ಅಂತರಂಗ
ರಾಜ್ಯದ ಗಡಿಯಿಂದ ದೇಶದ ಗಡಿಗೆ ಪ್ರವಾಸದ ಕ್ಷಣಗಳು..!

- ಕೆ.ಶ್ರೀಧರ್ (ಕೆ.ಸಿರಿ), ಯುವ ಸಾಹಿತಿ
ಗಡಿ ಪ್ರದೇಶಗಳೆ ಹಾಗೆ ವಿವಿಧ ರೀತಿಯ ವೈಶಿಷ್ಟ್ಯ ಹಾಗೂ ಪ್ರಪಂಚದ ಮೂಲೆಯಲ್ಲಾಗುವ ಕ್ರಿಯೆಗಳಿಗೆ ಪ್ರತಿಕ್ರಿಯಿಸುವ ಸ್ಪಂದನಾಶೀಲತೆಯನ್ನು ಗಡಿರೇಖೆಯಲ್ಲಿರುವ ಜಿಲ್ಲೆಗಳಾಗಲಿ,ರಾಜ್ಯಗಳಾಗಲಿ ಅಥವಾ ದೇಶದ ಗಡಿಯಲ್ಲಾಗಲಿ ಹೊಂದಿರುತ್ತವೆ ಗಡಿರೇಖೆಯಲ್ಲಿನ ಚಟುವಟಿಕೆಗಳು, ಸಂಪ್ರದಾಯಗಳು, ಜನಜೀವನ ಪದ್ದತಿಗಳುಆಡಳಿತಾತ್ಮಕ ವಿಚಾರಗಳು ವಿಭಿನ್ನವಾಗಿರುತ್ತವೆ.
ನಮಗೆಲ್ಲರಿಗೂ ತಿಳಿದಿರುವ ಹಾಗೆ ಚಾಮರಾಜನಗರ ಹಚ್ಚ ಹಸಿರುಳ್ಳ ಬೆಟ್ಟ ಗುಡ್ಡಗಳು, ನದ-ನದಿಗಳನ್ನೊಳಗೊಂಡಿರುವ ಒಂದು ಪ್ರವಾಸಿಗರನ್ನು ಸೆಳೆಯುವ ಭೂ ಲೋಕದ ಸ್ವರ್ಗ ಎಂದರೆ ಬಹುಶಃ ತಪ್ಪಾಗಲಾರದು. ಇಂತಹ ಗಡಿಜಿಲ್ಲೆಯಿಂದ ಕನ್ಯಾಕುಮಾರಿ ಪ್ರಸಿದ್ದ ಪ್ರವಾಸಿ ತಾಣಕ್ಕೆ ಹೋಗಬೇಕೆಂದು ಗೆಳೆಯರೆಲ್ಲರೂ ನಿರ್ಧರಿಸಿ ದಿನಾಂಕ 30/04/2022 ರ ಸಂಜೆ ಹೊತ್ತಿಗೆ ವಾಹನವೇರಿ ಕನ್ಯಾಕುಮಾರಿಯ ಕಡೆಗೆ ಹೊರಟೆವು.
ಲಗೇಜುಗಳು, ಶೂಗಳು, ಚಾರ್ಜರ್, ಪವರ್ ಬ್ಯಾಂಕ್ ಎಲ್ಲವೂ ತುಂಬಿಕೊಂಡು ಪುಣಜನೂರು ಚೆಕ್ ಪೋಸ್ಟ್ ದಾಟಿ ಹೊರಟೆವು ಆರಂಭದಲ್ಲಿಯೇ ದಾರಿಯಲ್ಲಿ ನಮಗೆ ಆನೆಗಳ ದಂಡು ಕಂಡು ಸಂತೋಷವಾಯಿತು ಆನೆ ಅಂದ್ರೆ ಎಂತಾ ಆನೆಗಳಿಂತೀರಾ ದೊಡ್ಡ ದೊಡ್ಡ ಕಾಡಾನೆಗಳು ರೋಡಿನ ಪಕ್ಕದ ಹುಲ್ಲುಗಾವಲಿನಲ್ಲಿ ಬೆಟ್ಟದಂತೆ ನಿಂತು ಸೊಂಡಿಲಾಡಿಸುತ್ತಿದ್ದವು.
ಹಾಗೆಯೇ ವಾಹನದಲ್ಲಿ ಪ್ರಯಾಣಿಸುತ್ತಾ ಸಿನೆಮಾ ಹಾಡುಗಳಿಗೆ ಹೆಜ್ಜೆ ಹಾಕುತ್ತಾ, ಹಾಡುಗಳನ್ನು ಹಾಡುತ್ತಾ ನಾನ ತರಹದ ಚೇಷ್ಟೆಗಳೊಂದಿಗೆ ನಮ್ಮ ಪ್ರಯಾಣ ಸಾಗಿ ಬಣ್ಣಾರಿಯ ಬಣ್ಣಾರಮ್ಮನ ದರ್ಶನ ಪಡೆದು ಡಾಬಾವೊಂದರಲ್ಲಿ ಊಟ ಸೇವಿಸಿ ಮುಂದೆ ಸಾಗಿದೆವು ಊಟದ ನಂತರ ಎಲ್ಲರೂ ಮೊಬೈಲ್ ಎಂಬ ಮಾಯಲೋಕದಲ್ಲಿ ಮುಳುಗಿ ಮಗ್ನರಾದೆವು ಮಧ್ಯದಲ್ಲಿ ಒಬ್ಬ ಗೆಳೆಯ ಬಸಣ್ಣಿ ಬಾ….ಬಸಣ್ಣಿ..ಬಾ ಎಂಬ ಹಾಡು ಪ್ಲೇ ಆಗಿದ್ದೆ ತಡ ಕುಳಿತಿರುವ ಹಾಸನದಿಂದ ಎದ್ದು ಬಂದು ಕುಣಿಯಲಾರಂಭಿಸಿ ಉಳಿದವರು ಕುಣಿಯಲಾರಂಭಿಸಿದೆವುಕುಣಿಯಲಾರಂಭಿಸಿದೆವು.
ಬೆವರು ಹರಿದು ದಮ್ಮತ್ತಿದಾಗ ರಾತ್ರಿಯ ಆ ಕಿಟಕಿಯ ಗಾಳಿಗೆ ತಲೆಗಳು ತೂಗಿ ಕುಳಿತಲ್ಲಿಯೇ ಎಲ್ಲರೂ ನಿದ್ರೆಗೆ ಜಾರಿದೆವು ನಿದ್ದೆ ಯಾವಾಗ ಬಂತೋ ಕಾಣೆ ಬೆಳಿಗ್ಗೆ 6.18 ಕ್ಕೆ ಕಣ್ಣು ತೆರೆದು ನೋಡಿದರೆ ಯಾವುದೋ ನಮ್ಮದಲ್ಲದ ಊರಿಗೆ ಬಂದಂತೆನಿಸಿತು, ತಮಿಳು ಭಾಷೆಯ ಗಂಧವೆ ತಿಳಿಯದ ನಮಗೆ ದಿಕ್ಕುತಪ್ಪಿ ಬಂದಂತಾಯಿತು ” ವಾಂಗ್ ತಂಬಿ ನಲ್ಲ ರೂಂ ಇರುಕಾ ಕುಲೀರಂತ ನೀರ್, ವೆನ್ನೀರ್ ಅಂಕು ಉಲ್ಲತ್, ಆಯಿರಮ್ ವಾಟಕೈಕ್ಕು ವಾಕನತ್ತೈ ನಿರುತ್ತುವತ್ತಮ್” ಎಂದು ಯಾರೋ ಒಬ್ಬ ಕೊಂಗರ ನಾಡಿನವನು ನಮ್ಮನ್ನು ಕರೆದಾಗ ನಮ್ಮ ವಾಹನ ಆಗಾಗಲೇ ಸಮುದ್ರದ ತೀರದ ಹತ್ತಿರವಿರುವ ಶ್ರೀ ರಾಮೇಶ್ವರ ದೇವಾಲಯದ ಬಳಿ ನಿಂತಿತ್ತು ಕುತೂಹಲದಿಂದ ನಮಗೆ ಬರುವ ಹರಕು ಮುರುಕು ತಮಿಳಿನಲ್ಲ “ಇಂಕ ಸಮುದ್ರಕ್ ಪೇರು ಸೊಲ್ಲು” ಎಂದಾಗ “ಅಗ್ನಿತೀರ್ಥಂ” ಎಂದು ಟೀ ಬೋಂಡಾ ಬೇಯಿಸುತ್ತಲೇ ಒಬ್ಬ ವ್ಯಾಪಾರಿ ತಿಳಿಸಿದ ಗಾಡಿ ಹೊರಟು ದಾರಿ ಕಾಣದೆ ಟ್ರಾಫಿಕಿನಲ್ಲಿ ನಿಂತಾಗ ನಮ್ಮ ಹುಡುಗರು ಸಮುದ್ರ ದಡ ನೋಡಿ ಸುಮ್ಮನೆ ಬಿಡುವರೆ ಆಗಲೇ ಅನ್ವೇಷಕರಂತೆ ಗೂಗಲ್ ಮ್ಯಾಪ್ ಹುಡುಕಿ ಭಾರತದ ಕೆಳಭಾಗದ ಶ್ರೀಲಂಕಾದ ಗಡಿಯಲ್ಲಿದ್ದೇವೆಂದರಿತು ಗೂಗಲ್ ಮ್ಯಾಪ್ ನ್ನು ಸ್ಕ್ರೀನ್ ಶಾಟ್ ತೆಗೆದು ವಾಟ್ ಆಫ್ ಸ್ಟೇಟಸ್ ಹಾಕಿದ್ದೇ ಹಾಕಿದ್ದು ಇನ್ನು ಹಲವು ಪೋಟೋ ಪ್ರೇಮಿಗಳು ಹಾಳು ಮುಖದಲ್ಲಿಯೇ ಸಮುದ್ರ ತೀರದಲ್ಲಿ ನಿಂತು ಆ ಬೋಟ್ ಗಳು ಕಾಣುವಂತೆ ಪೋಟೋ ತೆಗೆಸಿಕೊಂಡು ವಾಟ್ಸ್ ಆಫ್ ಸ್ಟೇಟಸ್ಸಿನಲ್ಲಿ ಹಂಚಿಕೊಂಡು ಸಂಭ್ರಮಿಸಿದರು ಅಂತೂ ಇಂತೂ ರಾಮೇಶ್ವರಂ ನ ಬಾಡಿಗೆ ರೂಂ ಗೆ ಹೋಗಿ ಬೇಗ ಬೇಗನೆ ಜಳಕ ಮಾಡಿ ಎಷ್ಟು ಸಾಧ್ಯವೋ ಅಷ್ಟು ಪ್ರೇಕ್ಷಣೀಯ ಸ್ಥಳಗಳನ್ನು ಕವರ್ ಮಾಡುವ ಆಸೆಯಿಂದ ಹೋದರೆ ಕೆಲವರು ಜಳಕ ಮಾಡಿ ರೆಡಿಯಾದರೆ ಇನ್ನು ಕೆಲವರು ಮಲಗಿ ಮೊಬೈಲ್ನಲ್ಲಿ ಹರಟುತ್ತಾ ಕುಳಿತು ನೀ ಬಾ…ನಾ …ಬಾ ನಿನ್ನಿಂದ ಲೇಟು….ನಿನ್ನಿಂದಾ ಲೇಟು ಎಂದು ವಾದಿಸುತ್ತಾ ಅಲ್ಲಿಯೇ ಪುಟ್ ಪಾತ್ ಮೇಲಿರುವ ಹೋಟೆಲ್ಲೊಂದರಲ್ಲಿ ಇಡ್ಲಿ ಸವಿದೆವು ಇಲ್ಲಿಯೂ ಕೂಡ ಅರೆ ಬರೆ ತಮಿಳು ಕಲಿತ ನನ್ನ ದೋಸ್ತ್ ರಾಕೇಶ್ ನಮ್ಮ ಮೇಸ್ತ್ರೀಯಂತೆ ‘ಇಡ್ಲಿ ಕೊಡಂಗ, ತಣ್ಣೀ ಕೊಡಂಗ’ ಎಂದು ಹಾವ ಭಾವ ಮಾಡಿ ಬಲು ಜೋಕಾಗಿ ತಿಣುಕಾಡಿ ಹೇಳಹತ್ತಿದ ನಾವು ಕೂಡಾ ಭಾಷೆ ಬಾರದೆ ಇತ್ತ ಸುಮ್ಮನೆ ಇರದೆ ತೆಲುಗು ಕನ್ನಡ ತಮಿಳು ಸೇರಿಸಿ “ರಂಡು ಇಡ್ಲಿ ಕೊಡಿ ” ಎಂದು ಕೇಳಿ ಮುಖ ಮುಖ ನೋಡಿಕೊಂಡು ನಕ್ಕು ತಿಂದು ಧನುಷ್ ಕೋಡಿ ಮತ್ತು ಆರ್ಚಲ್ ಮುನಾಯ್ ನೋಡಬೇಕು ಬಿಸಿಲು ನೆತ್ತಿಗೇರುವ ಹೊತ್ತಿಗಾಗಲೇ ಎಂದು ಅವಸರವಸರವಾಗಿ ಹೊರಟೆವು ಸಮುದ್ರ ತೀರದ ತಾಪ ಯಪ್ಪಾ ! ಹೇಳತೀರದು.
