ರಾಜಕೀಯ
ರಾಜ್ಯಸಭೆಗೆ 41 ಅಭ್ಯರ್ಥಿಗಳು ಅವಿರೋಧ ಆಯ್ಕೆ; 4 ರಾಜ್ಯಗಳ 16 ಸ್ಥಾನಗಳಿಗೆ ಇಂದು ಚುನಾವಣೆ
ಸುದ್ದಿದಿನ ಡೆಸ್ಕ್ : ರಾಜ್ಯಸಭೆಯ ದ್ವೈವಾರ್ಷಿಕ ಚುನಾವಣೆಯಲ್ಲಿ 41 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದು, ಉಳಿದಂತೆ 4 ರಾಜ್ಯಗಳ 16 ಸ್ಥಾನಗಳಿಗೆ ಇಂದು ಚುನಾವಣೆ ನಡೆಯಲಿದೆ.
ಇಂದು ಮತದಾನದ ನಂತರ ಮತ ಎಣಿಕೆ ನಡೆಯಲಿದ್ದು, ಇಂದೇ ಫಲಿತಾಂಶ ಪ್ರಕಟಗೊಳ್ಳುವ ನಿರೀಕ್ಷೆ ಇದೆ. ಮತದಾನ ನಡೆಯಲಿರುವ 16 ಸ್ಥಾನಗಳ ಪೈಕಿ ಕರ್ನಾಟಕ ಮತ್ತು ರಾಜಸ್ತಾನದ ತಲಾ 4, ಮಹಾರಾಷ್ಟ್ರದ 6 ಮತ್ತು ಹರಿಯಾಣದ 3 ಸ್ಥಾನಗಳು ಸೇರಿವೆ.
ಅವಿರೋಧವಾಗಿ ಆಯ್ಕೆಯಾದ 41 ಅಭ್ಯರ್ಥಿಗಳಲ್ಲಿ ಉತ್ತರಪ್ರದೇಶದ 11, ತಮಿಳುನಾಡಿನ 6, ಬಿಹಾರದ 5, ಆಂಧ್ರಪ್ರದೇಶದ 4, ಮಧ್ಯಪ್ರದೇಶ ಮತ್ತು ಒಡಿಶಾದ 3, ಚತ್ತೀಸ್‌ಗಢ, ಪಂಜಾಬ್, ತೆಲಂಗಾಣ, ಜಾರ್ಖಂಡ್‌ನ ತಲಾ ಇಬ್ಬರು ಮತ್ತು ಉತ್ತರಾಖಂಡದ ಒಬ್ಬರು ಅಭ್ಯರ್ಥಿ ಸೇರಿದ್ದಾರೆ.
ಅವಿರೋಧವಾಗಿ ಆಯ್ಕೆಯಾಗಿರುವ 41 ಸ್ಥಾನಗಳಲ್ಲಿ ಬಿಜೆಪಿಯ 14 ಹಾಗೂ ಕಾಂಗ್ರೆಸ್‌ನ 4 ಅಭ್ಯರ್ಥಿಗಳು ಸೇರಿದ್ದಾರೆ. ಕರ್ನಾಟಕದ 4ಸ್ಥಾನಗಳಿಗೆ ಬಿಜೆಪಿಯಿಂದ ನಿರ್ಮಲಾ ಸೀತಾರಾಮನ್, ನಟ ಜಗ್ಗೇಶ್ ಮತ್ತು ಲೆಹರ್ ಸಿಂಗ್, ಕಾಂಗ್ರೆಸ್‌ನಿಂದ ಜಯರಾಮ್ ರಮೇಶ್ ಮತ್ತು ಮನ್ಸೂರ್ ಅಲಿಖಾನ್ ಹಾಗೂ ಜೆಡಿಎಸ್‌ನಿಂದ ಕುಪೇಂದ್ರ ರೆಡ್ಡಿ ಸೇರಿದಂತೆ ಒಟ್ಟು 6 ಅಭ್ಯರ್ಥಿಗಳು ಕಣದಲಿದ್ದಾರೆ.
ವಿಧಾನಸಭೆಯ ಸದಸ್ಯರ ಸಂಖ್ಯಾ ಬಲದ ಆಧಾರದ ಮೇಲೆ ಬಿಜೆಪಿಯಿಂದ ಇಬ್ಬರು ಹಾಗೂ ಕಾಂಗ್ರೆಸ್ ನಿಂದ ಓರ್ವ ಅಭ್ಯರ್ಥಿ ನಿರಾಯಾಸವಾಗಿ ಗೆಲ್ಲುವ ಅವಕಾಶವಿದೆ. ನಾಲ್ಕನೇ ಅಭ್ಯರ್ಥಿಯ ಫಲಿತಾಂಶ ಕುತೂಹಲ ಮೂಡಿಸಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243