Connect with us

ದಿನದ ಸುದ್ದಿ

ಚಂಪಾ: ‘ಒಂದಾನೊಂದು ಕಾಲಕ್ಕ’

Published

on

ಫೋಟೋ: 31 ವರುಷಗಳ ಹಿಂದೆ ಬೀದರದಲ್ಲಿ ನಡೆದ ಕಾರ್ಯಕ್ರಮದ್ದು | ರಹಮತ್ ತರೀಕೆರೆ
  • ರಹಮತ್ ತರೀಕೆರೆ

ನನ್ನ ಬರೆಹದ ಬದುಕಿನ ಮೊದಲ ಘಟ್ಟದಲ್ಲಿ, ಗಾಢ ಪ್ರಭಾವ ಬೀರಿದವರಲ್ಲಿ ಚಂಪಾ ವ್ಯಕ್ತಿತ್ವ, ಬರೆಹ, ಸಂಕ್ರಮಣ‌‌ ಪತ್ರಿಕೆ ಮತ್ತು ಅವರಿದ್ದ ಬಂಡಾಯ ಸಾಹಿತ್ಯ ಚಳುವಳಿಗಳೂ ಸೇರಿವೆ. ನನ್ನನ್ನು ಸದಾ ಕಾಡುವ, ಅಷ್ಟೇನೂ ದಿಟ್ಟತನವಿಲ್ಲದ ನನ್ನ ವ್ಯಕ್ತಿತ್ವದ ಮಿತಿಯನ್ನೂ ಕಾಣಿಸುವ ಅವರ ಕವನಗಳಲ್ಲಿ ‘ಒಂದಾನೊಂದು ಕಾಲಕ್ಕ’ ಕೂಡ ಒಂದು.

ಕಾವ್ಯದ ಪ್ರೇರಣೆಯನ್ನು ಕವಿಗಳ ಪ್ರತಿಭೆಯಲ್ಲಿ, ಅವರಿಗೆ ಇಂಬಾಗಿ ನಿಂತ ಪರಂಪರೆಯ ಕಸುವಿನಲ್ಲಿ, ಕವಿಯ ವಿಶಿಷ್ಟಾನುಭವದಲ್ಲಿ, ಅವರ ಕೈವಶವಾಗಿರುವ ಕಸುಬುದಾರಿಕೆಯಲ್ಲಿ ಹುಡುಕುವ ಪದ್ಧತಿಯಿದೆ. ಆದರೆ ಕವಿತೆ ಹುಟ್ಟುವ ಈ ಪ್ರೇರಣಾ ಮೂಲಗಳಲ್ಲಿ ಚಾರಿತ್ರಿಕ ಒತ್ತಡವೂ ಒಂದು.

ಸಾಮಾನ್ಯವಾಗಿ ಉಸಿರುಗಟ್ಟುವ ಒತ್ತಡಗಳಲ್ಲಿ ಹುಟ್ಟುವ ಎಲ್ಲ ನಮೂನೆಯ ಬರೆಹಗಳು, ತಮ್ಮ ಸಂವೇದನೆಯ ಪ್ರಾಮಾಣಿಕತೆಯಿಂದ ಸಹಜತೆಯಿಂದ ಓದುಗರ ಎದೆಗೆ ತಾಕಿ ಸಂವಾದ ಮಾಡುವ ಸ್ಪಂದನಶೀಲತೆಯನ್ನು ಪಡೆಯುತ್ತವೆ. ಸಾಧಾರಣ ಕವಿಗಳೂ ಮೃತ್ಯುವಿನ ಅಂಚಿನಲ್ಲಿ ಕುರಿತು ಭಾವದಿಂದ ಧಗಧಗಿಸುವ ಕವಿತೆ ಬರೆದಿರುವ ಅನೇಕ ನಿದರ್ಶನಗಳಿವೆ. ಕಾಫ್ಕಾನ `ರೂಪಾಂತರ’ ಕಾಮುನ `ಪ್ಲೇಗ್’ ಸಿದ್ಧಲಿಂಗಯ್ಯನವರ `ಹೊಲೆಮಾದಿಗರ ಹಾಡು’ ಟಿಪ್ಪು ಕುರಿತ ಜನಪದರ ಲಾವಣಿಗಳು ಹುಟ್ಟಿದ್ದು ಇಂತಹ ಚಾರಿತ್ರಿಕ ಒತ್ತಡಗಳಲ್ಲೇ.

ಬ್ರಿಟಿಶರ ಆಳ್ವಿಕೆಯಲ್ಲಿದ್ದಾಗ ಬೇಂದ್ರೆಯವರ `ನರಬಲಿ’ ಕವಿತೆ ಹುಟ್ಟಿದ್ದೂ ಹೀಗೇ. `ಬಡವರು ಸತ್ತರೆ ಸುಡಲಿಕ್ಕೆ ಸೌದಿಲ್ಲೊ’ ಎಂಬ ಚೀತ್ಕಾರ ಕೇಳಿಸುವಂತಿರುವ ಜನಪದ ತ್ರಿಪದಿಯೂ ಸನ್ನಿವೇಶದ ಕೂಸೇ ಆಗಿದೆ. ದರ್ವಿಶ್ ಮುಂತಾದ ಪ್ಯಾಲಸ್ತೈನೀ ಕವಿಗಳ ಕವಿತೆಗಳಲ್ಲಿ ತಮ್ಮ ನೆಲವನ್ನು ಉಳಿಸಿಕೊಳ್ಳುವುದು ಜೀವನ್ಮರಣದ ಪ್ರಶ್ನೆಯನ್ನಾಗಿಸಿಕೊಂಡು ನಡೆಸುತ್ತಿರುವ ಸೆಣಸಾಟವಿರುತ್ತದೆ. ಇದಕ್ಕಾಗಿ ತುಂಬಿದ ಅಣೆಕಟ್ಟಿಯಿಂದ ರಭಸವಾಗಿ ಧುಮಿಕ್ಕುವ ಜಲದಂತೆ ಅಲ್ಲಿ ಭಾವದ ಆವೇಗವಿರುತ್ತದೆ.

ಕುಮಾರವ್ಯಾಸನಲ್ಲಿ ಬರುವ `ಅರಸುರಾಕ್ಷಸ ಮಂತ್ರಿ ಮೊರೆವ ಹುಲಿ ಪರಿವಾರ ಹದ್ದಿನ ನೆರವಿ, ಬಡವರ ಬಿನ್ನಪವನಿನ್ನಾರು ಕೇಳುವರು’ ಎಂಬ ಸಾಲುಗಳು, ರಾಜಧರ್ಮದ ನಿರ್ಲಿಪ್ತ ಬೋಧೆಯ ಭಾಗವಾಗಿ ಅಳವಡಿಕೆಯಾಗಿವೆ, ನಿಜ. ಆದರೆ ಕವಿ ಅವನ್ನು ರಚಿಸುವಾಗ ತಾನು ಪಟ್ಟಿರುವ ಯಾವುದೊ ಆಳವಾದ ಸಂವೇದನೆಯನ್ನು ತುಂಬಿರಬಹುದು ಎಂಬಂತೆ ಅಲ್ಲಿ ವಿಷಾದವು ಮಡುಗಟ್ಟಿದೆ. ಎಂತಲೇ ಈ ಸಾಲುಗಳು ಬಿಕ್ಕಟ್ಟಿನಲ್ಲಿ ನಾಡು ಹಾಯುವಾಗೆಲ್ಲ ಬಳಕೆಗೊಳ್ಳುತ್ತ, ನಮಗಾಗೇ ಈಗ ರಚಿತವಾದವು ಎಂಬಂತೆ ಆವರ್ತನೆಗೊಳ್ಳುತ್ತಿವೆ. ತುರ್ತುಪರಿಸ್ಥಿತಿ ವಿರುದ್ಧ ಬಂದ ಕವಿತೆಗಳ ಸಂಕಲನದ (`ಆಪತ್ಕಾಲೀನ ಕವಿತೆಗಳು’ ಸಂ. ಕಿ.ರಂ.ನಾಗರಾಜ), ಈ ಸಾಲುಗಳನ್ನು ಮೊದಲಿಗೇ ಉದ್ಧರಿಸಲಾಗಿದೆ.

