Connect with us

ಬಹಿರಂಗ

ದಯೆಯಾಗಿ ಚಳುವಳಿ ಕೈಗೊಂಡ ಮಹಾ ಜ್ಞಾನಿ ಬುದ್ಧ

Published

on

  • ಕುಮಾರಸ್ವಾಮಿ ವಿ ಕೆ, ಶಿಕ್ಷಕರು, ಬೆಂಗಳೂರು

ನೀನು ಸಾವಿರ ಯುದ್ಧಗಳನ್ನು ಗೆಲ್ಲುವ ಮೊದಲು ನಿನ್ನನ್ನು ನೀನು ಗೆಲ್ಲು, ಆಗ ನಿನಗೆ ನಿಜವಾದ ಜಯ ಸಿಗುತ್ತದೆ” ಹೀಗೆಂದು ಹೇಳಿದ ಈ ಜಗತ್ತು ಕಂಡ ಮಹಾ ಪುರುಷ ಗೌತಮ ಬುದ್ಧನ ಸಂದೇಶಗಳು ಇಂದಿಗೂ, ಎಂದೆಂದಿಗೂ ಅಜರಾಮರ. ಹೌದು, ಬುದ್ಧನೆಂದರೆ ಪ್ರೀತಿ, ಪ್ರಾರ್ಥನೆ, ಜ್ಞಾನ, ಬೆಳಕು, ತಿಳುವಳಿಕೆ, ಸ್ವ ಚಿಂತನೆ, ಬುದ್ಧನೆಂದರೆ ಸಮಗ್ರತೆ.

ಆತ ಮಾನವೀಯತೆಯನ್ನು ಬಿತ್ತಿದ ಸಾಕಾರ ಮೂರ್ತಿ, ಜಗದ ಶಾಂತಿಗಾಗಿ ನಿತ್ಯ ಪ್ರಾರ್ಥಿಸಿದ ಕರುಣಾಮಯಿ, ಕ್ಷಣಿಕವೂ ತನ್ನ ಬಗ್ಗೆ ಯೋಚಿಸದ ನಿಸ್ವಾರ್ಥಿ, ಶುದ್ಧ ಮನಸ್ಸಿನಿಂದ ಬುದ್ಧ ಹೇಳಿದ್ದು ಹೀಗೆ “ಪ್ರತಿ ಮನುಷ್ಯನ ಒಳಗೊಂದು ಸುಪ್ತ ಮನಸ್ಸಿರುತ್ತದೆ, ಆ ಸುಪ್ತ ಮನಸ್ಸನ್ನು ಯಾರು ಅರಿಯುವಲ್ಲಿ ಸಫಲರಾಗುತ್ತಾರೋ ಅವರು ನಿಜವಾದ ಮನುಷ್ಯರಾಗುತ್ತಾರೆ” ಹೀಗೆ ಪ್ರಾರಂಭವಾಗುತ್ತದೆ ಬುದ್ಧನ ತತ್ವಗಳು. ಹೀಗೆ ನಮ್ಮ ನೆಲದಲ್ಲಿ ಹುಟ್ಟಿದ ಈ ಬುದ್ಧನ ಬೋಧನೆಗಳು ತತ್ವ-ಸಿದ್ಧಾಂತಗಳು, ಧರ್ಮ, ಜಾತಿ, ದೇಶದೇಶಗಳಾಚೆಯ ಎಲ್ಲೆಯನ್ನು ಮೀರಿದ್ದು.

ಬದುಕೆಂದರೆ ಪ್ರೀತಿ, ಬದುಕೆಂದರೆ ಮಾನವೀಯತೆ ಎನ್ನುತ್ತಲೇ ಬದುಕಿದರೆ ಹೀಗೆಯೇ ಬದುಕಬೇಕು ಎಂದು ಅರಿತು ನಡೆದು, ಅಂತೆಯೇ ಪರರಿಗೂ ಅದೇ ಹಾದಿಯನ್ನ ತೋರಿದ ನಮ್ಮ ಈ ಬುದ್ಧ ಕಾಲ, ಸ್ಥಳ, ಗಡಿ, ಧರ್ಮಗಳನ್ನು ಮೀರಿದ ದಿವ್ಯ ಸ್ವರೂಪಿ. ಆರೋಗ್ಯ, ಸಿರಿ-ಸಂಪತ್ತು, ರಾಗ-ದ್ವೇಷ, ದೇಹದಾರ್ಢ್ಯತೆ, ಶಿಕ್ಷಣ, ತಾಳ್ಮೆ, ಸಿಟ್ಟು, ಪರಿಪೂರ್ಣತೆ ,ಅಂತಃಸತ್ವ, ಕಾಲ, ಅಹಂಕಾರ, ಅಂಧಕಾರ…. ಹೀಗೆ ಬುದ್ಧನ ವಿಚಾರಧಾರೆಗಳಿಗೆ ಕೊನೆಯೇ ಇಲ್ಲ, ಆತ ನುಡಿಯದ ಮಾತುಗಳೇ ಇಲ್ಲ. ಮನುಷ್ಯ ತನ್ನ ಜೀವನದಲ್ಲಿ ಪರಿಪೂರ್ಣತೆಯನ್ನು ಪಡೆಯಲು ಅಗತ್ಯವಾದ ಬಹುತೇಕ ಉಪದೇಶಗಳನ್ನು ಬುದ್ಧ ನಮಗೆ ಅಂದೇ ಹೇಳಿದ್ದು ಸುಳ್ಳಲ್ಲ.

ಬುದ್ಧ ಪೂರ್ಣಿಮೆಯ ಇತಿಹಾಸ

ಬುದ್ಧ ಜನಿಸಿದ ದಿನವಾದ ವೈಶಾಖ ಮಾಸದ ಹುಣ್ಣಿಮೆಯಂದು ಶ್ರದ್ಧಾ ಭಕ್ತಿಗಳಿಂದ ಈ ಮಹಾನ್ ವಿರಾಗಿಯನ್ನು ಪೂಜಿಸಲಾಗುವುದು. ಭಗವಾನ್ ಬುದ್ಧನ 2584ನೇ ಜನ್ಮ ದಿನಾಚರಣೆ ಮಹೋತ್ಸವವನ್ನು ಭಕ್ತಿ ಶ್ರದ್ಧೆ, ಧ್ಯಾನದಿಂದ ಇಂದು ದೇಶದ ವಿವಿಧೆಡೆ ಆಚರಿಸಲಾಗುತ್ತದೆ. ಬುದ್ಧ ಪೂರ್ಣಿಮೆಯು ಬೌದ್ಧ ಮತೀಯರಿಗೆ ತುಂಬಾ ಪವಿತ್ರವಾದ ದಿನ. ವೈಶಾಖ ಶುದ್ಧ ಪೌರ್ಣಿಮೆ ಬುದ್ಧನ ಜನ್ಮ ದಿನ ಮತ್ತು ಬುದ್ಧನಿಗೆ ಜ್ಞಾನೋದಯವಾದ ದಿನ. ಶ್ರೀ ವಿಷ್ಣುವಿನ ದಶಾವತಾರದಲ್ಲಿ 9 ನೇ ಅವತಾರ ಎಂದೇ ಪೂಜಿಸಲ್ಪಡುವ “ಬುದ್ಧ” ಎಂದರೆ ‘ಜ್ಞಾನ ಪಡೆದವನು’ ಎಂದರ್ಥ. ತನ್ನ ಬೋಧನೆಗಳ ಮೂಲಕ ಕಿರಿ ವಯಸ್ಸಿನಲ್ಲೇ ಈ ಜಗತ್ತನ್ನು ಗೆದ್ದ ಬುದ್ದ, ಬದುಕಿನ ಬಗ್ಗೆ ಶಾಶ್ವತ ನೆಲೆ ರೂಪಿಸಿದ ತೇಜಸ್ವಿ.

ಸುಖದ ಸುಪ್ಪತ್ತಿಗೆಲ್ಲಿ ತೇಲುತ್ತಿದ್ದ ಬುದ್ಧನಿಗೆ ನೋವೆಂಬುದೇ ತಿಳಿದಿರಲಿಲ್ಲ. ಲೌಕಿಕ ಜಗತ್ತಿನ ಪರಿಚಯವೇ ಇರಲಿಲ್ಲ. ಹೀಗಿದ್ದಾಗ ವೃದ್ದ, ರೋಗಿ, ಶವದ ಚಿತ್ರಣವನ್ನು ಒಮ್ಮೆ ನೋಡಿದ ಬುದ್ದ, ಪ್ರತಿಯೊಬ್ಬರ ಜೀವನದಲ್ಲೂ ವೃದ್ಧಾಪ್ಯ, ಸಾವು, ರೋಗ ರುಜಿನಗಳು ಸಹಜವೆಂದು ಅರಿತು, ತನ್ನ 26 ನೇ ವಯಸ್ಸಿನಲ್ಲೇ ಮನೆ – ಮಠ, ಹೆಂಡತಿ – ಮಗುವನ್ನು ತೊರೆದ ಸಿದ್ಧಾರ್ಥ ಗಯಾಗೆ ತೆರಳಿ, ಅರಳಿ ಮರದ ಕೆಳಗೆ ಕುಳಿತು ಧ್ಯಾನಾಸಕ್ತನಾದ. ನಿರಂತರ 47 ದಿವಸಗಳ ಕಠಿಣ ತಪಸ್ಸು ಮಾಡಿದಾಗ ಇದೇ ವೈಶಾಖ ಶುದ್ಧ ಹುಣ್ಣಿಮೆಯಂದು ಸಿದ್ಧಾರ್ಥನಿಗೆ ಜ್ಞಾನೋದಯವಾಯಿತು. ಅಂದಿನಿಂದ ಸಿದ್ಧಾರ್ಥ ಬುದ್ಧನಾದ.

ಹೀಗೆ ಈಡೇರಿಸೋಣ ಬುದ್ದನ ಆಶಯಗಳನ್ನು
ತನ್ನ ಬದುಕಿನುದ್ದಕ್ಕೂ ನಿಸ್ವಾರ್ಥತೆಯ ತಿಳಿ ಹೇಳಿದ ಬುದ್ದ, ಸರಳ ಮತ್ತು ಶುದ್ಧ ಜೀವನದ ಸಂಕೇತ. ಆತನ ತತ್ವಗಳೇ ಹಾಗೆ, ಸದಾ ಆಕರ್ಷಣೀಯ ಹಾಗೂ ಅನುಕರಣೀಯ. ಆಸೆಯೇ ದುಃಖಕ್ಕೆ ಮೂಲವೆಂದು ಬೋಧಿಸಿದ ಬುದ್ಧ, ಮುಂದೆ ಹೇಳಿದ್ದು ನಿಸ್ವಾರ್ಥತೆ, ಕಾಲ ಪ್ರಜ್ಞೆ, ಅಜಾತ ಶತೃವಿನಂತಹ ಬದುಕಿನ ಮುನ್ನಡೆ, ಸಹಾನುಭೂತಿ, ಒಳ ಮನಸ್ಸಿನ ಶಿಸ್ತು. ಆತ ಮನೋವ್ಯಾಕುಲತೆಗೆ ಮದ್ದು ಅರೆದ ಅಂದಿನ ಮಹಾ ವೈದ್ಯನೇ ಹೌದು. ದಯೆಯಾಗಿ ಚಳುವಳಿ ಕೈಗೊಂಡ ಮಹಾ ಜ್ಞಾನಿಯೂ ಹೌದು. ಎಲ್ಲವನ್ನೂ ಸಾಧಿಸಲು ಬುದ್ಧ ಕೊನೆಗೆ ಹೇಳಿದ್ದು, ಸನ್ಮಾರ್ಗದ ಪಾಲನೆ. ನಮ್ಮೊಳಗಿನ ಶುದ್ಧ ನೋಟ, ಶುದ್ಧ ಆಚರಣೆಗಳು, ಚಿಂತನೆ, ಒಳ್ಳೆಯ ಮಾತು, ಸತ್ಯದ ಆಚರಣೆ, ಸ್ವಾರ್ಥರಹಿತ ಪ್ರಯತ್ನ ಇತ್ಯಾದಿ ಮೌಲ್ಯಗಳನ್ನು ಅನುಸರಿಸುವ ಮೂಲಕ ನಾವೂ ಸಹ ಬುದ್ಧನನ್ನು ಆಲಂಗಿಸಿಕೊಳ್ಳಲು ಸಾಧ್ಯ, ತತ್ವಗಳ ಅನುಪಾಲನೆ ಸಾಧ್ಯ.

(ಕುಮಾರಸ್ವಾಮಿ ವಿ ಕೆ,
ಪ್ರೌಢಶಾಲಾ ಮುಖ್ಯ ಶಿಕ್ಷಕ,
ಸಿದ್ದಾರ್ಥ ಆಂಗ್ಲ ಶಾಲೆ,
ಬೆಂಗಳೂರು ಉತ್ತರ
ಮೊಬೈಲ್ : 9113906120)

ಸುದ್ದಿದಿನ.ಕಾಂ|ವಾಟ್ಸಾಪ್|9980346243

ನೆಲದನಿ

“ಟುಕ್ಡೇ ಗ್ಯಾಂಗ್” ನ ಅಸಹ್ಯ ಅಟ್ಟಹಾಸದಲ್ಲಿ..!

Published

on

ಬರಹ : ಸಂಜ್ಯೋತಿ ವಿ.ಕೆ
  • ಸಂಜ್ಯೋತಿ ವಿ. ಕೆ, ಬೆಂಗಳೂರು

ಚಂದಿರನು ಜೊತೆಗಿರುವುದನ್ನೂ ಸಹಿಸದವರು ಎಲ್ಲೆಲ್ಲರನ್ನೂ ದೂರದೂರ ತಳ್ಳುವ ದ್ವೇಷಪ್ರೇಮಿಗಳೇ ಹೊರತು, ಸಾಮರಸ್ಯ, ಸಹಬಾಳ್ವೆಯಿಂದ ದೇಶ ಬೆಳಗುವುದನ್ನು ಬಯಸುವ ದೇಶಪ್ರೇಮಿಗಳಂತೂ ಅಲ್ಲ. ನಿಜದ ಭಾರತ ಛಿದ್ರ ಛಿದ್ರವಾಗುತ್ತಿದೆ, ಈ “ಟುಕ್ಡೇ ಗ್ಯಾಂಗ್” ನ ಅಸಹ್ಯ ಅಟ್ಟಹಾಸದಲ್ಲಿ.

ಎಲ್ಲರೂ ಎಲ್ಲರನ್ನೂ ಯಾವುದಾದರೊಂದು ಕಾರಣಕ್ಕೆ, ಯಾವುದಾರೊಂದು ಸ್ಥರದಲ್ಲಿ ‘ಅನ್ಯ’ರನ್ನಾಗಿ ಕಾಣುತ್ತಲೇ, ಭಾವಿಸುತ್ತಲೇ ಭಗಭಗನೆ ಉರಿಯುತ್ತಲೇ ಇರಬೇಕು. ಹಿಂದೂಗಳೆನಿಸಿಕೊಂಡವರು(?) ಮುಸ್ಲಿಮರನ್ನು, ಕ್ರೈಸ್ತರನ್ನು; ‘ಹುಟ್ಟಿನಿಂದ ತಮ್ಮದು ಶ್ರೇಷ್ಟ ಜಾತಿ’ ಎಂದು ಸುಳ್ಳೇ ಬೀಗುವವರು ಇತರರೆಲ್ಲರನ್ನೂ ಅನ್ಯರಾಗಿ ಕೀಳಾಗಿ ಕಾಣುತ್ತಾ; ಆ ಕೆಳಗೆ ನಿಂತವರು ತಮ್ಮ ಮೇಲಾಗುತ್ತಿರುವ ಶೋಷಣೆಯನ್ನು ಗುರಿತಿಸಲಾಗದಂತೆ ಅವರವರಲ್ಲೇ ಶ್ರೇಷ್ಟ-ಕನಿಷ್ಟಗಳೆಂದು ಕಿತ್ತಾಡುತ್ತಾ ಒಬ್ಬರನ್ನೊಬ್ಬರು ಅನ್ಯರಾಗಿ ಕಾಣುತ್ತಲೇ ಇರಬೇಕೆನ್ನುವುದು ಮನುವಾದಿಗಳ ಸಂಹಿತೆಯಾಗಿದೆ.

ಇಷ್ಟು ಸಾಲದೆಂಬಂತೆ ಯಾವುದು ನಮ್ಮ ಅನನ್ಯತೆ, ಅಸ್ಮಿತೆಯೋ, ಯಾವುದು ಈ ದೇಶದ ಬಹುತ್ವದ ಮೂಲಸೆಲೆಯೋ ಅಂತಹವುಗಳ ನಡುವೆಯೂ ಅನ್ಯತೆಯ ಭೇದ, ದ್ವೇಷ ಹುಟ್ಟುಹಾಕಲಾಗುತ್ತಿದೆ. ಭಾಷೆ-ಭಾಷೆಗಳ ನಡುವೆ, ಉತ್ತರ-ದಕ್ಷಿಣಗಳ ನಡುವೆ ಅನ್ಯತೆಯ ಬೆಂಕಿ ಹಚ್ಚಿ ಉರಿ ಹೆಚ್ಚಾಗಿಸಲು ನಿರಂತರ ತುಪ್ಪ ಸುರಿಯುತ್ತಲೇ ಇದ್ದಾರೆ. ಈ ಅನ್ಯತೆ, ಅಸಹಿಷ್ಣುತಯೇ ಸದಾ ಜನರ ಮನಸ್ಸು ಭಾವಗಳನ್ನು ಆಕ್ರಮಿಸಿರಬೇಕು.

ಯಾವ ಮಟ್ಟಿಗೆ ಇವು ಜನರನ್ನು ಅನ್ಯದ್ವೇಷದ ವಿಷವರ್ತುಲದಲ್ಲಿ ಮುಳುಗಿಸಿದೆಯೆಂದರೆ ಅವರಿಗೆ ತಮ್ಮ ಕುಸಿಯುತ್ತಿರುವ ಜೀವನಮಟ್ಟ
(ಕುಸಿಯುತ್ತಿರುವ ಭಾರತದ ಆರ್ಥಿಕತೆ, , ಏರುತ್ತಲೇ ಇರುವ ಜೀವನಾವಶ್ಯಕ ವಸ್ತುಗಳ ಬೆಲೆಗಳು, ಹಬ್ಬುತ್ತಿರುವ ನಿರುದ್ಯೋಗ, ಮಾಯವಾಗುತ್ತಿರುವ ದುಡಿಮೆಯ ಅವಕಾಶಗಳು…) ಕಸಿದುಕೊಳ್ಳುತ್ತಿರುವ ತಮ್ಮ ಹಕ್ಕುಗಳು (ಸರ್ವರಿಗೂ ಸಮಾನ ಶಿಕ್ಷಣಕ್ಕಾಗಿ ಇರಬೇಕಾದ ಸರ್ಕಾರಿ ಶಾಲೆಗಳು; ಸರ್ವರಿಗೂ ಮೂಲಭೂತ ಆರೋಗ್ಯಕ್ಕಾಗಿ ಇರಬೇಕಾದ ಸರ್ಕಾರಿ ಆಸ್ಪತ್ರೆಗಳು.

ಸಾರ್ವಜನಿಕ ಆಹಾರ ಧಾನ್ಯ ವಿತರಣೆಯ ಮೂಲಕ ಆಹಾರ ಭದ್ರತೆ; ಸಾಮಾಜಿಕ ನ್ಯಾಯಕ್ಕಾಗಿ ತಂದ ಮೀಸಲಾತಿಯನ್ನು ಹೀಯಾಳಿಸುವಂತೆ ಮುಚ್ಚುತ್ತಿರುವ ಸರ್ಕಾರಿ ಉದ್ಯಮಗಳು, ಸಾಲದೆಂಬಂತೆ ಮೀಸಲಾತಿಯ ಮೂಲ ತತ್ವಕ್ಕೇ ಕೊಳ್ಳಿ ಇಡುವಂತ ಆರ್ಥಿಕತೆ ಆಧಾರಿತ ಮಿಸಲಾತಿ; ಕುಡಿಯುವ ನೀರಿನ ಸರಬರಾಜಿನಿಂದಿಡಿದು, ವಿದ್ಯತ್, ರಸ್ತೆ, ರೈಲು, ರೈಲ್ವೆ ನಿಲ್ದಾಣದಾದಿಯಾಗಿ ಸಾರ್ವಜನಿಕ ಸೇವೆಗಳೆಲ್ಲವನ್ನೂ ಖಾಸಗಿಯ ಸ್ವತ್ತಾಗಿಸುತ್ತಾ, ಅವರ ಹೊಟ್ಟೆ ಜೇಬುಗಳನ್ನು ಭರ್ತಿ ಮಾಡುತ್ತಾ, ಬಡವರಿಗೆ ಕನಿಷ್ಟ ಸೌಲಭ್ಯಗಳೂ ಕೈಗೆಟುಕುತ್ತಿಲ್ಲ.

ಉಳ್ಳವರು ಮಾತ್ರವೇ ಬದುಕವ ಹಕ್ಕುಳ್ಳವರೆಂಬಂತೆ ಬಡವರ ಬವಣೆಗಳನ್ನು ಗೇಲಿ ಮಾಡುವಂತ ಸರ್ಕಾರದ ನೀತಿಗಳು) ಇವುಗಳ ಬಗೆಗೆ ಚಿಂತಿಸುವುದಿರಲಿ, ಗಮನಿಸಲೂ ಸಾಧ್ಯವಾಗದಂತೆ ಇಂತಹ ಪರಸ್ಪರ ದ್ವೇಷ ಮೇಲಾಟಗಳಲ್ಲೇ ಪತನಗೊಳ್ಳಬೇಕು.

ಹಾಗಿದ್ದರೆ ಮಾತ್ರವೇ ತಾವು ಪೊಳ್ಳೇ ಪ್ರಜಾಪ್ರಭುತ್ವದ ಹೆಸರಿನಲ್ಲಿ ನಿರಂತರ ಸರ್ವಾಧಿಕಾರದ ಗದ್ದುಗೆಯಲ್ಲಿ ಬೀಗುತ್ತಿರಬಹುದೆಂಬ ಹುನ್ನಾರ ಹೂಡಿರುವ ಆಳುವವರ ಕ್ಷದ್ರತೆ ಇಂದು ದೇಶವನ್ನು ಯಾವ ಹೀನಾಯ ಸ್ಥಿತೆಗೆ ತಂದಿದೆಯೆಂದರೆ;

ಜನರು ಜೊತೆಯಲ್ಲಿ ಆಡುತ್ತಾ ಬೆಳೆದ ಅಕ್ಕಪಕ್ಕದವರನ್ನೂ, ತಾವು ಎಂದೂ ನೋಡಿರದ ಅರಿತಿರದವರನ್ನೂ ಜಾತಿ, ಮತ ಧರ್ಮಗಳ ಹೆಸರಲ್ಲಿ ದ್ವೇಷಿಸುತ್ತಿದ್ದಾರೆ. ತಮ್ಮ ತಮ್ಮ ಕುಟುಂಬ, ಸ್ನೇಹವಲಯದಲ್ಲೂ ತಮ್ಮ ವಾದ ಒಪ್ಪದವರನೆಲ್ಲ ಸಾರಾಸಗಟಾಗಿ ದ್ವೇಷಿಸುವ, ತಿರಸ್ಕರಿಸುವಂತ ಮನಸ್ಥಿತಿ ಬೆಳೆಯುತ್ತಿದೆ.

ಈ ದ್ವೇಷಪ್ರೇಮಿಗಳಿಗೆ ‘ಸರ್ಕಾರವೇ ತಮ್ಮ‌ಪರ’ವೆಂಬ ಹುಂಬತನ ಯಾವ ಕೇಡನ್ನಾದರೂ ಮಾಡಬಲ್ಲ ದುಷ್ಟ ಧೈರ್ಯವನ್ನು ತುಂಬುತ್ತಿದೆ. ಪ್ರತಿದಿನದ ಬದುಕಿಗಾಗಿ ದುಡಿಯುವ, ಉಡುವ, ಉಣ್ಣುವ ವಿಷಯಗಳಿಂದ ಹಿಡಿದು, ನಾವು ನೋಡುವ, ಹಾಡಿ ಆಡಿಕೊಳ್ಳುವ ಕಲೆಯವರಗೆ ತಾವು ವಿಧಿಸಿದ ನಿಯಮದಂತೆ ಎಲ್ಲರೂ ನಡೆಯಬೇಕೆಂಬ ದಾಷ್ಟ್ರ್ಯ ತೋರುವಲ್ಲಿಗೆ ಅವರನ್ನು ತಂದು ನಿಲ್ಲಿಸಿದೆ.

ಜನರ ಸಾಂವಿಧಾನಿಕ ಹಕ್ಕುಗಳನ್ನು ಕಾವಲು ಕಾಯಬೇಕಾದ ಪೋಲಿಸ್ ವ್ಯವಸ್ಥೆ, ಸರ್ಕಾರ, ಕೊನೆಗೆ ನ್ಯಾಯಾಂಗ ಎಲ್ಲವೂ ಈ ದುಷ್ಟತನದ ಮಾಯಕದೊಳಗೆ ಕರಗಿಹೋದಂತೆ ಭಾಸವಾಗುತ್ತಿದೆ. ಇವೆಲ್ಲದರ ಮುಂದುವರಿದ ಭಾಗವೇ ನಿನ್ನೆ ಆನವಟ್ಟಿಯಲ್ಲಿ ನಡೆಯಬೇಕಿದ್ದ ‘ಜತೆಗಿರುವನು ಚಂದಿರ’ ನಾಟಕ ಪ್ರದರ್ಶನಕ್ಕೆ ಮತೀಯ ತೀವ್ರವಾದಿಗಳು ತಡೆಯೊಡ್ಡಿರುವ ಘಟನೆ.

ಆದರೆ ಇದು ಹಿಗೆಯೇ ಸಾಗುತ್ತಲೇ ಇರಬಹುದೆಂಬ ಭ್ರಮೆ ಚೂರಾಗುವ ದಿನಗಳೂ ಬರಲಿವೆ. ಎಲ್ಲರನ್ನೂ ಎಲ್ಲ ಕಾಲದಲ್ಲೂ ಮರುಳು ಮಾಡುತ್ತಲೇ ಇರುವುದು ಸಾಧ್ಯವಿಲ್ಲದ ವಿಷಯ. ಈಗಾಗಲೇ ಜನ ಎಚ್ಚೆತ್ತುಕೊಳ್ಳುತ್ತಿದ್ದಾರೆ. ಅದರ ವೇಗವನ್ನು ಹೆಚ್ಚಿಸುವಲ್ಲಿ ಈ ದ್ವೇಷ ಪ್ರೇಮಿಗಳ ಹೆಚ್ಚುತ್ತಿರುವ ಮದವೂ ಕೊಡುಗೆ ನೀಡಲಿದೆ.

ಜನಸಾಮಾನ್ಯರು ತಾವು ತಮ್ನಷ್ಟಕ್ಕೆ ನೆಮ್ಮದಿಯ ಬದುಕು ಕಟ್ಟಿಕೊಂಡು, ಉಂಡುಟ್ಟು ಕಲೆ ಇತ್ಯಾದಿಗಳನ್ನು ಆಸ್ವಾಧಿಸುತ್ತಾ ನೆಮ್ಮದಿಯಾಗಿ ಜೀವಿಸಲು ಕಂಟಕರಾಗುತ್ತಿರುವ ಈ ನೀಚರನ್ನು ನೆಲಕ್ಕೊಗೆಯುವ ಕಾಲ ಬೇಗ ಬರಲಿ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಬಹಿರಂಗ

ಶಿಕ್ಷಕಿಯೊಬ್ಬರು ಹತ್ಯೆಗೀಡಾದಾಗ..!

Published

on

  • ಮೂಲ : ಅವಿಜಿತ್‌ ಪಾಠಕ್‌, ಅನುವಾದ : ನಾ ದಿವಾಕರ

ಶಿಕ್ಷಣದ ಚಿಕಿತ್ಸಕ ಗುಣವನ್ನು ಗೌರವಿಸುವವರನ್ನು ರಜನಿ ಬಾಲಾ ಅವರ ಹತ್ಯೆ ವಿಚಲಿತಗೊಳಿಸಲೇಬೇಕು.


ಹಿಂಸೆಯ ಯುಗದಲ್ಲಿ ಸಾವು ಎನ್ನುವುದು ಕೇವಲ ಅಂಕಿಅಂಶಗಳಿಗೆ ಸೇರ್ಪಡೆಯಾಗುವ ಒಂದು ದತ್ತಾಂಶವಾಗಿರುವ ಸಂದರ್ಭದಲ್ಲಿ ರಜನಿ ಬಾಲಾ ಎಂಬ ಶಿಕ್ಷಕಿಯ ಸಾವು ಸಹ ನೆನೆಗುದಿಗೆ ಬೀಳುವುದು ಸಹಜ. ಜಮ್ಮು ಕಾಶ್ಮೀರದ ಕುಲ್ಗಾಮ್‌ ಜಿಲ್ಲೆಯಲ್ಲಿ ಭಯೋತ್ಪಾದಕರ ಗುಂಡೇಟಿಗೆ ಬಲಿಯಾದ 36 ವರ್ಷದ ಶಿಕ್ಷಕಿ ರಜನಿ ಬಾಲಾ ಅವರ ದಾರುಣ ಅಂತ್ಯವೂ ಸಾರ್ವಜನಿಕ ಬದುಕಿನ ವಿಸ್ಮೃತಿಗೆ ಜಾರಿಬಿಡುತ್ತದೆ.

ಏಕೆಂದರೆ ನಮ್ಮ ಮನೋಭಾವ ಮತ್ತು ಆಧ್ಯಾತ್ಮಿಕ ದಾರಿದ್ರ್ಯದ ಪರಿಣಾಮ ನಮ್ಮಲ್ಲಿ ಅನೇಕರು ಮತ್ತೊಂದು ರೀತಿಯ ಹಿಂಸೆಯನ್ನು ಆಹ್ವಾನಿಸುತ್ತಿರುತ್ತೇವೆ. ಭಯೋತ್ಪಾದನೆಯನ್ನು ಎದುರಿಸಲು ಸೇನಾ ಕಾರ್ಯಾಚರಣೆಯನ್ನು ಅಪೇಕ್ಷಿಸುತ್ತಿರುತ್ತೇವೆ. ಆದಾಗ್ಯೂ ಹಿಂಸೆಯು ಶಾಲಾ ಆವರಣವನ್ನು ಪ್ರವೇಶಿಸುವುದನ್ನು ಹೇಗೆ ಅರ್ಥೈಸಲು ಸಾಧ್ಯ ? ತಮ್ಮ ಅಸ್ಮಿತೆಗಳ ಲೋಕದ ಪರಿವೆಯೇ ಇಲ್ಲದ ಶಾಲಾ ಮಕ್ಕಳ ಎದುರಿನಲ್ಲೇ ಅವರ ಆತ್ಮೀಯ ಶಿಕ್ಷಕಿಯೊಬ್ಬರು ಭಯೋತ್ಪಾದಕರಿಂದ ಹತ್ಯೆಗೀಡಾಗುವುದನ್ನು ಹೇಗೆ ಅರ್ಥಮಾಡಿಕೊಳ್ಳುವುದು ?

ಬಹುಶಃ ನಾವು ಶಿಕ್ಷಣದ ಚಿಕಿತ್ಸಕ ಶಕ್ತಿಯ ಮೌಲ್ಯಗಳನ್ನು ಮರೆತೇಬಿಟ್ಟಿದ್ದೇವೆ ಎನಿಸುತ್ತದೆ. ಅಥವಾ ಒಬ್ಬ ಹಿಂದೂ ಬೋಧಕ ಮತ್ತು ಮುಸ್ಲಿಂ ವಿದ್ಯಾರ್ಥಿಗಳ ನಡುವಿನ ಸಂವಹನ ಪ್ರಕ್ರಿಯೆಯಾಗಿ ಶಿಕ್ಷಣದ ಈ ಸಾಧ್ಯತೆಯನ್ನೂ ಮರೆತಿದ್ದೇವೆ ಎನಿಸುತ್ತದೆ. ಭಯೋತ್ಪಾದಕರು ರಜನಿ ಬಾಲಾ ಅವರನ್ನು ಹತ್ಯೆ ಮಾಡಿರುವುದರೊಂದಿಗೇ ಶಿಕ್ಷಣದ ಈ ವಿಮೋಚನೆಯ ಶಕ್ತಿ ಮತ್ತು ಸಾಧ್ಯತೆಗಳನ್ನೂ ಕೊಂದುಹಾಕಿದ್ದಾರೆ.

ಏಕೆಂದರೆ ಮೂಲತಃ ಭಯೋತ್ಪಾದನೆ ಎನ್ನುವುದು ಅಧ್ಯಾತ್ಮದಿಂದ ವಿಮುಖವಾದ, ಅಸ್ತಿತ್ವವನ್ನೇ ನಿರಾಕರಿಸುವಂತಹ ಒಂದು ಕೃತ್ಯ. ಇದು ಭೀತಿಯನ್ನು ಸೃಷ್ಟಿಸುವಂತೆಯೇ ಸಂವಹನದ ಕ್ರಿಯೆಯನ್ನೂ ನಿರಾಕರಿಸುತ್ತದೆ. ಇತರ ಯಾವುದೇ ತೀವ್ರಗಾಮಿ ತತ್ವದಂತೆಯೇ ಭಯೋತ್ಪಾದನೆಯೂ ಸಹ ತನ್ನ ಶತ್ರುಗಳನ್ನು ಗುರುತಿಸುವ ಹಿಂಸಾತ್ಮಕ ರೂಢಮಾದರಿಯೊಂದನ್ನು ಸೃಷ್ಟಿಸಿಕೊಳ್ಳುತ್ತದೆ.

ಆದರೆ, ಸ್ವತಃ ಒಬ್ಬ ಉಪನ್ಯಾಸಕನಾಗಿ ನನಗೆ ರಜನಿ ಬಾಲಾ ಅವರನ್ನು ಮರೆಯಲಾಗುವುದಿಲ್ಲ. ಅಥವಾ “ ಭಯೋತ್ಪಾದಕರ ವಿರುದ್ಧ ಸೇನಾ ಕಾರ್ಯಾಚರಣೆಯಲ್ಲಿ ಪುಲ್ವಾಮಾದಲ್ಲಿ ಇಬ್ಬರು ಜೈಷ್‌ ಎ ಮುಹಮ್ಮದ್‌ ಉಗ್ರರನ್ನು ಹತ್ಯೆ ಮಾಡಲಾಯಿತು ” ಎಂಬ ಪ್ರತಿ ನಿರೂಪಣೆಯಿಂದ ನಾನು ಯಾವುದೇ ರೀತಿಯ ಪರಾರ್ಥವಾದ ಸಂತೋಷವನ್ನು ಅನುಭವಿಸುವುದಿಲ್ಲ. ವಾಸ್ತವ ಎಂದರೆ ಈ ಹಿಂಸೆ ಮತ್ತು ಪ್ರತಿ ಹಿಂಸೆಯ ವಿಷ ವರ್ತುಲವು ನಮ್ಮ ಪ್ರಜ್ಞೆ ಮತ್ತಷ್ಟು ಕ್ರೂರವಾಗುವಂತೆ ಮಾಡುತ್ತದೆ.

ಓರ್ವ ಉಪನ್ಯಾಸಕನಾಗಿ ನನಗೆ, ಒಂದು ಅರ್ಥಪೂರ್ಣ ಸಂವಾದದ ಭೂಮಿಕೆಯಾಗಿ ಶಿಕ್ಷಣ ಎನ್ನುವುದು ಮಾನವ ಸಮಾಜ ಕೂಡಿ ಬಾಳುವ ಸಮನ್ವಯತೆಯನ್ನು ಸಾಕಾರಗೊಳಿಸುವ ಪರಮೋಚ್ಚ ಕೊಡುಗೆ ಹಾಗೂ ಶಾಲಾ ಕೊಠಡಿ ಎಂದರೆ ಕೇವಲ ರಣಭೂಮಿಯಲ್ಲದೆ ನಮ್ಮನ್ನು ಹೊಸ ದಿಗಂತಗಳನ್ನು ಬೆಸೆಯಲು ಕೊಂಡೊಯ್ಯುವ ಸಾಧನ ಎಂದೇ ಭಾಸವಾಗುತ್ತದೆ. ನಂಜು ತುಂಬಿದ ಉಗ್ರವಾದಿಗಳಿಗೆ ಅಥವಾ ಕರ್ತವ್ಯನಿರತ ಸೇನೆಗೆ ಇದು ಅರ್ಥವಾಗುವುದಿಲ್ಲ.

ಉದಾಹರಣೆಗೆ ನನ್ನ ತರಗತಿಯಲ್ಲಿ ನಾನು ಪ್ರತಿಭಾವಂತ ಕಾಶ್ಮೀರಿ ಮುಸ್ಲಿಂ ವಿದ್ಯಾರ್ಥಿಗಳನ್ನು ಕಂಡಿದ್ದೇನೆ. ನಾವು ಒಟ್ಟಿಗೇ ಓಡಾಡಿದ್ದೇವೆ, ಕಲಿತಿದ್ದೇವೆ, ತಪ್ಪು ಒಪ್ಪುಗಳನ್ನು ಅರಿತಿದ್ದೇವೆ. ಭಯೋತ್ಪಾದಕರಾಗಲೀ, ಸೇನಾ ಪ್ರವೃತ್ತಿಯ ಪ್ರಭುತ್ವವಾಗಲೀ ಈ ಸಾಧ್ಯತೆಯನ್ನು ಮನಗಾಣಲು ಸಾಧ್ಯವಾಗುವುದಿಲ್ಲ. ಆದುದರಿಂದಲೇ ನನಗೆ, ರಜನಿ ಬಾಲಾ ಅವರ ಹತ್ಯೆಯು, ಶಿಕ್ಷಣದ ಚಿಕಿತ್ಸಕ ಗುಣದ ಬಗ್ಗೆ ವಿಶ್ವಾಸ ಇರುವ ಎಲ್ಲರನ್ನೂ ವಿಚಲಿತಗೊಳಿಸಬೇಕು ಎನಿಸುತ್ತದೆ.

ಮೇ 31ರ ಆ ಆಘಾತಕಾರಿ ಮುಂಜಾನೆಯನ್ನು ಊಹಿಸಿಕೊಳ್ಳಿ. ರಜನಿ ಬಾಲಾ ಆಗತಾನೇ ಶಾಲೆಯನ್ನು ಪ್ರವೇಶಿಸುವುದರಲ್ಲಿದ್ದರು. ಮಕ್ಕಳು ಪ್ರಾರ್ಥನೆಗೆ ನಿಲ್ಲಲು ಸಿದ್ಧವಾಗುತ್ತಿದ್ದರು. ಆ ಸಂದರ್ಭದಲ್ಲೇ ತಮ್ಮ ಶಿಕ್ಷಕಿಯು ಗುಂಡೇಟಿಗೆ ಬಲಿಯಾಗಿ ಸಾಯುವುದನ್ನು ಮಕ್ಕಳು ಕಣ್ಣಾರೆ ನೋಡುತ್ತಾರೆ. ಬಹುಶಃ ಈ ಚರಿತ್ರೆಯ ಬೋಧಕಿ ತರಗತಿಯಲ್ಲಿ ತಮ್ಮ ಜ್ಞಾನವನ್ನು ಹೆಚ್ಚಿಸುತ್ತಾರೆ ಎಂದು ಆ ಮಕ್ಕಳು ಭಾವಿಸಿರಬಹುದು.

ರಜನಿ ಬಾಲಾ ಅವರೂ ಸಹ ಎಲ್ಲ ಶಿಕ್ಷಕಿಯರೂ ಬಯಸುವಂತೆ, ಮಕ್ಕಳಿಗೆ ಪಾಠ ಬೋಧಿಸುವುದರ ಮೂಲಕ, ಖಲೀಲ್‌ ಗಿಬ್ರಾನ್‌ ಹೇಳಿರುವಂತೆ “ ನಿಮ್ಮ ಮಕ್ಕಳು ವಾಸ್ತವದಲ್ಲಿ ನಿಮ್ಮ ಮಕ್ಕಳಲ್ಲ ” ಎಂಬ ವಾಸ್ತವವನ್ನು ಮನನ ಮಾಡಿಕೊಳ್ಳುವ ಮಧುರ ಕ್ಷಣಗಳಿಗಾಗಿ ಕಾತುರದಿಂದಿದ್ದಿರಬಹುದು. ಜೀವ ವಿಕಾಸ ಪ್ರಕ್ರಿಯೆಯಲ್ಲಿನ ಶಿಶುಗಳಾಗಿ ಈ ಮಕ್ಕಳು ಕಾಣುತ್ತಾರೆ.

ಆದರೆ ಭಯೋತ್ಪಾದನೆ ಎನ್ನುವುದು ಯಾವುದೇ ಮತಧರ್ಮದ ಸಮವಸ್ತ್ರವನ್ನು ಧರಿಸಿದ್ದರೂ ಅದರಲ್ಲಿ ಧಾರ್ಮಿಕತೆ ಇರುವುದಿಲ್ಲ. ಅದು ಜೀವ ವಿರೋಧಿ. ಅದು ಸಾಮೂಹಿಕ ಆತ್ಮಹತ್ಯೆಯತ್ತ ಚಲಿಸುತ್ತದೆ. ತಮ್ಮ ಮುಂಜಾವಿನ ಪ್ರಾರ್ಥನೆಯನ್ನು ಸಲ್ಲಿಸಲು ಸಜ್ಜಾಗುತ್ತಿದ್ದ ಆ ಸುಂದರ ಮಕ್ಕಳಲ್ಲಿ, ಯಾವುದೇ ಶಿಕ್ಷಕರು ಬಯಸುವಂತೆ, ಕ್ರಿಯಾಶೀಲತೆಯ ಸಾಧ್ಯತೆಗಳು ಇರಲು ಸಾಧ್ಯ. ಅವರಲ್ಲೇ ಹಲವರು ಜಲಾಲುದ್ದಿನ್‌ ರೂಮಿ ಅವರಂತಹ ಆಧ್ಯಾತ್ಮಿಕ ವ್ಯಕ್ತಿಗಳು ಹೊರಹೊಮ್ಮಲು ಸಾಧ್ಯ. ಅಥವಾ ಶಾಂತಿದೂತ ಮಾರ್ಟಿನ್‌ ಲೂಥರ್‌ ಕಿಂಗ್‌ (ಜೂನಿಯರ್)‌ ಹೊರಹೊಮ್ಮಲು ಸಾಧ್ಯ. ಅಥವಾ ಜಾನ್‌ ಲೆನ್ನನ್‌ ಅವರಂತಹ ಅದ್ಭುತ ಗಾಯಕ ಹುಟ್ಟಲು ಸಾಧ್ಯ. ಈ ಸಾಧ್ಯತೆಗಳೇ ಭಯೋತ್ಪಾದಕರಲ್ಲಿ ಭೀತಿ ಉಂಟುಮಾಡುತ್ತದೆ.

ರಜನಿ ಬಾಲಾ ಅವರನ್ನು ಹತ್ಯೆ ಮಾಡುವ ಮೂಲಕ ಭಯೋತ್ಪಾದಕರು ಈ ಮಕ್ಕಳಿಗೆ, ಎಲ್ಲ ಉದಾತ್ತ ಕನಸುಗಳನ್ನು ನಿಕೃಷ್ಟವಾಗಿ ನೋಡುವಂತೆ, ಸಂವಾದ ಮತ್ತು ಸಂವಹನದ ಸ್ಫೂರ್ತಿಯನ್ನು ನಿರಾಕರಿಸುವಂತೆ ಬೋಧಿಸುತ್ತಾರೆ. ನಿಮ್ಮ ಶಿಕ್ಷಕರೇ ನಿಮ್ಮ ಶತ್ರುಗಳು, ನೀವು ಹಿಂಸೆಯನ್ನೇ ಸಹಜ ಎಂದು ಒಪ್ಪಿಕೊಳ್ಳಿ, ಒಂದು ಮುಕ್ತ ಪ್ರಪಂಚವನ್ನು ಸಾಧಿಸಲು ಹಿಂಸೆ ಅನಿವಾರ್ಯ ಮತ್ತು ಅಪೇಕ್ಷಿತ ಎನ್ನುವುದನ್ನು ಒಪ್ಪಿಕೊಳ್ಳಿ ಎಂದು ಬೋಧಿಸಲೆತ್ನಿಸುತ್ತಾರೆ.

ಈ ಮಕ್ಕಳಿಗೆ ಸಮರ್ಪಕವಾಗಿ ಹಿತವಚನ ನೀಡದೆ ಹೋದರೆ, ಉದಾತ್ತ ಮನಸಿನ ಶಿಕ್ಷಕರು ಇವರನ್ನು ಪ್ರೀತಿಸಿ ಪೋಷಿಸದೆ ಹೋದರೆ, ಅವರಲ್ಲಿ ಅನೇಕರು ಭಾವನೆಗಳ ಮತ್ತು ಭಾವೋದ್ರೇಕದ ಬಂಧಿಗಳಾಗಿ ಮಾನಸಿಕವಾಗಿ ಘಾಸಿಗೊಂಡರವಾಗಿಬಿಡುತ್ತಾರೆ. ಉಗ್ರಗಾಮಿಗಳ ಹಿಂಸೆ, ಎನ್ಕೌಂಟರ್‌ ಹತ್ಯೆಗಳು ಮತ್ತು ನಿರ್ದಿಷ್ಟ ಗುರಿ ಇಟ್ಟ ಕೊಲೆಗಳು ಸಾಂಸ್ಕೃತಿಕ ವಾತಾವರಣವನ್ನು ಕಲುಷಿತಗೊಳಿಸಲಾಗ, ಭಯ ಭೀತಿ ಎಲ್ಲೆಡೆ ವ್ಯಾಪಿಸುತ್ತದೆ, ಅನುಮಾನಗಳ ಹುತ್ತ ಸೃಷ್ಟಿಯಾಗುತ್ತದೆ, ಸಂವಹನ ಪ್ರಕ್ರಿಯೆ ಇಲ್ಲವಾಗುತ್ತದೆ. ಇಂತಹ ವಿಷಮ ಸನ್ನಿವೇಶದಲ್ಲಿ ಶಿಕ್ಷಣವನ್ನು ವಿಮೋಚನೆಗೊಳಿಸುವ ಒಂದು ಪದ್ಧತಿಯನ್ನು ಊಹಿಸಿಕೊಳ್ಳಲು ಸಾಧ್ಯವೇ ?

ರಜನಿಬಾಲಾ ಒಬ್ಬ ಸೆಲೆಬ್ರಿಟಿ ಆಗಿರಲಿಲ್ಲ. ಕಾಶ್ಮೀರದ ಬಹುತೇಕ ಎಲ್ಲ ರಾಜಕೀಯ ನಾಯಕರೂ, ಮೆಹಬೂಬಾ ಮುಫ್ತಿ ಇಂದ ಓಮರ್‌ ಅಬ್ದುಲ್ಲಾವರೆಗೆ, ಭಯೋತ್ಪಾದಕ ಕೃತ್ಯವನ್ನು ಖಂಡಿಸಿದ್ದರೂ, ಬಹುಬೇಗನೆ ಆಕೆಯನ್ನು ಮರೆತುಬಿಡುತ್ತೇವೆ. ಹೆಚ್ಚೆಂದರೆ ಭಾರತ ಸರ್ಕಾರದ ವತಿಯಿಂದ ಒಂದು ಪತ್ರಿಕಾಗೋಷ್ಟಿ ನಡೆಯಬಹುದು, ಹೊಸ ಅಂಕಿಅಂಶಗಳನ್ನು ಒದಗಿಸಬಹುದು, ಬಂಧಿಸಲ್ಪಟ್ಟ ಭಯೋತ್ಪಾದಕರು, ಕೊಲ್ಲಲ್ಪಟ್ಟ ಉಗ್ರಗಾಮಿಗಳ ಸಂಖ್ಯೆಯನ್ನು ನೀಡಬಹುದು ಮತ್ತು ಭಾರತದ ವಿರುದ್ಧ ಪಿತೂರಿ ನಡೆಸುತ್ತಿರುವ ಪಾಕಿಸ್ತಾನದ ಬಗ್ಗೆ ಮಾಹಿತಿ ಒದಗಿಸಬಹುದು.

ಅತಿರೇಕದ ರಾಷ್ಟ್ರೀಯತೆಯನ್ನೇ ಅವಲಂಬಿಸಿರುವ ಆಳುವ ಪಕ್ಷವು, ಸಂವಿಧಾನ ಅನುಚ್ಚೇದ 370ರ ರದ್ದತಿಯ ಪರಿಣಾಮವಾಗಿಯೇ ಕಾಶ್ಮೀರದಲ್ಲಿ ಶಾಂತಿ ಸುವ್ಯವಸ್ಥೆ ಸಹಜ ಸ್ಥಿತಿಗೆ ಮರಳಿದೆ ಎಂದು ಹೇಳಬಹುದು. ಏತನ್ಮಧ್ಯೆ ಕಾಶ್ಮೀರಿ ಪಂಡಿತರು ತಮ್ಮನ್ನು ಸುರಕ್ಷಿತ ವಲಯಕ್ಕೆ ರವಾನಿಸದೆ ಹೋದರೆ ತಾವು ಕಣಿವೆಯಿಂದ ಸಾಮೂಹಿಕ ವಲಸೆ ಹೋಗುವುದಾಗಿ ಬೆದರಿಕೆ ಹಾಕಬಹುದು.

ಈ ಘಟನಾವಳಿಗಳ ನಡುವೆ , ರಜನಿ ಬಾಲಾ ಅವರಂತಹ ಅಪರಿಚಿತ ಸರಳ ವ್ಯಕ್ತಿಯ ದುರಂತ ಸಾವು ನಮ್ಮನ್ನು ಏಕಾದರೂ ಬಾಧಿಸಬೇಕು ? ವಾಸ್ತವ ಎಂದರೆ ಭಾರತದ ಮುಖ್ಯವಾಹಿನಿಯಲ್ಲಿ ಹಿತವಲಯದ ನಾಗರಿಕರಿಗೆ ಕಾಶ್ಮೀರ ಒಂದು ಸುಂದರ ಪ್ರವಾಸೀ ತಾಣವಾಗಿಯೇ ಕಾಣುತ್ತದೆ. ದಾಲ್‌ ಲೇಕ್‌ನಲ್ಲಿ, ಸೋನಾ ಮಾರ್ಕ್‌ನಲ್ಲಿ ತಮ್ಮ ಮಧುರ ಕ್ಷಣಗಳನ್ನು ಆ ಕ್ಷಣದಲ್ಲೇ ಸಾಮಾಜಿಕ ಮಾಧ್ಯಮಗಳ ಮೂಲಕ ಹಂಚಿಕೊಳ್ಳುತ್ತಾ ಆನಂದಿಸುತ್ತಾರೆ.

ಈ ಹಿತವಲಯದ ನಾಗರಿಕರಿಗೆ, ದೆಹಲಿಯಲ್ಲಿ ಕುಳಿತಿರುವ ಉನ್ಮತ್ತ ರಾಷ್ಟ್ರೀಯವಾದಿಗಳು ಕಾಶ್ಮೀರ ಕಣಿವೆಯಲ್ಲಿ ಸಹಜ ಸ್ಥಿತಿ ಇರುವಂತೆ ಕ್ರಮ ಕೈಗೊಳ್ಳುವುದು ಅಪ್ಯಾಯಮಾನವಾಗಿ ಕಾಣುತ್ತದೆ. ನಮ್ಮ ಅಬ್ಬರದ ವಿದ್ಯುನ್ಮಾನ ಸುದ್ದಿವಾಹಿನಿಗಳ ನಿರೂಪಕರು , ಈ ನಂಜಿನ ಯುಗದ ಹೊಸ ಉಪನ್ಯಾಸಕರು , ಕಾಶ್ಮೀರದಲ್ಲಿ ಸಹಜ ಸ್ಥಿತಿಯನ್ನು ಕಾಪಾಡಲು ಇರುವ ಏಕೈಕ ಮಾರ್ಗ ಸೇನಾ ನಿಯಂತ್ರಣವನ್ನು ಹೆಚ್ಚಿಸುವುದು ಅಥವಾ ಇಡೀ ಪ್ರದೇಶವನ್ನು ಬೇಹುಗಾರಿಕೆಗೊಳಪಡಿಸುವುದು, ಎಂದು ವ್ಯಾಖ್ಯಾನಿಸುತ್ತಾರೆ.

ಆದರೆ ರಜನಿ ಬಾಲಾ ವಿಭಿನ್ನ ವ್ಯಕ್ತಿ. ಆಕೆ ತಮ್ಮ ಕಾರ್ಯಕ್ಷೇತ್ರದಲ್ಲಿದ್ದರು. ಸಂಬಾ ಜಿಲ್ಲೆಯ ತಮ್ಮ ಮನೆಯಿಂದ ಹೊರಬಂದು ಕುಲ್ಗಾಮ್‌ನಲ್ಲಿ ಕಳೆದ 14 ವರ್ಷಗಳಿಂದ ಜೀವನ ನಡೆಸುತ್ತಿದ್ದರು. ಮೇಲಾಗಿ ಅವರು ಒಬ್ಬ ಶಿಕ್ಷಕಿ. ಉದ್ದೇಶಿತ ಹತ್ಯೆಗಳು ತೀವ್ರವಾಗುತ್ತಿದ್ದ ವಾತಾವರಣದಲ್ಲಿ ಸಹಜವಾಗಿಯೇ ಸೃಷ್ಟಿಯಾಗಿದ್ದ ಮಾನಸಿಕ ಭೀತಿ ಆಕೆಯನ್ನು ಆವರಿಸಿದ್ದರೂ, ಯಾವುದೇ ಒಬ್ಬ ಶಿಕ್ಷಕಿಯು ಯೋಚಿಸುವಂತೆ, ಮಕ್ಕಳನ್ನು ಕುಸುಮಗಳಂತೆ ವಿಕಸಿಸುವುದನ್ನು ನೋಡಲು, ಪ್ರಕ್ಷುಬ್ಧ ಪ್ರದೇಶದ ಶಾಲೆಯೊಂದರಲ್ಲಿ ಪ್ರೀತಿಯ ಬೀಜಗಳನ್ನು ಬಿತ್ತುವ ಆಲೋಚನೆಯೊಂದಿಗೆ ಆಕೆ ಶಾಲೆಗೆ ಬಂದಿದ್ದರು. ಒಂದು ರೀತಿಯಲ್ಲಿ ಇದು ಅಸಾಧಾರಣ ಸನ್ನಿವೇಶದಲ್ಲಿ ಸಾಧಾರಣವಾದ ಸಂಗತಿಯಾಗಿತ್ತು. ಮೃತ್ಯುವಾಹಕ ಭಯೋತ್ಪಾದಕರು ಆಕೆಯನ್ನು ಹತ್ಯೆ ಮಾಡಿದ್ದರು.

~ ಮೂಲ : ಅವಿಜಿತ್‌ ಪಾಠಕ್‌ – ಇಂಡಿಯನ್‌ ಎಕ್ಸ್‌ಪ್ರೆಸ್‌ 04-06-2022, ಅನುವಾದ : ನಾ ದಿವಾಕರ

(ಲೇಖಕರು ಜೆಎನ್‌ಯು ವಿಶ್ವವಿದ್ಯಾಲಯದಲ್ಲಿ ಮೂರು ದಶಕಗಳ ಕಾಲ ಸಮಾಜಶಾಸ್ತ್ರವನ್ನು ಬೋಧಿಸಿದ್ದರು)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಬಹಿರಂಗ

ಸ್ವಾತಂತ್ರ್ಯ ಸಂಗ್ರಾಮದ ಸ್ಮಾರಕಕ್ಕೂ ಲಗ್ಗೆ ಇಟ್ಟ ಮತೀಯ ರಾಜಕಾರಣ

Published

on

  • ನಾ ದಿವಾಕರ

ಕರ್ನಾಟಕದ ಜಲಿಯನ್‌ವಾಲಾಬಾಗ್‌ ಎಂದೇ ಹೆಸರಾದ ವಿದುರಾಶ್ವತ್ಥ ವಿವಾದದ ಕೇಂದ್ರ ಬಿಂದುವಾಗಲಿದೆಯೇ..?


ರ್ತಮಾನ ಭಾರತದ ಸಾಮಾಜಿಕ-ಸಾಂಸ್ಕೃತಿಕ ವಿದ್ಯಮಾನಗಳನ್ನು ಅರ್ಥಮಾಡಿಕೊಳ್ಳಬೇಕೆಂದರೆ ಅನಿವಾರ್ಯವಾಗಿ ಸ್ವಾತಂತ್ರ್ಯ ಪೂರ್ವದ ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ಬೆಳವಣಿಗೆಗಳತ್ತ ಗಮನಹರಿಸಬೇಕಾಗುತ್ತದೆ. ಬ್ರಿಟೀಷ್‌ ವಸಾಹತು ಆಳ್ವಿಕೆಯಿಂದ ವಿಮೋಚನೆ ಪಡೆಯುವ ಮುನ್ನ ಭಾರತ ಆಂತರಿಕವಾಗಿ ಅನುಭವಿಸಿದ ತುಮುಲಗಳನ್ನು ಸಾಂಸ್ಕೃತಿಕ ನೆಲೆಯಲ್ಲಿ, ಸಾಮಾಜಿಕ ಚೌಕಟ್ಟಿನಲ್ಲಿ ಮತ್ತು ರಾಜಕೀಯ ಭೂಮಿಕೆಯಲ್ಲಿ ಅರ್ಥಮಾಡಿಕೊಳ್ಳಬೇಕಾಗುತ್ತದೆ.

ಗಾಂಧಿ ಅನುಸರಿಸಿದ ಅಹಿಂಸಾ ಮಾರ್ಗದ ಮೂಲಕವೇ ಭಾರತ ದಾಸ್ಯದಿಂದ ವಿಮೋಚನೆ ಪಡೆದಿದೆ ಎಂಬ ಸಾಮಾನ್ಯ ಗ್ರಹಿಕೆಯ ಹೊರತಾಗಿಯೂ ಸ್ವಾತಂತ್ರ್ಯ ಪೂರ್ವ ಇತಿಹಾಸದಲ್ಲಿ ಬ್ರಿಟೀಷ್‌ ವಸಾಹತುಶಾಹಿಯ ದಬ್ಬಾಳಿಕೆಗೆ ನೂರಾರು ಜೀವಗಳು ಬಲಿಯಾಗಿರುವುದನ್ನು ಅಲ್ಲಗಳೆಯಲಾಗುವುದಿಲ್ಲ. ಸ್ವಾತಂತ್ರ್ಯದ ಹೊಸ್ತಿಲಲ್ಲೂ ಸಹ ಮತದ್ವೇಷ ಮತ್ತು ಮತಾಂಧತೆಗೆ ಗುರಿಯಾದ ಭಾರತ ಲಕ್ಷಾಂತರ ಸಾವು ನೋವುಗಳನ್ನು ಕಂಡಿದೆ.

ಸಾವಿರಾರು ಜನರ ತ್ಯಾಗ, ಬಲಿದಾನ, ನಿಸ್ವಾರ್ಥ ಹೋರಾಟದ ಪ್ರತಿಫಲವನ್ನು 1947ರ ಸ್ವಾತಂತ್ರ್ಯದಲ್ಲಿ ಕಾಣಬಹುದು. ರಾಜಕೀಯ ಸ್ವಾತಂತ್ರ್ಯ ಪಡೆಯುತ್ತಿದ್ದೇವೆ ಎಂಬ ಹೆಮ್ಮೆಯೊಂದಿಗೇ ಸಾಮಾಜಿಕ ಶೋಷಣೆ ಮತ್ತು ಸಾಂಸ್ಕೃತಿಕ ದಬ್ಬಾಳಿಕೆ ಸ್ವಾತಂತ್ರ್ಯಾನಂತರವೂ ಜೀವಂತವಾಗಿರುತ್ತದೆ ಎಂಬ ಆತಂಕದೊಡನೆಯೇ ಈ ದೇಶದ ಬಹುಸಂಖ್ಯಾತ ಶೋಷಿತ ಜನತೆ ಈ ಸಂಭ್ರಮಾಚರಣೆಯಲ್ಲಿ ತೊಡಗಿದ್ದನ್ನು ಅಲ್ಲಗಳೆಯಳಾಗುವುದಿಲ್ಲ. ಬ್ರಿಟೀಷ್‌ ವಸಾಹತುಶಾಹಿಯ ವಿರುದ್ಧ ನಡೆದ ಸುದೀರ್ಘ ಸಂಘರ್ಷದಲ್ಲಿ ಹಲವು ವಿಚಾರಧಾರೆಗಳು ತಮ್ಮದೇ ಆದ ರೀತಿಯಲ್ಲಿ ಜನಜಾಗೃತಿ ಮೂಡಿಸಿವೆ. ಸ್ವಾತಂತ್ರ್ಯ ಸಂಗ್ರಾಮದ ಮುಂಚೂಣಿಯಲ್ಲಿದ್ದ ಮಹಾತ್ಮ ಗಾಂಧಿ ನೇತೃತ್ವದ ಕಾಂಗ್ರೆಸ್‌ ಸಹ 1885 ರಿಂದ 1935ರವರೆಗಿನ ಯಾತ್ರೆಯಲ್ಲಿ ಹಲವು ರೂಪಾಂತರಗಳನ್ನು ಕಂಡು, ಸವಾಲುಗಳನ್ನೂ ಎದುರಿಸಿದ್ದನ್ನು ಅಲ್ಲಗಳೆಯಲಾಗುವುದಿಲ್ಲ. ಸೌಮ್ಯ ಮಾರ್ಗ, ಮೃದು ಮಾರ್ಗ, ರಾಜೀ ಮಾರ್ಗ, ತೀವ್ರಗಾಮಿ ಮಾರ್ಗ ಮತ್ತು ಕ್ರಾಂತಿಕಾರಿ ಧೋರಣೆಗಳ ಹಲವು ವಿಚಾರಧಾರೆಗಳು ಈ ಸಂದರ್ಭದಲ್ಲಿ ಮುನ್ನೆಲೆಗೆ ಬಂದಿದ್ದನ್ನು ನಿರಾಕರಿಸಲಾಗುವುದಿಲ್ಲ.

ಈ ವಿಭಿನ್ನ ವಿಚಾರಧಾರೆ ಮತ್ತು ಹೋರಾಟದ ಮಾರ್ಗಗಳು ಭಾರತದ ಸಾಂಸ್ಕೃತಿಕ ವೈವಿಧ್ಯತೆಯಂತೆಯೇ ಭಿನ್ನ ಧೋರಣೆಗಳನ್ನು ವ್ಯಕ್ತಪಡಿಸಿವೆ. 1757ರ ಪ್ಲಾಸಿ ಕದನದಿಂದ 1947ರವರೆಗೆ, ನಂತರ 1961ರ ಗೋವಾ ವಿಮೋಚನೆಯವರೆಗಿನ ಹೋರಾಟದ ಹಾದಿಯಲ್ಲಿ ಲಕ್ಷಾಂತರ ಭಾರತೀಯರು ತಮ್ಮ ಸಾಂಸ್ಕೃತಿಕ ಅಥವಾ ಧಾರ್ಮಿಕ ಗಡಿರೇಖೆಗಳನ್ನು ಮರೆತು, ಅಖಂಡ ಭಾರತಕ್ಕಾಗಿ ಜೀವ ಸವೆಸಿದ್ದಾರೆ, ತೆತ್ತಿದ್ದಾರೆ. ಹಿಂದೂ, ಮುಸ್ಲಿಂ, ಕ್ರೈಸ್ತ, ಸಿಖ್‌, ಪಾರ್ಸಿ ಹೀಗೆ ವಿಭಿನ್ನ ಮತಧರ್ಮಗಳ ಅನುಯಾಯಿಗಳು, ಆದಿವಾಸಿಗಳು, ಬುಡಕಟ್ಟು ಸಮುದಾಯಗಳು, ಶೋಷಿತ ವರ್ಗಗಳು ಬ್ರಿಟೀಷ್‌ ವಸಾಹತುಶಾಹಿಯ ವಿರುದ್ಧ ವೀರೋಚಿತ ಹೋರಾಟಗಳನ್ನು ನಡೆಸಿವೆ. ಈ ಎರಡು ಶತಮಾನಗಳ ಇತಿಹಾಸದಲ್ಲೇ ಆಂತರಿಕವಾಗಿ ಜಾತಿ ಶೋಷಣೆಯ ವಿರುದ್ಧ, ಅಸ್ಪೃಶ್ಯತೆಯ ವಿರುದ್ಧ, ಸಾಮಾಜಿಕ ಅಸಮಾನತೆಗಳ ವಿರುದ್ಧ, ಊಳಿಗಮಾನ್ಯ ದಬ್ಬಾಳಿಕೆಯ ವಿರುದ್ಧ ಶೋಷಿತ ವರ್ಗಗಳ, ರೈತಾಪಿ ವರ್ಗಗಳ ವೀರೋಚಿತ ಹೋರಾಟಗಳನ್ನೂ ಕಾಣಬಹುದು. ಬಿರ್ಸಾ ಮುಂಡಾ ಹೋರಾಟದಿಂದ ತೆಲಂಗಾಣ ರೈತರ ಹೋರಾಟದವರೆಗೆ ಈ ಪರಂಪರೆ ವಿಸ್ತರಿಸುತ್ತದೆ.

ಈ ಹೋರಾಟಗಳ ನಡುವೆಯೇ ಬ್ರಿಟೀಷರೊಡನೆ ವೀರೋಚಿತವಾಗಿ ಹೋರಾಡಿ ಪ್ರಾಣತೆತ್ತ ಅನೇಕ ಪ್ರಾಂತೀಯ ಸಂಸ್ಥಾನಗಳ ಇತಿಹಾಸವನ್ನೂ ದಾಖಲಿಸಲಾಗಿದೆ. ಟಿಪ್ಪುಸುಲ್ತಾನ್‌, ಕಿತ್ತೂರು ಚೆನ್ನಮ್ಮ, ಝಾನ್ಸಿ ರಾಣಿ, ಸಂಗೊಳ್ಳಿರಾಯಣ್ಣ ಮುಂತಾದವರು ಹುತಾತ್ಮರಾಗಿದ್ದಾರೆ. ಭಾರತ ಅಹಿಂಸಾ ಮಾರ್ಗದ ಮೂಲಕ ರಕ್ತಪಾತ ಇಲ್ಲದೆ ಸ್ವಾತಂತ್ರ್ಯ ಪಡೆದಿದೆ ಎನ್ನುವುದು ಒಟ್ಟಾರೆ ಸ್ವಾತಂತ್ರ್ಯ ಸಂಗ್ರಾಮದ ದೃಷ್ಟಿಯಿಂದ ಸಮರ್ಥನೀಯವೆನಿಸಿದರೂ, ಬ್ರಿಟೀಷರ ಕೋವಿಗಳು ಸಾವಿರಾರು ಭಾರತೀಯರ ರಕ್ತ ಹರಿಸಿಯೇ ತನ್ನ ಆಳ್ವಿಕೆಯನ್ನು ಕೊನೆಗೊಳಿಸಿರುವುದನ್ನು ಅಲ್ಲಗಳೆಯಲಾಗುವುದಿಲ್ಲ. 20ನೆಯ ಶತಮಾನದ ನಂತರದ ರಕ್ತಸಿಕ್ತ ಇತಿಹಾಸದಲ್ಲಿ ಎರಡು ಪ್ರಮುಖ ಘಟನೆಗಳನ್ನು ನೆನೆಯುವುದಾದರೆ ಮೊದಲನೆಯದಾಗಿ ಜಲಿಯನ್‌ವಾಲಾ ಬಾಗ್‌ ನೆನಪಾದರೆ, ಮತ್ತೊಂದು ಕರ್ನಾಟಕದ ವಿದುರಾಶ್ವತ್ಥ ನೆನಪಾಗುತ್ತದೆ. ಸಹಜವಾಗಿಯೇ ವಿದುರಾಶ್ವತ್ಥವನ್ನು ಕರ್ನಾಟಕದ ಜಲಿಯನ್‌ವಾಲಾಬಾಗ್‌ ಎಂದೇ ಕರೆಯಲಾಗುತ್ತದೆ.

ವಿದುರಾಶ್ವತ್ಥದ ಐತಿಹ್ಯ ಮತ್ತು ಇತಿಹಾಸ

ಅವಿಭಜಿತ ಕೋಲಾರ ಜಿಲ್ಲೆಯ, ಈಗಿನ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ಸಮೀಪ ಪಿನಾಕಿನಿ ನದಿಯ ತೀರದಲ್ಲಿರುವ ಒಂದು ಪುಟ್ಟ ಗ್ರಾಮ ವಿದುರಾಶ್ವತ್ಥ. ಪೌರಾಣಿಕ ಐತಿಹ್ಯಗಳಿಂದ ಇತಿಹಾಸ ಪ್ರಸಿದ್ಧವಾಗಿರುವ ಈ ಗ್ರಾಮ ಆಸ್ತಿಕರಿಗೆ ಒಂದು ಪುಣ್ಯಕ್ಷೇತ್ರ ಮತ್ತು ಯಾತ್ರಾಸ್ಥಳವೂ ಹೌದು. ಇಲ್ಲಿನ ಅಶ್ವತ್ಥಮರದ ಪಾದತಳದಲ್ಲಿ ನಾಗರಪ್ರತಿಷ್ಠೆ ಮಾಡುವ ಮೂಲಕ ತಮ್ಮ ಪಾಪಗಳನ್ನು ನಿವೇದಿಸಿಕೊಂಡು ಬದುಕಿನ ಸಂಕಷ್ಟಗಳಿಂದ ಪರಿಹಾರ ಕೋರುವ ಸಾವಿರಾರು ಭಕ್ತಾದಿಗಳು ಈ ಕ್ಷೇತ್ರಕ್ಕೆ ವರ್ಷವಿಡೀ ಬರುತ್ತಲೇ ಇರುತ್ತಾರೆ. ಮಹಾಭಾರತ ಕಾಲದ ಐತಿಹ್ಯ ಇರುವ ಈ ಕ್ಷೇತ್ರದಲ್ಲಿ ನಾಗಪ್ರತಿಷ್ಠೆ ಮಾಡಿದರೆ ತಮ್ಮ ಕಷ್ಟಗಳು ಪರಿಹಾರವಾಗುತ್ತವೆ ಎಂಬ ಬಲವಾದ ನಂಬಿಕೆಯೇ ಈ ಕ್ಷೇತ್ರವನ್ನು ಕರ್ನಾಟಕದ ಯಾತ್ರಾಸ್ಥಳವನ್ನಾಗಿ ಮಾಡಿದೆ. ಪ್ರತಿವರ್ಷ ಏಪ್ರಿಲ್‌ ಮಾಹೆಯಲ್ಲಿ ನಡೆಯುವ ಜಾತ್ರೆಯಲ್ಲಿ ಲಕ್ಷಾಂತರ ಜನರು ಸೇರುತ್ತಾರೆ. ಪಿನಾಕಿನಿ ನದಿಯ ತೀರದಲ್ಲಿರುವ ಈ ಗ್ರಾಮ ಆಸ್ತಿಕ ಹಿಂದೂಗಳಿಗೆ ಒಂದು ಪವಿತ್ರ ಕ್ಷೇತ್ರವೂ ಆಗಿದೆ. ಹಾಗೆಯೇ ಭಾರತದ ಬಹುಸಂಸ್ಕೃತಿಯ ಒಂದು ಪ್ರತೀಕವಾಗಿಯೂ ನಡೆದುಬಂದಿರುವ ವಿದುರಾಶ್ವತ್ಥಕ್ಕೆ ಅನ್ಯ ಧರ್ಮದ ಜನರೂ ಭೇಟಿ ನೀಡುವುದನ್ನು ಕಾಣಬಹುದು.

ಮತಶ್ರದ್ಧೆ, ಜನಸಾಮಾನ್ಯರ ನಂಬಿಕೆ ಮತ್ತು ಪೌರಾಣಿಕ ಐತಿಹ್ಯಗಳ ಹೊರತಾಗಿಯೂ ವಿದುರಾಶ್ವತ್ಥ ಚಾರಿತ್ರಿಕವಾಗಿ ಭಾರತದ ಭೂಪಟದಲ್ಲಿ ಒಂದು ಶಾಶ್ವತ ಸ್ಥಾನ ಗಳಿಸಿರುವುದೂ ಹೌದು. ಭಕ್ತಿ, ನಂಬಿಕೆ, ಶ್ರದ್ಧೆ ಮತ್ತು ಧಾರ್ಮಿಕ ಆಚರಣೆಗಳು ನಿರಂತರವಾಗಿ ಹರಿಯುತ್ತಿದ್ದ ಪಿನಾಕಿನಿ ನದಿ ತೀರದ ಈ ಪುಟ್ಟ ಗ್ರಾಮದಲ್ಲಿ ಬ್ರಿಟೀಷ್‌ ವಸಾಹತುಶಾಹಿಯು ರಕ್ತದ ಹೊಳೆ ಹರಿಸಿದ ರಕ್ತಸಿಕ್ತ ಚರಿತ್ರೆ ಇಲ್ಲಿ ದಾಖಲಾಗಿದೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕರ್ನಾಟಕದ ಈಸೂರು, ಶಿವಪುರ ದಾಖಲಾಗಿರುವಂತೆಯೇ ವಿದುರಾಶ್ವತ್ಥವೂ ಸಹ ಧ್ವಜ ಸತ್ಯಾಗ್ರಹ ಕೇಂದ್ರವಾಗಿ, ಬ್ರಿಟೀಷರ ಕ್ರೌರ್ಯಕ್ಕೆ ಬಲಿಯಾದ ಹುತಾತ್ಮರ ಕತೆಯನ್ನು ಸಾರುತ್ತದೆ. 1938ರ ಏಪ್ರಿಲ್‌ 25ರಂದು ಇದೇ ಸ್ಥಳದಲ್ಲೇ ಬ್ರಿಟೀಷರ ಗುಂಡೇಟಿಗೆ 32 ಸ್ವಾತಂತ್ರ್ಯ ಸಂಗ್ರಾಮಿಗಳು ಹುತಾತ್ಮರಾಗಿದ್ದರು. ಈ ಹುತಾತ್ಮರನ್ನು ಸಾರ್ವಕಾಲಿಕವಾಗಿ ಸ್ಮರಿಸಲೆಂದೇ ಇಲ್ಲೊಂದು ಸ್ಮಾರಕವನ್ನೂ ನಿರ್ಮಿಸಲಾಗಿದ್ದು, ಸ್ವಾತಂತ್ರ್ಯ ಸಂಗ್ರಾಮದ 200 ವರ್ಷಗಳ ಇತಿಹಾಸವನ್ನು ದಾಖಲಿಸುವ ಒಂದು ಚಿತ್ರ ಗ್ಯಾಲರಿಯನ್ನೂ ನಿರ್ಮಿಸಲಾಗಿದೆ.

1938ರಲ್ಲಿ ಕರ್ನಾಟಕದ ಮಂಡ್ಯ ಜಿಲ್ಲೆಯ ಶಿವಪುರದಲ್ಲಿ ನಡೆದ ಐತಿಹಾಸಿಕ ಕಾಂಗ್ರೆಸ್‌ ಅಧಿವೇಶನವು ಕರ್ನಾಟಕದ ಸ್ವಾತಂತ್ರ್ಯ ಚಳುವಳಿಗೆ ಚಾಲನೆ ನೀಡಿದ ಒಂದು ಘಟನೆ. ಧ್ವಜಾರೋಹಣೆಯ ಮೂಲಕ ಭಾರತದ ಸಾರ್ವಭೌಮತ್ವವನ್ನು ಸಾರುವ ನಿಟ್ಟಿನಲ್ಲಿ ಸಂಸ್ಥಾನದ ವಿವಿಧೆಡೆಗಳಲ್ಲಿ ಧ್ವಜ ಸತ್ಯಾಗ್ರಹಗಳನ್ನೂ ಹಮ್ಮಿಕೊಳ್ಳಲಾಗಿತ್ತು. ಶಿವಪುರದಲ್ಲಿ ನಡೆಯಬೇಕಿದ್ದ ಮೂರು ದಿನದ ಅಧಿವೇಶನಕ್ಕೆ ಮೈಸೂರು ಸರ್ಕಾರ ಅಡ್ಡಿಪಡಿಸಿದ ಕಾರಣ ಈ ಸಂದರ್ಭದಲ್ಲಿ ಶಿವಪುರದಲ್ಲಿ ನಿಷೇಧಾಜ್ಞೆ ಹೇರಲಾಗಿತ್ತು. ನಿಷೇಧಾಜ್ಞೆಯನ್ನು ಉಲ್ಲಂಘಿಸುವ ಸತ್ಯಾಗ್ರಹಿಗಳ ಮೇಲೆ ಗುಂಡಿನ ದಾಳಿ ನಡೆಸಲು ಸರ್ಕಾರ ಜಿಲ್ಲಾಧಿಕಾರಿಗಳಿಗೆ ಆಜ್ಞಾಪಿಸಿದ್ದರೂ, ಶಾಂತಿಯುತವಾಗಿ ನಡೆಯುತ್ತಿರುವ ಸಭೆಯ ಮೇಲೆ ಗುಂಡು ಹಾರಿಸಲು ನಿರಾಕರಿಸಿದ ಜಿಲ್ಲಾಧಿಕಾರಿ ಇನಾಯತ್‌ ಉಲ್ಲಾ ಮೇಕ್ರಿ ವರ್ಗಾವಣೆಯ ಶಿಕ್ಷೆ ಎದುರಿಸಬೇಕಾಯಿತು. ಮೂರು ದಿನವೂ ಸಭೆ ನಡೆದು ನಂತರ ಹಲವಾರು ನಾಯಕರು ಬಂಧನಕ್ಕೊಳಗಾಗಿದ್ದರು.

ಇದೇ ಸ್ಫೂರ್ತಿಯೊಂದಿಗೆ ವಿದುರಾಶ್ವತ್ಥದಲ್ಲೂ ಧ್ವಜ ಸತ್ಯಾಗ್ರಹವನ್ನು ನಡೆಸಲು ತೀರ್ಮಾನಿಸಲಾಗಿತ್ತು. ಅದರಂತೆ 1938ರ ಏಪ್ರಿಲ್‌ 18ರಂದು ದೇಶಭಕ್ತರ ದಿನಾಚರಣೆಯನ್ನು ಆಚರಿಸಲು ಸ್ಥಳೀಯ ಕಾಂಗ್ರೆಸ್‌ ನಾಯಕರು ನಿರ್ಧರಿಸಿದ್ದರು. ಏಪ್ರಿಲ್‌ 14 ರಿಂದ 29ರವರೆಗೆ ಇಲ್ಲಿ ನಡೆಯುವ ವಾರ್ಷಿಕ ಜಾತ್ರಾ ಮಹೋತ್ಸವದ ಸಂದರ್ಭದಲ್ಲೇ ಈ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳುವುದು ಸೂಕ್ತ ಎಂದು ನಿರ್ಧರಿಸಲಾಯಿತು. ಏಕೆಂದರೆ ಈ ಜಾತ್ರೆಯಲ್ಲಿ ದನದ ಜಾತ್ರೆಯೂ ನಡೆಯುವುದರಿಂದ ಲಕ್ಷಾಂತರ ಜನರು ಸೇರುತ್ತಿದ್ದರು. ಏಪ್ರಿಲ್‌ 18ರಂದು ಈ ಕಾರ್ಯಕ್ರಮಕ್ಕೆ ಚಾಲನೆ ನೀಡುವ ವೇಳೆಗೇ ಜಿಲ್ಲಾಡಳಿತವು ಇಡೀ ಪ್ರದೇಶದಲ್ಲಿ 15 ದಿನಗಳ ಕಾಲ ಸೆಕ್ಷನ್‌ 144ರ ಅಡಿ ನಿಷೇಧಾಜ್ಞೆಯನ್ನು ಹೇರಿತ್ತು. ಆದರೆ ಇದಾವುದನ್ನೂ ಲೆಕ್ಕಿಸದ ಸ್ಥಳೀಯ ಕಾಂಗ್ರೆಸ್‌ ನಾಯಕರು ಧ್ವಜಸತ್ಯಾಗ್ರಹದ ಅಧ್ಯಕ್ಷರಾದ ಎನ್‌ ಸಿ ನಾಗಯ್ಯರೆಡ್ಡಿ ನೇತೃತ್ವದಲ್ಲಿ ಶಾಂತಿಯುತ ಸಭೆ ನಡೆಸಿದ್ದರು. ಏಪ್ರಿಲ್‌ 22ರಂದು ನಾಗಯ್ಯರೆಡ್ಡಿ ಮುಂದಾಳತ್ವದಲ್ಲಿ ಸತ್ಯಾಗ್ರಹಿಗಳು ಗೌರಿಬಿದನೂರಿನಿಂದ ವಿದುರಾಶ್ವತ್ಥಕ್ಕೆ ಆಗಮಿಸಿ ಅಲ್ಲಿ ಕರಪತ್ರಗಳನ್ನು ಹಂಚುವುದರ ಮೂಲಕ ಸ್ವಾತಂತ್ರ್ಯ ಸಂಗ್ರಾಮದ ದಿಟ್ಟ ಹೋರಾಟಕ್ಕೆ ಚಾಲನೆ ನೀಡಿದ್ದರು. ಈ ಘಟನೆಯಲ್ಲಿ ನಾಗಯ್ಯರೆಡ್ಡಿ ಅವರೊಂದಿಗೆ ಶ್ರೀಪಾಲಯ್ಯ, ನಾರಾಯಣಪ್ಪ, ಹೆಚ್‌ ಎಲ್‌ ವೆಂಕಟ್ರಾಮರಾವ್‌ ಮುಂತಾದ ಹಲವು ನಾಯಕರನ್ನು ಬಂಧಿಸಲಾಯಿತು. ಕ್ಷಮೆ ಯಾಚಿಸಲು ನಿರಾಕರಿಸಿದ ಈ ಹೋರಾಟಗಾರರಿಗೆ ಬಿಡುಗಡೆಯೂ ದೊರೆಯಲಿಲ್ಲ.

ಏಪ್ರಿಲ್‌ 23ರಂದು ಗೌರಿಬಿದನೂರಿನಿಂದ ರಾಮಯ್ಯ ಶೆಟ್ಟಿ ಮತ್ತು ಜ್ವಾಲನಯ್ಯವರ ಮುಂದಾಳತ್ವದಲ್ಲಿ ಮುನ್ನೂರಕ್ಕೂ ಹೆಚ್ಚು ಜನರು ವಿದುರಾಶ್ವತ್ಥಕ್ಕೆ ಆಗಮಿಸಿ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು. ಈ ಇಬ್ಬರೂ ನಾಯಕರನ್ನು ಬಂಧಿಸಲಾಯಿತು. ಈ ಬಂಧನಗಳ ಸುದ್ದಿ ವ್ಯಾಪಿಸುತ್ತಿದ್ದಂತೆಯೇ ಸುತ್ತಮುತ್ತಲಿನ ಗ್ರಾಮಗಳಲ್ಲಿ ದೇಶಭಕ್ತಿಯ ಅಲೆ ಪ್ರವಹಿಸಲಾರಂಭಿಸಿತ್ತು. ಕೋಲಾರ ಜಿಲ್ಲೆಯ ಹಲವು ಗ್ರಾಮಗಳಿಂದ ಜನರು ತಂಡೋಪತಂಡವಾಗಿ ಧ್ವಜ ಸತ್ಯಾಗ್ರಹ ನಡೆಯಲಿದ್ದ ವಿದುರಾಶ್ವತ್ಥದ ಕಡೆ ಹೆಜ್ಜೆ ಹಾಕತೊಡಗಿದರು. ನೆರೆಯ ಆಂಧ್ರ ಪ್ರದೇಶದ ಹಿಂದೂಪುರದಿಂದ 500ಕ್ಕೂ ಹೆಚ್ಚು ಕಾರ್ಯಕರ್ತರು ಕಲ್ಲೂರು ಸುಬ್ಬರಾವ್‌ ಮುಂದಾಳತ್ವದಲ್ಲಿ ಇಲ್ಲಿಗೆ ಆಗಮಿಸಿದರು. ಇಲ್ಲಿ ನೆರೆದ ಸಾವಿರಾರು ಕಾರ್ಯಕರ್ತರು ತಾವು ನಿಷೇಧಾಜ್ಞೆಯನ್ನು ಉಲ್ಲಂಘಿಸಿ ಧ್ವಜಸತ್ಯಾಗ್ರಹ ನಡೆಸುವುದಾಗಿ ಪಣತೊಟ್ಟರು. ಏಪ್ರಿಲ್‌ 25ರಂದು ಗೌರಿಬಿದನೂರು ಮತ್ತು ಸುತ್ತಮುತ್ತಲಿನ ಹಲವಾರು ಗ್ರಾಮಗಳ ಜನರು ಸಾವಿರ ಸಾವಿರ ಸಂಖ್ಯೆಯಲ್ಲಿ ವಿದುರಾಶ್ವತ್ಥದೆಡೆಗೆ ಹೆಜ್ಜೆ ಹಾಕಲಾರಂಭಿಸಿದರು. ಪ್ರತ್ಯಕ್ಷದರ್ಶಿಗಳ ಪ್ರಕಾರ ಅಂದು ಧ್ವಜಸತ್ಯಾಗ್ರಹದಲ್ಲಿ ಭಾಗವಹಿಸಲು 25 ಸಾವಿರಕ್ಕೂ ಹೆಚ್ಚು ಜನ ಸೇರಿದ್ದರು ಎನ್ನಲಾಗುತ್ತದೆ.

ಈ ಸಂದರ್ಭದಲ್ಲಿ ಬಿಸಿಲಿನ ಝಳದಿಂದ ತಪ್ಪಿಸಿಕೊಳ್ಳಲು ವಿಶ್ರಮಿಸುತಿದ್ದ, ಅಲ್ಲಿ ನೆರೆದಿದ್ದ ಜನರ ಮೇಲೆ ಮ್ಯಾಜಿಸ್ಟ್ರೇಟರ ಆದೇಶದ ಮೇರೆಗೆ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದರಿಂದ ಚದುರಲಾರಂಭಿಸಿದ ಜನರು ಕಲ್ಲು ತೂರಾಟದಲ್ಲಿ ತೊಡಗಿದ್ದರು. ಈ ಗಲಭೆಯ ನಡುವೆಯೇ ಅಲ್ಲಿ ನೆರೆದಿದ್ದ 80ಕ್ಕೂ ಹೆಚ್ಚು ಪೊಲೀಸ್‌ ಸಿಬ್ಬಂದಿಯ ರೈಫಲ್‌ ಪಡೆಗೆ ಗುಂಡುಹಾರಿಸಲು ಆಜ್ಞಾಪಿಸಲಾಯಿತು. ಮೂರು ಬಾರಿ ನಡೆದ ಈ ಗುಂಡಿನ ದಾಳಿಯಲ್ಲಿ ಪೊಲೀಸರು 96 ಸುತ್ತು ಗುಂಡುಗಳನ್ನು ಹಾರಿಸಿದ್ದರು. ಈ ಗುಂಡಿನ ದಾಳಿಗೆ ಸ್ಥಳದಲ್ಲೇ 32 ಜನರು ಹುತಾತ್ಮರಾದರು. 48 ಮಂದಿ ಗಾಯಗೊಂಡಿದ್ದರು. ಸರ್ಕಾರದ ವರದಿಯ ಪ್ರಕಾರ 15 ಜನರು ಮೃತರಾಗಿರುವುದಾಗಿ ದಾಖಲಾಗಿದ್ದರೂ, ಕೆಲವು ಪತ್ರಿಕಾ ವರದಿಗಳು ಮತ್ತು ಬಿಬಿಸಿ ವರದಿಯ ಪ್ರಕಾರ ಕನಿಷ್ಟ 32 ಜನರು ಹುತಾತ್ಮರಾಗಿದ್ದರು. ಈ ಮಾರಣಹೋಮದಿಂದ ಪುಣ್ಯಕ್ಷೇತ್ರವಾಗಿದ್ದ ವಿದುರಾಶ್ವತ್ಥ ಭೀಕರ ಮಸಣವಾಯಿತು. ಪಿನಾಕಿನಿ ನದಿಯ ನೀರಿನೊಂದಿಗೇ ಸ್ವಾತಂತ್ರ್ಯ ಹೋರಾಟಗಾರರ ರಕ್ತದ ಹೊಳೆಯೂ ಹರಿದಿತ್ತು. ಪಿನಾಕಿನಿ ನದಿಯು ಸ್ವಾತಂತ್ರ್ಯ ಸಂಗ್ರಾಮಿಗಳ ರಕ್ತದ ಮಡುವಿಗೆ ಸಾಕ್ಷಿಯಾಯಿತು. ಈ ಘಟನೆಯಲ್ಲಿ ಭಾಗಿಯಾಗಿದ್ದ ಪ್ರತ್ಯಕ್ಷದರ್ಶಿಗಳಾಗಿ ಮೂವರು ಮಹನೀಯರು, ಇತ್ತೀಚಿನವರೆಗೂ ಜೀವಂತವಾಗಿದ್ದರು.

ಸ್ಮಾರಕ ಮತ್ತು ಚಾರಿತ್ರಿಕ ಸ್ಮರಣೆ

ಕರ್ನಾಟಕದ ಜಲಿಯನ್‌ವಾಲಾ ಬಾಗ್‌ ಎಂದೇ ಹೆಸರಾದ ಈ ಚಾರಿತ್ರಿಕ ಘಟನೆಯು 1973ರಲ್ಲಿ ಸ್ಥಾಪಿಸಿದ ಸ್ಮಾರಕ ಶಿಲೆ ಮತ್ತು 2004ರಲ್ಲಿ ಸ್ಥಾಪಿತವಾದ ವೀರಸೌಧದ ಮೂಲಕ ಇಂದಿಗೂ ಅಂದಿನ ಕರಾಳ ಚರಿತ್ರೆಯನ್ನು ನೆನಪಿಸುತ್ತಿವೆ. ಈ ಚರಿತ್ರಾರ್ಹ ಘಟನೆಯನ್ನು ಸಾರ್ವಕಾಲಿಕವಾಗಿ ಸ್ಮರಿಸಲು ನೆರವಾಗುವಂತಹ ಒಂದು ಚಿತ್ರ ಗ್ಯಾಲರಿಯನ್ನು ರೂಪಿಸಲಾಗಿದೆ. ಚರಕದ ಆಕಾರದಲ್ಲಿರುವ ಒಂದು ಸುಂದರ ವಿನ್ಯಾಸದ ಕಟ್ಟಡದಲ್ಲಿ 10 ಸಾವಿರಕ್ಕೂ ಹೆಚ್ಚು ಪುಸ್ತಕಗಳನ್ನೊಳಗೊಂಡ ಗ್ರಂಥಾಲಯವನ್ನೂ ನಿರ್ಮಿಸಲಾಗಿದೆ. ಸ್ಥಳೀಯ ಶಾಸಕರಾದ ಶಿವಶಂಕರ ರೆಡ್ಡಿ ಮತ್ತು ಗೌರಿಬಿದನೂರಿನ ನಿವೃತ್ತ ಪ್ರಾಧ್ಯಾಪಕ, ಲೇಖಕ ಬಿ ಗಂಗಾಧರಮೂರ್ತಿ ಮತ್ತು ಕೆಲವು ಸಮಾನಾಸಕ್ತ ಗೆಳೆಯರ ಪರಿಶ್ರಮದೊಂದಿಗೆ ಈ ಗ್ಯಾಲರಿ ಮತ್ತು ಗ್ರಂಥಾಲಯವನ್ನು ನಿರ್ಮಿಸಲಾಗಿದೆ. 1757ರ ಪ್ಲಾಸಿ ಕದನದಿಂದ 1961ರ ಗೋವಾ ವಿಮೋಚನೆಯವರೆಗೆ ಭಾರತದ ವಸಾಹತುವಿರೋಧಿ ಹೋರಾಟದ ವಿವಿಧ ಮಗ್ಗುಲುಗಳನ್ನು ಬಿಂಬಿಸುವ 104 ವರ್ಣಚಿತ್ರ ಫಲಕಗಳನ್ನು ಈ ಗ್ಯಾಲರಿಯಲ್ಲಿ ಕಾಲಾನುಕ್ರಮವಾಗಿ ಜೋಡಿಸಲಾಗಿದೆ.

ಈ ಅವಧಿಯಲ್ಲಿ ನಡೆದ ಹೋರಾಟಗಳು, ದಂಗೆಗಳು, ಆಂದೋಲನಗಳು, ಯುದ್ಧಗಳು ಎಲ್ಲವನ್ನೂ ಈ ವರ್ಣಚಿತ್ರಗಳಲ್ಲಿ ಸಂಕ್ಷಿಪ್ತ ವಿವರಗಳೊಂದಿಗೆ ಬಿಂಬಿಸಲಾಗಿದೆ. ಕಿತ್ತೂರು ರಾಣಿ, ಝಾನ್ಸಿ ರಾಣಿ, 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ, ಟಿಪ್ಪು, ಸಂಗೊಳ್ಳಿ ರಾಯಣ್ಣ, ಬಿರ್ಸಾ ಮುಂಡಾ ಹೀಗೆ ಹಲವು ಮಜಲುಗಳ ಬ್ರಿಟೀಷ್‌ ವಿರೋಧಿ ಹೋರಾಟಗಾರರನ್ನು ಬಿಂಬಿಸಲಾಗಿದ್ದು ದಾಖಲಿತ ಅಧಿಕೃತ ಇತಿಹಾಸದಲ್ಲಿರುವ ಚಾರಿತ್ರಿಕ ಸಂಗತಿಗಳನ್ನು ಇಲ್ಲಿ ಬಿತ್ತರಿಸಲಾಗಿದೆ. ಸಹಜವಾಗಿಯೇ 20ನೆಯ ಶತಮಾನದಲ್ಲಿ ರೂಪುಗೊಂಡ ಸ್ವಾತಂತ್ರ್ಯ ಚಳುವಳಿಯಲ್ಲಿ ಕಾಣಬಹುದಾದ ವೈವಿಧ್ಯಮಯ ವಿಚಾರಧಾರೆಗಳು, ಹೋರಾಟದ ಧೋರಣೆಗಳು, ಮಾರ್ಗಗಳು ಇಲ್ಲಿ ಬಿಂಬಿತವಾಗಿವೆ. ಸೈದ್ಧಾಂತಿಕ, ತಾತ್ವಿಕ ಭಿನ್ನಾಭಿಪ್ರಾಯಗಳ ಹೊರತಾಗಿಯೂ ಐಕಮತ್ಯದೊಂದಿಗೆ, ಐಕ್ಯತೆಯಿಂದ ಬ್ರಿಟೀಷ್‌ ವಸಾಹತುಶಾಹಿಯ ಸಂಕೋಲೆಗಳನ್ನು ಕಿತ್ತು ಹಾಕಿದ ರಾಷ್ಟ್ರನಾಯಕರ ಸ್ಮರಣೆ ಇಲ್ಲಿ ವಸ್ತುನಿಷ್ಠತೆಯಿಂದ ದಾಖಲಾಗಿದೆ. ಆ ಸಂದರ್ಭದಲ್ಲೇ ಕಂಡುಬಂದಿದ್ದ ಎಡಪಂಥೀಯ, ಬಲಪಂಥೀಯ, ತೀವ್ರಗಾಮಿ, ರಾಷ್ಟ್ರೀಯವಾದಿ ಹೋರಾಟಗಳ ವಿಭಿನ್ನ ಮಜಲುಗಳನ್ನೂ ಪರಿಚಯಿಸಲಾಗಿದೆ.

1905ರಲ್ಲಿ ಕ್ರಾಂತಿಕಾರಿಗಳ ಜೊತೆಗಿದ್ದ ಸಾವರ್ಕರ್‌ ಅವರ ಚಿತ್ರ ಇರುವಂತೆಯೇ, ಗಾಂಧಿ ಹತ್ಯೆಯ ನಂತರ ನಡೆದ ಬೆಳವಣಿಗೆಗಳಲ್ಲೂ ಅವರ ಚಿತ್ರ ಇಲ್ಲಿ ಕಾಣುತ್ತದೆ. ಹಾಗೆಯೇ ಭಗತ್‌ ಸಿಂಗ್‌ ಮುಂತಾದವರ ಎಡಪಂಥೀಯ ಕ್ರಾಂತಿಕಾರಿ ಹೆಜ್ಜೆಗಳ ನಡುವೆಯೇ ಉಗಮಿಸಿದ್ದ ಹಿಂದೂ ಮಹಾಸಭಾ ಮುಂತಾದ ಬಲಪಂಥೀಯ ಸಂಘಟನೆಗಳ ಪ್ರಸ್ತಾಪವನ್ನೂ ಕಾಣಬಹುದು. ಭಾರತದ ಶೋಷಿತ ಜನಸಮುದಾಯಗಳಿಗೆ ಬೆಳಕಿನ ಕಿಂಡಿ ತೋರಿ ಒಂದು ಸಮಸಮಾಜ ನಿರ್ಮಾಣಕ್ಕೆ ಪೂರಕವಾದ ಸಂವಿಧಾನ ರಚಿಸಿದ ಅಂಬೇಡ್ಕರ್‌ ಅವರೂ ಇಲ್ಲಿ ಜ್ವಲಿಸುತ್ತಾರೆ. ಗಾಂಧಿ ಮಾರ್ಗವನ್ನು ಒಪ್ಪುವ ಮತ್ತು ಒಪ್ಪದಿರುವ ಎಲ್ಲ ವಿಚಾರಧಾರೆಗಳನ್ನು ಚಾರಿತ್ರಿಕ ಮಾಹಿತಿಯೊಂದಿಗೆ ಸಚಿತ್ರವಾಗಿ ಈ ಗ್ಯಾಲರಿಯಲ್ಲಿ ಬಿಂಬಿಸಲಾಗಿದೆ. 200 ವರ್ಷಗಳ ಸುದೀರ್ಘ ಇತಿಹಾಸವನ್ನು ಮತ್ತು ಈ ಚರಿತ್ರೆಯ ಹಾದಿಯಲ್ಲಿ ಆಗಿಹೋದ ನೂರಾರು ಹುತಾತ್ಮರನ್ನು ಮತ್ತೆ ಮತ್ತೆ ನೆನಪಿಸುವ ರೀತಿಯಲ್ಲಿ ಈ ಗ್ಯಾಲರಿಯನ್ನು ರೂಪಿಸಲಾಗಿದೆ. ದೇಶದ ಹಲವಾರು ರಾಜಕೀಯ ನಾಯಕರು, ಪಕ್ಷಾತೀತವಾಗಿ ಇಲ್ಲಿಗೆ ಭೇಟಿ ನೀಡಿ, ಈ ಗ್ಯಾಲರಿಯನ್ನು ಪ್ರಶಂಸಿಸಿ ದಾಖಲಿಸಿದ್ದಾರೆ.

ಆದರೆ ಇತ್ತೀಚೆಗೆ ಕೆಲವು ಬಲಪಂಥೀಯ ಗುಂಪುಗಳು ಗ್ಯಾಲರಿಯಲ್ಲಿರುವ ಕೆಲವು ವರ್ಣಚಿತ್ರಗಳಿಗೆ ಆಕ್ಷೇಪ ವ್ಯಕ್ತಪಡಿಸುತ್ತಿರುವುದಾಗಿ ತಿಳಿದುಬಂದಿದೆ. ಮಹಾತ್ಮ ಗಾಂಧಿಗೆ ಹೆಚ್ಚು ಪ್ರಾಶಸ್ತ್ಯ ನೀಡಿರುವುದು, ಸಾವರ್ಕರ್‌ಗೆ ಅಪಮಾನವಾಗುವಂತೆ ಚಿತ್ರಿಸಿರುವುದು, ಪ್ರತಿಯೊಂದು ಫಲಕದಲ್ಲೂ ಮುಸ್ಲಿಂ ಸಂಗ್ರಾಮಿಗಳನ್ನು ಬಿಂಬಿಸಿರುವುದು, ಟಿಪ್ಪು ಸುಲ್ತಾನ್‌ನನ್ನು ಬಿತ್ತರಿಸಿರುವುದು, ಹಿಂದೂ ರಾಷ್ಟ್ರೀಯವಾದಿಗಳನ್ನು ಬಲಪಂಥೀಯರು ಎಂದು ಗುರುತಿಸಿರುವುದು ಇವೇ ಮುಂತಾದ ಕೆಲವು ಆಕ್ಷೇಪಗಳು ವ್ಯಕ್ತವಾಗಿದ್ದು, ಕೆಲವು ಗುಂಪುಗಳಿಂದ ಗ್ಯಾಲರಿಗೆ ಹಾನಿ ಉಂಟುಮಾಡುವ ಬೆದರಿಕೆಯೂ ಕೇಳಿಬಂದಿದೆ. ಇತಿಹಾಸ ಎಂದಿಗೂ ಸಾರ್ವತ್ರಿಕ ಸಮ್ಮತಿ ಪಡೆಯುವುದಿಲ್ಲ. ನೋಡುಗರ, ಓದುಗರ ದೃಷ್ಟಿಯೇ ಚರಿತ್ರೆಯ ಸರಿ ತಪ್ಪುಗಳನ್ನು ನಿಷ್ಕರ್ಷೆ ಮಾಡುವುದನ್ನು ಕಾಣುತ್ತಲೇ ಬಂದಿದ್ದೇವೆ. ಆಕ್ಷೇಪಗಳು, ಆರೋಪ ಪ್ರತ್ಯಾರೋಪಗಳ ನಡುವೆಯೇ ಚರಿತ್ರೆಯನ್ನು ನೋಡುತ್ತಾ, ಹೊಸ ಚರಿತ್ರೆಯನ್ನು ಕಟ್ಟುವುದು ನಾಗರಿಕ ಮಾನವ ಸಮಾಜದ ಆದ್ಯತೆಯಾಗಬೇಕು.

ಕೆಲವೇ ವ್ಯಕ್ತಿಗಳ, ಹಲವು ವರ್ಷಗಳ ಪರಿಶ್ರಮದಿಂದ ಗೌರಿಬಿದನೂರಿನ ವಿದುರಾಶ್ವತ್ಥದಲ್ಲಿ ನಿರ್ಮಿಸಲಾಗಿರುವ ಸ್ವಾತಂತ್ರ್ಯ ಸಂಗ್ರಾಮದ ಗ್ಯಾಲರಿಗೆ ಹಾನಿಯಾಗದಂತೆ ನೋಡಿಕೊಳ್ಳುವುದು ಸರ್ಕಾರದ ಜವಾಬ್ದಾರಿ ಮತ್ತು ನಾಗರಿಕರ ಜವಾಬ್ದಾರಿಯೂ ಹೌದು. ವಿದುರಾಶ್ವತ್ಥ ಬ್ರಿಟೀಷ್‌ ವಸಾಹತು ಕಾಲದ ರಕ್ತಸಿಕ್ತ ಇತಿಹಾಸವನ್ನು ಸಾರಿ ಸಾರಿ ಹೇಳುತ್ತದೆ. ಸ್ಥಳೀಯರು ಈ ಚರಿತ್ರೆಯ ಪುಟಗಳೊಡನೆಯೇ ಇಲ್ಲಿನ ಸ್ಮಾರಕವನ್ನು ಕಾಪಾಡಿಕೊಂಡು ಬಂದಿದ್ದಾರೆ. 27 ವರ್ಷಗಳ ಕಾಲ ಬತ್ತಿಹೋಗಿದ್ದು ಮರಳುಗಣಿಗಾರಿಕೆಯ ಮಾಫಿಯಾಗಳಿಗೆ ಚಿನ್ನದ ಗಣಿಯಂತಾಗಿದ್ದ ಪಿನಾಕಿನಿ ನದಿ ಈ ವರ್ಷ ತುಂಬಿ ಹರಿಯುತ್ತಿದೆ. ಈ ನದಿಯ ಝುಳುಝಳು ನಾದದೊಂದಿಗೆ , ಅಶ್ವತ್ಥ ವೃಕ್ಷದಲ್ಲಿ ನಲಿಯುವ ಹಕ್ಕಿಗಳ ಕಲರವದೊಂದಿಗೇ, ಕರ್ನಾಟಕದ ಮತ್ತು ನೆರೆ ರಾಜ್ಯಗಳ ಶ್ರದ್ಧಾಭಕ್ತಿಗಳ ಪ್ರಾರ್ಥನೆಯೊಂದಿಗೇ, ಈ ಚಿತ್ರ ಗ್ಯಾಲರಿಯನ್ನು ಜೀವಂತವಾಗಿರಿಸಿ, ಸ್ವಾತಂತ್ರ್ಯ ಸಂಗ್ರಾಮದ ಹೆಜ್ಜೆ ಗುರುತುಗಳನ್ನು ಜೀವಂತಿಕೆಯಿಂದಿರಿಸುವ ಹೊಣೆ ನಮ್ಮದಾಗಿದೆ.

ಕೆಲವೇ ಬಲಪಂಥೀಯ ಸಂಘಟನೆಗಳ ಮತಾಂಧತೆಗೆ ಈ ಗ್ಯಾಲರಿ ಬಲಿಯಾಗದಂತೆ ಜಾಗ್ರತೆ ವಹಿಸುವ ಜವಾಬ್ದಾರಿ ಸರ್ಕಾರ ಮತ್ತು ಜಿಲ್ಲಾಡಳಿತದ ಮೇಲಿದೆ. ಬ್ರಿಟೀಷರು ವಿದುರಾಶ್ವತ್ಥವನ್ನು ಕರ್ನಾಟಕದ ಜಲಿಯನ್‌ವಾಲಾಬಾಗ್‌ ಮಾಡಿ ಕರಾಳ ಛಾಯೆಯನ್ನು ಹರಡಿ ಹೋಗಿದ್ದಾರೆ. ಭಾರತದ 75ನೆಯ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ವಿದುರಾಶ್ವತ್ಥದ ಸ್ವಾತಂತ್ರ್ಯ ಸಂಗ್ರಾಮದ ಗ್ಯಾಲರಿ ಮತ್ತೊಂದು ಕಂಬಾಲಪಲ್ಲಿ ಆಗುವುದು ಬೇಡ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending