೋ ಗೆಲುವು ನಿನ್ನದೇ. ಹೋಗಪ್ಪಾ ಹೋಗು” ಎನ್ನುವಾಗ ಬೀಡಿ ತಾತನ ಎದುರಿಗೆ ನಿಂತ ಕಬಿಲನ್ ಮಧ್ಯೆ ಮಹಾಸಮುದ್ರ ರಣಕೇಕೆ ಹಾಕುತ್ತಿರುತ್ತದೆ. ಕಡುಗತ್ತಲಿನಲ್ಲಿ ಟೈಟಲ್ ಕಾರ್ಡ್​ನಲ್ಲಿ ಓಡುತ್ತಾ ಸಾಗುವ ನೆತ್ತರುಂಡ ಅಕ್ಷರಗಳು. ಅಲ್ಲಲ್ಲಿ ಕತ್ತಲ ಸೀರೆಯುಡಿಸಿ ತೆಗೆದ ಸೀನ್​ಗಳು ಮತ್ತೊಮ್ಮೆ ಸರ್ಪಟ್ಟ ಪರಂಪರೆಯನ್ನು ನೋಡಬೇಕಿನಿಸುತ್ತದೆ.

My films are an extension of my ideology ಎನ್ನುವ ಪಾ. ರಂಜಿತ್ ಆಡಿದ ಮಾತಿನ ಪ್ರತೀ ಅಕ್ಷರ ಒಂದೊಂದು ಸೀನ್​​ನಲ್ಲಿ ಕಾಣುತ್ತದೆ. ಇಲ್ಲಿ ಐಡಿಯಾಲಜಿ ಅನ್ನೋ ದೊಡ್ಡ ಶಬ್ಧ ಅರ್ಥವಾಗದ ಮಂತ್ರದಂತೆ ಕೇಳಿಸೋದೂ ಇಲ್ಲ. ಕಾಣಿಸೋದೂ ಇಲ್ಲ. ಬದಲಿಗೆ ತಮಟೆಯ ಏಟಿನಂತೆ, ಜೇನ್ನೊಣದ ಕುಟುಕಿನಂತೆ ಅನುಭವಿಸಬಹುದು. ಮೊಲದ ಬಾಡು, ದನದ ಬಾಡು ತಿಂದಷ್ಟೇ ಖುಷಿಯಾಗುತ್ತದೆ.

ಬ್ರಿಟಿಷರು ಕಲಿಸಿ ಹೋದ ಬಾಕ್ಸಿಂಗ್ ನಲ್ಲಿ ಹೆಚ್ಚುಗಾರಿಕೆಯ ಪರಂಪರೆಗಾಗಿ ನಡೆಯುವ ಕಾದಾಟದ ಕಥೆ ಎಂದು ಸುಲಭಕ್ಕೆ ಹೇಳಬಹುದಾದ ಸಿನಿಮಾವನ್ನು ಎದೆಗಣ್ಣಿನಿಂದ ನೋಡಬೇಕಷ್ಟೇ. ರಂಗನ್ ವಾತಿಯರ್ ಹೇಳುವಂತೆ, “ನಿಮಗಿಂತ ಗಂಡ್ಸು ಇಲ್ಲಿ ಯಾರೂ ಇಲ್ಲ ಅನ್ನೋದನ್ನ ಸದಾ ತಲೆಯಲ್ಲಿ ಇಟ್ಟುಕೊಂಡಿರಬೇಕು”. ಎಂದಿನಂತೆ ಕ್ಯಾಮರಾ ವರ್ಕ್, ಮ್ಯೂಸಿಕ್ ಚೆನ್ನಾಗಿದೆ. ಕಿಶೋರ್​ ಅವರನ್ನು ಇನ್ನೂ ಚೆನ್ನಾಗಿ ಬಳಸಿಕೊಳ್ಳಬಹುದಿತ್ತು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಕ್ರೀಡೆ

ಬೆಳಗಿನ ಪ್ರಮುಖ ಸುದ್ದಿಗಳು

Published

on

ಬೆಳಗಿನ ಪ್ರಮುಖ ಸುದ್ದಿಗಳು

  1. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಚಿಕ್ಕಮಗಳೂರು ಜಿಲ್ಲಾ ಭೇಟಿ ಸಂದರ್ಭದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಲೋಕಾರ್ಪಣೆ ಹಾಗೂ 16 ಯೋಜನೆಗಳಿಗೆ ಶಿಲಾನ್ಯಾಸ ನೆರವೇರಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಕೆ.ಎನ್. ರಮೇಶ್ ತಿಳಿಸಿದ್ದಾರೆ.
  2. ಅಂತಾರಾಷ್ಟ್ರೀಯ ವಸ್ತುಸಂಗ್ರಹಾಲಯ ದಿನಾಚರಣೆಯನ್ನು ಇಂದು ಆಚರಿಸಲಾಗುತ್ತಿದ್ದು, ಕೇಂದ್ರ ಸಂಸ್ಕೃತಿ ಸಚಿವಾಲಯದಿಂದ ಬೆಂಗಳೂರಿನ ’ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್’ನಲ್ಲಿ ಇಂದು ಸಂಜೆ 6 ಗಂಟೆಗೆ ’ವಸ್ತು ಸಂಗ್ರಹಾಲಯದ ಶಕ್ತಿ’ ಕುರಿತ ವಿಚಾರಸಂಕಿರಣ ಆಯೋಜಿಸಲಾಗಿದೆ.
  3. ಕೇಂದ್ರ ಸರ್ಕಾರದ ಅಂಕಿ-ಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯದ ಗೃಹ ಬಳಕೆಯ ವೆಚ್ಚ ಸಮೀಕ್ಷೆ ಕುರಿತ 2 ದಿನಗಳ ತರಬೇತಿ ಕಾರ್ಯಾಗಾರ ಇಂದು ಬೆಂಗಳೂರಿನಲ್ಲಿ ಚಾಲನೆಯಾಗಲಿದೆ. ಜುಲೈ 1 ರಿಂದ ಒಂದು ವರ್ಷದ ಅವಧಿಗೆ ಸಮೀಕ್ಷೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
  4. ಡ್ರೋಣ್, ರೋಬೋಟಿಕ್ಸ್ ಸೇರಿದಂತೆ ಮುಂದುವರಿದ ತಂತ್ರಜ್ಞಾನದೊಂದಿಗೆ ರಕ್ಷಣಾ ಪಡೆಗಳನ್ನು ಬಲಪಡಿಸಲಾಗುತ್ತಿದೆ. ’ಆತ್ಮ ನಿರ್ಭರ್ ಭಾರತ್’ ಪರಿಕಲ್ಪನೆಯಡಿ ರಕ್ಷಣಾ ವಲಯದ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಲಾಗುತ್ತಿದೆ ಎಂದು ಎಂದು ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಕರೆ ನೀಡಿದ್ದಾರೆ.
  5. ಉತ್ತರಖಂಡದಲ್ಲಿ ಮೇ 3ರಿಂದ ಚಾರ್‌ಧಾಮ್ ಯಾತ್ರೆ ಆರಂಭಗೊಂಡಿದ್ದು, ಇದೂವರೆಗೆ 3ಲಕ್ಷಕ್ಕೂ ಹೆಚ್ಚು ಭಕ್ತಾದಿಗಳು ಪಾಲ್ಗೊಂಡಿದ್ದಾರೆ. ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತಗಳು ಸತತವಾಗಿ ಯಾತ್ರೆಯ ನಿಗಾವಹಿಸುತ್ತಿವೆ. ಎಲ್ಲ ಯಾತ್ರಾರ್ಥಿಗಳು, ಯಾತ್ರೆಗೆ ಮುನ್ನ ಅಧಿಕೃತವಾಗಿ ನೋಂದಾಯಿಸಿಕೊಳ್ಳುವಂತೆ ಸರ್ಕಾರ ಸೂಚಿಸಿದೆ.