ಇದೇ ಹೊತ್ತಲ್ಲಿ ಚಂಪಾ ಎಮರ್ಜನ್ಸಿಯ ಹೊತ್ತಲ್ಲಿ ಬರೆದ ಪದ್ಯವೊಂದು ನೆನಪಾಗುತ್ತಿದೆ. ಅದರ ಹೆಸರು `ಒಂದಾನೊಂದು ಕಾಲಕ್ಕೆ’. ಇದು ಕನ್ನಡದ ಶ್ರೇಷ್ಠ ಕವಿತೆಗಳ ಪಟ್ಟಿಯಲ್ಲಿ ಒಂದೆಂದೇನೂ‌ ಪರಿಗಣಿತವಾಗಿಲ್ಲ. ಆದರೆ ಸರಳವಾದ ಸಾದಾಸೀದಾ ಪದ್ಯವಾಗಿರುವ ಇದರೊಳಗೆ ತುಂಬಿಕೊಂಡಿರುವ ದುಗುಡ ಮತ್ತು ಉತ್ಕಟತೆಗಳು, ಸ್ವಾತಂತ್ರ್ಯದ ಬೇಡಿಕೆಯ ಭಾವವನ್ನು ನಮ್ಮ ಹೃದಯದೊಳಗೆ ಹುಗಿಸಿ ಕಂಪನ ಹುಟ್ಟಿಸುವಷ್ಟು ತೀವ್ರವಾಗಿವೆ. `ಓ ಎನ್ನ ದೇಶಬಾಂಧವರೇ’ (1977) ಸಂಕಲನದಲ್ಲಿರುವ ಆ ಕವಿತೆ ಹೀಗಿದೆ:

ಒಂದಾನೊಂದು ಕಾಲಕ್ಕೆ, ಗೆಳೆಯರೆ
ಈ ಬಾನಿಗೆ ಅಂಚೆಂಬುದು ಇರಲಿಲ್ಲ.
ಈ ನೆಲಕ್ಕೆ ಗಡಿಯೆಂಬುದು ಇರಲಿಲ್ಲ.
ನೀವು ಕೂಗಿದ್ದೇ ಆಗ ಕಾವ್ಯವಾಗಿತ್ತು.
ಕೇಳುವವರಿರಲಿಲ್ಲ

ನೀವು ಹಿಡಿದದ್ದೇ ಆಗ ಹಾದಿಯಾಗಿತ್ತು
ತುಳಿಯುವವರಿರಲಿಲ್ಲ
ನಿಮ್ಮ ಬಾಯಿಗೆ ಈಗ ಬಟ್ಟೆ ತುರುಕಿದ್ದಾರೆ.
ನಿಮ್ಮ ಕಾಲಿಗೆ ಈಗ ಬೇಡಿ ಬಿಗಿದಿದ್ದಾರೆ

ನೀವೀಗ ಸ್ವಲ್ಪ ಝಾಡಿಸಿದರೆ ಕಾಲು,
ಬೇಡಿ ಹರಿಯಲಿಕ್ಕಿಲ್ಲ; ಆದರೆ
ಬಾನಲ್ಲಿ ಹಾಲುಹಾದಿ ಮೂಡುತ್ತದೆ.
ಮೌನ ಮುರಿಯಲು ಸ್ವಲ್ಪ ಹೆಣಗಿದರೆ ನೀವು
ಶಬ್ದ ಹೊರಡಲಿಕ್ಕಿಲ್ಲ; ಆದರೆ
ನೆಲವೇ ಎದೆ ಬಿರಿತು ಹಾಡುತ್ತದೆ.