ಧಗೆಗೆ ಮೈಯಲ್ಲಿ ಹರಿಯುವ ಬೆವರಿಗೆ ಎಷ್ಟು ಸ್ನಾನ ಮಾಡಿದರೂ ವ್ಯರ್ಥ ಆ ಧಗೆಗೆ ಮುಖಗಳುರಿದು ನಿದ್ದೆಗೆಟ್ಟ ನಮ್ಮ ಮುಖಗಳು ಇನ್ನಷ್ಟು ಕಳೆಗುಂದಿದವು….. ಹಾಗೆಯೇ ಕಿಟಕಿಯಲ್ಲಿ ಕಣ್ಣಾಡಿಸಿ ನೋಡಿದರೆ ಆಕಾಶ ಯಾವುದೋ ಸಮುದ್ರ ಯಾವುದೋ ಒಂದು ಕಾಣೆ ಎಲ್ಲವೂ ಕರತಲಾಮಲಕ ಧೊಪ್ಪೆಂದು ಫೀನಿಕ್ಸ್ ನಂತೆ ಬರುವ ಆ ರಕ್ಕಸ ಅಲೆಗಳ ಕಂಡು ನಾವು ವಿಚಲಿತರಾದೆವು ಹೋ……. ಎಂದು ಕೂಗಿ ವಾವ್ಹ್ ಎಂದು ಅರಚಿ ಅಲೆಗಳನ್ನು ನೋಡಿ ಸಮುದ್ರದಲ್ಲಿ ಒತ್ತಡ ಎಷ್ಟಿರಬೇಕೆಂದು ಚರ್ಚಿಸಿ ತಮ ತಮಗೆ ತಿಳಿದ ಅನಿಸಿಕೆಗಳನ್ನು ವ್ಯಕ್ತಪಡಿಸಿ ಆರ್ಚಲ್ ಮುನಾಯ್ ಪ್ರಸಿದ್ದ ಸ್ಥಳಕ್ಕೆ ಬಂದೆವು ಅದು ಮೂರು ಸಮುದ್ರಗಳು ಸಂಗಮವಾಗುವ ಜಾಗ , ಸ್ವರ್ಗದ ಗಡಿಯೆಂದರೂ ತಪ್ಪಾಗಲಾರದೂ ಆ ಸಮುದ್ರದ ಅಲೆಗಳ ನರ್ತನ ಕಂಡು ಕ್ಲಿಚಕ್… ಕ್ಲಿಚಕ್… ಎಂದು
ಪೋಟೋ ತೆಗಿಸಿಕೊಂಡು ಹುಚ್ಚೆದ್ದು ಕುಣಿದು ಲೋಕವನ್ನೆ ಮರೆತು ಸಂಭ್ರಮಿಸಿ ಮುಂದೆ ಧನುಷ್ ಕೋಡಿ ಎಂಬ ಬೇಚಿರಾಕ್ ಗ್ರಾಮಕ್ಕೆ ಬಂದೆವು ಧನುಷ್ ಕೋಡಿ ಶ್ರೀ ರಾಮನು ಬಾಣ ಬಿಟ್ಟ ಊರು 1964 ರಲ್ಲಿ ಸೈಕ್ಲೋನ್ ಬಂದು ಇಡೀ ಗ್ರಾಮಕ್ಕೆ ಗ್ರಾಮವೇ ಕೊಚ್ಚಿಕೊಂಡು ನೀರುಪಾಲಾಗಿದೆ ಅಲ್ಲಿ ಇಂದಿಗೂ ಪಾಳು ಮನೆಗಳು ರೈಲ್ವೇ ಜಂಕ್ಷನ್ ಇದ್ದು ಅಲ್ಲಿ ರಾಮಸೇತುವೆಗೆ ಬಳಸಿದ ‘ನೀರಿನಲ್ಲಿ ತೇಲುವ ಕಲ್ಲು’ ನೋಡಿ ಖುಷಿಪಟ್ಟೆವು ಮುಂದೆ ಸಾಗಿ ರಾವಣನು ತನ್ನ ಸಹೋದರನಿಗೆ ಪಟ್ಟಾಭಿಷೇಕ ಮಾಡಿದ ಸ್ಥಳವನ್ನು ನೋಡಿ ಕೈ ಮುಗಿದು, ಎಳನೀರು, ಐಸ್ ಕ್ರೀಂ ತಿಂದು ರಾಮೇಶ್ವರಂ ಕಡೆಗೆ ಹೊರಟು ಸೀದಾ ರಾಮೇಶ್ವರ ದೇವಾಲಯಕ್ಕೆ ಹೊರಟೆವು ಅಬ್ಬಾಬ್ಬ ! ಅದೆಂತ ಅದ್ದೂರಿ ದೇವಾಲಯ ಆ ಕಂಬಗಳು ಆ ಹಜಾರಗಳು, ಆ ಮಂಟಪಗಳು, ಆ ಮೇಲ್ಚಾವಣಿಗಳು, ಆ ದೇವರ ದರ್ಶನಕ್ಕೆ ಸಾಲುಗಟ್ಟಿ ನಿಂತ ಭಕ್ತರು, ಆ 21 ಕೊಳದ ನೀರಿನಲ್ಲಿ ಸ್ನಾನ ಮಾಡಲು ನಿಂತ ಜನರು ಕಲೆ ಮತ್ತು ವಾಸ್ತುಶಿಲ್ಪ ನೋಡಿ ಯಾವ ಶತಮಾನದ ದೇವಾಲಯಗಳೆಂದು ನೋಡಿದರೆ 7-8 ನೇ ಶತಮಾನದ ಭವ್ಯವಾದ ರಾಮೇಶ್ವರ ದೇವಾಲಯದ ಶಿಲ್ಪಿಗಳಿಗೆ ನನ್ನ ಧೀರ್ಘದಂಡ ನಮಸ್ಕಾರಗಳು.
ದರ್ಶನ ಮುಗಿಸಿಕೊಂಡು ಮಜ್ಜಿಗೆ ಕುಡಿದು ಜನನ-ಮರಣ ನಾಗೇಂದ್ರನ ಕಪಿಚೇಷ್ಟೇ ಗೂಗಲ್ ಮ್ಯಾಪ್ ರೂಟ್ ಹಿಡಿದು ದಾರಿ ಸಿಗದೆ ಹೆಣಗಾಡಿ ನಾಗನಿಗೆ ಬೈದಾಡಿ ಬಸವಳಿದು ರೂಂ ತಲುಪಿದ್ದಾಯ್ತು ಪುನ: ನೇರ ಕನ್ಯಾಕುಮಾರಿಗೆ ಹೋಗಲು ನಿರ್ಧರಿಸಿ ಕೆಲಹೊತ್ತು ವಿಶ್ರಮಿಸಿ ಹೋಗೋಣವೆಂದು ವಾಗ್ವಾದ ನಡೆಸಿ ಯಾರ ಮಾತಿಗೂ ಒಲಿಯದ ನಮ್ಮ ಹುಡುಗರು ಧಗೆಯ ಏಟಿಗೆ ಒಲಿದು ಗಂಟುಮೂಟೆ ಕಟ್ಟಿಕೊಂಡು ಕನ್ಯಾಕುಮಾರಿಯ ಹಾದಿ ಹಿಡಿದೆವು.
ಉಫ್ss…ಧಗೆಯ ಛಡಿ ಏಟಿಗೆ ಹಸಿದ ಹೊಟ್ಟೆಗೆ ಊಟ ಮಾಡಲು ನಿರ್ಧರಿಸಿ ಯಾವುದಾದರೂ ಚೀಫ್ ಅಂಡ್ ಬೆಸ್ಟ್ ಹೋಟೆಲ್ ಹತ್ತಿರ ವಾಹನ ನಿಲ್ಲಿಸಲು ಹೇಳಿದೆವು ಸಮುದ್ರದ ಮಧ್ಯೆ ಮೇಲ್ಸುತೆವೆಯ ಹತ್ತಿ ಮಾವಿನ ಹಣ್ಣು, ಪೈನಾಪಲ್ ಸವಿಯುತ್ತಾ ಸಮುದ್ರದ ವಿಹಂಗಮ ನೋಟ ನೋಡಿ ಕಣ್ತುಂಬಿಕೊಂಡು ಮುಂದೆ ಸಾಗಿ ಒಂದೆರೆಡು ಹೋಟೆಲ್ಲುಗಳ ನೋಡಿ ಕೊನೆಗೆ ಒಂದು ಪುಟ್ಟ ಗುಡಿಸಲಿನ ಹೋಟೆಲ್ ಹತ್ತಿರ ಊಟಕ್ಕೆ ಹೋದಾಗ ಅಲ್ಲಿ ಅನ್ನ ಮೀನುಳಿ ಮತ್ತು ಫಿಶ್ ಫ್ರೈ ಮಾತ್ರವೇ ಇದ್ದುದಾಗಿ ಹೇಳಿದರು ನಾವು ಅಲ್ಲಿಯೇ ಊಟ ಮಾಡಲು ಕುಳಿತೆವು ಊಟ, ಅಂದ್ರೆ ಅದು ಕಣ್ರೀ ಆ ಹೋಟೆಲ್ಲಿನ ಬೀಟ್ ರೋಟ್ ಪಲ್ಯಾ, ಅಲಸಂದೆ ಪಲ್ಯಾ, ಆಮ್ಲೇಟ್, ಆ ಮೀನಿನ ಫ್ರೈ ಅಬ್ಬಾ ನಾಲಿಗೆ ಮೇಲೆ ಆ ರುಚಿ ಇನ್ನೂ ಹಾಗೆಯೇ ಇದೆ ಸಮುದ್ರದ ಮೀನಲ್ವಾ ಹೊಳೆಯ ಮೀನು ತಿಂದ ನಮಗೆ ಸಮುದ್ರದ ಮೀನು ಬಲು ರುಚಿ ಕೊಡ್ತು ಈ ಬರಗೆಟ್ಟ ನಾಲಿಗೆಗೆ ಪ್ರಯಾಣ ಹಾಗೆಯೇ ಸಾಗಿತು.
ಒಂದೆರಡು ಕಡೆ ಟೀ ಕುಡಿದು ಹೊರಟು ಸೀದಾ ಬಾಲಮುರುಗನ್ ದೇವಾಲಯಕ್ಕೆ ಹೊರಟೆವು ಬೀಚ್ನಲ್ಲಿ ಕೆಲವರು ಈಜಿ ಕೆಲವರು ದರ್ಶನ ಪಡೆದು ಸಂಭ್ರಮಿಸಿ ಮುಂದೆ ಡಾಬ ಒಂದರಲ್ಲಿ ಊಟ ಮುಗಿಸಿ ವಾಹನದಲ್ಲಿ ಸಿನೆಮಾ ಹಾಡುಗಳ ಮಧ್ಯೆ ಪ್ರಯಾಣ ಸಾಗಿ ರಾತ್ರಿ 12 ಗಂಟೆಯ ಮೇಲೆ ಕನ್ಯಾಕುಮಾರಿ ತಲುಪಿ ವಾಗ್ ಯುದ್ಧಕ್ಕಿಳಿದು ಎರಡು ರೂಂ ಮಾಡಿ ಬೆಳಗ್ಗೆ ಕನ್ಯಾಕುಮಾರಿಯ ಪ್ರಸಿದ್ಧ ಸೂರ್ಯೋದಯ ಆಗುವ ದೃಶ್ಯವನ್ನು ನೋಡಬೇಕೆಂದು ಚರ್ಚಿಸಿ ಮೊಬೈಲ್ ಚಾರ್ಜ್ ಗೆ ಹಾಕಿ, ಹಸಿ ಬಟ್ಟೆಗಳ ಒಣಗಾಕಿ ಮಲಗಿ ಅಲಾರಾಂ ಸದ್ದಿಗೆ ನೀ ಏಳು, ನಾ ಏಳು ಎಂದು ಕೊನೆಗೆ ಒಂದ್ಮೂರ್ನಾಲ್ಕು ಜನ ಮಾತ್ರವೇ ಕನ್ಯಾಕುಮಾರಿಯ ಕವಿ ತಿರುವಳ್ಳೂರು ಪ್ರತಿಮೆ ಮತ್ತು ಸ್ವಾಮಿ ವಿವೇಕಾನಂದ ರಾಕ್ ಗಾರ್ಡನ್ ಹತ್ತಿರದ ಕಡಲ ತೀರಕ್ಕೆ ಹೊರಟೆವು ” ಸ್ವರ್ಗ ಮೇಲೆಲ್ಲೂ ಇಲ್ಲ ಕನ್ಯಾಕುಮಾರಿಯಲ್ಲೆ ಇದೆ ಅಂತ ನನಗನಿಸ್ತು ಏನ್ರೀ ಆ ಸಮುದ್ರದ ಅಲೆಗಳ ಶಬ್ಧ ಅಬ್ಬಾ…..! ಏನ್ರೀ ಸೂರ್ಯೋದಯಕ್ಕೂ ಮುನ್ನ ಸಮುದ್ರದಾಸಿಗೆಯ ಮೇಲೆ ಬೀಳೋ ಹೊಂಬಣ್ಣ, ಕೆಂಬಣ್ಣ ಮತ್ತು ಮೀನುಗಾರಾರು ಸಮುದ್ರದ ಸಣ್ಣ ಹಡಗಿನಲ್ಲಿ ಬಲೆಯನಾಕುವ ದೃಶ್ಯ ಎಲ್ಲವೂ ಸ್ವರ್ಗಸದೃಶ್ಯವೇ ಸರಿ” ಅಂತೂ ಇಂತೂ ಸಮುದ್ರದಿಂದಲೇ ಸೂರ್ಯ ಹುಟ್ಟೋದೇನೋ ಅನಿಸ್ತು ಆ ಸೂರ್ಯೋದಯ ಆ ಚೆಲುವನ್ನು ವರ್ಣಿಸೋಕೆ ನನ್ನ ಹತ್ತಿರ ಪದಗಳೇ ಇಲ್ಲ ಆ ಸಮುದ್ರದಲೆಯ ನರ್ತನದ ಮುಂದೆ ನನ್ನ ಶಬ್ದ ಕೋಶವೇ ಸೋತು ಹೋಗಿದೆ.
ಸೂರ್ಯನನ್ನು ಕೈಯಲ್ಲಿ ಸೆರೆಹಿಡಿಯುವುದು, ವಿಡಿಯೋ ಮಾಡಿಕೊಳ್ಳುವುದು ಬೆಳ್ಳಂಬೆಳಗ್ಗೆ ಇಂದ್ರಲೋಕಕ್ಕೆ ಹೋಗಿ ಬಂದಂಗಾಯ್ತು ನನಗೆ ಇದನ್ನ ನೋಡಿದ ನಾವೇ ಧನ್ಯರು ಅಲ್ಲಿಯವರೆಗೆ ಬಂದು ಸೂರ್ಯೋದಯ ನೋಡದೆ ಕುಂಭಕರ್ಣನಂತೆ ನಿದ್ರಿಸಿದ ನಮ್ಮ ಹುಡುಗರೆ ನತದೃಷ್ಟರು. ಅಂತೂ ಇಂತೂ ಸೂರ್ಯೋದಯ ನೋಡಿ ಬೋಟ್ನಲ್ಲಿ ಸ್ವಾಮಿ ವಿವೇಕಾನಂದ ರಾಕ್ ಪ್ರತಿಮೆ ಹತ್ತಿರ ಹೋಗಬೇಕು ಅಂತ ಕ್ಯೂನಲ್ಲಿ ಮಧ್ಯ ಹೋಗಿ ಸೇರಿಕೊಂಡಾಗ ನಮ್ಮ ಹಿಂದೆ ಇದ್ದ ಕೆಲವರು ತಿಳಿಯದ ತಮಿಳು ಭಾಷೆಯಲ್ಲಿ ಶಪಿಸಿ ಪೋಲಿಸರಿಗೆ ಹೇಳಿದರು ಪ್ರಯೋಜನವಾಗಲಿಲ್ಲ ಅವರು ಬೈಯ್ಯೋದೆಲ್ಲ ನಮಗೆ “ಹಳೆಗನ್ನಡದ ಪದ್ಯದ” ತರ ಕೇಳಿಸ್ತು ಅಂತೂ ಇಂತೂ ಬೋಟ್ನಲ್ಲಿ ಪ್ರತಿಮೆ ಹತ್ತಿರ ಹೋಗಿ ಸಮುದ್ರದ ಮಧ್ಯೆ ನಿಂತು ಕುಣಿದು ಕುಪ್ಪಳಿಸಿ, ಕಣ್ಣಿಗೆ ಎಟಕುವಷ್ಟು ಸಮುದ್ರ ನೋಡಿ ವಾಪಾಸ್ ರೂಂಗೆ ಬಂದು ಮಧುರೈಗೆ ಊಟ ಮುಗಿಸಿಕೊಂಡು ಹೊರಟೆವು ಮಧ್ಯೆ ಒಂದು ಬೀಚ್ನಲ್ಲಿ ಸಂಜೆ ಈಜಾಡಿ ಸಮುದ್ರದ ದಡದಲ್ಲಿ ಕಬ್ಬಡಿ ಆಟ ಆಡಿ ಮತ್ತೆ ಪ್ರಯಾಣ ಸಾಗಿತು.