  6. ಚಲನಚಿತ್ರ ವಲಯದಲ್ಲಿ ಸುಗಮ ಉದ್ಯಮ ವಾತಾವರಣ ನಿರ್ಮಾಣಕ್ಕೆ ಸರ್ಕಾರ ಬದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. ಅಂತಾರಾಷ್ಟ್ರೀಯ ಚಲನಚಿತ್ರಗಳು ಮತ್ತು ವಿದೇಶಿ ಚಿತ್ರಗಳ ಸಹ-ನಿರ್ಮಾಣಕ್ಕೆ ಎಲ್ಲ ಸೌಲಭ್ಯ ಒದಗಿಸಲು ಹಾಗೂ ಸರ್ಕಾರಿ ಮಟ್ಟದ ವಿವಿಧ ಅನುಮತಿ ನೀಡಿಕೆಗೆ ಏಕಗವಾಕ್ಷಿ ವ್ಯವಸ್ಥೆ ರೂಪಿಸಲು ಅಗತ್ಯ ಕ್ರಮಕೈಗೊಳ್ಳಲಾಗಿದೆ ಎಂದು ಪ್ರಧಾನಿ ವಿವರಿಸಿದರು.
  7. ರಾಜ್ಯದ ಕರಾವಳಿಯಲ್ಲಿ ಮುಂದಿನ 48 ಗಂಟೆಗಳಲ್ಲಿ ಭಾರಿ ಗಾಳಿ, ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ದಕ್ಷಿಣ ಕನ್ನಡ ಹಾಗೂ ಉತ್ತರಕನ್ನಡ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ತುರ್ತು ಸೇವೆಗೆ ಶುಲ್ಕರಹಿತ ದೂರವಾಣಿ ಸಂಖ್ಯೆ 1077ಹಾಗೂ ದೂರವಾಣಿ ಸಂಖ್ಯೆ08382-229857 ಮೊಬೈಲ್ ಸಂಖ್ಯೆ 9483511015 ಕ್ಕೆ ಸಂಪರ್ಕಿಸಲು ಜಿಲ್ಲಾಡಳಿತ ಕೋರಿದೆ.
  8. ಅಂತಾರಾಷ್ಟ್ರೀಯ ವಸ್ತುಸಂಗ್ರಹಾಲಯ ದಿನಾಚರಣೆಯನ್ನು ಇಂದು ಆಚರಿಸಲಾಗುತ್ತಿದ್ದು, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಧಾರವಾಡ ವಲಯದ ಕಾರ್ಯಕ್ರಮ ಐತಿಹಾಸಿಕ ಬಾದಾಮಿಯಲ್ಲಿ ಇಂದು ನಿಗದಿಯಾಗಿದೆ.
  9. ವಿಧಾನಸಭೆಯಿಂದ ವಿಧಾನ ಪರಿಷತ್ತಿನ 7 ಸ್ಥಾನಗಳಿಗೆ ದ್ವೈವಾರ್ಷಿಕ ಚುನಾವಣೆಗೆ ನಿನ್ನೆ ಅಧಿಸೂಚನೆ ಹೊರಡಿಸಲಾಗಿದೆ. ನಾಮಪತ್ರ ಸಲ್ಲಿಕೆ ಆರಂಭಗೊಂಡಿದೆ. ನಾಮಪತ್ರ ಸಲ್ಲಿಸಲು ಇದೇ 24ರಂದು ಕೊನೆಯ ದಿನವಾಗಿದ್ದು, 25ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. 27ರಂದು ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿರುತ್ತದೆ. ಅಗತ್ಯ ಬಿದ್ದಲ್ಲಿ ಜೂನ್ 3ರಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಮತದಾನಕ್ಕೆ ಅವಕಾಶವಿರುತ್ತದೆ. 5 ಗಂಟೆಯ ನಂತರ ಮತಗಳ ಎಣಿಕೆ ನಡೆದು ಅಂದೇ ಫಲಿತಾಂಶ ಪ್ರಕಟವಾಗಲಿದೆ ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ.
  10. ನೌಕಾ ವಲಯದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಗೆ ಸರ್ಕಾರ ಹೆಚ್ಚಿನ ಆದ್ಯತೆ ನೀಡಿದ್ದು, ಭಾರತೀಯ ನೌಕಾಪಡೆಗಳೊಂದಿಗೆ ಜಂಟಿ ಕಾರ್ಯ ನಿರ್ವಹಿಸಲು ಅಮೆರಿಕ ಉತ್ಸುಕವಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದರು.