ಕವನವು `ಒಂದಾನೊಂದು ಕಾಲಕ್ಕೆ’ ಎಂಬ ಪದದ ಮೂಲಕ ಚರಿತ್ರೆಯಲ್ಲಿದ್ದ ಸ್ವತಂತ್ರ ಅವಸ್ಥೆಯನ್ನು ಸೂಚಿಸುವ ಮೂಲಕ ಆರಂಭವಾಗುತ್ತದೆ. ಆಗ ಇದ್ದ ಸ್ವಾತಂತ್ರ್ಯವನ್ನು ಗಡಿಯಿಲ್ಲದ ನೆಲ, ಅಂಚಿಲ್ಲದ ಬಾನು, ಕೂಗಿದರೂ ಕಾವ್ಯವಾಗುವ ಮತ್ತು ಹಿಡಿದಿದ್ದೇ ಹಾದಿಯಾಗುವ ಮುಕ್ತತೆಯ ಚಿತ್ರಗಳ ಮೂಲಕ ಮುಂದಿಡಲಾಗುತ್ತದೆ. ಚರಿತ್ರೆ ಬಲ್ಲವರಿಗೆ ತಿಳಿದಿದೆ, ಎಲ್ಲ ಕಾಲಕ್ಕೂ ಸ್ವಾತಂತ್ರ್ಯ ಕಸಿದುಕೊಳ್ಳುವ ಶಕ್ತಿಗಳಿದ್ದವು.

ಅವುಗಳ ವಿರುದ್ಧ ದನಿಯೆತ್ತಿ ಸತ್ತವರೂ ಗೆದ್ದವರೂ ಕೂಡ ಇದ್ದರು. ಸ್ವಾತಂತ್ರö್ಯ ಹರಣ ಮತ್ತು ಪಡೆಯುವುದಕ್ಕೆ ಮಾಡುವ ಸಂಘರ್ಷ, ಅದಕ್ಕಾಗಿ ಪಡೆಯುವ ಮರಣ, ಗೆಲುವುಗಳು ನಿರಂತರವಾಗಿರುತ್ತವೆ. ಆದರೆ ಗತದಲ್ಲಿ ಸ್ವಾತಂತ್ರö್ಯವಿತ್ತು ಎಂದು ಕವಿತೆ ಪ್ರಕೃತಿಯ ಚಿತ್ರಗಳ ಮೂಲಕ ತುಸು ಉತ್ಪ್ರೇಕ್ಷೆಯಲ್ಲಿ ಹೇಳುತ್ತಿರುವುದು ವರ್ತಮಾನದಲ್ಲಿ ಅದಿಲ್ಲ ಎಂದು ವಾಸ್ತವವನ್ನು ಸೂಚಿಸಲು; ಚರಿತ್ರೆಯ ನೆನಪು ವರ್ತಮಾನದಲ್ಲಿ ಕ್ರಿಯಾಶೀಲತೆ ಹುಟ್ಟಿಸಲಿ ಎಂದು ಪ್ರೇರಿಸಲು. ಇಲ್ಲಿ ಕವಿಯು ಜನತೆಯ ನಾಯಕನಾಗಿದ್ದಾನೆ. ಜನರ ಸ್ವಾತಂತ್ರ್ಯ ಮತ್ತು ಅವನ ಸ್ವಾತಂತ್ರö್ಯಗಳೆರಡೂ ಇಲ್ಲಿ ಏಕೀಭವಿಸಿವೆ.

ಎರಡನೇ ಖಂಡವು ವರ್ತಮಾನದಲ್ಲಿ ಈ ಸ್ವಾತಂತ್ರ್ಯಗಳು ಕಸಿಯಲ್ಪಟ್ಟ ದಾರುಣ ಸನ್ನಿವೇಶದ ಚಿತ್ರವನ್ನು ಮುಂದಿಡುತ್ತದೆ. ಆದರೆ ಈ ಬಂಧನದ ದಾರುಣತೆ ಖಾಯಮ್ಮಲ್ಲ. ಅದನ್ನು ನಿವಾರಿಸಬಹುದು. ಇದಕ್ಕಾಗಿ ದಂಗೆ ಚಳುವಳಿ ಹೋರಾಟ ಮುಂತಾದ ಮಹತ್ವಾಕಾಂಕ್ಷಿ ಪ್ರಯತ್ನಗಳನ್ನು ಕವಿತೆ ಮುಂದಿಡುತ್ತಿಲ್ಲ. ಬದಲಾಗಿ `ಸ್ವಲ್ಪ ಕಾಲು ಝಾಡಿಸಲು’ `ಮೌನ ಮುರಿಯಲು’ `ಸ್ವಲ್ಪ ಹೆಣಗಲು’ ಸೂಚಿಸುತ್ತದೆ.