ನನ್ನ ಮಧುರೈ ‘ದೇವಾಲಯಗಳ ನಾಡು’ ಸಾಹಿತ್ಯಿಕ ಪುಷ್ಪಮಯ & ಧಾರ್ಮಿಕ ಉತ್ಸಾಹಕ್ಕೆ ಮಧುರೈ ಹೆಸರುವಾಸಿ ‘ಮತಿರೈ’, ‘ಕೂಡಲ್’ & ‘ಆಲವ್ಯಡಿನರು’ ಮಧುರೈನ ಮೂಲ ಹೆಸರು ಮಧುರೈ ಮೀನುಗಾರಿಕೆ ಉದ್ಯಮಕ್ಕೆ ಹೆಸರುವಾಸಿ ಗ್ರೀಕ್, ರೋಮನ್, ಅರೇಬಿಕ್ ವಿದೇಶಿ ವ್ಯಾಪಾರಿಗಳು ಮಧುರೈಗೆ ಭೇಟಿ ನೀಡಿದ್ದಾರೆ. ‘ದೇವಾಲಯಗಳ ನಗರ’, ‘ಹಬ್ಬಗಳ ನಗರ’ ಅದೆಂತಹ ವೈಭವ ರೀ ಆ ದೇವಾಲಯದ್ದು. ಮಧುರೈ ಭಾರತೀಯ ಉಪಖಂಡದ ಪ್ರಾಚೀನ & ವೈಭವದ ನಗರಗಳಲ್ಲಿ ಒಂದು ಇದು ಭಾರತೀಯ ಪರ್ಯಾಯ ದ್ವೀಪದ ದಕ್ಷಿಣ ಭಾಗದಲ್ಲಿದೆ.
ಅಬ್ಬಾ ರಾತ್ರಿ ಹೊತ್ತಿಗೆ ಮಧುರೈಗೆ ಬಂದು ವಸತಿ ಮಾಡಿ ಬೆಳಗ್ಗೆ ಎದ್ದು ಮಧುರೈ “ಅರಳ್ಮಿಗು ಮೀನಾಕ್ಷಿ ಸುಂದರೇಶ್ವರ” ದೇವಾಲಯದ ಗೋಪುರ ಕೋಟೆ ವಿನ್ಯಾಸದ ಆ ಶೈಲಿ ನೋಡಿ ನಾವು ಅಕ್ಷರಶಃ ದಂಗಾಗಿ ಹೋದ್ವಿ. ಬಾದಾಮಿ ಐಹೊಳೆ ಪಟ್ಟದಕಲ್ಲು ಹಿಂದೂ ಶಿಲ್ಪಕಲೆಯ ಸಂಪ್ರದಾಯದ ತೊಟ್ಟಿಲುಗಳು. ಆದರೆ ಮೀನಾಕ್ಷಿ ದೇವಾಲಯವನ್ನು ಸೂಕ್ಷ್ಮರೂಪ ಅಥವಾ ಬ್ರಹ್ಮಾಂಡ ಮಾದರಿಯ ಸ್ಥೂಲಕಾಯ ಎಂದು ಕಲ್ಪಿಸಲಾಗಿದೆ . ತಮಿಳರಿಗೆ ‘ಸಂಗಂ’ ಶಿಲ್ಪಕಲೆ ಚೆನ್ನಾಗಿ ಪರಿಚಿತವಿತ್ತು ಮಧುರೈ ದೇವಾಲಯ ಯಾವ ಒಬ್ಬರ ಆಳ್ವಿಕೆಯಲ್ಲಿ ಪೂರ್ಣಗೊಂಡ ದೇವಾಲಯವಲ್ಲ ಆರಂಭದಲ್ಲಿ ಪಲ್ಲವರು,ಪಾಂಡ್ಯರು, ಚೋಳರು, ಗಂಗರು, ಹಾಗೂ ವಿಜಯನಗರ ಸಾಮ್ರಾಜ್ಯದ ಮಧುರೈನ ನಾಯಕರ ಕೊಡುಗೆ ಅಪಾರ ದೆಹಲಿಯ ಸುಲ್ತಾನರು, ಮುಸ್ಲಿಂ ಆಡಳಿತಗಾರರು, ಆಳ್ವಿಕೆ ನಡೆಸಿದರು ಆದ್ದರಿಂದ ಮಧುರೈಯನ್ನ ಜಾತ್ಯತೀತ ವಾಸ್ತುಶಿಲ್ಪ & ಶಿಲ್ಪಕಲೆ ಅಲಂಕಾರಗಳ ಆಕರ್ಷಣೆ & ವಿವಿಧ ಧರ್ಮಗಳು & ಸಾಮಾಜಿಕ ವ್ಯವಸ್ಥೆಗಳಿಗೆ ಸೇರಿದ ಜನರು ಸಾಮರಸ್ಯದಿಂದ ಬದುಕಿದ ನಾಡೆಂದು ಪ್ರಸಿದ್ದಿ ಹಿಂದೂ ಪ್ರತಿಮಾಶಾಸ್ತ್ರ ಮತ್ತು ಧರ್ಮಶಾಸ್ತ್ರ, ಪಂಚಾಯತನ & ಶರ್ಮತಾ ಪರಿಕಲ್ಪನೆಗಳ ಚಿತ್ರಣ ದೈವತ್ವಗಳ ಚಿತ್ರಣ,ವಿಶ್ಣುವಿನ ಹತ್ತು ಅವತಾರಗಳು ವೈಷ್ಣವ ಧರ್ಮದ ಒಲವು, ಕೃಷ್ಣ, ರಾಮಾಯಣ, ಮಹಾಭಾರತ, ಬೇಟೆಯ ದೃಶ್ಯಗಳು, ನೃತ್ಯಗಳು, ಕೋಲಾಟ, ಜಾನಾನದ ಕಲೆಗಳ ಸಾಮಾಜಿಕ ಚಟುವಟಿಕೆಗಳ ಚಿತ್ರಣ, ರತಿ&ಮನ್ಮಥನ ಪ್ರತಿಮೆಗಳು ಕಾಮಾಯಣದ ಆಧಾರ, ಆಡಳಿತಾಧಿಕಾರಿಗಳು ಮತ್ತು ಅಧಿಕಾರಿಗಳ ಭಾವಚಿತ್ರ & 2000 ವರ್ಷಗಳ ಬ್ರಾಹ್ಮಿ & ತಮಿಳು ಶಾಸನಗಳನ್ನು ಹೊಂದಿದೆ.
ಮೀನಾಕ್ಷಿ ಕಾಂಚನಮಾಲ, ನೆಲಮಾಳಿಗೆ, ಮಧುರೈ ಮಂಟಪ, ಆನಂದ ನಂದಿ, ಅಗ್ನಿ ವೀರಭದ್ರ, ಅಘೋರ ವೀರಭದ್ರ, ನವಗ್ರಹಮಂಟಪ, 49 ಕವಿಗಳ ಶಿಲ್ಪ, ಕದಂಬ ವೃಕ್ಷಗಳು , ನಾಗರಮಂಟಪ, ಸಂಗೀತ ವಾದ್ಯಗಳು, ಅಷ್ಟಶಕ್ತಿ ಮಂಟಪ, ವೇದಮರಬಡ್ಡೆ, ನೃತ್ಯ ಗಣಪತಿ & ಸುಬ್ರಮಣ್ಯ, ಎರಡು ಗೋಲ್ಡನ್ ಟವರ್ 12 ಗೋಪುರಗಳು, ರೋಸ್ ಪೀಟರ್ ಎಂಬ ಆಂಗ್ಲ ಜಿಲ್ಲಾಧಿಕಾರಿ ಮೀನಾಕ್ಷಿ ದೇವಿಯ ಪವಾಡದಿಂದ ಜೀವ ಉಳಿದುದಕ್ಕಾಗಿ ಬಂಗಾರದ & ಅಮೂಲ್ಯವಾದ ಕಲ್ಲುಗಳಿಂದ ಹೊದಿಸಿದ ಸ್ಟಿರಫ್ ಅನ್ನು ಮಾಡಿಸಿದನೆಂಬ ಐತಿಹ್ಯವಿದೆ 45 ಎಕರೆಯಲ್ಲಿರುವ ದೇವಾಲಯವನ್ನು ಅಲ್ಲಾವುದ್ದೀನ್ ಖಿಲ್ಜಿಯ ದಂಡನಾಯಕ ಮಲ್ಲಿಕಾಫರ್ ಒಮ್ಮೆ ದಾಳಿ ಅಪಾರ ಪ್ರಮಾಣದ ಸಂಪತ್ತನ್ನು ಲೂಟಿ ಮಾಡಿದ್ದನು ಮತ್ತು ದೇವಾಲಯದ ಒಳಗಡೆ ಇರುವ ಒಂದು ಕೊಳದಲ್ಲಿ ಬಂಗಾರದ ತಾವರೆಗಳು ಅರಳುತ್ತಿದ್ದವು ಆ ಕಾಲದಲ್ಲಿ ಕವಿಗಳು ಬರೆದ ಪುಸ್ತಕಳು ಗಟ್ಟಿಯಾಗಿದ್ದರೆ ನೀರಿನಲ್ಲಿ ತೇಲುತ್ತಿದ್ದವು ಜೊಳ್ಳಾಗಿದ್ದರೆ ನೀರಿನಲ್ಲಿ ಮುಳುಗುತ್ತಿದ್ದವು ಈ ರೀತಿಯಾಗಿ ಪುಸ್ತಕಗಳ ಸತ್ವವನ್ನು ತಿಳಿಯಲು ಈ ಕೊಳವನ್ನು ಬಳಸಲಾಗುತ್ತಿತ್ತು ಎಂಬ ಐತಿಹ್ಯವಿದೆ. ಮಧುರೈ ನಗರವು ದೇವಾಲಯದ ತಾವರೆಯ ಎಲೆಗಳಂತೆ ಚಾಚಿಕೊಂಡು ಬೆಳೆದಿದೆ.
ಮಧುರೈನ ಮೀನಾಕ್ಷಿ ದೇವಾಲಯ ನೋಡಿಕೊಂಡು ಪಳನಿ ಬೆಟ್ಟಕ್ಕೆ ಹೋಗಿ ಪಳನಿ ಸುಬ್ರಮ್ಯ ಸ್ವಾಮಿಯ ದರ್ಶನವನ್ನು ಮೆಟ್ಟಿಲು ಏರಿ ಹತ್ತಿ ದರ್ಶನ ಪಡೆದು ಪುನಃ ಚಾಮರಾಜನಗರಕ್ಕೆ ಹೊರಟೆವು ಇಂತಹ ಸಮುದ್ರಗಳೊಂದಿಗೆ ಮಾತು, ದೇಗುಲಗಳ ದರ್ಶನ, ಸಂಭ್ರಮದೊಂದಿಗೆ ಪ್ರಯಾಣ ಜೀವನವೆಂಬ ಪುಸ್ತಕರ ಒಂದೊಳ್ಳೆ ಪುಟವಾಗಿದೆ.
(ಕೆ.ಶ್ರೀಧರ್ (ಕೆ.ಸಿರಿ)
ಯುವ ಸಾಹಿತಿ
636229492)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ಭಾರತದ ಜಾತಿ ತಾರತಮ್ಯವನ್ನ ಪ್ರಶ್ನಿಸುತ್ತಿರುವ ಚಲನಚಿತ್ರ ನಿರ್ದೇಶಕ ಪಾ.ರಂಜಿತ್..!

- ಮೂಲ : ನಿಹಾ ಮಸಿಹ, ಅನುವಾದ : ಹರೀಶ್ ಗಂಗಾಧರ್
ರಂಜಿತ್ ಚಿತ್ರರಂಗಕ್ಕೆ ಕಾಲಿಟ್ಟು ಹತ್ತು ವರುಷಗಳು!
ಪಾ ರಂಜಿತ್ ನಿಗೆ ಅವನವ್ವ “ನಿನ್ ಜಾತಿ ಬಗ್ಗೆ ಎಲ್ಲು ಹೇಳಿಕೊಳ್ಬೇಡ” ಅಂತ ಆಗಾಗ ನೆನಪಿಸುತ್ತಿದ್ದರಂತೆ. ತಾಯಿಯ ಈ ಕಿವಿಮಾತುಗಳ ಹೊರತಾಗಿಯೂ ಇಲ್ಲಿಯವರೆಗೆ ಇಡಿಯ ಚಿತ್ರರಂಗದಲ್ಲಿ ತೀರಾ ವಿರಳವೆನ್ನಬಹುದಾದ ಧೈರ್ಯವನ್ನೇ ತೋರಿದ. ತನ್ನ ಅಸ್ಮಿತೆಯನ್ನೇ ತನ್ನ ಚಿತ್ರಗಳಲ್ಲಿ ಕೇಂದ್ರವಾಗಿಸಿಕೊಂಡು. ರಂಜಿತ್ ಭಾರತದ ಮೊದಲ ಕಮರ್ಶಿಯಲಿ ಯಶಸ್ವಿ ಚಿತ್ರ ನಿರ್ದೇಶಕ/ನಿರ್ಮಾಪಕ. ದಶಕಗಳ ಸಕಾರಾತ್ಮಕ ಕಾನೂನು ಕ್ರಮ ಹಾಗು ತಾರತಮ್ಯ ನಿಷೇಧ ಕಾಯ್ದೆಗಳಿದ್ದರು ದೇಶದಲ್ಲಿ ಆಳವಾಗಿ ಬೇರೂರಿರುವ ಜಾತಿ ಆಧಾರಿತ ದಬ್ಬಾಳಿಗೆ ಕನ್ನಡಿ ಹಿಡಿಯುವ ರಂಜಿತ್ ಚಿತ್ರಗಳಲ್ಲಿ ದಲಿತರೇ ಮುಖ್ಯ ಪಾತ್ರಧಾರಿಗಳು.
ಅಮೇರಿಕಾದ ನಾಗರೀಕ ಹಕ್ಕು ಚಳುವಳಿ ಕಾಲದ ಕಪ್ಪು ಕಲಾವಿದರಿಂದ ಪ್ರೇರಿತರಾದ ರಂಜಿತ್ ತಮಿಳುನಾಡಿನಲ್ಲಿ ಈ ಹಿಂದೆ “ಅಸ್ಪೃಶ್ಯರೆಂದು” ಕರೆಸಿಕೊಳ್ಳುತ್ತಿದ್ದ ದಲಿತ ಸಮುದಾಯದ ಸಬಲೀಕರಣಕ್ಕೆ ಪಣ ತೊಟ್ಟು ವೇಗವಾಗಿ ಜನಪ್ರಿಯವಾಗುತ್ತಿರುವ ಸಾಂಸ್ಕೃತಿಕ ಕೇಂದ್ರವೊಂದನ್ನು ಸೃಷ್ಟಿಸಿದ್ದಾರೆ. ಇಲ್ಲಿಯವರೆಗೆ ಕೆಳ ಜಾತಿಯವರನ್ನ ಕಡೆಗಣಿಸಿದ ಅಥವಾ ಟೈಪ್ ಕಾಸ್ಟ್ ಮಾಡಿದ ಜನಪ್ರಿಯ ಸಂಸ್ಕೃತಿಯನ್ನ ಸಂಪೂರ್ಣವಾಗಿ ಬದಲಾಯಿಸುವುದೇ ಇದರ ಗುರಿಯಾಗಿದೆ. ಈ ನಿಟ್ಟಿನಲ್ಲಿ ರಂಜಿತ್ ಹಲವು ದಿಟ್ಟ ಹೆಜ್ಜೆಗಳನಿಟ್ಟಿದ್ದಾರೆ- ದಲಿತ ಲೇಖಕ ಹಾಗು ಕವಿಗಳಿಗೆ ಮುದ್ರಣಾಲಯ, ಜಾತಿ ವಿರೋಧಿ ಮ್ಯೂಸಿಕ್ ಬ್ಯಾಂಡ್, ದಲಿತ ಬದುಕು ಹಾಗು ಆಹಾರವನ್ನ ತೋರಿಸುವ ಯುಟ್ಯೂಬ್ ಚಾನೆಲ್.
“ನನ್ನ ಆಹಾರಾಭ್ಯಾಸಗಳು, ಸಂಗೀತ, ಕಲೆಯೆಲ್ಲವೂ ಜನಪ್ರಿಯ ಸಂಸ್ಕೃತಿಯಲ್ಲಿ ಬಿಂಬಿತವಾಗುವುದಕ್ಕಿಂತ ವಿಭಿನ್ನವಾಗಿವೆ. ಇದು ಜಾತಿಯತೇ ಕುರಿತು ಮಾತನಾಡುವುದಲ್ಲ. ಇದು ನನ್ನ ಸಂಸ್ಕೃತಿಯ ಮೇಲೆ ಚೆಲ್ಲುವ ಬೆಳಕು” ಎಂದು ತಮ್ಮ ಚೆನ್ನೈ ಆಫೀಸ್ ನಲ್ಲಿ ಕುಳಿತು ಅಭಿಮಾನದ ಮಾತುಗಳನ್ನಾಡುತ್ತಾರೆ ರಂಜಿತ್
ದಲಿತರು ಹಿಂದೂ ಧರ್ಮದ ತಾರತಮ್ಯ ಶ್ರೇಣಿ ವ್ಯವಸ್ಥೆಯ ಕೆಳ ಮೆಟ್ಟಿಲುಗಳ ಮೇಲೆ ಜಾಗ ಪಡೆಯುತ್ತಾರೆ . ವ್ಯಕ್ತಿಯ ಸ್ಥಾನ ಮಾನಗಳು ಆತನ ಹುಟ್ಟಿನಿಂದ ನಿರ್ಧಾರಿತವಾಗುತ್ತವೆ. ಮೀಸೆ ಬೆಳಿಸಿಕೊಂಡ ಅಥವಾ ಮದುವೆಯಲ್ಲಿ ಕುದುರೆ ಏರಿದನೆಂಬ ತೀರಾ ಕ್ಷುಲ್ಲಕ ಎನ್ನಬಹುದಾದ ಕಾರಣಗಳಿಗಾಗಿ ಮೇಲ್ಜಾತಿಯಿಂದ ಕೊಲ್ಲಲ್ಪಟ್ಟಿದ್ದಾರೆ ಅಥವಾ ನಾನಾ ರೀತಿಯ ಹಿಂಸೆಗೆ ಒಳಗಾಗಿದ್ದಾರೆ. ಇರಲು ನೆಲೆ, ಮೂಲಭೂತ ಸೌಕರ್ಯ ಅಥವಾ ಅಂತರ ಜಾತಿ ವಿವಾಹಗಳಿಗಾಗಿ ದೊಡ್ಡ ಮಟ್ಟದ ಹೋರಾಟವನ್ನೇ ಮಾಡಬೇಕಾಗುತ್ತದೆ.
ಈ ದೇಶದಲ್ಲಿ ಜಲಗಾರರಾಗಿ, ಜಾಡಮಾಲಿಗಳಾಗಿ, ಹೊಲಸು ಗುಂಡಿಗಳನ್ನ ತನ್ನ ಕೈಗಳಿಂದ ತೊಳೆದು ಬದುಕಬೇಕಾದಂತಹ ಒತ್ತಡ ಸಮಾಜ ಅವರ ಮೇಲಿ ಹೇರಿದೆ. ಜಾತಿಪದ್ಧತಿ ಅನ್ನೋದು ಬರಿಯ ಭಾರತದಲ್ಲಿ ಮಾತ್ರ ಬಲಿಷ್ಠವಾಗಿರದೆ ಅಮೇರಿಕದಲ್ಲಿ ನೆಲೆಸಿರುವ ಭಾರತೀಯರಲ್ಲೂ ಆಳವಾಗಿ ಬೇರೂರಿದೆ. ಜಾತಿ ಎಂಬ ಪಿಡುಗನ್ನ ಪ್ರಪಂಚಾದ್ಯಂತ ನೆಲೆಸಿರುವ ಇಂಡಿಯನ್ ಡಯಾಸ್ಪೋರಗಳಲ್ಲಿ ಕಾಣಬಹುದು.
“ಹೋರಾಟವೆಂಬುದು ದಲಿತನ ಪ್ರತಿ ದಿನದ ಅನುಭವ. ಅದೇ ಅವನ ಬದುಕು. ನನ್ನ ಬದುಕು ಕೂಡ ಒಂದು ಪ್ರಬಲ ಪ್ರತಿರೋಧ. ನಾನಷ್ಟೇ ಅಲ್ಲ ನನ್ನವರೆಲ್ಲಾ ಶೋಷಣೆ, ದಬ್ಬಾಳಿಕೆ, ಹಾಗು ತಾರತಮ್ಯ ಕುರಿತಾದ ಕಥೆಗಳ ಉಗ್ರಾಣ ಎನ್ನುತ್ತಾರೆ” ಪಾ. ರಂಚಿತ್.
ಈ ವರ್ಷ ಚಿತ್ರೋದ್ಯಮಕ್ಕೆ ರಂಜಿತ್ ಕಾಲಿಟ್ಟು ದಶಕ ಕಳೆದಿವೆ. ಅಮೇರಿಕಾದ ಕಪ್ಪು ಇತಿಹಾಸ ಮಾಸದಿಂದ ಪ್ರೇರಿತರಾಗಿ ಏಪ್ರಿಲ್ ತಿಂಗಳಲ್ಲಿ ರಂಜಿತ್ ಆಯೋಜಿಸಿದ್ದ ದಲಿತ ಇತಿಹಾಸ ಮಾಸದಲ್ಲಿ ನೂರಾರು ಜನರು ಭಾಗವಹಿಸಿದ್ದರು. ಅದೊಂದು ಕಲಾ ಹಬ್ಬ, ಸಂಭ್ರಮ ಮತ್ತು ಅದ್ದೂರಿ ಉತ್ಸವ. ಕಳೆದ ತಿಂಗಳು ರಂಜಿತ್ ಕಾನ್ಸ್ ಸಿನಿ ಉತ್ಸವದಲ್ಲಿ ಮೊದಲ ಬಾರಿ ಕಾಣಿಸಿಕೊಂಡರು ಕೂಡ. ಮುಂಬರುವ ದಿನಗಳಲ್ಲಿ ಬುಡಕಟ್ಟು ಜನಾಂಗಕ್ಕೆ ಸೇರಿದ ನಾಯಕನ ಕತೆ ಆಧಾರಿತ ಚಿತ್ರದ ಮೂಲಕ ಬಾಲಿವುಡ್ಡಿಗೂ ಪಾದಾರ್ಪಣೆ ಮಾಡಲಿದ್ದಾರೆ.
ನಾನಾ ವೇದಿಕೆಗಳಲ್ಲಿ ತಮ್ಮ ಕತೆಗಳನ್ನ ಹಂಚಿಕೊಳ್ಳಲು ಹಲವರಿಗೆ ರಂಜಿತ್ ಉತ್ತೇಜಿಸಿ ಅವಕಾಶ ಕಲ್ಪಿಸಿಕೊಡುತ್ತಿದ್ದಾರೆ. ರಂಜಿತ್ ಸೃಷ್ಟಿಸಿದ ಅಧಿಕೃತ ಯೌಟ್ಯೂಬ್ ಚಾನೆಲ್- “ನೀಲಂ ಸೋಶಿಯಲ್” ಕಛೇರಿಯಲ್ಲಿ, ಇಪ್ಪತ್ತೊಂದು ವರ್ಷದ ಹುಡುಗಿ ಅಭೀಷ ತನ್ನ ಜನರ ಬಗ್ಗೆ Rap ಸಾಂಗ್ ಒಂದನ್ನು ಹಾಡುತ್ತಿದ್ದಾಳೆ
” ಅವರ ಕಣ್ನೋಟದಿಂದ ದೂರಾಗಿ
ನೆಲೆಸಿದವು ಊರ ಹೊರಗೆ ಯಾರಿಗೂ ಬೇಡವಾಗಿ
ನಮ್ಮ ನಾಡಿನಲ್ಲೇ ಬದುಕಿಬೇಕಾಯಿತು ನಿರಾಶ್ರಿತರಾಗಿ
ಹಕ್ಕುಗಳನ ಕಿತ್ತು ಕೊಂಡಿರಿ ಎಂದು ಬಾಳಲಿಲ್ಲ ನಾವು ನಿಮ್ಮಲ್ಲಿ ಒಂದಾಗಿ”
ದಲಿತರು ಪ್ರತಿಭಟನೆಗಳಲ್ಲಿ ಬಳಸುವ ವಾದ್ಯಗಳ ಕುರಿತು ಸಾಕ್ಸ್ಯಚಿತ್ರ ಮಾಡಿದ್ದಾಳೆ ಅಭೀಷ. ಚೆನ್ನೈ ನಗರದ ಸ್ಲಂವಾಸಿಗಳನ್ನ ಏಕಾಏಕಿ ಹೊರಹಾಕಿದರ ಬಗ್ಗೆ ಕತೆಗಳನ್ನ ಬರೆದಿದ್ದಾಳೆ. ಮೇಲಿನ Rap ಸಾಂಗಿಗೆ ಈ ಕತೆಗಳಿಗೆ ಸ್ಪೂರ್ತಿಯಾದವು.
“ನಾ ಹಾಡಿದ ಹಾಡು, ಬರೆದ ಕತೆಗಳು ಕೆಲ ಜನರಿಗಷ್ಟೇ ತಲಪಬಹುದು. ಸಣ್ಣ ಅಲೆಗಳನ್ನಾದರೂ ಸೃಷ್ಟಿಸಲು ನಾನು ಇವುಗಳನ್ನ ಮಾಡಲೆಬೇಕು… ನನ್ನ ದನಿ ಮುಖ್ಯ. ನನ್ನ ದನಿ ಮುಖ್ಯ. ನನ್ನ ಕೆಲಸ ಮುಖ್ಯ. ನಾನು ಈ ಕೆಲಸ ಮಾಡದಿದ್ದರೆ ಬೇರಾರು ಮಾಡರು.” ಎನ್ನುತ್ತಾಳೆ ಅಭೀಷ
ರಂಜಿತ್ ಆರಂಭಿಸಿದ ಚಾನೆಲ್ನಲ್ಲಿ ತುಂಬಾ ಜನಪ್ರಿಯವಾದ ಕಾರ್ಯಕ್ರಮ ದಲಿತರ ಆಹಾರದ್ದು. ಇತ್ತೀಚಿನ ಎಪಿಸೋಡ್ ದನದ ಮಾಂಸದಿಂದ ಮಾಡಿದ ಭಕ್ಷ್ಯದ ಬಗ್ಗೆ ಇತ್ತು. ಶತಶತಮಾನಗಳಿಂದ ಬೇರೆಲ್ಲರಿಂದ ಬೇರ್ಪಟ್ಟು ಬಾಳಿದ ದಲಿತ ಸಮುದಾಯಕ್ಕೆ ದನದ ಮಾಂಸ ಮಹತ್ವದ ಆಹಾರ. ದನದ ಮಾಂಸದ ಮೇಲೀಗ ನಿಷೇದ ಹೇರಲಾಗಿದೆ. ಗೋವು ಹಿಂದೂಗಳಿಗೆ ಪವಿತ್ರವಾದುದು. ಸಾಕಾಷ್ಟು ದಲಿತರು ಗೋವಿನ ಹೆಸರಲ್ಲಿ ಹಿಂಸೆ ಅನುಭವಿಸಿದ್ದಾರೆ. ಮತ್ತೊಂದೆಡೆ ದಲಿತರನ್ನ ಹೊರತುಪಡಿಸಿ ವರರು ಕುದುರೆ ಏರಿ ಮೆರವಣಿಗೆ ಹೋಗುವುದು ಭಾರತದಲ್ಲಿ ಸಂಪ್ರದಾಯ. ದಲಿತರು ಕುದುರೆ ಏರಿದಾಗ ಅಹಿತಕರ ಘಟನೆಗಳು ನೆಡೆದುಹೋಗಿದೆ.
ಹಲವಾರು ಸ್ಟುಡಿಯೋಗಳಿಗೆ ತವರಾಗಿರುವ ಚೆನ್ನೈನ ಮತ್ತೊಂದು ಮೂಲೆಯಲ್ಲಿ ರಂಜಿತ್ “ಕೂಗೈ” ಎಂಬ ಗ್ರಂಥಾಲಯ ಕಟ್ಟಿದ್ದಾರೆ. ಕೂಗೈ ಎಂದರೆ ತಮಿಳಿನಲ್ಲಿ ಗೂಬೆ ಎಂದರ್ಥವಾದರೂ ಜಾತಿ ದೌರ್ಜನ್ಯವನ್ನ ಉಗ್ರವಾಗಿ ವಿರೋಧಿಸಿದ ಜನಪ್ರಿಯ ತಮಿಳು ಕಾದಂಬರಿ “ಕೂಗೈ” ಶೀರ್ಷಿಕೆಯನ್ನೇ ಗ್ರಂಥಾಲಯಕ್ಕಿಡಲಾಗಿದೆ.
“ಸಣ್ಣ ಸಣ್ಣ ಪಟ್ಟಣ ಹಾಗು ಹಳ್ಳಿಗಳಿಂದ ಕನಸುಗಳನೊತ್ತು ತಮಿಳು ಚಿತ್ರೋದ್ಯಮದಲ್ಲಿ ಕೆಲಸ ಮಾಡಲು ಬಹಳ ಮಂದಿ ಬರುತ್ತಾರೆ. ಅವರು ಇಲ್ಲಿಗೆ ಬಂದ ಮೇಲೆ ದಾರಿ ಕಾಣದಾಗುತ್ತದೆ.” ಎನ್ನುತ್ತಾರೆ ಮೂವತ್ತು ಮೂರೂ ವಯಸ್ಸಿನ ಮೂರ್ತಿ. ಮೂರ್ತಿ ಗ್ರಂಥಾಲಯದ ಮೇಲ್ವಿಚಾರಕ. ಸಿನೆಮಾ ಸಂಬಂಧಿತ ನೂರಾರು ಪುಸ್ತಕಗಳಿವೆ ಕೂಗೈನಲ್ಲಿ. ಅಲ್ಲಿ ಕಾರ್ಯಾಗಾರ ನೆಡೆಯುತ್ತವೆ. ಉತ್ತಮ ಚಿತ್ರಗಳು ಪ್ರದರ್ಶನಗೊಳ್ಳುತ್ತವೆ.
ಹಳ್ಳಿಯಲ್ಲಿ ಬರಿಯ ತಾಯಿಯ ಆರೈಕೆಯಲ್ಲಿ ಬೆಳೆದಿದ್ದ ಮೂರ್ತಿ ಹಲವು ಕನಸುಗಳನ್ನ ಹೊತ್ತುಕೊಂಡು ಚಿತ್ರೋದ್ಯಮಕ್ಕೆ ಬಂದರು ಆದರೆ ಏನನ್ನೂ ಸಾಧಿಸಲಾಗದೆ ಹೀನಾಯವಾಗಿ ಸೋತರು. ವರುಷಗಳ ನಂತರ ಚೆನ್ನೈ ನಗರಕ್ಕೆ ಮರಳಿ ಬಂದಾಗ ಗ್ರಂಥಾಲಯ ನಿರ್ಮಾಣ ಹಂತದಲ್ಲಿತ್ತು. ಹೊಸದಾಗಿ ಕಲಿತು, ಬೆಳೆಯಲು ನೆಲೆಯೊಂದು ಸಿಕ್ಕಿತು. ಹೋದ ವರುಷ ಸಹಾಯಕ ನಿರ್ದೇಶಕನಾಗಿ ಚಿತ್ರವೊಂದಕ್ಕೆ ಕೆಲಸ ಮಾಡುವ ಅವಕಾಶ ಮೂರ್ತಿಗೆ ಸಿಕ್ಕಿದೆ. ” ರಂಜಿತ್ ನಮಗೆಲ್ಲ ದಾರಿ ತೋರಿ ಬೆಳೆಸಿದರು. ಮುಂದಿನ ದಶಕದಲ್ಲಿ ಚಿತ್ರೋದ್ಯಮದ ಶ್ರೇಷ್ಠ ನಿರ್ದೇಶಕರು ಕೂಗೈ ನಿಂದ ಬರಲಿದ್ದಾರೆ” ಎಂದು ವಿಶ್ವಾಸದಿಂದ ಹೇಳುತ್ತಾರೆ ಮೂರ್ತಿ.
ಇಷ್ಟೊಂದು ಮಹತ್ವಾಕಾಂಕ್ಷೆಯುಳ್ಳ ಮೂವತ್ತೊಬ್ಬತ್ತು ವರ್ಷದ ರಂಜಿತ್ ನಿರಂಹಕಾರಿ. ಬಿಳಿಯ ಕಾಟನ್ ಶರ್ಟ್ ಮತ್ತು ನೀಲಿ ಷರಾಯಿ ತೊಟ್ಟು ತನ್ನ ಸಾಧಾರಣವಾಗಿ ಸಜ್ಜುಗೊಳಿಸಿದ, ಚಲನಚಿತ್ರ ಸಂಬಂಧಿ ಯಾವುದೇ ಪರಿಕರ ಉಪಕರಣಗಳಿಲ್ಲದ ಆಫೀಸ್ಗೆ ಬರೋದು ಸಾಮಾನ್ಯ. ಆಫೀಸ್ನಲ್ಲೋ ಎಲ್ಲೆಲ್ಲೂ ಪುಸ್ತಕಗಳು! ಸಂವಿಧಾನ ಶಿಲ್ಪಿ, ದಲಿತರ ಮಹಾನಾಯಕ ಗೌರವಾನ್ವಿತ ಭೀಮ್ ರಾವ್ ಅಂಬೇಡ್ಕರವರ ಚಿತ್ರಗಳು, ಪ್ರತಿಮೆಗಳು.
ರಂಜಿತ್ ವೃತ್ತಿ ಜೀವನ ಆತನ ಮೊದಲೆರಡು ಚಿತ್ರಗಳ ಭಾರಿ ಯಶಸ್ಸಿನಿಂದ ಆರಂಭಗೊಂಡಿತು. ತಮಿಳು ಚಿತ್ರಗಳಲ್ಲಿ ಜಾತಿ ಪ್ರಾತಿನಿಧಿತ್ವದ ಬದಲಾಯಿಸಿದ ಶ್ರೇಯಸ್ಸು ರಂಜಿತ್ಗೆ ಸಲ್ಲಬೇಕು. “ಆತನೊಬ್ಬ ಅತ್ಯುತ್ತಮ ನಿರ್ದೇಶಕ. ಯಾವುದೇ ಅಳುಕಿಲ್ಲದೆ, ಭಯವಿಲ್ಲದೆ ತಮ್ಮ ಐಡೆಂಟಿಟಿಯ ಕುರಿತು ಮಾತನಾಡುವ ಧೈರ್ಯ ತುಂಬಿ ಹೊಸಬರಿಗೆ ಹೊಸ ಹಾದಿ ಸೃಷ್ಟಿಸಿದ್ದಾನೆ ರಂಜಿತ್” ಅನ್ನೋದು ಪ್ರಖ್ಯಾತ ಸಿನಿ ವಿಮರ್ಶಕ ಭಾರದ್ವಾಜ್ ರಂಗನ್ ರವರ ಅಭಿಪ್ರಾಯ.
ರಂಜಿತ್ ಅವರಿಗೆ ಬಹುದೊಡ್ಡ ಬ್ರೇಕ್ ಸಿಕ್ಕಿದ್ದು ಜಗತ್ತಿನಾದ್ಯಂತ ಕೋಟ್ಯಂತರ ಅಭಿಮಾನಿಗಳಿದ್ದ ರಜನಿಕಾಂತ್ ಅವರನ್ನ ಭೇಟಿಯಾದಾಗ. ಇವರಿಬ್ಬರ ಜೋಡಿ ಎರಡು ಮೆಗಾ ಹಿಟ್ಗಳನ್ನ ನೀಡಿತು. ಕಾಲ (ಕಪ್ಪು) ಚಿತ್ರದಲ್ಲಿ ರಜನಿಕಾಂತರದು ದಲಿತನ ಪಾತ್ರ. ಮುಂಬೈ ಸ್ಲಾಮ್ ಒಂದರಲ್ಲಿ ಬದುಕುವ ಈತ ಭ್ರಷ್ಟ ರಾಜಕಾರಣಿಯೊಬ್ಬನನ್ನ ಎದುರಿ ಹಾಕಿಕೊಳ್ಳುತ್ತಾನೆ. ಕಬಾಲಿ ಈ ಜೋಡಿಯ ಮತ್ತೊಂದು ಚಿತ್ರ. ಎರಡು ಚಿತ್ರಗಳು ಬಾಕ್ಸ್ ಆಫೀಸ್ ಗಳಿಕೆಯಲ್ಲೂ ಬಾರಿ ಸದ್ದುಮಾಡಿದವು.
“ಮೊದಲೆಲ್ಲಾ ನಿರ್ಮಾಪಕರು ಇಂತಹ ಚಿತ್ರದಲ್ಲಿ ಹೂಡಿಕೆ ಮಾಡಲು ಹಿಂಜರಿಯುತ್ತಿದ್ದರು. ಹೂಡಿದ ದುಡ್ಡು ವಾಪಸ್ ಬರಲ್ಲ ಅಂತ ಸಬೂಬು ಹೇಳುತ್ತಿದ್ದರು. ನನ್ ಐಡಿಯಾ ತುಂಬಾ ಸಿಂಪಲ್. ಮುಖ್ಯ ವಾಹಿನಿ ಚಲನ ಚಿತ್ರಗಳ ವೀಕ್ಷಕರು ಕೂಡ ನಮ್ಮ ಚಿತ್ರಗಳಲ್ಲಿ ತೊಡಗಿಸಿಕೊಳ್ಳುವಂತಹ ಎಂಟರ್ಟೈನಿಂಗ್ ಚಿತ್ರ ಮಾಡಬೇಕು” ಎನ್ನುತ್ತಾರೆ ರಂಜಿತ್.
ಜಾತಿ ದಬ್ಬಾಳಿಕೆ ಹಾಗು ತಾರತಮ್ಯ ಕುರಿತಾದ ತೀಕ್ಷ್ಣ ನಿಷ್ಪಕ್ಷಪಾತ ವಿಮರ್ಶೆಗಳನ್ನ ಹಿಂದೂ ಧರ್ಮದ ಟೀಕೆಯೆಂದೇ ಗ್ರಹಿಸುವ ಹಿಂದೂ ರಾಷ್ಟ್ರವಾದಿಗಳ ತೀವ್ರ ವಿರೋಧ ರಂಜಿತನನ್ನ ವಿಚಲಿತಗೊಳಿಸಿಲ್ಲ. ಹಿಂದೂ ಫೋಬಿಯ ಎಲ್ಲರ ಮನಸಲ್ಲಿ ಮೂಡಿಸಿದ ಆರೋಪವೂ ರಂಜಿತ್ ಮೇಲಿದೆ. ಪುರಾತನ ಹಿಂದೂ ರಾಜನ ಬಗ್ಗೆ ನೀಡಿದ ಹೇಳಿಕೆಯಿಂದ ರಂಜಿತ್ ವಿರುದ್ಧ ದೂರು ದಾಖಲಾಗಿದೆ. ಈ ದೂರುಗಳು, ನಿಂದನೆಗಳಾವುದರ ಬಗ್ಗೆಯು ರಂಜಿತ್ ತಲೆ ಕೆಡಿಸಿಕೊಂಡಿಲ್ಲ. “ಜನ ನನ್ನನ್ನ ಮುಂಗೋಪಿ ಅಂತ ಅಂದುಕೊಂಡಿದ್ದಾರೆ ಆದರೆ ನಾನು ಮುಂಗೋಪಿಯಲ್ಲ. ನನ್ನ ದೈವ ಅಂಬೇಡ್ಕರ್ ರಂತೆ ನಾನು ಕೂಡ ಹಠಮಾರಿ ಮತ್ತು ನನ್ನ ಗುರಿಗಳಿಗೆ ಸದಾ ಬದ್ಧನಷ್ಟೇ. ಸಮಾನತೆಯೊಂದೇ ನಾನು ಮುಂದಿನ ಪೀಳಿಗೆ ಬಿಟ್ಟು ಹೋಗ ಬಯಸುವ ಸ್ವತ್ತು.” ಎನ್ನುತ್ತಾರೆ ರಂಜಿತ್.
(ವಾಷಿಂಗ್ಟನ್ ಪೋಸ್ಟ್ ನಲ್ಲಿ ಪ್ರಕಟವಾದ ನಿಹಾ ಮಸಿಹ ಅವರ ಲೇಖನ) ಅನುವಾದ: ಹರೀಶ್ ಗಂಗಾಧರ್
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ವರ್ಕ್ ಹಾರ್ಡ್ , ದೆನ್ ಯು ವಿಲ್ ಸಕ್ಸಸ್ ; ಯುಪಿಎಸ್ಸಿ ಪರೀಕ್ಷೆ ಬಗ್ಗೆ ದಾವಣಗೆರೆ ಎಸ್ಪಿ ರಿಷ್ಯಂತ್ ಮಾತು..!

‘ಹಣ, ಪ್ರಭಾವವಿದ್ದರೆ ಸಿವಿಲ್ ಸರ್ವೀಸ್ ಪಾಸಾಗಲು ಸಾಧ್ಯವಿಲ್ಲ.’ : ಎಸ್ಪಿ ಸಿ ಬಿ ರಿಷ್ಯಂತ್
ಸುದ್ದಿದಿನ,ದಾವಣಗೆರೆ : ನಾನು ಮೊದಲು ಹೇಳೋದಕ್ಕೆ ಇಷ್ಟ ಪಡೋದು ಏನೂ ಅಂದ್ರೆ, ಯುಪಿಎಸ್ಸಿ ಎಕ್ಸಾಂ ಅಂದ್ರೆ ಸಾಕು. ಏನೇನೋ ಊಹಾಪೋಹ ಇರುತ್ತೆ. ಅದನ್ನು ತೆಗೆದು ಹಾಕಬೇಕು. ‘ನೌವ್, ಐ ಎಮ್ ಟೆಲ್ ಎಬೌಟ್ ಯುಪಿಎಸ್ಸಿ ಎಕ್ಸಾಂ. ಯುಪಿಎಸ್ಸಿ ಎಕ್ಸಾಂ ಅಂದ್ರೆ ಅನೇಕರ ತಲೆಯಲ್ಲಿ ‘ಸರ್ಟನ್ ಥಿಂಗ್ಸ್ ಆರ್ ದೇರ್ ಎಂಬ ಕಲ್ಪನೆ ಇರುತ್ತದೆ. ‘ ಇದರಲ್ಲಿ ಏನೋ ನಡೆಯುತ್ತಂತೆ, ಅವರಿಗೆ ಬೇಕಾದವರನ್ನು ಆಯ್ಕೆ ಮಾಡುತ್ತಾರಂತೆ.