  11. ಭಾರತವು ಜಗತ್ತಿನಲ್ಲೇ ಅತಿ ಹೆಚ್ಚು ಸಂಖ್ಯೆಯಲ್ಲಿ ಚಲನಚಿತ್ರಗಳನ್ನು ನಿರ್ಮಿಸುತ್ತಿದ್ದು, ಭಾರತೀಯ ಚಿತ್ರೋದ್ಯಮ ಶ್ರೀಮಂತ ಪರಂಪರೆ ಮತ್ತು ಸಾಂಸ್ಕೃತಿಕ ವೈವಿಧ್ಯತೆಯನ್ನು ಹೊಂದಿದೆ. ಭಾರತದಲ್ಲಿ ಅಸಂಖ್ಯಾತ ಕಥೆಗಳಿದ್ದು, ಇದು ಜಾಗತಿಕ ಕಥಾ ಕಣಜವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
  12. ಬ್ಯಾಂಕಾಕ್ ನಲ್ಲಿ ಇತ್ತೀಚೆಗೆ ನಡೆದ ಥಾಮಸ್ ಕಪ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಜಯಗಳಿಸಿದ ಭಾರತೀಯ ತಂಡದ ಆಟಗಾರ ಹಾಗೂ ಬೆಂಗಳೂರಿನಲ್ಲಿ ತರಬೇತಿ ಪಡೆದಿರುವ ಲಕ್ಷ್ಯ ಸೇನ್ ಅವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 5ಲಕ್ಷ ರೂಪಾಯಿ ಬಹುಮಾನದ ಚೆಕ್ ನ್ನು ನಿನ್ನೆ ಪ್ರದಾನ ಮಾಡಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಕ್ರೀಡಾ ಸಚಿವ ಕೆ.ಸಿ. ನಾರಾಯಣ ಗೌಡ ಉಪಸ್ಥಿತರಿದ್ದರು.
  13. ಕೇರಳದಲ್ಲಿ ಭಾರೀ ಮಳೆ ಮುಂದುವರಿದಿದ್ದು, 9 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಎರ್ನಾಕುಲಂ, ಇಡುಕ್ಕಿ, ತ್ರಿಶೂರ್, ಮಲಪ್ಪುರಂ, ಪಾಲಕ್ಕಾಡ್, ಕೋಳಿಕೋಡ್, ವೈನಾಡ್, ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಕುರಿತು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮುಂದಿನ 3 ದಿನಗಳಲ್ಲಿ ಗುಡುಗುಸಹಿತ ಭಾರೀ ಮಳೆ ಮುಂದುವರಿಯಲಿದ್ದು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಮುನ್ನೆಚ್ಚರಿಕೆ ನೀಡಲಾಗಿದೆ.
  14. ರಾಜ್ಯಾದ್ಯಂತ ನಿನ್ನೆ ರಾತ್ರಿ ಧಾರಾಕಾರ ಮಳೆಯಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ ಗುಡುಗುಸಹಿತ ಮಳೆಯಾಗಿದ್ದು, ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು, ವಾಹನ ಸಂಚಾರ, ಜನಜೀವನವನ್ನು ಅಸ್ತವ್ಯಸ್ಥಗೊಂಡಿದೆ. ಹಳೆ ಮೈಸೂರು ಭಾಗದ ಬಹುತೇಕ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಿದ್ದು, ಕೃಷಿ ಚಟುವಟಿಕೆಗಳು ಗರಿಗೆದರಿವೆ.
  15. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ6 ಸಾವಿರದ500 ಕ್ಕೂ ಹೆಚ್ಚು ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಶಾಲೆಗಳನ್ನು ಗುರುತಿಸಿ, ಆಗಸ್ಟ್‌ನಿಂದ ಕಾಮಗಾರಿ ಪ್ರಾರಂಭಿಸುವಂತೆ ಅಧಿಕಾರಿಗಳಿಗೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚಿಸಿದ್ದಾರೆ.
  16. ಲಂಡನ್ ನಲ್ಲಿ ಇದೇ 19ರಂದು ನಡೆಯಲಿರುವ ಕಾಮನ್‌ವೆಲ್ತ್ ರಾಷ್ಟ್ರಗಳ ಶಿಕ್ಷಣ ಸಮಾವೇಶ ಹಾಗೂ ಇದೇ 26ರಿಂದ ದಾವೋಸ್‌ನಲ್ಲಿ ನಡೆಯಲಿರುವ ವಿಶ್ವ ಆರ್ಥಿಕ ಸಮಾವೇಶದಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ ಪಾಲ್ಗೊಳ್ಳಲಿದ್ದಾರೆ.
  17. ನಗರದ ಸುಗಮ ಸಂಚಾರ ವ್ಯವಸ್ಥೆಗೆ ಟೋಯಿಂಗ್ ಅಗತ್ಯವಿದೆ. ಸರ್ಕಾರದೊಂದಿಗೆ ಚರ್ಚಿಸಿ ಪರಿಷ್ಕೃತ ನಿಯಮಗಳ ರೂಪಿಸಿ ಟೋಯಿಂಗ್ ವ್ಯವಸ್ಥೆ ಮರುಜಾರಿಗೆ ಪ್ರಯತ್ನಿಸಲಾಗುವುದು ಎಂದು ನೂತನ ಬೆಂಗಳೂರು ಪೊಲೀಸ್ ಆಯುಕ್ತ ಪ್ರಥಾಪ್ ರೆಡ್ಡಿ ಹೇಳಿದ್ದಾರೆ.
  18. ಅಸ್ಸಾಂನ ಕೆಲವು ಭಾಗಗಳಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಪರಿಸ್ಥಿತಿಯ ಕುರಿತು ಗೃಹ ಸಚಿವ ಅಮಿತ್ ಶಾ ಕಳವಳ ವ್ಯಕ್ತ ಪಡಿಸಿದ್ದಾರೆ. ಅವರು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರೊಂದಿಗೆ ಪರಿಸ್ಥಿತಿ ಅವಲೋಕನ ನಡೆಸಿದ್ದಾರೆ. ಕೇಂದ್ರ ಸರ್ಕಾರದಿಂದ ಸಾಧ್ಯವಿರುವ ಎಲ್ಲ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ ಮತ್ತು ಈಗಾಗಲೇ ಎನ್ ಡಿ ಆರ್ ಎಫ್ ತಂಡಗಳನ್ನು ನಿಯೋಜಿಸಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.
  19. ಮುಸ್ಲಿಮರ ಪ್ರವೇಶ ಮತ್ತು ಪೂಜೆಯ ಹಕ್ಕಿಗೆ ಅಡ್ಡಿಯಾಗದಂತೆ ಶಿವಲಿಂಗ ಪತ್ತೆಯಾದ ಪ್ರದೇಶವನ್ನು ರಕ್ಷಿಸುವಂತೆ ಸುಪ್ರೀಂ ಕೋರ್ಟ್ ವಾರಣಾಸಿ ಜಿಲ್ಲಾ ಮ್ಯಾಜಿಸ್ಟ್ರೇಟ್‌ಗೆ ಸೂಚಿಸಿದೆ. ಅಲ್ಲದೆ, ಈ ವಿಷಯವನ್ನು ನಾಳೆ ಮತ್ತೆ ವಿಚಾರಣೆ ಕೈಗೆತ್ತಿಕೊಳ್ಳುವುದಾಗಿ ತಿಳಿಸಿದೆ. ಈ ಮಧ್ಯೆ, ಜ್ಞಾನವಾಪಿ ಮಸೀದಿಯ ಒಳಭಾಗದ ವಿಡಿಯೊ ಸಮೀಕ್ಷೆಗಾಗಿ ನೇಮಿಸಲಾಗಿದ್ದ ಕಮಿಷನರ್ ಅಜಯ್ ಕುಮಾರ್ ಮಿಶ್ರಾರನ್ನು ವಾರಾಣಸಿ ನ್ಯಾಯಾಲಯ ವಜಾಗೊಳಿಸಿದೆ.
  20. ದೇಶದಲ್ಲಿ ಕೋವಿಡ್ ಲಸಿಕೆ ನೀಡಿಕೆ ವ್ಯಾಪ್ತ 191 ಕೋಟಿ ೬೩ ಲಕ್ಷ ಗಡಿ ದಾಟಿದೆ. ನಿನ್ನೆ 13 ಲಕ್ಷಕ್ಕೂ ಹೆಚ್ಚು ಲಸಿಕೆಗಳನ್ನು ನೀಡಲಾಯಿತು. ಇದುವರೆಗೆ 13ರಿಂದ 14 ವರ್ಷ ವಯಸ್ಸಿನ ಮಕ್ಕಳಿಗೆ 4 ಕೋಟಿ 47 ಲಕ್ಷಕ್ಕೂ ಹೆಚ್ಚು ಲಸಿಕೆ ಡೋಸ್‌ಗಳನ್ನು ನೀಡಲಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಸಿನಿ ಸುದ್ದಿ

ಫ್ರಾನ್ಸ್‌ನಲ್ಲಿ ನಾಳೆಯಿಂದ ಪ್ರತಿಷ್ಠಿತ ಕೇನ್ಸ್ ಚಲನಚಿತ್ರೋತ್ಸವ ಆರಂಭ

Published

on

ಸುದ್ದಿದಿನ ಡೆಸ್ಕ್ : ಪ್ರತಿಷ್ಠಿತ ಕೇನ್ಸ್ ಚಲನಚಿತ್ರೋತ್ಸವ ಫ್ರಾನ್ಸ್‌ನಲ್ಲಿ ನಾಳೆ ಆರಂಭವಾಗಲಿದೆ. 75ನೇ ಕೇನ್ಸ್ ಚಲನಚಿತ್ರೋತ್ಸವದಲ್ಲಿ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಅನುರಾಗ್ ಸಿಂಗ್ ಠಾಕೂರ್ ನೇತೃತ್ವದ ನಿಯೋಗ ಪಾಲ್ಗೊಳ್ಳಲಿದೆ.

ನಿಯೋಗದಲ್ಲಿ ಎ.ಆರ್. ರೆಹಮಾನ್, ನವಾಜುದ್ದೀನ್ ಸಿದ್ದಿಖಿ ಸೇರಿದಂತೆ ಚಲನಚಿತ್ರರಂಗದ ಹಲವಾರು ಪ್ರಮುಖರು ಇರಲಿದ್ದಾರೆ. ಫ್ರಾನ್ಸ್‌ನ ಕೇನ್ಸ್‌ನಲ್ಲಿ ವಾರ್ಷಿಕವಾಗಿ ನಡೆಯಲಿರುವ ಕೇನ್ಸ್ ಚಲನಚಿತ್ರೋತ್ಸವದಲ್ಲಿ ಜಗತ್ತಿನಾದ್ಯಂತ ನಿರ್ಮಾಣಗೊಂಡ ಸಾಕ್ಷ್ಯಚಿತ್ರಗಳೂ ಸೇರಿದಂತೆ ಹಲವಾರು ಹೊಸ ಚಲನಚಿತ್ರಗಳ ವಿಮರ್ಶೆ ನಡೆಯಲಿದೆ. 1946ರಲ್ಲಿ ಆರಂಭವಾದ ಈ ಚಿತ್ರೋತ್ಸವ ಪ್ರತಿ ವರ್ಷ ನಡೆಯುತ್ತದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಸಿನಿ ಸುದ್ದಿ

ವಿದ್ಯುತ್ ಶಾಕ್ ನಿಂದ ಜೂ.ರವಿಚಂದ್ರನ್ ಖ್ಯಾತಿಯ ಲಕ್ಷ್ಮಿ‌ನಾರಾಯಣ್ ಸಾವು

Published

on

ಸುದ್ದಿದಿನ,ತುಮಕೂರು: ಜ್ಯೂನಿಯರ್ ರವಿಚಂದ್ರನ್, ಕ್ರೇಜಿ ಸ್ಟಾರ್ ಎಂದು ಖ್ಯಾತಿ ಪಡೆದಿದ್ದ ಸಂಗೀತ ಸಂಜೆ ಕಾರ್ಯಕ್ರಮದ ಕಲಾವಿದ ಲಕ್ಷ್ಮೀನಾರಾಯಣ್ ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಹೆರೂರು ಗ್ರಾಮದಲ್ಲಿ ವಿದ್ಯುತ್ ಶಾಕ್‌ನಿಂದ ಸಾವನ್ನಪ್ಪಿದ್ದಾರೆ.

ಸಂಪ್‌ಗೆ ನೀರು ತುಂಬಿಸಲು ಮೋಟರ್ ಆನ್ ಮಾಡಿದ ಸಂದರ್ಭ ವಿದ್ಯುತ್ ಸ್ಪರ್ಶಿಸಿ ಕಲಾವಿದ ಲಕ್ಷ್ಮೀನಾರಾಯಣ್ ಸಾವನ್ನಪ್ಪಿದ್ದಾರೆ. ಕುಣಿಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

 

Continue Reading

Trending