ವ್ಯಕ್ತಿಗಳು ತಮ್ಮ ಪರಿಮಿತಿಯಲ್ಲೇ ಮಾಡುವ ಇಂತಹ ಸಣ್ಣಪುಟ್ಟ ಮಿಸುಗಾಟದಿಂದ ಇಡೀ ವ್ಯವಸ್ಥೆಯನ್ನು ಪಲ್ಲಟಿಸುವ ಮಹಾಕ್ರಾಂತಿ ಸಂಭವಿಸಿದೆ ಹೋಗಬಹುದು. ಆದರೆ ಅಂತಹ ಅದಕ್ಕೆ ಬೇಕಾದ ನಡಿಗೆ ಶುರುವಾಗುತ್ತದೆ. ಸಂಪೂರ್ಣ ಸ್ವಾತಂತ್ರ್ಯವು ನಾಡಿನ ಸಮುದಾಯವು ಪ್ರಜ್ಞೆ ಮತ್ತು ಪ್ರತಿರೋಧ ಗುಣವನ್ನು ಪಡೆದುಕೊಂಡು ಕೆಟ್ಟ ವ್ಯವಸ್ಥೆಯ ವಿರುದ್ಧ ಸಂಘಟಿತ ದನಿಯೆತ್ತಿದಾಗ ಮಾತ್ರ ಸಾಧ್ಯ. ಅದು ತಕ್ಷಣ ಸಾಧ್ಯವಾಗುವ ಸನ್ನಿವೇಶವಿಲ್ಲ. ಅದು ನಿಷ್ಕ್ರಿಯತೆಗೆ ಕಾರಣವಾಬೇಕಿಲ್ಲ. ಬದಲಾವಣೆ ಎಂಬ ದೀರ್ಘ ಯಾನವು ಸಣ್ಣಹೆಜ್ಜೆಗಳ ಮೂಲಕವೇ ಆರಂಭವಾಗುತ್ತದೆ. ಅಂತಹ ಮಿಸುಕಾಟ ಮಾಡಿದರೆ ಪರಿಣಾಮ ಹಾಲ ಹಾದಿ ಮೂಡುತ್ತದೆ; ನೆಲವೇ ಎದೆಬಿರಿತು ಹಾಡುತ್ತದೆ.

ನಿರ್ದಿಷ್ಟ ಹಾಡಿನ ಭಾವವು ಮನುಕುಲವು ಮತ್ತೆಮತ್ತೆ ಎದುರಿಸುವ ಸಮಸ್ಯೆಯನ್ನು ಕುರಿತು ಇದ್ದಾಗ, ಅದು ನಾನಾ ವಿನ್ಯಾಸದಲ್ಲಿ ಬೇರೆಬೇರೆ ಭಾಷೆಯಲ್ಲಿ ಎಲ್ಲ ಕಾಲಘಟ್ಟದಲ್ಲೂ ಪುನರಾವರ್ತನೆ ಆಗುತ್ತಲೇ ಇರುತ್ತದೆ. ದುಷ್ಟ ಸರ್ವಾಧಿಕಾರಗಳ ಅಡಿಯಲ್ಲಿ ಉಸಿರುಗಟ್ಟುವ ಸನ್ನಿವೇಶದಲ್ಲಿ ಬದುಕುವ ಎಲ್ಲ ಸಮಾಜಗಳು ತಮ್ಮ ಎದೆಯ ದನಿಯೆಂದೇ ಹಾಡಿಕೊಳ್ಳುವಷ್ಟು ಇದು ಸಾಧಾರಣೀಕರಣ ಪಡೆದಿದೆ.