ಪ್ರಿಲಿಮ್ಸ್, ಮೇನ್ಸ್ ಕ್ಲಿಯರ್ ಮಾಡಿದ್ರೂ, ಸಂದರ್ಶನದಲ್ಲಿ ಏನೋ ಅಡ್ಜೆಸ್ಟೆಮೆಂಟ್ ಆಗುತ್ತೆ. ನಮ್ಮಂಥವರಿಗೆ ಸಿಗೋದಿಲ್ಲ. ರಾಜಕೀಯ ಪ್ರಭಾವ ಬೇಕು. ನಾನು ಐಪಿಎಸ್ ಆಫೀಸರ್ ಆಗೋಕೆ ಸಾಧ್ಯವಿಲ್ಲ. ಹಣ ಇದ್ದರೆ ಮಾತ್ರ ಯುಪಿಎಸ್ಸಿ. ನಂಥಿಂಗ್. ಡೋಂಟ್ ಬಾದರ್ ಆ್ಯಬೌಟೋ ಧಿಸ್ ಥಿಂಗ್
ಇಂತಹ ಊಹ ಪೋಹ ಬಿಟ್ಟುಬಿಡಿ. ಇವ್ಯಾವೂ ನಡೆಯಲ್ಲ. ಕಷ್ಟಪಟ್ಟು ಓದಬೇಕು. ಯುಪಿಎಸ್ಸಿ ಎಕ್ಸಾಂ ಪಾಸ್ ಆಗಬೇಕು..! ”
ಹೀಗಂಥ ಒಬ್ಬ ಸಾಮಾನ್ಯ ವ್ಯಕ್ತಿ ಹೇಳಿದ್ದರೇ ಯಾರೂ ತಲೆ ಕೆಡಿಸಿಕೊಳ್ಳುವ ಅವಶ್ಯಕತೆ ಇರಲಿಲ್ಲ. ಆದರೆ ಇದನ್ನು ಹೇಳಿದ್ದು 2013 ರ ಬ್ಯಾಚ್ ನ ಯುಪಿಎಸ್ಸಿ ಎಕ್ಸಾಂನಲ್ಲಿ ರಾಜ್ಯದ ಟಾಪರ್ ರಲ್ಲಿ ಒಬ್ಬರಾದ ಸಿ.ಬಿ.ರಿಷ್ಯಂತ್. ‘ಯುಪಿಎಸ್ಸಿ ಎಕ್ಸಾಂ ಅಂದ್ರೆ ಇದರಲ್ಲಿ ಏನೋ ನಡೆಯುತ್ತೆ. ನೆವರ್. ಇದನ್ನು ಶೇ.100 ರಷ್ಟು ತಲೆಯಿಂದ ತೆಗೆದುಬಿಡಿ. ಶ್ರದ್ದೆ, ಪರಿಶ್ರಮ ಇದ್ದರೆ ಸಾಕು’ ಎನ್ನುತ್ತಾರೆ ರಿಷ್ಯಂತ್.
ಯುಪಿಎಸ್ಸಿ ಎಕ್ಸಾಂ ಇಡೀ ದೇಶದಲ್ಲಿ ಉನ್ನತ ಪರೀಕ್ಷೆ. ಪಾರದರ್ಶಕವಾಗಿ ನಡೆಯುತ್ತದೆ. ಮೆರಿಟ್ ಬೇಸ್ ಮೇಲೆ ಎಕ್ಸಾಂ ನಡೆಯುತ್ತದೆ. ಪ್ರಿಮಿಲ್ಸ್ ಆಬ್ಜಿಕ್ಟೀವ್ ಮಾದರಿ ಆಗಿರುತ್ತದೆ. ಸುಮ್ಮನೆ ಮನಸ್ಸಿಗೆ ತೋಚಿದ್ದನ್ನ ರೌಂಡ್ ಮಾರ್ಕ್ ಹಾಕಿದರೆ ಸಾಕು. ಪಾಸ್ ಆಗಬಹುದು ಎಂಬ ಭ್ರಮೆ ಬಿಡಬೇಕು.
ಕೆಎಎಸ್, ಬ್ಯಾಂಕಿಂಗ್, ಕೆಪಿಎಸ್ಸಿಯ ಎಲ್ಲಾ ಎಕ್ಸಾಂ ಬರೆಯೋದು. ಯಾವುದಾದರೂ ಒಂದು ಸಿಗುತ್ತೆ ಎಂದು ಬರೆದರೆ ಅದು ಖಂಡಿತ ಆಗೋದಿಲ್ಲ. ” ಬೈ ಲಕ್ ” ಅನ್ನೊದನ್ನು ಬಿಡಬೇಕು. ಯುಪಿಎಸ್ಸಿಗೆ ಓದು ಒಂದೇ ದಾರಿ. ಹಾಗಂತ ಬುಕ್ ಹಿಡಿದು ಇಡೀ ದಿನ ಓದುವುದಲ್ಲ. ಬದಲಾಗಿ ವಾರದಲ್ಲಿ ಯಾವ ವಿಷಯ ಎಷ್ಟು ಓದಬೇಕು ಎಂಬುದನ್ನು ಡಿಸೈಡ್ ಮಾಡ್ಕೊಬೇಕು. ಆಗಾಗ ರೆಸ್ಟ್ ಕೊಡಬೇಕು. ನಾನು ಕೂಡ ಹಾಗೇ ಓದಿದ್ದು, ಸ್ವಲ್ಪ ಹೊತ್ತು ಓದು, ಸ್ವಲ್ಪ ಹೊತ್ತು ಫ್ರೆಂಡ್ಸ್ ಜೊತೆ ಹರಟೆ. ನಡು ನಡುವೆ ಸ್ನಾಕ್ಸ್ ತಿನ್ನುತ್ತಿದ್ದೆ. ಹೀಗಾದಾಗ ಮೈಂಡ್ ಫ್ರೀಯಾಗುತ್ತದೆ.
ಯುಪಿಎಸ್ಸಿ ಎಕ್ಸಾಂಗೆ ಸಿಲಿಬಿಸ್ ಇಡುತ್ತಾರೆ. ಪ್ರಿಲಿಮ್ಸ್, ಮೈನ್ಸ್ ಟಾಪಿಕ್ ಇದೆ, ಎಕ್ಸಾಂ ಇದೆ. ಆ ಸಿಲಿಬಸ್ ಪ್ರಕಾರ ಮೆಟಿರಿಯಲ್ ತಗೊಂಡು ಓದಬೇಕು. ಯುಪಿಎಸ್ಸಿ ಎಕ್ಸಾಂ ಪಾಸ್ ಆಗೋದಕ್ಕೆ ಶೇ.95 ರಷ್ಟು ಹಾರ್ಡ್ ವರ್ಕ್ ಮಾಡಬೇಕು.
ಯುಪಿಎಸ್ಸಿಯನ್ನು ಹೆಚ್ಚು ಬುದ್ದಿವಂತರೇ ಪಾಸ್ ಆಗುತ್ತಾರೆ ಎಂಬ ಮಾತು ಸುಳ್ಳು. ನಾನು ಕೂಡ ಆವರೇಜ್ ಅಂಕ ಗಳಿಸಿದವನು. ಮೂಲತಃ ವಾಣಿಜ್ಯ ಶಾಸ್ತ್ರದ ಬಿಕಾಂ ಓದಿ ಸಿಎ ಮಾಡಿದ್ದೇನೆ. ಓದಿದ್ದು ಬೆಂಗಳೂರಿನಲ್ಲಿ. ಪಿಯುಸಿ ಆದ ನಂತರ ಸಿಎ ಮಾಡುವಾಗ ದೆಹಲಿಯಲ್ಲಿ ಆಡಿಟ್ ಗೆ ಹೋಗಿದ್ದೆ. ಅಲ್ಲಿ ಯುಪಿಎಸ್ಸಿ ಬರೆಯಲು ನಿರ್ಧಾರ ಮಾಡಿದೆ. ಮೊದಲು ಪ್ರಿಲಿಮ್ಸ್ ಗೆ ‘ ಕಾಮರ್ಸ್ ಆ್ಯಂಡ್ ಅಕೌಂಟೆನ್ಸ್’ ಐಚ್ಚಿಕ ವಿಷಯ ತಗೊಂಡೆ. ಹೀಗೆ ವಾಣಿಜ್ಯ, ವಿಜ್ಞಾನ, ಕಲೆಯಲ್ಲಿ ಡಿಗ್ರಿ ಮಾಡಿದವರು ತಮ್ಮ ಇಚ್ಚಾನುಸಾರ ಐಚ್ಚಿಕ ವಿಷಯಗಳನ್ನು ಸೆಲೆಕ್ಟ್ ಮಾಡಿಕೊಳ್ಳುತ್ತಾರೆ.
ಪ್ರಿಲಿಮ್ಸ್ ನಲ್ಲಿ ಎರಡು ಪೇಪರ್ . ಒಂದು ಪೇಪರ್ ಗೆ ಎರಡು ಗಂಟೆ ಸಮಯವಕಾಶ. ನೆಗೆಟಿವ್ ಮಾರ್ಕ್ ಇರುತ್ತದೆ. 1:3 ನೆಗೆಟಿವ್ ಮಾರ್ಕ್ ಇರುತ್ತದೆ..ಅಂದರೆ ಮೂರು ತಪ್ಪು ಉತ್ತರ ಬರೆದರೆ, ಒಂದು ಸರಿ ಮಾರ್ಕ್ಸ್ ಹೋಗುತ್ತದೆ. ಪ್ರಿಲಿಮ್ಸ್ ನಲ್ಲಿ ಮೊದಲನೇ ಪೇಪರ್ ನೂರು ಅಂಕಗಳಿಗೆ ಬರೆಯಬೇಕು. ಜನರಲ್ ಸ್ಟೇಡಿಗೆ ಎಕ್ಸಾಂ ಬರೆಯಬೇಕು. ಎರಡನೇ ಪೇಪರ್ ಸಿ-ಸ್ಯಾಟ್ . 80 ಅಂಕಗಳಿಗೆ ಪರೀಕ್ಷೆ ಬರೆಯಬೇಕು. ಎರಡಕ್ಕೂ ಎರಡು ಗಂಟೆ ಸಮಯವಕಾಶವಿರುತ್ತದೆ.
ಜನರಲ್ ಸ್ಟಡಿ ಪೇಪರ್ ಗೋಸ್ಕರ ಸಾಮಾನ್ಯವಾಗಿ ಎಲ್ಲರೂ ತಮ್ಮ ವಿಷಯ ಅನುಸಾರ ಆ ಬಗ್ಗೆಯೇ ಜಾಸ್ತಿ ಓದುವುದು. ಅದರ ಬಗ್ಗೆಯೇ ಹೆಚ್ಚು ಆಸಕ್ತಿ ಕೊಟ್ಟು ಬೇರೆಯದನ್ನ ಓದೋದಿಲ್ಲ. ಆ ರೀತಿ ಮಾಡಬಾರದು. ನಿಮ್ಮ ಆಯ್ಕೆಯ ವಿಷಯದಲ್ಲಿ ಯಾವುದಕ್ಕೆ ಎಷ್ಟು ಅಂಕ ಬರುತ್ತೆ. 2020 ರ ಪ್ರಿಲಿಮ್ಸ್ ನಲ್ಲಿ ಜನರಲ್ ಪೇಪರ್ ಗೆ ಸೈನ್ಸ್ ನಿಂದ 5 ಪ್ರಶ್ನೆಗಳು, ಇತಿಹಾಸದಿಂದ 18 ಪ್ರಶ್ನೆಗಳು ಬಂದಿದ್ದವು.
ಇತಿಹಾಸದಲ್ಲಿ ಪುರಾತನ, ಮಧ್ಯಮ, ಪ್ರಸ್ತುತ ಮೂರು ಮಾಡಲ್ ಗಳಿದ್ದು18 ಅಂಕಗಳಿಗೆ ಉತ್ತರ ಬರೆಯಬೇಕು.ಜಿಯಾಗ್ರೋಫಿ 14 ಪ್ರಶ್ನೆಗಳಿಗೆ ಉತ್ತರ ಬರೆಯಬೇಕು. ಅರ್ಥಶಾಸ್ತ್ರ 10 ರಿಂದ 12 ಪ್ರಶ್ನೆಗಳು. ಪ್ರಸ್ತುತ ವಿದ್ಯಮಾನ ಪ್ರಮುಖವಾಗಿದ್ದು 25 ಅಂಕಗಳಿಗೆ ಉತ್ತರ ಬರೆಯಬೇಕು. ಪಾಲಿಟಿಕ್ಸ್ 12 ರಿಂದ 13 ಅಂಕ. ಪರಿಸರ 8 ಪ್ರಶ್ನೆ, ಮಿಸ್ಸೆಲೇನಿಯಸ್ 8 ಪ್ರಶ್ನೆಗಳು ಇರುತ್ತವೆ.
ಸಾಮಾನ್ಯವಾಗಿ ಎಲ್ಲರೂ ಹೆಚ್ಚಿನ ಅಂಕಗಳು ಇರುವ ಪ್ರಶ್ನೆಗಳಿಗೆ ಹೆಚ್ಚು ಗಮನಕೊಡುತ್ತಾರೆ. ಉಳಿದದ್ದ ನೆಗೆಲೇಟ್ ಮಾಡುತ್ತಾರೆ. ಅದು ಆಗಬಾರದು. ಯಾವುದಕ್ಕೆ ಎಷ್ಟು ಸಮಯ ಕೊಡಬೇಕು, ಎಷ್ಟು ಮಾರ್ಕ್ಸ್ ಗೆ ಏನೇನು ಬರುತ್ತದೆ ಆ ಪ್ರಕಾರ ಸ್ಟೇಡಿ ಮಾಡಬೇಕು.ಪ್ರಿಲಿಮ್ಸ್ ಗೆ ದಿನಕ್ಕೆ 20 ಗಂಟೆ ಓದುತ್ತೇನೆ. ತಣ್ಣೀರು ಸ್ನಾನ ಮಾಡುತ್ತೇನೆ, ಮಧ್ಯರಾತ್ರಿ ಎದ್ದು ಓದುತ್ತೇನೆ ಎಂಬದು ಪದ್ದತಿ ಅಲ್ಲ. ಬದಲಾಗಿ ಸ್ಮಾರ್ಟ್ ಆಗಿ ಹಾರ್ಡ್ ವರ್ಕ್ ಮಾಡಬೇಕು.
ಯುಪಿಎಸ್ಸಿ ಪ್ರಿಲಿಮ್ಸ್ ಗೆ 10 ಲಕ್ಷ ಅಭ್ಯರ್ಥಿಗಳು ಅಪ್ಲಿಕೇಶನ್ ಹಾಕುತ್ತಾರೆ. ಇದರಲ್ಲಿ ಎಕ್ಸಾಂ ಬರೆಯೋರು ಐದರಿಂದ ಆರು ಲಕ್ಷ ಜನ ಮಾತ್ರ. ಇದರಲ್ಲಿ ಶೇ 80 ರಷ್ಟು ಜನ ಲಕ್ ನಂಬಿ ಬರೆಯುತ್ತಾರೆ..! ಚಾನ್ಸ್ ಇದ್ದರೆ ಮುಂದೆ ಹೋಗಬಹುದು ಎಂಬ ಭ್ರಮೆಯಲ್ಲಿರುತ್ತಾರೆ. ಐವತ್ತರಿಂದ ಆರವತ್ತು ಸಾವಿರ ಜನ ಮಾತ್ರ ಸೀರಿಯಸ್ ಆಗಿ ಯುಪಿಎಸ್ಸಿ ಎಕ್ಸಾಂ ಬರೆಯುತ್ತಾರೆ. ಇವರ ನಡುವೆ ಮಾತ್ರ ಕಾಂಪಿಟೇಶನ್ ನಡೆಯುತ್ತದೆ.
ಎರಡನೇ ಪೇಪರ್ ಸಿ ಸ್ಯಾಟ್. ಇದು ಕ್ವಾಲಿಫೈಯಿಂಗ್ ಪೇಪರ್ ಆಗಿದ್ದು, ಇದರಲ್ಲಿ ಗಣಿತಕ್ಕೆ ಸಂಬಂಧ ಪಟ್ಟ ಸಾಮಾನ್ಯ ಜ್ಞಾನ ಪ್ರಶ್ನೆ , ಬೇಸಿಕ್ ಇಂಗ್ಲೀಷ್ ಪ್ರಶ್ನೆ ಕೇಳಲಾಗುತ್ತದೆ. ಕನ್ನಡ ಮೀಡಿಯಂ ವಿದ್ಯಾರ್ಥಿಗಳು ಉತ್ತರ ಬರೀಬಹುದು. ಎಂಭತ್ತು ಪ್ರಶ್ನೆಗಳಿಗೆ ಉತ್ತರ ಬರೆಯಬೇಕು. ಇದರಲ್ಲಿ ಸಿಂಪಲ್ ಪ್ರಶ್ನೆಗಳಿರುತ್ತವೆ. ಆದ್ದರಿಂದ ಪ್ರಿಲಿಮ್ಸ್ ಪಾಸ್ ಆಗಬೇಕಾದರೆ ಎಲ್ಲ ವಿಷಯಗಳನ್ನ ಚೆನ್ನಾಗಿ ಓದಬೇಕು.
ಪ್ರಿಲಿಮ್ಸ್ ಪಾಸಾಗಲು ಮೆಟಿರಿಯಲ್ ಬಹಳ ಮುಖ್ಯ. ಎಲ್ಲವನ್ನೂ ಓದುವ ಅಗತ್ಯವಿಲ್ಲ. ನಿಮಗೆ ಅಗತ್ಯವಿರುವ ಮೆಟಿರಿಯಲ್ ಸೆಲೆಕ್ಟ್ ಮಾಡುವುದೂ ಮುಖ್ಯ. ರಿವೀಷನ್ ಇರಬೇಕು. ಆಗ ಮಾತ್ರ ಬಹು ಆಯ್ಕೆ ಪ್ರಶ್ನೆಗಳಿಗೆ ಉತ್ತರಿಸಬಹುದು. ಈ ಮೆಟಿರಿಯಲ್ ನ್ನು ಮಿನಿಮಮ್ ಎರಡು ಸಲ ಓದಬೇಕು. ಪ್ರಸ್ತುತ ವಿದ್ಯಮಾನಗಳ ಪ್ರಶ್ನೆಗೆ ಉತ್ತರಿಸಲು ಕಳೆದ ನಾಲ್ಕೈದು ವರ್ಷಗಳ ಹಿಂದಿನ ಪ್ರಶ್ನೆ ಪತ್ರಿಕೆ ನೋಡಿ, ಓದಬೇಕು.ಅಲ್ಲದೇ ಪರೀಕ್ಷೆ ಬರೆಯುವ ವರ್ಷದ ಪ್ರಸ್ತುತಗಳ ಬಗ್ಗೆ ಹೆಚ್ಚು ತಿಳಿದುಕೊಂಡಿರಬೇಕು.
ದಿನಪತ್ರಿಕೆಯಲ್ಲಿ ಬರುವ ಕ್ರೈಂ, ರಾಜಕೀಯ ಸುದ್ದಿಗಳೇ ಯುಪಿಎಸ್ಸಿಗೆ ಪ್ರಮುಖವಲ್ಲ. ಬಜೆಟ್, ಎಕಾನಿಮಿಕ್, ಸ್ಯಾಟಲೈಟ್, ವಿಜ್ಞಾನ, ಹಣಕಾಸು, ಮಾನ್ಸೂನ್, ಇತಿಹಾಸ, ಇವುಗಳ ಬಗ್ಗೆ ಓದಿ ನೋಟ್ ಮಾಡಿಕೊಳ್ಳಬೇಕು. ದಿನ ಪತ್ರಿಕೆಯ ಈ ಸುದ್ದಿ ಕಲೆಕ್ಟ್ ಮಾಡಿ ಇಟ್ಕೊಬೇಕು. ಕರೆಂಟ್ ಅಫೇರ್ಸ್ ಬುಕ್ ಬರುತ್ತದೆ. ದಿನಪತ್ರಿಕೆ ಯಾಕೆ ಓದಬೇಕು ಎಂದು ಅನೇಕರು ಕೇಳುತ್ತಾರೆ, ಆದರೆ ನಾವು ಸ್ವಂತ ಓದಿ ಪಾಯಿಂಟ್ಸ್ ಮಾಡುವುದಕ್ಕೂ, ಬುಕ್ ನ ಪಾಯಿಂಟ್ಸ್ ಓದುವುದಕ್ಕೂ ವ್ಯತ್ಯಾಸವಿದೆ.
ನಾವು ಸ್ವಂತ ಓದಿದರೆ ನಾಲ್ಕು ಪ್ಯಾರದಲ್ಲಿ ಎರಡು ಪಾಯಿಂಟ್ಸ್ ನೆನಪಿರುತ್ತದೆ. ಶೇ.80ರಷ್ಟು ದಿನಪತ್ರಿಕೆಯಲ್ಲಿನ ಪ್ರಸ್ತುತಗಳ ಸುದ್ದಿ ಬಗ್ಗೆ ಪ್ರಶ್ನೆ ಕೇಳಲಾಗುತ್ತದೆ .ಶೇ.20 ರಷ್ಟು ಮಾತ್ರ ಬುಕ್ ನಲ್ಲಿರುವ ಪ್ರಸ್ತುತಗಳ ಬಗ್ಗೆ ಪ್ರಶ್ನೆ ಕೇಳಲಾಗುತ್ತದೆ.
ಯುಪಿಎಸ್ಸಿಗೆ ಓದುವಾಗ ಏಳು ಗಂಟೆ ನಿದ್ದೆ ಮಾಡಬೇಕು. ಬೆಳಗಿನ ಜಾವ ಎದ್ದಾಗ ಮೈಂಡ್ ಫ್ರೀ ಇದ್ದು, ಆ ಟೈಮ್ ನಲ್ಲಿ ಓದಬೇಕು. ಸ್ವಲ್ಪ ಕಷ್ಟವಾದ ವಿಷಯ ಬೆಳಗ್ಗೆ ಓದಿದರೆ ಒಳ್ಳೆಯದು. ಅದಕ್ಕಾಗಿ ನಾನು ಸಂಜೆ ದಿನಪತ್ರಿಕೆಗಳನ್ನು ಓದುತ್ತಿದ್ದೆ. ಒಟ್ಟಾರೆ ವ್ಯವಸ್ಥಿತವಾಗಿ ಓದಬೇಕು. ಒಂದೇ ದಿನ ಎಲ್ಲವನ್ನೂ ಓದಿ ಐದು ದಿನ ಓದದೇ ಇರುವುದು ಸರಿಯಲ್ಲ. ರೆಗ್ಯೂಲರ್ ಆಗಿ ಓದಬೇಕು. 365 ದಿನಗಳಲ್ಲಿ ಹೇಗೆ ಓದಬೇಕೆಂದು ಚಾರ್ಟ್ ಹಾಕಿಕೊಳ್ಳಬೇಕು. ಫ್ರೆಂಡ್ಸ್ ದೂರ ಇಡಬೇಕು. ಆಯಾ ದಿನ ಓದಿದ್ದನ್ನು ರಾತ್ರಿ ಮತ್ತೆ ರಿವಿಷನ್ ಮಾಡಬೇಕು ಆಗ ಮಾತ್ರ ಪ್ರಿಲಿಮ್ಸ್ ಪಾಸಾಗಬಹುದು.
ಮೇನ್ಸ್ ಎಕ್ಸಾಂ
ಪ್ರಿಲಿಮ್ಸ್ ಪಾಸಾದವರು ಮೇನ್ಸ್ ಎಕ್ಸಾಂ ಬರೆಯಬೇಕು. ಇಲ್ಲಿ ಯಾವುದೇ ಬಹು ಆಯ್ಕೆಯ ವಸ್ತುನಿಷ್ಠ ಪ್ರಶ್ನೆಗಳು ಇರೋದಿಲ್ಲ. ಇಲ್ಲಿ ಇಷ್ಟು ಅಂಕದ ಪ್ರಶ್ನೆಗಳಿಗೆ ಉತ್ತರಿಸಿ ಎಂದು ಕೇಳುತ್ತಾರೆ. ಆ ಅಂಕಗಳಿಗೆ ತಕ್ಕಂತೆ ಇಂತಿಷ್ಟು ಪದಗಳಲ್ಲಿ ಉತ್ತರಿಸಬೇಕು. ಇಲ್ಲಿ ಪಾಸಾದವರು ಮೌಖಿಕ ಸಂದರ್ಶನಕ್ಕೆ ಹೋಗಬೇಕು. ಸಂದರ್ಶನದಲ್ಲಿ ಹತ್ತು ಪ್ಯಾನಲ್ ಟೀಮ್ ಇರುತ್ತದೆ. ಒಂದು ಟೀಮ್ ನಲ್ಲಿ ಹತ್ತು ಜನ ಇರುತ್ತಾರೆ.
ಸಂದರ್ಶನಕ್ಕೆ ಹೋಗುವ ವೇಳೆ ಅಭ್ಯರ್ಥಿ ಯಾವ ಟೀಮ್ ಗೆ ಹೋಗಬೇಕೆಂದು ರ್ಯಾಂಡಮ್ ಮೂಲಕ ಆಯ್ಕೆ ಮಾಡಲಾಗುತ್ತದೆ. ಸಂದರ್ಶನದಲ್ಲಿ ಯುಪಿಎಸ್ಸಿ ಬೋರ್ಡ್ ಚೇರ್ಮನ್ ಇದ್ದು, ತಾಳ್ಮೆ, ಸಿಟ್ಟು, ವೈಯಕ್ತಿಕ, ಹಾಬೀಸ್, ಸೇರಿದಂತೆ ಯುಪಿಎಸ್ಸಿ ಫಾರಂ ತುಂಬುವ ವೇಳೆ ಭರ್ತಿ ಮಾಡಿದ ವಿಷಯಗಳ ಬಗ್ಗೆಯೂ ಸಂದರ್ಶನ ನಡೆಯುತ್ತದೆ..!
ಇದಾದ ಬಳಿಕ ಆಯ್ಕೆಯಾದವರಿಗೆ ದೆಹಲಿಯಲ್ಲಿ ಎರಡು ವರ್ಷ ತರಬೇತಿ ನಡೆಯುತ್ತದೆ..ಅಲ್ಲಿಂದ ಪೊಲೀಸ್, ಕಂದಾಯ, ಕೋರ್ಟ್ ಸೇರಿದಂತೆ ಎಲ್ಲ ವಿಭಾಗದಲ್ಲಿ ತರಬೇತಿ ನೀಡಲಾಗುತ್ತದೆ. ಅಂತಿಮವಾಗಿ ಪೊಲೀಸ್ ಠಾಣೆ ಜವಾಬ್ದಾರಿ ನಂತರ ಡಿಎಸ್ಪಿ, ಎಎಸ್ಪಿ, ಎಸ್ಪಿಯಾಗಿ ಸಂಪೂರ್ಣ ಅಧಿಕಾರ ನೀಡಲಾಗುತ್ತದೆ ಎನ್ನುತ್ತಾರೆ ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್.
ಎಷ್ಟು ಜನ ಬರೆಯುತ್ತಾರೆ ?
ಒಂದು ಸಲಕ್ಕೆ 10 ಲಕ್ಷ ಜನ ಎಕ್ಸಾಂ ಕಟ್ಟುತ್ತಾರೆ, 6 ಲಕ್ಷ ಜನ ಎಕ್ಸಾಂ ಬರೆಯುತ್ತಾರೆ. ಅದರಲ್ಲಿ 9 ಸಾವಿರ ಪ್ರಿಲಿಮ್ಸ್ ಪಾಸಾಗುತ್ತಾರೆ. ಇದರಲ್ಲಿ 3 ಸಾವಿರ ಮೇನ್ಸ್ ಪಾಸಾಗುತ್ತಾರೆ. ಆದರೆ ಸಂದರ್ಶನಕ್ಕೆ ಹೋಗೋರು ಮಾತ್ರ ನೂರು ಮಂದಿ ಮಾತ್ರ. ಇದರಲ್ಲಿ 1:3 ಆಧಾರದ ಮೇಲೆ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ.
ಹುದ್ದೆಗಳು
150- IFS
150- IAS
150- IPS ಹುದ್ದೆಗಳು ಇರುತ್ತವೆ.
ಅವಕಾಶ ಎಷ್ಟು..?
ಜನರಲ್ ಕೆಟಗರಿ ವಿದ್ಯಾರ್ಥಿಗಳಿಗೆ 32 ವರ್ಷ ವಯೋಮಿತಿ. ಈ ಅವಧಿಯಲ್ಲಿ ನಾಲ್ಕು ಅವಕಾಶ ಸಿಗಲಿವೆ. ಇನ್ನು ಎಸ್ಸಿ ಎಸ್ಟಿಗಳಿಗೆ 37 ವರ್ಷ. ಒಟ್ಟು ನಾಲ್ಕು ಅವಕಾಶಗಳಲ್ಲಿ ಯುಪಿಎಸ್ಸಿ ಪಾಸ್ ಮಾಡಬೇಕು.
- ಸಿವಿಲ್ ಸರ್ವೀಸ್ ಸುಮ್ಮನೇ ಅಲ್ಲ. ಕಷ್ಟ ಪಡಬೇಕು. ಸಂದರ್ಶನಕ್ಕೆ ಹೋಗುವಷ್ಟರಲ್ಲಿ ಸಾಕಷ್ಟು ಓದಿರಬೇಕು. ನನಗೆ ಚೆಸ್ ಆಟ ಇಷ್ಟವಿದ್ದ ಕಾರಣ ಫಾರಂನಲ್ಲಿ ನನಗೆ ಇಷ್ಟವಾದ ಕ್ರೀಡೆ ಎಂದಿದ್ದೆ. ಅದರ ಬಗ್ಗೆ ಪ್ರಶ್ನೆ ಕೇಳಿದ್ದರು. ನನ್ನ ಜತೆ ಏಳು ಜನ ಕರ್ನಾಟಕ ಕೇಡರ್ ಪಾಸಾದರು. ಹೆಚ್ಚು ಅಂಕಗಳು ಬಂದವರಿಗೆ ಹೋಮ್ ಟೌನ್ ನೀಡುತ್ತಾರೆ. ಹಾಗಾಗಿ ನನಗೆ ಹೋಮ್ ಟೌನ್ ಸಿಕ್ಕಿತ್ತು.
| ಸಿ.ಬಿ.ರಿಷ್ಯಂತ್, ದಾವಣಗೆರೆ ಎಸ್ಪಿ
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ಫೇಲ್ ಅಥವಾ ಜಸ್ಟ್ ಪಾಸು ಅವಮಾನವಲ್ಲ ; ಪ್ರತಿಭೆಯ ಮಾನದಂಡವಲ್ಲ..!

- ಸುರೇಶ ಎನ್ ಶಿಕಾರಿಪುರ
ನಾ ಹೇಳ್ತೀನಿ, ಫೇಲಾಗಿರೊ ಮಕ್ಕಳು ಅಥವಾ ನಮ್ ಥರ ಜಸ್ಟ್ ಪಾಸಾಗಿರೊ ಮಕ್ಕಳೆ ಜೀವನ ಕಟ್ಕೊಳೋದು, ಜೀವನದ ಪರೀಕ್ಷೆಯಲ್ಲಿ ಸದಾ ಪಾಸಾಗೋದು ಅವರೇ. ಈಗಿರೋದು ಪ್ರತಿಭಾವಂತ ಮಕ್ಕಳ ಬೆರಳು ಕಿತ್ಕೊಳೊ ಶಿಕ್ಷಣ ವ್ಯವಸ್ಥೆ.
ಅಂಕ ಅಂಕ ಅಂಕ. ಅಂಕಕ್ಕಾಗಿ ಕೋಟಿ ಕೋಟಿ ಲೂಟಿ. ರ್ಯಾಂಕ್ ಪಟ್ಟಿ ಫೋಸ್ಟರ್ ಅಂಟಿಸಿ ವ್ಯಾಪಾರ ಮಾಡಲು ಸದಾ ಗಲ್ಲಾಪೆಟ್ಟಿಗೆ ತೆರೆದುಕೊಂಡು ಕುಂತಿರುವ ಖಾಸಗಿ ಶಿಕ್ಷಣ ವ್ಯಾಪಾರಿಗಳು. ಸಾಧನೆ ಅಂದರೆ ಅಂಕವಲ್ಲ. ಸಾಧನೆ ಎಂದರೆ ಯಶಸ್ವಿಯಾಗಿ ಬದುಕು ಕಟ್ಟಿಕೊಳ್ಳುವುದು. ಅದಕ್ಕೆ ಅಂಕದ ಅವಷ್ಯಕತೆ ಇಲ್ಲ. ಅದಕ್ಕೆ ಪ್ರತಿಭೆಯ ಅವಷ್ಯಕತೆ ಇದೆ. ಅಂಕ ಪ್ರತಿಭೆಯ ಮಾನದಂಡವಲ್ಲ. ಅದು ಶಿಕ್ಷಣ ವ್ಯಾಪಾರಿಗಳು ಹುಟ್ಟಿಸಿರುವ ಭ್ರಮೆ.
ನಮ್ಮ ಸಮಾಜದ ಬಹುಪಾಲು ಪೋಷಕರು ಹಗಲಿರುಳು ಬಿಡುವಿಲ್ಲದೆ ದುಡಿಯುವುದು ತಮ್ಮ ಮಕ್ಕಳ ಶಾಲೆಯ ಫೀಜು ತೆರಲು. ಮಕ್ಕಳು ಹುಟ್ಟುತ್ತಿದ್ದಂತೆ ಅವುಗಳನ್ನು ಯಾವ ಶಾಲೆಗೆ ಸೇರಿಸಬೇಕು? ಎಷ್ಟು ಫೀಸು ಕಟ್ಟಬೇಕು ಎಂಬ ಆತಂಕಿತ ಯೋಚನೆಯಲ್ಲೇ ಮಧ್ಯಮವರ್ಗದ ಪೋಷಕರು ದಿನ ಕಳೆಯುತ್ತಾರೆ. ಶ್ರೀಮಂತರಿಗೆ ಹಣದ ಚೆಲ್ಲುವ ಚಿಂತೆ ಭೀತಿಗಳೇ ಇರುವುದಿಲ್ಲ ಬಿಡಿ.
ಇದೆಲ್ಲ ಮಧ್ಯಮ ವರ್ಗದವರ ಪಾಡು. ಇದರ ಬದಲಿಗೆ ಸರ್ಕಾರಿ ಶಾಲೆಗೆ ಸೇರಿಸಿ, ಕಡಿಮೆ ಫೀಸು ಭರಿಸುವ ಯಾವುದಾದರೂ ಟ್ಯೂಷನ್ನಿಗೋ ಅಥವಾ ದಿನದ ಒಂದೆರೆಡು ಗಂಟೆ ಸ್ವತಃ ತಾವೇ ತಮ್ಮ ಮಕ್ಕಳ ಓದು ಬರೆಹದ ಕಡೆ ಗಮನ ಹರಿಸುವುದೋ ಮಾಡಿದರೆ ಖಂಡಿತಾ ಸಾಕು. ಬಹಳಷ್ಟು ಜನಕ್ಕೆ ಇದು ಆಗುವುದಿಲ್ಲ.
ಬಹಳ ಜನ ಮಧ್ಯಮ ವರ್ಗದ ಪೋಷಕರು ಒಂದು ದಿನವೂ ಸಂಜೆ ಐದು ಗಂಟೆಯಿಂದಲೇ ಒಂದಾದಮೇಲೆ ಒಂದರಂತೆ ಪ್ಲೇ ಆಗುವ ತಮ್ಮ ಮೆಚ್ಚಿನ ಸರಣಿ ಧಾರಾವಾಹಿಗಳನ್ನು ಯಾವ ಕಾರಣಕ್ಕು ತಪ್ಪಿಸಿಕೊಳ್ಳಲಾರರು. ಅನ್ನ ತರಕಾರಿ ಬೆಂದಾಗ ಕುಕ್ಕರ್ ಕೂಗಿ ಸಿಗ್ನಲ್ ಕೊಡುತ್ತದೆ. ಹತ್ತು ಹತ್ತುವರೆಯ ಕೊನೆಯ ಧಾರಾವಾಹಿ ನೋಡಿ ಪೂರೈಸಿದ ಬಳಿಕವೇ ಊಟ. ಬಹುಪಾಲು ಹೀಗೇ ಆಗುತ್ತಿದೆ.
ಮಕ್ಕಳ ಓದು ಬರೆಹದ ಕಡೆಗೆ ನಾವೆಷ್ಟು ಗಮನ ಹರಿಸುತ್ತಿದ್ದೇವೆ ಎಂದು ಪೋಷಕರೂ ಈ ನಿಟ್ಟಿನಲ್ಲಿ ಯೋಚಿಸಬೇಕಲ್ಲವೇ? ತಮ್ಮ ಬದುಕಿನ ಈ ಸೂಕ್ಷ್ಮವನ್ನು ಸ್ವಲ್ಪವೇ ಸ್ವಲ್ಪ ಅರ್ಥ ಮಾಡಿಕೊಂಡರೂ ಮಕ್ಕಳನ್ನು ಎಷ್ಟು ನಿರಾಯಾಸವಾಗಿ ಸರ್ಕಾರಿ ಶಾಲೆಯಲ್ಲೇ ಓದಿಸಬಹುದು. ಅವುಗಳನ್ನು ಬದುಕುವ ಮಕ್ಕಳನ್ನಾಗಿ ಪ್ರಕೃತಿಯ ಮಕ್ಕಳನ್ನಾಗಿ, ಸಧೃಡ ಮನಸ್ವಿಗಳನ್ನಾಗಿ, ಸಂಕೀರ್ಣ ವ್ಯಕ್ತಿತ್ವಗಳನ್ನಾಗಿ, ಅವರೆಲ್ಲ ನೈಸರ್ಗಿಕ ಅವಕಾಶ ಹಕ್ಕುಗಳಿಗೆ ವಂಚನೆಯಾಗದಂತೆ ಬೆಳೆಸಬಹುದಲ್ಲವೇ?
ಹೆಚ್ಚು ಅಂಕ ತೆಗೆದು ಸಂಭ್ರಮಿಸುತ್ತಿರುವ ಮಕ್ಕಳನ್ನು ಅವರ ಪೋಷಕರನ್ನು ಅಭಿನಂದಿಸೋಣ. ಆದರೆ ಹೆಚ್ಚು ಅಂಕ ತೆಗೆಯದ, ಜಸ್ಟ್ ಪಾಸಾದ, ಅಥವಾ ಫೇಲ್ಡ್ ಆದ ಮಕ್ಕಳ ಪರವಾಗಿಯೇ ನಿಲ್ಲೋಣ. ಎಸ್ ಎಸ್ ಎಲ್ ಸಿ, ಸೆಕೆಂಡ್ ಪಿಯುಸಿ ಪಾಸು ಫೇಲು ರ್ಯಾಂಕುಗಳೇ ನಮ್ಮ ಜೀವನದ ಎಲ್ಲವನ್ನೂ ನಿರ್ಧರಿಸಲಾರವು.
ಓದಿ ಉದ್ಯೋಗಕ್ಕಾಗಿ ಜಾತಕ ಪಕ್ಷಿಗಳಂತೆ ಕಾಯುವ ಯುವಕರಿಗೆ ಕೆಲಸ ಕೊಡಿಸುತ್ತೇನೆಂದು ನಂಬಿಸಿ ಕಡೆಗೆ ಪಕೋಡಾ ಮಾರಿ ಜೀವಿಸಲು ಅಧ್ಬುತ ಸಲಹೆ ನೀಡಿದ ನಾಯಕರುಗಳೂ ಇದ್ದಾರೆ ಎನ್ನುವುದು ಎಲ್ಲರ ಎಚ್ಚರದಲ್ಲಿರಬೇಕು. ಅಂಕ ಬೆನ್ನಟ್ಟಿ ಹೋದವರಿಗೆ ಜೀವನ ಮಾರ್ಗಗಳು ಅತ್ಯಂತ ಸೀಮಿತ. ಟಾರ್ಗೆಟ್ ಇಟ್ಟುಕೊಂಡೇ ಓದಿರುತ್ತಾರೆ ಅಥವಾ ಪೋಷಕರು ಓದಿಸಿರುತ್ತಾರೆ. ಅವರಿಗೆ ಟಾರ್ಗೆಟ್ ರೀಚಾಗದಿದ್ದಾಗ ಬೇರೆ ಮಾರ್ಗಗಳು ಅಪರಿಚಿತ, ಕಠಿಣ ಕವಲು ದಾರಿಗಳು. ನಮ್ಮ ಉಂಡಾಡಿ ಜಸ್ಟ್ ಪಾಸು ಫೇಲುಗಳಿಗೆ ದಾರಿ ನೂರಿವೆ ಬದುಕಿನರಮನೆಗೆ… ಅವು ಗಾಳಿಯಂತೆ ನೀರಿನಂತೆ ಎಲ್ಲಿ ಬೇಕಾದರೂ ನುಸುಳಿ ಬದುಕು ಜಯಿಸಬಲ್ಲವು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ರಾಜಕೀಯ4 days ago
ಮಹಾರಾಷ್ಟ್ರ ಸರ್ಕಾರ ಉರುಳಲು ಬಿಜೆಪಿ ಕುತಂತ್ರ ಕಾರಣ, ಇದು ದೇಶಕ್ಕೆ ಮಾರಕ : ಮಲ್ಲಿಕಾರ್ಜುನ ಖರ್ಗೆ
-
ನಿತ್ಯ ಭವಿಷ್ಯ6 days ago
ಗುರುವಾರ ರಾಶಿ ಭವಿಷ್ಯ-ಜೂನ್-30,2022 : ಈ ರಾಶಿಯವರು ನಿಮ್ಮ ಸಂಗಾತಿಗೆ ಹೃದಯದಲ್ಲಿ ಅಡಿಗಿರುವ ಸತ್ಯಾಂಶ ಬಹಿರಂಗಪಡಿಸುವ ದಿನ
-
ನಿತ್ಯ ಭವಿಷ್ಯ5 days ago
ಶುಕ್ರವಾರ- ರಾಶಿ ಭವಿಷ್ಯ ಜುಲೈ-1,2022 : ಈ ರಾಶಿಯವರಿಗೆ ಇಷ್ಟ ಇರದ ಮದುವೆ! ಆದರೆ ಈ ರಾಶಿಯವರಿಗೆ ಇಷ್ಟ ಇರದ ಉದ್ಯೋಗ!
-
ದಿನದ ಸುದ್ದಿ4 days ago
ಅಕ್ರಮ ಹಣ ವರ್ಗಾವಣೆ ಕೇಸ್ : ಡಿ.ಕೆ ಶಿವಕುಮಾರ್’ಗೆ ಜಾಮೀನು ಅರ್ಜಿ ವಿಚಾರಣೆ ಜುಲೈ 30 ಕ್ಕೆ ಮುಂದೂಡಿಕೆ
-
ದಿನದ ಸುದ್ದಿ4 days ago
ನೇರ ಪಾವತಿ ಪೌರಕಾರ್ಮಿಕರ ಸೇವೆ ಕಾಯಂಗೆ ಸರ್ಕಾರದ ಒಪ್ಪಿಗೆ : ಸಿಎಂ ಬಸವರಾಜ ಬೊಮ್ಮಾಯಿ
-
ದಿನದ ಸುದ್ದಿ4 days ago
ಶಿಕ್ಷಕನೋರ್ವ ಮಕ್ಕಳ ಬಿಸಿಯೂಟದ ತೊಗರಿ ಬೇಳೆ ಕದ್ದು ಮಾರುತ್ತಿರುವ ವಿಡಿಯೋ ವೈರಲ್.!
-
ದಿನದ ಸುದ್ದಿ7 days ago
ಉದಯಪುರ ಹತ್ಯೆ ಭಯೋತ್ಪಾದಕ ಕೃತ್ಯ ; ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಖಂಡನೆ
-
ದಿನದ ಸುದ್ದಿ4 days ago
ಬಿಜೆಪಿಯ ನೂಪುರ್ ಶರ್ಮಾ’ಗೆ ಸುಪ್ರೀಂಕೋರ್ಟ್ ತರಾಟೆ