ದಿನದ ಸುದ್ದಿ
ಮತದಾನದ 48 ಗಂಟೆಗಳ ಮುನ್ನ ಮುದ್ರಣ ಮಾಧ್ಯಮದ ಜಾಹೀರಾತಿಗೆ ಪೂರ್ವಾನುಮತಿ ಕಡ್ಡಾಯ..!
ಸುದ್ದಿದಿನ, ಧಾರವಾಡ : ಹಿಂದಿನ ಚುನಾವಣೆಗಳಲ್ಲಿ ಮತದಾನದ ಸಂದರ್ಭಗಳಲ್ಲಿ ಮತದಾರರನ್ನು ಉದ್ರಿಕ್ತಗೊಳಿಸುವ, ಅವಮಾನಗೊಳಿಸುವ ಹಾಗೂ ತಪ್ಪು ಕಲ್ಪನೆ ಮೂಡಿಸುವ ಜಾಹೀರಾತುಗಳು ಮುದ್ರಣ ಮಾಧ್ಯಮದ ದಿನಪತ್ರಿಕೆಗಳಲ್ಲಿ ಪ್ರಕಟಗೊಂಡಿರುವುದನ್ನು ಭಾರತ ಚುನಾವಣಾ ಆಯೋಗ ಗಮನಿಸಿದೆ.
ಇದರಿಂದ ಇಡೀ ಚುನಾವಣಾ ಪ್ರಕ್ರಿಯೆಯ ಉದ್ದೇಶವೇ ಬುಡಮೇಲು ಆಗುತ್ತದೆ. ಇಂತಹ ಸಂದರ್ಭದಲ್ಲಿ ಎದುರಾಳಿ ಅಭ್ಯರ್ಥಿ ಅಥವಾ ಪಕ್ಷಕ್ಕೆ ಸ್ಪಷ್ಠೀಕರಣ ನೀಡುವ ಅವಕಾಶವು ತಪ್ಪಿ ಹೋಗುತ್ತದೆ. ಇಂತಹ ಸಂಗತಿ ಅಥವಾ ಘಟನೆಗಳು ಪುನರಾವರ್ತನೆ ಆಗುವುದನ್ನು ತಪ್ಪಿಸಲು ದ್ವೇಷದ, ಕೆರಳಿಸುವ ಹಾಗೂ ತಪ್ಪು ಭಾವನೆ ಮೂಡಿಸುವ ಜಾಹೀರಾತುಗಳನ್ನು ರಾಜಕೀಯ ಪಕ್ಷ ಚುನಾವಣಾ ಅಭ್ಯರ್ಥಿ ಹಾಗೂ ಯಾವುದೇ ಸಂಘ ಸಂಸ್ಥೆಗಳು ಮತದಾನ ಹಾಗೂ ಅದರ ಹಿಂದಿನ ದಿನಗಳ ಅವಧಿಯಲ್ಲಿ ಪ್ರಕಟಿಸುವುದನ್ನು ಚುನಾವಣಾ ಆಯೋಗ ಸಂಪೂರ್ಣವಾಗಿ ನಿಷೇಧಿಸಿದೆ.
ಇದು ಪ್ರಸಕ್ತ ಲೋಕಸಭಾ ಚುನಾವಣೆಯ ಎಲ್ಲ ಹಂತಗಳಲ್ಲಿ ಅನ್ವಯಿಸುತ್ತದೆ. ಧಾರವಾಡ ಜಿಲ್ಲೆಗೆ ಸಂಬಂಧಿಸಿದಂತೆ ದಿನಾಂಕ: 22 ಹಾಗೂ 23ರಂದು ಮುದ್ರಣ ಮಾಧ್ಯಮಗಳಲ್ಲಿ ಚುನಾವಣಾ ಜಾಹೀರಾತುಗಳನ್ನು ಪ್ರಕಟಿಸಲು ಎಂ.ಸಿ.ಎಂ.ಸಿ ಸಮಿತಿಯಿಂದ ಪೂರ್ವಾನುಮತಿ ಪಡೆಯವುದು ಕಡ್ಡಾಯವಾಗಿದೆ.
ಈ ಕುರಿತು ಭಾರತ ಚುನಾವಣಾ ಆಯೋಗ ಕಟ್ಟುನಿಟ್ಟಿನ ಆದೇಶ ನೀಡಿದೆ. ಇದನ್ನು ಎಲ್ಲ ರಾಜಕೀಯ ಪಕ್ಷಗಳು, ಚುನಾವಣಾ ಅಭ್ಯರ್ಥಿಗಳು ಹಾಗೂ ಎಲ್ಲ ದಿನಪತ್ರಿಕೆಗಳು ಕಡ್ಡಾಯವಾಗಿ ಪಾಲಿಸಲು ಧಾರವಾಡ ಜಿಲ್ಲಾಧಿಕಾರಿ, ಚುನಾವಣಾಧಿಕಾರಿ ದೀಪಾ ಚೋಳನ್ ತಿಳಿಸಿದ್ದಾರೆ.