ಹೀಗಾಗಿಯೇ ಇದರ ಭಾವವು ಗಂಡಾಳಿಕೆ ಸಮಾಜದಲ್ಲಿರುವ ವಿವಾಹ ಮತ್ತು ಕುಟುಂಬ ಮುಂತಾದ ವ್ಯವಸ್ಥೆಗಳಲ್ಲಿ ನಲುಗುತ್ತಿರುವ ಸ್ತ್ರೀಯರ ದನಿಯಾಗುವಂತಿದೆ. ಕನ್ನಡದ ಮಹಿಳಾ ಸಂವೇದನೆಯ ಕಾವ್ಯದಲ್ಲಿ ಇದರ ಪ್ರತಿಬಿಂಬಗಳನ್ನು ಕಾಣಬಹುದು. ಜೆಎನ್‌ಯು ವಿದ್ಯಾರ್ಥಿಗಳು ಕನ್ಹಯ್ಯಕುಮಾರ್ ಅವರ ನೇತೃತ್ವದಲ್ಲಿ ಕೂಗಿದ ಆಜಾದಿ ಘೋಷಣೆಯಲ್ಲಿ ಇದು ಅನುರಣನಗೊಂಡಿತು.

ಈಗಲೂ ಟರ್ಕಿಯ ಕುರ್ದಿಶರ, ಇಸ್ರೇಲಿ ಹುಕೂಮತ್ತಿನಲ್ಲಿರುವ ಪ್ಯಾಲಸ್ತೇನಿಯರ, ಚೀನಾದ ಪಾದದಡಿ ಅಪ್ಪಚ್ಚಿಯಾಗಿರುವ ವುಗೈರ್ ಮುಸ್ಲಿಮರ ಹಾಗೂ ಟಿಬೆಟಿಯನ್ ಬೌದ್ಧರ, ಬರ್ಮಾದ ರೋಹಿಂಗ್ಯಾಗಳ ಎದೆಯೊಳಗೆ ಈ ಕವನ ಹಲವಾರು ವಿನ್ಯಾಸಗಳಲ್ಲಿ ರೂಪುಗೊಳ್ಳುತ್ತಿರಬಹುದು.
ಬಾಬಾ ಸಾಹೇಬರು ಬೌದ್ಧಧರ್ಮವನ್ನು ಸ್ವೀಕಾರ ಮಾಡುವ ಮುನ್ನ ಇದೇ ಭಾವವುಳ್ಳ ಮಾತುಗಳನ್ನು ಆಡಿರುವರು ಮತ್ತು ಲೇಖನ ಬರೆದಿರುವರು.

ಸಾರಾ ಅಬೂಬಕರ್ ಅವರ ಕಥನದ ನಾಯಕಿಯರಲ್ಲಿ ಈ ಪದ್ಯವು ಬೇರೆ ಧಾಟಿಲಯದಲ್ಲಿ ಕಟ್ಟಲ್ಪಟ್ಟಿದೆ. ಸಿದ್ಧಲಿಂಗಯ್ಯನವರ `ಎಲ್ಲಿಗೆ ಬಂತು ಯಾರಿಗೆ ಬಂತು ಸ್ವಾತಂತ್ರ್ಯ’ ಕವನದಲ್ಲಿ ಈ ಹಾಡಿನ ಭಾವವು ಹೋರಾಟದ ಮೊದಲು ಹುಟುವ ಸವಾಲಿನಂತೆ ಕೇಳಲ್ಪಟ್ಟಿದೆ. ಶತಮಾನದ ಹಿಂದೆ ರವೀಂದ್ರನಾಥ ಟಾಗೂರರು ಗೀತಾಂಜಲಿ ಸಂಕಲನದಲ್ಲಿ ಸೇರಿಸಿದ `ವೇರ್ ದಿ ಮೈಂಡ್ ಈಸ್’ ಎಂಬ ಗೀತೆಯಲ್ಲಿ ಈ ಪದ್ಯದ ಭಾವವು ದೇಶಕಟ್ಟುವ ತತ್ವವಾಗಿ ಈಗಾಗಲೇ ಹೇಳಲ್ಪಟ್ಟಿದೆ. `ಆನುಒಲಿದಂತೆ ಹಾಡುವ’ ಎಂಬ ಬಸವಣ್ಣನವರ ವಚನ, ಕುವೆಂಪು ಅವರ `ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ’ ಲೇಖನ ಈ ಪದ್ಯದ ಮೂಲಮಾತೃಕೆಗಳಾಗಿದ್ದರೆ ಆಶ್ಚರ್ಯವಿಲ್ಲ.

ಎಲ್ಲ ದಮನಿತ ಸಮಾಜ ಕುಟುಂಬ ಧರ್ಮ ದೇಶಗಳಲ್ಲಿ ಇರುವ ಪ್ರಜ್ಞಾವಂತರಿಗೆ, ಸಂವೇದನಶೀಲರಿಗೆ ಸ್ವಾತಂತ್ರ್ಯ ಬಯಸುವವರಿಗೆ ಇದು ತಮ್ಮದೇ ಸ್ವಾತಂತ್ರ್ಯದ ಹಾಡೆನಿಸುತ್ತದೆ. ಈಗ ತಾಲಿಬಾನಿಗಳ ಕೋವಿಗೈಯಲ್ಲಿ ಸಿಲುಕಿರುವ ಆಫಘಾನಿಸ್ಥಾನದ ಮಹಿಳೆಯರು ಕಲಾವಿದರು ಈ ಹಾಡನ್ನು ಹಾಡುತ್ತಿರಬಹುದು. ಈಗ ಇಂಡಿಯಾದ ಬೀದಿಹಾದಿಗಳಲ್ಲಿ ನಿರ್ದಿಷ್ಟ ಲಿಂಗ, ಜಾತಿ, ಧರ್ಮಗಳಲ್ಲಿ ಹುಟ್ಟಿದ ಕಾರಣಕ್ಕೇ ಬಡಿಸಿಕೊಂಡು ಸಾಯುತ್ತಿರುವ ಮಹಿಳೆಯರೂ ದಲಿತರೂ ಮುಸ್ಲಿಮರೂ ಕ್ರೈಸ್ತರೂ ಹಾಡಬಹುದು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಈಗ ಇ-ರೈಲಿನ ಕನಸು ಸಹ ನನಸಾಗಲಿದೆ..!

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ ಡೆಸ್ಕ್ : ದೇಶದಲ್ಲಿ ಇ-ಬೈಕ್, ಇ-ಕಾರ್ ಮತ್ತು ಇ-ಬಸ್ ನಂತರ, ಈಗ ಇ-ರೈಲಿನ ಕನಸು ಸಹ ನನಸಾಗಲಿದೆ. ಪಶ್ಚಿಮ ಮಧ್ಯ ರೈಲ್ವೆಯು ನವದೂತ್ ಎಂಬ ಬ್ಯಾಟರಿ ಚಾಲಿತ ಡ್ಯುಯಲ್ ಮೋಡ್ ಲೋಕೋಮೋಟಿವ್ ಅನ್ನು ಅಭಿವೃದ್ಧಿಪಡಿಸಿದೆ.

ಈ ಎಂಜಿನ್ ಎರಡೂ ಮೋಡ್ ಗಳಲ್ಲಿ ಅಂದರೆ ಬ್ಯಾಟರಿ ಮತ್ತು ವಿದ್ಯುಚ್ಛಕ್ತಿಯಲ್ಲಿ ಚಲಿಸುತ್ತದೆ. ಪ್ರಸ್ತುತ, ಇದನ್ನು ಪ್ರಾಯೋಗಿಕ ಆಧಾರದ ಮೇಲೆ ಜಬಲ್ಪುರ, ಮುದ್ವಾರ ಮತ್ತು ಇತರ ನಿಲ್ದಾಣಗಳಲ್ಲಿ ರೈಲುಗಳನ್ನು ಓಡಿಸುವಾಗ ಬಳಸಲಾಗುತ್ತಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಬಸವರಾಜ ಹೊರಟ್ಟಿ ಬಿಜೆಪಿ ಸೇರ್ಪಡೆ ; ಪಕ್ಷಕ್ಕೆ ಮತ್ತಷ್ಟು ಬಲ ಬಂದಂತಾಗಿದೆ : ಸಿಎಂ ಬೊಮ್ಮಾಯಿ

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ ಡೆಸ್ಕ್ : ವಿಧಾನ ಪರಿಷತ್‌ನ ಮಾಜಿ ಸಭಾಪತಿ ಬಸವರಾಜ ಹೊರಟ್ಟಿ, ತಮ್ಮ ಹಿಂದಿನ ಎಲ್ಲಾ ಸ್ಥಾನಗಳಿಗೆ ರಾಜಿನಾಮೆ ಸಲ್ಲಿಸಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.

ಹುಬ್ಬಳ್ಳಿಯಲ್ಲಿ ಶೀಘ್ರ ಬೃಹತ್ ಕಾರ್ಯಕ್ರಮ ಆಯೋಜಿಸಿ ಅವರನ್ನು ಪಕ್ಷಕ್ಕೆ ಸ್ವಾಗತಿಸಲಾಗುವುದು. ಸಾಕಷ್ಟು ರಾಜಕೀಯ ಅನುಭವ ಹೊಂದಿರುವ ಹೊರಟ್ಟಿ ಅವರು, ಪಕ್ಷಕ್ಕೆ ಬಂದಿರುವುದರಿಂದ ಪಕ್ಷದ ಬಲ, ಮತ್ತಷ್ಟು ಹೆಚ್ಚಾಗಿದೆ. ಅದರಲ್ಲೂ ವಿಶೇಷವಾಗಿ ಉತ್ತರ ಕರ್ನಾಟಕ ಭಾಗದಲ್ಲಿ ಶಕ್ತಿ ತುಂಬಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಂಗಳೂರಿನಲ್ಲಿಂದು ಹೇಳಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಧಾರಾಕಾರ ಮಳೆ ; ‌‌ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ರೆಡ್ ಅಲರ್ಟ್ ಹಾಗೂ ಯೆಲ್ಲೋ ಅಲರ್ಟ್ ಘೋಷಿಸಲು ಸೂಚನೆ

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ ಡೆಸ್ಕ್ : ಬೆಂಗಳೂರಿನ ಬಹುತೇಕ ಎಲ್ಲಾ ಭಾಗಗಳಲ್ಲಿ 100 ಮಿಲಿಮೀಟರ್‌ಗೂ ಹೆಚ್ಚು ಮಳೆಯಾಗಿದೆ. ಈ ಸಂಬಂಧ ನಿನ್ನೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಬಿಬಿಎಂಪಿ ಆಯುಕ್ತರೊಂದಿಗೆ ಚರ್ಚಿಸಲಾಗಿದೆ.

ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ರೆಡ್ ಅಲರ್ಟ್ ಹಾಗೂ ಯೆಲ್ಲೋ ಅಲರ್ಟ್ ಘೋಷಿಸಲು ಸೂಚಿಸಲಾಗಿದೆ. ಮುಖ್ಯಮಂತ್ರಿಗಳು ಇಂದು ಮಳೆಯಿಂದ ಹಾನಿಗೊಳಗಾದ ಕೆಲಪ್ರದೇಶಗಳಿಗೆ ಭೇಟಿ ನೀಡಿ ಪರಿಹಾರ ಘೋಷಿಸಲಿದ್ದಾರೆ ಎಂದು ಕಂದಾಯ ಸಚಿವ ಆರ್. ಅಶೋಕ ಬೆಂಗಳೂರಿನಲ್ಲಿಂದು ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending